ಬಿಭೂತಿಭೂಷಣ ವಂದ್ಯೋಪಾಧ್ಯಾಯರು ರಚಿಸಿದ “ಪಥೇರ್ ಪಾಂಚಾಲಿ” ಕಾದಂಬರಿ ಸುಪ್ರಸಿದ್ಧ. ಬಹಳ ಹಿಂದೆ ಈ ಕಾದಂಬರಿಯ ಹೆಸರು ಕೇಳಿದಾಗಿನಿಂದ ಇದನ್ನೋದಬೇಕೆಂದು ಬಯಸಿದ್ದೆ. ಅದೇನೋ ಹೇಳುತ್ತಾರಲ್ಲ, ಎಲ್ಲವುದಕ್ಕೂ ಕಾಲ ಕೂಡಿಬರಬೇಕೆಂದು. ಒಳ್ಳೆಯ ಪುಸ್ತಕವನ್ನೋದಿ ಅನುಭೂತಿಸಲೂ ಸುಮುಹೂರ್ತ ಕೂಡಿಬರಬೇಕಾಗುತ್ತದೆ ಮತ್ತು ಆ ಒಳ್ಳೆಯ ಘಳಿಗೆ ವೈಯಕ್ತಿಕವಾಗಿ ನಮಗೇನೋ ತುಸು ತೊಂದರೆಯನ್ನುಂಟುಮಾಡಿಯಾದರೂ ಸರಿಯೇ ಸಫಲವಾಗುತ್ತದೆ! ಕಾಲಿಗೆ ಮತ್ತು ಕೈಗೆ ಅನಿರೀಕ್ಷಿತ ಪೆಟ್ಟಾಗಿ ತುಸು ಹೆಚ್ಚೇ ವಿಶ್ರಾಂತಿಯನ್ನು ವೈದ್ಯರು ಹೇರಲು, ಮೊದಲು ಬಹಳ ಕಿರಿಕಿರಿಯಾದರೂ ತಕ್ಷಣ ನನ್ನ ಕಣ್ಣಿಗೆ ಬಿದ್ದಿದ್ದು, ಕೆಲವು ತಿಂಗಳ ಹಿಂದೆ ನಾನೇ ತರಿಸಿಟ್ಟಿದ್ದ “ಮಹಾಯಾತ್ರಿಕ” ಪುಸ್ತಕ! ತಕ್ಷಣ ನೋವು ಎಷ್ಟೋ ಶಮನವಾಗಿತ್ತು. ‘ಪಥೇರ್ ಪಾಂಚಾಲಿ’ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಅಹೋಬಲ ಶಂಕರ ಅವರು. ಇದನ್ನು ಪ್ರಕಟಿಸಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಏನೇನೋ ಕೆಲಸಗಳ ಭಾರದಲ್ಲಿ, ಕೆಲವು ನಾನೇ ಹೇರಿಕೊಂಡ ನೆಪಗಳೊಳಗೆ ಈ ಪುಸ್ತಕವನ್ನೋದುವುದೇ ಮರೆತುಬಿಟ್ಟಿದ್ದೆ. ಧುತ್ತನೆದುರಾದ ಪರಿಸ್ಥಿತಿ ತಲೆಗೊಂದು ಮೊಟಕಿ ಈ ಪುಸ್ತಕವನ್ನು ಕೈಯಲ್ಲಿ ಹಿಡಿಸಿತ್ತು.
ಮೊದಲ ಹತ್ತಿಪ್ಪತ್ತು ಪುಟಗಳನ್ನೋದಲು ತುಸು ಕಠಿಣವಾಯಿತು. ಕಾರಣ, ಅಂದಿನ ವಂಗದೇಶದ, ಸಾವಿರದ ಒಂಬೈನೂರರ ಆಸು ಪಾಸಿನಲ್ಲಿ ನಡೆವ ಆ ಕಥಾಚಿತ್ರಣವನ್ನು ಹಾಗೂ ಮೂಲ ಭಾಷೆಯ ಸೊಗಡನ್ನು ಹೀರಿ ಅದನ್ನೇ ಇಲ್ಲಿ ಕಟ್ಟಿಕೊಡುವಾಗ ಅನುವಾದಕರು ಕೆಲವೊಂದು ಕಥಾ ಚಿತ್ರಣಗಳನ್ನು, ಅಲ್ಲಿನ ಭಾಷೆಯ ಶೈಲಿಯನ್ನು ಹಾಗೇ ಇಳಿಸಿದ್ದು ಓದಲು ತಿಣುಕಾಡುವಂತೆ ಮಾಡಿತು. ಆದರೆ ಒಮ್ಮೆ ಅದರ ಆತ್ಮವನ್ನು ಹೊಕ್ಕಿದ ಮೇಲೆ, ಈ ರೀತಿಯ ಅನುವಾದದ ಶೈಲಿಯನ್ನು, ಭಾಷೆಯನ್ನು ಅರ್ಥೈಸಿಕೊಂಡು ಅದರ ನಾಡಿಯನ್ನು ಹಿಡಿದ ಮೇಲೆ ನಾನೇ ಕಥೆ ನಡೆವ ಗ್ರಾಮದಲ್ಲಿದ್ದೆ!
ಈ ಕಾದಂಬರಿಯನ್ನೋದುವ ಮೊದಲು ಇದರ ಹಿನ್ನಲೆ, ಮುನ್ನಲೆ ಅಥವಾ ಕನಿಷ್ಟ ಕಥೆಯೇನೆನ್ನುವುದೂ ತಿಳಿದಿರಲಿಲ್ಲ. ಸತ್ಯಜಿತ್ ರೇ ಅವರ ಪಥೇರ್ ಪಾಂಚಲಿಯನ್ನೂ ನಾನು ನೋಡಿರಲಿಲ್ಲ. ಹೀಗಾಗಿ ಬಹಳ ಕುತೂಹಲದಿಂದಲೇ ಪುಸ್ತಕ ಹಿಡಿದದ್ದು. ಮಹಾಯಾತ್ರಿಕ ಎಂಬ ಶೀರ್ಷಿಕೆಯನ್ನೋದಿದ ಮೇಲೆ ಇದು ಬಹುಶಃ ಓರ್ವ ವ್ಯಕ್ತಿಯ ಯಾತ್ರೆಯ, ಪ್ರವಾಸದ ಕಥೆ ಎಂದು ತಿಳಿದಿದ್ದೆ. ಆತ ಬೇರೆ ಬೇರೆ ಪ್ರದೇಶಗಳನ್ನು ತಿರುಗಾಡುತ್ತಾ, ದೇಶಾಂತರ ಹೋಗುತ್ತಾ ತಾನು ಕಂಡದ್ದು ಹೇಳುತ್ತಾನೇನೋ ಎಂದು ಭಾವಿಸಿದ್ದೆ. ಆದರೆ ಸುಮಾರು ನೂರು ಪುಟಗಳನ್ನೋದುವಾಗ ಅರ್ಥವಾಯಿತು ಇದು ಬೇರೆಯದೇ ರೀತಿಯ ಪ್ರಯಾಣವೆಂದು! ಬಹಳ ಸುಂದರ, ಅಷ್ಟೇ ತ್ರಾಸದಾಯಕ, ಮನೋಹರ ಹಾಗೇ ಮನಕಲಕುವ ಕಥಾ ಹಂದರವುಳ್ಳ ವಿಶಿಷ್ಟ ಕಾದಂಬರಿಯಿದು! ಓರ್ವ ದೂರದೂರಿಗೆ ಹೋಗದೇ, ಹೊಸ ತಾಣಗಳನ್ನು ಕಾಣದೇ, ತನ್ನ ಪರಿಸರದ ಸುತ್ತಮುತ್ತಲನ್ನೇ ಸುತ್ತುಹಾಕುತ್ತಾ, ಪ್ರಕೃತಿ ಅಡಗಿಸಿರುವ ನಿಗೂಢನೆಯನ್ನು ಬಯಲಾಗಿಸುತ್ತಾ, ಅದರೊಳಗಿನ ಅನೇಕ ರಹಸ್ಯಗಳನ್ನು ಬಿಚ್ಚಿಡುತ್ತಾ ಹೋಗುವುದೂ ಒಂದು ಮಹಾಯಾತ್ರೆಯೇ, ಅದನ್ನು ನಡೆಸುವವರೆಲ್ಲಾ ಮಹಾಯಾತ್ರಿಕರೇ ಎಂಬುದನ್ನು ಈ ಕಾದಂಬರಿಯನ್ನೋದಿ ಅರಿತುಕೊಂಡೆ.
ಮುಕ್ಕಾಲುವಾಸಿ ಕಥೆ ನಡೆಯೋದು ವಂಗದೇಶದ(ಬಂಗಾಳ ಪ್ರಾಂತ್ಯ) ನಿಶ್ಚಿಂದಿಪುರದ ಸುಂದರ ಪರಿಸರದಲ್ಲಿ ಮತ್ತು ದುರ್ಗಾ ಎಂಬ ೧೩-೧೪ರ ಹರೆಯದ ಅಕ್ಕ ಹಾಗೂ ೮-೯ ವರುಷದ ತಮ್ಮ ಅಪುವಿನ ಸುತ್ತಮುತ್ತಲೂ.
ಸರ್ವಜಯಾ ಮತ್ತು ಹರಿಹರರಾಯ ದಂಪತಿಗಳ ಮಕ್ಕಳಾದ ಅಪು(ಅಪೂರ್ವಚಂದ್ರರಾಯ್) ಮತ್ತು ದುರ್ಗಾ, ಅವರ ಬದುಕಲ್ಲಿ ಯಥೇಚ್ಛಾಗಿ ತುಂಬಿದ ಕಡು ಬಡತನ, ಅವಮಾನ, ಪ್ರತಿ ದಿವಸದ ಕೂಳಿಗೋಸ್ಕರ ಅವರು ನಡೆಸುವ ಹೋರಾಟ ಇದಿಷ್ಟೇ ಎಳೆಯಿಟ್ಟುಕೊಂಡೇ ಅದ್ಭುತವಾಗಿ ಕಥೆ ಹಣೆಯಲಾಗಿದೆ. ಆದರೆ ಎಲ್ಲಿಯೂ ಅವರ ಬಡತನ ನಮ್ಮಲ್ಲಿ ಕೇವಲ ದುಃಖ, ಸಂಕಟವನ್ನು ತುಂಬದೇ, ಅವರನ್ನಾವರಿಸಿದ್ದ ಸುಂದರ ಪಕೃತಿ ನೀಡುವ ಸಾಂತ್ವನ, ಅದರ ಸಂಪತ್ತು ಅವರೊಳಗೆ ತುಂಬುವ ಅಪಾರ ಸಂತೋಷ, ವನದುರ್ಗೆ ಆ ಮುಗ್ಧ ಮಕ್ಕಳ ಮನಸ್ಸನ್ನು ತಿದ್ದಿ, ತೀಡಿ ವಿಕಸಗೊಳಿಸಿ ಅವರೊಳಗೆ ಹನಿಸುವ ಆನಂದಾಶ್ರುಗಳನ್ನು ನಮ್ಮಲ್ಲಿಗೂ ಹರಿಸಿ, ಹಲವೆಡೆ ನಮ್ಮ ಕಣ್ಣಂಚೂ ಒದ್ದೆಯಾಗಿಸಿಬಿಡುತ್ತದೆ. ಆ ಎಳೆಯ ಮಕ್ಕಳು ತಮ್ಮ ವಿಶಾಲ ಕಣ್ಗಳಿಂದ ಮನೆಯೊಳಗಿನ ಬಡತನವ ಮರೆತು ತಮ್ಮ ಗ್ರಾಮ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಉಣ್ಣುತ್ತಾರೆ. ವನದೇವತೆಯು ತನ್ನ ಒಡಲೊಳಗೆ ತುಂಬಿಹ ವಿಪುಲತೆಯನ್ನು ತೋರಿ ಅವರಿಗೆ ಸಿಹಿಯಾದ ಆಹಾರವನ್ನು ನೀಡುತ್ತಾಳೆ. ಅದನ್ನೆಲ್ಲಾ ಮನಸೋ ಇಚ್ಛೆ ಸೇವಿಸುವ ಆ ಇಬ್ಬರು ಎಳೆಯರು ಕೊನೆ ಕೊನೆಗೆ ವಿಶ್ವವನ್ನೇ ಸ್ವಾಹಾ ಮಾಡಲು ಬಯಸುವಂಥ ಹಸಿವಿನಿಂದ ಕಂಡಂದ್ದನ್ನೆಲ್ಲಾ ಕಬಳಿಸುತ್ತಾ ನಮ್ಮೊಳಗೂ ಹಸಿವನ್ನು ಹುಟ್ಟಿಸಿಬಿಡುತ್ತಾರೆ. ಹಗಲಿರುಳೂ ಅವರು ತಿರುಗುವ ಅಂಥದ್ದೊಂದು ಅತ್ಯದ್ಭುತ ಪರಿಸರಕ್ಕೆ ಜೀವಿತದಲ್ಲೊಮ್ಮೆಯಾದರೂ ತಿರುಗಬೇಕೆಂಬ ಬಯಕೆ ಬೆಳೆದುಬಿಡುತ್ತದೆ. ಆದರೆ ಕ್ರಮೇಣ ಕಾದಂಬರಿಯೇ ನಮಗೆ ಕಟುವಾಸ್ತವಿಕತೆಗೂ, ಕಲ್ಪನೆಗೂ ಇರುವ ಅಂತರ ಹಾಗೂ ಮತ್ತೊಬ್ಬರ ಬದುಕಿನಲ್ಲಿ ನಾವು ಕಾಣುವ ಸುಂದರತೆಗೂ, ದೂರದ ಬೆಟ್ಟದ ಸೌಂದರ್ಯಕ್ಕೂ ಇರುವ ಸಾಮ್ಯವನ್ನು ತೋರಿಬಿಡುತ್ತದೆ.
ಆದರೂ ದುರ್ಗಾ ಹಾಗೂ ಅಪುವಿನಲ್ಲಿ ಹೇರಳವಾಗಿರುವ ಪ್ರಕೃತಿ ಜ್ಞಾನ ನಮ್ಮ ಅರಿವನ್ನೂ ಹೆಚ್ಚಿಸುತ್ತದೆ. ಅದರಲ್ಲೂ ವಿಶೇಷವಾಗಿ ಅಪುವಿನ ಕಲ್ಪನಾ ಶಕ್ತಿ, ಅದಕ್ಕೆ ಹದವಾಗಿ ಬೆರೆತ ಮುಗ್ಧತೆ, ಆತನ ಅಪಾರ ಸೌಂದರ್ಯ ಪ್ರಜ್ಞೆ ನಿಬ್ಬೆರಗಾಗಿಸುತ್ತದೆ. ಉದಾಹರಣೆಗೆ ಒಂದೆಡೆ ಅಪು ಗುಡುಗು ಸಿಡಿಲಿನ ಆರ್ಭಟವನ್ನು ಕಂಡು ಹೀಗೆ ಕಲ್ಪಿಸಿಕೊಳ್ಳುತ್ತಾನೆ... “ದೇವರು ಹೇಗೆ ಕತ್ತಿ ಮಸೆಯುತ್ತಾನೆ, ಅದಕ್ಕೇ ಆ ಹೊಳಪು! ಈಸಲ ಖಂಡಿತ ಘರ್ಜನೆ ಮಾಡುತ್ತಾನೆ.”
ಅದೇ ರೀತಿ ಇತ್ತ ದುರ್ಗಾ ಎಂಬ ಪುಟ್ಟ ಕೂಸು, ಕಾಡಿನ ಯಾವ ಮೂಲೆಯಲ್ಲಿ, ಯಾವ ಮರದಲ್ಲಿ ಎಂಥಾ ರೀತಿಯ ಹಣ್ಣು ದೊರಕುತ್ತದೆ, ಹುಲ್ಲುಗಾವಲಿನ ಬಯಲ ಸೌಂದರ್ಯವನ್ನು ಹೇಗೆ ಸವಿಯಬೇಕು, ಬಿದಿರುವನದಲ್ಲಿ ಎಂಥಾ ಬಿದುರು ಬೆತ್ತಕ್ಕೆ, ಕೊಳಲಿಗೆ ಯೋಗ್ಯ, ಯಾರ ಹಿತ್ತಲಿನ, ಯಾವ ಮರದ ಬುಡದಲ್ಲಿ ಗಡ್ಡೆ ಗೆಣಸಿರುತ್ತದೆ, ಎಂಥಾ ಸೊಪ್ಪು ಪದಾರ್ಥಕ್ಕೆ ಯೋಗ್ಯ ಎಂಬೆಲ್ಲಾ ವನ ಪಾಠವನ್ನು ತನ್ನ ತಮ್ಮನಿಗೆ ನೀಡುವಾಗ ನಾವೂ ಕಲಿಯುತ್ತಾ, ಗ್ರಾಮವನ್ನೆಲ್ಲಾ ಅವರೊಂದಿಗೆ ಸುತ್ತಿ, ಕಾಡು, ಮೇಡು, ಬೇಟ್ಟವನ್ನೆಲ್ಲಾ ತಿರುಗಿ ಹೊಟ್ಟೆಯನ್ನು ತುಂಬಿಸಿಕೊಂಡು ಆನಂದ ಪಡುತ್ತೇವೆ.
ಅನುವಾದಕರಾದ ಅಹೋಬಲ ಶಂಕರ ಅವರು ತಮ್ಮ “ಅರಿಕೆ”ಯಲ್ಲಿ ಹೀಗೆ ಹೇಳುತ್ತಾರೆ...
“ವಂಗಸಾಹಿತ್ಯದಲ್ಲಿ ಪಥೇರ್ ಪಾಂಚಾಲಿಯಂತಹ ಕಾದಂಬರಿ ಯಾರೂ ಬರೆದಿರಲಿಲ್ಲ. ಎಲ್ಲಾ ಹೊಸದೇ ಅದರಲ್ಲಿ - ವಸ್ತು ಮತ್ತು ಪಾತ್ರಸೃಷ್ಟಿ ಸರಳವಾದರೂ, ಕಣ್ಣಿಗೆ ಕಟ್ಟುವ ವರ್ಣನೆಗಳು; ಹೆಚ್ಚಾಗಿ ಕಥೆಯಲ್ಲಿ ಮೊದಲಿನಿಂದ ಕಡೆಯವರೆಗೂ ಮನ ಸೆಳೆಯುವ ಅದರ ವಿಚಾರ ದೃಷ್ಟಿ, ಜೀವವರ್ಗದ ಬಗ್ಗೆ ಹೊರಹೊಮ್ಮುವ ಅಂತಃಕರಣ, ವಂಗದೇಶದ ಆತನ ಗ್ರಾಮ ಜೀವನವನ್ನು ವರ್ಣಿಸುವಾಗ ಅತಿಸಾಮಾನ್ಯ, ಅತಿ ಕ್ಷುದ್ರವೆಂಬಂತಹುದನ್ನೂ ಅತಿ ದೊಡ್ಡ ಘಟನೆಯಂತೆಯೇ ಸೂಕ್ಷ್ಮವಾಗಿ, ಅಂತರಂಗಿಕವಾಗಿ ಬಿಡಿಸಿ ಹೇಳುವಿಕೆ, ಹಳ್ಳಿಯ ಜನರ ಜೀವನದಲ್ಲಿ ಹಾಸು ಹೊಕ್ಕಾಗಿ ಬರುವ ಮುಗ್ಧ ಹಾಸ್ಯದೊಂದಿಗೆ ಕರುಳು ಕುಯ್ಯುವ ಒಳವೇಡನೆ, ದಾರಿದ್ರ್ಯದಿಂದ, ಮೌಢ್ಯ-ಅಸಹನೆಗಳಿಂದ ಮನುಷ್ಯನೇ ಮನುಷ್ಯನಾತ್ಮಕ್ಕೆ ಮಾಡುವ ಘೋರ ಅಪಮಾನ-ಇವುಗಳೆಲ್ಲವನ್ನೂ ಉತ್ಪ್ರೇಕ್ಷೆಯಿಲ್ಲದೇ, ರೋಷವಿಲ್ಲದೆ, ಭಾವೋತ್ಕಟನೆಯಿಲ್ಲದೇ ಕಲಾತ್ಮಕವಾಗಿ ನಿರೂಪಿಸಿರುವ ಜಾಣ್ಮೆ, ಬೇರೆ ಯಾರೂ ಪಡೆಯದಿದ್ದ ಹೊಸ ಬಗೆಯ ಕಥನ ಶೈಲಿ, ಕೆಲವೇ ಪದಗಳಲ್ಲಿ ಮನಸ್ಸಿನಲ್ಲಿ ಸದಾ ನಿಲ್ಲಿವಂತೆ ಚಿತ್ರಗಳನ್ನು ಕಟ್ಟುವ ಕುಶಲತೆ-ಇವೆಲ್ಲ ಪಂಡಿತ ಪಾಮರರನ್ನು ಬೆರಗುಗೊಳಿಸಿಬಿಟ್ಟವು.”
***
ತಾಯಿ ಹಾಗೂ ಮಗು ಹೇಗೆ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಈ ಅನೂಹ್ಯ ಬಾಂಧವ್ಯವನ್ನು ಬೆಸೆದುಕೊಳ್ಳುತ್ತಾರೆ, ಕೇವಲ ತಾಯಿ ಮಾತ್ರ ಕೊಡುವವಳಲ್ಲ, ಮಗುವೂ ತಾಯಿಗೆ ಏನೇನೆಲ್ಲಾ ಧಾರೆಯೆರೆಯುತ್ತದೆ ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿ ನಮ್ಮ ದೃಷ್ಟಿಕೋನವನ್ನೇ ತೆರೆಯುತ್ತಾರೆ ಲೇಖಕರು.
ಈ ಯಾನದಲ್ಲಿ ನಗುವಿದೆ, ನಿಶ್ಶಬ್ದ ಅಳುವಿದೆ, ಕರುಳು ಕೊರೆವ ಯಾತನೆಯಿದ್ದರೂ ಪ್ರಕೃತಿ ಲೇಪಿಸುವ ಸಾಂತ್ವನವಿದೆ. ಕರ್ಮಫಲ, ಅಂದರೆ ಈ ಜನ್ಮದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ, ಅರೆತೋ ಅರಿಯದೆಯೋ ಮತ್ತೊಂದು ಜೀವಕ್ಕೆ ಕೊಡುವ ನೋವಿನ ಫಲ, ಮತ್ತೋರ್ವ ವ್ಯಕ್ತಿಯನ್ನು ಹಿಂಸಿಸುವ ಫಲ ಈ ಜನ್ಮದಲ್ಲೇ ತೀರಿಸುತ್ತೇವೆ ಅನ್ನೋ ಒಂದು ಕಾನ್ಸೆಪ್ಟ್ (ಇದು ಎಷ್ಟರಮಟ್ಟಿಗೆ ನಿಜ ಅನ್ನೋದರ ಕುರಿತು ಇನ್ನೂ ಸಣ್ಣ ಅನುಮಾನ ಇದೆ ನನ್ನೊಳಗೆ) ಪ್ರಸ್ತುತ ಕಾದಂಬರಿಯ ಕೊನೆಯಲ್ಲಿ ದುರ್ಗಾಳ ಅಮ್ಮ ಹರಿಸುವ ಪಶ್ಚಾತ್ತಾಪದ ಕಣ್ಣೀರಿನಲ್ಲಿ ಎದ್ದು ಕಾಣಿಸುತ್ತದೆ. ಒಂದೆರಡು ಪ್ರಸಂಗಗಳನ್ನೋದಿಯಂತೂ ಪುಸ್ತಕವನ್ನು ಮುಚ್ಚಿಟ್ಟು, ಕಣ್ಮುಚ್ಚಿ ಒಳಗೊಳಗೇ ಅತೀವ ದುಃಖ ಅನುಭವಿಸಿಬಿಟ್ಟೆ. ಅಷ್ಟು ತೀವ್ರವಾಗಿದೆ ಯಾನದ ಆ ಘಟ್ಟ! ಅದನ್ನಿಲ್ಲಿ ಬೇಕೆಂದೇ ಉಲ್ಲೇಖಿಸುತ್ತಿಲ್ಲ. ಓದುಗರು ಓದುತ್ತಾ ಹೋಗುವಾಗ ಹಠಾತ್ ಅದು ಎದುರಾದಾಗಲೇ ಅದರ ಸಹಜ ಭಾವವನ್ನು ಹೀರಬಹುದೆಂದು ಆ ದೃಶ್ಯದ ವರ್ಣನೆಗೆ ಹೋಗುತ್ತಿಲ್ಲ. ಅಲ್ಲದೇ, ಅಲ್ಲಲ್ಲಿ ಬರುವ ಸಣ್ಣ ಕವಿತೆಗಳು, ಜನಪದ ಹಾಡುಗಳೊಳಗಿನ ವಿಡಂಬನೆ ಎಲ್ಲವೂ ಕಥೆಯ ಸ್ವಾದವನ್ನು ಹೆಚ್ಚಿಸುವಂತಿವೆ.
ಮೂಲ ಕಾದಂಬರಿಯನ್ನು ನಾನು ಓದಲು ಸಾಧ್ಯವಿಲ್ಲ. ಆದರೆ ಅನುವಾದ ಬಹಳ ಸಶಕ್ತವಾಗಿ ನಮ್ಮನ್ನಾವರಿಸುವುದಂತೂ ಖಂಡಿತ. ಕೆಲವೊಂದೆಡೆ ಅನುವಾದ ತುಸು ಸಂಕೀರ್ಣವಾಗಿದ್ದು, ಎರಡು ಸಲ ಓದನ್ನು ಬೇಡುವಂತಿದ್ದರೂ, ಓದಿನ ಸುಖಕ್ಕೆ ಅಷ್ಟು ತ್ರಾಸ ತೆಗೆದುಕೊಳ್ಳುವುದು ಒಳ್ಳೆಯದೇ ಎನ್ನಬಹುದು.
ಕಾದಂಬರಿಯನ್ನೋದಿದ ಮೇಲೆ ಅಪಾರ ಕುತೂಹಲದಿಂದ, ಬಹು ಚರ್ಚಿತ, ಎಲ್ಲೆಡೆ ಮಾನ್ಯಗೊಂಡ ಸತ್ಯಜಿತ್ ರೇ ಅವರ ಪಥೇರ್ ಪಾಂಚಾಲಿ ಚಿತ್ರದ ಕೆಲವು ತುಣುಕುಗಳನ್ನು ಹುಡುಕಿ ನೋಡಿದೆ. ಸ್ವಲ್ಪ ನಿರಾಸೆಯಾಯ್ತು. ಯಾವೆಲ್ಲಾ ದೃಶ್ಯಗಳನ್ನು ಪುಸ್ತಕದಲ್ಲೋದಿ ಪುಳಕಿತಳಾಗಿದ್ದೆನೋ ಅದೇ ದೃಶ್ಯವನ್ನೊಳಗೊಂಡ ಒಂದೆರಡು ತುಣುಕುಗಳೇ ಸಿಕ್ಕಿವು ನನಗೆ. ಆದರೆ ಚಿತ್ರದಲ್ಲಿ ಅವುಗಳನ್ನು ಬಹಳ ನೀರಸ ಸಪ್ಪೆಯಾಗಿ ಕಥೆಯನ್ನು ತುಸು ಬದಲಾಯಿಸಿದಂತೇ ಕಂಡಿತು. ಹಾಗೆಯೇ, ಗೂಗಲ್ ಮಾಡಿದಾಗ ಅಪು ದೊಡ್ಡವನಾಗಿ, ಮದುವೆಯಾಗಿ, ಆಮೇಲೆ ಅವನ ಬದುಕು ಬದಲಾದ ಕ್ರಮವೂ ಕಾದಂಬರಿಯಲ್ಲಿದೆ ಎಂಬಂತಹ ಮಾಹಿತಿಗಳೂ ಸಿಕ್ಕವು. ಆದರೆ ಪ್ರಸ್ತುತ ಅನುವಾದಿತ ಕಾದಂಬರಿಯಲ್ಲಿ ಆ ಘಟ್ಟವಿಲ್ಲ! ಮೂಲ ಓದಿದವರು ಅಥವಾ ಬಲ್ಲವರು ಹೇಳಿದರೆ ಬಹಳ ಒಳ್ಳೆಯದು. ಒಟ್ಟಿನಲ್ಲಿ ೪೦೦ ಪುಟಗಳ ಈ ಕಾದಂಬರಿಯ ಯಾನವು ಓದುವಷ್ಟು ಹೊತ್ತು ಮತ್ತು ಓದಿದಾನಂತರವೂ ನಮ್ಮನ್ನು ಬೇರೆಯದೇ ಲೋಕಕ್ಕೆ ಒಯ್ಯಲು ಸಮರ್ಥವಾಗಿದೆ ಎನ್ನುವುದು ನನ್ನ ಅನಿಸಿಕೆ. ಒಮ್ಮೆ ನೀವೂ ಈ ಯಾನದಲ್ಲಿ ಪಾಲ್ಗೊಂಡು ಆ ಇಬ್ಬರು ಪುಟ್ಟ ಮಹಾನ್ ಯಾತ್ರಿಕರ ಸಂಗಡ ಪ್ರಯಾಣಿಸಿ ನೋಡಿ, ಹಾಗೆಯೇ ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ.
ನಾನಂತೂ ವಿಭೂತಿಭೂಷಣರ ಕಥೆಗಳ, ಶೈಲಿಯ ಅಭಿಮಾನಿಯಾಗಿಬಿಟ್ಟಿರುವೆ. ಈಗ ನನ್ನ ಮಗಳು ಹಾಗೂ ತಂಗಿಯ ಮಗನಿಗೆ ಅಪೂ ಮತ್ತು ದುರ್ಗಾರ ಸಾಹಸಗಾಥೆಯನ್ನು, ಬದುಕಲ್ಲಿ ಅವರು ಕಾಣುವ ಕಷ್ಟಗಳು, ನಡೆಸುವ ಹೋರಾಟ, ವನದೇವತೆಯೊಳಗಿರುವ ಸಂಪತ್ತು ಇವೆಲ್ಲವನ್ನೂ ರಸವತ್ತಾಗಿ ಕಥೆ ಹೇಳಲು ತೊಡಗಿರುವೆ. ಆ ಮೂಲಕ ನನ್ನ ಯಾತ್ರೆ ಇನ್ನೂ ಜಾರಿಯಲ್ಲಿದೆ!
ಅಂದಹಾಗೆ "ಪಥೇರ್ ಪಾಂಚಾಲಿ" ಎಂದರೆ Song of the Little Road.
*
ಮಹಾಯಾತ್ರಿಕ
(ಪಥೇರ್ ಪಾಂಚಾಲಿ)
ಮೂಲ : ವಿಭೂತಿಭೂಷಣ ವಂದ್ಯೋಪಾಧ್ಯಾಯ
ಅನು: ಅಹೋಬಲ ಶಂಕರ
ಪುಟಗಳು : ೪೦೨
~ತೇಜಸ್ವಿನಿ ಹೆಗಡೆ.