ಶುಕ್ರವಾರ, ಡಿಸೆಂಬರ್ 23, 2011

‘ಇಲ್ಲ’ದೊಳಗಿನ ಇರುವಿಕೆಗೆ...

ಬೇಕಿಲ್ಲ...
ತಿರುಗಿ ನೋಡಬೇಕಾಗಿಲ್ಲ..
ಅಡ್ಡ ತಿಡ್ಡ, ತಿರುವು ಮುರುವು, ಕೊರಕಲು ದಾರಿಯನ್ನು,
ಬತ್ತಿದ, ಒರತೆಯ ಒಸರನ್ನೂ ಕಾಣಿಸದ
ಹಳ್ಳ, ತೊರೆ, ಕೆರೆ, ನದಿ ಕಾಲುವೆಗಳನ್ನು

ಸೋತಿಲ್ಲ...
ಸೋಲಬೇಕಾಗಿಲ್ಲ ಭಾರ ಹೊತ್ತು ಹತ್ತು,
ನೀರು ಕುಡಿದು ದಪ್ಪಗಾದ ಹತ್ತಿಯೂ
ತೂಗಿದರೆ ತೋರಬಲ್ಲದು ಮಣ ಭಾರವನ್ನು
ಹಿಂಜಿ ಹಗುರಾದರೆ ತಲುಪಬಲ್ಲದು ಆಗಸವನ್ನು!

ಕಂಡಿಲ್ಲ...
ಕಾಣಲೇಬೇಕೆಂದಿಲ್ಲ ನಾನು-ನೀನು,
ಎಲ್ಲರನೂ ಕುಣಿಸುತಿಹ ಸೂತ್ರಧಾರನನ್ನು
ಕಂಡರೆ ಸಾಕು ಮಿಡಿವ ಎದೆಬಡಿತದಲಿ,
ಮನದ ತಿಳಿಗೊಳದಲವನ ಪ್ರತಿಬಿಂಬವನು

-ತೇಜಸ್ವಿನಿ ಹೆಗಡೆ

ಸೋಮವಾರ, ಡಿಸೆಂಬರ್ 12, 2011

ಮೊಟ್ಟೆಸಂಪಿಗೆ


Courtesy -http://hindumane.blogspot.com 

ಡೆಬಿಡದೇ ಸುಮಾರು ಎರಡು ತಾಸು ಹುಚ್ಚು ಹಿಡಿದಂತೇ ಸುರಿದ ಜಡಿ ಮಳೆ ಆಗಷ್ಟೇ ನಿಂತಿತ್ತು. ಎಲೆಗಳಿಂದ ಹನಿಯುತ್ತಿದ್ದ ಹನಿಗಳಿಗೆಲ್ಲಾ ಈಗ ಪರ್ವ ಕಾಲ. ಅಂಗಳದ ಮೂಲೆಯಲ್ಲಿ ತುಂಬಿದ್ದ ಮಣ್ಣು-ಕಲ್ಲುಗಳೆಲ್ಲಾ ಮಳೆಯ ಆರ್ಭಟಕ್ಕೆ ಹೆದರಿ ಕೊಚ್ಚಿ ಹೋಗಿ, ಅಂಗಳವನ್ನೆಲ್ಲಾ ಚೊಕ್ಕಾಗಿಸಿದ್ದವು. ಮಟಮಟ ಮಧ್ಯಾಹ್ನವಾಗಿದ್ದರೂ ರವಿ ಕರಿ ಮೋಡಗಳ ಭಯದಿಂದಾಗಿ ಇನ್ನೂ ತನ್ನ ಕಿರಣಗಳ ಕೋಲನ್ನು ಹರಿಸಿರಲೇ ಇಲ್ಲ. ಮಾಡಿನಿಂದ, ಎಲೆಗಳಿಂದ ಉದುರುವ ಮಳೆಹನಿಗಳ ಚಟ ಪಟ ಸದ್ದು, ಮೋಡದೊಳಗಿಂದಿಣುಕಿಯಾಡುವ ತುಂಟ ರವಿ, ತಂಪಾದ ಭುವಿಯು ತನ್ನೊಡಲಿಂದ ಹೊರ ಹಾಕುತ್ತಿದ್ದ ಧಗೆಯ ಕಂಪು- ಯಾವುದೂ ಸಾಧ್ವಿಯ ಮನಸನ್ನು ಅರಳಿಸಲಿಲ್ಲ. ಇಂದು ಅವಳ ಮನಸು ಬಹು ವ್ಯಗ್ರವಾಗಿತ್ತು. ಮನೆಯ ಮೆಟ್ಟಿಲುಗಳನ್ನಿಳಿದು ಮುಂದಿರುವ ತೋಟದ ದಣಪೆಯ ಮುಂದೆ ಬಂದು ಸುಮ್ಮನೇ ನಿಂತಳು. ತಣ್ಣಗೆ ಬೀಸುತ್ತಿದ್ದ ಘಟ್ಟದ ಗಾಳಿ ಮೈ ಮನವನ್ನು ಸೋಕಲು ಗಂಟಿಕ್ಕಿಕೊಂಡಿದ್ದ ಮೊಗವು ತುಸು ಸಡಿಲವಾಯಿತು. ಕ್ರಮೇಣ ಮೂಗಿನ ಹೊಳ್ಳೆಗಳಿಗೆ ಮಣ್ಣಿನ ಕಂಪೂ ಸೋಕಲು ಹಾಗೇ ಕಣ್ಮುಚ್ಚಿ ಒಂದು ಸಲ ಉಸಿರನ್ನು ಜೋರಾಗಿ ಒಳಗೆಳೆದುಕೊಳ್ಳಲು....ಉರಿಯುತಿದ್ದ ಒಡಲೊಳಗೆಲ್ಲಾ ತಂಪಿನ ಸಿಂಚನ. ಹಾಗೇ ಅರಳಿದ್ದ ಹೊಳ್ಳೆಗಳಿಗೆ ಇನ್ನೇನೋ ಹೊಸ ಪರಿಮಳ ಅಡರಲು ಮುಚ್ಚಿದ ಕಣ್ಗಳು ತೆರೆದುಕೊಂಡವು. ಪರಿಮಳದ ಮೂಲ ತುಸು ದೂರದಲ್ಲೇ ಇದ್ದ ಮೊಟ್ಟೆ ಸಂಪಿಗೆಯದಾಗಿತ್ತು. "ಛೇ ಇಂದು ದೇವರಿಗೆ ಹೂ ಕೊಯ್ಯುವಾಗ ಈ ಹೂವನ್ನು ಮರೆತೇ ಹೋದೆನಲ್ಲಾ..."ಎಂದು ತನ್ನನ್ನೇ ಬೈದುಕೊಳ್ಳುತ್ತಾ ಗಿಡದ ಬಳಿ ಬಂದಳು. ತುಸು ಹಳದಿ ಮಿಶ್ರಿತ ಬಿಳಿಬಣ್ಣದ ಹೂವುಗಳನ್ನು ನೋಡುತ್ತಿರುವಂತೇ ಮತ್ತೆ ಆಕೆಯ ಮನಸು ಮುದುಡಿತು.....ಈ ಗಿಡವನ್ನು ನೆಟ್ಟಿದ್ದ ರಾಘವಣ್ಣನನ್ನು ನೆನೆದು....ಗಿಡದೊಳಗಿನ ಮೊಟ್ಟೆಸಂಪಿಗೆಯನ್ನು ತನ್ನ ಸುನಂದಕ್ಕನ ಬಾಳಿಗೆ ಹೋಲಿಸಿಕೊಂಡು.

ನೋಡಲು ಸುಂದರವಾಗಿದ್ದರೂ, ಸಾಮಾನ್ಯ ಸಂಪಿಗೆಯಷ್ಟು ಸುಕೋಮಲವಾಗಿರದೇ, ತುಸು ದಪ್ಪಗಿದ್ದು, ಮೊಟ್ಟೆಯಾಕಾರದಲ್ಲಿ ಕಂಗೊಳಿಸುವ ಈ ಮೊಟ್ಟೆಸಂಪಿಗೆಯ ಕಂಪು ತುಸು ಮತ್ತೇರಿಸುವ ವಾಸನೆಯೆಂದರೂ ತಪ್ಪಲ್ಲ. "ಅದೇನೇ ಸಾಧ್ವಿ.. ಆ ಹೂವು ಅಂದ್ರೆ ನಿಂಗೆ ಅಷ್ಟು ಮೆಚ್ಚು. ಥೂ..ಸಂಪಿಗೆ ಪರಿಮಳದ ಮುಂದೆ ಇದ್ರದ್ದು ಒಂಥರ ವಿಚಿತ್ರ ವಾಸನೆಯಪ್ಪಾ..."ಎಂದು ಗೆಳತಿ ಸ್ನೇಹಳ ಮಾತಿಗೆ ನಗುವುಕ್ಕಿ ಬರುತಿತ್ತು. ಕೈಲಿದ್ದ ಹೂವನ್ನು ಮತ್ತಷ್ಟು ಅವಳ ಮೂಗಿನ ಬಳಿ ಹಿಡಿದಿಡಿದು ಓಡಿಸಿಕೊಂಡು ಹೋಗುತ್ತಿದ್ದಳು ಸಾಧ್ವಿ. "ಸ್ನೇಹ ನಿಂಗೇನು ಗೊತ್ತು ಈ ಹೂವಿನ ಸೌಂದರ್ಯ.....ನೋಡೋಕೆ ಎಷ್ಟು ಚೆನ್ನಾಗಿದೆ... ಎಲ್ಲಾ ಹೂವಿಂದೂ ಒಂದೇ ರೀತಿಯ ಪರಿಮಳ ಇರ್ಬೇಕು ಅಂದ್ರೆ ಹೇಂಗೆ? ವಿವಿಧತೆಯಲ್ಲೇ ಸೌಂದರ್ಯ ಇರೋದು ತಿಳ್ಕೋ"ಎಂದು ಬುದ್ಧಿ ಹೇಳಿ ಅದೇ ಹೂವುಗಳನ್ನೇ ಮತ್ತಷ್ಟು ಕೊಯ್ದು ಮಡಿಲು ತುಂಬಿಕೊಂಡರೆ ಸಾಕು, ಸ್ನೇಹ ಅಲ್ಲಿಂದ ಮಾಯವಾಗಿ ಬಿಡುತ್ತಿದ್ದಳು. ಹಳೆಯ ಸವಿನೆನಪುಗಳಿಂದ ಮತ್ತೆ ಗೆಲುವಾದ ಸಾಧ್ವಿ ಹೂವೊಂದನ್ನು ಕೊಯ್ದು ಹಾಗೇ ತನ್ನ ಕೆನ್ನೆಗೆ ತಾಗಿಸಿಕೊಂಡಳು. ಮನಸು ಮತ್ತೆ ಸುನಂದಕ್ಕಳ ಸುತ್ತಲೇ ಗಿರಕಿ ಹೊಡೆಯತೊಡಗಿತು. ‘ಮನುಷ್ಯನ ಬದುಕೂ ಈ ಮೊಟ್ಟೆಹೂವಿನಂತೆಯೇ ಸರಿ....ನೋಡಲು ದೊಡ್ಡದಾಗಿದ್ದು, ಇತರ ಪುಷ್ಪಗಳಿಗಿಂತ ಗಟ್ಟಿಯಾಗಿದೆಯೆಂದೆನ್ನಿಸುವ ಈ ಹೂವನ ಆಯುಷ್ಯವೂ ಒಂದೇ ದಿನದ್ದು! ಮೊಗ್ಗಾಗಿ ಹುಟ್ಟಿ..ಸಂಪೂರ್ಣ ಅರಳದೇ ಬಾಡಿ, ಉದುರಿ ಮಣ್ಣ ಸೇರುವ, ಪೂರ್ಣವಾಗಿಯೂ ಅಪೂರ್ಣವಾದ ಈ ಹೂವಿನ ಬಾಳಂತೇ ಆಗೋಯ್ತಲ್ಲಾ ತನ್ನ ಸುನಂದಕ್ಕನ ಬದುಕೂ....ಕೇಶವ ಬಾವನೂ ನೋಡಲು ಎಷ್ಟು ಚೆನ್ನಾಗಿದ್ದ....ಕ್ರೀಡಾ ಪಟುವಾಗಿದ್ದ ಆತನ ಕೈರಟ್ಟೆ, ತೊಳ್ಬಲಗಳನ್ನು ಕಂಡು ತಾನೆಷ್ಟು ಸಲ ತಮಾಷೆ ಮಾಡಿದ್ದಿಲ್ಲ ಅಕ್ಕನಲ್ಲಿ....ಮದುವೆಯಾಗಿ ಎರಡು ವರುಷವೂ ತುಂಬಿರಲಿಲ್ಲ. ಪುಟ್ಟ ಶ್ವೇತಳಿಗೆ ತಿಂಗಳಾರು ತುಂಬಿದಾಗಲೇ ಅಲ್ಲವೇ....ಎಲ್ಲರೊಂದಿಗೆ ಮಾತನಾಡುತ್ತಾ ನಗುತ್ತಾ, ನಗಿಸುತ್ತಾ ಕುಳಿತಿದ್ದವ ಏನಾಯಿತೆಂದು ಅರಿವಾಗುವ ಮುಂಚೆಯೇ ಅಲ್ಲಿಯೇ ಹೃದಯಾಘಾತದಿಂದ ಕುಸಿದು ಶಾಶ್ವತವಾಗಿ ಕಣ್ಮುಚ್ಚಿದ್ದ. ಅಲ್ಲಿಂದಲೇ ಅಲ್ಲವೇ ನೋವಿನ ಹೊಸ ಅಧ್ಯಾಯ ಸುನಂದಕ್ಕಳ ಬಾಳಲ್ಲಿ ಶುರುವಾಗಿದ್ದು? ಛೇ... ವಯಸ್ಸಾದರೂ ಎಷ್ಟು ಆಕೆಯದು...ತನಗಿಂತ ೩ ವರುಷಕ್ಕಷ್ಟೇ ದೊಡ್ಡವಳು. ೨೮ಕ್ಕೆಲ್ಲಾ ವೈಧವ್ಯ ಕಾಡಿದ ಆಕೆಯ ಬದುಕನ್ನು ಶಪಿಸಬೇಕೋ...ಇಲ್ಲಾ ಕತ್ತಲೆಯನೋಡಿಸುವ ಬೆಳಗಿನ ಕಿರಣದಂತೇ ದಿನದಿಂದ ದಿನಕ್ಕೆ ಬೆಳಗುವ ಮಗು ಶ್ವೇತಾಳನ್ನು ನೋಡಿ ಸಮಾಧಾನಿಸಬೇಕೋ?’ ಈ ಹೂವಿನಂತೇ ಅರಳುವ ಮುನ್ನವೇ, ಪರಿಮಳ ಎಲ್ಲೆಡೆ ಹರಡುವ ಮೊದಲೇ ಕಮರಿದ ಕೇಶವ ಬಾವ ಹಾಗೂ ಅವರಿಬ್ಬರ ವೈವಾಹಿಕ ಬದುಕಿನ ಅಂತ್ಯ ನೆನೆದು ಮನಸೆಲ್ಲಾ ಒದ್ದೆಯಾದಂತೆನಿಸಿತು ಸಾಧ್ವಿಗೆ. ಸ್ವಂತ ಅಕ್ಕನಲ್ಲದಿದ್ದರೂ, ಸ್ವಂತಕ್ಕಿಂತ ತುಸು ಹೆಚ್ಚೇ ಅನ್ನಿಸುವಂತೆ ಹಚ್ಚಿಕೊಂಡಿದ್ದಕ್ಕೋ ಏನೋ, ಏನೂ ಬಂಧವಿಲ್ಲದೆಯೂ ಹೊಸಬಂಧವನ್ನು ಸಾಧ್ವಿ ಹಾಗೂ ಪಕ್ಕದಮನೆಯ ಸುನಂದಳ ನಡುವೆ ಬೆಸೆದಿತ್ತು. ಹಾಗಾಗಿಯೇ ಸುನಂದಳ ನೋವು, ಸಂಕಟ ಕಂಡಾಗೆಲ್ಲಾ ಒಳಗೊಳಗೆ ಸಾಧ್ವಿಯೂ ಬೇಯುತ್ತಿದ್ದಳು.

-೨-

"ನಿಂಗೆ ಯಾವ ಗಳಿಗೆಯಲ್ಲಿ ಸಾಧ್ವಿಯೆಂದು ಹೆಸರಿಟ್ಟೆವೋ ನಾವು.. ಯಾವಾಗ ನೋಡಿದ್ರೂ ಮರ, ಗಿಡ, ಹೂವು, ಗುಡ್ಡ ಎಂದೆಲ್ಲಾ ಅಲಿತಾನೇ ಇರ್ತೀಯಾ.. ಸ್ವಲ್ಪ ನಿನ್ನ ಕಡೆ, ಮನೆ ಕಡೆ ಲಕ್ಷ್ಯಕೊಡೂದನ್ನು ಕಲ್ತುಕೋ ಮಾರಾಯ್ತಿ.... ಸನ್ಯಾಸಿ ಆಗೋಕೆ ಯೋಚ್ನೆ ಮಾಡ್ಬೇಡ. ಒಬ್ಳೇ ಮಗ್ಳು ನಮ್ಗೆ... ಕನ್ಯಾದಾನದ ಪುಣ್ಯ ಸಿಗ್ಬೇಕು ನೋಡು...ಮದ್ವೆ ವಯಸ್ಸಿಗೆ ಬಂದಿದ್ದೀಯಾ...ಕಡ್ಮೆ ವರ್ಷಾನಾ ನಿಂಗೆ? ನಮ್ಮ್ ಕಾಲ್ದಲ್ಲಿ ೧೮ ತುಂಬೋದ್ರೊಳ್ಗೇ ಮದ್ವೆಯಾಗೋಗ್ತಿತ್ತು. ಅದೇನೋ ನೀನು ಎಮ್ಮೆ ಕಟ್ತೀನಿ ಅಂದು ಕುಣ್ದೆ.. ನಿಮ್ಮಪ್ಪನೂ ಜೊತೆಗೆ ಕುಣ್ದ್ರು....ಈಗ ವಯಸ್ಸು ೨೫ ಆಗ್ತಿದೆ ಅನ್ನೋ ಜ್ಞಾನಾನೂ ಇಲ್ಲಾ ಅವ್ರಿಗೆ.. ಇನ್ನು ನೀನೋ ನಿನ್ನ ವಿಚಾರಗಳೋ... ಅಯ್ಯೋ... ಯಾವಾಗ ನೋಡಿದ್ರೂ ತತ್ವಜ್ಞಾನವನ್ನೇ ಆಡ್ತೀಯಾ... ಆದರ್ಶ ಮಣ್ಣೂ ಮಸಿ ಅಂತೆಲ್ಲಾ ಅದ್ಯಾರು ನಿನ್ನ ತಲೆ ತುಂಬ್ತಾರೋ... ಅಂಥ ಗಂಡು ಸಿಗೋದೇ ಕಷ್ಟ ನೋಡ್ಕೋ... ಆಮೇಲೆ ಮುದ್ಕಿ ಆಗ್ತೀಯಾ ಅಷ್ಟೇ..."ಎಂದೆಲ್ಲಾ ತಾಯಿ ಜಾನಕಮ್ಮಾ ವಟಗುಟುತ್ತಿದ್ದರೆ ಮಗಳು ಸಾಧ್ವಿ ಮಾತ್ರ ನಗುತ್ತಾ ಶಾಂತವಾಗಿ ಉತ್ತರಿಸುತ್ತಿದ್ದಳು. "ಅಮ್ಮಾ... ನೀನ್ಯಾಕೆ ಇಷ್ಟೆಲ್ಲಾ ತಲೆಬಿಸಿ ಮಾಡ್ಕೋತೀಯಾ? ಆಗ್ಬೇಕು ಅಂದಾಗ ಆಗೇ ಅಗುತ್ತೆ ಅಂತ ನೀನೇ ಆವತ್ತು ಹೇಳ್ತಿದ್ದೆ ನೆನ್ಪಿದ್ಯಾ? ಇಷ್ಟಕ್ಕೂ ಮದ್ವೆನೇ ಮುಖ್ಯ ಅಂದ್ಕೊಂಡು, ಅದ್ಕಾಗಿ ತಲೆಕೆಡ್ಸಿಕೊಂಡು, ಯಾರನ್ನಾದ್ರೂ ಒಪ್ಪೋಕೆ ಆಗೊತ್ತಾ? ನಾನು ಮದ್ವೆ ಆದ್ರೆ ಪುರುಷೋತ್ತಮನಂತಹ ಗಂಡನ್ನೇ ಆಗೋದು ನೋಡು.."ಎಂದು ತುಂಟನಗೆ ಬೀರಿದರೆ ಜಾನಕಮ್ಮನ ಬಿ.ಪಿ. ಮತ್ತೂ ಏರುತಿತ್ತು. "ಯಾರೇ ಅದು ಪುರುಷೋತ್ತಮ ನಮ್ಗೇ ಗೊತ್ತಿಲ್ದಿರೋನು?"ಎಂದು ದನಿ ಎತ್ತರಿಸಿದಾಗ ನಗು ಮತ್ತಷ್ಟೂ ಉಕ್ಕುತಿತ್ತು "ನನ್ನ ಪೆದ್ದಮ್ಮಾ... ಪುರುಷೋತ್ತಮ ಅಂದ್ರೆ ಶ್ರೀರಾಮಚಂದ್ರ.... ಸುಮ್ನೇ ಬಿ.ಪಿ. ಜಾಸ್ತಿ ಮಾಡ್ಕೋಬೇಡ. ಅಂಥ ಹುಡ್ಗ ಸಿಕ್ಕಿದ್ರೆ ಹೇಳು ಇಲ್ಲೇ, ಈಗ್ಲೇ ರೈಟ್ ಅಂತೀನಿ" ಎನ್ನುತ್ತಿರುವಾಗಲೇ ಸ್ನೇಹ ಒಳಗೆ ಬಂದಿದ್ದಳು. "ಆಹಾ... ಶ್ರೀರಾಮಚಂದ್ರ ಬೇಕೇನೇ ನಿಂಗೆ? ಅದೇ ಶ್ರೀರಾಮ ತನ್ನ ಪತ್ನಿಯನ್ನು ಯಾರೋ ಅಗಸನ ಮಾತು ಕೇಳಿ ಕಾಡಿಗಟ್ಟಿದಂವ? ಚೆನ್ನಾಗಿದೆ ಕಲ್ಪನೆ.."ಎಂದು ಅವಹೇಳಿಸಿದಾಗ ಮಾತ್ರ ಸಿಟ್ಟು ಉಕ್ಕೇರಿತ್ತು. "ನೋಡು ಸ್ನೇಹ...ಗೊತ್ತಿಲ್ದೇ ಯಾವ್ದನ್ನೂ ಯಾರನ್ನೂ ಕೀಳಾಗಿ ಮಾತಾಡ್ಬಾರ್ದು. ನಿಜ-ಸುಳ್ಳು ಇವೆರಡು ನಮ್ಮಂತಹ ಸಾಮಾನ್ಯರಿಗೆ ನಿಲುಕದ್ದು. ನಮ್ಮ ನಮ್ಮ ಬುದ್ಧಿ ಮಟ್ಟಕ್ಕೆ ಅಂತಹ ಮಹಾನ್ ವ್ಯಕ್ತಿಯನ್ನು ಇಳಿಸಿಕೊಂಡು ತೂಗಿ ನೋಡಿದರೆ ನಾವೇ ಸಣ್ಣವರಾಗ್ತೀವಿ... ಛೇ.. ನಿಂಗ್ಯಾಕೆ ಇದ್ನೆಲ್ಲಾ ಹೇಳ್ತೀನೋ.. ಮಹಾ ನೀನು ನನ್ಮಾತು ಕೇಳೋ ಹಾಂಗೆ.."ಎಂದು ಕಟುವಾಗಿ ನುಡಿದು ಅಲ್ಲಿದೆಂದ್ದು ನಡೆದಿದ್ದಳು. ಇವಳ ಈ ಪರಿಯಾಟ ಕಂಡು ಜಾನಕಮ್ಮಾ ಹಾಗೂ ಸ್ನೇಹ ದಂಗಾಗಿಹೋಗಿದ್ದರು. 

ಸಾಧ್ವಿಯೂ ಹಿಂದೊಮ್ಮೆ ಶ್ರೀರಾಮನ ಪ್ರತಿ ಇದೇ ಭಾವ ತಾಳಿದವಳಾಗಿದ್ದಳು. ಆದರೆ  ಸಕಾಲದಲ್ಲಿ ಅವಳಜ್ಜ ವೆಂಕಟ ಜೋಯಿಸರು ಹೇಳಿದ ಬುದ್ಧಿ ಮಾತುಗಳು ಅವಳ ಕಣ್ತೆರೆಸಿದ್ದಲ್ಲದೇ ಮದುವೆಯಾದರೆ ಉತ್ತಮ ಆದರ್ಶಗಳನ್ನು ಹೊಂದಿದ್ದ, ಏಕ ಪತಿವ್ರತಸ್ಥನಾಗಿಯೇ ಬದುಕಿದ್ದ, ಸೀತಾರಾಮನಂತಹ ಹುಡುಗನನ್ನೇ ಆಗಬೇಕೆಂಬ ಹುಚ್ಚು ಕಲ್ಪನೆ ಅವಳೊಳಗೆ ಬಲವಾಗಿ ಮನೆಮಾಡಿತ್ತು. "ತಂಗೀ.. ಎಲ್ಲಾ ಹೇಳುವುದೇ ನಿಜವಲ್ಲ.... ಶ್ರೀರಾಮ ಸಾಮಾನ್ಯ ಅಗಸನ ಮಾತು ಕೇಳಿ ಹಾಗೆ ಮಾಡಿದ, ಸುಳ್ಳು ಆರೋಪಕ್ಕೆ ಬೆದರಿ ಅಗ್ನಿ ಪರೀಕ್ಷೆ ಒಡ್ಡಿದ ಎಂದು ದೂರುವುದು ಸಲ್ಲ....ಆತ ನನ್ನ ನಿನ್ನಂತೆ ಸಾಮಾನ್ಯನಲ್ಲ. ಮಹಾರಾಜನಾಗಿದ್ದ. ರಾಜನಾದವನಿಗೂ ಸಾಮಾನ್ಯ ಪ್ರಜೆಗೂ ವ್ಯತ್ಯಾಸವಿದೆ. ಮಹಾರಾಜನಿಗೆ ಅವನದೇ ಆದ ಇತಿ-ಮಿತಿ, ಕಟ್ಟಳೆ ಇರುತ್ತದೆ. ತನ್ನ ಪ್ರಜೆಗಳನ್ನೆಲ್ಲಾ ತನ್ನವರಂತೇ, ಮಕ್ಕಳಂತೇ ಸಲಹಿ, ಅವರ ಮನಸನ್ನೂ ಅರಿತು ರಾಜ್ಯಭಾರ ನಡೆಸಬೇಕಾಗುತ್ತದೆ. ರಾಮಾಯಣದಲ್ಲಿ ಎಲ್ಲಾ ಪಾತ್ರವೂ ಪೂರ್ವ ನಿರ್ಧಾರಿತ. ಏನೇ ಆದರೂ ಏನೇ ಬಂದರೂ ಏಕ ಪತ್ನಿವ್ರತಸ್ಥನಾಗಿರುವೆ ಎಂದು ಶಪಥಗೈದು ಅಂತೆಯೇ ಬಾಳಿ ಬದುಕಿದ ರಾಮನ ಅವತಾರ, ಉದ್ದೇಶ ನಮ್ಮಂತಹ ಸಾಮಾನ್ಯರ ಅರಿವನ್ನೂ ಮೀರಿದ್ದು. ಆ ದಾರಿ ಬಲು ಕಠಿಣ. ನಮ್ಮಿಂದ ಸಾಗಲಾಗದ್ದು. ಹಾಗಾಗಿಯೇ ಆತ ಪುರುಷೋತ್ತಮ...ಇದೆಲ್ಲಾ ಇಂದು ತಮ್ಮ ಸ್ವಾರ್ಥಕ್ಕಾಗಿಯೇ ಆಳ್ವಿಕೆ ಮಾಡುವ ಕೆಟ್ಟ ರಾಜಕೀಯಕ್ಕೆ, ರಾಜಕಾರಣಿಗಳಿಗೆ ಅರ್ಥವಾಗೊಲ್ಲ...ಅವ್ರೇನು ಮಾಡಿದ್ರು ಅದು ಅವ್ರಿಗಾಗಿ, ಅವ್ರ ಮನೆಯವ್ರಿಗಾಗಿ ಮಾತ್ರ....." ಎಂದೆಲ್ಲಾ ಸೋದಾಹರಣವಾಗಿ ಮನಮುಟ್ಟುವಂತೆ ಉಪದೇಶಿಸಿದ ಅಜ್ಜನ ಮಾತುಗಳು ಅವಳ ಮನದೊಳಗೆ ಘನವಾಗಿ ಮನೆಮಾಡಿದ್ದವು. ಆದರೆ ತನ್ನ ಮದುವೆಯ ಕುರಿತಾಗಿ ಕಲ್ಪನೆಕಾಣುವ ಹೊತ್ತಿನಲ್ಲೇ ಪ್ರೀತಿಯ ಸುನಂದಕ್ಕನ ಸಂಸಾರ ಪತನಗೊಂಡಿದ್ದು ನೋಡಿ ಆಘಾತಕ್ಕೊಳಗಾಗಿದ್ದಳು. ನೋವಿನ ಮೇಲೆ ನೋವೆಂಬಂತೆ ತನ್ನ ದೊಡ್ಡಪ್ಪನ ಮಗ, ಆತ್ಮೀಯ ರಾಘವಣ್ಣನ ಸಂಸಾರವೂ ಸುನಂದಕ್ಕನ ಬದುಕಂತೇ ಆದಾಗ ಮತ್ತೂ ಕುಸಿದು ಹೋಗಿದ್ದಳು ಸಾಧ್ವಿ. ಮದುವೆ ಎಂದರೇ ನೋವೇ? ಹೊಸ ಬಂಧ ಬೆಸೆದರೆ, ಸುಖದ ಜೊತೆ ಅಗಲುವಿಕೆಯ ಹೊಸ ನೋವು ಜೊತೆಗೇ ಬೆಸೆಯುತ್ತದೆಯೇ? ಆ ಸುಖವೂ ಬೇಡ... ಆಮೇಲೆ ಸಿಗುವ ನೋವೂ ಬೇಡ... ಒಟ್ಟಿನಲ್ಲಿ ಮದುವೇ ಬೇಡ..ಎಂಬ ನಿರ್ಲಿಪ್ತತೆಯೆಡೆ ಅವಳ ಮನ ವಾಲುತಿತ್ತು. 

ರಾಘವಣ್ಣ ಹಾಗೂ ಜ್ಯೋತಿಯತ್ತಿಗೆಯ ಬದುಕೂ ಎಷ್ಟು ಸುಂದರವಾಗಿತ್ತಲ್ಲಾ...ಮಗ ವಸಿಷ್ಠನಿಗೆ ನಾಲ್ಕಾಗಿತ್ತೋ ಇಲ್ಲವೋ..ರಿಕ್ಷಾದಲ್ಲಿ ಹೋಗುತ್ತಿದ್ದ ಜ್ಯೋತಿಯತ್ತಿಗೆಯೆಡೆ ಮರಣ ವೇಗವಾಗಿ ಮುನ್ನುಗಿದ ಲಾರಿಯೊಂದರಮೂಲಕ ಬಡಿದಪ್ಪಳಿಸಿತ್ತಲ್ಲಾ.... ಮೂರು ನಿಮಿಷದಲ್ಲಿ ವಸಿಷ್ಠ ತಬ್ಬಲಿಯಾದ....ರಾಘವಣ್ಣನ ಕಣ್ಣಲ್ಲಿ ಅನಾಥ ಕಳೆ. ತನ್ನ ಪ್ರೀತಿ ಪಾತ್ರರಿಬ್ಬರ ಬದುಕೂ ದುರ್ವಿಧಿಗೆ ಬಲಿಯಾದದ್ದು ನೋಡಿ ಒಂದು ರೀತಿಯ ನಿರ್ಲಿಪ್ತತೆ, ನಿರುತ್ಸಾಹ ತುಂಬಿತ್ತು ಸಾಧ್ವಿಯಲ್ಲಿ.  ಸಮಾಜ, ಅದರೊಳಗಿನ ಕೆಲವು ಜನರ ಮಾತು, ವರ್ತನೆಗಳು ಮಾತ್ರ ಅವಳಿಗೆ ದೊಡ್ಡ ಪ್ರಶ್ನೆಯಾಗಿತ್ತು. ಅಲ್ಪಜ್ಞರ ಮಾತುಗಳು ಅವಳನ್ನು ಮತ್ತಷ್ಟು ಹಿಂಸಿಸುತ್ತಿದ್ದವು. 

-೩-

ಇಂದು ಅವಳ ಮನೆಯಲ್ಲಿ ಸತ್ಯನಾರಾಣ ಪೂಜೆ. ಎರಡಂಕಣದ ಮನೆಯ ಮೂಲೆ ಮೂಲೆಯನ್ನೂ ನೆಂಟರಿಷ್ಟರು, ಆಪ್ತೇಷ್ಟರು ತುಂಬಿದ್ದಾರೆ. ಜನವಿದ್ದಲ್ಲಿ ಮಾತುಗಳಿಗೇನು ಬರ? ಪುಟ್ಟ ಊರಾಗಿದ್ದರಿಂದ ಸುದ್ದಿ ದೂರದ್ದಾಗಿರದೇ ಹತ್ತಿರದೊಳಗೇ ಸುಳಿಯುವುದು ಸಹಜ. ಅಂತೆಯೇ ಸುನಂದ ಹಾಗೂ ರಾಘವನ ಬದುಕಿನ ಸುತ್ತವೇ ಸುತ್ತತೊಡಗಿತು.
"ಪಾಪ.. ಸುನಂದ... ಅವ್ಳಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಹೀಗಾಗ್ಬಾರ್ದಿತ್ತು.. ಪುಟ್ಟ ಮಗುವಿನ ಜವಾಬ್ದಾರಿ ಬೇರೆ.. ಅದ್ರಲ್ಲೂ ಹೆಣ್ಮಗು. ನಾಳೆ ಅಪ್ಪ ಇಲ್ಲದ ಹೆಣ್ಮಗುವಿನ ಓದು, ಮದ್ವೆ ಎಲ್ಲಾ ಹೇಗೆ ಮಾಡ್ತಾಳೋ..ಪ್ಚ್...ಪಾಪ.."ಎಂದು ಮೂಲೆ ಮನೆ ಸಾವಿತ್ರಿ ಬಾಯೆಳೆದರೆ..
"ಹೌದೇ ಸಾವಿತ್ರಿ.. ನಿಜ.. ಹೀಗಾಗ್ಬಾರ್ದಿತ್ತು....ಆದ್ರೆ ಅವ್ಳ ನೋಡಿದ್ರೆ ದುಃಖ ಇದ್ದ ಹಾಗೇ ಕಾಣ್ಸೊಲ್ಲ ನೋಡು.... ಮಗ್ಳ ಜೊತೆ ನಗ್ತಾ ಆಡ್ತಾ ಇರ್ತಾಳಪ್ಪಾ... ಯಾರಿಗೊತ್ತು ಯಾರ ಮನ್ಸು ಹೇಂಗೆ ಎಂದು..?"ಎಂದು ಮೊದಲ ಬಾಣ ಬಿಟ್ಟಳು ಸುಶೀಲೆ.
"ಹ್ಂ...ಸರಿಯಾಗಂದೆ ನೋಡು ಸುಶೀಲಾ.... ಇನ್ನೂ ಬಳೆಗಳನ್ನ, ಹೂವನ್ನ ತೆಗೀಲಿಲ್ಲ....ಎಲ್ರ ಹಾಗೇ ಹೋಗಿ ಬಂದು ಮಾಡ್ತಾ ಇರ್ತಾಳೆ... ಯಾರೋ ಹೇಳ್ತಿದ್ರಪ್ಪಾ ಅವ್ಳಿಗೆ ಇನ್ನೊಂದು ಮದ್ವೆ ಮಾಡೋ ಯೋಚ್ನೆ ಇದೆಯಂತೆ... ಎಂಥಾ ಹುಚ್ಚು ಯೋಚ್ನೆ ಅಂತೀನಿ.. ಹೆಣ್ಮಗು ಇರೋ ಅವ್ಳನ್ನ ಯಾರು ಮದ್ವೆ ಆಗ್ತಾರೆ? ಅಲ್ಲಾ..ಇವ್ಳಿಗಾದ್ರೂ ಯೋಚ್ನೆ ಬೇಡ್ವಾ? ಗಂಡನ ಸಾವಿಂದ ಬುದ್ಧಿ ಕಲ್ತಾದ್ರೂ ಇನ್ನು ದೇವ್ರ ಧ್ಯಾನ ಮಾಡ್ತಾ ಮಗ್ಳ ಜೊತೆ ಇರೋಕಾಗೊಲ್ವಾ? ಅದೇನು ಹುಚ್ಚು ಆಸೆಯಪ್ಪಾ?" ಎಂದು ಮತ್ತೊಬ್ಬಳ ಬಾಣ ಹೊರಬಿತ್ತು. ಬಿಲ್ಲಿನ ಸಹಾಯವಿಲ್ಲದೇ ಸರಾಗವಾಗಿ ತಮ್ಮ ತಮ್ಮ ಮನಸಿನ ಬತ್ತಳಿಕೆಯಿಂದ ಅವ್ಯಾಹತವಾಗಿ ಬಿಡುತ್ತಿದ್ದ ವಾಗ್ಬಾಣಗಳು ಅಲ್ಲೇ ದೂರ್‍ರದಲ್ಲಿ ಕುಳಿತಿದ್ದ ಸಾಧ್ವಿಯ ಮನಸ್ಸನ್ನು ಘಾಸಿಗೊಳಿಸಿದವು. ‘ಛೇ...ಎಂತಹ ಕೀಳು ಜನರಪ್ಪಾ ಇವ್ರೆಲ್ಲಾ? ಇವ್ರನ್ನೆಲ್ಲಾ ಯಾಕೆ ಅಮ್ಮಾ ಪೂಜೆಗೆ ಕರೆದ್ಲೋ? ಇವ್ರಿಗೇನು ಗೊತ್ತು ಸುನಂದಕ್ಕನ ಸಂಕಷ್ಟ. ತಾನು ಹೋದಾಗಲೆಲ್ಲಾ ಮೇಲಿನ ತನ್ನ ಕೋಣೆಗೆ ಕರೆದೊಯ್ದು ಮನಸೋ ಇಚ್ಛೆ ಅತ್ತು, ತೋಡಿಕೊಂಡು ಹಗುರಾಗಿ, ಮತ್ತೆ ಕೆಳಗಿಳಿದು ಮಗಳ ಜೊತೆ ಮಗುವಾಗಿ ನಗುವ ಅಕ್ಕನ ಮನೋಧೈರ್ಯದ ಮುಂದೆ ಎಷ್ಟು ಅಲ್ಪರಪ್ಪಾ ಇವರೆಲ್ಲಾ? ಹೂವು, ಬಳೆ, ಕುಂಕುಮ ನಾವು ಹುಟ್ಟಿದಾಗಲೇ ನಮ್ಮೊಂದಿಗೆ ಬಂದ ಬಳುವಳಿಗಳು.....ನಮ್ಮ ಸಂಸ್ಕ್ರ್‍ಋತಿ ನಮಗಿತ್ತ ವರ. ಕಾಲುಂಗುರ, ಕರಿಮಣಿ ಮಾತ್ರ ಮದುವೆಯಾನಂತರದ್ದು. ಹಾಗಿದ್ದರೂ ಪತಿಯ ಪ್ರೀತಿಯ, ಸವಿ ನೆನಪಿನ ದ್ಯೋತಕವಾಗಿ, ಸಮಾಜದೊಳಗೆ ಬದುಕಲು ಬೇಕಾದ ಭದ್ರತೆಗಾಗಿ ಕರಿಮಣಿ, ಕಾಲುಂಗರ ತೆಗೆಯದಿರುವುದೂ ಇವರಿಗೆಲ್ಲಾ ಒಂದು ಕುಹಕವೇ? ಹೋದವರ ಸವಿನೆನಪು ಮುಂದಿನ ಬಾಳಿಗೆ ಬೆಳಕಾಗಬೇಕು... ಅದು ಬಿಟ್ಟು ಅವರೊಂದಿಗೆ ನಮ್ಮ ವರ್ತಮಾನವನ್ನೂ ಸುಡುವುದು ಎಷ್ಟು ಸರಿ? ಬಳೆ, ಹೂವು ಇವೆಲ್ಲಾ ಇದ್ದರೆ ಆಕೆ ಪತಿವ್ರತೆಯಲ್ಲವೇ? ಹಾಗಿದ್ದರೆ ಅದನ್ನಳೆಯುವ ಮಾನದಂಡವೇನು? ಇಂಥವರಿಗೆಲ್ಲಾ ಬದುಕು ಇನ್ನೂ ಕಹಿ ಪಾಠ ಕಲಿಸಿಲ್ಲವೇ? ಇನ್ನೊಂದು ಮದ್ವೆ..ಹ್ಂ... ಅದ್ರ ಬಗ್ಗೆಯೇ ಯೋಚಿಸಿಲ್ಲ ಅಕ್ಕ.... ಆದ್ರೂ ಒಂದೊಮ್ಮೆ ಆಗೋದಾದ್ರೆ ಅದ್ರಲ್ಲೇನು ತಪ್ಪು? ಹೆಣ್ಮಗುವಂತೆ, ಅದ್ರ ಭವಿಷ್ಯವಂತೆ....ಯಾರ ಭವಿಷ್ಯ ಯಾರ ಕೈಲಿದೆ? ಈಗ ಅಕ್ಕನ ಭವಿಷ್ಯ ಹೀಗಾಗೊತ್ತೆ ಅಂತ ಯಾರಿಗೆ ಗೊತ್ತಿತ್ತು? ಮರು ಮದುವೆಯಿಂದ ಅವರಿಬ್ಬರ ಭವಿಷ್ಯತ್ತು ಸರಿಯಾಗಬಾರದೆಂದಿದೆಯೇ? ಇವರನ್ನೆಲ್ಲಾ ವಿಚಾರಿಸಿಕೊಳ್ಳಲೇ ಬೇಕು.."ಎಂದು ಎಣಿಸಿದವಳೇ ಜಾಗದಿಂದೆದ್ದು ಬರಲು ಅವರ ಮಾತು ರಾಘವನ ಕಡೆ ಹೊರಳಿದ್ದು ಕಂಡು ಅಲ್ಲೇ ಸುಮ್ಮನೆ ಕುಳಿತಳು ಕುತೂಹಲದಿಂದ.
"ಅಲ್ವೇ ಸುಶೀಲ... ಪಾಪ ರಾಘವ ಅವ್ನ ಬದ್ಕೂ ಮೂರಾಬಟ್ಟೆ ಆಗೋಯ್ತಲ್ಲಾ.... ಛೇ... ಈಗಿನ್ನೂ ಮದ್ವೆ ಆಗೋ ವಯಸ್ಸು ಅವಂದು..ಅದ್ರ ಮೇಲೆ ಪುಟ್ಟ ಹುಡ್ಗನನ್ನು ನೋಡ್ಕೋ ಬೇಕು... ಹೊರಗೆ ಒಳ್ಗೆ ದುಡ್ದು ಹೇಗೆ ಸಂಭಾಳಿಸಿಯಾನು? ಪ್ಚ್... ತುಂಬಾ ಬೇಜರಾಪ್ಪಾ.."ಎಂದಿದ್ದೇ ತಡ ಸಾವಿತ್ರಮ್ಮನ ಮುಖದಲ್ಲಿ ಹುರುಪು ಮೂಡಿತ್ತು.

"ಹೌದೇ.. ನೀನಂದಿದ್ದು ನಿಜ...ರಾಜ್ಕುಮಾರನಂತಿದ್ದಾನೆ ನಮ್ಮ ರಾಘು...ಹೂಂ ಅಂದ್ರೆ ಯಾರೂ ಹೆಣ್ಣು ಕೊಟ್ಟಾರು. ಅಷ್ಟು ಆಸ್ತಿಯಿದೆ... ಮೇಲಾಗಿ ನೌಕರಿಯಿದೆ. ಯಾವ್ದಕ್ಕೂ ಅಂವ ಒಪ್ಪಬೇಕಲ್ಲಾ.." ಯಾವುದೋ ಯೋಚನೆ ಅವಳ ಮನದಲ್ಲಿ ಈಗಾಗಲೇ ಮೂಡಿದ್ದು ಅದರ ಸಾಕಾರಕ್ಕಾಗಿ ಸಂಚು ನಡೆಸುವಂತಿತ್ತು ಅವಳ ಮಾತು.

"ಸಾವಿತ್ರಿ... ಹೂಂ ಅನ್ನದೇ ಏನು? ಅವನಿಗೂ ಆಸೆ, ಆಕಾಂಕ್ಷೆ ಇರೊಲ್ವಾ? ನಾವೇ ಮುಂದಾಗ್ಬೇಕಪ್ಪಾ... ಒಳ್ಳೇ ಸ್ವಭಾವ. ತುಂಬಾ ಮ್ರ್‍ಋದು ಬೇರೆ... ಹುಡ್ಗಿ ಹುಡ್ಕಿದ್ರೆ ಇನ್ನೊಂದು ತಿಂಗ್ಳಲ್ಲೇ ಖಾಯಂ ಆಗೊತ್ತೆ.... ಅವ್ನೂ ಹೂಂ ಅಂದಿದ್ದಾನೆ ಅಂತ ಅವ್ನ ಚಿಕ್ಕಮ್ಮ ಹೇಳ್ತಿದ್ಲಪ್ಪ... ನೋಡೋಣ... ಯಾವ್ದಕ್ಕೂ ಒಂದು ಕಣ್ಣಿಟ್ಟಿದ್ರೆ ಆಯ್ತು.." ಎಂದಿದ್ದೇ ತಡ ಇನ್ನು ತನಗಲ್ಲಿ ಇರಲಾಗದೆಂಬಷ್ಟು ಹೇಸಿಗೆಯ ಭಾವ ಮೂಡಲು ಹೊರಗೋಡಿ ಬಂದಿದ್ದಳು ಸಾಧ್ವಿ. ಅಶಾಂತವಾಗಿದ್ದ ಅವಳ ಮನಸ್ಸನ್ನು ಪ್ರಕೃತಿಯ ಸಹಜ ಸೌಂದರ್ಯ, ಹಾಗೂ ಅವಳಿಷ್ಟದ ಹೂವಿನ ಸೊಬಗು, ಪರಿಮಳ ತಕ್ಕ ಮಟ್ಟಿಗೆ  ಶಾಂತಗೊಳಿಸಿದ್ದವು. ಕೈ ಹೂವಿನ ಮೇಲ್ಮೈಯನ್ನು ಸವರುತ್ತಿದ್ದರೂ ಮನಸು ಮಾತ್ರ ರಾಘವಣ್ಣನ ನಿಲುವಿನ ಬಗ್ಗೇ ಯೋಚಿಸುತಿತ್ತು. ‘ತನ್ನ ರಾಘವಣ್ಣ ಇಷ್ಟು ಬೇಗ ಮರು ಮದುವೆಗೆ ಒಪ್ಪಿದನೇ? ಛೇ... ಇದು ಸುಳ್ಳಾಗಿರಬಹುದು... ಮದುವೆ ಆಗ ಬಾರದೆಂದಲ್ಲಾ.... ಆದರೆ ಅತ್ತಿಗೆ ಹೋಗಿ ಇನ್ನೂ ಮೂರು ತಿಂಗಳಾಗಿಲ್ಲ!’ ಎಲ್ಲೋ ಏನೋ ಅಪಶ್ರುತಿ.....ಜ್ಯೋತಿಯತ್ತಿಗೆಯ ನಗುಮುಖವೇ ಸುಳಿಯಲು ಹಾಗೇ ಕಣ್ಮುಚ್ಚಿದಳು.

-೪-

ಅಪ್ಪ ಅಮ್ಮನಿಗೆ ಏಕಮಾತ್ರ ಸಂತಾನವಾಗಿದ್ದ ಸಾಧ್ವಿಗೆ ದೊಡ್ಡಪ್ಪನ ಮಗ ರಾಘವನೇ ಅಣ್ಣ, ಗುರು, ಫಿಲಾಸಫರ್ ಎಲ್ಲಾ. ಗುಡ್ಡದ ಮೇಲಿನ ಪೇರಲೆ ಮರ ಹಣ್ಣು ಬಿಟ್ಟಾಗಲೆಲ್ಲಾ ಅವನ ಕೈ ಹಿಡಿದೆಳೆದು ಮರ ಹತ್ತಿಸಿ ತನ್ನ ಅಂಗಿಯನ್ನೇ ಬುಟ್ಟಿಯಾಗಿಸಿ ಹಣ್ಣುಗಳನ್ನೆಲ್ಲಾ ತುಂಬಿ ಕೊಂಡು ಒಂದೇ ಒಂದನ್ನು ಅವನಿಗೆ ಕೊಟ್ಟು ಮಿಕ್ಕದ್ದನ್ನೆಲ್ಲಾ ತನ್ನ ಪ್ರೀತಿಯ ಗೆಳತಿ ಶಾರದೆಯ ಜೊತೆ ಹಂಚಿಕೊಂಡು ತಿನ್ನುವುದೆಂದರೆ ಅತ್ಯಂತ ಇಷ್ಟದ ಕೆಲಸ ಸಾಧ್ವಿಗೆ. "ಶಾರಿ"...ಅವಳು ಅಪ್ಪ, ಅಮ್ಮ ಎಂದು ಕರೆಯುವಷ್ಟೇ ಪ್ರೀತಿಯಿಂದ ಕರೆಯುವ ಹೆಸರು. ಅದಕ್ಕೆ ಕಾರಣ ನೋವಿನಲ್ಲೂ ಸದಾ ನಗುವ ಅವಳ ಹಸನ್ಮುಖ, ಬೆಳಗುವ ಕಣ್ಗಳು. ಹುಟ್ಟಿದ ವರುಷದೊಳಗೇ ಪೋಲಿಯೋಗೆ ಬಲಿಯಾಗಿ, ತನ್ನ ಎಡಗಾಲಿನ ಶಕ್ತಿಯನ್ನಷ್ಟೂ ಕಳೆದುಕೊಂಡಿದ್ದರೂ ಕೈಗಳಿಗೆ ಕ್ಲಚ್ಚಸ್‌ಗಳನ್ನಿಟ್ಟುಕೊಂಡೇ ಸ್ಕೂಲು, ಕಾಲೇಜುಗಳನ್ನು ಮುಗಿಸಿದ್ದಲ್ಲದೇ, ಉತ್ತಮ ಅಂಕಗಳನ್ನೂ ಪಡೆದು, ಅರ್ಹತೆಯಾಧಾರದಿಂದಲೇ ಬ್ಯಾಂಕಿನಲ್ಲಿ ಉದ್ಯೋಗ ಪಡೆದ, ಸ್ವಾವಲಂಬನೆಯ ಬದುಕಿಗೆ ಮಾದರಿಯಾದ, ಅವಳ ಸ್ವಾಭಿಮಾನ, ಛಲ, ಆತ್ಮವಿಶ್ವಾಸವೆಲ್ಲವೂ ಸಾಧ್ವಿಗೆ ಬಲು ಅಚ್ಚುಮೆಚ್ಚು. ಸ್ನೇಹಳ ಬಂಧ ಶಾಲೆಯಿಂದ ಶುರುವಾದದ್ದು....ಅತ್ತ ಇಳಿಯದ ಇತ್ತ ಬೆಳೆಯದ ಗೆಳೆತನ. ಆದರೆ ಶಾರದೆಯ ಸ್ನೇಹ ಪ್ರತಿದಿನ ಅನೂಹ್ಯ, ಅನನ್ಯ. ಎಷ್ಟೋ ಸಲ ರಾಘವಣ್ಣ ಹಾಗೂ ಶಾರಿಯನ್ನು ಜೊತೆಯಾಗಿ ಕಲ್ಪಿಸಿಕೊಂಡು ರೋಮಾಂಚಿತಳಾಗಿದ್ದಳು ಸಾಧ್ವಿ. ಆದರೆ ಅವಳ ಕಲ್ಪನೆಗೆ ರೆಕ್ಕೆ ಮೂಡುವ ಮೊದಲೇ ರಾಘವ ಜ್ಯೋತಿಯನ್ನು ಮೆಚ್ಚಿಯಾಗಿತ್ತು. ಇನ್ನೂ ಎಳತಾಗಿದ್ದ ಕನಸೊಂದು ಬಲಿಯುವ ಮೊದಲೇ ಚಿರುಟಿಹೋಗಿತ್ತು. 
‘ಎಲ್ಲ ಮರೆತಿರುವಾಗ, 
ಇಲ್ಲ ಸಲ್ಲದ ನೆವವ 
ಹೂಡಿ ಬರದಿರು ಮತ್ತೆ 
ಹಳೆಯ ನೆನಪೇ... ’-ವ್ಹಾ....ಎಷ್ಟೊಂದು ಚೆನ್ನಾಗಿದೆ ನಿಸಾರ್ ಅವರ ಈ ಕವಿತೆ. ಈಗಿನ ತನ್ನ ಮನಃಸ್ಥಿತಿಯೂ ಹೀಗಾಗಿದೆ ಎಂದೆನಿಸುತ್ತಿದೆ... ಛೇ... ಬೇಡ ಬೇಡವೆಂದರೂ ಹಳೆಯ ಸಿಹಿ-ಕಹಿ ನೆನಪುಗಳು ಇಂದೇಕೆ ಇಷ್ಟು ಧಾಳಿಯಿಡುತ್ತಿವೆಯೋ ಎಂದು ಮಿಸುಕಾಡಿದಳು ಸಾಧ್ವಿ. ಅವಳ ಮನಸು ಮತ್ತೆ ಮತ್ತೆ ಹಿಂದೆ ಓಡುತಿತ್ತು....

"ರಾಘವಣ್ಣ... ಸ್ವಾಂತಂತ್ರ್ಯ ಅಂದ್ರೆ ಏನೋ? ನಮ್ಮಲ್ಲಿ ಕೆಲವ್ರು ‘ಇಂಗ್ಲೀಷರ ಕಾಲವೇ ಚೆನ್ನಾಗಿತ್ತು.. ಈಗ ಎಲ್ಲವುದಕ್ಕೂ ಕಟ್ಟು ಪಾಡು.... ಪಬ್ಬಿಗೆ ಹೋಗ್ಬೇಡ.... ಲವ್ ಮಾಡ್ಬೇಡ....ಜಾತಿ ಬಿಡ್ಬೇಡ...ಎಂದೆಲ್ಲಾ ಗಲಾಟೆ ಮಾಡೋ ಈ ಸ್ವಾತಂತ್ರ್ಯ ಬೇಕಾಗಿರ್ಲಿಲ್ಲ...’ಎಂದೆಲ್ಲಾ ಕೂಗಾಡ್ತಾ ಇರ್ತಾರೆ... ನಂಗೂ ಈ ಪಬ್ಬು ಮಣ್ಣು ಮಸಿ ಎಲ್ಲಾ ಸರಿ ಬರೊಲ್ಲಾ...ಅದ್ರೂ ನಾವ್ಯಾಕೆ ಇನ್ನೊಬ್ರಿಗೆ ಹೀಂಗ್ ಮಾಡು ಹಾಂಗ್ ಮಾಡ್ಬೇಡ ಅನ್ಬೇಕು?" ಎಂದೊಮ್ಮೆ ಕೇಳಿದ್ದಾಗ ಅದೆಷ್ಟು ಚೆನ್ನಾಗಿ ವಿವರಿಸಿದ್ದ ರಾಘವಣ್ಣ. "ತಂಗಿ...ನೀನಿವಿತ್ತು ಈ ಪ್ರಶ್ನೆ ಕೇಳೋ ಸ್ವಾತಂತ್ರ್ಯ ಕೊಟ್ಟಿರುವುದೇ ನಮಗೆ ದೊರಕಿದ ಸ್ವಾತಂತ್ರ್ಯ. ಇನ್ನು ಹಾಗೆಲ್ಲಾ ಕೂಗಾಡ್ತಾರೆ ನೋಡು ಅವರಿಗೆ ದಾಸ್ಯದ ಅನುಭೂತಿಯಾಗಿರದಿರುವುದೇ ಕಾರಣ. ಆ ಭಗವಂತ ನಮಗೆಲ್ಲಾ ಆ ಕಷ್ಟದ ಅನುಭವ ಕಾಣಿಸಿಲ್ಲ. ಇಂದು ಕೆಲವರು ಸ್ವಾತಂತ್ರ್ಯ ಅಂದರೆ ಏನು? ಅದೆಲ್ಲಾ ಬುರುಡೆ....ಹಿಂದೆಯೇ ಚೆನ್ನಾಗಿತ್ತು.. ಈಗಿಲ್ಲ...... ನಮ್ಮನ್ನು ಎಲ್ಲವುದಕ್ಕೂ ತಡೆದರೆ ಕೇಳೊಲ್ಲ... ಎಂದೆಲ್ಲಾ ಕೂಗ್ತಾರೆ....ಅದೂ ಸಾರ್ವಜನಿಕವಾಗಿ. ಆದ್ರೂ ಯಾರೂ ಅವರನ್ನು ತಡೆಯೊಲ್ಲ....ಹೊಡೆಯೊಲ್ಲ... ಜೈಲಿಗೆ ಹಾಕೊಲ್ಲ. ಆದರೆ ಹಾಗೆ ತಮ್ಮ ಅಭಿಪ್ರಾಯವನ್ನು ಅಭಿವ್ಯಕ್ತ ಗೊಳಿಸಲು ದೊರಕಿರುವುದೇ ಸ್ವಾತಂತ್ರ್ಯ ಎನ್ನುವ ಸಾಮಾನ್ಯ ಅರಿವೂ ಅವರಿಗಿರುವುದಿಲ್ಲ. ಅಂತಹವರ ಬಗ್ಗೆ ಅಪಾರ ಅನುಕಂಪ ನನಗಿದೆ. ‘ಹೌದು..ಹಿಂದೆಯೇ ಚೆನ್ನಾಗಿತ್ತೆಂದೋ....ಇಲ್ಲಾ... ಹಿಂದಿಗೂ ಇಂದಿಗೂ ವ್ಯತ್ಯಾಸವಿಲ್ಲ’ ಎನ್ನುವವರಿಗೆ ಯಾರಿಗಾದ್ರೂ ಅಂದಿನ ಜೀವನದ ಸಾದೃಶ್ಯವಾಗಿದೆಯೇ? ಅವ್ರು ಯಾರಾದ್ರೂ ಇಂಗ್ಲೀಷರ ದೌರ್ಜನ್ಯವನ್ನು ಕಂಡಿದ್ದಾರಾ? ಉಣ್ಣಲು ಪದಾರ್ಥವಿಲ್ಲದಿದ್ದರೂ ಸರಿ....ಉಪ್ಪು, ಮೆಣಸು ನಂಜಿ ಉಂಡೇನು ಅಂತಿರುವವರಿಗೆ ಉಪ್ಪೇ ಇಲ್ಲದಂತೆ ಮಾಡಿದ... ಅದಕ್ಕೂ ಕರ ನಿಗದಿ ಮಾಡಿದ ಅಂದಿನ ಸರಕಾರವೇ ಲೇಸೆನ್ನುವವರಿಗೆ ಏನು ಹೇಳೋಣ? ಇನ್ನು ಯಾರೂ ಪ್ರೀತಿ ಬೇಡವೆಂದಿಲ್ಲ. ನಿರ್ಮಲ ಪ್ರೀತಿ ನಮ್ಮ ಎದೆಯೊಳಗಿದ್ದರೆ ಸಾಕು. ಅದನ್ನು ಸಾರ್ವಜನಿಕವಾಗಿ ತೋರಿಸಿ, ಅಶ್ಲೀಲತೆಯ ಪ್ರದರ್ಶನ ಮಾಡುವುದು ಸರಿಯೇ? ಅಂತಹ ಪ್ರೀತಿ ಕಾಮವೇ ಸರಿ....ಇಂದಿನವರು ನಾಳೆಯವರಿಗೆ ಮಾದರಿ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ತಕ್ಷಣ ಗದ್ದುಗೆ ಹಿಡಿದ ಕೆಲವು ರಾಜಕಾರಣಿಗಳ ತಪ್ಪು ಮಾರ್ಗದರ್ಶನದಿಂದಾಗಿಯೇ ಇಂದು ಈ ಸ್ಥಿತಿಗೆ ಭಾರತ ಬಂದಿರುವುದು. ಬಿಡುಗಡೆಗಾಗಿ ಅವರು ತೆತ್ತ ಬೆಲೆ ತೀರಾ ಅಲ್ಪ ಅಥವಾ ಏನೂ ಇಲ್ಲ ಎಂದರೂ ಸರಿಯೇ....ಅಂತಹ ಗೋಸುಂಬೆ ರಾಜಕಾರಣಿಗಳು ಹಾಕಿಕೊಟ್ಟ ಮಾರ್ಗದರ್ಶನವೇ ಇಂದಿನ ಕೆಲವು ಪೀಳಿಗೆಯವರಿಗೆ ಮಾದರಿಯಾಗಿದೆ. ತಪ್ಪು ದಾರಿ ಹಿಡಿದು ಪಬ್ಬು, ವಿದೇಶ, ಮದ್ಯ ಎಂದೆಲ್ಲಾ ಮೇಲೆಯೇ ಹಾರಾಡುತ್ತಾ ತಮ್ಮ ತಾಯ್ನೆಲವನ್ನೇ ಕಡಗಣಿಸುತ್ತಿದ್ದಾರೆ. ನಮ್ಮ ಇಂದಿಗಾಗಿ ಅಂದು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ, ಭಗತ್ ಸಿಂಗ್, ಸುಖದೇವ್, ಸುಭಾಶ್ಚಂದ್ರ ಬೋಸ್- ಮುಂತಾದವರ ಬಲಿದಾನದಿಂದಲೇ ನಮಗೆ ಈ ಸ್ವಾತಂತ್ರ್ಯ ಸಿಕ್ಕಿದ್ದು. ಅವರ ತ್ಯಾಗದ ಬಲದಮೇಲೆಯೇ ಇಂದು ಇವರೆಲ್ಲಾ ಈ ರೀತಿ ಕೂಗಾಡಲು ಸಾಧ್ಯವಾಗಿರುವುದು. ತಮ್ಮ ಸಮುದಾಯಕ್ಕೆ ಹಿಂದಾದ ಅನ್ಯಾಯವನ್ನೇ ಮುಂದಿಡುತ್ತಾ....ಅದನ್ನೇ ಮೆರೆಸುತ್ತಾ.. ಅದಕ್ಕಾಗಿಯೇ ಹೋರಾಡುತ್ತಾ...ಅನ್ನ, ನೀರು, ನೆಲವನ್ನಿತ್ತು ಪೋಷಿಸುವ ದೇಶವನ್ನೇ ದೂರುವ ಈ ಒಳ ದೇಶದ್ರೋಹಿಗಳಿದಂದಲೇ ಇಂದು ಭಾರತ ದುರ್ಬಲವಾಗುತ್ತಿರುವುದು. ಗಳಿಸಿದ್ದೇನೂ ಇಲ್ಲದಿದ್ದರೂ ಪಡೆದದ್ದನ್ನೂ ಉಳಿಸುವ ಒಳ್ಳೆಯತನ ಇರದವರು ಇವರೆಲ್ಲಾ....ಸ್ವಾತಂತ್ರ್ಯದ ನಿಜವಾದ ಅರ್ಥ ತಿಳಿಯದೇ, ಅದಕ್ಕೆ ಸ್ವಚ್ಛಂದತೆಯ ರೂಪ ಕೊಟ್ಟು...ಅದಕ್ಕಾಗಿಯೇ ಹಪಹಪಿಸುವ ಮೂಢರು. ಸ್ವಾತಂತ್ರ್ಯಕ್ಕೂ, ಸ್ವಚ್ಛಂದತೆಗೂ ವ್ಯತ್ಯಾಸವಿದೆ. ವಿಕೃತಿಯಿಲ್ಲದ ಸ್ವಚ್ಛಂದತೆಗೆ ಉತ್ತಮ ಉದಾರಣೆ ಪ್ರಕೃತಿ. ನಿಸರ್ಗದಿಂದ ನಾವೆಲ್ಲಾ ತಿಳಿಯಬೇಕಾದ್ದು ಬಹಳಷ್ಟಿದೆ....ನಿಂಗೂ ಈ ಸತ್ಯ ಗೊತ್ತಿದೆ ಅಲ್ವಾ....ಏನಂತೀಯಾ?"ಎಂದಾಗ ನನ್ನೊಳಗೆ ನಾನರಿಯದ ಅಪೂರ್ವ ಭಾವವೊಂದು ಮೂಡಿತ್ತಲ್ಲಾ! ಇಂತಹ ಆದರ್ಶಗಳಿರುವ ಅಣ್ಣ ಐದು ವರುಷದ ಅತ್ತಿಗೆಯ ಪ್ರೀತಿ, ಸ್ನೇಹಗಳನ್ನು ಮೂರು ತಿಂಗಳೊಳಗೆ ಮರೆಯುವುದು ಸರಿಯೇ? ಅದೇ ವರುಷ ಕಳೆದರೂ ಕೇಶವ ಬಾವನ ನೆನಪಲ್ಲೇ ಕೊರಗುತ್ತಿರುವ ಸುನಂದಕ್ಕನಿಗೆ ಮಾತ್ರ ಬೇರೆ ಬದುಕು. ಜನ ಯಾಕೆ ಇಷ್ಟು ತಾರತಮ್ಯ ಮಾಡುತ್ತಾರೋ? ಕಣ್ಣಿಗೆ ಕಾಣುವ ಸತ್ಯಕ್ಕೂ ಸುಳ್ಳಿನ ಲೇಪನ. ಹೆಣ್ಣೆಂದರೆ ಯಾಕಿಷ್ಟು ಅಸಡ್ಡೆಯೋ? ಎಂದೆಲ್ಲಾ ಚಿಂತಿಸಿ ಅವಳ ಮನಸು ಮತ್ತಷ್ಟು ಮುದುಡಿತು. ಒಳಗೆ ನಡೆಯುತ್ತಿರುವ ಪೂಜೆಯ ನೆನಪಾಗಿ, ‘ಅಮ್ಮ ಇನ್ನೆಷ್ಟು ತನ್ನ ಬೈಯ್ದುಕೊಳ್ಳುತ್ತಿರುವಳೋ...’ಎಂದೆಣಿಸಿ ಲಗುಬಗೆಯಿಂದ ಅಲ್ಲಿಂದೆದ್ದು ಹೊರಟವಳಿಗೆ ಅತ್ತಲೇ ಬರುತ್ತಿರುವ ರಾಘವಣ್ಣ ಕಾಣಲು ಅಪ್ರಯತ್ನವಾಗಿ ಅವಳ ಹುಬ್ಬು ಗಂಟಾಯಿತು.

"ಏನಮ್ಮಾ.. ಎಲ್ಲಾ ಬಿಟ್ಟು, ಎಲ್ರನ್ನೂ ಬಿಟ್ಟು ಇಲ್ಲಿಗೆ ಬಂದಿದ್ದೀಯಾ? ಹೋಗ್ಲೀ....ನಿನ್ನ ರಾಘವಣ್ಣನಿಗೆ ಕಂಪೆನಿ ಕೋಡೋಕಾದ್ರೂ ಬರ್ಬಾರ್ದಾಗಿತ್ತಾ?"ಎಂದು ನಗುತ್ತಾ ಅವಳನ್ನೂ ಎಳೆದುಕೊಂಡು ತಾನೂ ಅಲ್ಲೇ ಹಾಕಿದ್ದ ಕಲ್ಲು ಸೀಟಿನ ಮೇಲೆ ಕುಳಿತನು. "ನಾನ್ಯಾಕೆ ಕಂಪೆನಿ ಕೊಡ್ಲಿ ಇನ್ನು...? ನಿಂಗೆ ಕಂಪೆನಿ ಕೊಡೊಕೆ ಅಂತಾನೇ ಎಲ್ರೂ ಹೊಸ ಅತ್ಗೆ ತರ್ತಾರಂತಲ್ಲಾ.... ನೀನೂ ಒಪ್ಪಿದ್ದಾಗಿದೆಯಂತೇ... ಮೊದ್ಲೇ ಶುಭಾಶಯಗಳು ನನ್ನ ಕಡೆಯಿಂದ.."ಎಂದು ವ್ಯಂಗ್ಯವಾಗಿ ಖಾರವಾಗಿ ಹೇಳಿದ್ದೇ ತಡ...ರಾಘವನ ಮುಖ ಸಂಪೂರ್ಣ ಕೆಂಪಾಯಿತು. "ಛೇ... ಏನು ಅಂತಾ ಆಡ್ತಿದ್ದೀಯಾ? ಅಲ್ಲಾ ಯಾರೀಗ ಹಾಗೆ ಹೇಳಿದ್ದು? ಎಲ್ರ ಹಾಗೇ ನೀನೂ ಕೂಡ.. ನನ್ನ ಬಗ್ಗೆ..." ಎಂದು ಮುಂದೆ ಮಾತಾಡದಂತಾಗಿ ಅಲ್ಲೇ ಸುಮ್ಮನಾದ. ಉಕ್ಕಿ ಬರುವ ದುಃಖವನ್ನು ಕಷ್ಟ ಪಟ್ಟು ತಡೆ ಹಿಡಿಯುವಂತಿದ್ದ ಅವನ ಪರಿಯನ್ನು ನೋಡಿ ತುಂಬಾ ಪಶ್ಚಾತ್ತಾಪವಾಯಿತು ಸಾಧ್ವಿಗೆ. "ಸ್ಸಾರಿ ಅಣ್ಣಾ.... ನಾನೂ ಅವ್ರಿವ್ರ ಮಾತು ಕೇಳಿ..... ವೆರಿ ಸ್ಸಾರಿ..... ಏನೋ ಭಾವೋದ್ವೇಗಕ್ಕೆ ಒಳಗಾಗಿದ್ದೆ....ನಿನ್ನ ಕೇಳ್ದೇ ನಂಬಬಾರ್ದಿತ್ತು...ಕ್ಷಮ್ಸಿಬಿಡು ಪ್ಲೀಸ್.."ಎಂದು ಅವನ ಕೈ ಹಿಡಿದು ಗೋಗರೆದಳು.

ತುಸುಕಾಲ ಇಬ್ಬರೊಳಗೆ ಮೌನ ಮಾತಾಡಿತ್ತು. ಮುದ್ದಿನ ತಂಗಿಯ ಅಳುಮುಖವನ್ನು ಕಂಡು ತುಸು ಸಮಾಧಾನ ತಂದುಕೊಂಡ. ಮದೊಳಗೇನೋ ನಿರ್ಧರಿಸಿದವನೇ ಸಾಧ್ವಿಯ ಕಡೆ ತಿರುಗಿ ನಿಶ್ವಯದ ಧ್ವನಿಯಲ್ಲಿ "ಸಾಧ್ವಿ.. ನಂಗೆ ನೀನು ಅಂದ್ರೆ ಒಂಥರಾ ಹೆಮ್ಮೆ. ಚಿಕ್ಕ ವಯಸ್ಸಿನಲ್ಲೇ ನೀನು ಬೆಳೆಸಿಕೊಂಡಿರುವ ಉತ್ತಮ ವಿಚಾರಗಳನ್ನು ಕಂಡಾಗ ತುಂಬಾ ಸಂತೋಷವಾಗುತ್ತದೆ. ಅಂತಹ ತಂಗಿಯೂ ನನ್ನ ಇಷ್ಟು ಕೀಳಾಗಿ ಕಂಡಾಗ ನೋವಾಗುವುದು ಸಹಜ ಅಲ್ವೇ? ಆದ್ರೆ ನಿನ್ನ ಮನಃಸ್ಥಿತಿಯೂ ಅರ್ಥ ಆಗುತ್ತೆ.... ಆದ್ರೆ ಇವತ್ತು ನೀನು ಸರಿಯಾಗಿ ತಿಳ್ಕೋ.... ನಾನ್ಯಾರಿಗೂ ಯಾವತ್ತೂ ಹೇಳಿಲ್ಲ ಇನ್ನೊಂದು ಮದ್ವೆ ಮಾಡಿ ಎಂದು. ಅದಕ್ಕೆ ನನ್ನ ಸಮ್ಮತಿಯೂ ಇಲ್ಲ. ಜ್ಯೋತಿಯೊಂದಿಗೆ ಬಾಳಿದ ಐದು ವರುಷದ ಸವಿ ನೆನಪೇ ಸಾಕು ನಾನೂ ಹಾಗೂ ವಸಿಷ್ಠ ಬಾಳಲು. ಹ್ಮ್ಂ... ಒಂದೊಮ್ಮೆ ಮುಂದೆ ವಸಿಷ್ಠ ತಾಯಿಗಾಗಿ ಹಠ ಮಾಡಿದರೆ.... ನನಗೆ ಮನೆ-ಮನಸಿನಾಧಾರಕ್ಕಾಗಿ ಸಹಧರ್ಮಿಣಿ ಬೇಕೆಂದೆನಿಸಿದರೆ ನಿನ್ನ ಸುನಂದಕ್ಕನಂತಹವರನ್ನೋ ಇಲ್ಲಾ ಶಾರದೆಯಂತಹವರನ್ನೋ ಸ್ವಾಗತಿಸುತ್ತೇನೆ.. ಹಾಂ... ಇದರರ್ಥ ಅವರಿಗೆ ನಾನು ಏನೋ ದೊಡ್ಡ ಉಪಕಾರ ಮಾಡುತ್ತಿರುವೆನೆಂದೋ..ಇಲ್ಲಾ ನಾನು ದೊಡ್ಡ ಆದರ್ಶವಾದಿಯೆಂದೋ ತಿಳಿಯಬೇಕಾದ್ದಿಲ್ಲ. ನೋವಿಗೆ ನೋವೇ ಮದ್ದು... ಕಳೆದುಕೊಂಡದ್ದನ್ನು ಕಳೆದುಕೊಂಡಲ್ಲಿಯೇ ಹುಡುಕಬೇಕಂತೇ... ಸೂತ್ರವೇ ಇದೆಯಲ್ಲಾ... ನೆಗೆಟಿವ್ ಮತ್ತು ನೆಗೆಟಿವ್ ಸೇರಿ ಪೊಸಿಟಿವ್ ಆಗೊತ್ತೆ ಅಂತ... ಹಾಗೇ ಇಬ್ಬರ ನೋವೊಳಗೇ ನಲಿವನ್ನು ಅರಳಿಸುವ ಪ್ರಯತ್ನ ಅಷ್ಟೇ. ಅದೆಲ್ಲಾ ಮುಂದಿನ ಮಾತು. ಸದ್ಯಕ್ಕೆ ಜ್ಯೋತಿಯ ನೆನಪು ನಮ್ಮಿಬ್ಬರೊಂದಿಗಿದೆ. ಅದೇ ನನ್ನ ಬದುಕಿಗೆ ಸಾರಥಿಯಾಗಿ ಮುನ್ನಡೆಯಿಸುತ್ತದೆ...ಇಲ್ಲದ್ದೆಲ್ಲಾ ಹಚ್ಕೋ ಬೇಡ.... ನಗ್ತಾ ಇರು.. ನಗಿಸ್ತಾ ಇರು.."ಎಂದು ತಲೆ ಸವರಿ ನಕ್ಕ ಅಣ್ಣನ ಕಣ್ಣಲ್ಲಿ ಸತ್ಯದ ತೇಜಸ್ಸನ್ನೂ, ಪುರುಷೋತ್ತಮನ ಛಾಯೆಯನ್ನೂ ಕಂಡಳು ಸಾಧ್ವಿ. ಎಲೆಯ ಮರೆಯಲ್ಲಡಗಿದ್ದ ಅರೆಬಿರಿದ ಮೊಟ್ಟೆಸಂಪಿಗೆಯೊಂದು ಇಣುಕಿ ನಗುತ್ತಿತ್ತು.

(**ಉತ್ಥಾನ** ಪತ್ರಿಕೆಯಲ್ಲಿ ಪ್ರಕಟಿತ)

-ತೇಜಸ್ವಿನಿ ಹೆಗಡೆ.

ಮಂಗಳವಾರ, ಡಿಸೆಂಬರ್ 6, 2011

ಹಂಗು


ಬೇಕಿಲ್ಲ ನಿನ್ನೆಯ ನೆನಪುಗಳ ಹಂಗು
ಇಂದಿನ ವಾಸ್ತವಿಕತೆಯ ಬದುಕಲು,
ಅಂದುಕೊಂಡಾಗೆಲ್ಲಾ ಇರಿದು ಕೊಲ್ಲುವವು,
ವರ್ತಮಾನದ ಪ್ರತಿ ದಿವಸಗಳು...

ಲೇಪನವ ಹಚ್ಚಿ, ತೇಪೆಯನು ನೇಯ್ದು,
ಕೀವನ್ನು ಹೀರಿ, ಗಾಯವ ಮಾಗಿಸಲು
ಹಳೆಯ ನೆನಪುಗಳ ಸಾಥ್ ಪಡೆಯಹೋದರೆ,
‘ಹಂಗಿನರಮನೆಗಿಂತ ಹುಲ್ಲಿನ ಮನೆಲೇಸೆಂಬಂತೆ’
ಗಹಗಹಿಸಿ ನಕ್ಕು ನೂಕುವವು ಕನವರಿಕೆಗಳು!

ನಿಶೆಯ ನಶೆಯೇರಿಸುತ್ತಿದ್ದ ಶೀತಲ ಚಂದಿರ,
ಮನವ ಹಗಲಾಗಿಸುತ್ತಿದ್ದ ದಿವ್ಯ ದಿನಕರ,
ಹಕ್ಕಿಗಳ ಇಂಚರದೊಳಗಿದ್ದ ಸಂಗೀತ,
ಹರಿವ ತೊರೆಯೊಳಗಿದ್ದ ಕಿಲ ಕಿಲ
ಎಲ್ಲವೂ ಭೂತದೊಳಗೇ ಸೇರಿ, ಸೋರಿ,
ಇಂದು ಬರಿಯ ಕಣ್ಣುರಿ, ಕಣ್ಣೀರಾಗಿದ್ದೇಕೋ...?!

‘ನೀನ್ಯಾಕೋ ನಿನ್ನ ಹಂಗ್ಯಾಕೋ’ ಎಂದ ದಾಸರನ್ನೇ ನೆನೆದು
ಹಳೆಯ ನೆನಪಿನ ಹಂಗನ್ನೇ ತೊರೆಯ ಹೊರಟಂತೇ...
ಚುಚ್ಚಿ ಘಾಸಿಗೊಳಿಸುವ ವರ್ತಮಾನದ ಪ್ರತಿ ದಿವಸಗಳು
ಮುಕ್ತಿಪಡೆಯದ ಕಟು ವಾಸ್ತವಿಕತೆಗಳು....

-ತೇಜಸ್ವಿನಿ ಹೆಗಡೆ