ನನ್ನೆಲ್ಲಾ ಕಸ ವಿಲೇವಾರಿಗೆ
ಅವನ ತಲೆಯೇ ಮಂಡೂರು!
ಬಂಧ, ಸಂಬಧಗಳೊದಗಿಸುವ ತಲ್ಲಣ,
ಸ್ನೇಹದೊಳಗಿನ ತಿವಿತ,
ಸಾಮಾಜಿಕ ಜಾಲ ಬೀಸುವ ಬಲೆ,
ಅವಳ ಕೊರಗು, ಅವನ ಕೊಸರು,
ತಲೆ ಕೊರೆವ ಅವಶ್ಯಾನವಶ್ಯಕ ಭವಿಷ್ಯತ್ತು,
ಸುಖಾಸುಮ್ಮನೆ ನಿನ್ನೆಯ ಭೂತವ ನೆನೆ ನೆನೆದು ಅಳು,
ಹುಸಿಮುನಿಸು, ತರಲೆ, ರಗಳೆ, ಕಡಲ ಪ್ರೀತಿಯ ಜೊತೆಗೆ
ನೆನಪುಗಳ ತೆರೆ ಹೊರುವ ಕಸ, ಕಡ್ಡಿ, ಗುಡ್ಡೆ ರಾಶಿ....
ನನ್ನ ತರಲೆ ತರ್ಕಗಳಿಗೆಲ್ಲಾ,
ಅವನ ಕಿವಿಯೇ ಮಂಡೂರು!
ಹಳೆಯ ಕಾಸರ್ಕದ ಮುಳ್ಳೊಂದು-
ಚುಚ್ಚಿ ಬಸಿದ ರಕುತ ಲೇಪಿತ ಗತ ಕಾಲದ ಕಹಿಗೆ,
ಅಳಲಾಗದ ಅಳಲಿಗೆ, ನಗಲಾಗದ ಬವಣೆಗೆ,
ಒಡಲಾಳದ ಕಿಚ್ಚು ಹೆಚ್ಚಿ, ಹುಚ್ಚೆದ್ದು ಕರಟಿದ
ಕನಸುಗಳ ತರಗೆಲೆಗಳಿಗೆ
ಹೊರ ಚೆಲ್ಲುವ ನಿಟ್ಟುಸುರಿಗೆಲ್ಲಾ,
ಅವನೆದೆಯೇ ಮಂಡೂರು!
-ತೇಜಸ್ವಿನಿ.
ಸೋಮವಾರ, ಡಿಸೆಂಬರ್ 15, 2014
ಸೋಮವಾರ, ಸೆಪ್ಟೆಂಬರ್ 29, 2014
ಕವಳದ ಕಳವಳ
೮ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡ ‘ಹರಟೆ ಕಟ್ಟೆ - ಹೊಸಕಾಲದ ಲಲಿತ ಪ್ರಬಂಧಗಳು’ ಪುಸ್ತಕದಲ್ಲಿ ಪ್ರಕಟಗೊಂಡಿರುವ ನನ್ನ ಲಲಿತ ಪ್ರಬಂಧ.
*******************************************************************************
ಮಲೆನಾಡು ಪ್ರಮುಖವಾಗಿ ಎರಡು ವಿಷಯಗಳಿಗೆ ಹೆಸರುವಾಸಿ. ಒಂದು ಅಡಿಕೆ ತೋಟಕ್ಕೆ, ಇನ್ನೊಂದು ಧೋ ಎಂದು ಬೀಳುವ ಮಳೆಗೆ. ಮಲೆನಾಡು ಎಂದರೆ ಹಲವರು ತೀರ್ಥಹಳ್ಳಿ, ಚಿಕ್ಕಮಗಳೂರು ಶೃಂಗೇರಿ ಎಂದೇ ಭಾವಿಸುವುದು ಹೆಚ್ಚು. ಆದರೆ ಬಾಲ್ಯಂದಿಂದಲೂ ನನಗಂತೂ ಮಲೆನಾಡೆಂದರೆ ಶಿರಸಿಯೇ! ನಮ್ಮೂರಲ್ಲಿ ವಿಶೇಷವಾಗಿ ಅಡಿಕೆಯೇ ಪ್ರಧಾನ. ಕೊಯ್ಲು ಎಂದರೆ ಅಲ್ಲಿ ಅಡಿಕೆಯದೊಂದೇ. ಗಂಡ ಅಂದಾಕ್ಷಾಣ ಹೆಂಡತಿ ಎನ್ನೋದು ಅದೆಷ್ಟು ಪೂರಕವೋ ಅಂತೆಯೇ ಅಡಿಕೆ ಎಂದಮೇಲೆ ಅಲ್ಲಿ ಎಲೆ ಇದ್ದಿರಲೇ ಬೇಕು. ನೇರ ದಿಟ್ಟ ನಿರಂತರವಾಗಿ ಮುಗಿಲೆತ್ತರ ನಿಲ್ಲುವ ಅಡಿಕೆ ಮರಗಳನ್ನು ಬಳುಕುತ್ತಾ, ಲಾಲಿತ್ಯದಿಂದ ಸುತ್ತಿರುವ ಎಲೆಬಳ್ಳಿಗಳ ಸೊಬಗನ್ನು ನೋಡಿಯೇ ಸವಿಯಬೇಕು. ಊಟ ಎಂದರೆ ಉಪ್ಪು-ಉಪ್ಪಿನಕಾಯಿ ಹೇಗೋ ಊಟನಂತರದ ಎಲೆ-ಅಡಿಕೆಯೂ ಇದ್ದಿರಲೇ ಬೇಕು. ಇನ್ನು ಊಟವೆಂದರೆ ಬರಿಯನ್ನವನ್ನಷ್ಟೇ ತಿನ್ನಲಾಗದು, ಜೊತೆಗೆ ಸಾರು, ಪಲ್ಯವಿದ್ದರೆ ಮಾತ್ರ ನಾಲಗೆ ಚಪ್ಪರಿಸೋದು. ಅಂತೆಯೇ ಎಲೆ-ಅಡಿಕೆಗಳಿಗೆ ಸಾಥ್ ನೀಡಿ ರಸಭರಿತ ಕವಳವಾಗಿ ಬಾಯಿ, ಹಲ್ಲು, ನಾಲಗೆಗಳೆಲ್ಲಾ ಕೆಂಪಾದವೋ ಎಲ್ಲಾ ಕೆಂಪಾದವೋ ಎಂದು ಹಾಡಿಕೊಳ್ಳಲು, ಸುಣ್ಣ, ತಂಬಾಕಿನ ಸಾಂಗತ್ಯವೂ ಅತ್ಯಗತ್ಯ. ಮಲೆನಾಡಿನ ಮನೆಗಳಲ್ಲಿ ಕವಳದ ಸಂಚಿ/ಬಟ್ಟಲು ಇಲ್ಲದ ಮನೆಯನ್ನು ಹುಡುಕುವುದು ಎಂದರೆ ಸಾವಿಲ್ಲದ ಮನೆಯ ಸಾಸಿವೆ ಹುಡುಕಿದಂತೇ! ಇನ್ನು ಈ ಎಲೆ ಅಡಿಕೆಯ ಮೇಲೆ ಅದೆಷ್ಟೋ ಒಗಟುಗಳೂ ಹುಟ್ಟಿಕೊಂಡಿವೆ. ‘ಬರೋವಾಗ ಹಸ್ರು, ಹೋಗೋವಾಗ ಕೆಂಪು... ನಾನ್ಯಾರು?’ ಎಂದು ಬಾಲ್ಯದಲ್ಲಿ ನಾವೆಲ್ಲಾ ಒಗಟು ಕೇಳುತ್ತಲೇ ಕವಳ ಜಡಿಯುತ್ತಿದ್ದುದು.
Courtesy: http://en.wikipedia.org/wiki/Paan |
ಚಿಕ್ಕಂದಿನಲ್ಲಿ ಅಜ್ಜಿ ಮನೆಗೆ ಹೋದಾಗೆಲ್ಲಾ ಅಜ್ಜ ಊಟದ ನಂತರ ಮೊಮ್ಮಕ್ಕಳಿಗೆಲ್ಲಾ ಕವಳ ಕಟ್ಟಿಕೊಡುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದ. ಅದೊಂದು ಮರೆಯಲಾಗದ ಅನುಪಮ ಸಂಭ್ರಮವೇ ಸರಿ. ‘ಅಜ್ಜ ನಂಗೆ ಸುಣ್ಣ ಜಾಸ್ತಿ ಹಾಕದು ಬ್ಯಾಡ್ದೋ.. ತಲೆ ತಿರ್ಗೋಗ್ತು ಮತ್ತೆ..’ ಎಂದು ಬೊಬ್ಬಿರಿವ ನಮಗಾಗಿಯೇ ಅಜ್ಜನ ಸ್ಪೆಷಲ್ ವೀಳ್ಯ ತಯಾರಾಗುತ್ತಿತ್ತು. ಉಂಡಾದ ಮೇಲೆ ಒಂದು ಕವಳ ಹಾಕೋದು ಜೀವಕ್ಕೆ ಚೊಲೋವಾ, ಆದ್ರೆ ಅದೇ ಗೀಳಾಗಲಾಗ ಎನ್ನುವುದು ನನ್ನಜ್ಜನ, ಅಜ್ಜನಂಥವರ ಪ್ರಿನ್ಸಿಪಲ್ ಆಗಿತ್ತು. ಚಿಗುರೆಲೆಯ ತುದಿಯ ಮುರಿದು, ಹಿಂಬದಿಯ ನಾರನ್ನು ತೆಗೆದು, ಎಷ್ಟು ತೊಳೆದರೂ ಉಜಾಲ ಕಾಣದೇ ಮಣ್ಣು ಹಿಡಿದ ಅಂಗೋಸ್ತ್ರ ಪಂಜಿ ಸುತ್ತುವರಿದಿದ್ದ ತೊಡೆಯ ಮೇಲೆ ಎಲೆಗಳನ್ನು ಉಜ್ಜಿ ಉಜ್ಜಿ ತಿಕ್ಕಿ, ಅಡಕತ್ತರಿಯಿಂದ ತಲೆಗೆ ಸೊಕ್ಕೇರಿಸದ ಪಾಪದ ಎರಡೆರಡು ಅಡಿಕೆ ಹೋಳುಗಳನ್ನು ಪ್ರತಿ ಎಲೆಗೂ ಹಾಕಿ, ಹೌದೋ ಅಲ್ಲವೋ ಎಂಬಂತೇ ಸುಣ್ಣವನ್ನು ಸವರಿ, ಅದರ ಮೇಲೆ ಒಂದು ಲವಂಗ, ಒಂದೇ ಒಂದು ಏಲಕ್ಕಿ, ಸೊಂಟಕ್ಕೆ ಸಿಕ್ಕಿಸಿರುವ ಸಂಚಿಯಿಂದ ಹೊರತೆಗೆದು ಹಾಕುವ ಒಂದೆಳೆ ಜಾಯಿಕಾಯಿ, ಬೇಕಾದರೆ ಎರಡು ಕಾಳು ಸಕ್ಕರೆ - ಇವಿಷ್ಟನ್ನು ಹಾಕಿ ಮಡಚಿ ‘ತಗ ಇದು ತೇಜುಗೆ, ಇದು ಪಯುಗೆ, ಇದು ಸಣ್ಣ ಕೂಸಿಗೆ..’ ಎಂದು ಕೊಡುವಾಗ, ಕವಳ ತಯಾರಿಸಿದ ರೀತಿಯನ್ನೇ ಮಂತ್ರಮುಗ್ಧರಂತೇ ನೋಡುತ್ತಿದ್ದ ನಮಗೆ ಏನೋ ಅತಿ ಅಮೂಲ್ಯವಾದುದ್ದನ್ನೇ ಪಡೆದಂತಹ ಅನುಭವ! ಬಾಯೊಳಿಟ್ಟು ಜಗಿದು ರಸವನ್ನು ಹೀರಿ ನಾಲಗೆಯ ತುದಿಗೆ ಜಿಗುಟು ತಂದು ಕೆನ್ನಾಲಗೆಯನ್ನು ಆಡಿಸಿ ಚಾಳಿಸಿಕೊಳ್ಳುವ ಭರದಲ್ಲಿ ಅದೆಷ್ಟೋ ರಸಭರಿತ ಕವಳಗಳು ನೆಲದಲ್ಲಿ ಬಿದ್ದು ರಂಗೋಲಿ ಬರೆದು ಉಗಿಸಿಕೊಂಡಿದ್ದು ಇನ್ನೂ ಹಸಿರಾಗಿದೆ. ಈ ವಿಶೇಷ ಕವಳಗಳ ಸರಬರಾಜು ಐದು ವರ್ಷದ ಮೇಲಿನ ಮಕ್ಕಳಿಗೆ ಮಾತ್ರವಾಗಿರುತ್ತಿತ್ತು. ಹಾಗಾಗಿ ಸಣ್ಣ ಪುಟ್ಟ ಚಿಳ್ಳೆ ಪಳ್ಳೆಗಳ ಕಣ್ತಪ್ಪಿಸಿ ಕವಳದ ಸೇವನೆ ನಡೆಸುವುದೇ ಒಂದು ತರಹ ಥ್ರಿಲ್ ತುಂಬುತ್ತಿತ್ತು. ಆದರೂ ಅದು ಹೇಗೋ ಚಿಳ್ಳೆಗಳಿಗೆ ನಮ್ಮ ಪ್ರೋಗ್ರಾಮಿನ ವಾಸನೆ ಬಡಿದು ತಾರಕಕ್ಕೇರಿದ ಸ್ವರದಲ್ಲಿ ಆಲಾಪನೆ ಶುರುಮಾಡಿಕೊಂಡು ಬಿಡುತ್ತಿದ್ದವು. ಅವರಿಗೆ ಅಜ್ಜ ಸುಳ್ಳೆ ಪುಳ್ಳೆ ಕವಳ ಮಾಡಿಕೊಡುತ್ತಿದ್ದ. ಅಡಿಕೆ ಹೋಳೊಂದನ್ನು ಸಣ್ಣ ಎಲೆಯ ಚೂರಲ್ಲಿ ಸುತ್ತಿ ಭರ್ಜರಿ ಬೆಲ್ಲ ಸವರಿ ಬಾಯಿಗಿಟ್ಟರೆ ಬಹು ಸುಲಭದಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಆ ಚಿಣ್ಣರ ಕಿವಿಯೇರಿಬಿಡುತ್ತಿದ್ದವು. ಇನ್ನು ನಾವು ತುಸು ದೊಡ್ಡವರಾದಂತೇ ‘ನಂಗೀಗ ಸಮಾ ಸುಣ್ಣ ಹಾಕಿದ್ರೂ ಎಂತಾ ಆಗ್ತಿಲ್ಲೆ ನೋಡು..’ ಎಂದು ಜಂಭದಿಂದ ಹೆಚು ಸುಣ್ಣ ಸವರಿಕೊಂದು ಕವಳ ಹಾಕಿ ಚೆನ್ನಾಗಿ ತಲೆ ತಿರುಗಿದರೂ ತೋರಿಸಿಕೊಳ್ಳದೇ ಸಾವರಿಸಿಕೊಂಡು ಪೋಸ್‌ಕೊಡುವ ನಮ್ಮಗಳ ಬಣ್ಣ ಬಯಲಾಗಲು ಹೆಚ್ಚು ಹೊತ್ತು ಬೇಕಾಗುತ್ತಿರಲಿಲ್ಲ. ಎಷ್ಟೋ ಸಲ ಅಪರೂಪಕ್ಕೆ ಕವಳ ಕಾಣುತ್ತಿದ್ದ ನಾಲಗೆ, ಅದನ್ನು ತಿಂದ ನಂತರ ತುಸು ಕಾಲ ಬೇರಾವ ತಿಂಡಿಯ ಸ್ವಾದವನ್ನೂ ಮೆದುಳಿಗೆ ರವಾನಿಸುತ್ತಿರಲಿಲ್ಲ! ದಪ್ಪಗೆ, ರುಚಿಯೇ ತಿಳಿಯದಂತ ಅನುಭೂತಿಯಿಂದ ‘ಸುಟ್ಟ ಕವಳ, ಇನ್ನು ತಿನ್ನಲಾಗ’ ಅನ್ನುವ ಪ್ರತಿಜ್ಞೆ ಮರುದಿನದ ಮಧ್ಯಾಹ್ನದವರೆಗಷ್ಟೇ ಗಟ್ಟಿಯಾಗಿರುತ್ತಿತ್ತು. ಏನೇ ಅನ್ನಿ ಸದಾಕಾಲ ಏಲಕ್ಕಿ, ಲವಂಗ ಜಾಯಿಕಾಯಿ ಚೂರುಗಳನ್ನು ತನ್ನೊಂದಿಗೇ ಇಟ್ಟುಕೊಂಡಿರುತ್ತಿದ್ದ ಅಜ್ಜನ ಮೈಯಿಂದ ಹೊರಬರುತ್ತಿದ್ದ ಆ ಅದ್ಭುತ ಸುವಾಸನೆಗೆ ಯಾವ ಸೆಂಟೂ ಸಾಟಿಯಾಗದು! ಈಗಲೂ ಅವನ ಹಾಸಿಗೆ, ಮೈಯಿಂದ ಹೊರಹೊಮ್ಮುತ್ತಿದ್ದ ಸುಗಂಧದ ಕಂಪು ಸ್ಮೃತಿಪಟಲವನ್ನು ತಾಗಿದಾಕ್ಷಣ ಅಪ್ರಯತ್ನವಾಗಿ ಕಣ್ಗಳು ಅರೆ ನಿಮೀಲಿತಗೊಳ್ಳುತ್ತವೆ.
ಆದರೆ ಈ ಕವಳದ ಗಮ್ಮತ್ತನ್ನೂ ಮೀರಿ ಇಂದೂ ನನ್ನ ಮೈನವಿರೇಳಿಸುವುದು ಅಜ್ಜಿ ಹೇಳುತ್ತಿದ್ದ ಕವಳದ ಹಿಂದಿನ ಕೆಲವು ಭಯಾನಕ ಕಥೆಗಳು! ಅವೆಷ್ಟು ಸತ್ಯವಾಗಿದ್ದವೋ ಇಲ್ಲವೋ ತಿಳಿಯದು. ಚಿಕ್ಕಂದಿನಲ್ಲಿ ಮುಸ್ಸಂಜೆಯ ಹೊತ್ತಿನಲ್ಲಿ, ಕರೆಂಟ್ ಇಲ್ಲದ ಜಗುಲಿಯ ಮೇಲೆ ಲ್ಯಾಟೀನ್ನು ಹಚ್ಚಿಟ್ಟುಕೊಂಡು ಅದರ ಸುತ್ತ ಕುಳಿತು ಕುಂಯ್ ಕುಂಯ್‌ಗುಡುತ್ತಿದ್ದ ನಮ್ಮನೆಲ್ಲಾ ಗಪ್‌ಚುಪ್ ಮಾಡಿಸುತ್ತಿದ್ದುದು ಅಜ್ಜಿಯ ದೆವ್ವದ ಕಥೆಗಳೇ. ತನ್ನ ಬಾಲ್ಯದ ಘಟನೆಗಳನ್ನು, ಯಾರಿಂದಲೇ ತನ್ನ ಕಿವಿಗೆ ಬಿದ್ದಿದ್ದ ಕಥೆಗಳನ್ನೆಲ್ಲಾ ಹರವಿಕೊಂಡು ರಸವತ್ತಾಗಿ, ಕಣ್ಣಿಗೆ ಕಟ್ಟುವಂತೇ ಆಕೆ ಹೇಳತೊಡಗಿದಂತೇ ಹೊರಗೆ ಆವರುಸುತ್ತಿದ್ದ ಕತ್ತಲೆಗೂ ಹೊಸ ಆಕಾರ, ವಿಕಾರಗಳು ಹುಟ್ಟಿಕೊಳ್ಳುತ್ತಿದ್ದವು. ಅಮಾವಾಸ್ಯೆಯಂದು ತೋಟದ, ಗುಡ್ಡದ ಕಡೆಗೆ ಹೊರಟರೆ ಮನುಷ್ಯಾಕಾರದ ಹೆಣ್ಣು ಪಿಶಾಚಿ ಬರುತ್ತಾಳೆ. ಅವಳ ಕಾಲು ಉಲ್ಟಾ ಇರುತ್ತದೆ... ನೆಲಕ್ಕೆ ಕಾಲು ತಾಗಿಸದೇ ತುಸು ಮೇಲೆ ತೇಲುತ್ತಿರುತ್ತಾಳೆ. ಅಲ್ಲದೇ ಅವಳು ಸೀರೆಯನ್ನೂ ಉಲ್ಟಾ ಉಟ್ಟಿರುತ್ತಾಳೆ.... ಅವಳ ಸೊಂಟದಲ್ಲೊಂದು ಕವಳದ ಸಂಚಿ ಇರುತ್ತದೆ.... ನಿಮ್ಮನ್ನು ಕಂಡಾಕ್ಷಣ ಎಲೆ, ಅಡಿಕೆ ತೆಗೆದು, ಚೆಂದದ ಕವಳ ಮಾಡಿ ‘ಬೇಕನೆ ಕೂಸೆ, ಬೇಕನೋ ಮಾಣಿ’ ಎಂದು ಕೇಳುತ್ತಾಳೆ.. ಅಪ್ಪಿ ತಪ್ಪಿ ಕೈಯೊಡ್ಡಿದಿರೋ ಕವಳವನ್ನು ಕೆಳಗೆ ಬೀಳಿಸಿ, ನೀವು ತೆಗೆಯಲು ಬಗ್ಗಿದರೆ ನಿಮ್ಮ ತಲೆಗೆ ಫಟ್ ಎಂದು ಹೊಡೆದು ಪ್ರಜ್ಞೆ ತಪ್ಪಿಸುತ್ತಾಳೆ ಎಂದೆಲ್ಲಾ ಹೇಳುವಾಗ ಕಾಣದ ಆ ಹೆಣ್ಣು ಪಿಶಾಚಿಯ ರೂಪ ರೇಶೆಗೆ ಮನಸ್ಸು ಎಳೆಯತೊಡಗುತ್ತಿತ್ತು. ಅಲ್ಲಾ ಉಲ್ಟಾ ಕಾಲು ಎಂದರೆ ತಿಳಿಯುತ್ತದಪ್ಪಾ.. ಈ ಉಲ್ಟಾ ಸೀರೆ ಎಂದರೆ ಹೇಗೇ? ಅನ್ನೋ ಅನುಮಾನ ನನ್ನ ತುಂಬಾ ಸಲ ಕಾಡಿ, ಕೊರೆದು, ಅಜ್ಜಿಯನ್ನು ಕೇಳಲು, ಅವಳಿಂದ ಹಾರಿಕೆಯ ಉತ್ತರ ಸಿಕ್ಕಲು, ಸಮಾಧಾನವಾಗದೇ, ನಾವು ನಾವೇ ಗಂಭೀರ ಚರ್ಚೆಗೆ ತೊಡಗಿದಾಗ, ನನಗಿಂತ ಒಂದು ವರುಷ ದೊಡ್ಡವಳಾಗಿದ್ದ ಸುಮಕ್ಕಳಿಗೆ ಹಿತ್ತಲಿನ ಚಿಕ್ಕು ಮರದ ಕೆಳಗೆ ಜ್ಞಾನೋದಯವಾಗಿತ್ತು. ‘ಅಯ್ಯೋ ಮಳ್ಳಿ ಅಷ್ಟೂ ತಿಳ್ಯದಿಲ್ಯಾ? ಸೀರೆ ಕೆಳ್ಗೆ ಫಾಲ್ಸ್ ಇರ್ತಲೆ ಅದ್ನ ಮೇಲೆ ಸುತ್ಕಂಬದು, ಸೆರ್ಗ ಕೆಳ್ಗ ಉಟ್ಕಂಬದು’ ಎಂದು ಹೇಳಿದಾಗಲೇ ನನಗೆ ಸಮಾಧಾನವಾಗಿದ್ದು. ಆದರೆ ಈ ಸಮಜಾಯಿಷಿ ಒಂದು ಫಚೀತಿಗೆ ಕಾರಣವಾಗಿದ್ದು ಮಾತ್ರ ನನ್ನ ದುರದೃಷ್ಟವೇ. ಆಗಿದ್ದಿಷ್ಟೇ... ನನಗೋ ಆಗ ಹನ್ನೆರಡು ವರ್ಷವಿದ್ದಿರಬಹುದು. ಆರನೇ ಕ್ಲಾಸು ಪಾಸಾಗಿ ಬೇಸಿಗೆ ರಜೆಗೆ ಊರಿಗೆ ಹೋಗಿದ್ದೆ. ಈಗಿನ ಜನರೇಷನ್ನಿನಷ್ಟು ಆಗಿನವು ಅಂದರೆ ನಮ್ಮ ಕಾಲದ ಮಕ್ಕಳು ಬಹು ಬೇಗ ಪ್ರಬುದ್ಧರಾಗಿದ್ದಿರಲಿಲ್ಲ. ಅಂದರೆ ಈ ಹೆಣ್ಣು ಪಿಶಾಚಿ ಹೇಗಿರುತ್ತಾಳೆ? ಅವಳು ಓಡಾಡುವ ಪ್ರದೇಶಗಳು ಯಾವವು? ಎಕ್ಸಾಕ್ಟ್ ಸಮಯವೇನು? ಆಕೆ ಉಲ್ಟಾ ಸೀರೆ ಹೇಗೆ ಉಡುತ್ತಾಳೆ? ಇಂಬಿತ್ಯಾದಿ ವಿವರಣೆಗಳನ್ನು ಸಚಿತ್ರವಾಗಿ ವಿವರಿಸಲು ಆಗ ಗೂಗಲ್, ಯಾಹೂ, ಫೇಸ್‌ಬುಕ್ಕುಗಳಿರಲಿಲ್ಲ ನೋಡಿ. ಹಾಗಾಗಿ ವರುಷ ೧೬ ಆದರೂ ಒಂದು ರೀತಿಯ ಮುಗ್ಧತೆ, ಭಯ ಅಂದಿನ ಮಕ್ಕಳಲ್ಲಿ ಇದ್ದೇ ಇರುತ್ತಿತ್ತು ಅನ್ನಿ. ಆದಿನ ನನ್ನ ಕಮಲತ್ತೆಯ ದೊಡ್ಡ ಮಗಳ ಮದುವೆ ಗೋಧೂಳಿ ಮುಹೂರ್ತದಲ್ಲಿತ್ತು. ಸಂಧ್ಯೆ ಬಲಗಾಲಿಟ್ಟು ಒಳಬಂದು ನಂದಾದೀಪವ ಬೆಳಗುವ ಸಮಯ. ನನಗೋ ಕಳೆದ ದಿನವಷ್ಟೇ ಮತ್ತೆ ಅದೇ ಕಥೆಯನ್ನು ಅಜ್ಜಿಯ ಬಾಯಲ್ಲಿ ಕೇಳಿದ್ದರ ಎಫೆಕ್ಟ್ ಕಡಿಮೆಯಾಗಿರಲಿಲ್ಲ. ನೆಂಟರಲ್ಲಿ ಯಾರೋ ಸೀರೆ ಉಡಲು ಕೋಣೆಗೆ ಹೋದಾಗಲೇ ಕರೆಂಟ್ ಹೋಗಲು, ಪಾಪ ತಿಳಿಯದೇ ಆಕೆ ಉಲ್ಟಾ ಸೀರೆಯುಟ್ಟು (ಥೇಟ್ ನನ್ನ ಸುಮಕ್ಕ ವಿವರಿಸಿದ್ದಂತೇ) ಹೊರ ಬೀಳುವುದಕ್ಕೂ ಅಲ್ಲೇ ಹೊರಗೆ ಜಗುಲಿಯಲ್ಲಿ ಕುಳಿತಿದ್ದ ನನ್ನ ಕಣ್ಣಿಗೇ ಮೊದಲು ಬೀಳುವುದಕ್ಕೂ ಸರಿಹೋಯಿತು. ಹಳ್ಳಿಮನೆ, ಕತ್ತಲು ಆವರಿಸುವ ಹೊತ್ತು, ಕರೆಂಟ್ ಬೇರೆ ಟಾಟಾ ಹೇಳಿತ್ತು, ಅಂತಹ ಸಮಯದಲ್ಲೇ ಸಾಲಂಕೃತ ವಧು ಹೊರಬರುವುದನ್ನೇ ಕಾತುರದಿಂದ ಎದುರು ನೋಡುತ್ತಿದ್ದ ನನಗೆ, ಒಳಗಿಂದ ಆ ಮಹಿಳೆ ಆ ರೀತಿ ಸೀರೆಯುಟ್ಟು ಹೊರ ಬಂದಾಗ, ಗ್ಯಾಸ್ ಲೈಟಲ್ಲಿ ಆಕೆ ಬಳಿದುಕೊಂಡಿದ್ದ ಢಾಳಾದ ಪೌಡರ್, ಮೇಕಪ್ ಎಲ್ಲವುದರ ಜೊತೆಗೇ ತಿರ್ಗಾಮುರ್ಗಾ ಸೀರೆಯನ್ನೂ ನೋಡಿ, ಕಿರುಚಲೂ ಬಾಯಿ ಬಾರದಷ್ಟು ಭಯಭೀತಳಾದ ನಾನು, ಆಕೆಯ ಕಾಲ್ಗಳನ್ನು ನೋಡಲು ಮರೆತು (ನೋಡಿದ್ದರೂ ಆ ಮಬ್ಬಿನಲ್ಲೇನೂ ಸರಿಯಾಗಿ ಕಾಣುತ್ತಿರಲಿಲ್ಲವೇನೋ..), ಅಲ್ಲೇ ಕಂಬಕ್ಕೊರಗಿ ಹೆಂಗೆಳೆಯರ ಜೊತೆ ಮಾತಿಗಿಳಿದಿದ್ದ ನನ್ನಜ್ಜಿಗೆ ಆ ಮಹಿಳೆಯನ್ನು ತೋರುತ್ತಾ ‘ಅಜ್ಜಿ ನೀ ಹೇಳಿದ್ದ ಕಥೆಯಲ್ಲಿ ಬಂದಿದ್ದ ಹೆಣ್ಣ್ ಪಿಶಾಚಿ ಥರಾನೇ ಸೀರೆ ಉಟ್ಕಂಜಲೆ ಅದು.. ಅದೇನಾದ್ರೂ ಭೂತ, ಪಿಶಾಚಿ ಆಗಿರ್ಲಿಕ್ಕಿಲ್ಲೆ ಅಲ್ದಾ....?’ ಎಂದು ಕೇಳಲು ಅಜ್ಜಿಯ ಮುಖದ ತುಂಬಾ ಪ್ರೇತ ಕಳೆ ಬಡಿದುಕೊಂಡಿದ್ದು ಇನ್ನೂ ನೆನಪಿದೆ! ಪುಣ್ಯಕ್ಕೆ ಅಲ್ಲಿದ್ದವರೆಲ್ಲಾ ಹೆಣ್ಣಿನ ಕಡೆಯವರೇ ಆಗಿದ್ದರಿಂದ, ಸುದ್ದಿ ಹೆಚ್ಚು ಗುಲ್ಲಾಗದೇ ಅಲ್ಲೇ ಮಗುಮ್ಮಾಗಿ, ನನ್ನಪ್ಪನ ಬೈಗಳುಗಳಿಂದ ಬಚಾವಾಗಿದ್ದೆ. ಆದರೆ ಆಗೀಗ ಬಗ್ಗಿ ಬಗ್ಗಿ ಕಳ್ಳನೆ ಅವಳನ್ನೇ ನೋಡುವಾಗೆಲ್ಲಾ ಆಕೆ ಚೆನ್ನಾಗಿ ಕವಳ ಮೆಲ್ಲುತ್ತಾ, ಕೆಂಪಗಿನ ನಾಲಗೆ ಚಾಚಿ ದೊಡ್ಡದಾಗಿ ನಗುತ್ತಿದ್ದ ಆ ದೃಶ್ಯ ಮಾತ್ರ ಇನ್ನೂ ಚೆನ್ನಾಗೇ ಮನದೊಳಗೇ ಅಚ್ಚಾಗಿದೆ. ಇಂದೂ ಎಷ್ಟೋ ಸಲ ಮದುವೆ, ಉಪನಯನ ಸಮಾರಂಭಗಳಲ್ಲಿ ಬೀಡ ಜಗಿದು ಕೆಂಪೇರಿಸಿಕೊಂಡು ಮಾತನಾಡುವ ಮಹಿಳೆರನ್ನು ಕಂಡಾಗೆಲ್ಲಾ ಫಕ್ಕನೆ ಆ ಗೋಧೂಳಿ ಸಮಯದ ಪೇಚಿನ ಪ್ರಸಂಗದ ನೆನಪಾಗಿ ಬುಸಕ್ಕನೆ ನಗುವುಕ್ಕುತ್ತಿರುತ್ತದೆ. ಇದು ನನ್ನ ಎಡವಟ್ಟಿನ ಕಥೆಯಾದರೆ ನನ್ನ ಚಿಕ್ಕಪ್ಪನ ಮಗಳಂತೂ ಎಷ್ಟೋ ಕಾಲದವರೆಗೂ ಕವಳ ಬೀಳಿಸಿದವರಿಗೆ ಹೆಕ್ಕಿ ಕೊಡುವುದು ಹೋಗಲಿ, ಸ್ವತಃ ತನ್ನ ಕೈಯಿಂದ ಎಲೆ ಜಾರಿದರೂ ಹೆಕ್ಕಿಕೊಳ್ಳದೇ ಹೊಸ ಎಲೆಗೇ ಕೈಹಾಕುತ್ತಿದ್ದಳು! ಹಾಗಿತ್ತು ನಮ್ಮಜ್ಜಿಯ ಕವಳದ ಕಥೆಯ ಎಫೆಕ್ಟು!
ಈಗಲೂ ಅಜ್ಜಿ-ಅಜ್ಜರಿಲ್ಲದ ಮನೆಗೆ ಹೋಗುತ್ತೇವೆ... ಕವಳದ ಸಂಚಿಯೂ ಎಲ್ಲೋ ಒಂದೆಡೆ ಬಿದ್ದಿರುತ್ತದೆ.... ಕಂಬಗಳೆಲ್ಲಾ ಮುದುಕಾಗುತ್ತಿವೆ... ಹೊಸ ಕಥೆಗಳನ್ನು ಹೇಳುತ್ತಿವೆ...! ಎಲೆ-ಅಡಿಕೆ ಕ್ರಮೇಣ ಗುಟ್ಕಾ, ಸುಫಾರಿ ಆಗಿ ಮಾರ್ಪಾಡಾದದ್ದು, ಅದರ ಸಮ್ಮೋಹನಕ್ಕೆ ಒಳಗಾದ ಮುದುಕರಾದಿ ಯುವಕರೆಲ್ಲಾ ಜರ್ದಾರಿಗಳಾಗಿರುವುದು, ಪೇಟೆಯ ವ್ಯಾಮೋಹದ ಭೂತಕ್ಕೆ ಬಲಿಯಾಗಿ, ಕವಳಕ್ಕಾಗಿ (ಅಂದರೆ ಊಟ ಎಂಬರ್ಥವೂ ಹೌದು!) ಕೆಲಸಗಳನ್ನು ಅರಸಿ ಪರವೂರನ್ನು ಸೇರಿದ ಮಂದಿಗಳಿಂದಾಗಿಯೇ ಊರಿನ ಅದೆಷ್ಟೋ ಮನೆಗಳು ಭೂತ ಬಂಗ್ಲೆ ಆಗಿರುವುದು ಮುಂತಾದ ಸತ್ಯ ಕಥೆಗಳು ಸಾಕ್ಷಿ ಸಮೇತ ಕಣ್ಣೆದುರು ಬರುತ್ತಿರುತ್ತವೆ... ಅದೂ ಹೊಸ ಹೊಸ ರೂಪದಲ್ಲಿ, ಹೊಸ ಹೊಸ ರೀತಿಯಲ್ಲಿ! ಅಜ್ಜಿ ಹೇಳುತ್ತಿದ್ದ ಆ ಹೆಣ್ಣು ದೆವ್ವ ಈಗ ಹಳ್ಳಿಗಳನ್ನು ಹೊಕ್ಕಿರುವ ಮಾಯಾವಿಗಿಂತಲೂ ಭಯಾನಕಳಾಗಿದ್ದಳೆಯೇ? ಎಂಬ ಭೂತಾಕಾರದ ಪ್ರಶ್ನೆಗೆ ಉತ್ತರ ಒಳಗೆಲ್ಲೂ ಗೊತ್ತಿದ್ದರೂ, ಒಪ್ಪಿಕೊಳ್ಳಲು ಮನಸ್ಸು ಭೀತಗೊಳ್ಳುತ್ತದೆ. ಇವೆಲ್ಲವನ್ನೂ ಮರೆಯಲು, ನನ್ನ ಮಗಳಿಗೆ ನನ್ನಜ್ಜಿಯ ಕವಳದ ಕಥೆಯನ್ನೂ, ಆ ಕಥಾ ನಾಯಕಿ ಕಮ್ ವಿಲನ್‌ಳಾದ ಹೆಣ್ಣು ಪಿಶಾಚಿಯನ್ನೂ, ತಿರ್ಗಾ ಮುರ್ಗಾ ಸೀರೆಯನ್ನೂ ರೋಚಕವಾಗಿ ಹೇಳುತ್ತಿರುತ್ತೇನೆ. ಆಕೆಯಲ್ಲಿ ವಯಸ್ಸಿಗನುಗುಣವಾದ ಮುಗ್ಧತೆ ಇನ್ನೂ ಜೀವಂತವಾಗಿದೆಯೆನ್ನುವುದಕ್ಕೆ ಕಥೆ ಕೇಳುವಾಗ ದೊಡ್ಡದಾಗಿ ಅರಳಿಕೊಳ್ಳುವ ಅವಳ ಕಣ್ಗಳೊಳಗಿನ ಥ್ರಿಲ್, ಸಣ್ಣ ಕಳವಳವೇ ಸಾಕ್ಷಿ. ಗೂಗಲ್ ಮಾಡಿ ಆ ಹೆಣ್ಣು ಪಿಶಾಚಿಯ ಬಯೋಡಾಟ ನೋಡುವಷ್ಟು ಚಾಣಾಕ್ಷ್ಯತನ ಅವಳಲ್ಲಿ ಬರುವವರೆಗೂ ಅಜ್ಜಿಯ ಆ ಕವಳದ ಹಿಂದಿನ ಕಳವಳದ ಕಥೆ ನಮ್ಮಿಬ್ಬರ ನಡುವೆಯಂತೂ ಜೀವಂತವಾಗಿರುತ್ತದೆ.
-ತೇಜಸ್ವಿನಿ ಹೆಗ್ಡೆ.
ಶುಕ್ರವಾರ, ಸೆಪ್ಟೆಂಬರ್ 19, 2014
ಪಯಣ ಹೋರಾಟದ ಜೊತೆಗೆ.....
ಭಾರತದಲ್ಲಿ ಹೆಣ್ಣು ಎರಡನೆಯ ದರ್ಜೆಯ ಪ್ರಜೆ ಹೌದು/ಅಲ್ಲಾ ಎಂಬೆಲ್ಲಾ ವಾದ ನಡೆಯುತ್ತಲೇ ಇದೆ. ಅದು ನಿಲ್ಲುವುದು ಎಂದೋ ಎನ್ನುವುದೂ ತಿಳಿಯದು. ಆದರೆ ಹೆಣ್ಣು, ಗಂಡು, ಬಡವ, ಶ್ರೀಮಂತ, ಬ್ರಾಹ್ಮಣ, ದಲಿತ, ಹಿಂದು ಮುಸ್ಲಿಮ್ ಈ ಎಲ್ಲಾ ಗೊಂದಲ, ಗಲಾಟೆ, ಚರ್ಚೆ, ಹೋರಾಟ, ಪರದಾಟಗಳ ನಡುವೆ ನಾವು ಅಂದರೆ ವಿಶೇಷವಾಗಿ ಭಾರತೀಯರು ಮರೆತಿರುವುದು ಸಾಮಾಜಿಕ, ಆರ್ಥಿಕ, ಕೌಟುಂಬಿಕ ಎಲ್ಲಾ ರೀತಿಯಲ್ಲೂ ಇನ್ನೂ ಸಾಕಷ್ಟು ಹಿಂದುಳಿದಿರುವ, ಕುಗ್ಗಿ ಮೇಲೇರಲು ಇನ್ನಿಲ್ಲದಂತೇ ಪ್ರಯತ್ನಿಸುತ್ತಾ ಸೋತು ಸೊಪ್ಪಾಗುವ, ಬದುಕುವುದಕ್ಕಾಗಿ ಪ್ರತಿ ಕ್ಷಣ ಹೋರಾಡುವ, ಯಾವ ದರ್ಜೆಗೆ ಸೇರಿದರೆಂದೇ ತಿಳಿಯಲಸಮರ್ಥರಾಗಿರುವ, ಜಾತಿ-ಮತ-ಪಂಥ ಬೇಧವಿಲ್ಲದ ಒಂದು ವರ್ಗವನ್ನು!! ಹೌದು ನಾನಿಲ್ಲಿ ಹೇಳುತ್ತಿರುವ ಅಂಗವಿಕಲರ ಬಗ್ಗೆ...! ನಮ್ಮ ಸಮಾಜದಲ್ಲಿ ಇನ್ನೂ ಅವರ ಬಗ್ಗೆ ಆಳವಾಗಿ ಬೇರು ಬಿಟ್ಟಿರುವ ಒಂದು ರೀತಿಯ ಉಡಾಫೆ, ನಿರ್ಲಕ್ಷ್ಯತನ, ಸಲ್ಲದ ಕರುಣೆ, ಅನುಕಂಪದ ಭಾವದ ಪ್ರದರ್ಶನ, ಅವರ ಸಮಸ್ಯೆ, ಹಕ್ಕುಗಳ ಪ್ರತಿ ತೋರುವ ಅಸಡ್ಡೆಯ ಬಗ್ಗೆ.
ಆಮೀರ್ ನಡೆಸಿಕೊಡುತ್ತಿರುವ ಸತ್ಯಮೇವ ಜಯತೇ ನನಗೆ ಬಹುವಾಗಿ ಮೆಚ್ಚುಗೆಯಾಗಿದ್ದು ಅವನು ನೀಡುತ್ತಿದ್ದ ನಿಖರ ಅಂಕಿ-ಅಂಶಗಳನ್ನು ನೋಡಿ, ಸಮಸ್ಯೆಗೊಳಗಾದ ಜನರ ಬಾಯಿಯಿಂದಲೇ ಹೊರಡಿಸುತ್ತಿದ್ದ ಸತ್ಯಾಪಸತ್ಯೆಗಳ ವೈಖರಿಯನ್ನು ನೋಡಿ. ಮೂರು ಕೋಟಿ ಪಡೆದಿರುವ, ಅಷ್ಟು ಹಣಗಳಿಸಿರುವ.. ಹಾಗೆ ಹೀಗೆ ಎಂದೆಲ್ಲಾ ಆರೋಪಗಳನ್ನು ಪಕ್ಕಕ್ಕಿರಿಸಿ ನನ್ನ ಸೆಳೆದದ್ದು.... ಹೌದು ಇಂಥದ್ದೊಂದು ರಿಯಾಲಿಟೀ ಶೋ ಬೇಕಿತ್ತು... ಇಂಥ ಒಂದು ಸಾಮಾಜಿಕ ಚಳುವಳಿ, ಜಾಗೃತಿಯನ್ನುಂಟು ಮಾಡುವ ಕಾರ್ಯ ಅದೆಷ್ಟು ನಟರು ಮಾಡುತ್ತಿದ್ದಾರೆ ಹೇಳಿ? ಆ ನಿಟ್ಟಿನಲ್ಲೇ ನನಗೆ ಈ ಶೋ ಹೆಚ್ಚು ಇಷ್ಟವಾದದ್ದು.. ವರದಕ್ಷಿಣೆ, ಭ್ರೂಣ ಹತ್ಯೆ, ಅತ್ಯಾಚಾರ, ಭ್ರಷ್ಟಾಚಾರ ಈ ಎಲ್ಲಾ ಪಿಡುಗಗಳ ನಡುವೆ ಆತ ಅಂಗವಿಕಲ ಸಮಸ್ಯೆಗಳು, ಅವರ ದಿನದ ಬವಣೆಗಳು, ಅದಕ್ಕಿರುವ ಪರಿಹಾರ, ಅವರ ಹಕ್ಕುಗಳ ಕುರಿತು ದನಿಯೆತ್ತಿದ್ದ. ಈ ನಡುವೆ ಸ್ಟಾರ್‌ಪ್ಲಸ್‌ನಲ್ಲಿ ಸತ್ಯಮೇವ ಜಯತೆ ಕಾರ್ಯಕ್ರಮದ ಪ್ರಭಾವದಿಂದ ಏನೆಲ್ಲಾ ಸುಧಾರಣೆ, ಜಾಗೃತಿ ಉಂಟಾಗಿದೆ ಅನ್ನುವುದನ್ನು ತೋರುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ನನ್ನ ಸೆಳೆದದ್ದು ಗ್ವಾಲಿಯರ್‌ನ ಜಿಲ್ಲಾಧಿಕಾರಿಯೋರ್‍ವ ತನ್ನ ವ್ಯಾಪ್ತಿಗೆ ಬರುವ ಕಾರ್ಯಕ್ಷೇತ್ರದಲ್ಲೆಲ್ಲಾ ಅಂಗವಿಕಲರಿಗಾಗಿ ರ್ಯಾಂಪ್(Ramp) ಹಾಕಿಸಿದ್ದು...! ಸ್ಕೂಲ್, ಕಾಲೇಜು, ಕ್ಲಿನಿಕ್ ಹೀಗೆ ಎಲ್ಲಾ ಸಾರ್ವಜನಿಕ ಜಾಗಗಳಲ್ಲಿ ಅಂಗವಿಕಲರೂ ಸುಲಭವಾಗಿ ಹೋಗಿ ಬರುವಂತೆ ರೇಂಪ್ ಹಾಕಿಸಿದ್ದನ್ನು ತೋರಿಸಿದಾಗ ಎಲ್ಲೋ ಎನೋ ಸಮಾಧಾನದ ಭಾವ. ಸಂತಸವುಂಟಾಗಲು ಇನ್ನೂ ತುಂಬಾ ಕಾಲ ಕಾಯಬೇಕಿದೆ! ಟಿ.ವಿ ತೋರಿಸಿದ್ದು ಉತ್ಪ್ರೇಕ್ಷೆ, ಅಥವಾ ತುಸು ಹೆಚ್ಚುಗಾರಿಕೆಯಲ್ಲೇ ತೋರಿಸಿದ್ದಾರೆ ಎಂದು ನೀವು, ನಾನು ಭಾವಿಸಿದರೂ... ಅವರು ಹೇಳಿದ್ದರಲ್ಲಿ ಕಾಲು ಪರ್ಸೆಂಟ್ ಆದರೂ ನಿಜವಾಗಿದ್ದರೆ.. ಅದಕ್ಕಿಂತ ದೊಡ್ಡ ಜಾಗೃತಿ ಬೇರಿಲ್ಲ. ಹೀಗಿರುವಾಗ ಈ ಜಾಗೃತಿ ದೇಶದೆಲ್ಲೆಡೆ ಯಾಕಾಗಬಾರದು?
ನಾನು ನನ್ನೊಂದಿಗಾದ ಅತಿ ಸಣ್ಣ ಕಹಿ ಘಟನೆಯನ್ನೂ, ಮತ್ತು ಅದನ್ನು ನಾನು ಎದುರಿಸಿದ್ದ ರೀತಿಯನ್ನೂ ತುಂಬಾ ಹಿಂದೆ ದಟ್ಸ್‌ಕನ್ನಡದಲ್ಲಿ ಬರೆದಿದ್ದೆ.. ಬ್ಲಾಗಲ್ಲೂ ಹಾಕಿದ್ದೆ.. ಲಿಂಕ್ ಇಲ್ಲಿದೆ...
&
ಮೇಲಿನ ಲಿಂಕ್‌ನಲ್ಲಿ ನಾನು ಹೇಳಿದ್ದು ಅತಿ ಸಣ್ಣ ಘಟನೆ.. ಆದರೆ ಇಂಥದ್ದನ್ನು ಪ್ರತಿ ಕ್ಷಣ, ಪ್ರತಿ ದಿವಸ ಎಲ್ಲೆಂದರೆಲ್ಲಿ ನಾನು, ನನ್ನಂಥವರು ಎದುರಿಸುತ್ತಿರುತ್ತೇವೆ. ಉದಾಹರಣೆಗೆ :-
ಮನೆಯ ದಿನಸಿ, ಸಾಮನುಗಳನ್ನು ತರಲು ನಾವು ಮಾಲ್‌ಗಳಿಗೇ ಹೋಗಬೇಕಾಗುತ್ತದೆ (ಬಿಗ್ ಬಝಾರ್ ಅಂಥದ್ದು..). ಕಾರಣ ಲಿಫ್ಟ್ ಇರೋದೇ ಅಂಥ ದೊಡ್ಡ ಅಂಗಡಿಗಳಲ್ಲಿ!!! :( ತಕ್ಕಮಟ್ಟಿಗೆ ಆರ್ಥಿಕವಾಗಿ ಸಬಲರಾದವರಾದರೆ ಸರಿ.. ಹೇಗೋ ಹೋಗಬಹುದು.. ಇಲ್ಲಾ ಅಂದರೆ...? ಇನ್ನು ನನ್ನಂಥವರು ಮಾಲ್‌ಗೆ ಹೋಗಿ ಸಾಮಾನು ಕೊಳ್ಳಲು ಹೋದರೆ... ಮೇಲಿಟ್ಟಿರುವ ಸರಕುಗಳಿಗೆ ಸಹಾಯ ಬೇಕಾದಾಗ, ಅಲ್ಲಿರುವವರು ಸಹಕರಿಸುತ್ತಾರೆ.. ಇಲ್ಲಾ ಎಂದಲ್ಲಾ.. ಆದರೆ ಜೊತೆಗೊಮ್ಮೊಮ್ಮೆ ಈ ರೀತಿಯ ಮಾತೂ ಬರುವುದು "ಛೇ.. ಪಾಪ ಇಷ್ಟು ದೂರ.. ಸಾಮಾನಿಗಾಗಿ ಇಂಥವರು ಬರ್ಬೇಕಾ? ಮನೆಯವ್ರು ಬಂದ್ರೆ ಸಾಕಾಗೊಲ್ವಾ?" ಇತ್ಯಾದಿ... ಇದು ಅನುಕಂಪ ಎಂದು ಸುಮ್ಮನಿದ್ದರೂ, ಮತ್ತೆ ಕೆಲವರು "ವ್ಹೀಲ್‌ಚೇರ್ ಆಚೀಚೆ ಹೋಗೋವಾಗ ಇಕ್ಕಟ್ಟಾಗೊತ್ತೆ.. ಇವ್ರಿಂದ ನಮ್ಗೆ ತೊಂದ್ರೆ ಸಾಮಾನು ಸರ್ಸೋದು, ಇಡೋದು.. ಜೊತೇಲಿರೋವ್ರು ಕೆಲ್ಸ ಮಾಡ್ಬಾರ್ದಾ...?" ಅನ್ನೋ ಅಸಹನೆಯ ಉತ್ತರವೂ ಅದೆಷ್ಟೋ ಸಲ ಕೇಳಿದ್ದೇನೆ....!! ಜನ ಇಲ್ಲಿ ಮರೆವುದು ಒಂದೇ.. ಯಾರೂ ಯಾರಿಗೂ ಅವಲಂಬಿತವಾಗಿ ಬದುಕಲಾಗದು. ಅವರವರ ಬದುಕು ಅವರದ್ದು.. ಸಹಕಾರ, ಸಲಹೆಗಳಿಗೆ ಸದಾ ಸ್ವಾಗತ.. ಬೇಕಾದ್ದು. ಅದು ಬಿಟ್ಟು ನಿನ್ನಿಂದಾಗದು, ಅಶಕ್ತ, ಸುಮ್ಮನೆ ಕೂತಿರು.. ನಾವಿದ್ದೀವಿ ಎಂದು ಹೇಳುವುದರಿಂದ ಗಟ್ಟಿ ಮುಟ್ಟಾದ ಮನುಷ್ಯನೂ ಕುಗ್ಗೇ ಹೋಗುತ್ತಾನೆ ಕ್ರಮೇಣ. ಇಂತಿರುವಾಗ ಅಂಗವಿಕಲರ ಪಾಡೇನು? ಇಲ್ಲಿ ನನ್ನ ವಿಷಯವೇ ಬೇರೆ... ನಾನೆಂದೂ ಇಂಥಾ ಮಾತುಗಳಿಗೆ, ವರ್ತನೆಗೆ ತಲೆಕೆಡಿಸಿಕೊಳ್ಳುವುದ ಬಿಟ್ಟು ದಶಕಗಳೇ ಸಂದಿವೆ... ಆದರೂ ಒಮ್ಮೊಮ್ಮೆ ರೋಸಿ ಹೋಗಿ ಕಟುವಾಗಿ ಉತ್ತರಿಸುವುದುಂಟು. ಆದರೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಸಿಗದ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಂಬಲವಿಲ್ಲದ ಅಂಗವಿಕಲರ ಗತಿಯೇನು? ಸಮಾಜ ಅವರಿಗಾಗಿ ಎಷ್ಟು ಕಾರ್ಯೋನ್ಮುಖವಾಗಿದೆ? ಇವೆಲ್ಲವನ್ನೂ ನೋಡಾಲೇಬೇಕಾಗಿದೆ. ಜಾಗೃತಿ ಮೂಡಿಸಲೇಬೇಕಾಗಿದೆ.
ಎಲ್ಲರಂತೆ ಸಹಜವಾಗಿ, ನಿರ್ಭಯವಾಗಿ, ಸ್ವಾಲಂಬನೆಯಿಂದ ಬದುಕುವ ಹಕ್ಕು ಅಂಗವಿಕಲರದ್ದೂ ಹೌದು. ಆ ಹಕ್ಕನ್ನು ನಮ್ಮ ಸರ್ಕಾರ, ಸಮಾಜ ಕೆಲಸಕ್ಕೆ ಬಾರದ, ಕಾನೂನಿನಲ್ಲಿದ್ದರೂ ಸಮರ್ಪಕವಾಗಿ ಜಾರಿಗೆ ಬರದ ಕಾಯಿದೆಗಳಿಂದ ವಂಚಿತಗೊಳಿಸಿದೆ. ಯಾವುದೇ ಅಂಗಡಿಗಳಿರಲಿ, ಎಂಥಕ್ಕೇ ಸಾರ್ವಜನಿಕ ಸ್ಥಳವಾಗಿರಲಿ.. ಅಂಗನ್ಯೂನತೆಯುಳ್ಳವರು ಸುಲಭವಾಗಿ ಹೋಗಿ ಬರುವಂತೇ ವ್ಯವಸ್ಥೆ ಕಲ್ಪಿಸಲು ಕನಿಷ್ಠ ರೇಂಪ್ ವ್ಯವಸ್ಥೆಯೂ ಇರುವುದಿಲ್ಲ ಎಷ್ಟೋ ಕಡೆ!! ಮೆಟ್ಟಿಲುಗಳಿಲ್ಲದೇ ಯಾವುದೇ ಕಟ್ಟಡ ಕಟ್ಟಲಾಗದು ಒಪ್ಪುವೆ.. ಅದರೆ ಬದಿಯಲ್ಲೊಂದು ರೇಂಪ್ ಹಾಕಿಸಲು ಲಕ್ಷಗಟ್ಟಲೆ ಬೇಕೆ? ಕಟ್ಟು ನಿಟ್ಟಾದ ಕಾನೂನು ಯಾಕಿಲ್ಲ? ಕಟ್ಟಡ ಕಟ್ಟುವಾಗಲೇ ಇಂಥಾ ಒಂದು ಸೌಲಭ್ಯವಿದೆಯೇ ಎಂದು ನೋಡಿಯೇ ಒಪ್ಪಿಗೆ ನೋಡಲು ಸರ್ಕಾರ ಮುಂದಾಗ ಬೇಕು. ನಮ್ಮಲ್ಲಿ ತಮಾಷೆ ಎಂದರೆ ಒರ್ಥೋಪೆಡಿಕ್ ಡಾಕ್ಟರ್ ಇರೋದು ಎರಡನೆಯ ಮಹಡಿಯಲ್ಲಿ ಅದೂ ಲಿಫ್ಟ್ ಇಲ್ಲದೇ!!! ಸರ್ವರಿಗೂ ಸಮಬಾಳು, ಸಮಾನತೆ ಎಲ್ಲಿದೆ ಇವರ ವಿಷಯದಲ್ಲಿ? ಈ ನಿಟ್ಟಿನಲ್ಲಿ ನಿಜಕ್ಕೂ ವಿದೇಶದಲ್ಲಿರುವ ಸುವ್ಯವಸ್ಥೆ, ಅಲ್ಲಿಯ ಜನರ ವರ್ತನೆ (ಅಂಗವಿಕಲರ ಪ್ರತಿ..) ತುಂಬಾ ಮಾದರಿ!!!
ಒಟ್ಟಿನಲ್ಲಿ ಆರ್ಥಿಕವಾಗಿ ಸಬಲರೋ ದುರ್ಬಲರೋ ಹೋರಾಟ, ಮಾನಸಿಕ ತೊಳಲಾಟ, ಹಿಂಸೆ ಇವರಿಗೆ ಕಟ್ಟಿಟ್ಟದ್ದೇ! ಇಂಥವರು ಇಂಥಾ ಕೆಲಸಕ್ಕೆ ಮಾತ್ರ ಲಾಯಕ್ಕಿಇ... ಇಲ್ಲದ ಹೋಗದ ಉಪಧ್ವಾನ ಯಾಕೆ ಅನ್ನೋ ಚೌಕಟ್ಟಿನ ದೃಷ್ಟೀಕೋನದಿಂದ ಸಮಾಜ ಮುಕ್ತವಾಗೇ ಇಲ್ಲಾ ಇನ್ನೂ! ನನ್ನ ತಂದೆ, ತಾಯಿ, ತಂಗಿಯರ ಪ್ರೋಸಾಹ, ಅರೆ ನಿಮಿಷವೂ ನಾನು ಹೀಗೆ ಎನ್ನುವ ತುಸು ಭಾವವೂ ಬರದಂತೇ ಬೆಳೆಸಿದ ಅವರ ಆತ್ಮವಿಶ್ವಾಸ ಭರಿತ ಬೆಂಬಲದಿಂದ ನಾನಿಂದು ಕೀಳಿರಮೆ.. ಅಥವಾ ಯಾವುದೇ ಹಿಂಜರಿಕೆಯಿಂದ ಕುಗ್ಗಿಲ್ಲ.. ಆ ರೀತಿ ನನ್ನ ಬಾಲ್ಯದಿಂದಲೂ ಬೆಳೆಸಲೂ ಇಲ್ಲಾ. ಆದರೆ ಎಷ್ಟು ಜನ ಮನೆಯವರು, ಹೆತ್ತವರು, ಸ್ನೇಹಿತರು ಈ ರೀತಿಯ ಬೆಂಬಲ, ಪ್ರೋತ್ಸಾಹ, ಬದುಕಿನಿದ್ದಕ್ಕೂ ತಾಳ್ಮೆಯ ಸಹಕಾರ ನೀಡುತ್ತಾರೆ? ಆ ನಿಟ್ಟಿನಲ್ಲಿ ನಾನು ಪುಣ್ಯವಂತೆಯೇ!! ಆದರೆ ನನಗೊಲಿದಿರುವ ಸವಲತ್ತುಗಳಿಂದ ನಾನು ಖುಶಿ ಪಡುವ ಬದಲು ಪ್ರತಿ ದಿವಸ ನನ್ನಂಥವರಿನ್ನೂ ಕತ್ತಲ ಕೂಪದಲ್ಲಿ ಬೇಯುತ್ತಿರುವುದನ್ನು.. ಹಣವಿದ್ದರೂ ಮನೆಯವರ ಪ್ರೋತ್ಸಾಹವಿಲ್ಲದೇ ಅನಕ್ಷರಸ್ಥರಾಗಿರುವುದನ್ನು... ಹಲವೆಡೆ ಹೆತ್ತವರ, ನೆಂಟರಿಷ್ಟರ, ಸಮಾಜದ ತಿರಸ್ಕಾರಕ್ಕೊಳಗಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದನ್ನು ಕಂಡು ತುಂಬಾ ಹಿಂಸೆ ಅನುಭವಿಸುತ್ತಿರುತ್ತೇನೆ. ಅಸ್ಪೃಶ್ಯತೆ ಜಾತಿಗೆ ಮಾತ್ರವಲ್ಲ.. ನಮ್ಮಂಥವರನ್ನೂ ಕಾಡುತ್ತಿದೆ... ಆದರೆ ನಿಜವಾಗಿ ಸಹಕಾರ, ಬೆಂಬಲ ಸಿಗಬೇಕಾದವರಿಗಾಗಿ ಸಮಾಜದ ಅರ್ಧದಷ್ಟು ಭಾಗವೂ ನಿಲ್ಲುತ್ತಿಲ್ಲ!! ಇದರರ್ಥ ಎಲ್ಲರೂ ಹೀಗೇ ಎಂದು ಖಂಡಿತ ಹೇಳುತ್ತಿಲ್ಲಾ. ನಾನು ಬೆಳೆದ ರೀತಿಗೆ, ನನ್ನೊಳಗಿನ ಆತ್ಮವಿಶ್ವಾಸಕ್ಕೆ ಸ್ನೇಹಿತರ, ಇದೇ ಸಮಾಜದ ಹಲವು ಸಹೃದಯರು ಕಾರಣ. ಆದರೆ ಅವರ/ಅಂಥವರ ಸಂಖ್ಯೆ ಹೆಚ್ಚಾಗಬೇಕು. ಕಾರಣ ಎಲ್ಲರೂ ನನ್ನಂಥ ಬಾಳ್ವೆ ಸಮನಾಗಿ ಅರ್ಹರು ಮತ್ತು ಅದು ಅವರ ಹಕ್ಕು!!
ಬಾಲ್ಯದಲ್ಲಿ ಮೊತ್ತ ಮೊದಲು ನನ್ನ ಶಾಲೆಗೆ ಸೇರಿಸುವಾಗ ಅಪ್ಪನ ಸ್ನೇಹಿತವರ್ಗ, ಸಮಾಜ ಅವರಿಗಿತ್ತ ಸಲಹೆ ಎಂದರೆ ‘ಇಂಥವರಿಗಾಗಿಯೇ ಇರುವ ವಿಶೇಷ ಸ್ಕೂಲ್‌ಗೆ ಸೇರಿಸಿಬಿಡಿ..." ಆದರೆ ನನ್ನ ಚೈತನ್ಯದ ಪ್ರತಿರೋಧ, ಅಪ್ಪ ಅಮ್ಮನ ಧೈರ್ಯ ಹಾಗೆ ಮಾಡದೇ ಎಲ್ಲರಂತೇ ನಾರ್ಮಲ್ ಸ್ಕೂಲ್‌ಗೇ ಸೇರಿಸಲು ಪ್ರೇರೇಪಿಸಿತು. ಇದರ್ಥ.. ಅಂಥ ಸ್ಕೂಲ್‌ಗೆ ಹೋಗಲೇ ಬಾರದೆಂದಲ್ಲಾ... ಸಾಧ್ಯವಾದಷ್ಟೂ ಅಂಗವಿಕಲರು ಸಮಾಜದ ಮುಖ್ಯವಾಹಿನಿಯ ಜೊತೆ ಜೊತೆಯಲ್ಲೇ.. ಎಲ್ಲರಂತೇ ನಾವು ಎನ್ನುವ ಭಾವದಲ್ಲಿ ಬೆರೆತು ಬೆಳೆದಂತೇ ಆತ್ಮವಿಶ್ವಾಸ, ಧೈರ್ಯ ತನ್ನಿಂದ ತಾನೇ ಬಲಿಯುವುದು.. ಬಲಿಷ್ಠಗೊಳ್ಳುವುದು! ಆದರೆ ಒಂದನೆಯ ತರಗತಿಯಲ್ಲಿ ಮಂಗಳೂರಿನ ಶಾಲೆಯೊಂದು ನನಗೆ ಪ್ರವೇಶ ಕೊಡಲು ಹಿಂದೇಟು ಹಾಕಿತ್ತು! ಕಾರಣ ನಾನು ನಡೆಯಲಾಗದು... ನನ್ನಂಥವರಿಗೆ ಕಲಿಸುವುದು ಹೇಗೆ? ಇವಳಿಂದ ಇತರರಿಗೂ ತೊಂದರೆ ಆಗಬಹುದು ಅನ್ನೋ ಕ್ಷುಲ್ಲಕ ಪ್ರಶ್ನೆ ಮುಂದೂಡಿ! ಹಠ ಹೊತ್ತ ಅಪ್ಪ ಹೋರಾಡಿ ಅಲ್ಲೇ ಒಂದು ವರುಷ ಓದಿಸಿ ಮರುವರುಷ ಕೆನರಾ ಸ್ಕೂಲ್‌ಗೆ ದಾಖಲಿಸಿದ್ದ. (ಆ ಸ್ಕೂಲ್‌ನಲ್ಲಿ ಏನೂ ತೊಂದರೆ ಆಗದೇ ಪ್ರವೇಶ ಸಿಕ್ಕಿತ್ತು.) ಎಲ್ಲಾ ಒಂದೇ ರೀತಿ ಇರದು.. ಆದರೆ ಇನ್ನೂ ಆ ಭಾವ ಸಾಕಷ್ಟು ಇದೆ ನಮ್ಮಲ್ಲಿ!! ಈಗಲೂ ಅಂಗವಿಕಲರನ್ನು ಪ್ರತಿಷ್ಠಿತ ಸ್ಕೂಲ್‌ಗಳಲ್ಲಿ ಸೇರಿಸಿಕೊಳ್ಳುವಾಗ ತುಸು ಅನುಮಾನ ತೋರಿದ್ದ ಘಟನೆಗಳೂ ಕೇಳಿ ಬಂದಿವೆ!! ಮುಂದೆ ಕಾಲೇಜಿನಲ್ಲಿ ಸೈನ್ಸ್ ತೆಗೆದುಕೊಳ್ಳ ಹೊರಟಾಗ ‘ಇವಳಿಂದ ಪ್ರಾಕ್ಟಿಕಲ್ಸ್ ಸಾಧ್ಯವೇ? ಕಷ್ಟ... ಬೇಡ’ ಎಂದವರೇ ನೂರಾರು ಜನ! ಇಲ್ಲಿ ಹಠ ನನ್ನದಾಗಿತ್ತು... ಕೆಮೆಸ್ಟ್ರಿಯಲ್ಲಿ ಹೈಯೆಸ್ಟ್ ಸ್ಕೋರ್ ಮಾಡಿ ಬಿ.ಎಸ್ಸಿ. ತೇರ್ಗಡೆ ಮಾಡಿದಾಗ ಅಭಿನಂದಿಸಿದವರೂ ಅವರೇ ಆಗಿದ್ದರು. ಪಿ.ಯು.ಸಿಯಲ್ಲಿ ಉತ್ತಮ ಅಂಕ ಇದ್ದು ಮೆರಿಟ್‌ನಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಸೀಟ್ ಸಿಕ್ಕಿದ್ದರೂ, ನಾನು ಮಾಡದಿರುವುದಕ್ಕೆ ಕಾರಣ ಕಟ್ಟಡಗಳು ನನ್ನ ಹೊತ್ತಲು ಅಸಮರ್ಥವಾಗಿದ್ದು! ಲಿಫ್ಟ್ ಇಲ್ಲದ ಮಹಡಿಗಳಿಂದಾಗಿ ಓದಲು ಆಗದಿದದ್ದು!! ಬಿ.ಎಸ್ಸಿ.ಯಲ್ಲಿ ಅತ್ಯುತ್ತಮ ಅಂಕಗಳಿದ್ದರೂ ನನ್ನಿಷ್ಟದ ಮೈಕ್ರೋ ಬಯಾಲಜಿ ಮಾಡಲಾಗದಿದ್ದುದಕ್ಕೂ ಕಾರಣ ಇದೇ...!!! ಈಗ ಹೇಳಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿದ್ದೂ, ಹೆತ್ತವರ, ಸ್ನೇಹಿತರ ಬೆಂಬಲವಿದ್ದೂ ನನ್ನಿಂದಾಗದ್ದು, ಏನೂ ಇಲ್ಲದ, ಸಾಧಿಸುವ ಹುಮ್ಮಸ್ಸಿದ್ದೂ ಮಾಡಲಾಗದ.. ಒಂದಿಂಚೂ ನಡೆಯಲಾಗದೇ ಹೊರ ಪ್ರಪಂಚದಿಂದಲೇ ವಿಮುಖವಾಗಿರುವ ಅದೆಷ್ಟು ಅಂಗವಿಕಲರಿದ್ದಾರೆ ನಮ್ಮೊಂದಿಗೆ?! ಮೇಲೆ ಹೇಳಿರುವ ಘಟನೆ ಒಂದೆರಡು ಸ್ಯಾಂಪಲ್ಸ್ ಅಷ್ಟೇ. ಹುಟ್ಟಿದ ದಿನದಿಂದ, ಈವರೆಗೂ, ಈ ಕ್ಷಣವೂ ಸಾಕಷ್ಟು ಅನುಭವಗಳನ್ನು ಬದುಕು ನೀಡುತ್ತಲೇ ಬಂದಿದೆ. ಆದರೆ ಸಮಾಜ ತನ್ನ ದೃಷ್ಟೀಕೋನದಲ್ಲಿ, ವರ್ತನೆಯಲ್ಲಿ ಸಾಕಷ್ಟು ಸುಧಾರಣೆಯನ್ನೂ ತೋರುತ್ತಿರುವುದು ತುಸು ಸಮಾಧಾನವನ್ನೂ ತಂದಿದೆ.
ನಾನಿದನ್ನೆಲ್ಲಾ ಹೇಳಿದ್ದು ನಾನೇನೋ ಸಾಧನೆ ಮಾಡಿರುವೆ ಎಂದು ಹೇಳಿಕೊಳ್ಳಲು ಅಲ್ಲವೇ ಅಲ್ಲಾ... ಅಥವಾ ಯಾವುದೇ ದಯೆ, ಅನುಕಂಪಕ್ಕಂತೂ ಖಂಡಿತ ಅಲ್ಲಾ! ತಿಳಿಯದ, ಅರಿವಿಗೆ ಬಾರದ ಸಹೃದಯವುಳ್ಳ ಎಲ್ಲರಲ್ಲೂ ಜಾಗೃತಿ ಮೂಡಿಸಲು. ಇಷ್ಟೆಲ್ಲ ಕಳಕಳಿ ಇರುವ ನಾನೇನು ಮಾಡಿರುವೆ? ಎಂದೆಣಿಸದಿರಿ... ನನ್ನದೇ ಆದ ರೀತಿಯಲ್ಲಿ... ಶಕ್ತಿ ಮೀರಿ ಪ್ರಯತ್ನಿಸುತ್ತಲೇ ಇದ್ದೇನೆ. ನನ್ನಂಥವರಿಗೆ ಪ್ರೇರಣೆಯಾಗಿ ಮಾಲತಿ ಹೊಳ್ಳರಂಥ ವಿಶಿಷ್ಟ ಸಾಧಕರಿದ್ದಾರೆ. ಜಾತಿ ಮತ ಬೇಧವಿಲ್ಲದೇ ರಾಜ್ಯದ ನಾನಾ ಭಾಗದಿಂದ ಅವರು ಬಡ ಅಂಗವಿಕಲ ಮಕ್ಕಳನ್ನು ಕರೆತಂದು ಉಚಿತವಾಗಿ ಅವರಿಗೆಲ್ಲಾ ಊಟ, ವಸತಿ, ಬಟ್ಟೆಯ ಜೊತೆಗೇ ಆತ್ಮವಿಶ್ವಾಸ, ಶಿಕ್ಷಣ ಸೌಲಭ್ಯವನ್ನು ನೀಡಿ ಮಾತೃ ಪ್ರೇಮವನ್ನು ಸ್ಫುರಿಸುತ್ತಿರುವ ಅವರ ‘ಮಾತೃ ಛಾಯಾ’ವಿದೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್- http://www.manasa-hegde.blogspot.in/2011/01/blog-post_17.html
ಇದು ಕೇವಲ ದೈಹಿಕ ಅಂಗವೈಕಲ್ಯವಿರುವರ ಪಾಡಾದರೆ, ತುಸು ಮಾನಸಿಕ ಅಸ್ವಸ್ಥರ ಪಾಡು ಕೇಳುವುದೇ ಬೇಡಾ!!! ಆಟಿಸ್ಟಿಕ್‌ಗೂ ಬುದ್ಧಿ ಮಾಂದ್ಯರಿಗೂ ಎಂಥಾ ದೊಡ್ಡ ವ್ಯತ್ಯಾಸವಿದೆ.. ಪ್ರತಿಯೊಂದು ಸಮಸ್ಯೆಯೂ ಹೇಗೆ ವಿಭಿನ್ನವಾಗಿದೆ... ಪ್ರತಿ ಸಮಸ್ಯೆಯನ್ನೂ ಎದುರಿಸಲೂ ಎಷ್ಟೆಲ್ಲಾ ಮಾನಸಿಕ ತಯಾರಿ ಸ್ಥೈರ್ಯ ಬೇಕಾಗುತ್ತದೆ ಎನ್ನುವುದನ್ನೆಲ್ಲಾ ಸಮಾಜಕ್ಕೆ ಎಡ್ಯುಕೇಟ್ ಮಾಡಲೇಬೇಕಾಗಿದೆ ಇಂದು! ಈ ಸಮಾಜದಲ್ಲಿ ಹಲವರು ಅದೆಷ್ಟು ಅಸೂಕ್ಷ್ಮತೆ ಹಾಗೂ ಸಂವೇದನಾರಹಿತರಾಗಿರುತ್ತಾರೆ ಎಂದರೆ, ಆಟಿಸ್ಟಿಕ್ ಎಂದರೆ ‘ಹುಚ್ಚನಾ/ಹುಚ್ಚಳಾ’ ಎಂದು ಕೇಳುವಷ್ಟು!!! :( ಸಮಾಜ ಆ ಮಗುವನ್ನು, ಮನೆಯವರನ್ನು ಇನ್ನಿಲ್ಲದಂತೇ ಘಾಸಿಗೊಳಿಸಿದ್ದನ್ನು.... ಅಂಥವರಿಗೆ ನಾನು ತಿಳಿ ಹೇಳಲು ಹೋಗಿ ನಾನೇ ಚುಚ್ಚು ಮಾತು ಕೇಳಿದ್ದನ್ನೂ ಹೇಳಿದರೆ ಕುರೂಪ ಇನ್ನೂ ವಿಕಾರಗೊಳ್ಳಬಹುದು.
ಸಮಾಜ ಬದಲಾಗುತ್ತಿದೆ.. ನಿಜ... ಮತ್ತು ಕೆಲವೊಂದು ಬದಲಾವಣೆಗಳು ನಿಧಾನವಾಗಿ ಆಗಬೇಕಾಗುತ್ತದೆ. ಆದರೆ ಪ್ರತಿ ಹೆಜ್ಜೆಯೂ ನಮ್ಮದು ಧನಾತ್ಮಕ ಬದಲಾವಣೆಯತ್ತ ಸಾಗಿದಾಗ ಮಾತ್ರ ಅದು ಯಶಸ್ಸುಗೊಳ್ಳುವುದು. ನಮ್ಮಲ್ಲಿ ಈಗಲೂ ಧಾರಾವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ಅಂಗವಿಕಲರೆಂದರೆ ಅಪಾರ ಕರುಣೆ, ದಯೆಗೆ ಪಾತ್ರರು.. ಅವರಿಂದ ಏನೂ ಸಾಧ್ಯವಿಲ್ಲ.. ನಿಃಶ್ಯಕ್ತರೆಂದೇ ತೋರಿಸಲಾಗುತ್ತದೆ. ಅದರ ಬದಲು ಅವರಿಂದೇನೆನು ಸಾಧ್ಯ ಎನ್ನುವುದನ್ನು ಸಹಜವಾಗಿ ತೋರಿಸುವ ಯತ್ನ ಮತ್ತಷ್ಟು ಆದರೆ ಜನಜಾಗೃತಿ ಬಹು ಸುಲಭವೆಂದೆನಿಸುತ್ತದೆ. ಆ ನಿಟ್ಟಿನಲ್ಲೂ ಚಿಂತನೆ ಅತ್ಯಗತ್ಯ.
ಕಳಕಳಿಯ ವಿನಂತಿ:-
ದಯವಿಟ್ಟು ನೀವು ನಿಮ್ಮ ಸುತ್ತ ಮುತ್ತ ಅಂಗವಿಕಲರನ್ನು ಕಂಡರೆ, ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್‌ಗಳಲ್ಲಿ ಅವರೊಂದಿಗೆ ಯಾರಾದರೂ ಒರಟಾಗಿ ವರ್ತಿಸುವುದೋ, ಇಲ್ಲ ಅಸಹಕಾರ ನೀಡುವುದೋ ಮಾಡುವುದ ಕಂಡರೆ ಪ್ರತಿಭಟಿಸಿ. ಅವರೂ ನಿಮ್ಮಂತೇ ಎಲ್ಲಾ ರೀತಿಯಲ್ಲೂ ಶಕ್ತರು ಎನ್ನುವುದನ್ನು ಮನಗಂಡೇ ಸಹಕಾರ ನೀಡಿ. ಇಷ್ಟು ಕಷ್ಟ ಪಟ್ಟು ಇವರ್ಯಾಕೆ ಬಂದರೋ ಪಾಪ? ಯಾರೂ ಇಲ್ಲವೇ ಇವರಿಗೆ? ಎಂಬ ಸಲ್ಲದ ಕರುಣೆ ಬೇಡ. ನಿಮ್ಮ ಪರಿಸರದಲ್ಲಿ ಅನಕ್ಷರಸ್ಥರಿದ್ದರೆ ಕಲಿಕೆಗೆ ಪ್ರೇರೇಪಿಸಿ.... ಸಹಕರಿಸಿ. ವಿದ್ಯೆ ಅತ್ಯವಶ್ಯಕ... ಅದರಿಂದಲೇ ಹೊರ ಪ್ರಪಂಚಕ್ಕೆ ನಾವು ತೆರೆದುಕೊಳ್ಳಬಲ್ಲೆವು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲೂ ಅಂಗವಿಕಲರು ಸುಲಭವಾಗಿ ಹೋಗಿ ಬರುವಂತೇ ವ್ಯವಸ್ಥೆ ಕಲ್ಪಿಸಲು ಎಲ್ಲರೂ ಒಗ್ಗಟ್ಟಾಗಿ ಸರಕಾರವನ್ನು ಒತ್ತಾಯಿಸಬೇಕು. ಅಂಗವಿಕಲತೆ ಒಂದು ಶಾಪ, ಪ್ರಾರಾಬ್ಧ ಕರ್ಮ ಅನ್ನುವ ಕೂಪ ಮಂಡೂಕತ್ವವನ್ನು ತೊಡೆದು ಹಾಕಿ ಒಳಗಿನ ಚೈತನ್ಯದ ಮುಂದೆ ಎಲ್ಲವೂ ನಗಣ್ಯ ಅನ್ನುವುದನ್ನು ಉದ್ದೀಪನಗೊಳಿಸಿಗೊಳ್ಳಬೇಕು.. ಹಾಗೆ ಉದ್ದೀಪಿಸಿಕೊಳ್ಳಲು ಪ್ರೇರೇಪಿಸಬೇಕು. ಮುಖ್ಯವಾಹಿನಿಗೆ ಇವರೂ ಬಂದು.. ಸಮಬಾಳು, ಸಮ ಪಾಲು/ಹಕ್ಕು ಇವರಿಗೂ ಸಿಗಲೇಬೇಕು. ಆ ನಿಟ್ಟಿನಲ್ಲಿ ಸಮಾಜ ಕಾರ್ಯೋನ್ಮುಖವಾಗಲೇ ಬೇಕು. ಸಕಾಲದಲ್ಲಿ, ಸರಿಯಾದ ರೀತಿಯಲ್ಲಿ, ತುಸುವೇ ತುಸು ತಾಳ್ಮೆಯಿಂದ ಮನೆಯವರು, ಬಾಲ್ಯದಲ್ಲೇ ಪ್ರೋತ್ಸಾಹ, ಬೆಂಬಲ ಸಹಕಾರ ನೀಡಿದರೆ ಎಂಥಾ ನ್ಯೂನ್ಯತೆಯನ್ನೂ ಜಯಿಸಬಹುದು... ಓರ್ವ ಅಂಗವಿಕಲನೂ ಎಲ್ಲರಂತೇ ಸಾಮಾನ್ಯವಾಗಿ ಎಲ್ಲಾ ರೀತಿಯ ಅಂದರೆ ಮಗುವಿನ ಪಾಲನೆ, ಬಟ್ಟೆ, ಪಾತ್ರೆ, ಅಡಿಗೆ ಇತ್ಯಾದಿ ಮೆನವಾರ್ತೆಗಳ ಜೊತೆಗೇ ಹೊರಗಿನ ಕಾರ್ಯಗಳನ್ನೂ ನಿಭಾಯಿಸಬಲ್ಲ ಎನ್ನುವುದಕ್ಕೆ ಸಾಕ್ಷಿ ನಾನೇ :) ಹೀಗಾಗಿಯೇ ಹೆತ್ತವರು, ಆಪ್ತೇಷ್ಟರು, ಸ್ನೇಹಿತರು, ಸಹೃದಯರು ಈ ನಿಟ್ಟಿನಲ್ಲಿ ಒಮ್ಮೆ ಚಿಂತನೆ ನಡೆಸಿ... ಎಂದು ಎದೆಯಾಳದಿಂದ ವಿನಂತಿಸುತ್ತಿರುವೆ.
(ಸಹನೆಯಿಂದ ಲಿಂಕ್‌ಗಳ ಜೊತೆಗೆ ಲೇಖನವನ್ನೋದಿದವರಿಗೆಲ್ಲಾ ಧನ್ಯವಾದಗಳು. :) )
-ತೇಜಸ್ವಿನಿ.
ಸೋಮವಾರ, ಸೆಪ್ಟೆಂಬರ್ 1, 2014
ಅವಧೇಶ್ವರಿ
ಎಲ್ಲಿಯವರೆಗೆ ಪರಿಸ್ಥಿತಿ ವಿಚಾರದ ಸಾಧ್ಯಾಸಾಧ್ಯತೆಯ ಅಂಕೆಯಲ್ಲಿ ಇರುತ್ತದೆ, ಅಲ್ಲಿಯವರೆಗೆ ವೈಚಾರಿಕತೆ ಕೆಲಸ ಮಾಡಬಲ್ಲದು. ಎಲ್ಲಿ ವಿಚಾರದ ಅಂಕೆಗೆ ಸಿಕ್ಕದ ತೊಡುಕು ಉಂಟಾಗುತ್ತದೆ, ಅಲ್ಲಿ..... ಬುದ್ಧಿವಂತ ಕೆಂಗೆಡುತ್ತಾನೆ. ಶ್ರದ್ಧಾವಂತ ದೇವರಿಗೆ ಮೊರೆ ಹೋಗುತ್ತಾನೆ. ದೇವರನ್ನು ನಂಬದವನಿಗೆ ದೇವರೇ ಗತಿ. ಒಳಗೆಯೇ ಕನಲಿ ಬೆಂಡಾಗುತ್ತಾನೆ.
****
ಯುದ್ಧದ ಬೆದರಿಕೆ ಹಾಕಬೇಕೇ ಹೊರತು ಪ್ರತ್ಯಕ್ಷ ಯುದ್ಧ ಸಾರಬಾರದು. ಬಹಿರಂಗ ವೈಮನಸ್ಯ ತೋರಿದರೆ ಬಾಳುವುದು ಕಷ್ಟ. ರಾಜ್ಯದ ಆಸ್ತಿವಾರ ಸಡಿಲಾಗುತದೆ. ರಾಜ-ಪ್ರಜೆ, ಅಧಿಕಾರಿ-ಸೇವಕ, ತಂದೆ-ಮಗ, ಬ್ರಾಹ್ಮಣ-ಕ್ಷತ್ರಿಯ, ಋಗ್ವೇದಿ-ಅಥರ್ವವೇದಿ, ಈ ಓಣಿಯವ-ಆ ಓಣಿಯವ .... ವಿಘಟನೆಗೆ ಮಿತಿಯುಂಟೇ? ನಮ್ಮ ಉದ್ದಿಶ್ಯಗಳು ಶುದ್ಧವಾಗಬೇಕು. ನಾಲ್ಕು ಜನರು ಮನಮೆಚ್ಚುವಂತಿರಬೇಕು. ಹೃದಯ ಸಾಕ್ಷಿ ಹೇಳುವಷ್ಟು ಪರಿಶುದ್ಧ ಧೋರಣೆ ಇರಬೇಕು. ವಿರೋಧವಾದಾಗ್ಯೂ ಸ್ವಂತದ ಅಂತರಾತ್ಮ ಕದಡಬಾರದು. (-`ಅವಧೇಶ್ವರಿ' ಕಾದಂಬರಿಯಿಂದಾಯ್ದ ನನ್ನ ಮೆಚ್ಚಿನ ಸಾಲುಗಳು..)
****
‘ಅವಧೇಶ್ವರಿ’ ಪುಸ್ತಕವನ್ನೋದಿಯಾಯಿತು! ಅಬ್ಬಾ ಎಂಥಾ ಅದ್ಭುತ ಪರಿಕಲ್ಪನೆ! ಹಂತ ಹಂತದಲ್ಲೂ ಪ್ರಸ್ತುತ ರಾಜಕೀಯ ಸ್ಥಿತಿ-ಗತಿಯನ್ನು, ಜನರ ಮನೋವ್ಯಾಪಾರಗಳನ್ನು, ಸಮಾಜದೊಳಗಿನ ವ್ಯವಸ್ಥೆ/ಅವ್ಯವಸ್ಥೆಯನ್ನು, ವೇದ ಕಾಲದ ರಾಜಕೀಯ ಸ್ಥಿತಿಗತಿಗಳೊಂದಿಗೆ, ಜನ ಜೀವನ, ರೀತಿ-ನೀತಿಗಳೊಂದಿಗೆ ಮನಸ್ಸು ಅಪ್ರಯತ್ನವಾಗಿ ಹೋಲಿಸಿಕೊಂಡು ನೋಡುತ್ತಿದೆ!!! ಪ್ರತಿ ಪುಟವೂ ಅದೆಷ್ಟೋ ಚಿಂತನೆಗಳಿಗೆ ಒರೆಹಚ್ಚುವಂತಿದೆ!! ಲೇಖಕರು ತಮ್ಮ ಮಾತುಗಳಲ್ಲಿ ಈ ಕಾದಂಬರಿಗೆ ಆಧಾರವಾಗಿರುವ ಸಾಕ್ಷಿಗಳನ್ನು, ತಾಳೆಗರಿ, ವಸ್ತುಸಂಗ್ರಹಗಳನ್ನು ನಮ್ಮ ಮುಂದಿರಿಸಿದ್ದರಿಂದಲೋ ಇಲ್ಲಾ ಕಾದಂಬರಿಯಲ್ಲಿ ಬರುವ ಪಾತ್ರಗಳು ಒದಗಿಸಿರುವ ಅಚ್ಚ ಪ್ರಾಮಾಣಿಕತೆಯಿಂದಲೋ ಇಲ್ಲಾ ಅಲ್ಲಿ ನಡೆವ ಎಲ್ಲಾ ರಾಜಕೀಯ, ಸಾಮಾಜಿಕ ಘಟನೆಗಳೆಲ್ಲವೂ ಇಂದೂ, ಈ ಕ್ಷಣವೂ ತೀರಾ ಪ್ರಸ್ತುತ ಎಂದೆನೆಸಿ, ಸತ್ಯತೆ ಆಪ್ತವಾಗುವುದರಿಂದಲೋ ಇದನ್ನೊಂದು ಕೇವಲ ಕಾಲ್ಪನಿಕ ಕಾದಂಬರಿ ಎಂದು ಪರಿಗಣಿಸಲು ಸಾಧ್ಯವೇ ಆಗದು! (ನನ್ನ ಮಟ್ಟಿಗಂತೂ) ಇದರೊಳಗಿನ ವಿಷಯಗಳೆಲ್ಲಾ ನಮ್ಮ ಇಂದಿನ ರಾಜಕೀಯತೆಗೆ, ರಾಜಕಾರಣಿಗಳ ಕುತ್ಸಿತತೆಗೆ, ಚದುರಂಗ ದಾಳಗಳಿಗೆ, ಮೇಲಾಟ, ಕಾಲೆಟ, ಕಾಲ್ತುಳಿತಗಳಿಗೆ ಎಲ್ಲವುದಕ್ಕೂ ಇಲ್ಲಿ ನಿದರ್ಶನಗಳು ಸಿಗುತ್ತವೆ. ಆದರೆ ಎಲ್ಲವೂ ಒಂದು ಪ್ರಾಮಾಣಿಕತೆ, ದೇಶದ ಹಿತ ದೃಷ್ಟಿ, ಜನತೆಯ ಹಿತದೃಷ್ಟಿಯಲ್ಲಿಟ್ಟುಕೊಂಡು! ಕೇವಲ ತಾನು, ತನ್ನದು ಅನ್ನುವ ಪರಮ, ನೀಚ ಸ್ವಾರ್ಥ ಅಂದಿನ ರಾಜಕೀಯತೆಯಲ್ಲಿರಲೇ ಇಲ್ಲಾ! ಅದೊಂದೇ ಕೊರತೆ, ಅದೇ ಒಂದು ದೊಡ್ಡ ಕೊರತೆ ಇಂದು ಎದ್ದು ಕಾಣುತಿರುವುದು! ನಿಜಕ್ಕೂ ಮೊಕಾಶಿಯವರ ಈ ಅಮೋಘ ಕಾದಂಬರಿ ಚಿಂತನೆಗೆಳೆಸುವಂಥದ್ದು. ಅದರಲ್ಲೂ ವಿಶೇಷವಾಗಿ ನಿಯೋಗ ಪದ್ಧತಿ ನನ್ನ ಗಮನ ಸೆಳೆದದ್ದು.
ವ್ಯಾಸರ ಮೊದಲೇ ಕಾದಂಬರಿಯ ನಾಯಕಿಯಾದ ಪುರುಕುತ್ಸಾನಿ ಈ ಒಂದು ಪ್ರಕ್ರಿಯೆಗೆ ಮನಸ್ಸು ಮಾಡುವುದು.... ಮತ್ತು ಅದೆಷ್ಟು ವ್ಯವಸ್ಥಿತವಾಗಿ, ಯಾರಿಗೂ ಎಲ್ಲೂ ಅನೈತಿಕ ಎಂಬ ಭಾಸವೂ ಬಾರದಂತೇ ನಿರೂಪಿಸಲಾಗಿದೆ ಎಂದರೆ.. ಇಂತಹ ಒಂದು ವ್ಯವಸ್ಥೆ ನಮ್ಮ ಇಂದಿನ ಸಮಾಜಕ್ಕೆ ಅಂದರೆ ಸಂತಾನ ಹೀನರಿಗೆ ಇದ್ದಲ್ಲಿ ತುಂಬಾ ಚೆನ್ನ ಎಂದೆನಿಸಿ ಬಿಟ್ಟಿತು!
ಹೌದು... ಇಂದು ಪತಿ ನಿರ್ವೀಯನಾದರೆ Artificial Insemination (AI) ಚಿಕಿತ್ಸೆಯ ಮೂಲಕ ಪತ್ನಿಗೆ ಗರ್ಭಧರಿಸುವಂತೆ ಮಾಡುವ ಆಧುನಿಕ ವೈದ್ಯಕೀಯ ಚಿಕಿತ್ಸೆಯಿದೆ. ಆದರೆ ಅದೆಷ್ಟು ಮಾನಸಿಕ ಕ್ಷೋಭೆಯನ್ನು ಹೆಣ್ಣಿಗೆ ಮನೆಯವರಿಂದ, ಸ್ವಂತ ಪತಿಯಿಂದ ತರುತ್ತದೆಯೆನ್ನುವುದನ್ನು, Infertility center ಒಂದರ ಕೌನ್ಸಲಿಂಗ್ ಡೆಪಾರ್ಟ್‌ಮೆಂಟ್‍ನಲ್ಲಿ ತುಸು ಕಾಲ ಕಾರ್ಯ ನಿರ್ವಹಿಸಿದ್ದ ನಾನು ಸ್ವತಃ ಅವರ ಅನುಭವದ ಮಾತುಗಳಿಂದ ಕೇಳಿದ್ದೇನೆ. ತನ್ನ ಪ್ರತಿಷ್ಠೆಗಾಗಿ, ತಮ್ಮ ಮನೆಯ ಪೊಳ್ಳು ಅಭಿಮಾನದ ಉಳಿವಿಗಾಗಿ ಮನಸ್ಸಿದೆಯೋ ಇಲ್ಲವೋ ಪತ್ನಿಯನ್ನು/ಸೊಸೆಯನ್ನು ಮನವೊಲಿಸಿ, ಬೆದರಿಸಿ ಒಪ್ಪಿಸಿರುತ್ತಾರೆ. ಒಂದು ವೇಳೆ ಆಕೆ ಖುಶಿಯಿಂದ ಒಪ್ಪಿದ್ದರೂ, ಆಮೇಲೆ ಕುಹಕ, ಭರ್ತ್ಸನೆ, ಇಲ್ಲಾ ನಿರ್ಲಕ್ಷ್ಯತನ ಸರ್ವೇಸಾಮಾನ್ಯ! ಇಂಥ ಒಂದು ಸಾಮಾಜಿಕ ಸಂಕುಚಿತತೆ, ಮಾನಸಿಕ ಧೋರಣೆಯಿಂದ ವಿಜ್ಞಾನ ಎಷ್ಟು ಮುಂದುವರಿದರೇನು? ಅಂದಿನ ಸಮಾಜದ ಪರಿಕಲ್ಪನೆ, ಸಹಜ ಸ್ವೀಕಾರ, ಅಲ್ಲೊಂದಿಲ್ಲೊಂದು ಅಪಸ್ವರ ಎದ್ದಾಗಲೂ ಸಮಾಜವೇ ಅದನ್ನು ತುಳಿದು ಅಡಗಿಸಿದ ಉದಾರತೆ ಎಲ್ಲವೂ ಮಾನನೀಯ, ನಿದರ್ಶನ ಎಂದೆನಿಸಿತು. ಇದೊಂದು ಚಿಕ್ಕ ಉದಾಹರಣೆಯಷ್ಟೇ... ಇನ್ನೂ ಹಲವಾರು ನಿದರ್ಶನಗಳು, ಶ್ರೇಷ್ಠ ರಾಜಕೀಯತೆ, ರಾಜನ ಕಾರ್ಯವೈಖರಿ, ಹೆಣ್ಣಿನ ಧೀಃಶಕ್ತಿಯ ಅನಾವರಣ ಎಲ್ಲವೂ ‘ಅವಧೇಶ್ವರಿ’ನಮಗೆ ಕಾಣಿಸುತ್ತಾಳೆ. ಆದರೆ ಕಾದಂಬರಿಯುದ್ದಕ್ಕೂ ಹೆಣ್ಣೇ ಪ್ರಧಾನವಾಗಿ ಹರಿದು ಬಂದರೂ, ಪ್ರಮುಖವಾಗಿ ನನ್ನ ಗಮನ ಸೆಳೆದವನೆಂದರೆ ಗುಲಾಮನಿಂದ ಸೇವಕನಾಗಿ, ಸೇನಾನಿಯಿಂದ ರಾಜನ ಆಪ್ತ ಸಲಹೆಗಾರನಾಗಿ, ರಾಜ್ಯ ಭಾರದ ಸೂತ್ರಧಾರನಾಗಿ, ರಾಣಿಯ ಆಪ್ತನಾಗಿ ಕಾದಂಬರಿಯೊಳಗೆ ಹಾಗೂ ನಮ್ಮೊಳಗೆ ಬೆಳೆಯುತ್ತಾ ಹೋಗುವ ‘ತಾರ್ಕ್ಷ್ಯ’!!
ಆದರೆ ಕೊನೆಯಲ್ಲಿ ಬರುವ ಒಂದು ಘಟನೆ ಯಾಕೋ ನನ್ನಲ್ಲಿ ಕಸಿವಿಸಿ ತುಂಬಿ ಬಿಟ್ಟಿತು..! ಆವರೆಗೂ ತುತ್ತತುದಿಯಲ್ಲಿದ್ದ ಒಂದು ಪಾತ್ರ ಅದೆಂತು ಆ ರೀತಿ ವರ್ತಿಸಿತೆಂದೇ ಅರಿಯದಾಯಿತು....! ಆ ಘಟನೆಯನ್ನು, ಪಾತ್ರ, ಸನ್ನೀವೇಶವನ್ನು ಬಿತ್ತರಿಸಿದರೆ ಓದುಗರಿಗೆ ಓದಲು ಸಹಜ ಕುತೂಹಲ, ಆ ಪಾತ್ರದ ಮೇಲೆ ಘನತೆ ಬರಲು ಸಾಧ್ಯವಾಗದು. ಹಾಗಾಗಿ ಇಲ್ಲಿ ಹೇಳುತ್ತಿಲ್ಲ. ಕಾದಂಬರಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅಥವಾ ಕಥಾ ಹಂದರವನ್ನು ಅರುಹಿ ಓದುಗರ ಕುತೂಹಲವನ್ನು ತಣಿಸುವ ಕಾರ್ಯ ಮಾಡೆನು.. ಇಷ್ಟವಾದಲ್ಲಿ ಓದಿ, ನಿಮ್ಮ ಓದನ್ನು ನನ್ನೊಂದಿಗೂ ಹಂಚಿಕೊಳ್ಳಿ.. :)
-ತೇಜಸ್ವಿನಿ ಹೆಗಡೆ.
ಬುಧವಾರ, ಆಗಸ್ಟ್ 27, 2014
ಮೂರ್ಖನಿಗೆ ಮದ್ದಿಲ್ಲ
ಮೂರ್ಖ, ಮೂರ್ಖತನ, ಹಾಗೂ ಮೂರ್ಖನ ಲಕ್ಷಣ ಕುರಿತು ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ಶ್ಲೋಕಗಳಿವೆ. ಅವುಗಳನ್ನು ಹೆಕ್ಕಿ ‘ಸುಭಾಷಿತ ರತ್ನಾಕರ’ದಲ್ಲಿ ನೀಡಲಾಗಿದೆ. ಇವು ಹಳೆಯ ನಾಡು ನುಡಿಗಳಂತೇ ನಮಗೆ ಜೀವನಾನುಭವ ನೀಡುವ ಸರಳ ಸಾಹಿತ್ಯ ಮಾಧ್ಯಮವಾಗಿವೆ. ಈ ಲೇಖನದಲ್ಲಿ ಅವುಗಳ ಆಧಾರದಲ್ಲಿ ಪ್ರಮುಖಾಂಶವನ್ನು ಗಮನಿಸೋಣ.
ಕವಿಯೊಬ್ಬ ಹೇಳುತ್ತಾನೆ ‘ಬೆಂಕಿಯನ್ನು ನೀರಿನಿಂದ, ಸೂರ್ಯನ ಪ್ರಖರಕಿರಣಗಳನ್ನು ಕೊಡೆಯಿಂದ, ಮದವೇರಿದ ಆನೆಯನ್ನು ಹರಿತವಾದ ಅಂಕುಶದಿಂದ, ದಂಡದಿಂದ ಪಶುಗಳನ್ನು ಹಾಗೂ ರೋಗಗಳನ್ನು ಔಷಧಗಳಿಂದಲೂ, ವಿಷವನ್ನು ಮಂತ್ರಪ್ರಯೋಗಗಳಿಂದಲೂ ತಡೆಯಬಹುದು’. ಹೀಗೆ ಎಲ್ಲವುದಕ್ಕೂ ಶಾಸ್ತ್ರಸಿದ್ಧ ಔಷಧವಿದೆ, ಆದರೆ ಮೂರ್ಖನಿಗೆ ಮಾತ್ರ ಔಷಧವಿಲ್ಲ!! ೧
ಮೂರ್ಖತನವನ್ನು ಗುರುತಿಸಲು ಅವನ ಲಕ್ಷಣವನ್ನು ಕವಿಯೊಬ್ಬನು ಹೀಗೆ ಹೇಳಿದ್ದಾನೆ. ಗರ್ವ, ದುರ್ವಚನ, ಸುಮ್ಮನೇ ವಿರೋಧ, ಹಾಗೂ ಕೃತ್ಯ-ಅಕೃತ್ಯಗಳನ್ನು (ಅವಿವೇಕ)೨ ಒಪ್ಪದಿರುವುದು ಈ ಗರ್ವ ಹೇಗೆ ಮದವೇರಿಸುತ್ತದೆ ನೋಡಿರಿ.
‘ನನಗೆ ಸ್ವಲ್ಪಗೊತ್ತಿದೆ’ ಅಂದು ಕೊಂಡರೆ ಆನೆಗೆ ಮದವೇರಿದಂತೆ ನಮಗೂ ಸೊಕ್ಕುಬರುತ್ತದೆ. [ಅಲ್ಪ ವಿದ್ಯಾ ಮಹಾ ಗರ್ವೀ] ಹಾಗೂ ತಾನೇ ಸರ್ವಜ್ಞನೆಂದು ಮನದಲ್ಲಿ ಅಂದುಕೊಳ್ಳುತ್ತಾನೆ.
ಅದೇ ಬುಧಜನರಿಂದ ಸ್ವಲ್ಪಸ್ವಲ್ಪ ಸಂಗ್ರಹಿಸಿ ಕಲಿತುಕೊಂಡಿದ್ದೇನೆಂಬ ಭಾವವಿದ್ದಲ್ಲಿ ಅದೇ ಮದ ಜ್ವರದಂತೇ ಜರ್ರನೇ ಇಳಿದು ‘ಛೇ ನಾನೆಂಥ ಮೂರ್ಖ’ ಎಂಬ ಭಾವನೆ ಬರುತ್ತದೆ.೩
ಇದು ಸಾಮಾನ್ಯ ಅಥವಾ ಸಾಂದರ್ಭಿಕ ಮೂರ್ಖತನವಾಯಿತು. ಆದರೆ ಇನ್ನು ಕೆಲವರು ಸ್ವಭಾವತಃ ಮೂರ್ಖರಿರುತ್ತಾರೆ; ಅವರನ್ನು ರಂಜಿಸಲು ಅಥವಾ ನಂಬಲೂ ಎಂದೂ ಹೋಗಬಾರದೆಂದು ಈ ಎರಡು ಸುಭಾಷಿತಗಳು ಹೇಳುತ್ತವೆ.
‘ಅಜ್ಞಾನಿಯನ್ನು ಸಮಾಧಾನ ಪಡಿಸುವುದಾಗಲಿ, ತಿಳಿಯುವಂತೆ ಮಾಡುವುದಾಗಲಿ ಸುಲಭ, ವಿಶೇಷಜ್ಞಾನದಲ್ಲಿ ಅವನೊಡನೆ ವ್ಯವಹರಿಸುವುದು ಇನ್ನೂ ಸುಲಭ. ಆದರೆ ಅಲ್ಪಜ್ಞಾನದಿಂದ ಠೇಂಕರಿಸುವವನನ್ನು ಬ್ರಹ್ಮನೂ ಸಹ ರಂಜಿಸಲಿಕ್ಕೆ ಸಾಧ್ಯವಿಲ್ಲವಂತೆ.೪ ಹಾಗೇ ಜನ್ಮತಃ ಮೂರ್ಖರಾಗಿರುವವನನ್ನು ತಿದ್ದುವುದು ವ್ಯರ್ಥಸಾಹಸ ಹಾಗೂ ಅಪಾಯಕಾರಿ ಎಂದು ಎಚ್ಚರಿಸಲಾಗಿದೆ. ಮೂರ್ಖರಿಗೆ ಉಪದೇಶ ಹೇಳಿದರೆ ಅದು ಅವರನ್ನು ಕೆರಳಿಸುತ್ತದೆ. ಹಾವಿಗೆ ಹಾಲೆರೆದರೆ ವಿಷವನ್ನು ಕಕ್ಕುವುದು ಸಹಜವಲ್ಲವೇ?೫ ಜಗತ್ತಿನಲ್ಲಿ ಅಸಾಧ್ಯವಾದ ಹಲವಿರೆ... “ಭುಸುಗುಟ್ಟುವ ವಿಷ ಸರ್ಪವನ್ನು ತಲೆಯಮೇಲೆ ಹೂವಿನಂತೆ ಇಟ್ಟುಕೊಳ್ಳಬಹುದು. ಮೊಸಳೆಯ ದವಡೆಯಿಂದ ಮಣಿಯನ್ನು ಕೈಹಾಕಿ ತೆಗೆಯಬಹುದು. ಭೀಕರ ಅಲೆಗಳಿರುವ ಸಮುದ್ರವನ್ನು ದಾಟಬಹುದು, ಮರಳನ್ನು ಹಿಸುಕಿ ತೈಲವನ್ನು ಹಿಂಡಬಹುದು, ಕೋಡಿರುವ ಮೊಲವನ್ನೂ ಹುಡುಕಿ ತರಬಹುದು, ಆದರೆ ವಿತಂಡವಾದದ ಮೂರ್ಖನ ಮನಸ್ಸನು ಪ್ರಸನ್ನುಗೊಳಿಸಲು ಸಾಧ್ಯವಿಲ್ಲವೆಂದು”6, ಅಸಾಧ್ಯಗಳಲ್ಲಿ ಅಸಾಧ್ಯವೆಂದು ಕಾವ್ಯಾಲಂಕಾರದಿಂದ ತಿಳಿಸಿದ್ದಾರೆ. ಅಂತಹ ದುಸ್ಸಾಹಸಕ್ಕೆ ತೊಡಗಿ ನಮ್ಮ ಸಮಯ, ಮನಸ್ಸು ಎರಡನ್ನೂ ಹಾಳುಮಾಡಿಕೊಳ್ಳದಿರುವುದೇ ಸಾಧು ಲಕ್ಷಣ.
ಕೆಲವರು ಅಮಲಿನಲ್ಲಿ ಮೂರ್ಖರಂತೆ ವರ್ತಿಸುತ್ತಾರೆ. ಕುಡಿದ ಅಮಲಿನಲ್ಲಿ ರಾತ್ರಿಯಲ್ಲಿ ಆಕಾಶನೋಡಿ ಅದು ಸೂರ್ಯನೋ ಚಂದ್ರನೋ ಕೇಳುತ್ತಾರೆ? ನಿಜ ಹೇಳಿದರೂ ಸೂರ್ಯನೆಂದು ಅದು ಹಗಲೆನ್ನುತ್ತಾರೆ. ಸುಳ್ಳು ಹೇಳಿದರೆ ನಮ್ಮನ್ನೇ ಕುಡಿದವರೆಂದು ದುರ್ವಚನ ನುಡಿಯುತ್ತಾರೆ.
ಇದೆಲ್ಲವನ್ನು ಗಮನಿಸಿ ಕವಿಯೊಬ್ಬ ವಿಡಂಬನಾತ್ಮಕವಾಗಿ “ಮೂರ್ಖನಾಗಿರುವುದೇ ವಾಸಿ ಯಾಕೆಂದರೆ ಅದರಲ್ಲಿ ೮ ಗುಣಗಳಿವೆಯೆಂದು” ಹೀಗೆ ವರ್ಣಿಸುತ್ತಾನೆ:
ಏ ದುರ್ಬುದ್ಧಿ! ಮೂರ್ಖನಾಗಿರುವುದು ಸುಲಭ ಹಾಗೇ ಇರು ಯಾಕೆಂದರೆ ಅದು ರಹಿತ, ಬಹುಭೋಜಕ, ಮೂರ್ಖರಸ್ವಭಾವ (ಹಲುಬುವುದು), ಹಗಲು-ರಾತ್ರಿ ಕನಸು ಕಾಣಬಹುದು. ಕಾರ್ಯ-ಅಕಾರ್ಯ ವಿವೇಚನೆಯ ವಿಷಯದಲ್ಲಿ ಕುರುಡ ಮತ್ತು ಕಿವುಡ, ಮಾನ-ಅಪಮಾನ ಎರಡೂ ಸಮ, ರೋಗರಹಿತ (ಎಂದೇವಾದ) ಸು ಶರೀರ. ಇದರಿಂದ ಸುಖಜೀವನ ತಾನೇ?!೭ (ಅಂದರೆ, ನಾವು ಹೇಗಿದ್ದಲ್ಲಿ ನಮ್ಮಲ್ಲಿ ಮೂರ್ಖರ ಗುಣವಿದೆ ಎಂದು ಅರಿತುಕೊಳ್ಳಲು ಹೇಳಿದ್ದಾರೆ)
ಮೂರ್ಖರಿಗೆ, ಸಾಹಿತ್ಯ, ಸಂಗೀತ, ಕಲೆ ಇವುಗಳಲ್ಲಿ ಯಾವುದೊಂದೂ ರುಚಿಸದು. ಅವರು ಬಾಲ ಕೂಡ ಇಲ್ಲದ ಪ್ರಾಣಿಗಳು. ಹುಲ್ಲನ್ನು ತಿನ್ನುವುದಿಲ್ಲ, ಅದು ಪಾಪ ಆ ಪಶುಗಳ ಪುಣ್ಯ!೮
ಅದೇ ರೀತಿ ಮೂರ್ಖರು ವಿದ್ಯೆ, ತಪ, ದಾನ, ಜ್ಞಾನ, ಶೀಲ, ಗುಣ, ಧರ್ಮಗಳೆಂದು ದೂರವಿರುತ್ತಾರೆ. ಅವರು, ಈ ಮಾನವ ಲೋಕದಲ್ಲಿ ಭೂಭಾರಕ್ಕಾಗಿರುವವರು. ಮಾನವ ರೂಪಿ ಮೃಗಗಳು ೯ ಎಂದು ಕವಿಯೊಬ್ಬ ಅಕ್ರೋಶ ವ್ಯಕ್ತಪಡಿಸಿದ್ದಾನೆ.
ಮೂರ್ಖರಿಗೆ ಧರ್ಮಕಥಾ ಪ್ರಸಂಗ ಹೇಳುವ ದಡ್ಡತನವನ್ನು ಸಜ್ಜನರು ಮಾಡಬಾರದು. ೧೦ ಅದು, ಕುರುಡನಿಗೆ ದೀಪ ಹಿಡಿದಂತೆ, ಕಿವುಡನಿಗೆ ಸಂಗೀತದಂತೆ, ಈ ರೀತಿ ಮೂರ್ಖರ ಗುಣಲಕ್ಷಣಗಳನ್ನು ವಿವರಿಸಲಾಗಿದೆ. ಇದರಿಂದ ನಮ್ಮಲ್ಲಿ ಎರಡಂಶ ಅರಿವಾಗಿರಬೇಕು. ಒಂದು ಎಂತಹ ಗುಣ ಸ್ವಭಾವದವರು ಮೂರ್ಖರು, ಅವರೊಡನೆ ಹೇಗೆ ವ್ಯವಹರಿಸಬೇಕು ಹಾಗೂ ಇನ್ನೊಂದು ನಾನು ನನ್ನಲ್ಲಿರುವ ಮೂರ್ಖತನವನ್ನು ತ್ಯಜಿಸುವುದು ಹೇಗೆ? ಎಂದು. ಅಂತೂ, ‘ಕಷ್ಟಂ ಬಲು ಮೂರ್ಖತ್ವಂ’ ಎಂಬುದನ್ನು ನೆನಪಿಸೋಣ.
ಉಲ್ಲೇಖ ಶ್ಲೋಕಗಳು:
೧] ಶಕ್ಯೋವಾರಯಿತುಂಜಲೇನ ಹುತಭುಕ್ ಛತ್ರೇಣ ಸೂರ್ಯss ತಪೋ
ನಾಗೇಂದ್ರೋ ನಿಶಿತಾಂಕುಶೇನ ಸಮದೋ ದಂಡೋನಗೋಗರ್ದಭೌ |
ವ್ಯಾಧಿರ್ಭೇಷಜ ಸಂಗ್ರಹೇಶ್ಚ ವಿವಿಧೈರ್ಯಂತ್ರ ಪ್ರಯೋಗೈರ್ವಿಷಂ
ಸರ್ವಸಸ್ಯೊಷದಮಸ್ತಿ ಶಾಸ್ತ್ರ ವಿಹಿತಂ ಮೂರ್ಖಸ್ಯ ನಾಸ್ತ್ಯುಷಧಮ್ ||
೨] ಮೂರ್ಖಚಿನ್ಹಾನಿ ಷಡಿತಿ ಗರ್ವೋ ದುರ್ವಚನಂ ಮುಖೇ |
ವಿರೋಧೀ ವಿಷವಾದೀಚ ಕೃತ್ಯಾs ಕೃತ್ಯಂ ನ ಮನ್ಯತೇ ||
೩] ಯದಾ ಕಿಂಚಿಜ್ಞೋs ಹಂ ದ್ವಿಪ ಇವ ಮದಾಂಧಃ ಸಮಭವಂ |
ತದಾ ಸರ್ವಜ್ಞೇಸ್ಮಿತ್ಯಭವದವಲಿಪ್ತಂ ಮಮ ಮನಃ |
ಯದಾ ಕಿಂಚಿತ್ ಕಿಂಚಿತ್ ಬುಧಜನ ಸಕಾಶಾದವಗತಂ
ತದಾ ಮುರ್ಖೋsಸ್ಮಿsತ ಜ್ವರ ಇವ ಮದೋ ಮೆ ವ್ಯಪಗತಃ ||
೪] ಆಜ್ಞಃ ಸುಖಮಾರಾಧ್ಯಃ ಸುಖತರಮಾರಾಧ್ಯತೇ ವಿಶೇಷಜ್ಞಃ |
ಜ್ಞಾನ ಲವ ದುರ್ವಿದಗ್ಧಂ ಬ್ರಹ್ಮಾsಪಿ ತಂ ನರಂ ನ ರಂಜಯತಿ ||
೫] ಉಪದೇಶೋ ಹಿ ಮುರ್ಖಾಣಾಂ ಪ್ರಕೋಪಾಯನ ಶಾಂತಯೇ |
ಪಯಃ ಪಾನಂ ಭುಜಂಗಾನಾಂ ಕೇವಲಂ ವಿಷವರ್ಧನಮ್ ||
೬] ಪ್ರಸಹ್ಯಮಣಿಮುದ್ಧರೇತ್ ಮಕರವಕ್ತ್ರದಂಷ್ಟ್ರಾಂಕುರಾತ್ |
ಸಮುದ್ರಮಪಿ ಸಂಚರೇತ್ ಪ್ರಚಲದುರ್ಮಿಮಾಲಾ ಕುಲಮ್ |
ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪ ವದ್ಧಾರಯೇತ್ |
ನತು ಪ್ರತಿನಿವಿಷ್ಟ ಮೂರ್ಖಜನಚಿತ್ತಮಾರಾಧಯೇತ್ ||
೭] ಮೂರ್ಖತ್ವಂ ಸುಲಭಂ ಭಜಸ್ವ, ಕುಮತೇ ಮೂರ್ಖಸ್ಯಚಾಷ್ಟವ್‌ಗುಣ ವ್|
ನಿಶ್ಚಿಂತೋ ಬಹುಭೋಜಕೋsತಿಮುಖರೋ ರಾತ್ರಿಂ ದಿವಂಸ್ವಪ್ನಭಾಕ್ |
ಕಾರ್ಯಕಾರ್ಯವಿಚಾರಣಾಂಧ ಬಧಿರೋ ಮಾನಾಪಮಾನೇ ಸಮಃ |
ಪ್ರಾಯೋಣಾಮಯ ವರ್ಜಿತೋ ದೃಢವಪು ಮುರ್ಖಃ ಸುಖಂಜೀವನೆ ||
೮] ಸಾಹಿತ್ಯ ಸಂಗೀತ ಕಲಾವಿಹೀನ; ಸಾಕ್ಷಾತ್ ಪಶುಃ ಪುಚ್ಛ ವಿಷಾಣಹೀನಃ |
ತೃಣಂ ನ ಖಾದನ್ನ್ ಪಿಜೀವಮಾನಃ ತದ್ಭಾಗಧೇಯಂ ಪರಮಂ ಪಶುನಾಮ್ ||
೯] ಯೇಷಾಂ ನ ವಿದ್ಯಾ ನ ತಪೋ ನ ದಾನಂ ಜ್ಞಾನಂನಶೀಲಂನಗುಣೋ ನಧರ್ಮಃ |
ತೇ ಮೃತ್ಯುಲೋಕೇ ಭುವಿಭಾರಭೂತಾಃ ಮನುಷ್ಯರೂಪೇಣ ಮೃಗಾಶ್ಚರಂತಿ ||
೧೦] ಮುಕ್ತಾ ಫಲೈಃ ಕಿಂಮೃಗಪಕ್ಷಿಣಾಂಚ ಮೃಷ್ಟಾನ್ನಾ ಪಾನಂಕಿಮು ಗರ್ಧಭಾನಾಮ್ |
ಅಂಧಸ್ಯ ದೀಪೋ ಬಧಿರಸ್ಯಗೀತಂ ಮೂರ್ಖಸ್ಯಕಿಂ ಧರ್ಮಕಥಾಪ್ರಸಂಗಃ ||
-ಡಾ.ಜಿ.ಎನ್.ಭಟ್
ಬುಧವಾರ, ಆಗಸ್ಟ್ 20, 2014
ಯಾಚನೆ
ವಾದಿಸಿ ವಾದಿಸಿ ಸೋತಿರುವೆ ಬಿಟ್ಟು ತೊಲಗೊಮ್ಮೆ
ಹೆಣವಾಗುವ ಮೊದಲು ಬದುಕ ಹಣೆಯಬೇಕಿದೆ.
ಅಳಿದುಳಿದಿಹ ಶಕ್ತಿಯನೂ ತಿಣು ತುಣುಕಿ ಹಿಂಡಿ ಹೀರಿ
ಅರೆಜೀವಿಯಾಗಿಸುವ ಮರುಳೇನು ನಿನಗೆ?!
ಯುದ್ಧ ಸಾರಿಲ್ಲ ನಾ, ಕೊಸರಿಲ್ಲ, ಕಸುವಿಲ್ಲ
ಬಗೆದರೂ ಹನಿ ನೀರು ಚಿಮ್ಮದಂಥ ಬರಡು ಒಡಲು.
ಕೊರೆವ ನಿನ್ನ ಕೋರೆ ಹಲ್ಲುಗಳ ಇಳಿಸಿ ಆಳ-ಅಗಲ ತೋಡುವಿಯೇಕೆ?
ಬರಿದೆ ನಿನ್ನಯ ಸಮಯ ವ್ಯರ್ಥ ಅಳಲು.
ದಿಕ್ಸೂಚಿಯಾಗು ನೀ, ಮುನ್ಸೂಚಿಯಾಗದಿರು
ಪಂಚೇಂದ್ರಿಯಗಳೇ ಸಾಕು ಇಹ ಲೋಕಕೆ.
ಕಾಲಕ್ಕೂ ಮುನ್ನ ಕಾಲನ್ನು ಎಳೆಯದಿರು,
ನಿನ್ನದೇ ದೇಣಿಗೆ ಈ ನನ್ನ ಬದುಕು.
-ತೇಜಸ್ವಿನಿ
ಹೆಣವಾಗುವ ಮೊದಲು ಬದುಕ ಹಣೆಯಬೇಕಿದೆ.
ಅಳಿದುಳಿದಿಹ ಶಕ್ತಿಯನೂ ತಿಣು ತುಣುಕಿ ಹಿಂಡಿ ಹೀರಿ
ಅರೆಜೀವಿಯಾಗಿಸುವ ಮರುಳೇನು ನಿನಗೆ?!
ಯುದ್ಧ ಸಾರಿಲ್ಲ ನಾ, ಕೊಸರಿಲ್ಲ, ಕಸುವಿಲ್ಲ
ಬಗೆದರೂ ಹನಿ ನೀರು ಚಿಮ್ಮದಂಥ ಬರಡು ಒಡಲು.
ಕೊರೆವ ನಿನ್ನ ಕೋರೆ ಹಲ್ಲುಗಳ ಇಳಿಸಿ ಆಳ-ಅಗಲ ತೋಡುವಿಯೇಕೆ?
ಬರಿದೆ ನಿನ್ನಯ ಸಮಯ ವ್ಯರ್ಥ ಅಳಲು.
ದಿಕ್ಸೂಚಿಯಾಗು ನೀ, ಮುನ್ಸೂಚಿಯಾಗದಿರು
ಪಂಚೇಂದ್ರಿಯಗಳೇ ಸಾಕು ಇಹ ಲೋಕಕೆ.
ಕಾಲಕ್ಕೂ ಮುನ್ನ ಕಾಲನ್ನು ಎಳೆಯದಿರು,
ನಿನ್ನದೇ ದೇಣಿಗೆ ಈ ನನ್ನ ಬದುಕು.
-ತೇಜಸ್ವಿನಿ
ಶುಕ್ರವಾರ, ಜುಲೈ 18, 2014
ಈ ಅಸ್ಪೃಶ್ಯರನ್ನು ಅಸ್ಪೃಶ್ಯರಂತೇ ಕಾಣಿ!
ಉತ್ತರ ಪ್ರದೇಶದ ಕುಗ್ರಾಮವಿರಲಿ, ದೆಹಲಿಯಂತಹ ಮಹಾನಗರವೇ ಆಗಿರಲಿ... ಮೆಟ್ರೋಸಿಟಿ ಬೆಂಗಳೂರೇ ಇದ್ದಿರಲಿ, ಹುಬ್ಬಳ್ಳಿಯಲ್ಲಿರುವ ಒಂದು ಪುಟ್ಟ ಹಳ್ಳಿಯೇ ಆಗಿದ್ದಿರಲಿ.. ಅವ್ಯಾಹತವಾಗಿ, ನಿರ್ಭೀತಿಯಿಂದ, ಅಮಾನುಷವಾಗಿ, ಹೇಯ ರೀತಿಯಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ/ಅತ್ಯಾಚಾರ ನಾನಾ ರೀತಿಯಲ್ಲಿ ನಡೆಯುತ್ತಿದೆ. ಹುಟ್ಟಿ ಆರುತಿಂಗಳಿನ ಮಗುವಿನಿಂದ ಹಿಡಿದು ೮೦-೯೦ರ ವೃದ್ಧರನ್ನೂ ಬಿಡುವುದಿಲ್ಲ ಈ ಪಿಶಾಚಿಗಳು! ಇದರ ವಿರುದ್ಧ ಎಷ್ಟೇ ನಾನು, ನೀವು ಸಾಮಾಜಿಕ ಜಾಲದಲ್ಲಿ, ಪೇಪರ್, ನ್ಯೂಸ್‌ಗಳಲ್ಲಿ ಅದೆಷ್ಟೇ ಬೊಬ್ಬಿರಿದರೂ, ಆಕ್ರೋಶ ವ್ಯಕ್ತ ಪಡಿಸಿದರೂ ಮನುಷ್ಯಾಕಾರದ ಆ ರಕ್ಕಸರಿಗೆ ಅವೆಲ್ಲಾ ಕೇಳಿಸುವುದೂ ಇಲ್ಲ.. ತಾಗುವುದೂ ಇಲ್ಲ!
ಕೂಲಿ ಕಾರ್ಮಿಕರ, ಗುಡಿಸಲುವಾಸಿಗಳ ಹೆಣ್ಮಕ್ಕಳು ಇಂತಹ ರಕ್ಕಸರ ಧಾಳಿಗೆ ಸುಲಭವಾಗಿ ಸಿಗುವಂತಾಗಿದ್ದು, ಕಾನೂನು ಕೂಡ ಅಸಡ್ಡೆಯ ತೋರಣೆ ಧಾರಾಳವಾಗಿ ಇವರ ಪ್ರತಿ ತೋರುತ್ತಿರುವುದು ತುಂಬಾ ವಿಷಾದನೀಯ. ಇಲ್ಲಿ ಕಾನೂನು ಅಂದರೆ ಕೋರ್ಟ್ ಎಂದಷ್ಟೇ ಆಗುವುದಿಲ್ಲ. ಮುಖ್ಯವಾಗಿ ನಮ್ಮ ಪೋಲೀಸ್ ವ್ಯವಸ್ಥೆಯ ಬಗ್ಗೆಯೇ ನಾನು ಹೇಳುತ್ತಿರುವುದು. ಶ್ರೀಮಂತ, ಶಕ್ತಿಶಾಲಿ ವರ್ಗದವರ ಮಾನ, ಪ್ರಾಣಗಳನ್ನು ಮಾತ್ರ ಕಾಪಾಡುವವರೆನ್ನುವ ಧೋರಣೆಯೇ ಇವರಲ್ಲಿ ಹೆಚ್ಚಾಗಿ ಕಂಡುಬರುತ್ತಿರುತ್ತದೆ (ಕಲವೇ ಕೆಲವರನ್ನು ಹೊರತುಪಡಿಸಿ). ನಮ್ಮ ಈ ಅವ್ಯವಸ್ಥೆಯಿಂದಾಗಿಯೇ, ಬಡವರು, ದುರ್ಬಲರು, ಅಸಹಾಯಕರು ಇವರೆಲ್ಲಾ.... ಯಾರೂ ದಿಕ್ಕಿಲ್ಲದವರಿವರೆಲ್ಲಾ ಎಂಬ ನಿರ್ಲಕ್ಷ್ಯತನ, ಉಡಾಫೆಯಿಂದಾಗಿಯೇ ಪಾಪದ ಮುಗ್ಧರನ್ನು ಸುಲಭವಾಗಿ ಹೊಸಕಿಹಾಕಿ ರಾಕ್ಷಸರು ಸುಲಭವಾಗಿ ಪಾರಾಗಿಬಿಡುತ್ತಾರೆ!
ಇದರರ್ಥ ಹೈ ಸೊಸೈಟಿಗಳಲ್ಲಿ ಅತ್ಯಾಚಾರಗಳಿಲ್ಲವೇ ಇಲ್ಲಾ ಎಂದಲ್ಲಾ! ಅಲ್ಲಿರುವ ಬಲಾತ್ಕಾರಿಗಳೆಲ್ಲಾ ಹೆಚ್ಚು ಗೋಮುಖ ವಾಘ್ರಗಳೇ! ನಿನ್ನೆ, ಮೊನ್ನೆ ನಡೆದ ಕಾಲೇಜು ವಿಧ್ಯಾರ್ಥಿನಿಯ ಮೇಲಿನ ಬಲಾತ್ಕಾರ, ಪ್ರತಿಷ್ಟಿತ ಶಾಲೆಯೆಂದು(?!) ಹೇಳಿಕೊಂಡಿದ್ದ ವಿಬ್‍ಗಯಾರ್(VIBGYOR) ಶಾಲೆಯಲ್ಲಿ ನಡೆದ ಎಳೆಯ ಕಂದಮ್ಮನ ಮೇಲಿನ ಲೈಂಗಿಕ ದೌರ್ಜನ್ಯ - ಇವೆಲ್ಲಾ ಬಲಾತ್ಕಾರಿಗಳಿಗೆ ವಿಕೃತಿಯ, ವಿಕೃತ ಸಂತಸದ ಮುಂದೆ ಮತ್ತೆಲ್ಲವೂ ಶೂನ್ಯ ಎನ್ನುವುದನ್ನು ಎತ್ತಿ ಎತ್ತಿ ತೋರಿಸುತ್ತಿದೆ. ಸ್ವಂತ ಮನೆಯೊಳಗೇ ಅವಿತಿದ್ದರೂ ತಿಳಿಯದ, ತಿಳಿದರೂ ಮರ್ಯಾದೆ, ಪ್ರತಿಷ್ಠೆಗಳಿಗೆ ಬಲಿಯಾಗುವ ಅದೆಷ್ಟೋ ಹೆಣ್ಣು ಜೀವಗಳು, ಅವುಗಳ ನರಳಾಟಗಳು ಇನ್ನೂ ನ್ಯಾಯಕ್ಕಾಗಿ ಕೂಗುತ್ತಲೇ ಇವೆ!
ಹೀಗಿರುವಾಗ ನಾವು, ಅಂದರೆ ನಮ್ಮಿಂದಲೇ ಆಗಿರುವ ಈ ಸಮಾಜ, ಇದರೊಳಗಿನ ಸಹೃದಯ ಮನುಷ್ಯರಾದ ನಾನು, ನೀವು ಏನು ಮಾಡಬಹುದು? ಇದಕ್ಕೇನು ಪರಿಹಾರ? ಏನೂ ಸಾಧ್ಯವಿಲ್ಲವೇ? ಕೇವಲ ಪ್ರತಿಭಟನೆ, ಮುಂಬತ್ತಿ ಜಾಥಾ, ಪ್ರಾರ್ಥೆನೆಗಳಿಂದ ಸುಧಾರಣೆ ಸಾಧ್ಯವೇ? ಬಲು ಕಷ್ಟ! ಹೀಗಿರುವಾಗ ಪ್ರಜ್ಞಾವಂತ, ಕಳಕಳಿಯಿಂದ ಮಿಡಿವ ಸಮಾಜ ಏನು ಕಠಿಣ ನಿರ್ಧಾರ ತೆಗೆದುಕೊಂಡರೆ ತುಸು ಮಟ್ಟಿಗಾದರೂ ಜಾಗೃತಿ ಮೂಡಬಹುದು? ಎಂದೆಲ್ಲಾ ನಾನು ತುಂಬಾ ಚಿಂತಿಸಿದ ಮೇಲೆ ನನಗೆ ಸಿಕ್ಕ ಅತಿ ಚಿಕ್ಕ ಪರಿಹಾರವೆಂದರೆ ‘ಅಸ್ಪೃಶ್ಯತೆ’ಯನ್ನು ಕಡ್ಡಾಯ ಜಾರಿಗೆ ಗೊಳಿಸುವುದು!
ಹೌದು.... ಬಲಾತ್ಕಾರಿ ಮನೋಭಾವ ಹೊಂದಿದ ಮನುಷ್ಯರೆಲ್ಲಾ ನೀಚರೇ... ಈ ನೀಚ ಜಾತಿಯಲ್ಲಿ ಹುಟ್ಟಿದವರನ್ನು ಸಂಫೂರ್ಣ ಅಸ್ಪೃಶ್ಯರನ್ನಾಗಿಸಬೇಕು ಈ ಸಮಾಜ! ಯಾರು ಹೆಣ್ಣಿನ ಮೇಲೆ ವರದಕ್ಷಿಣೆ ಕಿರುಕುಳ, ಬಲಾತ್ಕಾರ, ಹೊಡೆತ, ಮಾನಸಿಕ ದೌರ್ಜನ್ಯಗಳನ್ನು ಎಗ್ಗಿಲ್ಲದೇ ಮಾಡುತ್ತಾರೋ, ಹಾಗೆ ಮಾಡಿರುವುದಕ್ಕೆ ನಮ್ಮೊಳಗಿನ ಪ್ರಜ್ಞೆ ಸಾಕ್ಷಿಯನ್ನೊದಗಿಸಿರುತ್ತದೋ.. ಅಂತಹವರೆಲ್ಲಾ ನಿಜವಾದ ರೀತಿಯಲ್ಲಿ ಅಧಮರೆಂದು ಪರಿಗಣಿಸಬೇಕು. ಕಾರಣ, ನೀಚ ಜಾತಿ ಎಂಬುದೊಂದಿದ್ದರೆ ಅದು ಇಂಥವರದ್ದು ಮಾತ್ರ! ಇಂತಹವರು ಯಾವುದೇ ಸಾಮಾಜಿಕ ಮನ್ನಣೆ, ಬಳಕೆ, ಸಭೆ ಸಮಾರಂಭಗಳಿಗೆ, ಪವಿತ್ರ ಸ್ಥಳಗಳ ಪ್ರವೇಶಕ್ಕೆ ಅನರ್ಹರು, ಅಯೋಗ್ಯರು. ನಿಜವಾದ ರೀತಿಯಲ್ಲಿ ಮತ್ತು ಎಲ್ಲಾ ರೀತಿಯಲ್ಲೂ ಅಸ್ಪೃಶ್ಯರೆಂದರೆ ಈ ಜನರು ಮಾತ್ರ. ಇವರಲ್ಲಿ ಹೆಣ್ಣು-ಗಂಡೆಂಬ ಬೇಧವಿಲ್ಲದೇ ಕಠಿಣವಾಗಿ ಈ ಸ್ವಯಂಘೋಷಿತ ಕಾನೂನನ್ನು ನಾವು ನಾವೇ ಜಾರಿಗೆ ತರಬೇಕು. ಅದಕ್ಕಾಗಿ ಕೆಲವು ಸೂತ್ರಗಳನ್ನು ಮನದಟ್ಟುಮಾಡಿಕೊಂಡರೆ ಸುಲಭ.
ಅವು ಇಂತಿವೆ :-
೧. ನಮ್ಮ ನೆಂಟರಲ್ಲಿ, ಬಂಧು-ಬಾಂಧವರಲ್ಲಿ, ಸ್ನೇಹಿತವರ್ಗಗಳಲ್ಲಿ ಯಾರೇ ಆಗಿದ್ದಿರಲಿ ಅತ್ಯಾಚಾರಿಗಳು, ಹೆಣ್ಣಿನ ಜೊತೆ ಅಸಭ್ಯವಾಗಿ ವರ್ತಿಸುವವರು, ಹೆಂಡತಿಯನ್ನು ಪಶುವಂತೆ ನಡೆಸಿಕೊಳ್ಳುವವರು ನಿಮಗೆ ತಿಳಿದು ಬಂದರೆ, ಅವರು ಅಂತಹವರೇ ಎನ್ನುವುದು ನಿಮ್ಮ ಆತ್ಮಸಾಕ್ಷಿಗೆ ಮನದಟ್ಟಾದರೆ, ಅವರನ್ನು ಮನೆಯೊಳಗೆ ಹೊಕ್ಕಿಸಿಕೊಳ್ಳುವುದಾಗಲೀ, ಆದರಾತಿಥ್ಯಕೊಡುವುದಾಗಲೀ, ಯಾವುದೇ ರೀತಿಯ ಮರ್ಯಾದೆ, ಸಂಬೋಧನೆ ಕೊಟ್ಟು ಗೌರವಿಸುವಾದಗಲೀ ಮಾಡಲುಹೋಗದಿರುವುದು. ಇಂತಹ ಕುಕೃತ್ಯಕ್ಕೆ ಕುಮ್ಮಕ್ಕು, ಸಹಾಯ, ಸಲಹೆಗಳನ್ನಿತ್ತ ಹೆಂಗಸರನ್ನೂ ಸರ್ವವಿಧದಲ್ಲೂ ದೂರವಿಟ್ಟುಬಿಡುವುದು. ಈ ವರ್ತನೆಗೆ ಯಾವುದೇ ರೀತಿ ಲಿಂಗ ತಾರತಮ್ಯವನ್ನು ತೋರದೆ ನಿರ್ದಯವಾಗಿ ಜಾರಿಗೆ ತರುವುದು.
೨. ಮುಖಗೋಡೆ (Facebook), ಅಂತರ್ಜಾಲ ಹಾಗೂ ಯಾವುದೇ ರೀತಿಯ ಸಾಮಾಜಿಕ ಜಾಲಗಳಲ್ಲಿ ಇಂತಹ ದುಷ್ಟರಿರುವುದು ಸಾಕ್ಷಿ ಸಮೇತ ಗೊತ್ತಾದಲ್ಲಿ ಅಂತಹವರನ್ನು ಬ್ಲಾಕ್ ಮಾಡಿ ಸಂಪರ್ಕವನ್ನು ಸಂಫೂರ್ಣ ಖಡಿದುಕೊಳ್ಳುವುದು. ಎಷ್ಟೋ ಸಲ ನಮಗೆ ಸತ್ಯ ಗೊತ್ತಿರುತ್ತದೆ ಆದರೆ ನಮಗೇಗೆ? ನಮ್ಮ ಜೊತೆ ಆತ/ಆಕೆ ಸರಿಯಿದ್ದಾಳೆ ತಾನೆ? ನಾವೇಕೆ ಅವರೊಂದಿಗೆ ವೈರ ಕಟ್ಟಿಕೊಳ್ಳುವುದು? ಆತ ಅವಳೊಂದಿಗೆ ಅಸಭ್ಯವಾಗಿ ಚಾಟ್ ಮಾಡಿದ್ದರೆ, ನಡೆದುಕೊಂಡಿದ್ದರೆ ಇದು ಅವರಿಬ್ಬರ ಸಮಸ್ಯೆಯೇ ಸರಿ... ಇಷ್ಟಕ್ಕೂ ಆತ ದೊಡ್ಡ ಮನುಷ್ಯ, ನಾಳೆ ಯಾವುದಾದರೂ ನಮ್ಮ ಕೆಲಸಕ್ಕೆ ಬೇಕಾಗುವಂಥವನು.... ಅನ್ನುವ, ಅವಕಾಶವಾದಿತನ, ನಿರ್ಲಕ್ಷ್ಯ, ಅನವಶ್ಯಕ ಉದಾರತನ ಖಂಡಿತ ಸಲ್ಲ. ಇಂದು ದಡ ಮೀರಿದ ಹೊಳೆ, ನಾಳೆ ನಮ್ಮ ಮನೆ ಹೊಸ್ತಿಲ ದಾಟದೇ ಇರದು ಎನ್ನುವುದು ನೆನಪಿಡುವುದು ಅವಶ್ಯಕ!
೩. ನಮ್ಮೊಂದಿಗೆ ಅಂದರೆ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ಯಾರೇ ನಡೆದುಕೊಂಡರು, ಅದು ಎಷ್ಟೇ ಅಲ್ಪ ಪ್ರಮಾಣದಲ್ಲಿದ್ದರೂ, ಅದನ್ನು ಸಶಕ್ತವಾಗಿ ವಿರೋಧಿಸುವುದು, ಖಂಡಿಸುವುದು ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕ. ಇಷ್ಟರಲ್ಲೇ ಹೋಯಿತಲ್ಲಾ ಎಂದರೆ ಅದು ಮಹಾಮಾರಿಯಾಗಿ ಬೇರೊಬ್ಬರ ಮೇಲೆರೆಗಬಹುದು!! ಸಾಮಾಜಿಕ ತಾಣದಲ್ಲಿ ಅವರ ಕುಲ ಗೋತ್ರವನ್ನು, ತಮ್ಮೊಂದಿಗೆ ಆತ ನಡೆದಿಕೊಂಡ ರೀತಿಯನ್ನೂ ನೇರಾನೇರ ಹೇಳಿಕೊಳ್ಳುವುದರ ಮೂಲಕ, ಪ್ರತಿಷ್ಠೆಯ ಹಪಾಹಪಿಯಿರುವ ಕೆಲವು ಗೋಮುಖ ವ್ಯಾಘ್ರಗಳಾದರೂ ತುಸು ಎಚ್ಚೆತ್ತುಕೊಂಡು ಹಿಮ್ಮೆಟ್ಟಬಹುದು.. ಇದರಿಂದ/ಇವರಿಂದ ಕೆಲವು ಮುಗ್ಧ ಹೆಣ್ಣು ಮನಸುಗಳು ನರಳುವುದನ್ನು ತಪ್ಪಿಸಬಹುದು!
ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಲಿಂಗಾತೀತಾವಾಗಿ ಮತ್ತು ಧರ್ಮಾತೀತವಾಗಿ ಅತ್ಯಾಚಾರವನ್ನು, ಅತ್ಯಾಚಾರಿಗಳನ್ನು ಮನಃಪೂರ್ವಕವಾಗಿ ನಾವು ವಿರೋಧಿಸಿದರೆ, ಆ ವಿರೋಧವನ್ನು ಮುಕ್ತವಾಗಿ, ನಿರ್ಭೀತಿಯಿಂದ ಹೊರ ತೋರಿದರೆ, ಇದರಿಂದಾಗಿ ಸಾವಿರದಲ್ಲಿ ಒಬ್ಬನಾದರೂ ಹಿಂಜರಿದರೆ, ಇಲ್ಲಾ ಈ ಕುಕೃತ್ಯಕ್ಕೆ ಕೈಹಾಕುವಾಗ ಬೆದರಿ ಹಿಮ್ಮೆಟ್ಟಿದರೆ, ನಮ್ಮ ದೃಢಸಂಕಲ್ಪಕ್ಕೆ ಅಷ್ಟೇ ಸಾರ್ಥಕ್ಯ ದೊರಕಿದಂತಾಗುವುದು!
ನಾನಂತೂ ನಿರ್ಧರಿಸಿಯಾಗಿದೆ. ನನ್ನ ಆಪ್ತೇಷ್ಟರಲ್ಲಿ, ಸ್ನೇಹಿತರಲ್ಲಿ ಯಾರೇ ಇಂತಹ ಒಂದು ದುಷ್ಕೃತ್ಯಕ್ಕೆ (ಅಸಭ್ಯ ವರ್ತನೆ, ಚಾಟ್, ದೌರ್ಜನ್ಯ.. ಇತ್ಯಾದಿ ಎಲ್ಲಾ ರೀತಿಯ ಮಾನಸಿಕ/ದೈಹಿಕ ಅತ್ಯಾಚಾರಗಳು) ಕೈಹಾಕಿದ್ದರು/ಹಾಕಿದ್ದಾರೆ ಎಂದು ತಿಳಿದುಬಂದರೆ, ನಾನು ಸರ್ವವಿಧದಲ್ಲೂ ಅವರ ಬಗ್ಗೆ ಸತ್ಯಾಪಸತ್ಯತೆಗಳನ್ನು ತಿಳಿದುಕೊಳ್ಳಲು ಯತ್ನಿಸುತ್ತೇನೆ. ಹಾಗೆ ಒಮ್ಮೆ ಅದು ಸತ್ಯವೆಂದು ನಿಶ್ಚಿತವಾದಾಕ್ಷಣ ಅಂತಹವರ ಪಾಲಿಗೆ ನನ್ನ ಮನೆ-ಮನಸ್ಸನ್ನು ಸಂಪೂರ್ಣ ಮುಚ್ಚಿಬಿಡುತ್ತೇನೆ. ಪಶ್ಚಾತ್ತಪದ ತಪದಲ್ಲಿ ಬೇಯಲೂ ಪ್ರಜ್ಞಾವಂತ, ಆರೋಗ್ಯವಂತ ಮನಸ್ಸು ಬೇಕಾಗುತ್ತದೆ. ಆದರೆ ಹೆಣ್ಮಕ್ಕಳ ಮೇಲೆ, ಮಕ್ಕಳ ಮೇಲೆ, ದುರ್ಬಲರ ಮೇಲೆ ದೌರ್ಜನ್ಯವೆಸುಗುವ ಮನಸ್ಸುಗಳಲ್ಲಿ ಕೇವಲ ವಿಕೃತಿಮಾತ್ರ ತುಂಬಿರುತ್ತದೆ. ಅಂತಹವರಲ್ಲಿ ಪಶ್ಚಾತ್ತಾಪ ಹುಡುಕುವುದೇ ಒಂದು ವಿಕಟ ಹಾಸ್ಯ!
ನಮ್ಮ ಮನೆಯ ಪರಿಸರವನ್ನು ಚೊಕ್ಕವಾಗಿಟ್ಟುಕೊಳ್ಳುವುದ ನಮ್ಮ ಕರ್ತವ್ಯ. ನಮ್ಮ ಮನೆ-ಮನಸ್ಸೊಳಗೆ ಇಂತಹ ಕ್ರಿಮಿಗಳು ಪ್ರವೇಶಿಸದಂತೆ ಅಸ್ಪೃಶ್ಯತೆಯನ್ನು ಜಾರಿಗೆ ತಂದು.. ನೋಡು ನೀನು ಹೀಗೆ ಅವಳ ಜೊತೆ ನಡೆದುಕೊಂಡರೆ, ಇಂತಹ ಒಂದು ಸಾಮೂಹಿಕ ತಿರಸ್ಕಾರ, ನಿರ್ಲಕ್ಷ್ಯತನದ ಶಿಕ್ಷೆ ನಿನಗೆ ಕಾದಿದೆ ಅನ್ನುವ ಒಂದು ಜಾಗೃತಿಯನ್ನು ನಾವು ಮೂಡಿಸಿದಂತಾಗುತ್ತದೆ.
ಸದ್ಯಕ್ಕೆ ನನಗೆ ತೋಚಿದ ಅತ್ಯಲ್ಪ ಪರಿಹಾರವಿದು. ಎಷ್ಟು ಸಹಕಾರಿಯಾಗಬಲ್ಲದು ಗೊತ್ತಿಲ್ಲ. ಆಶಾವಾದಿಯಂತೂ ಆಗಿದ್ದೇನೆ. ನಿಮ್ಮಲ್ಲಿಯೂ ಇನ್ನೂ ಅನೇಕ ಉತ್ತಮ ಪರಿಹಾರಗಳು ಇದ್ದಿರಬಹುದು. ಹಂಚಿಕೊಳ್ಳುವಿರಿ ತಾನೆ? :)
-ತೇಜಸ್ವಿನಿ.
ಗುರುವಾರ, ಜುಲೈ 10, 2014
ಆಗಮನದಾಶಯದಲ್ಲಿ.....
ಪುಟ್ಟ ಪೋರಿಯ ಕಣ್ಣೆಲ್ಲಾ ನೆಟ್ಟಿದೆ ಅರೆ ಮುಸುಕೆಳೆದಿಹ ಬಾನಿನ ಮೇಲೆ
ಉಂಗುಷ್ಟದ ತುತ್ತತುದಿಯೇರಿ, ಪುಟ್ಟ ಪಾದಗಳ ಮೇಲೇರಿಸಿ
ಎವೆಯಿಕ್ಕದೇ ನೋಡುತ್ತಾ, ಅಂಗಲಾಚಿಸುತ್ತಿದ್ದಾಳೆ ಚಿಗರೆ ಕಂಗಳ ಹರಿಸಿ
ಜಡೆಹಾಕಲೆಳೆವ ಅಮ್ಮ, ಚಿವುಟಿ ಕಾಲೆಳವ ತಮ್ಮ, ಆಗೀಗ ಗಡಬಡಿಸುವ ಅಪ್ಪ
ಇದಾವುದೂ ತಾಗುತಿಲ್ಲವಿಂದು! ಕಾರಣ ಗಮನವೆಲ್ಲಾ ಬಾನು, ಸೂರ್ಯನ ಮುಂದು
ಹೊರಲಾಗದ ಮಣಭಾರದ ಪಾಟೀ ಚೀಲವ ಹೊತ್ತು, ನಿರಾಸೆಯ ನಿಟ್ಟುಸಿರಿಗೆ ಬಾಗಿದೆ ಕತ್ತು
ಇನ್ನೇನು ಧುಮ್ಮಿಕ್ಕಲು ಹೊರಟಿಹ ಅಣೆಕಟ್ಟು, ಮನದ ತುಂಬೆಲ್ಲಾ ಕರಿಮೋಡದ ಚಿತ್ತು
ಮನೆಯಿಂದ ಬಸ್ಸೇರಲಿರುವುದು ಹತ್ತೇ ಹತ್ತು ಹೆಜ್ಜೆ, ಮೆದು ಪಾದದಿ ಘಲ್ಲೆನ್ನುತಿವೆ ಎರಡೆಳೆಯ ಕಾಲ್ಗೆಜ್ಜೆ
ಹತ್ತೇ ಹತ್ತು ನಿಮಿಷದೊಳು ಬಂದು ಬಿಡುವುದು ಬಸ್ಸು, ಆಮೇಲೆ ದಿನವೆಲ್ಲಾ ಇದ್ದಿದ್ದೇ ನೋಟ್ಸು, ಮಿಸ್ಸು, ಕ್ಲಾಸು
ಬಂದು ಬಿಡು ಮಾರಾಯ ಓ ಮಳೆರಾಯ ಬಹು ಬೇಗ, ಕಾದಿಹಳು ಶಬರಿಯಂತೆ ಕಾಣಲು ನಿನ್ನ ಆವೇಗ
ಬಲಗೈ ಏರಿರುವ ಚೀಲದೊಳು ನೋಡೆ, ಬೆಚ್ಚಗೆ ಕುಳಿತಿದೆ ಅವಳ ಹೊಚ್ಚ ಹೊಸತಾದ ಕೊಡೆ.
ಕರಿಮೋಡ ನೂರ್ಮಡಿಸಿ, ಜಡಿ ಮಳೆ ಜಡೆ ಬಿಡಿಸಿ, ಹರಿದು ಬಿಡಲೊಮ್ಮೆ ಜಲಧಾರೆ
ಕಾಮನಬಿಲ್ಲಿನ ಬಣ್ಣವನೇ ಹೊತ್ತಿಹ ಅಚ್ಚು ಮೆಚ್ಚಿನ ಕೊಡೆ ಬಿಚ್ಚಿ ಕೂಸು ನಗಲೊಮ್ಮೆ ಮನಸಾರೆ.
-ತೇಜಸ್ವಿನಿ.
ಉಂಗುಷ್ಟದ ತುತ್ತತುದಿಯೇರಿ, ಪುಟ್ಟ ಪಾದಗಳ ಮೇಲೇರಿಸಿ
ಎವೆಯಿಕ್ಕದೇ ನೋಡುತ್ತಾ, ಅಂಗಲಾಚಿಸುತ್ತಿದ್ದಾಳೆ ಚಿಗರೆ ಕಂಗಳ ಹರಿಸಿ
ಜಡೆಹಾಕಲೆಳೆವ ಅಮ್ಮ, ಚಿವುಟಿ ಕಾಲೆಳವ ತಮ್ಮ, ಆಗೀಗ ಗಡಬಡಿಸುವ ಅಪ್ಪ
ಇದಾವುದೂ ತಾಗುತಿಲ್ಲವಿಂದು! ಕಾರಣ ಗಮನವೆಲ್ಲಾ ಬಾನು, ಸೂರ್ಯನ ಮುಂದು
ಹೊರಲಾಗದ ಮಣಭಾರದ ಪಾಟೀ ಚೀಲವ ಹೊತ್ತು, ನಿರಾಸೆಯ ನಿಟ್ಟುಸಿರಿಗೆ ಬಾಗಿದೆ ಕತ್ತು
ಇನ್ನೇನು ಧುಮ್ಮಿಕ್ಕಲು ಹೊರಟಿಹ ಅಣೆಕಟ್ಟು, ಮನದ ತುಂಬೆಲ್ಲಾ ಕರಿಮೋಡದ ಚಿತ್ತು
ಮನೆಯಿಂದ ಬಸ್ಸೇರಲಿರುವುದು ಹತ್ತೇ ಹತ್ತು ಹೆಜ್ಜೆ, ಮೆದು ಪಾದದಿ ಘಲ್ಲೆನ್ನುತಿವೆ ಎರಡೆಳೆಯ ಕಾಲ್ಗೆಜ್ಜೆ
ಹತ್ತೇ ಹತ್ತು ನಿಮಿಷದೊಳು ಬಂದು ಬಿಡುವುದು ಬಸ್ಸು, ಆಮೇಲೆ ದಿನವೆಲ್ಲಾ ಇದ್ದಿದ್ದೇ ನೋಟ್ಸು, ಮಿಸ್ಸು, ಕ್ಲಾಸು
ಬಂದು ಬಿಡು ಮಾರಾಯ ಓ ಮಳೆರಾಯ ಬಹು ಬೇಗ, ಕಾದಿಹಳು ಶಬರಿಯಂತೆ ಕಾಣಲು ನಿನ್ನ ಆವೇಗ
ಬಲಗೈ ಏರಿರುವ ಚೀಲದೊಳು ನೋಡೆ, ಬೆಚ್ಚಗೆ ಕುಳಿತಿದೆ ಅವಳ ಹೊಚ್ಚ ಹೊಸತಾದ ಕೊಡೆ.
ಕರಿಮೋಡ ನೂರ್ಮಡಿಸಿ, ಜಡಿ ಮಳೆ ಜಡೆ ಬಿಡಿಸಿ, ಹರಿದು ಬಿಡಲೊಮ್ಮೆ ಜಲಧಾರೆ
ಕಾಮನಬಿಲ್ಲಿನ ಬಣ್ಣವನೇ ಹೊತ್ತಿಹ ಅಚ್ಚು ಮೆಚ್ಚಿನ ಕೊಡೆ ಬಿಚ್ಚಿ ಕೂಸು ನಗಲೊಮ್ಮೆ ಮನಸಾರೆ.
-ತೇಜಸ್ವಿನಿ.
ಭಾನುವಾರ, ಜೂನ್ 15, 2014
ಬೆಳಕಿಂಡಿ
ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;
ಎನೊ ತೀಡಲು ಏನೊ ತಾಡಲು ಹೊತ್ತಿ ಉರಿವುದು ಕಾತರ.
ಕಡುಗಪ್ಪು ಬಣ್ಣವನ್ನು ಹಂಡೆಯಲಿ ತುಂಬಿ ತುಂಬಿ ತಂದು, ಆಗಸದಲ್ಲಿ ಮಿನುಗುತ್ತಿದ್ದ ಒಂದೆರಡು ತಾರೆಗಳನ್ನೂ ತೋಯಿಸಿ, ನಿಶೆಯ ನಶೆಯನ್ನೇ ಹೊದ್ದು ಮಲಗಿಸಿದಂತಹ ರಾತ್ರಿ..... ಧೋ ಎಂದು ಬೀಳುತ್ತಿದ್ದ ಮಳೆಯ ಸದ್ದು, ಕಿಟಕಿಯ ಪಕ್ಕದಲ್ಲೇ ನೆಟ್ಟಿದ್ದ ಜಾಜಿ ಮೊಲ್ಲೆಯ ಕಂಪು, ಕೋಣೆಯ ಗೋಡೆಯಲ್ಲಿ ಕಥಕ್ಕಳಿ ಕುಣಿಯುತ್ತಿರುವ ಎರಡು ಜೋಡು ಮೊಂಬತ್ತಿಗಳ ನೆರಳುಗಳು, ಅವುಗಳ ಪಕ್ಕದಲ್ಲಿದ್ದ ಅಡಿಗರ ಸಮಗ್ರ ಕಾವ್ಯ, ಮನದೊಳಗೆ ರಿಂಗಣಿಸುತ್ತಿರುವ ನೆಚ್ಚಿನ ಕವಿತೆ ‘ಯಾವ ಮೋಹನ ಮುರಳಿ ಕರೆಯಿತೋ..’, ಇಷ್ಟೆಲ್ಲದರ ಸಾಥ್ ಇರುವಾಗ ತಾನು ಒಂಟಿಯಲ್ಲವೇ ಅಲ್ಲವೆಂದೆನಿಸಿತು ಆ ಕ್ಷಣಕೆ ಜಾನಕಿಗೆ. ಜೋರಾಗಿ ಬೀಸುತ್ತಿದ್ದ ಗಾಳಿಗೆ ಕಿರ್ರ್ ಎನ್ನುತ್ತಿದ್ದ ಕಿಟಕಿಯ ಸದ್ದು ಮಾತ್ರ ಮನದೊಳಗೆ ಗದ್ದಲವನ್ನೆಬ್ಬಿಸುತ್ತಿತ್ತು. ಕಿಟಕಿಯನ್ನು ಪೂರ್ತಿ ಮುಚ್ಚದಿದ್ದರೆ ನುಗ್ಗಿ ಬೀಸುತ್ತಿರುವ ಗಾಳಿಗೆ ಮೊಂಬತ್ತಿಗಳು ನಂದಿ, ಹೊರಗೆ ಚೆಲ್ಲುತ್ತಿರುವ ಕಪ್ಪು ಒಳಗಡಿಯಿಡುವ ಭಯ.... ಮುಚ್ಚಿದರೋ ಒಳ ತುಂಬಿಕೊಳ್ಳುತ್ತಿದ್ದ ಜಾಜಿ ಕಂಪು ಹೊರಗೇ ಸೋರಿ ಹೋಗುವ ತಳಮಳ. ದೀಪವಾರದಂತೇ ಹಳೆಯ ಪುಸ್ತಕದ ರಟ್ಟೊಂದನ್ನು ಅದರಸುತ್ತ ಅಡ್ಡವಿಟ್ಟು, ತುಸು ಹೊತ್ತಿನ ಮೊದಲು ಗೀಚಿದ್ದ ತನ್ನದೇ ಕವಿತೆಯ ಸಾಲುಗಳನ್ನು ಮತ್ತೆ ಓದತೊಡಗಿದಳು.
ಹರಿವ ಲಹರಿಗಳೆಲ್ಲ ಸೇರಿ
ಸೋನೆ ಮಳೆಯಾಗಿ ಸೋರಿ
ಮನದ ಧಗೆಯನೆಲ್ಲ ಹೀರಿ
ಎದೆಯೊಳಗಿಳಿದಾದಿನಗಳು...
"ಛೇ ಆಗೋದೇ ಹೀಗೆ... ಕಥೆ ಬರೆಯ ಹೊರಟಾಗೆಲ್ಲಾ, ಕವಿತೆ ಜನ್ಮಿಸಿಬಿಡುತ್ತಾಳೆ. ಎಲ್ಲಿಗೂ ಕಳುಹಿಸಲಾಗದಿದ್ದರೂ ಸರಿಯೇ... ತುರ್ತಾಗಿ ನಾನೀಗ ಕಥೆಯೊಂದ ಬರೆಯಲೇಬೇಕಿದೆ... ಏನಾದರಾಗಲಿ ಈ ರಾತ್ರಿಯ ನೀರವತೆಯಲಿ ಕಥೆಯೊಂದನ್ನು ಹುಟ್ಟಿಸಿಬಿಡಬೇಕು..." ಎಂದು ಹಠದಿಂದ ಜಾನಕಿ ಪೆನ್ನಿಗೆ ಕೈ ಹಚ್ಚುವಾಗಲೇ, ನಿಯತಿ ನೆನಪಾದಳು.
"ಜಾನು, ನೀ ಕಥೆ ಯಾಕೆ ಬರೆಯೋದು ಹೇಳು?" ಇಂತಹ ಒಂದು ಪ್ರಶ್ನೆಗೆ ಸಿದ್ಧವಿಲ್ಲದಿದ್ದವಳನ್ನು ಅಂದೊಮ್ಮೆ ನಿಯತಿ ಕೇಳಿದ್ದಳು. ಹೌದು... ಬರೆಯೋದು ಚಟವೋ, ಹವ್ಯಾಸವೋ ಇಲ್ಲಾ ಹೆಸರಿನ ಮೋಹವೋ...?! ಅವಳಿಗಿದು ಅಸ್ಪಷ್ಟ. "ನಾನು ಯೋಚಿಸಿಯೇ ಇಲ್ಲಾ.. ಬರೆಯೋದು ನನ್ನ ಅನಿವಾರ್ಯ ಕರ್ಮ.. ಬರೆದರಷ್ಟೇ ಏನೋ ತೃಪ್ತಿ... ಹಾಗಾಗಿ ಬರೀತಿನಿ ಅಷ್ಟೇ." ಆ ಕ್ಷಣಕ್ಕೆ ತೋಚಿದ್ದನ್ನು ಉತ್ತರಿಸಿದ್ದಳು. "ಊಹೂಂ.. ಕಂಡಿದ್ದು, ಕೇಳಿದ್ದನ್ನೆಲ್ಲಾ ಬರೆಯ ಹೋದರೆ, ತುಂಬಾ ಜೊಳ್ಳು, ಜಾಳು ಬರಹಗಳೇ ಹುಟ್ಟುತ್ತವೆ ಎಂದು ಅಜಿಂಕ್ಯ ರಾವ್ ಹೇಳಿದ್ದನ್ನು ಮರ್ತೇ ಬಿಟ್ಟೆಯಾ?" ಎಂದವಳ ಮಾತಿಗೆ ಜಾನಕಿ ಮೌನಿಯಾಗಿದ್ದಳು. ಹೂಂ.. ಅವಳೂ ಓದಿದ್ದಳು. ಅವಳ ನೆಚ್ಚಿನ ಲೇಖಕ.... ಅವಳ ಸ್ಪೂರ್ತಿ, ಪ್ರೇರಕ, ಅಜಿಂಕ್ಯ ರಾವ್‌ನ ಲೇಖನಗಳನ್ನು. ಆದರೆ ಅವನ ಇತ್ತೀಚಿನ ಪುಸ್ತಕ ಮಾತ್ರ ಅವಳನ್ನು ತುಂಬಾ ಕಾಡಿತ್ತು. "ಯಶಸ್ವಿ ಲೇಖಕನಾಗಲು ಹತ್ತು ಸೂತ್ರಗಳು".... ಅಬ್ಬಾ!! ಎಂತಹ ಮಾಂತ್ರಿಕ ಶೀರ್ಷಿಕೆಯದು! ಅದರಲ್ಲೂ ಮೊದಲ ಒಂಭತ್ತು ಸೂತ್ರಗಳಿಗಿಂತ ಹತ್ತನೆಯ ಸೂತ್ರವೇ ಅವಳನ್ನು ಬಹುವಾಗಿ ಚಿಂತನೆಗೆಳೆಸಿದ್ದು. ‘ಬರೆಯುವ ಮುನ್ನ, ಬರಹದ ವಿಷಯ ನಮ್ಮನ್ನು ಬಹು ಕಾಲದವರೆಗೆ ಕಾಡಬೇಕು... ಕಾದು ಕಾದು, ಕುದ್ದು, ಲಾವಾ ರಸವಾಗಿ ಹರಿದು, ಹೊರ ಹೊಮ್ಮಿದ ಬರಹ ಮಾತ್ರ ಚಿನ್ನದಂತೇ ಹೊಳೆಯುವುದು. ಕಾಡದ, ಮಾಗದ ಭಾವನೆಗಳನ್ನೆಲ್ಲಾ ಹೊರ ಚೆಲ್ಲಬೇಡಿ... ಅಕ್ಷರವನ್ನು ಕಾರಿ ಹೇವರಿಕೆ ತರಬೇಡಿ..’ ಎಂಬ ಅವನ ಕೊನೆಯ ಸೂತ್ರ ಓದಿದಾಗ ಮೊದಲು ಬಹು ಮೆಚ್ಚಿಕೊಂಡಿದ್ದಳು. ಅದನ್ನೇ ಮತ್ತೆ ಮತ್ತೆ ಓದಿ ಮನನ ಮಾಡಿಕೊಂಡಿದ್ದಳು. ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು ಲೈಕ್ಸ್‌ಗಳನ್ನು ಒತ್ತಿಸಿಕೊಂಡು ಹೆಮ್ಮೆಯ ನಗು ಬೀರಿದ್ದಳು. ಆದರೆ ಕ್ರಮೇಣ ಅವಳೊಳಗೇನೋ ಅರಿಯದಂತಹ ಬೇಗುದಿ, ತಳಮಳ ಅಸಹನೆ ತುಂಬ ತೊಡಗಿತ್ತು. ಅಂತಹ ದಿನಗಳಲ್ಲೇ ಅಜಿಂಕ್ಯನ ಪುಸ್ತಕದೊಳಗಿದ್ದ ಆ ಕೊನೆಯ ಸೂತ್ರದ ಪ್ರಸ್ತಾಪ ಮಾಡಿದ್ದಳು ನಿಯತಿ. ಇದರಿಂದಾಗಿ ಜಾನಕಿಯ ಒಳಗೊಳಗೇ ಹಬೆಯಾಡುತ್ತಿದ್ದ ಅಸಮ್ಮತಿಯ ಕಿಡಿಗೆ ಜೋರಾದ ಗಾಳಿ ಬೀಸಿದಂತಾಗಿತ್ತು.
ಹುಚ್ಚೆದ್ದ ಮಳೆಯ ಅಬ್ಬರವನ್ನೂ ಮೀರಿಸುವ ಗುಡುಗಿನ ಸದ್ದಿಗೆ ಕಿಟಕಿಯ ಗಾಜಿನಲ್ಲೂ ನಸು ಕಂಪನವಾಗಲು ಬೆಚ್ಚಿದಳು ಜಾನಕಿ. ಎದುರಿದ್ದ ಹಾಳೆಗಳು ಅಕ್ಷರಗಳ ಭಾರವಿಲ್ಲದೇ ಪಟ ಪಟನೆ ಹೊಡೆದುಕೊಳ್ಳಲು, ಅವುಗಳ ಮೇಲೆ ಪೇಪರ್‌ವೇಟ್‌ಅನ್ನು ಇಟ್ಟುಬಿಟ್ಟಳು. ಬಿದ್ದ ಭಾರಕ್ಕೆ ಹಾಳೆಗಳು ತೆಪ್ಪಗಾದರೂ ತುದಿಯಲ್ಲೇ ಅಲ್ಪ ಪ್ರತಿಭಟನೆ ತೋರಹತ್ತಿದವು. ಅವಳ ದೃಷ್ಟಿ ಅವುಗಳ ಮೇಲಿದ್ದರೂ, ಮನಸೊಳಗೆ ಮಾತ್ರ ಹತ್ತು ಹಲವು ಆಲೋಚನೆಗಳ ಮಂಥನ.
ತನಗೇಕೆ ಇತ್ತೀಚಿಗೆ ಒಂದಕ್ಷರವನ್ನೂ ಬರೆಯಲಾಗುತ್ತಿಲ್ಲವೋ...?! ಥೂ.. ಆ ಅಂಜಿಕ್ಯನ ಪುಸ್ತಕದ ಹಿಂದೆ ಬಿದ್ದು ತನ್ನೆಲ್ಲಾ ಆಲೋಚನಾ ಲಹರಿಯ ಸೂತ್ರವೇ ಹರಿದು ಹೋಗಿದೆಯೇನೋ?! ಹಾಗೆ ನೋಡ ಹೋದರೆ ಅಂವ ಹೇಳಿರುವಂತೇ ಮಾಡಲೆಣಿಸಿದರೆ, ಕಾದು ಕುದ್ದು ಕರಕಲಾದ ಅದೆಷ್ಟೋ ನೆನಪುಗಳನ್ನೆಲ್ಲಾ ಹಿಂಡಿ ಹೀರಿ ಹರಿಸಿ, ಅವುಗಳಿಂದ ಒಂದೆರಡು ಕಾದಂಬರಿಗಳನ್ನೇ ಸೃಷ್ಟಿಸಿಬಿಡಬಹುದು. ಸ್ಮೃತಿಯಿಂದುರುಳಿದ ಎಲ್ಲವನ್ನೂ ಸಮರ್ಥವಾಗಿ, ನೈಜರೂಪದಲ್ಲೇ ಹಿಡಿದಿಡುವ ಶಕ್ತಿ ಅಕ್ಷರಗಳಿಗಿವೆಯೇ? ಇದ್ದಿದ್ದರೆ ಇತಿಹಾಸವೇಕೆ ಇಷ್ಟು ಗೋಜಲಾಗಿರುತ್ತಿತ್ತು?!
ಕಳೆದುಹೋದ ಸಿಹಿ ಬಾಲ್ಯದ ನೆನಪುಗಳ ಸವಿದಷ್ಟೂ ಮಧುರವೇ. ಮಣ್ಣೊಳಗೆ ಹೊರಳಾಡಿ, ಒಳಗೆಲ್ಲಾ ಬೆಳಕಾಗಿ ಹಬ್ಬಿ ಬೆಳೆದ, ಅವರಿವರ ಮಾತುಗಳಿಗೆ ಕಿವಿಯಾಗದೇ ನಾನು ನಾನಾಗೇ ಉಳಿದ, ಗೇರು ಹಣ್ಣುಗಳ ಆ ಮತ್ತೇರಿಸುವ ಪರಿಮಳವ ಹೀರಿ... ಬಿದ್ದು ಬಿರಿದ ಹಲಸಿನ ತೊಳೆಗಳ ಎಳೆದೆಳೆದು ಹರಿದು ಮುಕ್ಕಿ, ನಾಳೆಯ ಪರಿವಿರದೇ... ನಿನ್ನೆಯ ನೆನೆದು ಕೊರಗದೇ, ನೆಮ್ಮದಿಯ ನಗುವ ನಕ್ಕಿದ್ದ ಆ ಬಾಲ್ಯ ಇಂದು ನನ್ನ ಕಾಡುತಿದೆ. ಬರೆದು ಬಿಡಲೇ ಒಂದು ಚೆಂದದ ಕಥೆಯ ಆ ಬಾಲ್ಯದ ಮೇಲೆಯೇ? ಮೊದಲ ಪ್ರೇಮ, ತಿರಸ್ಕಾರ, ಅವಮಾನ, ಪ್ರತೀಕಾರ ಎಲ್ಲವೂ ಇನ್ನೂ ಹಸಿ ಹಸಿಯಾಗಿವೆ. ಮಾಗಲು ಕಾಯದೇ ಕಥೆಯ ರೂಪ ಕೊಟ್ಟರೆ ಹೇಗೆ? ಅಪ್ಪ ಕಟ್ಟಿದ್ದ ಗಂಡ ಮೊದಲ ರಾತ್ರಿಯೇ ಷಂಡ ಎಂದು ತಿಳಿದಾಗ, ಒದ್ದೆಯಾಗಿ ತೊಟ್ಟಿಕ್ಕುತ್ತಿದ್ದ ಕೆನ್ನೆಗಳ ಮೇಲೆ ಅಂವ ಸುಟ್ಟ ಸಿಗರೇಟಿನ ಹೊಗೆ ಮೆತ್ತಿದ್ದನ್ನೇ ಬರೆಯಲೇ? ವಿಚ್ಛೇದನ ನಾನೇ ಕೊಟ್ಟರೂ, ಗಂಡ ಬಿಟ್ಟವಳೆಂದು ಹಿಂದೆ ಬಿದ್ದು ನಕ್ಕ ಸಮಾಜವ ಬಿಚ್ಚಿ ಬಯಲಾಗಿಸಲೇ? ಒಂಟಿ ಹೆಣ್ಣೆಂದರೆ ಬೀದಿ ಬದಿಯ ಮಾವಿನ ಮರದಂತೇ ಎಂದು ಪೋಲಿಯಾಗಿ ನಕ್ಕಿದ್ದ ಸಹೋದ್ಯೋಗಿಯ ಮೇಲೆಯೇ ಒಂದು ಕಥೆ ಬರೆದು ಸೇಡು ತೀರಿಸಿಕೊಂಡರೆ ಹೇಗೆ? ಅವೆಲ್ಲಾ ಹೋಗಲಿ... ‘ನಿನ್ನ ಕವಿತೆಗಳಲ್ಲಿ ಒಂದು ನಶೆಯಿದೆ... ನನ್ನ ಕಥೆಗಳಲ್ಲಿ ಅದಿಲ್ಲ ನೋಡು... ನಾನೂ ಒಂಟಿ.... ನನ್ನ ಕಥೆಗಳೊಳಗಿನ ಪಾತ್ರಗಳೂ... ನಿನ್ನ ಕವಿತೆಗಳ ನಿಶೆಯ ಸಾಮೀಪ್ಯ ನನಗೂ ಕೊಡುವೆಯಾ...?’ ಎಂದು ಒಕ್ಕಣ್ಣು ಮಾಡಿ ಪೆಕರನಂತೇ ನಕ್ಕು, ತನ್ನೆದೆಯೊಳು ನೂರು ಮುಳ್ಳುಗಳನ್ನೇಳಿಸಿದ್ದ ಆ ಪಡಪೋಶಿ ಕಥೆಗಾರನನ್ನೇ ಒಂದು ಪಾತ್ರವಾಗಿಸಿ, ಕುಪ್ರಸಿದ್ಧನನ್ನಾಗಿಸಬಹುದು! ಊಹೂಂ... ನಾನು ಬರೆಯೋದು ಬರಹದ ದಾಹ ನೀಗಿಸಿಕೊಳ್ಳಲು... ನನ್ನೊಳಗಿನ ನನ್ನ, ನನಗಾಗಿ ಬಯಲಾಗಿಸಿಕೊಳ್ಳಲು... ಬರೆಯೋ ತುಡಿತಕೆ ಯಾರ ಅಪ್ಪಣೆಯೂ, ಹಂಗೂ ಬೇಕಾಗಿಲ್ಲ..." ಎಂದು ಸ್ವ ಸಮಜಾಯಿಷಿಕೊಟ್ಟುಕೊಂಡಾಗ ತುಸು ನಿರಾಳವೆನಿಸಿತು ಜಾನಕಿಗೆ. ಹಾಗೇ ಸುಖಾಸೀನಕ್ಕೊರಗಿ ಕಣ್ಮುಚ್ಚಿದಳು. ಹೊರಗಿನ ಮಳೆಯ ಆರ್ಭಟ ಕೊಂಚ ತಗ್ಗಿತ್ತು.... ಆದರೆ ಒಳಗಿನ ಗದ್ದಲಗಳು ಅಬ್ಬರಿಸುತ್ತಲೇ ಇದ್ದವು.
ಆಗಸದ ಅಸ್ತಿತ್ವವನ್ನು ಆಗೀಗ ತೋರುತ್ತಿದ್ದ ಕೋಲ್ಮಿಂಚೊಂದು ಕಿಟಕಿಯ ಗಾಜಿನ ಮೇಲೆ ವಿಕಾರ ನರ್ತನಗೈದು ಝಗ್ಗನೆ ಬೆಳಕ ಹೊತ್ತಿಸಿ ಕ್ಷಣ ಮಾತ್ರದೊಳಗೆ ಮರೆಯಾಯಿತು. ಎದುರಿದ್ದ ಕನ್ನಡಿಯಲ್ಲಿ ಮಿಂಚಿನ ಬೆಳಕು ಒಂದು ಕ್ಷಣ ಅವಳ ಪ್ರತಿಬಿಂಬವನ್ನು ತೋರಿಸಲು, ಸತ್ತಮೇಲೆ ತಾನು ಒಂದೊಮ್ಮೆ ಪ್ರೇತವಾದರೆ ಹೀಗೇ ಕಾಣಿಸುವೆನೇನೋ ಎಂದು ಕಲ್ಪಿಸಿ, ಹುಚ್ಚುಚ್ಚಾಗಿ ನಕ್ಕಳು. ನಗುವಿನಲೆಗಳ ಬೆನ್ನಿಗೇ ಛಳಕ್ ಎಂದಿತು ಪರಾಶರನ ನೆನಪು. ಇಪ್ಪತ್ತು ವರುಷದ ಹಿಂದೆ ತಾನು ಪತಿಯ ಮನೆಯನ್ನು ತೊರೆದು, ಎಲ್ಲೆಡೆಯಿಂದ ಅವಮಾನಗಳನ್ನು ಅನುಭವಿಸಿ ಹತಾಶಳಾಗಿದ್ದಾಗ ಹೆಗಲು ಕೊಟ್ಟಂತೆ ನಟಿಸಿ ಎಲ್ಲವನೂ ಪಡೆದವ! "ಮದುವೆಯ ಸಂಕೋಲೆಯೇ ನಮಗೆ ಬೇಡ ಜಾನು... ನೀ ನನಗೆ, ನಾ ನಿನಗೆ ಸಾಕಲ್ಲಾ? ಯಾವುದೇ ಬಂಧನವಿರದ ಬಾಂಧವ್ಯ ನಮ್ಮದಾಗಲಿ.." ಎಂದೆಲ್ಲಾ ಬೆಣ್ಣೆ ಸವರಿ, ತನ್ನ ಅಳಿದುಳಿದ ಬುದ್ಧಿಗೂ ಮಂಕು ಎರೆಚಿದವ.... ಮದುವೆಯ ಪ್ರಸ್ತಾಪ ಬಂದಾಗ, ಅಪ್ಪ ಅಮ್ಮನ ನೇಣಿಗೆ ಹಾಕಲಾರೆ ಜಾನು, ಎಂದು ಗೋಳಾಡಿ, ನುಣ್ಣಗೆ ಜಾರಿಕೊಂಡವ.... ಪ್ರತಿ ದಿನ ನರಕ ಕಾಣಿಸಿದ್ದ ಒಲ್ಲದ ಗಂಡನನ್ನೂ ಅಷ್ಟು ಶಪಿಸಿದ್ದಳೋ ಇಲ್ಲವೋ.. ಪರಾಶರ ಮಾತ್ರ ಈಗಲೂ ನಿತ್ಯ ಅವಳ ಒಂದು ಹೊತ್ತಿನ ಕಣ್ಣೀರಿಗೆ ಕಾರಣನಾದವ!
ಅವೇಳೆಯಲ್ಲಿ ಅಮಾನುಷವಾಗಿ ಕಾಡುವ ಈ ಯಾತನಾಮಯ ನೆನಪುಗಳನ್ನೆಲ್ಲಾ ಹೊರದೂಕಿ ಈ ಕರಾಳ ರಾತ್ರಿಯೊಳಗೆ ತುರುಕಿ, ಶೂನ್ಯ ತುಂಬಿದ ಮನಸಿನೊಂದಿಗೆ ಹಾಯಾಗಿರುವಂತಾಗಿದ್ದರೆ ತಾನೂ ಬದುಕನ್ನು ಉತ್ಕಟವಾಗಿ ಜೀವಿಸುತ್ತಿದ್ದೆನೇನೋ ಎಂದು ಚಡಪಡಿಸಿದಳು. ಅದೆಷ್ಟೋ ಹೊತ್ತಿನಿಂದ ಎಲ್ಲೋ ನೆಟ್ಟಿದ್ದ ದೃಷ್ಟಿ ಹಾಗೇ ಕಿಟಿಕಿಯ ಮೇಲೆ ಬೀದ್ದಿತು. ಗಾಳಿಗೆ ಓರೆಯಾಗಿದ್ದ ಕಿಟಕಿಯ ಬಾಗಿಲುಗಳನ್ನು ಒಮ್ಮೆಲೇ ಸಂಪೂರ್ಣ ತೆಗೆದು ಬಿಡಲು, ಕತ್ತಲೆಗೆ ಹಬ್ಬವಾಯಿತು. ಜಾಜಿ ಮೊಲ್ಲೆಯ ಕಂಪು ಮಸ್ತಿಷ್ಕವನ್ನೇರಿ ಕುಳಿತು, ಮನದೊಳಗೆ ಹೂತಿಟ್ಟಿದ್ದ ಭೂತಗಳಿಗೆಲ್ಲಾ ಉಸಿರು ತುಂಬತೊಡಗಿತು.
ಒಮ್ಮೊಮ್ಮೆ ಈ ನೆನಪುಗಳೇ ಹೀಗೆ.... ಕಾದ ಬಾಣಲೆಯೊಳಗಿನ ಎಣ್ಣೆಗೆ ಹನಿ ನೀರು ಬಿದ್ದು ಸಿಡಿವಂತಾದರೆ, ಕೆಲವೊಮ್ಮೆ, ಕೊಳದೊಳಗೆ ಹರಿದಾಡುವ ಕಿರು ಮೀನುಗಳು ಕಾಲ್ಬೆರಳುಗಳ ಕಚ್ಚಿ ಹಿತವಾದ ನೋವನೀವಂತೆ! ಈ ಅನುಭೂತಿಗಳದೆಷ್ಟು ವಿಭಿನ್ನ! ಊಹೂಂ.. ಯಾಕೋ ಇಂತಹ ಅನುಭವಗಳನ್ನು ನೆಚ್ಚಿ, ತನ್ನಿಂದ ಇನ್ನು ಏನನ್ನೂ ಗಟ್ಟಿಯಾಗಿ ಬರೆಯಲಾಗದೇನೋ.... ಎಂದೆನಿಸಿ ಅಧೀರಳಾದಳು ಜಾನಕಿ. ಬದುಕೆಂಬ ಹೊಲದಲ್ಲಿ ಕಾಳಿಗಿಂತ ಜೊಳ್ಳೇ ಹೆಚ್ಚಾದರೆ...? ಎಂಬ ಪ್ರಶ್ನೆಯೇ ಬೃಹದ್ರೂಪ ಪಡೆದಂತಾಗಿ ಸುಸ್ತಾದಳು.
ತಾನೇ ಪೆದ್ದಿ.... ಅಜಿಂಕ್ಯ ಏನು ಬರೆದರೂ, ಓದಿದಾಕ್ಷಣ ಗೀತಾಸಾರದಂತೇ ಪಠಿಸಿ, ಕುಣಿದು ಕುಪ್ಪಳಿಸಿದೆ.... ಹೊಳೆಯುವುದೆಲ್ಲಾ ಚಿನ್ನವಲ್ಲ ಎಂದು ಅವನೇ ಹೇಳಿದ್ದನ್ನು ಮರೆತೇ ಬಿಟ್ಟೆ. ಕಾಡಬೇಕಂತೆ, ಕುಲುಮೆಯಲ್ಲಿ ಕಾಯಬೇಕಂತೆ.... ಹಾಗೆ ಕರಗಿ, ಕರಟಿಹೋದ ಮನಸಿನ ಅವಶೇಷಗಳನ್ನು ವಿಸರ್ಜಿಸುವ ಸಮಯದಲ್ಲಿ, ಬೇಯುವ ಕರ್ಮ ತನಗೇಕೆ? ಹೋದರೆ ಹೋಗಲಿ... ಹುಟ್ಟಲಾರದ ಕಥೆಯ ಹಂಗು ತನಗೂ ಬೇಕಾಗಿಲ್ಲ. ಅವಳೊಳಗೆದ್ದ ಅನೇಕ ಪ್ರಶ್ನೆಗಳಿಗೆ ಅವಳೇ ಉತ್ತರಿಸಲು ಸನ್ನದ್ಧಳಾದಳು. ಏನೋ ಹುಕ್ಕಿ ಒಳಗಿಂದೆದ್ದು ಮನವನ್ನೆಲ್ಲಾ ಅವಸರಿಸುತ್ತಿದ್ದಂತೇ, ಪೇಪರ್‌ವೇಟ್ ತೆಗೆದು, ಖಾಲಿಹಾಳೆಗಳ ಮೇಲೆ ನೀಲಿ ಶಾಯಿಯಲ್ಲಿ ದುಂಡಗೆ ಬರೆಯತೊಡಗಿದಳು......
ಒಂದೊಂದು ಕ್ಷಣಗಳನೂ ಸೆರೆ ಹಿಡಿದು
ಕಥೆಯಾಗಿಸಿ, ಅದರೊಳಗೆ
ಬಂಧಿಯಾಗ ಹೊರಟೆ,
ನೆನಪುಗಳು ಸಾಸಿರ ಮೈಲಿ ವೇಗದಲಿ ಸಾಗಲು,
ವಿಮೋಚನೆಗೆ ಕಾದ,
ಅಹಲ್ಯೆಯಂತಾದೆ.
ಬರೆದ ಮೇಲೆ ಮತ್ತೊಮ್ಮೆ ಓದಿಕೊಂಡಳು. ಅಹಲ್ಯೆ ಪದದ ಮೇಲೆ ಅವಳ ದಿಟ್ಟಿ ನಿಂತು ಹೋಯಿತು. ರಾಮನ ಪಾದ ಸ್ಪರ್ಶದಿಂದ ಅಹಲ್ಯೆಗೆ ಮುಕ್ತಿ ಸಿಕ್ಕಿತೆನ್ನುವರು....ಹೌದೆ?! ಶಿಲೆಯಾಗಿದ್ದಾಗಲೇ ಆಕೆ ಬಹು ಸುಖಿಯಾಗಿದ್ದಳಲ್ಲವೇ? ರಾಮ ಉಳಿಸಿದ್ದು ಅಹಲ್ಯೆಯನ್ನೋ ಇಲ್ಲಾ ತನ್ನೊಳಗಿನ ದೈವತ್ವದ ಮೇಲಿದ್ದ ನಂಬಿಕೆಯನ್ನೋ? ಯಾಕೋ ಅವಳಿಗೆ ಕತ್ತಲು ಅಸಹನೀಯವೆನಿಸಿ, ಬೆಳಕು ಬೇಕೆಂದೆನಿಸಿತು. ಕಿಟಕಿಗಳನ್ನು ಮುಚ್ಚಿ, ಮೊಂಬತ್ತಿಗಳನ್ನು ಹಚ್ಚಿ, ಟೇಬಲ್ಲಿನ ಮೇಲಿಡಲು ಹೋದವಳಿಗೆ ಅದೇ ಕನ್ನಡಿ ಅವಳ ಮೊಗದ ನೈಜ ಪ್ರತಿಬಿಂಬವನೇ ತೋರಿಸಿತು. ನೆನಪುಗಳ ಕವಾಯತಿನಿಂದ ತನ್ನನ್ನು ತಾನು ಎಳೆದು ಹೊರತಂದ ಜಾನಕಿ ಮತ್ತೆ ತನ್ನನ್ನೇ ದಿಟ್ಟಿಸತೊಡಗಿದಳು. ಅಷ್ಟು ಹೊತ್ತೂ ಬೀಸುತ್ತಿದ್ದ ಗಾಳಿಗೆ ಅಮಲು ಹತ್ತಿದಂತೇ ಅತ್ತಿತ ಸಣ್ಣಗೆ ಓಲಾಡುತ್ತಿದ್ದ ಮೊಂಬತ್ತಿಯ ಬೆಳಕು, ಕನ್ನಡಿಯೊಳಗೆ ಹೊಕ್ಕು ತನ್ನೆದೆಯ ಮಟ್ಟದಲ್ಲಿ ಸ್ಥಾವರವಾಗಿದ್ದು ಕಂಡು ಏನೋ ಅರಿಯದ ಅನಿರ್ವಚನೀಯ ಅನುಭೂತಿಯಾಗಲು, ರೋಮಾಂಚಿತಳಾದಳು. ಕಂಡಿದ್ದೆಲ್ಲಾ ಭೂತಕ್ಕೆ ಸೇರಿದೆ.... ಕಾಣೋದು ಅನಿಶ್ಚಿತವಾಗಿದೆ... ಈಗ, ಈ ಕ್ಷಣ ಕಣ್ಗಳ ತಂಪಾಗಿಸುವ ಬೆಳಕಿನಡಿಯಲ್ಲಿ ತನ್ನನ್ನು ತಾನು ಕಂಡುಕೊಳ್ಳುತ್ತಿರುವ ಈ ಹೊತ್ತು ಮಾತ್ರ ಸುಂದರ ಸತ್ಯ ಎಂದೆನಿಸಿದ್ದೇ ಅವ್ಯಕ್ತ ಪ್ರಶಾಂತತೆ ಅವಳಲ್ಲಿ ತುಂಬತೊಡಗಿತು.
*****
[ಹೊಸದಿಗಂತ ಸಾಪ್ತಾಹಿಕದಲ್ಲಿ ಪ್ರಕಟಿತ]
ಗುರುವಾರ, ಜೂನ್ 12, 2014
ಚಾರುಕೇಶಿ
ಅಬ್ ಕೆ ಹಮ್ ಬಿಚಡೆ ತೊ ಶಾಯದ್ ಕಭಿ ಖ್ವಾಬೋ ಮೆ ಮಿಲೆ
ಜಿಸ್ ತರಹ ಸೂಖೆ ಹುಯೆ ಫೂಲ್ ಕಿತಾಬೊ ಮೆ ಮಿಲೆ
‘ಚಾರುಕೇಶಿ’...ಈ ಹೆಸರನ್ನು ಕೇಳಿದಾಗೆಲ್ಲಾ ಮೇಲಿನ ಗಝಲ್ ನೆನಪಿಗೆ ಬರುವುದು ಆಕಸ್ಮಿಕವೋ ಇಲ್ಲಾ ಅವಳ
ನೆನಪಿನೊಳಡಗಿರುವ ಅತೀವ ದುಃಖವೋ ಗೊತ್ತಿಲ್ಲ. ಸಂಗೀತವೆಂದರೆ ಸರಿಗಮಪ ಎಂದಷ್ಟೇ ತಿಳಿದಿದ್ದ ನನ್ನೊಳಗೆ ಸಪ್ತ ಸ್ವರಗಳ ನಿನಾದ ಹೊರಡಿಸಿ.. ಇಂದು ನನ್ನೊಳಗೆ ಹಬ್ಬಿರುವ ಸಂಗೀತ ಪ್ರೀತಿಗೆ ನಾಂದಿ ಹಾಕಿದವಳೇ ಚಾರುಕೇಶಿ.
"ನಮ್ಮ ನಗುವಿನಿಂದ ಹಿಡಿದು, ಅಳುವಿನವರೆಗೂ ರಾಗ ಮಿಳಿತವಾಗಿರೊತ್ತೆ ಗೊತ್ತಾ ಶಾಲ್ಮಲಿ? ಸುಮ್ಮನೆ ಕಣ್ಮುಚ್ಚಿ ಕುಳಿತರೆ ಸಾಕು.. ನೀ ಕೇಳೋ ಪ್ರತಿ ಶಬ್ದದಲ್ಲೂ ಒಂದು ಸಂಗೀತೆವಿದೆ... ಆಲಿಸು....." ಅವಳೆಂದಾಗ ಹಾಸ್ಯವೆನಿಸಿತ್ತು. ಆದರೆ ಇಂದು ಅವಳ ಆ ಮಾತೊಳಡಗಿದ್ದ ಸತ್ಯದ ರುಜುವಾತು ನನಗೆ ಕಾಣಿಸುತ್ತಿದೆ.
ಕೈಯೊಳಗಿರುವ ಗಝಲ್ ಪುಸ್ತಕ ಹಾಗೇ ಎದೆಗೊರಗಿದೆ. ಹೊರಗೆ ಮಳೆಯ ಅಬ್ಬರ ಜೋರಾಗಿದೆ. ಬಾನಿಗೆ ಗುನ್ನ ಹಾಕಿರುವ ಸೂರ್ಯ ಅರ್ಧ ದಿನ ರಜೆ ಹಾಕಿ ಮಲಗಿದಂತಹ ಕತ್ತಲು. ಆತ ಕೊರೆದಿರುವ ರಂಧ್ರದೊಳಗಿಂದ ವರ್ಷಧಾರೆ ಅವ್ಯಾಹತವಾಗಿ ಬಿಡದೇ ಸುರಿಯುತ್ತಿದೆ. ಜಗುಲಿ ಕಟ್ಟೆಯ ಮೇಲೆ ಕುಳಿತು ಹಾಗೇ ಕಣ್ಮುಚ್ಚಿದರೆ ಸಾಕು.... ಸುರಿವ ಮಳೆಯನ್ನೇ ತದೇಕಚಿತ್ತದಿಂದ ಆಲಿಸುತ್ತಿದ್ದರೆ ಅನಿರ್ವಚನೀಯ ಆನಂದ, ಪುಳಕ, ಅರಿವಿಗೆ ಬಾರದ ಅನುಭೂತಿ... ಜೊತೆಗೆ ಗಝಲ್ ಎಬ್ಬಿಸುತ್ತಿರುವ ಸಿಹಿ-ಕಹಿ ನೆನಪುಗಳು.
ಅಂದೂ ಮಳೆ ಹೀಗೇ ದಿಕ್ಕು ದೆಸೆಯಿಲ್ಲದೇ ಹೊಯ್ಯುತ್ತಿತ್ತು. ಬಿ.ಎಸ್ಸಿ. ಮೊದಲ ವರ್ಷದ ಪ್ರಥಮ ತರಗತಿಗೆಂದು ಒಳ ಹೊಕ್ಕವಳನ್ನು ಕಂಡ ತಕ್ಷಣ ಸೆಳೆದವಳು ಚಾರುಕೇಶಿ. ಮೂರನೆಯ ಬೆಂಚಿನ ಎಡ ತುದಿಯಲ್ಲಿ ಕುಳಿತು, ಗಲ್ಲಕ್ಕೆ ಎಡಗೈಯನಿಟ್ಟು, ಬಲಗೈಯಲ್ಲಿ ಮೆಲ್ಲಗೆ ತಾಳ ಹಾಕುತ್ತಾ.... ತನ್ನೊಳಗೇ ಏನೋ ಗುನಗುನಿಸುತ್ತಾ, ನಸುನಗುತ್ತಿದ್ದವಳ ಕಣ್ಣೊಳಡಗಿದ್ದ ವಿಚಿತ್ರ ಕಾಂತಿ ನನ್ನ ಅವಳೆಡೆಗೇ ಸಾಗುವಂತೆ ಮಾಡಿತ್ತು. ಬಳಿ ಸಾರುತ್ತಿದ್ದ ನನ್ನ ಗಮನಿಸಿದವಳೇ ಮುಗುಳ್ನಕ್ಕು, ತಾಳ ಹಾಕುತ್ತಲೇ ಕೊಂಚ ಸರಿದು ಕುಳಿತುಕೊಳ್ಳಲು ಕಣ್ಣಲ್ಲೇ ಆಹ್ವಾನಿಸಿದ್ದ ಅವಳ ಆ ಪರಿ ಈಗಲೂ ಪಚ್ಚೆ ಹಸಿರು.
"ಹಾಯ್.. ನನ್ನ ಹೆಸರು ಚಾರುಕೇಶಿ... ನೀನು ಕನ್‌ಫ್ಯೂಸ್ ಆಗಿ ಮತ್ತೆ ನನ್ನ ಕೇಳೋ ಮೊದ್ಲೇ ಹೇಳಿಬಿಡ್ತೀನಿ... ಇದು ಒಂದು ರಾಗದ ಹೆಸರು... ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ದುಃಖದೊಳಗೆ ಭಕ್ತಿಯನ್ನು ಬೆರೆಸಿ ಹಾಡೋ ರಾಗ... ಭಕ್ತ ದೇವ್ರನ್ನ ನನ್ನ ಈ ಬವಣೆಯಿಂದ ಮುಕ್ತಿ ಕೊಡೋ ತಂದೇ ಎಂದು ಮೊರೆಯಿಡೋ ರಾಗ.... ಇವತ್ತಿಂದ ನೀನೂ ಹಾಡ್ಕೊ ನನ್ಜೊತೆ... ಈ ತರ್ಲೆ ಹುಡ್ಗಿಯಿಂದ ಮುಕ್ತಿಕೊಡಪ್ಪಾಂತ ಬೇಡ್ಕೊಂಡ್ರೆ ಮೂರುವರ್ಷದ ಮೇಲಾದ್ರೂ ಬಿಡುಗಡೆ ಸಿಗಬಹುದು.." ಎಂದು ಕಿಲಕಿಲ ನಕ್ಕವಳ ಮಾತಿಗೆ ಮನಸಾರೆ ನಕ್ಕಿದ್ದೆ. ಒಳಗೆಲ್ಲೋ ಸ್ನೇಹ ಮೊಳಕೆಯೊಡೆದಿತ್ತು.
"ಶಾಲ್ಮಲಿ... ನಂಗೆ ಸಂಗೀತ ಅಂದ್ರೆ ಹುಚ್ಚು ಕಣೆ.. ನಮ್ಮೂರಲ್ಲಿ ಅಷ್ಟು ಚೆನ್ನಾಗಿ ಹೇಳಿಕೊಡೋರು ಯಾರೂ ಇಲ್ವೆ... ಹಾಗಾಗಿ ಅಕ್ಕನ ಮನೇಲಿ ಇದ್ಕೊಂಡು ಇಷ್ಟು ವರ್ಷ ಸ್ವಲ್ಪ ಕಲಿತೆ. ಈಗ ನಮ್ಮಕ್ಕ, ಭಾವ ಡೆಲ್ಲಿಗೆ ಹೋದ್ರು.. ಸೋ ನಾನು ನಮ್ಮೂರಿಗೆ ವಾಪಸ್ಸಾಗೋದು ಅಂತಿದ್ದೆ. ಆದರೆ ನನ್ನ ಸಪ್ಪೆ ಮುಖ ನೋಡಿ ಅಪ್ಪ ಅಂತೂ ಇಂತೂ ಒಪ್ಪಿ ಇಲ್ಲಿಗೆ ಕಳ್ಸಿದ್ದಾನೆ. ‘ಮಂಗಳೂರಲ್ಲಿ ಸರಸ್ವತಿ ಶೆಣೈ ಅನ್ನೋರಿದ್ದಾರೆ... ಅವ್ರು ತುಂಬಾ ಒಳ್ಳೇ ಸಂಗೀತ ಕಲಿಸಿ ಕೊಡ್ತಾರೆ.... ನಿಮ್ಮ ಮಗ್ಳು ಅವ್ರಲ್ಲೇ ಮುಂದುವರಿಸ್ಲಿ.. ನಾನು ಹೇಳಿರ್ತೀನಿ ಅವ್ರಿಗೆ’ ಅಂತ ಪಕ್ಕದ ಮನೆ ಪದ್ಮಾ ಆಂಟಿ ಹೇಳಿದ್ದಾ ತಡ ಓದೋ ನೆಪ ಮಾಡ್ಕೊಂಡು ಇಲ್ಲಿಗೆ ಹಾಜಾರ್ ನೋಡು... ಸರಸ್ವತಿ ಮೇಡಮ್ ಅವ್ರ ಮನೆ ಪಕ್ಕನೇ ಪಿ.ಜಿ. ಸಿಕ್ಕಿದೆ. ಲಕ್ಕಿ ಅಲ್ವಾ ನಾನು? ಮುಂದಿನ ವಾರದಿಂದ ಕ್ಲಾಸ್ ಶುರು.." ಎಂದೆಲ್ಲಾ ಬಡಬಡಿಸುತ್ತಿದ್ದವಳ ಸಂಗೀತ ಪ್ರೇಮ ಕಂಡು ಮೆಚ್ಚುಗೆಯಾಗಿತ್ತು. ಪಾಠ, ಆಟ ಎಲ್ಲವೂ ನಾದಮಯವೇ. ಡಿಸೆಕ್ಟ್ ಮಾಡುವಾಗ, ಆ ಕ್ಲೋರೋಫಾರ್ಂ ವಾಸನೆ ಕುಡಿಯುತ್ತಲೂ ಒಳಗೊಳಗೇ ಹಾಡಿಕೊಳ್ಳುವ ಅವಳ ತನ್ಮಯತೆಗೆ ಬೆರಗಾಗಿ ಹೋಗಿದ್ದೆ. ಅವಳು ಹುಟ್ಟಿದ್ದೇ ಸಂಗೀತಕ್ಕಾಗೇನೋ ಎಂದೆನಿಸುತ್ತಿತ್ತು.
"ಚಾರು... ನಿಂಗೆ ನಿನ್ನ ಹೆಸರನ್ನು ಮೊದಲ ಸಲ ಕೇಳಿದಾಗ ಏನು ಅನಿಸ್ಲಿಲ್ವಾ? ಅಲ್ಲಾ.. ಸ್ವಲ್ಪ ಡಿಫೆರೆಂಟ್ ಆಗಿದ್ಯಲ್ಲಾ.. ಸೋ..." ಒಮ್ಮೆ ಹೀಗೇ ಕುತುಹೂಲ ತೋರಿದ್ದೆ. "ಅಯ್ಯೋ ಇಲ್ವೇ... ನಂಗೆ ಬುದ್ಧಿ ಬರುವಾಗ್ಲೇ ಅಪ್ಪಾ ಸಂಗೀತಾಭ್ಯಾಸ ಶುರು ಮಾಡಿದ್ರು.... ‘ನಿನ್ನ ಹೆಸ್ರೂ ಒಂದು ರಾಗ ಕಾಣಮ್ಮಾ..... ನಮ್ಮ ದುಃಖ ದುಮ್ಮಾನಗಳಿಂದ ಮುಕ್ತಿಕೊಡಲು ಭಕ್ತಿಯಿಂದ ಅವನನ್ನು ಕೇಳಿಕೊಳ್ಳೋವಾಗ ಹಾಡುಕೊಳ್ಳೋ ರಾಗ..’ ಎಂದೆಲ್ಲಾ ಅಪ್ಪಾ ಹೇಳ್ತಾ ಇರ್ತಿದ್ರು. ಅದೂ ಅಲ್ದೇ ಇನ್ನೂ ಒಂದು ಇಂಟರೆಸ್ಟಿಂಗ್ ಕಥೆ ಇದೆ ಈ ಹೆಸ್ರ ಹಿಂದೆ.. ನನ್ನಮ್ಮ ಒಳಗಡೆ ಹೆರಿಗೆನೋವಲ್ಲಿ ಒದ್ದಾಡ್ತಿರೋವಾಗ, ನನ್ನಪ್ಪನ ತಲೆಯೊಳಗೆ ಇದೇ ರಾಗದಲ್ಲಿದ್ದ ಹಾಡೊಂದು ಯಾಕೋ ಪದೇ ಪದೇ ನೆನಪಾಗ್ತಾ ಇತ್ತಂತೆ... ಹಾಗಾಗಿ ಹುಟ್ಟಿದಾಕ್ಷಣ ಚಾರುಕೇಶಿ ಅಂತಾನೇ ಇಟ್ಬಿಟ್ರು..." ಎಂದಿದ್ದಳು ಹೆಮ್ಮೆಯ ನಗು ಬೀರಿ.
"ಸಾಕು ಸುಮ್ನೀರೇ ಮಾರಾಯ್ತಿ.. ಯಾವಾಗ ನೋಡಿದ್ರು.. ಆ ಸ್ವರ, ಈ ರಾಗ... ಅಂತ ಕೊರೆಯೋದು... ಅದ್ಯಾವ ಮುಹೂರ್ತದಲ್ಲಿ ನಿಂಗೆ ಈ ಹೆಸ್ರು ಇಟ್ರೋ... ಏನಾದ್ರೂ ಹಾಡಿಕೊಳ್ತಾನೇ ಇರ್ತೀಯಾ.... ಈ ಸುಖಕ್ಕೆ ನಾನು ನಿನ್ಜೊತೆ ಯಾಕೆ ಕಾಲಹರಣ ಮಾಡ್ಲಿ?" ಎಂದೊಮ್ಮೆ ಸಿಡುಕಿದ್ದಕ್ಕೆ... "ಚಂದ್ರೋದಯದ ಮುಹೂರ್ತ ನೋಡು... ರಾತ್ರಿ ಹಾಡಿಕೊಳ್ಳೋ ರಾಗಾನೇ ನಾನು.. ಅಂದರೆ ಚಾರುಕೇಶಿ. ಅಲ್ವೇ.. ಸುಮ್ಮನೇ ಯಾಕೆ ಕೂರೋದು? ಖಾಲಿ ಮನಸ್ಸು ಸೈತಾನನ ಆಗರ ಗೊತ್ತಾ? ಹಾಗಾಗಿ ಸೈತಾನನ ಓಡಿಸ್ಲಿಕ್ಕೇ ಸಂತ ತುಕಾರಾಮನ ಈ ಹಾಡನ್ನು ಕೇಳು.. .‘ಭೆಟಿಲಾಗಿ ಜೀವ ಲಾಗಲೀಸೆ ಆಸ್..’" ಎಂದು ತುಕಾರಾಮರ ಮರಾಠಿ ಅಭಂಗ್‌ಅನ್ನು ಸುಶ್ರಾವ್ಯವಾಗಿ ಹಾಡತೊಡಗಿದಾಗ ನಾನೂ ಮೈಮರೆತಿದ್ದೆ.
ಎರಡು ವರುಷಗಳು ಅದು ಹೇಗೆ ಕಳೆದವೋ ತಿಳಿಯಲೇ ಇಲ್ಲಾ! ಸಂಗೀತವೆಂದರೆ ಅಷ್ಟಕಷ್ಟೇ ಅಂತಿದ್ದ ನನ್ನೊಳಗೂ ಅದರ ಮೇಲೆ ಆಸಕ್ತಿ ಕೆರಳಿಸಿದ್ದಲ್ಲದೇ, ಪ್ರೀತಿಯನ್ನೂ ಹುಟ್ಟು ಹಾಕಿದ್ದಳು ಚಾರು. ಸಹವಾಸ ದೋಷವೋ ಎಂತೋ.. ನಾನೂ ಈಗ ಹಾಡುಗಳಲ್ಲಿರುವ ರಾಗವನ್ನು ಗುರುತಿಸತೊಡಗಿದ್ದೆ.
"ಇನ್ನೊಂದೇ ವರುಷ ಶಾಲಿ.. ಆಮೇಲೆ ನಾನು ಸಂಗೀತದಲ್ಲೇ ಹೈಯರ್ ಸ್ಟಡೀಸ್ ಮಾಡೋಕೆ ಹೋಗ್ಬೇಕು ಅಂತಿದ್ದೀನಿ.. ಈ ಡೆಸೆಕ್ಷನ್ ಕಂಡ್ರೆ ಆಗೊಲ್ಲಾ.. ಬಾಟನಿ ಇದೆ ಅಂತಾ ಈ ಕಾಂಬಿನೇಷನ್ ತಗೊಂಡೆ.. ಗೊತ್ತಲ್ಲಾ ನಮ್ಮ ಬೋಸ್ ಸಾಹೇಬ್ರು ಹೇಳಿದ್ದಾರೆ ಸಂಗೀತಕ್ಕೂ, ಸಸ್ಯಕ್ಕೂ ತುಂಬಾ ನಂಟಿದೆ ಅಂತಾ...." ಎಂದವಳ ಮಾತಿಗೆ ನಗುವುಕ್ಕಿದ್ದರೂ, ಮನಸ್ಸು ಬಾಡಿತ್ತು. ಸಂಗೀತಕ್ಕೂ ವಿಜ್ಞಾನಕ್ಕೂ ಇರುವ ಯಾವುದೋ ಒಂದು ವಿಶಿಷ್ಟ ಲಿಂಕ್ ಇವಳಲ್ಲಿ ಕಂಡುಕೊಂಡಿದ್ದೆ..... ನಾನು ಅರಿಯದಂತೇ ನನ್ನೊಳಗೆ ಆಳವಾಗಿ ಬೇರೂರಿದವಳ ಅಗಲಿಕೆಯ ಕಲ್ಪನೆಯಿಂದಲೇ ಮನಸ್ಸು ಆರ್ದ್ರವಾಗಿತ್ತು. ಆದರೆ ನಿಯತಿ ಹಾಡುವ ರಾಗಕ್ಕೆ ಶ್ರುತಿಯಿರಲೇಬೇಕೆಂದ ನಿಯಮವಿಲ್ಲ ಎನ್ನುವ ಕಹಿ ಸತ್ಯವನ್ನು ಮರೆತಿದ್ದೆ.
"ಡಿಯರ್ ಸ್ಟುಡೆಂಟ್ಸ್... ನಿಮ್ಮ ಮೆಚ್ಚಿನ ಸಹಪಾಠಿ.. ಉತ್ತಮ ಸಂಗೀತಗಾರ್ತಿ ಚಾರುಕೇಶಿ ಇಂದು ಬೆಳಗ್ಗೆ ದೊಡ್ಡ ಅಪಘಾತಕ್ಕೆ ಗುರಿಯಾಗಿ, ಕೆ.ಎಂ.ಸಿಯಲ್ಲಿ ಅಡ್ಮಿಟ್ ಆಗಿದ್ದಾಳೆ. ಚಲಿಸುತ್ತಿದ್ದ ಬಸ್‌ನಿಂದ ಆಯತಪ್ಪಿ ಬಿದ್ದು ಬಿಟ್ಟಳಂತೆ.... ಬಹುಶಃ ತುದಿಯಲ್ಲಿ ನಿಂತಿದ್ದಳೇನೋ... ತಲೆಯ ಹಿಂಭಾಗಕ್ಕೆ ತುಂಬಾ ಪೆಟ್ಟಾಗಿದೆಯಂತೆ.... ಕ್ರಿಟಿಕಲ್ ಕಂಡೀಷನ್ ಅಂದಿದ್ದಾರೆ ಡಾಕ್ಟರ್ಸ್.. ಪ್ಲೀಸ್ ಪ್ರೇ ಫಾರ್ ಹರ್.. ನಾನೀಗ ಅಲ್ಲಿಗೇ ಹೊರಟಿದ್ದೇನೆ..." ಎಂದು ಪ್ರಿನ್ಸಿಪಾಲರು ಎರಡನೇ ತರಗತಿಯ ನಡುವೆ ಬಂದು ಅನೌನ್ಸ್ ಮಾಡಿದಾಗಲೇ ನನಗೂ ವಿಷಯ ತಿಳಿದಿದ್ದು!
"ನಾಳೆ ನಾನು ಬರೋದು ಡೌಟು ಶಾಲಿ... ಸಂಗೀತ ಟೀಚರ್ ಜೊತೆ ಒಂದು ಫಂಕ್ಷನ್‌ಗೆ ಹೋಗ್ಬೇಕು.. ಅಲ್ಲಿ ಹೊಸ ಹಾಡನ್ನು ಹಾಡ್ತಿದ್ದಾರಂತೆ ಇವತ್ತು... ಹೇಗಿದ್ರೂ ಇಂಪಾರ್ಟೆಂಟ್ ಕ್ಲಾಸ್‌ಗಳಿಲ್ಲ... ಸೋ.. ಬಂಕ್ ಮಾಡ್ತೀನಿ ನಾನು.." ಎಂದು ಹಿಂದಿನ ದಿನವೇ ಹೇಳಿದ್ದರಿಂದ ಇಂದು ಗೈರುಹಾಜರಿಯಾದವಳ ಬಗ್ಗೆ ಆಷ್ಟೊಂದು ಯೋಚಿಸಿರಲೇ ಇಲ್ಲ. ಅಚಾನಕ್ಕಾಗಿ ಬಂದಪ್ಪಳಿಸಿದ ಅವಳ ಅಪಘಾತದ ಸುದ್ದಿ ನನ್ನನ್ನು ಸಂಫೂರ್ಣ ನಿಷ್ಕ್ರೀಯಗೊಳಿಸಿಬಿಟ್ಟಿತ್ತು. ತಾಸೊಳಗೇ ಸಹಪಾಠಿಗಳೆಲ್ಲಾ ಅವಳಿದ್ದ ಆಸ್ಪತ್ರೆಯೆಡೆ ಹೊರಟಿದ್ದರೆ, ನಾನು ಮನೆಯ ದಾರಿ ಹಿಡಿದಿದ್ದೆ. ಯಾಕೋ ವಾಸ್ತವಿಕತೆಯನ್ನೇ ಸುಳ್ಳೆನ್ನುತ್ತಿತ್ತು ನನ್ನ ಮನಸ್ಸು.
~~~~
ಚಾರುಕೇಶಿ ಅನಂತದಲ್ಲಿ ಲೀನವಾಗಿ ವಾರಗಳು ಕಳೆದಿದ್ದರೂ, ಹೆಪ್ಪುಗಟ್ಟಿದ ಭಾವ ಹರಿದಿರಲೇ ಇಲ್ಲಾ. ಹುಚ್ಚು ಮೇಲೇರಿದಂತೇ ಅಭ್ಯಾಸದಲ್ಲಿ ಮುಳುಗಿ ಹೋಗಿದ್ದೆ. ಅವಳಿದ್ದಳು, ಈಗಿಲ್ಲಾ ಅನ್ನೋ ವಸ್ತುಸ್ಥಿತಿಯನ್ನೇ ಎಲ್ಲೋ ಮೂಲೆಗೆ ತಳ್ಳಿಬಿಟ್ಟಿದ್ದೆ. ಆದರೆ ಅಂತಹ ಸ್ಥಿತಿಯಲ್ಲೂ ನನ್ನೊಳಗೆ ಅವಳಿಷ್ಟದ "ಅಲಬೇಲಾ ಸಜನ್ ಆಯೋರೆ..." ಹಾಡು ಸಂಚರಿಸುತ್ತಲೇ ಇದ್ದಿದ್ದು ಇಂದಿಗೂ ನನಗೆ ಸೋಜಿಗ! ಅವಳ ಪ್ರೇತವೇನಾದರೂ ನನ್ನೊಳಗೆ ಸೇರಿರಬಹುದೇ? "ಮಲಯ ಮಾರುತದ" ಚಲನಚಿತ್ರದಲ್ಲೂ ಹೀಗೇ...... ನಾಯಕ ತನ್ನ ಸಂಗೀತ ಗುರುಗಳ ಗೋರಿಯ ಬಳಿ ಕುಳಿತು ದುಃಖಿಸುವಾಗ ಗುರುವಿನ ಆತ್ಮ ಇವನೊಳಗೆ ಸೇರಿ ಅವನೊಬ್ಬ ದೊಡ್ಡ ಸಂಗೀತಗಾರನಾಗುತ್ತಾನೆ... ಹಾಗೇ ಇವಳು ನನ್ನ ಮೂಲಕ ತನ್ನ ಸಂಗೀತ ತೃಷೆ ತೀರಿಸಿಕೊಳ್ಳಲು ಬಂದಿರಬಾರದೇಕೆ? ಎಂಬೆಲ್ಲಾ ಕ್ಷುದ್ರ ಯೋಚನೆಗಳಿಂದ ಕೆಂಗೆಟ್ಟು ಹೋಗಿದ್ದೆ. ಮನೆಯವರೆಲ್ಲಾ ನನ್ನ ಸಮಾಧಾನಕ್ಕೆ ಸಾಕಷ್ಟು ಯತ್ನಿಸಿದರೂ ದುಃಖ ಕಣ್ಣೀರಾಗಿ ಹರಿಯಲೇ ಇಲ್ಲಾ. ಒಳಗೇ ಗಟ್ಟಿಯಾಗಿ ಕುಂತು, ಆಗೀಗ ಸಂಗೀತ ನಾದವನ್ನು ಹೊರಡಿಸುತ್ತಲೇ ಇತ್ತು! ಈ ಕಟ್ಟೆ ಒಡೆದು, ನೋವು ನೀರಾಗಿ ಹರಿಯಲು ಬರೋಬ್ಬರಿ ಒಂದು ವರುಷ ತಗುಲಿದ್ದವು. ಅದೂ ಅವಳೇ ನನ್ನ ಯಾತನೆಯ ಮುಕ್ತಿಗೆ ಕಾರಣೀಭೂತಳಾಗಿದ್ದು ಮತ್ತೊಂದು ವಿಸ್ಮಯ.
ಮಗಳ ಸಾವಿನಿಂದ ಕೆಂಗೆಟ್ಟಿದ್ದರೂ ಅವಳಪ್ಪ, ಚಾರುಕೇಶಿಯ ಹೆಸರಿನಲ್ಲಿ ಒಂದು ಟ್ರಸ್ಟ್ ಮಾಡಿದ್ದಲ್ಲದೇ, ಪ್ರತಿ ವರುಷ ಸಂಗೀತದ ನಂತರ ಅವಳು ಬಲು ಇಷ್ಟಪಡುತ್ತಿದ್ದ "ಬಾಟನಿ" ವಿಷಯದಲ್ಲಿ ಯಾರು ಹೆಚ್ಚು ಅಂಕ ಗಳಿಸುವರೋ ಅವರಿಗೆ ಐದು ಸಾವಿರವನ್ನು ಬಹುಮಾನವಾಗಿ ಕೊಡಬೇಕೆಂದು ವಿನಂತಿಸಿಕೊಂಡಿದ್ದರು. ಅಂತೆಯೇ ಆ ವರುಷ ಬಾಟನಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದ ನನಗೇ ಪ್ರಿನ್ಸಿಪಾಲರು "ಇದು ಚಾರುಕೇಶಿಯ ಸವಿನೆನಪಲ್ಲಿ ಅವಳ ತಂದೆವರು ಕೊಡುತ್ತಿರುವ ಬಹುಮಾನ.." ಎನ್ನುತ್ತಾ ಚೆಕ್‌ಅನ್ನು ನನಗೆ ಕೊಡುವಾಗಲೇ ಹರಿಯತೊಡಗಿದ್ದು ಮಡಗಟ್ಟಿದ್ದ ಯಾತನೆ! ಅಂದಿನಿಂದ ಇಂದಿನವರೆಗೂ ಆ ಹಣ ಹಾಗೇ ಭದ್ರವಾಗಿದೆ ಬೀರುವಿನಲ್ಲಿ.... ನನ್ನೊಳಗೆ ಬಂಧಿಯಾಗಿರುವ ಅವಳ ಮಧುರ ಸ್ನೇಹದಂತೇ.
ಇಂದೆಕೋ ಚಾರು ನನ್ನ ಬಹುವಾಗಿ ಕಾಡುತ್ತಿದ್ದಾಳೆ. ಕಣ್ಮುಂದೆ ಮಲ್ಹಾರ ರಾಗ ನುಡಿಸುತ್ತಿರುವ ಮಳೆಯರಾಯನಿಂದಾಗಿರಬೇಕು. ಇಳೆಯೊಳಗೆಬ್ಬಿಸುತ್ತಿದ್ದ ನೀರಲೆಗಳ ಜೊತೆಯಲ್ಲೇ, ಹೂತ ನೂರಾರು ನೆನಪಿನ ತರಂಗಗಳನ್ನೂ ಎಬ್ಬಿಸುತ್ತಿದ್ದಾನೆ. ಆದರೆ ಅಂದಿನ ಯಾತನೆಯ ಉರಿಯಿಲ್ಲ ಎದೆಯೊಳಗೆ.... ತನ್ನ ಹೆಸರಿಗೆ ಅನ್ವರ್ಥವಾಗಿ ನನ್ನೊಳಗಿನ ದುಃಖಕ್ಕೆ ಬಿಡುಗಡೆ ನೀಡಿದ್ದಾಳೆ ಚಾರುಕೇಶಿ.
[*ವಿಜಯ ನೆಕ್ಸ್ಟ್ ಪೇಪರಿನಲ್ಲಿ ಪ್ರಕಟಿತ.]
-ತೇಜಸ್ವಿನಿ ಹೆಗಡೆ.
ಬುಧವಾರ, ಏಪ್ರಿಲ್ 23, 2014
ಮಕ್ಕಳ ಜೊತೆಯಲಿ ಸುಂದರ ಪಯಣ.....
ಮರೆಯಲಾಗದ ಅನುಭವಗಳು, ಕೆಲವು ಸಲಹೆಗಳು....
ಅದಿತಿಗೆ ಆಗ ಏಳು ತಿಂಗಳಾಗಿತ್ತಷ್ಟೇ. ಪ್ರಪಂಚವನ್ನು ತನ್ನ ಪುಟ್ಟ ಪುಟ್ಟ ಕಣ್ಗಳಲ್ಲಿ ತುಂಬಿಕೊಳ್ಳಲು ಆಗಷ್ಟೇ ಶುರುವಿಟ್ಟುಕೊಂಡಿದ್ದಳು ಪುಟ್ಟಿ. ಆವರೆಗೂ ಅವಳು ಜನ್ಮಿಸಿದ ಮಂಗಳೂರಿನ ಆಸು ಪಾಸಿಗಷ್ಟೇ ಅವಳ ವಿಹಾರ ಸೀಮಿತವಾಗಿತ್ತು. ಮೊತ್ತ ಮೊದಲ ಬಾರಿ ತನ್ನ ಅಜ್ಜನ ಮನೆಯಾದ ಶಿರಸಿಯೆಡೆಗೆ ಪಯಣ ಬೆಳೆಸಲು ಹೊರಟಿದ್ದಳು. ಮನದೊಳಗೆ ಏನೋ ಆತಂಕ. ರಾತ್ರಿ ಸ್ಲೀಪಿಂಗ್ ಬಸ್ಸ್‌ನಲ್ಲಿ ಪ್ರಯಾಣಿಸುವಾಗ ಹೇಗಾದರೂ ಮಾಡಿ ಮಲಗಿಸಿ ಪಯಣ ಸಾಗಿಸಬಹುದೇನೋ! ಆದರೆ ಕಾರಿನಲ್ಲಿ ಹಗಲು ಪಯಣದಲ್ಲಿ ಪುಟ್ಟ ಮಕ್ಕಳನ್ನು ದೂರದೂರಿಗೆ ಕರೆದೊಯ್ಯುವುದು ಬಲು ಪ್ರಯಾಸ ಅನ್ನೋದು ಹಲವರ ಅನುಭವ, ಅಂಬೋಣ. ನನ್ನದೇ ಅನಿವಾರ್ಯ ಕಾರಣಗಳಿಂದ, ಈ ದೇಶದಲ್ಲಿ ವಿಶಿಷ್ಟ ಚೇತನರಿಗಿರುವ (ಅ)ವ್ಯವಸ್ಥೆಯಿಂದ ಬಸ್ಸಿನಲ್ಲಿ ಸುಲಭ ಪಯಾಣ ನನ್ನ ಮಟ್ಟಿಗೆ ಅಸಾಧ್ಯವೇ! ಹಾಗಾಗಿ ಸದಾಕಾಲ ಕಾರಿನಲ್ಲೇ ಪಯಣಿಸುವುದು ನನ್ನ ಹಣೆಯಲ್ಲಿ ಬರೆದಿರುವ ರಾಜಯೋಗವೇ ಅನ್ನಿ :) ಆಗ ನಾನೋ ತಾಯ್ತನದ ಹೊಸತನದಲ್ಲಿ ಹೊಸ ಹೊಸ ಅನುಭವಗಳನ್ನು ಅವಳಷ್ಟೇ ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಅವಳಪ್ಪನಿಗಂತೂ ಮಗಳ ಮುಂದೆ ಏನೂ ಕಾಣದು. ಎಲ್ಲಿ ಅವಳು ಅತ್ತು, ಕರೆದು ರಂಪ ಮಾಡಿ, ಗಲಾಟೆ ಎಬ್ಬಿಸುವಳೋ, ನಾನೆಂತು ಸಂಭಾಳಿಸಲಿ ಎಂದು ಚಿಂತಿಸುವಾಗ ಅನುಭವಿ ಹಸ್ತಗಳೆರಡು ನನ್ನ ಜೊತೆ ಸೇರಿದ್ದವು. ಅದೇ ಅವಳಜ್ಜಿ ಅಂದರೆ ನನ್ನಮ್ಮನ ಸಾಥ್! ಆದರೂ ಸ್ವತಃ ನನ್ನಮ್ಮನೇ ಹಲವು ಸಲಹೆಗಳನ್ನು ನೀಡಿದ್ದರೂ, ಏನೂ ಆಗೊಲ್ಲಾ ಎನ್ನುತ್ತಾ ಜೊತೆಗೂಡಿದ್ದರೂ, ಈ ತಾಯಿಯ ಮನಸಿಗೆ ಸಮಾಧಾನವಿಲ್ಲ. "ಬೆಳಗ್ಗೆ ಬೇಗ ಹೊರಡನ, ಆಗ ಪಾಪುಗೆ ಅಷ್ಟು ತ್ರಾಸ್ ಆಗದಿಲ್ಲೆ.." ಎಂದು ಅಮ್ಮ ಹೇಳಿದಾಗ, ಚೆನ್ನಾಗಿ ನಿದ್ದೆಯಾಗೆದ್ದ ಮೇಲೇ ಹೊರಟರೆ ಸುಮ್ಮನಿದ್ದಾಳೆಂದು ನಾನೇ ಭಾವಿಸಿ ಆರಾಮಾಗೇ ಪಯಣ ಆರಂಭಿಸಿದ್ದಾಗಿತ್ತು. ಮೊದಲೊಂದು ತಾಸು ಪುಟ್ಟಿ ಬೆರಗುಗಣ್ಣಿಂದ ಹಿಂದೆ ಸಾಗುವ ದೃಶ್ಯಗಳನ್ನೇ ದಿಟ್ಟಿಸುತ್ತಾ ಸುಮ್ಮನೆ ಬೆಚ್ಚಾಗಿ ಕೂತಿದ್ದರೂ, ಆಮೇಲೆ ಎಲ್ಲಾ ಕಿತಾಪತಿಗಳೂ ಶುರುವಾಗಿಹೋಗಿದ್ದವು. ಎದುರಿಗೆ ನನ್ನ ಜೊತೆ ಕೂರಿಸಿಕೊಂಡಾಗ, ಕಿರುಗಾಲಲ್ಲೆ ಕೈಯಲ್ಲೇ ಡ್ರೈವ್ ಮಾಡುತ್ತಿದ್ದ ಅವಳಪ್ಪನ ಎಳೆಯುವುದು, ಕಾರಿನ ಗ್ಲಾಸ್ ಹಾಕಿದರೆ ಬಡಿದು ಒಡೆದೇ ಬಿಡುವಳೇನೋ ಎಂಬಂತೆ ಭೀತಿ ಹುಟ್ಟಿಸುವುದು, ಹಿಂಬದಿಯಲ್ಲಿ ಕುಳಿತಿದ್ದ ಅಜ್ಜಿಯಲ್ಲಿ ಬಿಟ್ಟರೆ ಸಣ್ಣ ದನಿಯಲ್ಲೇ ಕುಂಯ್ಯ್‌ಗುಡುತ್ತಾ ಎದೆಯೊಳಗೆ ಅವಲಕ್ಕಿ ಕೂಟ್ಟಿದಂತೇ ಇನ್ನೇನು ಕಾದಿದೆಯಪ್ಪಾ, ಇನ್ನೆಷ್ಟು ದೂರವಿದೆಯಪ್ಪಾ.. ಇವಳು ಯಾವಾಗ ಮಲಗುತ್ತಾಳೋ ಎಂದು ಪರಿತಪಿಸುವಂತೇ ಮಾಡಿಬಿಟ್ಟಿದ್ದಳು. ಅಂತಹ ದೊಡ್ಡ ಗಲಾಟೆ ಏನೂ ಮಾಡದಿದ್ದರೂ, ಪಯಣದ ಮೊದಲು ಅಮ್ಮ ಹೇಳಿದ್ದ ಹಲವು ಉಪಾಯಗಳನ್ನು ಮರೆತಿದ್ದು, ಕೆಲವು ಸುಲಭ ಪರಿಹಾರಗಳಿಗೆ ನಾವು ಗಮನ ಹರಿಸದ್ದು ನಮ್ಮ ಸಮಸ್ಯೆಗಳನ್ನು ಹೆಚ್ಚಿಸಿದ್ದಂತೂ ಹೌದು. ಮಂಗಳೂರಿನಿಂದ ಶಿರಸಿಯಕಡೆ ಹೊರಡುವಾಗ ಕುಮಟಾದ ನಂತರ ದೇವಿಮನೆ ಘಟ್ಟ ಸಿಗುತ್ತದೆ. ಶಿರಾಡಿ ಘಾಟ್, ಚಾರ್ಮಾಡಿ ಘಾಟ್‌ನಷ್ಟು ದೊಡ್ಡ ಘಟ್ಟವಲ್ಲದಿದ್ದರೂ, ಸಣ್ಣದೂ ಅಲ್ಲ. ಘಟ್ಟ ಹತ್ತುವಾಗ ಹಾಲೂಡಿಸುವುದು ಕಷ್ಟವೆಂದು ಕುಮಟಾದ ಹತ್ತಿರವೇ ಹಾಲು ಕೊಟ್ಟು ಬಿಟ್ಟೆ "ಈಗ ಕೊಡಡ, ಮಣ್ಣಿ ಹಾಕ್ತೆ, ಹಣ್ಣೆಂತಾರು ಚೀಪಲೆ ಕೊಡನ... ಘಟ್ಟದಲ್ಲಿ ಹಾಲು ಕೊಡ್ತು ವಾಂತಿ ಆಗ್ತು.." ಎಂದು ಅಮ್ಮಾ ಹೇಳಿದ್ದಳು. ಆದರೆ ಆಗ ನಾನೇ ಮಹಾತಾಯಿ ಎಂಬಂತೆ, ಮಗಳ ಕಿರಿಕಿರಿಗೆ, ಹಾಲು ಕೊಟ್ಟರೆ ತೆಪ್ಪಗೆ ಮಲಗಿಯಾಳು.. ಘಟ್ಟ ಹತ್ತುವುದು ಸುಲಭವಾಗುವುದೆಂದು ಬಗೆದು ಅಮ್ಮನನ್ನೂ ಸುಮ್ಮನಿರಿಸಿ ಹಾಲುಕೊಟ್ಟುಬಿಟ್ಟೆ. ಘಟ್ಟ ಹತ್ತಲು ಶುರುವಾಗಿ ೧೦ ನಿಮಿಷವಾಗಿತ್ತೋ ಇಲ್ಲವೋ.... ಕುಡಿದಿದ್ದ ಹಾಲೆಲ್ಲಾ ನನ್ನಮ್ಮನ ಸೀರೆಯ ಮೇಲೆ ಹರಡಿದ್ದವು. ವಾಂತಿ ನಿಲ್ಲಿಸಲೂ ಅಸಾಧ್ಯವಾದಂತಾಗಿ, ದಿಕ್ಕು ದೋಚದೇ ಬದಿಯಲ್ಲಿ ಕಾರು ನಿಲ್ಲಿಸಿಬಿಟ್ಟೆವು. ಅಮ್ಮ ಮುಂದಾಲೋಚನೆಯಿಂದ ಮಕ್ಕಳಿಗೆ ಸಾಮಾನ್ಯವಾಗಿ ಕೊಡುವ (ಡಾಕ್ಷರ್ ಸಲಹೆ ಕೊಟ್ಟಿದ್ದ) ‘ಡೊಮ್‌ಸ್ಟೇಲ್’ ಸಿರಪ್ ತಂದಿದ್ದರಿಂದ ಮಗಳು ಚೇರಸಿಕೊಂಡು ಪಯಣ ನಿಧಾನವಾಗಿ ಮುಂದುವರಿಯಿತು. ನನ್ನೊಳಗೆ ಅಪರಾಧಿ ಪ್ರಜ್ಞೆ. ಮುಂದೆಂದೂ ಅಮ್ಮನ ಎಚ್ಚರಿಕೆಯನ್ನು ಕಡೆಗಣಿಸುವ ಸಾಹಸಕ್ಕೆ ಕೈ ಹಾಕಲೇ ಇಲ್ಲ. ಮುಂದಿನ ತಿಂಗಳೇ ಪಯಣ ಬೆಂಗಳೂರಿನತ್ತ. ಈ ಸಲ ಮಂಗಳೂರಿನಿಂದ ಹೊರಡುವಾಗಲೇ ಎಲ್ಲಾ ಮುಂಜಾಗ್ರತೆ ತೆಗೆದುಕೊಂಡಿದ್ದರಿಂದ ಶಿರಾಡಿ ರಾಡಿಯೆಬ್ಬಿಸಲಿಲ್ಲ. ಅಲ್ಲಿಂದ ಎಡೆಬಿಡದೇ ಮಗಳೊಡನೆಯೇ ಸಾಗಿದ ನಮ್ಮ ದೂರದೂರಿನ ಪಯಣಗಳು ಹಲವಾರು ಅನುಭವಗಳನ್ನು ಕಟ್ಟಿಕೊಟ್ಟಿವೆ. ಈಗ ಅದಿತಿಗೆ ೭ ವರ್ಷಗಳು ನಡೆಯುತ್ತಿದ್ದು, ಈ ವಯಸ್ಸಿನ ಮಕ್ಕಳನ್ನು ಹಲಗಲು ದೂರದ ಪಯಣಗಳಿಗೆ ಸಜ್ಜಾಗಿಸುವಷ್ಟೂ ಅನುಭವ ನನ್ನನ್ನು ಗಟ್ಟಿಯಾಗಿಸಿದೆ. ನಾನು ಎಡವಿ ಕಲಿತ, ಕಲಿತು ನುರಿತ ಅನುಭವಗಳಿಂದ, ಈಗಿನ್ನೂ ಪುಟ್ಟ ಕಂದಮ್ಮಗಳ ಜೊತೆ ವಾಹನದಲ್ಲಿ ಹಗಲು ಪಯಣಿಸುವವರಿಗೆ ಸಣ್ಣ ಪುಟ್ಟ ಸಹೆಗಳನ್ನಿತ್ತರೆ, ಅವುಗಳಿಂದ ಅವರಿಗೆಲ್ಲಾ ಏನಾದರೂ ಒಂದು ಸಣ್ಣ ಸಹಾಯವಾದರೂ ಸರಿಯೇ... ನನಗೆಷ್ಟೂ ನೆಮ್ಮದಿಯೆನಿಸಿತು. ಹಾಗಾಗಿ ನನ್ನ ಅನುಭವಕ್ಕೆ ಬಂದ ಕೆಲವು ಸರಳ ಸುಲಭ ಟಿಪ್ಸ್‌ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ... ನಿಮಗೆ ಇಷ್ಟವಾದರೆ, ನೀವೂ ಇತರರೊಂದಿಗೆ ಹಂಚಿಕೊಳ್ಳಿರಿ.
(ವಿ.ಸೂ. :- ಮಗುವಿನಿಂದ ಮಗುವಿಗೆ ಸ್ವಭಾವ ಭಿನ್ನವಾಗಿರುತ್ತದೆ. ಹಾಗಾಗಿ ನಾನು ಕಂಡುಕಂಡ ಅನುಭವವೇ ಪರಮಸತ್ಯ, ಸಾರ್ವಕಾಲಿಕ ಮಾನ್ಯ ಎಂದು ಖಂಡಿತ ಹೇಳುತ್ತಿಲ್ಲ. ಸಾಮಾನ್ಯವಾಗಿ ಇಂತಹ ಅನುಭವಗಳು ಎಲ್ಲರಿಗೂ ಆಗುವಂಥದ್ದು... ಆಗ ಹೀಗಿದ್ದರೆ ಚೆನ್ನ ಎಂದಷ್ಟೇ ಹೇಳುವುದು ನನ್ನ ಉದ್ದೇಶ. ಅವರವರ ಮಕ್ಕಳ ಮನೋಭಿಲಾಷೆ, ವರ್ತನೆ ಹೆತ್ತವರಿಗೇ ಚೆನ್ನಾಗಿ ತಿಳಿದಿರತ್ತದೆ. ಅದನ್ನವಲಂಬಿಸಿ ಮಾರ್ಪಾಡುಗಳನ್ನು ಮಾಡಿಕೊಳ್ಲಬೇಕಾಗುತ್ತದೆ.)
೧. ಚಿಕ್ಕ ಮಕ್ಕಳಿದ್ದಾಗ ಮಾತ್ರವಲ್ಲ, ದೊಡ್ಡವರಿಗೂ ಕೂಡ ಬೆಳಗ್ಗೆ ಬೇಗನೆದ್ದು ಪಯಾಣ ಆರಂಭಿಸಿದರೆ ಆಯಾಸ ಅಷ್ಟು ಬಾಧಿಸದು. ಇನ್ನು ಪುಟ್ಟ ಮಕ್ಕಳಿದ್ದರೆ ಅದು ಮತ್ತಷ್ಟು ಅನುಕೂಲ. ಹೇಗಿನ್ನುವಿರಾ? ನೋಡಿ... ಬೇಗನೆಬ್ಬಿಸಿ, ಹೊರಡಿಸುವ ಉತ್ಸಾಹ ತೋರಿದಾಗ ಅವರೂ ಹೊರಗೆಲ್ಲೋ, ಅಷ್ಟು ಮುಂಜಾನೆಯೇ ಹೋಗುವ, ಹೊಸಬಟ್ಟೆ ಧರಿಸುವ ಖುಶಿಯಲ್ಲಿ ಬಹು ಬೇಗ ತಯಾರಾಗುತ್ತಾರೆ. ಬಿಸಿಲೇರುವ ಮುನ್ನ ನೀವು ಸಾಕಷ್ಟು ದೂರ ಸಾಗುವಿರಿ. ನಡುವೆ ಆಹಾರವನ್ನಿತ್ತರೆ, ಅರ್ಧ ದಾರಿ ಕ್ರಮಿಸುವಷ್ಟರಲ್ಲೇ ಬೇಗನೆದ್ದುದರಿಂದ ಕಣ್ಣು ಕೂರಲು ಶುರುವಾಗಿ ನಿದ್ದೆಗೆ ತೊಡಗುತ್ತಾರೆ. ಪಯಣದ ಬಹಳಷ್ಟು ಸಮಯ ನಿದ್ದೆಯಲ್ಲೇ ಅವರು ಕಳೆವಂತಾಗುತ್ತದೆ. ಸಂಭಾಳಿಸುವುದು ಸುಲಭ! (ಹಾಂ. ಡ್ರೈವ್ ಮಾಡುವವರು ಮಾತ್ರ ಬೆಳಗ್ಗೆ ಬೇಗನೆ ಹೊರಡಲು, ರಾತ್ರಿ ಬೇಗ ನಿದ್ದೆ ಮಾಡುವುದು ಕಡ್ಡಾಯ :))
೨. ಪುಟ್ಟ ಕಂದಮ್ಮಗಳನ್ನು ಕೊಂಡೊಯ್ಯುವಾಗ, ಹಾಲು, ಪೇಯಗಳನ್ನು ಘಟ್ಟಹತ್ತುವ ತುಂಬಾ ಮೊದಲು ಅಥವಾ ಘಟ್ಟ ಹತ್ತಿದಾನಂತರವಷ್ಟೇ ನೀಡಿ. ಘಟ್ಟ ಹತ್ತುವಾಗ ಆದಷ್ಟು ಆಹಾರ ಕೊಡುವುದನ್ನು ತಪ್ಪಿಸಿ. ಒಂದೊಮ್ಮೆ ತೀರಾ ಹಠ ಮಾಡಿದರೆ ಚೀಪಲು ಸಿಪ್ಪೆ ತೆಗೆದ ಮೃದು ಆಪ್ಪಲ್ ಹೋಳು, ಮೇಲಿನ ಸಿಪ್ಪೆ ತೆಗೆದಿಟ್ಟ ಕ್ಯಾರೆಟ್ ತುಂಡು ಇಂಥದ್ದೇನಾದರೂ ಕೊಟ್ಟಿರಿ (ಇವುಗಳನ್ನು ಹೊರಡುವ ಮೊದಲೇ ಸಿದ್ಧವಿಟ್ಟುಕೊಂಡಿರಿ). ಅವರಿಷ್ಟದ ಬಣ್ಣ ಬಣ್ಣದ ಆಟಿಕೆಗಳನ್ನು ಡಿಕ್ಕಿಗೆ ಹಾಕದೇ ಪಕ್ಕದಲ್ಲೇ ಇಟ್ಟುಕೊಂಡಿರಿ. ಬೇಸರವಾದಾಗ ಆಡಿಸಲು, ಅವರ ಮನಸ್ಸನ್ನು ತಿರುಗಿಸಲು ಇದು ಬಹಳ ಉಪಯುಕ್ತ. ಬಣ್ಣ ಬಣ್ಣದ, ದೊಡ್ಡ ಚಿತ್ರಗಳಿರುವ ಪುಸ್ತಗಳೂ ಜೊತೆಗಿರಲಿ. ಕಾರಿನಲ್ಲಿ ನಿಮಗಿಷ್ಟವಾದ ಹಾಡಿನ ಬದಲು ಅವರಿಷ್ಟದ ರೈಮ್ಸ್, ಜೋಗುಳದ ಹಾಡು, ಸುಮಧುರ ವಾದನಗಳ ಸಿ.ಡಿ ಹಾಕಿರಲಿ. ಅವರ ಕಿವಿಗಳಿಗೆ ಇಂಪಾಗುವ ಮೆಲು ಹಾಡಿಗಳಿದ್ದರೆ ಚೆನ್ನ.
೩. ಕಾರಿನ ಹಿಂಬದಿಯ ಸೀಟಿಗೆ ಕಡುಬಣ್ಣದ ಶಾಲ್ ಅಥವಾ ಇನ್ನಿತರ ಬಟ್ಟೆಯ ತುಂಡನ್ನು ಕಟ್ಟಿ, ಗೂಡಿನಂತೇ ಮಾಡಿ ಅದರೊಳಗೆ ಅವರನ್ನು ಕೂಡಿಸಿದರೆ ಅವರಿಗೆ ಇನ್ನಿಲ್ಲದ ಖುಶಿಯಾಗುತ್ತದೆ. (ಹೊಸ ಹೊಸ ವರಸೆಗಳನ್ನು ನೀವೂ ಸ್ವತಃ ಮಾಡಿ ನೋಡಿ ಕಲಿಯಬಹುದು :)). ಎರಡು ವರುಷಗಳಾದ ಕಂದಮ್ಮಗಳಿಗೆ ಹೊರಗಿನ ಪ್ರಪಂಚದ ಪರಿಚಯ ಮಾಡುತ್ತಾ, ಪ್ರಾಣಿ, ಮರಗಳ ತೋರಿಸುತ್ತಾ, ಕಥೆ ಹೇಳಿತ್ತಾ ತುಸು ಸಾಗಿದರೆ ಅಲ್ಲೇ ನಿದ್ದೆ ಹೋಗುವ ಸಂಭವ ಬಲು ಹೆಚ್ಚು. ಸೆಖೆ ಜಾಸ್ತಿ ಆದಾಗ ತೆಳು ಬಟ್ಟೆಗಳನ್ನು ಹಾಕಿಡಿ. ಅವರಿಗೆ ಇರಿಸು ಮುರಿಸುವಾಗುವಂತಹ ಬಟ್ಟೆಗಳನ್ನು, ಬಿಗಿ ಉಡುಗೆಗಳನ್ನು ಪಯಣ ಕಾಲದಲ್ಲೇ ಹಾಕಲೇ ಹೋಗಬೇಡಿ. ಮೂರು ಜೊತೆ ಬಟ್ಟೆಗಳನ್ನು ಹೆಚ್ಚುವರಿಯಾಗಿ ನಿಮ್ಮ ಜೊತೆಗಿರುವ ಚೀಲದಲ್ಲೇ ಇಟ್ಟುಕೊಂಡಿರಿ.
೪. ಹೋಟೇಲಿನ ತಿಂಡಿ ತಿನ್ನಲಾಗದ ಮಕ್ಕಳಿಗೆ ಮನೆಯಿಂದ ಚಪಾತಿ, ದೋಸೆ, ಇಡ್ಲಿ ಏನಾದರೂ ಮಾಡಿ ಕೊಂಡೊಯ್ದರೆ ಉತ್ತಮ. ದಾರಿಯ ಮಧ್ಯೆ ಪೀಡಿಯಾಶ್ಯೂರ್, ಹಾರ್ಲಿಕ್ಸ್ ಮುಂತಾದ ಪೇಯ ಕೊಡಬೇಡಿ. ಹೊಟ್ಟೆ ತೊಳೆಸಿ, ವಾಂತಿಯಾಗುವ ಸಂಭವ ಇವುಗಳಿಂದ ಹೆಚ್ಚಿರುತ್ತದೆ. (ತಾಯಿಯ ಹಾಲಿಗೆ ತೊಂದರೆಯಿಲ್ಲ).
೫. ಮೂರುವರ್ಷದ ನಂತರ ಮಕ್ಕಳನ್ನು ಸಂಭಾಳಿಸಲು ಅವರಿಗಿಷ್ಟದ ತಿಂಡಿಗಳು, ಕಾರಿನಲ್ಲಿ ವಿಡಿಯೋ ಪ್ಲೇಯರ್ ಇದ್ದರೆ, ಅವರಿಷ್ಟ ಕಾರ್ಟೂನ್ ಹಾಗೂ ರೈಮಿಂಗ್ ಸಿ.ಡಿ.ಗಳು, ಕಥೆ ಪುಸ್ತಕಗಳು, ಇವೆಲ್ಲಾ ಬಲು ಪ್ರಯೋಜನಕಾರಿಯಾಗಿವೆ.
೬. ೫ ವರ್ಷದ ನಂತರ ಕಾರಿನಲ್ಲಿ ನಾವು ಅವರೊಂದಿಗೆ ಸಣ್ಣ ಪುಟ್ಟ ಆಟಗಳನ್ನಾಡುವುದರ ಮೂಲಕ ಸ್ವತಃ ನಾವೂ ಪಯಣವನ್ನು ಆಹ್ಲಾದಿಸಬಹುದು. ೬ ವರ್ಷದ ಮೇಲಿನ ಮಕ್ಕಳು ಹಗಲು ನಿದ್ದೆ ಕಡಿಮೆ ಮಾಡುವುದರಿಂದ ತುಸು ವಿಭಿನ್ನ ರೀತಿಯಲ್ಲಿ ಅವರನ್ನು ಸಂಭಾಳಿಸಬೇಕಾಗುತ್ತದೆ. ಅವರ ಜೊತೆಗೆ ನಾವೂ ಮಗ್ಗಿ (ಟೇಬಲ್ಸ್) ಹೇಳುವುದರ ಮೂಲಕ, ಕನ್ನಡ/ ಇಂಗ್ಲಿಷ್ ಪದಗಳನ್ನು ಹೇಳುವುದು/ಹೇಳಿಸುವುದು, ಬಂಡಿಯಾಟ, ಪುಟ್ಟ ಪುಸ್ತಕದಲ್ಲಿ ಪದಬಂಧ ಹಾಕಿ ಹುಡುಕಲು ಹೇಳುವುದು, ಗಮ್ಯ ತಲುಪಿದ ಮೇಲೆ ಏನೆನು ಮಾಡಬೇಕೆಂಬುದನ್ನೆಲ್ಲಾ ಅವರೊಂದಿಗೆ ಚರ್ಚಿಸುತ್ತಾ ಆನಂದದಿಂದ ಪಯಣ ಸಾಗಬಲ್ಲೆವು. ೭-೮ ವರ್ಷಗಳವರೆಗಷ್ಟೇ... ಆಮೇಲೆ ಅವರು ಅವರದ್ದೇ ಲೋಕದಲ್ಲಿ, ಅವರದ್ದೇ ಆದ ರೀತಿಯಲ್ಲಿ ನಮ್ಮೊಂದಿಗಿದ್ದೂ, ಇಲ್ಲದಂತೇ, ಪುಸ್ತಕ ಹಿಡಿದೋ, ಸಂಗೀತವನ್ನು ಆಹ್ಲಾದಿಸುತ್ತಾ ಸಾಗಿಬಿಡುತ್ತಾರೆ ಎನ್ನುವುದು ಆದಿತಿಗಿಂತ ದೊಡ್ಡ ಮಕ್ಕಳಿರುವ ನನ್ನ ಸ್ನೇಹಿತೆಯರ ಅನುಭವದ ಮಾತು.
ಗುರಿಗಿಂತ ಪಯಣದ ದಾರಿಯೇ ಸುಂದರ ಎನ್ನುವ ಒಂದು ನಾಣ್ನುಡಿಯಿದೆ. ಆ ದಾರಿಯ ಸುಂದರತೆಯನ್ನು ನಾವು, ನಮ್ಮ ಜೊತೆ ನಮ್ಮ ಕಂದಮ್ಮಗಳಿಗೆ ಮನಗಾಣಿಸುವುದು ನಮ್ಮ ಕರ್ತವ್ಯ. ಮುಂದೆ ಅವರೇ ಪ್ರತಿ ದಾರಿಯೊಳಗಿರುವ ವಿಭಿನ್ನ ಸೌಂದರ್ಯವನ್ನು ಅವರೇ ಕಂಡುಕೊಳ್ಳಲು ನಮ್ಮ ಈ ಪುಟ್ಟ ಪರಿಚಯವೇ ನಾಂದಿಯಾಗಿರುತ್ತದೆ.
Aditi Hegde :) |
"ಶುಭ ಪ್ರಯಾಣ" :) :)
-ತೇಜಸ್ವಿನಿ.
ಶುಕ್ರವಾರ, ಮಾರ್ಚ್ 7, 2014
ತೇನ ವಿನಾ
ಈ ಕ್ಷಣದ ನೋವಿಗೆ ಮರು ಕ್ಷಣದ ನಲಿವಿನ ಲೇಪ
ನಗುವರಳುವ ಮುನ್ನವೇ ಹನಿಯುವ ಕಣ್ಣಾದೀಪ
ಹೂಮಾಲೆಯೊಳಗವಿತಿರುವ ಮುಳ್ಳುಗಳ ಭೀತಿ
ಬಿಟ್ಟೂ ಬಿಡದಿರುವ ಮಾಯೆಯ ಪ್ರೀತಿ
ಮುಗ್ಗರಿಸಿ ಬಿದ್ದಾಗೆಲ್ಲಾ ಬಡಿದೆಬ್ಬಿಸುವ ಬಲವೇ
ಮುಳುಗೇಳುವ ಪರಿಯ ಕಲಿಸುವ ಗುರುವೇ
ವಿಮುಖಿಯಾದಾಗೆಲ್ಲಾ ಜೀವನ್ಮುಖಿಯಾಗಿಸಿ
ನನ್ನೊಳಗಿನಾ ಛಲವ ಉದ್ದೀಪನ ಗೊಳಿಸಿ
ನೀನಾರೆಂದರಿಯ ಹೊರಟವಗೆ ಕಗ್ಗಂಟಾಗಿ,
ತರ ತರ ವಿಧ ವಿಧ ಬಣ್ಣವ ಬದಲಿಸಿ,
ನಿನ್ನ ನೆಚ್ಚಿದವರ ಕೈ ಬೀಸಿ ಕರೆದಪ್ಪಿ
ಸಲಹುವ ಓ ಬದುಕೇ ನಾ ನಿನ್ನ ಶರಣಾರ್ಥಿ.
-ತೇಜಸ್ವಿನಿ.
ನಗುವರಳುವ ಮುನ್ನವೇ ಹನಿಯುವ ಕಣ್ಣಾದೀಪ
ಹೂಮಾಲೆಯೊಳಗವಿತಿರುವ ಮುಳ್ಳುಗಳ ಭೀತಿ
ಬಿಟ್ಟೂ ಬಿಡದಿರುವ ಮಾಯೆಯ ಪ್ರೀತಿ
ಮುಗ್ಗರಿಸಿ ಬಿದ್ದಾಗೆಲ್ಲಾ ಬಡಿದೆಬ್ಬಿಸುವ ಬಲವೇ
ಮುಳುಗೇಳುವ ಪರಿಯ ಕಲಿಸುವ ಗುರುವೇ
ವಿಮುಖಿಯಾದಾಗೆಲ್ಲಾ ಜೀವನ್ಮುಖಿಯಾಗಿಸಿ
ನನ್ನೊಳಗಿನಾ ಛಲವ ಉದ್ದೀಪನ ಗೊಳಿಸಿ
ನೀನಾರೆಂದರಿಯ ಹೊರಟವಗೆ ಕಗ್ಗಂಟಾಗಿ,
ತರ ತರ ವಿಧ ವಿಧ ಬಣ್ಣವ ಬದಲಿಸಿ,
ನಿನ್ನ ನೆಚ್ಚಿದವರ ಕೈ ಬೀಸಿ ಕರೆದಪ್ಪಿ
ಸಲಹುವ ಓ ಬದುಕೇ ನಾ ನಿನ್ನ ಶರಣಾರ್ಥಿ.
-ತೇಜಸ್ವಿನಿ.
ಸೋಮವಾರ, ಮಾರ್ಚ್ 3, 2014
ಹಲವು ಪ್ರಶ್ನೆಗಳಿಗೆ ಉತ್ತರವಾದ, ಕೆಲವು ಉತ್ತರಗಳಿಗೇ ಪ್ರಶ್ನೆಯಾದ ಕಥಾಸಂಕಲನ...
ನಾನು ಇತ್ತೀಚಿಗೆ ಓದಿದ ಕಥಾಸಂಕಲನಗಳಲ್ಲೇ ವಿಭಿನ್ನವಾದ ಕಥಾಸಂಕಲನವೆಂದರೆ ವಸುಧೇಂದ್ರರ ‘ಮೋಹನಸ್ವಾಮಿ’. ಬಾಲ ಗೋಪಾಲನ ಭಕ್ತನಾದ ಮೋಹನಸ್ವಾಮಿಯ ಅರ್ಧದಷ್ಟು ಕಥೆಗಳು ಆರ್ದ್ರತೆಯನ್ನು ತುಂಬುವಂತಿದ್ದು, ತೀವ್ರ ಭಾವುಕತೆಯಿಂದ ಕೂಡಿವೆ. ಒಟ್ಟೂ ಹನ್ನೊಂದು ಕಥೆಗಳನ್ನೊಳಗೊಂಡಿರುವ ಸಂಕಲನವನ್ನು ನಡುವೆ ಬರುವ ವಿಶಿಷ್ಟ ಕಥೆಯಾದ ‘ಕಿಲಿಮಂಜಾರೋ’ ಕಥೆಯ ಮೊದಲಿನ ೪ ಕಥೆಗಳು ಮತ್ತು ಅದರಾನಂತರದ ೬ ಕಥೆಗಳು -ಹೀಗೆ ಎರಡು ಭಾಗವನ್ನಾಗಿಸಬಹುದು. ‘ಕಿಲಿಮಂಜಾರೋ’ ಕಥೆಯವರೆಗೂ ಮೋಹನಸ್ವಾಮಿಯನ್ನು ಬಿಟ್ಟು ಇನ್ನೇನೂ ನಿಮ್ಮನ್ನು ಆವರಿಸದು. ಕಿಲಿಮಂಜಾರೋ ಕಥೆಯೇ ಭಾವೋದ್ವೇಗದ, ಉತ್ಕಟತೆಯ ತುತ್ತತುದೆಯೆಂದೆನಿಸಿಬಿಡುತ್ತದೆ. ಆ ತುತ್ತ ತುದಿಯ ಎಡ ಬಲಗಳಲ್ಲಿ ಉಳಿದ ಕಥೆಗಳು ಹರವಿಕೊಂಡಿದ್ದರೆ ಕಿಲಿಮಂಜಾರೋ ಕಥೆ ಮಾತ್ರ ಉಳಿದೆಲ್ಲಾ ಕಥೆಗಳಿಗಿಂತ ವಿಶಿಷ್ಟವೆನಿಸಿಬಿಡುತ್ತದೆ. ಈ ಕಥೆ ಇಡೀ ಕಥಾಸಂಕಲನದಲ್ಲೇ ನನಗೆ ಮೆಚ್ಚುಗೆಯಾದ ಕಥೆಯೂ ಹೌದು.
ಕಥಾಸಂಕಲನದ ಮೊದಲ ನಾಲ್ಕು ಕಥೆಗಳನ್ನೋದುತ್ತಿದ್ದಂತೇ, ಕೆಲವು ಗೊತ್ತಿದ್ದ, ಗೊತ್ತಿಲ್ಲದ, ಗೊತ್ತಿದೆ ಎಂದು ಭಾವಿಸಿದ್ದ, ಗೊತ್ತಿಲ್ಲ ಎಂದು ನಂಬಿದ್ದ ಹಲವು ವಿಷಯಗಳು ತೆರೆದುಕೊಳ್ಳುತ್ತಾ ಹೋದವು! ಮೋಹನಸ್ವಾಮಿ ಕೇವಲ ಒಂದು ಕಥಾ ಪಾತ್ರ, ಲೇಖಕನ ಕಲ್ಪನೆ ಎಂದು ಎಲ್ಲಿಯೂ ಓದುಗಳಾದ ನನಗೆ ಅನಿಸಲೇ ಇಲ್ಲ! ಅಷ್ಟೊಂದು ವಾಸ್ತವಿಕತೆ, ನೈಜತೆ ಅವನಲ್ಲಿ ತುಂಬಿತ್ತು. ಇಂತಹ ಒಂದು ಪಾತ್ರ ಚಿತ್ರಣವನ್ನು ಇಷ್ಟು ಸಮರ್ಥವಾಗಿ, ಸತ್ಯಕ್ಕೆ ಪಕ್ಕದಲ್ಲೇ ಇರುವಂತೆ ಕಟ್ಟಿಕೊಡಲು ಅಪಾರ ಮಾನಸಿಕ ಶಕ್ತಿಯ ಅವಶ್ಯಕತೆ ಇದ್ದೇ ಇರಬೇಕಾಗುತ್ತದೆ. ಅದು ಈ ಲೇಖಕರಲ್ಲಿ ಇದೆಯೇನೋ ಎಂದೆನಿಸಿತು. ಇದೇ ಲೇಖಕರ ‘ಹರಿಚಿತ್ತ ಸತ್ಯ’ದಂತಹ ಸಾಂಸಾರಿಕ, ಸಾಂಪ್ರದಾಯಿಕ, ವಿಡಂಬನಾತ್ಮಕ ಕಾದಂಬರಿಯನ್ನು ಓದಿದಾಗ ಆ ಕಾದಂಬರಿ ತೀರಾ ಹರಿದು ಆವಿಯಾಗುವ ಪುಟ್ಟ ತೊರೆಯಂತೇ ಭಾಸವಾಗಿತ್ತದು. ಆದರೆ ‘ಮಿಥುನ’ ಅನುವಾದಿತ ಕಥಾಸಂಕಲನದಲ್ಲಿ ದಾಂಪತ್ಯದ ಸಾಮರಸ್ಯವನ್ನು, ಸುಮಧುರತೆಯನ್ನು, ಬಲು ಚೆಲುವಾಗಿ ಹಿಡಿದುಕೊಟ್ಟ ಶೈಲಿಯನ್ನು ತುಂಬಾ ಮೆಂಚಿಕೊಂಡಿದ್ದೆ. ‘ಚೇಳು’ ಅದರ ಕುಟುಕುವಿಕೆಯಷ್ಟೇ ಪರಿಣಾಮಕಾರಿ ಎಂದೆನಿಸಿತ್ತು. ಆದರೆ ‘ಮೋಹನಸ್ವಾಮಿ’ ಮಾತ್ರ ‘ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆ’ಯಂತೆಯೇ ಎಂದೆನಿಸಿಬಿಟ್ಟಿತು. ‘ಕಾಣದ ಕಡಲಿಗೆ ಹಂಬಲಿಸುವ’ ಮೋಹನಸ್ವಾಮಿಯ ರೋಧನ, ನೋವು, ಹತಾಶೆ ಎಲ್ಲವೂ ಕಥೆಯನ್ನೂ ದಾಟಿ ಓದುಗನ ಎದೆಯ ತಟ್ಟಿ ದ್ರವಿಸುವಂತೆ ಮಾಡುತ್ತದೆ. ಅದಕ್ಕೆ ಕಾರಣ ಆ ಪಾತ್ರದಲ್ಲಿರುವ ವಾಸ್ತವಿಕತೆ.. ಯಾತನೆಯಲ್ಲಿರುವ ಸತ್ಯತೆ, ಚಿತ್ರಣದಲ್ಲಿರುವ ನೈಜತೆ!
ಸಲಿಂಗಕಾಮಿಗಳು ನಮ್ಮಂತೆಯೇ.. ಅಂದರೆ ಓರ್ವ ಹೆಣ್ಣು-ಗಂಡಿನ ನಡುವಿನ ಆಕರ್ಷಣೆ ಎಷ್ಟು ಸಹಜವೋ ಅಂತೆಯೇ ಇಬ್ಬರು ಪುರುಷರು ಅಥವಾ ಸ್ತ್ರೀಯರ ನಡುವಿನ ಕಾಮನೆಗಳು/ಆಕಷಣೆಗಳು. ಇದೊಂದು ‘ವ್ಯಾಧಿ’(ಡಿಸೀಸ್) ಅಲ್ಲ... ಮಾನಸಿಕ ಅಸ್ವಸ್ಥತೆಯೂ ಅಲ್ಲ.. ಎಂದು ಎಲ್ಲೋ ಓದಿದ ನೆನಪು ಮತ್ತು ಮನಃಶಾಸ್ತ್ರವೂ ಹೀಗೇ ಹೇಳುತ್ತದೆ ಎನ್ನುವುದನ್ನೂ ಕೇಳಿದ್ದೇನೆ/ಓದಿದ್ದೇನೆ. ಅವರನ್ನು ಸಹಜವಾಗಿ ಸ್ವೀಕರಿಸಬೇಕು. ಹುಟ್ಟಿನಿಂದಲೇ ಅವರೊಳಗೆ ಬೆಳೆಯುತ್ತಾ ಬಂದ ಈ ಭಿನ್ನತೆಯನ್ನು ಗೌರವಿಸಿ ಸಮಾಜ ಸ್ವೀಕರಿಸಿದಾಗ ಅವರ ಸಮಸ್ಯೆಗೆ ಪರಿಹಾರ ಎನ್ನುವುದನ್ನೂ ಓದಿ/ಕೇಳಿ ಬಲ್ಲೆ. ‘ಹೌದಲ್ಲಾ.. ಅವರೊಳಗಿನ ಇಚ್ಛೆಗೆ, ಮೂಲ ಸ್ವಭಾವಕ್ಕೆ ನಾವೇಕೆ ನಮ್ಮದೇ ಅಭಿಪ್ರಾಯಗಳನ್ನು ಹೇರಬೇಕು? ಯಾರದೋ ಸ್ವಾತಂತ್ರ್ಯಕ್ಕೆ, ಅವರೇ ಬಯಸಿ ಪಡೆಯದ ಅವರ ಹುಟ್ಟಿಗೆ ನಾವೇಕೆ ತಿರಸ್ಕಾರ ತೋರಿ ಅಮಾನುಷರೆನಿಸಿಕೊಳ್ಳಬೇಕು?’ ಎಂದೆಲ್ಲಾ ನಾನೂ ಅಂದುಕೊಂಡಿದ್ದೆ (ಈಗಲೂ ಅದೇ ತುಡಿತ ಹಾಗೇ ಮಿಡಿಯುತ್ತಲೂ ಇದೆ). ಅಂತೆಯೇ ಸುಪ್ರೀಂ ಕೋರ್ಟ್ ಸಲಿಂಗಕಾಮಿಗಳ ಲೈಂಗಿಕತೆಗೆ ಮಾನ್ಯತೆ ನೀಡದೇ, ಅದನ್ನು ಅನೈತಿಕವೆಂದು ಘೋಷಿಸಿ, ಕಾನೂನು ಅಪರಾಧವೆಂದು ತೀರ್ಪಿತ್ತಾಗ ನನಗೂ ಅಸಮಾಧಾನವಾಗಿತ್ತು. ಹೀಗೇಕಪ್ಪಾ? ನಮ್ಮ ಕೋರ್ಟಿಗೇನಾಯಿತು?! ಎಂದೆಲ್ಲಾ ಪೇಚಾಡಿದ್ದೆ. ಅವರ ಪ್ರತಿ ಸಹಾನುಭೂತಿಯೂ ಮೂಡಿತ್ತು. ಆದರೆ ಪ್ರಸ್ತುತ ಕಥಾಸಂಕಲನವನ್ನೋದುತ್ತಿರುವಂತೇ ಕೋರ್ಟ್ ಯಾವ್ಯಾವ ಕಾರಣಗಳಿಗಾಗಿ ಆ ರೀತಿ ತೀರ್ಪನ್ನು ಕೊಟ್ಟಿರಬಹುದೆನ್ನುವುದಕ್ಕೆ ಸ್ಥೂಲ ಉತ್ತರವನ್ನು ಕೊಟ್ಟಿದ್ದಾನೆ ಮೋಹನಸ್ವಾಮಿ ಎಂದೆನಿಸಿಬಿಟ್ಟಿತು!!
ಕಥಾಸಂಕಲನದ ಮೊದಲ ಕೆಲವು ಕಥೆಗಳೊಳಗಿನ ಹಸಿ ಹಸಿ ಚಿತ್ರಣಗಳು, ಮೋಹನಸ್ವಾಮಿಯ ಅನಿಯಂತ್ರಿತ ಬಯಕೆಗಳು, ಬೀದಿಯಲ್ಲೂ ಯಾವುದೇ ಬಲಾಢ್ಯ ಗಂಡನ್ನು ಕಂಡೊಡನೆ ಅವನೊಳಗಾಗುವ ಉದ್ರೇಕ, ಎಲ್ಲವೂ ಈ ರೀತಿಯ ಮನಃಸ್ಥಿತಿ ನಾನಂದುಕೊಂಡಿರುವಷ್ಟು ಸಹಜವಾಗಿಲ್ಲ... ಅಂದರೆ ಓರ್ವ ಹೆಣ್ಣು-ಗಂಡು ನಡುವಿನ ಆಕರ್ಷೆಣೆಗೂ, ಸಂಬಂಧಕ್ಕೂ, ಗಂಡು-ಗಂಡಿನ ನಡುವಿನ ಆಕರ್ಷಣೆಗೂ ಎಲ್ಲೋ ಒಂದು ಕಡೆ ದೊಡ್ಡ ಅಂತರವೇ ಇದೆ ಎಂದೆನಿಸಿಬಿಟ್ಟಿತು. ಅದು ಪ್ರಕೃತಿ ಸಹಜವಾಗಿದ್ದಿರಬಹುದು.. ಆದರೆ ಅದರೊಳಗೊಂದು ಅಸಹಜತೆ ಇದ್ದೇ ಇದೆ ಎಂಬ ಭಾಸ ಆ ಕಥೆಗಳು ನೀಡಿದವು. ಅಂತಹ ಸಂಬಂಧವನ್ನು ‘ಕಾನೂನು’ ಮಾನ್ಯಮಾಡುವುದರಿಂದ ಏನೇನು ತೊಡಕುಗಳು/ಪರಿಣಾಮಗಳು, ಸಮಾಜದಲ್ಲಿ, ಯುವಕರಲ್ಲಿ, ಮಕ್ಕಳಲ್ಲಿ ಉಂಟಾಗಬಹುದೆಂಬುದರ ಪುಟ್ಟ ಚಿತ್ರಣವನ್ನು ನನ್ನೊಳಗೆ ಕಟ್ಟಿಕೊಟ್ಟವು. ಮಾನಸಿಕವಾಗಿ ನಾವು ಅವರನ್ನು ಸ್ವೀಕರಿಸುವುದೇ ಬೇರೆ, ಕಾನೂನು ಮಾನ್ಯಮಾಡಿ ಸಂಪೂರ್ಣವಾಗಿ ಅಂತಹ ಸಂಬಂಧವನ್ನು ಬೆಂಬಲಿಸುವುದೇ ಬೇರೆ ಎಂಬುದು ಸ್ಥೂಲವಾಗಿ ಅರಿವಾಗುತ್ತಾ ಹೋಯಿತು. ‘ತಗಣಿ’ ಕಥೆ ಅಂತಹ ಪರಿಣಾಮದ ಮುನ್ಸೂಚನೆಯನ್ನು ಕೊಡುವ ಕಥೆಯೆನ್ನಬಹುದು. ಮೋಹನಸ್ವಾಮಿಯ ನೋವು, ಯಾತನೆ, ಅಪಮಾನಗಳು ತುಂಬಾ ತಟ್ಟಿದ್ದು ಹೌದು. ಆದರೆ ನಾನು ಆ ಭಾವುಕತೆಯಿಂದ ದೂರ ನಿಂತು ವಿಮರ್ಶಿಸಿದಾಗ ಕೆಲವು ಸತ್ಯಗಳೂ ಗೋಚರಿಸತೊಡಗಿದವು. ಅವುಗಳೇ ಪರಮಸತ್ಯ, ಅವೇ ವಾಸ್ತವ ಎಂದು ಹೇಳುತ್ತಿಲ್ಲ. ಯಾರೂ ಯಾರ ಯಾತನೆಯನ್ನೂ ಅವರಷ್ಟೇ ತೀವ್ರವಾಗಿ ಅನುಭವಿಸಲು ಸಾಧ್ಯವಿಲ್ಲ ನಿಜ. ಆದರೂ, ಓದುಗ ತನ್ನ ಮನಸನ್ನು ತಟ್ಟಿದ ಭಾವನೆಗಳ ಧಾಳಿಯನ್ನು ದಾಟಿ, ಕ್ರಮೇಣ ಭಾವುಕತೆಯನ್ನು ಬದಿಗೊತ್ತಿ, ಮೆಲುಕಗಳಲ್ಲಿತುಸು ವಾಸ್ತವಕತೆಯಿಂದ ಆತ ವಸ್ತುಸ್ಥಿತಿಯನ್ನು ಕಾಣಲು ಹೋದಾಗ ಬೇರೆಯೇ ಮಜಲುಗಳನ್ನು ಕಾಣಲು ಸಾಧ್ಯವಾಗುತ್ತದೆ. ಅಂತೆಯೇ ಕೆಲವು ವಿಚಾರ, ಚಿಂತನೆಗಳು ನನ್ನರಿವಿಗೆ ಬಂದು ಕಾಡಿ, ಗಟ್ಟಿಯಾಗಿ ನೆಲೆನಿಂತದ್ದಂತೂ ಸತ್ಯ!
ಅನಿಯಂತ್ರಿತ ಸಂಯಮರಹಿತ ದೈಹಿಕ ಕಾಮನೆಗಳು, ಅವುಗಳನ್ನು ಸಾಫಲ್ಯಗೊಳಿಸಿಕೊಳ್ಳುವುದು, ಅದಕ್ಕಾಗಿ ಎಲ್ಲಾ ರೀತಿಯಲ್ಲೂ ಪ್ರಯತ್ನಿಸುವುದು, ಹೇಗೋ ಎಂತೋ ಅದರಲ್ಲಿ ಯಶಸ್ಸನ್ನು ಹೊಂದುವುದು, ಜೊತೆಗಾರನನ್ನು ಹೊಂದುವುದನ್ನೇ ಗುರಿಯಾಗಿಸಿಕೊಳ್ಳುವುದು - ಇದೇ ಪರಮೋಚ್ಚ ಸಾಧನೆಯೇ? ಇವುಗಳನ್ನೆಲ್ಲಾ ಕೇವಲ ಸಲಿಂಗ ಕಾಮಿಗಳ ದೃಷ್ಟಿಕೋನದಿಂದ ಮಾತ್ರ ಹೇಳುತ್ತಿಲ್ಲ. ಹೆಣ್ಣು-ಗಂಡೇ ಇದ್ದಿರಲಿ, ಕಾಮವೇ ಅಂತಿಮವೇ?! ದೈಹಿಕ ಸುಖದ ಮುಂದೆ ಬೇರೆಲ್ಲವೂ ನಗಣ್ಯವೇ?!
ಮೋಹನಸ್ವಾಮಿ ಕೊನೆಯವರೆಗೂ ಬಯಸುವುದು ತನ್ನ ಬಯಕೆಗಳಿಗೊಂದು ಸೂಕ್ತ ಸಾಥಿಯನ್ನೇ. ಆ ಒಂದು ಹಪಹಪಿಕೆಯೇ ಮೊದಲ ಕೆಲವು ಕಥೆಗಳುದ್ದಕ್ಕೂ ಪ್ರವಹಿಸುತ್ತಿರುತ್ತದೆ. ಮೂಲ ಕೇಂದ್ರ ಅದೇ ಆಗಿದ್ದು, ಉಳಿದೆಲ್ಲಾ ಯಾತನೆ, ಅವಮಾನಗಳು ಅವನ ಕಾಮನೆಗಳಿಂದಲೇ ಅವನನ್ನು ಸುತ್ತುವರಿಯುತ್ತಿರುತ್ತದೆ. ಮೋಹನಸ್ವಾಮಿ ಓರ್ವ ಸಲಿಂಗಕಾಮಿ ಎನ್ನುವುದನ್ನು ಪಕ್ಕದಲ್ಲಿಟ್ಟರೆ, ಅವನ ದುಃಖಕ್ಕೆ ಕಾರಣ ಪ್ರತಿ ಮನುಷ್ಯನ ಯಾತನೆಗೂ ಕಾರಣವಾಗಿದ್ದರಬಹುದೇ ಆಗಿದೆ! ಇಲ್ಲದಿದ್ದುರ ಕಡೆಗೇ ಮನಸಿನ ತುಡಿಯುವಿಕೆ, ಹಳಹಳಿಯುವಿಕೆ, ಬಯಕೆಗಳ ತೊಳಲಾಟ ಎಲ್ಲವೂ ಎಲ್ಲರಲ್ಲೂ ಕಾಣಸಿಗುವಂಥವೇ. ಇಲ್ಲಿನ ಹೆಚ್ಚಿನ ಕಥೆಗಳಲ್ಲಿ ಸಲಿಂಗಕಾಮ ಕೇವಲ ಸಾಂಕೇತಿಕವಾಗಿದೆಯೇನೋ ಎಂದೆನಿಸಿಬಿಡುತ್ತದೆ. ಕೊನೆಯಲ್ಲಿ ದುಃಖಕ್ಕೆ ಮೂಲ ಆಸೆಯೇ! ಇದೊಂದೇ ಪರಮ ಸತ್ಯ ಎಂದೆನಿಸಿಬಿಡುತ್ತದೆ. ಆ ಆಸೆ ಯಾವುದೇ ರೂಪದಲ್ಲಿದ್ದರಬಹುದು. ಹಾಗಾಗಿ ‘ಕಾಶೀವೀರರು’ ಕಥೆಯಲ್ಲಿ ಬರುವ ಮೋಹನಸ್ವಾಮಿಯ ಮೇಲೆ ಅಸಹನೆಯೇ ಮೂಡುತ್ತಾ ಹೋಗುತ್ತದೆ. ಅವನ ಅಸಹನೀಯ ವರ್ತನೆ, ಕಡಿವಾಣವಿಲ್ಲದ, ಸಂಯಮ ಹೊಂದಲೂ ಬಯಸದ ಬಯಕೆಯಿಂದಾಗಿ ಅವನೇ ಕೆರೆ ತಂದುಕೊಳ್ಳುವ ಸಮಸ್ಯೆಯ ಸುಳಿಗೆ ಸಿಲುಕುವ ಪಾತ್ರ. ಕಿಲಿಮಂಜಾರೋ ಕಥೆಯ ನಂತರ ಸ್ವಲ್ಪ ಅದೇ ಛಾಯೆಯ ಕಥೆಯೊಂದು ಬರುತ್ತದೆ ಅದೇ ‘ತಗಣಿ’ ಕಥೆ. ಈ ಕಥೆಯ ಶಂಕರಗೌಡನ ಪಾತ್ರವೂ ಸಂಪೂರ್ಣ ಸಹಾನುಭೂತಿ ಪಡೆಯಲು ಸೋತಿತು. ದಾರಿಗಳು ಹಲವಿದ್ದರೂ, ತನಗಲ್ಲದ ದಾರಿಯೆಡೆಗೇ ಮನುಷ್ಯ ಹೆಚ್ಚು ಆಕರ್ಷಿತನಾಗಿ ಪ್ರಪಾತಕ್ಕೆ ಹೇಗೆ ಬೀಳುತ್ತಾನೆ ಎನ್ನುವುದಕ್ಕೆ ‘ತಗಣಿ’ಕಥೆಯ ಶಂಕರ ಗೌಡನೇ ಸಾಕ್ಷಿ!
ಕಿಲಿಮಂಜಾರೋ ಕಥೆ ಮಾತ್ರ ಕಥಾಸಂಕಲನಕ್ಕೇ ಕಲಶವಿಟ್ಟಂತಹ ಕಥೆಯಾಗಿದೆ. ಇಲ್ಲಿ ಪರ್ವತಾರೋಹಿಯಾಗಿ ಕಾಣಿಸಿಕೊಳ್ಳುವ ಮೋಹನಸ್ವಾಮಿಯೊಳಗಿನ ಮಾನಸಿಕ ಘರ್ಷಣೆ, ಆವೇಗ, ಆವೇಶ, ಹಠ, ಸಂಕಟ, ಸ್ಥೈರ್ಯ, ಕೊನೆಯಲ್ಲಿ ಪಡೆವ ಶಾಂತತೆ- ಇವೆಲ್ಲವೂ ಧುಮ್ಮಿಕ್ಕಿ ಹರಿವ ನದಿಯೊಂದು ಬಯಲು ಪ್ರದೇಶದಲ್ಲಿ ಸಮತೋಲನ ಪಡೆಯುವಂತಹ ಚಿತ್ರಣವನ್ನು ಕಲ್ಪಿಸುತ್ತದೆ. ಈ ಕಥೆಯ ಮೋಹನಸ್ವಾಮಿಯ ಯಾತನೆಗೆ ಕಾರಣ ಏನೂ ಆಗಿದ್ದಿರಬಹುದು. ಆದರೆ ಅದಕ್ಕಿಂತಲೂ ಮೊದಲು ಬರುವ ಪಾತ್ರಗಳೆಲ್ಲೆಲ್ಲಾ ಅವನ ತೊಳಲಾಟಕ್ಕೆ ಅವನ ಸಲಿಂಗಕಾಮದ ಬಯಕೆಯೇ ಪ್ರಮುಖ ಕಾರಣವಾಗಿ ಕಂಡಿದ್ದರಿಂದಲೋ ಎಂತೂ, ಇಲ್ಲಿಯೂ ಕಾರಣ ಸ್ಪಷ್ಟವಾಗಿರದಿದ್ದರೂ, ಅವನು ಸಂಕಟ ಪಡುವುದು ಅದಕ್ಕಾಗಿಯೇ ಏನೋ ಎಂದೆನಿಸಿಬಿಡುತ್ತದೆ. ಆದರೆ ಅದನ್ನು ಬಿಟ್ಟು ನೋಡಿದಾಗ ಜಗತ್ತಿನ ಮನುಷ್ಯರೆಲ್ಲರ ಯಾತನೆಗೆ ಕಾರಣ, ಪರಿಹಾರ, ಕ್ಷಣಿಕ ನೆಮ್ಮದಿ ಎಲ್ಲವನ್ನೂ ಅತ್ಯುತ್ತಮವಾಗಿ ತೋರಿಸಿಕೊಡುತ್ತದೆ ಈ ಕಥೆ! ಬದುಕು, ಅದು ನೀಡುವ ಸವಾಲುಗಳನ್ನು ಎದಿರುಸುವ ರೀತಿ, ಸ್ಥೈರ್ಯವನ್ನು ಲೇಖಕರು ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಅದರಲ್ಲೂ ಕೊನೆಯಲ್ಲಿ ಬರುವ ಹುಲ್ಲುಗಾವಲಿನ ರೂಪಕ ಚಿತ್ರಣ ಮಾತ್ರ ಅನಿರ್ವಚನೀಯ ಅನುಭವ ಕೊಡುತ್ತದೆ... ನಾವೂ ಅವನೊಡನೆ ಅಲ್ಲೇ ಇರುವಂತಹ ಅನುಭೂತಿ ನಮ್ಮೊಳಗೆ ಹೊಕ್ಕುವಂತಿದೆ ಆ ಚಿತ್ರಣ! ಕಥೆಯ ಕೊನೆಯಲ್ಲಿ ಆಸ್ತಿಕತೆಗೂ ಸಮಸ್ಯೆಯ ಕ್ಷಣಿಕ ಪರಿಹಾರಕ್ಕೂ ಇರಬಹುದಾದ ಸಣ್ಣ ಎಳೆಯ ಪರಿಚಯವಾಗಿ, ನಾಸ್ತಿಕತೆಯೆಂದರೇನೆಂಬುದರ ಬೃಹತ್ ಸ್ವರೂಪದ ದರ್ಶನವಾಗಿಬಿಡುತ್ತದೆ. ಹಲವಾರು ಕಾರಣಗಳಿಂದಾಗಿ ಈ ಕಥೆ ನನ್ನ ಅಚ್ಚುಮೆಚ್ಚಿನ ಕಥೆಗಳ ಪಟ್ಟಿಗೆ ಸೇರಿಹೋಗಿದೆ.
ಸಂಕಲನದ ಮೊದಲಾರು ಕಥೆಗಳಷ್ಟು, ನಂತರ ಬರುವ ಐದು ಕಥೆಗಳು ನನ್ನ ಹಿಡಿದಿಡಲಿಲ್ಲ. ಈಗಿನ ಸಮಾಜದ ಹುಳಿಕಿಗೆ ತಳುಕು ಹಾಕಿದ ಪೌರಾಣಿಕ ಕಥೆ ‘ದ್ರೌಪದಮ್ಮನ ಕಥಿ’ಯಾಗಲೀ, ಪಿಂಕ್ ಸ್ಲಿಪ್ ಪಡೆದವರ ಪರಿಪಾಟಲನ್ನು ಈಗಾಗಲೇ ಹಲವಾರು ಕಥೆಗಳಲ್ಲಿ ಕಂಡಿದ್ದನ್ನೇ ಕಟ್ಟಿಕೊಡುವ ‘ದುರ್ಭಿಕ್ಷ ಕಾಲ’ವಾಗಲೀ, ಸಾಮಾಜಿಕ ಜಾಲದ ವಿಕೃತಿಯನ್ನು ಕಾಣಿಸುವ ‘ಪೂರ್ಣಾಹುತಿ’ಯಾಗಲೀ, ಡಾಂಭಿಕತೆಯನ್ನು ತೋರುವ ‘ಭಗವಂತ, ಭಕ್ತ ಮತ್ತು ರಕ್ತ’ ಕಥೆಯಾಗಲೀ ಯಾಕೋ ಅಷ್ಟು ಕಾಡಲೇ ಇಲ್ಲ. ಅದಕ್ಕೆ ಕಾರಣ ಬಹುಶಃ ಮೊದಲಿನ ಕಥೆಗಳ ಮೋಹನಸ್ವಾಮಿಯ ಪಾತ್ರ ಚಿತ್ರಣದೊಳಗಿನ ಗಟ್ಟಿತನವೇ ಆಗಿದ್ದಿರಬಹುದು. ಪೂರ್ಣಾಹುತಿ ಕಥೆಯಂಥದ್ದೇ ವಸ್ತುವನ್ನೊಳೊಗೊಂಡ ಅನೇಕ ಫೇಸ್ಬುಕ್ ಕಥೆಗಳನ್ನು ಮೊದಲೇ ಓದಿದ್ದಕ್ಕೆ, ಹಾಗೇ ಭಗವಂತ, ಭಕ್ತ ಮತ್ತು ರಕ್ತ ಕಥೆಯನ್ನೋದುತ್ತಿರುವಂತೇ, ಅದರ ಕೊನೆಯೂ ಅರ್ಥವಾಗಿಬಿಡುವುದರ ಅದರ ಮಿತಿಯಿಂದಾಗಿ ಯಾಕೋ ಸಪ್ಪೆಯೆನಿಸಿಬಿಟ್ಟಿತು.
ಆದರೆ ನಾನು ಭ್ರಮೆಯೆಂದು ಭಾವಿಸಿದ್ದನ್ನು ಅಲ್ಲಗಳೆದ ಕೆಲವು ಸತ್ಯತೆಗಳಿಂದಾಗಿ ಹಾಗೂ ಸತ್ಯವೆಂದೆನಿಸಿಕೊಂಡಿದ್ದರ ಹಿಂದಿನ ಭ್ರಮೆಯನ್ನು ತೆರೆದಿಟ್ಟ ಕಟು ವಾಸ್ತವಿಕತೆಗಳಿಂದಾಗಿ ‘ಮೋಹನಸ್ವಾಮಿ’ ಕಥಾಸಂಕಲನ ಇಷ್ಟವಾಯಿತು. ಪಾತ್ರ ಚಿತ್ರಣದೊಳಗಿನ ನಿರ್ಭೀಡತೆ, ಶೋಕರಸದೊಳಗಿನ ಕ್ರೌರ್ಯ, ಸಹನೆಯೊಳಗಿನ ಅಸಹನೀಯತೆ ಎಲ್ಲವೂ ಮನಸ್ಸನ್ನು ತಟ್ಟುತ್ತವೆ, ಚಿಂತನೆಗೆ ನಮ್ಮನ್ನು ಎಳೆಯುತ್ತವೆ. ಅದರಲ್ಲೂ ತನ್ನಿಷ್ಟ ದೈವವಾದ ಕೃಷ್ಣನ ಮುಂದೆ ಕುಳಿತು ‘ನಿನ್ನ ಹನ್ನೊಂದನೆಯ ಅವತಾರದಲ್ಲಿ ನನ್ನಂತೆ ಹುಟ್ಟು. ಹದಿನಾರು ಸಾವಿರ ಹೆಣ್ಣುಗಳನ್ನು ಅನುಭೋಗಿಸಿದ ನಿನಗೆ ಒಂದೂ ಹೆಣ್ಣನ್ನು ಮುಟ್ಟಲಾಗದ ದುಃಖ, ಅಸಹಾಯಕತೆಯ ಅರಿವಾಗಲಿ. ಇನ್ನೊಬ್ಬರಿಗೆ ತಟ್ಟದ ನೋವನ್ನು ಏಕಾಂಗಿಯಾಗಿ ಅನುಭವಿಸು. ಜನರ ಕಣ್ಣುಗಳಲ್ಲಿ ಕ್ಷುಲ್ಲಕನಾಗು..’ ಎಂಬ ಆರ್ತನಾದ, ಹೃದಯ ಬಗೆವಂತಹ ಮೊರೆ ಅರೆಕ್ಷಣವಾದರೂ ಸರಿಯೇ, ಓದುಗರಲ್ಲಿ ಯಾತನೆಯ ಪಸೆಯನ್ನುದ್ಭವಿಸಿಬಿಡುತ್ತದೆ. ಆದರೆ ಹೀಗೇ ಚಿಂತಿಸುತ್ತಾ ಹೋದಾಗ, ‘ತತ್ತ್ವಮಸಿ’ಯನ್ನಿಷ್ಟಪಡುವ ನನ್ನ ಮನಸು- ಗೀತೆಯ ಕೃಷ್ಣನೇ ಎಂದಿರುವಂತೇ "ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ"ನಾಗಿರುವ ‘ಆತ’ ಎಲ್ಲರೊಳಗೂ (ಮೋಹನಸ್ವಾಮಿಯಂಥವರೊಳಗೂ) ಇದ್ದೇ ಇರುತ್ತಾನೆ. ಅರಿಯಲು ಅಂತಹ ಚಕ್ಷುವಿನ ಅವಶ್ಯಕತೆ ಇದ್ದಿರುತ್ತದೆ. ಅದೂ ನಮ್ಮೊಳಗೆಲ್ಲೋ ಇದ್ದಿರಲೇ ಬೇಕು ಅಲ್ಲವೆ?! ಇಂತಿರುವಾಗ ಅವತಾರಿಗೆಲ್ಲಿಯ ಹೊಸ ಅವತಾರದ ಹಂಗು!? ಎಂದೆನಿಸಿಬಿಟ್ಟಿತು.
-ತೇಜಸ್ವಿನಿ.
ಸೋಮವಾರ, ಫೆಬ್ರವರಿ 24, 2014
ಬದುಕ ಬದಲಿಸಬಲ್ಲ ಪುಸ್ತಕ.....
"ಸುಖವು ದುಃಖದ ಕಿರೀಟವನ್ನು ಧರಿಸಿ ಮಾನವನೆದುರು ಬಂದು ನಿಲ್ಲುವುದು. ಯಾರಿಗೆ ಸುಖ ಬೇಕೋ ಅವರು ದುಃಖವನ್ನು ಸ್ವೀಕರಿಸಬೇಕು" - ಇದು ವಿವೇಕಾನಂದರ ಅಮೂಲ್ಯ ನುಡಿಮುತ್ತು. ನನಗೂ ಬಹು ಮೆಚ್ಚುಗೆಯಾದದ್ದು. ಶ್ರುತಿ ಬಿ.ಎಸ್. ಬರೆದಿರುವ "ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ..." ಅನ್ನೋ ಆತ್ಮಚರಿತ್ರೆಯಲ್ಲಿಯೂ ಇದೇ ನುಡಿಯನ್ನು ಉದ್ಧರಿಸಲಾಗಿದೆ. ಅದೇ ರೀತಿ ಶಾನ್ ಸ್ವಾರ್ನರ್‌ನ ಬಡಿದೆಬ್ಬಿಸುವ ಅದ್ಭುತ ನುಡಿಗಳ ಮೋಡಿಗೆ ಒಳಗಾಗದೇ ಇರುವುದು ಅಸಾಧ್ಯ! ಅದರಲ್ಲೂ "ಭರವಸೆಯೇ ಬದುಕು... ಬದುಕು ನಿಂತಿರುವುದೇ ಆಶಾವಾದಿತನದ ಮೇಲೆ..." ಅನ್ನೋ ಅವನ ಅದಮ್ಯ ಉತ್ಸಾಹ, "ಎಲ್ಲವೂ ಸಾಧ್ಯ, ಮನಸ್ಸು ಮಾಡಬೇಕಷ್ಟೇ.." ಅನ್ನೋ ಅನುಭವದ ನುಡಿ, ಎಲ್ಲವೂ ಶ್ರುತಿಯ ಸಾಹಸಗಾಥೆಯಲ್ಲಿ ಹಾಸುಹೊಕ್ಕಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
೨೨ರ ಹರೆಯದ ಈ ಹುಡುಗಿಯನ್ನು ನಾನೀವರೆಗೂ ನೋಡಿಲ್ಲ. ಪರಿಚಯವಾಗಿದ್ದೂ ಅವಳ ಬ್ಲಾಗ್ ಮೂಲಕವೇ! ತದನಂತರ ಮುಖಗೋಡೆಯ ಸಹಾಯದಿಂದ ಪರಿಚಯ ಸ್ನೇಹಕ್ಕೆ ತಿರುಗಿ, ಆಪ್ತತೆ ಬೆಳೆಯಿತು. ಪುಸ್ತಕದಲ್ಲೊಂದು ಕಡೆ ಶ್ರುತಿ ಹೇಳಿಕೊಂಡಿದ್ದಾರೆ. ಆಪ್ತತೆಗೆ ಮಾತುಗಳೇ ಬೇಕೆಂದಿಲ್ಲ. ಸಂವೇದನಾ ಭರಿತ ಕಣ್ಣ ನೋಟ, ಮುಗುಳ್ನಗೆ, ಸಾಂತ್ವನದ ಒಂದೇ ಒಂದು ಮಾತು ಎಲ್ಲವೂ ಆಜನ್ಮ ಮೈತ್ರಿಯನ್ನೇ ಬೆಸೆದು ಬಿಡುತ್ತವೆ ಎಂಬರ್ಥದ ಅನುಭವದ ಮಾತುಗಳನ್ನು ತುಂಬಾ ಸುಂದರವಾಗಿ ಹಂಚಿಕೊಂಡಿದ್ದಾಳೆ. ಅದು ನೂರಕ್ಕೆ ನೂರು ಸತ್ಯ. ನಮ್ಮಿಬ್ಬರ ನಡುವೆ ಮಾತುಗಳು, ಚಾಟಿಂಗ್‌ಗಳು ಆಗಿದ್ದೇ ಅತ್ಯಲ್ಪ. ಎರಡೇ ಸಲ ಫೋನಾಯಿಸಿದ್ದು. ಹೀಗಿದ್ದರೂ ಅದೇನೋ ಎಂತೂ ಅವಳ ಪುಟ್ಟ ಶರೀರದ ತುಂಬೆಲ್ಲಾ ಹೊರ ಹೊಮ್ಮುತ್ತಿದ್ದ ಬೆಟ್ಟದಂತಹ ಧನಾತ್ಮಕ ಪ್ರಭಾವಳಿಗಳು ನೂರಾರು ಮೈಲಿ ದೂರದಲ್ಲಿದ್ದರೂ ನನ್ನನ್ನು ಸ್ಪರ್ಶಿಸಿ ನಮ್ಮಿಬ್ಬರನ್ನೂ ಬಂಧಿಸಿದ್ದು ಮಾತ್ರ ನೂರಕ್ಕೆ ನೂರು ಸತ್ಯ. ಇದಕ್ಕೆ ಬಹುಶಃ ನನ್ನ ಹೋರಾಟದ ಬದುಕಿನ ಕೊಂಡಿಯೊಂದು ಅವಳೊಂದಿಗೆ ಅವ್ಯಕ್ತವಾಗಿ ಬೆಸೆದುಕೊಂಡಿರುವುದೂ ಆಗಿದ್ದಿರಬಹುದು! ಆಕೆ ಚಿಕಿತ್ಸೆ ಪಡೆದ ಮಣಿಪಾಲ ಆಸ್ಪತ್ರೆಗೂ ನನಗೂ ಹತ್ತಿರದ ನಂಟು, ಒಂದು ತರಹ ಅವಿನಾಭಾವ ಸಂಬಂಧ. ಇನ್ನು ಆಕೆ ಮೆಚ್ಚುವ, ಆರಾಧಿಸುವ ಅವಳ ವೈದ್ಯರಾದ ಡಾ. ಭಾಸ್ಕರಾನಂದರು ನನಗೂ ಆತ್ಮೀಯರು! ವೈದ್ಯರ ಮಾತುಗಳೊಳಗಿನ ಮಾಂತ್ರಿಕತೆಯಲ್ಲೇ ನಿಜವಾದ ಚಿಕಿತ್ಸೆ ಇರುತ್ತದೆ ಎನ್ನುವುದಕ್ಕೆ ಇಂತಹ ಅನೇಕ ವೈದ್ಯರುಗಳೇ ಸಾಕ್ಷಿ!
ಬದುಕನ್ನು ಸವಾಲಾಗಿ ಸ್ವೀಕರಿ, ಎಂತಹ ದುಃಸ್ಥರ ಸ್ಥಿತಿ ಎದುರಾದರೂ, ಪುಟಿದೆದ್ದು ಎದುರಿಸಿ ಉತ್ಕಟವಾಗಿ ಬದುಕ ಪ್ರೀತಿಸುವವರು ಯಾರೇ ಆಗಿದ್ದಿರಲಿ, ಎಲ್ಲೇ ಇದ್ದಿರಲಿ ಅವರೆಲ್ಲಾ ನನ್ನ ಅದೆಷ್ಟೋ ಜನ್ಮಗಳ ಆಪ್ತರೇನೋ ಎಂದೆನಿಸಿಬಿಡುತ್ತಾರೆ ನನಗೆ. ಮಾತು, ಕಥೆ, ಭೇಟಿ, ಒಡನಾಟ - ಇವುಗಳಿಲ್ಲದೆಯೋ ಅವರೆಲ್ಲಾ ನನ್ನ ಬಂಧುಗಳೇನೋ ಎಂದೆನಿಸಿಬಿಡುತ್ತಾರೆ! ನಿಜ.. ನೋವಿಗೆ ಸಶಕ್ತ ಬಂಧ ಕಲ್ಪಿಸುವ ಶಕ್ತಿಯಿದೆ.. ಅದು ಸಂತಸಕ್ಕೆ ಅತಿ ಕಡಿಮೆಯೇಂದೇ ಹೆಳಬಹುದು!
೧೮ರ ಹರೆಯದಲ್ಲೇ ಮೂಳೆ ಕ್ಯಾನ್ಸರ್‌ಗೆ ಒಳಗಾಗಿ ೬ ಕೀಮೋಥೆರಪಿಯ ಹಿಂಸೆಯನ್ನು ಅನುಭವಿಸಿ, ನಡು ನಡುವೆ ಹತ್ತು ಹಲವಾರು ದೈಹಿಕ, ಮಾನಸಿಕ ಯಾತನೆಗಳನ್ನು ತಡೆದುಕೊಂಡೂ, ಸಾವೇ ನಿನ್ನ ಪಾಲಿಗೆ ಸದ್ಯ ಸಾವೇ ಗತಿ ಎಂದು ಬದುಕ ಕೈ ಹಿಡಿದು ಮುನ್ನೆಡೆದ ಈ ದಿಟ್ಟ ಹುಡುಗಿ ನನ್ನ ದೈನಂದಿನ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾಳೆ. ಇವಳ ಬರಹದೊಳಗಿನ ಅಪ್ಪಟ ಜೀವನ ಪ್ರೀತಿ, ಪ್ರಾಮಾಣಿಕತೆ, ಜಗತ್ತನ್ನು ಅತಿ ಸಣ್ಣ ವಯಸ್ಸಿನಲ್ಲೇ ಸೂಕ್ಷ್ಮವಾಗಿ ಗ್ರಹಿಸಿ, ಬಂಧಿಸಿಕೊಡುವ ರೀತಿ, ನಿರೂಪಣಾ ಶೈಲಿ ಎಲ್ಲವೂ ಮನಸೂರೆಗೊಂಡವು..... ಮಾರುಹೋದೆ!
ನೆನಪಿಡಿ, ಈಕೆ ನಮ್ಮಂತಹ ದೊಡ್ಡ ಶಹರದಲ್ಲಿ ಹುಟ್ಟಿ, ಬೆಳೆದವಳಲ್ಲ!! ಶಿವಮೊಗ್ಗ ಜಿಲ್ಲೆಯಲ್ಲಿರುವ ಹೊಸನಗರ ತಾಲ್ಲೂಕಿನ, ಪುಟ್ಟ ಬಾಣಿ ಗ್ರಾಮ ವಾಸಿ ಈಕೆ! ಹಾಗಿದ್ದೂ ಇಂತಹ ಒಂದು ಭಯಂಕರ ವ್ಯಾಧಿ ೧೮ರ ಕನಸುಕಂಗಳಿಗೆ ಬಡಿದಾಗ ಅದೆಷ್ಟು ಆಕೆಯ ಜೀವ, ಹೆತ್ತವರು ಒದ್ದಾಡಿರಬಹುದೆಂಬುದು ಊಹೆಗೂ ನಿಲುಕದ್ದು. ಹಳ್ಳಿಯ ಜನರ ಮುಗ್ಧತೆಯಲ್ಲೇ ಒಂದು ತರಹದ ಮೊಡ್ಡುತನವೂ ಬೆರೆತಿರುವುದೂ ಹೆಚ್ಚು ಕಂಡು ಬರುತ್ತದೆ. ನಮ್ಮೂರ ಕಡೆ ಅಂದರೆ ಆ ಕಡೆ ಇಂತಹ ಖಾಯಿಲೆ ಬಂದರೆ ಬದುಕುವುದೇ ವ್ಯರ್ಥ, ಸಾವು ಅನಿವಾರ್ಯ ಅನ್ನೋ ಮನೋಭಾವ ತುಸು ಹೆಚ್ಚೇ ಕಂಡು ಬರುತ್ತದೆ. (ಪಟ್ಟಣ ವಾಸಿಗಳಲ್ಲಿ ಇಲ್ಲ ಎಂದೂ ನಾನು ಹೇಳುತ್ತಿಲ್ಲ...). ಅವರ ಇಲ್ಲ ಸಲ್ಲದ ಅವ್ಯಾಹತ ಪ್ರಶ್ನೆಗಳು, ರೋಧನಗಳು, ಕಪೋ ಕಲ್ಪಿತ ಕಥೆಗಳು, ಗಾಳಿ ಸುದ್ದಿಗಳು, ಅನಗತ್ಯದ ಅನುಕಂಪಗಳು ಎಲ್ಲವನ್ನೂ ಆಕೆ, ಅವಳ ಮನೆಯವರು ಸಹಿಸಿ, ಧಿಕ್ಕರಿಸಿ ಮುನ್ನೆಡೆಯಬೇಕಾಗಿತ್ತು. ದೂರದೂರಿಂದ ೫ ತಾಸುಗಳ ಪ್ರಯಾಣ ಮಾಡಿ ಪ್ರತಿ ಸಲ ಕೀಮೋಥೆರಪಿಗಾಗಿ ಮಣಿಪಾಲಕ್ಕೆ ಬಂದು ಚಿಕಿತ್ಸೆ ಪಡೆದು, ಹಿಂತಿರುಗಿ, ಯಾತನೆ ಅನುಭವಿಸಿ, ಪ್ರತಿ ದಿನ ಆತಂಕದ ಜೊತೆ ಜೀವಿಸುತ್ತಾ, ಹೆಚ್ಚು ಕಡಿಮೆ ಆದರೆ ಮತ್ತೆ ತಾಸುಗಟ್ಟಲೆ ಪ್ರಯಾಣಿಸಿ ಹೈರಾಣಾಗುತ್ತಾ, ಆತಂಕಗಳನ್ನು ಎದುರಿಸುತ್ತಾ, ಅತಿಯಾದ ವೆಚ್ಚಗಳನ್ನು ಹೇಗೋ ಭರಿಸುತ್ತಾ, ಎಲ್ಲವನ್ನೂ ಧೈರ್ಯದಿಂದ, ಆತ್ಮಬಲದಿಂದ ದಾಟಿ ಇಂದು ಈ ಕ್ಯಾನ್ಸರ್‌ಗೆ ವಿದಾಯ ಹೇಳಿ ನಳನಳಿಸುತ್ತಿರುವ ಶ್ರುತಿಯ ಬದುಕಿನ ಈ ಹೋರಾಟದ ಗಾಥೆಯನ್ನು ಓದಿದರೆ ನಮ್ಮ ಬದುಕಿನ ದಿಕ್ಕನ್ನೂ ಬದಲಿಸಿಕೊಳ್ಳಬಹುದು.
‘ಮನುಷ್ಯನ ಮನಸ್ಸಿಗೆ ಬಹಳ ಶಕ್ತಿಯಿದೆ. ಮನೋಬಲವೊಂದಿದ್ದರೆ ಏನನ್ನೂ ಸಾಧಿಸಬಹುದು. ಯಾವ ಸಮಸ್ಯೆಯನ್ನಾದರೂ ಎದುರಿಸಬಹುದು. ಒಂದು ವೇಳೆ ಮನಸು ದುರ್ಬಲವೆನಿಸಿದರೆ ಹೃದಯದ ಮೇಳೆ ಕೈ ಇಟ್ಟು- "ನೀನು ದುರ್ಬಲವಾಗಿಲ್ಲ. ನೀನಿದನ್ನು ಮಾಡಬಲ್ಲೆ" ಎಂದು ಹೇಳಿ , ಅದು ನಿಮ್ಮ ಮಾತನ್ನು ಕೇಳಿಯೇ ಕೇಳುತ್ತದೆ’. ಎನ್ನುತ್ತಾಳೆ ಶ್ರುತಿ. ಇದು ಮಾತ್ರ ಅಪ್ಪಟ ಚಿನ್ನದಂತಹ ಮಾತುಗಳು. ಇದು ನನ್ನ ಬದುಕಿನ ಪ್ರೇರಣೆಯ ಸಾಲೂ ಹೌದು! ಬಾಲ್ಯದಲ್ಲಿ ಎಲ್ಲರೂ ಹೊರ ಬಿದ್ದು ಆಡುವಾಗ, ಒಂಟಿಯಾಗಿ ಕುಳಿತು ಒಳಗೊಳಗೇ ದುಃಖಿಸುತ್ತಿದ್ದ ನನಗೆ ಅಪ್ಪ-ಅಮ್ಮ ಹೇಳಿದ್ದು -
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ,
ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ಯೋತ್ತಿಷ್ಠ ಪರಂತಪ ”(ಸಾಂಖ್ಯಯೋಗ) (..ಹೇಡಿಯಾಗಬೇಡ, ಇದು ನಿನಗೆ ಯೋಗ್ಯವಲ್ಲ, ಅತಿ ಕ್ಷುಲ್ಲಕವಾದ ಹೃದಯ ದೌರ್ಬಲ್ಯವನ್ನು ಬಿಟ್ಟು, ಮೇಲೇಳು !) ಅದೇ ರೀತಿ "ಸುಖ ದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ (ಸುಖ-ದುಃಖ, ಲಾಭ-ನಷ್ಟ, ಜಯಾಪಜಯಗಳನ್ನು ಸಮವಾಗಿ ಸ್ವೀಕರಿಸಿ ಯುದ್ಧಕ್ಕೆ ತೊಡಗು...) ಎಂದು ಸದಾ ಹೆಳುತ್ತಲೇ ನನ್ನ ಮೇಲೆಬ್ಬಿಸಿದ್ದಾರೆ. ಬದುಕು ಒಂದು ಯುದ್ಧರಂಗವೇ ಸಮಚಿತ್ತತೆ ಇದ್ದಲ್ಲಿ ಮಾತ್ರ ಅಂತಿಮ ವಿಜಯ ನಮ್ಮದೇ... ನಿನಗೇ ನೀನೇ ಮಿತ್ರ, ಶತ್ರು, ಗೆಲುವು, ಸೋಲು ಎನ್ನುವುದನ್ನು ಮನದಟ್ಟು ಮಾಡಿಕೊಂಡರೆ ಯಾವುದೂ ಅಸಾಧ್ಯವಲ್ಲ!
ಹೋರಾಟದ ಬದುಕು ಬಹು ಬೇಗ ಹಲವನ್ನು ಕಲಿಸಿಬಿಡುತ್ತದೆ. ಕೆಲವರಿಗೆ ಬೇಗ ಕಣ್ತೆರೆದರೆ, ಇನ್ನು ಕೆಲವರಿಗೆ ತುಸು ತಡವಾಗಬಹುದೇನೋ! ಶ್ರುತಿ ಹಾಗೂ ನನ್ನಂತಹವರ ಪಾಲಿಗೆ ಬದುಕು ತುಂಬಾ ಕರುಣಾಮಯಿಯಾಗಿದೆ. ಬಹು ಬೇಗ ಅದರ ಪ್ರಾಮುಖ್ಯತೆ, ಅದರ ಕಹಿಯೊಳಡಗಿರುವ ಸವಿ, ಅದೊಡ್ಡುವ ಸವಾಲೊಳಗಿನ ರುಚಿ ಎಲ್ಲವನ್ನೂ ಕಲಿಸಿಕೊಟ್ಟಿದೆ, ಪ್ರತಿ ದಿನ ಕಲಿಸಿಕೊಡುತ್ತಲೇ ಇದೆ.
ಚಿಕಿತ್ಸೆಯಾನಂತರ ಶ್ರುತಿ ಆ ಪುಟ್ಟ ಗ್ರಾಮದಲ್ಲೇ ಕುಳಿತು, ಅಂತರ್ಜಾಲದ ಮೂಲಕ ದೇಶ, ವಿದೇಶಗಳಲ್ಲಿರುವ ತನ್ನತಂಹ ಪೀಡಿತರನ್ನು, ಗುಣಮುಖಿಗಳಾಗಿ ಜೀವನ್ಮುಖಿಯರಾದ ಹಲವು ಕ್ಯಾನ್ಸರ್ ಪೀಡಿತರನ್ನು ಸಂಪರ್ಕಿಸಿದ್ದಲ್ಲದೇ ಅವರಿಂದ ಹಲವು ಸ್ಪೂರ್ತಿಯನ್ನು ಪಡೆದು, ತನ್ನಂತೇ ನೊಂದವರಿಗೆ ಮಾರ್ಗದರ್ಶನ ನೀಡಿ, ತನ್ನ ಅನುಭವಗಳನ್ನು ಹಂಚಿಕೊಂಡವಳು. ಇವಳ ಪರಿಮಿತಿಯಲ್ಲಿ ಇಂತಹ ಸಾಧನೆ ಅಪರಿಮಿತ! ಅತ್ಯಲ್ಪದರಲ್ಲೇ ಮಹತ್ತನ್ನು ಸಾಧಿಸಿದ ಇವಳ ಬದುಕೊಂದು ಮಾದರಿ ಹಾಗೂ ಅನುಕರಣೀಯ ಎಂದು ಹೇಳುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಖಂಡಿತವೂ ಇಲ್ಲ. ಒಮ್ಮೆ ಪುಸ್ತಕವನ್ನೋದಿ... ನಿಮಗೂ ನನ್ನ ಮಾತುಗಳೆಷ್ಟು ಸತ್ಯ ಎಂದೆನಿಸುವುದರಲ್ಲಿ ನನಗೆ ಇನಿತೂ ಸಂಶಯವಿಲ್ಲ :)
ಪುಸ್ತಕದ ಹೆಸರು : ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ....
ಲೇಖಕಿ : ಶ್ರುತಿ ಬಿ.ಎಸ್.
ಪ್ರಕಾಶಕರು : ಗೋಮಿನಿ ಪ್ರಕಾಶನ
ಪುಟಗಳು : ೧೨೦
ಬೆಲೆ : ೮೦ ರೂಪಾಯಿಗಳು
( sapnaonline ನಲ್ಲೂ ಲಭ್ಯ)
-ತೇಜಸ್ವಿನಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)