ಮಂಗಳವಾರ, ಸೆಪ್ಟೆಂಬರ್ 18, 2018

ಮರ್ಯಾದಾ ಹತ್ಯೆ : ಕಾರಣಗಳು ಮತ್ತು ಪರಿಹಾರ


ತ್ತೀಚಿಗಷ್ಟೇ ನಾನು ಮರಾಠಿಯ ಪಸಿದ್ಧ ‘ಸೈರಾಟ್’ ಚನಲನಚಿತ್ರವನ್ನು ನೋಡಿ ಬಹಳ ಇಷ್ಟಪಟ್ಟಿದ್ದೆ ಮತ್ತು ಅದರ ಅಂತ್ಯಕ್ಕೆ ಬಹಳ ಬೇಸರವೂ ಆಗಿತ್ತು. ಹಾಗೇ ಕೆ. ನಲ್ಲತಂಬಿಯವರ ಅನುವಾದಿತ ಕಾದಂಬರಿಯಾದ ‘ಹೂ-ಕೊಂಡ’ವನ್ನೂ ಓದಿ ಮೆಚ್ಚಿದ್ದೆ, ಬೆಚ್ಚಿದ್ದೆ! ಎರಡೂ ಒಂದೇ ವಿಷಯವನ್ನು ಎತ್ತಿಹಿಡಿಯುತ್ತವೆ. ಅದೇ ಮರ್ಯಾದಾ ಹತ್ಯೆ!

ಈಗ ನೋಡಿದರೆ ತೆಲಂಗಾಣದ ಯುವ ಜೋಡಿಯ ದಾರುಣ ಕತೆ ಹೊರಬಿದ್ದಿದೆ! ಮಗಳು ತಮ್ಮ ಜಾತಿಯಲ್ಲದವನನ್ನು ಮದುವೆಯಾಗಿ ಸುಖವಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ, ತಮ್ಮ ಹುಸಿ ಪ್ರತಿಷ್ಠೆಗೆ ಕುಂದಾಯಿತು ಎಂದು ಕ್ರೋಧಗೊಂಡು ಸ್ವಂತ ತಂದೆಯೇ, ಹೆತ್ತ ಮಗಳ ಗಂಡನನ್ನು ಅವಳ ಕಣ್ಮುಂದೆ ಇರುದು ಕೊಲ್ಲಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿ ಎಲ್ಲರನ್ನೂ ತಲ್ಲಣಗೊಳಿಸಿದೆ. ಮಗಳು ಗರ್ಭಿಣಿಯಾಗಿದ್ದಾಳೆ, ಆ ಮಗುವಿಗೆ ಭವಿಷ್ಯವಿದೆ, ತಮಗೆ ಇಷ್ಟ ಇಲ್ಲದಿದ್ದರೆ ದೂರವಿದ್ದುಬಿಟ್ಟರಾಯಿತು ಎಂಬ ಕನಿಷ್ಟ ಕಾಳಜಿಯೂ ಇಲ್ಲದೆ ಪಶುವಿಗಿಂತ ಕಡೆಯಾಗಿಬಿಟ್ಟ ಆ ತಂದೆ ಎಂದೆನ್ನಿಸಿಕೊಂಡವನ ಕ್ರೌರ್ಯವಾದರೂ ಎಂಥದ್ದಪ್ಪಾ ಎಂದೆನಿಸಿಬಿಟ್ಟಿತು. ನಿಜಕ್ಕೂ ಇದೊಂದು ಹೇಯ ಮತ್ತು ತೀವ್ರ ಖಂಡನೀಯ ಘಟನೆ. ಆ ಯುವ ಜೋಡಿಯ ಕನಸುಕಂಗಳ ಭಾವಚಿತ್ರ ಇನ್ನೂ ಕಾಡುತ್ತಿದೆ ನನ್ನನ್ನು. ಕ್ಷುದ್ರ ಮನುಷ್ಯನ ವಿಕೃತಿಗಿಂತ ಅಪಾಯಕಾರಿಯಾದ್ದು ಬೇರೊಂದಿಲ್ಲ ಅನ್ನಿಸಿಬಿಟ್ಟಿತು. ಇದಾದ ನಂತರ ಸಹಜವಾಗಿಯೇ ಇಂಥಾ ದುರ್ಘಟನೆಯ ಹಿನ್ನಲೆ, ನಡೆಯುತ್ತಿರುವ ಪ್ರದೆಶಗಳ ಕುರಿತು ಮಾಹಿತಿ ಪಡೆಯಬೇಕೆಂದೆನ್ನಿಸಿತು. ಎಲ್ಲೆಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ/ನಡೆಯುತ್ತಿದೆ ಎಂದು ಸ್ವಲ್ಪ ಹುಡುಕಾಡುತ್ತಿರುವಂತೆ ಇದರ ಆಳ, ಅಗಲ, ವಿಸ್ತಾರ ಜಗತ್ತಿನಾದ್ಯಂತ ಹರಡಿಕೊಂಡಿರುವುದು ಸ್ಪಷ್ಟವಾಗುತ್ತಾ ಹೋಯಿತು.
*HBV ಸರ್ವೆಯ ಪ್ರಕಾರ ಜಗತ್ತಿನಾದ್ಯಂತ ಪ್ರತಿವರುಷ ಸರಿಸುಮಾರು ೫,೦೦೦ ಹೆಣ್ಮಕ್ಕಳು ಮತ್ತು ಹುಡುಗಿಯರು ಈ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿದ್ದಾರೆ! ಇದು ವಿಶೇಷವಾಗಿ ಮಧ್ಯ ಪೂರ್ವ ಹಾಗೂ ದಕ್ಷಿಣ ಏಷ್ಯಾ ದೇಶಗಳಲ್ಲಿ ಹೆಚ್ಚು ಕಾಣಿಸುತ್ತಿದೆಯಂತೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಪ್ರತಿ ವರುಷ ತಲಾ ೧,೦೦೦ ಹತ್ಯೆಗಳಾಗುತ್ತಿದ್ದರೆ, ಇಂಗ್ಲೇಂಡಿನಲ್ಲೂ ವರುಷದಲ್ಲಿ ೧೨ ಇಂಥಾ ಹತ್ಯೆಗಳು ರಿಪೋರ್ಟ್ ಆಗುತ್ತಿರುತ್ತವಂತೆ. ಇನ್ನು ರಿಪೋರ್ಟೇ ಆಗದ ಪ್ರಕರಣಗಳು ಅದೆಷ್ಟು ಇರುತ್ತವೆಯೋ ಗೊತ್ತಿಲ್ಲ!  ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಈಜಿಪ್ಟ್, ಇರಾನ್, ಇಸ್ರೇಲ್, ಜೋರ್ಡಾನ್, ಮೊರೊಕ್ಕೋ, ಯು.ಕೆ., ಅಮೇರಿಕಾ ಹೀಗೆ ಎಲ್ಲೆಡೆ ಈ ಒಂದು ದುರಂತ ಅವ್ಯಾಹತವಾಗಿ ನಡೆದುಹೋಗಿತ್ತಿದೆ.
*ಎಷ್ಟೋ ದೇಶಗಳಲ್ಲಿ ಇದನ್ನು ತಡೆಯಲು ಸಶಕ್ತ ಕಾನೂನೂ ಇಲ್ಲ, ಇದ್ದರೂ ಅದು ಸೂಕ್ತ ರೀತಿಯಲ್ಲಿ ಜಾರಿಗೆ ಬರುತ್ತಿಲ್ಲ. ಕೆಲವೆಡೆಯಂತೂ ಇದೊಂದು ಸಾಮಾನ್ಯ ವಿಷಯ!
*Iranian and Kurdish Rights Organization ಪ್ರಕಾರ ಯುರೋಪ್ ಮತ್ತು ಅಮೇರಿಕಾದಲ್ಲೂ ಮರ್ಯಾದ ಹತ್ಯೆಯ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆಯಂತೆ!
* ಅಮೇರಿಕಾದ ೨೦೧೪ರ ಜನಾಂಗ ಸ್ಥಿತಿ (demographics) ವರದಿಯ ಪ್ರಕಾರ ಪ್ರತಿ ವರ್ಷ ಈ ದೇಶದಲ್ಲೇ ೨೩ ರಿಂದ ೨೭ ಮರ್ಯಾದಾ ಹತ್ಯೆಯ ಪ್ರಕರಣಗಳು ಕಾಣಿಸುತ್ತಿವೆಯಂತೆ! ಆದರೆ ಸಾಕಷ್ಟು ಮಾಹಿತಿ ದೊರಕದೇ ಇದರ ಬಗ್ಗೆ ಬೆಳಕಿಗೆ ಬರದೇ ಹೋಗುತ್ತಿದೆ ಎನ್ನಲಾಗಿದೆ.
*ಈ ಕೆಳಗಿನ ಲಿಂಕಿಗೆ ಹೋಗಿ ನೋಡಿದರೂ ಸಾಕು, ಜಗತ್ತಿನಾದ್ಯಂತ ಈ ಒಂದು ಮಾರಕ ಪಿಡುಗು ಹೇಗೆ ಹಬ್ಬಿ ಬಲಿತಿದೆ ಎಂದು ನಿಚ್ಚಳವಾಗುವುದು! (ಇನ್ನೂ ಕೆಲವು ಕೊಂಡಿಗಳನ್ನು ಕೊನೆಯಲ್ಲಿ ನೀಡಿದ್ದೇನೆ.)

ಭಾರತದಲ್ಲಿ ಮರ್ಯಾದಾ ಹತ್ಯೆ:-
ಭಾರತದಲ್ಲಿ ಇದು ಮತ್ತೆಮತ್ತೆ ಕೇಳಿಬರುತ್ತಿರುವ, ಕಂಡು ಬರುತ್ತಿರುವ ಹೇಯ ಕೃತ್ಯವಾಗಿದೆ. ವಿಶೇಷವಾಗಿ ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಗಣನೀಯವಾಗಿ ಹೆಚ್ಚಿವೆ. ಹರ್ಯಾಣದಲ್ಲಿ ಬಲಶಾಲಿಯಾಗಿರುವುದೇ ಅಲ್ಲಿಯ ‘ಖಾಪ್’ ಪಂಚಾಯಿತಿ! ಇಲ್ಲಿ ಕೋರ್ಟು, ಪೋಲೀಸ್ಟೇಶನ್ ಯಾವುದೂ ನಡೆಯುವುದಿಲ್ಲ ಎಂದು ಓದಿರುವೆ. ಮರ್ಯಾದಾ ಹತ್ಯೆಗೆ, ಹೆಣ್ಮಕ್ಕಳ ಹಕ್ಕು ಚ್ಯುತಿಗೆ ಈ ಖಾಪ್ ಪಂಚಾಯಿತಿಯ ಅಂಧಾ ಕಾನೂನೇ ಕಾರಣ. ನಮ್ಮ ಸುಪ್ರೀಂ ಕೋರ್ಟೇ ಇಂಥಾ ಪಂಚಾಯಿತಿಗಳನ್ನು ತೆಗೆದುಹಾಕಬೇಕೆಂದು ಅಲ್ಲಿನ ಎಸ್ಪಿಗಳಿಗೆ ಮಾಹಿತಿ ನೀಡಿದ್ದರೂ ಅವರ ರಾಜ್ಯಭಾರ ನಿಂತಂತಿಲ್ಲ. ಅವರ ಪ್ರಕಾರ ಸರ್ವೋಚ್ಚ ನ್ಯಾಯಾಲಯಕ್ಕೇ ಸರಿಯಾದ ನ್ಯಾಯ ಗೊತ್ತಿಲ್ಲ... ಅವರೇ ಸರಿ ಎಂಬಂತೇ ಧಿಮಾಕು ತೋರುವ ಹೇಳಿಕೆ ನೀಡಿದ್ದರು. ‘ಖಾಪ್’ ಪಂಚಾಯತಿಯ ದೌರ್ಜನ್ಯದ ವಿರುದ್ಧ ಸಿಡಿದೇಳುವ, ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಚಲನಚಿತ್ರಗಳು ಬಂದಿವೆ.
ಉದಾಹರಣೆಗೆ : ಹಿಂದಿಯ “ಖಾಪ್” ಎಂಬ ಹೆಸರನಿದೇ ಚಲನಚಿತ್ರ.
ಮದುವೆ ಎಂಬುದು ಎರಡು ಕುಟುಂಬಗಳ ನಡುವಿನ ಸುಂದರ ಬಂಧ, ಎರಡೂ ಕಡೆಯವರ ಅದರಲ್ಲೂ ವಿಶೇಷವಾಗಿ ಹೆತ್ತವರ ಸಮ್ಮತಿ ಇದ್ದರೆ ಅದಕ್ಕೊಂದು ಮೆರುಗು, ಹೆಚ್ಚು ಸಾಮಾಜಿಕ ಭದ್ರತೆ ದೊರಕುತ್ತದೆ, ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನೆಲ್ಲಾ ಒಪ್ಪೋಣ. ಆದರೆ ಎಷ್ಟೋಸಲ ಹೆತ್ತವರಿಗೆ ತಮ್ಮ ಮಕ್ಕಳ ಒಳಿತು ಕೆಡುಕು ತಮಗಿಂತ ಚೆನ್ನಾಗಿ ಬಲ್ಲವರು ಯಾರೂ ಇಲ್ಲ ಎಂಬ ಭ್ರಮೆ ಇದ್ದಿರುತ್ತದೆ. ತಮ್ಮ ಮಕ್ಕಳೂ ತಮ್ಮಷ್ಟೇ ಅವರ ಬದುಕನ್ನು ಇರ್ಧರಿಸುವ ಹಕ್ಕುಳ್ಳುವರು, ಅವರೂ ತಿಳುವಳಿಕೆ ಹೊಂದಿರುತ್ತಾರೆ ಎಂಬುದನ್ನು ಮರೆತುಬಿಡುವರು. ಅವರ ಇಷ್ಟವನ್ನರಿಯದೇ ತಮ್ಮ ದೃಷ್ಟಿಯಲ್ಲಿ ಸೂಕ್ತ ಎನ್ನಿಸುವ ಕಡೆಗೆ ಒತ್ತಾಯದಿಂದ ಮದುವೆಮಾಡಿಸಲು ನೋಡುವರು. ಹೆಚ್ಚಿನ ಸಮಯದಲ್ಲಿ ಆರ್ಥಿಕ ಅಸಮಾನತೆ, ಜಾತಿ ಅಸಮಾನತೆಯೇ ಇದಕ್ಕೆ ಮೂಲಕಾರಣವಾಗಿರುತ್ತದೆ. ಆದರೆ, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಇದ್ದರೆ ಎಲ್ಲದರೂ ಹೊಂದಾಣಿಕೆ ಸಾಧ್ಯ ಎನ್ನುವುದನ್ನೇ ಮರೆತುಬಿಡುತ್ತಾರೆ. ಇಷ್ಟಕ್ಕೂ ಸುದೀರ್ಘ ಬಾಳುವೆ ಮಾಡುವವರೇ ಅವರಿಬ್ಬರು ಎಂಬುದನ್ನು ಮರೆತು ತಾವು ಆಜೀವನ ಅವರಜೊತೆ ಇರುವವರು ಎಂದೇ ಭ್ರಮಿಸಿರುತ್ತಾರೆ. ಇದರ ಅರ್ಥ ಅಂತರ್ಜಾತೀಯ ವಿವಾಹಗಳೆಲ್ಲಾ ಯಶಸ್ವಿಯಾಗುತ್ತವೆ ಎಂದಲ್ಲ. ಹಾಗೆಯೇ ವಿಚ್ಛೇದನಗಳು ಸ್ವಜಾತೀಯ ವಿವಾಹಗಳಲ್ಲೂ ಸಾಕಷ್ಟು ಇರುತ್ತವೆ ಎಂಬುದನ್ನೂ ಮರೆಯದಿರೋಣ. ಯಾವುದೂ ಇದ ಮಿತ್ಥಂ ಎನ್ನುವಂತಿಲ್ಲ. ಹೀಗಿರುವಾಗ ತಮ್ಮ ಜಾತಿಯಲ್ಲ ಎಂದೋ, ತಮಗಿಂತ ಹಣಕಾಸಿನಲ್ಲಿ ದುರ್ಬಲರಾಗಿದ್ದಾರೆಂದೋ ತುಚ್ಛೀಕರಿಸುವುದು, ಹೀಗಳೆಯುವುದು, ತಿರಸ್ಕರಿಸುವುದು – ಹೋಗಲಿ ಅದೆಲ್ಲಾ ಮಾಡಿ ಅವರನ್ನು ಅವರಷ್ಟಕ್ಕೆ ಬಿಟ್ಟರೂ ಪುಣ್ಯ ಬರುವುದೇನೋ! ತಮ್ಮ ಇಲ್ಲದ ಪ್ರತಿಷ್ಠೆ, ಇರದ ಮಾನದ ಉಳಿವಿಗಾಗಿ ಕೊಲ್ಲಿಸುವಷ್ಟು ಕ್ರೌರ್ಯಕ್ಕೆ ಹೋಗುತ್ತಾರಲ್ಲ ಅದೆಂಥಾ ಮರ್ಯಾದೆ ಇವರದಪ್ಪಾ ಎಂದೆನಿಸಿಬಿಡುತ್ತದೆ!
ಪ್ರಸ್ತುತ ಪ್ರಕರಣವನ್ನೇ ತೆಗೆದುಕೊಂಡರೆ, ತೆಲಂಗಾಣದ ಅಮೃತ ಮತ್ತು ಪ್ರಣಯ್ ಜೋಡಿಯನ್ನು ಬೇರ್ಪಡಿಸಿ, ಗರ್ಭಿಣಿಯಾಗಿರುವ ಮಗಳ ಗಂಡನನ್ನೇ ಕೊಲ್ಲಿಸಿ ಈಗ ಪೂಲೀಸರ ಕಸ್ಟಡಿಯಲ್ಲಿರುವ ಅವಳ ತಂದೆಯ ಮರ್ಯಾದೆ, ಘನತೆ ಹೆಚ್ಚಾಯಿತೇ?! ಹುಟ್ಟಿನಿಂದ ಬೆಳೆಯುವವರೆಗೂ ಮುದ್ದಿನಿಂದ ಸಾಕಿದ ಮಕ್ಕಳನ್ನೇ ತರಿಯಲು ಅವರು ಬಲಿಗಾಗಿ ತಂದು ಸಾಕಿದ ಕುರಿ, ಕೋಣ, ಪ್ರಾಣಿಗಳಲ್ಲ ಅಲ್ಲವೇ? ಅಥವಾ ಇಂಥಾ ಹೆತ್ತವರಿಗೆ ಮಕ್ಕಳೆಂದರೆ ಅಷ್ಟೇಯೋ ಎಂಬುದೇ ಗೊತ್ತಾಗುತ್ತಿಲ್ಲ!
ಇನ್ನು ಈ ಮರ್ಯಾದಾ ಹತ್ಯೆಯನ್ನು ಕೇವಲ ತಂದೆಯೋ, ಚಿಕ್ಕಪ್ಪನೋ ಮಾಡಿಸುತ್ತಾರೆಂದುಕೊಳ್ಳಬೇಡಿ. ಸ್ವಂತ ತಾಯಿ, ಅಜ್ಜಿಯೂ ಮಾಡಿಸಬಲ್ಲರು! ಉದಾಹರಣೆಗೆ ಲಾಹೋರಿನ ಝೀನತ್ ಎಂಬ ಹದಿನೆಂಟರ ಹರೆಯದ ಮಗಳನ್ನು ಅವಳ ಸ್ವಂತ ತಾಯಿ ಪರ್ವೀನ್ ರಫೀಕ್ ಎಂಬಾಕೆ ಸಜೀವ ದಹನ ಮಾಡಿದ್ದಳು. ಇದಕ್ಕೆ ಕಾರಣ ಮಗಳು ತನ್ನಿಚ್ಛೆಯಂತೇ ಮದುವೆಯಾಗದೇ ತನ್ನ ಬಾಲ್ಯದ ಗೆಳೆಯನನ್ನು ವರಿಸಿದ್ದೇ ಆಗಿತ್ತಂತೆ! ಬಿಹಾರದಲ್ಲಿ, ಹರ್ಯಾಣದಲ್ಲಿ, ಕರ್ನಾಟಕದಲ್ಲಿ ಹೀಗೆ ಎಗ್ಗಿಲ್ಲದೇ ಎಲ್ಲೆಡೆಯೂ ಇಂಥ ಹತ್ಯೆಗಳು ಆಗುತ್ತಲೇ ಇವೆ. ಎಷ್ಟೋ ಬೆಳಕಿಗೇ ಬರುವುದಿಲ್ಲ! ಈ ರೀತಿ ಇಂಥಾ ಅನೇಕಾನೇಕ ಪ್ರಕರಣಗಳು ಎಲ್ಲೆಡೆಯೂ ಹೆಚ್ಚುತ್ತಿರುವುದು ದುರದೃಷ್ಟಕರ ಮತ್ತು ಖೇದನೀಯ ಸಂಗತಿ.

ಮರ್ಯಾದಾ ಹತ್ಯೆಗೆ ಪ್ರಮುಖ ಕಾರಣಗಳು :-

ಮೊತ್ತಮೊದಲ ಕಾರಣವೇ ಸ್ವಪ್ರತಿಷ್ಠೆ, ಮೂಢತೆ ಮತ್ತು ದುರಹಂಕಾರದ ಪರಾಕಷ್ಠೆ.
ಇದರ ನಂತರ… (ಇದು ನಾನು ಅಲ್ಲಲ್ಲಿ ಓದಿದ, ಅನೇಕ ವರ್ಷಗಳಿಂದ ಕೇಳಿದ ಘಟನೆಗಳನ್ನಾಧರಿಸಿ ವಿಂಗಡಿಸುತ್ತಿರುವುದು…)
೧) ಜಾತೀಯತೆ(ಸ್ವಜಾತಿಯಲ್ಲೇ ಮೇಲ್ಜಾತಿ, ಕೀಳ್ಜಾತಿಯೆಂದು ಅಥವಾ ಅನ್ಯಜಾತಿಯವರೆಂದು)
೨) ಸಲಿಂಗಕಾಮ (ಸಲಿಂಗಕಾಮಿ ಎಂದಾಕ್ಷಣ ಆತ/ಆಕೆ ತಮ್ಮ ಮನೆತನಕ್ಕೆ ಕುಂದು ಎಂದು ಕೊಂದು ಬಿಟ್ಟಿರುವ ಅನೇಕ ಪ್ರಕರಣಗಳಿವೆ)
೩) ಅನೈತಿಕ ಸಂಬಂಧದ ನೆಪದಲ್ಲಿ (ವಿವಾಹೇತರ ಅಥವಾ ವಿವಾಹ ಪೂರ್ವದ್ದು)
೪) ಹೆಣ್ಣೆಂದರೆ ಸದಾ ತಮ್ಮ ಅಡಿಯಾಳು ಎಂದೇ ಭಾವಿಸಿಕೊಂಡು ಬಂದಿರುವ ದುಷ್ಟ ಮನಸ್ಥಿತಿ.
೫) ಆರ್ಥಿಕ ಅಸಮಾನತೆ (ತಮಗಿಂತ ಕಡಿಮೆ ದುಡ್ಡಿರವವರೆಂದೋ, ಬಡವರೆಂದೋ ತಾತ್ಸಾರದಲ್ಲಿ…)
೬) ವೈಯಕ್ತಿಕ ಅಥವಾ ಕೌಟುಂಬಿಕ ಕಲಹ/ದ್ವೇಷ (ಅಜ್ಜರ, ಪಿಜ್ಜರ ಕಾಲದ ಜಗಳದ ನೆಪದಲ್ಲಿ)
೭) ರಾಜಕೀಯ ಹಸ್ತಕ್ಷೇಪ, ಪಿತೂರಿ (ತನಗಾಗದ ಬಣದವರಿದ್ದರೆ ಅವರ ಕಡೆಯ ಹುಡುಗಿಯೋ/ಹುಡುಗನೋ ವಿರುದ್ಧ ಪಂಗಡದವರನ್ನು ಪ್ರೀತಿಸಿದ್ದು ತಿಳಿದುಬಂದರೆ, ಆ ಮನೆಯವರನ್ನು ಎತ್ತಿಕಟ್ಟಿ ಕೊಲ್ಲಿಸಿ ಅದನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಪ್ರಕರಣಗಳೂ ಹಲವು ಇರುತ್ತವೆ) ಹೀಗೆ ಕಾರಣಗಳು ಅನೇಕ.

ಪರಿಹಾರದ ಕುರಿತು ಒಂದು ಕಿರು ಚಿಂತನೆ :-

ಯಾವುದೇ ಸಮಸ್ಯೆಯಿರಲಿ ಅದನ್ನು ಕೇವಲ ಎದುರಿಟ್ಟು ಗೋಳಾಡುತ್ತಲೋ, ದೂರುತ್ತಲೋ ಇದ್ದುಬಿಟ್ಟರೆ ಪರಿಹಾರವೇನೂ ಸಿಗದು. ಖಂಡನೆಯ ಜೊತೆಗೆ ನಿವಾರಣೆಯೂ ಅತ್ಯಗತ್ಯ. ಕೊಲ್ಲುವುದಕ್ಕೆ ಪರಿಹಾರ ಮಾನವೀಯ ಸಂಸ್ಕಾರ ಬೆಳೆಸುವುದೊಂದೇ ಎನ್ನಿಸುತ್ತದೆ ನನಗೆ! ಈ ಸಮಸ್ಯೆಗೆ ಪರಿಹಾರ ತಕ್ಷಣಕ್ಕಂತೂ ಸಾಧ್ಯವಿಲ್ಲ. ಸಮಾಜದೊಳಗೆ ಆಳವಾಗಿ ಬೇರೂರಿರುವ ಈ ಮನಃಸ್ಥಿತಿಯನ್ನು ಬದಲಾಯಿಸುವ ಮನಸ್ಸು ನಾವು ಮಾಡಬೇಕಷ್ಟೇ. ಮುಂದಿನ ಪೀಳಿಗೆಯ ತಲೆಯಲ್ಲಿ ಕೌಟುಂಬಿಕ ಮರ್ಯಾದೆ, ಸ್ವಪ್ರತಿಷ್ಠೆ, ಮನೆತನದ ಗೌರವ ಎಲ್ಲದೂ ಇರುವುದು ನಮ್ಮ ಉತ್ತಮ ನಡತೆ, ಮೌಲ್ಯಯುತ ಬದುಕು ಹಾಗೂ ಜೀವನ ಕ್ರಮ ಹಾಗೂ ಸ್ವಾಭಿಮಾನದ ಬದುಕಿನಲ್ಲಿ… ಪರಸ್ಪರ ಕೊಲ್ಲದೇ ಸಹಬಾಳ್ವೆ ಮಾಡುವುದರ ಮೂಲಕ, ಎಲ್ಲರನ್ನೂ ಗೌರವಿಸುವುದರ ಮೂಲಕ, ನಮ್ಮ ಸಂಪ್ರದಾಯವನ್ನು ಘನತೆಯಿಂದ ಆಚರಿಸುತ್ತಲೇ ಮತ್ತೊಬ್ಬರ ಆಚರಣೆಯನ್ನೂ ಸಮ್ಮಾನಿಸುವುದರಲ್ಲಿ ಎಂಬ ಮನೋಭಾವವನ್ನು ಬೆಳೆಸುವುದರ ಮೂಲಕವಷ್ಟೇ ನಿಧಾನದಲ್ಲಿ ಇದನ್ನು ಪರಿಹಾರ ಮಾಡಬಹುದು. ಮೇಲು ಕೀಳು ಎನ್ನುವುದು ಹಣದಲ್ಲಾಗಲೀ, ಜಾತಿಯಲ್ಲಾಗಲೀ ಬರದೇ, ಗುಣ, ಸ್ವಭಾವದಲ್ಲಿ ಬರುವಂಥದ್ದು ಎನ್ನುವುದನ್ನು ತಿಳಿಸಿಕೊಡಬೇಕು. ಆದರೆ ಇಂಥ ಸಮಸ್ಯೆಗೆ ಪರಿಹಾರ ಏಕಪಕ್ಷೀಯವಾಗಂತೂ ಸಾಧ್ಯವಿಲ್ಲ. ಎಲ್ಲಾ ರೀತಿಯ ಜಾತಿ ಧರ್ಮಗಳಲ್ಲೂ ಆಗುತ್ತಾ ಹೋದರೆ ಮಾತ್ರ ಕ್ಷಿಪ್ರಗತಿಯಲ್ಲಿ ಬೆಳಕು ಕಾಣಬಹುದು. ಈಗಾಗುತ್ತಿರುವುದೆಲ್ಲಾ ತಾನು, ತಮ್ಮವರು ಶುದ್ಧರು, ಕ್ಷುದ್ರರೆಲ್ಲಾ ಎದುರಿನವರೇ ಎಂಬ ಅಲ್ಪಜ್ಞಾನ ಹಾಗೂ ಪಲಾಯನವಾದವೇ ಇದಕ್ಕೆ ಕಾರಣ. ಅಲ್ಲದೇ, ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣವೆಂಬಂತೇ ಎಂಥದ್ದೇ ದುರಂತ ಬರಲಿ, ವಿಪತ್ತು ಕಾಡಲಿ ಈ ದೇಶವನ್ನು, ರಾಜ್ಯವನ್ನು, ಜಿಲ್ಲೆಯನ್ನು, ಜಾತಿಯನ್ನು ನಿಂದನೆ ಮಾಡುವುದರಲ್ಲೇ ಕಾಲಹರಣಮಾಡಿದರೆ, ಮತ್ತಷ್ಟು ಬಿಗಡಾಯಿಸಿದಂತಾಗುವುದು ಅಷ್ಟೇ. ತಿವಿಯುವುದರಲ್ಲಿ, ಚುಚ್ಚುವುದರಲ್ಲಿ, ಕೆಡವುದರಲ್ಲಿ ಮೇಲೆತ್ತುವಿಕೆ, ಸುಧಾರಣೆ ಅಸಾಧ್ಯ. ಸುಧಾರಣೆ ಮಾಡುವುದಾದರೆ ನಮ್ಮ ಮನೆ-ಮನಗಳಲ್ಲಿ ಆರಂಭಿಸುವ. 
*ನಮ್ಮ ಮಕ್ಕಳಿಗೆ “There is no Honor in Killing”, ಮರ್ಯಾದೆ ಹೆಚ್ಚುವುದು ಅಮಾಯಕರನ್ನು ಕೊಲ್ಲುವುದರಲ್ಲಲ್ಲ, ಕಾಪಾಡುವುದರಲ್ಲಿ ಎಂಬುದನ್ನು ತಿಳಿಸೋಣ. ಇದೆಲ್ಲದರ ಜೊತೆಗೇ,
*ನೀನು ತೆಗೆದುಕೊಳ್ಳುವ ನಿರ್ಧಾರದ ಸಾಧಕ ಬಾಧಕಗಳ, ಕಷ್ಟ, ಸುಖಗಳ ಚಿಂತನೆಯೂ ನಿನ್ನ ಹಕ್ಕು, ಜವಾಬ್ದಾರಿ ಎನ್ನುವುದನ್ನೂ ತಿಳಿಸುತ್ತಾ ಹೋಗೋಣ. ಒಳಿತು ಕೆಡುಕು ಇದಾಗಿದ್ದರಬಹುದೇ ಎಂದು ಚರ್ಚಿಸುತ್ತಾ ಹೋಗೋಣ. ಅವರ ಜೊತೆಗೆ ನಿರ್ಧಾರ ಮಾಡೋಣ. 
*ಎಲ್ಲಕ್ಕಿಂತ ಮುಖ್ಯವಾಗಿ ಗಂಡು ಮಕ್ಕಳಿಗೆ ಮನೆಯ ಹೆಣ್ಮಕ್ಕಳನ್ನು ಗೌರವಿಸುವ, ಪ್ರೀತಿಸುವ, ಅವರು ತಮಗೆ ಸಮಾನರೆಂದು ತಿಳಿಯುವ ವಿವೇಕವನ್ನು ವಿನಮ್ರತೆಯನ್ನು ಬೆಳೆಸಿದರೂ ಸಾಕು. ಇಂಥಾ ಹತ್ಯೆಯ ಜೊತೆಗೆ ಅತ್ಯಾಚಾರದಂಥ ಪಿಡುಗೂ ಕಡಿಮೆಯಾಗುತ್ತಾ ಹೋಗುವುದು. 
*ಇನ್ನು ಅವರೇನಾದರೂ ತಾವು ತೆಗೆದುಕೊಂಡ ನಿರ್ಧಾರದಲ್ಲಿ (ಯಾವುದೇ ಇರಲಿ) ಅಪ್ಪಿತಪ್ಪಿ ಎಡವಿದಾಗ ಸಾಧ್ಯವಾದಷ್ಟು ಸಾಥ್ ಕೊಡಿ. ಅದೂ ಸಾಧ್ಯವಾಗದಿದ್ದರೆ ಸುಮ್ಮನಿದ್ದು ಬಿಡಿ. ಎಡವಿದಾಗಲೇ ಬದುಕು ತೆರೆದುಕೊಳ್ಳುವುದು. ಅಲ್ಲಿಂದ ಪಾಠ ಕಲಿತರೇ ಬೆಳೆಯಲಾಗುವುದು. ಕಲಿಯದಿದ್ದರೆ ಮತ್ತೆಮತ್ತೆ ಕಲಿಸಲು ಬದುಕಂತೂ ಜೊತೆಗಿದ್ದೇ ಇರುತ್ತದೆ. 
ಈರೀತಿ, ನಮ್ಮ ಮಕ್ಕಳಿಂದ, ಮುಂದಿನ ಪೀಳಿಗೆಯಿಂದಲಾದರೂ ಮರ್ಯಾದಾ ಹತ್ಯೆಯಂಥ ಸಾಮಾಜಿಕ ದುರಂತ ನಿಲ್ಲುವಂತಾಗಲಿ ಎಂದೇ ಹಾರೈಸೋಣ, ಪ್ರಯತ್ನಿಸೋಣ.
ಸೂಚನೆ:- ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಕೆಲವು ಅಂತರ್ಜಾಲ ಕೊಂಡಿಗಳು ಇಲ್ಲಿವೆ. ಜಗತ್ತಿನಲ್ಲಿ ಮತ್ತು ನಮ್ಮಲ್ಲಿ ನಡೆದಿರುವ ಕೆಲವು ಪ್ರಕರಣಗಳ ವಿವರಗಳೂ ಇವೆ. ನೀವೂ ಹುಡುಕಾಡಿದರೆ ಮತ್ತೂ ಹೆಚ್ಚಿನ ಮಾಹಿತಿಗಳು ಸಿಗಬಹುದು. ಪ್ರಸ್ತುತ ಲೇಖನವನ್ನೂ ನಾನು ಅಂತರ್ಜಾಲದ ಮಾಹಿತಿಗಳನ್ನಾಧರಿಸಿಯೇ ಬರೆದಿರುವುದು.

~ತೇಜಸ್ವಿನಿ ಹೆಗಡೆಶುಕ್ರವಾರ, ಏಪ್ರಿಲ್ 27, 2018

ಮಹಾಯಾತ್ರಿಕ

ಬಿಭೂತಿಭೂಷಣ ವಂದ್ಯೋಪಾಧ್ಯಾಯರು ರಚಿಸಿದ “ಪಥೇರ್ ಪಾಂಚಾಲಿ” ಕಾದಂಬರಿ ಸುಪ್ರಸಿದ್ಧ. ಬಹಳ ಹಿಂದೆ ಈ ಕಾದಂಬರಿಯ ಹೆಸರು ಕೇಳಿದಾಗಿನಿಂದ ಇದನ್ನೋದಬೇಕೆಂದು ಬಯಸಿದ್ದೆ. ಅದೇನೋ ಹೇಳುತ್ತಾರಲ್ಲ, ಎಲ್ಲವುದಕ್ಕೂ ಕಾಲ ಕೂಡಿಬರಬೇಕೆಂದು. ಒಳ್ಳೆಯ ಪುಸ್ತಕವನ್ನೋದಿ ಅನುಭೂತಿಸಲೂ ಸುಮುಹೂರ್ತ ಕೂಡಿಬರಬೇಕಾಗುತ್ತದೆ ಮತ್ತು ಆ ಒಳ್ಳೆಯ ಘಳಿಗೆ ವೈಯಕ್ತಿಕವಾಗಿ ನಮಗೇನೋ ತುಸು ತೊಂದರೆಯನ್ನುಂಟುಮಾಡಿಯಾದರೂ ಸರಿಯೇ ಸಫಲವಾಗುತ್ತದೆ! ಕಾಲಿಗೆ ಮತ್ತು ಕೈಗೆ ಅನಿರೀಕ್ಷಿತ ಪೆಟ್ಟಾಗಿ ತುಸು ಹೆಚ್ಚೇ ವಿಶ್ರಾಂತಿಯನ್ನು ವೈದ್ಯರು ಹೇರಲು, ಮೊದಲು ಬಹಳ ಕಿರಿಕಿರಿಯಾದರೂ ತಕ್ಷಣ ನನ್ನ ಕಣ್ಣಿಗೆ ಬಿದ್ದಿದ್ದು, ಕೆಲವು ತಿಂಗಳ ಹಿಂದೆ ನಾನೇ ತರಿಸಿಟ್ಟಿದ್ದ “ಮಹಾಯಾತ್ರಿಕ” ಪುಸ್ತಕ! ತಕ್ಷಣ ನೋವು ಎಷ್ಟೋ ಶಮನವಾಗಿತ್ತು. ‘ಪಥೇರ್ ಪಾಂಚಾಲಿ’ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಅಹೋಬಲ ಶಂಕರ ಅವರು. ಇದನ್ನು ಪ್ರಕಟಿಸಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಏನೇನೋ ಕೆಲಸಗಳ ಭಾರದಲ್ಲಿ, ಕೆಲವು ನಾನೇ ಹೇರಿಕೊಂಡ ನೆಪಗಳೊಳಗೆ ಈ ಪುಸ್ತಕವನ್ನೋದುವುದೇ ಮರೆತುಬಿಟ್ಟಿದ್ದೆ. ಧುತ್ತನೆದುರಾದ ಪರಿಸ್ಥಿತಿ ತಲೆಗೊಂದು ಮೊಟಕಿ ಈ ಪುಸ್ತಕವನ್ನು ಕೈಯಲ್ಲಿ ಹಿಡಿಸಿತ್ತು. 

ಮೊದಲ ಹತ್ತಿಪ್ಪತ್ತು ಪುಟಗಳನ್ನೋದಲು ತುಸು ಕಠಿಣವಾಯಿತು. ಕಾರಣ, ಅಂದಿನ ವಂಗದೇಶದ, ಸಾವಿರದ ಒಂಬೈನೂರರ ಆಸು ಪಾಸಿನಲ್ಲಿ ನಡೆವ ಆ ಕಥಾಚಿತ್ರಣವನ್ನು ಹಾಗೂ ಮೂಲ ಭಾಷೆಯ ಸೊಗಡನ್ನು ಹೀರಿ ಅದನ್ನೇ ಇಲ್ಲಿ ಕಟ್ಟಿಕೊಡುವಾಗ ಅನುವಾದಕರು ಕೆಲವೊಂದು ಕಥಾ ಚಿತ್ರಣಗಳನ್ನು, ಅಲ್ಲಿನ ಭಾಷೆಯ ಶೈಲಿಯನ್ನು ಹಾಗೇ ಇಳಿಸಿದ್ದು ಓದಲು ತಿಣುಕಾಡುವಂತೆ ಮಾಡಿತು. ಆದರೆ ಒಮ್ಮೆ ಅದರ ಆತ್ಮವನ್ನು ಹೊಕ್ಕಿದ ಮೇಲೆ, ಈ ರೀತಿಯ ಅನುವಾದದ ಶೈಲಿಯನ್ನು, ಭಾಷೆಯನ್ನು ಅರ್ಥೈಸಿಕೊಂಡು ಅದರ ನಾಡಿಯನ್ನು ಹಿಡಿದ ಮೇಲೆ ನಾನೇ ಕಥೆ ನಡೆವ ಗ್ರಾಮದಲ್ಲಿದ್ದೆ!
ಈ ಕಾದಂಬರಿಯನ್ನೋದುವ ಮೊದಲು ಇದರ ಹಿನ್ನಲೆ, ಮುನ್ನಲೆ ಅಥವಾ ಕನಿಷ್ಟ ಕಥೆಯೇನೆನ್ನುವುದೂ ತಿಳಿದಿರಲಿಲ್ಲ. ಸತ್ಯಜಿತ್ ರೇ ಅವರ ಪಥೇರ್ ಪಾಂಚಲಿಯನ್ನೂ ನಾನು ನೋಡಿರಲಿಲ್ಲ. ಹೀಗಾಗಿ ಬಹಳ ಕುತೂಹಲದಿಂದಲೇ ಪುಸ್ತಕ ಹಿಡಿದದ್ದು. ಮಹಾಯಾತ್ರಿಕ ಎಂಬ ಶೀರ್ಷಿಕೆಯನ್ನೋದಿದ ಮೇಲೆ ಇದು ಬಹುಶಃ ಓರ್ವ ವ್ಯಕ್ತಿಯ ಯಾತ್ರೆಯ, ಪ್ರವಾಸದ ಕಥೆ ಎಂದು ತಿಳಿದಿದ್ದೆ. ಆತ ಬೇರೆ ಬೇರೆ ಪ್ರದೇಶಗಳನ್ನು ತಿರುಗಾಡುತ್ತಾ, ದೇಶಾಂತರ ಹೋಗುತ್ತಾ ತಾನು ಕಂಡದ್ದು ಹೇಳುತ್ತಾನೇನೋ ಎಂದು ಭಾವಿಸಿದ್ದೆ. ಆದರೆ ಸುಮಾರು ನೂರು ಪುಟಗಳನ್ನೋದುವಾಗ ಅರ್ಥವಾಯಿತು ಇದು ಬೇರೆಯದೇ ರೀತಿಯ ಪ್ರಯಾಣವೆಂದು! ಬಹಳ ಸುಂದರ, ಅಷ್ಟೇ ತ್ರಾಸದಾಯಕ, ಮನೋಹರ ಹಾಗೇ ಮನಕಲಕುವ ಕಥಾ ಹಂದರವುಳ್ಳ ವಿಶಿಷ್ಟ ಕಾದಂಬರಿಯಿದು! ಓರ್ವ ದೂರದೂರಿಗೆ ಹೋಗದೇ, ಹೊಸ ತಾಣಗಳನ್ನು ಕಾಣದೇ, ತನ್ನ ಪರಿಸರದ ಸುತ್ತಮುತ್ತಲನ್ನೇ ಸುತ್ತುಹಾಕುತ್ತಾ, ಪ್ರಕೃತಿ ಅಡಗಿಸಿರುವ ನಿಗೂಢನೆಯನ್ನು ಬಯಲಾಗಿಸುತ್ತಾ, ಅದರೊಳಗಿನ ಅನೇಕ ರಹಸ್ಯಗಳನ್ನು ಬಿಚ್ಚಿಡುತ್ತಾ ಹೋಗುವುದೂ ಒಂದು ಮಹಾಯಾತ್ರೆಯೇ, ಅದನ್ನು ನಡೆಸುವವರೆಲ್ಲಾ ಮಹಾಯಾತ್ರಿಕರೇ ಎಂಬುದನ್ನು ಈ ಕಾದಂಬರಿಯನ್ನೋದಿ ಅರಿತುಕೊಂಡೆ.
ಮುಕ್ಕಾಲುವಾಸಿ ಕಥೆ ನಡೆಯೋದು ವಂಗದೇಶದ(ಬಂಗಾಳ ಪ್ರಾಂತ್ಯ) ನಿಶ್ಚಿಂದಿಪುರದ ಸುಂದರ ಪರಿಸರದಲ್ಲಿ ಮತ್ತು ದುರ್ಗಾ ಎಂಬ ೧೩-೧೪ರ ಹರೆಯದ ಅಕ್ಕ ಹಾಗೂ ೮-೯ ವರುಷದ ತಮ್ಮ ಅಪುವಿನ ಸುತ್ತಮುತ್ತಲೂ.
ಸರ್ವಜಯಾ ಮತ್ತು ಹರಿಹರರಾಯ ದಂಪತಿಗಳ ಮಕ್ಕಳಾದ ಅಪು(ಅಪೂರ್ವಚಂದ್ರರಾಯ್) ಮತ್ತು ದುರ್ಗಾ, ಅವರ ಬದುಕಲ್ಲಿ ಯಥೇಚ್ಛಾಗಿ ತುಂಬಿದ ಕಡು ಬಡತನ, ಅವಮಾನ, ಪ್ರತಿ ದಿವಸದ ಕೂಳಿಗೋಸ್ಕರ ಅವರು ನಡೆಸುವ ಹೋರಾಟ ಇದಿಷ್ಟೇ ಎಳೆಯಿಟ್ಟುಕೊಂಡೇ ಅದ್ಭುತವಾಗಿ ಕಥೆ ಹಣೆಯಲಾಗಿದೆ. ಆದರೆ ಎಲ್ಲಿಯೂ ಅವರ ಬಡತನ ನಮ್ಮಲ್ಲಿ ಕೇವಲ ದುಃಖ, ಸಂಕಟವನ್ನು ತುಂಬದೇ, ಅವರನ್ನಾವರಿಸಿದ್ದ ಸುಂದರ ಪಕೃತಿ ನೀಡುವ ಸಾಂತ್ವನ, ಅದರ ಸಂಪತ್ತು ಅವರೊಳಗೆ ತುಂಬುವ ಅಪಾರ ಸಂತೋಷ, ವನದುರ್ಗೆ ಆ ಮುಗ್ಧ ಮಕ್ಕಳ ಮನಸ್ಸನ್ನು ತಿದ್ದಿ, ತೀಡಿ ವಿಕಸಗೊಳಿಸಿ ಅವರೊಳಗೆ ಹನಿಸುವ ಆನಂದಾಶ್ರುಗಳನ್ನು ನಮ್ಮಲ್ಲಿಗೂ ಹರಿಸಿ, ಹಲವೆಡೆ ನಮ್ಮ ಕಣ್ಣಂಚೂ ಒದ್ದೆಯಾಗಿಸಿಬಿಡುತ್ತದೆ. ಆ ಎಳೆಯ ಮಕ್ಕಳು ತಮ್ಮ ವಿಶಾಲ ಕಣ್ಗಳಿಂದ ಮನೆಯೊಳಗಿನ ಬಡತನವ ಮರೆತು ತಮ್ಮ ಗ್ರಾಮ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಉಣ್ಣುತ್ತಾರೆ. ವನದೇವತೆಯು ತನ್ನ ಒಡಲೊಳಗೆ ತುಂಬಿಹ ವಿಪುಲತೆಯನ್ನು ತೋರಿ ಅವರಿಗೆ ಸಿಹಿಯಾದ ಆಹಾರವನ್ನು ನೀಡುತ್ತಾಳೆ. ಅದನ್ನೆಲ್ಲಾ ಮನಸೋ ಇಚ್ಛೆ ಸೇವಿಸುವ ಆ ಇಬ್ಬರು ಎಳೆಯರು ಕೊನೆ ಕೊನೆಗೆ ವಿಶ್ವವನ್ನೇ ಸ್ವಾಹಾ ಮಾಡಲು ಬಯಸುವಂಥ ಹಸಿವಿನಿಂದ ಕಂಡಂದ್ದನ್ನೆಲ್ಲಾ ಕಬಳಿಸುತ್ತಾ ನಮ್ಮೊಳಗೂ ಹಸಿವನ್ನು ಹುಟ್ಟಿಸಿಬಿಡುತ್ತಾರೆ. ಹಗಲಿರುಳೂ ಅವರು ತಿರುಗುವ ಅಂಥದ್ದೊಂದು ಅತ್ಯದ್ಭುತ ಪರಿಸರಕ್ಕೆ ಜೀವಿತದಲ್ಲೊಮ್ಮೆಯಾದರೂ ತಿರುಗಬೇಕೆಂಬ ಬಯಕೆ ಬೆಳೆದುಬಿಡುತ್ತದೆ. ಆದರೆ ಕ್ರಮೇಣ ಕಾದಂಬರಿಯೇ ನಮಗೆ ಕಟುವಾಸ್ತವಿಕತೆಗೂ, ಕಲ್ಪನೆಗೂ ಇರುವ ಅಂತರ ಹಾಗೂ ಮತ್ತೊಬ್ಬರ ಬದುಕಿನಲ್ಲಿ ನಾವು ಕಾಣುವ ಸುಂದರತೆಗೂ, ದೂರದ ಬೆಟ್ಟದ ಸೌಂದರ್ಯಕ್ಕೂ ಇರುವ ಸಾಮ್ಯವನ್ನು ತೋರಿಬಿಡುತ್ತದೆ.
ಆದರೂ ದುರ್ಗಾ ಹಾಗೂ ಅಪುವಿನಲ್ಲಿ ಹೇರಳವಾಗಿರುವ ಪ್ರಕೃತಿ ಜ್ಞಾನ ನಮ್ಮ ಅರಿವನ್ನೂ ಹೆಚ್ಚಿಸುತ್ತದೆ. ಅದರಲ್ಲೂ ವಿಶೇಷವಾಗಿ ಅಪುವಿನ ಕಲ್ಪನಾ ಶಕ್ತಿ, ಅದಕ್ಕೆ ಹದವಾಗಿ ಬೆರೆತ ಮುಗ್ಧತೆ, ಆತನ ಅಪಾರ ಸೌಂದರ್ಯ ಪ್ರಜ್ಞೆ ನಿಬ್ಬೆರಗಾಗಿಸುತ್ತದೆ. ಉದಾಹರಣೆಗೆ ಒಂದೆಡೆ ಅಪು ಗುಡುಗು ಸಿಡಿಲಿನ ಆರ್ಭಟವನ್ನು ಕಂಡು ಹೀಗೆ ಕಲ್ಪಿಸಿಕೊಳ್ಳುತ್ತಾನೆ... “ದೇವರು ಹೇಗೆ ಕತ್ತಿ ಮಸೆಯುತ್ತಾನೆ, ಅದಕ್ಕೇ ಆ ಹೊಳಪು! ಈಸಲ ಖಂಡಿತ ಘರ್ಜನೆ ಮಾಡುತ್ತಾನೆ.”
ಅದೇ ರೀತಿ ಇತ್ತ ದುರ್ಗಾ ಎಂಬ ಪುಟ್ಟ ಕೂಸು, ಕಾಡಿನ ಯಾವ ಮೂಲೆಯಲ್ಲಿ, ಯಾವ ಮರದಲ್ಲಿ ಎಂಥಾ ರೀತಿಯ ಹಣ್ಣು ದೊರಕುತ್ತದೆ, ಹುಲ್ಲುಗಾವಲಿನ ಬಯಲ ಸೌಂದರ್ಯವನ್ನು ಹೇಗೆ ಸವಿಯಬೇಕು, ಬಿದಿರುವನದಲ್ಲಿ ಎಂಥಾ ಬಿದುರು ಬೆತ್ತಕ್ಕೆ, ಕೊಳಲಿಗೆ ಯೋಗ್ಯ, ಯಾರ ಹಿತ್ತಲಿನ, ಯಾವ ಮರದ ಬುಡದಲ್ಲಿ ಗಡ್ಡೆ ಗೆಣಸಿರುತ್ತದೆ, ಎಂಥಾ ಸೊಪ್ಪು ಪದಾರ್ಥಕ್ಕೆ ಯೋಗ್ಯ ಎಂಬೆಲ್ಲಾ ವನ ಪಾಠವನ್ನು ತನ್ನ ತಮ್ಮನಿಗೆ ನೀಡುವಾಗ ನಾವೂ ಕಲಿಯುತ್ತಾ, ಗ್ರಾಮವನ್ನೆಲ್ಲಾ ಅವರೊಂದಿಗೆ ಸುತ್ತಿ, ಕಾಡು, ಮೇಡು, ಬೇಟ್ಟವನ್ನೆಲ್ಲಾ ತಿರುಗಿ ಹೊಟ್ಟೆಯನ್ನು ತುಂಬಿಸಿಕೊಂಡು ಆನಂದ ಪಡುತ್ತೇವೆ.
ಅನುವಾದಕರಾದ ಅಹೋಬಲ ಶಂಕರ ಅವರು ತಮ್ಮ “ಅರಿಕೆ”ಯಲ್ಲಿ ಹೀಗೆ ಹೇಳುತ್ತಾರೆ...
“ವಂಗಸಾಹಿತ್ಯದಲ್ಲಿ ಪಥೇರ್ ಪಾಂಚಾಲಿಯಂತಹ ಕಾದಂಬರಿ ಯಾರೂ ಬರೆದಿರಲಿಲ್ಲ. ಎಲ್ಲಾ ಹೊಸದೇ ಅದರಲ್ಲಿ - ವಸ್ತು ಮತ್ತು ಪಾತ್ರಸೃಷ್ಟಿ ಸರಳವಾದರೂ, ಕಣ್ಣಿಗೆ ಕಟ್ಟುವ ವರ್ಣನೆಗಳು; ಹೆಚ್ಚಾಗಿ ಕಥೆಯಲ್ಲಿ ಮೊದಲಿನಿಂದ ಕಡೆಯವರೆಗೂ ಮನ ಸೆಳೆಯುವ ಅದರ ವಿಚಾರ ದೃಷ್ಟಿ, ಜೀವವರ್ಗದ ಬಗ್ಗೆ ಹೊರಹೊಮ್ಮುವ ಅಂತಃಕರಣ, ವಂಗದೇಶದ ಆತನ ಗ್ರಾಮ ಜೀವನವನ್ನು ವರ್ಣಿಸುವಾಗ ಅತಿಸಾಮಾನ್ಯ, ಅತಿ ಕ್ಷುದ್ರವೆಂಬಂತಹುದನ್ನೂ ಅತಿ ದೊಡ್ಡ ಘಟನೆಯಂತೆಯೇ ಸೂಕ್ಷ್ಮವಾಗಿ, ಅಂತರಂಗಿಕವಾಗಿ ಬಿಡಿಸಿ ಹೇಳುವಿಕೆ, ಹಳ್ಳಿಯ ಜನರ ಜೀವನದಲ್ಲಿ ಹಾಸು ಹೊಕ್ಕಾಗಿ ಬರುವ ಮುಗ್ಧ ಹಾಸ್ಯದೊಂದಿಗೆ ಕರುಳು ಕುಯ್ಯುವ ಒಳವೇಡನೆ, ದಾರಿದ್ರ್ಯದಿಂದ, ಮೌಢ್ಯ-ಅಸಹನೆಗಳಿಂದ ಮನುಷ್ಯನೇ ಮನುಷ್ಯನಾತ್ಮಕ್ಕೆ ಮಾಡುವ ಘೋರ ಅಪಮಾನ-ಇವುಗಳೆಲ್ಲವನ್ನೂ ಉತ್ಪ್ರೇಕ್ಷೆಯಿಲ್ಲದೇ, ರೋಷವಿಲ್ಲದೆ, ಭಾವೋತ್ಕಟನೆಯಿಲ್ಲದೇ ಕಲಾತ್ಮಕವಾಗಿ ನಿರೂಪಿಸಿರುವ ಜಾಣ್ಮೆ, ಬೇರೆ ಯಾರೂ ಪಡೆಯದಿದ್ದ ಹೊಸ ಬಗೆಯ ಕಥನ ಶೈಲಿ, ಕೆಲವೇ ಪದಗಳಲ್ಲಿ ಮನಸ್ಸಿನಲ್ಲಿ ಸದಾ ನಿಲ್ಲಿವಂತೆ ಚಿತ್ರಗಳನ್ನು ಕಟ್ಟುವ ಕುಶಲತೆ-ಇವೆಲ್ಲ ಪಂಡಿತ ಪಾಮರರನ್ನು ಬೆರಗುಗೊಳಿಸಿಬಿಟ್ಟವು.”
***
ತಾಯಿ ಹಾಗೂ ಮಗು ಹೇಗೆ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಈ ಅನೂಹ್ಯ ಬಾಂಧವ್ಯವನ್ನು ಬೆಸೆದುಕೊಳ್ಳುತ್ತಾರೆ, ಕೇವಲ ತಾಯಿ ಮಾತ್ರ ಕೊಡುವವಳಲ್ಲ, ಮಗುವೂ ತಾಯಿಗೆ ಏನೇನೆಲ್ಲಾ ಧಾರೆಯೆರೆಯುತ್ತದೆ ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿ ನಮ್ಮ ದೃಷ್ಟಿಕೋನವನ್ನೇ ತೆರೆಯುತ್ತಾರೆ ಲೇಖಕರು.
ಈ ಯಾನದಲ್ಲಿ ನಗುವಿದೆ, ನಿಶ್ಶಬ್ದ ಅಳುವಿದೆ, ಕರುಳು ಕೊರೆವ ಯಾತನೆಯಿದ್ದರೂ ಪ್ರಕೃತಿ ಲೇಪಿಸುವ ಸಾಂತ್ವನವಿದೆ. ಕರ್ಮಫಲ, ಅಂದರೆ ಈ ಜನ್ಮದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ, ಅರೆತೋ ಅರಿಯದೆಯೋ ಮತ್ತೊಂದು ಜೀವಕ್ಕೆ ಕೊಡುವ ನೋವಿನ ಫಲ, ಮತ್ತೋರ್ವ ವ್ಯಕ್ತಿಯನ್ನು ಹಿಂಸಿಸುವ ಫಲ ಈ ಜನ್ಮದಲ್ಲೇ ತೀರಿಸುತ್ತೇವೆ ಅನ್ನೋ ಒಂದು ಕಾನ್ಸೆಪ್ಟ್ (ಇದು ಎಷ್ಟರಮಟ್ಟಿಗೆ ನಿಜ ಅನ್ನೋದರ ಕುರಿತು ಇನ್ನೂ ಸಣ್ಣ ಅನುಮಾನ ಇದೆ ನನ್ನೊಳಗೆ) ಪ್ರಸ್ತುತ ಕಾದಂಬರಿಯ ಕೊನೆಯಲ್ಲಿ ದುರ್ಗಾಳ ಅಮ್ಮ ಹರಿಸುವ ಪಶ್ಚಾತ್ತಾಪದ ಕಣ್ಣೀರಿನಲ್ಲಿ ಎದ್ದು ಕಾಣಿಸುತ್ತದೆ. ಒಂದೆರಡು ಪ್ರಸಂಗಗಳನ್ನೋದಿಯಂತೂ ಪುಸ್ತಕವನ್ನು ಮುಚ್ಚಿಟ್ಟು, ಕಣ್ಮುಚ್ಚಿ ಒಳಗೊಳಗೇ ಅತೀವ ದುಃಖ ಅನುಭವಿಸಿಬಿಟ್ಟೆ. ಅಷ್ಟು ತೀವ್ರವಾಗಿದೆ ಯಾನದ ಆ ಘಟ್ಟ! ಅದನ್ನಿಲ್ಲಿ ಬೇಕೆಂದೇ ಉಲ್ಲೇಖಿಸುತ್ತಿಲ್ಲ. ಓದುಗರು ಓದುತ್ತಾ ಹೋಗುವಾಗ ಹಠಾತ್ ಅದು ಎದುರಾದಾಗಲೇ ಅದರ ಸಹಜ ಭಾವವನ್ನು ಹೀರಬಹುದೆಂದು ಆ ದೃಶ್ಯದ ವರ್ಣನೆಗೆ ಹೋಗುತ್ತಿಲ್ಲ. ಅಲ್ಲದೇ, ಅಲ್ಲಲ್ಲಿ ಬರುವ ಸಣ್ಣ ಕವಿತೆಗಳು, ಜನಪದ ಹಾಡುಗಳೊಳಗಿನ ವಿಡಂಬನೆ ಎಲ್ಲವೂ ಕಥೆಯ ಸ್ವಾದವನ್ನು ಹೆಚ್ಚಿಸುವಂತಿವೆ.
ಮೂಲ ಕಾದಂಬರಿಯನ್ನು ನಾನು ಓದಲು ಸಾಧ್ಯವಿಲ್ಲ. ಆದರೆ ಅನುವಾದ ಬಹಳ ಸಶಕ್ತವಾಗಿ ನಮ್ಮನ್ನಾವರಿಸುವುದಂತೂ ಖಂಡಿತ. ಕೆಲವೊಂದೆಡೆ ಅನುವಾದ ತುಸು ಸಂಕೀರ್ಣವಾಗಿದ್ದು, ಎರಡು ಸಲ ಓದನ್ನು ಬೇಡುವಂತಿದ್ದರೂ, ಓದಿನ ಸುಖಕ್ಕೆ ಅಷ್ಟು ತ್ರಾಸ ತೆಗೆದುಕೊಳ್ಳುವುದು ಒಳ್ಳೆಯದೇ ಎನ್ನಬಹುದು.
ಕಾದಂಬರಿಯನ್ನೋದಿದ ಮೇಲೆ ಅಪಾರ ಕುತೂಹಲದಿಂದ, ಬಹು ಚರ್ಚಿತ, ಎಲ್ಲೆಡೆ ಮಾನ್ಯಗೊಂಡ ಸತ್ಯಜಿತ್ ರೇ ಅವರ ಪಥೇರ್ ಪಾಂಚಾಲಿ ಚಿತ್ರದ ಕೆಲವು ತುಣುಕುಗಳನ್ನು ಹುಡುಕಿ ನೋಡಿದೆ. ಸ್ವಲ್ಪ ನಿರಾಸೆಯಾಯ್ತು. ಯಾವೆಲ್ಲಾ ದೃಶ್ಯಗಳನ್ನು ಪುಸ್ತಕದಲ್ಲೋದಿ ಪುಳಕಿತಳಾಗಿದ್ದೆನೋ ಅದೇ ದೃಶ್ಯವನ್ನೊಳಗೊಂಡ ಒಂದೆರಡು ತುಣುಕುಗಳೇ ಸಿಕ್ಕಿವು ನನಗೆ. ಆದರೆ ಚಿತ್ರದಲ್ಲಿ ಅವುಗಳನ್ನು ಬಹಳ ನೀರಸ ಸಪ್ಪೆಯಾಗಿ ಕಥೆಯನ್ನು ತುಸು ಬದಲಾಯಿಸಿದಂತೇ ಕಂಡಿತು. ಹಾಗೆಯೇ, ಗೂಗಲ್ ಮಾಡಿದಾಗ ಅಪು ದೊಡ್ಡವನಾಗಿ, ಮದುವೆಯಾಗಿ, ಆಮೇಲೆ ಅವನ ಬದುಕು ಬದಲಾದ ಕ್ರಮವೂ ಕಾದಂಬರಿಯಲ್ಲಿದೆ ಎಂಬಂತಹ ಮಾಹಿತಿಗಳೂ ಸಿಕ್ಕವು. ಆದರೆ ಪ್ರಸ್ತುತ ಅನುವಾದಿತ ಕಾದಂಬರಿಯಲ್ಲಿ ಆ ಘಟ್ಟವಿಲ್ಲ! ಮೂಲ ಓದಿದವರು ಅಥವಾ ಬಲ್ಲವರು ಹೇಳಿದರೆ ಬಹಳ ಒಳ್ಳೆಯದು. ಒಟ್ಟಿನಲ್ಲಿ ೪೦೦ ಪುಟಗಳ ಈ ಕಾದಂಬರಿಯ ಯಾನವು ಓದುವಷ್ಟು ಹೊತ್ತು ಮತ್ತು ಓದಿದಾನಂತರವೂ ನಮ್ಮನ್ನು ಬೇರೆಯದೇ ಲೋಕಕ್ಕೆ ಒಯ್ಯಲು ಸಮರ್ಥವಾಗಿದೆ ಎನ್ನುವುದು ನನ್ನ ಅನಿಸಿಕೆ. ಒಮ್ಮೆ ನೀವೂ ಈ ಯಾನದಲ್ಲಿ ಪಾಲ್ಗೊಂಡು ಆ ಇಬ್ಬರು ಪುಟ್ಟ ಮಹಾನ್ ಯಾತ್ರಿಕರ ಸಂಗಡ ಪ್ರಯಾಣಿಸಿ ನೋಡಿ, ಹಾಗೆಯೇ ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ.
ನಾನಂತೂ ವಿಭೂತಿಭೂಷಣರ ಕಥೆಗಳ, ಶೈಲಿಯ ಅಭಿಮಾನಿಯಾಗಿಬಿಟ್ಟಿರುವೆ. ಈಗ ನನ್ನ ಮಗಳು ಹಾಗೂ ತಂಗಿಯ ಮಗನಿಗೆ ಅಪೂ ಮತ್ತು ದುರ್ಗಾರ ಸಾಹಸಗಾಥೆಯನ್ನು, ಬದುಕಲ್ಲಿ ಅವರು ಕಾಣುವ ಕಷ್ಟಗಳು, ನಡೆಸುವ ಹೋರಾಟ, ವನದೇವತೆಯೊಳಗಿರುವ ಸಂಪತ್ತು ಇವೆಲ್ಲವನ್ನೂ ರಸವತ್ತಾಗಿ ಕಥೆ ಹೇಳಲು ತೊಡಗಿರುವೆ. ಆ ಮೂಲಕ ನನ್ನ ಯಾತ್ರೆ ಇನ್ನೂ ಜಾರಿಯಲ್ಲಿದೆ!
ಅಂದಹಾಗೆ "ಪಥೇರ್ ಪಾಂಚಾಲಿ" ಎಂದರೆ Song of the Little Road.
*
ಮಹಾಯಾತ್ರಿಕ
(ಪಥೇರ್ ಪಾಂಚಾಲಿ)
ಮೂಲ : ವಿಭೂತಿಭೂಷಣ ವಂದ್ಯೋಪಾಧ್ಯಾಯ
ಅನು: ಅಹೋಬಲ ಶಂಕರ
ಪುಟಗಳು : ೪೦೨
~ತೇಜಸ್ವಿನಿ ಹೆಗಡೆ.