ಸೋಮವಾರ, ಜನವರಿ 20, 2014

ಕಣ್ಣ ಹನಿಗಳೇ ಅರ್ಪಣೆ

ನೀ ಬೆಳೆದಿದ್ದ ತೊಂಡೆ, ಅಲಸಂಡೆ, ಸವತೆ
ಚಪ್ಪರಗಳ ತಂಪೆರಳಿನಲ್ಲಾಡಿದ್ದ ನನ್ನ ಬಾಲ್ಯ,
ಪಾತಕ್ಕ(ಪಾರ್ವತಿ)
ನಿನ್ನ ಬಟಾಟೆ ಹಲ್ವದ  ಸ್ವಾದದ  ಮೆಲುಕು,
ಹೊತ್ತಲ್ಲದ ಹೊತ್ತಲ್ಲೂ ನಿನ್ನ ಹೇಗಲೇರಿ,
ಗುಡ್ಡ ಬೆಟ್ಟವ ಸುತ್ತಾಡಿ ದಣಿಸಿದ್ದು,
ಮೇಲುಸಿರು ಬಿಡುತಿದ್ದ ನನ್ನ ಹೊತ್ತು
ಹತ್ತು ಮೈಲು ದೂರ ಸಾಗಿ,
ನೀನು ಏದುಸಿರುಬಿಟ್ಟಿದ್ದು....!

ನಮ್ಮ ಮದುವೆಗೆ ಹಾರೈಸಿ ನೀನಿತ್ತಿದ್ದ
ಸ್ಟೀಲಿನ ದೊಡ್ಡ ಪೀಪಾಯಿಯ ತುಂಬಾ
ತುಂಬಿವೆ ಅಕ್ಕಿಕಾಳುಗಳು!
ಒಂದೊಂದು ಕಾಳಿನೊಳಗೂ ನಿನ್ನ-ನನ್ನ
ನೆನಪುಗಳದೇ ಚಿತ್ರಗಳು...
ಪಾತಕ್ಕ, ಏನನ್ನು ನಾ ಕೊಡಲಿ ನಿನಗೆ?
ನೀ-ನನಗಿತ್ತುದರ ಬದಲಾಗಿ?
ಈ ಹನಿಗವಿತೆಯ ಅರ್ಪಣೆಯ ಜೊತೆ,
ಅಶ್ರುತರ್ಪಣವು ನಿನ್ನಾತ್ಮದ ಶಾಂತಿಗಾಗಿ.


-ಪವಾಡ ಎಲ್ಲರ ಪಾಲಿನ ಅದೃಷ್ಣವಲ್ಲ. :( ಒಳಗೆಲ್ಲೋ ಏನೋ ಒಂದು ಆಶಯ, ಹಾರೈಕೆ ಜೀವಂತವಾಗಿತ್ತು ಇಷ್ಟು ದಿನ.... ಆದರೆ ಇಂದು ಎಲ್ಲವೂ ಶೂನ್ಯ! ನಮ್ಮೆಲ್ಲರ ನೆಚ್ಚಿನ ಬಾಲ್ಯದ ಗೆಳತಿ, ಚಿಕ್ಕಮ್ಮ, ಪ್ರೀತಿಯಿಂದ ನಾವೆಲ್ಲಾ "ಪಾತಕ್ಕ" ಎಂದೇ ಕರೆಯುತ್ತಿದ್ದ, ಈಗಲೂ ಕರೆಯುವ, ಅಮ್ಮನ ಕಿರಿಯ ತಂಗಿ ಪಾರ್ವತಿ ಇಂದು ಅನಂತದಲ್ಲಿ ವಿಲೀನ. :( :( :( ಅವರ ಇಬ್ಬರು ಚಿಕ್ಕ ಮಕ್ಕಳ ಸ್ಥೈರ್ಯ ಹಾಗೂ ಮಾನಸಿಕಶಕ್ತಿಗಾಗಿ ಇನ್ನು ಅನುದಿನವೂ ನಮ್ಮ ಪ್ರಾರ್ಥನೆ. ಈ ಪುಟ್ಟ ಕವಿತೆ ನನ್ನ ಪಾತಕ್ಕನಿಗೆ ಅರ್ಪಣೆ.


-ತೇಜಸ್ವಿನಿ.

ಮಂಗಳವಾರ, ಜನವರಿ 7, 2014

ನವಮದಲ್ಲಿ.....

ಆ ಬಲಗೈ ಬೆಸೆದಿದ್ದ ಬೆಸುಗೆಯಿಂದಲೋ
ಭಾವ ಮಂಥನದ ನಡುಕದಿಂದಲೋ
ಬೆವರಿದ ನನ್ನ ಬಲಗೈಯಿಂದೆದ್ದು,
ಹನಿಯುತ್ತಿದ್ದ ಬೆವರಿನಹನಿಗಳನ್ನೇ
ಬಾಗಿ ನೋಡುತ್ತಿದ್ದ ನೊಸಲ ಹನಿಗಳು.....
ಹೊಸ ರೇಶಿಮೆ ಸೀರೆಯ ಸರಪರದ ಸದ್ದು,
ಜೊತೆಗೆ ಮಲ್ಲೆ ಹೂವುಗಳ ಮತ್ತು,
ಅನೂಹ್ಯ ರೋಮಾಂಚನಕೆಳೆಸಿದ ಆ
‘ಸುಲಗ್ನೇ ಸಾವಧಾನ....ಸುಮುಹೂರ್ತೇ ಸಾವಧಾನ..’

ಲಾಜಹೋಮದಲ್ಲಿ ತುಸು ಬಿಸಿಯಾದ
ಕೈ ಸವರಿ ಮೆಲುನಕ್ಕಿದ ಆ ಪರಿ,
ಅರಳು ಹೊಯ್ದು ಮರಳು ಮಾಡಿ
ಕಣ್ಸೆರೆ ಹಿಡಿದು ಕೆಂಪಾಗಿಸಿದಾ ನೋಟ,
ಕೊರಳೊಳಗಿನ ಕರಿ ಮಣಿಗಳ
ಪಿಸುದನಿಗಳ ಕಚಗುಳಿಗಳು,
ಸುಖಾಸುಮ್ಮನೆ ಹೊಡೆದುಕೊಳ್ಳುತ್ತಿದ್ದ
ಎದೆಬಡಿತದ ಸದ್ದು...

ಹನಿಗಣ್ಣಾದ ಅಪ್ಪ, ಕಣ್ತಪ್ಪಿಸುತಿದ್ದ ಅಮ್ಮ
ಅರಳಿದ ತಂಗಿಯರ ಮೊಗ,
ಅಪ್ಪಿದ ಸ್ನೇಹಿತೆಯ ಗುಟ್ಟು-
ತಂದ ಅರಿಯದ ಪುಳಕದ ಹೊತ್ತು,
ಹಳೆ ಬಂಧಗಳ ಜೊತೆ ಜೊತೆಯಲಿ
ಹೊಸ ಬಂಧಗಳಡೆ ನಾ-
ನಿತ್ತ ಆ ಏಳು ಹೆಜ್ಜೆಗಳು,
ಕಿರು ಹುಬ್ಬುಗಳ ನಡುವೆ
ಕುಳಿತ ಕೆಂಪು ಚಂದಿರ ನಗಲು,
ನಡು ಹಗಲಿಗೇ ಹುಣ್ಣಿಮೆಯಾಗಿತ್ತು.

ಆ ದಿನ, ಆ ಸುಮೂಹರ್ತದಲ್ಲಿ
ಮೆಲು ನುಡಿದಿದ್ದ ಆ ದನಿ-
‘ಇದಿನ್ನು ನಿನ್ನ ಮನೆ’ ಮಾತೇ
ತುಸು ಚುಚ್ಚಿ, ತುಸು ಹೆಚ್ಚಿ
ಹಿಂತಿರುಗಿದಾಗ ಮಾತ್ರ, ನಾ-
ಬಂದಿದ್ದ ಮನೆಯೆಲ್ಲಾ ಮಸಕು ಮುಸುಕು...
ಈ ಮನೆಯಿಂದ ಆ ಮನೆಯೆಡೆ
ಪಯಣ ಸಾಗಿ ವರುಷಗಳೊಂಭತ್ತು ಕಳೆದರೂ,
‘ನಿಮ್ಮ ಮನೆ’ ನಮ್ಮ ಮನೆಯಾಗಲು
ವರುಷಗಳೇ ಬೇಕಾದವು!

ತನ್ನ ಮನೆಯಂಗಳದಿ
ಬಿರಿದಿದ್ದ ಹೂವೊಂದನ್ನು
ನಿಮ್ಮ ಮನೆಯಂಗಳಕೆ ಶೋಭಿಸಲು
ಧಾರೆಯನ್ನಿತ್ತ ಅವರಿಬ್ಬರನು ನೆನೆ-
ನೆನೆದು, ಮನಸಾರೆ ಒಪ್ಪಿದೆ
ನಮ್ಮಿಬ್ಬರ ಹೊಸ ಗೂಡನು...
ಪ್ರೀತಿ ಫಲದಲ್ಲಿ ಚಿಗುರಿಹ
ಮೊಗ್ಗೊಂದನು ಸಲಹುತ
ಬೃಂದಾವನವಾಗಿಸುತಿಹೆವು
ಮನೆ-ಮನವನು.

-ತೇಜಸ್ವಿನಿ ಹೆಗಡೆ