ಬುಧವಾರ, ಆಗಸ್ಟ್ 14, 2013

ಹೀಗೊಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯಯೋಧನ ಕಥೆ...

ನನ್ನಜ್ಜನ ಹೆಸರು ಶ್ರೀಯುತ ನಾರಾಯಣ ಭಟ್. ಮೂಲ ಹೋಬಳಿ ಗ್ರಾಮದ, ನೆಲಮಾವು ಎಂಬ ಊರು. ಹುಟ್ಟಿದ್ದು ೧೪-೦೩-೧೯೦೧ರಂದು. ಶತಾಯುಷಿಯಾಗಿದ್ದ ಇವರು ಗತಿಸಿದ್ದು ೨೮-೦೪-೨೦೦೩ರಂದು. ಬಾಲ್ಯದಿಂದಲೂ ನಾನು ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಕಥೆಗಳನ್ನು ಅಜ್ಜನಿಂದ ಕೇಳುತ್ತಾ ಬೆಳೆದವಳು. ನನ್ನಜ್ಜ ಉಗ್ರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಕ್ರಾಂತಿಕರಿ ಯೋಧರಾಗಿದ್ದ ಅವರು, ಸೌಮ್ಯ ಕಾಂಗ್ರೆಸ್ಸ್ ಅನ್ನು ಅಷ್ಟು ಮೆಚ್ಚುತ್ತಿರಲಿಲ್ಲ. ಗಾಂಧೀಜಿಯವರ ಕರೆಗೆ ಸ್ಪಂದಿಸಿ ಸಮರಕ್ಕೆ ಧುಮುಕಿದ್ದರೂ, ಅವರ ಆದರ್ಶ ಭಗತ್ ಸಿಂಗ್ ಆಗಿದ್ದ. ೧೯೩೦-೪೦ರ ಆಸುಪಾಸಿರಬೇಕು.... ಅಜ್ಜನ ಮೇಲೆ ಕಣ್ಣಿಟ್ಟಿದ್ದ ಬ್ರಿಟೀಷರು, ಅರೆಸ್ಟ್ ಮಾಡಿ ಮಹಾರಾಷ್ಟ್ರದ ಬಿಸಾಪುರ ಜೈಲಿನಲ್ಲಿ ೧ ವರುಷದವರೆಗೆ ಕಠಿಣ ಶಿಕ್ಷೆಯಲ್ಲಿಟ್ಟಿದ್ದರು. ಆ ಸಮಯದಲ್ಲಿ ಅವರು ತಿಂದ ಪೆಟ್ಟು, ನೋವು, ಯಾತನೆಯನ್ನು ಕೇಳುವಾಗ, ನನಗೇ ಅಪಾರ ನೋವು, ಆಕ್ರೋಶವುಂಟಾಗುತ್ತಿತ್ತು. ಆದರೆ ಅವರ ಮುಖದಲ್ಲೋ ಅಪೂರ್ವ ಕಳೆ, ಹುಮ್ಮಸ್ಸು. 

ಹೊರ ಬಂದ ಮೇಲೂ ಸುಮ್ಮನಿರದ ಅಜ್ಜ, ಹೋರಾಟವನ್ನು ಮುಂದುವರಿಸಿದ್ದರಂತೆ. ಬ್ರಿಟೀಷರ, ಅವರ ಅನುಯಾಯಿಗಳ ಕಣ್ತಪ್ಪಿಸಿ, ಆದಷ್ಟು ತಲೆಮರೆಸಿಕೊಂಡೇ ಮತ್ತೊಂದು ವರುಷ ಕಳೆದಿದ್ದರಂತೆ. ಮನೆಯ ಹಂಚು ತೆಗೆದು, ಒಳಬರುವುದು, ಅಂತೆಯೇ ಹೊರ ಹೋಗುವುದು ಅವರ ಪರಿಪಾಠವಾಗಿ ಹೋಗಿತ್ತು.. ಕಾರಣ, ಬ್ರಿಟೀಷರ ಅನುಯಾಯಿಗಳು ಮನೆಯ ಆಸು ಪಾಸಿನಲ್ಲೇ ಗಸ್ತು ತಿರುಗುತ್ತಿದ್ದರಂತೆ. ಆದರೂ, ಅವರ ಮೇಲಿನ ವೈಷಮ್ಯದಿಂದಲೋ, ಇಲ್ಲಾ ಬ್ರಿಟೀಷರ ಆದೇಶದಿಂದಲೋ, ಅವರ ಮನೆ, ಆಸ್ತಿ, ಗದ್ದೆ, ತೋಟ ಎಲ್ಲವನ್ನೂ ಸುಟ್ಟು ಹಾಕಿದ್ದರಂತೆ. ಕುಗ್ಗದೇ, ಸೋಲದೇ, ಹಠದಿಂದ ಹೊಸತಾಗಿ ಜೀವನ ಆರಂಭಿಸಿ, ಕಲ್ಲೇ ತುಂಬಿದ್ದ ನೆಲವನ್ನು ಕೊಂಡು, ಗುಡ್ಡ ಕಡಿದು, ಕೃಷಿ ಮಾಡಿ ಮೇಲೆ ಬಂದವರು. ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಬೇಕೆಂದು ಹೇಳುತ್ತಿದ್ದರು. ಅಂತೆಯೇ ಅವರು ನಡೆದುಕೊಂಡಿದ್ದರು ಕೂಡ. ಅವರ ಪತ್ನಿ, ನನ್ನಜ್ಜಿ ಶ್ರೀಮತಿ ಸುಬ್ಬಲಕ್ಷ್ಮೀ ಅವರೂ ನನ್ನಜ್ಜನ ಪಥವನ್ನೇ ಹಿಂಬಾಲಿಸಿದವರು.... ಮಹಿಳೆಯರ ಜೊತೆ ಸೇರಿ ಹೋರಾಟ ಮಾಡಿ ಜೈಲುವಾಸ ಅನುಭವಿಸಿದ್ದರು.

ಭಗತ್ ಸಿಂಗ್, ಸುಖದೇವ, ರಾಜಗುರು - ಈ ಮೂವರನ್ನು ಅದೆಷ್ಟು ಹಚ್ಚಿಕೊಂಡಿದ್ದರೆಂದರೆ, ಅವರನ್ನು ಅನ್ಯಾಯವಾಗಿ ಗಲ್ಲಿಗೇರಿಸಿದ ನೋವು, ಸಿಟ್ಟು ಕೊನೆಯವರೆಗೂ ಅವರ ಮಾತಲ್ಲಿ, ಮುಖದಲ್ಲಿ ಸ್ಪಷ್ಟವಾಗಿ ಕಾಣಬಹುದಿತ್ತು. ಈ ಮೂವರನ್ನು ಗಲ್ಲಿಗೇರಿಸಿದಾಗ, ಇವರ ಮೇಲೆ ಲಾವಣಿಗಳನ್ನು ಕಟ್ಟಿ ಊರಲ್ಲಿ ಹಾಡುತ್ತಿದ್ದರಂತೆ. ಊರಿಂದೂರಿಗೆ ಹಾಡುತ್ತಾ ಜನರನ್ನು ಎಬ್ಬಿಸುವ, ದೇಶಕ್ಕಾಗಿ ಹೋರಾಡುಲು ಕರೆಕೊಡುವ ಕೆಲಸವನ್ನೂ ಮಾಡುತ್ತಿದ್ದರಂತೆ. ಅಂತಹ ಒಂದು ಲಾವಣಿಯನ್ನು ಅಜ್ಜ ಆಗಾಗ ಹೇಳುತ್ತಿದ್ದರು. ಹಾಡಿಕೊಳ್ಳುತ್ತಲೇ, ನೆನಪಿನ ಲೋಕಕ್ಕೆ ತೆರಳುತ್ತಿದ್ದರು. ನಡುವೆ ಗದ್ಗದಿತರಾಗಿ ಅವರ ಕಣ್ಗಳು ಒದ್ದೆಯಾಗುತ್ತಿದ್ದವು. ಇದನ್ನೆಲ್ಲಾ ನಾನೇ ಸ್ವತಃ ನೋಡಿದ್ದೇನೆ. ಅವರು ದುಃಖಿತರಾಗಿದ್ದಾಗೆಲ್ಲಾ ಅತೀವ ನೋವು ನನಗೂ ಆಗುತ್ತಿತ್ತು. ಈಗಲೂ ಈ ಹಾಡನ್ನು ನೆನಪಿಸಿಕೊಂಡಾಗೆಲ್ಲಾ... ಹಾಡುತ್ತಾ ಮೈಮರೆತು, ಸಂಕಟಪಡುತ್ತಿದ್ದ ಅಜ್ಜನ ನೆನಪಾಗುತ್ತದೆ.. ನಗು ನಗುತ್ತಾ ಪ್ರಾಣತೆತ್ತ ಆ ಮೂವರು ಮಹಾತ್ಮರೂ ನೆನಪಾಗುತ್ತಾರೆ. ಓರ್ವ ಅಪ್ಪಟ ದೇಶಭಕ್ತ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗಳು ನಾನೆನ್ನಲು ನನಗೆ ಅಪಾರ ಹೆಮ್ಮೆಯಿದೆ. 

ಆ ಲಾವಣಿ ಹೀಗಿದೆ... (ಇನ್ನೂ ಅದೆಷ್ಟೋ ಸೊಲ್ಲುಗಳಿದ್ದವು... ನನ್ನಲ್ಲಿ ಉಳಿದುಕೊಂಡಿದ್ದು ಇವಿಷ್ಟೇ :( )

ಭಗತ್ ಸಿಂಗ, ಸುಖದೇವ,
ರಾಜಗುರು ಮೂವರ ಮರಣ
ಹೇಳಲಾರೆನು ಮಾ ರಮಣ
ಹಿಂದುಸ್ಥಾನದ ಮಾರಣ ದಿನ
ಗೋಳಾಡಿತು ಹಿಂದುಸ್ಥಾನ
ಆಳರಸರ ದಬ್ಬಾಳಿಕೆಯೊಳಗೆ
ಪ್ರಾಣಾಘಾತವೆಷ್ಟಣ್ಣ

ಎಲ್ಲಿ ನೋಡಿದಲ್ಲಿ ನಾಡನೊಳಗ 
ಚಳವಳಿ ಸಂಪ್ರದಾನ
ತಾರೀಕು ಇಪ್ಪತ್ತಮೂರಣ್ಣ
ಗಲ್ಲಾಯಿತು ಸೋಮವಾರ ದಿನ ||ಭಗತ್ ಸಿಂಗ, ಸುಖದೇವ,||


ಹೋದರು ಮೂವರು ಭಾರತ ವೀರರು
ಸ್ವತಂತ್ರದಾ ದೇವಿಯನ 
ಅಗಲಿ ದುಃಖಕ್ಕೀಡು ಮಾಡಿದರು
ಈ ನಮ್ಮ ದೇಶವನ  ||ಭಗತ್ ಸಿಂಗ, ಸುಖದೇವ,||

-----
೧೯೪೭ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಅಜ್ಜನಿಗೆ ಅದೆಷ್ಟು ಸಂತಸವಾಗಿತ್ತೋ ಅಷ್ಟೇ ಆಘಾತ ದೇಶ ಇಬ್ಭಾಗವಾದಾಗ ಉಂಟಾಗಿತ್ತಂತೆ. ಅದಕ್ಕಾಗಿ ಅವರು ಎಂದೂ ಗಾಂಧೀಜಿ, ನೆಹರೂರನ್ನು ಕ್ಷಮಿಸಲೇ ಇಲ್ಲಾ! ತದನಂತರ ಮತ್ತೊಂದು ಆಘಾತವಾಗಿದ್ದು ಎಮರ್ಜೆನ್ಸಿ ಘೋಷಣೆಯಾದಾಗ. ಯಾವ ದೇಶದ, ಜನತೆಯ, ಬಿಡುಗಡೆಗಾಗಿ ಎಲ್ಲರೂ ಹೋರಾಡಿ ಮಡಿದಿದ್ದರೋ, ಆ ದೇಶವನ್ನು, ಅಲ್ಲಿಯ ಪ್ರಜೆಗಳನ್ನು ಮತ್ತೆ ದಬ್ಬಾಳಿಕೆಗೆ ಒಳಪಡಿಸಿದ್ದು ಅಕ್ಷಮ್ಯವಾಗಿತ್ತು ಅವರಂತಹ ಹಿರಿಯರಿಗೆಲ್ಲಾ.

ಹಠ, ಛಲ, ಹೋರಾಟ, ಸ್ಥೈರ್ಯದ ಪ್ರತಿರೂಪವಾಗಿದ್ದರು ನನ್ನಜ್ಜ. ೧೦೦ ವರುಷಗಳಾಗಿದ್ದರೂ ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕೆನ್ನುವ ಹಠ. ಎಂತೆಂತಹ ಸಂಕಷ್ಟಗಳನ್ನು, ವಿರೋಧಗಳನ್ನು, ದಬ್ಬಾಳಿಕೆಗಳನ್ನು ಎದುರಿಸಿ, ಹೋರಾಡಿ, ಸಾಧಿಸಿ ತೋರಿದ ನನ್ನಜ್ಜ, ಹಾಗೂ ಅವರ ದಾರಿಯಲ್ಲೇ ನಡೆದು ಪ್ರಾಮಾಣಿಕತೆ, ಸತ್ಯ, ಸ್ಥೈರ್ಯ, ಧೈರ್ಯಕ್ಕಿರುವ ಶಕ್ತಿ ಎಂತಹುದು ಎಂದು ಮತ್ತೂ ಚೆನ್ನಾಗಿ ತೋರಿಸಿಕೊಟ್ಟ ಅವರ ಹಿರಿಯ ಮಗ ಹಾಗೂ ನನ್ನ ತಂದೆಯಾದ ಗೋಪಾಲಕೃಷ್ಣ ಭಟ್- ಇವರುಗಳು ನನ್ನಲ್ಲಿ ಪ್ರೇರಣೆ ತುಂಬಿದವರು. ನನ್ನ ಬದುಕಿನದ್ದುಕ್ಕೂ ಛಲಕ್ಕೆ, ಆದರ್ಶಕ್ಕೆ, ಸತ್ಯಕ್ಕೆ, ನ್ಯಾಯಯುತ ಹೋರಾಟಕ್ಕೆ ತಡವಾದರೂ ಗೆಲುವು ನಿಶ್ಚಿತ ಎಂದೂ ತೋರಿಸಿಕೊಟ್ಟು ಸ್ಫೂರ್ತಿ ತುಂಬಿದವರು.

ನನ್ನಜ್ಜನಂತಹ ಅದೆಷ್ಟೋ ದೇಶಪ್ರೇಮಿಗಳು, ತ್ಯಾಗಿಗಳು ಈ ದೇಶಕ್ಕಾಗಿ ಹೋರಾಡಿದ್ದಾರೆ, ವೀರ ಮರಣವನ್ನಪ್ಪಿದ್ದಾರೆ... ಅವರೆಲ್ಲರ ಹೋರಾಟದ, ತ್ಯಾಗದ ಫಲ ನಾವಿಂದು ಅನುಭವಿಸುತ್ತಿರುವೀ ಸ್ವಾತಂತ್ರ್ಯ! ಈ ದೇಶ ನಮಗೇನು ಕೊಡುತ್ತಿದೇ ಎನ್ನುವುದನ್ನು ಯೋಚಿಸಲೂ ಹೋಗ ಕೂಡದು. ಬದಲಿಗೆ ನಾವಿದಕ್ಕೆ ಏನು ಕೊಡುತ್ತಿದ್ದೇವೆ? ಎನ್ನುವುದನ್ನಷ್ಟೇ ಪ್ರಶ್ನಿಸಿಕೊಳ್ಳಬೇಕು. ಇಂದು ಅದೆಷ್ಟೋ ವೀರ ಸೈನಿಕರು ನಮ್ಮ ಸ್ವಾತಂತ್ರ್ಯದ ಉಳಿವಿಗಾಗಿ ಹೋರಾಡುತ್ತಿದ್ದಾರೆ... ವೀರಮರಣವನ್ನಪ್ಪುತ್ತಿದ್ದಾರೆ. ಅವರ ತ್ಯಾಗದ ಮುಂದೆ ಎಲ್ಲವೂ ಗೌಣ. ನಮ್ಮ ಪ್ರಾಣಕ್ಕಾಗಿ ತಮ್ಮ ಪ್ರಾಣ ಒತ್ತೆಯಿಟ್ಟಿರುವ ಎಲ್ಲಾ ವೀರಾ ಯೋಧರಿಗೂ ಶತ ಪ್ರಣಾಮ. ಇಂದು ಮತ್ತೆ ದೇಶ ಭಯೋತ್ಪಾದಕರ ಅತ್ಯಾಚಾರದಿಂದ ನಲುಗುತ್ತಿದೆ... ಇಬ್ಭಾಗವಾದ ಭಾಗವೇ ರಣಹದ್ದಾಗಿ ಇಂಚಿಂಚು ಇರಿದು ಕೊಲ್ಲ ಬರುತ್ತಿದೆ... ಇದನ್ನು ಹತ್ತಿಕ್ಕಲು ಇನ್ನೆಷ್ಟು ಬಲಿದಾನಗಳು ಆಗಬೇಕಿದೆಯೋ...??!!! ಮನಸ್ಸು ಪದೇ ಪದೇ ದಿನಕರ ದೇಸಾಯಿಯವರ ಈ ಕವಿತೆಯನ್ನೇ ನೆನಪಿಸಿಕೊಳ್ಳುತ್ತಿರುತ್ತದೆ.

"ಕರಿಯ ಕಲ್ಲುಗಳು ಕೂಡ ಕೂಡಿದವು ಗುಡಿಯ ಕಳಸಕಾಗಿ!
ನರನ ಹೃದಯಗಳು ಒಂದುಗೂಡವೇ ಮಾತೃಭೂಮಿಗಾಗಿ?"

ಜೈ ಹಿಂದ್. ಜೈ ಭಾರತ.

ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.


-ತೇಜಸ್ವಿನಿ.

ಶನಿವಾರ, ಆಗಸ್ಟ್ 3, 2013

ಶ್ರೀಯುತ ಟಿ.ಎನ್.ಎಸ್ ಅವರಲ್ಲೊಂದು ವಿನಮ್ರ ವಿನಂತಿ.

ಗೌರವಾನ್ವಿತ, ಆದರಣೀಯ ಶ್ರೀಯುತ ಟಿ.ಎನ್.ಸೀತಾರಾಮ್ ಅವರಿಗೆ,

ನನ್ನ ಹೆಸರು ತೇಜಸ್ವಿನಿ ಹೆಗಡೆ. ಮೊದಲಿನಿಂದಲೂ ನಿಮ್ಮ ಎಲ್ಲಾ ಧಾರಾವಾಹಿಗಳನ್ನೂ ತಪ್ಪದೇ ವೀಕ್ಷಿಸುತ್ತಾ ಬಂದವಳು ನಾನು. ನನ್ನ ಅಚ್ಚುಮೆಚ್ಚಿನ ಧಾರಾವಾಹಿಗಳೆಲ್ಲಾ ತಮ್ಮ ನಿರ್ದೇಶನದ್ದೇ ಎಂದರೆ ಅದರಲ್ಲೇನೂ ಉತ್ಪ್ರೇಕ್ಷೆಯಿಲ್ಲ. ನೀವು ಪಾತ್ರ ಚಿತ್ರಣವನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಡುವ ರೀತಿ.. ಅವುಗಳನ್ನು ಬೆಳೆಸುವ ರೀತಿ, ಸಂಭಾಷಣೆಗಳಲ್ಲಿನ ಚುರುಕುತನ, ನವೀನತೆ  ಅಷ್ಟೇ ಅಲ್ಲಾ ನಿಮ್ಮ ಧಾರಾವಾಹಿಗಳಲ್ಲಿ ಅಭಿನಯಿಸುವ ನಟ/ನಟಿಯರಿಂದ ನೀವು ಹೊರಹೊಮ್ಮಿಸುವ ನಟನಾಸಾಮರ್ಥ್ಯ, ಎಲ್ಲಕ್ಕಿಂತ ಮುಖ್ಯವಾಗಿ ಶೀರ್ಷಿಕೆ ಗೀತೆಗಳೊಳಗಿನ ಮಾಧುರ್ಯ, ಅರ್ಥವತ್ತಾದ ಸಾಹಿತ್ಯ... ಎಲ್ಲವೂ ನನಗೆ ಬಲು ಮೆಚ್ಚು. ಮನಃಪೂರ್ವಕವಾಗಿ ನಾನು ನಿಮ್ಮ ನಿರ್ದೇಶನದ ಧಾರಾವಾಹಿಗಳನ್ನು ಹೊಗಳಿದ್ದೇನೆ... ಮೆಚ್ಚಿದ್ದೇನೆ.
courtesy : http://www.in.com

ಆದರೆ...... ಅದ್ಯಾಕೋ ಎಂತೋ "ಮಹಾಪರ್ವ" ಧಾರಾವಾಹಿಯಲ್ಲಿನ "ಮಂದಾಕಿನಿ" ಪಾತ್ರ ಮಾತ್ರ ಯಾಕೋ ಸರಿಯಾದ ಸಂದೇಶವನ್ನು ಸಮಾಜಕ್ಕೆ, ಅಂಗವಿಕಲರಿಗೆ ನೀಡುತ್ತಿಲ್ಲ ಎನ್ನುವ ಮನದಾಳದ ಅನಿಸಿಕೆ ನನ್ನದು. ನಾನೂ ಓರ್ವ ಹುಟ್ಟಾ ಅಂಗವಿಕಲೆಯಾಗಿದ್ದು, ವ್ಹೀಲ್ ಚೇರ್ ಉಪಯೋಗಿಸುತ್ತಿರುವ.. ಅದಿಲ್ಲದೇ ಹೊರ/ಹೊಳ ಜಗತ್ತನ್ನು ಸಂಚರಿಸಲಾಗದ, ಆದರೆ ಅದೊಂದು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲೂ ಇತರ ಸಾಮಾನ್ಯರಂತೇ ಬದುಕನ್ನು  ಸಂಪೂರ್ಣವಾಗಿ ಆಸ್ವಾದಿಸುತ್ತಿರುವ ವ್ಯಕ್ತಿ. ಆರು ವರುಷದ ಮಗಳ ತಾಯಿ. ಹಾಗಾಗಿ ವ್ಹೀಲ್‌ಚೇರ್ ಬೌಂಡೆಡ್ ವ್ಯಕ್ತಿಗಳ ಸಮಸ್ಯೆ, ಅವರ ಹೋರಾಟ, ಅವರ ಸವಾಲುಗಳು ಹೇಗೆ ಚೆನ್ನಾಗಿ ಗೊತ್ತೋ ಹಾಗೇ ಅವರಿಂದ ಎಲ್ಲಾ ರೀತಿಯ ಮನೆಗೆಲಸಗಳು, ಉನ್ನತ ವಿದ್ಯಾಭ್ಯಾಸಗಳು, ಹೊರ-ಒಳ ಜಗತ್ತಿನ ಕೆಲಸಕಾರ್ಯಗಳು "ಮನಸ್ಸು ಇದ್ದರೆ.. ಸದೃಢವಾಗಿದ್ದರೆ" ಸಾಧ್ಯ ಅನ್ನೋದನ್ನು ನಂಬಿದವಳು.. ಅಂತೆಯೇ ನಡೆದವಳು.. ಇನ್ನೂ ನಡೆಯುತ್ತಿರುವವಳು. ಬಟ್ಟೆ, ಪಾತ್ರೆ, ಅಡುಗೆ, ಮನೆಯವರ ಬೇಕು ಬೇಡಗಳು, ಎಲ್ಲಾ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸಿದವಳು.. ಈಗಲೂ ನಿರ್ವಹಿಸುತ್ತಿರುವವಳು. ಇದನ್ನೆಲ್ಲಾ ನಾನು ನನ್ನ ಮೆರೆಸುಲೋಸುಗ ಖಂಡಿತ ಹೇಳುತ್ತಿಲ್ಲ. ನನಗೆ ಯಾರ ಅನುಕಂಪ ಅಥವಾ ಅತಿ ಹೊಗಳಿಕೆಯಂತೂ ಖಂಡಿತ ಬೇಕಾಗಿಲ್ಲ. 

ಮೊದಲಿನಿಂದಲೂ ನನಗೆ ಸರಿ ಕಾಣದ್ದು ಮಂದಾಕಿನ ಪಾತ್ರ ಚಿತ್ರಣ. ಓರ್ವ ಅಂಗವೈಕಲ್ಯವುಂಟಾದ ವ್ಯಕ್ತಿಯ ಚಿತ್ರಣ ನಿಮ್ಮಿಂದ ಯಾವ ರೀತಿ ಬರುವುದೆಂದು ಬಹು ಉತ್ಸುಕಳಾಗಿದ್ದೆ ಮೊದಮೊದಲು. ಆದರೆ ಕ್ರಮೇಣ ಅಸಹನೆ ತುಂಬತೊಡಗಿತು. ಮಂದಾಕಿನಿ ಸದಾ ನಿಸ್ಸಾಯಕಳಾಅಗಿ ಕೂತಿರೋದು.... "ನನ್ನಿಂದಂತೂ ಯಾವ ಕೆಲಸವೂ ಮಾಡಿಕೊಡಾಲು ಆಗುತ್ತಿಲ್ಲ...." ಅನ್ನೋ ಮಾತನ್ನೇ ಪದೇ ಪದೇ ಆಗಾಗ ಹೇಳುವುದು... ಅಲ್ಲದೇ, ಅದರಲ್ಲೂ ನಿನ್ನೆಯ ಅಂದರೆ ೦೨-೦೮-೨೦೧೩ ಶುಕ್ರವಾರದ ಕಂತಿನಲ್ಲಿ ಒಂದು ತಪ್ಪು ಸಂದೇಶವನ್ನು ಸಾರುವ ಮಾತನ್ನು ಅವಳ ಸ್ವಂತ ಮಗಳಾದ, ಅತೀವ ಸೂಕ್ಷ್ಮ ಮನಸ್ಸಿನ ಪರಿಣಿತಳ ಬಾಯಿಯಿಂದಲೇ ಹೇಳಿಸಿದ್ದು ಮಾತ್ರ ಒಪ್ಪಿಕೊಳ್ಳಲೇ ಆಗಲಿಲ್ಲ.

"ನೀನು ಯಾವಾಗಲೂ ವ್ಹೀಲ್‌ಚೇರನಲ್ಲೇ ಕೂತಿರ್ತಿಯಲ್ಲಾ.. ಅದ್ಕೇ ನಿಂಗೇ ಅಂತ ಮಾಯಾಮೃಗ ಸಿ.ಡಿ. ತಂದಿದ್ದೀನಿ.." ಅಂತ ಮಗಳು ತಾಯಲ್ಲಿ ಹೇಳಿದ್ದು ನೋಡಿ ಮೊದಲು ಸಿಟ್ಟು ಬಂದರೂ ಮರುಕ್ಷಣ ನಗುವೂ ಬಂತು. ಇಲ್ಲಿ "ನೀನು ಸದಾ ವ್ಹೀಲ್‍ಚೇರ್‌ನಲ್ಲೇ ಕೂತಿರ್ತೀಯಲ್ಲಾ ಅದ್ಕೇ ತಂದೇ" ಅನ್ನೋ ಒಂದು ಪುಟ್ಟ ವಾಕ್ಯದ ಅವಶ್ಯಕತೆ ಇರಲಿಲ್ಲ. ನಿಜ, ಸಾಮಾನ್ಯವಾಗಿ ಸಮಾಜದ, ಜನರ ಎಲ್ಲರ ವಿಚಾರಧಾರೆಯೂ ಇದೇ ಆಗಿದೆ. ಸಮಾಜ ಅಂಗವಿಕಲರು, ವ್ಹೀಲ್‌ಚೇರ್‌ನಲ್ಲಿ ಇರುವವರ ಪ್ರತಿ ಅಪಾರ, ಅನವಶ್ಯಕ ಅನುಕಂಪವನ್ನಷ್ಟೇ ತೋರುತ್ತಿರುತ್ತದೆ. ಅವರಿಂದ ಏನೇನು ಸಾಧ್ಯ ಅನ್ನೋದನ್ನು ಯೋಚಿಸುವುದು ತೀರಾ ಕಡಿಮೆ ಜನ. ಇಲ್ಲಿಯೂ ಅದೇ ಆಗುತ್ತಿರುವುದು. ಮಂದಾಕಿನ ವ್ಹೀಲ್‌ಚೇರ್‌ನಲ್ಲೇ ಕುಳಿತು ಎಷ್ಟೆಲ್ಲಾ ಕೆಲಗಳನ್ನು ಮಾಡಬಹುದು ಯೋಚಿಸಿ? ತರಕಾರಿ ಹೆಚ್ಚೋದು, ಅಡಿಗೆ ಮಾಡೋಡು (ಅಡಿಗೆ ಕಟ್ಟೆಯನ್ನು ತುಸು ತಗ್ಗಿಸಿ.. ಕುಳಿತಲ್ಲೇ...) ಪುಸ್ತಕ ಓದುವ ಹವ್ಯಾಸವಿರೋದನ್ನು ಹೇಳಿದ್ದೀರಿ.. ಬರೆಯೋದು, ಅದರಲ್ಲೇ ಪ್ರಗತಿ ಸಾಧಿಸೋದು... ಗಿಡಗಳಿಗೆ ನೀರುಣಿಸೋದು... ಎಲ್ಲವೂ ಸಾಧ್ಯ. ಹೀಗಿರೋವಾಗ ಅದರಲ್ಲೇ ಕುಳಿತು ಬೋರಾಗೊತ್ತೆ ಹಾಗಾಗಿ ಸಿ.ಡಿ. ಅಂತ ಮಗಳು ಅನ್ನೋದು.. ನನ್ನಿಂದ ಎನೂ ಆಗೊಲ್ಲಾ ಅನ್ನೋ ರೀತಿಯ ಮಾತುಗಳನ್ನು ಮಂದಾಕಿನಿ ಆಡೋದು ತುಂಬಾ ಅಸಹನೆ ತುಂಬುತ್ತದೆ. ಇದು ಇತರೆಲ್ಲಾ ನೋಡುಗರಿಗೆ ಏನೂ ಅನ್ನಿಸದೇ ಇರಬಹುದು.. ಸಾಮಾನ್ಯದಲ್ಲಿ ಸಾಮಾನ್ಯವೆಂದೇ ಹೇಳಬಹುದು ಆದರೆ ಇದರಿಂದ ಸಮಾಜಕ್ಕೆ, ಅಂಗವಿಕಲರಿಗೆ ತಪ್ಪು ಸಂದೇಶ ಹೋಗುವುದು ಎನ್ನುವುದು ನನ್ನ ಅಭಿಪ್ರಾಯ.

ನಿಮ್ಮ ಧಾರಾವಾಹಿ ಎಂದರೆ ಅದಕ್ಕೆ ಅಪಾರ ಪ್ರೇಕ್ಷಕ ವರ್ಗವಿದೆ. ನಿರೀಕ್ಷೆಗಳಿವೆ. ಮೆಚ್ಚುಗೆ ಇದೆ. ಅಭಿಮಾನಿಗಳಿದ್ದಾರೆ (ನನ್ನನ್ನೂ ಸೇರಿಸಿ). ಹೀಗಿರುವಾಗ ಅಂಗವಿಕಲರೆಂದರೆ ನಿಸ್ಸಹಾಯಕರು, ಕೆಲಸ ಮಾಡಲಾಗದವರು.. ಕುಳಿತಲ್ಲೇ ಕುಳಿತು ಬೋರ್ ಹೊಡಿಯುತ್ತಿರುವವರೆಂದು ಜನಸಾಮಾನ್ಯರಿಗೂ... ಅಂತೆಯೇ "ನನ್ನಿಂದ ಏನೂ ಆಗೊಲ್ಲಾ ನಿಜ.. ನನಗೆ ಎಲ್ಲವುದಕ್ಕೂ ಇತರರ ಸಹಾಯ ಅನಿವಾರ್ಯ... ಛೇ.." ಅನ್ನೋ ಸ್ವ-ಅನುಕಂಪ ಪಡೋ ಅಂಗವಿಕಲರಿಗೆ ಪುಷ್ಟಿಕೊಡೋ ರೀತಿ ಇದೆ ಎಂದೆನಿಸಿತು. (ನನಗೆ ಖಂಡಿತ ಅನುಕಂಪ ಮೂಡಿದ್ದು ಹೌದು.. ನನ್ನ ಮೇಲೆ ಅಲ್ಲವೇ ಅಲ್ಲಾ.. ಈ ಆಲೋಚನೆಯ ಮೇಲಷ್ಟೇ.).

ನಿಮ್ಮ ಧಾರಾವಾಹಿಗಳ ಕಟ್ಟಾ ಅಭಿಮಾನಿಯಾಗಿ, ಅಂಗವಿಕಲರ ಸಹಚಾರಿಣಿಯಾಗಿ.... ಮಹಾಪರ್ವವನ್ನು ತಪ್ಪದೇ ವೀಕ್ಷಿಸುತ್ತಿರುವ ಓರ್ವ ವೀಕ್ಷಗಳಾಗಿ, ದಯವಿಟ್ಟು ಇನ್ನಾದರೂ "ಅಂಗವೈಕಲ್ಯತೆ"ಯನ್ನು ಪ್ರೊಜೆಕ್ಟ್ ಮಾಡುತ್ತಿರುವ ಈ ರೀತಿಯ ಋಣಾತ್ಮಕ ಚಿತ್ರಣವನ್ನು ಬಿಟ್ಟು, ಧನಾತ್ಮಕತೆಯನ್ನು ಹೆಚ್ಚು ಕಾಣಿಸುವ ಚಿತ್ರಣ ಮೂಡಿಬರಲೆಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ನೀವು ಆ ಪಾತ್ರವನ್ನು ಅಸಾಮಾನ್ಯಳಂತೇ ಬಿಂಬಿಸಬೇಕೆಂದು ಖಂಡಿತ ಕೇಳುತ್ತಿಲ್ಲ.... ಅತಿ ಯಾವತ್ತೂ ಸಲ್ಲ ಕೂಡ. ಸಾಮಾನ್ಯವನ್ನೇ ತೋರಿಸಿ.. ಏನೆಲ್ಲಾ ಸಾಮಾನ್ಯ, ಸಹಜ, ಸಾಧ್ಯವೆನ್ನುವುದನ್ನಷ್ಟೇ ತೋರಿಸಿ.... ಸಾಮಾನ್ಯರಿಗೆ, ನನ್ನಂಥಹ ಇತರರಿಗೆ. ಆದರೆ ಅಸಹಾಯಕತೆಯ, ಅನುಕಂಪದ ನೆರಳೂ ಸೋಕದಿರಲಿ. ನಿಮ್ಮಂತ ಉತ್ತಮ ನಿರ್ದೇಶಕರು, ಸಹೃದಯ ವ್ಯಕ್ತಿಗಳು ನನ್ನ ಮಾತಿನೊಳಗಿರುವ ನೈಜ ಕಾಳಜಿ, ವಿನಂತಿ, ಕಳಕಳಿಯನ್ನು ಯಾವುದೇ/ಯಾರದೇ ತಪ್ಪು ಗ್ರಹಿಕೆಗೆ ಎಡೆಗೊಡದೇ ತಿಳಿದುಕೊಳ್ಳುತ್ತೀರೆಂದು ನಂಬಿದ್ದೇನೆ.... ಹಾಗೇ ಆಶಿಸುತ್ತೇನೆ. :)

ವಂದನೆಗಳು.

ಆದರಾಭಿಮಾನಗಳೊಂದಿಗೆ,
ತೇಜಸ್ವಿನಿ ರಾಮಕೃಷ್ಣ ಹೆಗಡೆ.