ಶುಕ್ರವಾರ, ಫೆಬ್ರವರಿ 27, 2009

ಒಳಗೊಂದು ಕಿರುನೋಟ....ಭಾಗ-೧

ಮಲೆಯ ಮದುಮಗಳ ತುಂಬೆಲ್ಲಾ ಮಲೆಯದೇ ಸ್ನಿಗ್ಧ ಸೌಂದರ್ಯ!
-------------------------------------------
ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕೃತಿ ಮೊದಲು ಬಿಡುಗಡೆಗೊಂಡಿದ್ದು ೧೯೬೭ರಲ್ಲಿ. ಇಂತಹ ಒಂದು ಬೃಹತ್ ಕಾದಂಬರಿಯನ್ನು ಇಷ್ಟು ನಾಜೂಕಾಗಿ, ಸುಂದರವಾಗಿ, ಸಾರ್ವಕಾಲಿಕ ಶೇಷ್ಠವಾಗಿ, ಕಾಲಾತೀತವಾದ ಕೃತಿಯನ್ನು ರಚಿಸಲು ಅವರಿಗೆ ಎಷ್ಟು ಸಮಯ ಬೇಕಾಯಿತೋ ಕಾಣೆ. ಈವರೆಗೆ ಒಟ್ಟೂ ಹನ್ನೆರಡು ಮುದ್ರಣವನ್ನು ಕಂಡಿರುವುದೇ ಇದರ ಪ್ರಖ್ಯಾತಿಗೆ, ಮೆಚ್ಚುಗೆಗೆ ಹಾಗೂ ಕಾದಂಬರಿಯೊಳಗಿನ ಸೊಬಗು, ಮಾರ್ದವತೆ, ನೈಜತೆಯ ಮೋಡಿಗೆ ಸಾಕ್ಷಿ. ಆಗಿನ ಕಟು ವಾಸ್ತವಿಕತೆಗಳು, ಪಶುತ್ವ ವರ್ತನೆಗಳು, ಗ್ರಾಮ್ಯ ಭಾಷೆಗಳ ಒರಟುತನ, ಆಹಾರ ವಿಹಾರಗಳಲ್ಲಿನ ರೂಕ್ಷತೆಗಳನ್ನು ಮೊದಮೊದಲು ಅರಗಿಸಿಕೊಳ್ಳಲು ತುಸು ಕಠಿಣ ಎಂದೆನಿಸಿದರೂ, ಕ್ರಮೇಣ ಅದರೊಳಗಿನ ಪಾರದರ್ಶಕತೆ ನಮ್ಮನ್ನು, ನಮ್ಮರಿವನ್ನೂ ಮರೆವಂತೆ ಮಾಡುವುದು ಸುಳ್ಳಲ್ಲ. ಈ ಕಾದಂಬರಿಯನ್ನು ನಾನು ಸುಮಾರು ೭-೮ ವರ್ಷಗಳ ಹಿಂದೆ ಓದಿದ್ದೆ. ಈಗ ಇತ್ತೀಚಿಗೆ ಮತ್ತೊಮ್ಮೆ ಈ ಕಾದಂಬರಿಯನ್ನೋದಿದೆ. ಓದುತ್ತಿದ್ದಂತೆ ನನಗನಿಸಿತು ಇದರ ಕುರಿತು ನನ್ನ ಅಭಿಪ್ರಾಯ, ಅನಿಸಿಕೆಗಳನ್ನು ಸಹಮಾನಸಿಗರಾದ ನಿಮ್ಮೆ ಮುಂದೆಯೂ ತೆರೆದಿಡಬೇಕೆಂದು. ಅದಕ್ಕಾಗಿಯೇ ಈ ಪುಟ್ಟ ಪ್ರಯತ್ನ.
ಆರಂಭದಲ್ಲಿ ಕುವೆಂಪು ಅವರೇ ಹೇಳಿದಂತೆ-"ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!"

ಕಾದಂಬರಿಯೊಳಗೆ ಕಥೆ ಪ್ರಾರಂಭವಾಗುವುದು ಸಿಂಬಾವಿಯ ಭರಮೈಹೆಗ್ಗಡೆಯವರ ಚೌಕಿಮನೆಯಿಂದಾದರೆ, ಕೊನೆಗೊಳ್ಳದೇ ನಿರಂತರತೆಯನ್ನು ಸಾರುತ್ತಾ ಓದುಗನ ಕಲ್ಪನೆಯಲ್ಲಿ ನಿಲ್ಲುವುದು ಹೂವಳ್ಳಿ ಚಿನ್ನಮ್ಮ ಹಾಗೂ ಮುಕುಂದಯ್ಯನವರು ಒಂದಾಗುವ ಸಂಕೇತದೊಂದಿಗೆ. ಈ ನಡುವೆ ಬರುವ ಅನೇಕ ಕಥೆಗಳು ಉಪಕಥೆಗಳು, ಹಲವಾರು ಜಾತಿ, ಮತ, ಪಂಥಗಳು, ಪಂಗಡಗಳು, ಪಾತ್ರಗಳು, ಪ್ರಸಂಗಗಳು ಎಲ್ಲವೂ ಸಾವಧಾನವಾಗಿ ಮೆಲ್ಲಮೆಲ್ಲನೆ ಮನದೊಳಗಿಳಿದು..ಆಳವ ಹುಡುಕಿ ತಮ್ಮ ತಮ್ಮ ಜಾಗವನ್ನು ಹಿಡಿದು ಬೇರನ್ನೂರಿ ಚಿರಸ್ಥಾಯಿಯನ್ನು ಪಡೆಯುತ್ತವೆ.


ಸಿಂಬಾವಿ ಭರಮೈಹೆಗಡೆ, ಹಳೆಮನೆ ಸುಬ್ಬಣ್ಣ ಹೆಗ್ಗಡೆ, ಹೂವಳ್ಳಿ ವೆಂಕಟನ್ಣ, ಬೆಟ್ಟಳ್ಳಿ ಕಲ್ಲೇಗೌಡ್ರು ಹಾಗೂ ಅವರ ಮಗ ದೇವಯ್ಯ, ಕೋಣೂರಿನ ರಂಗೇಗೌಡ್ರು ಹಾಗೂ ಅವರ ತಮ್ಮ ಮುಕುಂದಯ್ಯ, ಹೊಲೆಯನಾದ ಗುತ್ತಿ ಹಾಗೂ ಆತನ ಹುಲಿ ಗಾತ್ರದ ನಾಯಿ ಹುಲಿಯ, ತಿಮ್ಮಿ, ಚಿನ್ನಮ್ಮ, ಪಿಂಚಲು, ಐತ - ಇವರು ಮಲೆಯ ಮದುಮಗಳನ್ನು ಸಿಂಗರಿಸುವಲ್ಲಿ ಪ್ರಮುಖ ಪಾತ್ರಧಾರಿಗಳು.

ಸೇನಾನಾಯ್ಕ, ಅಂತಕ್ಕ ಸೆಟ್ತಿ ಆಕೆಯ ಮಗಳು ಕಾವೇರಿ, ಮತಾಂತರಿ ಫಾದರ್ ಜೀವರತ್ನಯ್ಯ, ಕಾಮುಕ ಚೀಂಕ್ರ, ಆತನ ದುರ್ಬಾಗ್ಯ ಹೆಂಡತಿ ದೇಯಿ, ರೋಗಿಷ್ಠ ಗಂಡನ ಶುಶ್ರೂಷೆಯಲ್ಲೇ ನೆಮ್ಮದಿ ಕಾಣುವ ಅಕ್ಕಣಿ, ಕೇಡಿ/ಪುಂಡಾಡಿ ಕರೀಂಸಾಬ, ಆತನ ಚೇಲ ಪುಡಿಸಾಬ, ಸಾಧ್ವಿಯರಾದ ಜಟ್ಟಮ್ಮ, ದೇವಮ್ಮ, ರಂಗಮ್ಮ, ಜಿಪುಣ ಮಂಜಭಟ್ಟ, ಅಂತರ್ಯಾಮಿಯಾದ ಹೊಳೆದಂಡೆಯ ಸಂನ್ಯಾಸಿ ಮುಂತಾದವರೆಲ್ಲಾ ಮದುಮಗಳ ಸಹಚಾರರು. ಅಂದರೆ ಉಪಕಥೆಗಳಿಗೆ ಕಾರಣಕರ್ತರು.

ಆದರೆ ಇಲ್ಲಿ ಉಪಕಥೆಯ ಮೂಲಕವೇ ಪ್ರಮುಖ ಕಥೆಯನ್ನೂ ಘಟನಾವಳಿಗಳನ್ನೂ ಹೇಳಿದ, ಹಾಗೆ ಹೇಳಲು ಹಣೆದ ನಿರೂಪಣಾಶೈಲಿಗೆ ಎರಡು ಮಾತಿಲ್ಲ. ನಿಜವಾಗಿಯೂ ಇಲ್ಲಿ ಯಾರೂ ಮುಖ್ಯರಲ್ಲ. ಅಮುಖ್ಯರೂ ಅಲ್ಲ!

ಕುವೆಂಪು ಅವರು ಇಲ್ಲಿ ಪ್ರಮುಖವಾಗಿ ಮೂವರು ಮದುಮಗಳನ್ನು ಪ್ರತಿಪಾದಿಸುತ್ತಾರೆ. ಒಬ್ಬಳು ಬೆಟ್ಟಳ್ಳಿ ಕಲ್ಲೇಗೌಡರ ಹೊಲೆಯಕೇರಿಯಲ್ಲಿರುವ ಹೊಲೆಯನಾದ ಗುತ್ತಿ. ಇನ್ನೊಬ್ಬಳು ಗೌಡತಿಯಾದ ಹೂವಳ್ಳಿ ಚಿನ್ನಮ್ಮ. ಇಬ್ಬರೂ ಕಾರಣಾಂತರಗಳಿಂದ ತಮಗಿಷ್ಟವಿಲ್ಲ ಮದುವೆಯಿಂದ ತಪ್ಪಿಸಿಕೊಳ್ಳಲು ತಮ್ಮ ಪ್ರಿಯಕರನೊಂದಿಗೆ (ತಿಮ್ಮಿಯ ಪ್ರಿಯಕರ ಸಿಂಬಾವಿ ಒಡೆಯರ ಹೊಲಗೇರಿ ವಾಸಿಯಾದ ಗುತ್ತಿಯಾದರೆ ಚಿನ್ನಮ್ಮಳ ಪ್ರಿಯತಮ ಕೋಣೂರಿನ ಮುಕುಂದಯ್ಯ ಗೌಡ್ರು) ಓಡಿಹೋಗಿ ಸದಾ ಮದುಮಗಳಾಗಿ ಕಂಗೊಳಿಸುತ್ತಿದ್ದ ದಟ್ಟ ಮಲೆಯಲ್ಲಡಗಿರುತ್ತಾರೆ. (ಸಂದರ್ಭ ಹಾಗೂ ಕಾಲ ಎರಡೂ ಭಿನ್ನವಾಗಿರುತ್ತದೆ. ಒಂದೇ ದಿನ/ಒಂದೇ ಸಮಯದಲ್ಲೇ ಇಬ್ಬರೂ ಓಡಿ ಹೋಗುವುದಿಲ್ಲ.)
ಆದರೆ ಹೊಲೆಯನಾದ ಗುತ್ತಿಯ ಪಲಾಯನದಲ್ಲೂ ಹೂವಿನಂತಹ ಚೆಲುವೆ ಚಿನ್ನಮ್ಮಳ ಪಲಾಯನದಲ್ಲೂ ಇರುವ ಸಾಮ್ಯತೆ/ವಿರುದ್ಧತೆಯನ್ನು ಕಣ್ಣಿಗೆ ಕಟ್ಟಿದಂತೇ ಚಿತ್ರಿಸುತ್ತಾರೆ ಕುವೆಂಪು. ಮೈನವಿರೇಳಿಸುವ ಪ್ರಸಂಗ, ಕಾನನ ಚಿತ್ರಣ, ಹೋರಾಟ, ಅಂತರ್ಯುದ್ಧದ ಜೊತೆ ಬಹಿರ್ಯುದ್ಧ, ಮನದೊಳಗಿನ ತಲ್ಲಣ, ಹೊಯ್ದಾಟ, ಹೆಣ್ಮನಸಿತ ನೋವು, ಯಾತನೆ, ಕೊರಗು, ಮುಗ್ಧತೆ ತುಂಬಿದ ಆಶಯ ಎಲ್ಲವೂ ನಮ್ಮನ್ನು ಓದುತ್ತಿದ್ದಂತೆ ಮಂತ್ರಮುಗ್ಧರನ್ನಗಿಸುತ್ತದೆ. ಎಲ್ಲೋ ಒಂದು ಕಡೆ ನಡೆಯುವ ಪ್ರತಿಘಟನೆಯೊಳಗೇ ನಾವೂ ನಮ್ಮನ್ನು ಒಂದಾಗಿಸಿಕೊಂಡು ಬಿಡುತ್ತೇವೆ. ಕೆಲವೊಂದು ಘಟನೆಗಳಲ್ಲಿ ಸಿನಿಮೀಯತೆಯೂ ಮೇಳೈಸಿರುವುದರಿಂದ ಈ ಕಾಲಕ್ಕೂ ಅವು ಪ್ರಸ್ತುತವೆನಿಸುತ್ತವೆ. ರೋಮಾಂಚಕತೆ, ಕುತೂಹಲ, ಮೈ ನವಿರೇಳಿಸುವ ಕಥಾಕಾನನ ಸರಾಗವಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಪ್ರಧಾನವಾಗಿ ಮೂರು ಅಂಶಗಳನ್ನು ಕಾಣುತ್ತೇವೆ.

ಮೊದಲಿಗೆ ಆ ಕಾಲದ ಜನಜೀವನ ಹಾಗೂ ಸಾಮಾಜಿಕ ಚಿತ್ರಣ

ಈ ಕಾದಂಬರಿಯುದ್ದಕ್ಕೂ ಕಾಣಸಿಗುವುದು ಆ ಕಾಲದ ಸಾಮಾಜಿಕ ಚಿತ್ರಣ. ಅಂದರೆ ವಿವೇಕಾನಂದರು ಭವ್ಯ ಭಾರತವನ್ನುದ್ದೇಶಿಸಿ ಅಮೇರಿಕಾದಲ್ಲಿ ಸಂದೇಶವನ್ನಿತ್ತು ನಮ್ಮ ಸಂಸ್ಕೃತಿಯನ್ನು ಸಾರಿದ, ಸಾರುತ್ತಿದ್ದ ಸಮಯ. ಆ ಕಾಲದಲ್ಲಿ ಪುಟ್ಟ ಹಳ್ಳಿಯಾದ ದಟ್ಟ ಕಾಡು, ಮಲೆಗಳಿಂದಲೇ ಕೂಡಿದ್ದ, ತೀರ್ಥಳ್ಳಿ, ಮೇಗರವಳ್ಳಿ, ಕೋಣೂರು, ಬೆಟ್ಟಳ್ಳಿ, ಹೂವಳ್ಳಿ, ಸಿಂಬಾವಿ ಹಳ್ಳಿಗಳೊಳಗಿನ ಅರಾಜಕತೆ, ದಾರಿದ್ರ್ಯತೆ, ಅಸಂಸ್ಕೃತಿಯಲ್ಲೂ ಒಂದು ವಿಶಿಷ್ಟವಾದ ಸಂಸ್ಕೃತಿಯನ್ನೆಳೆದುಕೊಂಡು, ಜಾತಿ, ಮತ, ಮೂಢನಂಬಿಕೆ, ಕಂದಾಚಾರಗಳನ್ನೇ ಹೊದ್ದು ಹಾಸಿಕೊಂಡು, ಪಶುವಿಗೂ ಹೊಲೆಯನಿಗೂ ಏನೊಂದೂ ವ್ಯತ್ಯಾಸವನ್ನೇ ಕಾಣದ, ಸಾಮಾಜಿಕ ಜನ ಜೀವನ.

ವಿಶೇಷವೆಂದರೆ ಇಲ್ಲಿ ಹೊಲೆಯನೇ ತಾನು ಪರಿತ್ಯಕ್ತ ಎಂದು ಸಾರಿಕೊಂಡು ಹಾಗೇ ಜೀವಿಸುತ್ತಾ. ತನ್ನನ್ನೂ ಪಶುವಿಗೇ ಹೋಲಿಸಿಕೊಂಡು, ಪಶೂತ್ವವನ್ನೇ ಸುಖಿಸುತ್ತಾ, ತುಸು ಗೌರವ ಸಿಕ್ಕರೂ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿ ಆ ಜೀವನದಲ್ಲೇ ಸಾರ್ಥಕತೆಪಡೆಯುವ ಒಂದು ಮನೋಭಾವ ಬಲು ಬೆರಗು ಮೂಡಿಸುತ್ತದೆ. ಹಾಗೆಯೇ ಮನಭಾರಗೊಳಿಸುವುದೂ ದಿಟ.
ಜೊತೆಗೇ ಮೂಕಪ್ರಾಣಿಗಳ ಪ್ರತಿ ಅವರಿಗಿದ್ದ ಪ್ರೀತಿ, ವಿಶ್ವಾಸ, ಭಾವಾನಾ ಸಂಬಂಧವನ್ನರಿಯಲು ಗುತ್ತಿ ಹಾಗೂ ಆತನ ನಾಯಿ ಹುಲಿಯನ ಪ್ರಸಂಗಗಳನ್ನೂ, ಕೊನೆಯಲ್ಲಿ ಕೊನೆಯಾಗುವ ಅವರ ಋಣಾನುಬಂಧವನ್ನೂ ಓದಲೇಬೇಕು. ಎಂತಹವರಿಗಾದರೂ ಒಮ್ಮೆ ಪಿಚ್ಚೆನಿಸುವಂತೆ ಆಗುವುದು.

ಎರಡನೆಯ ಅಂಶವೆಂದರೆ ಮತಾಂತರದ ಅವಾಂತರ

ಕಾದಂಬರಿಯಲ್ಲಿ ಈ ಪಿಡುಗು ಯಾವ ರೀತಿ ಆ ಕಾಲದಲ್ಲೇ ಬೇರುಬಿಡತೊಡಗಿತ್ತೆಂದು ನಿಚ್ಚಳವಾಗಿ ತಿಳಿಯತೊಡಗುತ್ತದೆ. ಊರಿಗೆ ಫಾದರ್ ಆಗಿ ಬಂದ ಪಾದರಿ ಜೀವರತ್ನಯ್ಯ, ಹೇಗೆ ಅಮಾಯಕರ, ಮುಗ್ಧರ ಮನಸನ್ನು ಅಮಿಶಗಳೊಂದಿಗೆ ಸೆಳೆದುಕೊಂಡು, ಅವರ ದಾರಿದ್ರ್ಯತೆಯನ್ನೇ ಬಂಡವಾಳವನ್ನಾಗಿಸಿ ಮತಾಂತರಕ್ಕೆ ಹುನ್ನಾರು ನಡೆಸುತ್ತಿದ್ದ ಎನ್ನುವುದನ್ನು ಕಣ್ಣಿಗೆ ಕಟ್ಟುವಂತೇ ಚಿತ್ರಿಸಿದ್ದಾರೆ ಕುವೆಂಪು. ಆದರೆ ಇದರಲ್ಲಿ ಬ್ರಾಹ್ಮಣರ ಹಾಗೂ ತುಸು ಮೇಲ್ ಪಂಗಡದವರಾದ ಗೌಡರ ಕೊಡುಗೆಯೂ ಅಪಾರವಾಗಿತ್ತೆಂದು ಹೇಳಲು ಮರೆಯರು. ಹಾಗಾಗಿ ಕುವೆಂಪು ಅವರೇ ಹೇಳುವಂತೆ ಇಲ್ಲಿ ಯಾವುದೂ ಯಕಃಶ್ಚಿತವಲ್ಲ!
ಮೂರನೆಯ ಹಾಗೂ ಪ್ರಮುಖ ಅಂಶವೆಂದರೆ ಪ್ರಾಕೃತಿಕ ವರ್ಣನೆ.

ಮಳೆಕಾಡಿನ ಚಿತ್ರಣ ರುದ್ರಭಯಂಕರವೆನಿಸುತ್ತದೆ. ಹುಲಿಕಲ್ ಗುಡ್ಡದ ಚಿತ್ರಣ ಇಲ್ಲೇ ಎಲ್ಲೋ ಪಕ್ಕದಲ್ಲೇ ಗುಡ್ಡವಿರುವಂತೆ, ಎಲ್ಲೋ ದೂರದಿಂದ ಹುಲಿ ಗರ್ಜನೆ ಕೇಳಿದಂತೆ ಓದುಗನಿಗೂ ಭಾಸವಾಗುವಷ್ಟು ವಾಸ್ತವವಾಗಿದೆ.
ಕಾದಂಬರಿಯಲ್ಲಿ ಒಂದು ಕಡೆ ಕುವೆಂಪು ಅವರು ಪ್ರಕೃತಿಯಲ್ಲುಂಟಾಗುವ ಬದಲಾವಾಣೆ ಹೇಗೆ ಅಸಂಸ್ಕೃತ, ಅನಕ್ಷರಸ್ಥ, ಭಾವನೆಗಳೇ ಬತ್ತಿ ಹೋದ ಮನುಷ್ಯನೊಳಗೂ ಎಲ್ಲೋ ಸುಪ್ತವಾಗಿ ಅಡಗಿರುವ ವಿಸ್ಮೃತಿಯೊಳಗನ ಸ್ಮೃತಿಯನ್ನು ಬಡಿದಬ್ಬಸಿ ವರ್ಣನಾತೀತ ಅನುಭೂತಿಯನ್ನು ಕೊಡುತ್ತದೆ ಎನ್ನುವುದನ್ನು ಈ ರೀತಿ ವರ್ಣಿಸುತ್ತಾರೆ.

ಸಂದರ್ಭದ ಹಿನ್ನಲೆ : ಇಲ್ಲಿ ಬರುವ ಹಳೆಮನೆ ಸುಬ್ಬಣ್ಣ ಹೆಗ್ಗಡೆ ಸ್ವಭಾವತಃ ಅಸಂಸ್ಕೃತ. ಸಂಸ್ಕಾರ ವಿಹೀನ. ಹಂದಿದೊಡ್ಡಿ, ಕುರಿದೊಡ್ಡಿ, ಕೋಳಿ ಹಿಕ್ಕೆಯಲ್ಲೇ ಮೈತಿಕ್ಕಿ ಕೊಂಡು ವಾರದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡಿ ಬಟ್ಟೆ ಒಗೆಯುವವ ಮನುಷ್ಯ. ಪ್ರತಿದಿನ ಸ್ನಾನ ಮಾಡುವವ ಈ ಲೋಕಕ್ಕೇ ಸಲ್ಲದವ ಎಂದು ಬಲವಾಗಿ ನಂಬಿದವ. ನಂಬಿದಂತೇ ಬಾಳುತ್ತಿರುವವ. ಅಂತಹವನಲ್ಲೂ ಬೆಳಗಿನ ಪ್ರಾಕೃತಿಕ ಬದಲಾವಣೆ ಯಾವರೀತಿ ಆನಂದಾನುಭೂತಿಯನ್ನು ತುಂಬಿತು!!.. ಇದಕ್ಕೆ ಎಲ್ಲೋ ಏನೋ ಪೂರ್ವಜನ್ಮದ ಸ್ಮರಣೆಯೋ ಇಲ್ಲಾ ಸುಪ್ತವಾಗಿರುವ ‘ಅಸ್ಮೃತಿ’ಯೋ ಕಾರಣವಾಗಿರಬಹುದು ಎಂಬುದನ್ನು ಕುವೆಂಪು ಅವರು ಈ ರೀತಿ ವಿವರಿಸುತ್ತಾರೆ. ಅವರ ಈ ಕೆಳಗಿನ ವರ್ಣನೆ ನನ್ನ ಸ್ಮೃತಿಗೂ ಸಂಪೂರ್ಣ ಎಟುಕಿತೆಂದು ಹೇಳೆನು. ಅರ್ಥೈಸಿಕೊಳ್ಳಲು ಯತ್ನಿಸಿದಷ್ಟೂ ದೂರಾಗುವ ಇದರೊಳಗಿನ ಮರ್ಮ ನಿಮಗೆ ಸಂಪೂರ್ಣವಾಗಿ ತಿಳಿದಲ್ಲಿ ನನಗೂ ತಿಳಿಸಬೇಕಾಗಿ ವಿನಂತಿ.

"ಮನುಷ್ಯನು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿಯೇ ಅವನ ಅಂತಃಪ್ರಕೃತಿ ಸೃಷ್ಟಿಯ ಬಹಿಃಪ್ರಕೃತಿಗೆ ಅನುಯಾಯಿಯಾಗಿರುತ್ತದೆ. ಆತನ ಆತ್ಮಕೊಶವು ಬಹು ಜನ್ಮಗಳ ಸಂಸ್ಕಾರಗಳಿಂದ ತುಂಬಿರುವಂತೆ ಆತನ ಅನ್ನಮಯಕೋಶವೂ ಪೃಥ್ವಿಯಲ್ಲಿ ಪ್ರಾಣೋತ್ಪತ್ತಿಯಾದಂದಿನಿಂದ ಮೊದಲುಗೊಂಡು ಇಂದಿನವರೆಗೆ ಜೀವವು ಕೈಗೊಂಡ ನಾನಾರೂಪದ ನಾನಾ ಪ್ರಯೋಗದ ನಾನಾ ಕಷ್ಟ ಸಂಕಟಗಳ ನಾನಾ ಸುಖ ಸಂತೋಷಗಳ ಮಹಾ ಸಾಹಸಯಾತ್ರೆಗಳ ಸಮಗ್ರ ಪರಿಣಾಮ ಮುದ್ರೆಯನ್ನೂ ‘ಅಸ್ಮೃತಿ’ ರೂಪದಲ್ಲಿ ಪಡೆದಿರುತ್ತದೆ. ಆ ಅಪಾರ್ಥಿವ ಮತ್ತು ಪಾರ್ಥಿವ ಸಂಸ್ಕಾರ ಕೋಶಗಳೆರಡೂ ನಮ್ಮ ಬಾಳ್ವೆಯ ಹೃದಯದ ಇಕ್ಕೆಲಗಳಲ್ಲಿ ಶ್ವಾಸಕೋಶಗಳಂತಿವೆ. ಅಪ್ರಜ್ಞಾಸೀಮೆಯಲ್ಲಿರುವ ಆ ಸಂಸ್ಕಾರಗಳಲ್ಲಿ ಯಾವುದನ್ನಾದರೂ ಮುಟ್ಟಿ ಎಚ್ಚರಿಸುವಂತಹ ಸನ್ನಿವೇಶ ಒದಗಿದರೆ ನಮಗೆ ಬಹುತೇಕ ಆನಂದವೂ ಅಕಾರಣ ಸಂಕಟವೂ ಸಂಭವಿಸಿದಂತಾಗುತ್ತದೆ. ಅಲ್ಪ ಕಾರಣದಿಂದ ಮಹತ್ತಾದ ಅನುಭವ ಉಂಟಾದಂತೆ ಭಾಸವಾಗಿ ಆಶ್ಚರ್ಯವಾಗುತ್ತದೆ. ಎಳೆಬಿಸಿಲಿನಲ್ಲಿ ಹಸುರು ಗರಿಕೆಯ ಕುಡಿಯಲ್ಲಿ ಮಿರುಗುವ ದುಂಡು ಮುತ್ತಿನ ತೆರೆದ ಇಬ್ಬನಿ, ಪ್ರಾಣದ ಪ್ರಪ್ರಾಚೀನಾನುಭವದ ಮಹಾ ಸಾಗರದ ‘ಅಸ್ಮೃತಿ’ಯನ್ನು ಕೆರಳಿಸಿ, ಸಮುದ್ರದರ್ಶನದ ಭೂಮಾನುಭೂತಿಯನ್ನುಂಟುಮಾಡಬಹುದು. ಕಾಡಿನಂಚಿನಲ್ಲಿ ಬೈಗುಗಪ್ಪಿನ ಮಬ್ಬಿನಲ್ಲಿ, ಹೆಮ್ಮರದ ದಿಂಡಿನಲ್ಲಿರುವ ಮರಕುಟಿಗನ ಗೂಡಿನ ಪೊಟ್ಟರೆ, ಅತ್ಯಂತ ಪೂರ್ವಕಾಲದ ಬಾಳಿನ ಯಾವುದೊ ಒಂದು ಕಗ್ಗವಿಯನ್ನೋ ಪೆಡಂಭೂತದ ಕಣ್ಣನ್ನೋ ‘ಅಸ್ಮೃತಿ’ಗೆ ತಂದು, ಅನಿರ್ವಚನೀಯವಾದ ಭೀತಿಯನ್ನುಂಟುಮಾಡಬಹುದು. ಪರ್ವತಾರಣ್ಯಗಳ ಭಯಂಕರ ಪ್ರಕೃತಿಯ ಮಧ್ಯೆ ವಾಸಮಾಡುವವರಿಗೆ ಅರ್ಥವಾಗದ, ಆದ್ದರಿಂದ ಅರ್ಥವಿಲ್ಲದ, ಆ ಅನುಭವಗಳು ಪಿಶಾಚಿಗಳಂತೆಯೊ ದೆಯ್ಯ ದ್ಯಾವರುಗಳಂತೆಯೊ ತೋರುತ್ತವೆ. ಕತ್ತಲೆಯಲ್ಲಿ ಆಕಾಶಕ್ಕೆದುರಾಗಿ ಚಾಚಿರುವ ಭೀಮಾಕಾರದ ಕೋಡುಗಲ್ಲಿನಲ್ಲಿ ಪ್ರಾಚೀನಾನುಭವ ಸಮಷ್ಟಿರೂಪದ ‘ಅಸ್ಮೃತಿ’ ಆವಿರ್ಭಾವವಾಯಿತೆಂದರೆ ಬ್ರಹ್ಮರಾಕ್ಷಸ ದರ್ಶನವಾಗುವುದರಲ್ಲಿ ಆಶ್ಚರ್ಯವೇನಿದೆ? ಕಬ್ಬಿಣದ ಪೆಟ್ಟಿಗೆಯ ಖಜಾನೆಯನ್ನು ತೆರೆಯುವುದಕ್ಕೆ ಸಣ್ಣ ಬೀಗದ ಕೈ ಸಾಕಾಗುವಂತೆ ‘ಅಸ್ಮೃತಿ’ಯ ಮಹದೈಶ್ವರ್ಯವನ್ನು ಕೆರಳಿಸಲು ಅತ್ಯಲ್ಪ ಕಾರಣಗಳೂ ಸಾಕಾಗುತ್ತವೆ."
(ಮುದ್ರಣ:೨೦೦೭, ಪುಟ ಸಂಖ್ಯೆ : ೪೪)

ಈ ಮೂರೂ ಅಂಶಗಳನ್ನೂ ಮೀರಿದ, ಕಾದಂಬರಿಯ ಜೀವನಾಡಿಯಾಗಿ, ಜೀವನದಿಯಾಗಿ ಕಥೆಯುದ್ದಕ್ಕೂ ಹರಿಯುವುದು ಸ್ತ್ರೀ ಮನೋಧರ್ಮ :-

ಪ್ರಾರಂಭದಲ್ಲಿ ಗುತ್ತಿ ತಿಮ್ಮಿಯನ್ನು ಹಾರಿಸಿಕೊಂಡು ಹೋಗುವದಕ್ಕೆ ಯೋಚಿಸುವುದರಿಂದ ಶುರುವಾಗುವ ಕಥೆ, ನಿಲ್ಲುವುದು ತಾನು ವರಿಸಬೇಕೆಂದು ಬಯಸಿದ್ದ ಚಿನ್ನಮ್ಮನ್ನು ಅಂತೂ ಕೊನೆಗೆ ಪಡೆಯುವ ಮುಕುಂದಯ್ಯನಲ್ಲಿ. ಸ್ತ್ರೀಯೇ ಇಲ್ಲಿ ಪ್ರಮುಖಳು. ಸ್ತ್ರೀ ಪ್ರಧಾನ ಕಾದಂಬರಿ ಇದೆಂದರೂ ತಪ್ಪಾಗದು. ಪ್ರಕೃತಿ ಹಾಗೂ ಹೆಣ್ಣಿನೊಳಗಣ ಅವಿನಾಭಾವ ಸಂಬಂಧವನ್ನು ಕಥೆಯುದ್ದಕ್ಕೂ ಕಾಣಬಹುದು. ಹೆಣ್ಣಿನ(ಹೊಲೆಯ ಗೌಡ ಎಂಬ ಬೇಧವಿಲ್ಲದೇ)ಮನೋಕಾಮನೆಗಳಿಗೆ, ವಿಪ್ಲವಗಳಿಗೆ, ಹೊಯ್ದಾಟಕ್ಕೆ, ತುಮುಲಕ್ಕೆ, ಅನಿಶ್ಚಿತತೆಗೆ, ನಿರ್ಧಾರಕ್ಕೆ ಸದಾ ಸಾಥ್ ನಿಡುತ್ತದೆ ರಮ್ಯ ಮನೋಹರ ಪ್ರಕೃತಿ. ಅದು ಗುತ್ತಿಯೊಡನೆ ಅಮಾವಾಸ್ಯೆ ರಾತ್ರಿಯಲ್ಲಿ ಹುಲಿಕಾಡಿನ ಮೂಲಕ ಓಡಿಹೋಗುವ ತಿಮ್ಮಿಯ ಜೊತೆಗಾಗಿರಲಿ ಇಲ್ಲಾ ಸುಂಸ್ಕೃತೆ ಚಿನ್ನಮ್ಮ ಮದುವೆಯ ದಿನ ಸಂಜೆಯೇ ಪ್ರಿಯಕರ ಮುಕುಂದಯ್ಯನೊಂದಿಗೆ ಅದೇ ಕಾಡಿನ ದಾರಿಯಾಗಿ ಓಡಿಹೋಗುವ ಸಂದರ್ಭವೇ ಆಗಿರಲಿ..ಪ್ರಕೃತಿಯೇ ಇಲ್ಲಿ ಕಾರಣಕರ್ತ ಹಾಗೂ ಕತೃ.

ಹೆಣ್ಣಿಗೆ ಪರಿಶುದ್ಧತೆ ಇರಬೇಕಾದದ್ದು ಮನಸಿಗೇ ಹೊರತು ಮೈಗಲ್ಲಾ ಎಂಬ ಸಂದೇಶವನ್ನು ತುಂಬಾ ಸರಳವಾಗಿ, ಸುಂದರವಾಗಿ ಯಾರೂ ಒಪ್ಪುವಂತೆ, ಪಿಂಚಲು, ತಿಮ್ಮಿ, ಅಕ್ಕಣಿ, ರಂಗಮ್ಮ ಹಾಗೂ ಚಿನ್ನಮ್ಮರ ಪಾತ್ರದ ಮೂಲಕ ತೋರಿಸಿದ್ದಾರೆ. ಈ ಐವರು ನಾರಿಮಣಿಗಳು ಯಾವ ಪತಿವ್ರತೆಯರಿಗೂ ಕಡಿಮೆಯೆನಿಸರು. ಕುಲ/ಕಸುಬಿನಲ್ಲಿ ಬಹು ಅಂತರವಿದ್ದರೂ ಈ ನಾರಿಯರ ಮನಸಿನೊಳಗಿನ ಮುಗ್ಧತೆಗೆ, ಪರಿಶುದ್ಧತೆಗೆ ಯಾವ ಸೀಮೆಯಾಗಲೀ, ಅಂತರವಾಗಲೀ ಕಾಣಸಿಗದು. ಆಗಿನ ಕಾಲದ ದುಃಸ್ಥಿಗೋ ಪರಿಸ್ಥಿಗೋ ಸಿಲುಕಿ, ಅರಿಯದ ಮುಗ್ಧತೆಗೋ ಇಲ್ಲಾ ಆಮಿಶಕ್ಕೋ ಬಲಿಪಶುವಾಗಿ ಬಿಡಿಸಿಕೊಳ್ಳದಂತಿರುವಾಗ ಆ ಕಾಲದ ಹೆಣ್ಣು ತನ್ನ ಮೈ ಮಾರಿಕೊಂಡರೂ, (ಒಂದು ರೀತಿ ಬಲಾತ್ಕಾರಕ್ಕೊಳಪಡುವುದು) ಅವರ ಮನಸು ಮಾತ್ರ ಅವರ ಮನದಿನಿಯನ ಬಳಿಯೇ ಇರುತ್ತದೆ. ಮಾನಸಿಕ ಭದ್ರತೆ, ನೆಮ್ಮದಿ ಸುಖ-ಸಂತೋಷಗಳಿಗೇ ಅವರ ಮನಸು ತುಡಿಯುತ್ತಿರುತ್ತದೆ. ಅದಕ್ಕಾಗಿಯೇ ಹಂಬಲಿಸುತ್ತಿರುತ್ತದೆ.
ಕೊನೆಯಲ್ಲಿ ಕುವೆಂಪು ಅವರೇ ಹೇಳಿದಂತೆ-
"ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ; ಕೊನೆಮುಟ್ಟುವುದೂ ಇಲ್ಲ"

ನಾನು ಕುವೆಂಪು ಅವರ ಕಾದಂಬರಿಯನ್ನು ವಿಮರ್ಶಿಸುವಷ್ಟು ದೊಡ್ಡವಳಲ್ಲ. ಇದು ನನ್ನ ಉದ್ದೇಶವೂ ಅಲ್ಲ. ಅವರ ಈ ಕೃತಿ "ಕಾನೂರು ಹೆಗ್ಗಡತಿ ಸುಬ್ಬಮ್ಮ" ಕೃತಿಗಿಂತಲೂ ಅತ್ಯುತ್ತಮವಾಗಿದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ. ಎಷ್ಟೆಂದರೂ ಅವರ ಕೃತಿ ಹೋಲಿಕೆಗೆ ಅವರ ಕೃತಿಯೇ ಸಾಟಿ. ಆದಷ್ಟು ಸ್ಪಷ್ಟವಾಗಿ, ಸರಳವಾಗಿ, ಕ್ಲುಪ್ತವಾಗಿ ನನ್ನ ಅಭಿಪ್ರಾಯಗಳನ್ನು(ವಿಮರ್ಶೆಯನ್ನಲ್ಲ!!) ವಿಶದಪಡಿಸಿರುವೆ. ಏನಾದರೂ ಲೋಪದೋಷಗಳಿದ್ದಲ್ಲಿ, ಈ ಮೊದಲೇ ಈ ಕಾದಂಬರಿಯನ್ನು ಓದಿದವರು ತಿದ್ದಿದಲ್ಲಿ, ಸ್ವಾಗತಾರ್ಹ. ವಿಚಾರ ವಿನಿಮಯಗಳಿಗೆ ಸದಾ ಸ್ವಾಗತ. ಉತ್ತಮ ಕೃತಿಗಳನ್ನು ಓದುವಂತೆ ಪ್ರೇರೇಪಿಸುವುದು, ಓದಿರುವುದನ್ನು ಪುನರ್ ಸ್ಮರಿಸುವಂತೆ ಮಾಡುವುದು ಈ ನನ್ನ ಲೇಖನದ ಉದ್ದೇಶ ಅಷ್ಟೇ.

--------*****--------

ಶುಕ್ರವಾರ, ಫೆಬ್ರವರಿ 20, 2009

ಕಲ್ಪನಾತೀತ


ಅರಿಯಲಾರೆನೇ ನಾ ನೀ ಮಹದಾಶೆಯ
ಪಡೆಯಲೆಂತು ಸಾಧ್ಯವಿದು?! ಬಹು ಅತಿಶಯ


ಸಾವಿರಾರು ವರುಷಗಳವರೆಗೂ,
ಕಡು ಬಿಸಿಲು, ಬಿರು ಮಳೆ, ಕೊರೆವ ಚಳಿಗೆ,
ಪ್ರವಾಹ, ಬಿರುಗಾಳಿಗಳಿಗಂಜದೇ, ಅಳುಕದೇ
ತಲೆಯೆತ್ತಿ ನಿಂತು ಬೀಗುತಿರುವ ಹೆಬ್ಬಂಡೆಗಳ
ಬಿಳಿ ಹತ್ತಿಯನ್ನಾಗಿಸಿ, ಹಾರಿಸಿ, ತೇಲಿಸಿಬಿಡುವಾಸೆ.

ಸಾವಿರಾರು ವರುಷಗಳವರೆಗೂ,
ಅಪಾರ ಖನಿಜಗಳನ್ನು ಒಡಲೊಳಗಿಟ್ಟುಕೊಂಡು,
ಸುಪ್ತವಾಗಿ, ಧಗಧಗಿಸುವ ಲಾವಾಗ್ನಿಯಜೊತೆಯಾಗಿ,
ಮಂದವಾಗಿ ಹರಿಯುತಿಹ ಜ್ವಾಲಾಮುಖಿಯನ್ನು
ನೀರ್ಗಲ್ಲಾಗಿಸಿ, ನೀರಾಗಿಸಿ, ಆವಿಯಾಗಿಸುವಾಸೆ.

ಸಾವಿರಾರು ವರುಷಗಳಿಂದಲೂ,
ಎಟುಕಿಯೂ ಎಟುಕದಂತಿದ್ದು, ಊಹಾತೀತಗಳ,
ವಿಸ್ಮಯ, ಅನೂಹ್ಯಲೋಕಗಳ ಬೀಡಾದ,
ಸೂರ್ಯ, ಚಂದ್ರ, ತಾರೆಯರ ಊರಾದ, ಮುಗಿಲನ್ನು
ಗಾಳಿಪಟವನ್ನಾಗಿಸಿ, ಸೂತ್ರಹಿಡಿದು, ತೇಲಿಬಿಡುವಾಸೆ.

ಸಾವಿರಾರು ವರುಷಗಳಿಂದಲೂ,
ತನ್ನೊಳಗೆ ತುಂಬಿರುವ ಅಪಾರ ಜಲನಿಧಿಗೆ,
ತಾನೇ ಸೊಕ್ಕಿ, ಮೈಯುಕ್ಕಿ ಕ್ಷಾರಗೊಂಡು, ಮೊರೆಯುವ
ಮುತ್ತು, ಹವಳಗಳ ರಾಣಿ ಶರಧಿಯನ್ನು
ಮುಷ್ಠಿಯೊಳಗಿಟ್ಟು, ಚಿಮ್ಮಿ, ಪನ್ನೀರಾಗಿಸುವಾಸೆ.

ಅರಿಯಲಾರೆನೇ ನಾ ನೀ ಮಹದಾಶೆಯ
ಪಡೆಯಲೆಂತು ಸಾಧ್ಯವಿದು?! ಬಹು ಅತಿಶಯ