ಮಂಗಳವಾರ, ಸೆಪ್ಟೆಂಬರ್ 18, 2018

ಮರ್ಯಾದಾ ಹತ್ಯೆ : ಕಾರಣಗಳು ಮತ್ತು ಪರಿಹಾರ


ತ್ತೀಚಿಗಷ್ಟೇ ನಾನು ಮರಾಠಿಯ ಪಸಿದ್ಧ ‘ಸೈರಾಟ್’ ಚನಲನಚಿತ್ರವನ್ನು ನೋಡಿ ಬಹಳ ಇಷ್ಟಪಟ್ಟಿದ್ದೆ ಮತ್ತು ಅದರ ಅಂತ್ಯಕ್ಕೆ ಬಹಳ ಬೇಸರವೂ ಆಗಿತ್ತು. ಹಾಗೇ ಕೆ. ನಲ್ಲತಂಬಿಯವರ ಅನುವಾದಿತ ಕಾದಂಬರಿಯಾದ ‘ಹೂ-ಕೊಂಡ’ವನ್ನೂ ಓದಿ ಮೆಚ್ಚಿದ್ದೆ, ಬೆಚ್ಚಿದ್ದೆ! ಎರಡೂ ಒಂದೇ ವಿಷಯವನ್ನು ಎತ್ತಿಹಿಡಿಯುತ್ತವೆ. ಅದೇ ಮರ್ಯಾದಾ ಹತ್ಯೆ!

ಈಗ ನೋಡಿದರೆ ತೆಲಂಗಾಣದ ಯುವ ಜೋಡಿಯ ದಾರುಣ ಕತೆ ಹೊರಬಿದ್ದಿದೆ! ಮಗಳು ತಮ್ಮ ಜಾತಿಯಲ್ಲದವನನ್ನು ಮದುವೆಯಾಗಿ ಸುಖವಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ, ತಮ್ಮ ಹುಸಿ ಪ್ರತಿಷ್ಠೆಗೆ ಕುಂದಾಯಿತು ಎಂದು ಕ್ರೋಧಗೊಂಡು ಸ್ವಂತ ತಂದೆಯೇ, ಹೆತ್ತ ಮಗಳ ಗಂಡನನ್ನು ಅವಳ ಕಣ್ಮುಂದೆ ಇರುದು ಕೊಲ್ಲಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿ ಎಲ್ಲರನ್ನೂ ತಲ್ಲಣಗೊಳಿಸಿದೆ. ಮಗಳು ಗರ್ಭಿಣಿಯಾಗಿದ್ದಾಳೆ, ಆ ಮಗುವಿಗೆ ಭವಿಷ್ಯವಿದೆ, ತಮಗೆ ಇಷ್ಟ ಇಲ್ಲದಿದ್ದರೆ ದೂರವಿದ್ದುಬಿಟ್ಟರಾಯಿತು ಎಂಬ ಕನಿಷ್ಟ ಕಾಳಜಿಯೂ ಇಲ್ಲದೆ ಪಶುವಿಗಿಂತ ಕಡೆಯಾಗಿಬಿಟ್ಟ ಆ ತಂದೆ ಎಂದೆನ್ನಿಸಿಕೊಂಡವನ ಕ್ರೌರ್ಯವಾದರೂ ಎಂಥದ್ದಪ್ಪಾ ಎಂದೆನಿಸಿಬಿಟ್ಟಿತು. ನಿಜಕ್ಕೂ ಇದೊಂದು ಹೇಯ ಮತ್ತು ತೀವ್ರ ಖಂಡನೀಯ ಘಟನೆ. ಆ ಯುವ ಜೋಡಿಯ ಕನಸುಕಂಗಳ ಭಾವಚಿತ್ರ ಇನ್ನೂ ಕಾಡುತ್ತಿದೆ ನನ್ನನ್ನು. ಕ್ಷುದ್ರ ಮನುಷ್ಯನ ವಿಕೃತಿಗಿಂತ ಅಪಾಯಕಾರಿಯಾದ್ದು ಬೇರೊಂದಿಲ್ಲ ಅನ್ನಿಸಿಬಿಟ್ಟಿತು. ಇದಾದ ನಂತರ ಸಹಜವಾಗಿಯೇ ಇಂಥಾ ದುರ್ಘಟನೆಯ ಹಿನ್ನಲೆ, ನಡೆಯುತ್ತಿರುವ ಪ್ರದೆಶಗಳ ಕುರಿತು ಮಾಹಿತಿ ಪಡೆಯಬೇಕೆಂದೆನ್ನಿಸಿತು. ಎಲ್ಲೆಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ/ನಡೆಯುತ್ತಿದೆ ಎಂದು ಸ್ವಲ್ಪ ಹುಡುಕಾಡುತ್ತಿರುವಂತೆ ಇದರ ಆಳ, ಅಗಲ, ವಿಸ್ತಾರ ಜಗತ್ತಿನಾದ್ಯಂತ ಹರಡಿಕೊಂಡಿರುವುದು ಸ್ಪಷ್ಟವಾಗುತ್ತಾ ಹೋಯಿತು.
*HBV ಸರ್ವೆಯ ಪ್ರಕಾರ ಜಗತ್ತಿನಾದ್ಯಂತ ಪ್ರತಿವರುಷ ಸರಿಸುಮಾರು ೫,೦೦೦ ಹೆಣ್ಮಕ್ಕಳು ಮತ್ತು ಹುಡುಗಿಯರು ಈ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿದ್ದಾರೆ! ಇದು ವಿಶೇಷವಾಗಿ ಮಧ್ಯ ಪೂರ್ವ ಹಾಗೂ ದಕ್ಷಿಣ ಏಷ್ಯಾ ದೇಶಗಳಲ್ಲಿ ಹೆಚ್ಚು ಕಾಣಿಸುತ್ತಿದೆಯಂತೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಪ್ರತಿ ವರುಷ ತಲಾ ೧,೦೦೦ ಹತ್ಯೆಗಳಾಗುತ್ತಿದ್ದರೆ, ಇಂಗ್ಲೇಂಡಿನಲ್ಲೂ ವರುಷದಲ್ಲಿ ೧೨ ಇಂಥಾ ಹತ್ಯೆಗಳು ರಿಪೋರ್ಟ್ ಆಗುತ್ತಿರುತ್ತವಂತೆ. ಇನ್ನು ರಿಪೋರ್ಟೇ ಆಗದ ಪ್ರಕರಣಗಳು ಅದೆಷ್ಟು ಇರುತ್ತವೆಯೋ ಗೊತ್ತಿಲ್ಲ!  ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಈಜಿಪ್ಟ್, ಇರಾನ್, ಇಸ್ರೇಲ್, ಜೋರ್ಡಾನ್, ಮೊರೊಕ್ಕೋ, ಯು.ಕೆ., ಅಮೇರಿಕಾ ಹೀಗೆ ಎಲ್ಲೆಡೆ ಈ ಒಂದು ದುರಂತ ಅವ್ಯಾಹತವಾಗಿ ನಡೆದುಹೋಗಿತ್ತಿದೆ.
*ಎಷ್ಟೋ ದೇಶಗಳಲ್ಲಿ ಇದನ್ನು ತಡೆಯಲು ಸಶಕ್ತ ಕಾನೂನೂ ಇಲ್ಲ, ಇದ್ದರೂ ಅದು ಸೂಕ್ತ ರೀತಿಯಲ್ಲಿ ಜಾರಿಗೆ ಬರುತ್ತಿಲ್ಲ. ಕೆಲವೆಡೆಯಂತೂ ಇದೊಂದು ಸಾಮಾನ್ಯ ವಿಷಯ!
*Iranian and Kurdish Rights Organization ಪ್ರಕಾರ ಯುರೋಪ್ ಮತ್ತು ಅಮೇರಿಕಾದಲ್ಲೂ ಮರ್ಯಾದ ಹತ್ಯೆಯ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆಯಂತೆ!
* ಅಮೇರಿಕಾದ ೨೦೧೪ರ ಜನಾಂಗ ಸ್ಥಿತಿ (demographics) ವರದಿಯ ಪ್ರಕಾರ ಪ್ರತಿ ವರ್ಷ ಈ ದೇಶದಲ್ಲೇ ೨೩ ರಿಂದ ೨೭ ಮರ್ಯಾದಾ ಹತ್ಯೆಯ ಪ್ರಕರಣಗಳು ಕಾಣಿಸುತ್ತಿವೆಯಂತೆ! ಆದರೆ ಸಾಕಷ್ಟು ಮಾಹಿತಿ ದೊರಕದೇ ಇದರ ಬಗ್ಗೆ ಬೆಳಕಿಗೆ ಬರದೇ ಹೋಗುತ್ತಿದೆ ಎನ್ನಲಾಗಿದೆ.
*ಈ ಕೆಳಗಿನ ಲಿಂಕಿಗೆ ಹೋಗಿ ನೋಡಿದರೂ ಸಾಕು, ಜಗತ್ತಿನಾದ್ಯಂತ ಈ ಒಂದು ಮಾರಕ ಪಿಡುಗು ಹೇಗೆ ಹಬ್ಬಿ ಬಲಿತಿದೆ ಎಂದು ನಿಚ್ಚಳವಾಗುವುದು! (ಇನ್ನೂ ಕೆಲವು ಕೊಂಡಿಗಳನ್ನು ಕೊನೆಯಲ್ಲಿ ನೀಡಿದ್ದೇನೆ.)

ಭಾರತದಲ್ಲಿ ಮರ್ಯಾದಾ ಹತ್ಯೆ:-
ಭಾರತದಲ್ಲಿ ಇದು ಮತ್ತೆಮತ್ತೆ ಕೇಳಿಬರುತ್ತಿರುವ, ಕಂಡು ಬರುತ್ತಿರುವ ಹೇಯ ಕೃತ್ಯವಾಗಿದೆ. ವಿಶೇಷವಾಗಿ ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಗಣನೀಯವಾಗಿ ಹೆಚ್ಚಿವೆ. ಹರ್ಯಾಣದಲ್ಲಿ ಬಲಶಾಲಿಯಾಗಿರುವುದೇ ಅಲ್ಲಿಯ ‘ಖಾಪ್’ ಪಂಚಾಯಿತಿ! ಇಲ್ಲಿ ಕೋರ್ಟು, ಪೋಲೀಸ್ಟೇಶನ್ ಯಾವುದೂ ನಡೆಯುವುದಿಲ್ಲ ಎಂದು ಓದಿರುವೆ. ಮರ್ಯಾದಾ ಹತ್ಯೆಗೆ, ಹೆಣ್ಮಕ್ಕಳ ಹಕ್ಕು ಚ್ಯುತಿಗೆ ಈ ಖಾಪ್ ಪಂಚಾಯಿತಿಯ ಅಂಧಾ ಕಾನೂನೇ ಕಾರಣ. ನಮ್ಮ ಸುಪ್ರೀಂ ಕೋರ್ಟೇ ಇಂಥಾ ಪಂಚಾಯಿತಿಗಳನ್ನು ತೆಗೆದುಹಾಕಬೇಕೆಂದು ಅಲ್ಲಿನ ಎಸ್ಪಿಗಳಿಗೆ ಮಾಹಿತಿ ನೀಡಿದ್ದರೂ ಅವರ ರಾಜ್ಯಭಾರ ನಿಂತಂತಿಲ್ಲ. ಅವರ ಪ್ರಕಾರ ಸರ್ವೋಚ್ಚ ನ್ಯಾಯಾಲಯಕ್ಕೇ ಸರಿಯಾದ ನ್ಯಾಯ ಗೊತ್ತಿಲ್ಲ... ಅವರೇ ಸರಿ ಎಂಬಂತೇ ಧಿಮಾಕು ತೋರುವ ಹೇಳಿಕೆ ನೀಡಿದ್ದರು. ‘ಖಾಪ್’ ಪಂಚಾಯತಿಯ ದೌರ್ಜನ್ಯದ ವಿರುದ್ಧ ಸಿಡಿದೇಳುವ, ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಚಲನಚಿತ್ರಗಳು ಬಂದಿವೆ.
ಉದಾಹರಣೆಗೆ : ಹಿಂದಿಯ “ಖಾಪ್” ಎಂಬ ಹೆಸರನಿದೇ ಚಲನಚಿತ್ರ.
ಮದುವೆ ಎಂಬುದು ಎರಡು ಕುಟುಂಬಗಳ ನಡುವಿನ ಸುಂದರ ಬಂಧ, ಎರಡೂ ಕಡೆಯವರ ಅದರಲ್ಲೂ ವಿಶೇಷವಾಗಿ ಹೆತ್ತವರ ಸಮ್ಮತಿ ಇದ್ದರೆ ಅದಕ್ಕೊಂದು ಮೆರುಗು, ಹೆಚ್ಚು ಸಾಮಾಜಿಕ ಭದ್ರತೆ ದೊರಕುತ್ತದೆ, ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನೆಲ್ಲಾ ಒಪ್ಪೋಣ. ಆದರೆ ಎಷ್ಟೋಸಲ ಹೆತ್ತವರಿಗೆ ತಮ್ಮ ಮಕ್ಕಳ ಒಳಿತು ಕೆಡುಕು ತಮಗಿಂತ ಚೆನ್ನಾಗಿ ಬಲ್ಲವರು ಯಾರೂ ಇಲ್ಲ ಎಂಬ ಭ್ರಮೆ ಇದ್ದಿರುತ್ತದೆ. ತಮ್ಮ ಮಕ್ಕಳೂ ತಮ್ಮಷ್ಟೇ ಅವರ ಬದುಕನ್ನು ಇರ್ಧರಿಸುವ ಹಕ್ಕುಳ್ಳುವರು, ಅವರೂ ತಿಳುವಳಿಕೆ ಹೊಂದಿರುತ್ತಾರೆ ಎಂಬುದನ್ನು ಮರೆತುಬಿಡುವರು. ಅವರ ಇಷ್ಟವನ್ನರಿಯದೇ ತಮ್ಮ ದೃಷ್ಟಿಯಲ್ಲಿ ಸೂಕ್ತ ಎನ್ನಿಸುವ ಕಡೆಗೆ ಒತ್ತಾಯದಿಂದ ಮದುವೆಮಾಡಿಸಲು ನೋಡುವರು. ಹೆಚ್ಚಿನ ಸಮಯದಲ್ಲಿ ಆರ್ಥಿಕ ಅಸಮಾನತೆ, ಜಾತಿ ಅಸಮಾನತೆಯೇ ಇದಕ್ಕೆ ಮೂಲಕಾರಣವಾಗಿರುತ್ತದೆ. ಆದರೆ, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಇದ್ದರೆ ಎಲ್ಲದರೂ ಹೊಂದಾಣಿಕೆ ಸಾಧ್ಯ ಎನ್ನುವುದನ್ನೇ ಮರೆತುಬಿಡುತ್ತಾರೆ. ಇಷ್ಟಕ್ಕೂ ಸುದೀರ್ಘ ಬಾಳುವೆ ಮಾಡುವವರೇ ಅವರಿಬ್ಬರು ಎಂಬುದನ್ನು ಮರೆತು ತಾವು ಆಜೀವನ ಅವರಜೊತೆ ಇರುವವರು ಎಂದೇ ಭ್ರಮಿಸಿರುತ್ತಾರೆ. ಇದರ ಅರ್ಥ ಅಂತರ್ಜಾತೀಯ ವಿವಾಹಗಳೆಲ್ಲಾ ಯಶಸ್ವಿಯಾಗುತ್ತವೆ ಎಂದಲ್ಲ. ಹಾಗೆಯೇ ವಿಚ್ಛೇದನಗಳು ಸ್ವಜಾತೀಯ ವಿವಾಹಗಳಲ್ಲೂ ಸಾಕಷ್ಟು ಇರುತ್ತವೆ ಎಂಬುದನ್ನೂ ಮರೆಯದಿರೋಣ. ಯಾವುದೂ ಇದ ಮಿತ್ಥಂ ಎನ್ನುವಂತಿಲ್ಲ. ಹೀಗಿರುವಾಗ ತಮ್ಮ ಜಾತಿಯಲ್ಲ ಎಂದೋ, ತಮಗಿಂತ ಹಣಕಾಸಿನಲ್ಲಿ ದುರ್ಬಲರಾಗಿದ್ದಾರೆಂದೋ ತುಚ್ಛೀಕರಿಸುವುದು, ಹೀಗಳೆಯುವುದು, ತಿರಸ್ಕರಿಸುವುದು – ಹೋಗಲಿ ಅದೆಲ್ಲಾ ಮಾಡಿ ಅವರನ್ನು ಅವರಷ್ಟಕ್ಕೆ ಬಿಟ್ಟರೂ ಪುಣ್ಯ ಬರುವುದೇನೋ! ತಮ್ಮ ಇಲ್ಲದ ಪ್ರತಿಷ್ಠೆ, ಇರದ ಮಾನದ ಉಳಿವಿಗಾಗಿ ಕೊಲ್ಲಿಸುವಷ್ಟು ಕ್ರೌರ್ಯಕ್ಕೆ ಹೋಗುತ್ತಾರಲ್ಲ ಅದೆಂಥಾ ಮರ್ಯಾದೆ ಇವರದಪ್ಪಾ ಎಂದೆನಿಸಿಬಿಡುತ್ತದೆ!
ಪ್ರಸ್ತುತ ಪ್ರಕರಣವನ್ನೇ ತೆಗೆದುಕೊಂಡರೆ, ತೆಲಂಗಾಣದ ಅಮೃತ ಮತ್ತು ಪ್ರಣಯ್ ಜೋಡಿಯನ್ನು ಬೇರ್ಪಡಿಸಿ, ಗರ್ಭಿಣಿಯಾಗಿರುವ ಮಗಳ ಗಂಡನನ್ನೇ ಕೊಲ್ಲಿಸಿ ಈಗ ಪೂಲೀಸರ ಕಸ್ಟಡಿಯಲ್ಲಿರುವ ಅವಳ ತಂದೆಯ ಮರ್ಯಾದೆ, ಘನತೆ ಹೆಚ್ಚಾಯಿತೇ?! ಹುಟ್ಟಿನಿಂದ ಬೆಳೆಯುವವರೆಗೂ ಮುದ್ದಿನಿಂದ ಸಾಕಿದ ಮಕ್ಕಳನ್ನೇ ತರಿಯಲು ಅವರು ಬಲಿಗಾಗಿ ತಂದು ಸಾಕಿದ ಕುರಿ, ಕೋಣ, ಪ್ರಾಣಿಗಳಲ್ಲ ಅಲ್ಲವೇ? ಅಥವಾ ಇಂಥಾ ಹೆತ್ತವರಿಗೆ ಮಕ್ಕಳೆಂದರೆ ಅಷ್ಟೇಯೋ ಎಂಬುದೇ ಗೊತ್ತಾಗುತ್ತಿಲ್ಲ!
ಇನ್ನು ಈ ಮರ್ಯಾದಾ ಹತ್ಯೆಯನ್ನು ಕೇವಲ ತಂದೆಯೋ, ಚಿಕ್ಕಪ್ಪನೋ ಮಾಡಿಸುತ್ತಾರೆಂದುಕೊಳ್ಳಬೇಡಿ. ಸ್ವಂತ ತಾಯಿ, ಅಜ್ಜಿಯೂ ಮಾಡಿಸಬಲ್ಲರು! ಉದಾಹರಣೆಗೆ ಲಾಹೋರಿನ ಝೀನತ್ ಎಂಬ ಹದಿನೆಂಟರ ಹರೆಯದ ಮಗಳನ್ನು ಅವಳ ಸ್ವಂತ ತಾಯಿ ಪರ್ವೀನ್ ರಫೀಕ್ ಎಂಬಾಕೆ ಸಜೀವ ದಹನ ಮಾಡಿದ್ದಳು. ಇದಕ್ಕೆ ಕಾರಣ ಮಗಳು ತನ್ನಿಚ್ಛೆಯಂತೇ ಮದುವೆಯಾಗದೇ ತನ್ನ ಬಾಲ್ಯದ ಗೆಳೆಯನನ್ನು ವರಿಸಿದ್ದೇ ಆಗಿತ್ತಂತೆ! ಬಿಹಾರದಲ್ಲಿ, ಹರ್ಯಾಣದಲ್ಲಿ, ಕರ್ನಾಟಕದಲ್ಲಿ ಹೀಗೆ ಎಗ್ಗಿಲ್ಲದೇ ಎಲ್ಲೆಡೆಯೂ ಇಂಥ ಹತ್ಯೆಗಳು ಆಗುತ್ತಲೇ ಇವೆ. ಎಷ್ಟೋ ಬೆಳಕಿಗೇ ಬರುವುದಿಲ್ಲ! ಈ ರೀತಿ ಇಂಥಾ ಅನೇಕಾನೇಕ ಪ್ರಕರಣಗಳು ಎಲ್ಲೆಡೆಯೂ ಹೆಚ್ಚುತ್ತಿರುವುದು ದುರದೃಷ್ಟಕರ ಮತ್ತು ಖೇದನೀಯ ಸಂಗತಿ.

ಮರ್ಯಾದಾ ಹತ್ಯೆಗೆ ಪ್ರಮುಖ ಕಾರಣಗಳು :-

ಮೊತ್ತಮೊದಲ ಕಾರಣವೇ ಸ್ವಪ್ರತಿಷ್ಠೆ, ಮೂಢತೆ ಮತ್ತು ದುರಹಂಕಾರದ ಪರಾಕಷ್ಠೆ.
ಇದರ ನಂತರ… (ಇದು ನಾನು ಅಲ್ಲಲ್ಲಿ ಓದಿದ, ಅನೇಕ ವರ್ಷಗಳಿಂದ ಕೇಳಿದ ಘಟನೆಗಳನ್ನಾಧರಿಸಿ ವಿಂಗಡಿಸುತ್ತಿರುವುದು…)
೧) ಜಾತೀಯತೆ(ಸ್ವಜಾತಿಯಲ್ಲೇ ಮೇಲ್ಜಾತಿ, ಕೀಳ್ಜಾತಿಯೆಂದು ಅಥವಾ ಅನ್ಯಜಾತಿಯವರೆಂದು)
೨) ಸಲಿಂಗಕಾಮ (ಸಲಿಂಗಕಾಮಿ ಎಂದಾಕ್ಷಣ ಆತ/ಆಕೆ ತಮ್ಮ ಮನೆತನಕ್ಕೆ ಕುಂದು ಎಂದು ಕೊಂದು ಬಿಟ್ಟಿರುವ ಅನೇಕ ಪ್ರಕರಣಗಳಿವೆ)
೩) ಅನೈತಿಕ ಸಂಬಂಧದ ನೆಪದಲ್ಲಿ (ವಿವಾಹೇತರ ಅಥವಾ ವಿವಾಹ ಪೂರ್ವದ್ದು)
೪) ಹೆಣ್ಣೆಂದರೆ ಸದಾ ತಮ್ಮ ಅಡಿಯಾಳು ಎಂದೇ ಭಾವಿಸಿಕೊಂಡು ಬಂದಿರುವ ದುಷ್ಟ ಮನಸ್ಥಿತಿ.
೫) ಆರ್ಥಿಕ ಅಸಮಾನತೆ (ತಮಗಿಂತ ಕಡಿಮೆ ದುಡ್ಡಿರವವರೆಂದೋ, ಬಡವರೆಂದೋ ತಾತ್ಸಾರದಲ್ಲಿ…)
೬) ವೈಯಕ್ತಿಕ ಅಥವಾ ಕೌಟುಂಬಿಕ ಕಲಹ/ದ್ವೇಷ (ಅಜ್ಜರ, ಪಿಜ್ಜರ ಕಾಲದ ಜಗಳದ ನೆಪದಲ್ಲಿ)
೭) ರಾಜಕೀಯ ಹಸ್ತಕ್ಷೇಪ, ಪಿತೂರಿ (ತನಗಾಗದ ಬಣದವರಿದ್ದರೆ ಅವರ ಕಡೆಯ ಹುಡುಗಿಯೋ/ಹುಡುಗನೋ ವಿರುದ್ಧ ಪಂಗಡದವರನ್ನು ಪ್ರೀತಿಸಿದ್ದು ತಿಳಿದುಬಂದರೆ, ಆ ಮನೆಯವರನ್ನು ಎತ್ತಿಕಟ್ಟಿ ಕೊಲ್ಲಿಸಿ ಅದನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಪ್ರಕರಣಗಳೂ ಹಲವು ಇರುತ್ತವೆ) ಹೀಗೆ ಕಾರಣಗಳು ಅನೇಕ.

ಪರಿಹಾರದ ಕುರಿತು ಒಂದು ಕಿರು ಚಿಂತನೆ :-

ಯಾವುದೇ ಸಮಸ್ಯೆಯಿರಲಿ ಅದನ್ನು ಕೇವಲ ಎದುರಿಟ್ಟು ಗೋಳಾಡುತ್ತಲೋ, ದೂರುತ್ತಲೋ ಇದ್ದುಬಿಟ್ಟರೆ ಪರಿಹಾರವೇನೂ ಸಿಗದು. ಖಂಡನೆಯ ಜೊತೆಗೆ ನಿವಾರಣೆಯೂ ಅತ್ಯಗತ್ಯ. ಕೊಲ್ಲುವುದಕ್ಕೆ ಪರಿಹಾರ ಮಾನವೀಯ ಸಂಸ್ಕಾರ ಬೆಳೆಸುವುದೊಂದೇ ಎನ್ನಿಸುತ್ತದೆ ನನಗೆ! ಈ ಸಮಸ್ಯೆಗೆ ಪರಿಹಾರ ತಕ್ಷಣಕ್ಕಂತೂ ಸಾಧ್ಯವಿಲ್ಲ. ಸಮಾಜದೊಳಗೆ ಆಳವಾಗಿ ಬೇರೂರಿರುವ ಈ ಮನಃಸ್ಥಿತಿಯನ್ನು ಬದಲಾಯಿಸುವ ಮನಸ್ಸು ನಾವು ಮಾಡಬೇಕಷ್ಟೇ. ಮುಂದಿನ ಪೀಳಿಗೆಯ ತಲೆಯಲ್ಲಿ ಕೌಟುಂಬಿಕ ಮರ್ಯಾದೆ, ಸ್ವಪ್ರತಿಷ್ಠೆ, ಮನೆತನದ ಗೌರವ ಎಲ್ಲದೂ ಇರುವುದು ನಮ್ಮ ಉತ್ತಮ ನಡತೆ, ಮೌಲ್ಯಯುತ ಬದುಕು ಹಾಗೂ ಜೀವನ ಕ್ರಮ ಹಾಗೂ ಸ್ವಾಭಿಮಾನದ ಬದುಕಿನಲ್ಲಿ… ಪರಸ್ಪರ ಕೊಲ್ಲದೇ ಸಹಬಾಳ್ವೆ ಮಾಡುವುದರ ಮೂಲಕ, ಎಲ್ಲರನ್ನೂ ಗೌರವಿಸುವುದರ ಮೂಲಕ, ನಮ್ಮ ಸಂಪ್ರದಾಯವನ್ನು ಘನತೆಯಿಂದ ಆಚರಿಸುತ್ತಲೇ ಮತ್ತೊಬ್ಬರ ಆಚರಣೆಯನ್ನೂ ಸಮ್ಮಾನಿಸುವುದರಲ್ಲಿ ಎಂಬ ಮನೋಭಾವವನ್ನು ಬೆಳೆಸುವುದರ ಮೂಲಕವಷ್ಟೇ ನಿಧಾನದಲ್ಲಿ ಇದನ್ನು ಪರಿಹಾರ ಮಾಡಬಹುದು. ಮೇಲು ಕೀಳು ಎನ್ನುವುದು ಹಣದಲ್ಲಾಗಲೀ, ಜಾತಿಯಲ್ಲಾಗಲೀ ಬರದೇ, ಗುಣ, ಸ್ವಭಾವದಲ್ಲಿ ಬರುವಂಥದ್ದು ಎನ್ನುವುದನ್ನು ತಿಳಿಸಿಕೊಡಬೇಕು. ಆದರೆ ಇಂಥ ಸಮಸ್ಯೆಗೆ ಪರಿಹಾರ ಏಕಪಕ್ಷೀಯವಾಗಂತೂ ಸಾಧ್ಯವಿಲ್ಲ. ಎಲ್ಲಾ ರೀತಿಯ ಜಾತಿ ಧರ್ಮಗಳಲ್ಲೂ ಆಗುತ್ತಾ ಹೋದರೆ ಮಾತ್ರ ಕ್ಷಿಪ್ರಗತಿಯಲ್ಲಿ ಬೆಳಕು ಕಾಣಬಹುದು. ಈಗಾಗುತ್ತಿರುವುದೆಲ್ಲಾ ತಾನು, ತಮ್ಮವರು ಶುದ್ಧರು, ಕ್ಷುದ್ರರೆಲ್ಲಾ ಎದುರಿನವರೇ ಎಂಬ ಅಲ್ಪಜ್ಞಾನ ಹಾಗೂ ಪಲಾಯನವಾದವೇ ಇದಕ್ಕೆ ಕಾರಣ. ಅಲ್ಲದೇ, ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣವೆಂಬಂತೇ ಎಂಥದ್ದೇ ದುರಂತ ಬರಲಿ, ವಿಪತ್ತು ಕಾಡಲಿ ಈ ದೇಶವನ್ನು, ರಾಜ್ಯವನ್ನು, ಜಿಲ್ಲೆಯನ್ನು, ಜಾತಿಯನ್ನು ನಿಂದನೆ ಮಾಡುವುದರಲ್ಲೇ ಕಾಲಹರಣಮಾಡಿದರೆ, ಮತ್ತಷ್ಟು ಬಿಗಡಾಯಿಸಿದಂತಾಗುವುದು ಅಷ್ಟೇ. ತಿವಿಯುವುದರಲ್ಲಿ, ಚುಚ್ಚುವುದರಲ್ಲಿ, ಕೆಡವುದರಲ್ಲಿ ಮೇಲೆತ್ತುವಿಕೆ, ಸುಧಾರಣೆ ಅಸಾಧ್ಯ. ಸುಧಾರಣೆ ಮಾಡುವುದಾದರೆ ನಮ್ಮ ಮನೆ-ಮನಗಳಲ್ಲಿ ಆರಂಭಿಸುವ. 
*ನಮ್ಮ ಮಕ್ಕಳಿಗೆ “There is no Honor in Killing”, ಮರ್ಯಾದೆ ಹೆಚ್ಚುವುದು ಅಮಾಯಕರನ್ನು ಕೊಲ್ಲುವುದರಲ್ಲಲ್ಲ, ಕಾಪಾಡುವುದರಲ್ಲಿ ಎಂಬುದನ್ನು ತಿಳಿಸೋಣ. ಇದೆಲ್ಲದರ ಜೊತೆಗೇ,
*ನೀನು ತೆಗೆದುಕೊಳ್ಳುವ ನಿರ್ಧಾರದ ಸಾಧಕ ಬಾಧಕಗಳ, ಕಷ್ಟ, ಸುಖಗಳ ಚಿಂತನೆಯೂ ನಿನ್ನ ಹಕ್ಕು, ಜವಾಬ್ದಾರಿ ಎನ್ನುವುದನ್ನೂ ತಿಳಿಸುತ್ತಾ ಹೋಗೋಣ. ಒಳಿತು ಕೆಡುಕು ಇದಾಗಿದ್ದರಬಹುದೇ ಎಂದು ಚರ್ಚಿಸುತ್ತಾ ಹೋಗೋಣ. ಅವರ ಜೊತೆಗೆ ನಿರ್ಧಾರ ಮಾಡೋಣ. 
*ಎಲ್ಲಕ್ಕಿಂತ ಮುಖ್ಯವಾಗಿ ಗಂಡು ಮಕ್ಕಳಿಗೆ ಮನೆಯ ಹೆಣ್ಮಕ್ಕಳನ್ನು ಗೌರವಿಸುವ, ಪ್ರೀತಿಸುವ, ಅವರು ತಮಗೆ ಸಮಾನರೆಂದು ತಿಳಿಯುವ ವಿವೇಕವನ್ನು ವಿನಮ್ರತೆಯನ್ನು ಬೆಳೆಸಿದರೂ ಸಾಕು. ಇಂಥಾ ಹತ್ಯೆಯ ಜೊತೆಗೆ ಅತ್ಯಾಚಾರದಂಥ ಪಿಡುಗೂ ಕಡಿಮೆಯಾಗುತ್ತಾ ಹೋಗುವುದು. 
*ಇನ್ನು ಅವರೇನಾದರೂ ತಾವು ತೆಗೆದುಕೊಂಡ ನಿರ್ಧಾರದಲ್ಲಿ (ಯಾವುದೇ ಇರಲಿ) ಅಪ್ಪಿತಪ್ಪಿ ಎಡವಿದಾಗ ಸಾಧ್ಯವಾದಷ್ಟು ಸಾಥ್ ಕೊಡಿ. ಅದೂ ಸಾಧ್ಯವಾಗದಿದ್ದರೆ ಸುಮ್ಮನಿದ್ದು ಬಿಡಿ. ಎಡವಿದಾಗಲೇ ಬದುಕು ತೆರೆದುಕೊಳ್ಳುವುದು. ಅಲ್ಲಿಂದ ಪಾಠ ಕಲಿತರೇ ಬೆಳೆಯಲಾಗುವುದು. ಕಲಿಯದಿದ್ದರೆ ಮತ್ತೆಮತ್ತೆ ಕಲಿಸಲು ಬದುಕಂತೂ ಜೊತೆಗಿದ್ದೇ ಇರುತ್ತದೆ. 
ಈರೀತಿ, ನಮ್ಮ ಮಕ್ಕಳಿಂದ, ಮುಂದಿನ ಪೀಳಿಗೆಯಿಂದಲಾದರೂ ಮರ್ಯಾದಾ ಹತ್ಯೆಯಂಥ ಸಾಮಾಜಿಕ ದುರಂತ ನಿಲ್ಲುವಂತಾಗಲಿ ಎಂದೇ ಹಾರೈಸೋಣ, ಪ್ರಯತ್ನಿಸೋಣ.
ಸೂಚನೆ:- ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಕೆಲವು ಅಂತರ್ಜಾಲ ಕೊಂಡಿಗಳು ಇಲ್ಲಿವೆ. ಜಗತ್ತಿನಲ್ಲಿ ಮತ್ತು ನಮ್ಮಲ್ಲಿ ನಡೆದಿರುವ ಕೆಲವು ಪ್ರಕರಣಗಳ ವಿವರಗಳೂ ಇವೆ. ನೀವೂ ಹುಡುಕಾಡಿದರೆ ಮತ್ತೂ ಹೆಚ್ಚಿನ ಮಾಹಿತಿಗಳು ಸಿಗಬಹುದು. ಪ್ರಸ್ತುತ ಲೇಖನವನ್ನೂ ನಾನು ಅಂತರ್ಜಾಲದ ಮಾಹಿತಿಗಳನ್ನಾಧರಿಸಿಯೇ ಬರೆದಿರುವುದು.

~ತೇಜಸ್ವಿನಿ ಹೆಗಡೆಶುಕ್ರವಾರ, ಏಪ್ರಿಲ್ 27, 2018

ಮಹಾಯಾತ್ರಿಕ

ಬಿಭೂತಿಭೂಷಣ ವಂದ್ಯೋಪಾಧ್ಯಾಯರು ರಚಿಸಿದ “ಪಥೇರ್ ಪಾಂಚಾಲಿ” ಕಾದಂಬರಿ ಸುಪ್ರಸಿದ್ಧ. ಬಹಳ ಹಿಂದೆ ಈ ಕಾದಂಬರಿಯ ಹೆಸರು ಕೇಳಿದಾಗಿನಿಂದ ಇದನ್ನೋದಬೇಕೆಂದು ಬಯಸಿದ್ದೆ. ಅದೇನೋ ಹೇಳುತ್ತಾರಲ್ಲ, ಎಲ್ಲವುದಕ್ಕೂ ಕಾಲ ಕೂಡಿಬರಬೇಕೆಂದು. ಒಳ್ಳೆಯ ಪುಸ್ತಕವನ್ನೋದಿ ಅನುಭೂತಿಸಲೂ ಸುಮುಹೂರ್ತ ಕೂಡಿಬರಬೇಕಾಗುತ್ತದೆ ಮತ್ತು ಆ ಒಳ್ಳೆಯ ಘಳಿಗೆ ವೈಯಕ್ತಿಕವಾಗಿ ನಮಗೇನೋ ತುಸು ತೊಂದರೆಯನ್ನುಂಟುಮಾಡಿಯಾದರೂ ಸರಿಯೇ ಸಫಲವಾಗುತ್ತದೆ! ಕಾಲಿಗೆ ಮತ್ತು ಕೈಗೆ ಅನಿರೀಕ್ಷಿತ ಪೆಟ್ಟಾಗಿ ತುಸು ಹೆಚ್ಚೇ ವಿಶ್ರಾಂತಿಯನ್ನು ವೈದ್ಯರು ಹೇರಲು, ಮೊದಲು ಬಹಳ ಕಿರಿಕಿರಿಯಾದರೂ ತಕ್ಷಣ ನನ್ನ ಕಣ್ಣಿಗೆ ಬಿದ್ದಿದ್ದು, ಕೆಲವು ತಿಂಗಳ ಹಿಂದೆ ನಾನೇ ತರಿಸಿಟ್ಟಿದ್ದ “ಮಹಾಯಾತ್ರಿಕ” ಪುಸ್ತಕ! ತಕ್ಷಣ ನೋವು ಎಷ್ಟೋ ಶಮನವಾಗಿತ್ತು. ‘ಪಥೇರ್ ಪಾಂಚಾಲಿ’ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಅಹೋಬಲ ಶಂಕರ ಅವರು. ಇದನ್ನು ಪ್ರಕಟಿಸಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಏನೇನೋ ಕೆಲಸಗಳ ಭಾರದಲ್ಲಿ, ಕೆಲವು ನಾನೇ ಹೇರಿಕೊಂಡ ನೆಪಗಳೊಳಗೆ ಈ ಪುಸ್ತಕವನ್ನೋದುವುದೇ ಮರೆತುಬಿಟ್ಟಿದ್ದೆ. ಧುತ್ತನೆದುರಾದ ಪರಿಸ್ಥಿತಿ ತಲೆಗೊಂದು ಮೊಟಕಿ ಈ ಪುಸ್ತಕವನ್ನು ಕೈಯಲ್ಲಿ ಹಿಡಿಸಿತ್ತು. 

ಮೊದಲ ಹತ್ತಿಪ್ಪತ್ತು ಪುಟಗಳನ್ನೋದಲು ತುಸು ಕಠಿಣವಾಯಿತು. ಕಾರಣ, ಅಂದಿನ ವಂಗದೇಶದ, ಸಾವಿರದ ಒಂಬೈನೂರರ ಆಸು ಪಾಸಿನಲ್ಲಿ ನಡೆವ ಆ ಕಥಾಚಿತ್ರಣವನ್ನು ಹಾಗೂ ಮೂಲ ಭಾಷೆಯ ಸೊಗಡನ್ನು ಹೀರಿ ಅದನ್ನೇ ಇಲ್ಲಿ ಕಟ್ಟಿಕೊಡುವಾಗ ಅನುವಾದಕರು ಕೆಲವೊಂದು ಕಥಾ ಚಿತ್ರಣಗಳನ್ನು, ಅಲ್ಲಿನ ಭಾಷೆಯ ಶೈಲಿಯನ್ನು ಹಾಗೇ ಇಳಿಸಿದ್ದು ಓದಲು ತಿಣುಕಾಡುವಂತೆ ಮಾಡಿತು. ಆದರೆ ಒಮ್ಮೆ ಅದರ ಆತ್ಮವನ್ನು ಹೊಕ್ಕಿದ ಮೇಲೆ, ಈ ರೀತಿಯ ಅನುವಾದದ ಶೈಲಿಯನ್ನು, ಭಾಷೆಯನ್ನು ಅರ್ಥೈಸಿಕೊಂಡು ಅದರ ನಾಡಿಯನ್ನು ಹಿಡಿದ ಮೇಲೆ ನಾನೇ ಕಥೆ ನಡೆವ ಗ್ರಾಮದಲ್ಲಿದ್ದೆ!
ಈ ಕಾದಂಬರಿಯನ್ನೋದುವ ಮೊದಲು ಇದರ ಹಿನ್ನಲೆ, ಮುನ್ನಲೆ ಅಥವಾ ಕನಿಷ್ಟ ಕಥೆಯೇನೆನ್ನುವುದೂ ತಿಳಿದಿರಲಿಲ್ಲ. ಸತ್ಯಜಿತ್ ರೇ ಅವರ ಪಥೇರ್ ಪಾಂಚಲಿಯನ್ನೂ ನಾನು ನೋಡಿರಲಿಲ್ಲ. ಹೀಗಾಗಿ ಬಹಳ ಕುತೂಹಲದಿಂದಲೇ ಪುಸ್ತಕ ಹಿಡಿದದ್ದು. ಮಹಾಯಾತ್ರಿಕ ಎಂಬ ಶೀರ್ಷಿಕೆಯನ್ನೋದಿದ ಮೇಲೆ ಇದು ಬಹುಶಃ ಓರ್ವ ವ್ಯಕ್ತಿಯ ಯಾತ್ರೆಯ, ಪ್ರವಾಸದ ಕಥೆ ಎಂದು ತಿಳಿದಿದ್ದೆ. ಆತ ಬೇರೆ ಬೇರೆ ಪ್ರದೇಶಗಳನ್ನು ತಿರುಗಾಡುತ್ತಾ, ದೇಶಾಂತರ ಹೋಗುತ್ತಾ ತಾನು ಕಂಡದ್ದು ಹೇಳುತ್ತಾನೇನೋ ಎಂದು ಭಾವಿಸಿದ್ದೆ. ಆದರೆ ಸುಮಾರು ನೂರು ಪುಟಗಳನ್ನೋದುವಾಗ ಅರ್ಥವಾಯಿತು ಇದು ಬೇರೆಯದೇ ರೀತಿಯ ಪ್ರಯಾಣವೆಂದು! ಬಹಳ ಸುಂದರ, ಅಷ್ಟೇ ತ್ರಾಸದಾಯಕ, ಮನೋಹರ ಹಾಗೇ ಮನಕಲಕುವ ಕಥಾ ಹಂದರವುಳ್ಳ ವಿಶಿಷ್ಟ ಕಾದಂಬರಿಯಿದು! ಓರ್ವ ದೂರದೂರಿಗೆ ಹೋಗದೇ, ಹೊಸ ತಾಣಗಳನ್ನು ಕಾಣದೇ, ತನ್ನ ಪರಿಸರದ ಸುತ್ತಮುತ್ತಲನ್ನೇ ಸುತ್ತುಹಾಕುತ್ತಾ, ಪ್ರಕೃತಿ ಅಡಗಿಸಿರುವ ನಿಗೂಢನೆಯನ್ನು ಬಯಲಾಗಿಸುತ್ತಾ, ಅದರೊಳಗಿನ ಅನೇಕ ರಹಸ್ಯಗಳನ್ನು ಬಿಚ್ಚಿಡುತ್ತಾ ಹೋಗುವುದೂ ಒಂದು ಮಹಾಯಾತ್ರೆಯೇ, ಅದನ್ನು ನಡೆಸುವವರೆಲ್ಲಾ ಮಹಾಯಾತ್ರಿಕರೇ ಎಂಬುದನ್ನು ಈ ಕಾದಂಬರಿಯನ್ನೋದಿ ಅರಿತುಕೊಂಡೆ.
ಮುಕ್ಕಾಲುವಾಸಿ ಕಥೆ ನಡೆಯೋದು ವಂಗದೇಶದ(ಬಂಗಾಳ ಪ್ರಾಂತ್ಯ) ನಿಶ್ಚಿಂದಿಪುರದ ಸುಂದರ ಪರಿಸರದಲ್ಲಿ ಮತ್ತು ದುರ್ಗಾ ಎಂಬ ೧೩-೧೪ರ ಹರೆಯದ ಅಕ್ಕ ಹಾಗೂ ೮-೯ ವರುಷದ ತಮ್ಮ ಅಪುವಿನ ಸುತ್ತಮುತ್ತಲೂ.
ಸರ್ವಜಯಾ ಮತ್ತು ಹರಿಹರರಾಯ ದಂಪತಿಗಳ ಮಕ್ಕಳಾದ ಅಪು(ಅಪೂರ್ವಚಂದ್ರರಾಯ್) ಮತ್ತು ದುರ್ಗಾ, ಅವರ ಬದುಕಲ್ಲಿ ಯಥೇಚ್ಛಾಗಿ ತುಂಬಿದ ಕಡು ಬಡತನ, ಅವಮಾನ, ಪ್ರತಿ ದಿವಸದ ಕೂಳಿಗೋಸ್ಕರ ಅವರು ನಡೆಸುವ ಹೋರಾಟ ಇದಿಷ್ಟೇ ಎಳೆಯಿಟ್ಟುಕೊಂಡೇ ಅದ್ಭುತವಾಗಿ ಕಥೆ ಹಣೆಯಲಾಗಿದೆ. ಆದರೆ ಎಲ್ಲಿಯೂ ಅವರ ಬಡತನ ನಮ್ಮಲ್ಲಿ ಕೇವಲ ದುಃಖ, ಸಂಕಟವನ್ನು ತುಂಬದೇ, ಅವರನ್ನಾವರಿಸಿದ್ದ ಸುಂದರ ಪಕೃತಿ ನೀಡುವ ಸಾಂತ್ವನ, ಅದರ ಸಂಪತ್ತು ಅವರೊಳಗೆ ತುಂಬುವ ಅಪಾರ ಸಂತೋಷ, ವನದುರ್ಗೆ ಆ ಮುಗ್ಧ ಮಕ್ಕಳ ಮನಸ್ಸನ್ನು ತಿದ್ದಿ, ತೀಡಿ ವಿಕಸಗೊಳಿಸಿ ಅವರೊಳಗೆ ಹನಿಸುವ ಆನಂದಾಶ್ರುಗಳನ್ನು ನಮ್ಮಲ್ಲಿಗೂ ಹರಿಸಿ, ಹಲವೆಡೆ ನಮ್ಮ ಕಣ್ಣಂಚೂ ಒದ್ದೆಯಾಗಿಸಿಬಿಡುತ್ತದೆ. ಆ ಎಳೆಯ ಮಕ್ಕಳು ತಮ್ಮ ವಿಶಾಲ ಕಣ್ಗಳಿಂದ ಮನೆಯೊಳಗಿನ ಬಡತನವ ಮರೆತು ತಮ್ಮ ಗ್ರಾಮ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಉಣ್ಣುತ್ತಾರೆ. ವನದೇವತೆಯು ತನ್ನ ಒಡಲೊಳಗೆ ತುಂಬಿಹ ವಿಪುಲತೆಯನ್ನು ತೋರಿ ಅವರಿಗೆ ಸಿಹಿಯಾದ ಆಹಾರವನ್ನು ನೀಡುತ್ತಾಳೆ. ಅದನ್ನೆಲ್ಲಾ ಮನಸೋ ಇಚ್ಛೆ ಸೇವಿಸುವ ಆ ಇಬ್ಬರು ಎಳೆಯರು ಕೊನೆ ಕೊನೆಗೆ ವಿಶ್ವವನ್ನೇ ಸ್ವಾಹಾ ಮಾಡಲು ಬಯಸುವಂಥ ಹಸಿವಿನಿಂದ ಕಂಡಂದ್ದನ್ನೆಲ್ಲಾ ಕಬಳಿಸುತ್ತಾ ನಮ್ಮೊಳಗೂ ಹಸಿವನ್ನು ಹುಟ್ಟಿಸಿಬಿಡುತ್ತಾರೆ. ಹಗಲಿರುಳೂ ಅವರು ತಿರುಗುವ ಅಂಥದ್ದೊಂದು ಅತ್ಯದ್ಭುತ ಪರಿಸರಕ್ಕೆ ಜೀವಿತದಲ್ಲೊಮ್ಮೆಯಾದರೂ ತಿರುಗಬೇಕೆಂಬ ಬಯಕೆ ಬೆಳೆದುಬಿಡುತ್ತದೆ. ಆದರೆ ಕ್ರಮೇಣ ಕಾದಂಬರಿಯೇ ನಮಗೆ ಕಟುವಾಸ್ತವಿಕತೆಗೂ, ಕಲ್ಪನೆಗೂ ಇರುವ ಅಂತರ ಹಾಗೂ ಮತ್ತೊಬ್ಬರ ಬದುಕಿನಲ್ಲಿ ನಾವು ಕಾಣುವ ಸುಂದರತೆಗೂ, ದೂರದ ಬೆಟ್ಟದ ಸೌಂದರ್ಯಕ್ಕೂ ಇರುವ ಸಾಮ್ಯವನ್ನು ತೋರಿಬಿಡುತ್ತದೆ.
ಆದರೂ ದುರ್ಗಾ ಹಾಗೂ ಅಪುವಿನಲ್ಲಿ ಹೇರಳವಾಗಿರುವ ಪ್ರಕೃತಿ ಜ್ಞಾನ ನಮ್ಮ ಅರಿವನ್ನೂ ಹೆಚ್ಚಿಸುತ್ತದೆ. ಅದರಲ್ಲೂ ವಿಶೇಷವಾಗಿ ಅಪುವಿನ ಕಲ್ಪನಾ ಶಕ್ತಿ, ಅದಕ್ಕೆ ಹದವಾಗಿ ಬೆರೆತ ಮುಗ್ಧತೆ, ಆತನ ಅಪಾರ ಸೌಂದರ್ಯ ಪ್ರಜ್ಞೆ ನಿಬ್ಬೆರಗಾಗಿಸುತ್ತದೆ. ಉದಾಹರಣೆಗೆ ಒಂದೆಡೆ ಅಪು ಗುಡುಗು ಸಿಡಿಲಿನ ಆರ್ಭಟವನ್ನು ಕಂಡು ಹೀಗೆ ಕಲ್ಪಿಸಿಕೊಳ್ಳುತ್ತಾನೆ... “ದೇವರು ಹೇಗೆ ಕತ್ತಿ ಮಸೆಯುತ್ತಾನೆ, ಅದಕ್ಕೇ ಆ ಹೊಳಪು! ಈಸಲ ಖಂಡಿತ ಘರ್ಜನೆ ಮಾಡುತ್ತಾನೆ.”
ಅದೇ ರೀತಿ ಇತ್ತ ದುರ್ಗಾ ಎಂಬ ಪುಟ್ಟ ಕೂಸು, ಕಾಡಿನ ಯಾವ ಮೂಲೆಯಲ್ಲಿ, ಯಾವ ಮರದಲ್ಲಿ ಎಂಥಾ ರೀತಿಯ ಹಣ್ಣು ದೊರಕುತ್ತದೆ, ಹುಲ್ಲುಗಾವಲಿನ ಬಯಲ ಸೌಂದರ್ಯವನ್ನು ಹೇಗೆ ಸವಿಯಬೇಕು, ಬಿದಿರುವನದಲ್ಲಿ ಎಂಥಾ ಬಿದುರು ಬೆತ್ತಕ್ಕೆ, ಕೊಳಲಿಗೆ ಯೋಗ್ಯ, ಯಾರ ಹಿತ್ತಲಿನ, ಯಾವ ಮರದ ಬುಡದಲ್ಲಿ ಗಡ್ಡೆ ಗೆಣಸಿರುತ್ತದೆ, ಎಂಥಾ ಸೊಪ್ಪು ಪದಾರ್ಥಕ್ಕೆ ಯೋಗ್ಯ ಎಂಬೆಲ್ಲಾ ವನ ಪಾಠವನ್ನು ತನ್ನ ತಮ್ಮನಿಗೆ ನೀಡುವಾಗ ನಾವೂ ಕಲಿಯುತ್ತಾ, ಗ್ರಾಮವನ್ನೆಲ್ಲಾ ಅವರೊಂದಿಗೆ ಸುತ್ತಿ, ಕಾಡು, ಮೇಡು, ಬೇಟ್ಟವನ್ನೆಲ್ಲಾ ತಿರುಗಿ ಹೊಟ್ಟೆಯನ್ನು ತುಂಬಿಸಿಕೊಂಡು ಆನಂದ ಪಡುತ್ತೇವೆ.
ಅನುವಾದಕರಾದ ಅಹೋಬಲ ಶಂಕರ ಅವರು ತಮ್ಮ “ಅರಿಕೆ”ಯಲ್ಲಿ ಹೀಗೆ ಹೇಳುತ್ತಾರೆ...
“ವಂಗಸಾಹಿತ್ಯದಲ್ಲಿ ಪಥೇರ್ ಪಾಂಚಾಲಿಯಂತಹ ಕಾದಂಬರಿ ಯಾರೂ ಬರೆದಿರಲಿಲ್ಲ. ಎಲ್ಲಾ ಹೊಸದೇ ಅದರಲ್ಲಿ - ವಸ್ತು ಮತ್ತು ಪಾತ್ರಸೃಷ್ಟಿ ಸರಳವಾದರೂ, ಕಣ್ಣಿಗೆ ಕಟ್ಟುವ ವರ್ಣನೆಗಳು; ಹೆಚ್ಚಾಗಿ ಕಥೆಯಲ್ಲಿ ಮೊದಲಿನಿಂದ ಕಡೆಯವರೆಗೂ ಮನ ಸೆಳೆಯುವ ಅದರ ವಿಚಾರ ದೃಷ್ಟಿ, ಜೀವವರ್ಗದ ಬಗ್ಗೆ ಹೊರಹೊಮ್ಮುವ ಅಂತಃಕರಣ, ವಂಗದೇಶದ ಆತನ ಗ್ರಾಮ ಜೀವನವನ್ನು ವರ್ಣಿಸುವಾಗ ಅತಿಸಾಮಾನ್ಯ, ಅತಿ ಕ್ಷುದ್ರವೆಂಬಂತಹುದನ್ನೂ ಅತಿ ದೊಡ್ಡ ಘಟನೆಯಂತೆಯೇ ಸೂಕ್ಷ್ಮವಾಗಿ, ಅಂತರಂಗಿಕವಾಗಿ ಬಿಡಿಸಿ ಹೇಳುವಿಕೆ, ಹಳ್ಳಿಯ ಜನರ ಜೀವನದಲ್ಲಿ ಹಾಸು ಹೊಕ್ಕಾಗಿ ಬರುವ ಮುಗ್ಧ ಹಾಸ್ಯದೊಂದಿಗೆ ಕರುಳು ಕುಯ್ಯುವ ಒಳವೇಡನೆ, ದಾರಿದ್ರ್ಯದಿಂದ, ಮೌಢ್ಯ-ಅಸಹನೆಗಳಿಂದ ಮನುಷ್ಯನೇ ಮನುಷ್ಯನಾತ್ಮಕ್ಕೆ ಮಾಡುವ ಘೋರ ಅಪಮಾನ-ಇವುಗಳೆಲ್ಲವನ್ನೂ ಉತ್ಪ್ರೇಕ್ಷೆಯಿಲ್ಲದೇ, ರೋಷವಿಲ್ಲದೆ, ಭಾವೋತ್ಕಟನೆಯಿಲ್ಲದೇ ಕಲಾತ್ಮಕವಾಗಿ ನಿರೂಪಿಸಿರುವ ಜಾಣ್ಮೆ, ಬೇರೆ ಯಾರೂ ಪಡೆಯದಿದ್ದ ಹೊಸ ಬಗೆಯ ಕಥನ ಶೈಲಿ, ಕೆಲವೇ ಪದಗಳಲ್ಲಿ ಮನಸ್ಸಿನಲ್ಲಿ ಸದಾ ನಿಲ್ಲಿವಂತೆ ಚಿತ್ರಗಳನ್ನು ಕಟ್ಟುವ ಕುಶಲತೆ-ಇವೆಲ್ಲ ಪಂಡಿತ ಪಾಮರರನ್ನು ಬೆರಗುಗೊಳಿಸಿಬಿಟ್ಟವು.”
***
ತಾಯಿ ಹಾಗೂ ಮಗು ಹೇಗೆ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಈ ಅನೂಹ್ಯ ಬಾಂಧವ್ಯವನ್ನು ಬೆಸೆದುಕೊಳ್ಳುತ್ತಾರೆ, ಕೇವಲ ತಾಯಿ ಮಾತ್ರ ಕೊಡುವವಳಲ್ಲ, ಮಗುವೂ ತಾಯಿಗೆ ಏನೇನೆಲ್ಲಾ ಧಾರೆಯೆರೆಯುತ್ತದೆ ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿ ನಮ್ಮ ದೃಷ್ಟಿಕೋನವನ್ನೇ ತೆರೆಯುತ್ತಾರೆ ಲೇಖಕರು.
ಈ ಯಾನದಲ್ಲಿ ನಗುವಿದೆ, ನಿಶ್ಶಬ್ದ ಅಳುವಿದೆ, ಕರುಳು ಕೊರೆವ ಯಾತನೆಯಿದ್ದರೂ ಪ್ರಕೃತಿ ಲೇಪಿಸುವ ಸಾಂತ್ವನವಿದೆ. ಕರ್ಮಫಲ, ಅಂದರೆ ಈ ಜನ್ಮದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ, ಅರೆತೋ ಅರಿಯದೆಯೋ ಮತ್ತೊಂದು ಜೀವಕ್ಕೆ ಕೊಡುವ ನೋವಿನ ಫಲ, ಮತ್ತೋರ್ವ ವ್ಯಕ್ತಿಯನ್ನು ಹಿಂಸಿಸುವ ಫಲ ಈ ಜನ್ಮದಲ್ಲೇ ತೀರಿಸುತ್ತೇವೆ ಅನ್ನೋ ಒಂದು ಕಾನ್ಸೆಪ್ಟ್ (ಇದು ಎಷ್ಟರಮಟ್ಟಿಗೆ ನಿಜ ಅನ್ನೋದರ ಕುರಿತು ಇನ್ನೂ ಸಣ್ಣ ಅನುಮಾನ ಇದೆ ನನ್ನೊಳಗೆ) ಪ್ರಸ್ತುತ ಕಾದಂಬರಿಯ ಕೊನೆಯಲ್ಲಿ ದುರ್ಗಾಳ ಅಮ್ಮ ಹರಿಸುವ ಪಶ್ಚಾತ್ತಾಪದ ಕಣ್ಣೀರಿನಲ್ಲಿ ಎದ್ದು ಕಾಣಿಸುತ್ತದೆ. ಒಂದೆರಡು ಪ್ರಸಂಗಗಳನ್ನೋದಿಯಂತೂ ಪುಸ್ತಕವನ್ನು ಮುಚ್ಚಿಟ್ಟು, ಕಣ್ಮುಚ್ಚಿ ಒಳಗೊಳಗೇ ಅತೀವ ದುಃಖ ಅನುಭವಿಸಿಬಿಟ್ಟೆ. ಅಷ್ಟು ತೀವ್ರವಾಗಿದೆ ಯಾನದ ಆ ಘಟ್ಟ! ಅದನ್ನಿಲ್ಲಿ ಬೇಕೆಂದೇ ಉಲ್ಲೇಖಿಸುತ್ತಿಲ್ಲ. ಓದುಗರು ಓದುತ್ತಾ ಹೋಗುವಾಗ ಹಠಾತ್ ಅದು ಎದುರಾದಾಗಲೇ ಅದರ ಸಹಜ ಭಾವವನ್ನು ಹೀರಬಹುದೆಂದು ಆ ದೃಶ್ಯದ ವರ್ಣನೆಗೆ ಹೋಗುತ್ತಿಲ್ಲ. ಅಲ್ಲದೇ, ಅಲ್ಲಲ್ಲಿ ಬರುವ ಸಣ್ಣ ಕವಿತೆಗಳು, ಜನಪದ ಹಾಡುಗಳೊಳಗಿನ ವಿಡಂಬನೆ ಎಲ್ಲವೂ ಕಥೆಯ ಸ್ವಾದವನ್ನು ಹೆಚ್ಚಿಸುವಂತಿವೆ.
ಮೂಲ ಕಾದಂಬರಿಯನ್ನು ನಾನು ಓದಲು ಸಾಧ್ಯವಿಲ್ಲ. ಆದರೆ ಅನುವಾದ ಬಹಳ ಸಶಕ್ತವಾಗಿ ನಮ್ಮನ್ನಾವರಿಸುವುದಂತೂ ಖಂಡಿತ. ಕೆಲವೊಂದೆಡೆ ಅನುವಾದ ತುಸು ಸಂಕೀರ್ಣವಾಗಿದ್ದು, ಎರಡು ಸಲ ಓದನ್ನು ಬೇಡುವಂತಿದ್ದರೂ, ಓದಿನ ಸುಖಕ್ಕೆ ಅಷ್ಟು ತ್ರಾಸ ತೆಗೆದುಕೊಳ್ಳುವುದು ಒಳ್ಳೆಯದೇ ಎನ್ನಬಹುದು.
ಕಾದಂಬರಿಯನ್ನೋದಿದ ಮೇಲೆ ಅಪಾರ ಕುತೂಹಲದಿಂದ, ಬಹು ಚರ್ಚಿತ, ಎಲ್ಲೆಡೆ ಮಾನ್ಯಗೊಂಡ ಸತ್ಯಜಿತ್ ರೇ ಅವರ ಪಥೇರ್ ಪಾಂಚಾಲಿ ಚಿತ್ರದ ಕೆಲವು ತುಣುಕುಗಳನ್ನು ಹುಡುಕಿ ನೋಡಿದೆ. ಸ್ವಲ್ಪ ನಿರಾಸೆಯಾಯ್ತು. ಯಾವೆಲ್ಲಾ ದೃಶ್ಯಗಳನ್ನು ಪುಸ್ತಕದಲ್ಲೋದಿ ಪುಳಕಿತಳಾಗಿದ್ದೆನೋ ಅದೇ ದೃಶ್ಯವನ್ನೊಳಗೊಂಡ ಒಂದೆರಡು ತುಣುಕುಗಳೇ ಸಿಕ್ಕಿವು ನನಗೆ. ಆದರೆ ಚಿತ್ರದಲ್ಲಿ ಅವುಗಳನ್ನು ಬಹಳ ನೀರಸ ಸಪ್ಪೆಯಾಗಿ ಕಥೆಯನ್ನು ತುಸು ಬದಲಾಯಿಸಿದಂತೇ ಕಂಡಿತು. ಹಾಗೆಯೇ, ಗೂಗಲ್ ಮಾಡಿದಾಗ ಅಪು ದೊಡ್ಡವನಾಗಿ, ಮದುವೆಯಾಗಿ, ಆಮೇಲೆ ಅವನ ಬದುಕು ಬದಲಾದ ಕ್ರಮವೂ ಕಾದಂಬರಿಯಲ್ಲಿದೆ ಎಂಬಂತಹ ಮಾಹಿತಿಗಳೂ ಸಿಕ್ಕವು. ಆದರೆ ಪ್ರಸ್ತುತ ಅನುವಾದಿತ ಕಾದಂಬರಿಯಲ್ಲಿ ಆ ಘಟ್ಟವಿಲ್ಲ! ಮೂಲ ಓದಿದವರು ಅಥವಾ ಬಲ್ಲವರು ಹೇಳಿದರೆ ಬಹಳ ಒಳ್ಳೆಯದು. ಒಟ್ಟಿನಲ್ಲಿ ೪೦೦ ಪುಟಗಳ ಈ ಕಾದಂಬರಿಯ ಯಾನವು ಓದುವಷ್ಟು ಹೊತ್ತು ಮತ್ತು ಓದಿದಾನಂತರವೂ ನಮ್ಮನ್ನು ಬೇರೆಯದೇ ಲೋಕಕ್ಕೆ ಒಯ್ಯಲು ಸಮರ್ಥವಾಗಿದೆ ಎನ್ನುವುದು ನನ್ನ ಅನಿಸಿಕೆ. ಒಮ್ಮೆ ನೀವೂ ಈ ಯಾನದಲ್ಲಿ ಪಾಲ್ಗೊಂಡು ಆ ಇಬ್ಬರು ಪುಟ್ಟ ಮಹಾನ್ ಯಾತ್ರಿಕರ ಸಂಗಡ ಪ್ರಯಾಣಿಸಿ ನೋಡಿ, ಹಾಗೆಯೇ ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ.
ನಾನಂತೂ ವಿಭೂತಿಭೂಷಣರ ಕಥೆಗಳ, ಶೈಲಿಯ ಅಭಿಮಾನಿಯಾಗಿಬಿಟ್ಟಿರುವೆ. ಈಗ ನನ್ನ ಮಗಳು ಹಾಗೂ ತಂಗಿಯ ಮಗನಿಗೆ ಅಪೂ ಮತ್ತು ದುರ್ಗಾರ ಸಾಹಸಗಾಥೆಯನ್ನು, ಬದುಕಲ್ಲಿ ಅವರು ಕಾಣುವ ಕಷ್ಟಗಳು, ನಡೆಸುವ ಹೋರಾಟ, ವನದೇವತೆಯೊಳಗಿರುವ ಸಂಪತ್ತು ಇವೆಲ್ಲವನ್ನೂ ರಸವತ್ತಾಗಿ ಕಥೆ ಹೇಳಲು ತೊಡಗಿರುವೆ. ಆ ಮೂಲಕ ನನ್ನ ಯಾತ್ರೆ ಇನ್ನೂ ಜಾರಿಯಲ್ಲಿದೆ!
ಅಂದಹಾಗೆ "ಪಥೇರ್ ಪಾಂಚಾಲಿ" ಎಂದರೆ Song of the Little Road.
*
ಮಹಾಯಾತ್ರಿಕ
(ಪಥೇರ್ ಪಾಂಚಾಲಿ)
ಮೂಲ : ವಿಭೂತಿಭೂಷಣ ವಂದ್ಯೋಪಾಧ್ಯಾಯ
ಅನು: ಅಹೋಬಲ ಶಂಕರ
ಪುಟಗಳು : ೪೦೨
~ತೇಜಸ್ವಿನಿ ಹೆಗಡೆ.

ಭಾನುವಾರ, ಫೆಬ್ರವರಿ 25, 2018

ಭಯದ ಬೆನ್ನೇರಿ!


ಅದೊಂದು ದಿವಸ ಮೂಢನಂಬಿಕೆಗಳ ಮೇಲೆ ಬರೆದಿದ್ದ ಒಂದು ಹಾಸ್ಯ ಪ್ರಬಂಧವನ್ನು ಓದುತ್ತಾ ಉರುಳಾಡಿ ನಗುತ್ತಿದ್ದೆ. ಅದೇ ಸಮಯದಲ್ಲೇ ನನ್ನ ಹತ್ತು ವರುಷದ ಮಗಳು ಸಣ್ಣ ಮುಖ ಮಾಡಿಕೊಂಡು ಬರಲು, ನಗುವನ್ನು ಸಂಭಾಳಿಸಿಕೊಳ್ಳುತ್ತಲೇ “ಏನಾಯ್ತು?” ಎಂದು ನಾನು ಕೇಳಿದೆ. ಎಷ್ಟು ತಡೆಹಿಡಿದರೂ, ನಗು ಉಕ್ಕುತ್ತಲೇ ಇತ್ತು. ಇದನ್ನು ಕಂಡು ಮಗಳು ಮುಖ ಗಂಟಿಕ್ಕಿಕೊಂಡಳು. “ಅಮ್ಮಾ ನೀ ಒಂದೋ ನಗು ಇಲ್ಲಾ ಮಾತನಾಡು... ನಾನೆಷ್ಟು ಬೇಜಾರಿನಲ್ಲಿದ್ದೇನೆ ಈಗ ಗೊತ್ತಾ? ನೀ ಹೀಂಗೆಲ್ಲಾ ನಗ್ತಾ ಕೇಳಿದ್ರೆ ನಾ ಹೇಂಗೆ ನಿನ್ನ ಹತ್ರ ವಿಷ್ಯ ಹೇಳೋದು?” ಎಂದು ಕೇಳಲು ಥಟ್ಟನೆ ಗಂಭೀರತೆ ತಂದುಕೊಂಡು ಅವಳನ್ನು ಸಮಾಧಾನಗೊಳಿಸುತ್ತಾ ವಿಷಯ ಕೇಳಿದೆ. “ನನ್ನ ಶಾಲೆಯಲ್ಲಿ ಕೆಲವು ಫ್ರೆಂಡ್ಸು ಬ್ಲಡ್ಡಿ ಮೇರಿ ಎಂಬ ದೆವ್ವದ ಬಗ್ಗೆ ಕಥೆ ಹೇಳಿದ್ದಾರೆ ಗೊತ್ತಾ... ಆ ದೆವ್ವದ ಹೆಸ್ರನ್ನು ಮೂರು ಸಲ ಹೇಳಿಬಿಟ್ರೆ ಅದು ನಮ್ಮಲ್ಲಿಗೇ ಬರುತ್ತದೆಯಂತೆ! ನಾನು ಈಗಾಗಲೇ ಬಹಳ ಸಲ ಆ ದೆವ್ವದ ಹೆಸ್ರನ್ನು ಹೇಳಿಬಿಟ್ಟಿದ್ದೇನೆ... ಹೀಗಾಗಿ ನಂಗೆ ಬಹಳ ಟೆನ್ಷನ್ ಆಗ್ತಿದೆ ಅಮ್ಮಾ...” ಎನ್ನಲು ನಗು ಒದ್ದುಕೊಂಡು ಬಂದರೂ, ಅದನ್ನು ತಡೆಹಿಡಿಯಲು ಹೆಣಗಾಡುತ್ತಾ, “ಓಹೋ... ಇದು ವಿಷಯ! ನೋಡು ಪುಟ್ಟಿ, ಇದೆಲ್ಲಾ ಸುಳ್ಳೆಪುಳ್ಳೆ ಕಥೆಗಳು ಅಷ್ಟೇ. ದೇವರಿರೋ ಕಡೆ ದೆವ್ವವಿರೋಕೆ ಸಾಧ್ಯವೇ ಇಲ್ಲಾ. ದೇವರು ಎಲ್ಲಾ ಕಡೆ ಇದ್ದಾನೆ... ನಮ್ಮೊಳಗೂ ಇದ್ದಾನೆ ಅಂತ ಹೇಳಿದ್ದೇನಲ್ಲಾ ನಿಂಗೆ ಎಷ್ಟೋ ಸಲ... ಸೋ ಈ ಬ್ಲಡಿ ಮೇರಿ ಎಲ್ಲಾ ಬರೋದಿಲ್ಲ” ಎನ್ನುವಾಗಲೇ ಆಕೆ ನಡುವೆ ಬಾಯಿ ಹಾಕಿ “ಬ್ಲಡಿ ಅಲ್ಲಾ ಬ್ಲಡ್ಡಿ ಅಂತ ಹೇಳು... ಬ್ಲಡ್ ಬಡ್ಕೊಂಡಿರತ್ತಂತೆ ಅದ್ರ ಮುಖದ ತುಂಬಾ” ಎಂದು ಕಿರುಚಲು ನನಗೂ ನಾನು ದೆವ್ವದ ಹೆಸರನ್ನು ತಪ್ಪು ಉಚ್ಚರಿಸಿ ಏನೋ ಅನಾಹುತವೇ ಮಾಡಿಬಿಟ್ಟೆನೇನೋ ಎಂದೆನಿಸಿಬಿಟ್ಟಿತು. ಅರೆಕ್ಷಣ ಆಲೋಚನೆಗೆ ಬಿದ್ದ ಅವಳ ಮುಖದಲ್ಲಿ ಇದ್ದಕ್ಕಿದ್ದಂತೇ ಸಾವಿರ ಕ್ಯಾಂಡಲ್ ಬಲ್ಬಿನ ಬೆಳಕು ಮೂಡಿತು. ಸದ್ಯ ನನ್ನ ಮಾತು ಇಷ್ಟು ಬೇಗ ಪರಿಣಾಮ ಬೀರಿತೆಂದು ಬೀಗುವಾಗಲೇ, “ಐಡಿಯಾ ಅಮ್ಮಾ! ನನ್ನ ಫ್ರೆಂಡ್ಸ್ ಇದನ್ನೂ ಹೇಳಿದ್ದಾರೆ... ನಾವು ನಮ್ಮ ಎಡಗೈ ಮೇಲೆ ಬಲಗೈಯಿಯ ಮೂರು ಬೆರಳುಗಳಿಂದ ರಾಮ, ಕೃಷ್ಣ, ಸೀತೆ ಎಂದು ಗುಟ್ಟಾಗಿ ಹೇಳಿ ಜೋರಾಗಿ ಹೊಡೆಯಬೇಕಂತೆ... ಆಗ ಮೂರು ಕೆಂಪು ಬಣ್ಣದ ಗೆರೆಗಳು ಬಿದ್ರೆ ಬ್ಲಡ್ಡಿ ಮೇರಿ ಬರೋದಿಲ್ವಂತೆ! ನನ್ನ ಕೈ ತುಂಬಾ ಸಣ್ಣ... ಎಲ್ಲಿ ನಿನ್ನ ಕೈ ಕೊಡು ಟ್ರೈ ಮಾಡುವ” ಎನ್ನಲು, ನನಗೀಗ ನಿಜಕ್ಕೂ ಬ್ಲಡ್ಡಿ ಮೇರಿಯ ಮೇಲೆ ಸಿಟ್ಟು ಬಂದಿತ್ತು. ನಾನೇನಾದರೂ ಸಮಜಾಯಿಶಿ ಕೊಡುವ ಮುನ್ನವೇ, ಒತ್ತಾಯದಿಂದ ನನ್ನ ಎಡಗೈಯನ್ನು ಎಳೆದುಕೊಂಡ ಆಕೆ, ಎಡ ಮೊಣಕೈಯಿಯ ಮೇಲ್ಭಾಗದಲ್ಲಿ ತನ್ನ ಬಲಗೈಯ ನಡುವಿನ ಮೂರು ಬೆರಳುಗಳಿಂದ ಜೋರಾಗಿ ಹೊಡೆಯಲು ಅಪ್ರಯತ್ನವಾಗಿ ರಾಮಕೃಷ್ಣರನ್ನು ನೆನೆಯಬೇಕಾಯ್ತು. ಕೈ ಮೇಲೆ ರಾಮ, ಸೀತೆ, ಲಕ್ಷ್ಮಣರ ಕೆಂಪು ಗೆರೆಯ ರೂಪದಲ್ಲಿ ಅರೆಕ್ಷಣ ಮೂಡಿ ನಿಧಾನಕ್ಕೆ ಮಾಯವಾಗತೊಡಗಿದರು. ಬಹಳ ಸಮಾಧಾನ ಹೊಂದಿದ ಮಗಳು, ನನಗೆ ಹೊಡೆದು ಉರಿಸಿದ್ದರಿಂದ ನನ್ನ ಕೈಗೆ ಐದಾರು ಸಲ ಮುತ್ತುಕೊಟ್ಟು ಸಾಂತ್ವನ ನೀಡಿ ನೆಮ್ಮದಿಯಿಂದ ಓದಲು ಹೋಗಲು ನನಗೂ ಎಷ್ಟೋ ಸಮಾಧಾನವಾಗಿತ್ತು. ಆದರೆ ಈ ಮೂಢನಂಬಿಕೆಗಳು ಅನ್ನೋದು ಅನಾದಿ ಕಾಲದಿಂದ ನಮ್ಮೊಳಗೇ ಹಾಸುಕೊಕ್ಕಾಗಿ ಬಿಟ್ಟಿರುತ್ತವೆ. ಎಷ್ಟೋ ಸಲ ನಮ್ಮನ್ನು ಭಯಬೀಳಿಸುತ್ತಿರುತ್ತವೆ.
ನಾನಾಗ ಮೂರನೆಯ ತರಗತಿಯಲ್ಲಿದ್ದೆ. ನನ್ನೊಳಗೆ ಇದ್ದಕ್ಕಿದ್ದಂತೆ ಸಂಗೀತ ಕಲಿಯುವ ಹುಚ್ಚು ಹುಟ್ಟಿಬಿಟ್ಟಿತ್ತು. ಅದಕ್ಕೆ ಬಹು ಮುಖ್ಯ ಕಾರಣವೇನೆಂದರೆ, ದೂರದರ್ಶನದಲ್ಲಿ ಪ್ರಸಾರಗೊಳ್ಳುತ್ತಿದ್ದ ಚಿತ್ರಹಾರಗಳು! ಅದೊಂದು ದಿವಸ ಪ್ರಸಾರವಾಗುತ್ತಿದ್ದ ಹಾಡಿನಲ್ಲಿ ರೀನಾ ರಾಯ್ ಕಪ್ಪು ಲೆಹೆಂಗಾ ಧರಿಸಿ, ತಲೆಯ ಮೇಲೆ ಸೆರಗು ಹೊದ್ದು, ಇಷ್ಟುದ್ದದ ಮೈಕಿನಲ್ಲಿ “ಶೀಶಾ ಹೋ ಯಾ ದಿಲ್ ಹೋ ಆಖಿರ್ ಟೂಟ್ ಜಾತಾ ಹೈ...” ಎಂದು ಹಾಡುತ್ತಿರುವುದನ್ನು ಕಂಡು ಬಹಳ ಪ್ರಭಾವಿತಳಾಗಿಬಿಟ್ಟಿದ್ದೆ. ನಾನೂ ಮುಂದೊಂದು ದಿನ ಹೀಗೇ ಹಾಡಬೇಕು, ಸಭೆಯಲ್ಲಿರುವವರೆಲ್ಲಾ ಎದ್ದು ನಿಂತು ಚಪ್ಪಾಳೆ ಹೊಡೆಯಬೇಕು... ಎಂದೆಲ್ಲಾ ಕನಸು ಕಂಡಿದ್ದೆ. ಆಗ ನನಗೆ ಇದನ್ನು ಹಾಡಿದ್ದು ಲತಾ ಮಂಗೇಶ್ವರ್, ಆಕೆ ಪ್ರಸಿದ್ಧ ಹಿನ್ನಲೆ ಗಾಯಕಿ ಎಂಬುದೆಲ್ಲಾ ಗೊತ್ತೇ ಇರಲಿಲ್ಲ. ಸರಿ, ನನ್ನ ಹಠಕ್ಕೆ ಸೋತು ಅಪ್ಪ ಸಂಗೀತ ಕ್ಲಾಸಿಗೆ ಸೇರಿಸಿದ್ದಾಯ್ತು. ಅವರೋ ಸಂಗೀತ ಹೇಳಿಕೊಡುವುದಕ್ಕಿಂತ ಹೆಚ್ಚಾಗಿ ಬಾಯಲ್ಲಿ ಬೈಯ್ಗಳುಗಳ ತಬಲಾ ಬಾರಿಸಿದ್ದೇ ಹೆಚ್ಚು! ಇದ್ಯಾಕೋ ಸರಿ ಹೋಗ್ತಿಲ್ಲ ಅಂದ್ಕೊಂಡು ಬಿಟ್ಟುಬಿಟ್ಟೆ. ಅದೊಂದು ದಿವಸ ನನಗಿಂತ ಎರಡು ವರುಷ ದೊಡ್ಡವಳಾಗಿದ್ದ ಗೆಳತಿ ಸಂಗೀತಾ “ನನ್ನತ್ತೆ ಎಷ್ಟು ಚೆಂದ ಹಾಡ್ತಾರೆ ಗೊತ್ತುಂಟಾ? ಆದ್ರೆ ಅವ್ರೇನೂ ಸಂಗೀತ ಕಲ್ತಿಲ್ಲಪ್ಪ” ಎನ್ನಲು ನನಗೆ ಬಹಳ ಕುತೂಹಲವಾಗಿ ಆಸೆ ಮತ್ತೆ ಗರಿಕೆದರಿತ್ತು. “ಮತ್ತೆ, ಅದು ಹೇಂಗೆ ಕಲಿತದ್ದಂತೆ ಮಾರಾಯ್ತಿ?” ಎಂದು ಕೇಳಿದಾಗ, ಆಕೆ ತೀರಾ ತಗ್ಗಿದ ಧ್ವನಿಯಲ್ಲಿ... “ಕಂಠ ಒಳ್ಳೆದಾಗ್ಲಿಕ್ಕೆ ಹಿಸ್ಕು (ಬಸವನ ಹುಳ) ತಿನ್ಬೇಕಂತೆ ನೋಡು... ಅದನ್ನು ತಿಂದವರ ಕಂಠ ಬಹಳ ಚೆಂದ ಆಗ್ತದಂತೆ” ಎಂದಿದ್ದೇ ವಾಯಕ್ ಎಂದುಬಿಟ್ಟಿದ್ದೆ. ನೋಡಲೂ ಒಂಥರ ಅನ್ನಿಸುವ ಹಿಸ್ಕನ್ನು, ಅಪ್ಪಿ ತಪ್ಪಿ ಮುಟ್ಟಿದರೂ ಲೋಳೆಯಾಗುವ ಆ ಅಂಟು ಜೀವಿಯನ್ನು ಹಿಡಿಯುವುದಲ್ಲದೇ, ತಿನ್ನುವುದು ಎಂದರೆ... ಅಲ್ಲಿಗೆ ನನ್ನ ಅಳಿದುಳಿದ ಆಸೆಯೂ ಟೂಟ್ ಗಯಿ.
ನಮ್ಮೂರಿನಲ್ಲಿ ನಾಗಪ್ಪ ಎಂಬವನಿದ್ದ. ಬೇಸಿಗೆ ರಜೆಯಲ್ಲಿ ಅಜ್ಜನ ಮನೆ ಸೇರಿ ಲಾಗ ಹಾಕಿ ಗಲಾಟೆ ಎಬ್ಬಿಸುತ್ತಿದ್ದ ನಮಗೆಲ್ಲಾ ವರ್ಣರಂಜಿತ ಕಥೆಗಳನ್ನು ಹೇಳುವ ಕೆಲಸ ಅವನದಾಗಿತ್ತು. ಹೀಗೆ ಒಂದು ದಿವಸ ನಾವು ಕಥೆ ಕೇಳುತ್ತಿರುವಾಗಲೇ, ಅಷ್ಟು ದೂರದಿಂದ ದೊಡ್ಡ ಲಕ್ಷ್ಮೀ ಚೇಳು ಸರಸರನೆ ಹರಿದು ಹೋಗಿದ್ದು ನನ್ನ ಕಣ್ಣಿಗೇ ಬಿದ್ದುಬಿಟ್ಟಿತ್ತು. (ಅದಕ್ಕೆ ಲಕ್ಷ್ಮೀ ಚೇಳು ಅಂತ ಯಾಕೆ ಕರೀತಾರೋ ಎಂಬುದು ಇನ್ನೂ ನನಗೆ ಗೊತ್ತಾಗಿಲ್ಲ!) ಸರಿ, ನನಗೋ ಈ ಸರೀಸೃಪ ಜಾತಿಯ ಮೇಲೆ ವಿಶೇಷ ಭಯ! ಎರೆಹುಳ, ಚೇರಂಟೆಗಳಿಂದ ಹಿಡಿದು ಕಾಳಿಂಗದವರೆಗೂ, ಏಕರೀತಿಯ ಭಯವನ್ನು ನನ್ನೊಳಗೆ ಆ ಸೃಷ್ಟಿಕರ್ತ ಭರಪೂರ ಹಂಚಿಬಿಟ್ಟಿದ್ದಾನೆ. ಹೀಗಾಗಿ ಆ ಚೇಳನ್ನು ಕಂಡಿದ್ದೇ, ಜೋರಾಗಿ ಬೊಬ್ಬಿರಿದು ಮನೆಯವರನ್ನೆಲ್ಲಾ ಒಟ್ಟುಗೂಡಿಸುವಷ್ಟರಲ್ಲಿ ಆ ಚೇಳೆಲ್ಲೋ ಮಾಯವಾಗಿಬಿಟ್ಟಿತ್ತು. ಅಷ್ಟು ಚಿಕ್ಕ ವಿಷಯಕ್ಕೆ ಕೂಗಿ ಗಾಭರಿಗೊಳಿಸಿದ್ದಕ್ಕಾಗಿ ಎಲ್ಲರೂ ನನಗೆ ಸಮಾ ಬೈಯ್ದುಬಿಡಲು, ನನ್ನ ಓರಗೆಯವರ ಮುಂದೆ ನನಗೆ ಬಹಳ ಅವಮಾನವೆನಿಸಿಬಿಟ್ಟಿತ್ತು. “ಹೌದೌದು... ನಿಮಗೆಲ್ಲಾ ಏನು ಗೊತ್ತು... ಆ ಚೇಳು ನನ್ನ ಬಳಿಯೇ ಬರುವಂತಿತ್ತು... ಅಷ್ಟು ಜೋರಾಗಿ ನಾನು ಕೂಗಿಕೊಂಡಿದ್ದು ಕೇಳಿ ಹೆದರಿ ಓಡಿ ಹೋಯ್ತು. ಅದೇನಾದ್ರೂ ನನ್ನ ಕಚ್ಚಿ, ನಾ ಸತ್ತು ಹೋಗಿದ್ದಿದ್ರೆ, ದೆವ್ವವಾಗಿ ಬಂದು ನಿಮ್ಮನ್ನೆಲ್ಲಾ ಕಾಡ್ತಿದ್ದೆ...” ಎಂದು ಒದರಿಬಿಟ್ಟಿದ್ದೆ. ಅದಕ್ಕೆ ಕೂಡಲೇ ನನ್ನ ತಂಗಿ “ಈಗೆಂತ ಆಗಿದ್ದಿ ನೀ ಮತ್ತೆ...” ಎಂದು ಹಲ್ಕಿರಿಯಲು, ಅವಳ ಬೆನ್ನಿಗೊಂದು ಸಮಾ ಗುದ್ದಿಬಿಟ್ಟಿದ್ದೆ. ನಮ್ಮಿಬ್ಬರ ಜಗಳ ವಿಪರೀತಕ್ಕೆ ಹೋಗ್ತಿರೋದು ಕಂಡ ನಾಗಪ್ಪ, “ತಂಗಿ, ಇಷ್ಟಕ್ಕೆಲ್ಲಾ ಹೆದರಬಾರದು... ಚೇಳು ಕಚ್ಚಿದರೆ ಅದನ್ನ ಕೂಡಲೇ ಹಿಡಿದುಕೊಂಡು ಅದಕ್ಕೆಷ್ಟು ಕಲ್ಗಳಿವೆ ಎಂದು ಎಣಿಸಿದರಾಯ್ತು... ವಿಷ ಏರೋದೇ ಇಲ್ಲಾ... ಗಾಯವೂ ಥಟ್ಟನೆ ಮಾಯವಾಗ್ತದೆ...” ಎಂದಿದ್ದೇ, ದೊಡ್ಡವರೆಲ್ಲಾ ಕಿಸಕ್ಕನೆ ನಕ್ಕು ಒಳಗೆ ಹೋಗಿಬಿಟ್ಟಿದ್ದರು. ನನಗೋ ಪೂರ್ತಿ ಪುಕುಪುಕು ನಿಂತಿರಲಿಲ್ಲ. “ನಾಗಪ್ಪ, ನಂಗೇನಾದ್ರೂ ಆ ಚೇಳು ಮತ್ತೆ ಬಂದು ಕಚ್ಚಿದರೆ ನೀನೇ ಅದನ್ನ ಹಿಡ್ಕಂಡು ಅದರ ಕಾಲುಗಳನ್ನೆಲ್ಲಾ ಲೆಕ್ಕ ಮಾಡ್ಬಿಡು ಹಾಂ...” ಎಂದು ಆದೇಶಿಸಿಬಿಟ್ಟಿದ್ದೆ. ಈಗಲೂ ಇದನ್ನು ನೆನೆದಾಗೆಲ್ಲಾ ನಗುವುಕ್ಕಿ ಬರುತ್ತದೆ. ಆದರೆ ಚೇಳಿನ ಭಯ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ!
ಅದೇ ರೀತಿ, ನಾಗರ ಹಾವು ಕಚ್ಚಿದರೆ ಅದರ ಹೆಡೆಯಿಂದ ಕೆಳಗೆ ಗಟ್ಟಿಯಾಗಿ ಹಿಡಿದು ಆಸ್ಪತ್ರೆಗೆ ಹೋಗಬೇಕು... ಆಗ ನಮ್ಮೊಳಗೆ ಅದರ ವಿಷ ಏರದು... ಚೇರಂಟೆಯ ಕಾಲುಗಳನ್ನು ಲೆಕ್ಕ ಮಾಡಿದರೆ ದುಡ್ಡು ರಾಶಿ ಸಿಗುತ್ತದೆ.... ದೂರದ ಘಟ್ಟದಲ್ಲಿ ಘಟ ಸರ್ಪಗಳಿವೆ ಅವು ರಾತ್ರಿ ಹೊತ್ತು ಸಿಳ್ಳೆ ಹಾಕಿಕೊಂಡು ಬರುತ್ತಿರುತ್ತವೆ, ಪ್ರತಿಯಾಗಿ ನಾವೂ ಸಿಳ್ಳೆ ಹಾಕಿದರೆ ತಕ್ಷಣ ನಮ್ಮಲ್ಲಿಗೇ ಬಂದುಬಿಡುತ್ತವೆ... ಬಿಳಿ ಜಿರ್ಲೆ ಕಚ್ಚಿದ್ರೆ ಅದೃಷ್ಟ ಹೆಚ್ಚಾಗ್ತದೆ... ಹೀಗೆ ಇಂತಹ ಅನೇನಾನೇಕ ಅಸಾಧ್ಯ ಸಂಗತಿಗಳನ್ನೇ ಕಥೆಯಲ್ಲಿ ತುಂಬಿ ಹೇಳಿ ನಮ್ಮ ಮಂಗಬುದ್ಧಿಗೊಂದು ಅಂಕೆ ಹಾಕಿಡುತ್ತಿದ್ದ ನಾಗಪ್ಪ. 
ಮೊನ್ನೆ ಹೀಗೇ ಈ ಕಥೆಗಳನ್ನೆಲ್ಲಾ ಗೆಳತಿಯೊಂದಿಗೆ ಹಂಚಿಕೊಳ್ಳುತ್ತಿದ್ದೆ. ಆಗ ಆಕೆ ಇದರ ಹಿನ್ನಲೆಯೊಳಗೆ ಅಡಗಿರಬಹುದಾದಂಥ ಹೊಸ ಹೊಳಹೊಂದನ್ನು ತೆರೆದಿಟ್ಟಳು! ಚೇಳು, ಹಾವು ಇನ್ನಿತರ ಜಂತುಗಳು ಕಚ್ಚಿದಾಗ, ನಾವು ಅತಿಯಾದ ಭಯಕ್ಕೆ ಒಳಗಾಗಿಬಿಡುತ್ತೇವೆ. ಆಗ ನಮ್ಮ ಮನಸ್ಸನ್ನು ಬೇರೆಡೆಗೆ ಹೊರಳಿಸಲೂ ಇಂಥಾ ಕಥೆಗಳನ್ನು ಕಟ್ಟಿರುವ ಸಾಧ್ಯತೆಯಿದೆಯೆಂದು ಅವಳು ಹೇಳಿದಾಗ ಹೌದಲ್ಲಾ ಎಂದೆನಿಸಿತು. ವಿಷಜಂತುಗಳು ಕಚ್ಚಿದಾಗ ಉದ್ವೇಗ, ಆತಂಕ ಹೆಚ್ಚಾಗಿ, ಅದರಿಂದ ಬಿ.ಪಿ. ಜಾಸ್ತಿಯಾಗಿ, ವಿಷ ಬಹುವೇಗದಲ್ಲಿ ಏರತೊಡಗುತ್ತದೆ. ಇದನ್ನು ತಪ್ಪಿಸಲೂ, ಇಂಥಾ ಕಾಲ್ಪನಿಕ ಕಥೆಗಳನ್ನು ಹೊಸೆದಿರಬಹುದು ಎಂದೆನಿಸಿತು. ಅದೇನೇ ಹಿನ್ನಲೆ ಇದ್ದಿರಲಿ, ರೆಪ್ಟೈಲ್ ಸ್ಪೀಶೀಸ್‌ಗಳನ್ನು ಕಂಡರೇ ಹೌಹಾರುವ ನನ್ನಂಥವರಿಗೆ ಇಂಥಾ ಕಥೆಗಳನ್ನು ಹೇಳಿಬಿಟ್ಟರೆ, ಕಚ್ಚಿದ ಭಯದ ಜೊತೆಗೇ ಅದನ್ನು ಹಿಡಿಯುವ, ಹಿಡಿದು ಕಾಲುಗಳನ್ನು ಬೇರೆ ಎಣಿಸುವ ಕಲ್ಪನೆಯಿಂದಲೇ ಮತ್ತಷ್ಟು ಬಿ.ಪಿ. ಏರಿಬಿಡುವುದು ಗ್ಯಾರಂಟಿ! ಅಂಥ ಸಮಯದಲ್ಲಿ ವಿಷ ನಿಜವಾಗಿಯೂ ಹೊಕ್ಕಿರದಿದ್ದರೂ, ಅತೀವ ಭಯದಿಂದಲೇ ಮೂರ್ಛೆ ತಪ್ಪಿದರೂ ಅಚ್ಚರಿಯಿಲ್ಲ!
*****
(25-02-2018ರ ಉದಯವಾಣಿಯಲ್ಲಿ ಪ್ರಕಟಿತ)

~ತೇಜಸ್ವಿನಿ ಹೆಗಡೆ

ಭಾನುವಾರ, ಫೆಬ್ರವರಿ 4, 2018

ನೂಪುರ

(*"ಜನಮಿತ್ರ" ಪತ್ರಿಕೆ ಸಡೆಸಿದ್ದ ರಾಜ್ಯಮಟ್ಟದ ಕವಿತೆ ಮತ್ತು ಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಕಥೆ.)
_______________
“ಸಾನ್ವಿ ನಿನ್ನ ಪುಟ್ಟ ಕಾಲಿಗೆ ಎಷ್ಟು ಚಂದ ಕಾಣಿಸ್ತದೆ ಈ ಗೆಜ್ಜೆ ಗೊತ್ತಾ? ಪ್ಲೀಸ್, ಇವತ್ತೊಂದಿವ್ಸ ಹಾಕ್ಕೊಂಡ್ಬಾ, ಇಲ್ಲಾ ಅಂದ್ರೆ ನಿನ್ನ ಲಕ್ಷ್ಮಜ್ಜಿ ನನ್ನನ್ನೇ ಬೈತಾರಷ್ಟೇ. ‘ಇರೋದೊಬ್ಳು ಮಗ್ಳು, ಲಕ್ಷಣವಾಗಿ ಗೆಜ್ಜೆ ಹಾಕ್ದೇ ಬೋಳು ಕಾಲು ಮಾಡಿಸ್ಕೊಂಡು ಬರ್ತೀಯಾ...” ಅಂತ. ನೋಡು, ನಿಂಗೆ ಅಜ್ಜಿ ಅಮ್ಮನನ್ನು ಬೈದ್ರೆ ಖುಶಿಯಾಗತ್ತಾ?” ಎಂದು ದೀಪ್ತಿ ಅನುನಯಿಸಲು, ಮುಖ ಉಬ್ಬಿಸಿಕೊಂಡಳು ಪುಟ್ಟ ಪೋರಿ.
“ಅಮ್ಮಾ ಪ್ಲೀಸ್, ನಂಗೆ ಇಷ್ಟ ಇಲ್ಲಾ ಗೆಜ್ಜೆ, ಕಿರಿ ಕಿರಿ ಆಗತ್ತೆ... ನಂಗ್ಬೇಡಾ...” ಜೋರಾಗಿ ರಾಗವೆಳೆಯಲು ದೊಡ್ಡದಾಗಿ ಕಣ್ಬಿಟ್ಟಳು ದೀಪ್ತಿ.
“ಸಾಕೇ ಬಾಯ್ಮುಚ್ಚು ಮೊದ್ಲು! ಹೀಂಗೆ ಬೊಬ್ಬೆ ಹಾಕಿ ಗಲಾಟೆ ಎಬ್ಬಿಸ್ಬೇಡ. ಹೋಗಿ ತಯಾರಾಗು... ನಿನ್ನ ಮಂಚದ್ಮೇಲೆ ನೀಲಿ ಬಣ್ಣದ ಉದ್ದಲಂಗ ತೆಗ್ದಿಟ್ಟಿದ್ದೇನೆ... ಅದನ್ನೇ ಹಾಕ್ಕೋ. ಇವತ್ತಿನ ಮಟ್ಟಿಗೆ ಡ್ರೆಸ್ ವಿಷ್ಯದಲ್ಲಾದ್ರೂ ಹಠ ಮಾಡ್ಬೇಡ. ಆದ್ರೂ, ನೀನು ಈ ಗೆಜ್ಜೆ ಹಾಕ್ಕೊಂಡಿದ್ದಿದ್ರೆ ನಾ ನಿಂಗೆ...” ಅವಳು ಮಾತು ಮುಗಿಸುವ ಮುಂಚೆಯೇ ಸಾನ್ವಿ, “ಅಮ್ಮಾ ಸಾಕು, ನಾನು ರೆಡಿ ಆಗೋಕೆ ಹೊರ್ಟೆ...” ಎಂದು ಅಮ್ಮನ ಮಾತಿಗೆ ಕಿವಿಗೊಡದೇ ತನ್ನ ಕೋಣೆಗೆ ಓಡಿಬಿಟ್ಟಳು. ಅಲ್ಲೇ ಮಂಚದಲ್ಲಿ ಮಲಗಿದ್ದ ರಾಜೀವ, ಕಿರುಗಣ್ಣಿನಲ್ಲೇ ಎಲ್ಲವನ್ನೂ ಗಮನಿಸುತ್ತಿದ್ದ. ಮಗಳ ಹಠಕ್ಕೆ ಪೆಚ್ಚುಮುಖ ಮಾಡ್ಕೊಂಡು, ತನ್ನ ಕೈಯೊಳಗಿದ್ದ ಗೆಜ್ಜೆಯನ್ನೇ ದಿಟ್ಟಿಸುತ್ತಿದ್ದ ದೀಪ್ತಿ, ಅದನ್ನು ಅಸಡ್ಡೆಯಿಂದ ಅಲ್ಲೇ ಟೇಬಿಲ್ಲಿನ ಮೇಲೆ ಕುಕ್ಕಿ ಇಡಲು, ಎದ್ದು ಕುಳಿತ. “ಅಲ್ಲಾ, ನಿನ್ನಿಷ್ಟವನ್ಯಾಕೆ ಅವ್ಳ ಮೇಲೆ ಹೇರ್ತಿದ್ದೀಯಾ? ಸಾನ್ವಿಗೆ ಗೆಜ್ಜೆ ಇಷ್ಟ ಇಲ್ಲ ಅಷ್ಟೇ. ಅದು ಗೊತ್ತಿದ್ದೂ ಯಾಕೆ ಒತ್ತಾಯ ಮಾಡಿ ಹೀಗೆ ಬೇಜಾರು ಮಾಡ್ಕೊಳ್ಳೋದು?” ಎಂದು ಅವನು ಪ್ರಶ್ನಿಸಿದ್ದೇ, ಅವಳ ಸಿಟ್ಟು, ಬೇಸರವೆಲ್ಲಾ ಈಗ ಪತಿಯತ್ತ ತಿರುಗಿಬಿಟ್ಟಿತು.
“ಹೌದೌದು, ನಾನು ನಿಮ್ಮ ಮುದ್ದಿನ ಮಗ್ಳ ಮೇಲೆ ದೌರ್ಜನ್ಯ ಮಾಡ್ತೀನಿ ಅಲ್ವೇ? ಸದಾ ಅವ್ಳನ್ನು ವಹಿಸಿಕೊಂಡು ಬರೋರು, ಇವತ್ತೊಂದು ದಿವ್ಸವಾದ್ರೂ ಅವ್ಳಿಗೆ ಬುದ್ಧಿ ಹೇಳೋಕೆ ಆಗಲ್ವಾ? ಅಲ್ಲಾ, ಯಾವತ್ತಾದ್ರೂ ನಾನಿಷ್ಟು ಒತ್ತಾಯ ಮಾಡಿದ್ದಿದ್ಯಾ ನಿಮ್ಮ ಸಾನ್ವಿಗೆ? ಅದ್ಯಾಕೋ ಏನೋ, ಇವತ್ತು ಮಾತ್ರ ಬಹಳ ಆಸೆಯಾಗಿ ಸ್ವಲ್ಪ ಜಾಸ್ತಿ ಹೇಳ್ದೆ ಅಷ್ಟೇ. ಬಿಡಿ, ಹೇಳ್ಕೊಂಡ್ರೆ ಪ್ರಯೋಜ್ನ ಇಲ್ಲಾ... ಅದೇನೋ ಗಾದೆ ಇದ್ಯಲ್ಲಾ ‘ಹಲ್ಲಿದ್ದವಂಗೆ ಚಕ್ಲಿ ಇಲ್ಲಾ, ಚಕ್ಲಿ ಇದ್ದವಂಗೆ ಹಲ್ಲಿಲ್ಲ ಅಂತ...’ ಹಾಗೇ ಆಯ್ತಿದು. ಸರಿ, ನೀವು ಕಾರ್ ಹೊರಗೆ ತೆಗೀರಿ... ನಾಲ್ಕು ಗಂಟೆಗೆಲ್ಲಾ ನಾವಲ್ಲಿರ್ಬೇಕು... ಆಯೋಜಕರನ್ನ ಕಾಯ್ಸೋದು ಸರಿಯಲ್ಲ... ಹೋಗಿ ಮುಟ್ಟೋಕೆ ಎರಡು ತಾಸಾದ್ರೂ ಬೇಕು.. ಈಗ್ಲೇ ಗಂಟೆ ಒಂದೂವರೆಯಾಗೋಗಿದೆ... ಹಾಂ, ನನ್ನ ಹೊಸ ಕ್ಲಚಸ್ ಹಿಡಿಕೆ ಸ್ವಲ್ಪ ಲೂಸ್ ಆಗಿದೆ.. ಗ್ಯಾರೇಜಿನಿಂದ ಹಳೆಯ ಕ್ಲಚಸ್ ಅನ್ನೇ ತೆಗ್ದುಬಿಡಿ ಪ್ಲೀಸ್... ಅದ್ರಲ್ಲಿ ಹೆಚ್ಚು ಗ್ರಿಪ್ಸ್ ಸಿಗೋದ್ರಿಂದ ನಂಗೆ ಹಿಡ್ಕೊಂಡು ಹೋಗೋಕೆ ಸುಲಭವಾಗತ್ತೆ...” ಎಂದು ಬಡಬಡಾಯಿಸುತ್ತಾ ತನ್ನೊಳಗೆ ಏಳುತ್ತಿದ್ದ ಬಿರುಗಾಳಿಯನ್ನಡಗಿಸಲು ಪ್ರಯತ್ನಿಸತೊಡಗಿದಳು ದೀಪ್ತಿ.
‘ಛೇ, ನಾನು ರಾಜೀವನಿಗೆ ಅಷ್ಟು ಕಟುವಾಗಿ ಹೇಳಬಾರದಿತ್ತೇನೊ! ಇದ್ರಲ್ಲಿ ಅವನದೇನು ತಪ್ಪಿತ್ತು? ಸಾನ್ವಿಯೇ ಅಷ್ಟು ಹಠ ಮಾಡುತ್ತಿರುವಾಗ... ಹಾಗೆ ನೋಡಿದರೆ ಅವ್ಳದ್ದೂ ತಪ್ಪಿಲ್ಲ. ಹತ್ತುವರ್ಷದ ಪುಟ್ಟ ಕೂಸದು. ಅವಳಿಗೂ ಅವಳದ್ದೇ ಆದ ಇಚ್ಛೆ ಇದ್ದಿರುತ್ತದೆ. ನನಗೆ ಇಷ್ಟವಾಗಿದ್ದೆಲ್ಲಾ ಅವಳಿಗೂ ಮೆಚ್ಚುಗೆಯಾಗಬೇಕೆಂದು ನಾನು ಆಶಿಸೋದು ಎಷ್ಟು ಸರಿ? ತಪ್ಪು ನನ್ನದೇ... ಊಹೂಂ.. ನನ್ನದೂ ಅಲ್ಲಾ... ಬಾಲ್ಯದಿಂದ ಎದೆಯೊಳಗೆ ಮಡಗಟ್ಟಿರುವ ಅಸಹಾಯಕತೆ, ಕೊರಗು, ನಿರಾಸೆ, ಹುದುಗಿಸಿಟ್ಟುಕೊಂಡ ಆಸೆಗಳು ಹಾಗೂ ಈಡೇರದಂಥ ಕನಸುಗಳದ್ದು. ಇಲ್ಲಾ, ಎಷ್ಟೇ ಕಷ್ಟವಾದ್ರೂ ಸೈ, ಎಲ್ಲವನ್ನೂ ಕಿತ್ತೆಸೆದು ಬಿಡಬೇಕು. ನನಗಾಗಿ ಮಾತ್ರವಲ್ಲ, ನನ್ನವರಿಗಾಗಿ. ಅದರಲ್ಲೂ ಸಾನ್ವಿಯ ಬೆಳವಣಿಗೆಗೆ ನನ್ನ ಈ ದೌರ್ಬಲ್ಯ ಹಿಂಸೆಯಾಗಬಾರದು... ಯಾವುದೇ ರೀತಿಯಿಂದಲೂ ನನ್ನ ಕನಸುಗಳು ಅವಳ ಇಚ್ಛೆಗಳಿಗೆ ತಡೆಯಾಗದಂತಿರಬೇಕು...’ ಮನಸು ತಾನಾಗಿ ಮುಂದೆ ಬಂದು ಅವಳನ್ನು ಸಮಾಧಾನಿಸಿ ಧೈರ್ಯ ತುಂಬಿತ್ತು.
ಕಷ್ಟಪಟ್ಟು ತನ್ನ ರೆಡಿಮೇಡ್ ಸೀರೆಯ ನೆರಿಗೆಯ ಹುಕ್ಕನ್ನು ಸಿಕ್ಕಿಸಿಕೊಳ್ಳುತ್ತಿದ್ದವಳ ಕೈಗಳಿಂದ ಘಲ್ ಘಲ್ ನಾದ ಹೊರಹೊಮ್ಮಲು, ಅವಳ ಗಮನ ತನ್ನ ಬಲಗೈಯ ಮೇಲೆ ಹೋಗಿತ್ತು.
ಬೆಳ್ಳಿಯ ನಾಲ್ಕು ಬಳೆಗಳೊಳಗೆ ಗೆಜ್ಜೆಯ ಮಣಿಗಳನ್ನು ಸುರಿಯಲಾಗಿತ್ತು. ತನಗೆ ಎಂಟು ವರುಷವಾಗಿದ್ದಾಗ ಅಪ್ಪ ಮಾಡಿಸಿಕೊಟ್ಟಿದ್ದ ಬಳೆಗಳವು! ಪ್ರತಿಯೊಂದು ಬಳೆಗೂ ತಿರುಗಣೆಯಿದ್ದಿದ್ದರಿಂದ, ಅವುಗಳ ಗಾತ್ರವನ್ನು ಹೊಂದಿಸಿಕೊಳ್ಳಲು ಸುಲಭವಾಗಿತ್ತು. ಆದರೆ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವಳು ಆ ಬಳೆಗಳನ್ನು ಧರಿಸುತ್ತಿದ್ದುದು. ಇಂದು ಅವಳ ಬದುಕಿನಲ್ಲಿ ಬಹಳ ಸಂಭ್ರಮದ ದಿನ! ಅದರಲ್ಲೂ ಆ ವಿಶೇಷ ಕ್ಷಣಕ್ಕೆ ಇನ್ನೇನು ಕೆಲವೇ ತಾಸುಗಳು ಬಾಕಿಯಿರುವುದು. ಮನದೊಳಗೆ ತುಂಬಿದ್ದ ಅವ್ಯಕ್ತ ಆತಂಕ, ಸಣ್ಣ ಉದ್ವೇಗದಿಂದಾಗಿ ಎದೆ ಹೊಡೆದುಕೊಳ್ಳತೊಡಗಿತ್ತು. ತಲೆಕೊಡವಿಕೊಂಡು ತಯಾರಾಗತೊಡಗಿದಳು.
*****
 “ರಾಜು, ನಿನ್ನ ಅಮ್ಮನಿಗೆ ಇನ್ನೂ ಹದಿನೈದು ನಿಮಿಷ ಬೇಕಂತೆ. ನೀವಿಬ್ರೂ ಮುಂದೆ ಹೋಗ್ಬಿಡಿ. ನಾವು ಬೀಗರೊಂದಿಗೆ ಬರ್ತೀವಿ. ಹೇಗಿದ್ರೂ ಶ್ರೀಪಾದರು ಈ ದಾರಿಯಲ್ಲೇ ಹೋಗೋದಲ್ವಾ? ಅಮ್ಮಾ ದೀಪ್ತಿ, ನಿನ್ನ ತಂದೆಗೊಂದ್ಮಾತು ಹೇಳ್ಬಿಡು ಫೋನ್ ಮಾಡಿ... ನಾವೂ ಬರ್ತೀದ್ದೀವಿ ಅವ್ರ ಜೊತೆಗೆ ಅಂತ...” ಮಾವ ವಾಸುದೇವರು ಹೇಳಲು, ಸುಮ್ಮನೇ ತಲೆಯಾಡಿಸಿದಳು ದೀಪ್ತಿ. ಅಪ್ಪನಿಗೆ ಪೋನ ಮಾಡಿ, ಆದಷ್ಟು ಬೇಗ ಮನೆಯಿಂದ ಹೊರಟು, ಇಲ್ಲಿಂದ ಅತ್ತೆ ಮಾವನನ್ನೂ ಹೊರಡಿಸಿಕೊಂಡು ಕಾರ್ಯಕ್ರಮದ ಸ್ಥಳವನ್ನು ತಲುಪಬೇಕೆಂದು ಪಿಸುಧ್ವನಿಯಲ್ಲಿ ಸೂಕ್ಷ್ಮವಾಗಿ ತಿಳಿಸಿದಳು. 
“ಅಮ್ಮಾ... ನಾನೂ ಅಜ್ಜ, ಅಜ್ಜಿಯ ಜೊತೆಗೇ ಬರ್ತೀನಿ ಪ್ಲೀಸ್. ನನ್ನ ಇಷ್ಟದ ಕ್ಲಿಪ್ ಒಂದು ಕಾಣಿಸ್ತಿಲ್ಲಾ... ಅವ್ರು ಹೊರಡೋವರೆಗಾದ್ರೂ ಹುಡುಕ್ತಾ ಇರ್ತೀನಿ... ಸಿಕ್ಕಿಲ್ಲಾ ಅಂದ್ರೆ ಬೇರೆ ಯಾವ್ದಾದ್ರೂ ಹಾಕ್ಕೊಳ್ಳುವೆ... ಪ್ರಾಮಿಸ್ ಅಜ್ಜ, ಅಜ್ಜಿಗೆ ಕಾಟ ಕೊಡಲ್ಲ, ಕಾಯ್ಸೋದಿಲ್ಲ...” ಎಂದು ಸಾನ್ವಿ ಗೋಗರೆಯಲು, ತನ್ನ ಸುತ್ತಲೂ ನೆರೆದಿರುವವರ ಮುಖವ ಕಂಡು ಉಕ್ಕುತ್ತಿದ್ದ ಸಿಟ್ಟನ್ನು ಅಡಗಿಸಿಕೊಳ್ಳುತ್ತಾ, ಹೂಂಗುಟ್ಟಿದ್ದಳು ದೀಪ್ತಿ.
ಕ್ಲಚಸ್‌ಗಳ ಸಹಾಯದಿಂದ ಮೆಲ್ಲನೆ ಹೆಜ್ಜೆ ಹಾಕುತ್ತಾ, ಕಾರಿನ ಬಳಿ ಬಂದವಳಿಗೆ ಸಹಕರಿಸಿ, ಅವಳನ್ನು ಕೂರಿಸಿದ ಮೇಲೆ ಅಪ್ಪ, ಅಮ್ಮನಿಗೆ ಬೇಗ ತಯಾರಾಗಿರಲು ತಾನೂ ಒಮ್ಮೆ ಎಚ್ಚರಿಸಿ, ಕಾರ್ ಸ್ಟಾರ್ಟ್ ಮಾಡಿದ ರಾಜೀವ.
“ನಿನ್ನೆ ಆಫೀಸಿನಲ್ಲಿ ಫ್ರೆಂಡ್ ಒಬ್ಬ ಈ ಸಿ.ಡಿ.ಕೊಟ್ನಪ್ಪ... ಕೆಲವು ಪ್ರಸಿದ್ಧ ಕನ್ನಡ ಭಾವಗೀತೆಗಳಿವೆಯಂತೆ ಇದ್ರಲ್ಲಿ... ರಾಜ್ಯೋತ್ಸವ ಮೊನ್ನೆ ತಾನೇ ಆಯ್ತಲ್ವಾ, ಅದ್ರ ಬಿಸಿ ಇರೋದ್ರಿಂದ ಎಲ್ರೂ ತಗೊಂಡ್ರಾ, ನಿನ್ನ ನೆನ್ಪಾಗಿ ನಾನೂ ಖರೀದಿಸಿದೆ. ಈ ಹಾಡುಗಳನ್ನು ಕೇಳಿಯಾದ್ರೂ ನಿನ್ನ ಮನಸು ಸ್ವಲ್ಪ ಕೂಲ್ ಆಗ್ಬಹುದು... ಇಲ್ಲಾ ಅಂದ್ರೆ ಪಾಪ ನಿನ್ನ ಉರಿಗೆ ಆಯೋಜಕರ ಬುರುಡೆ ಕಾದು ಹೋಗತ್ತೆ ಅಷ್ಟೇ...” ಎಂದು ಕಿಚಾಯಿಸಲು, ಪತಿಯತ್ತ ಬಿರುಗಣ್ಣು ಬೀರಿದರೂ, ಒಳಗೊಳಗೇ ಜೋರಾಗಿ ನಕ್ಕಿದ್ದಳು ದೀಪ್ತಿ.
“ಎಂದೂ ಕಾಣದಂಥ ಕನಸು ಬಂದು ಮನವ ತಾಗಿತು, ಬಂದ ಘಳಿಗೆ ಎಂತೋ ಏನೋ ಅಲ್ಲೇ ಮನೆಯ ಹೂಡಿತು...” ಸಿ. ಅಶ್ವಥರ ಧ್ವನಿಯಲ್ಲಿ ಸುಶ್ರಾವ್ಯವಾಗಿ ಹೊರಹೊಮ್ಮಿದ ಗೀತೆಯನ್ನು ಕೇಳುತ್ತಿದ್ದಂತೇ ಅವಳಿಗೆ ಇಹ ಪರವೆಲ್ಲಾ ಮರೆತುಹೋಗಿ, ಮನಸು ಸೀದಾ ಮಾಣೂರಿನತ್ತ ಹಾರಿಹೋಗಿತ್ತು. ಎಂಟಂಕಣದ ಆ ಮನೆಯ ಹೊರ ಜಗುಲಿಯ ಚಿಟ್ಟೆಯಲ್ಲಿ ಕುಳಿತು ಹಠ ಮಾಡುತ್ತಿದ್ದ ಎಂಟು ವರ್ಷದ ಪುಟ್ಟ ದೀಪ್ತಿಯ ಚಿತ್ರಣವೇ ಅವಳ ಮನಸ್ಸಿನಾವರಣವನ್ನು ತುಂಬಿಕೊಂಡುಬಿಟ್ಟಿತು. 
_೨_
“ಅಮ್ಮಾsss ನಂಗೂ ಧೃತಿಯ ಜೊತೆ ಡ್ಯಾನ್ಸ್ ಮಾಡ್ಬೇಕು... ಅವ್ಳು ಮಾತ್ರ ಯಾಕೆ ಮಾಡೋದು? ನಾನು ಮಾಡ್ಬಾರ್ದಾ? ನೀ ಅವ್ಳಿಗೆ ಮಾತ್ರ ಗೆಜ್ಜೆ ಹಾಕಲು ಬಿಡ್ತಿ... ನಾನು ಹಾಕ್ಕೊಳೋಕೆ ಹೋದ್ರೆ ಬೇಡ ಹೇಳ್ತಿ... ನಂಗೂ ಗೆಜ್ಜೆ ಕೊಡು ಈಗ್ಲೇ. ನೋಡು, ಅವ್ಳು ಮಾತ್ರ ಘಲ್ ಘಲ್ ಅಂತ ಸದ್ದು ಮಾಡ್ಕೊಂಡು ಹೋಗ್ತಿದ್ದಾಳೆ...” ಅರ್ಧಗಂಟೆಯಿಂದ ಪಿರಿಪಿರಿ ಹಠಮಾಡಿ ಅಮ್ಮನನ್ನು ಪೀಡಿಸುತ್ತಿದ್ದಳು ಎಂಟು ವರ್ಷದ ದೀಪ್ತಿ. ಒಡಲೊಳಗೆ ಸಂಕಟ ಹೊತ್ತಿ ಉರಿಯುತ್ತಿದ್ದರೂ, ಅದನ್ನಡಗಿಸಿಕೊಂಡು, ಆದಷ್ಟು ಸಂಯಮದಿಂದಲೇ ಮಗಳನ್ನು ಅನುನಯಿಸುತ್ತಾ, ಮಾತು ಮರೆಸಲು ಹೆಣಗಾಡುತ್ತಿದ್ದಳು ಅನಸೂಯ. 
“ಪುಟ್ಟಿ, ನಿಂಗೆ ಕಾಲಿಗೆ ಪೆಟ್ಟಾಗಿದೆಯಲ್ಲಾ, ಹಾಗಾಗಿ ಓಡಾಡೋಕೆ ಕಷ್ಟ. ನಿನ್ನ ಹತ್ರ ನಿಲ್ಲೋಕೇ ಆಗಲ್ಲ ಅಂದ್ಮೇಲೆ ಹೇಂಗೆ ಡ್ಯಾನ್ಸ್ ಮಾಡ್ತಿ? ಅದ್ಕೇ ಟೀಚರ್ ನಿಂಗೆ ಹಾಡೋಕೆ ಹೇಳಿದ್ದಾರೆ ಅಲ್ವಾ? ನೀನು ಜಾಣೆ, ನನ್ನ ಮುದ್ದು, ಹಠ ಮಾಡ್ಬಾರ್ದು... ನಾನಿವತ್ತು ನಿಂಗಿಷ್ಟವಾದ ಈರುಳ್ಳಿ ಬಜೆ ಮಾಡ್ಲಾ?” ಅವಳ ಮನಸ್ಸಿನಲ್ಲಿ ಹೊಸ ಆಸೆ ಹುಟ್ಟಿಸಲು ನೋಡಿದ್ದಳು.
“ಊಹೂಂ... ನಂಗೆ ಬಜೆ ಬೇಡಾ. ಗೆಜ್ಜೆಯೇ ಬೇಕು. ಕೊಡ್ತೀಯೋ ಇಲ್ವೋ? ಅಪ್ಪನ ಹತ್ರ ಹೇಳ್ಕೊಡ್ತೀನಿ ನಾನು ಅಷ್ಟೇ. ಡ್ಯಾನ್ಸ್ ಮಾಡೋಕಗಲ್ಲ ಯಾಕೆ? ನಂಗೂ ಧೃತಿ ಹಾಂಗೆ ನಿಲ್ಲೋಕೆ ಆಗಲ್ಲ ಯಾಕೆ? ನನಗಿಂತ ಅವ್ಳು ನಾಲ್ಕು ವರ್ಷ ಚಿಕ್ಕೋಳು... ಆದ್ರೂ ಅವ್ಳಿಗೆ ನಿಲ್ಲೋಕೆ ಆಗತ್ತೆ.. ನಂಗೆ ಎಂಟು ವರ್ಷ ಆದ್ರೂ ಆಗ್ತಿಲ್ಲ... ಹೋಗ್ಲಿ ಗೆಜ್ಜೆನಾದ್ರೂ ಹಾಕ್ಕೊಳ್ತೀನಿ ಕೊಡು...” ಈಗ ಮತ್ತೂ ಜೋರಾಗಿ ಹಠಮಾಡತೊಡಗಿದ್ದಳು ದೀಪ್ತಿ. 
ಅನಸೂಯಾಳ ಮನಸು ಕುದಿವ ಹಂಡೆಯಾಗಿದ್ದರೂ, ಆದಷ್ಟು ಸಹನೆಯನ್ನು ತೋರುತ್ತಾ, “ದೀಪ್ತಿ, ಸುಮ್ನೇ ಹಠ ಮಾಡ್ಬೇಡಾ, ಹೇಳಿದ್ದು ಅರ್ಥ ಮಾಡ್ಕೊಳ್ಳೋ ವಯಸ್ಸಾಯ್ತು ನಿಂಗೆ. ಕಳೆದ ಸಲ ಗೆಜ್ಜೆ ಹಾಕ್ಕೊಂಡಾಗ ಏನಾಗಿತ್ತು ನೆನ್ಪಿದ್ಯಾ? ನೀನು ನಿನ್ಪಾಡಿಗೆ ಕಲ್ಲು, ಮಣ್ಣು ನೋಡ್ದೇ ಅಲೀತಿರ್ತಿಯಾ... ನಿನ್ನ ಕಾಲಿಗೆ ಬಲ ಇಲ್ದೇ ಇರೋದ್ರಿಂದ, ಅದು ಎಲ್ಲೆಂದ್ರಲ್ಲಿ ಹೊರಳಾಡ್ತಾ ಹೋಗ್ತಿರ್ತದೆ... ಗೆಜ್ಜೆ ಚರ್ಮಕ್ಕೆ ತಾಗಿ ಚುಚ್ಚಿ, ನಿನ್ನ ಪಾದದ ತುಂಬೆಲ್ಲಾ ಗಾಯ ಆಗಿದ್ದು ಮರ್ತೋಯ್ತಾ? ಎಲ್ಲಾ ಗಾಯ ವಾಸಿಯಾಗೋಕೆ ತಿಂಗ್ಳ ಮೇಲೇ ಬೇಕಾಗಿತ್ತು ಹೌದೋ ಅಲ್ವೋ? ಡಾಕ್ಟರ್ ಮಾಮ ಏನು ಹೇಳಿದ್ರು ಆಗ ಹೇಳು? ‘ನಿನ್ನ ಕಾಲು ಬಹಳ ಮೃದುವಾಗಿದೆ... ಗಾಯ ಆದ್ರೆ ಬೇಗ ವಾಸಿಯಾಗಲ್ಲಾ, ಗೆಜ್ಜೆ ಹಾಕ್ಕೊಬೇಡ ಇನ್ಮುಂದೆ’ ಅಂತ ತಾನೇ? ಆವಾಗ ತಲೆಯಾಡ್ಸಿ ಜೆಮ್ಸ್ ಪ್ಯಾಕ್ ಹಿಡ್ಕೊಂಡು ಬಂದಿದ್ದೆ... ಈಗ ಮತ್ತೆ ಹಠ ಮಾಡ್ತಿಯಲ್ಲಾ... ಎಲ್ಲಾ ಆ ಧೃತಿ ಕೆಲ್ಸ.. ಎಲ್ಲೋದ್ಯೆ ಕತ್ತೆ? ಬಾ ಇಲ್ಲಿ... ಆ ಗೆಜ್ಜೆ ತೆಗ್ದುಬಿಡ್ತೀನಿ ನಿನ್ನ ಕಾಲಿಂದಾನೂ... ನೀನು ಹಾಕ್ಕೊಂಡು ಗಿರಿಗಿರಿ ತಿರ್ಗೋದು ಬೇಡ ಈಗ್ಲೇ. ಡ್ಯಾನ್ಸ್ ಇರೋ ದಿವ್ಸ ಹಾಕ್ಬಿಡ್ತೀನಿ ಬಾ...” ಎಂದು ಗದರುತ್ತಾ ಪುಟ್ಟ ಮಗಳನ್ನು ಕರೆಯ ಹೋಗಲು, ನಾಲ್ಕು ವರ್ಷದ ಆ ಕೂಸು ಅಮ್ಮನ ಕೈಗೆ ಸಿಗದೇ ತಪ್ಪಿಸಿಕೊಂಡು ಘಲ್ ಘಲ್ ಎಂದು ಸದ್ದು ಮಾಡುತ್ತಾ ಅಂಗಳಕ್ಕೆ ಓಡಿ ಹೋಗಿಯಾಗಿತ್ತು.
“ಒಳ್ಳೇ ಮಾತಲ್ಲಿ ಬರ್ತಿಯೋ ಇಲ್ವೋ ಧೃತಿ! ಸಮಾ ಪೆಟ್ಟು ಕೊಡ್ತೇನೆ ನೋಡು ಹೀಗೆ ಆಟ ಆಡ್ಸಿದ್ರೆ. ನಂಗೆ ಕೆಲ್ಸ ಬೆಟ್ಟದಷ್ಟು ಬಿದ್ದಿದೆ... ನಿಮ್ಮಪ್ಪ ಬೇರೆ ಪಟ್ಣಕ್ಕೆ ಹೋಗಿದ್ದಾರೆ, ಇಲ್ಲಿ ನಾನೇ ಎಲ್ಲದಕ್ಕೂ ಸಾಯ್ಬೇಕಾಗಿದೆ. ಅದ್ಯಾಕಾದ್ರೂ ನಿಮ್ಗೆಲ್ಲಾ ಶಾಲೆಗೆ ರಜೆ ಕೊಡ್ತಾರೋ! ಬಾ ಇಲ್ಲಿ ಮೊದ್ಲು...” ಎಂದು ಜೋರು ಮಾಡಲು, ಧೃತಿ ಅಲ್ಲಿಂದ ಒಂದು ಹೆಜ್ಜೆ ಮಿಸುಕಾಡಲಿಲ್ಲ. ಎಲ್ಲಿ ಅಮ್ಮ ತನ್ನ ಬಳಿ ಬಂದು ಬಿಡುವಳೋ ಎಂಬ ಭಯದಲ್ಲೇ, ಅಲ್ಲಿಂದ ಮುಂದೆ ಓಡಲು ತಯಾರಾಗಿಯೇ ನಿಂತಿದ್ದಳು.
“ಊಹೂಂ, ನಾ ಬರಲ್ಲಾ... ಅಕ್ಕನಿಗೂ ಗೆಜ್ಜೆ ಬೇಕಾದ್ರೆ ನೀ ಕೊಡು. ನಾ ನನ್ನ ಗೆಜ್ಜೆ ತೆಗೆಯೊಲ್ಲ... ನನ್ನ ಫ್ರೆಂಡ್ಸ್ ಎಲ್ಲಾ ಹಾಕ್ಕೊಂಡು ಬರ್ತಾರೆ ಸ್ಕೂಲಿಗೆ. ನಾನೂ ನಾಳೆ ಹಾಕ್ಕೊಂಡೇ ಹೋಗ್ಬೇಕು.” ಎಂದು ಥಕಥೈ ಕುಣಿಯಲು ಘಲ್ ಘಲ್ ಸದ್ದು ಜೋರಾಗಿ, ಜಗುಲಿಯಲ್ಲಿದ್ದ ದೀಪ್ತಿಯ ಅಳುವನ್ನು ಅದು ತಾರಕಕ್ಕೇರಿಸಿತ್ತು.
“ನೋಡು ಅವ್ಳು ತೆಗ್ಯಲ್ವಂತೆ... ನಂಗೂ ಬೇಕು ಈಗ... ನಾನು ಗಾಯ ಮಾಡ್ಕೊಳ್ಳಲ್ಲ... ಕೊಡು ನಂಗೂ...” ಎಂದು ಬಿಕ್ಕಿ ಬಿಕ್ಕಿ ಅತ್ತಾಗ, ಅನಸೂಯಳ ಸಂಯಮದ ಕಟ್ಟೆ ಒಡೆದುಹೋಗಿತ್ತು. ದೀಪ್ತಿಯ ಬಳಿ ಧಾವಿಸಿ ಬಂದವಳೇ ಮಗಳ ಬೆನ್ನಿಗೆ ಸಮಾ ನಾಲ್ಕು ಬಾರಿಸಿ, ಕೊನೆಗವಳ ಪಕ್ಕದಲ್ಲೇ ಕುಕ್ಕರಿಸಿ ಕುಳಿತು, ತಾನೂ ಅಳತೊಡಗಿದ್ದಳು. ಗೆಜ್ಜೆ ಸಿಗದ ನಿರಾಸೆಯ ಅಳುವಿನ ಜಾಗವನ್ನೀಗ ಅಮ್ಮನ ಏಟಿನ ಉರಿ ಆಕ್ರಮಿಸಿಕೊಂಡುಬಿಟ್ಟಿತ್ತು. ಅಪರೂಪದಲ್ಲಿ ಅಪರೂಪಕ್ಕೆ ಕೈಯೆತ್ತಿದ್ದ ಅಮ್ಮಾ, ಇಂದು ಹೀಗೆ ಬಾರಿಸಿದ್ದು ಹುಡುಗಿಯನ್ನು ಅವಾಕಾಗಿಸಿಬಿಟ್ಟಿತ್ತು. ಅಕ್ಕನಿಗೆ ಬಿದ್ದ ಲತ್ತೆಗಳನ್ನು ನೋಡಿ, ಧೃತಿ ಪೆಚ್ಚಾಗಿ ನಿಂತು ಬಾಯಿಗೆ ಬೆರಳಿಟ್ಟುಕೊಂಡಿದ್ದಳು. ಅದೇ ಸಮಯಕ್ಕೇ ಗೇಟು ತೆರೆದುಕೊಂಡು ಅಲ್ಲಿಗೆ ಬಂದಿದ್ದ ಶ್ರೀಪಾದರು ತಮ್ಮ ಮುದ್ದಿನ ಮಗಳಿಗೆ ಪತ್ನಿ ಹೊಡೆಯುತ್ತಿರುವುದನ್ನು ನೋಡಿದ್ದೇ, ಅವರಿಗೆ ಸಿಟ್ಟು ನೆತ್ತಿಗೇರಿಬಿಟ್ಟಿತ್ತು.
“ಎಂಥಾ ರೋಗ ಬಡಿಯಿತೇ ನಿಂಗೆ ಅನ್ಸೂಯಾ? ಅದ್ಯಾಕೆ ಇವ್ಳನ್ನು ಹೀಗೆ ಚಚ್ತಿದ್ದೀಯಾ? ಅದೇನೇ ತಪ್ಪು ಮಾಡಿರ್ಲಿ ಹೀಗೆಲ್ಲಾ ಕೈ ಮಾಡ್ಬೇಡ ಅಂದಿದ್ದೆ ತಾನೇ?” ಮಕ್ಕಳಲ್ಲೇ ಇರುವುದನ್ನು ಕಂಡು, ಆದಷ್ಟು ಸಂಯಮ ತಂಡುಕೊಂಡು ಉಗ್ರನೋಟ ಬೀರಿದ್ದರು ಹೆಂಡತಿಯತ್ತ. ಆದರೆ ಅನಸೂಯಳ ಗಮನವೆಲ್ಲಾ ಮಗಳ ಮೇಲೆಯೇ ಇದ್ದಿತ್ತು. ಪಶ್ಚಾತ್ತಪದ ಉರಿಯಿಂದ ದೀಪ್ತಿಯನ್ನು ಎದೆಗವಚಿಕೊಂಡು ಭೋರೆಂದು ಅಳತೊಡಗಿದ್ದಳು. ಹೆಂಡತಿಯ ಯಾತನೆಯ ಅರಿವಿದ್ದುದರಿಂದ ಶ್ರೀಪಾದರೂ ತುಸು ಶಾಂತಗೊಂಡು ಅಲ್ಲೇ ಕುಳಿತುಕೊಂಡರು. ಧೃತಿಯೂ ಹೆದರುತ್ತಾ, ಗೆಜ್ಜೆಯ ಸದ್ದನ್ನು ಹೆಚ್ಚು ಮಾಡದೇ, ಮೆಲ್ಲನೆ ಅವರಲ್ಲಿಗೆ ಬಂದಿದ್ದಳು.
“ಅದ್ಯಾವ ಘಳಿಗೆಯಲ್ಲಿ ಆವತ್ತು ಇವ್ಳನ್ನ ಅಂಗ್ಳದಲ್ಲಿ ಆಡಲು ಬಿಟ್ಟೋದ್ನೋ! ಆ ಹಾಳು ಮಾವಿನ ಮರ ಹತ್ತೋಕೆ ಹೋಗಿ ಜಾರಿ ಬಿದ್ದು ಸೊಂಟಕ್ಕೆ ಪೆಟ್ಟು ಮಾಡ್ಕೊಂಡು ನಡ್ಯೋಕಾಗ್ದೇ ಜೀವ್ನಪೂರ್ತಿ ಅನುಭವ್ಸೋ ಹಾಗಾಗೋಯ್ತು ನಾವೆಲ್ಲಾ...” ತಲೆಚಚ್ಚಿಕೊಂಡವಳ ಹೆಗಲನ್ನು ಮೃದುವಾಗಿ ತಟ್ಟಿದ್ದರು ಶ್ರೀಪಾದರು.
“ಸಮಾಧಾನ ಮಾಡ್ಕೋ ಅನು, ನಮ್ಮ ನಿಯತಿಯಲ್ಲಿರೋದನ್ನ ತಪ್ಪಿಸೋಕೆ ಆಗತ್ತಾ? ಆವತ್ತು ನಾನೂ ಅಲ್ಲೇ ಇದ್ದಿದ್ದೆ ತಾನೇ? ಅರ್ಜೆಂಟು ಫೋನ್ ಬಂತು ಎಂದು ಒಳಗೆ ಹೋಗಿ, ಎರಡು ನಿಮಿಷ ಮಾತಾಡಿ ಬರೋವಷ್ಟರಲ್ಲೇ ಇವ್ಳು ಮರ ಹತ್ತೋಕೆ ಹೋಗಿ ಈ ದುರ್ಘಟನೆ ನಡ್ದು ಹೋಯ್ತು. ಎಷ್ಟು ಸಲ ನಾವಿದ್ರ ಬಗ್ಗೆ ಹಲುಬಿಲ್ಲ ಹೇಳು? ಮತ್ತೆ ಮತ್ತೆ ಅದದೇ ಪ್ರಲಾಪ್ ಇವ್ರುಗಳ ಮುಂದೆ ಬೇಕಾ?” ತುಸು ಬೇಸರಲ್ಲೇ ಸಮಾಧಾನಿಸಿದ್ದರು.
“ನಿಮ್ಗೆ ನನ್ನ ಸಂಕ್ಟ ಅರ್ಥವಾಗೊಲ್ಲಾರೀ... ಮನೆ ಮುಂದೆ ಕಣ್ಕುಕ್ತಿರೋ ಆ ಹಾಳು ಮರವ ಕಡ್ದು ಬಿಸಾಕಿ, ಇಲ್ಲಾ ಸುಡಿ ಅಂದ್ರೂ ನೀವು ಕೇಳೊಲ್ಲ... ಅತ್ತೆಯಮ್ಮನ ನೆನಪಲ್ಲಿ ನೆಟ್ಟಿದ್ದು ಅಂತ ಹಿಂಜರೀತಿರಾ. ಇನ್ನೊಂದು ತಿಂಗ್ಳು ನೋಡ್ತೇನೆ... ಆದ್ರೂ ಕಡ್ಸಿಲ್ಲ ಅಂದ್ರೆ ನಾನೇ ಖುದ್ದು ಆಳಿಗೆ ಮಾತಾಡಿ, ತೆಗ್ಸಿ ಬಿಡುವೆ ನೋಡ್ತಿರಿ...” ಎಂದವಳೇ, ಸಿಟ್ಟಿನಿಂದ ಅಲ್ಲಿಂದೆದ್ದು ಒಳಗೆ ನಡೆದುಬಿಟ್ಟಳು. 
ಅಮ್ಮನ ಅಳು, ಅಪ್ಪನ ಬಾಡಿದ ಮುಖ, ಪೆಚ್ಚಾದ ತಂಗಿ, ಇದನ್ನೆಲ್ಲಾ ನೋಡಿ ದೀಪ್ತಿಯ ಗೆಜ್ಜೆಯ ಹಠ ನೇಪಥ್ಯಕ್ಕೆ ಸರಿದುಬಿಟ್ಟಿತ್ತು. ಆದರೆ ಅಮ್ಮನ ಹೊಡೆತದ ಉರಿ ಮಾತ್ರ ಇನ್ನೂ ಬೆನ್ನಲ್ಲಿ ಚುರುಚುರು ಎನ್ನುತ್ತಿದ್ದರಿಂದ ತನ್ನ ಬಲಗೈಯನ್ನು ಬೆನ್ನ ಹಿಂದೆ ತಾಗಿಸಿಕೊಂಡು ಉಜ್ಜಿಕೊಳ್ಳತೊಡಗಿದ್ದಳು.
ಇದನ್ನು ಕಂಡಿದ್ದೇ ತಕ್ಷಣ ಎಚ್ಚೆತ್ತುಕೊಂಡ ಶ್ರೀಪಾದರು, ಜಗುಲಿಯ ಗೂಡಿನಲ್ಲಿಟ್ಟಿದ್ದ ತೆಂಗಿನೆಣ್ಣೆಯ ಗಿಂಡಿಯನ್ನು ತಂದು, ಮಗಳ ಬೆನ್ನಿಗೆ ಸವರಿದ್ದರು.
“ಅಪ್ಪಾ, ನನ್ನ ಗೆಜ್ಜೆ ತೆಗ್ದುಬಿಡು... ನಾ ನಾಳೆಯೇ ಹಾಕ್ಕೊಳ್ಳುವೆ” ಎಂದು ಸಣ್ಣ ಧ್ವನಿಯಲ್ಲಿ ಧೃತಿ ಹೇಳಲು, “ಬೇಡ ಬಿಡು, ಹಾಕ್ಕೊಂಡಿರು ನೀನು, ನಿನ್ನ ಕಾಲಿಗೆ ಚೆಂದ ಕಾಣ್ತಿದೆ.. ನಂದು ಸೊಟ್ಟ ಪಟ್ಟ ಇದೆ ನೋಡು... ಸರಿ ಆಗೊಲ್ಲ ಹಾಕ್ಕೊಂಡ್ರೂ...” ಎಂದು ತಂಗಿಯ ಕೆನ್ನೆಯನ್ನು ಸವರಿದವಳ ಗಲ್ಲಕ್ಕೊಂದು ಮುತ್ತಿಟ್ಟಿದ್ದರು ಶ್ರೀಪಾದರು. 
“ಬನ್ನಿ ಇಬ್ರೂ ಹೊರಗೆ ಅಂಗಳಕ್ಕೆ ಹೋಗುವ... ನಾನು ನಿಮಗಿಬ್ರಿಗೆ ಅಂತ ಜೋಕಾಲಿ ಮಣೆ ಮಾಡ್ಸಿದ್ದೇನೆ. ನಿಮ್ಗೆ ಗೊತ್ತಾ? ಅದ್ರ ಅಕ್ಕ-ಪಕ್ಕ, ಹಿಂದೆ-ಮುಂದೆ ಎಲ್ಲಾ ಹಿಡಿಕೆ ಇವೆ! ಹೀಗಾಗಿ ಬೀಳೋ ಭಯವೇ ಇಲ್ಲಾ. ಕೆಂಚ ಹೊತ್ಕೊಂಡು ಬರ್ತಿದ್ದಾನೆ... ಅಗೋ ಅಲ್ನೋಡಿ ಬಂದೇ ಬಿಟ್ಟ” ಎಂದು ಉಮೇದಿ ತೋರಲು. ಉತ್ಸಾಹದಿಂದ ಕುಣಿಯುತ್ತಾ ಧೃತಿ ಅಂಗಳಕ್ಕೆ ಓಡಲು, ಅಂಬೆಗಾಲಿನಲ್ಲಿ ತೆವಳುತ್ತಾ ಸಾಗತೊಡಗಿದ್ದ ದೀಪ್ತಿಯನ್ನು ಎತ್ತಿಕೊಂಡು ಧೃತಿಗಿಂತ ಮುಂದಾಗಿ ಓಡಿದ್ದರು ಶ್ರೀಪಾದರು.
“ಅಯ್ಯಾ, ಸಮಾ ಭಾರ ಇದೆ ಮಾರ್ರೆ... ಹೊತ್ಕೊಂಡ್ ಬರತನ್ಕಾ ನನ್ನ್ ಹೆಣ ಬಿದ್ದೋಯ್ತು! ಎಲ್ಲಿ ಕಟ್ಬೇಕ್ರಾ? ಬೆಗ್ನೆ ಹೇಳಿ, ನಂಗೆ ಪ್ಯಾಟಿ ಕಡೆ ಹೋಗೂಕದೆ...” ಕೆಂಚ ಅವಸರಿಸಲು, ಆಲೋಚನೆಗೆ ಬಿದ್ದುಬಿಟ್ಟರು ಶ್ರೀಪಾದರು. ಅವರೇನೋ ಅದನ್ನು ಗಟ್ಟಿಮುಟ್ಟಾಗಿರುವ ಮಾವಿನ ಮರದ ಗೆಲ್ಲಿಗೇ ಹಾಕಿಸಲು ತಂದಿದ್ದಾಗಿತ್ತು. ಆದರೆ ಇಂದು ಬಹಳ ಕಠಿಣವಾಗಿ ಹೆಂಡತಿ ತಾಕೀತು ಮಾಡಿದ್ದರಿಂದ ಸಂಕಟದ ಜೊತೆ ಹೊಸ ಚಿಂತೆಯೂ ಸೇರ್ಪಟ್ಟಿತ್ತು.
“ಹ್ವಾಯ್, ಯಾವ ಮರಕ್ಕೆ ಕಟ್ಟದ್ರಾ? ಈ ಮಾವಿನ ಮರನೇ ಸಮಾ ಆಯ್ತದೆ ಅನಿಸ್ತಪ ನಂಗೆ... ಪೇರ್ಲೆ ಮರ ಹಳೇತಾಗದೆ... ಅಲ್ನೋಡಿ ಲಡ್ಡಾಗೋಗದೆ ಮರ...” ಎನ್ನಲು ಅವರಿಗೂ ಹೌದೆನಿಸಿತ್ತು. ಆದದ್ದಾಗಲಿ, ಒಂದು ತಿಂಗಳವರೆಗಾದರೂ ಮಕ್ಕಳಾಡಿಕೊಳ್ಳಲಿ ಎಂದು ಕೆಂಚನಿಗೆ ಮಾವಿನ ಮರಕ್ಕೇ ಕಟ್ಟಲು ಆದೇಶಿಸಿದ್ದರು.
ತೀರಾ ತಳಮಟ್ಟಕ್ಕೂ ತಾಗದಂತೇ, ಅತಿ ಎತ್ತರಕ್ಕೂ ಹೋಗದಂತೇ, ಹದಾ ಮಧ್ಯಕ್ಕೇ ಬರುವಂತೇ ಅಳೆದು ಸುರಿದು ಹಗ್ಗ ಕಟ್ಟಿಸಿದ್ದರು. ಅದಕ್ಕೆ ಸುತ್ತಲೂ ಭದ್ರತೆ ಮಾಡಿಸಿದ್ದ ಜೋಕಾಲಿ ಮಣೆಯನ್ನು ಗಟ್ಟಿಯಾಗಿ ಬಿಗಿದು ಕಟ್ಟಿ ಕೂರಿಸಿದ್ದೇ ಮಕ್ಕಳಿಬ್ಬರೂ ಬೊಬ್ಬೆ ಹೊಡೆದು ಅದನ್ನೇರಿ ಜೀಕತೊಡಗಿದ್ದರು. ಅಗಲವಾದ ಗೆಲ್ಲುಗಳು, ಮೈತುಂಬಾ ತುಂಬಿದ ಹಸಿರೆಲೆಗಳಿಂದಾಗಿ ಮಟ ಮಧ್ಯಾಹ್ನದ ಬಿಸಿಲಲ್ಲೂ ಅಲ್ಲಿ ತಂಪೆರೆದಿತ್ತು. ಮಕ್ಕಳ ಕೇಕೆ, ನಗು, ಅಲೆಯಂತೆ ಸಾಗಿ, ಒಳಜಗುಲಿಯಲ್ಲೇನೋ ಕೆಲಸದಲ್ಲಿ ತೊಡಗಿದ್ದ ಅನಸೂಯೆಯ ಕಿವಿಯೊಳಗೆ ಹೊಕ್ಕು, ಅವಳ ಜೀವವನ್ನೂ ತುಸು ತಂಪಾಗಿಸಿತ್ತು. ಮೆಲ್ಲನೆ ಹೊರಬಂದು ನೋಡಿದ್ದಳು. ಗಂಡ ಮೆಲುವಾಗಿ ಜೋಕಾಲಿ ತೂಗುತ್ತಿದ್ದರೆ, ಮಕ್ಕಳಿಬ್ಬರೂ ಕಿಲಕಿಲ ನಗುತ್ತಿದ್ದರು. ಅಮ್ಮನನ್ನು ಕಂಡು ಮಕ್ಕಳಿಬ್ಬರೂ ಕೈ ಬೀಸಿದ್ದರೂ, ಅದನ್ನು ಕಟ್ಟಿದ್ದು ಅದೇ ಅನಿಷ್ಟ ಮಾವಿನ ಮರಕ್ಕೆಂದು ಸಿಟ್ಟಾಗಿ, ಹುಬ್ಬುಗಂಟಾಗಿಸಿಕೊಂಡು ತಕ್ಷಣ ಅಲ್ಲಿಂದ ಒಳನಡೆದುಬಿಟ್ಟಿದ್ದಳು. 
ಮನಸಾರೆ ಆಟವಾಡಿ, ಕೊನೆಗೆ ಹಸಿವಾಗಲು, ತಾನು ಮೊದಲು ಊಟಕ್ಕೆ ಓಡಿದ್ದಳು ಧೃತಿ. ಅಪ್ಪನ ತೊಡೆಯನ್ನೇರಿ ಕುಳಿತು, ಇನ್ನೂ ಅತ್ತಿಂದಿತ್ತ ಓಲಾಡುತ್ತಲಿದ್ದ ಉಯ್ಯಾಲೆಯನ್ನು ದಿಟ್ಟಿಸುತ್ತಿದ್ದ ದೀಪ್ತಿಗೆ ಹಸಿವು ನೀರಡಿಕೆಗಳೆಲ್ಲಾ ಮರೆತುಹೋಗಿದ್ದವು. ತನ್ನ ಬಹುದಿನದ ಕನಸಾಗಿದ್ದ ಜೋಕಾಲಿಯನ್ನು ಕಂಡು ಅವಳಿಗೆ ಹೊಟ್ಟೆ ತುಂಬಿದಂತಾಗಿತ್ತು.
“ಅಪ್ಪಾ, ನಾನು ಹಠ ಮಾಡಿದ್ರಿಂದ ಅಮ್ಮಂಗೆ ತುಂಬಾ ಬೇಜಾರಾಯ್ತೇನೋ ಅಲ್ವಾ? ಆದ್ರೆ, ನಾನೇನು ಮಾಡ್ಲಿ? ನಂಗೂ ಗೆಜ್ಜೆ ಬೇಕು ಅಂತ ಆಸೆ ಆಗ್ತದೆ... ಧೃತಿ ಹಾಕ್ಕೊಂಡು ಕುಣೀವಾಗೆಲ್ಲಾ ನಾನೂ ಕುಣೀಬೇಕು ಅನ್ನಿಸ್ತದೆ... ಅಮ್ಮಾ ಬೇಡ ಅಂತ ಬೈತಾಳೆ... ನನ್ನ ಕಾಲಿಗೆ ಯಾಕೆ ಬೇಗ ಗಾಯ ಆಗೋದು ಅಪ್ಪಾ? ನನ್ನ ಚರ್ಮ ಧೃತಿಯ ಹಾಗೇ ಇರ್ಬೇಕಿತ್ತು.” ಮುಖ ಮುದುಡಿಸಿಕೊಂಡು ಪ್ರಶ್ನಿಸಿದ್ದ ಮಗಳ ಕೆನ್ನೆಸವರಿ ಅಪ್ಪಿಕೊಂಡಿದ್ದರು ಶ್ರೀಪಾದರು.
“ಪುಟ್ಟಿ, ನಿಂಗೆ ಪರೀಕ್ಷೆಯಲ್ಲಿ ಬಿಟ್ಟಸ್ಥಳ ತುಂಬಿರಿ ಅಂತ ಕೊಡ್ತಾರೆ ಅಲ್ವಾ? ಅದ್ರ ಕೆಳ್ಗೆ ಒಂದ್ನಾಲ್ಕು ಉತ್ರ ಕೊಟ್ಟಿರ್ತಾರೆ ಸರಿಯಾ? ಅದ್ರಲ್ಲೊಂದು ಉತ್ರವನ್ನ ನೀನು ಆರಿಸ್ಕೊಳ್ತೀಯಾ... ಸರಿಯಾಗಿದ್ರೆ ರೈಟ್, ತಪ್ಪಾಗಿದ್ರೆ ರಾಂಗ್ ಹಾಕ್ತಾರೆ ಹೌದೋ?” ಎನ್ನಲು ಕುತೂಹಲದಿಂದ ತಲೆದೂಗಿದ್ದಳು ದೀಪ್ತಿ.
“ಹಾಂ, ಹಾಗೇ ಈಗ ನಿನ್ನ ಮುಂದೆ ಒಂದು ಪ್ರಶ್ನೆಯಿದೆ ಅಂತಿಟ್ಕೋ. ಅದೇನಂದ್ರೆ, ‘ನಮ್ಮ ದೀಪ್ತಿ ಪುಟ್ಟ ಕೂಸಾಗಿದ್ದಾಗ ಮರಹತ್ತಲು ಹೋಗಿ, ಏನೋ ಪರಾಮಶಿಯಾಗಿ, ಮೇಲಿಂದ ಬಿದ್ದು ಸೊಂಟಕ್ಕೆ ಏಟಾಗಿಹೋಯ್ತು. ಇದರಿಂದಾಗಿ ಅವಳಿಗೆ ಎಲ್ಲರಂತೇ ಆಡಲು ಆಗುತ್ತಿಲ್ಲ, ನಿಲ್ಲಲಾಗುತ್ತಿಲ್ಲ, ನಡೆಯಲಾಗುತ್ತಿಲ್ಲ, ಕಾಲಿಗೆ ಶಕ್ತಿ ಇಲ್ಲದ್ದರಿಂದ ಚರ್ಮ ಮೃದುವಾಗಿ ಬೇಗ ಗಾಯ ಮಾಗೋದಿಲ್ಲ. ಅವಳಿಗೆ ಕಾಲಿಗೆ ಡ್ಯಾಶ್ ಹಾಕಿಕೊಂಡರೆ ಪೆಟ್ಟಾಗುತ್ತದೆ’ ಎಂದು ಹೇಳಿದರೆ, ನೀನು ಆ ಡ್ಯಾಶಿನಲ್ಲಿ ಏನು ಉತ್ರ ಬರೀತಿಯಾ? ಉತ್ರ ಒಂದು ಚಪ್ಪಲು, ಉತ್ರ ಎರಡು ಗೆಜ್ಜೆ, ಉತ್ರ ಮೂರು ಎರಡೂ ಸರಿ, ಉತ್ರ ನಾಲ್ಕು ಎರಡೂ ತಪ್ಪು ಅಂತಿದೆ ಅಂದ್ಕೋ...” ಎಂದಿದ್ದೇ ಆಕೆ ಥಟ್ಟನೆ “ಉತ್ರ ಮೂರು” ಎಂದಿದ್ದಳು. ಆಗ ಮುಗುಳ್ನಕ್ಕ ಶ್ರೀಪಾದರು,
“ನೋಡು, ನೀನೇಷ್ಟು ಜಾಣೆ ಅಂತ! ನಿಂಗೇ ನಿನ್ನ ಸಮಸ್ಯೆ ಚೆನ್ನಾಗಿ ಗೊತ್ತಿದೆ... ನಮಗೆ ಯಾವುದ್ರಿಂದ ತೊಂದ್ರೆ ಎಂಬುದು ಗೊತ್ತಾಗಿಬಿಟ್ರೆ ಸಮಸ್ಯೆ ಅರ್ಧದಷ್ಟು ಪರಿಹಾರವಾದಂತೇ. ನಿಂಗೆ ಚಪ್ಪಲ್ ಹಾಕ್ಕೊಳೋಕೆ ಕಷ್ಟ, ಗೆಜ್ಜೆ ಆಗಿಬರಲ್ಲ ಎಂಬುದೆಲ್ಲಾ ಚೆನ್ನಾಗಿ ಗೊತ್ತಿದೆ. ಹಾಕ್ಕೊಂಡ್ರೆ ಏನೇನೆಲ್ಲಾ ಸಮಸ್ಯೆ ಆಗ್ತದೆ ಎಂಬುದೂ ತಿಳಿದಿದೆ.. ಅಲ್ಲಿಗೆ ಮುಗೀತಲ್ಲಾ! ಅವುಗಳಿಂದ ದೂರವಿದ್ದುಬಿಟ್ರೆ ಆಯ್ತಪ್ಪಾ, ಸಮಸ್ಯೆ ಬರೋದೇ ಇಲ್ಲಾ ಅಲ್ವಾ?” ಎನ್ನಲು ಹೌದೆಂದು ತಲೆಯಾಡಿಸಿ ನಕ್ಕಿದ್ದಳು ದೀಪ್ತಿ.
“ಈಗ ನಿನ್ನ ಕೈಗಳಿಗೆ ಏನನ್ನು ಹಾಕ್ಕೊಂಡ್ರೆ ತೊಂದ್ರೆ ಆಗತ್ತೆ?” ಎಂದು ಕೇಳಿದ್ದೇ, ಹುರುಪಿನಿಂದ “ಏನೂ ಇಲ್ಲಾ...” ಎಂದು ಕೂಗಲು, ಜೋರಾಗಿ ನಗುತ್ತಾ ತಮ್ಮ ಅಂಗಿಯ ಜೇಬಿನಿಂದ, ಗೆಜ್ಜೆ ಮಣಿಗಳನ್ನು ಪೋಣಿಸಿದ್ದ ನಾಲ್ಕು ಬೆಳ್ಳಿಯ ಬಳೆಗಳನ್ನು ತೆಗೆದು ತೊಡಿಸಿದ್ದರು. ಅವುಗಳ ಕಿಣಿಕಿಣಿ ಸದ್ದು ಕೇಳಿದ್ದೇ ದೀಪ್ತಿಯ ಕಣ್ಗಳು ಅರಳಿ ನಿಂತಿದ್ದವು. ತಿರುಗಣಿಯಿದ್ದಿದ್ದರಿಂದ ಅದರ ಗಾತ್ರವನ್ನು ಕುಗ್ಗಿಸಿ ಅವಳ ಎಳೆಯ ಕೈಗಳಿಗೆ ಪಟ್ಟಾಗಿ ಕೂರಿಸುವಂತೇ ಮಾಡಿದ್ದರು ಶ್ರೀಪಾದರು.
ಅಂದು ಸಂಜೆಯೇ ಆಕೆ ಮೊದಲ ಬಾರಿಗೆ, ಅಂಗಳದಲ್ಲಿ ಕುಳಿತು, ಘಲ್ ಘಲ್ ಎನ್ನುತ್ತಿದ್ದ ತನ್ನ ಕೈಗಳಿಂದ ಮಾವಿನ ಮರದ ಸುಂದರ ಚಿತ್ರವನ್ನು ಬರೆದಿದ್ದು, ಅದನ್ನು ಮರುದಿವಸ ಶಾಲೆಗೆ ಕೊಂಡೊಯ್ದು ಡ್ರಾಯಿಂಗ್ ಟೀಚರಿಗೆ ತೋರಿಸಿದಾಗ ಅವರು ನೋಡಿ ಬಹಳ ಮೆಚ್ಚಿ ಶಬ್ಬಾಸ್ ಕೊಟ್ಟಿದ್ದಲ್ಲದೇ, ನೋಟಿಸ್ ಬೋರ್‍ಡಿನಲ್ಲೂ ಹಾಕಿಸಿ ಹಲವರ ಮೆಚ್ಚುಗೆ ಗಳಿಸುವಂತೇ ಮಾಡಿದ್ದರು. ಈ ಸುದ್ದಿ ಅಪ್ಪನಿಗೂ ಮುಟ್ಟಲು, ಮಗಳನ್ನು ಮುದ್ದಾಡಿ ಪ್ರೋತ್ಸಾಹಿಸಿದ್ದು! ಮುಂದೆ, ಅದೇ ವರ್ಷ ನಡೆದಿದ್ದ ಜಿಲ್ಲಾ ಮಟ್ಟದ ಪ್ರೈಮರಿ ಶಾಲೆಯ ಚಿತ್ರಕಲಾ ಸ್ಪರ್ಧೆಯಲ್ಲಿ ದೀಪ್ತಿಗೆ ಎರಡನೆಯ ಬಹುಮಾನ ಸಿಗಲು, ಮುರುಟಿದ್ದ ಅವಳ ಕೆಲವು ಕನಸುಗಳಿಗೆ ಮರುಜೀವತುಂಬಿದಂತಾಗಿತ್ತು. ಮಗಳ ಒಲವು ಮತ್ತು ಪ್ರತಿಭೆ ಚಿತ್ರಕಲೆಯ ಮೇಲೆ ಇರುವುದು ತಿಳಿದು, ಅವಳಿಗೆ ಅದರಲ್ಲಿ ವಿಶೇಷ ತರಬೇತಿ ಕೊಡಿಸಿದ್ದರು ಶ್ರೀಪಾದರು. ಎಷ್ಟೋ ಬಾರಿ ಆಕೆ ಚಿತ್ರವನ್ನು ಬಿಡಿಸಲು ಆಯ್ದುಕೊಳ್ಳುವ ತಾಣ ಮಾತ್ರ ಅದೇ ಮಾವಿನಮರದ ಕಟ್ಟೆಯಾಗಿಬಿಡಲು, ಅಂತೂ ಅನಸೂಯಳ ಕೊಡಲಿಯೇಟಿನ ಭೀತಿಯಿಂದ ಆ ಬಡಪಾಯಿ ಮಾವಿನಮರ ಪಾರಾಗಿಬಿಟ್ಟಿತ್ತು. ಆಯುರ್ವೇದಿಕ್ ಚಿಕಿತ್ಸೆಯಿಂದ ದೀಪ್ತಿ ತಕ್ಕಮಟ್ಟಿಗೆ ನಿಂತು, ಮೆಲ್ಲನೆ ಊರುಗೋಲನ್ನು ಹಿಡಿದು ನಾಲ್ಕು ಹೆಜ್ಜೆಯನ್ನು ಹಾಕಲಾಗುವಷ್ಟರಲ್ಲೇ ಕಾರ್ಯದ ಮೇಲೆ ಶ್ರೀಪಾದರ ಕುಟುಂಬ ಪಟ್ಟಣಕ್ಕೆ ಸ್ಥಳಾಂತರವಾಗಲು, ದೀಪ್ತಿಯ ಪ್ರತಿಭೆಗೆ ಅದು ಮತ್ತಷ್ಟು ಸಹಾಯವನ್ನು ಮಾಡಿತ್ತು. ಅಲ್ಲಿಯ ಪ್ರಸಿದ್ಧ ಆರ್ಟ್ ಕಾಲೇಜಿಗೆ ಸೇರಿ, ಕ್ರಮೇಣ ನಾಡಿನ ಹೆಸರಾಂತ ಚಿಕ್ರಗಾರರಲ್ಲೋರ್ವಳೆನಿಸಿಕೊಂಡಿದ್ದಳು ದೀಪ್ತಿ. ಅವಳ ಕಲೆಗೆ, ಹೋರಾಟದ ಕೆಚ್ಚಿಗೆ ಮನಸೋತು, ಮನಸಾರೆ ಮೆಚ್ಚಿ ಅವಳನ್ನ ವರಿಸಿದ ರಾಜೀವನ ಮನೆ-ಮನವನ್ನು ಸೇರಿ, ಪುಟ್ಟ ಸಾನ್ವಿಯ ತಾಯಿಯಾಗಿ, ಈಗ ದಶಕಗಳೇ ಸಂದಿವೆ!
ಆ ವರ್ಷದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದೀಪ್ತಿಯ ಒಂದು ವಿಶಿಷ್ಟ ಚಿತ್ರಕ್ಕೆ ಪ್ರಥಮ ಬಹುಮಾನ ದೊರಕಿತ್ತು. ಅದರ ಅನಾವರಣ ಹಾಗೂ ಬಹುಮಾನ ವಿತರಣೆಯ ಸಮಾರಂಭಕ್ಕಾಗಿಯೇ ಅಂದು ಸಕುಟುಂಬ ಪರಿವಾರವಾಗಿ ಎಲ್ಲರೂ ಹೊರಟಿದ್ದರು. ಅವಳಿಗೋ ಮಗಳು ಸಾನ್ವಿ ತನ್ನ ಎಳೆಯ ಕಾಲ್ಗಳಿಗೆ ಗೆಜ್ಜೆಯ ತೊಟ್ಟು ಬಂದು, ಓಡಾಡಲೆಂಬ ಆಸೆ. ಆದರೆ ಸಾನ್ವಿ ನಿರಾಕರಿಸಲು, ಸಹಜವಾಗಿಯೇ ನಿರಾಸೆಯಾಗಿಬಿಟ್ಟಿತ್ತು.
_೩_
 “ದೀಪ್ತಿ, ಇಳಿ ಬೇಗ ಮಾರಾಯ್ತಿ. ಕಾರು ಪಾರ್ಕ್ ಮಾಡ್ಬೇಕು... ಟೈಮ್ ಬೇರೆ ಆಗಿದೆ...” ಗತಕಾಲದ ಕ್ಯಾನವಾಸಿನಲ್ಲಿ ನೆನಪುಗಳ ಚಿತ್ರ ಬಿಡಿಸುತ್ತಾ ಕಳೆದುಹೋಗಿದ್ದವಳು, ಪತಿಯ ಎಚ್ಚರಿಕೆಯಿಂದ ತಡಬಡಾಯಿಸಿ ಇಳಿಯ ಹೋಗಿ ಮುಗ್ಗಿರಿಸಲು, ರಾಜೀವ ಸಂಭಾಳಿಸಿದ.
“ಹುಶಾರು ಮಾರಾಯ್ತಿ, ಬಿದ್ದುಗಿದ್ದು ಏಟಾದ್ರೆ ಕಷ್ಟ...” ಎಂದು ಅವಳಿಗೆ ಕ್ಲಚಸ್ಗಳನ್ನು ನೀಡಲು ಅವುಗಳನ್ನಾಧರಿಸಿಕೊಂಡು ಮೆಲ್ಲನೆ ಹೆಜ್ಜೆ ಹಾಕಿದಳು ದೀಪ್ತಿ.
ಎದೆಯೊಳಗೆ ಅವಲಕ್ಕಿ ಕುಟ್ಟಿದಂಥ ಅನುಭವ. ಅಷ್ಟು ದೊಡ್ಡ ಸಭೆಯಲ್ಲಿ ತನ್ನ ಚಿತ್ರದ ಅನಾವರಣ! ಮೊದಲ ಬಾರಿ ಅವಳಿಗೆ ತುಸು ಆತಂಕವಾಗಿತ್ತು. ಪ್ರತಿಬಾರಿಯೂ ತಾನು ಬಿಡಿಸಿದ್ದನ್ನು ಫೋಟೋ ಹೊಡೆದುಕೊಂಡು ಅಪ್ಪನಿಗೆ, ರಾಜೀವನಿಗೆ ತೋರುತ್ತಿದ್ದವಳು. ಆದರೆ ಈಸಲವೇ ಅದು ಹೇಗೋ ಮರೆತುಹೋಗಿಬಿಟ್ಟಿದ್ದರಿಂದ ಈವರೆಗೂ ಯಾರೂ ನೋಡಿರಲಿಲ್ಲ! ಹೀಗಾಗಿ ಅವಳನ್ನು ಮತ್ತು ತೀರ್ಪುಗಾರರನ್ನು ಬಿಟ್ಟು ಉಳಿದವರಿಗೆಲ್ಲಾ ಇಂದು ಅದರ ಪ್ರಥಮ ದರ್ಶನವಾಗುವುದರಲ್ಲಿತ್ತು.
ಗಂಟೆ ನಾಲ್ಕೂವರೆಯಾಗತೊಡಗುತ್ತಿದ್ದಂತೇ ಕಾರ್ಯಕ್ರಮವು ಆರಂಭವಾಗುವ ಸೂಚನೆ ಸಿಕ್ಕಿತು. ಇನ್ನೂ ಮನೆಯವರು ಯಾರೂ ತಲುಪದ್ದು ಕಂಡು ತುಸು ದಿಗಿಲಿಗೆ ಬಿದ್ದಳು ದೀಪ್ತಿ. “ಛೇ, ನೋಡಿ ಇನ್ನೂ ಯಾರೂ ಬಂದಿಲ್ಲ! ಅತ್ತೆ ನಮ್ಮೊಂದಿಗೇ ಹೊರಟಿದ್ದಿದ್ರೆ ಸಾನ್ವಿಯೂ ಬಂದಿರೋಳು... ಅಪ್ಪ ಬೇಗ ಹೊರಟಿದ್ದನೋ ಇಲ್ವೋ, ಪೋನ್ ಮಾಡೋಣ್ವಾ?” ಎಂದು ಪೇಚಾಡುತ್ತಿರುವಾಗಲೇ ಹಿಂಬದಿಯಿಂದ “ಅಮ್ಮಾ” ಎಂದು ಕರೆದ ಸಾನ್ವಿಯ ಧ್ವನಿಗೆ ಥಟ್ಟನೆ ತಿರುಗಿದಳು ದೀಪ್ತಿ.
ಹತ್ತು ಹೆಜ್ಜೆ ದೂರದಲ್ಲಿದ್ದ ಸಾನ್ವಿ ನಸು ನಗುತ್ತಾ ಅಮ್ಮನ ಬಳಿ ಬರುತ್ತಿರಲು, ಘಲ್ ಘಲ್ ಸದ್ದು ಆ ಗದ್ದಲದಲ್ಲೂ ದೀಪ್ತಿಯ ಕಿವಿಗೆ ಬಡಿದಿತ್ತು. ಅಮ್ಮ ತನ್ನ ಪಾದದ ಕಡೆಗೇ ನೋಡುತ್ತಿರುವುದನ್ನು ಗಮನಿಸಿ, ತುಂಟ ನಗೆ ಬೀರಿದ ಸಾನ್ವಿ, ತನ್ನ ನೀಲಿ ಬಣ್ಣದ ಉದ್ದಲಂಗವನ್ನೆತ್ತಿ ನಿಂತಲ್ಲೇ ಸಣ್ಣದಾಗಿ ಜಂಪ್ ಮಾಡಲು, ಘಲ್ ಎಂದಿತು ಅವಳ ಕಾಲಂದುಗೆ! ಸೀದಾ ಓಡಿ ಬಂದವಳೇ ಅಮ್ಮನ ಕೊರಳಿಗೆ ಜೋತು ಬಿದ್ದವಳೇ ಅವಳ ಕೆನ್ನೆಗೊಂದು ಮುತ್ತು ಕೊಟ್ಟಳು. ದೀಪ್ತಿ ತನ್ನ ಕಣ್ಗಳಿಂದ ಉರುಳಲು ತಯಾರಾಗಿದ್ದ ಹನಿಗಳನ್ನು ಥಟ್ಟನೆ ಒರೆಸಿಕೊಂಡಳು.
“ಅಲ್ವೇ, ಎಂತಕ್ಕೆ ಸೊಕ್ಕು ಮಾಡಿದ್ದು ಆಗ ನೀನು? ಈಗ ನೋಡಿದ್ರೆ ಗೆಜ್ಜೆ ಹಾಕ್ಕೊಂಡು ಬಂದಿದ್ದೀಯಾ...” ಮಗಳ ಕಿವಿಯಲ್ಲಿ ಪಿಸುಗುಟ್ಟಿದಳು ದೀಪ್ತಿ.
“ಅದಾ, ಪೂಜೆಗಾದ್ರೆ ಹೌದಪ್ಪಾ... ಸುಮ್ನೇ ಇಲ್ಲಿಗೆಲ್ಲಾ ಯಾಕೆ  ಅಂತ ಬೇಡ ಅಂದಿದ್ದೆ. ಆದ್ರೆ ಶ್ರೀಪಾದಜ್ಜ ನಂಗೆ ತಿಳ್ಸಿ ಹೇಳ್ದ, ‘ಅಮ್ಮಂಗೆ ಗೆಜ್ಜೆ ಅಂದ್ರೆ ತುಂಬಾ ಇಷ್ಟ, ಸರ್ಪೈಸ್ ಕೊಡೋಣ ಹಾಕ್ಕೋ’ ಅಂತ. ನಂಗೂ ಹೌದು ಅನ್ನಿಸ್ತು ಹಾಕ್ಕೊಂಡೆ” ಎಂದು ಉತ್ತರಿಸಿ ಸೀದಾ ಅಜ್ಜಿಯ ಬಳಿ ಓಡಲು, ಪ್ರೀತಿಯಿಂದ ಅಪ್ಪನ ಕಡೆ ನೋಡಿದಳು ದೀಪ್ತಿ. ಆದರೆ ಶ್ರೀಪಾದರು ಬೀಗರ ಬಳಿ ಅದೇನೋ ಮಾತನಾಡುವದರಲ್ಲಿ ವ್ಯಸ್ಥರಾಗಿದ್ದರು.
ಮುಂದಿನ ಹತ್ತು ನಿಮಿಷದಲ್ಲಿ ವಿದ್ಯುಕ್ತವಾಗಿ ಸಭೆ ಆರಂಭವಾಗಿತ್ತು. ಪ್ರಾಥಮಿಕ ಕಲಾಪಗಳು, ಸ್ವಾಗತ ಭಾಷಗಳೆಲ್ಲಾ ಮುಗಿದು, ರೇಶಿಮೆಯ ವಸ್ತ್ರದಲ್ಲಿ ಮುಚ್ಚಿಟ್ಟಿದ್ದ ಅವಳ ಚಿತ್ರದ ದೊಡ್ಡ ಕ್ಯಾನವಾಸನ್ನು ಎದುರಿಗೆ ತಂದಿಟ್ಟರು. ಬಹುಮಾನ ವಿತರಣೆಯ ಸ್ವೀಕರಿಸಲು ದೀಪ್ತಿಯನ್ನು ವೇದಿಕೆಗೆ ಆಹ್ವಾನಿಸಲಾಯಿತು. ಪತಿಯ ಜೊತೆಗೂಡಿ ಮೆಲ್ಲನೆ ಮೇಲೇರುತ್ತಿದ್ದವಳ ಬಳೆಗಳೊಳಗಿನ ಗೆಜ್ಜೆ ಮಣಿಗಳು ಘಲ್‌ಘಲ್ ಎನ್ನುತ್ತಿದ್ದವು.
 ಅಂತೂ ಅವಳು ಬಿಡಿಸಿದ್ದ, ಬಹುಮಾನಿತ ಚಿತ್ರವನ್ನು ಅನಾವರಣಗೊಳಿಸುವ ಆ ಘಳಿಗೆ ಬಂದುಬಿಟ್ಟಿತು. ಹಳದಿ ಬಣ್ಣದ ರೇಶಿಮೆಯ ಮುಸುಕು ಮೆಲ್ಲನೆ ಮೇಲೆರಿದಂತೇ ಚಿತ್ರ ತೆರೆದುಕೊಳ್ಳತೊಡಗಿತು.
ಅನಂತದಾಚೆಯೆಲ್ಲೋ ಚಾಚಿರುವಂತೆ ತೋರುತ್ತಿದ್ದ ಬೃಹತ್ ಮಾವಿನ ಮರದ ಚಿತ್ರವದು! ಕಾಲ್ಗೆಜ್ಜೆಯ ಮಣಿಗಳೆಲ್ಲಾ ಸೇರಿ ಬೇರಿನ ಆಕಾರದಲ್ಲಿ ನೆಯ್ದುಕೊಂಡು, ಅದರ ದಪ್ಪ ಕಾಂಡದ ಮೂಲಕ ಸಾಗಿ, ಮೇಲೇರಿ, ಆಗಸದಲ್ಲೆಲ್ಲೋ ಮಾಯವಾಗಿಬಿಟ್ಟಿದ್ದವು. ಆ ಮರದ ತುದಿ ನೀಲಾಗಸದಾಚೆಯೂ ಬೆಳೆದು ಬಾನಗಲ ಚಾಚಿಕೊಂಡಿತ್ತು. ಪ್ರತಿ ಎಲೆಯ ತುದಿಗೂ ಮಂಜಿನ ಹನಿಯ ಬದಲು ಗೆಜ್ಜೆಯ ಮಣಿ ಹೊಳೆಯುತ್ತಿದ್ದರೆ, ತೊಟ್ಟಿನಲ್ಲಿ ಮಾವಿನ ಹಣ್ಣಿನಾಕಾರದಲ್ಲೂ ಗೆಜ್ಜೆಗಳಿದ್ದವು. 
ಆ ಬೃಹತ್ ಮರದ ಬುಡದಲ್ಲಿ ಕುಳಿತು, ತನ್ನ ತಲೆಯೆತ್ತಿ ಬೊಗಸೆಯೊಡ್ಡಿದ್ದಾಳೆ ಓರ್ವ ಪುಟ್ಟ ಹುಡುಗಿ. ಅವಳ ಕಾಲಿನ ಬೆರಳುಗಳೆಲ್ಲಾ ಬೆಳೆದು, ಮುಂದೆ ಸಾಗಿ, ಆ ಮರದ ಗೆಜ್ಜೆ ಬೇರುಗಳ ಜೊತೆ ಬೆಸೆದುಕೊಂಡಿವೆ. ಮರದ ಎಲೆಗಳಿಂದ ಉರುಳಿ ಬೀಳುತ್ತಿದ್ದ ಗೆಜ್ಜೆ ಹನಿಗಳಲ್ಲಿ ಹಲವು ಅವಳ ಬೊಗಸೆಯನ್ನೂ ತುಂಬಿ ನೆಲಕ್ಕೆ ತುಳುಕುತ್ತಿವೆ. ಹುಡುಗಿಯ ಬಲಬದಿಯ ಹುಲ್ಲು ಹಾಸಿನ ಮೇಲೆ ಗೆಜ್ಜೆ ಮಣಿಗಳಿಂದಲೇ ಬರೆದ ಒಂದು ಸಾಲಿನ ಕ್ಯಾಪ್ಷನ್... ‘ಕನಸುಗಳುದುರಿ ಘಲ್ಲೆನ್ನುತ್ತಿವೆ... ಹಿಡಿಯಬಹುದೆ ಅವುಗಳ ನಾದವ ಸಣ್ಣ ಬೊಗಸೆಯಲ್ಲಿ?!’
~ತೇಜಸ್ವಿನಿ ಹೆಗಡೆ*****_____*****


ಬುಧವಾರ, ಜನವರಿ 10, 2018

ತೆರೆ ಸರಿದಾಗ...

ಮುಂಜಾನೆಯೋ, ಮುಸ್ಸಂಜೆಯೋ,
ಅದೊಂದು ಅಯೋಮಯ ಘಳಿಗೆ!
ಅರೆತೆರೆದ ಕಣ್ಣಿಂದ ಹೊಕ್ಕಿದ ಸ್ವಪ್ನದಲ್ಲಿ
ಅಜ್ಜಮ್ಮನ ಸೀರೆಯ ಸೆರಗಿನಂಚು ಸೋಕಿ,
ಅವಳ ಕಣ್ಗಳಿಂದ ಸುರಿದ ಪ್ರೀತಿ
ಹರಿದು ಧಾರೆಯಾಗಿ,
ನನ್ನೆದೆಯುರಿಯ ತಣಿಸಿದ ಹೊತ್ತು!
ಅವಳ ಹೆಗಲೇರಿ ಹೊರೆಟೆನೋ,
ಸೊಂಟವನ್ನೇರಿ ಕುಳಿತೆನೋ...
ಸಾಗಿದ ದಾರಿ ಮಾತ್ರ ಅದೇ ತೋಟ, ಗದ್ದೆ, ಗುಡ್ಡ, ಕಾಡು...
ಆಗಾಗ ಹೊಳೆದು ಕಣ್ಸೆಳೆಯುತ್ತಿತ್ತು ಅವಳ ಮೂಗುತಿಯ ನತ್ತು
ತೋರಿದ್ದಳಜ್ಜಿ ಪುಟಾಣಿ ಗಿಡದ ತುಂಬೆಲ್ಲಾ ತುಂಬಿದ್ದ
ಅಚ್ಚಬಿಳಿ ಹೂವುಗಳ, ಎಲೆಮರೆಯ ಕಾಯಿಗಳ
ಬುಡದಲ್ಲುದುರಿ ಒಣಗಿದ್ದ ತರಗೆಲೆಗಳ
ಅಂಟಂಟು ಅಂಟಿದಷ್ಟೂ ಕೂಸೆ, ಅಂಟದಿರು
ಯಾರಿಗೂ ಯಾವುದಕ್ಕೂ...
ಅಂಟಿಬಿಟ್ಟೆಯೋ ಕೆಟ್ಟೆ! ಕೆಟ್ಟರೂ ಸರಿಯೇ,
ಕೊಡವಿ ಮುನ್ನಡೆವುದನ್ನು ಸರಿಯಾಗಿ ಕಲಿಯೇ...
ನೋಡಲ್ಲಿ ಹೂವ ತೊಟ್ಟನು,
ಇನ್ನೇನು ಕಳಚಲು ಸನ್ನದ್ಧವಾಗಿದೆ...
ಅದಕಿಲ್ಲ ಯಾವ ಶೋಕ, ಗಿಡಕೂ ಇಲ್ಲ ಹನಿ ಪಶ್ಚಾತ್ತಾಪ
ಚಕ್ರ ತಿರುಗಲು ಉರುಳಲೇ ಬೇಕದು ಅನವರತ...
ಕೇಳಿಲ್ಲಿ ತಂಗಿ, ನಿನಗೆ ದಕ್ಕಿದ್ದಷ್ಟೇ ಪ್ರಾಪ್ತಿ
ಮಿಕ್ಕಿದ್ದು ಕೃಷ್ಣಾರ್ಪಣಮಸ್ತು!
ನಮ್ಗೆ ನಾವು ಗೋಡೆಗೆ ಮಣ್ಣು
ಉಳ್ದಿದ್ದೆಲ್ಲಾ ಶಿವನ ಮೂರನೆಯ ಕಣ್ಣು
ಹತ್ತಿರವಿದ್ದೂ ದೂರನಿಲ್ಲುವ ಪಾಠವ ಕಲಿಸಿ,
ಅಂಗೈ ಬಿಡಿಸಿ, ಕಿರು ಬೆರಳ ತುದಿಯನ್ನಷ್ಟೇ
ಸೋಕಿಸಿ ಸಾಗುವ ಪರಿ ತೋರಿ,
ನಿಂತ ನೀರಾಗಿದ್ದ ನೋಟವ ತಿರುಗಿಸಿ,
ಮಡಿಲೇರಿದವಳಿಗೆ ಅಮಲೇರಿಸಿದ್ದಳಾ ಅಜ್ಜಮ್ಮ
ಕಣ್ಬಿಟ್ಟಾಗ ಮುಂಜಾವೋ, ಮುಸ್ಸಂಜೆಯೋ!
ದಿಂಬಿನ ಹಸಿ ಒದ್ದೆಯಲ್ಲಿ
ಅವಳುಟ್ಟಿದ್ದ ಪತ್ತಲದ ಘಮಲು ಮಾತ್ರ
ಹಾಗೇ ಅಂಟಿಕೊಂಡಿತ್ತು.
~ತೇಜಸ್ವಿನಿ

ಸಾವಿನ ದಶಾವತಾರ

ಕೆ.ಸತ್ಯನಾರಾಯಣ ಅವರ ಬರಹಗಳನ್ನು ನಾನು ಓದಲು ಶುರುಮಾಡಿದ್ದು ತೀರಾ ಮೂರು ವರುಷಗಳ ಹಿಂದೆಯಷ್ಟೇ. ಅವರ ಕಥಾಸಂಕಲನವೊಂದನ್ನು ಓದಿ ಬಹಳ ಪ್ರಭಾವಿತಳಾಗಿರುವಾಗಲೇ ಅಚಾನಕ್ಕಾಗಿ ಕಾಲಜಿಂಕೆಎನ್ನುವ ಅಪರೂಪದ ಕಾದಂಬರಿ ಕಣ್ಣಿಗೆ ಬೀಳಲು, ಅದನ್ನು ಮೊದಲು ಓದಲು ಆಯ್ದಿಕೊಂಡಿದ್ದು ಅದರ ಶೀರ್ಷಿಕೆಯೊಳಡಗಿದ್ದ ಆಕರ್ಷಣೆಯೇ ಕಾರಣವಾಗಿತ್ತು. ಬಹಳ ಅಪರೂಪದ ಕಾದಂಬರಿಯದು! ಅದನ್ನೋದಿ ಪ್ರಭಾವಿತಳಾಗಿ, ಅವರ ಇನ್ನೂ ಕೆಲವು ಹೊತ್ತಗೆಗಳನ್ನು ಓದಲು ಶುರುವಿಟ್ಟುಕೊಂಡೆ. ವಿಕಲ್ಪ’, ‘ವೃತ್ತಿ ವಿಲಾಸಇವೆಲ್ಲಾ ಅವರದ್ದೇ ವಿಶಿಷ್ಟ ಶೈಲಿಯಲ್ಲಿ ನಿರೂಪಣೆಗೊಂದ ಹೊತ್ತಗೆಗಳೇ. ಆದರೆ ಅವರ ಇತ್ತೀಚಿನ ಸಾವಿನ ದಶಾವತಾರಬಹಳ ಕಾಡಿ, ಬಿಡದೇ ಓದಿಸಿಕೊಂಡಿತು.
ಇದು ಒಂದೇ ಗುಕ್ಕಿನಲ್ಲಿ ಖಂಡಿತ ಓದಿಸಿಕೊಳ್ಳುವುದಿಲ್ಲ! ಬಹಳ ತಿಣುಕಾಡಿಸುತ್ತದೆ... ಕಾಡಿಸುತ್ತದೆ... ನೋಯಿಸುತ್ತದೆ... ನಮ್ಮೊಳಗೆ ಹೊಕ್ಕಿರುವ ನಮ್ಮ ಸಾವಿನ ಭಯವನ್ನೆಬ್ಬಿಸಿ ಹುಯಿಲೆಬ್ಬಿಸುತ್ತದೆ... ಪ್ರಶ್ನಿಸುತ್ತದೆ... ಕೆಲವೊಂದಕ್ಕೆ ಉತ್ತರಿಸುತ್ತದೆ ಕೂಡ... ಹಾಗೇ ಎಷ್ಟೋ ಪ್ರಶ್ನೆಗಳನ್ನು ಹಾಗೇ ಉಳಿಸಿಯೂ ಬಿಡುತ್ತದೆ! 


ನನಗೆ ಸದಾ ಅನ್ನಿಸುತ್ತಿರುತ್ತದೆ. ನಮಗೆ ನಮ್ಮ ಸಾವಿನ ಭಯಕ್ಕಿಂತ ನಮ್ಮವರ ಅಗಲಿಕೆಯ ಆತಂಕವೇ ಹೆಚ್ಚು ಕಾಡುತ್ತಿರುತ್ತದೆ, ಜೊತೆಗೇ ನಮ್ಮ ಸಾವಿನಾನಂತರ ನಮ್ಮವರು ಅನುಭವಿಸುವ ನೋವು ದುಃಖದ ಕಲ್ಪನೆಯೇ ನಮ್ಮೊಳಗೆ ಹೆಚ್ಚು ಸಂಕಟವನ್ನುಂಟುಮಾಡುತ್ತದೆ ಎಂದು. ಅಲ್ಲಾ ಮಾರಾಯ್ತಿ, ನೀನು ಸತ್ತ ಮೇಲೆ ಏನಾದರೇನು? ಕಾಲ ಹೀಗೇ ನಿಲ್ಲೊಲ್ಲ.. ಕ್ರಮೇಣ ಎಲ್ಲಾ/ಎಲ್ಲರೂ ಸಮಾ ಆಗುವುದು/ಆಗುವರುಎಂದಿರಾದರೆ ನನಗೆ ತಕ್ಷಣಕ್ಕೆ ಈ ಮಾತೊಳಗೆ ಪರಮ ಸ್ವಾರ್ಥವೇ ಕಂಡೀತು! ನಾನು ಸತ್ತಮೇಲೆ ಈ ಜಗತ್ತಿನಲ್ಲಿ ಏನೇ ದುರಂತಗಳು, ಆಗು ಹೋಗುಗಳಾದರೂ ಆಗಿ ಹೋಗಲಿ.. ನೋಡಲು, ಪರಿತಪಿಸಲು ನಾನಂತೂ ಇರುವುದಿಲ್ಲವಲ್ಲ ಎನ್ನುವ ಭಾವವೇ ಮತ್ತಷ್ಟು ಹಿಂಸೆ ನೀಡುವಂಥದ್ದು ಎನ್ನಿಸುವುದು. ಆದರೆ ಇಂದಿನ ಯುಗದಲ್ಲಿ ಮತ್ತೊಬ್ಬರ ಸಾವೂ ಒಂದು ಸಾಧಾರಣದ ಉದಾಸೀನ, ಅತಿ ಸಾಮಾನ್ಯ, ಅನಿವಾರ್ಯ ಕರ್ಮ ಅಷ್ಟೇ ಎಂಬ ತಣ್ಣನೆ ಕ್ರೌರ್ಯ ಬೆರೆತ ಫಿಲಾಸಫಿಯಿಂದ ನೋಡುವುದೇ ಸಾಮಾನ್ಯವಾಗಿಬಿಟ್ಟೀದೆ. ಸ್ವಂತ ಸಾವಿನ ಕುರಿತು ನಮ್ಮ ನಂತರ ಉಳಿದವರಿಗೇನು ತೊಂದರೆಯಾವುದೋ ಎಂಬ ಮಿಡುಕಿಗಿಂತಲೂ, ಅವರೆಲ್ಲಾ ಈ ಬದುಕಿನಲ್ಲೂ ಇನ್ನೂ ಹೆಚ್ಚು ಕಾಲ ಬದುಕನ್ನು ಅನುಭವಿಸುತ್ತಾ, ಸಂಭ್ರಮಿಸುತ್ತಾ ಇರುತ್ತಾರಲ್ಲ ಎಂಬ ಅಸೂಯೆಯೇ ಹೆಚ್ಚಿನ ಸಮಯದಲ್ಲಿ ತಲೆ ಕೊರೆಯುತ್ತಿರುತ್ತದೆಯೇನೋ ಎಂದೆನಿಸಿಬಿಟ್ಟಿತು. 

ಇಂಥೆಲ್ಲಾ ಹುಚ್ಚುಚ್ಚೋ ಇಲ್ಲಾ ಹುಚ್ಚೊಳಗಿನ ಸತ್ಯವೋ ನನ್ನೊಳಗೆ ಎದ್ದಿದ್ದು, ಎದ್ದು ನನ್ನ ಕೆರಳಿಸಿದ್ದು, ತಾಕಲಾಡಿದ್ದು ಸಾವಿನ ದಶಾವತಾರಕಾದಂಬರಿಯನ್ನೋದಿದಾಗ!
ಸಾವು ಸಂಭವಿಸಿದ ಮೇಲೆ ಮಾಡಬೇಕಾದ ಅಪರ ಕರ್ಮಗಳನ್ನು ನಡೆಸಿಕೊಡುವುದನ್ನೇ ತನ್ನ ವೃತ್ತಿಯನ್ನಾಗಿಸಿಕೊಂಡ ನಾಯಕ (event management ತರಹ ಸಾವಿನಾನಂತರದ ವಿಧಿಗಳನ್ನು ಆಯಾ ಸಾವಿನ ಹಿನ್ನಲೆಗನುಗುಣವಾಗಿ ನೆರವೇರಿಸುವಂಥ ವೃತ್ತಿ!), ತನ್ನ ಬದುಕಿನ ಸಣ್ಣ ಸಣ್ಣ ಕಥೆಗಳನ್ನು ನಿರೂಪಿಸುವುದರ ಮೂಲಕ ಸಾವು ಹೇಗೆಲ್ಲಾ ತನ್ನ ಮುಖವನ್ನು, ವಿರಾಟ್ ಸ್ವರೂಪವನ್ನು, ಕರಾಳತೆಯನ್ನು, ವಿಕೃತೆಯನ್ನು ತೆರೆಯಬಹುದು, ಕ್ರೌರ್ಯದ ಪರಾಕಷ್ಠೆ ಹೇಗೆಲ್ಲಾ ಇದ್ದಿರುತ್ತದೆ ಎಂಬುದನ್ನು ತಣ್ಣಗೆ, ಮೆಲು ಧ್ವನಿಯಲ್ಲಿ ನಿರೂಪಿಸುತ್ತಾ ಹೋಗುತ್ತಾನೆ. ಕ್ರಿಯಾಕರ್ಮಗಳಿಗೆ ಜನರನ್ನು ಹೊಂದಿಸುವುದು.. ವಿಧಿ ನಡೆವ ದಿನಗಳಲ್ಲೇ, ಸ್ಥಳದಲ್ಲೇ ಎದ್ದೇಳುವ ಆಸ್ತಿ ವಿವಾದ, ಕುಟುಂಬ ಕಲಹ, ದೋಷಾರೋಪಗಳಿಗೆಲ್ಲಾ ಕಾನೂನು ಸಲಹೆ, ಸಂಪರ್ಕ, ಇನ್ನಿತರ ವ್ಯವಸ್ಥೆಗಳನ್ನೊದಗಿಸಿವುದು... ಆ ಸಮಯದುದ್ದಕ್ಕೂ ಮನೆಯವರೊಂದಿಗೆ ಒಂದು ನಶ್ವರ ಬಂಧವನ್ನೇರ್ಪಡಿಸಿಕೊಂಡು, ತದನಂತರ ಅದಕ್ಕೊಂದು ಶಾಶ್ವತ ಕೊನೆ ಕಲ್ಪಿಸಿಬಿಡುವುದು... ಮತ್ತೆ ಮತ್ತೊಂದು ಸಾವಿಗೆ ಕಾಯುತ್ತಿರುವುದು. ಇಂತಹ ವಿಶಿಷ್ಟ ವೃತ್ತಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದವನ್ನು ಸಂದರ್ಶಿಸಲು ಬರುವ ಚಿತ್ರಣದೊಂದಿಗೆ ಕಾದಂಬರಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. 
ಆ ಸಂದರ್ಶನಕ್ಕೆ ಉತ್ತರಿಸುವ ನೆಪದಲ್ಲಿ ಆತ ತನಗೆ ತಾನೇ ಉತ್ತರಿಸುತ್ತಾ, ನಮ್ಮೊಳಗೂ  ಪ್ರಶ್ನೆ ಎಬ್ಬಿಸಿ  ಸ್ವಯಂ ಉತ್ತರಿಸಿಕೊಳ್ಳಲು ಪ್ರೇರೇಪಿಸುತ್ತಾ, ಅಲ್ಲಲ್ಲಿ ಹೊಸ ಪ್ರಶ್ನೆಗಳನ್ನೂ ಹುಟ್ಟಿಸಿಬಿಡುತ್ತಾನೆ.
ಉದಾಹರಣಗೆ ನನ್ನಲ್ಲಿ ಹುಟ್ಟಿದ ಪ್ರಶ್ನೆಗಳಿವು :-
*ನಾವು ಮಾಡುತ್ತಿರುವ ವೃತ್ತಿ ಅಥವಾ ಅಳವಡಿಸಿಕೊಂಡಿರುವ ಪ್ರವೃತ್ತಿ ನಮ್ಮ ಆಯ್ಕೆಯೇ? ನಿಜವಾಗಿಯೂ ಬಾಲ್ಯದಲ್ಲಿ ಅದರ ಕನಸು ಕಂಡಿದ್ದೆವೆಯೇ? ಅದು ನನಸಾಗಿದೆಯೇ?
*ನನ್ನ ವೃತ್ತಿಯ ಕುರಿತು ನಮಗೆ ಗೌರವವಿದೆಯೇ? ಅದನ್ನು ಮತ್ತೊಬ್ಬರಿಗೆ ಹಸ್ತಾಂತರಿಸಲು ಅಥವಾ ಇತರರು ಅನುಸರಿಸಲೆಂಬ ಆಶಯವಿದೆಯೇ?
*ಎದುರಾಗುವ ಸವಾಲುಗಳನ್ನೆಷ್ಟು ಸಮರ್ಥವಾಗಿ ಎದುರಿಸಿದ್ದೇವೆ?
*ನಮ್ಮ ವೃತ್ತಿ ಸಮಾಜವೊಡ್ಡುವ ಮಿತಿಗಳನ್ನು ಮೀರಲೆಷ್ಟು ಸಹಕಾರಿಯಾಗಿದೆ?
*ಮಾಡುತ್ತಿರುವ ಕೆಲಸವನ್ನು ನಿಲ್ಲಿಸಬೇಕೆಂದು ಅನಿಸಿದ್ದಿದೆಯೇ? ಹಾಗೆನಿಸಲು ಕಾರಣ? - ಹೀಗೆ ಹಲವಾರು ಪ್ರಶ್ನೆಗಳನ್ನು ಸ್ವಯಂ ಹಾಕುತ್ತಾ ಹೋಗಿದ್ದೇನೆ ನಾಯಕನ ಜೊತೆಗೇ!

ಈಗ ನಾವು ಬದುಕುತ್ತಿರುವುದು ಮುಗಿದುಹೋದ ಕಾದಂಬರಿಯ ಕೊನೆಯ ಪುಟಗಳ ನಂತರ ಸುಮ್ಮನೆ ಬಿಡುವ ಖಾಲಿ ಒಂದು ಪುಟವನ್ನು ಮಾತ್ರಎಂಬ ಸಾಲು ನಮ್ಮನ್ನು ತಣ್ಣಗಾಗಿಸಿಬಿಡುತ್ತದೆ.
ಆಯ್ಕೆ ನಾವು ಮಾಡಿದಾಗ ಇಲ್ಲ ನಮ್ಮನ್ನು ಮತ್ತೊಬ್ಬರು ಆಯ್ಕೆ ಮಾಡಿದಾಗಲೂ ಆಯ್ಕೆಯೇ ಇಲ್ಲದಿರಬಹುದುಎಂಬ ಮಾತು ತುಸು ಗೊಂದಲವನ್ನು ಹುಟ್ಟಿಸಿಬಿಡುತ್ತದೆ. ನಾವೇ ಆಯ್ಕೆ ಮಾಡಿಕೊಂಡ ಸಂಬಂಧಗಳ ಜೊತೆಗೆ ನಮ್ಮ ನಿತ್ಯ ಬದುಕಿನ ಅನಿವರ್ಯತೆ ಹುಟ್ಟಿಸುವ ಸಂಬಂಧಗಳು - ಇವುಗಳೂ ಕೂಡ ಯಾರ ಅರಿವಿಗೂ ಬಾರದಂತೇ ತಣ್ಣಗೆ ಕರಗಿ ಹೋಗುತ್ತಿರುವುದರ ಅನುಭವ ನಿಚ್ಚಳವಾಗಿ ಇಲ್ಲಿ ನಮಗೆ ದೊರಕುತ್ತದೆ.

ಪದಗಳ ಶ್ರೀಮಂತಿಕೆಗೆ, ಕುಕ್ಕಲಾತಿಗೆ ಬಿಂಬವೂ ಇಲ್ಲ, ಪ್ರತಿಬಿಂಬವೂ ಇಲ್ಲವೇನೋ. ಸುಮ್ಮನೇ ಹುಟ್ಟುತ್ತವೆ. ಸುಮ್ಮನೇ ಇರುತ್ತವೆ. ಅಷ್ಟೇ ಎಂಬ ಮಾತುಗಳನ್ನೋದಿದ ತಕ್ಷಣ ಅದೇಕೋ ಎಂತೋ ನನಗೆ  ಭೈರಪ್ಪನವರ ದಾಟುಕಾದಂಬರಿಯಲ್ಲಿ ಬರುವ ಪ್ರಳಯ ಜಲದಲ್ಲಿ ಬಿಂಬವೂ ಇಲ್ಲ, ಬಿಂಬಿಯೂ ಇಲ್ಲ ಎಂಬ ಸಾಲು ನೆನಪಿಗೆ ಬಂದು ಬಿಟ್ಟಿತು. ಇಂದಿನ ಅಂತರ್ಜಾಲ ಯುಗದಲ್ಲಿ, ವಾಟ್ಸ್‌ಆಪ್, ಫೇಸ್ಬುಕ್ ಜಮಾನದಲ್ಲಿ ನಾವು ಬಳಸುವ ಇಮೋಟಿಕಾನ್ಸ್‌ಗಳ ಕುರಿತು ರಪ್ಪನೆ ಮುಖಕ್ಕೆ ಹೊಡೆದು ಹೇಳುವಂತಿದೆಯೇನೋ ಈ ಸಾಲು ಎಂದು ನನಗೆ ಭಾಸವಾಯಿತು. ಎಗ್ಗಿಲ್ಲದೇ ಬಳಸುವ ಕೆಂಪು, ಗುಲಾಬಿ ಬಣ್ಣದ ಹಾರ್ಟ್, ಕಿಸ್ಸಿಂಗ್, ಲವ್ ಎಕ್ಸ್‌ಪ್ರೆಶೆನ್ಸ್ ಇಮೋಜಿಗಳು ಬರೀ ಪದಗಳನ್ನು ಶೃಂಗರಿಸಬಲ್ಲವೇ ಹೊರತು, ನಮ್ಮೊಳಗಿನ ನಿಜ ಭಾವವನ್ನು ತೋರ್ಪಡಿಸಲಾರವು. ಅಲ್ಲದೇ, ಪರದೆಯ ಮೇಲೆ ಎಗ್ಗಿಲ್ಲದೇ ಇಮೋಜಿ ಹೃದಯಗಳನ್ನು ಬಿಚ್ಚಿಡುವ ತೆರೆಮರೆಯ ಮನಸುಗಳು, ಪರಸ್ಪರ ಎದುರಾದಾಗ ತೋರುವ ನಿರ್ಲಿಪ್ತತೆ, ಸಣ್ಣ ನಿರ್ಲಕ್ಷ್ಯತನಕ್ಕೆ ಕನ್ನಡಿ ಹಿಡಿದಂತಿದೆ ಎಂದೆನಿಸಿಬಿಟ್ಟಿತು.

ಮತ್ತೆ ಮತ್ತೆ ಓದಿಸಿಕೊಂಡು ಮೆಲುಕು ಹಾಕಿದಂಥ ಸಾಲುಗಳು :-

೧) ಹಿಡಿದಿಟ್ಟ ದುಃಖ, ಹಿಂಡಿಬಿಡುವ ದುಃಖ ಎಂಬ ಮಾತೇ ಸುಳ್ಳು. ಯಾವುದೂ ಹಿಡಿದಿಡುವುದಿಲ. ಯಾವುದೂ ಹಿಂಡಿಬಿಡುವುದಿಲ್ಲ. ಕಾಲವು ದುಃಖವನ್ನು ಕೂಡ ಸೋಸಿಬಿಡುತ್ತದೆ. ಮುಂದಿನ ಕ್ಷಣ, ಮುಂದಿನ ಅನುಭವ ಇರುವುದೇ ಹಿಂದಿನ ಕ್ಷಣ, ಹಿಂದಿನ ಅನುಭವದ ಮೇಲೆ ದಬ್ಬಾಳಿಕೆ ನಡೆಸಲು.
೨) ಕಾಲವು ದುಃಖದ ಪ್ರಮಾಣವನ್ನು ಕಡಿಮೆ ಮಾಡಬಹುದು. ಶಾಪದ ಪ್ರಮಾಣವನ್ನಲ್ಲ (ಇಲ್ಲಿ ಶಾಪವೆಂದರೆ ದುಃಖದಲ್ಲಿ ನಾವು ಮತ್ತೊಬ್ಬರಿಕೆ ಹಾಕುವಂಥದ್ದಲ್ಲ. ನಮ್ಮ ದುಃಖಕ್ಕೆ ಕಾರಣವಾದ ಘಟನೆ ಜೀವನದುದ್ದಕ್ಕೂ ಕಟು ವಾಸ್ತವವಾಗಿ ನಮ್ಮೊಂದಿಗಿದ್ದುಬಿಡುವುದು)
೩) ಈ ಜಗತ್ತಿನಲ್ಲಿ ತಪ್ಪು ಅಂತ ಯಾರೂ ಮಾಡುವುದಿಲ್ಲ. ಅವರು ಸರಿ ಎಂದುಕೊಂಡು ಮಾಡಿದ್ದು ತಪ್ಪಾಗಿರುತ್ತದೆ ಅಷ್ಟೆ. (ಈ ಸಾಲು ಮಾತ್ರ ನನ್ನೊಳಗೆ ಹೊಸ ಆಲೋಚನ ಕ್ರಮವನ್ನೇ ಹುಟ್ಟು ಹಾಕಿಬಿಟ್ಟಿತು!)
೪) ನಾವು ಅಸತ್ಯದ, ಅನ್ಯಾಯದ ಪರವಾಗಿ ಸಕ್ರಿಯವಾಗಿ ಇರುವುದಿಲ್ಲ. ಸತ್ಯ, ನ್ಯಾಯದ ಬಗ್ಗೆ ಉದಾಸೀನವಾಗಿ ಗೊತ್ತಿದ್ದು ಗೊತ್ತಿದ್ದೂ ಇರುತ್ತೇವೆ. (ಎಷ್ಟು ಸತ್ಯ!)
೫) ಯಾರೊಬ್ಬರ ಸಾವು, ನಮ್ಮ ಸಾವೂ ಕೂಡ ಸೇರಿದಂತೆ ಅಸತ್ಯದ ಬಗ್ಗೆ ನಮಗಿರುವ ಆಂತರಿಕ ಒಲವನ್ನು, ಸತ್ಯದ ಬಗ್ಗೆ ಇರುವ ಉದಾಸೀನವನ್ನು ಕೊಂಚವೂ ವಿಚಲಿತಗೊಳಿಸಲಾರದಲ್ಲ! (ಕಟು ಸತ್ಯ!)
೬) ನಮ್ಮ ನಮ್ಮ ಸ್ವಭಾವವೆಂದರೆ ಶನಿ ಮಹಾತ್ಮ ಇದ್ದ ಹಾಗೇ. ನಾವೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಇನ್ನೊಬ್ಬರೂ ಬದಲಾಯಿಸಲಾಗುವುದಿಲ್ಲ.
೭) ವಿಚಾರಕ್ಕೆ ತಕ್ಕಂತೆ ಬದುಕಬೇಕೋ, ಇಲ್ಲ ಸ್ವಭಾವಕ್ಕೆ, ಪ್ರಾಮಾಣಿಕವಾಗಿರಬೇಕೋ ಎಂಬುದೇ ತಿಳಿಯದಾಗಿದೆ. ಎರಡೂ ತರದವರನ್ನು ಹತ್ತಿರದಿಂದ ಕಂಡು, ಅನುಭವಿಸಿ, ಆತ್ಮೀಯರನ್ನಾಗಿ ಕೂಡ ಮಾಡಿಕೊಂಡು, ಅವರು ಬದಲಾದಂತೆ ನಾನೂ ಗೋಸುಂಬೆ ಆಗುತ್ತಾ ಜೀವನದ ಅಷ್ಟೊಂದು ಭಾಗವನ್ನು ಮುಗಿಸಿಯೇಬಿಟ್ಟಿದ್ದೇನೆ.

ಆದರೆ,
ಸಂಬಂವನ್ನು ಬಯಸಿದವರ ಜೊತೆ ಮಾತ್ರ ಸಂಬಂಧ ಇಟ್ಟುಕೊಳ್ಳಬೇಕೆ? ಯಾವ ಸಂಬಂಧವನ್ನು ಇನ್ನೊಬ್ಬರು ನಮ್ಮ ಬಗ್ಗೆ obligeಆಗಿರಲಿ ಎನ್ನುವ ಕಾರಣಕ್ಕೆ ಇಟ್ಟುಕೊಳ್ಳಬಾರದು” - ಎಂಬ ಮಾತು ಮಾತ್ರ ಯಾಕೋ ಪೂರ್ತಿ ಒಪ್ಪಿತವಾಗಲಿಲ್ಲ. ಪ್ರತಿ ಜೀವಿಯೂ ಸಂಬಂಧ ಏರ್ಪಡಿಸಿಕೊಳ್ಳಲು ಬಯಸುವುದು, ಅದು ಉಳಿವುದು ಎದುರಿನ ವ್ಯಕ್ತಿಯ ಪ್ರತಿಕ್ರಿಯೆಯ ಮೇಲೆಯೇ ಅಲ್ಲವೇ? ಆತ ಒಪ್ಪಲಿ ಬಿಡಲಿ, ಪ್ರೀತಿಸಲಿ ತಿರಸ್ಕರಿಸಲಿ ನಾನು ಮಾತ್ರ ಸಂಬಂಧ ಉಳಿಸಿಕೊಂಡು ಹೋಗುವೆ ಎನ್ನುವ ಸಂಕಲ್ಪ ಎಷ್ಟು ದಿವಸ ಗಟ್ಟಿಯಾಗಿರಬಹುದು ಎಂದೆನಿಸಿತು. 
ಅಲ್ಲದೇ,
Bits of paperಗಳಂಥ ಚಿಕ್ಕ ಕಥೆಗಳು/ಘಟನಾವಳಿಗಳು ಕೆಲವೆಡೆ ಓವರ್ ಲ್ಯಾಪ್ ಆಗಿ ಮತ್ತೊಮ್ಮೆ ಓದಿ ನೆನಪಿಸಿಕೊಳ್ಳುವಂತೆ ಆಗುತ್ತವೆ.

ಬಹು ಮುಖ್ಯವಾದ ವಿಷಯ!

ಈ ಕಾದಂಬರಿ ದೇಹ ದಾನದೊಳಗೆ ಅಡಗಿರುವ ಕರಾಳತೆಯನ್ನು, ಪರಮ ನಿರ್ಲಕ್ಷ್ಯತನವನ್ನು, ವಿಕಾರತೆಯನ್ನು, ಹೇವರಿಕೆ ಹುಟ್ಟಿಸುವಂಥ ಸತ್ಯವನ್ನು ಹಸಿ ಹಸಿಯಾಗಿ ತೆರೆದಿಟ್ಟು, ‘ಅಂತಹ ಕ್ರಮಕ್ಕೆ ನಾನೆಂದೂ ನನ್ನ ಆಪ್ತರನ್ನು ಒಡ್ಡಲಾರೆ, ಸ್ವತಃ ಒಳಗೊಳ್ಳಲಾರೆಎಂಬ ನನ್ನ ನಿರ್ಧಾರವನ್ನು ಮತ್ತಷ್ಟು ಬಲವಾಗಿಸಿಕೊಳ್ಳಲು ನೆರವಾಯಿತು!

ಗಹನ ಚಿಂತನೆಗೆ ಒರೆ ಹಚ್ಚುವ ೧೭೨ ಪುಟಗಳ ಈ ಹೊತ್ತಗೆ ಮತ್ತೆ ಮತ್ತೆ ಓದಿಗೆ ಪ್ರೇರೇಪಿಸುವಂಥದ್ದು. ಒಮ್ಮೆ ಓದಿ, ಸುಲಭವಾಗಿ ಮರೆತುಬಿಡುವಂಥದ್ದಲ್ಲ, ಮರೆಯಲು ಬಿಡುವುದೂ ಇಲ್ಲ!


~ತೇಜಸ್ವಿನಿ ಹೆಗಡೆ.