ವಿದಾಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿದಾಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಫೆಬ್ರವರಿ 21, 2011

ಆರದಿರಲಿ ಬೆಳಕು...

ಅವಳು ತನ್ನೊಳಗೇ ಸುತ್ತು ಹಾಕಿ ಗಿರಕಿ ಹೊಡೆದು
ಹಳೆಯ ಹೊಸ ಭಾವಗಳ ಮಸೆದು ಹೊಸೆದು
ಅಕ್ಕರೆಯ ಅಕ್ಷರಗಳೆಣ್ಣೆಯಿಂದ ದೀಪಹಚ್ಚುತ್ತಿದ್ದ ಹುಡುಗಿ


ಬೆಳಗುವ ದೀಪದಿಂದೆದ್ದು ಹೊಳೆವ ಅಕ್ಷರಗಳ ಕಿಡಿಗಳ
ಕಣ್ಗಳು ಕಂಡು, ಈ ಮನಸೊಳಗೇ ತುಂಬಿ ಕೊಂಡು ಬಂದು
ನನ್ನ ದೀಪಾಕ್ಷರಗಳ ಬೆಳಗಲು ಬಂದವಳು ನಾನು


ಬತ್ತಿ ಹೊಸೆಯಲು ಬರುತ್ತಿದ್ದರೂ, ಬತ್ತಿ ಹೋಗದ ಎಣ್ಣೆಯ ಹಿಡಿದಿಡುವ
ಆರಿ ಹೋಗುವ ಅಕ್ಷರಗಳನೆಲ್ಲಾ ಒಗ್ಗೂಡಿಸಿ ಸದಾ ಬೆಳಗುವ
ಬೆರಗಿನ ಬೆಳಕಿನ ಪರಿಯ ಕಾಣಿಸಿದಳು, ಒಟ್ಟಾಗಿ ಬೆಳಗ ಕರೆದಳು


ಅದೆಲ್ಲಿತ್ತೋ ನನ್ನ ದೀಪದೊಳು ಹುಮ್ಮಸ್ಸು, ಎಲ್ಲಿಲ್ಲದ ತೇಜಸ್ಸು!
ಬೆಳಗಿತು, ಹೊಳೆಯಿತು, ಹಾಕಿದಷ್ಟೂ ಅಕ್ಷರದೆಣ್ಣೆಯ ಹೊದ್ದು, ಹೊಯ್ದು
ಬತ್ತಿ ಸದಾ ನೆನೆಯುತ್ತಲೇ ಇತ್ತು, ಕಲಿಸಿದವಳ ನೆನೆಯುತ್ತಲೂ ಇತ್ತು...


ಹೊರಗಿನ ದೀಪ ಜಗವ ಬೆಳಗಿದರೆ, ಒಳಗಿನದೆಲ್ಲಾ ಬರೀ ಸುಡುವುದಂತೆ
ಸುಟ್ಟು ಕರಕಲಾದ ಒಡಲಿಂದೆದ್ದ ಹೊಗೆಯ ಕೆಟ್ಟ ವಾಸನೆ ನನ್ನಡರಿಗೂ ತಾಗಿತ್ತು
ನನ್ನೊಳಗಿನ ಅಕ್ಷರದೆಣ್ಣೆಗೆ ಮೊದಲಬಾರಿ ತ(ಕ)ಣ್ಣೀರಿನ ಹನಿಯೊಂದುದುರಿತ್ತು..


ಚಟ ಪಟ, ಚರ ಚರ, ಚುಂಯ್ ಚುಂಯ್ ಸದ್ದು ಮೊದಲಾಗಿ ದೀಪ ಹೆದರಿತ್ತು
ನನ್ನ ಅಂಗೈಯೊಳಗಿನ ಗೂಡೊಳಗೆ ಭದ್ರವಾಗಿದ್ದು ಉರಿಯುತ್ತಿದ್ದರೂ,
ಎಣ್ಣೆಯೊಳಗೆ ಮಾತ್ರ ಒಂದೊಂದೇ ಹನಿ ನೀರುಗಳ ಯುದ್ಧ ಸಾಗೇ ಇತ್ತು


ಬೇಡ ಸಾಕಿನ್ನು, ತಾಳಲಾರೆ ಈ ಬಿಸಿ ಸುಡುತ್ತಿದೆ ಅಂಗೈ ಗೂಡ...
ನನ್ನೊಳಗಿನ ಅಕ್ಕರೆಗಳಿಗೆ ಹಾಕಬೇಕಿದೆ ಪುಟ್ಟದೊಂದು ಬೇಲಿಯ
ಭಾವಗಳ ಬತ್ತಿ ಹೊಸೆವ ಪರಿಯ ಕಲಿಕೆಗೆ ತೆತ್ತಿರುವೆ ಸಾಕಷ್ಟು ಬೆಲೆಯ


- ತೇಜಸ್ವಿನಿ.

ಬುಧವಾರ, ಸೆಪ್ಟೆಂಬರ್ 1, 2010

ಶಕ್ತಿಯ ಕೊಡು ಹೇ ಪ್ರಭು...

ನಿನಗೆ ಉತ್ತಮರೆಂದರೆ ಬಲು ಇಷ್ಟವಂತೆ
ನಾಲ್ಕು ಮಂದಿಗೆ ಅನ್ನ ಹಾಕುವವರು,
ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವವರು,
ಸದಾ ಹಸನ್ಮುಖಿಗಳು, ಮೃದು ಮಾತುಗಾರರು,
ಅನ್ಯಾಯ ಬಗೆಯದವರು, ಅಕ್ರಮ ಸಹಿಸದವರು,
ನಿನ್ನ ನಾಮವ ಜಪಿಸುತ, ನಿನ್ನ ನಂಬಿದವರು,
ಇಂಥವರೇ ನಿನಗೆ ಬಲು ಇಷ್ಟವಂತೆ....

ಆದರೆ...

ನಿನಗಿಂತಲೂ ಪ್ರೀತಿಸುವ, ಅವರ ಸ್ವಂತದವರು
ನಿನಗೇಕೆ ಕಾಣಲಿಲ್ಲವೋ? ನೀ ಸ್ವಾರ್ಥಿಯೋ?!
ಕರುಣಾಳು ಬಾ ಬೆಳಕೆ... ಎಂದು
ಸದಾ ನಿನ್ನ ಕರೆಯಬೇಕೆಂದಿದ್ದರೆ ಹೇಳು..
ನಿನ್ನಿಷ್ಟದವರ ಬಾಯಿಂದಲೇ
ಒಂದೇನು! ನೂರು ಬಾರಿ ಹೇಳಿಸಿಯೇನು....

ಆದರೆ....

ದಯಮಾಡಿ ಕೊಟ್ಟುಬಿಡು ಮತ್ತೆ
ಅವರ ಸ್ವತ್ತ ಅವರಿಗೆ ನೀ ಹೇ ದೇವ
ನಿನ್ನಿಷ್ಟದ ಆತ್ಮ ಅವರ ಅಂತರಾತ್ಮವೂ ಹೌದು
ಕಸಿದುಕೊಂಡು ನೀ ಏನು ಪಡಿದೀಯೇ?
ಕೊಟ್ಟು ಬಿಡು ನಿಜ ಧೈರ್ಯ-ಸ್ಥೈರ್ಯವ
ಬಾಳಬೇಕಿದೆ ಉಳಿದು ಹೋದವರು,
ನಿನ್ನ ಮೇಲಿರುವ ನಂಬಿಕೆಗಾಗಿ....

[ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ತೀರಿ ಹೋದ ನನ್ನ ಆತ್ಮೀಯ, ಅತ್ಯಂತ ಆಪ್ತ ಹಾಗೂ ಪ್ರೀತಿಯ ಚಿಕ್ಕಪ್ಪ ಜಿ.ಎನ್.ಭಟ್(ನನ್ನ ತಂದೆಯವರ ಕಿರಿಯ ತಮ್ಮ) ಅವರಿಗಾಗಿ ಅರ್ಪಿತ ಈ ಕವನ...:( ಸಾವು ಅನಿವಾರ್ಯ, ಆದರೆ ದುರ್ಮರಣ ಅನ್ಯಾಯ...ಅದರ ನೋವೂ ಅಷ್ಟೇ ತೀವ್ರ ಹಾಗೂ ನಿರಂತರ.....:( ]

-ತೇಜಸ್ವಿನಿ ಹೆಗಡೆ.

ಶುಕ್ರವಾರ, ನವೆಂಬರ್ 27, 2009

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ...

ಬಾನಿನೊಳು ಚಂದ್ರ ಇನ್ನೇನು ಹುಟ್ಟೋ ಹೊತ್ತು....ಹುಟ್ಟಿನೊಂದಿಗೆ ಸಾವು ಇರಲೇ ಬೇಕು ತಾನೇ? ಹಾಗಾಗಿಯೇ ರವಿ, ದೀಪವು ಆರುವ ಮುನ್ನ ಪ್ರಖರವಾಗಿ ಬೆಳಗುವಂತೆ, ಕೆಂಬಣ್ಣವ ಮೆತ್ತಿಕೊಂಡು ಕಡಲೊಳು ಅಸ್ತವಾಗಲು ಹೊರಟಿದ್ದಾನೆ. ಹೋಗುವ ಮುನ್ನ ಕೇಸರಿಯಂಚಿನ ಹಳದಿ ಬಣ್ಣದ ಸೀರೆಯ ತುಣುಕೊಂದನ್ನು ಬಾನಿಗೆ ಅರೆ ಬರೆಯಾಗಿ ತೊಡಿಸಿ, ತಿಳಿ ನೀಲಿ ಮೈಯ ಅಂದವನ್ನು ಹೆಚ್ಚಿಸಿದ್ದಾನೆ. ಆದರೆ...ನಿನ್ನ ಬರುವಿನ ಸುಳಿವೆಲ್ಲೂ ಕಾಣದಂತಿದೆ ನನಗೆ! ನನ್ನೆದೆಯೊಳಗಿನ ತುಮುಲಗಳ ಪರಿವಿಲ್ಲದೇ ಹಾಯಾಗಿದ್ದಾಳೆ ಪ್ರಕೃತಿ. ನನ್ನೊಳಗೆ ಬೆರೆತಿಹ ನಿನ್ನರಿವನ್ನೇ ಮರೆಸುವಂತೆ ಹಾಯಾಗಿ ಬೀಸುತಿದೆ ತಂಗಾಳಿ. ನನ್ನಣಕಿಸಿ ಕಿಲಕಿಲನೆ ನಗುತಿದೆ ಸಾಗರಿ. ಮುಸ್ಸಂಜೆ ಸುಡುತಿದೆ ಈ ಮನವ, ಮೋಹಕ ನಗುವ ಬೀರಿ....."ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ‌ ".
ಕಣ್ಣನೆ ದಣಿಸುವ ಈ ಪಡುವಣ ಬಾನ್ಬಣ್ಣಗಳು
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ‌
ಚಿನ್ನ ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ....
ಮತ್ತದೇ ಬೇಸರ, ಅದೆ ಸಂಜೆ ಅದೆ ಏಕಾಂತ‌
ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ..

ಕಣ್ಣೆತ್ತಿ ನೋಡಿದರೆ, ‘ಹುಣ್ಣಿಮೆ ಆಗಸದ ಬಣ್ಣದ ಚುಕ್ಕಿಯು.. ಮೆಲ್ಲನೆ ತಾನಾಗೆ ಹೆಚ್ಚಿದೆ.’ ಕಾಲ ಕೆಳಗೋ, ಹೆಜ್ಜೆ ಮೂಡಿಸುವ ಮರಳ ಕಣಗಳು...ದಡವ ಬಡಿದು ಹಿಂತಿರುಗುತ ಲಾಸ್ಯವಾಡುತಿರುವ ತೆರೆಗಳಾಟ, ನೆನಪು-ಕನಸುಗಳ ಜೊತೆ ಉಯ್ಯಾಲೆಯಾಡುತಿರುವ ಈ ಮನಕೆ ಸಾಥ್ ನೀಡುವಂತಿವೆ....‘ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲಾ....’ ಎಂಬಂತೆ ನನ್ನ ಮೈ ಸೋಕಿ ಮರೆಯಾಗುತಿವೆ. ದೂರದಲ್ಲೆಲ್ಲೋ ಪುಟ್ಟ ದೋಣಿಯೊಳಗಿಂದ ಇಣುಕುವ ಕಿರು ದೀಪ, ಒಂಟಿ ದ್ವೀಪದಂತೆ ಕುಳಿರುವ ನನ್ನ ಕಂಡು ಮಬ್ಬಾಗುತಿದೆ....ಅಲೆಯೊಡನೆ ಅಲೆಯಲೆಯಾಗಿ ಬರುತಿರುವ ನಾವಿಕನ ಹಾಡು ನಿನ್ನ ನೆನಪಿನ ಕಂಪನ್ನೂ ಅಲೆಯಾಗಿ ಬಡಿಯುತಿದೆ ನನ್ನ ಮನದಡಕೆ.

"ತುಂಬಾ ಹಿತವೆನಿಸುತಿದೆ ಈ ಕಡಲ ತಡಿ, ಈ ತಂಗಾಳಿ, ಈ ತಿಳಿ ಬಾನು, ಮೋಡದೊಂದಿಗೆ ಸರವಾಡುತ ನಮ್ಮ ನೋಡಿ ನಗುವ ಶಶಿ..ಇವೆಲ್ಲವುದರ ಜೊತೆಗೆ ನಿನ್ನ ಜೊತೆಯೊಂದೇ ಭಿನ್ನವಾದ ಅನುಭೂತಿ ನೀಡುತಿದೆ...." ಎಂದು ಅಂದು ನೀ ಹೇಳಿದ್ದ ಸಾಲುಗಳು ಈ ಮನವ ಕೊರೆಕೊರೆದು ಘಾಸಿ ಮಾಡುತಿವೆ. ಕಣ್ಣೀರ ಹನಿಗಳೆಲ್ಲಾ ಮರಳನ್ನು ಸೇರಿ ಹುದುಗಿ ಇಂಗಿಹೋಗುತಿವೆ....ಉಪ್ಪುನೀರ ಜೊತೆ ಉಪ್ಪು ನೀರು ಸೇರಿ ಕಣ್ಣೀರೇ ಕಡಲಾಗುತಿದೆ. ಒಣಗಿದೆನ್ನೆದೆಗೆ ಮಳೆಯ ಸುರಿದು, ಇನ್ನೇನು ಹಸಿರು ಉಸಿರಾಡಬೇಕೆಂದಿರುವಾಗಲೇ ಮಾಯವಾಗಿರುವ ನಿನ್ನ ‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು..."

ಎಂದು ಕಳೆದು ಹೋದೆಯೋ ನಾ ಕಾಣೆ... ಇಂದೂ ಹುಡುಕುತಿರುವೆ ನಾ ನಿನ್ನ, ಆಗಸದ ತುಂಬೆಲ್ಲಾ ಬಿಳಿ ವಜ್ರಗಳಂತೆ ಮಿನುಗುವ ತಾರೆಗಳಲ್ಲಿ...ರಾತ್ರಿ ರಾಣಿಯ ಪರಿಮಳದಲ್ಲಿ...ನಾವಿಕನ ಹಾಡಿನಲ್ಲಿ....ಬೆರಳುಗಳ ಸಂದಿಯಿಂದ ಸದ್ದಿಲ್ಲದೇ ಸೋರಿಹೋಗುತಿರುವ ಮರಳ ಕಣ ಕಣದಲ್ಲಿ, ನಿನಗಾಗಿ ಉದುರುತಿರುವ ಕಣ್ಣೀರ ಹನಿಗಳಲ್ಲಿ... ಹುಡುಕಿ ಹುಡುಕಿ ಸೋತು ಕುಸಿದ ನನ್ನ ಕಂಡು ಹುಣ್ಣಿಮೆಯೂ ಕೂಡ ಶೋಕಗೊಂಡು, ಮೋಡದ ತೆರೆಯೊಂದರಿಂದ ತನ್ನ ಕಣ್ಣೀರ ಒರೆಸಿಕೊಳುತಿದೆ.
ಆದರೂ ಅದೇಕೋ ಏನೋ...

ಈ ಕಪ್ಪು-ಬಿಳಿ ತೆರೆಗಳ ಏರಿಳಿತಗಳಂತೇ ಆಶಾಜ್ಯೋತಿಯೊಂದು ಆಗೀಗ ಬೆಳಗುತಿದೆ ಮಾನಸವ. ನಿನ್ನಾಗಮನದ ಕಿರು ಸುಳಿವಿಗಾಗಿ ಜಾತಕ ಪಕ್ಷಿಯಂತೆ ನಾ ಮರುಳಾಗಿರುವೆ. ಮರಳೊಳು ನಿನ್ನ ಹೆಸರನೇ ಬರೆದು, ಅದಕೊಂದು ವೃತ್ತವ ಎಳೆದು ತೆರೆಗಳ ತಡೆಹಿಡಿದು ನಿಲ್ಲಿಸಿರುವೆ ಅಳಿಸದಂತೇ....ಅಳಿಸಿದರೂ ನನಗೇನು? ಈ ಮನದ ತಾವಿನಲಿ ಬೆಚ್ಚಗೆ ಕುಳಿತಿದೆಯಲ್ಲಾ ನಿನ್ನದೇ ನೆನಪು.. ಪ್ರೀತಿಗೆ ಮರೆವಿನ ಹಂಗಿಲ್ಲ ತಾನೇ? ಯಾವ ಮರೆವಿನ ತೆರೆಯೂ ಅಳಿಸದು ಆ ನಿನ್ನ ಪ್ರೀತಿಯ ನೆನಪ. ‘ನಿನ್ನೊಲುಮೆಯಿಂದಲೇ ಈ ಬಾಳು ಬೆಳಕಾಗಿರಲು’, ನಿನ್ನಾಗಮನದ ನಿರೀಕ್ಷೆಯ ನೆಪವೊಂದೇ ಸಾಕು, ಹಾಗೇ ಸುಮ್ಮನಿದ್ದು ಬಿಡುವೆ ಇಲ್ಲೇ ಹೀಗೆ... ಜೊತೆಗಿರಲು ಈ ತಂಗಾಳಿ, ಕಡಲ ಸಂಗೀತ, ಮರಳ ಹಾಸಿಗೆ, ತಿಳಿಬಾನಿಂದಿಣುಕುವ ಚಂದಿರ. ನವಿರಾದ ನಿನ್ನೊಲವಿನ ಸವಿ ನೆನಪೇ ಸಾಕೆನಗೆ ಕಿರು ನಗುವೊಂದ ಬೀರುತ್ತಾ ನಗುವಿನಲೆಗಳ ಹಂಚಲು.... ಆದರೂ ಸಣ್ಣ ಅಳುಕೊಂದು ಎದೆಯ ಮೂಲೆಯಿಂದೆದ್ದು ಬರುವುದು ಛಳ್ಳೆನ್ನುವ ನೋವಿನಂತೆ... ನರಳುವ ಮನದೊಂದಿಗೆ, ನಗುಮೊಗವ ಹೊತ್ತು, ಮೌನವಾಗಿ ಪ್ರಾರ್ಥಿಸುತಿರುವೆ ಅನುದಿನ ನಾ ಆ ದೇವನ-

ದೀಪವು ನಿನ್ನದೇ ಗಾಳಿಯೂ ನಿನ್ನದೇ
ಆರದಿರಲಿ ಬೆಳಕು
ಕಡಲೂ ನಿನ್ನದೇ ಹಡಗೂ ನಿನ್ನದೇ
ಮುಳುಗದಿರಲಿ ಬದುಕು....

ನಿನ್ನೊಲವಿನ,


*****



(ಹಿಂಸೆ ಎಂದೂ ಸುಖ ನೆಮ್ಮದಿಯ ತರದು. ಕೆಲವು ಪಾತಕಿಗಳ ಕ್ರೌರ್ಯದಿಂದಾಗಿ ಅದೆಷ್ಟೋ ಅಮಾಯಕರು ಬಲಿಯಾಗಿದ್ದಾರೆ..ಆಗುತ್ತಲೂ ಇದ್ದಾರೆ. ಆದರೆ ಹಾಗೆ ಚಿರ ನಿದ್ರೆಯಲ್ಲಿ ಹೋದವರು, ದೂರ ದಿಗಂತದಲ್ಲೆಲ್ಲೋ ಕಳೆದು ಚುಕ್ಕಿಯಾದವರು, ತಮ್ಮ ಹಿಂದೆ ನೂರಾರು ಸ್ನೇಹಿತರನ್ನು, ಆತ್ಮೀಯರನ್ನು, ಪ್ರೀತಿಪಾತ್ರರನ್ನು ಶೋಕಸಾಗರದಲ್ಲೇ ಮುಳುಗಿಸಿ ಬಿಡುತ್ತಾರೆ. ಅಕಾಲದಲ್ಲಿ ಅಗಲಿತ ಬಾಳಸಂಗಾತಿಯ ನೆನಪಲೇ ಕೊರಗುವ, ಕಾರಣವಿಲ್ಲದೇ ದೂರ ಮರೆಯಾಗಿ..ಬದುಕಿರುವನೋ ಇಲ್ಲವೋ ಎಂಬ ಸಂದೇಹದಲ್ಲೇ ತಪಿಸುವ ವಿರಹಿಣಿಯರ ಮಾನಸಿಕ ತುಮುಲಗಳನ್ನು ಕಲ್ಪಿಸಲೂ ಅಸಾಧ್ಯ. ಎದೆಯೊಳಗೆ ನೋವುಗಳ ಮೂಟೆಯನ್ನೇ ಹೊತ್ತು, ಮೊಗದಲ್ಲಿ ಮಾತ್ರ ನಗುವ ಲೇಪನ ಹಚ್ಚಿ ಬದುಕ ಜೀವಿಸುತಿರುವ ಅಂತಹ ಸಾವಿರಾರು ತಪಸ್ವಿನಿಯರಿಗಾಗಿ ನನ್ನೀ ಬರಹವನ್ನು ಅರ್ಪಿಸುತ್ತಿದ್ದೇನೆ. )
- ತೇಜಸ್ವಿನಿ

ಗುರುವಾರ, ಮಾರ್ಚ್ 26, 2009

ಯುಗಾದಿಯ ಸಂಭ್ರಮದ ಜೊತೆಗೆ ಮಾನಸವು ಪಡೆಯುತಿದೆ ಅಲ್ಪವಿರಾಮ,

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.



ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.




ನಿಮ್ಮೆಲ್ಲರ ಬಾಳಲ್ಲಿ ಹೊಸ ವರುಷವು ಹೊಸ ಹರುಷವ ಹೊಸತು ಹೊಸತು ತರಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತಿದೆ ನನ್ನ ಮಾನಸ.




ಹಾಗೆಯೇ ಮಾನಸವೂ ಮರೆಯಾಗುತ್ತಿದೆ ಅಲ್ಪ ಕಾಲಕ್ಕೆ. ಬಹು ಬೇಗ ಹಿಂತಿರುಗುವ ಆಶಾವಾದದೊಂದಿಗೆ ಪಡೆಯಹೊರಟಿದೆ ಅಲ್ಪವಿರಾಮ,

ಅಲ್ಲಿಯವರೆಗೆ ಸದಾ ಹಸಿರಾಗಿರುವಿರಿ ನೀವೆಲ್ಲಾ ನನ್ನ ಮಾನಸದಲ್ಲಿ ಸವಿ ನೆನಪಾಗಿ.

ಶುಭಾಶಯಗಳೊಂದಿಗೆ,
ತೇಜಸ್ವಿನಿ ಹೆಗಡೆ.