ಶನಿವಾರ, ಫೆಬ್ರವರಿ 20, 2010

ತಪ್ಪು ನನ್ನದಲ್ಲ...

ನೀ ತೋರಿದ್ದು ಸಾಗರವನ್ನೇ
ಆದರೆ ನಾ ಕಂಡಿದ್ದು,
ಅಡಗಿರುವ ಮುತ್ತು ಹವಳಗಳನ್ನ

ನೀ ಕಾಣಿಸಿದ್ದು ನೀಲಾಗಸವನ್ನೇ
ಆದರೆ ನಾ ಬಯಸಿದ್ದು,
ಸಪ್ತವರ್ಣಗಳ ಮಳೆಬಿಲ್ಲನ್ನ

ನೀ ನೀಡಿದ್ದು ಚೆಂಗುಲಾಬಿಯನ್ನೇ
ಆದರೆ ನಾ ಎಣಿಸಿದ್ದು,
ಘಮ್ಮೆನ್ನುವ ಜಾಜಿ ಮೊಗ್ಗುಗಳನ್ನ

ಪಡೆದದ್ದೇನೂ ಕಡಿಮೆಯದ್ದಲ್ಲ..
ಆದರೆ ಬಯಸಿದ್ದೂ ಕೈಗೆಟುಕದ್ದಲ್ಲ!
ತಪ್ಪು ನನ್ನದಲ್ಲ ನಲ್ಲ,
ಈ ನನ್ನ ಹುಚ್ಚು ಮನಸಿನದು....

ರವಿ ಕಾಣದ್ದು ಕವಿ ಕಂಡಂತೇ
ಕಂಡಿದ್ದು ಕಾಣದ್ದು, ಇದ್ದದ್ದು ಇಲ್ಲದ್ದು,
ಎಲ್ಲವನೂ ಬಯಸಿ,
ನಿದ್ದೆಗೆಡಿಸುತಿದೆ ನಿನ್ನ ನಲ್ಲೆಯ!

- ತೇಜಸ್ವಿನಿ

(ಚಿತ್ರ ಕೃಪೆ : ಗೂಗಲ್)

ಬುಧವಾರ, ಫೆಬ್ರವರಿ 17, 2010

ಹೆಸರಿಲ್ಲದ ಭಾವಗಳು...

ಸುರಗಿ ಮರದ ನೆರಳಲ್ಲಿ ಕುಳಿತು,
ಕೆಳಗೆ ಬಿದ್ದ ಹೂವುಗಳನ್ನು ಹೆಕ್ಕಿ
ಒಂದೊಂದಾಗಿ ಮಡಿಲೊಳು ತುಂಬುವಾಗ,
ಕಳೆದುಹೋದ ಸವಿ ನೆನಪುಗಳನ್ನೇ
ಕಂಪನ್ನಾಗಿಸಿ, ಉಸಿರೊಳಗೆಳೆದು, ಮತ್ತೆ
ಮನದೊಳಗೆ ಒಂದೊಂದಾಗಿ ತುಂಬಿಕೊಳ್ಳುವ,
ಹುಚ್ಚು ಹಂಬಲ

**

ತೂಗುಯ್ಯಾಲೆಯಲಿ ಕೂತು,
ಜೋರಾಗಿ ಜೀಕುತ್ತಾ ಕಣ್ಮುಚ್ಚಿದರೆ,
ಒಮ್ಮೆ ನಾನು ಭೂತದಲ್ಲಿರುವೆ,
ಮಗದೂಮ್ಮೆ ಭವಿಷ್ಯತ್ತಿನಲ್ಲಿ...
ಕಣ್ಬಿಟ್ಟರೆ ಸಾಕು, ಕಾಣುವುದು
ವರ್ತಮಾನದಲ್ಲಿ ನಿಂತಿರುವ,
ನನ್ನ ಜೋಕಾಲಿ.

**

ಅತ್ತ ಸಾಗರದ ಮೊರೆತ,
ಇತ್ತ ನದಿಯ ಜುಳು ಜುಳು...
ನಡುವಿರುವ ಬಿಸಿ ಡಾಮರಿನಲ್ಲಿ
ನಾ ಸಾಗುವಾಗ,
ನಿನ್ನ ನೆನಪಾಗಿ ಮುಗುಳ್ನಗಲು,
ಥಟ್ಟನೆ ಹೊಳೆಯಿತು, ನಾನಿರುವುದೀಗ
ಮರವಂತೆಯಲ್ಲಿ

ಶನಿವಾರ, ಫೆಬ್ರವರಿ 13, 2010

ಬೂ ಕಲರ್ Shoeವೂ, ‘ನ’= Foxಉಉಊಊ....

"ಹಾಯ್ ಅಮ್ಮಾ... ಅದಿತಿ ಬಂತು ಪೇ ಹೋಮಿಂದ..(ಪ್ಲೇಹೋಂ)" ಎಂದು ಮುಗುಳ್ನಗುತ್ತಾ ನನ್ನಪ್ಪಿದಾಗ ಏನೋ ಹೊಸ ಪುಳಕ.....ವರ್ಣಿಸಲಾಗದ ಆನಂದ. ಪ್ರತಿದಿನವೂ ಇದೇ ಪುನರಾವರ್ತನಗೊಂಡರೂ, ಪ್ರತಿಸಲವೂ ನೂತನ ಭಾವದ ಆಗಮನ. ಬೆಳಗ್ಗೆ ಎಬ್ಬಿಸಿ, ಗಡಿಬಿಡಿ ಮಾಡಿ ತಿಂಡಿ ತಿನ್ನಿಸಿ, ರೆಡಿ ಮಾಡಿ ಕಳುಹಿಸುವಾಗ ಮಾತ್ರ ಉಸ್ಸಪ್ಪ ಅನ್ನಿಸಿದರೂ, ಅವಳು ಹೋದ ಆ ಎರಡೂವರೆ ತಾಸು ಮಾತ್ರ ಮನೆ, ಮನವೆಲ್ಲಾ ಖಾಲಿ ಖಾಲಿ. ಒಂದಿಷ್ಟು ಮೈಲ್ ನೋಡು, ಬ್ಲಾಗ್ ಓದು, ಅಡಿಗೆ ತಯಾರಿ ಮಾಡಿ ಸ್ನಾನ, ಪೂಜೆ ಮುಗಿಸುವ ವೇಳೆಗೆ ಮತ್ತೆ ಹಾಜಾರು. ಬರುವಾಗ, ಅಷ್ಟು ದೂರದಿಂದಲೇ ಟೀಚರ್ ಕಲಿಸಿದ ಹೊಸ ರೈಮ್ಸ್‌ನ ಮೊದಲ ಸಾಲನ್ನು ಗುನುಗುತ್ತಾ, ತನ್ನ ಗೆಳೆಯ/ಗೆಳತಿಯರ ಹೆಸರು ಸರಿಯಾಗಿ ನೆನಪಿಗೆ ಬರದಿದ್ದರೂ ಅರ್ಧಂಬರ್ಧ ಉಚ್ಚರಿಸುತ್ತಾ, ಅವರ ಬಗ್ಗೆ ಏನೇನೋ ದೂರುತ್ತಾ, ಮುದ್ದುಮುದ್ದಾಗಿ ಮಾತಾಡುತ್ತಾ, ಒಳಬಂದು ‘ಹಾಯ್..ಅಮ್ಮಾ..’ ಎಂದರೆ ನನಗೂ ತುಂಬಾ ಹಾಯೆನಿಸುತ್ತದೆ. -
ಅಂದು ‘ಅಕ್ಕಾ, ಪುಟ್ಟಿಯ ಚಪ್ಪಲಿ ಬಾರ್ ಹಾಳಾಗ್ತಾ ಬಂದಿದೆ, ಹೊಸತು ತಗೋಬೇಕು ಈ ಶನಿವಾರ.." ಎಂದು ನನ್ನ ಕೆಲಸದ ಹುಡುಗಿ ಶೋಭಾ ಅಂದಾಗ, ಅಲ್ಲೇ ಇದ್ದ ಪುಟ್ಟಿ "ಅಮ್ಮಾ ಬೂ(ಬ್ಲೂ) ಕಲರ್ ಚಪ್ಪಲು ಬೇಕು ಪುಟ್ಟಂಗೆ, ಇಲ್ದೇ ಹೋದ್ರೆ ಓಯೆಂಜ್ ಆದ್ರೂ ಅಡ್ಡಿಲ್ಲೆ..." ಎಂದಾಗ ಬೆರಗಾಗಿದ್ದೆ. ಅಬ್ಬಾ! ಇನ್ನೂ ಎರಡೂವರೆವರ್ಷವಷ್ಟೇ. ಈಗಲೇ ಈ ರೀತಿ.. ಇನ್ನು ಮುಂದೆ ಹೇಗೋ... ಎಂದೆನಿಸಿತ್ತು. ಶನಿವಾರ ಅವಳ ಚಪ್ಪಲಿಗೆಂದೇ ಹೊರಟಾಯಿತು. ಕೆಳಮಾಳಿಗೆಯಲ್ಲಿದ್ದ ಚಪ್ಪಲ್ ಅಂಗಡಿಗೆ ನನ್ನವರು ಹಾಗೂ ಅದಿತಿ ಹೋದರು. ನಾನು ಹಾಗೂ ಶೋಭಾ ಕಾರಿನಲ್ಲೇ ಕುಳಿತು ಕಾಯತೊಡಗಿದವು. ಅಬ್ಬಬ್ಬಾ ಎಂದರೆ ೧೫ ನಿಮಿಷವಾಗಬಹುದು, ಆಮೇಲೆ ಅವಳನ್ನು ಪಾರ್ಕಿಗೂ ಕರೆದೊಯ್ದಾರಾಯೆಂತೆಂದು ಅಂದಾಜಿಸಿದ್ದೆ. ಆದರೆ ೩೦ ನಿಮಿಷಗಳಾದರೂ ಅಪ್ಪ ಮಗಳ ಪತ್ತೆಯಿಲ್ಲ. ಸಹನೆ ಸ್ವಲ್ಪ ಸ್ವಲ್ಪವಾಗಿ ಸೋರ ತೊಡಗಿತು. ಅಲ್ಲಾ... ಕಾಲಳತೆಗೆ ಸೂಕ್ತವಾಗಿರುವ ಒಂದು ಜೊತೆ ಪುಟ್ಟ ಚಪ್ಪಲಿಯನ್ನು ಆರಿಸಲು ಇಷ್ಟೊತ್ತು ಬೇಕೆ? ಅಥವಾ ಇವರು ಮುದ್ದು ಮಗಳಿಗಾಗಿ ತಾವೇ ಚಪ್ಪಲ್ ತಯಾರಿಸಿ ತರುತ್ತಿದ್ದಾರೋ ಎಂದೇ ತಿಳಿಯದಂತಾಯಿತು. ಫೋನಾಯಿಸೋಣವೆಂದರೆ ಮೊಬೈಲ್ ಕಾರಿನೊಳಗೇ ಬಿಟ್ಟು ಹೋಗಿದ್ದರು. ಸರಿ ಇನ್ನೇನು ಮಾಡುವುದೆಂದು ಮತ್ತೆ ೧೫ ನಿಮಿಷ ಹಾಗೇ ಕುಳಿತೆ. ಆಮೇಲೆ ತಡೆಯಲಾಗದೇ ಶೋಭಾಳನ್ನು ಕೆಳಗಿನ ಮಾಳಿಗೆಗೆ ಕಳುಹಿಸಿ ನನ್ನವರನ್ನು ಮೇಲೆ ಕಳುಹಿಸಲೆಂದೆ. ಅವಳು ಹೋದ ನಿಮಿಷದೊಳಗೇ ಇವರು ಕಾರಿನ ಬಳಿ ಬಂದರು.

"ಇದೆಂಥಾದ್ದು ಮಾರಾಯ್ರೆ? ಇನ್ನೂ ಚಪ್ಪಲ್ ಆರ್ಸಿ ಆಜಿಲ್ಯ ನಿಮ್ಗೆ? ಅದ್ರ ಕಾಲಿಗೆ ಸರಿ ಅಪ್ಪುದನ್ನ ನೋಡೀ ತಗಂಡ್ರಾತಪ್ಪ. ಅದ್ಕಾಗಿ ಇಷ್ಟೊತ್ತು ಟೈಮ್ ವೇಸ್ಟ್ ಎಂಥಕ್ಕೆ? ಅದಿತಿಗೆ ಬೋರ್‍ಆಗಿಕ್ಕು.." ಎಂದು ವರಾತ ತೆಗೆಯುತ್ತಾ ಅವರತ್ತ ನೋಡಿದರೆ ಅವರು ಬರೀ ನಗುತ್ತಿದ್ದರು."ಅಯ್ಯೋ ಮಾರಾಯ್ತಿ.. ನನ್ನಿಂದಲ್ದೇ ಲೇಟಾಗ್ತಾ ಇಪ್ಪದು. ನಿನ್ನ ಮಗ್ಳಿಂದನೇಯಾ... ಹೋಗಿದ್ದೇ ಚಪ್ಪಲ್ ರಾಶಿ ಮಧ್ಯೆ ಸ್ಟೂಲ್ ಹಾಕಿ ಕೂತ್ಕಂಡ್ತು. ಆಮೇಲೆ ಒಂದೊಂದಾಗಿ ಹಾಕಿ ನೋಡದು.. ಇದು ಬೇಡ ಅಪ್ಪ, ಇದು ಚಿಂವ್ ಚಿಂವ್ ಹೇಳ್ತಿಲ್ಲೆ.. ಇದು ಬೂ ಕಲರ್ ಅಲ್ಲಾ.. ಓಯೆಂಜ್ ಕೊಡು ನಂಗೆ, ಬಾಕು(ಬ್ಲಾಕ್) ಬೇಡ, .." ಹೀಂಗೇ ಹೇಳ್ತಾ ಇದ್ದು ಆವಾಗಿಂದ. ನಾ ಎಷ್ಟು ಹೇಳಿದ್ರೂ ಕೇಳ್ತಿಲ್ಲೆ.."ಅಪ್ಪ...ಪುಟ್ಟಂಗೆ ಚಿಂವ್ ಚಿಂವ್ ಹೇಳು ಬೂ ಕಲರ್ ಚಪ್ಪಲೇ ಬೇಕು.." ಹೇಳ್ತಾ ಇದ್ದು. ಅದೇ ಕಲರ್‌ನಲ್ಲಿಪ್ಪು ಚಪ್ಪಲ್ ಚಿಂವ್ ಚಿಂವ್ ಹೇಳ್ತಿಲ್ಲೆ.. ಶಬ್ದ ಮಾಡು ಚಪ್ಪಲ್ ಬೂ ಕಲರ್‌ನಲ್ಲಿಲ್ಲೆ... ಎಂತ ಮಾಡ್ಲಿ ಹೇಳು? ಒರೆಂಜ್ ಕಲರ್‌ನಲ್ಲಿ ಒಂದು ಚಪ್ಪಲ್ ಇದ್ದು, ಚೊಲೋ ಇದ್ದು...." ಎಂದು ಅಸಹಾಯಕತೆ ತೋಡಿಕೊಂಡಾಗ ದಂಗಾಗಿ ಹೋಗಿದ್ದೆ. ‘ಅಕ್ಕಾ ಇವ್ಳು ಭಾರಿ ಜೋರಿದ್ದಾಳ... ಅಲ್ಲಿ ಪಾಪ ಅವ್ರಿಗೆ ಸಾಕೋ ಮಾಡ್ಬಿಟ್ಟಿದ್ಲು. ಅದು ಕೊಡಿ, ಇದು ಕೊಡಿ, ಆ ಕಲರ್ ಬೇಡ ಅಂತೆಲ್ಲಾ ಹೇಳಿ ಎಲ್ಲಾ ಚಪ್ಪಲಿಗಳನ್ನು ಕೆಳ್ಗೆ ಹಾಕಿ ತಾನು ಮಧ್ಯ ಕೂತಿದ್ಲು.."ಎಂದು ಶೋಭಾಳೂ ಅಂದಾಗ ಪುಟ್ಟಿಯ ಹೊಸ ಅವತಾರ ನೋಡಿದ್ದೆ. ಆಮೇಲೆ ನಾನು ಅವಳ ಕಾಲಿಗೆ ಸರಿ ಹೊಂದುವ ಒಯೆಂಜ್ ಕಲರ್ ಚಪ್ಪಲ್‌ನ್ನೇ ಖರೀದಿಸಲು ಹೇಳಿ, ಪೆಪ್ಪರ್‌ಮೆಂಟ್ ಲಂಚವನ್ನಿತ್ತು ಅವಳನ್ನು ಸಮಾಧಾನಿಸಿದೆ. ಆದರೆ ಚೊಕೋಲೇಟ್ ಸವಿ ಮರೆಯಾದಂತೇ "ಬೂ ಕಲರ್" ನೆನಪು ಮತ್ತೆ ಮರಳುತಿತ್ತು. ಮನೆಗೆ ಬಂದ ಮೇಲೆ ಎಲ್ಲರೂ ಸೇರಿ ಒರೆಂಜ್ ಕಲರ್ ಚಪ್ಪಲಿಯೇ ತುಂಬಾ ಚೆನ್ನಾಗಿದ್ದು, ಇದನ್ನು ಅದಿತಿಗಾಗಿಯೇ ಮಾಡಿಸಿದ್ದು, ಇದ್ರಲ್ಲಿ ಪುಟ್ಟಿ ತುಂಬಾ ಚೆನ್ನಾಗಿ ಕಾಣ್ತಾಳೆ...ಎಂದೆಲ್ಲಾ ಪೂಸಿ ಹೊಡೆದು, ಅವಳ ಕಿವಿಯಲ್ಲಿ "ಲಾಲ್‌ಬಾಗ್" ಇಟ್ಟಾಗಲೇ ಅವಳೂ ಒಪ್ಪಿ ಹಾಕಿಕೊಂಡದ್ದು! [ನನ್ನವರು ಅದಿತಿಯ ಕಿವಿಯಲ್ಲಿ ಹೂ ಇಡುವುದಕ್ಕೆ ಲಾಲ್‌ಬಾಗ್ ಅನ್ನುತ್ತಾರೆ :)]

ಮತ್ತೊಂದು ದಿನ ನಾನು ಚಾರ್ಟ್ ತೋರಿಸಿ, ಕನ್ನಡ ಸ್ವರ್ಣಮಾಲೆಗಳನ್ನು ಕಲಿಸುತ್ತಿದ್ದೆ. ಅ - ಅಮ್ಮ, ಆ-ಆನೆ, ಎಂದು ಹೇಳಿ ಕೊಡುತ್ತಿದ್ದಂತೇ ಆಕೆ "ನೀ ಚುಮ್ಮಿರು ಅಮ್ಮ.. ಅ-ಅಮ್ಮ ಅಲ್ಲ, ಅ-ಅರಸ.... ಟೀಚಲು ಅದನ್ನೇ ಹೇಕೊಟ್ಟಿದ್ದು.."ಎಂದಾಗ ಸ್ವಲ್ಪ ಸಿಟ್ಟು ಬಂದಿತ್ತು ಟೀಚರ್ ಮೇಲೆ. ನನ್ನ ಜಾಗವನ್ನು ಕಸಿದು ಯಾರೋ ಹೇಳಹೆಸರಿಲ್ಲದ ಅರಸನಿಗೆ ಕೊಟ್ಟಿದ್ದಕ್ಕಾಗಿ. ಆದರೂ ಅವಳ ಹಠಕ್ಕೆ ತಲೆಬಾಗಿ ಅ-ಅರಸ ಎಂದೇ ಹೇಳಬೇಕಾಯಿತು. ಮುಂದೆ ನ-ನರಿ ಎಂದು ಹೇಳಿಕೊಡುವಾಗ ಥಟ್ಟೆಂದು ಆಕೆ ನ-ಫೋಕ್ಸ್ ಎನ್ನಬೇಕೆ? ನ-ನರಿ, F for Fox ಎಂದು ನಾನಾವಿಧದಲ್ಲಿ ತಿಳಿಹೇಳಿದರೂ ಒಪ್ಪದ ಅವಳಜೊತೆ ನಾನೂ ನ-ಫೋಕ್ಸ್ ಹೇಳಬೇಕಾಯಿತು. ಪ್ಲೇಹೋಂ‌ನ ಇಂಗ್ಲೀಷ್ ಹಾಗೂ ನನ್ನ ಕನ್ನಡ ಎರಡೂ ಜೊತೆ ಸೇರಿಯಾದ ಕಂಗ್ಲಿಷ್ ಚಿತ್ರಾನ್ನವನ್ನು ವಿಷಾದಿಂದಲೇ ಅರಗಿಸಿಕೊಂಡೆ.

ಈಗೇನೋ ಅವಳ ಕಲಿಕೆಯ ಹುಮ್ಮಸ್ಸು ಎಲ್ಲೆಯನ್ನು ಮೀಟಿದೆ. ಹೊಸತನದಲ್ಲಿ ಎಲ್ಲವೂ ಹುರುಪಿನಿಂದಲೇ ಕೂಡಿರುತ್ತದೆ ಅನ್ನಿ. ಈಗ ಪ್ಲೇಹೋಂ‌ನಿಂದ ಬಂದಕೂಡಲೇ "ಅಮ್ಮ ಪುಟ್ಟಂಗೆ ಓದ್ಸು..." ಅನ್ನೋಳು, ಮುಂದೆ ಮಲ್ಗಬೇಡ, ಓದ್ಕೋ ಇಂದ್ರೂ ಕೇಳ್ದೇ ಹಠಮಾಡೋ ದಿನವೂ ಬರುತ್ತದೆ ಎನ್ನುವುದು ಚೆನ್ನಾಗಿ ಗೊತ್ತು ಬಿಡಿ. ಅವತ್ತೂ ಹಾಗೇ...ಬಂದವಳೇ ಅವಳ ದೊಡ್ಡ ದೊಡ್ಡ ಚಿತ್ರಗಳುಳ್ಳ ಪುಸ್ತಕವನ್ನು ಹಿಡಿದು ಕುಳಿತಳು. ಚಿತ್ರಗಳನ್ನು ಗುರುತಿಸುತ್ತಾ ಅವುಗಳ ಹೆಸರುಗಳನ್ನು ಹೇಳುತ್ತಿದ್ದಳು. ನಾನೂ ಅಲ್ಲೇ ಕುಳಿತು ಪೇಪರ್‌ಮೇಲೆ ಕಣ್ಣಾಡಿಸುತ್ತಿದ್ದೆ. ಇದ್ದಕಿದ್ದಂತೇ ಅವಳು "ಅಮ್ಮಾ..ಅಜ್ಜಿ ಹತ್ರನೂ ಚೂಷ್ಮ ಇದ್ದು ಅಲ್ದಾ.."ಎಂದು ಕೇಳಲು ನನಗೆ ಅರ್ಥವೇ ಆಗಲಿಲ್ಲ. "ಎಂಥದ್ದೇ ಅದು ಚೂಷ್ಮ? ಎಲ್ಲಿದ್ದೆ ಅಜ್ಜಿ ಹತ್ರ?" ಎಂದು ಕೇಳಿದ್ದೇ ತಡ ಕೈಯಲ್ಲಿದ್ದ ಪುಸ್ತಕವನ್ನು ನನಗೆ ಕೊಟ್ಟು ಚಷ್ಮ(ಕನ್ನಡಕ)ದ ಚಿತ್ರವನ್ನು ತೋರಿದಳು. ಈಗಲೂ ಅಮ್ಮನ ಕನ್ನಡಕವನ್ನು ನೋಡಿದರೆ, ಚೂಷ್ಮದ ನೆನಪೇ ಆಗುತ್ತದೆ ನನಗೆ :)

ನನ್ನ ಬಾಲ್ಯವನ್ನು ಹೋಲಿಸಿಕೊಂಡರೆ ಅರಿಯದ ಬೆರಗು ಮೂಡತ್ತದೆ ಅದಿತಿಯನ್ನು ಕಂಡಾಗ. ನನ್ನ ಮಾನಸ ಸಹೋದರನೊಬ್ಬ ಹೇಳುತ್ತಿರುತ್ತಾನೆ. `ಈಗ ಎರಡು ವರುಷಗಳ ಮಧ್ಯೆಯೂ Generation Gap ಇದುತ್ತದೆಯಕ್ಕ' ಎಂದು. ನನ್ನ ಕಳೆದುಹೋದ ಬಾಲ್ಯ ಹಾಗೂ ಈಗ ನೋಡುತ್ತಿರುವ ಪುಟ್ಟಿಯ ಬಾಲ್ಯದ ನಡುವೆ ಬಹಳ ದೊಡ್ಡ Gap ಇದೆ...ನಿಜ. ಆದರೆ ಮತ್ತೆ ಬರದ ಬಾಲ್ಯದ ಆ ಸವಿದಿನಗಳ ಬೇಸರ ಮಗಳ ಬಾಲ್ಯದ ಅನುಭೂತಿಯಲ್ಲಿ ಮರೆಯಾಗುತ್ತಿದೆ. ಎರಡೂವರೆ ವರುಷದ ಈ ಪೋರಿಯ ತುಂಟಾಗಳ ನಡುವೆಯೆಲ್ಲೋ ನನ್ನ ಬಾಲ್ಯವೂ ಹಸಿರಾಗುತ್ತಿದೆ.

-ತೇಜಸ್ವಿನಿ

ಸೋಮವಾರ, ಫೆಬ್ರವರಿ 8, 2010

ನಾ ಕಂಡ ‘ನೀಲಿ’ "ಅವತಾರ"

"ನಾನು ಅದಿತಿ ನೋಡ್ಕತ್ತಿ... ನೀ ಬೇಕಿದ್ರೆ ನೋಡ್ಲಕ್ಕು ಫಿಲ್ಮ್.. ಎಂತ ಮಾಡ್ತೆ ಹೇಳು... ಮೊದಲೇ ಬುಕ್ಕಿಂಗ್ ಮಾಡಿಡವು. ಚೆನ್ನಾಗಿದ್ದಡ ರಾಶಿಯ.. ನೋಡ್ಕ ಬಾ.." ಎಂದು ನನ್ನವರು ಹೇಳಿದಾಗ ನಾನು ಬಹು ಆಶ್ಚರ್ಯಗೊಂಡಿದ್ದು ಅವರು ಆ ರೀತಿ ಹೇಳಿದ್ದಕ್ಕಲ್ಲಾ. ಬದಲು ನಾನು ಫಿಲ್ಮ್ ನೋಡಲು ಟಾಕೀಸ್‌ಗೆ ಹೋಗಬೇಕೆಂಬ ಮಾತು ನನ್ನೊಳಗೇ ಅರಿಯದ ಅಚ್ಚರಿ ತಂದಿದ್ದು. ಕೊನೆಯ ಬಾರಿ ನಾನು ಚಲನಚಿತ್ರವೊಂದನ್ನು ಟಾಕೀಸ್‌ಗೇ ಹೋಗಿ ನೋಡಿದ್ದು ಎಂಟನೆಯ ತರಗತಿಯಲ್ಲಿದ್ದಾಗ. ಅದೂ ಅಪ್ಪ, ಅಮ್ಮ, ತಂಗಿಯಂದಿರು, ಅಜ್ಜ ಹಾಗೂ ಅಜ್ಜಿಯೊಡನೆ. ಆಮೇಲೆ ಹೋಗೇ ಇಲ್ಲ. ಅದರಲ್ಲೇನೂ ದೊಡ್ಡಸ್ತಿಕೆಯೂ ಇಲ್ಲವೆನ್ನಿ. ಮೊದಲನೆಯದಾಗ ಚಿಲನಚಿತ್ರಗಳು ಕೇಬಲ್‌ನಲ್ಲೇ ಸುಲಭವಾಗಿ(ಸ್ವಲ್ಪ ತಡವಾಗಿಯಾದರೂ) ನೋಡಲು ಸಿಗತೊಡಗಿದವು. ಎರಡನೆಯದಾಗಿ ಅದೇಕೋ ಎಂತೋ ಹೋಗಿ ನೋಡಬೇಕೆಂಬ ಆಶಯವೇ ಹುಟ್ಟುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹೋಗಲು ಇದ್ದ ಸಮಸ್ಯೆಗಳು. ಆಗ ಮಂಗಳೂರಿನಲ್ಲಿದ್ದ ಉತ್ತಮ ಟಾಕೀಸ್‌ಗಳಿಗೆಲ್ಲಾ ವ್ಹೀಲ್‌ಚೇರ್ ಸುಲಭವಾಗಿ ಹೋಗುತ್ತಿರಲಿಲ್ಲ. Inox, PVRಗಳ ಸೌಲಭ್ಯಗಳೂ ಇರಲಿಲ್ಲ. ಹಾಗಾಗಿ ಅದೊಂದು ಅಭ್ಯಾಸವೇ ತಪ್ಪಿಹೋಗಿತ್ತು. ಈಗ ಸರಿಸುಮಾರು ೧೭ ವರುಷಗಳ ನಂತರ ನನ್ನವರು ಹೋಗು ಎಂದಾಗ ದೊಡ್ಡದಾಗಿ ನಕ್ಕು ಬಿಟ್ಟಿದ್ದೆ. ಕಾರಣ ಮದುವೆಯನಂತರವೂ ನಮಗೆ ಫಿಲ್ಮ್‌ಗೆ ಹೋಗ ಬೇಕೆಂದೇ ಅನಿಸಿರಲಿಲ್ಲ. ಇಲ್ಲಿ Inox, PVRಗಳು ಎಲ್ಲೆಂದರಲ್ಲಿ ಇದ್ದರೂ ಕೂಡ ಹೋಗಿರಲಿಲ್ಲ. ಕಾರಣ ಒಂದೇ...ಸುಲಭದಲ್ಲಿ ಸಿ.ಡಿ.ಗಳಲ್ಲೋ, ಅಂತರ್ಜಾಲದಲ್ಲೋ ಸಿಗುತ್ತಿರುವ ಫಿಲ್ಮ್‌ಗಳನ್ನು ಆರಾಮವಾಗಿ ಬೇಕಾದಾಗ, ಬೇಕಾದ ರೀತಿಯಲ್ಲಿ ವಿಶ್ರಮಿಸುತ್ತಾ ನೋಡಬಹುದು. ಆದರೆ ಅವತಾರ್ ಮಾತ್ರ ೩-ಡಿ ಆಗಿದ್ದರಿಂದ ಟಾಕೀಸ್‌ಗೇ ಹೋಗಿ ನೋಡಬೇಕು. ಅದಕ್ಕಾಗಿ ನನ್ನವರು ಬಹು ಒತ್ತಾಯಿಸುತ್ತಿದ್ದರು. ಆದರೆ ನಾನೇ ಒಪ್ಪಿರಲಿಲ್ಲ. ಎರಡೂವರೆ ವರ್ಷದ ಪುಟ್ಟಿಯನ್ನೊಬ್ಬಳನ್ನೇ ಬಿಟ್ಟು ೩ ತಾಸು ಹೋಗುವುದಕ್ಕೆ ಯಾಕೋ ಮನಸೊಪ್ಪುತ್ತಿರಲಿಲ್ಲ. ಆದರೂ ಎಲ್ಲೋ ಒಂದು ಕಡೆ ಬಹು ಚರ್ಚಿತ "ಅವತಾರ"ವನ್ನು ನೋಡಬೇಕೆಂಬ ಹಂಬಲ ಬೇರೆ. ಅಂತೂ ಕೊನೆಗೆ ನಾಲ್ಕುಕಣ್ಗಳಲ್ಲೂ ನೋಡಲು ನಿರ್ಧರಿಸಿಯೇಬಿಟ್ಟೆ. ಹಾಗೆನ್ನುವುದಕ್ಕಿಂತಲೂ ನನ್ನವರು ಒತ್ತಡ ಹೇರಿ ಒಪ್ಪಿಸಿದರು ಎಂದರೆ ತಪ್ಪಾಗದು. "ಅಜ್ಜಿಮುದ್ಕಿ ತನ್ನ ಕೋಳಿಯಿಂದಲೇ ಬೆಳಗಾಗ್ತು ಹೇಳಿ ತಿಳ್ಕಂಡ ಹಾಗೆ ಅಂದ್ಕಳಡ. ನಾ ನೋಡ್ಕತ್ತಿ ಅದ್ನ. ನೀ ಏನೂ ಯೋಚ್ನೆ ಮಾಡಡ. ಅದ್ಕೆ ಉಣ್ಸಿ, ಆಡಿಸ್ತಾ ಇರ್ತಿ. ನಿನ್ನ ಬಿಟ್ಟಿಕ್ಕಿ ಬಂದ್ರಾತೋ ಇಲ್ಯೋ.. ಸುಮ್ನೇ ಹೋಗು.." ಎಂದು ಆಶ್ವಾಸನೆ ಕೊಟ್ಟಾಗ ಒಪ್ಪಲೇ ಬೇಕಾಗಿತ್ತು.

ಹೋಗುವಾಗಲೂ ಅಷ್ಟೇ. ಯಾರನ್ನು ಜೊತೆಗೆ ಕರೆದೊಯ್ಯಲಿ ಎಂಬ ಯೋಚನೆ! ಇವರಂತೂ ಸಾಥ್ ಕೊಡುವ ಹಾಗಿರಲಿಲ್ಲ. ಅದಿತಿಯನ್ನು ನೋಡಿಕೊಳ್ಳಲು ಇರಲೇ ಬೇಕಿತ್ತು. ಒಬ್ಬಳೇ ನೋಡಲು...ಅದೂ ಇಷ್ಟೊಂದು ವರುಷಗಳ ನಂತರ ಇಷ್ಟವಾಗಲಿಲ್ಲ. ಹೀಗಿರುವಾಗ ಕಾರಣಾಂತರಗಳಿಂದ ಅಮ್ಮ ಊರಿನಿಂದ ಬಂದಳು. ಸರಿ ಮತ್ತೂ ನಿಶ್ಚಿಂತೆಯಾಯಿತು. ಮೊದಲು ಅಮ್ಮ, ನಾನು ಹಾಗೂ ನನ್ನ ಕಿರಿಯ ತಂಗಿ ಹೋಗುವುದೆಂದು ಮಾತಾಗಿ ಮೂರು ಟಿಕೆಟ್ ಬುಕ್ ಮಾಡಿಯಾಯಿತು. ಆದರೆ ಹಿಂದಿನ ದಿನ ಅಮ್ಮ "ಈ ವಯಸ್ಸಲ್ಲಿ ಆ ಕಪ್ಪು ಕನ್ನಡ್ಕ ಹಾಕ್ಕಂಡು ನಾ ತಲೆ ನೋವು ತರ್ಸ್ಕತ್ನಿಲ್ಲೆ. ಅದೂ ಅಲ್ದೇ ನಂಗೆ ಕತ್ಲಲ್ಲಿ ನಿದ್ದೆ ಬಂದೋಗ್ತು. ದುಡ್ಡು ದಂಡ. ಅದ್ರ ಬದ್ಲು ನೀನು ರಾಮು(ನನ್ನವರು), ತಂಗಿ ಹೋಗಿ.... ಅದಿತಿ ನನ್ನ ಹತ್ರ ಆರಮಾಗಿ ಇರ್ತು" ಅಂದು ಬಿಟ್ಲು. ಆದರೆ ನನ್ನವರಿಗೆ ಅದಿತಿಯ ಚಿಂತೆ. ಅದೂ ಮೊದಲ ಬಾರಿ ಅಷ್ಟೊತ್ತು ಅಪ್ಪ, ಅಮ್ಮ ಇಬ್ಬರನ್ನೂ ಬಿಟ್ಟು ಇರಲಾರಳೇನೋ ಎಂಬ ಮಮಕಾರದಿಂದ ನಾವಿಬ್ಬರೂ ಒಪ್ಪಲಿಲ್ಲ. ಅಂತೂ ಇಂತೂ ಯೋಚಿಸಿ ನನ್ನ ಇನ್ನೊಂದು ತಂಗಿಯನ್ನು ಬರಲೊಪ್ಪಿಸಿದೆ. ಅವಳಿಗೋ ಒಂದೂವರೆ ವರುಷದ ಮಗ. ಮತ್ತೂ ಕಷ್ಟವೇ. ಆದರೂ ಆಕೆ, ಅವಳ ಪತಿ ಹಾಗೂ ನನ್ನಮ್ಮನ ಭರವಸೆಯ ಮೇಲೆ ಬರಲೊಪ್ಪಿದಳು. ಸರಿ ಮೂವರೂ ಸಹೋದರಿಯರು ಅವತಾರಕ್ಕಾಗಿ ತಯಾರಾದೆವು. ನನ್ನೊಳಗೇನೋ ತಳಮಳ. ಅಷ್ಟೊಂದು ವರುಷಗಳ ನಂತರ ಹೊರಗೆ ಚಲನಚಿತ್ರವೊಂದನ್ನು ನೋಡುವ ಕಾತರ ಒಂದೆಡೆಯಾದರೆ, ೩-ಡಿ ಪಿಕ್ಚರ್ ಎಂಬ ವಿಶೇಷಭಾವ ಇನ್ನೊಂದೆಡೆ. ಅದಿತಿ ಎಲ್ಲಿ ಅತ್ತೂ ಕೂಗಿ ಕೊನೆಯ ಗಳಿಗೆಯಲ್ಲಿ ರಂಪಾಟ ಮಾಡುವಳೋ ಎಂಬ ಚಿಂತೆಯೂ ಒಳಗೊಳಗೇ.

ಅಂತೂ ಇಂತೂ ಆ ದಿನ ಬಂದೇ ಬಿಟ್ಟಿತು. ತಿಲಕ ನಗರದಲ್ಲಿರುವ Inoxಗೆ ನಾನು ನನ್ನವರು, ಅಮ್ಮ, ತಂಗಿಯಂದಿರು, ತಂಗಿಯ ಗಂಡ, ಇಬ್ಬರು ಪುಟಾಣಿಗಳೊಡನೆ ಧಾಳಿ ಇಟ್ಟೆವು. ಮೊದಲೇ ಬುಕ್ ಮಾಡಿಟ್ಟಿದ್ದ ಟಿಕೆಟ್ ಪಡೆದ ನನ್ನವರು ನನ್ನನ್ನು ಕೂರಿಸಿ ಬರಲು ಒಳ ಕರೆದೊಯ್ದರು. ಮುಂದಿನ ಸಾಲಿನ ಸೀಟಿನವರೆಗೂ ಆರಮವಾಗಿ ಹೋದೆವು. ಆದರೆ ನಮ್ಮ ಟಿಕೆಟ್ ದುರದೃಷ್ಟವಶಾತ್ ಮೇಲಿನ ಸಾಲಿನಲ್ಲಾಗಿತ್ತು. ನನ್ನವರ ಗಮನಕ್ಕೆ ಅದು ಬರದೇ ಅವಾಂತರ ಆಗಿಹೋಗಿತ್ತು. ವ್ಹೀಲ್‌ಚೇರ್ ಅಷ್ಟು ಎತ್ತರಕ್ಕೆ ಸರಾಗವಾಗಿ ಹೋಗದು. ನಾಜೂಕಿನ ಮೆಟ್ಟಿಲುಗಳು ಬೇರೆ ಎಲ್ಲಿ ಹಾಳಾಗುವವೋ ಎಂಬ ಆತಂಕ ಅಲ್ಲಿಯ ಸಿಬ್ಬಂದಿಗಳಿಗೆ. ಹಾಗಾಗಿ ಕೆಳಗಿನ ಸಾಲಿನಲ್ಲೇ ನನಗೂ ನನ್ನ ಮೊದಲನೆಯ ತಂಗಿಗೂ ಸೀಟ್ ಕೊಟ್ಟು, ನಮ್ಮ ಸೀಟ್ ಅನ್ನು ಬೇರೆಯವರಿಗೆ ಕೊಟ್ಟರು. ಕೊನೆಯ ತಂಗಿ ನಮ್ಮಿಂದ ಬೇರೆಯಾಗಿ ಮೇಲೆ ಕುಳಿತುಕೊಳ್ಳುವಂತಾಯಿತು. ಎಲ್ಲಾ ಸರಿಯಾಗಿರುವುದನ್ನು ಖಚಿತಪಡಿಸಿಕೊಂಡ ನನ್ನವರು ಅಮ್ಮ, ಮಕ್ಕಳು ಹಾಗೂ ತಂಗಿಯ ಪತಿಯೊಡನೆ ಮನೆಗೆ ತೆರಳಿದರು.
ಸರಿ ಇನ್ನೇನು ಕತ್ತಲಾವರಿಸಿ, ಬೆಳಕು ಪರದಿಯ ಮೇಲೆ ಬಿದ್ದಿದ್ದೇ ತಡ ಎಲ್ಲಿ ಪಿಕ್ಚರ್ ಶುರುವಾಯಿತೋ ಎಂದು ಗಡಿಬಿಡಿ ಮಾಡಿಕೊಂಡು ಕನ್ನಡಕ ಏರಿಸಿಯೇ ಬಿಟ್ಟೆ. ಆದರೆ ಅಲ್ಲಿ ಕಂಡಿದ್ದು ಒಂದಿಷ್ಟು ಜಾಹೀರಾತುಗಳು. ತಂಗಿ ತಂದ ಪೊಪ್‌ಕಾರ್ನ್ ರುಚಿ ನಾಲಗೆಯನ್ನು ಹತ್ತುತ್ತಿರುವಾಗಲೇ "ಅವತಾರ" ಪ್ರಾರಂಭವಾಯಿತು. ಮೊದಲ ಹತ್ತು ನಿಮಿಷ ೩-ಡಿ ಕನ್ನಡಕವನ್ನು ನಮ್ಮ ದೃಷ್ಟಿಗೆ ಹೊಂದಿಸಿಕೊಳ್ಳಲೇ ಬೇಕಾಯಿತು. ತಲೆನೋವಾದಂತೆ, ಹೊಟ್ಟೆ ತೊಳೆಸಿದಂತಹ ಅನುಭವದಿಂದ ಸ್ವಲ್ಪ ಹೊತ್ತು ಕಿರಿಕಿರಿಯಾಯಿತು. ಅಷ್ಟರೊಳಗೆ ನಮಗೆ ಫೋನ್ ಮಾಡಿದ ಅಮ್ಮ ನಮ್ಮಿಬ್ಬರ ಮಕ್ಕಳೂ ಆರಮವಾಗಿ ಇದ್ದಾರೆಂದೂ, ಆಡುತ್ತಿದ್ದಾರೆಂದೂ, ಯಾವುದೇ ವಿಷಯಕ್ಕೂ ಚಿಂತಿಸಿದೇ ಪಿಕ್ಚರ್‌ನ ಆನಂದಿಸಬೇಕೆಂದೂ ಹೇಳಲು ನಾವು ನಿಶ್ಚಿಂತರಾದೆವು. ಕ್ರಮೇಣ ನಾನು ಎಲ್ಲವನ್ನೂ ಮರೆತು "ಪಂಡೋರಾದಲ್ಲೇ" ವಿಹರಿಸ ತೊಡಗಿದೆ.

ಅದೊಂದು ಮಾಯಾನಗರಿಯೇ ಸರಿ. ಎತ್ತನೋಡಿದರತ್ತ ನೀಲ ವರ್ಣ. ಚಿತ್ರವಿಚಿತ್ರ ಪ್ರಾಣಿಗಳು, ಪಕ್ಷಿಗಳು, ಅಲ್ಲಿಯ ನಾ-ವಿ ಜನಾಂಗದವರ ವಿಚಿತ್ರ ವರ್ತನೆಗಳು, ಸಂಪ್ರದಾಯಗಳು, ತೇಲುವ ಪರ್ವತಗಳಿಂದ ಧುಮುಕುವ ಜಲಪಾತಗಳು, ಬೃಹತ್ ಮರಗಳು, ಬಿಳಲುಗಳು, ಅತಿ ಸುಂದರ ಮನಮೋಹಕ ಹೂವುಗಳು, ಎಲ್ಲವೂ ನನ್ನ ಮನಸೂರೆಗೊಂಡವು. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಇಷ್ಟವಾಗಿದ್ದು ಅಲ್ಲಿಯ ಜೀವಿಗಳ ನೀಲವರ್ಣ. ಅದು ನನ್ನಚ್ಚುಮೆಚ್ಚಿನ ಬಣ್ಣವೂ ಹೌದು. ಫೆಂಗ್‌ಶುಯಿ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ನೀಲ ಬಣ್ಣ ನಮ್ಮ ಮನಸಿನೊಳಗಿನ ನೋವನ್ನು ಶಮನಗೊಳಿಸಿ, ನೆಮ್ಮದಿಯ ಭಾವವನ್ನು ಕೊಡುತ್ತದೆಯಂತೆ. ಅಲ್ಲದೇ ನೀಲವರ್ಣ ವಿಶ್ವಾಸದ, ಶಾಂತಿಯ, ವಿಶ್ರಾಂತಿಯ ಪ್ರತೀಕ. ಇದು ನಮ್ಮ ಮನಸ್ಸನ್ನು ನಿರಾಳಗೊಳಿಸುವಂತಹದು, ಮನೋವಿಕಾಸಕ್ಕೆ ನೀಲವರ್ಣದ ಕೊಡುಗೆ ಅಪಾರ. ಹಾಗಾಗಿಯೇ ಬಹುಶಃ "ನಾ-ವಿ" ಜನಾಂಗದವರನ್ನು ನಿರ್ದೇಶಕ "ಜೇಮ್ಸ್ ಕೆಮರೂನ್" ಹೊಳೆವ ನೀಲಿ ಬಣ್ಣದಲ್ಲೇ ಮುಳುಗೇಳಿಸಿದ್ದು. ಅದು ಅವರ ಮನಸಿನೊಳಗಿನ ಶುದ್ಧತೆಗೆ, ಮುಗ್ಧತೆಗೆ, ಶಕ್ತಿಗೆ ಹಿಡಿದ ಕನ್ನಡಿಯಂತಿದೆ. ನೀಲ ನದಿ, ಝರಿ, ಬೆಟ್ಟ, ಹೂವು ಎಲ್ಲವೂ ೩-ಡಿಯೊಳಗೆ ನನ್ನ ಮೈ, ಕೈಗಳನ್ನು ಸವರಿ ಹೋದಾಗ ತುಂಬಾ ಪುಳಕಿತಳಾಗಿದ್ದೆ. ಒತ್ತಾಯಿಸಿ ಕಳುಹಿಸಿದ ನನ್ನವರನ್ನು ಮನದಲ್ಲೇ ಅಭಿನಂದಿಸಿದೆ.

"ಅವತಾರದ" ಜೀವಾಳ - ಅವತಾರ ಗೆದ್ದಿದ್ದು ಪ್ರಕೃತಿಯ ಮುಂದೆ ಮಾನವನನ್ನು ಸೋಲಿಸಿದ್ದರಿಂದ. ಎಲ್ಲೋ ನಮ್ಮೊಳಗೆ ಅವಿತಿರುವ ನಮ್ಮ ಪೈಶಾಚಿಕತೆಯ ಅರಿವಿದೆ ನಮಗೆ. ಹಾಗಾಗಿಯೇ ಮನುಷ್ಯನ ಸೋಲನ್ನು ಕಣ್ಮುಂದೆ ಕಂಡಾಗ ಸಮಾಧಾನಗೊಳ್ಳುತ್ತದೆ ಮನಸ್ಸು. ಪಂಡೋರದಲ್ಲಿ ನಾ-ವಿಗಳು, ಪ್ರಾಣಿಗಳು, ಡ್ರಾಗನ್‌ಗಳು ಮನುಷ್ಯರನ್ನು ಕಿತ್ತು ಬಿಸುಟಾಗ ನಮಗೂ ಹಾಯೆನಿಸುತ್ತದೆ. ಅದಕ್ಕೆ ಕಾರಣ ನಮ್ಮೊಳಗಿನ ಮನುಷ್ಯತ್ವ ಇನ್ನೂ ಜೀವಂತವಾಗಿರುವುದು. ಸುಂದರ ನೀಲನಗರಿ, ನೀಲಿ ಜನರು ವಿನಾಕಾರಣ ಮನುಜರ ದುರಾಸೆಗೆ ಭಸ್ಮವಾಗುವುದನ್ನು ಕಂಡಾಗ ಅದು ತೆರೆಯ ಮೇಲೆ ಎಂದು ಅರಿತಿದ್ದರೂ, ಅರಿಯದ ರೋಷ ಮಾನದೊಳಗೆ ಮನೆಮಾಡುತ್ತದೆ. ಅಂತಿಮದಲ್ಲಿ ಗೆಲ್ಲುವ ನಾ-ವಿಗಳ ಜೊತೆ ನಾವೂ ಮನಃಪೂರ್ತಿ ಪಾಲ್ಗೊಳ್ಳುವಾಗ ಎನೋ ಧನ್ಯತಾ ಭಾವ. ಒಂದು ಹಂತದಲ್ಲಿ ಅವರ ಪ್ರಕೃತಿ ದೇವತೆಯಾದ "ಏವಾ" ಪ್ರತಿಯೊಂದು ಪ್ರಾಣಿ, ಪಕ್ಷಿ, ಜೀವ ಸಂಕುಲಕ್ಕೂ ನಿರ್ದೇಶನ ಕೊಟ್ಟು ನಾ-ವಿಗಳ ಸಹಾಕ್ಕೆ ಕಳುಹಿಸುತ್ತಾಳೆ. ಹಾಗಾಗಿಯೇ ಸಬಲ ಮನುಷ್ಯನೂ ದುರ್ಬಲನಾಗಿ ಭೂಮಿಗೆ ಹಿಂತಿರುಗುತ್ತಾನೆ. (ಆದರೆ ಭೂಮಿಯ ಮೇಲೆ ನಡೆಯುವ ಅತ್ಯಾಚಾರ ಮಾತ್ರ ಎಗ್ಗಿಲ್ಲದಂತೇ ಸಾಗಿದೆ. ಪ್ರಕೃತಿಯನ್ನು ಶೋಷಿಸುತ್ತಿರುವ ನಮಗೆ ಮುಂದೊಂದು ದಿನ "ಏವಾ" ಕೊಟ್ಟ ಶಿಕ್ಷೆಯೇ ಕಾದಿರುವುದರಲ್ಲಿ ಏನೂ ಸಂಶಯವಿಲ್ಲ.) ನಾಯಕ "ಜೇಕ್" ಕೂಡ ಓರ್ವ ಮನುಷ್ಯನಾಗಿದ್ದರೂ ನಾ-ವಿಗಳ ಅಮಾಯಕತೆಗೆ ವಿಶ್ವಾಸಕ್ಕೆ, ಸತ್ಯತೆಗೆ ಮಾರುಹೋಗಿ ಅವರಂತೇ ಆದ. ಅವರಿಗಾಗಿ ಹೋರಾಡಿ ಅವರಲ್ಲೇ ಒಂದಾಗಿ ಹೋದ. ಅವನೊಳಗಿನ ಮನುಷ್ಯತ್ವಕ್ಕೆ ನೀರೆರೆದು ಪೋಷಿಸಿದ್ದು ನಾ-ವಿಜನಾಂಗದವರ ಸಾಂಗತ್ಯ ಹಾಗೂ ರಾಜಕುಮಾರು "ನೆಯ್ತಿರಿ"ಯ ನಿರ್ಮಲ ಪ್ರೀತಿ. ಅದಕ್ಕೇ ಬಹುಶಃ ಹೇಳಿದ್ದು ಹಿರಿಯರು "ಸಜ್ಜನರ ಸಂಗ ಹೆಜ್ಜೇನು ಸವಿದಂತೆ" ಎಂದು. ೩-ಡಿ ಕನ್ನಡಕ ನಾ-ವಿಗಳನ್ನು ಅವರ ಸುಂದರ ಅದ್ಭುತ ಲೋಕವನ್ನು ನಮಗೆ ಮತ್ತಷ್ಟು ಹತ್ತಿರ ತಂದು, ಮನುಷ್ಯನ ದುಷ್ಟ ಹಾಗೂ ಸುಂದರ ಎರಡೂ ಅವತಾರಗಳನ್ನು ತೋರಿಸುತ್ತದೆ. ಅತ್ಯದ್ಭುತ ತಂತ್ರಜ್ಞಾನ, ಸುಂದರ ನಿರ್ದೇಶನವನ್ನು ನೋಡುವುದಕ್ಕಾಗಿ ಒಮ್ಮೆಯಾದರೂ "ಅವತಾರ"ದೊಳಗೆ ಪ್ರವೇಶಿಸಬೇಕು. ಹೊರಬಂದ ಮೇಲೂ ಬಹುಕಾಲ ನೆನಪುಳಿಯುವುದು ಚಿತ್ರದ ಸುಂದರ ಸಂದೇಶದ "I See You". ಈ ಒಂದು ಸಾಲನ್ನು ಹೇಗೆ ಬೇಕಿದ್ದರೂ ಅರ್ಥೈಸಿಕೊಳ್ಳಬಹುದು. ಅನೇಕ ಅರ್ಥಗಳನ್ನು ಹೊಂದಿರುವ ಈ ಸಾಲು ಈಗಲೂ ನನ್ನನ್ನು ಕಾಡುತ್ತಲೇ ಇದೆ.

ಶುಭಂ : ಮನೆಗೆ ಬಂದ ಮೇಲೆ ನನ್ನವರು "ನೋಡೀದ್ಯಾ.. ಅದಿತಿ ಏನೂ ಹಟ ಮಾಡಿದ್ದೇ ಇಲ್ಲೆ. ನಿನ್ನ ಸುದ್ದಿನೂ ಹೇಳಿದ್ದಿಲ್ಲೆ. ಆರಾಮಿತ್ತು ನನ್ನಹತ್ರ. ನೀ ಮಾತ್ರ ಸುಮ್ನೇ ಹೆದ್ರಿದ್ದೆ.." ಎಂದು ಛೇಡಿಸಲು, ಪಟ್ಟು ಬಿಡದ ನಾನು "ಸರಿ ಹಾಗಿದ್ರೆ.. ಚೊಲೋನೇ ಆತು.. ಮುಂದಿನ ಸಲ "My Name Is Khan" ನೋಡಲೆ ನಾನು ಹೋಗ್ಲಕ್ಕು ಹೇಳಾತು.." ಎಂದಾಗ ಮಾತ್ರ ನನ್ನವರು ಪೆಚ್ಚು!


-ತೇಜಸ್ವಿನಿ.

ಶುಕ್ರವಾರ, ಫೆಬ್ರವರಿ 5, 2010

ಧಿಕ್ಕಾರ!!!!!

ಧಿಕ್ಕಾರ!!!!!
ಇವತ್ತು ಮಧ್ಯಾಹ್ನ ನನ್ನವರಿಂದ ನನಗೊಂದು forward mail ಬಂತು. ಆಗಷ್ಟೇ ಊಟ ಮುಗಿಸಿ ಬಂದಿದ್ದ ನಾನು, ನೋಡುತ್ತಾ ಹೋದಂತೆ, ಅಕ್ಷರಶಃ ದಿಗ್ಭ್ರಾಂತಳಾದೆ. ತಿಂದ ಅನ್ನವೆಲ್ಲಾ ಒಮ್ಮೆಲೇ ಗಂಟಲಿಗೆ ಬಂದ ಅನುಭವವಾಗಿ, ತಲೆತಿರುಗಿದಂತಾಯಿತು. ನಾನ್ಯಾವತ್ತೂ ಇಷ್ಟೊಂದು ಭಾವೋದ್ರೇಕಕ್ಕೆ ಒಳಗಾದವಳಲ್ಲ. ಇಲ್ಲಿಯ ಚಿತ್ರಗಳನ್ನು, ಅದರ ಕೆಳಗಿರುವ ವಿವರಣೆಗಳನ್ನು ನೋಡಿ ಕಣ್ಣೀರು ತುಂಬಿತು...
ಈ ಚಿತ್ರಗಳನ್ನು ನೋಡಿದಾಗ ಅನಿಸಿದ್ದು ಒಂದೇ..... ಮಾನವನಿಗಿಂತ ಕ್ರೂರ ಪ್ರಾಣಿ ಖಂಡಿತ ಮತ್ತೊಂದಿಲ್ಲ. ಭೂತ, ಪ್ರೇತ, ಪಿಶಾಚಿಗಳೂ ಹೆದರುವುದು ಈ ಮಾನವನಿಗೇ ಎಂದು. ನರರೂಪಿ ರಾಕ್ಷಸರನ್ನು ಮತ್ತಷ್ಟು ಪೈಶಾಚಿಕರನ್ನಾಗಿಮಾಡುವುದು ಜನರ ಹೊಟ್ಟೆಬಾಕತನ ಹಾಗೂ ನಿಲ್ಲದ ಚಪಲತೆ. ದಯವಿಟ್ಟು ಇದನ್ನು ನಿಲ್ಲಿಸಲು ಯತ್ನಿಸಿ. ನಿಮ್ಮೊಳಗಿನ ಮಾನವಿಯತೆಯನ್ನು ತುಸುವಾದರೂ ಉಳಿಸಿಕೊಳ್ಳಿ.

ಬೇಡದ, ಮೂರುಕಾಸಿಗೂ ಬೆಲೆಯಿಲ್ಲದ ವಿಷಯಕ್ಕೆಲ್ಲಾ ಹೋರಾಟ ಮಾಡುವ ಸಂಘಟನೆಗಳು ಈ ಒಂದು ಅಮಾನವೀಯತೆಯನ್ನು ತಡೆಯಲು ಯಾಕೆ ಮುಂದಾಗುತ್ತಿಲ್ಲ? ಇಂತಹ ಒಂದು ಪಾಪಕೃತ್ಯವನ್ನು ಮಾಡಿಸುತ್ತಿರುವವನು, ಮಾಡುತ್ತಿರುವವ ಎಷ್ಟು ದುಷ್ಟನೋ, ಅವನಿಗಿಂತ ದುಷ್ಟ ಹಾಗೂ ಅಮಾನವೀಯ ಮನುಷ್ಯ(??) ಇದನ್ನು ಚಪ್ಪರಿಸುತ್ತಾ ತಿನ್ನುವವ!! ಇಂತಹ ಪೈಶಾಚಿಕತೆಯನ್ನು ನಡೆಸುತ್ತಿರುವ, ನಡೆಸಲು ಪರೋಕ್ಷ ಹಾಗೂ ಪ್ರತ್ಯಕ್ಷ ಸಹಕಾರವನ್ನು ನೀಡುವ ಪ್ರತಿಯೊಬ್ಬನಿಗೂ ನನ್ನ ಧಿಕ್ಕಾರ!! ನರಕವೆಂಬುದಿದೆಯೆಂದಾದರೆ, ಖಂಡಿತ ಇಂಥವರಿಗೆ ಈ ಜನುಮದಲ್ಲೇ ಅದು ಸಿಗಲೆಂದು ಪ್ರಾರ್ಥಿಸುವೆ.
ಇಂಗ್ಲೀಷಿನಲ್ಲಿದ್ದ e-mail‌ ಅನ್ನು ಇದ್ದ ಹಾಗೇ ನನ್ನ ಬ್ಲಾಗಿನಲ್ಲಿ ಕಾಣಿಸಿದ್ದೇನೆ. ಭಾಷಾಂತರಿಸಲು ನನ್ನ ಕೈಗಳೂ ಸಹಕರಿಸಲಿಲ್ಲ. ಹುಡುಕಿದರೆ ಪದಗಳೆಲ್ಲಾ ಖಾಲಿ!! :(

ಸುಂದರ, ಮುಗ್ಧ, ಅಮಾಯಕ ಬಾತುಕೋಳಿಗಳಿಗೆ ನನ್ನ ಎದೆಯಾಳದ ಶ್ರದ್ಧಾಂಜಲಿ!
:(:( :(
- ತೇಜಸ್ವಿನಿ ಹೆಗಡೆ
--------------------------------------

Foie Gras
Foie Gras Foie Gras means "Fat Liver"It's very very luxury menu that originates from France But this dish comes from FORCE FEEDING a goose to make them develope FATTY LIVER DISEASE.
Let's see the source of this wonderful dish


Let's see the source of this wonderful dish
The geese are forced to eat.. even if it does not desire to


The metal pipe pass through the throat to stomach ...even if it does not want to eat anything To make the liver bigger and fatter

Cages are very small and they force the geese to stay in one position to avoid using energy, thus converting all food into fat.



How sad their eyes show up

Their legs were bloated from long standing everyday. No need to sleep because they will be caught to eat again

Although they try to defend themselves But it is useless


How sad this life is..



They are forced to eat until they are dead or their bodies cant stand with this You see... the food is over its mouth


The left who survive have crapped to be inflamed asses...blood easily come up with the shit Not only mouth hurt, throat hurt , all time stomach ache from the food , Fat to bloated legs , no sleep , no excercise But also no free movement for life to see the sky or river


This your Healthy Liver like those Chicken (!!!!??)

To get the beautiful and white liver that becomes unusually big like this As Liver-canned from aboard




STOP THE DAILY TORTURE AND CRUELTY TO THE POOR ANIMAL. STOP TAKING THIS DISH OR PRODUCT NOW.


STOP THE DEMAND AND
THE SUPPLY WILL END.



PLEASE....

(Tejaswini.)

ಸೋಮವಾರ, ಫೆಬ್ರವರಿ 1, 2010

ಕನ್ನಡಿಯೊಳಗಿನ ಕನಸಿದು...

ಒಂದು ಮುಂಜಾವಿನಲಿ
ತಂಗಾಳಿಯ ಬೆನ್ನೇರಿ,
ಹೊರಟಿದ್ದೆ ನಾ,
ನನ್ನಕನಸಿನೂರ ಕಡೆಗೆ,
ಮನ ಬಯಸಿದೆಡೆಗೆ....

ತಲುಪಿದೆ ಶರವೇಗದಲ್ಲಿ
ಸುಂದರ ನಗರಿಯೊಂದ,
ಹೆಬ್ಬಾಗಿಲ ಬಡಿಯಲೊಮ್ಮೆ,
ಮೆಲ್ಲನದು ತೆರೆದುಕೊಳಲು,
ನಾನಿದ್ದಲ್ಲೇ ಶಿಲೆಯಾದೆ....

ಪಟ್ಟಿಗಳಿಲ್ಲ, ಮೆಟ್ಟಿಲುಗಳಿಲ್ಲ,
ಮಹಡಿಗಳಿಲ್ಲ, ಏರುಗಳಿಲ್ಲ!!
ಗುಡ್ಡಗಾಡು, ಬೆಟ್ಟ, ನದಿ,
ಎತ್ತ ಹೋದರತ್ತ ನೋಡು,
ಏರಿಳಿತಗಳಿರದ ದಾರಿ!!

ಇಲ್ಲಿ ಯಾರ ಹಂಗಿಲ್ಲ,
ನೆರವಿನ ಯಾಚನೆಯಿಲ್ಲ,
ಇತರರ ನಿರೀಕ್ಷೆಯಿಲ್ಲ,
ಇಲ್ಲದುದರ ದುಃಖವಿಲ್ಲ,
ಹತ್ತು, ಇಳಿ ಪರದಾಟವಿಲ್ಲ,
ಮರುಕ ಪಡುವ ಜೀವಿಯಿಲ್ಲ.

ಅವರೂ ಇಲ್ಲಿ ಎಲ್ಲರಂತೆ
ಅವರಿಗಿಲ್ಲ ಯಾವ ಚಿಂತೆ
ಹೋದಲ್ಲಿ, ಬಂದಲ್ಲಿ....
ಬೇಕಿಲ್ಲ ಯಾರ ಜೊತೆ,
ಬದುಕಿಲ್ಲಿ ನವಿರಾಗಿದೆ.

ಹಾಯಾಗಿ ನಗುವಾಗಲೇ,
ಮುಸ್ಸಂಜೆಯು ಕವಿಯಿತು.
ತಂಗಾಳಿಯು ಬಿರುಸಾಗಲು,,
ಕನಸಿನೂರು ಕರಗಿಹೋಗಿ,
ಮನ ವಾಸ್ತವಕೆ ಮರಳಿತು.

ಮತ್ತದೇ ಏರು, ತಗ್ಗು,
ಅಡ್ಡ ತಿಡ್ಡಿ ಮೆಟ್ಟಿಲ್ಹತ್ತು...
ಯಾಚನೆಯ ಕಣ್ಣೋಟ,
ಅಸಹನೆಯ ಪರೆದಾಟ....
ನಮಗಿಲ್ಲಿ ಬದುಕೇ ವಿಕಲ!



[ಕಟ್ಟೋಣವೇ ಇಂತಹ ಕನಸಿನೂರೊಂದ? ಕಟ್ಟಬೇಕಿದೆ ನಾವೆಲ್ಲ ಸೇರಿ ಇಂತಹ ಸುಂದರ ಸಮಾಜವೊಂದ, ನಗರವೊಂದ. ಮನಸ್ಸನ್ನು ವಿಕಲಗೊಳಿಸದೇ, ಅಂತಹವರ ಬದುಕನ್ನೂ ಸಹನೀಯಗೊಳಿಸಿದರೆ ಸಾಕು, ಅವರ ಚೇತನ ರಹಿತ ಅಂಗವೂ ಚೈತನ್ಯದ ಚಿಲುಮೆಯಾಗುವುದು. ನಿಮ್ಮಂತೆ, ಅವರಿಗೂ ಬದುಕಲು ಭವಿಷ್ಯವ ಕಟ್ಟಬೇಕಿದೆ. ಮಾಸಿದ ಕಟ್ಟಡಗಳಿಗೆ ಯಾವುದೇ ಅಡೆತಡೆಗಳಿಲ್ಲದ ಹೊಸ ರಂಗನ್ನು ತುಂಬಬೇಕಾಗಿದೆ. ಎಲ್ಲರ ಮನಸೂ ಇದನ್ನು ಸಾಕಾರಗೊಳಿಸುವ ಸಂಕಲ್ಪವನ್ನು ಮಾಡಬೇಕಿದೆ. ಒಂದು ಕ್ಷಣ ನಿರ್ಧರಿಸುವ ಮನಸು, ಮರುಕ್ಷಣ ಮರುಕದಲ್ಲಿ ಅಂತ್ಯಗೊಂಡರೆ, ಸಮಾನತೆಯ ಬದುಕಿನ ಕನಸು ಕನ್ನಡಿಯೊಳಗಿನ ಗಂಟೇ ಸರಿ! ಆಗ ಭವಿಷ್ಯದಲ್ಲೂ ನಮ್ಮ ಬದುಕು ವಿಕಲವಾಗಿರುತ್ತದೆ...ನಾವು ಎಷ್ಟೇ ಸಚೇತನರಾಗಿದ್ದರೂ!!]


-ತೇಜಸ್ವಿನಿ