ಸೋಮವಾರ, ಫೆಬ್ರವರಿ 20, 2017

ಅಂಗೈಯಲ್ಲಿ ಅಡುಗೆ ಮನೆ....

ಈ ವಾರದ (೧೯-೦೨-೨೦೧೭) ನನ್ನ ಉದಯವಾಣಿ ಅಂಕಣವನ್ನೋದಿ ಬಹಳ ಜನ ನನ್ನ ಹೊಸ ಮನೆಯ ಅಡುಗೆಮನೆಯ ವಿಶಿಷ್ಟ ಜೋಡಣೆಯನ್ನು ನೋಡ ಬಯಸಿದ್ದರಿಂದ ಅದರ ಚಿತ್ರಗಳನ್ನು ವಿವರಣೆ ಸಮೇತ ಹಾಕುತ್ತಿದ್ದೇನೆ. ಇದರ ಉದ್ದೇಶ, ನಿಂತು ಅಡುಗೆ ಮಾಡಲು ಅಸಾಧ್ಯವಾದವರು ಇಂಥದ್ದೊಂದು ಸಾಧ್ಯತೆಯ ಬಗ್ಗೆ ಅರಿತುಕೊಳ್ಳಲೆಂಬುದೇ ಆಗಿದೆ. ಅಲ್ಲದೇ, ಹಳೆಯ ಕಾಲದಲ್ಲೂ ಇಂಥದ್ದೇ ಮಾದರಿಯಿತ್ತು.. ಫಿಸಿಯೋ ಥೆರಪಿಸ್ಟ್ಸ್ ಕೂಡ ಸ್ವಸ್ಥರಾಗಿದ್ದವರೂ ಬಹು ಕಾಲ ನಿಂತು ಅಡುಗೆ ಮಾಡುವುದು ಒಳ್ಳೆಯದಲ್ಲ ಆರೋಗ್ಯಕ್ಕೆ ಎಂದೇ ಹೇಳುತ್ತಾರೆ. ಅದಕ್ಕೆಂದೇ ಬಹುಶಃ ಹಿಂದೆ ಕುಳಿತಡಿಗೆಯೇ ಮಾಡುತ್ತಿದ್ದರು!

ಚಿತ್ರ - ೧
ಇದು ನನ್ನ ಅಡಿಗೆ ಕಟ್ಟೆ..  ಸ್ಟೂಲ್ ಇದೆಯಲ್ಲಾ .. ಅದರ ಮೇಲೆ ಕುಳಿತು ಅಡುಗೆ ಮಾಡುತ್ತೇನೆ.. ಒಮ್ಮೊಮ್ಮೆ ಸೀದಾ ಕಟ್ಟೆಯ ಮೇಲೇ ಕುಳಿತು ಒಲೆಯನ್ನು ನನ್ನತ್ತ ತಿರುಗಿಸಿಕೊಂಡು ಮಾಡುವುದೂ ಇದೆ. ಒಲೆಯ ಪೈಪ್ ಬಹಳ ಉದ್ದವಿಟ್ಟುಕೊಂಡು ಸಿಕ್ಕಿಸಿಕೊಂಡಿರುವೆ. ಬೇಕಾದಾಗ ಸಡಿಲಗೊಳಿಸಿಕೊಂಡು ಎಷ್ಟು ದೂರದವರೆಗೂ ಎಳೆದುಕೊಳ್ಳಲು ಸಹಕಾರಿಯಾಗುವಂತೆ. ಅಲ್ಲಿರುವ ಎಲ್ಲಾ ಸಾಮಾನುಗಳೂ ನನಗೆ ಸಿಗುವಂತಿವೆ. ಅಲ್ಲೇ ಪಕ್ಕದಲ್ಲಿ ಕೆಳಗೆ ಸಿಂಕ್ ಇದೆ.

ಚಿತ್ರ - ೨
ಈ ಚಿತ್ರದಲ್ಲಿ ಫ್ರಿಜ್ ಇದೆ. ಅದರ ಬಾಗಿಲು ಕಿಚನ್ ಎಂತ್ರೆನ್ಸ್ ಅಭಿಮುಖವಾಗಿಟ್ಟುಕೊಂಡಿರುವೆ.. ಕಾರಣ.. ವ್ಹೀಲ್ ಚೇರಿನಲ್ಲಿ ಸೀದಾ ಬಂದೂ ಬಾಗಿಲು ತೆಗೆದು ಬೇಕಾದ್ದನ್ನು ಪಡೆಯುವಂತೆ ಇಲ್ಲಾ ಕುಳಿತಿರುವಾಗಲೂ ಸ್ಟೂಲ್ ನಿಂದಲೇ ಬಾಗಿಲು ತೆಗೆದುಕೊಳ್ಳುವಂತೇ.. ಸದ್ಯಲ್ಲೇ ಅಂಥದ್ದೇ ಮರದ ಪುಟ್ಟ ಸ್ಟೂಲ್ ಮಾಡಿಸಿ ಅದ ಕಾಲ್ಗಳಿಗೆ ಪುಟ್ಟ ವ್ಹೀಲ್ಸ್ ಹಾಕಿಕೊಂಡು ಕಿಚ ಸುತ್ತಾ ಕುಳಿತಲ್ಲೇ ತಿರುಗುವಂತೇ ಮಾಡಿಸಿಕೊಳ್ಳಬೇಕೆಂದಿರುವೆ. ಆಫೀಸ್ ಚೇರ್ನಂತೇ. ಅದು ಎತ್ತರವಾಗುತ್ತದೆ.. ಜಾಗ ಬಹಳ ತಿನ್ನುತ್ತದೆ.. ಎಕ್ಸ್‍ಪೆನ್ಸಿವ್ ಕೂಡ. ಅದೇ ಇಂಥಾ ಪುಟ್ಟ ಸ್ಟೂಲ್ ಸಕಲ ರೀತಿಯಲ್ಲೂ ಅನುಕೂಲಕರ. ಯಾರೂ ಬಳಸಬಹುದು. ಉಳಿತಾಯವೂ ಕೂಡ.. ವ್ಹೀಲ್ ಹಾಕಿಸಿಕೊಂಡರೆ ಆಯಿತು ಕೆಳಗೆ.

ಚಿತ್ರ - ೩
ಇದು ಪಕ್ಕದಲ್ಲೇ ಇರುವ ತುಸು ಎತ್ತರದ ಅಡುಗೆ ಕಟ್ಟೆ. ಆದರೆ ಅದರ ಕೆಳಗೆ ಇರುವುದೆಲ್ಲಾ ಕಪಾಟುಗಳು.. ನನಗೆ ಸಿಗುವ ರೀತಿಯಲ್ಲಿವೆ. ಮೇಲಿನ ಕಟ್ಟೆಯಲ್ಲಿ ಬಾಸ್ಕೆಟ್ ಇಡುವೆ. .ವ್ಹೀಲ್‍ಚೇರಿನಲ್ಲಿ ಬಂದಾಗ ಸಿಗುವಂತೆ. ಒಮ್ಮೊಮ್ಮೆ ಅಮ್ಮ ಅಡುಗೆ ಅಲ್ಲೂ ಒಂದು ಸಿಂಕ್ ಇದೆ.. ಕೆಳಗೆ ಬಗ್ಗಲು ತೊಂದರೆ ಆಗುವವರಿಗೆ ಮೇಲೆಯೇ ಕೈ ತೊಳೆಯಲೆಂದು ಒಂದು ಪುಟ್ಟ ಸಿಂಕ್.

ಚಿತ್ರ ೪ಸಿಂಕ್ ತುಂಬಾ ತಳಮಟ್ಟದಲ್ಲಿದೆ.. ಅಡುಗೆ ಕಟ್ಟೆಯನ್ನು ನಾನು ತೊಳೆದರೂ ನೀರೆಲ್ಲಾ ಅದರೊಳಗೇ ಬೀಳುವಂತಿದೆ. ಅದರ ಮೇಲೆಯೇ ಸೌಟು, ಚಮಚಗಳನ್ನು ತೂಗುಹಾಕುವ ಸ್ಟ್ಯಾಂಡ್. ಸಿಂಕ್ ಪೈಪ್ ಕೂಡ ಅದಕ್ಕೆ ಪೂರಕವಾಗಿ ಬೇಕಾದಂತೆ ಹಾಕಿಕೊಂಡಿರುವೆ. ನೆನಪಿರಲಿ.. ಇದೂ ಅಷ್ಟು ಎಕ್ಸ್‌ಪೆನ್ಸಿವ್ ಅಲ್ಲಾ. :)


ಚಿತ್ರ ೫


ಇದು ಕುಡಿವ ನೀರಿನ ಫ್ಲಿಲ್ಟರ್. ಇದೂ ತಗ್ಗಿನಲ್ಲಿದೆ. ಇದರ ನೀರು ಹೊರಗೆ ಹೋಗಲು ಪೈಪ್ ಕೂಡ ಕೆಳಗಿರಿಸಲಾಗಿದೆ. ಕಟ್ಟೆಯ ಮೇಲೆ ಕುಳಿತರೆ ಸರಾಗವಾಗಿ ನೀರು ಸಿಗುವುದು.

ಚಿತ್ರ ೬
ಫ್ರಿಜ್ ಪಕ್ಕದಲ್ಲೇ ಒಂದು ಪುಟ್ಟ ಕಪಾಟು. ನನಗೇ ಸಿಗುವಷ್ಟು ಎತ್ತರದಲ್ಲಿದೆ. ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಸಿ ಮಾಡಿಕೊಂಡಿದ್ದು.


ಚಿತ್ರ ೭


ಅಡುಗೆ ಮನೆಯ ಪಕ್ಕದಲ್ಲೇ ಪುಟ್ಟ ಸ್ಟೋರೇಜ್, ಹಾಗೆಯೇ ಅತ್ತ ಕಡೆ (ಮಿಶನ್ನಿಗೆ ಅಭಿಮುಖವಾಗಿದೆ.. ಇಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ..) ಕುಳಿತೇ ಪಾತ್ರೆ, ಸಣ್ಣ ಪುಟ್ಟ ಬಟ್ಟೆ ತೊಳೆಯುವ ಜಾಗ ಮತ್ತು ವಾಶಿಂಗ್ ಮೆಶಿನ್ ಇಟ್ಟಿದ್ದೇವೆ. ನಾನೇ ಬಟ್ಟೆಗಳನ್ನು ಕೆಳಗೇ ಕುಳಿತೂ ತೊಳೆಯಬಹುದು.. ಇಲ್ಲಾ ಮಿಶಿನ್ನಿಗೆ ಹಾಕಿ ತೊಳೆಯಲೂಬಹುದು. ಇನ್ನು ಬಹು ಮುಖ್ಯವಾಗಿ ಅಲ್ಲಿ ಹಾಲಿನಲ್ಲಿ ಚೌಕಾಕಾರದ ಬಾಗಿಲು ಕಾಣಿಸುವುದೇ? ಅದೇ ಲಿಫ್ಟ್ ಬಾಗಿಲು. ಕಡಿಮೆ ವೆಚ್ಚದಲ್ಲಿ ಬೇಸಿಕ್ ಸೆಟ್ಟಿಂಗ್ಸ್ ಮೂಲಕ ಸ್ಪೆಶಲ್ ಆಗಿ ಚೆನ್ನೈನಿಂದ ಜನ ಕರೆಸಿ ಡಿಸೈನ್ ಮಾಡಿಸಿದ್ದು. ಮಾಮೂಲಿ ಲಿಪ್ಟ್ ಆದರೆ ತುಂಬಾ ಖರ್ಚಾಗುವುದು.

ಇದಿಷ್ಟು ನನ್ನ ಪುಟ್ಟ ಅಡುಗೆಮನೆ :) ನಮ್ಮದು ೩೦*೪೦ ಕಾರ್ನರ್ ಸೈಟ್. ಅದರೊಳಗೇ ಸಾಕಷ್ಟು ವಿಶಾಲವಾಗಿ.. ಸರಾಗವಾಗಿ ವ್ಹೀಲ್‍ಚೇರ್ ತಿರುಗುವಂತೇ, ಜೊತೆಗೇ ನನಗೆ ಬೇಕಾದ ರೀತಿಯಲ್ಲಿ.. ಕೈಯಳತೆಗೆ ಎಟಕುವ ರೀತಿಯಲ್ಲಿ ಆದಷ್ಟು ಡಿಸೈನ್ ಮಾಡಿಸಿಕೊಂಡಿದ್ದು. ಬದುಕಲು ಬೇಕಾಗುವ ಅನುಕೂಲಕ್ಕೆ ಪ್ರಧಾನ ಆದ್ಯತೆ ನೀಡಿದ್ದೇವೆಯೇ ಹೊರತು ಯಾವುದೇ ರೀತಿಯ ದುಬಾರಿ ಇಂಟೀರಿಯರಿಗಲ್ಲ. ಈ ಚಿತ್ರಗಳಿಂದ, ವಿವರಣೆಯಿಂದ ಯಾರೋ ಒಬ್ಬರಿಗೆ ಅನುಕೂಲವಾದರೂ ಅದೇ ಸಂತೋಷ. ಹೆಚ್ಚಿನ ಮಾಹಿತಿಗೆ ನನಗೆ ಮೈಲ್ ಮಾಡಬಹುದು. ಪ್ರಾಮಾಣಿಕ, ನೈಜ ಮೈಲ್‍ಗಳಿಗೆ ಖಂಡಿತ ಉತ್ತರಿಸುವೆ..


~ತೇಜಸ್ವಿನಿ ಹೆಗಡೆ. 

ಬುಧವಾರ, ಫೆಬ್ರವರಿ 8, 2017

ನೆನಪುಗಳ ಬೆನ್ನೇರಿ....

ಹೈಸ್ಕೂಲ್‍ನಲ್ಲಿದ್ದಾಗ ಕನ್ನಡ ಮೇಷ್ಟ್ರು ಹೇಳ್ತಿದ್ರು.. ಓದುವ ಅನುಭವವೇ ಬೇರೆ, ಕೇಳುವ ಅನುಭವವೇ ಬೇರೆ ಎಂದು. ಬರೆದದ್ದನ್ನು ಸ್ವತಃ ನಾವೇ ಓದಿಕೊಳ್ಳುವಾಗ ನಮಗೆ ಹಲವು ರೀತಿಯ ಅನುಭೂತಿಗಳಾಗುತ್ತಿರುತ್ತವೆ. ಯಾವುದೇ ಒಂದು ಓದಿನ ವೇಗಕ್ಕೆ, ನಡು ನಡುವೆ ಓದಿನೊಳಗಿನ ವಿಷಯ ಹೊತ್ತು ತರುವ ನಮ್ಮ ಗತ ದಿನದ ನೆನಪುಗಳ ತಡೆಗೆ, ಓದುತ್ತಿರುವುದು ಬಲು ಇಷ್ಟವಾದಾಗ ಅಲ್ಲೇ ತುಸು ಹೊತ್ತು ನಿಂತು ವಿಹರಿಸುವಂತೆ ಮಾಡುವ ನಿಲ್ದಾಣಕ್ಕೆ, ಓದು ಕೊನೆಯಾದ ಮೇಲೂ ಬಿಟ್ಟೂ ಬಿಡದೇ ಕಾಡುವ ಹಲವು ಚಿಂತನೆಗಳ ತಾಕಲಾಟಕ್ಕೆ.. ಹೀಗೇ ನಾವೇ ಓದಿಕೊಳ್ಳುವುದರಲ್ಲಿ ಹಲವು ಲಾಭಗಳಿವೆ. ಅದೇ ಯಾರೇ ಬರೆದಿದ್ದಿರಲಿ, ಆ ಬರಹವನ್ನು ಬೇರೊಬ್ಬರು ಒದುವುದನ್ನು ಕೇಳುವಾಗ, ನಮ್ಮ ಕಲ್ಪನೆಗಳಿಗೆ, ವಿಹಾರಕ್ಕೆ, ಚಿಂತನೆಗೆ ಅತ್ಯಲ್ಪ ಸಮಯಾವಕಾಶಗಳು ದೊರಕಿಬಿಡುತ್ತವೆ. ಓದುಗರ ದಾಟಿ (ಟೋನ್), ಶೈಲಿ, ಉಚ್ಛಾರ, ಅವರು ತೆಗೆದುಕೊಳ್ಳುವ ಸಮಯ, ಅವರ ಭಾವನೆಗಳ ಹೂರಣದಲ್ಲಿ ಹೊಮ್ಮಿ ಬರುವ ಧ್ವನಿಗಳು.. ಇವೆಲ್ಲವುಗಳಿಂದ ಸ್ವಂತ ಅನುಭೂತಿಗೆ ಅವಕಾಶ ಹೆಚ್ಚು ಸಿಗದು. ಈ ಕಾರಣಕ್ಕಾಗಿ ಈಗಲೂ ನಾನು ಕಾವ್ಯ, ಕಥೆ ಕೇಳುವುದಕ್ಕಿಂತ, ನಾನೇ ಸ್ವಯಂ ಓದುವುದನ್ನೇ ಹೆಚ್ಚು ಪಡುತ್ತೇನೆ.

ಇದೇ ರೀತಿಯ ಅನುಭವವಾಗುವುದು ಹಾಡುಗಳನ್ನು ಕೇಳುವಾಗ. ಸುಮ್ಮನೇ ಭಾವಗೀತೆಯ ಕೇಳಿದರೆ ಅಂಥ ವ್ಯತ್ಯಾಸವಾಗದು. ಆ ಹಾಡಿನ ಸಂಗೀತಕ್ಕೆ, ಅದು ಸ್ಫುರಿಸುವ ಭಾವನೆಗಳಿಗೆ ಮೈಮರೆಯುತ್ತೇವೆ, ತಲೆದೂಗುತ್ತೇವೆ. ಹಾಡಿನ ಸಾಹಿತ್ಯಕ್ಕೆ ಮೆರುಗು ಬರುವುದೇ ಅದಕ್ಕೊಪ್ಪುವ ಚಂದದ ರಾಗದ ಉಡುಗೆ ತೊಡಿಸಿದಾಗಲೇ. ಆ ಉಡುಗೆಯ ಜೊತೆಗೇ ಅದ್ಭುತ ಕಂಠಸಿರಿಯ ಶೃಂಗಾರ ಮಾಡಿಬಿಟ್ಟರಂತೂ ಕೇಳುವುದೇ ಬೇಡ. ಅದಕ್ಕೇ ಅಲ್ಲವೇ ಇಂದಿಗೂ "ನೀನಿಲ್ಲದೇ ನನಗೇನಿದೆ..", "ಯಾವ ಮೋಹನ ಮುರಳಿ ಕರೆಯಿತೋ...", "ಎಲ್ಲಿ ಜಾರಿತೋ ಮನವು.." "ನಿನ್ನ ಪ್ರೇಮದ ಪರಿಯ.." ಮುಂತಾದ ಹಾಡುಗಳು ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೇ ನಮ್ಮನ್ನೆಲ್ಲಾ ಸುತ್ತಿಕೊಂಡಿರುವುದು! ಆದರೆ ಕೆಲವು ಸಿನೆಮಾ ಹಾಡುಗಳು ಮಾತ್ರ ಹಲವು ಸ್ವಾರಸ್ಯಕರ ಘಟನೆಗಳನ್ನು, ನೆನೆದಾಗೆಲ್ಲಾ ನಗುವುಕ್ಕಿಸುವಂಥ ಅನುಭವಗಳನ್ನು ನನಗೆ ಕೊಟ್ಟಿವೆ. ಹಲವರಿಗೂ ಇಂಥಾ ಅನುಭವಗಳು ಅನೇಕಾನೇಕ ಆಗಿರಬಹುದು.

ಹಿಂದೆ ಅಂದರೆ ನಮ್ಮ ಬಾಲ್ಯದಲ್ಲಿ ಈಗಿನಷ್ಟು ದೃಶ್ಯ ಮಾಧ್ಯಮಗಳ ಹಾವಳಿ ಇರಲಿಲ್ಲ. ಇದ್ದಿದ್ದೊಂದೇ ಚಾನಲ್, ಅದೇ ಡಿ.ಡಿ.೧. ಆಮೇಲೆ ಕನ್ನಡಕ್ಕಾಗಿ ಬಂದಿದ್ದು ಡಿ.ಡಿ.ಚಂದನ. ವಾರಕ್ಕೊಮ್ಮೆ, ವಾರಾಂತ್ಯದಲ್ಲಿ ಬರುವ ರಂಗೋಲಿಯನ್ನೋ, ಕನ್ನಡ/ಹಿಂದಿ ಸಿನಿಮಾವನ್ನೋ ನೋಡುವುದಕ್ಕೇ ಚಾತಕ ಪಕ್ಷಿಯಂತಾಗುತ್ತಿದ್ದೆವು. ಆವೇಗೇನಿದ್ದರೂ ರೇಡಿಯೋನೇ ಪ್ರಪಂಚ. ಅದರಲ್ಲಿ ಬರುವ ಕೋರಿಕೆಯೇ ನಮ್ಮ ಸಕಲ ಇಚ್ಛೆಗಳನ್ನೂ ನೆರವೇರಿಸುವ ಮಾಯಾಪಟ್ಟಿಗೆ. ವಿವಿಧ ಕನ್ನಡ ಹಾಡುಗಳನ್ನು, ಸಿನೆಮಾ ಗೀತೆಗಳನ್ನು ಕೇಳಿ ಮನಸು ತಣಿದದ್ದೇ ಅಲ್ಲಿಂದ. ರೇಡಿಯೋದಲ್ಲಿ ಎಷ್ಟೇ ಹಾಡುಗಳು ಬರಲಿ, ಅಂಥ ಹಾಡುಗಳನ್ನು ಕಲ್ಪಿಸಿಕೊಳ್ಳುವ ಸುವಿಶಾಲ ಮೈದಾನ ನಮ್ಮ ಮನಸ್ಸಿನೊಳಗಿರುತ್ತಿತ್ತು. ಹೇಗೆ ಚಿತ್ರಿಸಿದ್ದಾರೆ? ಯಾರೆಲ್ಲಾ ನಟಿಸಿದ್ದಾರೆ ಎಂಬಿತ್ಯಾದಿ ಯಾವ ಮಾಹಿತಿಯೂ ಇಲ್ಲದೇ ಹಾಡನ್ನು ಆಸ್ವಾದಿಸುತ್ತಾ ಕಳೆದುಹೋಗಿಬಿಡುತ್ತಿದ್ದೆವು. ಹಾಗೇ ಕಲ್ಪಿಸಿಕೊಂಡು, ಈ ಹಾಡಿಗೆ ಹೀಗೆ ಚಿತ್ರಿಸಿರಬಹುದೇ? ಅದು ಹೇಗೆ ನಟಿಸುತ್ತಾರೆ? ಎಂಬಿತ್ಯಾದಿ ಕುತೂಹಲದ ಬೆರಗು ಬೇರೆ ನಮ್ಮನ್ನು ಮೈಮರೆಸುತ್ತಿತ್ತು.

ಇಂಥಾ ಸುಮಧುರ ಕಾಲದಲ್ಲೇ ನಾನು ಕೇಳಿದ್ದ ಎರಡು ಹಾಡುಗಳ ಪ್ರಸಂಗವನ್ನು ಹಂಚಿಕೊಳ್ಳುತ್ತಿರುವೆ. ರಾಜ್‍ಕುಮಾರ್ ಹಾಡು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಅವರ ಧ್ವನಿಗೆ ಮಾರು ಹೋಗದಿರುವವರೇ ಕಡಿಮೆ. ನನಗೂ ಬಲು ಇಷ್ಟ ಅವರೆಲ್ಲಾ ಹಾಡುಗಳು. ‘ಧ್ರುವತಾರೆ’ ಚಲನಚಿತ್ರದ "ಆ ರತಿಯೇ ಧರೆಗಿಳಿದಂತೆ, ಆ ಮದನ ನಗುತಿರುವಂತೆ" ಎಂಬ ಹಾಡು ರೇಡಿಯೋದಲ್ಲಿ ಆಗಾಗ ಪ್ರಸಾರವಾಗುತ್ತಿತ್ತು. ನನಗೋ ಅದರ ಸಂಗೀತ ತುಂಬಾ ಇಷ್ಟವಾಗಿ ಹೋಗಿತ್ತು. ಆದರೆ ರಾಜ್‍ಕುಮಾರ್ ಹಾಡಿದ್ದು "ಆರತಿಯೇ ಧರೆಗಿಳಿದಂತೇ.." ಎಂದು ಕೇಳಿಸಿಕೊಂಡು, ಹಾಗೇ ಹೇಳಿದ್ದೆಂದೇ ವಾದಿಸಿ, ನಟಿ ಆರತಿಯ ಮೇಲೇ ಈ ಪದ ರಚಿಸಲಾಗಿದ್ದೆ ಎಂದೇ ಭಾವಿಸಿಕೊಂಡಿದ್ದೆ. ಹಾಗೇ, ಆರತಿಯನ್ನು ಮೇಲಿನಿಂದ ಕೆಳಗಿ ಇಳಿಸಿದಂತೇ ಮಾಡಿ ಚಿತ್ರಿಸಲ್ಪಟ್ಟಿರಬಹುದೆಂಡು ಕಲ್ಪಿಸಿಕೊಂಡು, ಬಲವಾಗಿ ನಂಬಿಯೂ ಬಿಟ್ಟಿದ್ದೆ, ಇಲ್ಲಾ ನನ್ನ ನಾನೇ ನಂಬಿಸಿಕೊಂಡು ಬಿಟ್ಟಿದ್ದೆ. ಮುಂದೆ ಕೆಲವು ಸಮಯದ ನಂತರ ಆ ಹಾಡಿರುವ ಚಲನಚಿತ್ರ ಟಿ.ವಿ.ಯಲ್ಲಿ ಟೆಲಿಕಾಸ್ಟ್ ಮಾಡಿದಾಗಲೇ ನನಗೆ ನಿಜ ಗೊತ್ತಾಗಿತ್ತು. ಆ ಹಾಡಿನಲ್ಲಿ ನಟಿಸಿದ್ದು ‘ಆರತಿ; ಆಲ್ಲ.. ‘ಗೀತಾ’ ಮತ್ತು ಅದು ‘ಆರತಿಯಲ್ಲ’.... ‘ಆ ರತಿಯೇ’ ಎಂದು. ಈ ಸತ್ಯವನ್ನು ಅರಗಿಸಿಕೊಳ್ಳಲೇ ನನಗೆ ತುಸು ಕಾಲ ಬೇಕಾಗಿತ್ತು. ಆಮೇಲೆ ಸ್ವಯಂ ಪೆದ್ದು ಬಿದ್ದ ಈ ಪ್ರಸಂಗವನ್ನು ನೆನೆ ನೆನೆದು ನಕ್ಕಿದ್ದಿದೆ. ಈಗಲೂ ಈ ಹಾಡು ಪ್ರಸಾರವಾದರೆ ಅಪ್ರಯತ್ನವಾಗಿ ನಗುವುಕ್ಕಿಬಂದುಬಿಡುತ್ತದೆ.

ಅದೇ ರೀತಿ ನನ್ನ ನಾನು ಬೆಸ್ತು ಬೀಳಿಸಿಕೊಂಡ ಇನ್ನೊಂದು ಹಾಡಿನ ಪ್ರಸಂಗವಿದೆ. "ನಿನ್ನೆ ಕನಸಲ್ಲಿ ಬಂದೆ, ಇಂದು ಎದುರಲ್ಲಿ ನಿಂದೆ, ನಾಳೆ ಕೈ ಹಿಡಿದು ನನ್ನನು ಜೋಡಿ ನೀನಾಗುವೆ.." ಎಂಬ ಸುಮಧುರ ಹಾಡೊಂದಿದೆ. ಇದು ‘ನಾರಿ ಸ್ವರ್ಗಕ್ಕೆ ದಾರಿ’ ಚಲನಚಿತ್ರದ ಗೀತೆ. ಆರತಿ ಮತ್ತು ಲೋಕೇಶ್ ಅವರ ಮೇಲೆ ಚಿತ್ರಿತವಾಗಿದೆ. ಆದರೆ ಮೊತ್ತ ಮೊದಲ ಬಾರಿ ಈ ಹಾಡನ್ನು ಕೇಳಿದಾಗ, ಚಿಕ್ಕವಳಿದ್ದ ನಾನು ಬೆರಗಾಗಿ ಹೊಗಿದ್ದೆ. ಅದು ಹೇಗೆ ಆಕೆ ಕನಸಲ್ಲಿ ಬಂದಿದ್ಲಪ್ಪ? ಆಮೇಲೆ ಮರುದಿವ್ಸ ಪ್ರಕಟ ಆಗಿ, ಅದ್ರ ಮರ್ದಿವ್ಸನೇ ಮದ್ವೆ ಆಗೋಯ್ತಾ? ಎಂದು. ಈ ಸೀಕ್ವೆಲ್‍ನಲ್ಲೇ ಚಿತ್ರಿಸಿದ್ದಾರೆ ಎಂದೇ ಭಾವಿಸಿದ್ದೆ. ಆಮೇಲೆ ನೋಡಿದರೆ ಉಲ್ಟಾ ಚಿತ್ರೀಕರಣ. ಒಟ್ಟಿನಲ್ಲಿ ಆಗ ನಮಗೆ ಕಲ್ಪನೆಗೆ ಭರಪೂರ ಅವಕಾಶವಿತ್ತು. ಈ ಹಾಡಿನ ಜೊತೆಜೊತೆಗೇ ದೃಶ್ಯ ಕಣ್ಣೆದುರು ನಿಲ್ಲುವುದರಿಂದ ಈ ಪೆದ್ದುತನಗಳಿಗೆ ಅವಕಾಶವಿಲ್ಲ.

ಇನ್ನೂ ಕೆಲವು ಹಾಡುಗಳು ನಮ್ಮ ಬದುಕಿನಲ್ಲಿ ಘಟಿಸುವ ಕೆಲವು ಹಿತ/ಅಹಿತ ಘಟನೆಗಳ ಜೊತೆಗೆ ತಳುಕು ಹಾಕಿಕೊಂಡುಬಿಟ್ಟು, ವಿನಾಕಾರಣ ಬದ್ನಾಮ್ ಆಗಿ ಹೋಗುತ್ತವೆ. ನನ್ನ ಆತ್ಮೀಯ ಗೆಳತಿ ನನ್ನೊಂದಿಗೆ ಹೇಳಿಕೊಂಡಿದ್ದಳು. ಅವಳ ತಂದೆ ತೀರಿ ಹೋದ ಸುದ್ದಿ ಬರುವಾಗ ಆಕೆ ಖುದಾ ಗವಾ ಚಲನಚಿತ್ರವನ್ನು ನೊಡುತ್ತಿದ್ದಳಂತೆ, ಆಗ ಅದೇ ಫಿಲ್ಮಿನ ಟೈಟಲ್ ಸಾಂಗ್ ಬರುತ್ತಿತ್ತಂತೆ. ಆಗಿನಿಂದ ಆ ಹಾಡನ್ನು ಅವಳಿಗೆ ಕೇಳಲಾಗುತ್ತಿಲ್ಲ ಎಂದು. ನನಗೂ ಅಷ್ಟೇ.. ಈಗಲೂ ಆ ಫಿಲ್ಮ್ ಪ್ರಸಾರವಾಗುತ್ತಿರುವಾಗ ಒಮ್ಮೆ ಗೆಳತಿ ತೋಡಿಕೊಂಡ ದುಃಖವೂ ನೆನಪಾಗುತ್ತದೆ.

ಇನ್ನು ಕೆಲವು ಎಡವಟ್ಟು ಪ್ರಸಂಗಗಳೂ ಹಾಡಿನ ಜೊತೆ ಸೇರಿಕೊಳ್ಳುತ್ತವೆ. ಚಿಕ್ಕವಳಿದ್ದಾಗ ರೇಡಿಯೋದಲ್ಲಿ ಒಂದು ಹಳೆಯ ಹಿಂದಿ ಹಾಡು ಬರುತ್ತಿತ್ತು. ಸಾಯಿರಾ ಬಾನುವಿನ ಮೇಲೆ ಚಿತ್ರಿತವಾಗಿರುವ "ಶಾಗಿರ್ದ್" ಎನ್ನುವ ಹಿಂದಿ ಚಲನಚಿತ್ರದ "ವೋ ಹೈ ಝರಾ ಕಫಾ ಕಫಾ.. ತೊ ನೈನ್ ಯೂ ಚುರಾಯೆ ಹೈ.." ಎಂಬ ಹಾಡು ಈಗಲೂ ಪ್ರಸಿದ್ಧವೇ. ಆದರೆ ಆಗ ಹಿಂದಿ ಅಷ್ಟಾಗಿ ಅರ್ಥವಾಗುತ್ತಿರಲಿಲ್ಲ. ಅದರಲ್ಲೂ ಕಫಾ ಅನ್ನೋ ಶಬ್ದ ಉರ್ದು ಎಂಬುದು ಈಗ ತಿಳಿದಿದೆ. ಕಫಾ ಎಂದರೆ ಬೇಸರ, ನಾರಾಝ್ ಎಂಬುದನ್ನು ಅರಿಯದೇ.. ನಟಿ, ಆ ನಟನಿಗೆ ಶೀತ ಕಫವಾಗಿದೆ, ಹುಶಾರಿಲ್ಲ ಎಂದೇ ಹಾಡಿ ಬೇಸರಗೊಳ್ಳುತ್ತಿದ್ದಾಳೆಂದು ಭಾವಿಸಿದ್ದೆ.

ನೆನಪುಗಳು ಯಾತನೆಯನ್ನು ಮಾತ್ರವಲ್ಲ, ಸಿಹಿ, ಕಹಿ, ಹುಳಿ ರಸಾಸ್ವಾದನೆಯನ್ನೂ ನಮಗೆ ಮಾಡುತ್ತಿರುತ್ತವೆ. ಅಂತಹ ನೆನಪುಗಳು ಇಂತಹ ಹಾಸ್ಯ ಪ್ರಸಂಗಗಳೊಡನೆ ತಳಕು ಹಾಕಿಕೊಂಡಾಗ ಅದು ಸ್ಮೃತಿಯನ್ನು ಪಡಿದು ಎಬ್ಬಿಸುವ ಚುಲ್‍ಬುಲಿ ಅಲೆಗಳ ಮಜವೇ ಬೇರೆ. ನಗುವುದಕ್ಕೆ ಕಾರಣಗಳು ಸುತ್ತಲೂ ಸಾವಿರವಿರುತ್ತವೆ. ಆದರೂ ಅಳು ಅದಕ್ಕಿಂತ ಮೊದಲು ಎಡಗಾಲನ್ನಿಟ್ಟು ಹೊಕ್ಕಿ ಬಿಡುತ್ತದೆ. ಇಲ್ಲಾ ನಾವೇ ಅದಕ್ಕೆ ಮೊದಲು ಪ್ರವೇಶ ನೀಡಿ ಬಿಡುತ್ತೇವೆ. ಹಾಡುಗಳ ಜೊತೆ ಮಧುರ ನೆನಪುಗಳು, ವಿರಹದುರಿಗಳು ಮಾತ್ರವಲ್ಲ, ಕಿಸಕ್ ಅನ್ನೋ ನಗೆಯರಳಿಸುವ ನೆನಪುಗಳೂ ತಳಕು ಹಾಕಿಕೊಂಡಿದ್ದರೆ ನೀವೂ ಒಮ್ಮೆ ಅವುಗಳನ್ನು ಹೊರಗೆಳೆದು ಚೆನ್ನಾಗಿ ನಕ್ಕು ಬಿಡಿ.

~ತೇಜಸ್ವಿನಿ.