ನಾ ಮೆಚ್ಚಿದ ಚಿತ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಾ ಮೆಚ್ಚಿದ ಚಿತ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮಾರ್ಚ್ 2, 2010

ಸತ್ಯಾಪಸತ್ಯಗಳ ನಡುವಿನ ಹೋರಾಟಕ್ಕೆ "ರಣ್" ಭೂಮಿಯಾಗುತ್ತಿರುವ "ಮಾಧ್ಯಮ"

"ಮೀಡಿಯಾ ಕಿಸೀಕಿ ನಹಿ ಹೋತಿ.. ನ ಪಕ್ಷ ಕೀ ನ ವಿಪಕ್ಷ ಕೀ.." (ಮೀಡಿಯಾ ಯಾರದ್ದೂ ಅಲ್ಲ. ಪಕ್ಷದ್ದೂ ಅಲ್ಲ ವಿಪಕ್ಷದ್ದೂ ಅಲ್ಲ..)- ಎಂದು ಕಡಲ ಗಂಭೀರ ಧ್ವನಿಯಲ್ಲಿ, ಕಣ್ಣಲ್ಲೇ ಎದುರಾಳಿಯನ್ನು ಇರಿಯುತ್ತಾ, ಸುನಾಮಿಯ ಶಾಂತತೆಯನ್ನು ಪ್ರದರ್ಶಿಸುತ್ತಾ, ಗ್ರೇಟ್ ಅಮಿತಾಬ್ ಬಚ್ಚನ್ ಹೇಳುವ ಈ ಒಂದು ಡಯಲಾಗ್ ಸಾಕು ಇಡೀ ರಣ್ ಚಿತ್ರದ ಜೀವಾಳವನ್ನು ನಮಗೆ ಕಾಣಿಸಲು. ಆದರೆ ಈಗ ಮಾತ್ರ ಮಾಧ್ಯಮ ಎರಡು ಬಣಗಳಲ್ಲಿ ವಿಂಗಡಿಸಿ ಹೋಗಿರುವುದು ಮಾಧ್ಯಮದೊಳಗಿನ ಸುಳ್ಳಿನಷ್ಟೇ ಸತ್ಯ! ಒಂದು ಮಾಧ್ಯಮ ಆಡಳಿತ ಪಕ್ಷದಲ್ಲಿದ್ದರೆ, ಇನ್ನೊಂದು ವಿಪಕ್ಷದಲ್ಲಿ... ಮಗದೊಂದು ಯಾರು ಹಿತವರು ಈ ಮೂವರೊಳಗೆ ಎನ್ನುವ ಮೀನಾಮೇಶದಲ್ಲಿ. ಆದರೆ ಯಾರಿಗೂ ಜನಸಾಮಾನ್ಯರು ಬೇಕಾಗಿಲ್ಲ. ಅವರೇನಿದ್ದರೂ ಬಕರಾ‍ಗಳಂತೇ ತಾವು ಕಾಣಿಸುವ ಸಿಹಿಸುಳ್ಳುಗಳ ಆಮಿಶಕ್ಕೆ ಒಳಗಾಗಿ ತಮ್ಮ ತಮ್ಮ ಟಿ.ಆರ್.ಪಿ. ಏರಿಸಿಕೊಳ್ಳಲು ಮಾತ್ರ ಬೇಕು! ಇದು ಇಂದಿನ ಮಾಧ್ಯಮ ಜಗತ್ತಿನ ಕರಾಳ ಕಟು ಸತ್ಯ. ಸುಳ್ಳೇ ತುಂಬಿ ನಾರುತ್ತಿರುವ ಇಂದಿನ ಮಾಧ್ಯಮ ಜಗತ್ತಿನ ಹುಳುಕು ಎಲ್ಲರಿಗೂ ತಿಳಿದದ್ದೇ. ಆದರೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ, ಭ್ರಷ್ಟಾಚಾರ, ಅನ್ಯಾಯ, ಮೋಸ, ವಂಚನೆ ಎಲ್ಲವನ್ನೂ ಹೇಗೆ ನಾವು ಸುಮ್ಮನೇ ಒಪ್ಪಿಕೊಂಡು, ವ್ಯವಸ್ಥೆಯೊಳಗಿನ ಅವ್ಯವಸ್ಥೆಯನ್ನು ನೋಡಿಯೂ ನೋಡದಂತಿರುವುದನ್ನು ಹೇಗೆ ರೂಢಿಸಿಕೊಂಡೆವೋ, ಹಾಗೇ ಮೀಡಿಯಾದೊಳಗಿನ ಅವ್ಯವಹಾರಗಳನ್ನೂ, ಸುದ್ದಿ ಹಾದರಗಳನ್ನೂ ಒಪ್ಪಿಕೊಂಡೆವು. ಬರೀ ಒಪ್ಪಿಕೊಂಡಿದ್ದು ಮಾತ್ರವಲ್ಲ, ಅದೇ ಸತ್ಯ ಎಂದು ನಂಬಿಕೊಂಡೆವು. ಹಾಗಾಗಿ ಇದರೊಳಗಿನ ಸುಳ್ಳು, ಅನಾಚಾರಗಳೂ ಈಗ ಸಾಮಾನ್ಯ ಮನುಷ್ಯನಿಗೆ "Common" ಆಗಿ ಹೋಗಿವೆ ಬಿಡಿ. ಸತ್ಯ ಗೊತ್ತಿರುವುದು ಬೇರೆ, ಅದನ್ನೇ ಎಳೆ ಎಳೆಯಾಗಿ ಬಿಡಿಸಿ, ಪರಿಣಾಮಕಾರಿಯಾಗಿ ನಮ್ಮ ಮುಂದಿಡುವುದು ಬೇರೆ. ಕೇಳಿದ್ದಕ್ಕಿಂತ ಕಂಡಿದ್ದರ ಪರಿಣಾಮ ಜಾಸ್ತಿ. ಈ ಕೆಲಸವನ್ನು ರಾಮ್‌ಗೋಪಾಲ್ ವರ್ಮಾರ "ರಣ್" ಚಿತ್ರ ಯಶಸ್ವಿಯಾಗಿ ಮಾಡಿದೆ. ಇದು ನಾ ನೋಡಿದ ಉತ್ತಮ ಚಿತ್ರಗಳಲ್ಲೊಂದು ಎನ್ನಲು ಯಾವುದೇ ಸಂಶಯವಿಲ್ಲ.

ಇಂದಿನ ಮಾಧ್ಯಮ ಜಗತ್ತಿಗೆ ಕೇವಲ ಸತ್ಯ ಬೇಕಿಲ್ಲ. ಉಪ್ಪು, ಖಾರ, ಹುಳಿ, ಮಸಾಲೆಗಳಲ್ಲಿದ ಸರಳ ಸತ್ಯವನ್ನು ಕಾಣುವುದಾಗಲೀ, ಕೇಳುವುದಾಗಲೀ, ನೋಡುವುದಾಗಲೀ ಬೇಕಿಲ್ಲ. ಇದೇ (ಅ)ವ್ಯವಸ್ಥೆಗೆ ಹೊಂದಿಕೊಂಡಿರುವ ಸಾಮಾನ್ಯ ಜನರಿಗೂ ಕೇವಲ ನಿಜವನ್ನು ಮಾತ್ರ ನೋಡುವುದೂ ಪಥ್ಯವಾಗುತ್ತಿಲ್ಲ. ಕಾರಣ ಸುಳ್ಳಿಗಿರುವುಷ್ಟು ವಿಕಾರಗಳು, ಬಣ್ಣಗಳು ಸತ್ಯಕ್ಕಿರುವುದಿಲ್ಲ. ಅದಕ್ಕೆ ಬೇಕಾದಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ದಿನಬೆಳಗಾದರೆ ಕಾಣುತ್ತವೆ. ಯಾರೋ ಓರ್ವ, ಒಂದು ಚಾನೆಲ್, ಒಂದು ಪೇಪರ್ ಶುರು ಮಾಡಿಕೊಂಡ ಈ ಹುಚ್ಚಾಟವನ್ನು ಕ್ರಮೇಣ ಎಲ್ಲರೂ ಅನುಸರಿಸಿ, ಅದನ್ನೇ ನಮಗೂ ಉಣಬಡಿಸಿ, ನಮ್ಮ ಆರೋಗ್ಯಕರ ಸ್ವಾದವನ್ನೇ ಕೆಡಿಸಿಬಿಟ್ಟಿವೆ ಇಂದು. ಇದಕ್ಕೆ ಎಲ್ಲರೀತಿಯಲ್ಲೂ ಎಲ್ಲರ ಕೊಡುಗೆಯೂ ಇದೆ. ಓದುಗರ, ಪತ್ರಕರ್ತರ, ಪ್ರಾಯೋಜಕರ, ಮುಖ್ಯಸ್ಥರ, ಮಂತ್ರಿಗಳ - ಹೀಗೇ ಎಲ್ಲರೂ ವ್ಯವಸ್ಥಿತವಾಗಿ ಈ ಸಂಚಿನಲ್ಲಿ ಭಾಗಿಯಾಗುತ್ತಾರೆ. ಆದರೆ ಕೊನೆಯಲ್ಲಿ ಸತ್ಯ ಮಾತ್ರ ನರಳುತ್ತದೆ...ಸಾಯುತ್ತದೆ. ಸುಳ್ಳು, ಭ್ರಮೆ, ಅಲ್ಪ ಕಾಲದ ರೋಮಾಂಚನಗಳು ಮಾತ್ರ ವಿಜೃಂಭಿಸುತ್ತವೆ.
ಇದ್ದ ಸುದ್ದಿಯನ್ನು ಇದ್ದಹಾಗೇ ಹೇಳಿದರೆ ಅದು ಕೇವಲ ಸುದ್ದಿಯಾಗಿ ಸತ್ತು ಹೋಗುತ್ತದೆಯಂತೆ. ಆದರೆ ಅದೇ ಸುದ್ದಿಗೆ ಇಲ್ಲದ ಮಸಾಲೆ ಹಾಕಿ ಕಣ್ಮುಂದೆ ತಂದರೆ ಅದು ಕೆಲ ಕಾಲ ಜೀವಂತವಾಗಿರುತ್ತದೆಯಂತೆ...ಇದು ಕೆಲವು ಪ್ರಮುಖ ಮಾಧ್ಯಮ ದಿಗ್ಗಜರ ಅಂಬೋಣ! ಜನರ ದಡ್ಡತನ, ಮುಗ್ಧತೆ, ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಸುದ್ದಿಯನ್ನೂ ಅದರೊಳಗಿನ ಸತ್ಯವನ್ನೂ ಮಾರುತ್ತಿವೆ ಮಾಧ್ಯಮಗಳು. ಸತ್ಯದ ಮೇಲೆ ಸುಳ್ಳಿನ ತಲೆಹಾಕಿ ಅದನ್ನೇ ನಮ್ಮ ಮುಂದಿಡುತ್ತವೆ. ಅದನ್ನೇ ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಕಾಣಿಸಿ, ನಾವು ನಂಬುವಂತೆ ಮಾಡುತ್ತವೆ. ಟಿ.ಆರ್.ಪಿ ಮುಂದೆ ಮನುಷ್ಯತ್ವವನ್ನೇ ಮರೆಯುತ್ತವೆ! ರಾಜಕೀಯ ಹಾಗೂ ಸಾಮಾನ್ಯರ ನಡುವೆ ಸುದೃಢ ಸೇತುವೆಯಂತೆ ಕೆಲಸ ನಿರ್ಮಿಸಬೇಕಿದ್ದ, ಜನಸಾಮಾನ್ಯರಿಗಾಗುವ ಅನ್ಯಾಯ, ಅತ್ಯಾಚರಕ್ಕೆ ಸ್ಪಂದಿಸಿ ಅವರ ಧ್ವನಿಯಾಗಬೇಕಿದ್ದ, ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕಿದ್ದ ಮಾಧ್ಯಮ ಇಂದು ರಾಜಕೀಯ ಪುಢಾರಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಹುನ್ನಾರದಲ್ಲಿದೆ ಎಂದು ನನಗನಿಸುತ್ತಿದೆ.
ಉದಾಹರಣೆಗೆ : ಇತ್ತೀಚಿಗೆ ದಾರಿ ಮಧ್ಯದಲ್ಲಿ ರೌಡಿಯೊಬ್ಬನಿಂದ ಹಲ್ಲೆಗೊಳಗಾಗಿ ಜೀವನ್ಮರಣದ ಹೋರಾಟದಲ್ಲಿದ್ದ ಪೋಲಿಸ್ ಆಫೀಸರ್ ಓರ್ವರ ನರಳಾಟವನ್ನು "LIVE" ಆಗಿ ಟೆಲಿಕಾಸ್ಟ್ ಮಾಡಿದ್ದ ಚಾನೆಲ್ ಒಂದು ಅವರನ್ನು ಆಸ್ಪತ್ರೆಗೆ ಮೊದಲು ಸೇರಿಸಿದ್ದರೆ ಇಂದು ಆ ಆಫೀಸರ್ "LIFE" ಉಳಿದಿರುತ್ತಿತ್ತೇನೋ..! ತನ್ನ ರಕ್ಷಣೆಗಾಗಿ ಮುಂದೆ ಸಾಗುತ್ತಿದ್ದ ಆ ಪೋಲೀಸ್ ಆಫಿಸರ್ ಕೆಳಗೆ ಬಿದ್ದು ಒದ್ದಾಡುತ್ತಿದ್ದರೂ ದಾಟಿ ಹೋದ ರಾಜಕಾರಣಿಗಿಂತ, ಅದನ್ನೇ ಮತ್ತೆ ಮತ್ತೆ ನಮ್ಮ ಮುಂದೆ ಕಾಣಿಸಿದ ಆ ಚಾನಲ್ ಹೆಚ್ಚು ಕ್ರೂರ ಎನಿಸಿತು ನನಗೆ. ಬೇಡ ಇತ್ತೀಚಿಗೆ ನಡೆದ ಕಾರ್ಟನ್ ಟವರ್ ಅಗ್ನಿ ದುರಂತವನ್ನೇ ನೋಡೋಣ. ಚಾನಲ್ ಒಂದು ಮಹಿಳೆಯೊಬ್ಬಳು ೭ನೇ ಮಹಡಿಯಿಂದ ಪ್ರಾಣ ಕಾಪಾಡಿಕೊಳ್ಳಲು ೬ನೆಯ ಮಹಡಿಗೆ ಜಿಗಿಯಲು ಹೋಗಿ ಆಯತಪ್ಪಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡದ್ದನ್ನು ಪ್ರತೀ ೨ ನಿಮಿಷಕ್ಕೊಮ್ಮೆ ಪ್ರಸಾರ ಮಾಡಿತ್ತು. ಮನೆಯೊಳಗೆ ವೀಕ್ಷಿಸುತ್ತಿದ್ದ ಆ ಮಹಿಳೆಯ ಮನೆಯವರಿಗೆ, ಮಕ್ಕಳಿಗೆ ಏನನಿಸಬಹುದು ಎನ್ನುವ ಸಾಮಾನ್ಯ ತಿಳಿವಳಿಕೆ ಹೋಗಲಿ, ಮನುಷ್ಯತ್ವವೂ ಇಲ್ಲದಂತೇ, ನಿರ್ಭಾವುಕನಾಗಿ, ವಿಕಾರವಾದ ದೊಡ್ಡ ಧ್ವನಿಯಲ್ಲಿ ಮತ್ತೆ ಮತ್ತೆ ಬೊಬ್ಬಿರಿಯುತ್ತಿದ್ದ ಆ ರಿಪೋರ್ಟರ್ "ಇದನ್ನು ಕಾಣಿಸುತ್ತಿರುವುದು ನಾವೇ ಮೊದಲು... ಯಾರೋ ಒಬ್ಬರು ತಮ್ಮ ಮೊಬೈಲ್ ಕ್ಯಾಮರಾದಿಂದ ವಿಡೀಯೋ ಮಾಡಿ ಕಳುಹಿಸಿದ್ದಾರೆ..." ಎಂದೆಲ್ಲಾ ವದರುತ್ತಿರುವುದನ್ನು ನೋಡಿ ನಿಜಕ್ಕೂ ಮನುಷ್ಯನಲ್ಲ ಎಂದೆನಿಸಿತು. ಅಂತಹ ಒಂದು ದುರಂತದಲ್ಲೂ ಮಹಿಳೆ ಮೇಲಿನಿಂದ ಬೀಳುವಾಗ ರಕ್ಷಿಸಲು ಧಾವಿಸುವುದನ್ನು ಬಿಟ್ಟು ಮೊಬೈಲ್ ಕ್ಯಾಮಾರದಿಂದ ಶೂಟ್ ಮಾಡಿ ಇವರಿಗೆ ಕಳುಹಿಸಿ ಪುಣ್ಯ ಕಟ್ಟಿಕೊಂಡ ಆ ಮಹಾನುಭಾವರ ಇಂಟರ್‌ವ್ಯೂ ಕೂಡ ಮಾಡಲು ಅದೇ ಚಾನಲ್‌ನವರು ಟೈಮ್ ಸೆಟ್ ಮಾಡಿದ್ದರು! ನಾನು ಪದೇ ಪದೇ ಆ ಅಮಾನುಷ ದೃಶ್ಯವನ್ನು ಅದೇ ಚಾನಲ್‌ನಲ್ಲಿ ನೋಡಿ ಅವರ ಟಿ.ಆರ್.ಪಿ ಹೆಚ್ಚಳಕ್ಕೆ ಕಾರಣಳಾಗಿ, ಆ ಮೂಲಕ ಆ ಪಾಪದಲ್ಲಿ ನಾನೂ ಭಾಗೀಧಾರಳಾಗದಿರಲು ನಿರ್ಧರಿಸಿ, ಚಾನಲ್ ಬದಲಾಯಿಸಿಬಿಟ್ಟೆ. ಓರ್ವ ವೀಕ್ಷಕನನ್ನು ಅವರ ಟಿ.ಆರ್.ಪಿ ಇಂದ ಕಡಿಮೆಮಾಡಿದ ಅಲ್ಪ ಸಮಾಧಾನ ನನ್ನದಾಯಿತು ಅಷ್ಟೇ.

ಇಂದು ಒಂದು ಪತ್ರಿಕೆಯಲ್ಲಿ ಓರ್ವ ಪ್ರಸಿದ್ಧ ನಟನನ್ನೋ, ಇಲ್ಲಾ ಒಂದು ಪಕ್ಷದ ರಾಜಕಾರಣಿಯನ್ನೋ ಚೆನ್ನಾಗಿ ಬೈದು ಬರೆದರೆ, ಮರುದಿನ ಇನ್ನೊಂದು ಪತ್ರಿಕೆಯಲ್ಲಿ ಅದೇ ನಟ ಹಾಗೂ ರಾಜಕಾರಣಿಯನ್ನು ಹೊಗಳಿಯೋ ಇಲ್ಲಾ ಬೈದ ಪತ್ರಿಕೆಗೆ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ಕೊಡುವ ರೀತಿಯಲ್ಲೋ ಅವರ ಹೇಳಿಕೆ ಪ್ರಕಟವಾಗಿರುತ್ತದೆ. ಎರಡೂ ಪತ್ರಿಕೆಗಳು ತಮ್ಮ ತಮ್ಮ ಬೇಳೆ ಬೇಯಿಸಿಕೊಂಡಿರುತ್ತವೆ ಎನ್ನುವುದು ಮಾತ್ರ ಸತ್ಯ. ಉಳಿದದ್ದೆಲ್ಲಾ ಓದಿಗ ಮಹಾಶಯರಿಗೇ ಬಿಟ್ಟಿದ್ದು. ಜನಸಾಮಾನ್ಯರ ಪ್ರತಿನಿಧಿಯಾಗಬೇಕಾಗಿದ್ದ ಮಾಧ್ಯಮ ಅವರನ್ನಾಳುವ ಪಕ್ಷ, ವಿಪಕ್ಷಗಳ ಕೈಗೊಂಬೆಯಾಗಿರುವುದು ತುಂಬಾ ಖೇದಕರ ವಿಷಯ. ನಾನೇನೂ ಮಾಧ್ಯಮದವರೆಲ್ಲಾ ಸುದ್ದಿ ಸೃಷ್ಟಿಸುತ್ತಿರುವವರು ಎಂದು ಆರೋಪ ಮಾಡುತ್ತಿಲ್ಲ. ಆದರೆ ಕಲವೇ ಕೆಲವು ಮಾಧ್ಯಮದವರಿಂದಾಗಿ ಇಂದು ಈ ಕ್ಷೇತ್ರ ನಮ್ಮಿಂದ ಅಂದರೆ ಸಾಮಾನ್ಯ ಜನರಿಂದ ಬಹು ದೂರವಾಗುತ್ತಿದೆ... ಬಹುಪಾಲು ಆಗಿದೆ ಕೂಡ ಎಂದಷ್ಟೇ ಹೇಳುತ್ತಿದ್ದೇನೆ.

"ಇಲ್ಲಿ ಸುದ್ದಿ ಹುಟ್ಟುವುದಿಲ್ಲ.. ಸೃಷ್ಟಿಸಲಾಗುತ್ತದೆ" ಎನ್ನುವ ಆಘಾತಕಾರಿ ಸತ್ಯವನ್ನು ರಣ್‌ನಲ್ಲಿ ವರ್ಮಾ ಬಹು ಚೆನ್ನಾಗಿ ಕಾಣಿಸಿದ್ದಾರೆ. ಸುದ್ದಿ ಮಾಧ್ಯಮದೊಳಗಿನ ಹೊಲಸನ್ನು, ಕುರೂಪತೆಯನ್ನು ತೊಡೆದುಹಾಕಲು, ಆ ವ್ಯವಸ್ಥೆಯೊಳಗಿನ ಅವ್ಯವಹಾರಗಳನ್ನು ಬಯಲಿಗೆಳೆಯಲು ವರ್ಮಾ ಬಳಸಿಕೊಂಡ ಪಾತ್ರಗಳೂ ಅದೇ ಮಾಧ್ಯಮ ಜಗತ್ತಿನೊಳಗಿನ ವ್ಯಕ್ತಿಗಳೇ ಆಗಿದ್ದುದು ಮತ್ತೂ ವಿಶೇಷ. ಯಾವುದೇ ಒಂದು ಕ್ಷೇತ್ರದೊಳಗಿನ ಅವ್ಯವಸ್ಥೆಯನ್ನು, ಅನೀತಿಯನ್ನು ಸರಿಪಡಿಸಲು ಆ ಕ್ಷೇತ್ರದೊಳಗಿನ ಜನರಿಂದಲೂ ಸಾಧ್ಯ, ಅದಕ್ಕಾಗಿ ಬೇರೆಯವರ ಅವಲಂಬನೆ ಬೇಕಾಗಿಲ್ಲ, ಎನ್ನುವ ಉತ್ತಮ ಸಂದೇಶ ನೀಡಿದ್ದಾರೆ. ಅಂತೆಯೇ ಒಂದು ಕ್ಷೇತ್ರದೊಳಗೆ ದುಡಿಯುವ ಎಲ್ಲರೂ ಕೆಟ್ಟವರಲ್ಲ, ನಿಯತ್ತು, ನೈತಿಕತೆ, ಪ್ರಾಮಾಣಿಕತೆ ಹೊಂದಿರುವವರೂ ಇರುತ್ತಾರೆ ಎನ್ನುವುದನ್ನೂ ತೋರಿಸಿದ್ದಾರೆ. ಇನ್ನು ರಣ್ ಚಿತ್ರದ ನಟರ ಹಾಗೂ ಅವರ ನಟನೆಯ ಕುರಿತು ಹೇಳಬೇಕೆಂದರೆ.... ನಮ್ಮಲ್ಲಿ ಅಂದರೆ, ಕನ್ನಡದಲ್ಲಿ ಪ್ರತಿಭೆಗಳಿಲ್ಲ ಎನ್ನುವವರ ಬಾಯಿ ಮುಚ್ಚಿಸುವಂತೆ ನಟಿಸಿದ್ದಾರೆ ಸುದೀಪ್. ಅಮಿನಾಬ್ ಗೆ ಅಮಿತಾಬ್ ಸಾಟಿ ಎನ್ನುವಂತಿದೆ ಬಚ್ಚನ್ ಅವರ ನಟನೆ. ವಿಲಾಸ್ ರಾವ್‌ದೇಶ್‌ಮುಖ್ ಮಗ ಎನ್ನುವ ಐಡೆಂಟಿಟಿಯಿಂದ ಸಂಪೂರ್ಣ ಹೊರಬಂದು ಪರಿಪೂರ್ಣ ನಟನಾಗಿರುವುದಕ್ಕೆ ಸಾಕ್ಷಿ ನೀಡಿದ್ದಾರೆ ರಿತೇಶ್ ದೇಶ್‌ಮುಖ್. "ರಣ್‌ನಲ್ಲಿ" ಎಲ್ಲಾ ನಟರೂ ತಮಗೆ ದಕ್ಕಿದ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಚಿತ್ರದ ಕೊನೆಯಲ್ಲಿ ನಿರ್ದೇಶಕ ವರ್ಮಾ, ಚಿತ್ರದಲ್ಲಿ ನ್ಯೂಸ್‌ಚಾನಲ್ ಒಂದರ ಒಡೆಯನಾಗಿರುವ ವಿಜಯ್ ಹರ್ಷವರ್ಧನ್(ಅಮಿನಾಬ್ ಬಚ್ಚನ್) ಮೂಲಕ ಮಾಧ್ಯಮಕ್ಕೆ ಮಾಧ್ಯಮದವರಿಂದಾಗುತ್ತಿರುವ ಅನ್ಯಾಯವನ್ನು ಎತ್ತಿ ಹಿಡಿದು, ಸುಳ್ಳಿನ ಪರದೆಯೊಳಗೆ ಹುದುಗಿರುವ ಸತ್ಯವನ್ನು ಹೊರತಂದು, ಮಾಧ್ಯಮ ಜಗತ್ತಿಗೆ ನೈತಿಕತೆಯ ಪಾಠವನ್ನು ಹೇಳುವುದರ ಮೂಲಕ ಅರ್ಥವತ್ತಾದ ಅಂತ್ಯವನ್ನೂ ಕೊಟ್ಟಿದ್ದಾರೆ. ನಾನೇನೂ ವರ್ಮಾರ ದೊಡ್ಡ ಅಭಿಮಾನಿಯೂ ಅಲ್ಲ, ಅವರ ಎಲ್ಲಾ ಚಿತ್ರಗಳನ್ನೂ ನೋಡಿಲ್ಲ. ಆದರೆ ರಣ್ ಚಿತ್ರ ಬಹು ಮೆಚ್ಚುಗೆಯಾಯಿತು. ಚಿತ್ರಕಥೆಯೊಳಗಿನ ಆಶಯ ತುಂಬಾ ಚೆನ್ನಾಗಿದೆ. ಕಥೆಗಾರ ಸತ್ಯನೋ ಅಲ್ಲವೋ ಎನ್ನುವುದು ತಿಳಿಯದು. ನಿರ್ದೇಶಕನ ಸಾಚಾತನವನ್ನು ಅಳೆಯುವ ಬದಲು ಅವನ ನಿರ್ದೇಶನದೊಳಗಿನ ಪ್ರಾಮಾಣಿಕತೆಯನ್ನು ಮಾತ್ರ ನೋಡುವುದು ಉತ್ತಮ.

ಕೊನೆ ಕಹಳೆ : ಕಾಖಿ, ಖಾವಿ, ಖಾದಿ - ಈ ಮೂರರಿಂದ ಆದಷ್ಟು ದೂರವಿರಬೇಕೆಂದು ಹೆಚ್ಚಿನವರು ಹೇಳುತ್ತಾರೆ. ಅದು ಬಹುಮಟ್ಟಿಗೆ ನಿಜ ಕೂಡ. ಆದರೆ ಈಗ ಈ ಮೂರರೊಂದಿಗೆ ಮತ್ತೊಂದೂ ಸೇರುವಂತಿದೆ..... ಅದೇ "ಮಾಧ್ಯಮ"!!

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳೆಲ್ಲಾ ವೈಯಕ್ತಿಕವಾದವುಗಳು...)

-ತೇಜಸ್ವಿನಿ ಹೆಗಡೆ.

ಸೋಮವಾರ, ಫೆಬ್ರವರಿ 8, 2010

ನಾ ಕಂಡ ‘ನೀಲಿ’ "ಅವತಾರ"

"ನಾನು ಅದಿತಿ ನೋಡ್ಕತ್ತಿ... ನೀ ಬೇಕಿದ್ರೆ ನೋಡ್ಲಕ್ಕು ಫಿಲ್ಮ್.. ಎಂತ ಮಾಡ್ತೆ ಹೇಳು... ಮೊದಲೇ ಬುಕ್ಕಿಂಗ್ ಮಾಡಿಡವು. ಚೆನ್ನಾಗಿದ್ದಡ ರಾಶಿಯ.. ನೋಡ್ಕ ಬಾ.." ಎಂದು ನನ್ನವರು ಹೇಳಿದಾಗ ನಾನು ಬಹು ಆಶ್ಚರ್ಯಗೊಂಡಿದ್ದು ಅವರು ಆ ರೀತಿ ಹೇಳಿದ್ದಕ್ಕಲ್ಲಾ. ಬದಲು ನಾನು ಫಿಲ್ಮ್ ನೋಡಲು ಟಾಕೀಸ್‌ಗೆ ಹೋಗಬೇಕೆಂಬ ಮಾತು ನನ್ನೊಳಗೇ ಅರಿಯದ ಅಚ್ಚರಿ ತಂದಿದ್ದು. ಕೊನೆಯ ಬಾರಿ ನಾನು ಚಲನಚಿತ್ರವೊಂದನ್ನು ಟಾಕೀಸ್‌ಗೇ ಹೋಗಿ ನೋಡಿದ್ದು ಎಂಟನೆಯ ತರಗತಿಯಲ್ಲಿದ್ದಾಗ. ಅದೂ ಅಪ್ಪ, ಅಮ್ಮ, ತಂಗಿಯಂದಿರು, ಅಜ್ಜ ಹಾಗೂ ಅಜ್ಜಿಯೊಡನೆ. ಆಮೇಲೆ ಹೋಗೇ ಇಲ್ಲ. ಅದರಲ್ಲೇನೂ ದೊಡ್ಡಸ್ತಿಕೆಯೂ ಇಲ್ಲವೆನ್ನಿ. ಮೊದಲನೆಯದಾಗ ಚಿಲನಚಿತ್ರಗಳು ಕೇಬಲ್‌ನಲ್ಲೇ ಸುಲಭವಾಗಿ(ಸ್ವಲ್ಪ ತಡವಾಗಿಯಾದರೂ) ನೋಡಲು ಸಿಗತೊಡಗಿದವು. ಎರಡನೆಯದಾಗಿ ಅದೇಕೋ ಎಂತೋ ಹೋಗಿ ನೋಡಬೇಕೆಂಬ ಆಶಯವೇ ಹುಟ್ಟುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹೋಗಲು ಇದ್ದ ಸಮಸ್ಯೆಗಳು. ಆಗ ಮಂಗಳೂರಿನಲ್ಲಿದ್ದ ಉತ್ತಮ ಟಾಕೀಸ್‌ಗಳಿಗೆಲ್ಲಾ ವ್ಹೀಲ್‌ಚೇರ್ ಸುಲಭವಾಗಿ ಹೋಗುತ್ತಿರಲಿಲ್ಲ. Inox, PVRಗಳ ಸೌಲಭ್ಯಗಳೂ ಇರಲಿಲ್ಲ. ಹಾಗಾಗಿ ಅದೊಂದು ಅಭ್ಯಾಸವೇ ತಪ್ಪಿಹೋಗಿತ್ತು. ಈಗ ಸರಿಸುಮಾರು ೧೭ ವರುಷಗಳ ನಂತರ ನನ್ನವರು ಹೋಗು ಎಂದಾಗ ದೊಡ್ಡದಾಗಿ ನಕ್ಕು ಬಿಟ್ಟಿದ್ದೆ. ಕಾರಣ ಮದುವೆಯನಂತರವೂ ನಮಗೆ ಫಿಲ್ಮ್‌ಗೆ ಹೋಗ ಬೇಕೆಂದೇ ಅನಿಸಿರಲಿಲ್ಲ. ಇಲ್ಲಿ Inox, PVRಗಳು ಎಲ್ಲೆಂದರಲ್ಲಿ ಇದ್ದರೂ ಕೂಡ ಹೋಗಿರಲಿಲ್ಲ. ಕಾರಣ ಒಂದೇ...ಸುಲಭದಲ್ಲಿ ಸಿ.ಡಿ.ಗಳಲ್ಲೋ, ಅಂತರ್ಜಾಲದಲ್ಲೋ ಸಿಗುತ್ತಿರುವ ಫಿಲ್ಮ್‌ಗಳನ್ನು ಆರಾಮವಾಗಿ ಬೇಕಾದಾಗ, ಬೇಕಾದ ರೀತಿಯಲ್ಲಿ ವಿಶ್ರಮಿಸುತ್ತಾ ನೋಡಬಹುದು. ಆದರೆ ಅವತಾರ್ ಮಾತ್ರ ೩-ಡಿ ಆಗಿದ್ದರಿಂದ ಟಾಕೀಸ್‌ಗೇ ಹೋಗಿ ನೋಡಬೇಕು. ಅದಕ್ಕಾಗಿ ನನ್ನವರು ಬಹು ಒತ್ತಾಯಿಸುತ್ತಿದ್ದರು. ಆದರೆ ನಾನೇ ಒಪ್ಪಿರಲಿಲ್ಲ. ಎರಡೂವರೆ ವರ್ಷದ ಪುಟ್ಟಿಯನ್ನೊಬ್ಬಳನ್ನೇ ಬಿಟ್ಟು ೩ ತಾಸು ಹೋಗುವುದಕ್ಕೆ ಯಾಕೋ ಮನಸೊಪ್ಪುತ್ತಿರಲಿಲ್ಲ. ಆದರೂ ಎಲ್ಲೋ ಒಂದು ಕಡೆ ಬಹು ಚರ್ಚಿತ "ಅವತಾರ"ವನ್ನು ನೋಡಬೇಕೆಂಬ ಹಂಬಲ ಬೇರೆ. ಅಂತೂ ಕೊನೆಗೆ ನಾಲ್ಕುಕಣ್ಗಳಲ್ಲೂ ನೋಡಲು ನಿರ್ಧರಿಸಿಯೇಬಿಟ್ಟೆ. ಹಾಗೆನ್ನುವುದಕ್ಕಿಂತಲೂ ನನ್ನವರು ಒತ್ತಡ ಹೇರಿ ಒಪ್ಪಿಸಿದರು ಎಂದರೆ ತಪ್ಪಾಗದು. "ಅಜ್ಜಿಮುದ್ಕಿ ತನ್ನ ಕೋಳಿಯಿಂದಲೇ ಬೆಳಗಾಗ್ತು ಹೇಳಿ ತಿಳ್ಕಂಡ ಹಾಗೆ ಅಂದ್ಕಳಡ. ನಾ ನೋಡ್ಕತ್ತಿ ಅದ್ನ. ನೀ ಏನೂ ಯೋಚ್ನೆ ಮಾಡಡ. ಅದ್ಕೆ ಉಣ್ಸಿ, ಆಡಿಸ್ತಾ ಇರ್ತಿ. ನಿನ್ನ ಬಿಟ್ಟಿಕ್ಕಿ ಬಂದ್ರಾತೋ ಇಲ್ಯೋ.. ಸುಮ್ನೇ ಹೋಗು.." ಎಂದು ಆಶ್ವಾಸನೆ ಕೊಟ್ಟಾಗ ಒಪ್ಪಲೇ ಬೇಕಾಗಿತ್ತು.

ಹೋಗುವಾಗಲೂ ಅಷ್ಟೇ. ಯಾರನ್ನು ಜೊತೆಗೆ ಕರೆದೊಯ್ಯಲಿ ಎಂಬ ಯೋಚನೆ! ಇವರಂತೂ ಸಾಥ್ ಕೊಡುವ ಹಾಗಿರಲಿಲ್ಲ. ಅದಿತಿಯನ್ನು ನೋಡಿಕೊಳ್ಳಲು ಇರಲೇ ಬೇಕಿತ್ತು. ಒಬ್ಬಳೇ ನೋಡಲು...ಅದೂ ಇಷ್ಟೊಂದು ವರುಷಗಳ ನಂತರ ಇಷ್ಟವಾಗಲಿಲ್ಲ. ಹೀಗಿರುವಾಗ ಕಾರಣಾಂತರಗಳಿಂದ ಅಮ್ಮ ಊರಿನಿಂದ ಬಂದಳು. ಸರಿ ಮತ್ತೂ ನಿಶ್ಚಿಂತೆಯಾಯಿತು. ಮೊದಲು ಅಮ್ಮ, ನಾನು ಹಾಗೂ ನನ್ನ ಕಿರಿಯ ತಂಗಿ ಹೋಗುವುದೆಂದು ಮಾತಾಗಿ ಮೂರು ಟಿಕೆಟ್ ಬುಕ್ ಮಾಡಿಯಾಯಿತು. ಆದರೆ ಹಿಂದಿನ ದಿನ ಅಮ್ಮ "ಈ ವಯಸ್ಸಲ್ಲಿ ಆ ಕಪ್ಪು ಕನ್ನಡ್ಕ ಹಾಕ್ಕಂಡು ನಾ ತಲೆ ನೋವು ತರ್ಸ್ಕತ್ನಿಲ್ಲೆ. ಅದೂ ಅಲ್ದೇ ನಂಗೆ ಕತ್ಲಲ್ಲಿ ನಿದ್ದೆ ಬಂದೋಗ್ತು. ದುಡ್ಡು ದಂಡ. ಅದ್ರ ಬದ್ಲು ನೀನು ರಾಮು(ನನ್ನವರು), ತಂಗಿ ಹೋಗಿ.... ಅದಿತಿ ನನ್ನ ಹತ್ರ ಆರಮಾಗಿ ಇರ್ತು" ಅಂದು ಬಿಟ್ಲು. ಆದರೆ ನನ್ನವರಿಗೆ ಅದಿತಿಯ ಚಿಂತೆ. ಅದೂ ಮೊದಲ ಬಾರಿ ಅಷ್ಟೊತ್ತು ಅಪ್ಪ, ಅಮ್ಮ ಇಬ್ಬರನ್ನೂ ಬಿಟ್ಟು ಇರಲಾರಳೇನೋ ಎಂಬ ಮಮಕಾರದಿಂದ ನಾವಿಬ್ಬರೂ ಒಪ್ಪಲಿಲ್ಲ. ಅಂತೂ ಇಂತೂ ಯೋಚಿಸಿ ನನ್ನ ಇನ್ನೊಂದು ತಂಗಿಯನ್ನು ಬರಲೊಪ್ಪಿಸಿದೆ. ಅವಳಿಗೋ ಒಂದೂವರೆ ವರುಷದ ಮಗ. ಮತ್ತೂ ಕಷ್ಟವೇ. ಆದರೂ ಆಕೆ, ಅವಳ ಪತಿ ಹಾಗೂ ನನ್ನಮ್ಮನ ಭರವಸೆಯ ಮೇಲೆ ಬರಲೊಪ್ಪಿದಳು. ಸರಿ ಮೂವರೂ ಸಹೋದರಿಯರು ಅವತಾರಕ್ಕಾಗಿ ತಯಾರಾದೆವು. ನನ್ನೊಳಗೇನೋ ತಳಮಳ. ಅಷ್ಟೊಂದು ವರುಷಗಳ ನಂತರ ಹೊರಗೆ ಚಲನಚಿತ್ರವೊಂದನ್ನು ನೋಡುವ ಕಾತರ ಒಂದೆಡೆಯಾದರೆ, ೩-ಡಿ ಪಿಕ್ಚರ್ ಎಂಬ ವಿಶೇಷಭಾವ ಇನ್ನೊಂದೆಡೆ. ಅದಿತಿ ಎಲ್ಲಿ ಅತ್ತೂ ಕೂಗಿ ಕೊನೆಯ ಗಳಿಗೆಯಲ್ಲಿ ರಂಪಾಟ ಮಾಡುವಳೋ ಎಂಬ ಚಿಂತೆಯೂ ಒಳಗೊಳಗೇ.

ಅಂತೂ ಇಂತೂ ಆ ದಿನ ಬಂದೇ ಬಿಟ್ಟಿತು. ತಿಲಕ ನಗರದಲ್ಲಿರುವ Inoxಗೆ ನಾನು ನನ್ನವರು, ಅಮ್ಮ, ತಂಗಿಯಂದಿರು, ತಂಗಿಯ ಗಂಡ, ಇಬ್ಬರು ಪುಟಾಣಿಗಳೊಡನೆ ಧಾಳಿ ಇಟ್ಟೆವು. ಮೊದಲೇ ಬುಕ್ ಮಾಡಿಟ್ಟಿದ್ದ ಟಿಕೆಟ್ ಪಡೆದ ನನ್ನವರು ನನ್ನನ್ನು ಕೂರಿಸಿ ಬರಲು ಒಳ ಕರೆದೊಯ್ದರು. ಮುಂದಿನ ಸಾಲಿನ ಸೀಟಿನವರೆಗೂ ಆರಮವಾಗಿ ಹೋದೆವು. ಆದರೆ ನಮ್ಮ ಟಿಕೆಟ್ ದುರದೃಷ್ಟವಶಾತ್ ಮೇಲಿನ ಸಾಲಿನಲ್ಲಾಗಿತ್ತು. ನನ್ನವರ ಗಮನಕ್ಕೆ ಅದು ಬರದೇ ಅವಾಂತರ ಆಗಿಹೋಗಿತ್ತು. ವ್ಹೀಲ್‌ಚೇರ್ ಅಷ್ಟು ಎತ್ತರಕ್ಕೆ ಸರಾಗವಾಗಿ ಹೋಗದು. ನಾಜೂಕಿನ ಮೆಟ್ಟಿಲುಗಳು ಬೇರೆ ಎಲ್ಲಿ ಹಾಳಾಗುವವೋ ಎಂಬ ಆತಂಕ ಅಲ್ಲಿಯ ಸಿಬ್ಬಂದಿಗಳಿಗೆ. ಹಾಗಾಗಿ ಕೆಳಗಿನ ಸಾಲಿನಲ್ಲೇ ನನಗೂ ನನ್ನ ಮೊದಲನೆಯ ತಂಗಿಗೂ ಸೀಟ್ ಕೊಟ್ಟು, ನಮ್ಮ ಸೀಟ್ ಅನ್ನು ಬೇರೆಯವರಿಗೆ ಕೊಟ್ಟರು. ಕೊನೆಯ ತಂಗಿ ನಮ್ಮಿಂದ ಬೇರೆಯಾಗಿ ಮೇಲೆ ಕುಳಿತುಕೊಳ್ಳುವಂತಾಯಿತು. ಎಲ್ಲಾ ಸರಿಯಾಗಿರುವುದನ್ನು ಖಚಿತಪಡಿಸಿಕೊಂಡ ನನ್ನವರು ಅಮ್ಮ, ಮಕ್ಕಳು ಹಾಗೂ ತಂಗಿಯ ಪತಿಯೊಡನೆ ಮನೆಗೆ ತೆರಳಿದರು.
ಸರಿ ಇನ್ನೇನು ಕತ್ತಲಾವರಿಸಿ, ಬೆಳಕು ಪರದಿಯ ಮೇಲೆ ಬಿದ್ದಿದ್ದೇ ತಡ ಎಲ್ಲಿ ಪಿಕ್ಚರ್ ಶುರುವಾಯಿತೋ ಎಂದು ಗಡಿಬಿಡಿ ಮಾಡಿಕೊಂಡು ಕನ್ನಡಕ ಏರಿಸಿಯೇ ಬಿಟ್ಟೆ. ಆದರೆ ಅಲ್ಲಿ ಕಂಡಿದ್ದು ಒಂದಿಷ್ಟು ಜಾಹೀರಾತುಗಳು. ತಂಗಿ ತಂದ ಪೊಪ್‌ಕಾರ್ನ್ ರುಚಿ ನಾಲಗೆಯನ್ನು ಹತ್ತುತ್ತಿರುವಾಗಲೇ "ಅವತಾರ" ಪ್ರಾರಂಭವಾಯಿತು. ಮೊದಲ ಹತ್ತು ನಿಮಿಷ ೩-ಡಿ ಕನ್ನಡಕವನ್ನು ನಮ್ಮ ದೃಷ್ಟಿಗೆ ಹೊಂದಿಸಿಕೊಳ್ಳಲೇ ಬೇಕಾಯಿತು. ತಲೆನೋವಾದಂತೆ, ಹೊಟ್ಟೆ ತೊಳೆಸಿದಂತಹ ಅನುಭವದಿಂದ ಸ್ವಲ್ಪ ಹೊತ್ತು ಕಿರಿಕಿರಿಯಾಯಿತು. ಅಷ್ಟರೊಳಗೆ ನಮಗೆ ಫೋನ್ ಮಾಡಿದ ಅಮ್ಮ ನಮ್ಮಿಬ್ಬರ ಮಕ್ಕಳೂ ಆರಮವಾಗಿ ಇದ್ದಾರೆಂದೂ, ಆಡುತ್ತಿದ್ದಾರೆಂದೂ, ಯಾವುದೇ ವಿಷಯಕ್ಕೂ ಚಿಂತಿಸಿದೇ ಪಿಕ್ಚರ್‌ನ ಆನಂದಿಸಬೇಕೆಂದೂ ಹೇಳಲು ನಾವು ನಿಶ್ಚಿಂತರಾದೆವು. ಕ್ರಮೇಣ ನಾನು ಎಲ್ಲವನ್ನೂ ಮರೆತು "ಪಂಡೋರಾದಲ್ಲೇ" ವಿಹರಿಸ ತೊಡಗಿದೆ.

ಅದೊಂದು ಮಾಯಾನಗರಿಯೇ ಸರಿ. ಎತ್ತನೋಡಿದರತ್ತ ನೀಲ ವರ್ಣ. ಚಿತ್ರವಿಚಿತ್ರ ಪ್ರಾಣಿಗಳು, ಪಕ್ಷಿಗಳು, ಅಲ್ಲಿಯ ನಾ-ವಿ ಜನಾಂಗದವರ ವಿಚಿತ್ರ ವರ್ತನೆಗಳು, ಸಂಪ್ರದಾಯಗಳು, ತೇಲುವ ಪರ್ವತಗಳಿಂದ ಧುಮುಕುವ ಜಲಪಾತಗಳು, ಬೃಹತ್ ಮರಗಳು, ಬಿಳಲುಗಳು, ಅತಿ ಸುಂದರ ಮನಮೋಹಕ ಹೂವುಗಳು, ಎಲ್ಲವೂ ನನ್ನ ಮನಸೂರೆಗೊಂಡವು. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಇಷ್ಟವಾಗಿದ್ದು ಅಲ್ಲಿಯ ಜೀವಿಗಳ ನೀಲವರ್ಣ. ಅದು ನನ್ನಚ್ಚುಮೆಚ್ಚಿನ ಬಣ್ಣವೂ ಹೌದು. ಫೆಂಗ್‌ಶುಯಿ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ನೀಲ ಬಣ್ಣ ನಮ್ಮ ಮನಸಿನೊಳಗಿನ ನೋವನ್ನು ಶಮನಗೊಳಿಸಿ, ನೆಮ್ಮದಿಯ ಭಾವವನ್ನು ಕೊಡುತ್ತದೆಯಂತೆ. ಅಲ್ಲದೇ ನೀಲವರ್ಣ ವಿಶ್ವಾಸದ, ಶಾಂತಿಯ, ವಿಶ್ರಾಂತಿಯ ಪ್ರತೀಕ. ಇದು ನಮ್ಮ ಮನಸ್ಸನ್ನು ನಿರಾಳಗೊಳಿಸುವಂತಹದು, ಮನೋವಿಕಾಸಕ್ಕೆ ನೀಲವರ್ಣದ ಕೊಡುಗೆ ಅಪಾರ. ಹಾಗಾಗಿಯೇ ಬಹುಶಃ "ನಾ-ವಿ" ಜನಾಂಗದವರನ್ನು ನಿರ್ದೇಶಕ "ಜೇಮ್ಸ್ ಕೆಮರೂನ್" ಹೊಳೆವ ನೀಲಿ ಬಣ್ಣದಲ್ಲೇ ಮುಳುಗೇಳಿಸಿದ್ದು. ಅದು ಅವರ ಮನಸಿನೊಳಗಿನ ಶುದ್ಧತೆಗೆ, ಮುಗ್ಧತೆಗೆ, ಶಕ್ತಿಗೆ ಹಿಡಿದ ಕನ್ನಡಿಯಂತಿದೆ. ನೀಲ ನದಿ, ಝರಿ, ಬೆಟ್ಟ, ಹೂವು ಎಲ್ಲವೂ ೩-ಡಿಯೊಳಗೆ ನನ್ನ ಮೈ, ಕೈಗಳನ್ನು ಸವರಿ ಹೋದಾಗ ತುಂಬಾ ಪುಳಕಿತಳಾಗಿದ್ದೆ. ಒತ್ತಾಯಿಸಿ ಕಳುಹಿಸಿದ ನನ್ನವರನ್ನು ಮನದಲ್ಲೇ ಅಭಿನಂದಿಸಿದೆ.

"ಅವತಾರದ" ಜೀವಾಳ - ಅವತಾರ ಗೆದ್ದಿದ್ದು ಪ್ರಕೃತಿಯ ಮುಂದೆ ಮಾನವನನ್ನು ಸೋಲಿಸಿದ್ದರಿಂದ. ಎಲ್ಲೋ ನಮ್ಮೊಳಗೆ ಅವಿತಿರುವ ನಮ್ಮ ಪೈಶಾಚಿಕತೆಯ ಅರಿವಿದೆ ನಮಗೆ. ಹಾಗಾಗಿಯೇ ಮನುಷ್ಯನ ಸೋಲನ್ನು ಕಣ್ಮುಂದೆ ಕಂಡಾಗ ಸಮಾಧಾನಗೊಳ್ಳುತ್ತದೆ ಮನಸ್ಸು. ಪಂಡೋರದಲ್ಲಿ ನಾ-ವಿಗಳು, ಪ್ರಾಣಿಗಳು, ಡ್ರಾಗನ್‌ಗಳು ಮನುಷ್ಯರನ್ನು ಕಿತ್ತು ಬಿಸುಟಾಗ ನಮಗೂ ಹಾಯೆನಿಸುತ್ತದೆ. ಅದಕ್ಕೆ ಕಾರಣ ನಮ್ಮೊಳಗಿನ ಮನುಷ್ಯತ್ವ ಇನ್ನೂ ಜೀವಂತವಾಗಿರುವುದು. ಸುಂದರ ನೀಲನಗರಿ, ನೀಲಿ ಜನರು ವಿನಾಕಾರಣ ಮನುಜರ ದುರಾಸೆಗೆ ಭಸ್ಮವಾಗುವುದನ್ನು ಕಂಡಾಗ ಅದು ತೆರೆಯ ಮೇಲೆ ಎಂದು ಅರಿತಿದ್ದರೂ, ಅರಿಯದ ರೋಷ ಮಾನದೊಳಗೆ ಮನೆಮಾಡುತ್ತದೆ. ಅಂತಿಮದಲ್ಲಿ ಗೆಲ್ಲುವ ನಾ-ವಿಗಳ ಜೊತೆ ನಾವೂ ಮನಃಪೂರ್ತಿ ಪಾಲ್ಗೊಳ್ಳುವಾಗ ಎನೋ ಧನ್ಯತಾ ಭಾವ. ಒಂದು ಹಂತದಲ್ಲಿ ಅವರ ಪ್ರಕೃತಿ ದೇವತೆಯಾದ "ಏವಾ" ಪ್ರತಿಯೊಂದು ಪ್ರಾಣಿ, ಪಕ್ಷಿ, ಜೀವ ಸಂಕುಲಕ್ಕೂ ನಿರ್ದೇಶನ ಕೊಟ್ಟು ನಾ-ವಿಗಳ ಸಹಾಕ್ಕೆ ಕಳುಹಿಸುತ್ತಾಳೆ. ಹಾಗಾಗಿಯೇ ಸಬಲ ಮನುಷ್ಯನೂ ದುರ್ಬಲನಾಗಿ ಭೂಮಿಗೆ ಹಿಂತಿರುಗುತ್ತಾನೆ. (ಆದರೆ ಭೂಮಿಯ ಮೇಲೆ ನಡೆಯುವ ಅತ್ಯಾಚಾರ ಮಾತ್ರ ಎಗ್ಗಿಲ್ಲದಂತೇ ಸಾಗಿದೆ. ಪ್ರಕೃತಿಯನ್ನು ಶೋಷಿಸುತ್ತಿರುವ ನಮಗೆ ಮುಂದೊಂದು ದಿನ "ಏವಾ" ಕೊಟ್ಟ ಶಿಕ್ಷೆಯೇ ಕಾದಿರುವುದರಲ್ಲಿ ಏನೂ ಸಂಶಯವಿಲ್ಲ.) ನಾಯಕ "ಜೇಕ್" ಕೂಡ ಓರ್ವ ಮನುಷ್ಯನಾಗಿದ್ದರೂ ನಾ-ವಿಗಳ ಅಮಾಯಕತೆಗೆ ವಿಶ್ವಾಸಕ್ಕೆ, ಸತ್ಯತೆಗೆ ಮಾರುಹೋಗಿ ಅವರಂತೇ ಆದ. ಅವರಿಗಾಗಿ ಹೋರಾಡಿ ಅವರಲ್ಲೇ ಒಂದಾಗಿ ಹೋದ. ಅವನೊಳಗಿನ ಮನುಷ್ಯತ್ವಕ್ಕೆ ನೀರೆರೆದು ಪೋಷಿಸಿದ್ದು ನಾ-ವಿಜನಾಂಗದವರ ಸಾಂಗತ್ಯ ಹಾಗೂ ರಾಜಕುಮಾರು "ನೆಯ್ತಿರಿ"ಯ ನಿರ್ಮಲ ಪ್ರೀತಿ. ಅದಕ್ಕೇ ಬಹುಶಃ ಹೇಳಿದ್ದು ಹಿರಿಯರು "ಸಜ್ಜನರ ಸಂಗ ಹೆಜ್ಜೇನು ಸವಿದಂತೆ" ಎಂದು. ೩-ಡಿ ಕನ್ನಡಕ ನಾ-ವಿಗಳನ್ನು ಅವರ ಸುಂದರ ಅದ್ಭುತ ಲೋಕವನ್ನು ನಮಗೆ ಮತ್ತಷ್ಟು ಹತ್ತಿರ ತಂದು, ಮನುಷ್ಯನ ದುಷ್ಟ ಹಾಗೂ ಸುಂದರ ಎರಡೂ ಅವತಾರಗಳನ್ನು ತೋರಿಸುತ್ತದೆ. ಅತ್ಯದ್ಭುತ ತಂತ್ರಜ್ಞಾನ, ಸುಂದರ ನಿರ್ದೇಶನವನ್ನು ನೋಡುವುದಕ್ಕಾಗಿ ಒಮ್ಮೆಯಾದರೂ "ಅವತಾರ"ದೊಳಗೆ ಪ್ರವೇಶಿಸಬೇಕು. ಹೊರಬಂದ ಮೇಲೂ ಬಹುಕಾಲ ನೆನಪುಳಿಯುವುದು ಚಿತ್ರದ ಸುಂದರ ಸಂದೇಶದ "I See You". ಈ ಒಂದು ಸಾಲನ್ನು ಹೇಗೆ ಬೇಕಿದ್ದರೂ ಅರ್ಥೈಸಿಕೊಳ್ಳಬಹುದು. ಅನೇಕ ಅರ್ಥಗಳನ್ನು ಹೊಂದಿರುವ ಈ ಸಾಲು ಈಗಲೂ ನನ್ನನ್ನು ಕಾಡುತ್ತಲೇ ಇದೆ.

ಶುಭಂ : ಮನೆಗೆ ಬಂದ ಮೇಲೆ ನನ್ನವರು "ನೋಡೀದ್ಯಾ.. ಅದಿತಿ ಏನೂ ಹಟ ಮಾಡಿದ್ದೇ ಇಲ್ಲೆ. ನಿನ್ನ ಸುದ್ದಿನೂ ಹೇಳಿದ್ದಿಲ್ಲೆ. ಆರಾಮಿತ್ತು ನನ್ನಹತ್ರ. ನೀ ಮಾತ್ರ ಸುಮ್ನೇ ಹೆದ್ರಿದ್ದೆ.." ಎಂದು ಛೇಡಿಸಲು, ಪಟ್ಟು ಬಿಡದ ನಾನು "ಸರಿ ಹಾಗಿದ್ರೆ.. ಚೊಲೋನೇ ಆತು.. ಮುಂದಿನ ಸಲ "My Name Is Khan" ನೋಡಲೆ ನಾನು ಹೋಗ್ಲಕ್ಕು ಹೇಳಾತು.." ಎಂದಾಗ ಮಾತ್ರ ನನ್ನವರು ಪೆಚ್ಚು!


-ತೇಜಸ್ವಿನಿ.