ಸೋಮವಾರ, ಜನವರಿ 19, 2009

ನಾ ಮೆಚ್ಚಿದ ಕವಿತೆ - ೪


ನನ್ನ ದೇಹದ ಬೂದಿ

ಕವಿ : "ಚುಟುಕುಗಳ ಬ್ರಹ್ಮ" ದಿನಕರ ದೇಸಾಯಿ

ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನ ಹಿಡಿಯುವಲ್ಲಿ ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
ತಾವರೆಯು ದಿನದಿನವು ಅರಳುವಲ್ಲಿ ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
ನಿಜ ಸೇವೆಗೈಯಲಿಕೆ ಬರಲಿ ಮುಂದು
@@@@@@@@@@@@@@@@@@@@

ಈ ಕವನದ ಪಾಠ ನನಮಗೆ ಎಂಟನೆಯೋ ಇಲ್ಲಾ ಒಂಭತ್ತನೇಯೋ ತರಗತಿಯಲ್ಲಿದ್ದ ನೆನಪು. ಆ ದಿನಗಳಿಂದ ನನ್ನ ಅಚ್ಚಿಮೆಚ್ಚಿನ ಕವನಗಳ ಸಾಲಿನಲ್ಲಿ ಈ ಕವನವೂ ಸೇರ್ಪಡೆಗೊಂಡಿತ್ತು. "ಚುಟುಕುಗಳ ಬ್ರಹ್ಮ" ಎಂದೇ ಖ್ಯಾತನಾಮರಾದ ದಿನಕರ ದೇಸಾಯಿಯವರಿಂದ ರಚಿಸಲ್ಪಟ್ಟ ಈ ಕವನದೊಳಗಿನ ಭಾವಾರ್ಥ, ಸರಳತೆ, ಸಾರ್ಥಕತೆ ನನ್ನ ಮನಸೂರೆಗೊಂಡಿದ್ದವು. ಏಕೋ ಏನೋ ಇತ್ತೀಚಿಗೆ ಕೆಲವು ಸಮಯಗಳಿಂದ ಈ ಕವಿತೆ ತುಂಬಾ ನೆನಪಿಗೆ ಬರುತ್ತಿತ್ತು. ಆದರೆ ಮೊದಲ ಚರಣದ ಆನಂತರದ ಸಾಲುಗಳು ನೆನೆಪಿಗೇ ಬರುತ್ತಿರಲಿಲ್ಲ. ಸ್ನೇಹಕೂಟದ ಕೆಲವು ಸ್ನೇಹಿತರನ್ನು, ಆತ್ಮೀಯರನ್ನೆಲ್ಲಾ ಕೇಳಿದ್ದೆ. ಯಾರ ಬಳಿಯೂ ಈ ಹಾಡು ಇರಲಿಲ್ಲ. ಅಂತೂ ಇಂತೂ ಕೊನೆಗೆ ತ್ರಿವೇಣಿಯಕ್ಕನ ತುಳಸೀವನದಲ್ಲಿ ಈ ಕವಿತೆ ಅರಳಿರುವುದನ್ನು ಕೇಳಿ ತುಂಬಾ ಸಂತೋಷವಾಯಿತು. ತುಳಸಿಯಮ್ಮನ ಕೇಳಿ ಈ ಕವನವನ್ನು ಪಡೆದುಕೊಂಡು ಮಾನಸದಲ್ಲಿ ಕಾಣಿಸಿರುವೆ. ತ್ರಿವೇಣಿಯಕ್ಕನಿಗೆ ತುಂಬಾ ಧನ್ಯವಾದಗಳು. ಮಾನಸದ ಓದುಗರಿಗೂ ಈ ಕವನದ ಆಶಯ, ಭಾವಾರ್ಥ ತುಂಬಾ ಇಷ್ಟವಾಗುವುದೆಂದು ಭಾವಿಸುವೆ.

ನನ್ನ ತಾಯಿ ಈ ಕವನವನ್ನು ತುಂಬಾ ಸುಶ್ರಾವ್ಯವಾಗಿ ಹಾಡುತ್ತಾರೆ. ಆದರೆ ಅವರಿಗೂ ಮೊದಲ ಚರಣವಷ್ಟೇ ನೆನೆಪಿತ್ತು. ಈಗ ನಾನೂ ನನ್ನ ತಾಯಿಯೂ ಒಟ್ಟಿಗೇ ಈ ಕವಿತೆಯನ್ನು ಗುನುಗುತ್ತಿರುತ್ತೇವೆ :)

ದಿನಕರ ದೇಸಾಯಿಯವರ ಕವನದ ಸಾಲೆರಡನ್ನು ಇತ್ತೀಚಿನ ಕನ್ನಡ ದೈನಿಕವೊಂದರಲ್ಲಿ ಓದಿದೆ. ತುಂಬಾ ತುಂಬಾ ಮೆಚ್ಚುಗೆಯಾಯಿತು. ಅವು ಇಂತಿವೆ :

"ಕರಿಯ ಕಲ್ಲುಗಳು ಕೂಡ ಕೂಡಿದವು ಗುಡಿಯ ಕಳಸಕಾಗಿ!
ನರನ ಹೃದಯಗಳು ಒಂದುಗೂಡವೇ ಮಾತೃಭೂಮಿಗಾಗಿ?"

ಮೇಲಿನ ಸಾಲುಗಳ ಪೂರ್ಣಪ್ರಮಾಣದ ಕವನ ಅಥವಾ ಚುಟುಕು ಯಾರಲ್ಲಾದರೂ ಇದ್ದರೆ ದಯಮಾಡಿ ಕಳುಹಿಸಬೇಕಾಗಿ ವಿನಂತಿ.

-ತೇಜಸ್ವಿನಿ.

ಮಂಗಳವಾರ, ಜನವರಿ 13, 2009

ಮಾನಸದ ತುಂಬೆಲ್ಲಾ ವರುಷ ತುಂಬಿದ ಹರುಷದ ಜೊತೆಗೆ ಸಂಕ್ರಾತಿಯ ಸಂಭ್ರಮ....:)

"ಇದೆಂಥದ್ದೇ.. ನೀ ಬರ್ದ ಕಥೆ, ಕವನ ಎಲ್ಲಾ ಎಲ್ಲೆಲ್ಲೋ ಇಟ್ಟಿರ್ತೆ. ಹಾಳೆ ಎಲ್ಲಾ ಬಿದ್ಕ ಇರ್ತು. ನಿಂಗೆ ಈ ಕಾಗ್ದ ಬೇಕೋ ಬೇಡ್ದೋ?!!..." ಇಂಥ ದೂರುಗಳನ್ನು ನಾನು ನನ್ನ ಹೆತ್ತವರಿಂದ, ನನ್ನವರಿಂದ ಕೇಳುತ್ತಲೇ ಇದ್ದೆ. ನಾನು ಬರೆದ ಲೇಖನ, ಕಥೆ, ಕವನಗಳ ಪ್ರತಿ ಅದು ನಾನು ತೋರಿಸುತ್ತಿದ್ದ ಅಸಡ್ಡೆಯಾಗಿತ್ತೆಂದು ಎಣಿಸದಿರಿ ದಯಮಾಡಿ! ನಾನು ಸರಿಯಾಗಿ ಫೈಲ್‌ನಲ್ಲೇ ಇಟ್ಟಿರುತ್ತಿದ್ದೆ. ಆದರೆ ಶೆಲ್ಫ್ ಸರಿಮಾಡುವಾಗಲೋ, ಇಲ್ಲ ಧೂಳು ತೆಗೆಯುವಾಗಲೋ ಎಲ್ಲಾ ಚೆಲ್ಲಪಿಲ್ಲಿಯಾಗಿ ಒಂದೆರಡು ಹಾಳೆಗಳು ಕಳೆದು ಹೋಗುತ್ತಿದ್ದವು. ಇದರಿಂದಾಗಿ ಅದೆಷ್ಟು ಬರಹಗಳನ್ನು ಕಳೆದುಕೊಂಡೆನೋ ತಿಳಿಯದು!!

ಮದುವೆಯ ಮೊದಲು ಹಾಗೂ ಆನಂತರ ಬರೆದ ಕಥೆ, ಕವನಗಳಲ್ಲಿ ಕೆಲವಾದರೂ ಎಲ್ಲೋ ಮಾಯವಾಗಿವೆ. ಆನಂತರ ನನ್ನವರ ಒತ್ತಾಯದ ಮೇರೆಗೆ ಎಲ್ಲವನ್ನೂ ಕಂಪ್ಯೂಟರ್‌ನಲ್ಲಿ ಫೀಡ್ ಮಾಡಿಡತೊಡಗಿದೆ. ಆದರೆ ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ.. ಎಂಬಂತೆ.. ದಿಢೀರೆಂದು ಒಂದೊಳ್ಳೆಯ ಬೆಳಗ್ಗೆ ಸ್ವಿಚ್ ಹಾಕುತ್ತಲೇ ವಿಂಡೋಸ್ ಕ್ರ್ಯಾಶ್ ಆಗುವುದೋ, ಇಲ್ಲಾ ಹಾರ್ಡ್ ಡಿಸ್ಕ್ ಯಕ್ಕುಟ್ಟೊಗುವುದೋ, ಇಲ್ಲಾ ವೈರಸ್‌ಜ್ವರ ಬಂದು ನನ್ನ ಡೇಟಾ ಮಾತ್ರ ಮಾಯವಾಗುವುದೋ ಆಗಿತ್ತಿತ್ತು. ಆಗೆಲ್ಲ ನನ್ನ ಶ್ರಮ ವ್ಯರ್ಥವಾಗುತ್ತಿರುವುದನ್ನು ನೋಡಿ ತುಂಬಾ ಕೋಪ ಬಂದು ಕಂಪ್ಯೂಟರ್‌ಗೆ ಒಂದು ಗುದ್ದಿದ್ದೂ ಇದೆ. ಅಷ್ಟಕ್ಕೂ ಸುಮ್ಮನಾಗದೇ ನನ್ನವರ ಮೇಲೂ ಕೋಪ ಪ್ರದರ್ಶನವಾಗುತ್ತಿತ್ತು... "ನಂಗೊತ್ತಿಲ್ಲೆ ಎಂತ ಮಾಡ್ತ್ರಿ ಹೇಳಿ.. ಇನ್ನೊಂದು ತಾಸಿನಲ್ಲಿ ನಂಗೆ ಕಂಪ್ಯೂಟರ್ ಸರಿ ಆಗವು.. ನೀವು ಹೇಳೆ ನಾ ಎಲ್ಲ ಬರ್ದಿಟ್ಟಿದ್ದು. ನಂಗೆ ಎಲ್ಲಾ ಬೇಕು. ನಿಮ್ಮ ಡೇಟಾಕ್ಕೇ ಎಂತಕ್ಕೆ ವೈರಸ್ ತಾಗ್ತಿಲ್ಲೆ? ನಂದೇ ಎಂತಕ್ಕೇ ಹೋಗ್ತು? ನೀವೀಗ ಸರಿ ಮಾಡ್ದೆ ಹೋದ್ರೆ ನೀವು ಸಾಫ್ಟ್‌ವೇರ್ ಎಂಜಿನೀಯರೇ ಅಲ್ಲಾ ಹೇಳಾಗ್ತು.." ಎಂದಾಲ್ಲಾ ಬೆದರಿಕೆ ಹಾಕಿ, ಹಾರಾಡಿ ನನ್ನ ಗಾಬರಿ, ಕೋಪ, ಅಸಹನೆಗಳನ್ನೆಲ್ಲ ಕಕ್ಕುತ್ತಿದೆ.

"ಅಯ್ಯೋ ದೇವ್ರೇ.. ನೀ ಎಂತ ಎಂಟು ತಿಂಗ್ಳಿಗೆ ಹುಟ್ಟಿದ್ಯನೇ? ನಿಂತ ಕಾಲಲ್ಲೇ ಆಗುವು ಅಂಬೆ...ಈವಾಗ ನಾನು ಕಂಪ್ಯೂಟರ್ ಡಾಕ್ಟರ್ ಇದ್ದಾಂಗೆ ತಿಳ್ಕೋ.... ಡಾಕ್ಟರ್‌ಗೆ ರೋಗ ಗುಣಪಡ್ಸಲೆ ಟೈಮ್ ಬೇಕಾಗ್ತು. ಯಾವ ಮೆಡೀಸಿನ್ ಹಾಕವು, ಬಿಡವು, ಯಾವ ಟ್ರೀಟ್ಮೆಂಟ್ ಸರಿ ಎಲ್ಲಾ ನೋಡಿ ಮಾಡಕಾಗ್ತು. ತಾಳ್ಮೆ ಇರ್ಲಿ ಸ್ವಲ್ಪ.. ಸರಿ ಆಗ್ತು...." ಎಂದು ತಾಳ್ಮೆಯಿಂದ ಹೇಳಿದರೂ ನಾನೆಲ್ಲಿ ಸುಮ್ಮನಾಗುತ್ತಿದ್ದೇ..? "ಹೌದು ಅಮ್ಮ ಹೇಳ್ತಾ ಇರ್ತು.. ನಾನು ಎಂಟು ತಿಂಗ್ಳಿಗೇ ಹುಟ್ಟಿದ್ದಡ....ಅದೆಲ್ಲ ನಂಗೊತ್ತಿಲ್ಲೆ...ಆದಷ್ಟು ಬೇಗ ಸರಿ ಆಗವು ಇಲ್ದೇ ಹೋದ್ರೆ ನನ್ನ ಮೂಡೇ ಪರ್ಮನೆಂಟಾಗಿ ಕೆಟ್ಟೋಗ್ತು ನೊಡಿ..!!"ಎಂದು ಕೊನೆಯ ಬಾಂಬ್ ಹಾಕ್ತಿದ್ದೆ. ನನ್ನ ಧಮ್ಕಿಗೋ ಇಲ್ಲಾ ನಾನು ಕೊಟ್ಟ ಗುದ್ದಿನಿಂದಲೋ(ಕಂಪ್ಯೂಟರ್‌ಗೆ :) ) ಒಂದು ದಿನದೊಳಗೆ ಸರಿಯಾಗುತ್ತಿತ್ತು.
ನನ್ನ ಭಯಕ್ಕೋ ಇಲ್ಲಾ ವೈರಸ್‌ಗೆ ಹೆದರಿಯೋ ಎಲ್ಲಾ ಎಂಟೀ‌-ವೈರಸ್‌ಗಳೂ ಕಂಪ್ಯೂಟರ್‌ಅನ್ನು ಅಲಂಕರಿಸಿದವು. ನನ್ನ ಡೇಟಾ ಎಲ್ಲಾ ಸಿಡಿ, ಡಿವಿಡಿಗಳಲ್ಲಿ ತುಂಬಲ್ಪಟ್ಟವು. ಆದರೂ ತೃಪ್ತಿಯಾಗಲಿಲ್ಲ. ಎಲ್ಲೋ ಎನೋ ಕಳೆದು ಹೋಗಿದೆ. ನಾನು ಬರೆದಿದ್ದೆಲ್ಲ ನಿರ್ಜೀವ ಸಿಡಿ, ಡಿವಿಡಿಗಳಲ್ಲೇ ಕೊಳೆಯುತ್ತಿವೆ ಎಂದೆನಿಸುತ್ತಿತ್ತು. ಆಗ ನನ್ನವರು ಬ್ಲಾಗ್ ತೆರೆಯುವ ಸಲಹೆಯನ್ನಿತ್ತರು. ಆದರೆ ನನಗೇಕೋ ಉತ್ಸಾಹವೇ ಬರಲಿಲ್ಲ. ಅದೂ ಅಲ್ಲದೇ ಮನೆಯ ಕೆಲಸ, ಅಡಿಗೆ, ಬಿಡುವಿನ ವೇಳೆಯಲ್ಲಿ ನನ್ನಿಷ್ಟದ ಪುಸ್ತಕಗಳನ್ನು ಓದುವುದು ಇತ್ಯಾದಿಗಳಿಂದಾಗಿ ಸಮಯವೂ ಆಗುತ್ತಿರಲಿಲ್ಲ.

ನಾನು ಪುಟ್ಟಿಯ ಆಗಮನವನ್ನು ನಿರೀಕ್ಷಿಸುತ್ತಿದ್ದಾಗ "ತಾಯಿ ಮತ್ತು ಮಗು" ಎಂಬ ಪುಸ್ತಕವನ್ನು ಓದಿ.. ಓದಿ ನನ್ನೊಳಗೆ ಮಗುವಿನ ಕುರಿತು ಒಂದು ಕಲ್ಪನೆ ಮೂಡಿಸಿಕೊಂಡಿದ್ದೆ. ಅದರಲ್ಲಿ "ಮಗು ಹುಟ್ಟಿದ ಮೊದಲ ಎರಡು ತಿಂಗಳು ಬರೀ ಹಾಲು ಕುಡಿಯುವುದು ಮಲಗುವುದು ಮಾಡುತ್ತದೆ.. ಏನಾದರೂ ತೊಂದರೆ ಆದರೆ ಮಾತ್ರ ಅಳುತ್ತದೆ. ದಿನದ ಹೆಚ್ಚಿನ ಪಾಲು ಮಲಿಗಿಯೇ ಇರುತ್ತದೆ..."ಇತ್ಯಾದಿ..ಇತ್ಯಾದಿ ಬರೆದಿದ್ದರು. ಆಗ ಅದನ್ನು ಓದುವಾಗಲೆಲ್ಲಾ ಮಗುವನ್ನು ಮುದ್ದಿಸುತ್ತಾ ಹಾಯಾಗಿ ಮಲಗಿ ವಿಶ್ರಮಿಸುತ್ತಾ ಬಾಣಂತನವನ್ನು ಆರಾಮವಾಗಿ ಕಳೆಯಬಹುದೆಂದು ಎಣಿಸಿದ್ದೆ. ಆದರೆ ಒಂದು ಪ್ರಮುಖ ವಿಷಯವೇ ಮರೆತು ಬಿಟ್ಟಿದ್ದೆ ನೋಡಿ... ಆ ಪುಸ್ತಕ 1967ರಲ್ಲಿ ಮುದ್ರಿತವಾಗಿದ್ದು, ಅದರಲ್ಲಿ ಆ ಕಾಲದಲ್ಲಿನ, ಮಕ್ಕಳ ವರ್ತನೆ, ಬೌದ್ಧಿಕ ಬೆಳವಣಿಗೆಗಳ ಕುರಿತಾಗಿತ್ತೆಂದು!!!! ಈಗಿನ ಮಕ್ಕಳು ಹುಟ್ಟುವಾಗಲೇ ಕಂಪ್ಯೂಟರ್‌ನಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡು, ಹುಟ್ಟಿದ ಮೂರುತಿಂಗಳಿಗೇ ಮೌಸ್‌ಅನ್ನು ಹಿಡಿದು ಆಡುತ್ತಾ ಬೆಳೆಯುವವರೆಂದು ತಿಳಿದೇ ಇರಲಲ್ಲ. ಈ-ಯುಗದ ಮಗುವಿಗೆ ನಿದ್ದೆಯೆಂಬುದೇ ಕಡಿಮೆ ಎಂದು ಅರಿವಾಗಿತ್ತು ಅದಿತಿಯ ಜನನದಿಂದ.

೨೦೦೭ಅಗಸ್ಟ್ ೩ರರಂದು ಪುಟ್ಟಿಯ ಜನನವಾಯಿತು...ಅದಿತಿ ಹುಟ್ಟಿದ ಮೇಲೇ ತಿಳಿದದ್ದು ನಿದ್ದೆ ಇಲ್ಲದ ಮನುಷ್ಯ ಏನಾಗುತ್ತಾನೆಂದು. ಹಗಲೂ ರಾತ್ರಿ ನಿದ್ರಿಸದೇ, ನನಗೂ ನಿದ್ದೆ ಕೊಡದೇ ಆಕೆ ಸತಾಯಿಸಿದಾಗ ನಾನು ಅರೆ ಹುಚ್ಚಿಯಂತಾಗಿದ್ದೆ. ಇದೇ ದಿನಚರಿ ಕನಿಷ್ಠವೆಂದರೂ 5-6 ತಿಂಗಳವರೆಗೂ ನಡೆದಿತ್ತು. ನೋಡಿಕೊಳ್ಳಲು ಅಪ್ಪ, ಅಮ್ಮ ಎಲ್ಲಾ ಇದ್ದರೂ ಅವಳಿಗೋ ಸದಾ ನಾನೇ ಬೇಕು. ನನ್ನ ಮಡಿಲೇ ಬೇಕು. ನನಗೋ ಆ ಕಡೆ ಮಗುವಿನ ಸೆಳೆತ ಈ ಕಡೆ ದೈಹಿಕ ಮಾನಸಿಕ ವಿಶ್ರಾಂತಿ ಇಲ್ಲದೇ ಬಳಲಿ ಹೋಗಿದ್ದೆ. ಇಂತಹ ಸಮಯದಲ್ಲಿ ನವಚೇತೋಹಾರಿಯಾಗಿ, ನನ್ನೊಳಗೆ ಹೊಸ ಜೀವ ತುಂಬಲು, ಹೊಸ ಜಗತ್ತನ್ನು ತೋರಲು ಹುಟ್ಟಿದವಳೇ "ಮಾನಸ".

ಒಂದು ದಿನ ಮನಸಿಗೆ ಹೊಸ ಚೈತನ್ಯ ತುಂಬಿಕೊಳ್ಳಲು ಆರ್ಕುಟ್ ನೋಡುತ್ತಿದ್ದೆ (ಹಾಗೂ ಹೀಗೂ ಬಿಡುವು ಮಾಡಿಕೊಂಡು). ಅಲ್ಲೊಂದು ಪ್ರೊಫೈಲ್ ಹೆಸರು ತುಂಬಾ ಆಕರ್ಷಣೀಯವೆನಿಸಿತು "ಮಿಂಚುತಿರೆ ಮಂಜಿನಲಿ ಕಡಲು ಕಡೆದಿಹ ಕವನ.." ಎಂದಿತ್ತು ಶೀರ್ಷಿಕೆ. ಕುತೂಹಲಗೊಂಡು ವೀಕ್ಷಿಸಿದರೆ ಅವರ ಹೆಸರು ಶಾಂತಲಾ ಭಂಡಿ ಎಂದು ತಿಳಿಯಿತು. ಪರಸ್ಪರ ಪರಿಚಯದ ನಂತರ, ಸ್ನೇಹವೇರ್ಪಟ್ಟಿತು. ನಾವಿಬ್ಬರೂ ಸಮಾನ ಆಸಕ್ತಿಹೊಂದಿದವರೆಂದು ತಿಳಿಯಲು, ಅವರಲ್ಲಿ ನಾನು ಅವರ ಬರಹಗಳನ್ನು ಓದಲು ನೀಡಬೇಕೆಂಡು ಕೋರಿದೆ. ಆಗ ಅವರು ಕೊಟ್ಟಿದ್ದು ಒಂದು ಸಣ್ಣ ಲಿಂಕ್ "ನೆನಪು ಕನಸುಗಳ ನಡುವೆ". ಅದರೊಳಗೆ ಬೆಚ್ಚನೆ ರಂಗುರಂಗಾಗಿ ಕುಳಿತು ನಳನಳಿಸುತ್ತಿದ್ದ ಸುಂದರ ಬರಹಗಳು ನನ್ನನ್ನು ಬೆರಗುಗೊಳಿಸಿದವು.

ಹೌದಲ್ಲಾ.. ಇವರು ಹೇಳಿದ್ದಾಗ ನಾನೂ ಬ್ಲಾಗ್ ತೆರೆದಿದ್ದರೆ ನನ್ನ ಬರಹಗಳಿಗೂ ಒಂದು ಸ್ಥಾನ, ಮಾನ ಸಿಕ್ಕುತ್ತಿತ್ತು. ಛೇ.. ನಾನು ಆಗ ಕೇಳದೇ ತಪ್ಪುಮಾಡಿದೆ ಎಂದೆನಿಸಿತು. ತಡಮಾಡದೇ ಯಜಮಾನರ ಸಹಾಯದಿಂದ ಬ್ಲಾಗೊಂದನ್ನು ತೆಗೆದೇ ಬಿಟ್ಟೆ. ನನ್ನ ಪುಟ್ಟಿಗೆ ಇಟ್ಟಿದ್ದ 5 ಹೆಸರುಗಳಲ್ಲೊಂದಾದ "ಮಾನಸ" ಹೆಸರನ್ನೇ ಗುರು ಹಿರಿಯರ ಸಹಮತಿಯೊಂದಿಗೆ(ಅಂದರೆ ನನ್ನವರ ಹಾಗೂ ನನ್ನ ಹೆತ್ತವರ) ಯಾವ ಮುಹೂರ್ತ, ಗಳಿಗೆ ನೋಡದೇ ನಾಮಕರಣ ಮಾಡಿ ಬಿಟ್ಟೆ. (ಹದಿಮೂರಂಕಿಯೆಂದೂ ಪರಿಗಣಿಸದೇ) ಜನವರಿ 13 2008ರಂದು ಒಟ್ಟೂ 20ಪೋಸ್ಟ್‌ಗಳನ್ನು ಒಂದೇ ಸಲಕ್ಕೇ ಪೋಸ್ಟ್ ಮಾಡಿದೆ.

ಹೌದು.. ಮಾನಸದ ತುಂಬೆಲ್ಲಾ ಒಂದು ವರುಷ ತುಂಬಿದ ಹರುಷ. ಮಾನಸ ನನಗೆ ಬಹಳಷ್ಟು ಕೊಟ್ಟಿದ್ದೆ. ಮೊಟ್ಟ ಮೊದಲಿಗೆ ಬಳಲಿದ್ದ ನನ್ನ ಮನಸಿಗೆ ಹೊಸ ಉತ್ಸಾಹ, ಚೈತನ್ಯವನ್ನು ತುಂಬಿ ನನ್ನವರೊಂದಿಗೆ, ನನ್ನ ಪುಟ್ಟಿಯ ಜೊತೆಗೆ ಮತ್ತಷ್ಟು ಉಲ್ಲಾಸದಿಂದ ಜೀವನೋತ್ಸಾಹದಿಂದ ಬಾಳುವಂತೆ ಮಾಡಿದೆ. ದೈಹಿಕವಾಗಿ ಎಷ್ಟೇ ಬಳಲಿದ್ದರೂ ಮಾನಸಿಕವಾಗಿ ಮಾನಸ ನನ್ನನ್ನು ಪ್ರತಿಕ್ಷಣ ನಿತ್ಯನೂತನವಾಗಿಸಿದೆ. ಇದರಿಂದಾಗಿ ನನ್ನೆಲ್ಲಾ ಕಥೆ, ಕವನಗಳಿಗೆ ಹೊಸ ಜೀವನ ಬಂತು. ಸಿಡಿ, ಡಿವಿಡಿಗಳಿಂದ ಮುಕ್ತಿ ಸಿಕ್ಕಿ ಸ್ವಚ್ಛಂದವಾಗಿ ಹಾರಾಡತೊಡಗಿದವು. ಸಹ ಮಾನಸಿಗರ ಜೊತೆಯಾಯಿತು. ಬಹಳಷ್ಟು ಆತ್ಮೀಯರನ್ನು, ಸ್ನೇಹಿತರನ್ನು, ಸಹೋದರ/ಸಹೋದರಿಯರನ್ನು, ಹಿತೈಷಿಗಳನ್ನು, ಹಿರಿಯರನ್ನು ಹತ್ತಿರಕ್ಕೆ ತಂದಿದೆ. ಸಹೃದಯ ಅಪರಿಚಿತರನ್ನು ಪರಿಚಿತರನ್ನಾಗಿಸಿ, ಸ್ನೇಹ ಚಿಗುರಿಸಿ ಆತ್ಮೀಯತೆಯ ಬಂಧವನ್ನು ಬೆಸೆದಿದೆ. ಉತ್ತಮ ಲೇಖಕ/ಲೇಖಕಿಯರನ್ನು, ಕವಿಗಳನ್ನು, ಕವಯಿತ್ರಿಯರನ್ನು, ಕಥೆಗಾರರನ್ನು ಪರಿಚಯಿಸಿದೆ.

ಮುಖ್ಯವಾಗಿ "ಮಾನಸ" ನನ್ನೊಳಗೆ ನನ್ನನ್ನು ತೆರೆದಿಟ್ಟಿದೆ. ನನ್ನ ಹೋರಾಟದ ದನಿಗೆ ವೇದಿಕೆಯಾಗಿದೆ. ನನ್ನಳುವಿಗೆ, ನಗುವಿಗೆ ಪ್ರತಿಸ್ಪಂದಿಯಾಗಿದೆ. ನಾ ತೊಡಿಸುವ ಹೊಸಬಟ್ಟೆಗಳನ್ನು ಬಲು ಪ್ರೀತಿಯಿಂದ ತೊಟ್ಟು ಮೆರೆದು ನನ್ನ ಕಣ್ಮನಗಳನ್ನು ತಣಿಸುತ್ತಿದೆ. ನನಗೀಗ ಎರಡು ಪುಟ್ಟ ಮಕ್ಕಳು :) ನನ್ನ ಮುದ್ದಿನ ಮಾನಸ ಮರಿಗೆ ಮೊದಲ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ವಂದನಾರ್ಪಣೆ :

ನನ್ನೊಳಗೆ ಸಾಹಿತ್ಯಾಸಕ್ತಿ ಬೆಳೆಸಿ, ಅದರ ಪ್ರತಿ ಒಲವನ್ನು ತುಂಬಿ, ಎಲ್ಲೋ ಅಡಗಿದ್ದ ಪ್ರತಿಭೆಗೆ ನೀರೆರೆದು ಪೋಷಿಸಿ, ನನ್ನ ಬೆಳವಣಿಗೆಗೆ ಮೂಲ ಕಾರಣಕರ್ತರಾದ ನನ್ನ ಹೆತ್ತವರಿಗೆ ಅನಂತಾನಂತ ನಮನಗಳು. ಮಾನಸದ ಹುಟ್ಟಿಗೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಕಾರಣಕರ್ತರಾದ ನನ್ನ ಮಗಳು ಹಾಗೂ ನನ್ನವರಿಗೆ ತುಂಬು ಹೃದಯದ ಕೃತಜ್ಞತೆಗಳು. ಅವರ ಹಾಗೂ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಪ್ರೋತ್ಸಾಹ, ಮೆಚ್ಚಿಗೆ ಭರಿತ ಪ್ರತಿಕ್ರಿಯೆಗಳಿಂದಲೇ ಸ್ಫೂರ್ತಿ ಪಡೆದು "ಪ್ರತಿಬಿಂಬ" ಹಾಗೂ "ಕಾಣ್ಕೆ"ಯ ಪ್ರಕಟನೆ ಮಾಡಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರಿಗೆ ಚಿರಋಣಿ. ಹಾಗೇ ಬ್ಲಾಗ್ ಲೋಕದ ಪ್ರತಿ ನನ್ನ ಕಣ್ತೆರೆದ, ನನ್ನ ಬರಹಗಳಿಗೆ ಸರಿಯಾದ ಸ್ಥಾನ ಕಲ್ಪಿಸಲು ಪರೋಕ್ಷವಾಗಿ ಕಾರಣವಾದ "ನೆನಪು ಕನಸುಗಳ ನಡುವೆ" ಬ್ಲಾಗಿಗೂ, ಅದರೊಡತಿ ಶಾಂತಲಾ ಅವರಿಗೂ ಎದೆಯಾಳದ ಧನ್ಯವಾದಗಳು.

ಅಕ್ಕಾ ಎಂದು ಗೌರವಾದರಗಳ ಜೊತೆಗೆ ಬೆಚ್ಚನೆಯ ಪ್ರೀತಿ ನೀಡಿದ ಎಲ್ಲಾ ಸಹೋದರ/ಸಹೋದರಿಯರಿಗೆ, ಪ್ರಿಯ ತೇಜು ಎಂದು ಜೊತೆಯಾಗಿ ಹಿತವಾದ ಎಲ್ಲಾ ಸ್ನೇಹಿತೆ/ಸ್ನೇಹಿತರಿಗೆ, ನಿನ್ನೊಂದಿಗೆ ನಾವಿದ್ದೇವೆ ಹೀಗೇ ಬರೆಯುತ್ತಿರು, ಒಳಿತಾಗಲಿ ಎಂದು ಬೆನ್ನು ತಟ್ಟಿ, ಆಶೀರ್ವಾದಿಸಿದ ಹಿರಿಯರಿಗೆ, ಮಾನಸವನ್ನೋದಿದ ಎಲ್ಲರಿಗೂ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು.

ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹ ಹೀಗೇ ಸದಾ ನನ್ನೊಂದಿಗಿರಲಿ. ಮೆಚ್ಚುಗೆ ಕೊಡದಿದ್ದರೂ ಸರಿ.. ಆದರೆ ತಪ್ಪಿದ್ದಲ್ಲಿ ದಯವಿಟ್ಟು ತಿದ್ದಿ, ನನ್ನ ಬರಹಗಳ ಬೆಳವಣಿಗೆಗೆ ಅವಕಾಶವನ್ನು ನೀಡುತ್ತಿರಿ ಎಂದೇ ವಿನಂತಿಸುವೆ.

ಬೆಲೆಯೇರಿಕೆಯ ಸಮಯದಲ್ಲೇ ಸಂಕ್ರಾತಿ ಹಬ್ಬವೂ ಬಂದಿದೆ. ಆದರೆ ಮನಸಿನಲ್ಲಿ ಆತ್ಮೀಯರ ಒಲವು, ಸ್ನೇಹ ತುಂಬಿಕೊಂಡು ಪರಸ್ಪರ ಎಳ್ಳು, ಬೆಲ್ಲವನ್ನಾದರೂ ಹಂಚಿ ಶುಭಾಶಯಗಳನ್ನು ಹೇಳಲು, ಸಂತೋಷವನ್ನು ತುಂಬಿಕೊಳ್ಳಲು ಬೆಲೆಯೇರಿಕೆಯ ಹಂಗಿಲ್ಲ ಅಲ್ಲವೇ?

ಮಾನಸಕ್ಕೆ ತುಂಬಿದ ವರುಷದ ಹರುಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ...ಎಲ್ಲರಿಗೂ...
"ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು"
ಪ್ರೀತ್ಯಾದರಗಳೊಂದಿಗೆ,
-ತೇಜಸ್ವಿನಿ ಮಾನಸ ಹೆಗಡೆ.

ಬುಧವಾರ, ಜನವರಿ 7, 2009

ಅರ್ಪಣೆ

ರಾಮಕೃಷ್ಣರಿಗೊಂದು ನಮನ

ಬಾಳದಾರಿಯಲ್ಲಿ ಸಾಗಿದ್ದೆ ಒಂಟಿಯಾಗಿ
ಕನಸುಗಳ ನನಸಾಗಿಸುವ ಕನಸಹೊತ್ತು,
ಎಡರು-ತೊಡರುಗಳಿಗೆಲ್ಲಾ ಬಿದ್ದರೂ, ಎದ್ದು.
ಮುಂದೆಲ್ಲೋ ತಿರುವನಲಿ ಬೆಳಕಿನ ಕಿಂಡಿಯ
ಆಸೆಯನು ಹೊತ್ತು, ಮನಸು ನಲಿವಾಗುತಿತ್ತು.

ಬದುಕಿನ ಪ್ರವಾಹದೊಳಗೆ ಸಿಲುಕಿ, ಬಳಲಿ,
ಮೊರೆಯನಿಡುತ್ತಿದ್ದೆ ನಾ ಹಗಲು, ಇರುಳು
ಹಾಯಿದೋಣಿಯನೊಂದ ಕರುಣಿಸು...
ಕಾಣದ ತೀರವ ಸೇರಿಸು ಹೇ ಕೃಷ್ಣ,
ಭವ ಬಂಧನವ ಬಿಡಿಸು ಹೇ ರಾಮ...

ನಿನ್ನ ಒಂದು ಹೊನ್ನ ಕಿರಣದಿಂದ
ಬಾಳು ಸೂರ್ಯನ ಹಗಲಾಯಿತು,
ಹಾಯಿದೋಣಿಯ ಜೊತೆಗೆ,
ಅಂಬಿಗನ ಬರುವಾಯಿತು.
ಕನಸುಗಳಿಗೆ ರೂಪ ಸಿಕ್ಕಿ,
ಗುರಿಯೇ ಬದಲಾಯಿತು,
ಒಡೆದ ಕನಸುಗಳೆಲ್ಲಾ ಸೇರೆ,
ಕುಡಿಯ ಜನನವಾಯಿತು.

ಒಂಟಿಯಿಂದ ಜಂಟಿಯಾಗಿ,

ಸಪ್ತಪದಿಯ ತುಳಿದಿಗಿಂದು
ವರುಷ ನಾಲ್ಕು ಕಳೆದರೂ,
ಜನ್ಮಾಂತರದ ಬಂಧವಿದು
ಪ್ರೇಮವೆಂದೂ ಕಳೆಯದು.
ಸೀತೆಗೊಬ್ಬ ರಾಮನಂತೆ,
ರಾಧೆಗೊಲಿದ ಕೃಷ್ಣನಂತೆ,
ನನ್ನೊಳಗೆ ರಾಮಕೃಷ್ಣನು.

ಈ ಸುದಿನದಂದು ನನ್ನ ೫೦ನೆಯ ಪೋಸ್ಟ್ ಆದ "ರಾಮಕೃಷ್ಣರಿಗೊಂದು ನಮನ" ಕವನವನ್ನು ನನ್ನವರಿಗೆ ಅರ್ಪಿಸುತ್ತಿದ್ದೇನೆ.

-ತೇಜಸ್ವಿನಿ ಹೆಗಡೆ