ಭಾನುವಾರ, ಜೂನ್ 17, 2012

ಒಂದು ದಿವಸಕ್ಕಲ್ಲಾ.. ಪ್ರತಿ ನಿಮಿಷ...


ಅಪ್ಪಾ...... 
-ಈ ಸುಂದರ, ಅನನ್ಯ, ಅನೂಹ್ಯ  ಬಂಧವನ್ನು ಒಂದು ದಿನದ ಬಂಧಿಯಾಗಿಸಲೇ ಮನಸೊಪ್ಪದು. ಪ್ರತಿ ದಿನ, ಕ್ಷಣ ನನ್ನ ಜೀವನದ ಭಾಗವಾಗಿರುವ ಅಪ್ಪನನ್ನು ನೆನಪುಗಳ ಹಂಗೂ ಬಾಧಿಸದು....ನೆನಪಾಗಲು ಅರೆಕ್ಷಣದ ಮರೆವಾದರೂ ಬೇಕಲ್ಲ!!!  ನಾನು ಇಂದು ನಾನಾಗಿರಲು.. ನನ್ನೊಳಗಿನ ನನ್ನ ಸದಾ ನನ್ನೊಂದಿಗೆ ಜೊತೆಗೂಡಿ ನಡೆಯುವಂತಾಗಿರಲು ನನ್ನ ಅಪ್ಪನೇ ಕಾರಣ. ಕೆಲವೊಂದು ಭಾವಗಳ ಅಕ್ಷರಗಳಲ್ಲಿ ಹಿಡಿಯಲಾಗದು.. ತೆರೆಯಲಾಗದು.  

ಅಪ್ಪಾ ಚಿಕ್ಕವಳಿದ್ದಾಗ ನಮಗೆಲ್ಲಾ ಒಂದು ಶ್ಲೋಕವನ್ನು ಕಲಿಸಿಕೊಟ್ಟಿದ್ದ...

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಮ್
(ಭಗವದ್ಗೀತೆ, ಧ್ಯಾನಶ್ಲೋಕ)
[ಅರ್ಥ:-ಮೂಗನನ್ನು ಮಾತಾಡಿಸುತ್ತಾನೆ, ಕಾಲಿಲ್ಲದವನನ್ನು ಪರ್ವತವನ್ನು ಹತ್ತುವಂತೇ ಮಾಡುತ್ತಾನೆ, ಅಂತಹ ಕೃಪಾಳುವಾಗಿರುವ, ಪರಮಾನಂದವನ್ನು ನೀಡುವ, ಮಾಧವನನ್ನು ನಾನು ವಂದಿಸುವೆ.]

ಇಲ್ಲಿಂದಲೇ ಕೃಷ್ಣ ನನಗೆ ಆಪ್ತನಾಗುತ್ತಾ ಹೋದ. ಇದಕ್ಕೆ ತುಸು ಮಟ್ಟಿಗೆ ಕಾರಣ ನನ್ನಪ್ಪನ ಹೆಸರಾದ "ಗೋಪಾಲಕೃಷ್ಣ". ಈ ಹೆಸರೊಳಗೂ ಅವನೇ ಇದ್ದನಲ್ಲಾ... ಮುಂದೆ ಆಕಸ್ಮಿಕವೋ ಇಲ್ಲಾ ವಿಧಿ ಲಿಖಿತವೋ...ನನ್ನ ಸಂಗಾತಿಯ ಹೆಸರೊಳಗೂ ಕೃಷ್ಣನೇ ದೊರಕಿದ್ದು!!:)

ಆ ನನ್ನ ಬಾಲ್ಯದ ದಿನಗಳಲ್ಲಿ ನನ್ನ ವಯಸ್ಸಿನ ಇತರ ಮಕ್ಕಳು ಓಡಾಡುತ್ತಾ... ಬೇಕಾದಲ್ಲಿ ಹೋಗುತ್ತಾ... ಜಿಗಿಯುತ್ತಾ ಇರುವಾಗ, ಅವರೊಂದಿಗೆ ಹಾರಲಾಗದೇ, ಆಡಲಾಗದೇ, ಓಡಲಾಗದೇ ಕುಳಿತಲ್ಲೇ ಅವನ್ನೆಲ್ಲಾ ಕಣ್ತುಂಬಿಕೊಳ್ಳುತ್ತಾ... ನನ್ನೊಳಗೇಳುತ್ತಿದ್ದ ನೂರಾರು ಸಂದೇಹಗಳಿಗೆ ವಿಪ್ಲವಗಳಿಗೆ, ನೋವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾನಸಿಕವಾಗಿ ನನ್ನ ಬಹು ಎತ್ತರಕ್ಕೇರಿಸಿದವ ನನ್ನಪ್ಪ.

ಆಗ ನನಗೆ ಕೇವಲ ಆರೇಳು ವರುಷಗಳಷ್ಟೇ ಆಗಿರಬಹುದು. ಪ್ರತಿ ದಿವಸ ಹೇಳುತ್ತಿದ್ದ ಹಲವು ಶ್ಲೋಕಗಳಲ್ಲಿ ಒಂದಾಗಿದ್ದ "ಮೂಕಂ ಕರೋತಿ.." ಶ್ಲೋಕದ ಅರ್ಥವನ್ನಂತೂ ಮೊದಲೇ ತಿಳಿದಿದ್ದೆ. ಅಂತೆಯೇ ಒಂದಿ ದಿವಸ ಅಪ್ಪನನ್ನೇ ಕೇಳಿ ಬಿಟ್ಟೆ "ಕಾಲಿಲ್ಲದವಗೆ ಪರ್ವತವನ್ನೇ ಏರುವ ಶಕ್ತಿ ಕೊಡುವ ಈ ಕೃಷ್ಣನನ್ನು ಪ್ರತಿ ದಿವಸ ಪ್ರಾರ್ಥಿಸುವ .. ಪೂಜಿಸುವ ನನಗೇಕೆ ಹೀಗೆ??" ಎಂದು. ಆಗ ಅಪ್ಪನ ಮೊಗದೊಳಗೆ ಮೂಡಿದ್ದ ಪ್ರಶಾಂತ ನಗು ಈಗಲೂ ಚೆನ್ನಾಗಿ ನೆನಪಿದೆ. ಅಷ್ಟೇ ಸುಂದರ ಸರಳ ಅವಿಸ್ಮರಣೀಯ ಉತ್ತರವನ್ನಿತ್ತಿದ್ದ ನನ್ನಪ್ಪ. ಅದೇ ಉತ್ತರ ನನ್ನ ಬದುಕಿನ ಪ್ರತಿ ಹಂತದಲ್ಲೂ ನನ್ನನ್ನು ಹಂತ ಹಂತವಾಗಿ ಮೇಲೇರಿಸಲು ಕಾರಣವಾಯಿತು. 

"ದೈಹಿಕವಾಗಿ ಹಾರಿ ಜಿಗಿಯುವ ಶಕ್ತಿಗಿಂತ ಸಾವಿರಾರು ಪಟ್ಟು ಶಕ್ತಿಶಾಲಿ ನಮ್ಮ ಮಾನಸಿಕ ಶಕ್ತಿ.. ಧೀಃಶಕ್ತಿ! ಅದರ ಪ್ರಾಪ್ತಿಗಾಗಿ ಮನೋಸಂಕಲ್ಪ, ದೃಢತೆ, ಆತ್ಮವಿಶ್ವಾಸ, ಛಲ - ಇವು ಅತ್ಯವಶ್ಯಕ. ಇವುಗಳನ್ನು ಗಳಿಸಲು, ಹೊಂದಲು... ಹೊಂದಿ ನೀನೂ ಮಾನಸಿಕವಾಗಿ ಇತರರಂತೇ.. ಸಾಧ್ಯವಾದರೆ ಇತರರಿಗಿಂತ ಮೇಲೇರಲು ಖಂಡಿತ ಸಾಧ್ಯವಾಗುತ್ತದೆ. ಅದಕ್ಕೊಂದು ಮಾರ್ಗ, ಸಾಧನ ಈ ನಿನ್ನ ಕೃಷ್ಣ". ಅಪ್ಪನ ಈ ಮಾತಿನ ಒಳಗಿದ್ದ ಸಾವಿರ ಅರ್ಥ ಬುದ್ಧಿ ಬೆಳೆದಂತೇ ಒಂದೊಂದಾಗಿ ಅರಿವಾಯಿತು...ಅರಿವಾಗುತ್ತಿದೆ.. ಇನ್ನೂ ತಿಳಿಯಬೇಕಿರುವುದು ನೂರಿವೆ!

ನನ್ನ ನೋವಿಗೆ ಅಪ್ಪ ಸ್ಪಂದಿಸಿದ... ನನ್ನೊಳಗಿನಾ ಆತ್ಮವಿಶ್ವಾಸಕ್ಕೆ ಆತ ನೀರೆರೆದು ಪೋಷಿಸಿದ, ಬದುಕಿನ ಹಲವು ಘಟ್ಟಗಳಲ್ಲಿ, ತಿರುವಿನಲ್ಲಿ.. ಮಹತ್ ಪರೀಕ್ಷೆಗಳಲ್ಲಿ ಹಿಂದೆಯೇ ಇದ್ದು, ನಾನೇ ಸ್ವಯಂ ಮುನ್ನೆಡೆವಂತೇ ಮಾಡಿದ ನನ್ನಪ್ಪನ ಮೇರು ವ್ಯಕ್ತಿತ್ವವನ್ನು ಕೆಲವು ಸಾಲುಗಳಲ್ಲಿ.. ಹಲವು ಪುಟಗಳಲ್ಲಿ.... ಸಾವಿರಾರು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲಾ. "ಅಸಾಧ್ಯ" ಎನ್ನುವುದೊರಳೇ "ಸಾಧ್ಯ"ವಿದೆ ಎನ್ನುವುದು ಮೊಟ್ಟಮೊದಲು ತೋರಿಕೊಟ್ಟದ್ದೇ ಅಪ್ಪ! ಅನುಕಂಪದ ಪ್ರತಿ ಅಸಹಿಷ್ಣುತೆಯನ್ನೂ.. ಸಹಕಾರದ ಮಿತಿಯನ್ನು ಅದೆಷ್ಟು ಚೆನ್ನಾಗಿ ತಿಳಿಹೇಳಿದನೆಂದರೆ ಇಂದು ನಾನು ಯಾರ ಸಹಕಾರವಿಲ್ಲದೆಯೂ ಬದುಕಬಲ್ಲೆ... ಸಹಜ ಜೀವನ ನನಗೊಲಿದಿದೆ. "ಗೀತೆಯ ಕೃಷ್ಣ"- ನನ್ನಪ್ಪನೇ ಬರೆದ ಪುಸ್ತಕ. ನನ್ನ ಅಚ್ಚುಮೆಚ್ಚಿನದ್ದು. ಅದೇ ರೀತಿ ನನ್ನಮ್ಮ ಸದಾ ಹೇಳುವ ಈ ಶ್ಲೋಕದ ಸಾಲು ನನ್ನ ಆತ್ಮಬಲ. "ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" (=ನಿನ್ನನ್ನು ಕುಗ್ಗಿಸುವ ಮನೋ ದೌರ್ಬಲ್ಯಗಳನ್ನು ಹತ್ತಿಕ್ಕಿ.. ಸಬಲನಾಗು.. ಮನೋಬಲವನ್ನು ವೃದ್ಧಿಸಿಕೋ.)

-ತೇಜಸ್ವಿನಿ.

ಮಂಗಳವಾರ, ಜೂನ್ 12, 2012

ನ್ಯಾಯಯುತವಾಗಿ, ಸತ್ಯತೆಯಲ್ಲಿ ನಮಗೆ ಸಿಗಬೇಕಾಗಿರುವ ನಮ್ಮ ಹಕ್ಕಿಗಾಗಿ...


Courtesy : http://disabledpeopleprotest.wordpress.com/   

ರಿಯಾಲಿಟಿ ಶೋ‌ಗಳೆಂದರೆ ಬರಿಯ ಬೂಟಾಟಿಕೆಯ... ನಮ್ಮ ಮನದ ಭಾವನೆಗಳೊಂದಿಗೆ ಆಟವಾಡುವ.. ಸ್ಪರ್ಧಾರ್ಥಿಗಳನ್ನು ಮಾನಸಿಕವಾಗಿ ಹಿಂಸಿಸುವ.. ಸಮಯಕೊಲ್ಲುವ ಕಾರ್ಯಕ್ರಮಗಳೆಂಬುದು ನನ್ನ ಬಲವಾದ ನಂಬಿಕೆ. ಇದು ಬಹುತೇಕ ಸತ್ಯವೆಂದೂ ಸಾಬೀತಾಗಿದೆ. ಆದರೆ ಇತ್ತೀಚಿಗೆ ಬರುತ್ತಿರುವ ಆಮೀರ್ ಖಾನ್‌ರ "ಸತ್ಯಮೇವ ಜಯತೇ" ಕಾರ್ಯಕ್ರಮ ಮಾತ್ರ ವಿಭಿನ್ನವಾಗಿ ನಿಲ್ಲುತ್ತಿರುವುದು (ಸಧ್ಯ ಹೀಗಿದೆ ಮುಂದೆ ಹೇಗೋ....!) ಸ್ವಲ್ಪ ಸಂತಸವಾಗಿತಿದೆ. ನೋಡುಗರು ಕಾತುರದ ನಿರೀಕ್ಷೆಯನ್ನು ವಾರಾಂತ್ಯದವರೆಗೂ ಹಿಡಿದಿಟ್ಟಿಕೊಳ್ಳುವಂತೆ ಮಾಡುತ್ತಿದೆ "ಸತ್ಯಮೇವ ಜಯತೇ". 


ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು, ವೈದ್ಯಕೀಯ ಕ್ಷೇತ್ರದೊಳಗಿನ ಅವ್ಯವಾಹಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ವಿಶೇಷ ಚೇತನರೊಳಡಗಿರುವ ಅಗಾಧ ಚೈತನ್ಯದ ಪರಿಚಯ - ಇವು ಈವರೆಗೆ ಈ ಕಾರ್ಯಕ್ರಮದಲ್ಲಿ ಪರಿಚಯವಾದ, ಚರ್ಚೆಗೊಳಗಾದ, ವಿಷದವಾಗಿ ವಿವೇಚಿಸಿ ಚಿಂತಿಸಲಾದ ವಿಷಯಗಳು. ಉದ್ರೇಕ ವರ್ತನೆಗಲಿಲ್ಲದ, ಅವಾಚ್ಯ ಬೈಗಳುಗಳಿಲ್ಲದ, ಏರು ಧ್ವನಿಗಳಲ್ಲಿ ಕಿರುಚಾಟ, ಅಳು, ಗೋಳಾಟಗಳಿಲ್ಲದ ಕೇವಲ ವಿಷಯದ ಮಂಡನೆ, ಅದರ ಹಿನ್ನಲೆ, ಅಂಕಿ-ಅಂಶಗಳಮೂಲಕ ನೀಡುವ ಪುರಾವೆ, ಇವೆಲ್ಲವುಗಳ ಜೊತೆಗೇ.. ಸಮಸ್ಯೆಗಳ ನಿವಾರಣೆಗೆ ಸಾಧ್ಯವಿರುವ ಪರಿಹಾರ- ಇವುಗಳನ್ನೊಳಗೊಂಡ ಸಂಯಮದಿಂದ ಕೂಡಿದ ನಿರೂಪಣೆ ಮೆಚ್ಚುವಂಥದ್ದು. ಕೆಲದೊಂದು ಘಟನಾವಳಿಗಳು ನಮ್ಮೆಲ್ಲರ ಊಹೆಗೂ ನಿಲುಕದ್ದಾಗಿರುತ್ತವೆ. ತುಂಬಾ ಸರಳವಾಗಿ, ನೇರವಾಗಿ ನಮ್ಮ ಮುಂದೆ ಅವುಗಳನ್ನು ಇಟ್ಟರೂ... ಒಮ್ಮೊಮ್ಮೆ ಪರಯತ್ನವಾಗಿ ನೋಡುಗರ ಕಣ್ಣಂಚು ಒದ್ದೆಯಾಗದಿರದು. ಯಾವುದೇ ಸಮಸ್ಯೆಯಾಗಲಿ.. ಅದರೊಳಗಿನ ಸತ್ಯತೆ ಮೇಲ್ನೋಟಕ್ಕೆ ಕಾಣಸಿಗದಿದ್ದರೂ, ಅದನ್ನು ಸೂಕ್ಷ್ಮವಾಗಿ ಗ್ರಹಿಸಿದರೆ, ಸಂವೇದಿಸಿದರೆ ವಸ್ತುಸ್ಥಿತಿಯೊಳಗಿನ ನಿಜತ್ವ ಸಭ್ಯ ಹೃದಯವನ್ನು ತಟ್ಟದಿರದು. ಇದರಿಂದಾಗಿಯೇ "ಸತ್ಯಮೇವ ಜತಯೇ"ಯಲ್ಲಿ ಪ್ರಸಾರವಾದ ಈ ವರೆಗಿನ ಬಾಗಗಳೆಲ್ಲಾ ನನಗೆ ಬಲು ಇಷ್ಟವಾದವು.

ಅದರಲ್ಲೂ ವಿಶೇಷವಾಗಿ ಕಳೆದ ಆದಿತ್ಯವಾರದ "ಸತ್ಯಮೇವ ಜಯತೆ" ನನಗೆ ತುಂಬಾ ಮೆಚ್ಚುಗೆಯಾಯಿತು. (http://www.youtube.com/watch?v=xv80kfLURlc&feature=youtu.be
ಸ್ವತಃ ನಾನೂ ಅವರಲ್ಲೋರ್ವಳಾಗಿರುವುದರಿಂದಲೋ ಇಲ್ಲಾ.. ಅವರೆಲ್ಲಾ ಅನುಭವಿಸಿದ/ಅನುಭವಿಸುತ್ತಿರುವ ಸಾಧಕ-ಬಾಧಕಗಳು, ಮಾನಸಿಕ ತೊಳಲಾಟ, ಹಿಂಸೆ, ಸಮಾಜದೊಳಗಿನ ಅಸಮಾನತೆಗಳು ನನ್ನನ್ನೂ ಅಷ್ಟೇ ಪ್ರಮಾಣದಲ್ಲಿ ತಾಗಿದ್ದರಿಂದಲೋ ಏನೋ.... ನಾನೂ ಆ ಕಾರ್ಯಕ್ರಮದೊಳಗಿನವರಲ್ಲೋರ್ವಳಾಗಿ  ಅದರೊಳಗೇ ಬಂಧಿಯಾದೆ. ಅಲ್ಲಿಯ ವಿಶೇಷ ಚೇತನರ ಮನದ ಮಾತುಗಳು ಪ್ರತಿಯೊಬ್ಬ ವಿಶೇಷ ಚೇತನ ವ್ಯಕ್ತಿಯ ಮನದಾಳದ ಮಾತಿನಂತಿತ್ತು. ಸಮಾಜದೊಳಗಿತ ಅಸಮಾನತೆ, ಕ್ರೌರ್ಯ, ಮೌಢ್ಯ,... ಅಂತೆಯೇ ಇದೇ ಸಮಾಜದೊಳಗಿನ ಕೆಲವರ(ಕಲವೇ ಕೆಲವರ) ಸ್ನೇಹಪರತೆ, ಸಹಜತೆ, ವಿಶ್ವಾಸ, ಸಹಕಾರ- ಇವೆಲ್ಲವುಗಳ ಪರಿಚಯ ಅಲ್ಲಿತ್ತು. ವಿಶೇಷ ಚೇತನರು ಹಲವು ಬಾಧಕಗಳನ್ನು ದಾಟಿ ಸಾಧಿಸಿದ ಅಸಾಮಾನ್ಯ ಸಾಧನೆಗಳ ಪರಿಚಯ ಬಹು ಸ್ಪೂರ್ತಿದಾಯಕವಾಗಿತ್ತು. "ವಿಕಲತೆ ಇರುವುದು ನೋಡುಗರ ನೋಟದಲ್ಲಿ, ಯೋಚಿಸುವ ಯೋಚನೆಯಲ್ಲಿ... ದೇಹದಲ್ಲಿ ಅಲ್ಲಾ.." ಎನ್ನುವ ಸಂದೇಶವನ್ನು ಬಹು ಸುಂದರವಾಗಿ, ಸಮರ್ಥವಾಗಿ "ಸತ್ಯಮೇವ ಜಯತೇ" ತೋರಿಸಿದೆ.

ಆದರೆ ಈ ಕಾರ್ಯಕ್ರಮ ನೋಡುತ್ತಿದ್ದಂತೇ ನನಗೆ ತುಂಬಾ ನೆನಪಾದವರು ಸ್ನೇಹಮಯಿ ಮಾಲತಿ ಹೊಳ್ಳರವರು. ಅವರನ್ನು ಭೇಟಿಯಾಗಿದ್ದು ಒಂದೆರಡು ಬಾರಿಯಾಗಿದ್ದರೂ.. ಮಾತಾಡಿದ್ದು ಹಲವು ಬಾರಿ. ಅವರ ಜೀವನೋತ್ಸಾಹ, ಆತ್ಮವಿಶ್ವಾಸ, ಛಲ ನನಗೆ...ನನ್ನಂತಹವರಿಗೆ... ಸರ್ವರಿಗೂ ಮಾದರಿಯಾಗಿದೆ. ಅವರು ನಡೆಸುತ್ತಿರುವ "ಮಾತೃ ಛಾಯಾ" ಯಾರ ಯಾವ ಸಾಧನೆಗೂ ಕಡಿಮೆಯದ್ದಲ್ಲ. ಅವರನ್ನೂ ಅಲ್ಲಿ ಪರಿಚಯಿಸಬಹುದಿತ್ತೆಂಬ ಪುಟ್ಟ ಕೊರಗು ಮಾತ್ರ ಹಾಗೇ ಉಳಿಯಿತು.


ಬಹು ಹಿಂದೆ ನನ್ನದೇ ಬ್ಲಾಗ್‌ನಲ್ಲಿ ವಿಶೇಷ ಚೇತನರ ಸಮಸ್ಯೆಗಳು ಹಾಗೂ ಇದಕ್ಕಿರುವ ಸುಲಭ ಸರಳ ಪರಿಹಾರಮಾರ್ಗದ ಬಗ್ಗೆ ನಾನೊಂದು ಲೇಖನ ಬರೆದಿದ್ದೆ. ಹಾಗೆಯೇ ಮಾಲತಿಹೊಳ್ಳರ ಸಾಧನೆಗಳ ಕುರಿತೂ ಸವಿವರವಾಗಿ ಪೋಸ್ಟ್ ಮಾಡಿದ್ದೆ... ಆ ಎರಡು ಲೇಖನಗಳ ಲಿಂಕ್ಸ್ ಮಗದೊಮ್ಮೆ ಈಗ ಇಲ್ಲಿ...


&


-ತೇಜಸ್ವಿನಿ ಹೆಗಡೆ.