ಗುರುವಾರ, ಜುಲೈ 2, 2015

ಕಾದಿರುವಳು...

ಮನದ ಕೋಣೆಗಳಲಿ ತುಂಬಿಹ ಸವಿ ನೆನಪುಗಳ
ಧೂಳು ಕೊಡವಿ, ನವಿರಾಗಿ ಸವರಿ, ಆಘ್ರಾಣಿಸಿ,
ಅನುಕ್ರಮವಾಗಿ ಜೋಡಿಸಿಡಬೇಕಾಗಿದೆ..

ತುಸು ಹಳತಾದ, ಮಾಸಿದ, ಅಲ್ಲಲ್ಲಿ ಹರಿದ
ನೆನಪುಗಳಿಗೆ ತೇಪೆ ಹಾಕಲು ನಿನ್ನ-
ಸಹಾಯ ಹಸ್ತಕ್ಕಾಗಿ ಕಾದಿರುವ ಮನಸು...
ಬೇಡವೆಂದರೂ ಕಾಡುತಿದೆ ನಿಸಾರರ ಹಾಡಿನ ಸಾಲು..
‘ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ’

ಜೀರ್ಣಾವಸ್ಥೆಯಲ್ಲಿಹ ನೆನಪುಗಳು ಒಂದಿಷ್ಟು
ಗುಟುಕು ಜೀವ ಹಿಡಿದು ಹುಡಿ ಹಾರಿಸುತಿವೆ
ಸುಪ್ತಾವಸ್ಥೆಯಲೂ ನರಳಿ, ನನ್ನ ಜೀವ ಹಿಂಡುತಿವೆ!
ಕೇಳಲಾಗದು ನಿನ್ನ ಒಪ್ಪಿಗೆಯ...
ಹಾಗೇ ಮೂಟೆ ಕಟ್ಟಿ ಕಾಯಬೇಕಾಗಿದೆ
ಎಂದೂ ಬಾರದ ರದ್ದಿಯವನ ದಾರಿಯ ನೋಡುತ್ತಾ....

ಇನ್ನೂ ಕೆಲವು ಕೋಣೆಗಳಿವೆ, ಬಳಿ ಸಾರಲೂ ಭಯ ಮೂಡುವುದು!
ಘನ ಘೋರ, ಭೀಕರ ಕನವರಿಕೆಗಳು,
ಸುಟ್ಟು ಕರಕಲಾದ ಕನಸುಗಳ ಅವಶೇಷಗಳು,
ಕಾರ್ಕೋಟಕದಂಥ ವಿಷವ ಹೊತ್ತ ಕಟು ನೆನಪುಗಳು
ಮೆಲ್ಲನೆ ಬಹು ಮೆಲ್ಲನೆ ಪರುಚುತ್ತಿವೆ ಮುಚ್ಚಿದ ಬಾಗಿಲುಗಳಂಚನ್ನು.
ಮನಸಿನೊಳಗಿನ ಗೀರುಗಳ ಲೆಕ್ಕವಿಟ್ಟವರಾರು?!

ಅವುಗಳನೆಲ್ಲಾ ನಾನೊಬ್ಬಳೇ ತೊಳೆಯಲಾಗದು ನೋಡು...
ಹೊರ ಚೆಲ್ಲಿದರದರ ನಾತ ಹರಡುವುದು ಬಹು ಬೇಗ!
ಕೆಲವು ನಿನ್ನದೇ ದೇಣಿಗೆ, ಹಲವು ನಮ್ಮಿಬ್ಬರ ಕಾಣಿಕೆ
ಹಂಚಿಕೊಳಬೇಕಿದೆ ಒಂದಿಷ್ಟನ್ನು, ಹನಿ ಹನಿಯಾಗಾದಾರೂ ಸೈ!
ತುಸು ನಾ ಹಗುರಾಗಿ, ಸ್ವಲ್ಪ ನೀ ಸ್ಥೂಲವಾಗಲು...

ತಲೆಗೆ ತಲೆಕೊಟ್ಟು ಕಳುಹಿಸಲೇ? ಭುಜಕೊರಗಿ ಹರಿಸಲೇ?
ಉಸಿರೊಳಗೆ ಬೆರೆಸಿ, ಉಸಿರಾಗಿಸಿ ಒಳ ದಬ್ಬಲೇ?
ತುರ್ತಾಗಿ ನಿಭಾಯಿಸಬೇಕಿದೆ ಈ ಕೋಣೆಗಳ ಉಸ್ತುವಾರಿಯ
ನಿರಾಳವಾಗಬೇಕಿದೆ ಹೊರಯಿಳಿಸಿಕೊಂಡು ಈ ಜವಾಬ್ದಾರಿಯ
ಮತ್ತದೇ ಹಾಡು, ಅದೇ ಸಾಲು...
‘ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ’

~ತೇಜಸ್ವಿನಿ ಹೆಗಡೆ.