ಭಾನುವಾರ, ಡಿಸೆಂಬರ್ 26, 2010

ಆಹತ

Courtesy - http://ecx.images-amazon.com

ಕಡುಗಪ್ಪು ಕತ್ತಲೆಯ ಸ್ನೇಹ ಮಾಡ ಹೋದೆ,
ಕಿರು ಬೆಳಕಿನ ಕೋಲೂ ಬೆನ್ನು ಮಾಡಿತು
ಕಟ್ಟ ಕಡೆಯ ನಿನ್ನ ನೆನಪನೂ ಮರೆಯ ಹೊರಟೆ,
ಕಣ್ಣೀರ ಹನಿಗಳು ಕಣ್‌ರೆಪ್ಪೆಗಳ ತೊರೆದವು

ಇಳೆಯ ಬಂಜೆತನ ಕಳೆಯಲು
ಆಶಾಢನು ಕಿರು ಹನಿಯುತ ಬಂದರೆ,
ನನ್ನೊಳಗಿನ ಒಣಗಿದ ಕನಸುಗಳೆಲ್ಲಾ
ಹರಿದು, ಮನದ ನೆಲವೀಗ ಭಣ ಭಣ

ನನ್ನದಾದ ಒಂದು ಕಿರು ಬೆಳಕಿಗಾಗಿ
ಒಂದೊಂದು ಹೆಜ್ಜೆಯನೂ ಅಡವಿಡುತ್ತಾ ಬಂದೆ
ನೂರು ನೆನಪುಗಳ ಭಾರದಿಂದ ಅಡಿಯಿಡಲಾಗದೇ
ಒಂದಿರುಳಿನಲೇ ನೂರು ವರುಷಗಳ ಕಳೆದೆ

ನೂರು ಮಾತುಗಳು ಹೇಳಲಾಗದ್ದು
ಒಂದು ನೋಟ ಬಯಲಾಗಿಸಬಲ್ಲದು..
ಕಣ್ಣೋಟವ ಓದ ಹೊರಟರೆ ನಾನು
ಶಾಶ್ವತ ಕುರುಡನಾಗಿ ಹೋದೆಯಲ್ಲಾ ನೀನು!

ಒಂದೊಂದು ಕ್ಷಣಗಳನೂ ಸೆರೆ ಹಿಡಿದು
ಅದರೊಳಗೆ ಬಂಧಿಯಾಗ ಹೊರಟೆ,
ಬದುಕು ನೂರು ಮೈಲಿ ವೇಗದಲಿ ಸಾಗಲು,
ಉಸಿರಿಗಾಗಿ ಕಾದ ಅಹಲ್ಯೆಯಾಗಿ ಹೋದೆ!

-ತೇಜಸ್ವಿನಿ ಹೆಗಡೆ

ಗುರುವಾರ, ಡಿಸೆಂಬರ್ 23, 2010

ಯಾರಿವರು?......ಆತ್ಮರಹಿತರು?!


ಇವರಿಗೆ ಸ್ವಂತ ಉಸಿರಾಟದ ಶಕ್ತಿಯಿಲ್ಲ
ಪಾಪ, ಸ್ವತಃ ದುಡಿಮೆಗೆ ಕಸುವೂ ಇಲ್ಲ
ಅಲ್ಲಿ ಇಲ್ಲಿ ಬಿದ್ದಿರುವುದನೆಲ್ಲಾ ಹೊತ್ತು
ಅಧರ್ಮವ ಕಟ್ಟಿ, ಧರ್ಮವ ಸುಟ್ಟು
ಬರೀ ಕೊಳಕು ಕಶ್ಮಲಗಳನ್ನಷ್ಟೇ ಗುಡ್ಡೆ ಹಾಕಿ
ಅವುಗಳೊಳಗೇ ಮುಳುಗಿ ಸಂಭ್ರಮಿಸುವ
ಬಳಕುವ ಆಕಶೇರುಕಗಳಂತೇ
ಬದುಕುವ ಇವರಿಗೆ ಅಸ್ತಿತ್ವವೇ ಇಲ್ಲ!

ತನ್ನ ಹುಟ್ಟಿಗೆ ಅತ್ತು, ಪರರ ಹುಟ್ಟಿಗೆ ನಕ್ಕು
ಇಲ್ಲೇ ಹುಟ್ಟಿ, ಇಲ್ಲೇ ಮಣ್ಣಾಗೋ ನೆಲವ ಮಾರಿ
ಹಬ್ಬಿಕೊಂಡ ಬದುಕನೇ ಚಿಂದಿಯಾಗಿಸಿಕೊಂಡು
ಸಭ್ಯತೆಯ ಮುಖವಾಡದೊಳಗೆ ಅವಿತು
ಗಹಿ ಗಹಿಸಿ ನಗುವ ಮನೋವಿಕಲರು?
ಬುಡವಿರದ ಗೆದ್ದಲು ಮರವ ನೆಟ್ಟು,
ಓಲಾಡುತ್ತಾ ಆಗಸಕೇ ಕೈಚಾಚುವ ಇವರು
ಸ್ವಂತ ನೆಲೆಯಿಲ್ಲದ ಪರದೇಶಿಗಳು!

ಕುರುಡು ಕಾಂಚಣದ ಹಿಂದೆ ಬಿದ್ದು
ಮರುಳು ಕೀರ್ತಿಯನೇ ಹೊದ್ದು
ಜೊಳ್ಳು ಹೆಕ್ಕಿ, ಎಲ್ಲಾ ಕಾಳ ತೂರಿ,
ತನ್ನ ಪ್ರತಿಬಿಂಬವನೇ ಮೋಹಿಸುತ
ತನ್ನ ಹೆಸರಿನ ರಾಗವನೇ ಹಾಡುತ
ಬೇತಾಳ ನೃತ್ಯವನು ಮಾಡುತಿಹ
ಈ ಬುದ್ಧಿಹೀನರ ಸೋಗಿನಾಟಕೆ
ಭೂತ, ಪಿಶಾಚಿಗಳೂ ಬೆದರಿಹವು!

-  ತೇಜಸ್ವಿನಿ ಹೆಗಡೆ

ಶನಿವಾರ, ಡಿಸೆಂಬರ್ 18, 2010

ಹಿಡಿ ಹಿಡಿದಷ್ಟು ಸೋರುತಿದೆ ಕಾಲ...

ಬೇಕಿಲ್ಲ-
ಕಾಣದ ಸಂಕೋಲೆ-
ಗಳ ಹಿಡಿದು ಕಣ್ಮುಚ್ಚಿ ನಡೆ
ನಡೆದು ನಡುವೆ ಹಿಂತಿರುಗಿ
ನೋಡಿದರೂ ಏನೊಂದೂ ಕಾಣದ
ಆ ನನ್ನ ಭೂತಗಳು

ಸಾಕಾಗಿದೆ-
ಮುಂದಿರುವ ನಿನ್ನ-
ನಿನ್ನೆಗಳ ನನ್ನದಾಗಿಸಿಕೊಂಡು
ಹುಸಿನಕ್ಕು ನಗಿಸುತ ಸವೆದ ಆ
ದಾರಿಗಳೇ ಮತ್ತೆ ತಿರು ತಿರುಗಿ
ನನ್ನ ಭವಿತವ್ಯದಲೂ ಕಾಡುವುದು

ಹಿಡಿಯಬೇಕಾಗಿದೆ-
ಗುಟುಕು ಉಸಿರ ಹಿಡಿದಿರುವ-
ನಿನ್ನೊಳಗಿನ ನಾನು, ನನ್ನ
ಒಳಗಿನ ನೀನು, ಕುಟುಕು
ಜೀವವ ಹಿಡಿದು ಜೋತಾಡುತಿರುವ
ನಮ್ಮ ವರ್ತಮಾನವನು...

-ತೇಜಸ್ವಿನಿ ಹೆಗಡೆ

ಗುರುವಾರ, ಡಿಸೆಂಬರ್ 16, 2010

"ಸಂಸ್ಕೃತ ಸಾಹಿತ್ಯ ಹಾಗೂ ಬಾಹ್ಮಣ ಪರಿಕಲ್ಪನೆ ಮತ್ತು ಆಧುನಿಕ ಚಿಂತಕರು"

ಮಂಗಳೂರಿನ ಕೆನರಾ ಪದವಿ(ಡಿಗ್ರಿ) ಕಾಲೇಜಿನಲ್ಲಿ ಇದೇ ತಿಂಗಳ ೧೯ ಹಾಗೂ ೨೦ರಂದು "ಅಂತರ್ ವಿಷಯ ಸಂಸ್ಕೃತಾಧ್ಯಯನ ಮತ್ತು ಸಂಶೋಧನ ಕೇಂದ್ರದಡಿಯಲ್ಲಿ"(Centre for Inter disciplinary Studies and Research in Sanskrit (CISRS)) ಹಾಗೂ ಸಂಸ್ಕೃತ ಶೋಧ ಸಂಸ್ಥಾನ, ಶಿರಸಿ ಇದರ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ವಿಚಾರಗೋಷ್ಠಿಯು ನಡೆಯಲಿದೆ. 

Invitation
ಕೆನರಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಸಂಸ್ಥಾಪಕರಾಗಿದ್ದ ದಿವಂಗತ ಶ್ರೀ ಅಮ್ಮೆಂಬಳ ಸುಬ್ಬ ರಾವ್ ಪೈ ಅವರ ಸ್ಮರಣಾರ್ಥವಾಗಿ ಕಳೆದ ಹದಿನೈದು ವರುಷಗಳಿಂದಲೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಚಾರಗೋಷ್ಠಿಗಳನ್ನು CISRS ನಡೆಸುತ್ತಾ ಬಂದಿದೆ. ಕೆನರಾ ಪದವಿ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ  ಮುಖ್ಯಸ್ಥರೂ ಆಗಿರುವ ಪ್ರೊಫೆಸರ್ ಡಾ.ಜಿ.ಎನ್.ಭಟ್ಟರು ಈ ಸಂಶೋಧನಾ ಕೇಂದ್ರದ ನಿರ್ದೇಶಕರು.

ಪ್ರತಿವರುಷ ಬೇರೆ ಬೇರೆ ಕಾಲೇಜುಗಳ, ವಿಶ್ವವಿದ್ಯಾನಿಲಯಗಳ, ನಿವೃತ್ತ/ವೃತ್ತಿ ನಿರತ ಹಿರಿಹ ಕಿರಿಯ ವಿದ್ವಾಂಸರು, ಆಯಾ ಕ್ಷೇತ್ರದಲ್ಲಿ ಪರಿಣಿತರಾದವರು ಸೂಚಿಸಿದ ವಿಷಯದ ಪ್ರತಿ ತಮ್ಮ ತಮ್ಮ ನಿಲುವನ್ನು ಮಂಡಿಸುತ್ತಾರೆ. ಅವರೆಲ್ಲರ ಲೇಖನ ಮಾಲೆಕೆಗಳನ್ನು ಸಂಪಾದಿಸಿ ಅದಕ್ಕೊಂದು ಸುಂದರ ಪುಸ್ತಕ ರೂಪವನ್ನು ಕೊಟ್ಟು ಮರುವರುಷದ ವಿಚಾರಗೋಷ್ಠಿಯಂದು ಬಿಡುಗಡೆ ಮಾಡಲಾಗುತ್ತದೆ. ಹೀಗೆ ಒಟ್ಟೂ ಹದಿನೈದು ಪುಸ್ತಕಗಳನ್ನು ಈವರೆಗೆ ಬಿಡುಗಡೆಮಾಡಲಾಗಿದ್ದು, ಎಲ್ಲವೂ ಚಿಂತನಶೀಲ, ಅಧ್ಯಯನಶೀಲ ಲೇಖನಗಳಾಗಿವೆ. ಆ ಪುಸ್ತಕಗಳ ಹೆಸರು ಹಾಗೂ ಅವು ಬಿಡುಗಡೆಗೊಂಡ ಇಸವಿಯ ವಿವರ ಈ ಕೆಳಗಿನಂತಿದೆ. 

* Peep in to the past (1995)

* ರಾಮಾಯಣ ಮತ್ತು ಪರಂಪರೆ (1996)

* Sanskrit : A Source of Science (1997)

* Reincarnation : Concept and Implication (1998)

* Relevance of Plants and Herbs and Materials used in the Rituals (1999)

* ವ್ಯಕ್ತಿತ್ವ ವಿಕಸನ : ಭಾರತೀಯ ದೃಷ್ಟಿ (2000)
     Personality Development : Indian View

* ಗುರು - ಶಿಷ್ಯ ಸಂಬಂಧ : ಭಾರತೀಯ ದೃಷ್ಟಿ (2001)
     The Teachers and the Taught : Indian View 

* Parent - Children Relationship : Indian View (2002)

* Temple and Its Culture (2003)

* Concept of Value : A Universal Perception (2004)

* Economics and Commerce
                          Ancient Concept & Modern Relevance (2006)

* Concept of Beauty in the light of Cosmetics and Perfumes (2007)

* A Discourse of on Bliss (2009)

* ಸನಾತನ ವಿವಾಹ ಸಂಸ್ಕಾರ (in Kannada)
  Concept of Marriage (in English)                      (2010)

ಈ ಮೇಲಿನ ಕೆಲವು ಪುಸ್ತಕಗಳು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯ ಲೇಖನಗಳನ್ನೂ ಒಳಗೊಂಡಿವೆ. 

ಈ ವರುಷದ ವಿಚಾರಗೋಷ್ಠಿ ರಾಷ್ಟ್ರಮಟ್ಟದಾಗಿದ್ದು, ಈ ವಿಚಾರಗೋಷ್ಠಿಯ ವಿಷಯ "The Concept of Brahmana in Sanskrit literature and modern thinkers view"ಎಂದಾಗಿದೆ. ಬರುವ ೧೯ ಹಾಗೂ ೨೦ರಂದು ಕೆನರಾ ಪದವಿ ಕಾಲೇಜಿನ ಆವರಣದಲ್ಲಿ ನಡೆಯಲಿದ್ದು, ದೇಶದ ನಾನಾ ವಿಶ್ವವಿದ್ಯಾಲಯಗಳಿಂದ, ಕಾಲೇಜುಗಳಿಂದ ಆಹ್ವಾನಿತರಾದ ವಿದ್ವಾಂಸರು ತಮ್ಮ ತಮ್ಮ ವಿಚಾರಧಾರೆಯನ್ನು ಮಂಡಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಳಿಗೆ ನನಗೆ ಮೈಲ್ ಮಾಡಬಹುದು.

-ತೇಜಸ್ವಿನಿ ಹೆಗಡೆ. 

ಬುಧವಾರ, ಡಿಸೆಂಬರ್ 15, 2010

ಒಗ್ಗರಣೆಯ ಮನೆಯೊಳಗೆ ಘಮ ಘಮವೆನುವ ಕಷಾಯ...

ಈ ಯೋಚನೆ ಇಂದು, ನಿನ್ನೆಯದಲ್ಲ. ದಟ್ಸ್‌ಕನ್ನಡದಲ್ಲಿ ನಾನು ಬರೆಯುತ್ತಿದ್ದ "ಶಿರಸಿ ಭವನ" ಅಂಕಣದ ಕಾಲದಿಂದಲೂ ಇತ್ತು. ಈಗ ಅದು ಕಾರ್ಯರೂಪಕ್ಕೆ ಬಂದಿದೆಯಷ್ಟೇ. ಹೌದು... ಇನ್ನು ರುಚಿ ರುಚಿ ಪದಾರ್ಥಗಳು, ತಿಂಡಿ ತಿನಸುಗಳು ನನ್ನ ಒಗ್ಗರಣೆ ಬ್ಲಾಗ್ ಮನೆಯಲ್ಲಿ ತಯಾರಿಸಲ್ಪಡುತ್ತವೆ. ಅಡುಗೆ ಆಸಕ್ತರು ಅದರಲ್ಲಿರುವ ತಿಂಡಿ ತಿನಸನ್ನು ಓದಿ, ಮಾಡಿ, ಸವಿದರೆ ನನಗಷ್ಟೇ ಸಾಕು. ಈ ಒಗ್ಗರಣೆ ಮನೆಯ ವಿಶೇಷವೇನೆಂದರೆ ಇದರಲ್ಲಿ ಹೆಚ್ಚಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿರಸಿ ಕಡೆಯ ತಿನಸುಗಳನ್ನೇ ಹೆಚ್ಚಾಗಿ ತಯಾರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕಡಿಮೆ ತೆಂಗು, ಎಣ್ಣೆ ಕಾಗೂ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸುವ ಪದಾರ್ಥಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಕಾರಣ ಒಗ್ಗರಣೆ ಮನೆಯೊಡತಿಯ ಪ್ರಕಾರ "ಆರೋಗ್ಯವೇ ಭಾಗ್ಯ" :)

ನನ್ನ ಒಗ್ಗರಣೆಗೆ ನಿಮ್ಮ ಒಗ್ಗರಣೆಯನ್ನೂ ಹಾಕಿ ಮತ್ತಷ್ಟು ರುಚಿಕರ ಮಾಡಬಹುದು. ನಿಮ್ಮ ಸಲಹೆ ಸೂಚನೆಗಳೇನಿದ್ದರೂ ಸದಾ ಸ್ವಾಗತ. ಆಸಕ್ತರು ತಮ್ಮ ಪಾಕಶಾಸ್ತ್ರವನ್ನೂ ನನಗೆ ಕಳುಹಿಸಿದಲ್ಲಿ ಅವರ ಹೆಸರಿನಲ್ಲಿಯೇ ಅದನ್ನು ಪ್ರಕಟಿಸಲಾಗುವುದು. ಮುಖ್ಯವಾಗಿ ರುಚಿಕರ ಹಾಗೂ ಆರೋಗ್ಯಕರ ತಿನಿಸಿನ ವಿಧಾನವನ್ನು ಹೆಚ್ಚಿನವರಿಗೆ ತಿಳಿಸುವುದೇ ಇದರ ಉದ್ದೇಶ. ಸದ್ಯಕ್ಕೆ ವಾರಕ್ಕೊಮ್ಮೆ ಈ ಅಡಿಗೆ ಮನೆಯಲ್ಲಿ ಹೊಸ ಬಗೆಯ ಅಡಿಗೆ ತಯಾರಿಯನ್ನು ಹಾಕಬೇಕೆಂದಿರುವೆ. 

ಚುಮು ಚುಮು ಚಳಿಗಾಳಿ ಬೀಸತೊಡಗಿದೆ. ರಗ್ಗಿನೊಳಗೆ ಮತ್ತಷ್ಟು ಹೊತ್ತು ಹುದುಗಿ ಮಲಗುವ ಆಸೆ ಯಾರನ್ನೂ ಹೊರ ಬಿಡುತ್ತಿಲ್ಲ. ಹೀಗಿರುವಾಗ ಬಿಸಿ ಬಿಸಿ ಕಾಫಿ ಕುಡಿಯುವ ಮನಸಾಗುವುದು ಸಹಜ. ಆದರೆ ಕಾಫಿ, ಟೀ ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರ ಎನ್ನುವುದು ಪ್ರಶ್ನೆ. ಗೂಗಲ್ ಮಾಡಿದರೆ ನಿಮಗೆ ಕಾಫಿಯ ಸತತ ಸೇವನೆಯಿಂದಾಗುವ ಅಡ್ಡ ಪರಿಣಾಮಗಳ ದೊಡ್ಡ ಲಿಸ್ಟೇ ಸಿಗುವುದು! ಹೀಗಿರುವಾಗ ಚಳಿಯನ್ನೋಡಿಸುವ, ರುಚಿಕರವಾಗಿರುವ ಜೊತೆಗೆ ಆರೋಗ್ಯಕರವೂ ಆಗಿರುವ ಪೇಯವೊಂದರ ಅಗತ್ಯತೆ ನಮಗಿದೆ. ನಮ್ಮಲ್ಲಿ ಅಂದರೆ ಶಿರಸಿಯ ಕಡೆ ಯಾರೇ ಬರಲಿ.. "ಒಂದು ಕುಡ್ತೆ ಕಷಾಯ"ವನ್ನಾದರೂ ಕೊಟ್ಟೇ ಕಳಿಸುವುದು ವಾಡಿಕೆ. ಊಟದ ಸಮಯವೇ ಆಗಿರಲಿ, ಇಲ್ಲಾ ಹೊದ್ದು ಮಲಗುವ ಸಮಯವೇ ಆಗಿರಲಿ... ಕಷಾಯ ನಮ್ಮ ಹಸಿವನ್ನು ತಣಿಸದು, ನಿದ್ದೆಯನ್ನು ಆರಿಸದು. ಬದಲಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಸುಖಕರವಾದ ನಿದ್ದೆಗೆ ಪ್ರೇರೇಪಿಸುವುದು. ಇಂತಹ ಕಷಾಯವನ್ನು ತಯಾರಿಸಲು ನಿಮಗೆ ತಗಲುವ ಸಮಯ ಕೇವಲ ೨-೩ ನಿಮಿಷ! ಆದರೆ ಮೊದಲು ಕಷಾಯದ ಹುಡಿಯನ್ನು ಮಾಡಿಟ್ಟುಕೊಳ್ಳಬೇಕಾದ್ದು ಅತ್ಯಗತ್ಯ. ಇದನ್ನು ತಯಾರಿಸಲು ತಗಲುವುದು ಕೇವಲ ೧೦-೧೫ ನಿಮಿಷ. ಹೀಗೆ ತಯಾರಿಸಿಟ್ಟು ಕೊಂಡ ಹುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳುಗಟ್ಟಲೆ ಬರುವುದು. ಈ ಪುಡಿಯನ್ನು ಉಪಯೋಗಿಸಿಯೇ ಕಷಾಯದ ಪೇಯವನ್ನು ತಯಾರಿಸುವುದು.

ಮೊದಲಿಗೆ ಕಷಾಯದ ಹುಡಿಯನ್ನು ಮಾಡುವ ವಿಧಾನ - 

ಹೆಚ್ಚಿನ ಓದಿಗೆ ಇನ್ನು ಒಗ್ಗರಣೆಯ ಮನೆಗೆ ಪ್ರವೇಶಿಸಿ.... :)

ಒಗ್ಗರಣೆ ಮನೆಯನ್ನು ಮಾನಸದಷ್ಟೇ ಆತ್ಮೀಯತೆಯಿಂದ ಸ್ವೀಕರಿಸಿ, ಇದರ ಪಾಕ ಪಾಠ ಶಾಲೆಯ ಸಹೋದ್ಯೋಗಿಗಳು/ವಿದ್ಯಾರ್ಥಿಗಳು/ಸಲಹೆಗಾರರು ಆಗಿ ಸೇರಿಕೊಳ್ಳುತ್ತೀರೆಂದು ಆಶಿಸುತ್ತೇನೆ....:)

-ತೇಜಸ್ವಿನಿ ಹೆಗಡೆ.

ಮಂಗಳವಾರ, ಡಿಸೆಂಬರ್ 7, 2010

ಜಗನ್ಮೋಹಿನಿ

ಜಗದ ಮಹಾತಾಯಿ ಈಕೆ
ಲಕ್ಷ, ಕೋಟಿ ಮಕ್ಕಳ
ಅನುಗಾಲವೂ ಸಲಹುತ
ತಾನು ಒಂದಿಂಚೂ ಸವೆಯದೇ
ಪಕ್ಷಕ್ಕೊಮ್ಮೆ ಚೆಲುವೆಯಾಗಿ ಮೆರೆದು
ಸಿಟ್ಟು ಬಂದಾಗ ಮಕ್ಕಳನೇ ಛೂ ಬಿಟ್ಟು
ಬೊಬ್ಬಿರಿದು, ಮೇಲೇರಿ ಬಂದು
ಸರ್ವನಾಶ ಗೈವ ಪಾಪನಾಶಿನಿ


ತಾ ಅಡಗಿಸಿಟ್ಟ ಅಪಾರ
ಸಿರಿ-ಸಂಪತ್ತುಗಳನೆಲ್ಲಾ
ಅದ್ಯಾರೋ ವಾನರ ವಿಕಸಿತ ರಾಕ್ಷಸರು
ಕದ್ದೊಯ್ಯುವುದನು ಕಂಡೂ
ಸುಮ್ಮನಿದ್ದು, ಬಿಮ್ಮನೆ ಕುಳಿತು
ಹೊಂಚು ಹಾಕಿ, ಸಂಚು ಮಾಡಿ
ಕಾಲೆಳೆದೆಳೆದು ಪ್ರಾಣ ಸೆಳೆವ ಸಮ್ಮೋಹಿನಿ

ತೆಕ್ಕೆಯೊಳಗಿಳಿಯದ ಪ್ರಿಯಕರನ
ಕಣ್ಣೆತ್ತಿ ನೋಡಿ, ಮೋಡಿ ಮಾಡಿ
ಆತನ ಒಮ್ಮೆ ಅರ್ಧವಾಗಿ,
ಮಗದೊಮ್ಮೆ ಇಡಿಯಾಗಿ ಹಿಡಿದು
ಕಬಳಿಸಿ, ನುಂಗಲು ಹಪ ಹಪಿಸಿ
ಸೋತು, ಸೊರಗಿ ಕೊರಗುವ ವಿರಾಗಿಣಿ


ಉಷೆಯ ಹಿಂಬಾಲಿಸಿ, ಹಠ ಮಾಡಿ
ತಾಸಿಗೊಮ್ಮೆ ರಂಗು ರಂಗಿನ
ಬಣ್ಣಗಳ ಧರಿಸಿ, ಮಿನುಗಿ
ನಿಶೆಯ ಮೇಲೇರಿ ಕುಳಿತು, ಬೀಗಿ
ಕಿಲ ಕಿಲನೆ ನಗುವ ಸುಹಾಸಿನಿ

ಕರೆದಷ್ಟೂ ಮುಗಿಯದ
ನಿನ್ಹೆಸರುಗಳ ಜಪವೇ
ಹೆಜ್ಜೇನು ಸವಿದಂತೆ ಮನಮೋಹಿನಿ

[ಕವನವೆನ್ನುವುದು ಅವರವರ ಭಾವಕ್ಕೇ ಬಿಟ್ಟಿದ್ದಾದರೂ, ಈ ಕವಿತೆಯನ್ನು ಯಾರ ಮೇಲೆ ಬರೆದಿದ್ದು ಎನ್ನುವುದನ್ನು ಹೇಳಬಲ್ಲಿರಾ? :)]

- ತೇಜಸ್ವಿನಿ ಹೆಗಡೆ

ಬುಧವಾರ, ಡಿಸೆಂಬರ್ 1, 2010

ಮುಸುಕು

ಮಾಘ ಮಾಸದ ಚಳಿ ಎಲ್ಲಾ ಕಡೆ ತನ್ನ ಪ್ರಭಾವವನ್ನು ತೋರುತ್ತಿದ್ದರೆ, ಘಟ್ಟದಲ್ಲಂತೂ ಚರಮ ಸೀಮೆಯನ್ನು ತಲುಪಿತ್ತು. ಅಲ್ಲಿಯ ನಡುಗುವ ಜನರಿಗೆ ಮಟ ಮಧ್ಯಾಹ್ನದಲ್ಲೂ ಸೂರ್ಯ ತನ್ನ ಬಿಸಿಲಿನ ಕೊಡೆಯ ಬಿಡಿಸಲು ಅಸಮರ್ಥನಾಗಿದ್ದ. ರಾತ್ರಿರಾಣಿ ಬೀಸಿಡುವ ಚಳಿಯ ಗಾಳದೊಳಗೆ ಸಿಲುಕಿ ರವಿ ಒದ್ದಾಡುತ್ತಿದ್ದ. ತನ್ನ ಕಿರಣಗಳನ್ನು ತೂರಿ ತೂರಿ ಶೀತಗಾಳಿಯ ಸೀಳಿದರೂ, ಅವುಗಳ ಬಿಸಿ ಧರೆಯ ತಲುಪುವಾಗ ಮಾತ್ರ ತಣ್ಣಗಾಗಿಹೋಗುತ್ತಿತ್ತು. ಗಂಟೆ ಎಂಟಾದರೂ, ಪ್ರಕೃತಿ ಹೊದ್ದಿರುವ ಮಂಜಿಗೆ ಹೆದರಿ ಎಂದೂ ಒಂಬತ್ತರ ಕಡಿಮೆ ತನ್ನ ಹೊದಿಕೆ ತೆಗೆಯದ ಚಂದ್ರಶೇಖರ ಅಂದು ಮಾತ್ರ ಮುಂಜಾವು ಆರಕ್ಕೆಲ್ಲಾ ಬಚ್ಚಲಿಗೆ ಓಡಿದ್ದು ನೋಡಿ, ಆಗಷ್ಟೇ ಎದ್ದು ಅಲ್ಲೇ ಬೆಂಕಿ ಕಾಯಿಸುತ್ತಿದ್ದ ಲಕ್ಷ್ಮಿ ಬೆಪ್ಪಾಗಿ ಪರಿವೆಯಿಲ್ಲದೇ ಬಿಸಿ ಸೌದೆ ಕೋಲೊಂದನ್ನು ಮುಟ್ಟಿ ಕಿರುಬೆರಳನ್ನು ತುಸು ಸುಟ್ಟುಕೊಂಡುಬಿಟ್ಟಳು. ಬೇರೆ ದಿನಗಳಲ್ಲಿ ನೀರಿಗಿಳಿಯಲು ಮಧ್ಯಾಹ್ನ ಎರಡು ಗಂಟೆಯ ಕಡಿಮೆ ಮುಹೂರ್ತ ನೋಡದ ಚಂದ್ರು, ಬಚ್ಚಲ ಒಳಹೊಕ್ಕರೂ ಹೆಂಡತಿಗೆ ಸಹಸ್ರನಾಮಾರ್ಚನೆ ಮಾಡುತ್ತಲೇ ತನ್ನ ತಲೆಗೆ ಅಭಿಷೇಕ ಮಾಡಿಕೊಳ್ಳುವುದು. "ಹೌದನೇ.... ಬೆಳಗ್ಗಿಂದ ಬೆಂಕಿ ಕಾಯ್ಸ್ತಾ ಇರ್ತ್ಯಪ, ಸರಿ ಸೌದೆ ಒಡ್ಡಲೂ ಬತ್ತಿಲ್ಯ ಹಂಗಿದ್ರೆ? ಅಲ್ಲಾ... ನಾ ಒಳಹೋಗ್ಬೇಕಿರೇ ನೀರು ಕಾದು ತಂಪಾಗಿರ್ತು ಹೇಂಗೆ? ತಣ್ಣೀರೇ ಮಿಂದು ಗಂಡಾ ಹೇಳಂವ ನೆಗ್ದು ಬಿದ್ದು ಹೋಗ್ಲಿ ಹೇಳಾ ಹೇಂಗೆ...? ನೀ ಮಾತ್ರ ಒಂದು ಹಂಡೆ ಪೂರ್ತಿ ಬಿಸ್ನೀರು ಮಿಂದ್ರೆ ಆತಾ..?" ಎಂದೆಲ್ಲಾ ಗೊಣಗಾಡದ ಹೊರತು ಮಿಂದ ತೃಪ್ತಿ ಅವನಿಗಾಗದು. ಲಕ್ಷ್ಮಿಯೇನು ಕಡಿಮೆಯೇ? "ಅಲ್ಲಾ.. ನಂಗೆಂತ ಮಳ್ಳ ನಿಮ್ಗೆ ತಣ್ಣೀರಿಟ್ಟು ನಾ ಮಾತ್ರ ಬಿಸ್ನೀರು ಮೀಯಲೇ? ಶುಕ್ರವಾರವಾಗಿ ಎಂತ ಮಳ್ಳ್ ಮಾತಾಡ್ತ್ರಿ? ನಾಳೆಯಿಂದ ಗ್ಯಾಸ್ನಲ್ಲಿ ಕುದಿಯೋ ನೀರು ತಂದುಕೊಡ್ತಿ, ಪಟ್ಟಾಗಿ ಮೀಲಕ್ಕಿ..ಈಗ ತೆಪ್ಪಗೆ ಮಿಂದ್ಕ ಬನ್ನಿ.. ಇಲ್ದೇ ಹೋದ್ರೆ ಬಿಸಿ ಅನ್ನನೂ ಆರಿ ಚಿತ್ರಾನ್ನ ಆಗ್ತು ಅಷ್ಟೇಯಾ..." ಎಂದು ತಿರುಗೇಟು ಕೊಡುತ್ತಾ ಬಟ್ಟಲು ಲೋಟ ಜಡಿದರೇ ಇವಳಿಗೂ ಉಂಡ ತೃಪ್ತಿ. ಆದರೆ ಇಂದು ಮಾತ್ರ ಎಲ್ಲಾ ತಲೆಕೆಳಗು. ಬೆಳ್ಳ್ಂಬೆಳಗ್ಗೆಯೇ ಎದ್ದು, ಕಮಕ್‌ಕಿಮಕ್ ಎನ್ನದೇ ಎರಡು ತಂಬಿಗೆ ಹಾಗೆ ಎರಡು ಹೀಗೆ ಎಂಬಂತೆ ಸುರಿದುಕೊಂಡ ಪತಿ, ಒದ್ದೆ ಟವೆಲನ್ನೇ ಸುತ್ತಿಕೊಂಡು ಬಟ್ಟೆ ಬದಲಾಯಿಸಲು ಮೆತ್ತಿಗೆ ಓಡಿದ್ದು ನೋಡಿಯಂತೂ ಲಕ್ಷ್ಮಿಗೆ ತುಂಬಾ ದಿಗಿಲಾಗಿತ್ತು.

"ಅಲ್ಲಾ..ನಿನ್ನೆನೇ ಒಂದು ಮಾತು ಹೇಳಿಯಿದ್ರೆ ಸ್ವಲ್ಪ ಬೇಗ ಎದ್ಕಂಡು ನೀರು ಕಾಯ್ಸಿ, ದೋಸೆ ಎರ್ದು ಆಸ್ರಿಗೆ ಮಾಡೂ ಇಡ್ತಿದ್ದಿ. ಈಗಿನ್ನೂ ಹಾಲು ಕರ್ದೂ ಆಯ್ದಿಲ್ಲೆ.....ಅದೆಂತಾ ಕೋರ್ಟಿಗೆ ಹೋಗವ ನಿಮ್ಗೆ? ಇಷ್ಟು ಬೇಗ ಎಂದ್ಕಂಡಿದ್ದು ಎಂತಕ್ಕೋ? ರಾತ್ರಿ ಸರಿಯಾಗಿ ಊಟಾನೂ ಮಾಡಿದ್ರಿಲ್ಲೆ...ನಿದ್ದೆನೂ ಮಾಡ್ದೇ ಅತ್ಲಾಗಿಂದಿತ್ಲಾಗೆ ಹೊರಳಾಡ್ತಾ ಇದ್ದಿದ್ರಿ...ಹೌದು....ಶಿರಸಿಗೆ ಬಸ್ಸಿಪ್ಪದೂ ಏಳ್‌ಗಂಟೆಗೆ. ಇಷ್ಟ ಬೇಗ ಎಲ್ಲಿಗೆ ಹೊರಟ್ರಿ?" ಎಂದೆಲ್ಲಾ ಪಿರಿಪಿರಿ ಮಾಡುತ್ತಿದ್ದರೂ, ಅಲ್ಲೇ ತಯಾರಾಗುತ್ತಿದ್ದ ಚಂದ್ರು ಏನೊಂದೂ ಹೇಳಲು ಹೋಗಲಿಲ್ಲ. ಅಸಲಿಗೆ ಸ್ವತಃ ಅವನಿಗೇ ಗೊತ್ತಿರಲಿಲ್ಲ ಇಂದು ಅಂವ ಶಿರಸಿಗೆ ಹೋಗುತ್ತಾನೆಂದು. ರಾತ್ರಿಯಿಡೀ ಇಬ್ಬದಿಗೆಯ ತಾಕಲಾಟದಲ್ಲಿ ಕೆಂಗೆಟ್ಟವನಿಗೆ ಬೆಳಗಿನ ಜಾವವೇ ತುಸು ನಿದ್ದೆ ಹತ್ತಿದ್ದು. ಆದರೆ ಇಂದಿನ ಕಾರ್ಯದ ಕುರಿತು ಮನದಲ್ಲೇ ನಿರ್ಧಾರ ಗಟ್ಟಿಯಾಗಲು ದಢಕ್ಕನೆ ಎದ್ದಿದ್ದ. "ನೋಡೆ.. ಗಂಡಸ್ರ ಕಾರುಬಾರು ನೂರಿರ್ತು. ಎಲ್ಲಾದನ್ನೂ ಹೇಳ್ತಾ ಕೂತ್ರೆ ಆದಾಂಗೆಯಾ ಕೆಲ್ಸ....ನೀ ಎಂತೂ ಮಾಡದು ಬೇಡ, ಶಿರಸಿಯ ಸುಬ್ಬಣ್ಣನ ಹೋಟೆಲ್‌ನಲ್ಲಿ ಆಸ್ರಿಗೆ ಕುಡೀತಿ. ಈಗ ವೆಂಕಪ್ಪ ಹಾಲು ಕೊಡಲೆ ಪೇಟೆಗೆ ಹೋಗ್ತಾ ಇದ್ದ. ನಾನೂ ಅವ್ನ ಜೊತೆ ಗಾಡೀಲಿ ಪೇಟಿಗೆ ಹೋಗ್ತಿ....ಅಲ್ಲಿಂದ ಬೆಳ್ಮನೆಗೆ ಹೋಗವು. ಕಮಲಕ್ಕನ ನೋಡ್ದೇ ರಾಶಿ ದಿನ ಆತು. ಈಗ ಬಸ್ಸಿಗಾಗಿ ಕಾಯೋ ವ್ಯವಧಾನ ಇಲ್ಲೆ. ಹಾಂ...ಬಪ್ಪದು ರಾತ್ರಿಯಾಗ್ಗು.. ನಿಂಗವೆಲ್ಲ ಊಟಮಾಡಿರಿ. ಎಲ್ಲಾ ಬಂದ್ಮೇಲೆ ಹೇಳ್ತಿ...ಈಗ ನೀನು ಕೊಟ್ಗೆ ಕೆಲ್ಸಕ್ಕೆ ಹೋಗು...ದೂಸರಾ ಮಾತು ಬೇಡ.." ಎಂದು ತಾಕೀತು ಮಾಡಿ ಅವಳ ಉತ್ತರಕ್ಕೂ ಕಾಯದೇ ಅಲ್ಲಲ್ಲಿ ತೂತು ಬಿದ್ದಿದ್ದ ಸ್ವೆಟರನ್ನೇ ಏರಿಸಿಕೊಂಡು ಬಗಲಿಗೊಂದು ಬ್ಯಾಗು ನೇತುಹಾಕಿ ಹೊರಟೇ ಬಿಟ್ಟ ಚಂದ್ರಶೇಖರ. ಅಂಗಳ ದಾಟಿ, ದಣಪೆ ಸರಿಸಿಕೊಂಡು ತೋಟವಿಳಿದು, ವೆಂಕಪ್ಪನ ಮನೆಕಡೆಗೆ ಹೊರಟ ಗಂಡ ಕ್ರಮೇಣ ಮಂಜಿನೊಳಗೇ ಮರೆಯಾದುದನ್ನು ಎವೆಯಿಕ್ಕದೇ ನೋಡುತ್ತಿದ್ದ ಲಕ್ಷ್ಮಿಗೆ ಕಮಲತ್ತಿಗೆಯ ನೆನಪಾಗಿ ಸಂಕಟವಾಯಿತು. ಯಾವುದೋ ನೆನಪಿನ ಗುಂಗಿನಲ್ಲೇ ಸುಮಾರು ಹೊತ್ತು ಕಂಬದಂತೇ ನಿಂತಿದ್ದ ಅವಳನ್ನು ಎಚ್ಚರಿಸಿದ್ದು ತಮ್ಮ ಮೇವಿಗಾಗಿ ಕಾದು ಸುಸ್ತಾಗಿ, ಹಸಿವಿನಿಂದ "ಅಂಬಾ.." ಎಂದು ಕೂಗತೊಡಗಿದ ದನಕರುಗಳು.

-೨-

"ಕಮಲಕ್ಕ, ನಂಗೆ ಬರೀ ಕಷಾಯ ಸಾಕೇ.. ಎಂತದೂ ಮಾಡದು ಬೇಡ. ಈಗಷ್ಟೇ ಸುಬ್ಬಣ್ಣನ ಹೋಟೇಲಲ್ಲಿ ಭರ್ಜರಿ ಮಸಾಲ್ ದೋಸೆ ಸಮಾರಾಧನೆ ಆಜು...ಇವತ್ತಿನ ಮಧ್ಯಾಹ್ನದ ಕವಳ ಇಲ್ಲೇಯಾ ಮತ್ತೆ....ಅಪ್ಪೆಹುಳಿ, ಕೆಸುವಿನೆಲೆ ಗೊಜ್ಜು ಸಾಕು. ಹೌದು.... ಬಾವ ಎಲ್ಲಿ ಕಾಣಿಸ್ತಾ ಇಲ್ಲೆ... ಎಷ್ಟು ದೂರ?" ಎಂದು ಕೇಳುತ್ತಾ ಅಡಿಗೆ ಮನೆ ಹೊಕ್ಕ ತಮ್ಮ ಚಂದ್ರುವನ್ನು ಆಕೆ ತಿರುಗಿ ನೋಡುವುದಕ್ಕೂ ಗ್ರಹಿಸದೇ ಆತ ತಗ್ಗಿನಲ್ಲಿದ್ದ ನಾಗಂದಿಗೆಯನ್ನು ಹಣೆಗೆ ಬಡಿದುಕೊಳ್ಳುವುದಕ್ಕೂ ಸಮನಾಯಿತು. "ಅಲ್ದೋ ಮಾರಾಯ.. ಎಷ್ಟು ಸಲ ಬಂದೆ ಈ ಮನೆಗೆ ಇನ್ನೂ ಅಡಿಗೆ ಮನೆಯ ಈ ನಾಗಂದಿಗೆ ಪರಿಚಯ ಆಜಿಲ್ಲೆ ನೋಡು ನಿಂಗೆ. ಮೆನೆಯೊಳಗಿಂದೆಲ್ಲಾ ಮರ್ತೇ ಹೋತ ಹೇಂಗೆ ನಿಂಗೆ? ನೀ ಇಲ್ಲಿಗೆ ಬರ್ದೇ ಎರ್ಡು ತಿಂಗ್ಳ ಮೇಲಾತು ನೋಡು... ಹ್ಮ್ಂ ಎಷ್ಟಂದ್ರೂ ನಾ ನಿನ್ನ ಸ್ವಂತ ಅಕ್ಕಯ್ಯನ ಬಂದು ಹೋಗಿ ಮಾಡಲೆ...? ಚಿಕ್ಕಯ್ಯ ಬದ್ಕಿದ್ದಿದ್ರೆ ಸರಿ ಮಾಡ್ತಿದ್ದ ನಿನ್ನ. ಇತ್ಲಾಗ್ ಬಾ ಮಾರಾಯ ಮತ್ತೆ ಬಡ್ದು ಹೋಕು..ಪುಣ್ಯಕ್ಕೆ ರಾಶೀ ಪೆಟ್ಟಾಜಿಲ್ಲೆ...ಸ್ವಲ್ಪ ಕೆಂಪಾಜು ಹಣೆ ಅಷ್ಟೇಯಾ.....ತಗ ತೆಂಗಿನೆಣ್ಣೆ ಹಚ್ಕ.. ಸಮಾ ಆಗ್ತು..." ಎಂದು ರೇಗುತ್ತಲೇ, ತಮ್ಮನನ್ನು ಮಣೆಹಾಕಿ ಕುಳ್ಳಿರಿಸಿ ಉಪಚರಿಸಲು ಮುಂದಾದಳು ಕಮಲ. "ಅಯ್ಯೋ ಮಾರಾಯ್ತಿ.. ಎಂತಕ್ಕೆ ಹೀಂಗೆಲ್ಲಾ ಹೇಳೀ ಸಾಯಸ್ತೆ ನನ್ನ? ನಿನ್ನ ಬಿಟ್ರೆ ನಂಗ್ಯಾವ ಅಕ್ಕ ತಂಗಿ ಇದ್ವಪ್ಪ? ನಂಗೆ ದೊಡ್ಡೊಪ್ಪ ಬೇರೆ ಯನ್ನಪ್ಪಯ್ಯ ಬೇರೆನಾ? ಇಷ್ಟಕ್ಕೂ ನಂಗೆ ಸ್ವಂತ ಅಕ್ಕ, ತಂಗಿಯರು ಬೇರೆ ಯಾರಾದ್ರೂ ಇದ್ರೆ ತಾನೇ ನಾನು ಬೇಧ ಮಾಡದು? ನೀ ಹೀಂಗೆಲ್ಲಾ ಮಾತಾಡಿ ಸುಮ್ನೇ ನನ್ನ ಚುಚ್ತಾ ಇರ್ತೆ..ಹಣೆಗೆಂತೂ ಆಜಿಲ್ಲೆ ಬಿಡು. ಸ್ವಲ್ಪ ಹೊತ್ತು ಉರೀತು ಆಮೇಲೆ ಅಲ್ಲೇ ಸರಿಯಾಗ್ತು. ಹಾಂಗೆ ನೋಡಿದ್ರೆ ಈ ನೋವೆಲ್ಲಾ ಎಷ್ಟ್ರದ್ದು ನಿನ್ನ, ಶಂಕ್ರಬಾವ್ನ ನೋವಿನ ಮುಂದೆ.." ಎಂದವನು ಅಲ್ಲೇ ನಾಲಿಗೆ ಕಚ್ಚಿ ಹಿಡಿದ. ತನ್ನ ಕೊನೆಯ ಮಾತಿನ ಅಚಾತುರ್ಯದಿಂದಾಗಿ, ತಕ್ಷಣ ಅಕ್ಕನ ಮುಖ ನೋಡಲೂ ಸಂಕೋಚವಾಗಿ ಮುಖ ತೊಳೆಯುವ ನೆಪಮಾಡಿ ಬಚ್ಚಲಿಗೆ ಹೋದರೆ, ಅತ್ತ ಕಮಲಳಿಗೂ ಎಲ್ಲೋ ಏನೋ ಬಲವಾಗಿ ಚುಚ್ಚಿದ ಅನುಭವ. "ಹಾಳದ್ ಗ್ಯಾಸು ಇವತ್ತೇ ಮುಗ್ದು ಹೋಜು... ಇನ್ನು ಸೌದೆ ಒಡ್ಡಿ ಸಾಯವು....." ಎಂದು ತನ್ನೊಳಗೇ ಗೊಣಗುತ್ತಾ, ಆಗಷ್ಟೇ ಕೆಂಡಹಾಕಿ ಕಟ್ಟಿಗೆ ತೂರಿದ್ದ ಒಲೆಯಕಡೆಗೆ ತುಸು ಹೆಚ್ಚೇ ಬಗ್ಗಿ ಜೋರಾಗಿ ಗಾಳಿ ಊದಲು, ಹೊರ ಚಿಮ್ಮಿದ ಹೊಗೆಯ ನೆಪಮಾಡಿ ಮೊದಲೇ ತುಂಬಿದ್ದ ಕಣ್ಣೀರಿಗೆ ಹೊರಧುಮುಕಲು ಅನುವುಮಾಡಿಕೊಟ್ಟಳು.

"ಬಾವ್ನ ಚಡ್ಡಿ ದೋಸ್ತ ಕೃಷ್ಣ ಶಾಸ್ತ್ರಿಗೆ ಹುಶಾರಿಲ್ಲೆ ಹೇಳಿ ಮೊನ್ನೆ ಯಾರೋ ಹೇಳಿಯಿದ್ದೋ. ಆದ್ರೆ ಇಷ್ಟು ಸೀರಿಯಸ್ ಹೇಳಿ ಗೊತ್ತಿತ್ತಿಲ್ಲೆ. ಹಾಂಗಿದ್ರೆ ಭಾವ ಹುಬ್ಳಿಯಿಂದ ನಾಳೇನೇ ಬರದು ಹೇಳಾತು ಅಲ್ದಾ? ಆದ್ರೂ ನೀನು ಹಿಂಗೆಲ್ಲಾ ಒಬ್ಬಂಗೇ ಹೋಪಲೆ ಕೊಡಕಾಗಿತ್ತಿಲ್ಲೆ. ವಯಸ್ಸಾತು ಅವಂಗೆ....ಈಗ ಮೊದ್ಲಿನ ಹಾಂಗಲ್ಲಾ. ಮಂಡಿ ನೋವು ಬೇರೆ ಹೆಚ್ಚಾಜು ಹೇಳ್ತಿದ್ದ ಆವತ್ತು. ನೀ ಬೇರೆ ನಾಳೆವರೆಗೂ ಒಬ್ಬನೇ ಭೂತದ ಹಾಂಗೆ ಇಲ್ಲಿರವು ಹೇಳೂ ಅನ್ಸಿದ್ದಿಲ್ಯಾ ಅವಂಗೆ?" ಎಂದು ಕಷಾಯದ ಪರಿಮಳದ ಜೊತೆಗೆ ಸ್ವಾದವನ್ನೂ ಗುಟುಕಾಗಿ ಹೀರತೊಡಗಿದ. "ನಾ ಹೇಳಿದ್ರೆಲ್ಲಾ ಕೇಳ್ತ್ವೇನೋ ನಿನ್ನ ಭಾವ? ಇಷ್ಟಕ್ಕೂ ನಿಂಗ ಗಂಡಸ್ರು ಎಲ್ಲಿ ನಂಗ್ಳ ಮಾತು ಕೇಳ್ತ್ರಿ? ಹೆಂಗಸ್ರೆಲ್ಲಾ ಕೆಲ್ಸಕ್ಕೆ ಬಾರ್ದವು ಹೇಳೇ ನಿಂಗ ತಿಳ್ಕತ್ರಿ....ಹಾಂಗ್‌ನೋಡಿದ್ರೆ ಅವ್ರು ಮೊದ್ಲೆಷ್ಟು ನನ್ನ ಮಾತು ಕೇಳ್ತಿದ್ರು ಹೇಳು? ನನ್ನ ಮಾತು ಒಂಚೂರಾದ್ರೂ ಕೇಳಿಯಿದ್ರೆ ನಮ್ಗೆ ಈ ಕೇಡ್ಗಾಲ ಬರ್ತಿತ್ತಿಲ್ಲೆ......." ಎನ್ನುತ್ತಿರುವಂತೆಯೇ ಒಳಗೆ ಕಟ್ಟಿದ್ದ ಅಳು ಹೊರ ನುಗ್ಗಿಬಂದಂತಾಗಿ, ಅಲ್ಲಿಂದೆದ್ದು ಒಳನಡೆದು ಬಿಟ್ಟಳು. ಚಂದ್ರುವಿಗೆ ಕುಡಿಯುತಿದ್ದ ಕಷಾಯದ ಸ್ವಾದವೆಲ್ಲಾ ನಾಲಗೆಯಲ್ಲೇ ಮರಗಟ್ಟಿದಂತಾಗಿ ಗುಟುಕೂ ಗಂಟಲೊಳಗೇ ಸಿಕ್ಕಿಕೊಂಡತಹ ಅನುಭವವಾಯಿತು. ತಾನು ಇಲ್ಲಿಗೆ ಬಂದ ಉದ್ದೇಶವನ್ನು ನೆರವೇರಿಸುವುದರ ಬಗ್ಗೇ ದೊಡ್ಡ ಸಂಶಯ ಉಂಟಾಯಿತೀಗ. ಅಕ್ಕಯ್ಯನ ಬಳಿ ಆ ವಿಷಯವನ್ನು ಹೇಳುವುದೋ ಬೇಡವೋ ಎನ್ನುವ ಗೊಂದಲ. ಹೇಳದೇ ಇರಲೂ ಆಗದಲ್ಲಾ....ಇಂದಲ್ಲಾ ನಾಳೆ, ನಾನಲ್ಲದಿದ್ದರೆ ಮತ್ತಾರೋ ಬಂದು ಹೇಳಿಯೇ ತೀರುತ್ತಾರೆ. ಇಂತಹ ವಿಷಯವನ್ನು ಹೇಳಬೇಕಾದವರು ಹೇಳುವ ರೀತಿಯಲ್ಲಿ ಹೇಳಿದರೇ ಅದರ ಘೋರ ಪರಿಣಾಮ ತುಸು ಕಡಿಮೆಯಾಗುವುದು ಎಂದು ಒಳ ಮನಸು ನೀಡಿದ ಸಮಜಾಯಿಷಿ ಅವನಿಗೆ ಮತ್ತಷ್ಟು ಬೆಂಬಲ ನೀಡಿತು. ಹೇಳಿಯೇ ತೀರುತ್ತೇನೆ...ಬಂದ ಕೆಲಸ ಮಾಡಿಯೇ ಬಿಡಬೇಕೆಂದು ನಿರ್ಧರಿಸಿದ್ದೇ ತಡ, ಲೋಟವನ್ನು ಅಲ್ಲೇ ಇಟ್ಟು ಅಕ್ಕನನ್ನು ಹುಡುಕಿ ಹೊರಟ.

ಹಿತ್ತಲಲ್ಲಿ ಸವತೆ ಮಿಡಿಯ ಚಪ್ಪರಕ್ಕೆ ಕೊಟ್ಟಿದ್ದ ಕಂಬಕ್ಕೊರಗಿ ನಿಂತಿದ್ದ ಅಕ್ಕಯ್ಯನನ್ನು ನೋಡಿ ತುಂಬಾ ಬೇಸರವಾಯಿತು ಚಂದ್ರುವಿಗೆ. ಹೇಗಿದ್ದ ಅಕ್ಕಯ್ಯ ಹೇಗಾಗಿ ಹೋದಳು....ಇದಕ್ಕೆಲ್ಲಾ ಕಾರಣಳಾದ ನಯನಳ ಮೇಲೆ ಅಸಾಧ್ಯ ಕೋಪವುಕ್ಕಿ ಬಂತು. ಬೆನ್ನ ಹಿಂದೆ ಬಂದು ನಿಂತಿದ್ದ ತಮ್ಮನ ಅರಿವಿದ್ದರೂ ಆಕೆ ಚಪ್ಪದರದೊಳಗೆ ಬಿಟ್ಟಿದ್ದ ಮಿಡಿಗಳನ್ನೇ ತದೇಕಚಿತ್ತದಿಂದ ನೋಡತೊಡಗಿದಳು. "ಚಂದ್ರು ಮೊನ್ನೆ ಆ ಕೆರೆ ಮೂಲೆಲಿದ್ದ ಚಪ್ಪ್ರದಲ್ಲಿ ಸೌತೇಕಾಯಿ ಬೆಳದ್ದು ಹೇಳಿ ಇವು ಹಶಿ ಮಾಡಲೆ ತಗಬಂದ್ವೋ.. ನಾನು ಕೊಯ್ದು ಸುಮ್ನೇ ಬಾಯಿಗೆ ಹಾಯ್ಕಂಡ್ನೋ ಇಲ್ಯೋ.. ಕೆಟ್ಟ ಕಹಿ ಮಾರಾಯಾ. ಹೊರಗಿಂದ ನೋಡಲೆ ಒಳ್ಳೆ ರಸ ತುಂಬ್ಕಂಡು ಆಸೆ ಬಪ್ಪಂಗೆ ಇತ್ತು. ಆದರೆ ಒಳ್ಗೆ ಎಷ್ಟು ಕಹಿ ಇತ್ತು ಗೊತ್ತಿದ್ದಾ? ಈಗ ಈ ಚಪ್ಪರ್ದ ಸೌತೇಮಿಡಿನೂ ಬೆಳ್ದ ಮೇಲೆ ಹೇಂಗಿರ್ತೋ..ಏನೆಂತೋ...?! ನೀರಲ್ಲೇನೂ ಬೆರ್ಕೆ ಇಲ್ಲ್ಯೋ.....ನಂಗ ದಿವ್ಸಾ ಕುಡ್ಯ ಕೆರೆ ನೀರೇ ಹಾಕ್ತ್ಯ ಇದ್ಕೆಲ್ಲಾ... ಆದ್ರೂ ಆ ಚಪ್ರ ಕಹಿ ಬಿತ್ತು. ಈಗ ಈ ಚಪ್ರದ ಸೌತೇಮಿಡೀನ ತಿಂದು ನೋಡಿರೆ ಹೇಂಗೇ ಹೇಳಿ ಯೋಚಿಸ್ತಾ ಇದ್ದಿ.....ಕಹಿ ಇದ್ದ್ರೆ ನೀರೇ ಹೊಯ್ತ್ನಿಲ್ಲೆ. ಸುಮ್ನೇ ಶ್ರಮ ದಂಡ. ಚಪ್ಪರ ತೆಗ್ಸಿ ಹಾಕ್ವುಡ್ತೆ.. ಎಂತೆ ಹೇಳ್ತೆ..?"ಎಂದು ಕೇಳಿದ ಅಕ್ಕನನ್ನೇ ಬೆಪ್ಪಾಗಿ ನೋಡಿದ ಚಂದ್ರು. ಅಕ್ಕನ ಸರಳ ಮಾತೊಳಗೆ ನೂರರ್ಥ ಕಂಡಿತು ಅವನಿಗೆ. ಇದೇ ಸಂದರ್ಭವೆಂದು ಅರಿತು ತನ್ನ ಉದ್ದೇಶಕ್ಕೆ ತಯಾರಾದ. "ಅಕ್ಕಯ್ಯ ಇಲ್ಲೇ ಸ್ವಲ್ಪ ಹೊತ್ತು ಕುಂತ್ಕಂಬನ....ಹೇಂಗಿದ್ರೂ ಅಡ್ಗೆಗೆ ಅರ್ಜೆಂಟಿಲ್ಲೆ. ಬಿಸ್ಲಿಗೆ ಮೈ ಕಾಸ್ಕಂಡು ಒಳ್ಗೆ ಹೋಪನ.." ಎನ್ನುತ್ತಾ ತುಸು ದೂರದಲ್ಲಿ ಹಾಸಿದ್ದ ಕಲ್ಲು ಚಪ್ಪಡಿಯ ಕಡೆ ನಡೆಯಲು ಕಮಲಳೂ ಅವನನ್ನು ಅನುಸರಿಸಬೇಕಾಯಿತು.

"ಅಕ್ಕಯ್ಯಾ.. ನೀಯೇನು ಆ ಸೌತೆಮಿಡಿಯೆಲ್ಲಾ ಹಾಳಾಗ್ಲಿ ಹೇಳೇ ನೀರು ಹಾಕ್ತ್ಯಾ? ಇಲ್ಲೆ ಅಲ್ದಾ? ಎಲ್ಲಾ ಆ ದೈವಿಚ್ಛೆ....ವಿಧಿಯಾಟ. ಬೆಳ್ದಮೇಲೆ ಕಹಿ ಆಗ್ಗು ಹೇಳಿ ನೀ ಒಂದೊಂದು ಸೌತೆಮಿಡಿನೂ ರುಚಿ ನೋಡಲೆ ಹೋದ್ರೆ ಚಪ್ಪ್ರಾನೇ ಹಾಳಾಗ್ತು ಅಲ್ದಾ? ಅಪ್ಪುದನ್ನು ನೀನು, ಬಾವ, ನಾನು ಯಾರೂ ತಡ್ಯಲಾಗ್ತಿಲ್ಲೆ. ಕಹಿ ಹೇಳಿ ನೀ ಸೌತೇಕಾಯಿನ ಬಿಸಾಕ್ತೆ. ಆದ್ರೆ ಮನುಷ್ಯರಿಗೂ ಸೌತೆಕಾಯಿಗೂ ವ್ಯತ್ಯಾಸ ಇದ್ದು ಅಲ್ದಾ?" ಎಂದು ಪೀಠಿಕೆ ಹಾಕಲು ಒಂದು ಕ್ಷಣ ಏನೂ ತಿಳಿಯಲಿಲ್ಲ ಕಮಲಳಿಗೆ. ಆದರೆ ಆತ ಏನೋ ಮುಖ್ಯವಾದದ್ದು ಹೇಳಹೊರಟಿರುವ ಸುಳಿವು ಮಾತ್ರ ಸಿಕ್ಕಿ ಮನ ಅಸ್ಥಿರಗೊಳ್ಳತೊಡಗಿತು. ಆ ಪ್ರಮಾದ ನೆಡೆದು ವರುಷ ಒಂದು ಕಳೆದಿದ್ದರೂ ಎಲ್ಲವೂ ಎಲ್ಲರ ಮನಸಿನಲ್ಲೂ ಹಸಿರಾಗಿಯೇ ಇದೆ. ಎರಡು ತಿಂಗಳಿಂದ ಈ ಕಡೆಗೇ ತಲೆಹಾಕಿರದ ತಮ್ಮ ಇಂದು ಬೆಳಗ್ಗೆಯೇ ಬಂದಿರುವುದು, ಊಟಕ್ಕೂ ನಿಂತಿರುವುದು, ಹೀಗೆ ಮಾತಿಗೆ ಕರೆದಿರುವುದು ಎಲ್ಲವೂ ಆಕೆಗೆ ಮೊದಲೇ ಪೂರ್ವಸೂಚನೆ ಕೊಟ್ಟಿದ್ದರೂ ಸುಮ್ಮನಿದ್ದಳು. ಈಗ ಅವನ ಮಾತಿನ ಒಳಾರ್ಥ ಪೂರ್ಣ ಆಗದಿದ್ದರೂ ಅದು ಯಾವ ವಿಷಯಕ್ಕೆ ಮುನ್ನುಡಿಯಾಗಿರಬಹುದೆಂಬುದನ್ನು ಮಾತ್ರ ಅರ್ಥೈಸಿಕೊಂಡಳು.

"ನೀ ಎಂತ ಹೇಳಲೆ ಇಲ್ಲಿಗೆ ಬಂಜೆ ಚಂದ್ರು? ಸುತ್ತು ಬಳಸಿ ಮಾತಾಡಿದ್ರೆ ಹೇಳ್ವವ್ಕೂ, ಕೇಳ್ವವ್ಕೂ ಸುಸ್ತು ಜಾಸ್ತಿಯಾಗ್ತು..."ಎಂದು ತುಸು ಬಿಗಿಯಾಗಿ ಹೇಳಲು, ಅಷ್ಟೊತ್ತು ಒದ್ದಾಡುತ್ತಿದ್ದ ಚಂದ್ರು ಮೆಲ್ಲನೆ "ನಿನ್ನೆ ಶಿರಸಿ ಬಳೆ ಪೇಟೇಲಿ ನಾನು ನಮ್ಮನೆ ನಯನಾನ ನೋಡ್ದೇ.."ಎಂದು ಸಣ್ಣದೊಂದು ಬಾಂಬ್ ಹಾಕಿಯೇ ಬಿಟ್ಟನು. ಅವನ ಮಾತನ್ನು ಕೇಳಿದವಳಿಗೆ, ಒಡಲಾಳದಲ್ಲೆಲ್ಲೋ ಶುರುವಾದ ನೋವೊಂದು ಅಲೆಯಲೆಯಾಗಿ ಎದೆಯನ್ನೆಲ್ಲಾ ವ್ಯಾಪಿಸಿದ ಅನುಭವ. "ನೀ ಎಂತ ಹೇಳ್ತಾ ಇದ್ದೆ ಹೇಳೂದಾದ್ರೂ ಗೊತ್ತಿದ್ದೇನೋ ನಿಂಗೆ? ನೀನೇ ಖುದ್ದಾಗಿ ನೋಡೀದ್ಯಾ ಅದ್ನಾ? ಮಾತಾಡಿದ್ಯ ಅದ್ರ ಹತ್ರ? ಸುಮ್ನೇ ಅಡಪಡ ಸುದ್ದಿ ಎಲ್ಲಾ ತಗಬಂಜಿಲ್ಲೆ ಅಲ್ದಾ?" ಎಂದು ಬಹು ಕಷ್ಟಪಟ್ಟು ಉದ್ವೇಗವನ್ನು ಹತ್ತಿಕ್ಕಿಕೊಳ್ಳುತ್ತಾ ಕೇಳಿದಳು. "ಅಕ್ಕಯ್ಯಾ ನಾನು ನಿಂಗೆ ಈ ವಿಷ್ಯಾನ ಬೇರೆಯವ್ರ ಮಾತು ಕೇಳಿ ಹೇಳ್ತ್ನಾ? ಅಲ್ಲಾ... ನಂಗೇ ನಂಬ್ಕೆ ಬರ್ದೆ ಹೋಗಿಯಿದ್ರೆ ಹೇಳ್ತಿದ್ನಾ? ನಾನೇ ನಿಂಗೆ ಹೇಳವೋ ಬ್ಯಾಡ್ದೋ ಹೇಳಿ ಒದ್ದಾಡ್ತಾ ಇದ್ದಿದ್ದೆ ನಿನ್ನೆಯಿಂದ. ಸುಮ್ನೆ ಇರದು ತಪ್ಪು ಹೇಳಿ ಬೆಳಗ್ಗೆನೇ ಓಡಿ ಬಂದಿ. ದೇವ್ರಾಣೆಗೂ ಇದು ಸತ್ಯ. ನಮ್ಮನೆ ನೈನಾನ ನಾನು ನಿನ್ನೆ ಬಳೆಪೇಟೆಯಲ್ಲಿ ನೋಡ್ದಿ. ಬಳೆ ಅಂಗ್ಡಿ ಇಟ್ಕಂಡಿದ್ದು...ನಾನು ಅದ್ರ ನೋಡ್ತಾ ಇದ್ರೂ ಅದ್ಕೆ ನಾ ಕಂಡಿದ್ನಿಲ್ಲೆ....ಕೆಲ್ಸದಲ್ಲಿತ್ತು. ಮಾತಡ್ಸಲೆ ಹೋಗವು ಅಂದ್ಕಂಡೆ, ಆಯ್ದೇ ಇಲ್ಲೆ. ಅದೂ ಅಲ್ದೇ...ಈಗ ಅದು..."ಎಂದು ಮಾತನ್ನು ಅಷ್ಟಕ್ಕೇ ಮೊಟಕುಗೊಳಿಸಿಬಿಟ್ಟ. ತಾನಲ್ಲಿ ಕಂಡ ದೃಶ್ಯದ ಉಳಿದ ವಿವರಣೆಗಳನ್ನು ಎಷ್ಟು ಯತ್ನಿಸಿದರೂ ಅವನಿಗೆ ಹೇಳಲಾಗಲಿಲ್ಲ.

ಕೆಲಹೊತ್ತು ಇಬ್ಬರ ನಡುವೆ ಕೇವಲ ಮೌನ ಮಾತಾಡಿತು. ಆವರೆಗೂ ಯಾರ ನೆನಪು ಯಾವ ಅಡೆತಡೆಯಿಲ್ಲದೇ, ಎಲ್ಲೆಂದರಲ್ಲಿ ಕಣ್ಣೀರನ್ನು ಹೊರತರುತ್ತಿತ್ತೂ, ಅದೇ ನೆನಪು ಈಗ ಮತ್ತೆ ಜೀವಪಡೆಯಲು, ಒಂದು ರೀತಿಯ ಹುಚ್ಚು ನಿರ್ಲಿಪ್ತತೆಯನ್ನು ತಂದುಹಾಕಿತ್ತು ಕಮಲಳಲ್ಲಿ. ನಿಟ್ಟುಸಿರೊಂದನ್ನು ಹೊರಹಾಕಿದ ಕಮಲ ಏನೋ ನಿರ್ಧರಿಸಿ ಥಟ್ಟನೆ ಎದ್ದವಳು, ಜೊತೆಗೇ ಎದ್ದು ನಿಂತ ಚಂದ್ರುವಿನ ಎಡಗೈ ಹಿಡಿದು ಆತ ಕಟ್ಟಿದ್ದ ಕೈಗಡಿಯಾದರದ ಕಡೆ ನೋಡಿದಳು. ತಾನು ನಿರೀಕ್ಷಿಸಿರದ ಅಕ್ಕಯ್ಯನ ಈ ವಿಚಿತ್ರ ಮೌನ, ವರ್ತನೆಗಳಿಂದ ಚಂದ್ರು ಅಧೀರಗೊಂಡ. "ಈಗಿನ್ನೂ ಹತ್ತೂವರೆ. ಬೆಳ್ಮನೆ ಕತ್ರಿಗೆ ಹೋದ್ರೆ ಹನ್ನೊಂದೂವರೆಗೆಲ್ಲಾ ಶಿರಸಿಗೆ ಹೋಪ ಬಸ್ಸು ಸಿಗ್ತು. ಹತ್ತೇ ನಿಮಿಷದಲ್ಲಿ ತಯಾರಾಗಿ ಬರ್ತಿ. ದಯವಿಟ್ಟು ನನ್ನ ನೈನ ಇಪ್ಪಲ್ಲಿಗೆ ಕರ್ಕ ಹೋಗು. ಅಷ್ಟು ಮಾಡಿ ನೀ ಪುಣ್ಯ ಕಟ್ಕ. ಹೇಂಗಿದ್ರೂ ಇವ್ರು ಇವತ್ತು ಬರದಿಲ್ಲೆ. ಅವ್ರು ಬಂದ್ಮೇಲೆ ನಂಗೆ ಹೋಪಲೂ ಕೊಡ್ತ್ರಿಲ್ಲೆ ಬಿಡು....ಅವ್ರ ವಿರುದ್ಧ ನಂಗೆ ಹೋಪಲೂ ಮನ್ಸಾಗ್ತಿಲ್ಲೆ. ನೀ ಇವತ್ತು ಬಂದಿದ್ದೇ ಚೊಲೋ ಆತು...ಒಂದ್ಸಲ ದೂರದಿಂದನೇ ಅದ್ನ ನೋಡ್ಕಂಡು, ಸಾಧ್ಯವಾದ್ರೆ "ನೀನಾದ್ರೂ ಸುಖವಾಗಿದ್ಯಾ ಕೂಸೆ?" ಹೇಳಿ ಕೇಳವು. ಅಷ್ಟೇ... ಮತ್ತೆಂತೂ ಹೇಳದಿಲ್ಲೆ, ಕೇಳದಿಲ್ಲೆ....ಹಾಂಗೇ ಮನೆಗೆ ವಾಪಸ್ ಬರದು....ಅಕ್ಕಯ್ಯ ಹೇಳು ಅಭಿಮಾನ ಇದ್ರೆ, ಇದೊಂದನ್ನ ನೀನು ನಡ್ಸಿಕೊಡ್ಲೇ ಬೇಕು...." ಎಂದು ಕೈಮುಗಿದು ಕೇಳಿಕೊಂಡವಳೇ ಅವನ ಒಪ್ಪಿಗೆಗೂ ಕಾಯದೇ ದಾಪುಗಾಲಿಕ್ಕುತ್ತಾ ಒಳನಡೆದುಬಿಟ್ಟಳು. ಇತ್ತ ಚಂದ್ರುವಿಗೆ ಅಕ್ಕನ ಆಜ್ಞಾಪೂರಿತ ಕೋರಿಕೆಯನ್ನು ಕೇಳಿ ಆಕಾಶವೇ ಕಳಚಿಬಿದ್ದಂತಾಯಿತು. ತಾನು ಶಂಕ್ರಬಾವನಿಲ್ಲದ ಹೊತ್ತಿನಲ್ಲೇ ಈ ಸುದ್ದಿ ಕೊಟ್ಟಿದ್ದು ತಪ್ಪೇನೋ ಎಂದೆನಿಸಿತು. ‘ನಾ ಈ ದಿವ್ಸ ಬರ್ಲೇ ಬಾರ್ದಿತ್ತು...ಬಂದ್ರೂ ಈ ಸುದ್ದಿ ಹೇಳಕಾಗಿತ್ತೇ ಇಲ್ಲೆ. ಈಗ ಅಕ್ಕಯ್ಯ ಹಠಕ್ಕೆ ಬಿದ್ದು, ಅಲ್ಲಿಗೆ ಹೋಗವು ಹೇಳ್ತಾ ಇದ್ದು....ಅವ್ಳ ಹಠದ ಮುಂದೆ ನನ್ನ್ ಮಾತೊಂದೂ ನಡೀತಿಲ್ಲೆ. ಸಿಟ್ಟುಬಂದು ಒಬ್ಳೇ ಹೊರಟ್ರೂ ಆಶ್ವರ್ಯವಿಲ್ಲೆ. ಛೇ....ನಾನೊಂದು ಎಡವಟ್ಟು....ಹೊಂಡಕ್ಕೆ ಬಿದ್ದಿ ಈಗ...ಅನುಭವ್ಸು ದಡ್ಡ...’ ಎಂದೆಲ್ಲಾ ತನ್ನನ್ನು ತಾನೇ ಶಪಿಸಿಕೊಳ್ಳುತ್ತಾ ಸೋತ ಹೆಜ್ಜೆಯೊಂದಿಗೆ ಆತ ಹೊರಜಗುಲಿಗೆ ಬರುವುದಕ್ಕೂ, ಒಳಗಿಂದ ತಯಾರಾಗಿ ಕಮಲ ಹೊರಬರುವುದಕ್ಕೂ ಸಮನಾಯಿತು. ಕೈಗೆ ಸಿಕ್ಕ, ಸಾಧಾರಣವಾದ ಸೀರೆಯೊಂದನ್ನು ಸುತ್ತಿಕೊಂಡು, ಕೂದಲಿಗೆ ಬಾಚಣಿಗೆ ತಾಗಿಸಿದಂತೇ ಮಾಡಿ, ಚಪ್ಪಟೆಯಾದ ಪರ್ಸೊಂದನ್ನು ಕಂಕುಳಲ್ಲಿ ಸಿಕ್ಕಿಸಿ ಅವನಿಗಿಂತ ಮುಂದಾಗಿ ದಣಪೆಯ ಬಳಿ ನಡೆದವಳನ್ನು, ಅರೆಮನಸ್ಸಿನಿಂದ ಹಿಂಬಾಲಿಸಲಷ್ಟೇ ಆಗಿದ್ದು ಚಂದ್ರುವಿಗೆ. ಆದರೂ ಯಾವುದೋ ದೂರದಾಸೆಯಿಂದ ದಾರಿಯುದ್ದಕ್ಕೂ ತನ್ನ ಬುದ್ಧಿಯನ್ನೆಲ್ಲಾ ಖರ್ಚು ಮಾಡಿ ಸಾಕಷ್ಟು ಸಮಾಧಾನಿಸಲು ನೋಡಿದ. ಆದರೆ ಕಮಲ ಮಾತ್ರ ಜಪ್ಪಯ್ಯ ಅಂದರೂ ಹಿಂತಿರುಗಲು ಒಪ್ಪಲೇ ಇಲ್ಲ. ಟಾರು ರಸ್ತೆಗೆ ಸೇರಿದ ತುಸು ಹೊತ್ತಿನಲ್ಲೇ ಬಂದ ಶಿರಸಿಯ ಬಸ್ಸನ್ನು ತಡಮಾಡದೇ ಆಕೆ ಹತ್ತಿಬಿಟ್ಟಾಗ ಮಾತ್ರ ನಿರುಪಾಯನಾಗಿ ತಾನೂ ಏರಿದ. ತುಂಬಿದ ಬಸ್ಸು ಅಲ್ಲಲ್ಲಿ ನಿಲ್ಲುತ್ತಾ, ಜನರನ್ನು ಹೊರಹಾಕುತ್ತಾ, ಒಳತುಂಬುತ್ತಾ, ನಿಧಾನವಾಗಿ ಅವರು ಸೇರಬೇಕಿರುವ ಗಮ್ಯದ ಕಡೆ ಸಾಗುತ್ತಿದ್ದರೆ, ಕಮಲಳ ಮನದ ತುಂಬಾ ಹಳೆಯ ನೆನಪುಗಳ ಜಗ್ಗಾಟ ಶುರುವಾಯಿತು.

-೩-

ಇಪ್ಪತೈದು ವರುಷದ ಶಂಕರ ಭಟ್ಟರನ್ನು ಕೈಹಿಡಿದು ಬೆಳ್ಮನೆಗೆ ಬಂದಾಗ ಕಮಲಳಿಗೆ ಕೇವಲ ಹದಿನೆಂಟು ವರುಷ. ಅತ್ತೆ, ಮಾವ, ಗಂಡ - ಈ ಮೂವರ ಜೊತೆ ನಾಲ್ಕನೆಯವಳಾಗಿ ಸೇರಿ, ಪುಟ್ಟ ಕುಟುಂಬದಲ್ಲಿ ಬೆಚ್ಚಗೆ ಹೊಂದಿಕೊಂಡಿದ್ದ ಅವಳನ್ನು ಕ್ರಮೇಣ ಕಾಡಿದ್ದು ಕುಡಿಯೊಂದರ ಕೊರತೆ. ಮದುವೆಯಾಗಿ ಐದು ವರುಷವಾದರೂ ಬಸಿರಾಗುವ ಲಕ್ಷಣವೂ ಕಾಣದಾದಾಗ ತುಂಬಾ ಕೆಂಗೆಟ್ಟಳು. ಅತ್ತೆ ಹೇಳಿದ ವ್ರತ, ನಿಯಮಗಳನ್ನೆಲ್ಲಾ ನಿಷ್ಠೆಯಿಂದ ಮಾಡಿದ್ದರೂ ಫಲ ಸಿಕ್ಕಿರಲಿಲ್ಲ. ಇದ್ದೊಬ್ಬ ಮಗನಿಗೇ ಹೀಗಾಯಿತಲ್ಲಾ ಎಂಬ ಕೊರಗು ಹಿರಿಯರನ್ನು ಹಿಂಡುತ್ತಿತ್ತು. ಇದೇ ಕೊರಗಲ್ಲೋ ಇಲ್ಲಾ ವಯಸ್ಸಿನ ಪ್ರಭಾವದಿಂದಲೋ ಮುಂದೆ ವರುಷಗಳೊಳಗೇ ತಿಂಗಳಂತರದಲ್ಲಿ ಇಬ್ಬರೂ ಕಣ್ಮುಚ್ಚಿದರು. ಪವಾಡವೋ ಇಲ್ಲಾ ನಿಯತಿಯೋ ಎಂಬಂತೆ ಹಿರಿಯರು ಹೋದ ಎರಡು ತಿಂಗಳಲ್ಲೇ ಕಮಲಳಿಗೆ ಶುಭ ಸೂಚನೆ ಕಂಡಾಗ ಬರಡಾದ ಮನೆ-ಮನದೊಳಗೆಲ್ಲಾ ಹೊನಲು ತುಂಬಿತ್ತು. ಹೆರಿಗೆಯ ಸಮಯದಲ್ಲಿ ಬಹು ಕಷ್ಟವಾಗಿದ್ದರಿಂದ ಮುಂದೆ ಮಕ್ಕಳಾಗಬಾರದೆಂದು ವೈದ್ಯರು ತಾಕೀತು ಮಾಡಿಬಿಟ್ಟಿದ್ದರು. ಬರೋಬ್ಬರಿ ಏಳು ವರುಷಗಳ ತರುವಾಯ ಮಡಿಲು ತುಂಬಿದ ಹಾಲುಬಿಳುಪಿನ ಹೆಣ್ಣುಕೂಸನ್ನು ದಂಪತಿಗಳು ಕಣ್ತುಂಬಿಕೊಂಡು, ಪ್ರೀತಿಯಿಂದ ‘ನಯನ’ ಎಂದು ಹೆಸರಿಟ್ಟರು. ದಿನಗಳು ನಿಮಿಷಗಳಂತೇ ಓಡುತ್ತಾ ನಯನಳ ಆಟ ಪಾಠಗಳಲ್ಲೇ ತಮ್ಮ ಬದುಕಿನ ಬಹುಬಣ್ಣಗಳನ್ನು ಕಾಣುತ್ತಿದ್ದ ದಂಪತಿಗಳಿಗೆ, ಮುದ್ದು ಮಗಳು ಮಾಡಿದ್ದೆಲ್ಲಾ ಚೆನ್ನ. ಅದರಲ್ಲೂ ಭಟ್ಟರಿಗೆ ಮಾತ್ರ ಕಮಲಳಿಗಿಂತ ತುಸು ಹೆಚ್ಚೇ ಎನ್ನುವ ಪ್ರೀತಿ ಮಗಳ ಮೇಲೆ. ಆಕೆ ಏನು ಹೇಳಿದರೂ, ಏನು ಕೇಳಿದರೂ ಎಲ್ಲವುದಕ್ಕೂ ಸೈ. ಇದರಿಂದ ಒಂದು ತರಹದ ಹಠ, ಮೊಂಡುತನ ಬೆಳೆಸಿಕೊಳ್ಳತೊಡಗಿದ ಮಗಳ ವರ್ತನೆಯಿಂದ ಮೊದಲು ಎಚ್ಚೆತ್ತು ಕೊಂಡಿದ್ದು ತಾಯಿಯೇ. ಒಮ್ಮೊಮ್ಮೆ ತುಸು ಅತಿ ಎನಿಸಿದಾಗ ಪತಿಯನ್ನು ಗದರಿಸಿದರೂ ತಲೆಗೆ ಹಚ್ಚಿಕೊಳ್ಳದ ಪತಿಯ ನಿರ್ಲಕ್ಷತನ ನಯನಳ ಹಠಕ್ಕೆ ಮತ್ತಷ್ಟು ಬಲ ನೀಡತೊಡಗಿತು. ಹೈಸ್ಕೂಲ್ ವಿದ್ಯಾಭ್ಯಾಸವೇನೋ ಮನೆಯ ಹತ್ತಿರದ ಶಾಲೆಯಲ್ಲೇ ನಿರಾತಂಕವಾಗಿ ನಡೆಯಿತು. ಓದಿನಲ್ಲಿ ತಕ್ಕ ಮಟ್ಟಿಗೆ ಚುರುಕಿದ್ದ ಅವಳನ್ನು ಮುಂದೆ ಡಾಕ್ಟರ್ ಮಾಡುವ ಹಂಬಲ ಭಟ್ಟರದು. ಅದಕ್ಕೆಂದೇ ಶಿರಸಿಯ ಸರಕಾರಿ ಕಾಲೇಜಿಗೆ ಸೇರಿಸಿದೇ ಪ್ರೈವೇಟ್ ಕಾಲೇಜಿಗೆ ಹಾಕಿದ್ದಾಯಿತು. ಪಿ.ಯು.ಸಿಯನ್ನು ಶಿರಸಿಯಲ್ಲಿದ್ದ ಭಟ್ಟರ ದಾಯವಾದಿ ತಮ್ಮ ಮೋಹನನ ಮನೆಯಲ್ಲೇ ಮುಗಿಸಿದ ನಯನ ಅಂತಿಮ ವರುಷದಲ್ಲಿ ತುಂಬಾ ಕಡಿಮೆ ಮಾರ್ಕ್ಸ್ ಪಡೆದಳು. ಭಟ್ಟರೇನೋ ದುಡ್ಡು ದಂಡಮಾಡಿ ಮಗಳಿಗೆ ಡಾಕ್ಟರಿಕೆ ಕಲಿಸಲು ಮುಂದಾಗಿದ್ದರೂ, ನಯನಳೇ ಉತ್ಸಾಹ ತೋರದಿದ್ದಾಗ ಡಿಗ್ರಿಗೆ ಸೇರಿಸಿದರು. ಆದರೆ ತಕರಾರು ಬಂದದ್ದೇ ಆವಾಗ. "ನಾನು ಇನ್ನು ಮೋಹನ್ ಚಿಕ್ಕಯ್ಯನ ಮನೆಯಲ್ಲಿ ಇದ್ಕಂಡು ಹೋಗ್ತ್ನಿಲ್ಲೆ. ನಂಗೆ ಅಲ್ಲಿ ಸರಿ ಬತ್ತಿಲ್ಲೆ... ಪಾತಿಚಿಕ್ಕಮ್ಮ ಕಿರಿಕ್ ಮಾಡ್ತು. ಟ್ಯೂಷನ್ ಇದ್ದು ಲೇಟಾಗ್ತು ಅಂದ್ರೆ ಹತ್ತು ಪ್ರಶ್ನೆ ಮಾಡ್ತು.. ನಾನು ನನ್ನ ಫ್ರೆಂಡ್ ರೂಮ್‌ನಲ್ಲಿರ್ತಿ..." ಎಂದು ಎರಡು ದಿನ ಸತತವಾಗಿ ಗೋಗರೆದು, ಮುದ್ದು ಮಾಡಿ, ಅಂಗಲಾಚಿದಾಗ ಭಟ್ಟರು ಅರೆಮನಸಿನಿಂದ ಒಪ್ಪಿಗೆ ಇತ್ತರೂ ಕಮಲ ಮಾತ್ರ ಗಲಾಟೆ ಮಾಡಿದ್ದಳು. "ಹೆಣ್ಣು ಕೂಸು... ವಯಸ್ಸಿಗೆ ಬಂಜು. ಸಂಬಂಧಿಕರ ಮನೆಲಿದ್ರೆ ನಮ್ಗೂ ಸಮಾಧಾನ. ಆನು ಪಾರ್ವತಿಯನ್ನೇ ಕೇಳಿದ್ದಿ. ಇದೇ ಒಂದೆರ್ಡುಸಲ ಸುಳ್ಳು ಹೇಳಿ ಪಿಕ್ಚರಿಗೆ ಹೋಗಿತ್ತಡ. ನಾನೇನಾದ್ರೂ ಹೇಳಿದ್ರೆ ನೀವು ನನ್ನೇ ಬೈತ್ರಿ.. ಹುಡುಗು ಬುದ್ಧಿ ಸುಮ್ನಿರು ಹೇಳಿ... ಇದೆಲ್ಲಾ ಸರಿ ಬತ್ತಿಲ್ಲೆ...ಬ್ಯಾಡ ನನ್ಮಾತೊಂದ್ಸಲ ಕೇಳಿ....." ಎಂದು ಪರಿ ಪರಿಯಾಗಿ ತಿಳಿಹೇಳಿದ್ದರೂ ಭಟ್ಟರು ಮಗಳ ಮೋಹಕ್ಕೆ ಕಟ್ಟು ಬಿದ್ದು ಸುಮ್ಮನಾಗಿದ್ದರು. "ನಾವು ನಮ್ಮ ಮಗ್ಳನ್ನ ನಂಬ್ದೇ ಇನ್ಯಾರು ನಂಬ್ತ? ಅದು ನನ್ನ ಮಗ್ಳು. ನನ್ನ ವಿಶ್ವಾಸಕ್ಕೆ ಧಕ್ಕೆ ತತ್ತಿಲ್ಲೆ ಹೆದ್ರಡ. ರಾಶಿ ನಾವು ಒತ್ತಾಯ ಮಾಡ್ಲಾಗ. ಇಷ್ಟಕ್ಕೂ ಶಿರಸಿಲೇ ಇರ್ತಲ್ಲಿ....ಗೊತ್ತಾಗ್ತಾ ಇರ್ತು ವಿಷ್ಯ ಎಲ್ಲಾ... ತಲೆಗೆ ಹಚ್ಕಳಡ" ಎಂದು ತೆಪ್ಪಗಾಗಿಸಿದ್ದರು. ಇನ್ನೆರಡು ವರುಷ ತಾನೇ? ಆಮೇಲೆ ಸೂಕ್ತ ಗಂಡು ಹುಡುಕಿ, ಕೊನೆಯ ವರ್ಷ ಮುಗಿದದ್ದೇ ಮದುವೆ ಮಾಡಿದರೆ ನಿಶ್ಚಿಂತೆ ಎಂದು ಎಣಿಸಿ ಆಕೆಯೂ ಸುಮ್ಮನಾಗಿದ್ದೇ ಮುಳುವಾಯಿತು. ಮಗಳು ಡಿಗ್ರಿಯ ಎರಡನೇ ವರುಷದಲ್ಲಿದ್ದಾಗ ಕೆಳಗಿನ ಮನೆಯ ವಿಶ್ವ ತಂದ ಆ ಘೋರ ಸುದ್ದಿ ಇಬ್ಬರಿಗೂ ತಡೆಯಲಾಗದ ಹೊಡೆತವನ್ನು ನೀಡಿತ್ತು.

"ಭಟ್ರೇ...ನಿಮ್ಮ ಮಗ್ಳ ಬಗ್ಗೆ ಎಂತೋ ಸುದ್ದಿ ಸಿಕ್ತಲಿ.. ಕೇಳಿ ನಂಗಂತೂ ನಂಬಲೇ ಆಜಿಲ್ಲೆ.. ಎಲ್ಲ ಸುಳ್ಳಾದಿಕ್ಕು ಬಿಡಿ.. ಆದ್ರೂ ನೀವು ಒಂದ್ಸಲ ವಿಚಾರ್ಸದು ಒಳ್ಳೇದು.." ಎಂದು ವಿಶ್ವ ಹೇಳಿದಾಗ ನಖಶಿಖಾ ಅಂತ ಉರಿದಿದ್ದರು ಭಟ್ಟರು. "ಹಾಳಾದ್ ಜನ ಇಲಿ ಹೋತು ಅಂದ್ರೆ ಹುಲಿ ಹೋತು ಹೇಳ್ತೋ... ಹೊಟ್ಟೆ ಕಿಚ್ಚಿನ ಪಾಪಿಷ್ಟ್ರು...." ಎಂದೆಲ್ಲಾ ಕೂಗಾಡಿದ್ದರು. ಆದರೆ ಅದಾದ ಮರುದಿನವೇ ಮೋಹನ ತಂದ ಸುದ್ದಿ ದಂಪತಿಗಳಿಬ್ಬರನ್ನೂ ಅರೆಜೀವಮಾಡಿಬಿಟ್ಟಿತು. ನಮ್ಮ ಮುದ್ದು ಮಗಳು ನಾವಿಟ್ಟಿದ್ದ ವಿಶ್ವಾಸಕ್ಕೇ ಕೊಡಲಿಯಿಟ್ಟು, ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿರುವ ಯುವಕನೊಂದಿಗೆ ಓಡಾಡುತ್ತಿರುವುದು, ಅದೂ ಆ ಹುಡುಗನ ಹೆಸರು "ಅನ್ವರ್ ಖಾನ್" ಎಂದೂ ತಿಳಿದ ಮೇಲೆ ಕಮಲ ತಲೆ ತಿರುಗಿ ಬಿದ್ದುಬಿಟ್ಟಳು. ಇನ್ನು ಭಟ್ಟರಂತೂ ಆ ರಾತ್ರಿಯನ್ನು ಹೇಗೆ ಕಳೆದರೆಂದು ಅವರಿಗೂ ತಿಳಿಯದು. ಮರುದಿನ ಮೋಹನನ್ನೇ ಕಳುಹಿಸಿ ಹೇಗೋ ಉಪಾಯವಾಗಿ ನಯನಳನ್ನು ಮನೆಗೆ ಕರೆಸಿಕೊಂಡವರೇ ಮೊದಲ ಬಾರಿ ಮಗಳ ಮೇಲೆ ಕೈ ಮಾಡಿದ್ದರು. "ನನ್ನ ಮಾನ ಮೂರುಕಾಸಿಗೆ ಹರಾಜ್‌ಹಾಕ್ದೆ ಮನೆಹಾಳಿ.....ನಿನ್ನ ಆಯಿ ಅಂತು, ತಲೆ ಮೇಲೆ ಕೂರ್ಸಕಳಡಿ ಹೇಳಿ.. ನಾನೇ ತಪ್ಪು ಮಾಡ್ದೆ.....ಇವತ್ತು ನಿನ್ನಿಂದ ಊರಲ್ಲಿ ತಲೆ ಎತ್ತಲೇ ಆಗ್ತಾ ಇಲ್ಲೆ....ಎಲ್ಲಾ ಬಿಟ್ಟು ಆ ಹುಡ್ಗನ್ನ ಅದೂ...." ಎಂದು ಮುಂದೆ ಒಂದಕ್ಷರ ನುಡಿಯಲಾಗದೇ ಅಲ್ಲೇ ಕುಸಿದ ಅವರನ್ನು ಮೋಹನ ಹಾಗೂ ಕಮಲ ಸೇರಿ ಸುಧಾರಿಸಿದ್ದರು. ನಯನ ಮಾತ್ರ ಅಪ್ಪನ ಹೊಡೆತಕ್ಕೆ, ಕೂಗಾಟಕ್ಕೆ, ಅಮ್ಮನ ಬೈಗುಳಗಳಿಗೆ ಕಲ್ಲಾಗಿಹೋಗಿದ್ದಳು. ಅವರನ್ನು ಅವರ ಪಾಡಿಗೆ ಬಿಟ್ಟು ತನ್ನ ಕೋಣೆಯನ್ನು ಸೇರಿದ್ದಳು. ಮಗಳ ಈ ವರ್ತನೆಯೇ ಅವರಿಬ್ಬರನ್ನು ಮತ್ತೂ ಹಿಂಸಿಸಿದ್ದು. ಕಮಲಳಿಗಂತೂ ಮಗಳ ಚಿಂತೆಗಿಂತಲೂ ಗಂಡನ ಚಿಂತೆಯೇ ಹೆಚ್ಚಾಗಿ, "ಇವ್ರಿಗೆಲ್ಲಾದ್ರೂ ಹೆಚ್ಚು ಕಮ್ಮಿಯಾದ್ರೆ ನಾನೂ ಕೆರೆ ಬಾವಿ ನೋಡ್ಕತ್ತಿ.. ಅಮೇಲೆ ನೀನು ನಿಂಗೆ ಇಷ್ಟ ಬಂದಾಂಗೆ ಮಾಡು... ಅಲ್ಲಿವರೆಗಾದ್ರೂ ಮನೆಯಲ್ಲಿ ತೆಪ್ಪಗೆ ಬಿದ್ದಿರು ಮಾರಾಯ್ತಿ..." ಎಂದು ಮಗಳಲ್ಲಿ ಕಣ್ಣೀರಿಟ್ಟು ಬೇಡಿಕೊಂಡಿದ್ದರು. ಆ ದಿನದಿಂದಲೇ ನಯನಳ ಓಡಾಟ, ಓದಾಟ, ಕೊಂಡಾಟಕ್ಕೆಲ್ಲಾ ಸಂಪೂರ್ಣ ತಿಲಾಂಜಲಿಯಿಟ್ಟ ಭಟ್ಟರು ಅಕ್ಷರಶಃ ಮನೆಯೊಳಗೆ ಬಂಧಿಯಾಗಿಸಿದರು. ಸದಾಕಾಲ ಕಣ್ಣೀರಿಡುವ ಅಮ್ಮನ ಗೋಳಿಗೆ, ಅಪ್ಪನ ನೋವಿಗೆ ನಯನಳ ಕಣ್ಗಳು ಮಾತ್ರ ಹೊಸ ಪ್ರೀತಿಯ ನಲಿವಿನಿಂದ ಕುರುಡಾಗಿದ್ದವು.

ಆ ದಿನ ಇನ್ನೂ ನೆನಪಿದೆ. ಪ್ರತಿ ದಿನ ಎಂಟಕ್ಕೆಲ್ಲಾ ಎದ್ದು ಮೆತ್ತಿಯಿಂದ ಕೆಳಗಿಳಿಯುತ್ತಿದ್ದ ಮಗಳು ಇನ್ನೂ ಬಾರದಿದ್ದುದನ್ನು ಕಂಡು ಗುಮಾನಿಯಾಗಿ ಮೇಲೇರಿ ನೋಡಲು ಕಮಲಳನ್ನು ಸ್ವಾಗತಿಸಿದ್ದು ಹೊದಿಕೆಯ ಮೇಲಿದ್ದ ಅವಳ ಕಾಗದ. "ಅಪ್ಪಯ್ಯ, ಆಯಿ, ನಾನು ಅನ್ವರ್ ಜೊತೆ ದೂರ ಹೋಗ್ತಾ ಇದ್ದಿ. ನಿಂಗ್ಳಿಂದ ದೂರವಾಗಿರ್ತಿ. ನಿಂಗಕಿಗೆ ಏನೂ ತೊಂದ್ರೆ ಕೋಡ್ತ್ನಿಲ್ಲೆ. ನಂಗವು ಈ ಊರಿಂದಲೇ ದೂರ ಹೋಗ್ತಾ ಇದ್ಯೋ.....ಎಲ್ಲಿದ್ದೋ ಹೇಳಿ ಹುಡ್ಕದು ಬೇಡ. ಅವ್ನ ಮದ್ವೆಯಾಗಿ ನಾನು ಸುಖವಾಗಿರ್ತಿ ಹೇಳು ನಂಬ್ಕೆ ನಂಗಿದ್ದು. ಆಯಿ... ಸುಮ್ನೇ ಪೋಲೀಸು, ಕಂಪ್ಲೇಟು ಎಲ್ಲಾ ಗಲಾಟೆ ಬೇಡ ಹೇಳು ಅಪ್ಪಯ್ಯಂಗೆ. ನಂಗೂ ಈಗ ೨೧ ವರ್ಷ ಆಜು. ನನ್ನಿಂದಾದ ನೋವಿಗೆ ಕ್ಷಮೆ ಇರ್ಲಿ..." ಎಂಬ ನಾಲ್ಕು ಸಾಲಿನ ಪತ್ರದಿಂದ ಶಂಕರ ದಂಪತಿಗಳ ಬದುಕು ಹೊಸ ತಿರುವನ್ನು ಪಡೆಯಿತು. "ನಿಂಗವು ಸುಮ್ನಿಪ್ಪದು ಸರಿಯಲ್ಲ...ಕಂಪ್ಲೇಟು ಕೊಟ್ಟು ಅವ್ನ ಒಳಹಾಕಿಸಿ, ನಯನಾನ ಎಳ್ಕತನ್ನಿ.... ಅವಂಗೆ ಕುಮ್ಮಕ್ಕು ಯಾರು ಕೊಡ್ತಿದ್ದೊ ಗೊತ್ತಿದ್ದು... ತಕ್ಕ ಶಾಸ್ತಿ ಮಾಡನ...ಗಲಾಟೆ ಮಾಡ್ದೇ ನ್ಯಾಯ ಸಿಗದಿಲ್ಲೆ...."ಎಂದೆಲ್ಲಾ ತಲೆಗೊಂದರಂತೇ ಸಲಹೆಗಳನ್ನು ನೀಡುತ್ತಾ ಊರವರು ಬಹು ಒತ್ತಾಯಿಸಿದರೂ ಭಟ್ಟರು ಉಭಶುಭ ಅನ್ನಲಿಲ್ಲ. "ನಂಗ್ಳ ಕೂಸೇ ಸರಿ ಇಲ್ದಿದ್ಮೇಲೆ ಯಾರಿಗೇನು ಮಾಡಿ ಉಪಯೋಗ....ಇದೇ ಓಡಿ ಹೋದ್ಮೇಲೆ ಅಂವಂಗೆಂತ ಹೇಳದು? ಇದ್ನ ಒತ್ತಾಯದಲ್ಲಿ ಎಳ್ಕ ಬಂದ್ರೂ, ಮುಂದೆ ಸರಿ ಇರ್ತು ಅನ್ನೋ ಖಾತ್ರಿ ಎಲ್ಲಿದ್ದು? ಇನ್ನು ಅದ್ರ ಬಗ್ಗೆ ಎಂತದೂ ಮಾತುಕತೆ ಬೇಡ. ನಾನೂ ಕಮಲಿ ಅದು ಹುಟ್ಟೋ ಮೊದ್ಲು ಹೇಂಗಿದ್ದಿದ್ವೋ ಹಾಂಗೇ ಇರಲೆ ನೊಡ್ತ್ಯ. ನಮ್ಗೆ ಮಕ್ಕಳೇ ಇಲ್ಲೆ ಹೇಳಿ ತೆಳ್ಕತ್ಯ... ನಂಗಕಿಗೂ ಅದ್ಕೂ ಋಣ ಇಷ್ಟೇ ಇತ್ತು.. ಅದು ಇಂದು ಖಡ್ದು ಹೋತು..." ಎಂದು ಎಲ್ಲರ ಮುಂದೆ ಘೋಷಿಸಿ, ಅಂಗಳದಲ್ಲಿದ್ದ ಬಾವಿಯಿಂದ ನಾಲ್ಕು ತಂಬಿಗೆ ನೀರು ಸುರಿದುಕೊಂಡು ಒಳ ಬಂದುಬಿಟ್ಟರು. ಅಂದಿನಿಂದ ಅವರಿಬ್ಬರೂ ಬದುಕಲೇಬೇಕೆಂಬ ಹಠಕ್ಕೆ ಬಿದ್ದವರಂತೇ ಜೀವಿಸುತ್ತಿದ್ದಾರಷ್ಟೇ! ಊರೊಳಗಿನ ಯಾವ ಕಾರ್ಯಕ್ಕೂ ಹೋಗದೇ, ತಾವೂ ಯಾರನ್ನೂ ಹಚ್ಚಿಕೊಳ್ಳದೇ ಏನನ್ನೋ ಬೇಯಿಸಿಕೊಂಡು ತಿನ್ನುತ್ತಾ ಇಲ್ಲದ ಕೆಲಸಗಳನ್ನು ಹುಡುಕಿ ಮಾಡುತ್ತಾ ರಾತ್ರಿ ಬೆಳಗನ್ನು ಹಾಯಿಸುತ್ತಿದ್ದಾರೆ. ಒಮ್ಮೊಮ್ಮೆ ಪತಿ ಒಳಗಿನ ವೇದನೆಯಿಂದ ರಾತ್ರಿಯಿಡೀ ಒದ್ದಾಡುವುದನ್ನು ಕಂಡಾಗ ಕಮಲಳಿಗೆ ಮಗಳನ್ನು ಶಪಿಸಬೇಕೆಂದೆನಿಸಿದ್ದೂ ಇದೆ. ಆದರೆ ತತ್‌ಕ್ಷಣ ತಾನು ಪ್ರತಿದಿನ ಹೇಳುವ ಶಂಕರಾಚಾರ್ಯರ ಸ್ತೋತ್ರ ವಿವೇಕ ಹೇಳುತ್ತಿತ್ತು. "ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ..." ಎಂದು ಹೇಳಿದ ನಾಲಗೆಯಿಂದಲೇ ಹೇಗೆ ಶಪಿಸಿಯಾಳು ಹೆತ್ತ ಮಗಳನ್ನ! ಊರೊಳಗೇ ಅಜ್ಞಾತವಾಸಿಗಳಂತಿದ್ದ ಅವರನ್ನು ಚಂದ್ರಶೇಖರ ಮಾತ್ರ ಒಂಟಿಯಾಗಿರಲು ಬಿಟ್ಟಿರಲಿಲ್ಲ. ತಮ್ಮ ಕಷ್ಟಕಾಲದಲ್ಲಿ ಬೆಂಗಾವಲಾಗಿ, ನಾಲ್ಕು ಸಮಾಧಾನದ ಮಾತಾಡಿ, ತನ್ನ ಮನೆಯನ್ನೂ ನಿರ್ಲಕ್ಷಿಸಿ ತಿಂಗಳುಗಳ ಕಾಲ ಜೊತೆಗಿದ್ದ ಕಮಲಳ ಚಿಕ್ಕಪ್ಪನ ಮಗ ಚಂದ್ರಶೇಖರನ ಮೇಲೆ ಮಾತ್ರ ಭಟ್ಟರಿಗೂ ವಿಶೇಷ ಅಭಿಮಾನ. ಹಾಗಾಗಿ ಆತ ಮಾತ್ರ ಆಗಾಗ ಬಂದು ಹೋಗಿ ಮಾಡುತ್ತಿದ್ದ. ಕೊನೆ ಕೊಯ್ಲಿನ ಗಲಾಟೆಯಿಂದಾಗಿ ಅವನಿಗೂ ಇತ್ತೀಚಿಗೆ ಈ ಕಡೆ ಬರಲಾಗಿರಲಿಲ್ಲ. ಆದರೆ ನಿನ್ನೆ ಬಳೆಪೇಟೆಯಲ್ಲಿ ನಯನಳನ್ನು ಕಂಡ ಮೇಲೆ ಮಾತ್ರ ಸುಮ್ಮನಿರಲಾಗದೇ ಓಡಿಬಂದವ, ಮುಂದಿನ ಪರಿಣಾಮದ ವಿವೇಚನೆ ಮಾಡದೇ ಎಲ್ಲವನ್ನೂ ಅಕ್ಕನಿಗೆ ಹೇಳಿಯೂಬಿಟ್ಟ!

-೪-

ಶಿರಸಿ ಬಸ್ಟಾಂಡಿನಿಂದ ಪೇಟೆಯೊಳಗೆ ಹೋಗುವಾಗ ಇದ್ದಕ್ಕಿದ್ದಂತೇ ಕಮಲಳ ಕಾಲ್ಗಳು ನಡುಗತೊಡಗಿದವು. ಆದರೂ ಯಾವುದೋ ಒಂದು ಅದೃಶ್ಯ ಶಕ್ತಿ ಮಾತ್ರ ಆಕೆಯನ್ನು ಮುನ್ನೆಡೆಸತೊಡಗಿತು. "ಆಯಿ ನಾನು ಓದಿ ನೌಕರಿ ಮಾಡ್ತೆ.. ನಿಂಗೆ ಸೀರೆ ತತ್ತೆ..."ಎಂದು ಪುಟ್ಟ ನಯನ ಎದೆಯುಬ್ಬಿಸಿ ಅಂದೊಮ್ಮೆ ಹೇಳಿದಾಗ ಕಮಲಳ ಮನಸು ತುಂಬಿಬಂದಿತ್ತು. ಈ ಕ್ಷಣ ಅದೇಕೋ ನೆನಪಾಯಿತವಳಿಗೆ. ಇಂದು ಮಗಳ ಅಂಗಡಿಯ ಮುಂದೆ ಅವಳಿಗಾಗಿ ಹುಡುಕುವ ಕರ್ಮ ತನ್ನದಾಯಿತಲ್ಲಾ.. ಎಂದು ಒಳಗೊಳಗೇ ಬೇಯತೊಡಗಿತು ಮನಸ್ಸು. "ಚಂದ್ರು ಅದ್ರ ಅಂಗ್ಡಿ ಯಾವ್ದೋ..? ಹೆಸ್ರೆಂತು ಹೇಳು..ನಾ ಹುಡ್ಕಿ ನೋಡ್ತೆ...ನೀ ಏನೂ ತ್ರಾಸ್ ತಗಳಡ. ನಿಂಗೂ ನೂರಾಯೆಂಟು ತಾಪತ್ರಯ ಇದ್ದಿಕ್ಕು ಮನೆಕಡೆ. ನೀ ಇನ್ನು ಹೋರ್ಡು....ಇಷ್ಟು ದೂರ ಬಂದ್ಯಲಿ ಅಷ್ಟೇ ಸಾಕು.."ಎನ್ನಲು ಚಂದ್ರಶೇಖರ ಮಾತ್ರ ಸುತಾರಾಂ ಒಪ್ಪಲಿಲ್ಲ. ಆ ಒಂದು ಕ್ಷಣದಲ್ಲಿ ಕಮಲಳಿಗೆ ಯಾರೂ ತನ್ನೊಂದಿಗಿರುವ ಇಚ್ಛೆಯಾಗಲಿಲ್ಲ. ಕಳೆದು ಹೋದ ಮಗಳನ್ನು ಹುಡುಕಿ, ಒಬ್ಬಳೇ ಎದುರಿಸುವ ಹೆಬ್ಬು ಧೈರ್ಯ ಅವಳಲ್ಲಿ ಮನೆಮಾಡಿತ್ತು. "ಅಕ್ಕಯ್ಯ ನೀ ಎಂತ ಹೇಳಿದ್ರೂ ಕೇಳ್ತೆ, ಆದ್ರೆ ಇದೊಂದನ್ನ ನಾ ಕೇಳದಿಲ್ಲೆ. ಎಂತ ತಲೆ ಹೋಪ ಕಾರ್ಯನೂ ಇಲ್ಲೆ ಮನೇಲಿ. ಅಂಗ್ಡಿ ಹೆಸ್ರು ಅದೆಂತೋ ಇತ್ತಪ್ಪ....ಹಾಂ.....‘ಎ.ಕೆ. ಬ್ಯಾಂಗಲ್ ಸ್ಟೋರ್’ ಹೇಳಿ...ಅವ್ನ ಹೆಸ್ರಲ್ಲೇ ಇದ್ದು ಕಾಣ್ತು....." ಎಂದು ಮೆಲುದನಿಯಲ್ಲಿ ಹೇಳಿದಾಗಲೇ ಅವಳಿಗೆ ಆ ಹುಡುಗನ ಹೆಸರು ನೆನಪಾಗಿದ್ದು. ಚಂದ್ರು ತೋರಿದ ಮೂಲೆಗೆ ತಿರುಗಿ ಎಡಬದಿಗೆ ನೋಡುತ್ತಾ ಹೋದಂತೇ ದಪ್ಪಗೆ ಕೆಂಪಕ್ಷರದಲ್ಲಿ ಬರೆದಿದ್ದ ಅಂಗಡಿಯ ಹೆಸರು ಕಣ್ಣಿಗೆ ರಾಚಲು ಅಧೀರಳಾದಳು. ಪುಟ್ಟ ಅಂಗಡಿಯ ತುಂಬಾ ಗ್ರಾಹಕರು ತುಂಬಿದ್ದರು. ಆ ಗುಂಪೊಳಗೆ ತನ್ನ ನಯನಳನ್ನು ಹುಡುಕಿ ಅವಳ ಕಣ್ಗಳು ಸೋತವು. ಮುಂದಡಿಯಿಡಲು ಏನೋ ಹಿಂಜರಿತ. ಚಂದ್ರುವಿನ ಕೈಕಾಲುಗಳು ಆಗಲೇ ಸಂಪೂರ್ಣ ಸೋಲತೊಡಗಿದ್ದವು. ಗಂಟಲಾರಿ ಬವಳಿ ಬಂದಂತಾಗುತ್ತಿತ್ತು. ‘ಆದಷ್ಟು ಬೇಗ ಅಕ್ಕಯ್ಯನ ಇಲ್ಲಿಂದ್ ಕರ್ಕಂಡು ಹೋಗವು...ನಾ ನಿನ್ನೆ ಕಂಡ ದೃಶ್ಯ ಏನಾದ್ರೂ ಇದ್ರ ಕಣ್ಣಿಗೆ ಬಿದ್ರೆ, ಮುಗ್ದೇ ಹೋತು ಕತೆ....ಕೂಸು ಅಂಗ್ಡಿಯಲ್ಲಿ ಇಲ್ದೆ ಹೋದ್ರೆ ಸಾಕು ದೇವ್ರೇ.." ಎಂದು ಮೊರೆಯಿಡತೊಡಗಿದ. ತುಸು ಹೊತ್ತಿನಲ್ಲೇ ತುಂಬಿದ್ದ ಅಂಗಡಿ ಸ್ವಲ್ಪ ಖಾಲಿಯಾಗಲು, ಕೌಂಟರಿನಲ್ಲಿ ಕುಳಿತು ಹಣ ಎಣಿಸುತ್ತಿದ್ದ ಯುವತಿಯೊಬ್ಬಳು ಅಚಾನಕ್ಕಾಗಿ ತಲೆಯೆತ್ತಿದಳು. ಒಮ್ಮೆಲೇ ನಾಲ್ಕು ಕಣ್ಗಳು ಒಗ್ಗೂಡಲು ಇಬ್ಬರ ಮುಖವೂ ಒಬ್ಬರಿಗೊಬ್ಬರು ಕಾಣದಂತೇ ಮಂಜಾಗತೊಡಗಿತು.

"ಇಶ್ಶೀ.. ಇದೆಂಥದೇ ಕೂಸೇ, ಉದ್ದ ಕೈನ ಚೂಡಿದಾರ ಹಾಕ್ದೇ ಇಷ್ಟು ಗಿಡ್ಡ ಕೈದ್ನ ಹಾಕ್ಕಂಜೆ... ಅದೂ ಅಲ್ದೇ ಬೆನ್ನೆಲ್ಲಾ ಎಷ್ಟು ಕಾಣಸ್ತು ಈ ಅಂಗೀಲಿ.. ಬೇರೇದ್ನ ಹಾಯ್ಕೋ....ಎಂತೆಂಥ ಮಳ್ಳ್ ಪ್ಯಾಶನ್ ಬಂಜೋ ಈಗ.." ಎಂದೊಮ್ಮೆ, ಆಗಷ್ಟೇ ಪೇಟೆಯಿಂದ ಬಂದಿದ್ದ ಮಗಳನ್ನು ಗದರಿದ್ದಳು ಕಮಲ. "ಹೋಗೇ ಆಯಿ..ನಿಂಗೆಂತದೂ ಗೊತ್ತಾಗ್ತಿಲ್ಲೆ... ಈಗ ಇದೇ ಪ್ಯಾಶನ್. ಉದ್ದ ಕೈ ಹೊಲಿಸ್ಕಂಡ್ರೆ ಸೆಕೆಯಲ್ಲಿ ಬೆಂದೇ ಹೋಗ್ತಿ ನಾನು....ನೀ ಸುಮ್ನಿರು.." ಎಂದು ಬಾಯಿ ಮುಚ್ಚಿಸಿದ್ದಳು. ಈಗ ನೋಡಿದರೆ....ತಲೆಯ ಮೇಲಿನಿಂದ ಪಾದದವರೆಗೂ ಮುಚ್ಚಿರುವ ಒಂದೇ ಕಪ್ಪಂಗಿ ಕೇವಲ ಕಣ್ಣು, ಮೂಗು, ಬಾಯಿಯನ್ನು ಮಾತ್ರ ಹೊರ ಕಾಣಿಸುತ್ತಿತ್ತು. ತುಟಿಯಮೇಲಿದ್ದ ಅದೇ ಕಂದುಬಣ್ಣದ ದೊಡ್ಡ ಮಚ್ಚೆ ಮಾತ್ರ ನಯನಳ ಅಸ್ತಿತ್ವವದ ಗುರುತಾಗಿತ್ತು. ಆದರೆ ಮೇಲಿನಿಂದ ಕೆಳಗೆ ನೋಡಿದರೆ ಏನೊಂದೂ ವ್ಯತ್ಯಾಸ ತೋರದಂತೇ ಮುಚ್ಚಿದ್ದ ಬುರ್ಖಾ ಕೂಡ ಉಬ್ಬಿರುವ ಹೊಟ್ಟೆಯನ್ನು ಅಡಗಿಸಲು ಅಸಮರ್ಥವಾಗಿತ್ತು. ಬೋಳು ಹಣೆಯ, ಬಿಳಿಪೇರಿದ್ದ ಮೊಗದ ಮಗಳನ್ನು ಹೆತ್ತ ಕರಳು ಗುರುತಿಸಿದರೆ ಒಂದಡಿ ದೂರದಲ್ಲಿದ್ದ ಹೆತ್ತತಾಯಿಯನ್ನು ಗುರುತುಹಿಡಿಯಲು ಕ್ಷಣ ತಡವಾಗಲಿಲ್ಲ ನಯನಳಿಗೆ. ಅದೇನನ್ನಿಸಿತೋ ಏನೋ, ಹಿಂದೆ ಸರಿಸಿದ್ದ ತೆಳು ಪರದೆಯನ್ನು ಥಟ್ಟನೆ ಎಳೆದ ನಯನ, ಆವರೆಗೂ ಕಾಣುತ್ತಿದ್ದ ತನ್ನ ಮೊಗವನ್ನೂ ಅಡಗಿಸಿಕೊಳ್ಳಲು, ಮೊದಲೇ ಮಂಜಾಗಿದ್ದ ಕಣ್ಗಳಿಗೆ ಮತ್ತೂ ಮಬ್ಬಾಯಿತು ಮಗಳ ಮುಖ. ಆದರೂ ಮನಸು ಕೇಳದೇ, ತನ್ನನ್ನು ಎಳೆಯುತ್ತಿದ್ದ ತಮ್ಮನ ಕೈಗಳನ್ನೂ ದೂಡಿ ಮುಂದಡಿಯಿಟ್ಟ ಕಮಲ, ಅವಳ ಹೆಸರೆತ್ತಿ ಕೂಗಬೇಕೆನ್ನುವಾಗಲೇ ಒಳಗಿಂದ "ನಸ್ರೀನ್...ಜರಾ ಅಂದರ್ ಆವೋ... ಇನ್ಕೋ ಕುಚ್ ಚಾಹಿಯೇ ದೇಖೊ..." ಎನ್ನುವ ಗಂಡಸಿನ ಧ್ವನಿಗೆ ತಿರುಗಿದ ಮಗಳನ್ನು ಕಂಡು ಪೂರ್ತಿ ಕತ್ತಲಾವರಿಸಿದಂತಾಗಿ ಅಲ್ಲೇ ಕುಸಿದು ಬಿದ್ದಳು.

[೨೦೧೦ರ ‘ಅಕ್ಕ’ ಕಥಾಸ್ಪರ್ಧೆಯಲ್ಲಿ ಆಯ್ಕೆಯಾಗಿ, ಆಯ್ಕೆಗಾರರಲ್ಲೋರ್ವರಾಗಿದ್ದ ವೀಣಾ ಶಾಂತೇಶ್ವರ್ ಅವರ ಮೆಚ್ಚುಗೆಗೆ ಪಾತ್ರವಾದ ಹಾಗೂ "ದೀಪ ತೋರಿದೆಡೆಗೆ" ಕಥಾಸಂಕಲದಲ್ಲಿ ಸೇರ್ಪಟ್ಟ ಕಥೆ]


-ತೇಜಸ್ವಿನಿ ಹೆಗಡೆ.