ಶನಿವಾರ, ಡಿಸೆಂಬರ್ 20, 2008

ನೀ ಮಾಯೆಯೋ ನಿನ್ನೊಳಗಿಂದ ನೀ ಮಾಯವೋ?!!

ಈ ಬರಹವನ್ನೋದುವ ಮೊದಲೇ ನಾನು ಸ್ಪಷ್ಟಪಡಿಸುತ್ತಿದ್ದೇನೆ. ನಾನು ಯಾವುದೇ ಸತ್ಯಾಸತ್ಯತೆಯ ಶೋಧನೆಗೋ ಸಂಶೋಧನೆಗೋ ಹೋಗುತ್ತಿಲ್ಲ. ಯಾರ ಭಾವನೆಯನ್ನೂ ಟೀಕಿಸುತ್ತಿಲ್ಲ. ಎಲ್ಲವನ್ನೂ ಅವರವರ ಭಾವಕ್ಕೆ ಬಿಡುತ್ತಿದ್ದೇನೆ. ಇದ್ದುದನ್ನು ಇದ್ದಹಾಗೇ, ನಡೆದದ್ದನ್ನು ನೇರವಾಗಿ ನಿಮ್ಮ ಮುಂದಿಡುತ್ತಿದ್ದೇನೆ. ಇದು ಕಾಲ್ಪನಿಕ ಘಟನೆಯಲ್ಲ. ಕಟ್ಟು ಕಥೆಯೂ ಅಲ್ಲ!
----------------------ನಿನ್ನೆ ಅಂದರೆ ಶುಕ್ರವಾರ ನಮ್ಮ ಫ್ಲಾಟ್‌ನಲ್ಲೊಬ್ಬರು ನನ್ನ ಮನೆಗೆ ಬಂದು "ಇವತ್ತು ಸಂಜೆ ಎಂಟುಗಂಟೆಗೆ ನಮ್ಮ ಮನೆಗೆ ಬರಬೇಕು....ಅರಿಶಿನ ಕುಂಕುಮಕ್ಕೆ. ಗಣಪತಿ ಪೂಜೆ ಮಾಡುತ್ತಿದ್ದೇನೆ. ಜೊತೆಗೆ ಮಗಳನ್ನೂ ಕರೆತನ್ನಿ ಎಂದರು." ಅವರು ಉತ್ತರಭಾರತದವರು. ಹಾಗಾಗಿ ನಮ್ಮ ಸಂಭಾಷಣೆಯೆಲ್ಲಾ ಹಿಂದಿಯಲ್ಲಾಗುತ್ತಿತ್ತು. ವಯಸ್ಸಿನಲ್ಲಿ ನನಗಿಂತ ಬಲು ದೊಡ್ಡವರಾಗಿದ್ದ ಕಾರಣ "ಆಂಟಿ ಇಲ್ಲವೇ ದಿದೀ" ಎಂದೇ ಕರೆಯುತ್ತಿದ್ದೆ. ಆದರೆ ಅವರ ಯಜಮಾನರು ಬೆಂಗಳೂರಿನವರೇ. ಕನ್ನಡಿಗರು. ಅವರಿಗೆ ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಅದಿತಿಯ ಜೊತೆ ಆಡಲು ಬರುತ್ತಿದ್ದರಿಂದ ನಮ್ಮಿಬ್ಬರ ಪರಿಚಯ ಗಾಢವಾಗಿತ್ತು. ಸ್ವಭಾವತಃ ಭಾವುಕರು, ಸೌಮ್ಯ ಸ್ವಭಾವದವರು ಹಾಗೂ ಒಂದು ರೀತಿಯ ಮುಗ್ಧತೆ ಅವರಲ್ಲಿದ್ದುದರಿಂದ ನನಗೂ ಅವರ ಒಡನಾಟ ಬಹು ಬೇಗ ಇಷ್ಟವಾಯಿತು.

ಸರಿ.. ಕುಂಕುಮಕ್ಕೆ ಹೇಳಿದ್ದಾರೆ.. ಹೋಗದಿದ್ದರೆ ಸರಿಯೆನಿಸದು ಎಂದು ಸುಮಾರು ೮ ಗಂಟೆಯ ಹತ್ತಿರ ಮಗಳ ಜೊತೆ ಹೋದೆ. ಅದಿತಿಯನ್ನು ಬಿಡಲು ನನ್ನ ಯಜಮಾನರೂ ನನ್ನೊಂದಿಗೆ ಬಂದರು. ಒಳಹೋದ ತಕ್ಷಣ ನಾನು ಇನ್ನೇನು ಅವರ ಪೂಜೆಯ ಕೋಣೆಯೆಡೆ ಹೋಗಬೆಕೆನ್ನುವಷ್ಟರಲ್ಲಿ ನನ್ನ ತಡೆದು ಪಕ್ಕದ ಕೋಣೆಗೆ ಕರೆದೊಯ್ದರು. "ನಾವು ಇಲ್ಲೇ ದೊಡ್ಡ ದೇವರನ್ನಿಡುವುದು.. ಈ ಕೋಣೆಯನ್ನು ಅದಕ್ಕಾಗಿಯೇ ಮೀಸಲಿಟ್ಟಿದ್ದೇವೆ. ಪೂಜಾರೂಂ ಸಣ್ಣದಿರುವುದರಿಂದ.." ಎನ್ನುತ್ತಾ ನನ್ನ ಒಳ ಕರೆದರು.

ಒಳ ಹೋದೊಡನೆಯೇ ತುಸು ದಂಗಾದೆ. ಆಳೆತ್ತರದ "ಕಲ್ಕಿ ಬಾಬಾ"ನ ಫೋಟೋ!! ಅದರ ಸುತ್ತ ಲೈಟನಿಂಗ್. ಫೋಟೋ ಕೆಳಗೆ ಕಲ್ಕಿ ಭಗವಾನ್ ಹಾಗೂ ಅವರ ಪತ್ನಿ.. ಕ್ಷಮಿಸಿ ಅಮ್ಮನವರ(ಅವರ ಪ್ರಕಾರ)ಫೋಟೋ. ಸುತ್ತಲೂ ತುಪ್ಪದ ದೀಪಗಳು, ವಿವಿಧ ಅಲಂಕಾರಗಳು. ಇನ್ನೂ ಕೆಳಗೆ ಮೂಲೆಯಲ್ಲೆಲ್ಲೋ ಸಣ್ಣ ಗಣಪತಿಯ ಮೂರ್ತಿ. ಕಲ್ಕಿ ದಂಪತಿಗಳ(ನನ್ನ ಪ್ರಕಾರ)ಫೋಟೋ ಕೆಳಗೆ ಬೆಳ್ಳಿಯ ದೊಡ್ಡ ಪಾದುಕೆಗಳು. ಅವುಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಇದೆಲ್ಲಾ ನನಗೆ ಹೊಸತು. ಈವರೆಗೆ ನೋಡಿರದ್ದು. ಕಲ್ಕಿ ದಂಪತಿಗಳ ಪೋಟೋ ಹಾಗೂ ಅವರ ಮಹಿಮೆಯ ಕುರಿತಾದ ಲೇಖನವನ್ನು ಒಂದೆರಡು ಬಾರಿ ತರಂಗದಲ್ಲಿ ನೋಡಿದ್ದೆನಷ್ಟೇ. ನೀವೂ ಓದಿರಬಹುದು. ಈಗಲೂ ಬರುತ್ತಿರುತ್ತದೆ. ಒಂದು ಪುಟ ಅವರಿಬ್ಬರಿಗೇ ಮೀಸಲು. ತದನಂತರದ ಸಂಭಾಷಣೆಯನ್ನು(ನಮ್ಮಿಬ್ಬರೊಳಗೆ ನಡೆದದ್ದು) ನಿಮ್ಮ ಮುಂದಿಡುತ್ತಿದ್ದೇನೆ.

(ಅವರೊಂದಿಗಿನ ನನ್ನ ಹಿಂದಿ ಸಂಭಾಷಣೆಯನ್ನು ಕನ್ನಡಕ್ಕೆ ಭಾಷಾಂತರಿಸಿ ಹಾಕಿದ್ದೇನೆ.)ನಾನು : ಆಂಟಿ ಇದೇನಿದು? ಯಾರ ಪಾದುಕೆಗಳಿವು? ಯಾರು ಈ ಬಾಬಾ?

ಅವರು : ಇವರು ಕಲ್ಕಿ ಭಗವಾನ್. ಕೇಳಿಲ್ವಾ? ತುಂಬಾ ಪ್ರಸಿದ್ಧರು. ಮಹಾನ್ ಶಕ್ತಿವಂತರು. ಕಲ್ಕಿ ಭಗವಾನ್ ಹಾಗೂ ಅವರ ಪತ್ನಿಯ ಭಾವ ಚಿತ್ರವದು. ನಾವೆಲ್ಲ ಅಮ್ಮಾಜಿ, ಪದ್ಮಾವತಮ್ಮ ಎಂದು ಕರೆಯುವುದು. ಇದು ಭಗವಾನ್‌ರ ಪಾದುಕೆ.

ನಾನು : ಓಹ್ ಹೌದಾ.. ನಾನೂ ಕೇಳಿದ್ದೇನಷ್ಟೇ. ಸರಿಯಾಗಿ ಗೊತ್ತಿಲ್ಲ. ನೀವು ಈ ಪಾದುಕೆಗಳನ್ನು ಪೂಜಿಸುವುದಾ? ಏನು ಇದರ ವಿಶೇಷ?

ಅವರು : ಈ ಪಾದುಕೆಗಳಿಗೆ ಅಪಾರ ಶಕ್ತಿಯಿದೆ. ಇದನ್ನು ಸ್ವತಃ ಕಲ್ಕಿ ಭಗವಾನ್ ಸ್ಪರ್ಶಿಸಿ ಕೊಟ್ಟದ್ದು.(ಆ ದಂಪತಿಗಳು) ಇದರ ಮೇಲೆ ಕೈಯಿಟ್ಟು ಭಕ್ತಿಯಿಂದ ನಿನಗಿಷ್ಟವಾದ ಶ್ಲೋಕವನ್ನೋ ದೇವರನ್ನೋ ನೆನೆಯುತ್ತಾ ಬೇಕಾದ್ದನ್ನು ಬೇಡಿದರೆ ಖಂಡಿತ ನೆರವೇರುವುದು. ಬಟ್ಟಲು ತನ್ನಿಂದತಾನೇ ಮುಂದೆ ಬರುವುದು. ಇಲ್ಲಾ ನಿನ್ನ ಕೈ, ಮೈಯೊಳಗೆಲ್ಲಾ "ವೈಬ್ರೇಷನ್" ಅಗುವುದು.

ನಾನು : (ತುಂಬಾ ಚಕಿತಳಾದೆ) ಹೌದಾ ಆಂಟಿ? ಯಾರೂ ಮುಟ್ಟ ಬಹುದಾ ಇವುಗಳನ್ನಾ? ನಾನೂ ಮುಟ್ಟಲಾ?

ಅವರು : ಖಂಡಿತ ಯಾರೂ ಮುಟ್ಟ ಬಹುದು. ಮೊದಲು ನಾನು ಹೇಗೆ ಮಾಡಬೇಕೆಂಡು ತೋರಿಸುವೆ. ನೀನೇ ನೋಡು. ಬಟ್ಟಲು ಮುಂದೆ ಬರುವುದನ್ನು.. ಎಂದು ಕೆಳಗೆ ಕುಳಿತು ಬೆಳ್ಳಿ ಪಾದುಕೆಗಳ ಮೇಲೆ ಕೈಗಳನ್ನಿಟ್ಟು ಕಣ್ಮುಚ್ಚಿದರು.
(ಇಷ್ಟೇಲ್ಲಾ ಆಗುವಾಗ ತಿರುಗಿ ಮನೆಗೆ ಹೊರಟಿದ್ದ ನನ್ನ ಯಜಮಾನರು ಕುತೂಹಲದಿಂದ ಅಲ್ಲೇ ನಿಂತರು. ಅವರ ಮುಖದ ತುಂಬೆಲ್ಲಾ ನಗು.. ನನಗೋ ಫಚೀತಿ. ಕಣ್ಸನ್ನೆ ಮಾಡಿದರೂ ತಿಳಿಯದಲ್ಲ ನನ್ನವರಿಗೆ!! ಅದಿತಿಯೋ ಆ ಪದುಕೆಗಳನ್ನು ಯಾವಾಗ ಎತ್ತುಕೊಂಡು ಓಡಲಿ ಎಂದೇ ಯೋಚಿಸುತ್ತಿದ್ದಳು ಪಕ್ಕದಲ್ಲೇ ಕುಳಿತು. ಅವಳಿಗೆ ಅದೊಂದು ಹೊಸ ಆಟಿಕೆಯಂತೆ ಕಂಡಿತ್ತೇನೋ ಬಹುಶಃ :) )
ಒಂದು ನಿಮಿಷವಾಗಿತ್ತಷ್ಟೇ. ಮೆಲ್ಲನೆ ಬಟ್ಟಲು ಜರುಗಿದಂತಾಯಿತು. ತುಸು ಭಾರವಾಗಿದ್ದ ಆಕೆಯ ಕೈ ಶಕ್ತಿಯಿಂದಾಗಿರಲೂ ಬಹುದು. ಇಲ್ಲಾ ಅಷ್ಟು ಹೊತ್ತಿನಿಂದ ಪಾದುಕೆಗಳನ್ನು ಒತ್ತಿ ಹಿಡಿದಿದ್ದರಿಂದಲೋ.. ಇಲ್ಲಾ ನಿಜವಾಗಿಯೂ ಇದು ಪವಾಡವೋ???!!.

ಅವರು: ನೋಡಿದಿರಾ? ಬಟ್ಟಲು ಮುಂದೆ ಬಂದದ್ದನ್ನು? ಈಗ ನೀವೂ ನನ್ನಂತೆಯೇ ಮಾಡಿ. ಜಾಸ್ತಿ ಒತ್ತಡವನ್ನು ಹಾಕಬೇಡಿ. ಕಣ್ಮುಚ್ಚಿ ನಿಮಗೆ ತೋಚಿದಂತೆ ಧ್ಯಾನಿಸಿ. ಒಮ್ಮೆಲೇ ಈ ರೀತಿ ಆಗದಿರಬಹುದು. ಇನ್ನೊಮ್ಮೆ ಮಾಡಿದಾಗ ಅನುಭವವಾಗುವುದು.ಎನ್ನಲು ನಾನೂ ಮುಂದಾದೆ.... ಮಾಡಿ ನೊಡಲೇನಡ್ಡಿ ಎಂದು. ಅಂತೆಯೇ ಕೆಳಗಿಳಿದು ಅದರ ಬಳಿ ಕುಳಿತು ಕೈ ಪಾದುಕೆಗಳ ಮೇಲಿಟ್ಟೆ. ಯಾವುದನ್ನೇ ಆಗಲಿ ಸರಿಯಾಗಿ ಪರೀಕ್ಷಿಸಬೇಕು ತಾನೆ? ಅಂತೆಯೇ ನನ್ನಿಷ್ಟ ದೇವರನ್ನು ನೆನೆದು ಕೈಯಿಟ್ಟೆ. ಊಹೂಂ ಎನೂ ಆಗಲಿಲ್ಲ.

ನಾನು : ಆಂಟಿ ಏನೂ ಅನಿಸಲೇ ಇಲ್ಲ.

ಅವರು : ಹೌದಾ? ನಾ ಹೇಳಿದೆನಲ್ಲಾ ಒಮ್ಮೆಲೇ ಆಗೊಲ್ಲ. ಇನ್ನೊಮ್ಮೆ ಪ್ರಯತ್ನಿಸು ಎಂದು ಒತ್ತಾಯಿಸಲು ಮತ್ತೆ ಕೈಯಿಟ್ಟು ಕಣ್ಮುಚ್ಚಿದೆ. ಒಂದು ನಿಮಿಷ ಬಿಟ್ಟು ಕಣ್ತೆರೆದೆ.
ಅವರು : ಈಗ?
ನಾನು : ಹೂಂ ಆಂಟಿ ಏನೋ ಮೈಯೊಳಗೆಲ್ಲಾ ಹರಿದ ಅನುಭವ.. ಬಹುಶಃ ನೀವೆಂದ "ವೈಬ್ರೇಷನ್" ಇರಬಹುದು! (ಮತ್ತೆ ಹಾಗೆ ಮಾಡಲು ಹೇಳದಿರಲೆಂದು ಮತ್ತೆ ಆಕೆಗೆ ಬೇಸರವಾಗದಿರಲೆಂದು ಹಾಗೆ ಹೇಳಿದ್ದು).
(ಆದರೆ ನನ್ನವರು ಮಾತ್ರ ನನ್ನ ಮಾತೊಳಗಿದ್ದ "ಪ್ರಾಮಾಣಿಕತೆಗೆ" ಉಕ್ಕಿ ಬರುತ್ತಿರುವ ನಗು ತಡೆಯಲು ಪಾದುಕೆಯ ಬಳಿ ಓಡಿ ಬರುತ್ತಿದ್ದ ಮಗಳನ್ನೆತ್ತಿಕೊಂಡು ಹೊರ ನಡೆದರು)

ಅವರು : ನಾ ಹೇಳಿಲ್ಲವೇ? ಇದು ತುಂಬಾ "ಪವರ್‌ಫುಲ್". ಇದನ್ನು ಸ್ವತಃ ಬಾಬಾನ ಸ್ಪರ್ಶಮಾಡಿಸಿ ತಂದಿದ್ದೇವೆ. ನಮ್ಮೆಲ್ಲಾ ಮನೋಕಾಮನೆಗಳು, ಮನೆ, ಬಿಸಿನೆಸ್ ಡೆವಲೆಪ್‌ಮೆಂಟ್ ಎಲ್ಲಾ ಇವರಿಂದಲೇ ಆಗಿದ್ದು. ಈ ಪಾದುಕೆಯ ಪೂಜೆಯಿಂದಲೇ ಸರ್ವವೂ ಸಿದ್ಧಿಯಾಗಿದ್ದು. ಬನ್ನಿ ನನ್ನ ಮನೆ ತೋರಿಸುವೆ ಎಂದು ಹೊರ ಕರೆದೊಯ್ದರು.

ಹೊರಬಂದು ಕೂರಲು, ನಾನು ಒಂದೊಂದೇ ಪ್ರಶ್ನೆಗಳನ್ನು ಅವರಿಗೆ ಕೇಳತೊಡಗಿದೆ.
ನಾನು : ಆಂಟಿ ಆ ಪಾದುಕೆಗಳೆಲ್ಲಿಂದ ತಂದಿರಿ? ಎಷ್ಟಾಯಿತು? ಬಲು ಚೆನ್ನಾಗಿದೆ. ತುಂಬಾ ದೊಡ್ಡದಿದೆ.

ಅವರು : ಅದನ್ನು ಚೆನ್ನೈನಲ್ಲಿರುವ ಭಗವಾನ್ ಆಶ್ರಮದಲ್ಲೇ ಮಾಡಿಸಿದ್ದು. ಅವರೇ ಮಾಡುತ್ತಾರೆ. ಬೆಳ್ಳಿಯದು. ನಿನಗೆ ಗೊತ್ತಾ ಅದಕ್ಕೆ ೨೦,೦೦೦ ಆಗಿದೆ. ನಂತರ ಅದನ್ನು ಭಗವಾನ್ ಹತ್ತಿರ ಕೊಂಡೊಯ್ದು ಅವರ ಹಸ್ತ ಮುಟ್ಟಿಸಿ ತಂದಿದ್ದೇವೆ. (ಏನೋ ಒಂದು ಭಕ್ತಿಯ ಪರವಶತೆ, ತನ್ಮಯತೆ, ಹೆಮ್ಮೆ ಅವರ ಮುಖದಲ್ಲೆದ್ದು ಕಾಣುತ್ತಿತ್ತು)

ನಾನು : ಓಹ್.. ಹೌದಾ. ಭಗವಾನ್ ಅವರ ಹಸ್ತ ಸ್ಪರ್ಶ ಸುಲಭದಲ್ಲಿ ದೊರಕುವುದಾ? ಪಾದುಕೆ ಕೊಂಡೊಯ್ದ ಕೂಡಲೇ?

ಅವರು : ಇಲ್ಲಮ್ಮಾ.. ಇಲ್ಲಾ ಅದಕ್ಕೂ ಬಲು ಕಷ್ಟ ಪಡಬೇಕು. ಅವರ ಅನುಚರರು.. ಅವರನ್ನು "ದಾಸಾಜಿ" ಎನ್ನುತ್ತೇವೆ ನಾವೆಲ್ಲಾ. ದಾಸಾಜಿಗಳನ್ನು ಬೇಡಿಕೊಂಡು ಸಮಯವನ್ನು ಪಡೆದು ಪಾದುಕೆಗಳಿಗೆ ಭಗವಾನ್ ಅವರ ಸ್ಪರ್ಶ ಪಡೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಸುಮಾರು ಒಂದು ಲಕ್ಷದ ಹತ್ತಿರ ಕೊಡಬೇಕಾಗುತ್ತದೆ. ಸುಲಭದ ಮಾತಲ್ಲ ಅದು. (ಮತ್ತದೇ ಭಾವ ಅವರ ಮುಖದಲ್ಲಿ...)

ನಾನು : ಅಬ್ಬಾ!! ಆಂಟಿ, ಅಂದರೆ ನೀವು ಒಂದು ಲಕ್ಷದ ಮೇಲೆ ಕೊಟ್ಟು ಈ ಪಾದುಕೆ ತಂದು ಪೂಜಿಸುತ್ತಿದ್ದಾರಾ? ಮತ್ತೆ ನೀವು ಚೆನ್ನೈನಲ್ಲಿರುವ ಅವರ ಆಶ್ರಮಕ್ಕೆ ಎಷ್ಟು ಸಲ ಭೇಟಿ ಕೊಡುತ್ತೀರಾ?

ಅವರು: ಹೂಂ.. ಸುಮಾರು ಅಷ್ಟೇ ಆಯಿತು. ಕಲ್ಕಿ ಭಗವಾನ್ ಅವರ ಪೂಜೆಯಿಂದಲೇ ನಾವು ಸ್ವಂತ ಮನೆ, ಬಿಸಿನೆಸ್, ಎಲ್ಲಾ ಪಡೆದದ್ದು. "ಬಹುತ್ ಮಾಂತೆಹೇ ಹಮ್ ಉನ್ಕೋ" ಎಂದು ಬಹಳ ಸಲ ಹೇಳಿದರು. (ಭಯ ಭಕ್ತಿಯಿಂದ). ನಾವು ವರ್ಷದಲ್ಲಿ ಒಂದು ಸಲ ಹೋಗುವೆವು. ಫ್ಯಾಮಿಲಿ ಪ್ಯಾಕೇಜ್‌ನಲ್ಲಿ.

ನಾನು : ಫ್ಯಾಮಿಲಿ ಪ್ಯಾಕೇಜ್?!! ಅಂದರೆ?

ಅವರು : ಭಗವಾನ್ ಹಾಗೂ ಅವರ ಪತ್ನಿ ಪದ್ಮಾವತಮ್ಮ.. ಅದೇ ಅಮ್ಮಾಜೀ ಬೇರೆ ಬೇರೆಯಾಗಿ ತಮ್ಮ ದರ್ಶನ ಕೊಡುವರು. ಅವರ ದರ್ಶನ ಸುಲಭವಲ್ಲ. ತುಂಬಾ ಕಾಯಬೇಕು. ದಾಸಾಜಿಯವರನ್ನು ವಿಚಾರಿಸಬೇಕು ಯಾವಾಗ, ಯಾವತ್ತು ಅವರ ದರ್ಶನವಾಗುವುದೆಂದು. ಆಮೇಲೆ ಒಬ್ಬರಿಗೆ ೨೦,೦೦೦ ಫೀಸ್ ಇದೆ ದರ್ಶನಕ್ಕೆ. ನಾವು ಅಂದರೆ ನಾನು, ಯಜಮಾನರು, ನನ್ನಿಬ್ಬರು ಮಕ್ಕಳಿಗೆ ಒಮ್ಮೆಗೆ ಒಂದು ಲಕ್ಷ ಫೀಸ್! ಅಲ್ಲದೇ ವರುಷದಲ್ಲೊಮ್ಮೆ ಎಲ್ಲರಿಗೂ ಫ್ರೀ ದರ್ಶನವಿರುತ್ತದೆ. ಆಗ ತಿರುಪತಿಯಲ್ಲಿ ಆಗುವಂತಹ ರಶ್ ಇರುತ್ತದೆ ಆಶ್ರಮದಲ್ಲಿ. ಹಾಗೆ ಫ್ರೀ ದರ್ಶನವಿರುವ ಮೊದಲು ಹೇಳುತ್ತಾರೆ. ದಾಸಾಜಿಗಳನ್ನು ವಿಚಾರಿಸುತ್ತಿರಬೇಕು. ನಾವು ವರುಷಕ್ಕೊಮ್ಮೆ ಒಂದು ಲಕ್ಷ ಕೊಟ್ಟು ಹೋಗುತ್ತೇವೆ. ನನ್ನೊಂದಿಗೆ ನನ್ನ ಯಜಮಾನರ ಅಕ್ಕ ಹಾಗೂ ಅವರ ಮನೆಯವರೆಲ್ಲಾ ಬರುತ್ತಾರೆ. ಅವರೂ ಕಲ್ಕಿ ಭಗಾವ್‌ರ ಭಕ್ತರು. ಅವರೇ ನಮಗೂ ಈ ದಾರಿ ತೋರಿಸಿದ್ದು.

ಅವರಿಷ್ಟೆಲ್ಲಾ ಹೇಳುವಾಗ ನನಗಂತೂ ತಲೆ ಬಿಸಿಯಾಗಿ ಹೋಗಿತ್ತು. ಆದರೂ ಮುಖದಲ್ಲೆಲ್ಲೂ ಭಾವನೆ ಪ್ರಕಟಿಸಿದಂತೆದ್ದೆ.
ನಾನು : ಓಹ್.. ಅಬ್ಬಾ!! ಇಷ್ಟೆಲ್ಲಾ ಖರ್ಚು ಇದೆಯಾ? ಇಷ್ಟೊಂದು ದುಡ್ಡನ್ನು ಏನು ಮಾಡ್ತಾರೆ?

ಅವರು : ಅವರು ಇದನ್ನೆಲ್ಲಾ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ ಖರ್ಚು ಮಾಡ್ತಾರಂತೆ. ಅದೂ ಅಲ್ಲದೇ ಅಲ್ಲೊಂದು ಈಗ ಮಾರ್ಬಲ್ ಹಾಗೂ ಗೋಲ್ಡನ್ ಆಶ್ರಮವಾಗಿದೆ. ನಾನು ಹೋಗಬೇಕು ಮತ್ತೆ. ಪೂರ್ತಿಯಾದಮೇಲೆ ನೊಡಿಲ್ಲ. ಅವರು ೩-೫ ದಿನದ ಕ್ಯಾಂಪ್‌ಗಳನ್ನೂ ಮಾಡುತ್ತಾರೆ. ಅದಕ್ಕೆ ಕಡಿಮೆ ಫೀಸ್. (ಎಷ್ಟೆಂದು ಕೇಳುವ ಧೈರ್ಯ ಮಾಡಲಿಲ್ಲ ನಾನು.)

ನಾನು : ಅವರಿಬ್ಬರೇ ಇರೋದಾ? ಅವರಿಗೆ ಮಕ್ಕಳಿಲ್ವಾ?

ಅವರು : ಸರಿಯಾಗಿ ಎಷ್ಟು ಮಕ್ಕಳೆಂದು ಗೊತ್ತಿಲ್ಲ. ಆದರೆ ಅವರಿಗೆ ಒಬ್ಬ ಮಗನಿರುವುದಂತೂ ನಿಜ. ಆದರೆ ಅವನು ಸಂಸಾರಸ್ಥ(!) ಆಶ್ರಮದಲ್ಲಿರುವುದಿಲ್ಲ. ಅವನೂ ಇತರ ಭಕ್ತರಂತೇ ಬಂದು ದರ್ಶನ ಪಡೆಯುತ್ತಾನೆ. ಆದಿತ್ಯವಾರ ಸಂಜೆ ೮ ಗಂಟೆಗೆ "ಆಸ್ಥಾ" ಟಿ.ವಿ. ಚಾನಲ್‌ನಲ್ಲಿ ಕಲ್ಕಿ ಭಗವಾನ್ ದಂಪತಿಗಳ, ಮಹಿಮೆ, ಪವಾಡ, ಭಕ್ತಿಯ ಕುರಿತು ದಾಸಾಜಿಗಳು ಉಪದೇಶಕೊಡುತ್ತಾರೆ. ತಪ್ಪದೇ ನೋಡಿ. ನೋಡುತ್ತಿದ್ದಂತೆ ನಾವು ನಮ್ಮನ್ನೇ ಮರೆಯುತ್ತೇವೆ. ಈ ದಾಸಾಜಿಗಳಿಗೆ ಸ್ವತಃ ಭಗವಾನ್ ದಂಪತಿಗಳೇ ಉಪದೇಶ ಕೊಡುತ್ತಾರೆ.

ಅಷ್ಟರಲ್ಲಿ ನನ್ನ ಯಜಮಾನರು ನನ್ನ ಕರೆಯಲು ಬಂದರು. ಮಗಳು ಹಠ ಹಿಡಿದಿದ್ದಳು.
ಅವರು : (ನನ್ನ ಯಜಮಾನರಲ್ಲಿ) ನೀವೂ ಬೇಕಿದ್ದರೆ ಪಾದುಕೆಗಳನ್ನು ಮುಟ್ಟಿ.

ನನ್ನವರು : ಬೇಡ. ಖಂಡಿತ ಇನ್ನೊಮ್ಮೆ ಬರ್ತೀನಿ. ಈಗ ನಾನು ಆಫೀಸ್ ಡ್ರೆಸ್ಸಿನಲ್ಲಿದ್ದೇನೆ ಎನ್ನಲು..

ಅವರು : ಓ..ಖಂಡಿತ ಈ ಪಾದುಕೆಗಳು ಇಲ್ಲೇ ಇರುತ್ತವೆ. ನಿಮಗೆ ಬೇಕಾದಾಗ ಮುಟ್ಟಿ ಕೇಳಿಕೊಳ್ಳಬಹುದು. ಬನ್ನಿ ಮತ್ತೆ ಎಂದು ಪ್ರೀತಿಯಿಂದ ಬೀಳ್ಕೊಡಲು ನಾವೂ ಖಂಡಿತ ಇನ್ನೊಮ್ಮೆ ದರ್ಶನಕ್ಕೆ ಬರುವೆವೆಂದು ಹೇಳುತ್ತಾ ಮನೆಗೆ ತೆರಳಿದೆವು.

ಈ ಘಟನೆಯ ನಂತರ ನನ್ನಲ್ಲಿ ಅದೆಷ್ಟೋ ಸಂದೇಹ, ಗೊಂದಲಗಳೆದ್ದಿವೆ. ನನ್ನ ನೆರೆಮನೆಯಾಕೆಯದು ಮುಗ್ಧತೆಯೋ ಇಲ್ಲಾ ಅಮಾಯಕತೆಯ ಪರಾಕಷ್ಠತೆಯೋ ತಿಳಿಯೇ. ಆದರೆ ಆಕೆಯಂತವರು, ಆಕೆಯ ಮನೆಯಂತವರು ಅಸಂಖ್ಯಾತರಿದ್ದಾರೆ ನಮ್ಮಲ್ಲಿ. ಇದರ ಸತ್ಯಾಸತ್ಯೆಯ ಗೋಜಿಗೆ ನಾ ಹೋಗುತ್ತಿಲ್ಲ. ಅವರನ್ನು(ನೆರೆಮನೆಯಾಕೆಯನ್ನು) ಟೀಕಿಸುವುದಾಗಲೀ, ಅವರ ಭಾವನೆಗಳನ್ನು ಅವಹೇಳನಗೊಳಿಸುವುದಕ್ಕಾಗಲೀ ಖಂಡಿತ ನಾನೀ ಬರಹವನ್ನು ಬರೆದಿಲ್ಲ. "ಬ್ರೈನ್‌ವಾಶ್ ಅಂದರೇನೂ ಅದೆಷ್ಟು ವ್ಯವಸ್ಥಿತವಾಗಿರುತ್ತದೆ"ಎಂದು ಅದೆಷ್ಟೋ ಘಟನೆಗಳನ್ನು ಸ್ವತಃ ನೋಡಿ ತಿಳಿದು ಬಲ್ಲೆ.

ನಿಮ್ಮಲ್ಲಿ ಯಾರಿಗಾದರೂ ಈ "ಕಲ್ಕಿ ಭಗವಾನ್‌"ಕುರಿತು ಮತ್ತಷ್ಟು ಮಾಹಿತಿಗಳಿದ್ದರೆ ದಯವಿಟ್ಟು ಹಂಚಿಕೊಳ್ಳಿ. ಆಗಲಾದರೂ ನನ್ನ ಸಂದೇಹಗಳು ಹಾಗೂ ಗೊಂದಲಗಳು ತುಸುವಾದರೂ ಪರಿಹಾರಗೊಳ್ಳಬಹುದೇನೋ!!!?

ಕಲ್ಕಿಭಗವಾನ್ ದಂಪತಿಗಳ ಛಾಯಾಚಿತ್ರಗಳಿಗೆ(ಈವರೆಗೂ ನೋಡದವರಿಗಾಗಿ) ಹಾಗೂ ಅವರ ಇತಿಹಾಸಗಳ ಅಧ್ಯಯನಕ್ಕೆ ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ಕಿಸಬಹುದು :) (ಈ ಘಟನೆ ನನ್ನೊಂದಿಗೆ ನಡೆದ ಮೇಲೆ ನಾನು ಹುಡುಕಿ ತೆಗೆದ ಲಿಂಕ್‌ಗಳಿವು)
http://www.golden-heart.net/amma-and-bhagavan.html
&
http://images.google.co.in/images?gbv=2&hl=en&q=Sri+Amma+%26+Bhagavan

ಕೊನೆಯ ಹನಿ : ಇದನ್ನೋದಿ ನನ್ನನ್ನು "ನಾಸ್ತಿಕಳೆಂದು" ತಿಳಿಯದಿರಿ. "ಎಲೆ, ಹಣ್ಣು, ಹೂವು ಇಲ್ಲಾ ಬರಿಯ ನೀರನ್ನೇ ಆಗಲಿ ಯಾವನು ಭಕ್ತಿಯಿಂದ ಅರ್ಪಿಸಿ ಮನದೊಳಗೇ ನನ್ನ ನೆನೆಯುತ್ತಾನೋ ಅಂತಹ ಭಕ್ತನು ನನಗೆ ಪ್ರೀತಿ ಪಾತ್ರನು ಎಂದು" ಹೇಳಿದ ಭಗವಂತನ ಆರಾಧಿಸುವ ಸಂಪೂರ್ಣ "ಆಸ್ತಿಕಳು"ನಾನು. :)

16 ಕಾಮೆಂಟ್‌ಗಳು:

sunaath ಹೇಳಿದರು...

ತೇಜಸ್ವಿನಿ,
ನನ್ನ ತಮ್ಮನೂ ಸಹ ಕೆಲವು ವರ್ಷಗಳ ಹಿಂದೆ ಈ ಭಗವಾನರ ಭಕ್ತನಾಗಿದ್ದ. ಒಂದೆರಡು ಕ್ಯಾಂಪ್ attend ಆಗಿದ್ದ. ಈಗ ಸರಿಯಾಗಿದ್ದಾನೆ!
ಜನ ಮರುಳೊ, ಜಾತ್ರೆ ಮರುಳೊ, ಗಡ್ಡಕೆ ಮರುಳೊ ಶಂಕರಲಿಂಗಾ!

ವಿ.ರಾ.ಹೆ. ಹೇಳಿದರು...

ಅಬ್ಬಾ! ಸಣ್ಣವನಿದ್ದಗಿಂದ ನನಗೂ ಈಥರ ಅನುಭವಗಳು ಬಹಳ ಆಗಿವೆ. ಅಂದ್ರೆ ವೈಬ್ರೇಷನ್ ಆಗೋ ಅನುಭವಗಳಲ್ಲ. ವೈಬ್ರೇಷನ್ ಮಾಡ್ಸೋಕೆ ಪ್ರಯತ್ನ ಪಡುವವರ ಜೊತೆಗಿನ ಅನುಭವಗಳು.

ಏನೋ, ಒಟ್ಟಿನಲ್ಲಿ ಕಲ್ಕಿ ಭಗವಾನನೇ ಕಾಪಾಡ್ಬೇಕು !

ಆಲಾಪಿನಿ ಹೇಳಿದರು...

ವೆರಿ ಇಂಟ್ರೆಸ್ಟಿಂಗ್ !!! ಸ್ವಾರಸ್ಯಕರವಾಗಿ ಬರೆದಿದ್ದೀರಿ.

ಅಂತರ್ವಾಣಿ ಹೇಳಿದರು...

ತೇಜು ಅಕ್ಕ,
ನಿಮಗಾದ ವೈಬ್ರೇಷನ್ನು ನನಗೂ ಓದಿದಾಗ ಆಯ್ತು.. :)

ಇಂತಹವರನ್ನು ಜನರು ಯಾಕೆ ನಂಬುತ್ತಾರೋ..?

ಸುಧೇಶ್ ಶೆಟ್ಟಿ ಹೇಳಿದರು...

ಯಾವುದೇ ಪೂರ್ವಾಗ್ರಹವಿಲ್ಲದೆ, ವಸ್ತುನಿಷ್ಠವಾಗಿ ಬರೆದ ಲೇಖನ ತು೦ಬಾ ಇಷ್ಟವಾಯಿತು. ಕೊನೆಯ ಹನಿ ಎಷ್ಟೊ೦ದು ಸತ್ಯ. ಕಲ್ಕಿ ಭಗವಾನ್ ದ೦ಪತಿಗಳ ಬಗ್ಗೆ ಎನೋ ಗೊತ್ತಿಲ್ಲ. ಮಾಹಿತಿ ನೀಡಿದ್ದಕ್ಕೆ ಧ್ಯಾ೦ಕ್ಸ್... ಅ೦ಧಶ್ರದ್ದೆ.
ಅದಿತಿ so cute..

- ಸುಧೇಶ್

shivu.k ಹೇಳಿದರು...

ಮೇಡಮ್,
ತುಂಬಾ ಕುತೂಹಲಕಾರಿಯಾಗಿದೆ ! ರಸವತ್ತಾಗಿದೆ ! ಆದರೆ ಇಂಥ ಅನುಭವಗಳು ನಮ್ಮಂಥ ಫೋಟೊ ತೆಗೆಯುವವರಿಗೆ ಆಗುವುದಿಲ್ಲವೇನೋ !

Ittigecement ಹೇಳಿದರು...

ತೇಜಸ್ವಿನಿಯವರೆ...

ಹುಚ್ಚರ ಸಂತೆ..ಇದು..!

ಇದು ಎಷ್ಟು ದಿನ ನಡೆಯಬಹುದು..?

ಇದೆ ರೀತಿ ನಿಧಿ ತೋರಿಸುತ್ತೇನೆ ಎಂದು ಮಕ್ಕಳನ್ನು ಬಲಿ ಕೊಟ್ಟ ಘಟನೆ ನೆನಪಿಗೆ ಬರುತ್ತದೆ...

ಇಂಥಹ ಮೌಢ್ಯಗಳಿಂದ ನಾವು ಯಾವಾಗ ಹೊರಗೆ ಬರಬಹುದು..?

ಬಹಳ ಬೇಸರ ಆಗುತ್ತದೆ...ಮುಗ್ಧತೆಯನ್ನು ದುರುಪಯೋಗ ಅನ್ನಬೇಕೊ...? ದಡ್ಡತನ ಅನ್ನ ಬೇಕೊ...?

ಇಂಥವರನ್ನೂ ಒಪ್ಪಿಕೊಳ್ಳುವರೂ ಇದ್ದಾರಲ್ಲ..!

Harisha - ಹರೀಶ ಹೇಳಿದರು...

ಅವರವರ ಭಾವಕ್ಕೆ ಅವರವರ ಭಕುತಿಗೆ... :-)

ಚಿತ್ರಾ ಸಂತೋಷ್ ಹೇಳಿದರು...

ತೇಜಕ್ಕ..ಬರಹ ತುಂಬಾನೇ ಚೆನ್ನಾಗಿದೆ. ನಾನು ಕಲ್ಲಿ ಭಗವಾನ್ ಬಗ್ಗೆ ಕೇಳಿದ್ದೀನಿ..ಇದನ್ನು ಅವರ ಅಮಾಯಕತೆ ಎನ್ನುವುದಕ್ಕಿಂತ ಮುಗ್ಧತೆ ಎನ್ನಬಹುದೇನೋ...!ಗ್ರಾಮೀಣ ಪ್ರದೇಶದಲ್ಲಿ ಮೌಢ್ಯಇದೆ ಅಂತಾರೆ..ಆದರೆ ಇದಕ್ಕೆ ನಗರ-ಗ್ರಾಮೀಣ ಎನ್ನುವ ಮಿತಿಯಿಲ್ಲ ಅಲ್ವಾ?
ತುಂಬುಪ್ರೀತಿ,
ಚಿತ್ರಾ

ಚಂದ್ರಕಾಂತ ಎಸ್ ಹೇಳಿದರು...

ತೇಜಸ್ವಿನಿ

ಲೇಖನ ಓದಿದಾಗಿನಿಂದ ಏನು ಬರೆಯಬೇಕೋ ಗೊತ್ತಾಗುತ್ತಿಲ್ಲ.ಆದರೆ ಇಷ್ಟು ಮಾತ್ರ ಸತ್ಯ. ಈ ವೈಜ್ಞಾನಿಕ ಯುಗದಲ್ಲೂ ಇಂತಹ ಅರ್ಥಹೀನ ಆಚರಣೆಗಳಿಗೆ ಮನಸೋಲುತ್ತಾರಲ್ಲಾ ಎಂದು ಖೇದವಾಯಿತು. ನಾವು ಚಿಕ್ಕವರಿದ್ದಾಗ(ಮೂರು ದಶಕಗಳ ಹಿಂದೆ) ನಾವೆಲ್ಲಾ ಅಣ್ಣ, ಅಕ್ಕ,ತಂಗಿಯರೂ Planchet ಎಂಬ ಆಟ ಆಡುತ್ತಿದ್ದೆವು. ಅಲ್ಲಿ Golden Shoe ಬದಲು ಸ್ಟೀಲ್ ಲೋಟ ಇಟ್ಟಿರುತ್ತಿದ್ದೆವು. ಸುತ್ತಲೂ ಚೌಕಾಕಾರದಲ್ಲಿ ಅಕ್ಷರ ಮತ್ತು ಸಂಖ್ಯೆಗಳಿರುತ್ತಿದ್ದವು.ಎಲ್ಲರೂ ತಮ್ಮ ತೋರು ಬೆರಳನ್ನು ಅದರ ಮೇಲಿಟ್ಟು ಒಂದು ಪ್ರಶ್ನೆಯನ್ನು ಗಟ್ಟಿಯಾಗಿ ಹೇಳಿದಾಗ ಆ ಲೋಟ ಚಲಿಸುತ್ತಿತ್ತು!. ನಮ್ಮಲ್ಲಿ ಯಾರು ತಳ್ಳುತ್ತಿದ್ದರೋ ಗೊತ್ತಿಲ್ಲ.ಒಟ್ಟಿನಲ್ಲಿ ಆ ಬಾಲ್ಯದಲ್ಲಿ ನಮಗೆಲ್ಲಾ ಒಂದು ರೀತಿಯ thrill ಕೊಡುವ ಆಟವಾಗಿತ್ತು. ಅದು ಆಟವೇ ಆಗಿದ್ದರೆ ಎಷ್ಟು ಚಂದ ಅಲ್ಲವೇ ? ಆದರೆ ಈಗ ಅದು ಮನುಷ್ಯರನ್ನು ಯಾವ ದಾರಿಗೆ ಎಳೆಯುತ್ತಿದೆ ನೋಡಿ ?

ತೇಜಸ್ವಿನಿ ಹೆಗಡೆ ಹೇಳಿದರು...

ಎಲ್ಲರಿಗೂ ಧನ್ಯವಾದಗಳು.
------
@ಸುನಾಥ ಕಾಕಾ,

ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ!

@ವಿಕ್ಸ್,

ನನಗೂ ಈ ತರಹದ ಅನುಭವಗಳು ಅಂದರೆ ವೈಬ್ರೇಷನ್ ಮಾಡಿಸಲು ಪ್ರಯತ್ನಿಸಿದ ಅನುಭವಗಳು ಸಾಕಷ್ಟು ಆಗಿವೆ. "ನಿನ್ನ ಕಾಲು ಸರಿ ಮಾಡ್ತೀನಿ.." ಅಂತೆಲ್ಲಾ ಬಂದವರ ತಲೆ ನೆಟ್ಟಗೆ ಮಾಡಿದ್ದೇನೆ ಅಷ್ಟೇ :)

@ಶ್ರೀದೇವಿ,

ಧನ್ಯವಾದಗಳು.

@ಶಂಕರ್,

ಸುಮ್ಮನೇ ಹೇಳಿಲ್ಲ "ಜನ ಮರಳೋ ಜಾತ್ರೆ ಮರುಳೋ..."ಎಂದು. ನಂಬಿಕೆ ಎನ್ನುವುದು ಈಗ ಇಂತಹ ಪವಾಡಗಳಿಗೆ(???!) ಸುಲಭವಾಗಿ ಸಿಗುವಂತಹದ್ದಾಗಿದೆ.

@ಸುಧೇಶ್ ಅವರೆ,

ನಮ್ಮಲ್ಲಿ ಮಾತ್ರ ಇಂತಹ ಅಂಧ ಶ್ರದ್ಧೆಗಳನ್ನು ಅಪಾರ ಸಂಖ್ಯೆಯಲ್ಲಿ ನೋಡಬಹುದು. ಜನರಲ್ಲಿ ಅತಿ ಶೀಘ್ರದಲ್ಲೇ ಎಲ್ಲವನ್ನೂ ಪಡೆಯುವ ಅಡ್ಡದಾರಿಯ ಹುಡುಕಾಟ ತೀವ್ರವಾದಾಗ ಇಂತಹ ಜನರು ಬಹು ಬೇಗ ಹುಟ್ಟಿಕೊಳ್ಳುವರು!

@ಶಿವು ಅವರೆ,

ಗೊತ್ತಿಲ್ಲಾ.. ಆದ್ರೆ ನಿಮ್ಮ ಕೈಗೇನಾದರೂ ಆ ಪಾದುಕೆಗಳು ಸಿಕ್ಕಿದಿದ್ದರೆ "ಛಾಯಾಕನ್ನಡಿ"ಯ ತುಂಬೆಲ್ಲಾ ರಾಜಾಜಿಸುತ್ತಿದ್ದವು :)

@ಪ್ರಕಾಶ್ ಅವರೆ,

ಇದಕುತ್ತರ ಸದ್ಯಕ್ಕಂತೂ ನನ್ನಲ್ಲಿಲ್ಲ. ಇಂತಹ ಮೌಢ್ಯಕ್ಕೆ ಬಲಿಯಾಗುತ್ತಿರುವವರೇ ಉತ್ತರಿಸಬೇಕು!

2ಹರೀಶ್,

ಹೌದು :)

@ಚಿತ್ರಾ,

ಮೂಢನಂಬಿಕೆಗಳು ನಗರ-ಹಳ್ಳಿಗಳೆಂದು ನೋಡದೇ ಎಲ್ಲೆಲ್ಲೂ ಇವೆ. ಇದಕ್ಕೆ ಕಾರಣ ಅವು ಹುಟ್ಟುವುದು ಮನುಷ್ಯನ ಮನಸ್ಸಿನಲ್ಲಿ. ಮನಸಿಗೆ ನಗರವೇನು? ಹಳ್ಳಿಯೇನು?

@ಚಂದ್ರಕಾಂತ ಅವರೆ,

ಇಂತಹ ಅರ್ಥಹೀನ ಆಚರಣೆಗಳಿಗೆ ಲಕ್ಷಗಟ್ಟಲೇ ಸುರಿವ ಇವರು ಬಡಬಗ್ಗರಿಗೆ, ಅನಾಥಶ್ರಮಕ್ಕೆ ಚಿಕ್ಕಾಸನ್ನದರೂ ಕೊಟ್ಟಿದಿದ್ದರೆ ತುಂಬಾ ಪುಣ್ಯ ಬರುತ್ತಿತ್ತಲ್ಲವೇ?

ಶರಶ್ಚಂದ್ರ ಕಲ್ಮನೆ ಹೇಳಿದರು...

ನಿನ್ನ ಲೇಖನ ನೋಡಿ ನಂಗೆ ಎಂತ ಬರ್ಯಕ್ಕು ಅಂತ ಗೊತಗ್ತಾ ಇಲ್ಲೇ, ಈ ಕಾಲ್ದಾಗು ಇಂತವರು ಇದ್ವ ಅಂತ ಆಶ್ಚರ್ಯ ಆಗ್ತ ಇದ್ದು. ನೀ ಹೇಳ್ದಂಗೆ "ಅವರವರ ಭಾವಕ್ಕೆ" ಅಂತ ಹೇಳೋದೇ ಒಳ್ಳೇದು.

ಅನಾಮಧೇಯ ಹೇಳಿದರು...

ಕರ್ಮಕಾಂಡ!

ಹರೀಶ ಮಾಂಬಾಡಿ ಹೇಳಿದರು...

ನಾನು ಮದುವೆಯಾದ ಹೊಸತರಲ್ಲಿ ಒಬ್ಬರು ನಮ್ಮನ್ನು ಔತಣಕ್ಕೆ ಆಹ್ವಾನಿಸಿ, ಅವರ ಮನೆಯ ದೇವರ ಕೋಣೆಯಲ್ಲಿದ್ದ ಕಲ್ಕಿ ಫೊಟೋಕ್ಕೆ ನಮಸ್ಕರಿಸಲು ಹೇಳಿದ್ದರು. ನಿಮ್ಮ ಬರೆಹ ನೋಡಿ ನೆನಪಾಯಿತು

Praveen ಹೇಳಿದರು...

Jana marulo jaatre marulo...namma relative obbaru heege kalki darshana adu idu antha oorella saala madi kadege ooru bitte odi hodaru...bere oorinalli yara thalege sunna balitha idaro,,,kalki bagge...kalki anthe, avana paaduke anthe...adakke 20 savira anthe...darshana 1 laksha anthe...abbabba...tirupathi venkataramana shrimantha devaru antha pratheethi...iva yaro kalki, sooryange torch hakakke hortidane...(illi soorya andare tirupathi sreenivasa)

ತೇಜಸ್ವಿನಿ ಹೆಗಡೆ ಹೇಳಿದರು...

ಧನ್ಯವಾದಗಳು ಪ್ರವೀಣ್ ಅವರೆ. ನೀವು ಹೇಳಿದ್ದು ಸತ್ಯ. ಜನ ಮರಳೋ ಜಾತ್ರೆ ಮರಳೋ.. !!!