ನಾನು
ಶಾಲೆಗೆ ಹೋಗುವ ಸಮಯದಲ್ಲಿ ಆಗಷ್ಟೇ ದಕ್ಷಿಣ ಕನ್ನಡದಲ್ಲಿ ಇಂಗ್ಲೀಶ್ ಮೀಡಿಯಮ್ ಗಾಳಿ
ಬೀಸತೊಡಗಿತ್ತು. ಹೈಸ್ಕೂಲಿಗೆ ಬರುವಷ್ಟರಲ್ಲಿ ತುಸು ಬಲಪಡೆದುಕೊಂಡೇ ಬೀಸತೊಡಗಿತ್ತು. ಆದರೂ
ಬಹುತೇಕ ನನ್ನ ಓರಗೆಯವರು ಹತ್ತನೆಯ ತರಗತಿಯವರೆಗೂ ಓದಿದ್ದು ಕನ್ನಡ ಮೀಡಿಯಮ್ಮಲ್ಲೇ. ಪ್ರಥಮ ಭಾಷೆ
ಕನ್ನಡ, ದ್ವಿತೀಯ ಇಂಗ್ಲೀಶ್ ಮತ್ತು ತೃತೀಯ ಹಿಂದಿ – ಇದು ನಾನು ಕಲಿತ ಶಾಲೆಯಲ್ಲಿದ್ದಿದ್ದು.
ಕಾರಣ ಅದೊಂದು ಕ್ರಿಶ್ಚಿಯನ್ ಶಾಲೆಯಾಗಿತ್ತು ಮತ್ತು ಅಲ್ಲಿ ನನ್ನ ಕಲಿಕೆ ಅನಿವಾರ್ಯವಾಗಿತ್ತು.
ಆದರೆ ನಮ್ಮ ಮನೆಯಲ್ಲೋ ಸಂಸ್ಕೃತದ ವಾತಾವರಣವಿತ್ತು. ನನ್ನ ತಂದೆ ಸಂಸ್ಕೃತ ಪ್ರೊಫೆಸರ್. ನನಗೋ
ಮೊದಲಿನಿಂದಲೂ ಕನ್ನಡ ಪುಸ್ತಕಗಳ ಓದು ಹಾಗೂ ಹಿಂದಿ ಶಾಯರಿ/ಗಝಲ್ಗಳ ಹುಚ್ಚು ಇದ್ದುದರಿಂದ
ಆಯ್ಕೆಗಳಿಲ್ಲದೇ ದೊರಕಿದ್ದೇ ನನ್ನ ಐಚ್ಛಿಕ ವಿಷಯಗಳಾಗಿದ್ದವು ಅವು! ಆದರೆ ನನಗೆ ಸಂಸ್ಕೃತದ ಮೇಲೆ
ಅಪಾರ ಗೌರವ ಮತ್ತು ಆದರ. ಕಾರಣ, ಅಪ್ಪ ಎಂದೂ ಅದನ್ನು ನಮ್ಮ ಮೇಲೆ ಹೇರಲು ಹೋಗಿರಲಿಲ್ಲ. ಸಂಸ್ಕೃತ
ಶ್ಲೋಕ, ಗೀತಾ ಪಠಣ, ಸೂಕ್ತಗಳು, ಸಹಸ್ರನಾಮಗಳು ಏನೇ ಇದ್ದರೂ ಅದನ್ನು ನಾವೇ ಆಸಕ್ತಿಯಿಂದ ಕೇಳಿ
ಕಲಿತದ್ದು. (ಕಲಿಸಲು ಅಪ್ಪನಿಗೆ ಪುರುಸೊತ್ತೂ ಇರಲಿಲ್ಲ ಅನ್ನಿ. ಆದರೆ ಈಗ ಮೊಮ್ಮಕ್ಕಳಿಗೆ
ಆಸಕ್ತಿಯಿಂದ ಬಿಡುವಾಗಿ ಎಲ್ಲಾ ಪಾಠ ಮಾಡುತ್ತಿದ್ದಾರೆ ಎಂಬುದೇ ಸಂತೋಷದ ಸಂಗತಿ.)
ನಾವು ಹತ್ತನೆಯ ತರಗತಿಯವರೆಗೂ ಮೂರೂ ಭಾಷೆಗಳನ್ನೂ ಕಲಿಯಬೇಕಿತ್ತು. ಮತ್ತು ಆ ಮೂರೂ ಭಾಷೆಯ ಅಂಕಗಳು ಕೊನೆಯ ಪರೀಕ್ಷೆಯ ಅಂಕಕ್ಕೆ ಸೇರ್ಪಡೆಯಾಗುತ್ತಿದ್ದವು (ನೆನಪಿರಲಿ.. ಈಗ ಹಾಗಿಲ್ಲ! ಲೇಖನದ ಕೊನೆಯಲ್ಲಿ ವಿವರಿಸಿದ್ದೇನೆ). ಆ ಸಮಯದಲ್ಲಿ ಹಲವು ವಿದ್ಯಾರ್ಥಿಗಳು ಸಂಸ್ಕೃತ ತೆಗೆದುಕೊಳ್ಳುತ್ತಿದ್ದು ಹೆಚ್ಚಿನ ಮಾರ್ಕ್ಸ್ ಸುಲಭದಲ್ಲಿ ಸಿಗುತ್ತದೆ ಎಂಬುದಕ್ಕೇ ಆಗಿರುತ್ತಿತ್ತು! (ಇದೇ ಈಗಲೂ ಇದೆ.) ಆಗ ಆಸಕ್ತಿಯಿಂದ ತೆಗೆದುಕೊಳ್ಳುವವರಿದ್ದಿರಲಿಲ್ಲ ಎಂದಲ್ಲ. ಆದರೆ ಹೆಚ್ಚಿನವರ ಆಲೋಚನಾ ಕ್ರಮ ಹೀಗೇ ಇದ್ದಿತ್ತು. .ಇದಕ್ಕೆ ಕಾರಣ ಕನ್ನಡದಲ್ಲಿ ಬರೆಯಲು ಬಹಳವಿರುತ್ತಿತ್ತು ಮತ್ತು ದೊಡ್ಡದೊಡ್ಡ ಉತ್ತರಗಳನ್ನು ಬರೆಯಬೇಕಾಗಿತ್ತು. ಸಂಸ್ಕೃತ ಒಂದು ಪುಟ್ಟ ಪ್ಯಾರಾ ನಮ್ಮ ಕನ್ನಡದ ಎರಡು ಪೇಜಿಗೆ ಸಮನಾಗಿರುತ್ತಿದ್ದುದೂ ಇದೆ! ಇರಲಿ… ಅದು ಗತಕಾಲ ಎಂದುಕೊಳ್ಳೋಣ. ಆದರೆ ಈಗ?
ನಾವು ಹತ್ತನೆಯ ತರಗತಿಯವರೆಗೂ ಮೂರೂ ಭಾಷೆಗಳನ್ನೂ ಕಲಿಯಬೇಕಿತ್ತು. ಮತ್ತು ಆ ಮೂರೂ ಭಾಷೆಯ ಅಂಕಗಳು ಕೊನೆಯ ಪರೀಕ್ಷೆಯ ಅಂಕಕ್ಕೆ ಸೇರ್ಪಡೆಯಾಗುತ್ತಿದ್ದವು (ನೆನಪಿರಲಿ.. ಈಗ ಹಾಗಿಲ್ಲ! ಲೇಖನದ ಕೊನೆಯಲ್ಲಿ ವಿವರಿಸಿದ್ದೇನೆ). ಆ ಸಮಯದಲ್ಲಿ ಹಲವು ವಿದ್ಯಾರ್ಥಿಗಳು ಸಂಸ್ಕೃತ ತೆಗೆದುಕೊಳ್ಳುತ್ತಿದ್ದು ಹೆಚ್ಚಿನ ಮಾರ್ಕ್ಸ್ ಸುಲಭದಲ್ಲಿ ಸಿಗುತ್ತದೆ ಎಂಬುದಕ್ಕೇ ಆಗಿರುತ್ತಿತ್ತು! (ಇದೇ ಈಗಲೂ ಇದೆ.) ಆಗ ಆಸಕ್ತಿಯಿಂದ ತೆಗೆದುಕೊಳ್ಳುವವರಿದ್ದಿರಲಿಲ್ಲ ಎಂದಲ್ಲ. ಆದರೆ ಹೆಚ್ಚಿನವರ ಆಲೋಚನಾ ಕ್ರಮ ಹೀಗೇ ಇದ್ದಿತ್ತು. .ಇದಕ್ಕೆ ಕಾರಣ ಕನ್ನಡದಲ್ಲಿ ಬರೆಯಲು ಬಹಳವಿರುತ್ತಿತ್ತು ಮತ್ತು ದೊಡ್ಡದೊಡ್ಡ ಉತ್ತರಗಳನ್ನು ಬರೆಯಬೇಕಾಗಿತ್ತು. ಸಂಸ್ಕೃತ ಒಂದು ಪುಟ್ಟ ಪ್ಯಾರಾ ನಮ್ಮ ಕನ್ನಡದ ಎರಡು ಪೇಜಿಗೆ ಸಮನಾಗಿರುತ್ತಿದ್ದುದೂ ಇದೆ! ಇರಲಿ… ಅದು ಗತಕಾಲ ಎಂದುಕೊಳ್ಳೋಣ. ಆದರೆ ಈಗ?
ನನ್ನ
ಮಗಳು ಇಂಗ್ಲೀಶ್ ಮೀಡಿಯಮ್.. ಆದರೆ ಎರಡನೇ ಭಾಷೆಯಾಗಿ ಕನ್ನಡ ಕೊಡಿಸಿದ್ದೇನೆ. ಮೂರನೆಯ ಭಾಷೆ
ಅನಿವಾರ್ಯವಾಗಿ ಹಿಂದಿಯಾಗಿದೆ. ಹಿಂದಿ ನನಗೆ ಬಹಳ ಅಚ್ಚುಮೆಚ್ಚು...ನಿರರ್ಗಳ. ಅಲ್ಲದೇ ಪಂಜಾಪು,
ಬಿಹಾರಿ, ಹಿಂದಿ ಗ್ರಾಮ್ಯ ಭಾಷೆಯೂ ಗೊತ್ತು. ಆದರೆ ನನ್ನ ಮಗಳಿಗೆ ಅಷ್ಟಕಷ್ಟೇ. ಅವಳಿಗೆ ಇಂಗ್ಲೀಶ್,
ಸಂಸ್ಕೃತ ಮತ್ತು ಕನ್ನಡದಲ್ಲಿ ಆಸಕ್ತಿ. ಸದ್ಯ ಕನ್ನಡ ಮತ್ತು ಇಂಗ್ಲೀಶ್ ಎರಡು ಭಾಷೆಯೂ ಲೀಲಾಜಾಲ.
ಆದರೆ ಅವಳಿಗೆ ಆಸಕ್ತಿ ಇದ್ದರೂ ಸಂಸ್ಕೃತವನ್ನು ಮೂರನೇ ಭಾಷೆಯಾಗಿ ತೆಗೆದುಕೊಳ್ಳುವ ಆಯ್ಕೆ
ಸಿಕ್ಕಿಲ್ಲ! “ಅನಿವಾರ್ಯ ಎಂದಾದಮೇಲೆ ಅದನ್ನೇ ಸವಾಲಾಗಿ ಸ್ವೀಕರಿಸು.. ಒಂದೊಳ್ಳೆ ಭಾಷೆ ಕಲಿತ
ಸುಖ, ಹಾಗೂ ಆ ಭಾಷೆಯಿಂದ ನಿನ್ನ ಓದಿನ ವಿಸ್ತಾರ ಹೆಚ್ಚಾಗುತ್ತದೆ” ಎಂದು ತಿಳಿಸಿ ಹೇಳಿದ್ದೇನೆ.
‘ಆನೋ ಭದ್ರಾಃ ಕೃತವೋಯಂತು ವಿಶ್ವತಃ”(ಒಳ್ಳೆಯ ಜ್ಞಾನ ಜಗತ್ತಿನಿಲ್ಲೆಡೆಯಿಂದ ನಮ್ಮಲ್ಲಿಗೆ
ಹರಿದು ಬರಲಿ) ಎಂಬ ಸುಭಾಷಿತದಂತೇ ಅರಿವನ್ನು ಹೆಚ್ಚಿಸಿಕೊಳ್ಳಲು ಮೂರಲ್ಲ ಮುನ್ನೂರು ಭಾಷೆ
ಕಲಿತರೂ ಕಡಿಮೆಯೇ. ಹಾಗೆಂದು ಅದು ಒತ್ತಾಯದಲ್ಲಿರಬಾರದು. ಆಯ್ಕೆ ನಮ್ಮದಾಗಿರಬೇಕು. ಅವಶ್ಯಕತೆ ಮತ್ತು ಅಗತ್ಯತೆ ಆಸಕ್ತಿಗಿಂತ ಪ್ರಬಲವಾದದ್ದು. ಅವಶ್ಯಕತೆ ಮತ್ತು ಅಗತ್ಯತೆಯನ್ನು ಹುಟ್ಟುಹಾಕಬೇಕು ಮತ್ತು ಅದು ಅಭಿಮಾನದಿಂದ (ದುರಭಿಮಾನವಲ್ಲ) ಮಾತ್ರ ಸಾಧ್ಯ. ಕನ್ನಡ ಕಲಿಕೆ ಅನಿವಾರ್ಯ ಮತ್ತು ಅದು ನಮ್ಮ ಅಗತ್ಯತೆ ಹಾಗೂ ಬದ್ಧತೆ ಎಂಬ ಮನೋಭಾವ ಕನ್ನಡಿಗರಲ್ಲಿ ಬರಬೇಕು. ಹಾಗೆ ಬಂದಾಗ ಮಾತ್ರ ಪ್ರೀತಿಯಿಂದ ಮಕ್ಕಳೂ ಕಲಿಯಲು ಸಾಧ್ಯ. ಆ ವಾತಾವರಣ ಈಗ ಮನೆಯಲ್ಲಿ ಮತ್ತು ಶಾಲೆಯಲ್ಲಿ ಇದೆಯೇ?
ಕಲಿಕೆ ಹೇರುವಂತಿರಬಾರದು ನಿಜ.. ಹಾಗೆಂದು ಭಾಷಾ ಹೇರಿಕೆಯನ್ನು ಗಣಿತ, ಸಮಾಜವಿಜ್ಞಾನ ಇನ್ನಿತರ ಪಠ್ಯಕ್ಕೆ ಹೋಲಿಸಲಾಗದು. ಕಾರಣ, ಅವುಗಳನ್ನು ಅವಶ್ಯ
ಬಂದಾಗ ಕಲಿಯಲು ಸಾಧ್ಯವೇ? ಒಂದು ಹಂತದವರೆಗಾದರೂ ಸರಿಯೇ.. ಶಿಕ್ಷಕರು ಮತ್ತು ಪಾಲಕರು ಸೇರೆ ‘ನೋಡಿ ಮಕ್ಕಳೆ ಹೀಗೆಲ್ಲಾ ವಿಷಯಗಳಿವೆ…
ಯಾವುದರಲ್ಲಿ ನಿಮಗೆ ಆಸಕ್ತಿ ಎಂದು ಕಂಡುಕೊಳ್ಳಿ’ ಎಂದೆನ್ನಲಾದರೂ ಅವನ್ನೆಲ್ಲಾ ಹರವಿ ಅವರ ಮುಂದೆ
ಹಿಡಿದು ಶಿಕ್ಷಕರು ಕಲಿಸಲೇಬೇಕಾಗುತ್ತದೆ. ಅದೇ ಪ್ರಸ್ತುತ ಹತ್ತನೆಯ ತರಗತಿಯವರೆಗೂ ಆಗುತ್ತಿರುವುದು. ಆದರೆ ಇಲ್ಲೂ ಸಮಸ್ಯೆಯಿದೆ. ಎಂಟನೆಯ ತರಗತಿಯ ಹೊತ್ತಿಗೇ ಇಂದಿನ ಎಷ್ಟೋ ಮಕ್ಕಳಿಗೆ ತಮ್ಮ ಆಸಕ್ತಿಯನ್ನು ಕಂಡುಕೊಳ್ಳಲು ಸಾಧ್ಯವಿರುತ್ತದೆ. ಎಷ್ಟೋ ಮಕ್ಕಳಿಗೆ ಗಣಿತ, ವಿಜ್ಞಾನ ಇಷ್ಟವಿರುವುದೇ ಇಲ್ಲ. ಆದರೆ ಅವರು ಭಾಷಾ ಕಲಿಕೆಯಲ್ಲು ಮುಂದಿರುತ್ತಾರೆ. ಇನ್ನು ಕೆಲವರು ಇದರ ವಿರುದ್ಧ. ಹೀಗಾಗಿ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತಿದೆ. ಇನ್ನು ನಮ್ಮ ಇಂದಿನ ಶಿಕ್ಷಣದ ಗುಣಮಟ್ಟ ಹೇಗಿದೆ? ಶೈಕ್ಷಣಿಕ ವ್ಯವಸ್ಥೆ
ಹೇಗೆ ಅಸ್ತವ್ಯಸ್ತವಾಗಿದೆ? ಎಂಬುದೆಲ್ಲಾ ಬೇರೆಯ ವಿಷಯ ಬಿಡಿ. ಆದರೆ ಸಮಾಜವಿಜ್ಞಾನ, ವಿಜ್ಞಾನ, ಗಣಿತದಂಥ ಪಠ್ಯಗಳನ್ನು ಒಬ್ಬರೇ ಕಲಿಯುವುದು ಕಷ್ಟ ಆದರೆ ಭಾಷೆಯನ್ನು ನಾವು ಯಾವುದೇ
ಸಮಯದಲ್ಲೂ ಒಬ್ಬಂಟಿಯಾಗಿಯೂ ಕಲಿಯಬಹುದು. ಉದಾಹಣೆಗೆ…
ನನ್ನ
ಮಗಳು ತನ್ನ ಮಾವನಿಂದ ಮಾಹಿತಿ ಪಡೆದು ಟ್ಯಾಬ್ಲೆಟ್ಟಿನಲ್ಲಿ ಈಗ ಅದ್ಯಾವುದೋ ಹೊಸ ಆಪ್ ಅನ್ನು
ಹಾಕಿಸಿಕೊಂಡು ಕಲಿಯುತ್ತಿದ್ದಾಳೆ. ಅದೇನೋ ಡ್ಯುವೆಲ್ ಲ್ಯಾಗ್ವೆಂಜ್ ಲಿಂಕ್ ಅಂತೆ (Duolingo)…
ಅದರಲ್ಲಿ ಜಗತ್ತಿನ ಯಾವುದೇ ಭಾಷೆಯನ್ನು ಸುಲಭದಲ್ಲಿ ನಾವು ಕಲಿಯಬಹುದು. ಸದ್ಯ ಅದೇನೋ ಜರ್ಮನ್
ಪದಗಳನ್ನು ಹೇಳಿ ನನ್ನ ಬೆರಗಾಗಿಸುತ್ತಿದ್ದಾಳೆ. ಟೆಕ್ನಾಲಜಿಯನ್ನು ನಾವು ಬಳಸಿಕೊಳ್ಳಬೇಕು ಅದು
ನಮ್ಮನ್ನಲ್ಲ. ಈ ಮೂಲಕ ನಾವು ಭಾಷೆಯನ್ನು ಮಕ್ಕಳಿಗೆ ಅವರಿಗೆ ಬೇಕಾದಾಗ ಬೇಕಾದ ರೀತಿಯಲ್ಲೇ
ಕಲಿಸಬಹುದು. ಕಲಿಕೆ ಇಷ್ಟದ್ದಾದಾಗ ಸುಲಭ.. ಕಷ್ಟದ್ದಾದರೆ, ಹೇರಿಕೆಯಾದರೆ ಕಷ್ಟ. ಈ
ನಿಟ್ಟಿನಲ್ಲಿ ನಾನು ಈ ಭಾಷೆಯನ್ನು ನೀನು ಕಲಿಯಲೇಬೇಕು ಎಂದು ಯಾರಿಗೂ ಹೇರುವುದನ್ನು
ಇಷ್ಟಪಡುವುದಿಲ್ಲ. ಅವರು ಕಲಿಯಲಿ ಅಥವಾ ಬಿಡಲಿ.. ಆ ಭಾಷೆಗೆಂದೂ ನಷ್ಟವಲ್ಲ. ಅದನ್ನು ಬಳಸದೇ
ಇಟ್ಟರೆ ಅದು ನಮ್ಮ ಪಾಲಿಗೆ ನಶಿಸುವುದೇ ವಿನಃ ಅದು ಇದ್ದಲ್ಲೇ ಇದ್ದಿರುತ್ತದೆ ಅಷ್ಟೇ. ಸದ್ಯ ನಮ್ಮಲ್ಲಿ ಸ್ವಲ್ಪವಾದರೂ ಕನ್ನಡ ಉಳಿದುಕೊಂಡಿದ್ದರೆ ಅದು ಹಳ್ಳಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವ ಸರಕಾರಿ ಶಾಲೆಗಳಿಂದ ಮತ್ತು ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳಿಕೊಡುತ್ತಿರುವ ನೈಜ ಕಳಕಳಿಯುಳ್ಳ ಬಾಯೋರು ಮತ್ತು ಅಕ್ಕೋರುಗಳಿಂದ.(ನಗರಗಳಲ್ಲಿ ಅಂತಹ ಶಿಕ್ಷರಿಲ್ಲವೇ ಇಲ್ಲ ಎಂದು ಖಂಡಿತ ಹೇಳುತ್ತಿಲ್ಲ. ಆದರೆ ಅವರ ಸಂಖ್ಯೆ ಬಹಳ ಕಡಿಮೆಯಿದ್ದಿರುತ್ತದೆ.)
ಶ್ರೇಷ್ಠತೆಯ
ವ್ಯಸನ ಹಿಡಿದರೆ ಅದಕ್ಕೆ ಮದ್ದು ಕಷ್ಟ. ಅದೇ ಈಗ ಎಲ್ಲಾ ರೋಗಕ್ಕೂ ಕಾರಣ ಎಂದೆನಿಸಿಬಿಟ್ಟಿದೆ.
ಕನ್ನಡವೊಂದೇ ಶ್ರೇಷ್ಠ.. ಸಂಸ್ಕೃತವೇ ಮುಖ್ಯ ಅಥವಾ ಹಿಂದಿಯೇ ದೇಶ ಬೆಸೆವ ಭಾಷೆ ಎಂಬಿತ್ಯಾದಿ
ವಿಶೇಷಗಳಿಂದ ಹೀಗಾಗಿದೆ. (ಆದರೂ ಈಗಿನ ಶೋಚನೀಯ ಪರಿಸ್ಥಿತಿ ನೋಡಿದಾಗ ಕನ್ನಡವೇ ಶ್ರೇಷ್ಠ ಎಂಬ ಭಾವ ಬಲವಾಗಿದ್ದರೂ ಉಳಿಯುತ್ತಿತ್ತೇನೋ ಎಂದು ಎಷ್ಟೋ ಸಲ ರೋಸಿ ಅನ್ನಿಸಿದ್ದಿದೆ.) ಕನ್ನಡ ಕರ್ನಾಟಕಕ್ಕೆ ಅತ್ಯಗತ್ಯ ಅದು ನಮ್ಮ ನಾಡಿನ ದ್ಯೋತಕ..
ಅಸ್ತಿತ್ವ ಎಲ್ಲವೂ ಸರಿ ಮತ್ತು ನಿಜವೂ ಹೌದು. ಆದರೆ, ನಮ್ಮದೇ ರಾಜ್ಯದ ಭಾಷೆಯನ್ನು ಇಲ್ಲಿ ಓದುವ
ಮಕ್ಕಳು ಕಲಿತರೆ ಮಾತ್ರ ಇಲ್ಲಿ ವ್ಯವಹಾರ ಸಾಧ್ಯ ಎನ್ನುವ ವಾತಾವರಣ ಇದೆಯೇ? ಊಹೂಂ.. ಹಿಂದಿ
ಹೋಗಲಿ ಬಿಡಿ.. ಇಂಗ್ಲೀಶ್ ಗೊತ್ತಿದ್ದರೆ ಸಾಕಲ್ಲ ಎಂಬ ಭಾವ ಬಂದಾಗಿಬಿಟ್ಟಿದೆ. ಇದನ್ನು
ನಾವಿನ್ನೂ ಸಂಪೂರ್ಣ ರಿವರ್ಸ್ ಮಾಡಿ ಸರಿಮಾಡಲು ಸಾಧ್ಯವೇ? ಇಂಗ್ಲೀಶ್ ಗೊತ್ತಿಲ್ಲದವ ಬೆಂಗಳೂರಿನಲ್ಲಿ ಸರಾಗವಾಗಿ
ಜೀವನ ಮಾಡುವುದು ಸಾಧ್ಯವೇ? ಕನ್ನಡ ಗೊತ್ತಿದ್ದರೆ ಮಾತ್ರ ಸಾಕೇ? ಕನ್ನಡ ವಾಹಿನಿಗಳು, ಸುದ್ದಿವಾಹಿನಿಗಳು, ಬಿತ್ತರಿಸಲ್ಪಡುವ ಜಾಹೀರಾತುಗಳು ಎಷ್ಟು ಕನ್ನಡ ಪದಗಳನ್ನು ಬಳಸುತ್ತಿವೆ? ಪರಿಸ್ಥಿತಿಯ ಕಟು ವಾಸ್ತವಿಕತೆ
ಅರಿತು ಪರಿಹಾರ ಹುಡುಕಬೇಕೇ ವಿನಃ ಹೀಗಾಗಲೇ ಬೇಕು.. ಹಾಗಾಗದಿದ್ದರೆ ಅಷ್ಟೇ ಎಂಬ ಬೆದರಿಕೆ ಬರೀ ಹುಸಿ ಬೊಬ್ಬೆಯಾಗಷ್ಟೇ ಉಳಿದುಬಿಡುತ್ತದೆ.
ಹೋಗಲಿ..
ಈಗಿನ ಬಹುತೇಕ ಸಿಬಿಎಸ್ಸಿ ಶಾಲೆಗಳಲ್ಲಿರುವ ರೂಲ್ಸ್ ಎಷ್ಟು ಜನರಿಗೆ ಅದರಲ್ಲೂ ಹೆತ್ತವರಿಗೆ
ಗೊತ್ತು? ಎಂಟನೆಯ ತರಗತಿಯ ನಂತರ ಮೂರನೆಯ ಭಾಷೆಯೇ ಓದಲು ಇರುವುದಿಲ್ಲ. ಅಂದರೆ ಒಂಭತ್ತನೆಯ ಮತ್ತು
ಹತ್ತನೆಯ ತರಗತಿಯವರಿಗೆ ಮೂರನೇ ಭಾಷೆಯಾಗಿ ಅವರೇನು ತೆಗೆದುಕೊಂಡಿರುತ್ತಾರೋ ಅದು ಇಲ್ಲವೇ ಇಲ್ಲ.
ಹೀಗಿರುವಾಗ ಕನ್ನಡ ಮೂರನೇ ಭಾಷೆಯಾಗಿ ತೆಗೆದುಕೊಂಡವರು ಐದನೆಯ ತರಗತಿಯಿಂದ ಅ, ಆ, ಇ ಕಲಿತು ಎಂಟರವರೆಗೆ
ಅಂತೂ ಹೆಕ್ಕಿ ಓದಲು ಶುರುಮಾಡುವ ಹೊತ್ತಿಗೆ ಅಲ್ಲಿಗೇ ಸ್ಟಾಪ್! ಅದಕ್ಕೆ ಕಾರಣವೂ ಇಲ್ಲದಿಲ್ಲ..
ಒಂಭತ್ತಿರಿಂದ ಪಠ್ಯಗಳ ವಿಸ್ತಾರ ಜಾಸ್ತಿಯಾಗುತ್ತಾ ಹೋಗಿ ಓದುವಿಕೆಯೂ ಹೆಚ್ಚಾಗುತ್ತಾ
ಹೋಗುತ್ತದೆ. ಮಕ್ಕಳ ಮೇಲೆ ಭಾರ ಬೀಳಬಾರದಂದು ಒಂದು ಭಾಷೆಯೇ ಔಟ್ ಆಗಿಸಿದ್ದಾರೆ. ಅಂದರೆ ಯಾವುದೇ
ಭಾಷೆಯಿರಲಿ ಅದರ ಮಹತ್ವ ಎಲ್ಲಿಗೆ ಬಂದುಮುಟ್ಟಿದೆ ಎಂದು ನೀವೇ ಆಲೋಚಿಸಿ!
ಭಾಷೆಯಲ್ಲೂ
ರಾಜಕೀಯವೇ ಎಂದು ಹುಬ್ಬೇರಿಸದಿರಿ.. ಈಗ ಎಲ್ಲೆಡೆ ಬರೀ ತುಂಬಿಕೊಳ್ಳುತ್ತಿರುವುದು ರಾಜಕೀಯವೊಂದೇ.
ಭಾಷೆಯಲ್ಲೂ ಅದು ಸೇರುತ್ತಿದೆ ಎನ್ನುವುದು ವಿಷಾದಕರ. ನಮ್ಮ ರಾಜ್ಯ ಸರ್ಕಾರ (ಈ ಮೊದಲು
ಇದ್ದಿದ್ದು.. ಈಗಿರುವುದು ಎಲ್ಲವೂ.. ಇದಕ್ಕೂ ಮತ್ತೆ ರಾಜಕೀಯ ಸೇರಿಸಬೇಡಿ.. ಸೇರಿಸಿದರೆ ನಿಮ್ಮ
ಕರ್ಮ!) ಕನ್ನಡದ ಉಳಿವಿಗೆ ಎಷ್ಟು ಶ್ರಮಿಸುತ್ತಿದೆ? ನರ್ಸರಿಯಿಂದಲೇ ಕನ್ನಡ ಕಲಿಕೆ ಪ್ರತಿ
ಶಾಲೆಯಲ್ಲೂ (ಪ್ರೈವೇಟ್ ಶಾಲೆಗಳನ್ನೂ ಸೇರಿಸಿ) ಕಡ್ಡಾಯ ಎಂಬ ನಿಯಮ ಜಾರಿಯಲ್ಲಿ ತರಲಾಯಿತೇ? ಹೋಗಲಿ ಕಾನೂನು ಮಾಡಿದರು ಎಂದೇ
ಇಟ್ಟುಕೊಳ್ಳೋಣ. ಆದರೆ ಅದಕ್ಕೆ ಬೇಕಾದ ತಕ್ಕ ಸಿದ್ಧತೆಯಿದೆಯೇ? ಪಠ್ಯ ರಚನೆಯ ಸಮಿತಿ ಅಷ್ಟು
ಸಶಕ್ತವಾಗಿದೆಯೇ? ಒಳ್ಳೆಯ ಶಿಕ್ಷರ ಲಭ್ಯವಿದೆಯೇ? ಕನ್ನಡ ಪಠ್ಯಗಳ ತಯಾರಿಕೆಯಲ್ಲಿ ಎಷ್ಟು ಬೇಕಾಬಿಟ್ಟಿಯಾಗಿವೆ ಎನ್ನುವುದನ್ನು
ಅರಿಯಲು ಒಮ್ಮೆ ಶಾಲಾ ಮಕ್ಕಳ ಕನ್ನಡ ಪಠ್ಯವನ್ನೋದಿ ಸಾಕು! ನನ್ನ ಮಗಳ ಕನ್ನಡ ಪುಸ್ತಕವನ್ನೇ
ನೋಡುತ್ತೇನಲ್ಲ. ನಾನು ಓದುತ್ತಿದ್ದ ಒಳ್ಳೊಳ್ಳೆಯ ಪಾಠಗಳು, ಕವಿತೆಗಳು, ಕಥೆಗಳು ಎಲ್ಲವೂ ಮಾಯ!
ತಲೆಬುಡವಿಲ್ಲದ ಪಠ್ಯಗಳು.. ಮುದ್ರಣದೋಷಗಳು.. ತಪ್ಪುಗಳು… ಕವಿತೆಗಳೋ ದೇವರಿಗೇ ಪ್ರೀತಿ!
ಸಿಕ್ಕಿದ್ದೇ ಮೃಷ್ಠಾನ್ನ ಎಂದು ಸ್ವೀಕರಿಸಬೇಕು ಅಷ್ಟೇ. ಮೊದಲು ಇಲ್ಲಿ ಬದಲಾವಣೆ ಆಗಬೇಕಾಗಿದೆ.
ಒಳಗೆ ಹೂಳು ತುಂಬಿಕೊಂಡು ಹೊರಗೆ ಗಲೀಜಿದೆ ಎಂದರೆ ಏನು ಮಾಡೋಣ? ಮಕ್ಕಳು ಕನ್ನಡ
ಪ್ರೀತಿಸುವುದಿರಲಿ.. ದ್ವೇಷಿಸದಿರಲಿ ಸಾಕು ಎಂದು ಪ್ರಾರ್ಥಿಸಬೇಕಾಗಿದೆ ಈಗ. ಕನಿಷ್ಟ ಅಂತಹ ವಾತಾವರಣವನ್ನಾದರೂ
ನಾವು ಸೃಷ್ಟಿಸದಿರೋಣ. ಯಾರೆಷ್ಟೇ ಹೇಳಲಿ ಕನ್ನಡ ಭಾಷೆ ಮೂಲೆಗುಂಪಾಗಲು ಶುರುವಾಗಿ .... ಅದು
ಹಾಗೇ ಆಗಿ ದಶಕಗಳೇ ಆಗಿವೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಪ್ರೈವೇಟ್ ಇಂಗ್ಲೀಶ್ ಮಾಧ್ಯಮಗಳು
ಆವರಿಸಿಕೊಳ್ಳತೊಡಗಿದಂತೇ ಆ ಭಾಷೆಯೂ ಹಿನ್ನಲೆಗೆ ಸರಿಯತೊಡಗಿತ್ತು. ಇದು ವಾಸ್ತವ. ಇಂಗ್ಲೀಶ್
ಗೊತ್ತಿಲ್ಲದಿದ್ದರೆ ನಾಚಿಕೆ.. ಕನ್ನಡ ಗೊತ್ತಿಲ್ಲದಿದ್ದರೆ ಹೆಮ್ಮೆ ಎನ್ನುವ ಪಾಲಕರಿಂದ ಅದು ತಳ
ಹತ್ತಿಯಾಗಿದೆ ಮತ್ತು ಅಂತಹ ಒಂದು ಸಮಾಜ ಸೃಷ್ಟಿಯಾದಾಗಿನಿಂದ ಆಗಿ ಹೋಗಿದೆ. ಈಗೇನಿದ್ದರೂ
ಅಳಿದುಳಿದದ್ದನ್ನು ಗುಡ್ಡೆಹಾಕುವ ಕೆಲಸವಷ್ಟೇ. ಆಶ್ಚರ್ಯವೆಂದರೆ ಈ ದುರಂತ ನಮ್ಮ ದೇಶದ ಬೇರೆ
ಭಾಷೆಗಳೊಂದಿಗೆ ಆಗದಿರುವುದು! ಅಲ್ಲಿಯೂ ಇಂಗ್ಲೀಶ್ ಮೀಡಿಯಮ್ ಧಾಳಿಯಿಟ್ಟಿದ್ದರೂ ಆಯಾ ಪ್ರದೇಶದ
ಭಾಷೆ ಇನ್ನೂ ಬಹಳ ಸಶಕ್ತವಾಗಿದೆ.. ಜೀವಂತವಾಗಿದೆ. ಹೀಗಿದ್ದಾಗ ಸಮಸ್ಯೆಯಿರುವುದು ನಮ್ಮಲ್ಲೇ ಹೊರತು ಬೇರೆ
ರಾಜ್ಯದವರಿಂದಲೋ ಭಾಷೆಯಿಂದಲೋ ಅಲ್ಲ ಎಂದೆನಿಸುತ್ತಿದೆ!
ಇನ್ನು,
ಯಾವುದೇ ಭಾಷೆಯ ಕುರಿತು ಆಸಕ್ತಿ ಇಲ್ಲದಿರುವುದು ಮತ್ತು ಅದನ್ನು ದ್ವೇಷಿಸುವುದೂ ಎರಡೂ ಬೇರೆ
ವಿಷಯ. ಸಂಸ್ಕೃತವನ್ನೋ, ಹಿಂದಿಯನ್ನೋ, ಕನ್ನಡವನ್ನೋ ತೀರಾ ತುಚ್ಛವಾಗಿ ನಾವು ನಮ್ಮ ತಲೆಯಲ್ಲಿ ತುಂಬಿಕೊಂಡು
ವಿಷವನ್ನೇ ಕಾರುತ್ತಾ, ಅದನ್ನೇ ನಮ್ಮ ಮಕ್ಕಳಿಗೂ ತುಂಬಿಸಿದರೆ ಅವರು ಮುಂದೆ ಮನುಷ್ಯನ ನಡುವೆ
ಬೆಸೆವ, ಮನುಷ್ಯತ್ವವನ್ನು ಸಾರುವ ಕೊಂಡಿಯಾದ ಯಾವುದೇ ಭಾಷೆಯನ್ನೂ ಅರ್ಥೈಸಿಕೊಳ್ಳಲಾರರು
(ಕನ್ನಡವನ್ನೂ ಕೂಡ)! ದಯವಿಟ್ಟು ಆ ಕೆಲಸ ಮಾಡದಿರಿ. ಮಗಳಿಗೆ ಹಿಂದಿ ಅಷ್ಟು ಇಷ್ಟ ಇಲ್ಲ ಎಂದು
ಗೊತ್ತಾದಗ.. ಅದನ್ನೇ ಹೆಚ್ಚು ಓದಲು ಒತ್ತಾಯಿಸುವುದನ್ನು ಬಿಟ್ಟೆ. ಎಷ್ಟು ಆಗತ್ತೋ ಅಷ್ಟು ಕಲಿ..
ತಲೆಬಿಸಿ ಬೇಡ ಎಂದೆ. ಅವಳೇ ಕ್ರಮೇಣ ಆಸಕ್ತಿ ವಹಿಸಿ ಅರ್ಥೈಸಿಕೊಂಡಳು. ಅದರ ಬದಲು ಅವಳಿಷ್ಟದ
ಬೇರೆ ಯಾವುದೇ ಭಾಷೆ ಇಟ್ಟಿದ್ದರೆ ಚೆನ್ನಿತ್ತು ಎಂದು ನನಗೂ ಹಲವು ಸಲ ಅನಿಸಿದ್ದಿದೆ. ಅದನ್ನೇ
ಅವಳ ಮುಂದೆ ಬಹಳ ಸಲ ಹೇಳಿದ್ದರೆ ಅವಳೊಳಗೆ ಅದೇ ಗಟ್ಟಿಯಾಗಿ ಆ ಭಾಷೆಯ ಕುರಿತು ಅಸಡ್ಡೆ
ಬೆಳೆಯಬಹುದು ಎಂದು ಸುಮ್ಮನಾದೆ. ಮಕ್ಕಳ ಮುಂದೆ ಯಾವುದೇ ಭಾಷೆಯನ್ನಾಗಲಿ... ಅದು ತುಳು, ಕೊಂಕಣಿ,
ಮರಾಠಿ, ಪಂಜಾಬಿ ಯಾವುದೇ ಇರಲಿ ಅದನ್ನು ಚೆನ್ನಾಗಿದೆ ಎಂದೇ ಹೇಳೋಣ. ಅವರಿಗೆ ಆಸಕ್ತಿಯೆನಿಸಿದರೆ
ಅವರೇ ಕಲಿಯಲು ಮುಂದೆ ಬರುತ್ತಾರೆ. ಕನ್ನಡ ಕಡ್ಡಾಯವಾಗಬೇಕು ಎಂಬುದು ನನ್ನದೂ ಅಭಿಮತ. ಆದರೆ ಅದು
ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದೂ ಇಂಗ್ಲೀಶ್ ಈಗಾಗಲೇ ಪ್ರಬಲ ರಾಜ್ಯ ಸ್ಥಾಪನೆ ಮಾಡಿ.. ಶಿಕ್ಷಣ
ವ್ಯವಸ್ಥೆಯೆಂದರೆ ಹೈಯರ್ ಎಜ್ಯಿಕೇಶನ್ನಿಗಿರುವ ಮೆಟ್ಟಿಲು ಎಂದಷ್ಟೇ ಆಗಿರುವ ಹೊತ್ತಲ್ಲಿ..
ಭಾಷೆಯ ಕಲಿಕೆ ಹತ್ತನೆಯ ತರಗತಿಯವರೆಗೆ ಅಂಕಗಳಿಗಷ್ಟೇ ಸೀಮಿತವಾಗಿದ್ದರೆ ಸಾಕು ಎಂಬ ಉದಾಸೀನ ಭಾವ
ಬೇರುಬಿಟ್ಟಿರುವಾಗ ಖಂಡಿತ ಬಹಳ ಕಷ್ಟ.. ಕಾರಣ ಇದಕ್ಕೆ ಪಾಲಕರು ಮನಸ್ಸು ಮಾಡಬೇಕು… ಮತ್ತು ಇದು
ಮೊತ್ತಮೊದಲು ಮಹಾನಗರವಾದ ಬೆಂಗಳೂರಿನಿಂದಲೇ ಆರಂಭವಾಗಬೇಕಾಗುತ್ತದೆ. ನಾವು ಆದಷ್ಟು ನಮ್ಮ
ಮನೆಯಲ್ಲಿ ಮಕ್ಕಳಿಗೆ ನಮ್ಮ ಪ್ರಾದೇಶಿಕ ಭಾಷೆ ಕಲಿಸೋಣ.. ಅದು ತುಳುವೇ ಆಗಿರಲಿ,
ಕೊಂಕಣಿಯಿದ್ದಿರಲಿ, ಹವ್ಯಕವಾಗಿರಲಿ.. ಕನ್ನಡದ ಜೊತೆ ಬೆಸೆಯೋಣ. ಉಳಿದದ್ದನ್ನು ಅವರೇ ಈ ಕೊಂಡಿಯ
ಮೂಲಕ ಕಲಿಯುತ್ತಾ ಹೋಗುತ್ತಾರೆ. ಮತ್ತೊಮ್ಮೆ ಹೇಳುವೆ.. ಕಲಿಕೆ ಹೇರಿಕೆಯಾಗದಿರಲಿ… ಅದು ಯಾವುದೇ
ಭಾಷೆಯಿರಲಿ. ನೆನಪಿರಲಿ.. ಕನ್ನಡವನ್ನೂ ಓದಲು ಇಷ್ಟಪಡದ ಮಕ್ಕಳಿದ್ದಾರೆ! ನಾನೇ ನೋಡಿದ್ದೇನೆ. ಪಾಲಕರು
ಒತ್ತಾಯಿಸಿದರೂ ಅವರಿಗೆ ಮನಸ್ಸಿರೋದಿಲ್ಲ. ಆಗ ಅದನ್ನು ತುರುಕಿಸಲು ಸಾಧ್ಯವೇ? ಸಂಧಿ, ಸಮಾಸ,
ಪ್ರಬಂಧ ಬರೆಯೋದು, ವ್ಯಾಕರಣ ಎಲ್ಲವನ್ನೂ ಕಹಿ ಮಾತ್ರೆಯಂತೇ ಓದುತ್ತಾರೆ.. ಬೈಯ್ದುಕೊಂಡು
ಶಾಪಹಾಕಿ ಓದುವವರನ್ನೂ ನೋಡಿದ್ದೇನೆ. (ನನ್ನ ಕಾಲದಲ್ಲೂ ಇದ್ದರು ಆದರೆ ಆಗ ಅಂಥವರು
ಕಡಿಮೆಯಿದ್ದರು.. ಈಗ ಅಂಥವರೇ ಹೆಚ್ಚಿದ್ದಾರೆ) ಇದಕ್ಕೆ ಕಾರಣ ಯಾರು? ಅದನ್ನು ಆಸಕ್ತಿಕರವಾಗಿ
ಪುಸ್ತಕದಲ್ಲಿ ಅಳವಡಿಸದ ಶಿಕ್ಷಣ ವ್ಯವಸ್ಥೆಯೋ ಅಥವಾ ಅದನ್ನು ಆಸಕ್ತಿಕರವಾಗಿ ಮಕ್ಕಳಿಗೆ ಕಲಿಸಲು
ಸೋಲುತ್ತಿರುವ ಶಿಕ್ಷಕರೋ ಇಲ್ಲಾ ಮಕ್ಕಳೊಂದಿಗೆ ಕುಳಿತ ಕನಿಷ್ಟ ಅರ್ಧಗಂಟೆಯಾದರೂ ಅವರೊಂದಿಗೆ ಅವರ
ಸಮಸ್ಯೆ ಚರ್ಚಿಸಿ ತಿಳಿಯದ ಹೆತ್ತವರೋ!
ಕನ್ನಡದ
ಅವಗಣನೆಗೆ ಕಾರಣ ಇವಿಷ್ಟಲ್ಲದೇ ಇನ್ನೂ ಹಲವಿವೆ… ಅದು ಸರಿಪಡಿಸಲಾಗದಷ್ಟು ಈಗಾಗಲೇ ತಳ
ಹಿಡಿದಾಗಿದೆ. ಭಾಷಾಭಿಮಾನ ಎಂಬುದು ಒಗ್ಗಟ್ಟಿನಲ್ಲಿ ಬರಬೇಕು… ಮತ್ತು ಅದು ಎಳವೆಯಿಂದಲೇ ಆಗಬೇಕು.
ಇದನ್ನು ಬಿಟ್ಟು ಇನ್ನೂ ಬೇರೆ ಯಾವುದೇ ಆಯಾಮವಿದ್ದರೂ (ಧನಾತ್ಮಕ) ಅದನ್ನೂ ಗೌರವಿಸುವೆ. ಕಾರಣ,
ಪ್ರತಿಯೊಬ್ಬರೂ ತಮ್ಮದೇ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಇದು ಸರಿ ಇದು ತಪ್ಪು ಎಂದು
ನೇರಾನೇರ ಹೇಳಲು ಎಲ್ಲರ ಅನುಭವವೂ ಒಂದೇ ರೀತಿಯಾಗಿರದು. ಆದರೂ ಕಟ್ಟಕಡೆಯದಾಗಿ ನನ್ನಲ್ಲಿ ಏಳುವ
ಪ್ರಶ್ನೆ ಏನೆಂದರೆ ಹಿಂದಿ ಭಾಷೆಯನ್ನು ಕಡ್ಡಾಯ ಮಾಡುವುದು ಸರಿಯಲ್ಲ ಒಪ್ಪುವೆ. ಆದರೆ ಅದನ್ನು
ತಪ್ಪಿಸುವುದರಿಂದ ಕನ್ನಡ ಭಾಷೆಯ ಏಳಿಗೆ, ಉಳಿವು ಎಷ್ಟು ಸಾಧ್ಯ ಎಂಬುದು! ತಳ ಹಿಡಿಯುತ್ತಿರುವ
ಕನ್ನಡ ಭಾಷೆಯ ಪುನರುತ್ಥಾನಕ್ಕೆ ನಾವೆಷ್ಟು ಕೊಡುಗೆ ಕೊಡಬಲ್ಲೆವು ಮತ್ತು ಕೊಡುತ್ತಿದ್ದೇವೆ
ಎಂಬುದು.
ಇಷ್ಟೆಲ್ಲಾ ಗಲಾಟೆಯ ನಡುವೆಯೂ ಅಲ್ಪ ಸಮಾಧಾನವೆಂದರೆ…. ಈ
ಹಿಂದಿ ಹೇರಿಕೆಯೆಂಬ ಸುದ್ದಿ ಹರಡಿದ್ದರಿಂದ, ತಲೆಚಿಟ್ಟು ಹಿಡಿವಷ್ಟು ಹೇರಲ್ಪಡುತ್ತಿದ್ದ ರಾಹುಲ,
ಮೋದಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬೆಲ್ಲಾ ರಾಜಕೀಯ ಪೋಸ್ಟುಗಳಿಂದ ಸಾಮಾಜಿಕ ಜಾಲತಾಣಕ್ಕೆ
ತಾತ್ಕಾಲಿಕವಾಗಿ ಮುಕ್ತಿ ಸಿಕ್ಕಿದ್ದು!
#ಭಾಷಾಪ್ರೇಮ
#ಕನ್ನಡ_ಹಿಂದಿ_ಸಂಸ್ಕೃತ
~ತೇಜಸ್ವಿನಿ
ಹೆಗಡೆ