೮ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡ ‘ಹರಟೆ ಕಟ್ಟೆ - ಹೊಸಕಾಲದ ಲಲಿತ ಪ್ರಬಂಧಗಳು’ ಪುಸ್ತಕದಲ್ಲಿ ಪ್ರಕಟಗೊಂಡಿರುವ ನನ್ನ ಲಲಿತ ಪ್ರಬಂಧ.
*******************************************************************************
ಮಲೆನಾಡು ಪ್ರಮುಖವಾಗಿ ಎರಡು ವಿಷಯಗಳಿಗೆ ಹೆಸರುವಾಸಿ. ಒಂದು ಅಡಿಕೆ ತೋಟಕ್ಕೆ, ಇನ್ನೊಂದು ಧೋ ಎಂದು ಬೀಳುವ ಮಳೆಗೆ. ಮಲೆನಾಡು ಎಂದರೆ ಹಲವರು ತೀರ್ಥಹಳ್ಳಿ, ಚಿಕ್ಕಮಗಳೂರು ಶೃಂಗೇರಿ ಎಂದೇ ಭಾವಿಸುವುದು ಹೆಚ್ಚು. ಆದರೆ ಬಾಲ್ಯಂದಿಂದಲೂ ನನಗಂತೂ ಮಲೆನಾಡೆಂದರೆ ಶಿರಸಿಯೇ! ನಮ್ಮೂರಲ್ಲಿ ವಿಶೇಷವಾಗಿ ಅಡಿಕೆಯೇ ಪ್ರಧಾನ. ಕೊಯ್ಲು ಎಂದರೆ ಅಲ್ಲಿ ಅಡಿಕೆಯದೊಂದೇ. ಗಂಡ ಅಂದಾಕ್ಷಾಣ ಹೆಂಡತಿ ಎನ್ನೋದು ಅದೆಷ್ಟು ಪೂರಕವೋ ಅಂತೆಯೇ ಅಡಿಕೆ ಎಂದಮೇಲೆ ಅಲ್ಲಿ ಎಲೆ ಇದ್ದಿರಲೇ ಬೇಕು. ನೇರ ದಿಟ್ಟ ನಿರಂತರವಾಗಿ ಮುಗಿಲೆತ್ತರ ನಿಲ್ಲುವ ಅಡಿಕೆ ಮರಗಳನ್ನು ಬಳುಕುತ್ತಾ, ಲಾಲಿತ್ಯದಿಂದ ಸುತ್ತಿರುವ ಎಲೆಬಳ್ಳಿಗಳ ಸೊಬಗನ್ನು ನೋಡಿಯೇ ಸವಿಯಬೇಕು. ಊಟ ಎಂದರೆ ಉಪ್ಪು-ಉಪ್ಪಿನಕಾಯಿ ಹೇಗೋ ಊಟನಂತರದ ಎಲೆ-ಅಡಿಕೆಯೂ ಇದ್ದಿರಲೇ ಬೇಕು. ಇನ್ನು ಊಟವೆಂದರೆ ಬರಿಯನ್ನವನ್ನಷ್ಟೇ ತಿನ್ನಲಾಗದು, ಜೊತೆಗೆ ಸಾರು, ಪಲ್ಯವಿದ್ದರೆ ಮಾತ್ರ ನಾಲಗೆ ಚಪ್ಪರಿಸೋದು. ಅಂತೆಯೇ ಎಲೆ-ಅಡಿಕೆಗಳಿಗೆ ಸಾಥ್ ನೀಡಿ ರಸಭರಿತ ಕವಳವಾಗಿ ಬಾಯಿ, ಹಲ್ಲು, ನಾಲಗೆಗಳೆಲ್ಲಾ ಕೆಂಪಾದವೋ ಎಲ್ಲಾ ಕೆಂಪಾದವೋ ಎಂದು ಹಾಡಿಕೊಳ್ಳಲು, ಸುಣ್ಣ, ತಂಬಾಕಿನ ಸಾಂಗತ್ಯವೂ ಅತ್ಯಗತ್ಯ. ಮಲೆನಾಡಿನ ಮನೆಗಳಲ್ಲಿ ಕವಳದ ಸಂಚಿ/ಬಟ್ಟಲು ಇಲ್ಲದ ಮನೆಯನ್ನು ಹುಡುಕುವುದು ಎಂದರೆ ಸಾವಿಲ್ಲದ ಮನೆಯ ಸಾಸಿವೆ ಹುಡುಕಿದಂತೇ! ಇನ್ನು ಈ ಎಲೆ ಅಡಿಕೆಯ ಮೇಲೆ ಅದೆಷ್ಟೋ ಒಗಟುಗಳೂ ಹುಟ್ಟಿಕೊಂಡಿವೆ. ‘ಬರೋವಾಗ ಹಸ್ರು, ಹೋಗೋವಾಗ ಕೆಂಪು... ನಾನ್ಯಾರು?’ ಎಂದು ಬಾಲ್ಯದಲ್ಲಿ ನಾವೆಲ್ಲಾ ಒಗಟು ಕೇಳುತ್ತಲೇ ಕವಳ ಜಡಿಯುತ್ತಿದ್ದುದು.
Courtesy: http://en.wikipedia.org/wiki/Paan |
ಚಿಕ್ಕಂದಿನಲ್ಲಿ ಅಜ್ಜಿ ಮನೆಗೆ ಹೋದಾಗೆಲ್ಲಾ ಅಜ್ಜ ಊಟದ ನಂತರ ಮೊಮ್ಮಕ್ಕಳಿಗೆಲ್ಲಾ ಕವಳ ಕಟ್ಟಿಕೊಡುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದ. ಅದೊಂದು ಮರೆಯಲಾಗದ ಅನುಪಮ ಸಂಭ್ರಮವೇ ಸರಿ. ‘ಅಜ್ಜ ನಂಗೆ ಸುಣ್ಣ ಜಾಸ್ತಿ ಹಾಕದು ಬ್ಯಾಡ್ದೋ.. ತಲೆ ತಿರ್ಗೋಗ್ತು ಮತ್ತೆ..’ ಎಂದು ಬೊಬ್ಬಿರಿವ ನಮಗಾಗಿಯೇ ಅಜ್ಜನ ಸ್ಪೆಷಲ್ ವೀಳ್ಯ ತಯಾರಾಗುತ್ತಿತ್ತು. ಉಂಡಾದ ಮೇಲೆ ಒಂದು ಕವಳ ಹಾಕೋದು ಜೀವಕ್ಕೆ ಚೊಲೋವಾ, ಆದ್ರೆ ಅದೇ ಗೀಳಾಗಲಾಗ ಎನ್ನುವುದು ನನ್ನಜ್ಜನ, ಅಜ್ಜನಂಥವರ ಪ್ರಿನ್ಸಿಪಲ್ ಆಗಿತ್ತು. ಚಿಗುರೆಲೆಯ ತುದಿಯ ಮುರಿದು, ಹಿಂಬದಿಯ ನಾರನ್ನು ತೆಗೆದು, ಎಷ್ಟು ತೊಳೆದರೂ ಉಜಾಲ ಕಾಣದೇ ಮಣ್ಣು ಹಿಡಿದ ಅಂಗೋಸ್ತ್ರ ಪಂಜಿ ಸುತ್ತುವರಿದಿದ್ದ ತೊಡೆಯ ಮೇಲೆ ಎಲೆಗಳನ್ನು ಉಜ್ಜಿ ಉಜ್ಜಿ ತಿಕ್ಕಿ, ಅಡಕತ್ತರಿಯಿಂದ ತಲೆಗೆ ಸೊಕ್ಕೇರಿಸದ ಪಾಪದ ಎರಡೆರಡು ಅಡಿಕೆ ಹೋಳುಗಳನ್ನು ಪ್ರತಿ ಎಲೆಗೂ ಹಾಕಿ, ಹೌದೋ ಅಲ್ಲವೋ ಎಂಬಂತೇ ಸುಣ್ಣವನ್ನು ಸವರಿ, ಅದರ ಮೇಲೆ ಒಂದು ಲವಂಗ, ಒಂದೇ ಒಂದು ಏಲಕ್ಕಿ, ಸೊಂಟಕ್ಕೆ ಸಿಕ್ಕಿಸಿರುವ ಸಂಚಿಯಿಂದ ಹೊರತೆಗೆದು ಹಾಕುವ ಒಂದೆಳೆ ಜಾಯಿಕಾಯಿ, ಬೇಕಾದರೆ ಎರಡು ಕಾಳು ಸಕ್ಕರೆ - ಇವಿಷ್ಟನ್ನು ಹಾಕಿ ಮಡಚಿ ‘ತಗ ಇದು ತೇಜುಗೆ, ಇದು ಪಯುಗೆ, ಇದು ಸಣ್ಣ ಕೂಸಿಗೆ..’ ಎಂದು ಕೊಡುವಾಗ, ಕವಳ ತಯಾರಿಸಿದ ರೀತಿಯನ್ನೇ ಮಂತ್ರಮುಗ್ಧರಂತೇ ನೋಡುತ್ತಿದ್ದ ನಮಗೆ ಏನೋ ಅತಿ ಅಮೂಲ್ಯವಾದುದ್ದನ್ನೇ ಪಡೆದಂತಹ ಅನುಭವ! ಬಾಯೊಳಿಟ್ಟು ಜಗಿದು ರಸವನ್ನು ಹೀರಿ ನಾಲಗೆಯ ತುದಿಗೆ ಜಿಗುಟು ತಂದು ಕೆನ್ನಾಲಗೆಯನ್ನು ಆಡಿಸಿ ಚಾಳಿಸಿಕೊಳ್ಳುವ ಭರದಲ್ಲಿ ಅದೆಷ್ಟೋ ರಸಭರಿತ ಕವಳಗಳು ನೆಲದಲ್ಲಿ ಬಿದ್ದು ರಂಗೋಲಿ ಬರೆದು ಉಗಿಸಿಕೊಂಡಿದ್ದು ಇನ್ನೂ ಹಸಿರಾಗಿದೆ. ಈ ವಿಶೇಷ ಕವಳಗಳ ಸರಬರಾಜು ಐದು ವರ್ಷದ ಮೇಲಿನ ಮಕ್ಕಳಿಗೆ ಮಾತ್ರವಾಗಿರುತ್ತಿತ್ತು. ಹಾಗಾಗಿ ಸಣ್ಣ ಪುಟ್ಟ ಚಿಳ್ಳೆ ಪಳ್ಳೆಗಳ ಕಣ್ತಪ್ಪಿಸಿ ಕವಳದ ಸೇವನೆ ನಡೆಸುವುದೇ ಒಂದು ತರಹ ಥ್ರಿಲ್ ತುಂಬುತ್ತಿತ್ತು. ಆದರೂ ಅದು ಹೇಗೋ ಚಿಳ್ಳೆಗಳಿಗೆ ನಮ್ಮ ಪ್ರೋಗ್ರಾಮಿನ ವಾಸನೆ ಬಡಿದು ತಾರಕಕ್ಕೇರಿದ ಸ್ವರದಲ್ಲಿ ಆಲಾಪನೆ ಶುರುಮಾಡಿಕೊಂಡು ಬಿಡುತ್ತಿದ್ದವು. ಅವರಿಗೆ ಅಜ್ಜ ಸುಳ್ಳೆ ಪುಳ್ಳೆ ಕವಳ ಮಾಡಿಕೊಡುತ್ತಿದ್ದ. ಅಡಿಕೆ ಹೋಳೊಂದನ್ನು ಸಣ್ಣ ಎಲೆಯ ಚೂರಲ್ಲಿ ಸುತ್ತಿ ಭರ್ಜರಿ ಬೆಲ್ಲ ಸವರಿ ಬಾಯಿಗಿಟ್ಟರೆ ಬಹು ಸುಲಭದಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಆ ಚಿಣ್ಣರ ಕಿವಿಯೇರಿಬಿಡುತ್ತಿದ್ದವು. ಇನ್ನು ನಾವು ತುಸು ದೊಡ್ಡವರಾದಂತೇ ‘ನಂಗೀಗ ಸಮಾ ಸುಣ್ಣ ಹಾಕಿದ್ರೂ ಎಂತಾ ಆಗ್ತಿಲ್ಲೆ ನೋಡು..’ ಎಂದು ಜಂಭದಿಂದ ಹೆಚು ಸುಣ್ಣ ಸವರಿಕೊಂದು ಕವಳ ಹಾಕಿ ಚೆನ್ನಾಗಿ ತಲೆ ತಿರುಗಿದರೂ ತೋರಿಸಿಕೊಳ್ಳದೇ ಸಾವರಿಸಿಕೊಂಡು ಪೋಸ್‌ಕೊಡುವ ನಮ್ಮಗಳ ಬಣ್ಣ ಬಯಲಾಗಲು ಹೆಚ್ಚು ಹೊತ್ತು ಬೇಕಾಗುತ್ತಿರಲಿಲ್ಲ. ಎಷ್ಟೋ ಸಲ ಅಪರೂಪಕ್ಕೆ ಕವಳ ಕಾಣುತ್ತಿದ್ದ ನಾಲಗೆ, ಅದನ್ನು ತಿಂದ ನಂತರ ತುಸು ಕಾಲ ಬೇರಾವ ತಿಂಡಿಯ ಸ್ವಾದವನ್ನೂ ಮೆದುಳಿಗೆ ರವಾನಿಸುತ್ತಿರಲಿಲ್ಲ! ದಪ್ಪಗೆ, ರುಚಿಯೇ ತಿಳಿಯದಂತ ಅನುಭೂತಿಯಿಂದ ‘ಸುಟ್ಟ ಕವಳ, ಇನ್ನು ತಿನ್ನಲಾಗ’ ಅನ್ನುವ ಪ್ರತಿಜ್ಞೆ ಮರುದಿನದ ಮಧ್ಯಾಹ್ನದವರೆಗಷ್ಟೇ ಗಟ್ಟಿಯಾಗಿರುತ್ತಿತ್ತು. ಏನೇ ಅನ್ನಿ ಸದಾಕಾಲ ಏಲಕ್ಕಿ, ಲವಂಗ ಜಾಯಿಕಾಯಿ ಚೂರುಗಳನ್ನು ತನ್ನೊಂದಿಗೇ ಇಟ್ಟುಕೊಂಡಿರುತ್ತಿದ್ದ ಅಜ್ಜನ ಮೈಯಿಂದ ಹೊರಬರುತ್ತಿದ್ದ ಆ ಅದ್ಭುತ ಸುವಾಸನೆಗೆ ಯಾವ ಸೆಂಟೂ ಸಾಟಿಯಾಗದು! ಈಗಲೂ ಅವನ ಹಾಸಿಗೆ, ಮೈಯಿಂದ ಹೊರಹೊಮ್ಮುತ್ತಿದ್ದ ಸುಗಂಧದ ಕಂಪು ಸ್ಮೃತಿಪಟಲವನ್ನು ತಾಗಿದಾಕ್ಷಣ ಅಪ್ರಯತ್ನವಾಗಿ ಕಣ್ಗಳು ಅರೆ ನಿಮೀಲಿತಗೊಳ್ಳುತ್ತವೆ.
ಆದರೆ ಈ ಕವಳದ ಗಮ್ಮತ್ತನ್ನೂ ಮೀರಿ ಇಂದೂ ನನ್ನ ಮೈನವಿರೇಳಿಸುವುದು ಅಜ್ಜಿ ಹೇಳುತ್ತಿದ್ದ ಕವಳದ ಹಿಂದಿನ ಕೆಲವು ಭಯಾನಕ ಕಥೆಗಳು! ಅವೆಷ್ಟು ಸತ್ಯವಾಗಿದ್ದವೋ ಇಲ್ಲವೋ ತಿಳಿಯದು. ಚಿಕ್ಕಂದಿನಲ್ಲಿ ಮುಸ್ಸಂಜೆಯ ಹೊತ್ತಿನಲ್ಲಿ, ಕರೆಂಟ್ ಇಲ್ಲದ ಜಗುಲಿಯ ಮೇಲೆ ಲ್ಯಾಟೀನ್ನು ಹಚ್ಚಿಟ್ಟುಕೊಂಡು ಅದರ ಸುತ್ತ ಕುಳಿತು ಕುಂಯ್ ಕುಂಯ್‌ಗುಡುತ್ತಿದ್ದ ನಮ್ಮನೆಲ್ಲಾ ಗಪ್‌ಚುಪ್ ಮಾಡಿಸುತ್ತಿದ್ದುದು ಅಜ್ಜಿಯ ದೆವ್ವದ ಕಥೆಗಳೇ. ತನ್ನ ಬಾಲ್ಯದ ಘಟನೆಗಳನ್ನು, ಯಾರಿಂದಲೇ ತನ್ನ ಕಿವಿಗೆ ಬಿದ್ದಿದ್ದ ಕಥೆಗಳನ್ನೆಲ್ಲಾ ಹರವಿಕೊಂಡು ರಸವತ್ತಾಗಿ, ಕಣ್ಣಿಗೆ ಕಟ್ಟುವಂತೇ ಆಕೆ ಹೇಳತೊಡಗಿದಂತೇ ಹೊರಗೆ ಆವರುಸುತ್ತಿದ್ದ ಕತ್ತಲೆಗೂ ಹೊಸ ಆಕಾರ, ವಿಕಾರಗಳು ಹುಟ್ಟಿಕೊಳ್ಳುತ್ತಿದ್ದವು. ಅಮಾವಾಸ್ಯೆಯಂದು ತೋಟದ, ಗುಡ್ಡದ ಕಡೆಗೆ ಹೊರಟರೆ ಮನುಷ್ಯಾಕಾರದ ಹೆಣ್ಣು ಪಿಶಾಚಿ ಬರುತ್ತಾಳೆ. ಅವಳ ಕಾಲು ಉಲ್ಟಾ ಇರುತ್ತದೆ... ನೆಲಕ್ಕೆ ಕಾಲು ತಾಗಿಸದೇ ತುಸು ಮೇಲೆ ತೇಲುತ್ತಿರುತ್ತಾಳೆ. ಅಲ್ಲದೇ ಅವಳು ಸೀರೆಯನ್ನೂ ಉಲ್ಟಾ ಉಟ್ಟಿರುತ್ತಾಳೆ.... ಅವಳ ಸೊಂಟದಲ್ಲೊಂದು ಕವಳದ ಸಂಚಿ ಇರುತ್ತದೆ.... ನಿಮ್ಮನ್ನು ಕಂಡಾಕ್ಷಣ ಎಲೆ, ಅಡಿಕೆ ತೆಗೆದು, ಚೆಂದದ ಕವಳ ಮಾಡಿ ‘ಬೇಕನೆ ಕೂಸೆ, ಬೇಕನೋ ಮಾಣಿ’ ಎಂದು ಕೇಳುತ್ತಾಳೆ.. ಅಪ್ಪಿ ತಪ್ಪಿ ಕೈಯೊಡ್ಡಿದಿರೋ ಕವಳವನ್ನು ಕೆಳಗೆ ಬೀಳಿಸಿ, ನೀವು ತೆಗೆಯಲು ಬಗ್ಗಿದರೆ ನಿಮ್ಮ ತಲೆಗೆ ಫಟ್ ಎಂದು ಹೊಡೆದು ಪ್ರಜ್ಞೆ ತಪ್ಪಿಸುತ್ತಾಳೆ ಎಂದೆಲ್ಲಾ ಹೇಳುವಾಗ ಕಾಣದ ಆ ಹೆಣ್ಣು ಪಿಶಾಚಿಯ ರೂಪ ರೇಶೆಗೆ ಮನಸ್ಸು ಎಳೆಯತೊಡಗುತ್ತಿತ್ತು. ಅಲ್ಲಾ ಉಲ್ಟಾ ಕಾಲು ಎಂದರೆ ತಿಳಿಯುತ್ತದಪ್ಪಾ.. ಈ ಉಲ್ಟಾ ಸೀರೆ ಎಂದರೆ ಹೇಗೇ? ಅನ್ನೋ ಅನುಮಾನ ನನ್ನ ತುಂಬಾ ಸಲ ಕಾಡಿ, ಕೊರೆದು, ಅಜ್ಜಿಯನ್ನು ಕೇಳಲು, ಅವಳಿಂದ ಹಾರಿಕೆಯ ಉತ್ತರ ಸಿಕ್ಕಲು, ಸಮಾಧಾನವಾಗದೇ, ನಾವು ನಾವೇ ಗಂಭೀರ ಚರ್ಚೆಗೆ ತೊಡಗಿದಾಗ, ನನಗಿಂತ ಒಂದು ವರುಷ ದೊಡ್ಡವಳಾಗಿದ್ದ ಸುಮಕ್ಕಳಿಗೆ ಹಿತ್ತಲಿನ ಚಿಕ್ಕು ಮರದ ಕೆಳಗೆ ಜ್ಞಾನೋದಯವಾಗಿತ್ತು. ‘ಅಯ್ಯೋ ಮಳ್ಳಿ ಅಷ್ಟೂ ತಿಳ್ಯದಿಲ್ಯಾ? ಸೀರೆ ಕೆಳ್ಗೆ ಫಾಲ್ಸ್ ಇರ್ತಲೆ ಅದ್ನ ಮೇಲೆ ಸುತ್ಕಂಬದು, ಸೆರ್ಗ ಕೆಳ್ಗ ಉಟ್ಕಂಬದು’ ಎಂದು ಹೇಳಿದಾಗಲೇ ನನಗೆ ಸಮಾಧಾನವಾಗಿದ್ದು. ಆದರೆ ಈ ಸಮಜಾಯಿಷಿ ಒಂದು ಫಚೀತಿಗೆ ಕಾರಣವಾಗಿದ್ದು ಮಾತ್ರ ನನ್ನ ದುರದೃಷ್ಟವೇ. ಆಗಿದ್ದಿಷ್ಟೇ... ನನಗೋ ಆಗ ಹನ್ನೆರಡು ವರ್ಷವಿದ್ದಿರಬಹುದು. ಆರನೇ ಕ್ಲಾಸು ಪಾಸಾಗಿ ಬೇಸಿಗೆ ರಜೆಗೆ ಊರಿಗೆ ಹೋಗಿದ್ದೆ. ಈಗಿನ ಜನರೇಷನ್ನಿನಷ್ಟು ಆಗಿನವು ಅಂದರೆ ನಮ್ಮ ಕಾಲದ ಮಕ್ಕಳು ಬಹು ಬೇಗ ಪ್ರಬುದ್ಧರಾಗಿದ್ದಿರಲಿಲ್ಲ. ಅಂದರೆ ಈ ಹೆಣ್ಣು ಪಿಶಾಚಿ ಹೇಗಿರುತ್ತಾಳೆ? ಅವಳು ಓಡಾಡುವ ಪ್ರದೇಶಗಳು ಯಾವವು? ಎಕ್ಸಾಕ್ಟ್ ಸಮಯವೇನು? ಆಕೆ ಉಲ್ಟಾ ಸೀರೆ ಹೇಗೆ ಉಡುತ್ತಾಳೆ? ಇಂಬಿತ್ಯಾದಿ ವಿವರಣೆಗಳನ್ನು ಸಚಿತ್ರವಾಗಿ ವಿವರಿಸಲು ಆಗ ಗೂಗಲ್, ಯಾಹೂ, ಫೇಸ್‌ಬುಕ್ಕುಗಳಿರಲಿಲ್ಲ ನೋಡಿ. ಹಾಗಾಗಿ ವರುಷ ೧೬ ಆದರೂ ಒಂದು ರೀತಿಯ ಮುಗ್ಧತೆ, ಭಯ ಅಂದಿನ ಮಕ್ಕಳಲ್ಲಿ ಇದ್ದೇ ಇರುತ್ತಿತ್ತು ಅನ್ನಿ. ಆದಿನ ನನ್ನ ಕಮಲತ್ತೆಯ ದೊಡ್ಡ ಮಗಳ ಮದುವೆ ಗೋಧೂಳಿ ಮುಹೂರ್ತದಲ್ಲಿತ್ತು. ಸಂಧ್ಯೆ ಬಲಗಾಲಿಟ್ಟು ಒಳಬಂದು ನಂದಾದೀಪವ ಬೆಳಗುವ ಸಮಯ. ನನಗೋ ಕಳೆದ ದಿನವಷ್ಟೇ ಮತ್ತೆ ಅದೇ ಕಥೆಯನ್ನು ಅಜ್ಜಿಯ ಬಾಯಲ್ಲಿ ಕೇಳಿದ್ದರ ಎಫೆಕ್ಟ್ ಕಡಿಮೆಯಾಗಿರಲಿಲ್ಲ. ನೆಂಟರಲ್ಲಿ ಯಾರೋ ಸೀರೆ ಉಡಲು ಕೋಣೆಗೆ ಹೋದಾಗಲೇ ಕರೆಂಟ್ ಹೋಗಲು, ಪಾಪ ತಿಳಿಯದೇ ಆಕೆ ಉಲ್ಟಾ ಸೀರೆಯುಟ್ಟು (ಥೇಟ್ ನನ್ನ ಸುಮಕ್ಕ ವಿವರಿಸಿದ್ದಂತೇ) ಹೊರ ಬೀಳುವುದಕ್ಕೂ ಅಲ್ಲೇ ಹೊರಗೆ ಜಗುಲಿಯಲ್ಲಿ ಕುಳಿತಿದ್ದ ನನ್ನ ಕಣ್ಣಿಗೇ ಮೊದಲು ಬೀಳುವುದಕ್ಕೂ ಸರಿಹೋಯಿತು. ಹಳ್ಳಿಮನೆ, ಕತ್ತಲು ಆವರಿಸುವ ಹೊತ್ತು, ಕರೆಂಟ್ ಬೇರೆ ಟಾಟಾ ಹೇಳಿತ್ತು, ಅಂತಹ ಸಮಯದಲ್ಲೇ ಸಾಲಂಕೃತ ವಧು ಹೊರಬರುವುದನ್ನೇ ಕಾತುರದಿಂದ ಎದುರು ನೋಡುತ್ತಿದ್ದ ನನಗೆ, ಒಳಗಿಂದ ಆ ಮಹಿಳೆ ಆ ರೀತಿ ಸೀರೆಯುಟ್ಟು ಹೊರ ಬಂದಾಗ, ಗ್ಯಾಸ್ ಲೈಟಲ್ಲಿ ಆಕೆ ಬಳಿದುಕೊಂಡಿದ್ದ ಢಾಳಾದ ಪೌಡರ್, ಮೇಕಪ್ ಎಲ್ಲವುದರ ಜೊತೆಗೇ ತಿರ್ಗಾಮುರ್ಗಾ ಸೀರೆಯನ್ನೂ ನೋಡಿ, ಕಿರುಚಲೂ ಬಾಯಿ ಬಾರದಷ್ಟು ಭಯಭೀತಳಾದ ನಾನು, ಆಕೆಯ ಕಾಲ್ಗಳನ್ನು ನೋಡಲು ಮರೆತು (ನೋಡಿದ್ದರೂ ಆ ಮಬ್ಬಿನಲ್ಲೇನೂ ಸರಿಯಾಗಿ ಕಾಣುತ್ತಿರಲಿಲ್ಲವೇನೋ..), ಅಲ್ಲೇ ಕಂಬಕ್ಕೊರಗಿ ಹೆಂಗೆಳೆಯರ ಜೊತೆ ಮಾತಿಗಿಳಿದಿದ್ದ ನನ್ನಜ್ಜಿಗೆ ಆ ಮಹಿಳೆಯನ್ನು ತೋರುತ್ತಾ ‘ಅಜ್ಜಿ ನೀ ಹೇಳಿದ್ದ ಕಥೆಯಲ್ಲಿ ಬಂದಿದ್ದ ಹೆಣ್ಣ್ ಪಿಶಾಚಿ ಥರಾನೇ ಸೀರೆ ಉಟ್ಕಂಜಲೆ ಅದು.. ಅದೇನಾದ್ರೂ ಭೂತ, ಪಿಶಾಚಿ ಆಗಿರ್ಲಿಕ್ಕಿಲ್ಲೆ ಅಲ್ದಾ....?’ ಎಂದು ಕೇಳಲು ಅಜ್ಜಿಯ ಮುಖದ ತುಂಬಾ ಪ್ರೇತ ಕಳೆ ಬಡಿದುಕೊಂಡಿದ್ದು ಇನ್ನೂ ನೆನಪಿದೆ! ಪುಣ್ಯಕ್ಕೆ ಅಲ್ಲಿದ್ದವರೆಲ್ಲಾ ಹೆಣ್ಣಿನ ಕಡೆಯವರೇ ಆಗಿದ್ದರಿಂದ, ಸುದ್ದಿ ಹೆಚ್ಚು ಗುಲ್ಲಾಗದೇ ಅಲ್ಲೇ ಮಗುಮ್ಮಾಗಿ, ನನ್ನಪ್ಪನ ಬೈಗಳುಗಳಿಂದ ಬಚಾವಾಗಿದ್ದೆ. ಆದರೆ ಆಗೀಗ ಬಗ್ಗಿ ಬಗ್ಗಿ ಕಳ್ಳನೆ ಅವಳನ್ನೇ ನೋಡುವಾಗೆಲ್ಲಾ ಆಕೆ ಚೆನ್ನಾಗಿ ಕವಳ ಮೆಲ್ಲುತ್ತಾ, ಕೆಂಪಗಿನ ನಾಲಗೆ ಚಾಚಿ ದೊಡ್ಡದಾಗಿ ನಗುತ್ತಿದ್ದ ಆ ದೃಶ್ಯ ಮಾತ್ರ ಇನ್ನೂ ಚೆನ್ನಾಗೇ ಮನದೊಳಗೇ ಅಚ್ಚಾಗಿದೆ. ಇಂದೂ ಎಷ್ಟೋ ಸಲ ಮದುವೆ, ಉಪನಯನ ಸಮಾರಂಭಗಳಲ್ಲಿ ಬೀಡ ಜಗಿದು ಕೆಂಪೇರಿಸಿಕೊಂಡು ಮಾತನಾಡುವ ಮಹಿಳೆರನ್ನು ಕಂಡಾಗೆಲ್ಲಾ ಫಕ್ಕನೆ ಆ ಗೋಧೂಳಿ ಸಮಯದ ಪೇಚಿನ ಪ್ರಸಂಗದ ನೆನಪಾಗಿ ಬುಸಕ್ಕನೆ ನಗುವುಕ್ಕುತ್ತಿರುತ್ತದೆ. ಇದು ನನ್ನ ಎಡವಟ್ಟಿನ ಕಥೆಯಾದರೆ ನನ್ನ ಚಿಕ್ಕಪ್ಪನ ಮಗಳಂತೂ ಎಷ್ಟೋ ಕಾಲದವರೆಗೂ ಕವಳ ಬೀಳಿಸಿದವರಿಗೆ ಹೆಕ್ಕಿ ಕೊಡುವುದು ಹೋಗಲಿ, ಸ್ವತಃ ತನ್ನ ಕೈಯಿಂದ ಎಲೆ ಜಾರಿದರೂ ಹೆಕ್ಕಿಕೊಳ್ಳದೇ ಹೊಸ ಎಲೆಗೇ ಕೈಹಾಕುತ್ತಿದ್ದಳು! ಹಾಗಿತ್ತು ನಮ್ಮಜ್ಜಿಯ ಕವಳದ ಕಥೆಯ ಎಫೆಕ್ಟು!
ಈಗಲೂ ಅಜ್ಜಿ-ಅಜ್ಜರಿಲ್ಲದ ಮನೆಗೆ ಹೋಗುತ್ತೇವೆ... ಕವಳದ ಸಂಚಿಯೂ ಎಲ್ಲೋ ಒಂದೆಡೆ ಬಿದ್ದಿರುತ್ತದೆ.... ಕಂಬಗಳೆಲ್ಲಾ ಮುದುಕಾಗುತ್ತಿವೆ... ಹೊಸ ಕಥೆಗಳನ್ನು ಹೇಳುತ್ತಿವೆ...! ಎಲೆ-ಅಡಿಕೆ ಕ್ರಮೇಣ ಗುಟ್ಕಾ, ಸುಫಾರಿ ಆಗಿ ಮಾರ್ಪಾಡಾದದ್ದು, ಅದರ ಸಮ್ಮೋಹನಕ್ಕೆ ಒಳಗಾದ ಮುದುಕರಾದಿ ಯುವಕರೆಲ್ಲಾ ಜರ್ದಾರಿಗಳಾಗಿರುವುದು, ಪೇಟೆಯ ವ್ಯಾಮೋಹದ ಭೂತಕ್ಕೆ ಬಲಿಯಾಗಿ, ಕವಳಕ್ಕಾಗಿ (ಅಂದರೆ ಊಟ ಎಂಬರ್ಥವೂ ಹೌದು!) ಕೆಲಸಗಳನ್ನು ಅರಸಿ ಪರವೂರನ್ನು ಸೇರಿದ ಮಂದಿಗಳಿಂದಾಗಿಯೇ ಊರಿನ ಅದೆಷ್ಟೋ ಮನೆಗಳು ಭೂತ ಬಂಗ್ಲೆ ಆಗಿರುವುದು ಮುಂತಾದ ಸತ್ಯ ಕಥೆಗಳು ಸಾಕ್ಷಿ ಸಮೇತ ಕಣ್ಣೆದುರು ಬರುತ್ತಿರುತ್ತವೆ... ಅದೂ ಹೊಸ ಹೊಸ ರೂಪದಲ್ಲಿ, ಹೊಸ ಹೊಸ ರೀತಿಯಲ್ಲಿ! ಅಜ್ಜಿ ಹೇಳುತ್ತಿದ್ದ ಆ ಹೆಣ್ಣು ದೆವ್ವ ಈಗ ಹಳ್ಳಿಗಳನ್ನು ಹೊಕ್ಕಿರುವ ಮಾಯಾವಿಗಿಂತಲೂ ಭಯಾನಕಳಾಗಿದ್ದಳೆಯೇ? ಎಂಬ ಭೂತಾಕಾರದ ಪ್ರಶ್ನೆಗೆ ಉತ್ತರ ಒಳಗೆಲ್ಲೂ ಗೊತ್ತಿದ್ದರೂ, ಒಪ್ಪಿಕೊಳ್ಳಲು ಮನಸ್ಸು ಭೀತಗೊಳ್ಳುತ್ತದೆ. ಇವೆಲ್ಲವನ್ನೂ ಮರೆಯಲು, ನನ್ನ ಮಗಳಿಗೆ ನನ್ನಜ್ಜಿಯ ಕವಳದ ಕಥೆಯನ್ನೂ, ಆ ಕಥಾ ನಾಯಕಿ ಕಮ್ ವಿಲನ್‌ಳಾದ ಹೆಣ್ಣು ಪಿಶಾಚಿಯನ್ನೂ, ತಿರ್ಗಾ ಮುರ್ಗಾ ಸೀರೆಯನ್ನೂ ರೋಚಕವಾಗಿ ಹೇಳುತ್ತಿರುತ್ತೇನೆ. ಆಕೆಯಲ್ಲಿ ವಯಸ್ಸಿಗನುಗುಣವಾದ ಮುಗ್ಧತೆ ಇನ್ನೂ ಜೀವಂತವಾಗಿದೆಯೆನ್ನುವುದಕ್ಕೆ ಕಥೆ ಕೇಳುವಾಗ ದೊಡ್ಡದಾಗಿ ಅರಳಿಕೊಳ್ಳುವ ಅವಳ ಕಣ್ಗಳೊಳಗಿನ ಥ್ರಿಲ್, ಸಣ್ಣ ಕಳವಳವೇ ಸಾಕ್ಷಿ. ಗೂಗಲ್ ಮಾಡಿ ಆ ಹೆಣ್ಣು ಪಿಶಾಚಿಯ ಬಯೋಡಾಟ ನೋಡುವಷ್ಟು ಚಾಣಾಕ್ಷ್ಯತನ ಅವಳಲ್ಲಿ ಬರುವವರೆಗೂ ಅಜ್ಜಿಯ ಆ ಕವಳದ ಹಿಂದಿನ ಕಳವಳದ ಕಥೆ ನಮ್ಮಿಬ್ಬರ ನಡುವೆಯಂತೂ ಜೀವಂತವಾಗಿರುತ್ತದೆ.
-ತೇಜಸ್ವಿನಿ ಹೆಗ್ಡೆ.