ಶುಕ್ರವಾರ, ಏಪ್ರಿಲ್ 24, 2015

ಮಿಥುನ

“ಜಾನಕಿ ದೀಪದ ಬುಡ್ಡಿ ತೀರಾ ಚಿಕ್ಕದಾಗಿ ಬಿಟ್ಟಿದೆ ನೋಡೆ.... ಸ್ವಲ್ಪ ದೊಡ್ಡದು ಮಾಡು ಬಾ... ಕೂಸಿಗೆ ಧಾರೆ ಸೀರೆ ಉಡಿಸ್ಬೇಕು... ಗೋಧೋಳಿ ಮುಹೂರ್ತಕ್ಕೆ ಹೆಚ್ಚು ಹೊತ್ತು ಉಳಿದಿಲ್ಲ...” ವೆಂಕಜ್ಜಿಯ ಮಾತಿಗೆ ಕುಳಿತಲ್ಲೇ ಕಣ್ಣು ಕೂರುತ್ತಿದ್ದ ಹದಿನಾಲ್ಕರ ಹುಡುಗಿ ಥಟ್ಟನೆ ಕಣ್ಬಿಟ್ಟಳು. ಈ ಕ್ಷಣಕ್ಕಾಗಿಯೇ ಆಕೆ ಅಷ್ಟೊತ್ತೂ ಕಾದಿದ್ದು.....! ‘ಆಯಿ ಕಲಾಳ ಧಾರೆ ಸೀರೆ ಒಂದ್ಸಲ ನೋಡುವೆ... ಹಾಳು ಮಾಡಲ್ಲ.... ಕೊಳಕು ಕೈ ತಾಗಿಸೊಲ್ಲ... ಒಂದೇ ಒಂದು ಸಲ ಮುಟ್ಟಿ ಪಿಟಾರೆ ಒಳ್ಗೆ ಇಟ್ಟು ಬಿಡುವೆ...’ ಅದೆಷ್ಟು ಸಲ ತಾಯಿಯನ್ನ ಗೋಗರೆದಿದ್ದಳೋ ಎಂತೋ... ಆದರೆ ಸುಬಮ್ಮಳ ಮನೋವೇದನೆಯೇ ಬೇರೆಯದ್ದಾಗಿತ್ತು. “ಸಾಕೆ ಸುಮ್ಮನಿರು ಸ್ವಲ್ಪ.... ಹಾಗೆ ನೋಡಿದರೆ ಇವತ್ತು ನಿನ್ನ ಮದುವೆಯೂ ಆಗಬೇಕಿತ್ತು....... ಸರಿ ಸುಮಾರು ಒಂದೇ ಓರಗೆಯವರು ನೀವಿಬ್ರು...  ಭಾವಯ್ಯನೋರು ಒಟ್ಟಿಗೇ ಮಾಡೋಣ ಅಂದಿದ್ರೂ, ನಿಮ್ಮಪ್ಪಯ್ಯನ ತಲೆಗೇನೋ ಗಾಂಧಿ ಭೂತ ಹೊಕ್ಕಿದೆ ನೋಡು. ಎರಡು ವರ್ಷದ ಹಿಂದೆ ಅದೆಂತೋ ಚಳುವಳಿ ಅಂತ ಕುಣದ್ರಪ್ಪಾ... ಹೆಸ್ರೂ ನೆನ್ಪಿಲ್ಲ...‘ಅಯ್ಯೋ ಆಯಿ.... ಅದು ಕ್ವಿಟ್ ಇಂಡಿಯಾ ಚಳುವಳಿ.. ಫಿರಂಗಿಗಳನ್ನೆಲ್ಲಾ ತೊಲಗಿ ಅನ್ನೋದು...’ ಮಧ್ಯೆ ಬಾಯಿ ಹಾಕಿ ಉತ್ತರಿಸಿದ ಮಗಳ ತಲೆಗೊಂದು ಮೊಟಕಿ, ಎಂಥದ್ದೋ ಒಂದು... ಗಟ್ಟಿ ಮಾತಾಡ್ಬೇಡ.... ಯಾರಿಗಾದ್ರೂ ಕೇಳಿದ್ರೆ ಎಂತ ಗತಿ? ಎಲ್ಲ ನನ್ನ ಕರ್ಮ.... ಮಗಳು ಮೈ ನೆರೆದು ಎರಡು ತಿಂಗಳಾಯಿತು... ಆದರೂ ತಲೆ ಇಲ್ಲಾ! ಊರೂರು ತಿರುಗುವುದೇ ಆಯಿತು ಮಹಾರಾಯರದು. ನಾನೋ ಸಿಕ್ಕವರಿಗೆಲ್ಲಾ ಇನ್ನೂ ಹನ್ನೆರಡೂ ಮೆಟ್ಟಿಲ್ಲಾ ಎಂದು ಸುಳ್ಳುಸುಳ್ಳೇ ಹೇಳ್ತಾ ತಿರಗ್ತಾ ಇದ್ದೇನೆ... ಎಷ್ಟು ದಿನ ಮುಚ್ಚಿಡ್ಲಿ ಹೇಳು? ನಾನು ಜಾಸ್ತಿ ಪಿರಿ ಪಿರಿ ಮಾಡಿದರೆ, ಹೆಣ್ಮಕ್ಕಳೂ ಓದೋದು ಒಳ್ಳೇದು ಅನ್ನೋ ಪುಗ್ಸಟ್ಟೆ ಸಲಹೆ ಬೇರೆ... ಹ್ಮ್ಂ... ಅಕ್ಕ, ಭಾವನೋರಿಗೆ ಇದೇ ಒಳ್ಳೇದಾಗಿದೆ... ತಮ್ಮ ಮಗಳ ಮದುವೆಯನ್ನು ಧಾಂ ಧೂಂ ಅಂತಾ ಮಾಡ್ತಿದ್ದಾರೆ... ನಿಂಗೆ ಚೊಂಬೇ ಗತಿ... ಅನುಭವ್ಸಿ ಇಬ್ರೂ....” ನೆರೆದಿದ್ದ ನೆಂಟರಿಷ್ಟರಿಗೆ ಕೇಳದಂತೇ ತೀರಾ ಪಿಸುದನಿಯಲ್ಲೇ ಹಲ್ಲುಕಚ್ಚಿ ಮಗಳ ಮೇಲೆ ಹರಿಹಾಯ್ದು, ಸೆರಗಿನಂಚಿಗೆ ಕಣ್ಣೀರ ಜೊತೆ ಸಿಂಬಳವನ್ನೂ ಒರೆಸಿಕೊಳ್ಳುತ್ತಾ ಅಡುಗೆಮನೆಯಲ್ಲಿದ್ದ ಅಕ್ಕನಿಗೆ ನೆರವಾಗಲು ಹೋಗಿದ್ದಳು. ಹದಿನಾಲ್ಕರ ಬಾಲೆಗೆ ತಾಯಿಯ ಈ ಒದ್ದಾಟ, ತೊಳಲಾಟ ಒಂದೂ ಅರ್ಥವಾಗದೇ ಸೀರೆ ಕೇಳಲು ವೆಂಕಜ್ಜಿಯ ಬಳಿ ಹೋದರೆ, ಆಕೆಯೋ ‘ವಧುವಿಗೆ ಸೀರೆ ಉಡಿಸುವಾಗಲೇ ಸಮಾ ಮಾಡಿ ನೋಡು ಕೂಸೆ’ ಎಂದು ಬಿಟ್ಟಿದ್ದರು. ಈಗ ಆ ಘಳಿಗೆ ಸನ್ನಿಹಿತವಾಗಿದ್ದೇ, ಗಂಟೆಗೂ ಮುನ್ನ ತಾನು ತಯಾರಾಗಿ ಕಲಾಳಿದ್ದ ಕೋಣೆಯನ್ನು ಹೊಕ್ಕಿ ಕುಳಿತಿದ್ದಕ್ಕೂ ಸಾರ್ಥಕವೆಂದೆನಿಸಿ ಬಿಟ್ಟಿತು ಜಾನಕಿಗೆ.

ಬದನೇಕಾಯಿ ಬಣ್ಣದ ರೇಷಿಮೆ ಪಟ್ಟೆ ಸೀರೆ... ಅಂಗೈ ಅಗಲದ ಚಿನ್ನದಂಚು, ಒಡಲ ತುಂಬಾ ಶ್ರೀ ಆಕಾರದಲ್ಲಿದ್ದ ಚಿನ್ನದ ಕುಸುರಿ. ದೊಡ್ಡೋರ ಮನೆಯ ಹುಡುಗಿಯ ಮದುವೆ, ಅದೂ ಪಕ್ಕದೂರಿನ ಶಾನುಭೋಗರ ಮಗನ ಜೊತೆಯಲ್ಲಿ... ಕೇಳಬೇಕೆ ವೈಭವವ! ಕೆಂಪು ಹರಳ ಜುಮುಕಿ, ಸೊಂಟಕ್ಕೆ ಚಿನ್ನದ ಪಟ್ಟಿ, ಕೊರಳಲ್ಲಿ ಎರಳೆಳೆಯ ಅವಲಕ್ಕಿ ಸರ, ಹೊಸ ಮೂಗುತಿಯ ಕೆಳಗೆ ಹೊಳೆಯುತಿರುವ ಬಿಳಿ ಮುತ್ತು... ತೋಳುಗಳಿಗೆ ತೋಳಬಂಧಿ, ಕೆನ್ನೆ ತುಂಬಾ ಮೆತ್ತಿದ್ದ ಅರಿಶಿನದ ಮೆರುಗು... ಕಾಸಗಲದ ಕುಂಕುಮ, ಮೈ ತೂಕಕ್ಕಿಂತ ತುಸು ಹೆಚ್ಚೇ ಎನ್ನಿಸುವಂತೆ ಸುತ್ತುವರಿದಿದ್ದ ಹೊಸ ಸೀರೆಯ ಕಳೆ ಹೆಚ್ಚಿಸುತ್ತಿದ್ದ ಉದ್ದ ಕೈಯಿನ ಕೆಂಪು ಬ್ಲೌಸು.... ಹದಿನಾಲ್ಕರ ಹೊಸ್ತಿಲಲ್ಲಿ ಅರೆಬಿರಿದ ಮಲ್ಲೆ ಮೊಗ್ಗು! ಸಹಜ ಸುಂದರಿಯಾಗಿದ್ದ ಕಲಾವತಿ ಇಂದು ಮಂಗಳ ಗೌರಿಯೇ ಆಗಿದ್ದಳು. ದೊಡ್ಡಪ್ಪನ ಮಗಳಾಗಿದ್ದರೂ ಒಡ ಹುಟ್ಟಿದವರಂತೇ ತುಂಬು ಕುಟುಂಬದಲ್ಲಿ ಬೆಳೆದಿದ್ದ ಜಾನಕಿಗೆ ಹೆಚ್ಚು ಕಡಿಮೆ ತನ್ನದೇ ವಯಸ್ಸಿನವಳ ಮದುವೆ ನಿಶ್ಚಯವಾದಾಗಲೂ ಏನೂ ಬೇಸರವಾಗಿರಲಿಲ್ಲ. ಆದರೆ ಇಂದು ಹೀಗೆ ಸರ್ವಾಲಂಕೃತ ಭೂಷಿತಳಾಗಿ ನಿಂತಿದ್ದು ಕಂಡು ‘ಛೇ ತಾನೂ ಮದುವೆಯಾಗಿಬಿಡಬೇಕಿತ್ತು.... ಅಮ್ಮಾ ಹೇಳಿದ್ದು ಸುಳ್ಳಲ್ಲಾ... ಅಬ್ಬಬ್ಬಾ.. ಕಲ್ಲೆ ಅದೆಷ್ಟು ಚೆಂದ ಕಾಣ್ತಿದ್ದಾಳೆ...! ನನ್ನ ಮದ್ವೆಗೂ ಇಂಥದ್ದೇ ಸೀರೆ ತರಿಸಿಕೊಳ್ಳೋದೇ.. ಎಂದು ಮನಸಲ್ಲೇ ಮಂಡಿಗೆ ತಿನ್ನುತ್ತಾ ಆಗೀಗ ವೆಂಕಟಜ್ಜಿಯಿಂದ ತಲೆಗೆ ಮೊಟಕಿಸಿಕೊಳ್ಳುತ್ತಾ, ಕಲಾವತಿಯ ನೆರಿಗೆಯನ್ನು ಸರಿಪಡಿಸುವ ನೆಪದಲ್ಲಿ ಮತ್ತೆ ಮತ್ತೆ ಆ ಮೆದು ರೇಷಿಮೆ ಸೀರೆಯನ್ನು ಮುಟ್ಟಿಯೇ ಮುಟ್ಟಿದಳು. ಬಿಟ್ಟ ಕಣ್ಣು ಬಿಟ್ಟುಕೊಂಡು ತನ್ನ ನೋಡುತ್ತಾ ಸೀರೆ ಸವರುತ್ತ ಕುಳಿತವಳ ಕಂಡು ನಗುವುಕ್ಕಿತು ಕಲಾವತಿಗೆ. “ನೀನೇನೂ ಚಿಂತೆ ಮಾಡ್ಬೇಡಮ್ಮಾ... ನನ್ನಪ್ಪಯ್ಯನ ಹತ್ರ ಹೇಳಿ ನಿಂಗೂ ಇಂಥದ್ದೇ ಸೀರೆ ತರಿಸಿಕೊಡ್ತೀನಿ ನಿನ್ನ ಮದುವೆಗೂ..” ಎನ್ನಲು ನಾಚಿದಳು ಜಾನಕಿ.
“ಅತ್ತೆಯವರೆ ಕಲಾವತಿಯನ್ನ ಗೌರಿ ಪೂಜೆಗೆ ಕರೀತಾ ಇದ್ದಾರೆ.. ಕರೆದುಕೊಂಡು ಹೋಗಲಾ? ನಿಮ್ಮನ್ನ ಮಾವನೋರು ಕರೀತಾ ಇದ್ರು.. ತಡ ಮಾಡಿದರೆ ಸಿಟ್ಟಾದಾರು...” ಎನ್ನುತ್ತಾ ಕೂಸಿನ ತಾಯಿ, ಹಿರಿ ಸೊಸೆ ಲಕ್ಷ್ಮಮ್ಮ ಬರಲು, ಗಡಬಡಿಸಿ ಓಡಲಾಗದಿದ್ದರೂ, ಓಡೋಡುತ್ತಲೇ ಪತಿಯಿದ್ದೆಡೆಗೆ ನಡೆದರು ವೆಂಕಜ್ಜಿ.
“ಮಗಳೇ.... ಏನ್ ಚೆಂದ ಕಾಣುತ್ತಿದ್ದೀಯೇ.. ನನ್ನ ದೃಷ್ಟೀಯೇ ಬೀಳುವ ಹಾಗಿದ್ದೀಯಾ ನೋಡು.. ಮದುವೆ ಗಡಿಬಿಡಿಲಿ ನಾಲ್ಕು ಮಾತೂ ಆಡಾಲಾಗಿಲ್ಲ ನಂಗೆ... ಗೌರಿ ಪೂಜೆ ಇನ್ನೂ ಸ್ವಲ್ಪ ಹೊತ್ತಿದೆ ಬಿಡು... ನಿನ್ನ ಜೊತೆ ಸ್ವಲ್ಪ ಮಾತನಾಡೋದಿದೆ... ಗಂಡನ ಮನೇಲಿ ತಗ್ಗಿ ಬಗ್ಗಿ ನಡೆದುಕೊಳ್ಳೋದೆಲ್ಲಾ ಗೊತ್ತಿದ್ದಿದ್ದೇ... ಆದರೆ ಗಂಡನ ಕೂಡೆ ಚೆನ್ನಾಗಿ ಬಾಳೋದೂ ಗೊತ್ತಿರ್ಬೇಕು... ಅಂವಂಗೆ ಹೊಂದಿಕೊಂಡು ಬಾಳ್ಬೇಕು... ನಿನ್ನ ಅಕ್ಕ ಶಾರದೆ ಎಲ್ಲವನ್ನೂ ತಿಳಿಸಿ ಹೇಳಿದ್ದಾಳೆ ಅಲ್ವಾ ನಿಂಗೆ?” ಎಂದು ಸೂಕ್ಷ್ಮವಾಗಿ ನೋಡಲು... ಕೆಂಪು ಕೆಂಪಾದ ಕಲ್ಲೆಯ ಮೊಗ ನೋಡಿ ಅಚ್ಚರಿಗೊಂಡಳು ಜಾನಕಿ. ‘ಅರೆ ಅದ್ಯಾವಗ ಶಾರದಕ್ಕ ಮತ್ತು ಇವಳು ಗುಟ್ಟು ಮಾಡಿಕೊಂಡ್ರೋ...! ನನಗೆ ಹೇಳೇ ಇಲ್ಲಾ... ಸರಿ ಮಾಡ್ತೀನಿ ಇವ್ರಿಗೆ... ಎರಡು ದಿನ ಠೂ ಬಿಟ್ರೆ ಎಲ್ಲಾ ಹೊರಗೆ ಬರುವುದು...’ ಎಂದು ಕೊಳ್ಳುತ್ತಾ ಮಾತನಾಡದೇ ಹರಡಿದ್ದ ವಸ್ತ್ರಗಳ ಸರಿ ಮಾಡಲು ತೊಡಗಿದರೆ, ಇವಳ ಸೆಡವಿನ ಕಡೆ ಇನಿತೂ ಗಮನವಿರದ ಕಲಾವತಿ ಹೊಸ ಬಾಳಿನ ಕನಸಲ್ಲಿ ಮುಳುಗಿ ಹೋಗಿದ್ದಳು. ಅಮ್ಮನ ಜೊತೆ ಗೌರಿ ಪೂಜೆಗೆ ಅವಳು ಹೊರಟರೂ, ಅವರನ್ನು ಹಿಂಬಾಲಿಸಲು ಉತ್ಸಾಹ ತೋರದ ಜಾನಕಿ ಹಾಗೇ ಸುಮ್ಮನೆ ಕೋಣೆಯ ಕಿಟಕಿ ತೆರೆದು ಹೊರಗಿನ ತಂಗಾಳಿಗೆ ತನ್ನ ಮೊಗವಿಟ್ಟು ಕುಳಿತಳು.
ನೀಲಾಗಸದ ತುಂಬಾ ಬಿಳಿ ಚುಕ್ಕೆಗಳು ಹರಡಿದ್ದವು. ಹೊಟ್ಟೆ ಬಾಕ ಚಂದ್ರಮ ತನ್ನ ಅರ್ಧಂಬರ್ಧ ತುಂಬಿದ ಹೊಟ್ಟೆಯ ತುಂಬಲು ಹಲವು ತಾರೆಗಳ ನುಂಗಿ ಉಬ್ಬಿಹನೋ ಎಂಬಂತೆ ಮುಕ್ಕಾಲುವಾಸಿ ಊದಿಕೊಂಡು ತೇಲುತ್ತಿದ್ದ. ಜಾನಕಿಗೆ ಪೂರ್ಣ ಚಂದ್ರನಿಗಿಂತ ಅರ್ಧ ಚಂದ್ರನೆಂದರೆ ಬಲು ಪ್ರೀತಿ. ಮದುವೆಯಲ್ಲಿ ಮದುಮಗನ ಹಣೆಯಲ್ಲಿ ಹೆಂಗೆಳೆಯರು ಇಡುತ್ತಿದ್ದ ಕುಂಕುಮದ ಅರ್ಧಚಂದ್ರನನ್ನು ಕಂಬದ ಮರೆಯಿಂದಿಣುಕಿ ಮನಸಾರೆ ನೋಡುತ್ತಿದ್ದಳು. ಹಾಗೆ ನೋಡುವಾಗೆಲ್ಲಾ ಅಮ್ಮಾ, ಅಜ್ಜಿ, ದೊಡ್ಡಮ್ಮ ಎಲ್ಲಾ ಇನ್ನಿಲ್ಲದಂತೇ ಬೈದಿದ್ದೂ ಇದೆ. ‘ಎಂತಾ ಮಳ್ಳು ನೀನು ಹಾಂಗೆಲ್ಲಾ ಮಾಣಿನ ನೇರ ನೋಡಬಾರದು.. ಗಂಡು ಬೀರಿ, ನಾಚ್ಕೆನೇ ಇಲ್ಲಾ ಅಂತಾರೆ.. ಆಮೇಲೆ ನಿನ್ನ ಯಾರೂ ಮದುವೆ ಆಗುವುದಿಲ್ಲ ಗೊತ್ತಾ?’ ಎಂದು ಗದರಿದರೂ ಆಕೆ ಬಿಡುತ್ತಿರಲಿಲ್ಲ. ಅರ್ರೆ.... ಕಲ್ಲೆಯ ಗಂಡಿಗೂ ಹಾಗೇ ಅರ್ಧಚಂದ್ರ ಕುಂಕುಮ ಇಟ್ಟಿರ್ತಾರೆ ಅಲ್ಲವಾ? ಹಾಯ್... ನಾನು ನೋಡ್ಲೇಬೇಕು. ಮನೆ ಮದುವೆ.. ನೇರ ನೋಡಿದ್ರೂ ಯಾರೂ ಬೈಯಲಿಕ್ಕಿಲ್ಲ... ಯಾರಿಗೂ ಪುರುಸೊತ್ತೂ ಇರುವುದಿಲ್ಲ... ನೋಡೇ ಬಿಡ್ತೀನಿ... ಆಮೇಲೆ ಕಣ್ಣೆಳೆದು ನಿದ್ದೆ ಬಂದೇ ಹೋಗುತ್ತದೆ... ಎಂದುಕೊಳ್ಳುತ್ತಾ ನೆಲತಾಗುತ್ತಿದ್ದ ಕೈಮಗ್ಗದ ಪತ್ತಲದ ನೆರಿಗೆಯನ್ನು ಮೊಳಗಾಲಿನವರೆಗೆ ಎತ್ತಿ ಹಿಡಿದು ಓಡೋಡಿ ಹೊರ ಬರುವುದುಕ್ಕೂ, ಬಾಗಿಲಿಗೆ ಬಂದಿದ್ದ ಶ್ರೀಕಾಂತನ ಎದೆಗೆ ತನ್ನ ತಲೆಯನ್ನು ಢಿಕ್ಕಿ ಹೊಡೆಯುವುದಕ್ಕೂ ಸಮನಾಯಿತು. ಗಾಭರಿಯಿಂದ ಆಕೆ ಎರಡೆಜ್ಜೆ ಹಿಂದೆ ಸರಿದರೆ, ತನ್ನ ಬಲಗೈಯಲ್ಲಿದ್ದ ದೀಪದ ಬುಡ್ಡಿಯನ್ನು ತಮ್ಮಿಬ್ಬರ ನಡುವೆ ಹಿಡಿದ ಶ್ರೀಕಾಂತ.
ಕೆಂಪುಬಣ್ಣದ ಪತ್ತಲವನ್ನು ಎತ್ತಿ ಹಿಡಿದಿದ್ದರಿಂದ, ದಪ್ಪ ಕಾಲ್ಗಜೆಯ ಅಪ್ಪಿದ್ದ ಪುಟ್ಟ ಪಾದಗಳ ಚಿಗುರು ಬೆರಳುಗಳು ಎದ್ದು ಕಾಣುತ್ತಿದ್ದವು. ಬಿಳಿಯ ಬಣ್ಣದ ಪುಗ್ಗ ಕೈಯನ ರವಿಕೆಯೊಳಗಿಂದ ಹೊರ ಮಿಂಚುತ್ತಿದ್ದ ಹಾಲು ಬಣ್ಣದ ಎಳೆಯ ಕೈಗಳು ಮಿಡಿ ನಾಗರದಂತೇ ಹೊಳೆಯುತ್ತಿದ್ದವು. ಬೆದರಿ, ತಲೆ ತಗ್ಗಿಸಿದ್ದ ಅವಳ ಹಣೆಯ ತುಂಬೆಲ್ಲಾ ಮಣಿಯ ಬಾಸಿಂಗ, ಹನಿವ ನೀರಿಗೆ ತುಸು ಕರಗಿ ಹರಡಿದಂತಾದ ಹಣೆಯ ಬಿಂದಿ, ತಗ್ಗಿದ್ದ ಕಣ್ಗಳಿಂದ ಅವಳೊಳಗಿನ ಭಾವ ಮಾತ್ರ ಆತನಿಗೆ ತಿಳಿಯಲಾಗಲಿಲ್ಲ.
“ಅಲ್ಲಾ ಹೆಣ್ಮಕ್ಕಳು ಮುಂದಾಗಬೇಕೆಂದು ನಾಯಕರು ಕರೆ ಕೊಡುತ್ತಿದ್ದಾರೆ ಎಂದು ಗೊತ್ತಿತ್ತು.. ಇಷ್ಟು ಮುಂದೋಡಬೇಕೆಂದು ಹೇಳಿದ್ದಾರೆಯೇ? ಕಣ್ಣಿರುವುದು ಮುಂದೆ ನೋಡಿ ನಡೆಯಲು ತಾನೆ? ಅದೇನು ಅವಸರವಪ್ಪಾ ಈ ಹುಡುಗಿಯರಿಗೆ ನಾ ಕಾಣೆ! ಮದುವೆ ಕೂಸು ಮಂಟಪದಲ್ಲಿ ಕೂತಿದ್ದು ನೋಡಿದ್ದೇನೆ... ಎರಡು ಮದುವೆಯಿದೆಯೇ ಈ ಮನೆಯಲ್ಲಿ?” ಎಂದು ಒಳನಗೆ ನಕ್ಕವನ ಮಾತಿಗೆ ರಂಗಾದಳು ಕೋಪದಿಂದ.
ಥಟ್ಟನೆ ತಲೆಯೆತ್ತಿದವಳ ಕಣ್ಣಲ್ಲಿ ತೆಳು ನೀರಿನ ಪೊರೆಯ ಜೊತೆ ಕೋಪದ ಕೆಂಬಣ್ಣ. ತಾನು ಆಡಿದ್ದು ಹೆಚ್ಚಾಯಿತೇನೋ ಎಂದು ಪರಿತಪಿಸಿದ ಶ್ರೀಕಾಂತ. ಮಾರುತ್ತರ ಕೊಡಬೇಕೆಂದು ಒಂದು ಹೆಜ್ಜೆ ಮುಂದಿಟ್ಟವಳಿಗೆ ದೀಪದ ಬೆಳಕಿನಲ್ಲಿ ಅವನ ಬಿಳಿ ಖಾದಿ ಕುರ್ತದ ಮೇಲೆ ತನ್ನ ಹಣೆಯ ಕುಂಕುಮದ ಕಲೆ ಕಾಣಲು ನಾಚಿ, ಅನುಮಾನಿಸುತ್ತಲೇ ಮುಂಬರಲು, ಅವನು ತುಸು ಸರಿದದ್ದೇ ತಡ, ಮೆಲ್ಲನೆ ಬಾಗಿಲು ದಾಟಿ, ಅಲ್ಲಿಂದ ಓಡಿ ಹೋಗಿಬಿಟ್ಟಳು. ಗಜ್ಜೆಯ ನಾದ ಮರೆಯಾದ ಅದೆಷ್ಟೋ ಹೊತ್ತಿನ ನಂತರವೂ ಆತ ನಿಂತಲ್ಲೇ ಮೂರ್ತಿಯಾಗಿದ್ದ.
~~~~~
ಪುಟ್ಟ ತಲೆಯ ಸಂಪೂರ್ಣ ತಗ್ಗಿಸಿಕೊಂಡು ಸೆರಗ ಹೊದ್ದು ಕುಳುತಿದ್ದ ಕಲಾವತಿಯ ಪಕ್ಕದಲ್ಲೇ ಕುಳಿತಿದ್ದ ತಾಯಿ ತನ್ನ ಸೆರಗಿನಂಚನ್ನು ಬಾಯಿಗಿಟ್ಟು ಸೊರ ಸೊರಗುಡುವುದು ನಡೆಯುತ್ತಲೇ ಇತ್ತು. ‘ಸಾಕೇ ಲಕ್ಷ್ಮೀ ಅತ್ತಿದ್ದು.. ಕೂಸೇನು ದೂರ ಹೋಗೋದಿಲ್ಲ... ಹತ್ತು ಮೈಲಿನ ದಾರಿ ಅಷ್ಟೇ. ಧಾರೆಗೆ ನೀರನ್ನು ಬಿಡು.. ಕಣ್ಣೀರನ್ನಲ್ಲಾ..’ ಎಂದು ಅತ್ತೆಯಮ್ಮ ಮೆಲುವಾಗಿ ಗದರಿದ್ದೇ ಒಂದೇ ಪೆಟ್ಟಿಗೆ ಅವಳ ಅಳು ನಿಂತಿತು. ಎಲ್ಲರೂ ಹೆಣ್ಣು, ಗಂಡಿನ ಮದುವೆಯಲ್ಲಿ, ಹೊಸ ಬಟ್ಟೆ, ಊಟದ ಮಾತೊಳಗೆ ಮುಳುಗಿದ್ದರೆ, ಇಬ್ಬರು ಮಾತ್ರ ಅವರಿವರ ಕಣ್ತಪ್ಪಿಸಿ ಒಬ್ಬರನ್ನೊಬ್ಬರ ಹುಡುಕುವುದರಲ್ಲೇ ಮುಳುಗಿಹೋಗಿದ್ದರು. ರಾಯರ ಮನೆಯ ಮದುವೆಗೆ ನಾಲ್ಕೂರಿನಿಂದ ಬಂಡಿ ಕಟ್ಟಿ ಬಂದಿದ್ದ ನೆಂಟರಿಷ್ಟರ ನಡುವೆ, ಕಿರು ಬೆಳಕಿನಲ್ಲಿ ಕಂಡ ಆ ಕೆಂಬಣ್ಣದ ಸೀರೆಯ ಹುಡುಗಿಯ ಹುಡುಕುವುದು ಪ್ರಯಾಸವಾಗಿತ್ತು ಶ್ರೀಕಾಂತನಿಗೆ. ಇತ್ತ ಆಕೇಗೋ ಅಂವ ಎಲ್ಲಿ ಕಲೆಯಾಗಿದ್ದರ ಹಿಂದಿನ ಕಥೆಯ ದೋಸ್ತರಿಗೆಲ್ಲಾ ಹೇಳಿ ತನ್ನ ಲೇವಡಿ ಮಾಡಿಬಿಡುವನೋ... ಅದ ತಿಳಿದ ಅಪ್ಪಯ್ಯ, ಆಯಿ ಎಲ್ಲಿ ತನ್ನ ಹೊಡೆದು ಬಿಡುವರೋ ಎಂಬ ಭಯ ಬೆಂಬಿಡದೇ ಕಾಡುತ್ತಿತ್ತು. ಹೇಗಾದರೂ ಮಾಡಿ ಆತನ ಸಂಧಿಸಿ, ಯಾರ ಬಳಿಯೂ ಪ್ರಸ್ತಾಪಿಸದಂತೇ ನಿವೇದಿಸಿಕೊಳ್ಳಲು ಕಾಯುತ್ತಿದ್ದಳು. ಆ ಸದಾವಕಾಶ ಅವಳಿಗೊದಗಿದು ಮಾಂಗಲ್ಯ ಧಾರಣೆಯ ನಂತರ..... ಪುರೋಹಿತರು ಬೆಲ್ಲದ ಪಂಜಕಜ್ಜಾಯವನ್ನು ಎಲ್ಲರಿಗೂ ಹಂಚಲು ಹೇಳಿದಾಗ.
ಸಭೆಯಲ್ಲಿ ಎದುರಾದವರಿಗೆಲ್ಲಾ ಒಂದೊಂದು ಚಮಚ ಸಿಹಿ ಹಂಚುತ್ತಾ ಹೋದವಳ ಕಣ್ಗಳು ಅವನನ್ನೇ ಹುಡುಕುತ್ತಿದ್ದವು. ಇದನ್ನು ಗಮನಿಸಿದ ಆತ ಅವಳಿಗೆ ಆದಷ್ಟೂ ಮರೆಯಾಗಿ ನಿಂತು, ಆಮೇಲೆ ಅವಳಿಗೆ ಸ್ಪಷ್ಟವಾಗಿ ಕಾಣುವಂತೆಯೇ ಎದ್ದು ಹೊರಟು ಹಿತ್ತಲ ಕಡೆ ನಡೆದನು. ಅವಳ ಕಣ್ಗಳಲ್ಲಿ ಮಿಂಚಿನ ಛಳಕು. “ಆಯಿ ಹಿತ್ತಲ ಕಡೇಯೂ ಸುಮಾರು ಜನ ಇದ್ದಾರೆ ಕೊಟ್ಟು ಬರುವೆ...” ಎಂದವಳೇ ಲಗುಬಗನೆ ಅತ್ತ ನಡೆದಿದ್ದಳು. ಜಗುಲಿಯನ್ನು ಬಳಸಿದ್ದ ಅಷ್ಟುದ್ದದ ಹೇಡಿಗೆಯಲ್ಲಿ ಬೆಳಕು ಕ್ಷೀಣವಾಗಿತ್ತು. ಅಲ್ಲಲ್ಲಿ ಸಿಲುಕಿಸಿಟ್ಟಿದ್ದ ಲಾಟೀನುಗಳು ಕತ್ತಲೆಯನ್ನಂತೂ ದೂರ ಓಡಸಲು ಸಫಲವಾಗಿದ್ದವು. ಹಿಂಬದಿಯ ಅಂಗಳದ ಬಲ ಮೂಲೆಯಲ್ಲಿದ್ದ ಸುರಗಿ ಮರದ ಕೆಳಗೆ ಬಿಳಿ ಧೋತ್ರವನ್ನುಟ್ಟಿ ನಿಂತಿದ್ದ ಯುವಕನ ಕಾಣಲು, ಇದು ಅವನಲ್ಲದೇ ಬೇರಾರೂ ಇರಲು ಸಾಧ್ಯವೇ ಇಲ್ಲಾ ಎಂಬ ಹೆಬ್ಬು ಧೈರ್ಯದಲ್ಲೇ ಅತ್ತ ಸಾಗಿದಳು ಜಾನಕಿ. ಹಿಡಿದಿದ್ದ ಪಂಜಕಜ್ಜಾಯದ ಬಟ್ಟಲು ಸಣ್ಣಗೆ ಅಲುಗಾಡತೊಡಗಿತ್ತು. ಬೀಳದಂತೇ ಬಿಗಿಯಾಗಿ ಹಿಡಿದು, ಹೆಜ್ಜೆ ತಡವರಿಸದಂತೇ ಸಾವರಿಸಿಕೊಳ್ಳುತ್ತಾ, ಗೆಜ್ಜೆಯ ಸಪ್ಪಳ ಆದಷ್ಟು ಮೆಲುವಾಗಿರುವಂತೇ ಸಾಗಿದವಳ ಎದೆಬಡಿತ ಅವಳಿಗೆ ಎಲ್ಲವನ್ನೂ ಬಯಲಾಗಿಸುವ ಹುನ್ನಾರದಲ್ಲಿದ್ದಂತೆ ಹೊಡೆದುಕೊಳ್ಳುತ್ತಿತ್ತು. ಹುಡುಗಿ ಮರವನ್ನು ಸಮೀಪಿಸುತ್ತಿದ್ದಂತೇ ಹಿಂದಿನ ರೆಂಬೆಯಲ್ಲಿ ಸಿಕ್ಕಿಸಿಟ್ಟಿದ್ದ ಲಾಟೀನನ್ನು ಆಚೆ ತೆಗೆದು, ದೊಡ್ಡದಾಗಿಸಿ ಅವಳಿಗೆ ದಾರಿ ಕಾಣಿಸಲು ನೆರವಾದ ಶ್ರೀಕಾಂತ. ಒಂದೇ ಒಂದು ಕ್ಷಣ ಕತ್ತನೆತ್ತಿ ಅವನೇ ಎಂದು ಖಾತ್ರಿ ಮಾಡಿಕೊಂಡವಳೇ ಮತ್ತೆ ತಗ್ಗಿಸಿದ ತಲೆಯನ್ನೆತ್ತದೇ ಸಿಹಿಯನ್ನು ನಡುಗುವ ಕೈಯಿಂದ ಮುಂದೆ ಹಿಡಿಯಲು, ಕೈಯೊಡ್ಡಿದವನಿಗೆ ಅವಳು ಹಾಕಿದ್ದೆಷ್ಟೋ, ಅಂವ ತಿಂದಿದ್ದೆಷ್ಟೋ! ನೆಲದ ಮೇಲಿನ ಇರುವೆಗಳ ಪಾಲಿಗಂತೂ ಮದುವೆಯ ಸಂಭ್ರಮ.
“ನೋಡಿ... ಏನೋ ಅರಿಯದೇ ಅನಾಹುತ ಆಗೋಯ್ತು.. ಕಲೆ ಬೇಕಿದ್ರೆ ನಾನೇ ತೆಗೆದು ಕೊಡುವೆ... ನೀವು ನಾಳೆ ಇಲ್ಲೇ ಉಳಿದುಕೊಂಡಾರೆ, ನಿಮ್ಮ ಅಂಗಿಯನ್ನು ಬಚ್ಚಲ ಬಳಿ ಇರುವ ದಾಸವಾಳದ ಗಿಡದ ಮೇಲಿಟ್ಟು ಹೋಗಿ... ನಾನೇ ಖುದ್ದಾಗಿ ಚೆನ್ನಾಗಿ ತೊಳೆದು ಹರವಿ ಬಿಡುವೆ. ದಯವಿಟ್ಟು ನನ್ನಿಂದ ಹೀಗಾಯಿತು ಎಂದು ಯಾರ ಬಳಿಯೂ ಹೇಳದಿರಿ... ಮನೆಯ ಮದುವೆಗೆ ಬಂದವರಿಗೆ ಇಂಥಾ ಮಾರ್ಯಾದೆ ಮಾಡುವುದೇ ಎಂದು ಛೇಡಿಸಿಯಾರು ಎಲ್ಲಾ ನನ್ನನ್ನು....” ಮಾತು ಹೂತು, ಗಂಟಲುಬ್ಬಿ, ಕಣ್ಣಿಂದ ದಳ ದಳನೆ ಹನಿಗಳುರುಳಲು, ಅವನು ತನ್ನ ಕಿಸೆಯಿಂದ ಕರವಸ್ತ್ರ ತೆಗೆದು ಮೆಲ್ಲನೆ ಅವಳ ಕೈಗಳ ಮೇಲಿಟ್ಟ. 
ದೊಡ್ಡ ದೊಡ್ಡ ನಾಯಕರ ನಡುವೆ ಓತಪ್ರೋತವಾಗಿ ಭಾಷಣ ಬಿಗಿವ ಶ್ರೀಕಾಂತನ ಬಾಯಿಯೂ ಇಂದೇಕೋ ಕಟ್ಟಿ ಹೋಗಿತ್ತು. ಏನೋ ಹಿಂಜರಿಕೆ, ಸಂಕೋಚ. ಏನು ಹೇಳಲಿ? ಏನ ಕೇಳಲಿ? ಒಂದು ಹೇಳಿ ಇನ್ನೊಂದಾಗಬಾರದು.. ಹೇಳುವಂಥದ್ದು ಬಾಕಿಯೂ ಉಳಿಯಬಾರದು... ಹೇಗೆ ಹೇಳಲಪ್ಪಾ.. ಎನ್ನುವ ತಳಮಳದಲ್ಲಿಯೇ ಐದು ನಿಮಿಷ ಕಳೆದುಹೋಯಿತು. ಆಕೆ ಹಿಂದಿರುಗುವ ಹವಣಿಕೆಯಲ್ಲಿರುವುದ ಕಂಡು ಮೆಲುವಾಗೊಮ್ಮೆ ಕೆಮ್ಮಿಕೊಂಡು, “ಅಯ್ಯೋ ದಯಮಾಡಿ ಬೇಸರ ಬೇಡ... ಅಂಥದ್ದೇನೂ ಆಗಿಲ್ಲ... ನಿಜವಾಗಿಯೂ ನಾನು ಯಾರ ಬಳಿಯೂ ಹೇಳಿಲ್ಲ.. ಹೇಳುವುದೂ ಇಲ್ಲಾ.. ಈ ಕಲೆ ಒಂಥರಾ ಚೆನ್ನಾಗಿದೆ.. ನನಗೆ ಇಷ್ಟವಾಯಿತು... ಹೀಗೇ ಇರಲಿ ಬಿಡು.... ಅಂದ ಹಾಗೆ ನಾನು ಶ್ರೀಕಾಂತ, ವರನ ದೋಸ್ತ. ನಿನ್ನಣ್ಣ ಸುಧಾಮನಿಗೆ ಚೆನ್ನಾಗಿ ಪರಿಚಯವಿದೆ ಬಿಡು... ನಿನ್ನ ಹೆಸರು ಜಾನಕಿ ಎಂದು ತಿಳಿಯತು... ಚೆನ್ನಾಗಿದೆ ನಿನ್ನ ಹೆಸರು....” ಮುಂದೇನೋ ಹೇಳ ಹೊರಟವನು ನಾಲಗೆ ಕಚ್ಚಿಕೊಂಡ. ತನ್ನ ಹೆಸರನ್ನು ಅಷ್ಟು ಅಕ್ಕರೆಯಿಂದ ಉಸುರಿದ್ದು ಇವನೇ ಮೊದಲಿಗನೇನೋ ಎಂದೆನಿಸಿತು ಅವಳಿಗೆ. ಮನದೊಳಗೆ ಏನೇನೋ ಭಾವಗಳ ತಾಕಲಾಟ. ಅರಿತರೂ ಅರಿವಾಗದ್ದಂಥದ್ದು. ಒಳಗಡೆಯಿಂದ ಯಾರೋ ಬರುವ ಸಪ್ಪಳ ಕೇಳಿದ್ದೇ ಆಕೆ ಸ್ವಲ್ಪವೂ ತಡ ಮಾಡದೇ ಥಟ್ಟನೆ ಜಗುಲಿಯ ಕಡೆಗೆ ಓಡಿ ಮರೆಯಾಗಿ ಬಿಟ್ಟಳು. ಸುರಗಿ ಮರದ ಬುಡದಲ್ಲೀಗ ಮತ್ತೆ ಕತ್ತಲು.
~೨~
“ಆಯಿ ನಿಮಗೆ ಬುದ್ಧಿ ಇಲ್ಲಾ ನೋಡಿ... ಕಲಾವತಿಯ ಗಂಡನ ಬಗ್ಗೆ ಸರಿಯಾಗಿ ವಿಚಾರಿಸಿದ್ದೀರಾ ಎಂತಾ? ಮತ್ತೇನಿಲ್ಲಾ ಮದುವೆಯಲ್ಲಿ ಶ್ರೀಕಾಂತನ ಓಡಾಟ ಜೋರಾಗಿತ್ತು. ಆತ ನಮ್ಮ ಭಾವಯ್ಯನ ಪರಮಾಪ್ತ ಸ್ನೇಹಿತನಂತೆ! ಆ ಶ್ರೀಕಾಂತ ಬರೀ ಜಟಾಪಟಿಯವನು... ಮಹಾನ್ ಕೋಪಿಷ್ಠ... ಗಾಂಧೀಜಿಯವರ ಶಾಂತಿ ತತ್ತ್ವಗಳಿಗೆ ತದ್ವಿರುದ್ಧವಾಗಿ ಆಡುತ್ತಿರುತ್ತಾನೆ.... ಅವನದೊದ್ದು ಸಣ್ಣ ಗುಂಪೇ ಇದೆ.... ಅವರಿಗೆಲ್ಲಾ ಕ್ರಾಂತಿಕಾರಿ ಭಗತ್ ಸಿಂಗನೇ ಆದರ್ಶ. ಇವನಂತೂ ಭಗತ್‌ನ ನಂತರ ತಾನೇ ಮಹಾನ್ ಕ್ರಾಂತಿಕಾರಿ ಹೋರಾಟಗಾರನೆಂದುಕೊಂಡಿದ್ದಾನೆ. ನಾವೆಲ್ಲಾ ಪುಗ್ಸಟ್ಟೆ, ಕೆಲ್ಸಕ್ಕೆ ಬಾರದ ಶಾಂತಿ, ಅಹಿಂಸೆ ಹೇಳುತ್ತಾ ಕೂರೋರಂತೆ... ನಮ್ಮ ಕಲಾಳ ಗಂಡನೂ ಇವರಂತೇ ಕ್ರಾಂತಿ, ಹೋರಾಟ ಎಂದೆಲ್ಲಾ ಹೋಗ್ಬಿಟ್ರೆ ಹನ್ನೆರಡು ವರುಷಗಳ ಹಿಂದೆ ಭಗತ್ ಸಿಂಗ, ರಾಜ್‌ಗುರು ಮತ್ತು ಸುಖದೇವರಿಗೆಲ್ಲಾ ಗಲ್ಲಾಯಿತಲ್ಲಾ... ಅದೇ ಗತಿ ನಮ್ಮ ಭಾವಯ್ಯನಿಗೂ ಆಗಿ ಬಿಟ್ಟರೇನು ಮಾಡುವುದು? ಆ ಶ್ರೀಕಾಂತ ಮನೆ ಮಠ ಬಿಟ್ಟು ತಿರುಗುವ ಪರದೇಶಿ.... ವರುಷ ಇಪ್ಪತ್ತರ ಆಸುಪಾಸಾದರೂ, ಇನ್ನೂ ಮದುವೆ, ಸಂಸಾರದ ಆಸ್ಥೆ ಇಲ್ಲದ ಸನ್ಯಾಸಿ ಅಂವ... ನಮ್ಮ ಕಲಾಳ ಪತಿಗೇನಂಥಾ ದೋಸ್ತಿಯೋ ಅವನ ಜೊತೆಯಲ್ಲಿ....” ಎಂದು ಒಳಗಿಂದ ಹೊರಗೆ ತಿರುಗುತ್ತಾ ಕೂಗುತ್ತಿದ್ದ ಸುಧಾಮನ ಮಾತು ಕೇಳಿ ಅದೇನೋ ಎಂತೋ ತುಸು ಹೆಚ್ಚೇ ಕಿಡಿ ಕಿಡಿ ಆದಳು ಜಾನಕಿ.
“ಛೇ... ಬಿಡ್ತು ಅನ್ನು ಅಣ್ಣಯ್ಯ...ಎಂತದೋ ನಿಂದು ವ್ಯರ್ಥ ಪ್ರಲಾಪ... ನಿನ್ನ ಲೆಕ್ಕದಲ್ಲಿ ಕ್ರಾಂತಿಕಾರಿಗಳೆಲ್ಲಾ ದೇಶದ್ರೋಹಿಗಳೇನೋ?! ನಿಮ್ಮಂಥವರು ಮಾತ್ರ ನಿಜವಾದ ಸ್ವಾತಂತ್ರ್ಯ ಹೋರಾಟಗಾರರೋ?! ಗಲ್ಲು ಶಿಕ್ಷೆ ನಿಮ್ಮ ಕಡೆಯಲ್ಲೂ ಸುಮಾರು ಜನರಿಗೆ ಅಗಿದೆ ಅಲ್ಲವಾ? ಆ ಫಿರಂಗಿಗಳೇನೋ ಅಷ್ಟು ಅಹಿಂಸಾವಾದಿಗಳೊ... ಕ್ರಾಂತಿಕಾರಿಗಳಿಗೆ ಮಾತ್ರ ಗಲ್ಲು ನೀಡಿ ಸಾಯಿಸಲು...!! ಮಳ್ಳು ಮಾತಾಡೋದು ಬಿಡು...” ಜಾನಕಿಗೂ ಅವಳಣ್ಣನಿಗೂ ಅಷ್ಟಕಷ್ಟೇ ಅನ್ನೋದು ಮನೆಯವರಿಗೆ ಗೊತ್ತಿದ್ದರೂ, ಎಂದೂ ಅವಳ ಮಾತು ಇಷ್ಟು ಹರಿತವಾಗಿರಲಿಲ್ಲ. ಎಲ್ಲರಿಗೂ ಅಚ್ಚರಿ ಆಗಿ ಸ್ವಲ್ಪ ಹೊತ್ತು ಮಾತೇ ಹೊರಡಲಿಲ್ಲ. ತಂಗಿಯ ನೇರ ವಾಗ್ದಾಳಿಯಿಂದ, ಉತ್ತರಿಸಲಾಗದೇ ಸುಧಾಮನ ಕ್ರೋಧ ನೆತ್ತಿಗೇರಿತು. “ನೋಡಿ ದೊಡ್ಡಪ್ಪ, ನೋಡೋ ಅಪ್ಪಯ್ಯ ನಿನ್ನ ಮಗಳ ಅಣಿ ಮುತ್ತುಗಳ... ನೀವೇ ಇವ್ಳನ್ನ ತಲೆ ಮೇಲೆ ಕೂರಿಸಿ ಹೀಗಾಗಿದ್ದು... ಓದಿನಲ್ಲಿ ಚುರುಕು ಅಂತ ಆರನೆಯ ಇಯತ್ತೆಗೂ ಹಾಕಿದ್ರಲ್ಲಾ... ಈಗ ನೋಡಿ ಸ್ವಂತ ಅಣ್ಣ ಅನ್ನೋ ಮರ್ಯಾದೆನೋ ಇಲ್ಲಾ ಇದಕೆ..” ಎಂದು ಕೂಗಾಡಲು, ವೆಂಕಜ್ಜಿಯ ಪತಿ ರಾಜರಾಮ ರಾಯರು ಮಧ್ಯೆ ಬರಲೇ ಬೇಕಾಯಿತು. “ತಮ್ಮಾ.. ದುಡುಕಿ ಮಾತನಾಡಬೇಡ... ನಿನ್ನ ಭಾವಯ್ಯನ ಬಗ್ಗೆ, ಈ ಮನೆ ಅಳಿಯನ ಕುರಿತು ಅದೆಂಥಾ ಕೆಡುಕು ಆಲೋಚನೆ ನಿಂದು ಛೆ....! ಇಷ್ಟಕೂ ಜಾನಕಿ ಹೇಳಿದ್ದರಲ್ಲಿ ಏನು ತಪ್ಪಿದೆ? ಎಲ್ಲರೂ ದೇಶಕ್ಕಾಗಿಯೇ ಹೋರಾಟ ಮಾಡೋರು... ನೀವು ಮಾತ್ರ ಮೇಲೆ, ಆ ಮಾಣಿ ಕೆಳಗೆ ಅನ್ನೋದು ಬಿಡು... ಈಗ ಎಲ್ಲಾ ಮಲಗಿ ಮೊದಲು..... ನಾಳೆ ಬೀಗರ ಮನೆಗೆ ಪೂಜೆಗೆ ಹೋಗಬೇಕು....” ಅಜ್ಜಯ್ಯನ ಖಡಕ್ ಮಾತು ಕೇಳಿದ್ದೇ ಸುಧಾಮನ ಪುಂಗಿ ಬಂದಾಯಿತು. ‘ಎಷ್ಟೆಂದರೂ ನಿಮಗೆಲ್ಲಾ ಇವಳೇ ಮುದ್ದು...’ ಎಂದು ಮನಸಲ್ಲೇ ಬೈದುಕೊಳ್ಳುತ್ತಾ ಹಾಸಿಗೆಯ ಮೇಲೆ ಬಿದ್ದುಕೊಂಡ. 
~~~~~~
ಮದುವೆಯಾಗಿ ಎರಡು ದಿನಗಳಷ್ಟೇ ಕಳೆದಿದ್ದರೂ, ಆಗಲೇ ಅದೇನೋ ಹೊಸ ಕಳೆಯಿಂದ ಬೀಗುತ್ತಿದ್ದ ಕಲಾವತಿಯ ಈ ಬದಲಾವಣೆ ಅಚ್ಚರಿ ತಂದಿತ್ತು ಜಾನಕಿಯಲ್ಲಿ. ಸತ್ಯನಾರಾಯಣ ಪೂಜೆಗೆಂದು ಪತಿಯ ಪಕ್ಕದಲ್ಲಿ ಕುಳಿತಿದ್ದವಳನ್ನೇ ಕದ್ದು ನೋಡುತ್ತಿದ್ದ ಭಾವಯ್ಯ, ಅದನರಿತೇ ಆಗಾಗ ನಾಚಿ ತಲೆ ತಗ್ಗಿಸುತ್ತಿದ್ದ ಅಕ್ಕಯ್ಯ. ಬೇಡ ಬೇಡವೆಂದರೂ ಅವಳಿಗೆ ಶ್ರೀಕಾಂತ ನೆನಪಾಗುತ್ತಿದ್ದ. ತಿನ್ನಲು ಹಠ ಮಾಡುತ್ತಿದ್ದ ತನ್ನ ಒಂದೂವರೆ ವರುಷದ ಮಗನನ್ನು ಎಳೆದು ಕೂರಿಸಿಕೊಂಡ ಶಾರದೆ ಹೇಗೋ ಜಾನಕಿಯ ಸಹಾಯದಿಂದ ಅವನಿಗೆ ನಾಲ್ಕು ತುತ್ತು ತುರುಕಿಸಿ, ಅಮ್ಮನ ಬಳಿ ಬಿಟ್ಟು ಸ್ವಸ್ಥಾನಳಾಗಿ ಉಸ್ಸೆಂದಳು. ಆ ದಿನದಿಂದಲೂ ತನ್ನೊಳಗೇ ಕೊರೆಯುತ್ತಿದ್ದ ಪ್ರಶ್ನೆಯ ಕೇಳಲು ಇದೇ ಸುಸಮಯವೆಂದರಿತ ಜಾನಕಿ ಮೆಲ್ಲನೆ ಶಾರದಕ್ಕಳಲ್ಲಿ... “ನಿನ್ನ ಹತ್ರ ನಾ ಠೂ ಬಿಟ್ಟೀದ್ದೀನಿ ಗೊತ್ತಾ ಅಕ್ಕಯ್ಯ.. ಆದರೂ ಮಾತಾಡ್ತಿದ್ದೀನಿ.. ನೀ ನಾಳೆ ನಿನ್ನೂರಿಗೆ ಹೋಗುತ್ತಿದ್ದೀಯಾ ನೋಡು ಅದಕ್ಕೇ... ನೀನೇನೋ ಗುಟ್ಟು ಹೇಳಿದ್ದೀಯಂತೆ ಕಲ್ಲೆಗೆ.. ನಂಗೆ ಮಾತ್ರ ಹೇಳಿಲ್ಲಾ ಅಲ್ವಾ? ಹೋಗೇ ನೀನು...” ಎಂದು ಮೊಗ ತಿರುವಿ ಹುಸಿಗೋಪ ತೋರಿದವಳ ತಲೆಗೊಂದು ಮೊಟಕಿ ನಕ್ಕಳು ಶಾರದೆ. “ಅಯ್ಯೋ ಪೆದ್ದಿ.. ಅದು ಮದ್ವೆ ಆಗೋ ಕೂಸು.. ತಿಳಿದುಕೊಳ್ಳೋದು ಬಹಳ ಇತ್ತು ಹೇಳ್ದೆ... ನಿನ್ನ ಮದ್ವೆ ನಿಕ್ಕಿ ಆಗ್ಲಿ.. ನಿಂಗೂ ಹೇಳೋದೇ....” ಎಂದು ಸಮಾಧಾನಿಸಿದರೂ ಅವಳು ನಗಲಿಲ್ಲ. ಇವತ್ತಲ್ಲಾ ನಾಳೆ ಇವಳೂ ಮದುವೆಯಾಗೋ ಹುಡುಗಿಯೇ.. ತೀರಾ ಎಳಸಲ್ಲಾ... ತಿಳಿದಿದ್ದರೆ ಒಳಿತೇ ಎಂದುಕೊಂಡ ಶಾರದೆ... ಗಂಡು ಹೆಣ್ಣಿನ ನಡುವೆ ಏರ್ಪಡುವ ಸುಮಧುರ ಬಾಂಧವ್ಯದ ಗುಟ್ಟನ್ನು, ಪ್ರೀತಿಯ ಸಂವೇದನೆಯ ಸೂಕ್ಷ್ಮತೆಯನ್ನು ಪಿಸುದನಿಯಲ್ಲುಸುರಲು ಜಾನಕಿಯ ಒಳಗೆಲ್ಲೋ ಬಿರಿದ ಸದ್ದು! ಆವರೆಗೂ ಅರಿವಾಗದಿದ್ದ ಹೊಸ ತಿಳಿವನ್ನು ಹನಿ ಹನಿಯಾಗಿ ಎದೆಗಿಳಿಸಿಕೊಂಡಂತಾಗಿ ಝಿಲ್ಲನೆ ಬೆವರಿದಳು. ಅಕ್ಕಯ್ಯನನ್ನು ತಲೆಯೆತ್ತಿ ನೋಡಲೂ ಭಯವಾಯಿತು.... ಎಲ್ಲಿ ತನ್ನೊಳಗಿನ ಗುಟ್ಟು ಬಯಲಾಗಿಬಿಡಬಹುದೋ ಎಂದು. ಏನೋ ನೆಪವೊಡ್ಡಿ ಹೊರ ಬಾಗಿಲಿನ ಕಡೆ ಹೊರಡಲು, ತನಗೆ ಯಾರೋ ಅಡ್ಡ ಬಂದಂತಾಗಲು, ಸಾವರಿಸಿಕೊಂಡು ನಿಂತು ತಲೆಯೆತ್ತಿದರೆ, ಎದುರಿಗೆ ಶ್ರೀಕಾಂತ!
ಕ್ಷಣ ಎತ್ತಿದ್ದ ದಿಟ್ಟಿಯ ಹಾಗೇ ಕೆಳಗಿಳಿಸಿದವಳೇ ಊರಿದ್ದ ಪಾದವ ಕಿತ್ತುಕೊಂಡು ಮತ್ತೆ ಶಾರದಕ್ಕಳ ಪಕ್ಕದಲ್ಲೇ ಕೂತು ಬಿಟ್ಟಳು. ಅವಳೆದೆ ಆಗ ತಾನೇ ಪಂಜರದಲ್ಲಿ ಕೂಡಿ ಹಾಕಿಟ್ಟಿದ್ದ ಪಕ್ಷಿಯಂತೇ ತಟಪಟನೆ ಹಾರುತ್ತಿತ್ತು. “ಇಶ್ಶಿ... ಇದೇನೇ ನೀನು... ಪ್ರೀತಿ ಪದ ಕೇಳಿಯೇ ಹೀಂಗೆ ಆಗೋದೆ.... ಮತ್ತೆ ಭಾರಿ ಗುಟ್ಟು ಕೇಳೋ ಆಸೆ ನೋಡು...” ಎಂದು ಅಕ್ಕಯ್ಯ ಕಿಚಾಯಿಸಿದರೂ ಬಿಮ್ಮನೆ ಕುಳಿತಳು. ಮಗ ಮತ್ತೆ ಗಲಾಟೆಯೆಬ್ಬಿಸಲು ಅತ್ತ ಹೋದ ಅಕ್ಕನನ್ನೇ ಹಿಂಬಾಲಿಸಿಬಿಟ್ಟಳು ಜಾನಕಿ. ಎರಡು ಕಣ್ಗಳು ಅವಳನ್ನೇ ನೋಡುತ್ತಿದ್ದುದು ಅವಳಿಗೂ ಗೊತ್ತಿತ್ತು.
ಬೀಗರೂಟದ ಸಂಜೆ ಹುಡುಗರೆಲ್ಲಾ ಸೇರಿ ತಾಳ ಮದ್ದಲೆ ಏರ್ಪಡಿಸಿದ್ದರು. ಎಲ್ಲೆಡೆ ನಗು, ಕೇಕೆ ಮಾತುಗಳ ಗದ್ದಲ. ಹಿರಿಯರೆಲ್ಲಾ ಮಾಳಿಗೆ ಹತ್ತಿ ವಿಶ್ರಾಂತಿಗೆ ತೊಡಗಿಯಾಗಿತ್ತು. ಜಗುಲಿಯಲ್ಲಿ ಹರೆಯದ ಹೆಣ್ಮಕ್ಕಳೆಲ್ಲಾ ಅಮ್ಮಂದಿರ ಬೆದರಿಕೆಗೆ ಹೆದರಿ ಮಲಗಿದ್ದಲ್ಲಿಂದಲೇ ಹೊರಗಿನ ನಗುವಿಗೆ ಸಾಥ್ ನೀಡುತ್ತಿದ್ದರು. ಜಾನಕಿಗೋ ನಿದ್ದೆಯ ಸುಳಿವೂ ಇಲ್ಲಾ. ಬೆಳಗಿನ ಆ ಜೋಡಿ ಕಣ್ಗಳೊಳಗಿನ ಬೆಳಕೇ ಕಣ್ಕುಕ್ಕಿ ಎಬ್ಬಿಸುತ್ತಿತ್ತು. ಅದರ ಮೇಲೆ ತುಸು ಹೆಚ್ಚೇ ಪಾನಕ ಕುಡಿದಿದ್ದರಿಂದ ಶರೀರ ಬಾಧೆ ಕಾಡಿಸತೊಡಗಿತ್ತು. ಎದ್ದು ಹೊರ ಹೋಗಬೇಕೆಂದರೂ ನಾಚಿಕೆ. ಹೊಸ ಜಾಗ ಬೇರೆ. ಪಕ್ಕದಲ್ಲೇ ಮಲಗಿದ್ದ ಶಾರದಕ್ಕಳ ಎಬ್ಬಿಸಿ ಕಷ್ಟ ತೋಡಿಕೊಂಡಳು. ಅವಳ ಸಂಕಟ ಅರಿತ ಶಾರದೆ ಪರಸ್ಥಳವಾದ್ದರಿಂದ ಕಲಾವತಿಯ ಪತಿಯ ಚಿಕ್ಕಮ್ಮನಾದ ಸೀತಮ್ಮಳನ್ನೂ ಎಬ್ಬಿಸಿದಳು. ಮೂವರೂ ಹಿತ್ತಲ ಕಡೆ ಹೊರಟರು ಹಿಂಭಾಗಿಲಿನಿಂದ. ಬಚ್ಚಲಲ್ಲಿ ಕೈ ಕಾಲು ತೊಳೆದವರೇ ಒಳ ಹೊಕ್ಕಲು ಹೊರಟಾಗ ಯಾರೂ ತಮ್ಮತ್ತಲೇ ಬರುತ್ತಿದ್ದುದು ತಿಳಿದು ಹಾಗೇ ನಿಂತರು. ತುಸು ಕೆಮ್ಮಿ ಗಂಟಲು ಸರಿಪಡಿಸಿಕೊಂಡ ಆತ “ಕ್ಷಮಿಸಿ, ತೊಂದರೆ ಕೊಡುತ್ತಿದ್ದೇವೆ... ಯಾರೂ ಎದ್ದಿಲ್ಲ ಎಂದು ನಾವೇ ಹುಡುಕಿ ಸಿಗದೇ ಸೋತು ಹಿಂದೆ ಹೋಗಿದ್ದೆವು.... ಈಗ ನೀವು ಎದ್ದಿದ್ದು ಕಂಡು ನಾನು ಬಂದೆ. ಅಲ್ಲಿ ಹಲವರಿಗೆ ಬಾಯಾರಿಕೆ ಆಗಿದೆ. ಕುಡಿಯುವ ನೀರಿನ ಜೊತೆ ಬೆಲ್ಲದಚ್ಚುಗಳು ಸಿಕ್ಕಿದ್ದರೆ ಚೆನ್ನಾಗಿತ್ತು... ನೀರು ತುಂಬಿಸಲು ದೊಡ್ಡ ಚಂಬು ಸಿಗಲೇ ಇಲ್ಲಾ.. ಹಾಗಾಗಿ..” ಎಂದು ಬಾಯೆಳೆಯಲು ನಕ್ಕ ಸೀತಮ್ಮಾ,  “ತೊಂದರೆ ಇಲ್ಲಾ ಬಿಡಿ ಕೊಡುವೆ.... ಇಲ್ಲೇ ಇರಿ ಒಳಗೆ ಕತ್ತಲಿದೆ ಎಂದು ತಡವುತ್ತಾ ಒಳ ಹೋಗಿ ಅಲ್ಲೇ ಕಪಾಟಿನ ಮೇಲಿಟ್ಟುಕೊಂಡಿದ್ದ ದೀಪಹಚ್ಚಿಕೊಂಡು ಹೊರ ಬರಲು ಅಷ್ಟೊತ್ತೂ ಆಕಳಿಕೆ ತೆಗೆಯುತ್ತಾ ಸುಮ್ಮನಿದ್ದ ಜಾನಕಿಯ ಕಣ್ಣಿಗೆ ಆತ ಬಿದ್ದ. ಹೊರಗಿನಿಂದ ಬೀಸುತ್ತಿದ್ದ ಕುಳಿರ್ಗಾಳಿಯೂ ಅವಳ ಬೆವರ ಸೆಲೆಯನ್ನೋಡಿಸಲು ವಿಫಲವಾಯಿತು. ಅಲ್ಲೇ ಮರದ ಗೂಟಕ್ಕೆ ಸಿಕ್ಕಿಸಿಟ್ಟಿದ್ದ ಲಾಟೀನಿನ ಮಂದ ಬೆಳಕನ್ನು ಹಿರಿದಾಗಿಸಿದ ಸೀತಮ್ಮಾ ಅಡುಗೆ ಮನೆಯ ಕಡೆ ಹೋದರೂ, ಜಾನಕಿಯ ಕಾಲ್ಗಳು ಮಾತ್ರ ಏಳಲೇ ಇಲ್ಲಾ. ಅತ್ತಿತ್ತ ನೋಡಿ, ನಿಧಾನ ಅವಳ ಬಳಿ ಬಂದ ಶ್ರೀಕಾಂತ, ಅವಳ ಬಲಗೈಯನ್ನು ಮೆಲುವಾಗಿ ಹಿಡಿದು, ‘ಜಾನಕಿ.. ಮೊದಲ ನೋಟದಲ್ಲೇ ನಾನು ನಿನಗೆ ಮನ ಸೋತು ಹೋದೆ... ಮನೆ, ಮಠ, ಸಂಸಾರ ಬೇಡ  ಎಂದಿದ್ದವನ ಕಟ್ಟಿ ಹಾಕಿದ್ದು ನೀನೇ.... ದೇಶ ಸೇವೆಯೇ, ಸ್ವಾತಂತ್ರ್ಯವೇ ನನ್ನ ಮೊದಲ ಪ್ರೀತಿ ಇಂದಿಗೂ... ನನ್ನ ಸಂಕಲ್ಪಗಳಿಗೆ ಇಂಬಾಗಿ ನೀನು ಜೊತೆಗೂಡುವಿಯಾ? ಸುಖದ ಸುಪ್ಪತ್ತಿಗೆ ಕೊಡಲಾರೆ.. ಒಲುಮೆಯ ಕೊಪ್ಪರಿಗೆ ಮಾತ್ರ ಅಕ್ಷಯವಾಗಿರುತ್ತದೆ... ಅಷ್ಟು ಭರವಸೆ ಕೊಡಬಲ್ಲೆ... ಮುಂದೆ ದೇವರ ಚಿತ್ತ..” ಎಂದವನೇ ಅವಳ ಕೈ ಬಿಟ್ಟು ಹಿಂದೆ ಸರಿದು ಕೈಕಟ್ಟಿ ನಿಂತ. ಹೊರ ಬಂದ ಸೀತಮ್ಮರಿಂದ ನೀರು ತುಂಬಿದ್ದ ದೊಡ್ಡ ಹೂಜೆ ಹಾಗೂ ಬೆಲ್ಲದಚ್ಚುಗಳನ್ನು ಪಡೆದು ತಿರುಗಿ ನೋಡದೇ ಹೊರಟವನು ಮರೆಯಾಗುವವರೆಗೂ ನೋಡುತ್ತಿದ್ದಳು ಜಾನಕಿ. ಅವಳ ಕಣ್ಣಲ್ಲೀಗ ಪೂರ್ಣಚಂದಿರನಿದ್ದ.
~೩~
‘ಅತ್ತರೆ ಅಳಲವ್ವಾ ಈ ಕೂಸು ನನಗಿರಲಿ... ಕೆಟ್ಟರೆ ಕೆಡಲಿ ಮನೆಗೆಲಸ..’ ಎಂದು ರಾಗದಲ್ಲಿ ಮೆಲುದನಿಯಲ್ಲಿ ಹಾಡುತ್ತಾ ತನ್ನ ಒಂದು ವರುಷದ ಕೂಸಿಗೆ ಎಣ್ಣೆ ಹಚ್ಚುತ್ತಿದ್ದವಳ ಪಕ್ಕದಲ್ಲೇ ಕುಳಿತು ಮಂದಸ್ಮಿತನಾದ ಶ್ರೀಕಾಂತ. “ಎತ್ತ ಹೋಗಿತ್ತೋ ಸವಾರಿ ಬೆಳ್ಳ್ಂಬೆಳಗ್ಗೇ! ಮನೇಲಿ ಇರೋರು ನಾವಿಬ್ರೇ ಅನ್ನೋದೂ ನೆನ್ಪಿಲ್ವಾ? ಅತ್ತೆಮ್ಮ, ಮವಯ್ಯನೋರು ಕಾಶಿಯಾತ್ರೆಯಿಂದ ಬರಲಿ, ಹಬ್ಬ ಇದೆ ನಿಮಗೆ ಅಂತ ಹೇಳು ಪುಟ್ಟಮ್ಮಾ...” ಎಂದು ಹುಸಿಗೋಪದಿಂದ ಕಂದಮ್ಮನಿಗೊಂದು ಮುತ್ತಿಟ್ಟವಳನ್ನೇ ಪ್ರೇಮದಿಂದ ನೋಡಿದ ಶ್ರೀಕಾಂತ. ಸ್ವಂತ ಅಣ್ಣನ ಪ್ರತಿರೋಧವನ್ನೂ ಲೆಕ್ಕಿಸದೇ, ಮನೆಯವರೆಲ್ಲರ ಅರೆಮನಸ್ಸಿನ ಒಪ್ಪಿಗೆಯಲ್ಲೇ ಅತಿ ಸರಳವಾಗಿ ತನ್ನ ವರಿಸಿ, ಮನೆ-ಮನದುಂಬಿ ಬಂದ ಪುಟ್ಟ ಹುಡುಗಿ ನಾಲ್ಕು ವರುಷಗಳಲ್ಲೇ ಹೆಣ್ಣಾಗಿ, ತಾಯಾಗಿ, ಹಬ್ಬಿ ತಬ್ಬಿದ್ದು ಅವನೊಳಗೂ ಒಂದು ಅರಿಯದ ಅಚ್ಚರಿಯೇ. “ಪುಟ್ಟಕ್ಕ ನಿನ್ನಾಯಿ ನಿಂಗೆ ಈಗ ಕೊಟ್ಟಿತಲ್ಲಾ.. ಅದೇ ನಂಗೂ ಸಿಗತ್ತೆ ಅಂತಾದ್ರೆ ಎಂತಾ ಶಾಸ್ತಿಗೂ ನಾನು ತಯಾರು ಎಂದು ಹೇಳಮ್ಮಾ....” ಎನ್ನಲು ಮೆಲ್ಲನೆ ಅವನ ಹೆಗಲಿಗೊಂದು ಏಟು ಹಾಕಿ ಮುಸಿನಕ್ಕಳು ಜಾನಕಿ.
“ನಾನು ಹೋಗಿದ್ದು ಬೇರೆಲ್ಲೋ ಅಲ್ಲವೇ.. ಪೇಟೆಯ ಕಡೆಗೇ. ಸ್ವಲ್ಪ ಕಾಸು ಬರುವುದು ಬಾಕಿ ಇತ್ತು... ಹಾಗಾಗಿ ಅಡಿಕೆ ಮಂಡಿಗೆ ಹೋಗಿದ್ದೆ. ಈಗ ಮೊದಲಿನಷ್ಟು ಸಾಲ ಇಲ್ಲಾ ನೋಡು... ನಾವು ಬೆಳೆದ ಬೆಳೆ ನಮಗೆ.. ಫಿರಂಗಿಗಳ ಓಡಿಸಿ ಒಂದು ವರುಷದ ಮೇಲಾಯಿತು! ಹಾಗಾಗಿ ಈಗ ಸ್ವಲ್ಪ ದುಡ್ಡು ಕೈಗೆ ಸಿಗುತ್ತಿದೆ. ಆ ಹಣ ಪಡೆದು ಸೀದಾ ಗಜಾನನ ಸೀರೆಯಂಗಡಿಗೆ ಹೋಗಿ ನಿನಗೇ ಎಂದು ಈ ರೇಷ್ಮೆ ಸೀರೆಯನ್ನು ಕೊಂಡು ತಂದೆ....” ಎನ್ನುತ್ತಾ ಖಾದಿಯ ಕೈಚೀಲದೊಳಗಿಂದ ಅದನ್ನು ತೆಗೆದು ಮೆಲ್ಲನೆ ಅವಳ ಕೈಗಿಡಲು ಹೋಗಲು, ಪತಿಯ ತಡೆದಳು ಜಾನಕಿ. “ಅಯ್ಯೋ ತಡೀರಿ ಮಾರಾಯ್ರೆ.. ಎಣ್ಣೆ ಕೈ.. ತೊಳೆದು ಬರುವೆ..” ಎಂದು ಎದ್ದವಳೇ ಹೊರಬಾಗಿಲಿನಲ್ಲಿ ತುಂಬಿದ್ದ ನೀರಿನ ತೊಟ್ಟಿಯಿಂದ ನೀರು ಮೊಗೆದುಕೊಂಡು ಚೆನ್ನಾಗಿ ತೊಳೆಯುತ್ತಾ ಮತ್ತೆ ಶುರುವಿಟ್ಟಳು... “ಅಲ್ಲಾ ಇದಕ್ಕೇನು ಅವಸರ ಇತ್ತು? ನಾನ್ಯಾವತ್ತು ಬೇಕು ಅಂದಿದ್ದೆ... ಅತ್ತೆಮ್ಮನ ರೇಷ್ಮೆ ಸೀರೆ ಇತ್ತಲ್ಲಾ... ಮದುವೆಯಲ್ಲಿ ಅಪ್ಪಯ್ಯ ಸಾಧಾರಣ ಕೈಮಗ್ಗದ ಸೀರೇಲೇ ಧಾರೆಯೆರೆದುಕೊಟ್ಟಿದ್ದರೂ ನನಗೇನೂ ಬೇಸರವಾಗಿರಲಿಲ್ಲ.... ನೀವು ಸಿಕ್ಕಿದ್ದೇ ನನ್ನ ಪಾಲಿಗೆ ದೊಡ್ಡ ಉಡುಗೊರೆ....” ಪತ್ನಿಯ ಅರಳಿದ ಮೊಗವನ್ನೇ ನೋಡುತ್ತಾ ಆತ ಸೀರೆಯನ್ನು ಕೊಡಲು, ಅದನಾಕೆ ಆಸ್ಥೆಯಿಂದ ಬಹಳ ನಾಜೂಕಾಗಿ ಪಡೆದು, ಹಾಗೇ ಒಮ್ಮೆ ಸವರಿ, ಕಣ್ತುಂಬಿಕೊಂಡು ಪತಿಗೆ ನಮಸ್ಕರಿಸಿದಳು. ಮಡದಿಯನ್ನು ಪ್ರೇಮದಿಂದ ಹಿಡಿದೆತ್ತಿದ ಶ್ರೀಕಾಂತ ಬೆಳಕನ್ನು ಮುಂದಿರಿಸಿ, ಅವಳು ಸೀರೆಯಂದವನ್ನು ಚೆನ್ನಾಗಿ ನೋಡಲು ಸಹಕರಿಸಿದ. ನಾಲ್ಕು ವರ್ಷದ ಹಿಂದೆ ತವರಿನಲ್ಲಿ ನಡೆದಿದ್ದ ಕಲಾವತಿಯ ಮದುವೆಯಲ್ಲಿ, ಆಕೆ ಉಟ್ಟಿದ್ದ ಬದನೆಕಾಯಿ ಬಣ್ಣದ ರೇಷ್ಮೆ ಸೀರೆ... ಕೈ ಅಗಲದ ಚಿನ್ನದಂಚು, ಒಡಲ ತುಂಬಾ ಅದೇ ಶ್ರೀ ಆಕಾರದ ಚಿನ್ನದ ಕುಸುರಿ!
“ನೀನು ಇಂಥದ್ದೇ ಸೀರೆಯನ್ನ ನಿನ್ನ ಮದುವೆಯಲ್ಲೂ ಉಟ್ಟುಕೊಳ್ಳಬೇಕೆಂದಿದ್ದೆಯಂತೆ.... ನಿನ್ನ ಮದುವೆಯ ದಿನ ಕಲಾವತಿ ಇಂಥದ್ದೇ ಸೀರೆ ಉಟ್ಟು ಬಂದಿದ್ದಳು ಮತ್ತು ಯಾರ ಬಳಿಯಲ್ಲೋ ನಿನ್ನಾಸೆಯನ್ನು ಹೇಳುತ್ತಿದ್ದಳು... ನಾನು ಕೇಳಿಸಿಕೊಂಡಿದ್ದೆ. ಅಂದೇ ಸಂಕಲ್ಪ ಮಾಡಿದ್ದೆ... ಆದರೆ ಇವತ್ತಿನವರೆಗೂ ಕೈಗೂಡಿರಲಿಲ್ಲ.... ಇಂದು ತಂದೇ ಬಿಟ್ಟೆ. ಜಾನಕಿ ನಿನಗಿಷ್ಟವಾಯ್ತು ತಾನೆ?” ಎಂದವನ ಎದೆಗೊರಗಿ ಕಣ್ಮುಚ್ಚಿದವಳ ಕೆನ್ನೆಯಿಂದ ಮುತ್ತುಗಳುರುಳಿ ಅವನೆದೆಯನ್ನು ತೋಯ್ದವು. ಆಡು ಹಸೆಯಲ್ಲಿದ್ದ ಪುಟ್ಟ ಮಗು ಅತ್ತಿತ್ತ ಓಲಾಡುತ್ತಿದ್ದ ದೀಪವನ್ನು ದೊಡ್ಡ ಕಣ್ಣು ಬಿಟ್ಟುಕೊಂಡು ನೋಡುತ್ತಾ ಕೇಕೇ ಹಾಕುತ್ತಿತ್ತು.
{ತುಷಾರ  ಸಾಹಿತ್ಯಾಂಜಲಿ (ಕ್ಯಾಲಿಫೋರ್ನಿಯಾ) ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಥೆ}
-ತೇಜಸ್ವಿನಿ
******