ಮಂಗಳವಾರ, ಆಗಸ್ಟ್ 16, 2011

ಪ್ರಶ್ನೆಯಾಗಿ ಕಾಡಿದ ಮೌನ

ಅವನು ಕೇಳುತ್ತಲೇ ಇರುತ್ತಾನೆ
ಬರೆದಿಟ್ಟದ್ದೆಲ್ಲಾ ಮನದೊಳಗಿನದ್ದೇ?
ಇಲ್ಲಾ, ಇಲ್ಲದ್ದನ್ನು ಕಾಣುವ ಮನಃಸ್ಥಿತಿಯೇ?
ನಾನು ಒಳಗೊಳಗೇ ಕುದಿಯುತ್ತೇನೆ...
ಬೇಯುತ್ತೇನೆ ಕರಗಿ ಕರಟಿ ಹೊಗೆಯಾಗಿ,
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಹರಿವ ನೀರು ಮೇಲೇರಿ ಘನ ಮೋಡವಾಗಿ,
ಹನಿದು ತಂಪಾಗಿಸೋ ಮುನ್ನ,
ಧಗೆಯುರಿಯಿಂದ ಮೈ ಮನ ಸುಡುವಂತೆ...
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಬಿರಿದ ಹೂವೊಂದು, ಬಾಡಿ, ಉದುರಿ ಕೊಳೆತು,
ಮತ್ತೆ ಮೊಗ್ಗಾಗಿ, ಅರಳಿ ನಳನಳಿಸುವ ಮುನ್ನ-
ಮಣ್ಣೊಳಗೆ ಹೊಕ್ಕು ಕರಿ ಗೊಬ್ಬರವಾಗುವಂತೆ,
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಒಳಗಿನ ಭಾರದಿಂದ ಬಾಗಿದ ಎವೆಗಳನ್ನು ದಾಟಿ,
ಒಂದೊಂದಾಗಿ ಹಪಹಪಿಗಳು ಉದುರಿ,
ಕೆನ್ನೆಯ ಮೇಲೆ ನವ್ಯ ಚಿತ್ರಕಲೆ ಬರೆಯಲೆಂದೇ
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಬರೆದಿಟ್ಟದ್ದು, ಬರೆದಿರುವುದು, ಬರೆಯುವಂಥದ್ದು
ಬಹು ಅಲ್ಪ, ಅಮೂಲ್ಯ, ಸಹ್ಯ.
ನಿನ್ನೊಳಗಿನ ಪ್ರಶ್ನೆ ಮಾತ್ರ ನನ್ನೊಳಗಿನ
ನನ್ನನ್ನೇ ಹಿಂಡುವಂತಿದೆ, ಇದು ಅಸಹನೀಯ.
ತನ್ನೆರಡು ಪ್ರಶ್ನೆಗಳಿಗೆ ಸಾವಿರ ಉತ್ತರ ಪಡೆದ
ಅವನೀಗ ಸಂಪೂರ್ಣ ಮೌನಿ!!

-ತೇಜಸ್ವಿನಿ ಹೆಗಡೆ.

ಬುಧವಾರ, ಆಗಸ್ಟ್ 3, 2011

ನಾಲ್ಕು ತುಂಬಿತು ಹರುಷಕೆ

Aditi Hegde

ಮುಷ್ಠಿಯಾಗಿದ್ದ ಪುಟ್ಟ ಕೈಬೆರಳುಗಳ ಬಿಡಿಸೆ,
ಥಟ್ಟೆಂದು ನನ್ನ ಬೆರಳೊಂದನು ಹಿಡಿದ ನಿನ್ನ ಸ್ಪರ್ಶಕೆ
ತುಂಬಿದವಿಂದು ನಾಲ್ಕು ವರುಷಗಳು!

ನೆತ್ತಿಯ ಮೃದು ಭಾಗವ ಮೂಸಿ, ಆಸ್ವಾದಿಸಿ
ಕಡಲೇ ಹಿಟ್ಟಿನ ಪರಿಮಳವ ಒಳ ತುಂಬಿಕೊಂಡ
ಆ ಘಳಿಗೆಗೆ ಇಂದು ನಾಲ್ಕು ವರುಷಗಳು!

ಕೋಣೆಯ ತುಂಬಿದ ಸಾಂಬ್ರಾಣಿ ಹೊಗೆಯ ಘಾಟಿಗೆ
ಕಣ್ಮುಚ್ಚಿ ಬೋರೆಂದು ಅತ್ತ ನಿನ್ನ ಹಿಡಿದಪ್ಪಿದಾಗ
ಹಾಗೇ ನಿದ್ದೆಗೆಳೆದ ಗೊಂಬೆಗಿಂದು ನಾಲ್ಕು ವರುಷಗಳು!

ಬಂಧು ಬಳಗವೆಲ್ಲಾ ನಿನ್ನ ಅಪ್ಪಿ ಮುದ್ದಾಡುತ್ತಿದ್ದರೂ,
‘ಅಮ್ಮಾ’ ಎಂದು ಮೊದಲ ಬಾರಿ ಕರೆದು ನನ್ನೊಳಗಿನ ತಾಯ್ತನಕ್ಕೆ
ಸಾಕ್ಷಿಯೊದಗಿಸಿದ ಕಿನ್ನರಿಗೀಗ ನಾಲ್ಕು ವರುಷಗಳು!

ನನ್ನೊಳಗಿನ ನೀನು, ನಿನ್ನನೊಳಗಿನ ನಾನು ಒಳಗೊಳಗೆ ವಿಕಸಿತಗೊಂಡು,
ಮೊದಲ ನೋಟ, ಮೊದಲ ಸ್ಪರ್ಶ, ಸುಧೆಯ ಹನಿಯ ತುಟಿಗಿತ್ತ
ಆ ದಿನದಗಳ ನೆನಪಿಗಿಂದು ನಾಲ್ಕು ವರುಷಗಳು!

‘ಅದಿತಿಗಾಗಿ’ :)


-ತೇಜಸ್ವಿನಿ ಹೆಗಡೆ.