ಸೋಮವಾರ, ಮಾರ್ಚ್ 13, 2017

ಇದ್ದಲ್ಲೇ ಇಡು ದೇವ್ರೆ...

ಲೆ ಹತ್ತಿರ ಕುಳಿತುಕೊಂಡು ಅಮ್ಮ ಹಾಕಿದ್ದ ಬಿಸಿ ಬಿಸಿ ದೋಸೆಗೆ ಹಚ್ಚಿ ತಿನ್ನಲು ನಾಲ್ಕು ಚಮಚ ಬೆಲ್ಲಕ್ಕೆ ಒಂದು ದೊಡ್ಡ ಚಮಚ ಆಕಳಿನ ತುಪ್ಪ ಹಾಕಿಕೊಂಡು, ಅದನ್ನೇ ಗಿರಗಿರನೆ ತಿರುಗಿಸಿ, ಪಾಯಸ ಮಾಡುತ್ತಿದ್ದವಳ ತಲೆಯೊಳಗೆಲ್ಲಾ ಕಲ್ಲೆಯದೇ ಯೋಚನೆ ಗಿರಕಿ ಹೊಡೆಯುತ್ತಿತ್ತು. ‘ಈ ಕಲ್ಲೆ ಯಾಕೆ ಇನ್ನೂ ಬಂದಿಲ್ಲಾ?! ಇಷ್ಟೊತ್ತಿಗಾಗ್ಲೇ ನನ್ನ ದೋಸೆಯಲ್ಲಿ ಪಾಲಿ ಕೇಳಲೆ ಹಾಜರಿರಕಾಗಿತ್ತು... ಇನ್ನೂ ಪತ್ತೆಯಿಲ್ಲೆ ಅಂದ್ರೆ ಎಲ್ಲೋ ಏನೋ ಪರಾಮಶಿ ಆಗಿರವು...’ ಹೀಗೆಲ್ಲಾ ಯೋಚನೆಯಲ್ಲಿ ಬಿದ್ದ ಅವಳಿಗೆ ತಾನು ಬರೀ ಬೆಲ್ಲ, ತುಪ್ಪವನ್ನೇ ನೆಕ್ಕುತ್ತಿರುವುದರ ಅರಿವೇ ಆಗಲಿಲ್ಲ. ಆದರೆ ಅಲ್ಲೇ ಒಲೆ ಪಕ್ಕ ಕುಳಿತುಕೊಂಡು ದೋಸೆ ಎರೆದು ಹಾಕುತ್ತಿದ್ದ ಅವಳಮ್ಮ ಶಾರದೆಗೆ ಇವಳ ಕಳ್ಳಾಟ ಕಂಡುಬಿಟ್ಟಿತು. “ಕೂಸೆ... ಅನಘ... ಅದೆಲ್ಲಿದ್ದೇ ನಿನ್ತಲೆ? ಎಂತಾ ಮಳ್ಳುರೂಪವೇ ಇದು? ಇದ್ಯಾವ್ರೀತಿ ತಿನ್ನಾಣ್ವೋ ಎಂತೋ! ಬಿಸೀ ದೋಸೇನೇ ಬೇಕು ಹೇಳಿ ನನ್ನ ಜೀವ ತಿಂತೆ... ಈಗ ನೋಡಿರೆ ಹೀಂಗೆ! ಏಳು ವರ್ಷದ ಕೋಣಾ ಆದ್ರೂ ಬುದ್ಧಿ ಮಾತ್ರ ಎರಡ್ರದ್ದೇ ಸೈ...” ಹೇಳಿ ಗದರಿದ್ದೇ ತಡ ಬಿರಬಿರನೆ ದೋಸೆ ಮುರಿದು ಬಾಯಿಗೆ ಹಾಕಿದಳೋ ಇಲ್ವೋ... ಹೆಬ್ಬಾಗಿಲಿನಲ್ಲಿ ಗೆಳತಿ ಕಲ್ಲೆಯ ದನಿ ಕೇಳಿತು.

ಜಗುಲಿಯಲ್ಲಿ ಮಂಚದ ಮೇಲೆ ಕುಳಿತುಕೊಂಡು ಕವಳದ ಸಂಚಿ ತಡಕಾಡುತ್ತಿದ್ದ ಅಜ್ಜಮ್ಮನನ್ನು ಕಂಡಿದ್ದೇ “ಆಯಮ್ಮಾ ಆರಮಾ?” ಎಂದು ಮಾತಾಡಿಸುತ್ತಲೇ ಪ್ರಧಾನ ಬಾಗಿಲನ್ನು ದಾಟಿ ಒಳಗೆ ಜಿಗಿಯುತ್ತಾ ಹೋದಳು ಕಲ್ಲೆ. “ಅನು... ಒಳಗಿದ್ಯನೇ...? ತಿಂಡಿ ತಿಂದಾತಾ...?” ಕೇಳುತ್ತಾ ಅಡುಗೆಮನೆಯ ಕಡೆ ಹೋದ ಹುಡುಗಿಯನ್ನು ಕಂಡು ಶಾರದೆಯ ಅತ್ತೆ ಸೀತಮ್ಮನಿಗೆ ಕಿರಿಕ್ ಆಯಿತು. “ಶುದ್ಧ ಆಸೆಬುರುಕ ಕೂಸು... ಸಮಾ ಟೇಮಿಗೆ ಬಂತು ದೋಸೆ ಮುಕ್ಕಲೆ... ನಮ್ಮನೆ ಕೂಸಿಗೂ ತಲೆ ಇಲ್ಲೆ... ಲಗೂನೆ ತಿಂದ್ಕಂಡು ಹೊರಗೇ ಇರ್ದೇ, ಗೆಳತೀನೂ ಕೂರ್ಸಿ ತಿನ್ಸಿ ಸಂಭ್ರಮ ಮಾಡ್ತು...”  ಎನ್ನುವ ಅವಳ ವಟಗುಡುವಿಕೆ ಅಡುಗೆ ಮನೆಯಲ್ಲಿ ದೋಸೆ ಮುಕ್ಕುತ್ತಿದ್ದ ಕಲ್ಲೆಯ ಕಿವಿಗೆ ಬೀಳುವಹಾಗಿರಲಿಲ್ಲ. ಬಿದ್ದರೂ ಅವಳಿಗೆ ಏನೂ ಅನಿಸುತ್ತಲೂ ಇರಲಿಲ್ಲ. ಅನಘೆಗಿಂತ ಎರಡೇ ವರ್ಷ ದೊಡ್ಡವಳಾದ ಕಲಾವತಿಯ ಮನೆಯಲ್ಲಿ ತುಂಬಿದ್ದುದು ಕೇವಲ ಬಡತನ ಮಾತ್ರ. ಅವಳ ಅಪ್ಪ ಶ್ರೀನಿವಾಸಭಟ್ಟ ಶುದ್ಧ ಸೋಂಬೇರಿ. ಹೆಸರಿಗೆ ಮಾತ್ರ ಪುರೋಹಿತ ಭಟ್ಟ... ಹೊರಗೆ ಬಿದ್ದು ದುಡಿಯುವುದೆಂದರೆ ಆಗದು... ನೂರಾಯೆಂಟು ನೆಪ. ಇಂತಹ ಸ್ಥಿತಿಯಲ್ಲಿ ಅವನ ಹೆಂಡತಿ ಶ್ರೀಲಕ್ಷ್ಮಿಯೇ ಅವರಿವರ ಮೆನೆಯಲ್ಲಿ ಕಸ-ಮುಸರೆ, ಹಿಟ್ಟು-ಹುಡಿ ಮಾಡಿಕೊಡುತ್ತಾ ಹೇಗೋ ಗಂಡ ಮಕ್ಕಳ ಹೊಟ್ಟೆ ಹೊರೆಯುತ್ತಿದ್ದಳು. 

ಬಾಲ್ಯದಿಂದಲೂ ಅನಘ, ಕಲಾವತಿ ಕಡ್ಡಿ ದೋಸ್ತರು. ಇಲ್ಲಿ ಕಡ್ಡಿ ಅಂದ್ರೆ ಬಳಪದ ಕಡ್ಡಿ. ಶಾಲೆಯ ಮೆಟ್ಟಿಲನ್ನೂ ಕಾಣದಿರುವ ಕಲಾವತಿಗೆ ಬಿಳೀ ಬಣ್ಣದ ಬಳಪದ ಕಡ್ಡಿ ಎಂದರೆ ಬಹು ಪ್ರೀತಿ. ಅವಳಿಗೆ ಅಕ್ಷರ ಕಲಿಸಿದ್ದೇ ಅನಘಾ. ತನ್ನ ಹತ್ತಿರವಿದ್ದ ಬಳಪವನ್ನೆಲ್ಲಾ ಚೂರು ಮಾಡಿ ಅವಳಿಗೂ ಕೊಡುತ್ತಿದ್ದಳು. ಅವಳ ಈ ಕೃತ್ಯದಿಂದಾಗಿ ಮನೆಯಲ್ಲಿ ಎಷ್ಟೋ ಸಲ ಬೈಸಿಕೊಂಡಿದ್ದೂ ಇದೆ... “ನೀ ಎಂತ ಬಳ್ಪನೇ ತಿಂತ್ಯನೇ ಕೂಸೆ... ಬರ್ಯದು ನಾಲ್ಕು ಅಕ್ಷರನೂ ಇಲ್ಲೆ... ಕಡ್ಡಿ ಮಾತ್ರ ಎರ್ಡು ದಿನಕ್ಕೇ ನಾಪತ್ತೆ...” ಹೇಳಿ ಅನಘೆಯ ಅಪ್ಪಯ್ಯ ಅದೆಷ್ಟು ಸಲ ಗದರಿಸಿದ್ದನೋ ಲೆಕ್ಕವಿಲ್ಲ. ಮನೆಯಲ್ಲಿ ಸಿಗುತ್ತಿದ್ದ ಹೆಸರು ಗಂಜಿ ಬೇಸರ ಬಂದ ತಕ್ಷಣ ಕಲ್ಲೆ ಶಾರದೆಯ ಹಿಂದೆಮುಂದೆ ಸುತ್ತುತ್ತಿದ್ದಳು. ಪಾಪದ ಹುಡುಗಿಯ ಕಷ್ಟ ಗೊತ್ತಿದ್ದರಿಂದ ತಿಂಡಿ, ಪದಾರ್ಥಗಳನ್ನು ತುಸು ಹೆಚ್ಚೇ ತಯಾರಿಸಿ, ಅವಳಿಗೂ ಅವಳ ತಂಗಿಯಂದಿರಿಗೂ ಸೇರಿಸಿ ಕಟ್ಟಿಕೊಡುತ್ತಿದ್ದಳು ಶಾರದಾ.
ಇವತ್ತೇಕೋ ಕಲ್ಲೆಯ ಮನಸು ಬೇರೆಲ್ಲೋ ಇದ್ದಹಾಗಿತ್ತು. ದೋಸೆ ತಿನ್ನುತ್ತಿದ್ದರೂ ಏನೋ ಯೋಚನೆಯಲ್ಲಿ ಬಿದ್ದಂತಿದ್ದ ಹುಡುಗಿಯನ್ನು ಕಂಡು ಶಾರದೆಗೆ ಕುತೂಹಲವಾಯಿತು. “ಎಂತಾ ಆತೆ ತಂಗಿ? ಮನೇಲಿ ಎಲ್ಲಾ ಆರಮಾ? ಸಮಾ ತಿಂತಾ ಇಲ್ಲೆ ಇಂದು...” ಎಂದು ಕೇಳಿದ್ದೇ ತಡ, ಇದಕ್ಕಾಗಿಯೇ ಕಾಯುತ್ತಿದ್ದವಳಂತೇ ತಾನು ಬರುವಾಗ ಕೇಳಿದ ಹೊಸ ವಿಷಯವನ್ನು ಹೊರಹಾಕತೊಡಗಿದಳು ಕಲಾವತಿ.

“ಶಾರ್ದತ್ತೆ... ಆನು ಬರ್ತಿರ್ಬೇಕಿರೆ... ನಿಮ್ಮನೇ ತೋಟ್ದ ಕೆಳ್ಗೆ ಮೂಲೆ ಮನೆ ಶಂಕ್ರಣ್ಣ, ಯನ್ನಪ್ಪಯ್ಯ, ಆಚೆಕೇರಿ ಗಣಪಣ್ಣ, ಶಾನಭೋಗ್ರು, ಸುಬ್ಬುಮಾಮ ಎಲ್ಲಾ ನಿತ್ಕಂಡು ಅದ್ಯಾವ್ದೋ ಪ್ಯಾಟೆಯಿಂದ ಬಂದ ದೊಡ್ಡ ಜನ್ರ ಸಂತಿಗೆ ಗಟ್ಟಿಯಾಗಿ ಮಾತಾಡ್ತಾ ಇದ್ದಿದ್ವಪ್ಪಾ... ಎಲ್ರೂ ಒಂಥರಾ ಇದ್ದಿದ್ದೊ... ನಂಗೆಂತೂ ಸಮಾ ಗೊತ್ತಾಜಿಲ್ಲೆ... ನೀನು ಸುಬ್ಬು ಮಾಮನ್ನ ಕೇಳು... ಈಗ ಒಳ್ಗೆ ಬಕ್ಕು ಅಂವ...” ಎಂದು ಹೇಳಿ ಮುಗಿಯಿತೋ ಇಲ್ಲವೋ ಶಾರದೆಯ ಗಂಡ ಸುಬ್ಬರಾಯ ಹೆಗಡೆ ಒಳಗೆ ಬಂದ. ಒಳಹೊಕ್ಕ ಪತಿಯ ಚಹರೆ ಎಂದಿನಂತಿಲ್ಲದ್ದನ್ನು ಕೂಡಲೇ ಗ್ರಹಿಸಿದಳು ಶಾರದೆ. ಎಂದಿನಂತೆ ತಿಂಡಿಯ ತಟ್ಟೆಗೆ ಕೈ ಹಾಕದೆ ಸುಸ್ತಾದವನಂತೇ ಅಲ್ಲೇ ಮೂಲೆಯಲ್ಲಿ ಮಣೆ ಹಾಕಿಕೊಂಡು ಕುಳಿತ ರೀತಿ, ಗಾಬರಿಗೊಂಡಂತಿದ್ದ ಮೊಗ... ಇವೆಲ್ಲವನ್ನೂ ನೋಡಿ ತುಸು ಹೆದರಿಕೆಯಾಯಿತು ಶಾರದೆಗೆ. ಹಾಗೆ ನೋಡಿದರೆ ಸುಬ್ಬಣ್ಣ ಸ್ವಭಾವತಃ ಸ್ವಲ್ಪ ಪುಕ್ಕಲು. ಊರಲ್ಲಿ ಏನೇ ಸಣ್ಣಪುಟ್ಟ ಗದ್ದಲ, ಗಲಾಟೆ ಆದರೂ ಒಂದೆರಡು ದಿನಗಳನ್ನು ಮನೆಯೊಳಗೇ ಕುಂತು ಕಳೆಯುವಂತಹವನು. ಅವನ ಹೆಂಡತಿಯೇ ಎಷ್ಟೋ ಗಟ್ಟಿಗಿತ್ತಿ. ಆದ್ರೆ ಇವತ್ಯಾಕೋ ಯಜಮಾನ್ರು ಸ್ವಲ್ಪ ಜಾಸ್ತಿಯೇ ಭಯ ಬಿದ್ದಿರುವ ಹಾಗೆ ಕಂಡಿತವಳಿಗೆ. ಪತಿಯನ್ನು ಕಣ್ಸನ್ನೆಯಲ್ಲೇ ಕರೆದು ಹಿತ್ತಲಿಗೆ ಹೊರಟಳು. ನಿಧಾನವಾಗಿ ಅವಳನ್ನು ಅನುಸರಿಸಿದ ಸುಬ್ರಾಯ, ಹಿತ್ತಲಿನಲ್ಲಿದ್ದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕುಳಿತವನೇ ವಿಷಯವನ್ನೆಲ್ಲಾ ಅರುಹಲು, ಸಂಗತಿ ತಿಳಿದ ಶಾರದೆಯ ಎದೆಯೂ ಜೋರಾಗಿ ಹೊಡೆದುಕೊಳ್ಳತೊಡಗಿತು. ಒಳಗಿದ್ದ ಅಮ್ಮನಿಗೂ ವಿಷಯವನ್ನು ತಿಳಿಸಲು ಒಳಹೊಕ್ಕವನನ್ನು ಶಾರದೆಯೂ ಅನುಸರಿಸಿದಳು.
-೨-
ಶಿರಸಿ ತಾಲೂಕಿನ ಆಸುಪಾಸಿರುವ ಹತ್ತು ಹಳ್ಳಿ ಸುತ್ತ ತಣ್ಣಗೆ ಹರಿಯೋ ಅಘನಾಶಿನೀ ನದಿಗೆ ಅಣೆಕಟ್ಟು ಹಾಕಬೇಕೆಂದು ಸರಕಾರದವರು ಯೋಚಿಸುತ್ತಿರುವುದಾಗಿಯೂ, ಅದೂ ಆ ಒಡ್ಡು ನಮ್ಮ ಮನೆಯ ಸಮೀಪವೇ ಎಲ್ಲೋ ಹಾಕುತ್ತಾರೆಂದೂ, ಇದರಿಂದಾಗಿ ನಮಗೇ ಭಯಂಕರ ತೊಂದರೆ ಆಗುವುದೆಂದೂ, ಗದ್ದೆ, ತೋಟ, ಬೇಣವೆಲ್ಲಾ ಮುಳುಗಡೆಯಾಗುವ ಸಂಭವವಿದೆಯೆಂದೂ ಹೇಳಿದ ಸುಬ್ರಾಯ ತಲೆಯ ಮೇಲೆ ಕೈಹೊತ್ತು ಕೂರಲು, ತುಂಬಿದ ಕವಳದ ರಸ ಬಾಯಿಯ ಕವಾಟೆಯಿಂದ ಇಣುಕುತ್ತಿರುವುದನ್ನೂ ಗಮನಿಸದಷ್ಟು ದಂಗಾಗಿಹೋಗಿದ್ದಳು ಸೀತಮ್ಮ. ಉಕ್ಕಿ ಬರತೊಡಗಿದ ಕಣ್ಣೀರನ್ನು ಹೇಗೋ ತಡೆದು ಕವಳ ತುಪ್ಪುವ ನೆಪ ಮಾಡಿ ಕಡಾವಾರದ ಕಡೇ ಹೋದರೆ, ಆಗಷ್ಟೇ ಗಡದ್ದಾಗಿ ತಿಂಡಿ ತಿಂದು ಜಗುಲಿಯ ಕಡೆ ಬಂದಿದ್ದ ಅನಘೆಗೆ ಅಪ್ಪಯ್ಯನ ಮಾತು ಕೇಳಿ ಪಾಯಸ ಕುಡಿದಷ್ಟು ಸಂತಸವಾಯಿತು.

“ಅಪ್ಪಯ್ಯ... ದೊಡ್ಡೊಳೆಗೆ ಒಡ್ಡು ಹಾಕ್ತ್ವಡಾ?! ಹಾಂಗಾದ್ರೆ ದೊಡ್ಡೊಳೆ ನಮ್ಮನೆ ಮೆಟ್ಲ ಮುಂದೇ ಹರೀತಾ? ದಣಪೆ ಆಚೆ ಇರೋ ದಪ್ಪ ಮೆಟ್ಲು ಇದ್ದಲೋ ಅದ್ರ ಹತ್ರಾನೋ ಇಲ್ಲ ಕೆಳ್ಗೆ ಇಪ್ಪು ತೋಟದ ಹತ್ರಾನೋ? ಅಯ್ಯಬ್ಬಾ... ಮಸ್ತಾಗ್ತು ಅಲ್ದಾನೆ ಕಲ್ಲೆ ದಿನಾ ನೀರಾಡಲೆ...” ಎಂದೆಲ್ಲಾ ಹೇಳಿ ಸಂಭ್ರಮಪಡತೊಡಗಿದ ಮಗಳ ಬೆನ್ನಿಗೊಂದು ಗುದ್ದು ಬಿತ್ತು ಅಮ್ಮನಿಂದ. “ಇಲ್ಲಿ ಊರು ಹೊತ್ಕಂಡ್ ಉರೀತಿದ್ರೂ ಇದ್ಕಿನ್ನೂ ಬೆಂಕೀದೆ ಚಿಂತೆ..... ಹೆಡ್ಡ್ ಕೂಸೆ... ಅಘನಾಶಿನಿ ಇಲ್ಲಿಗೆ ಬಂದ್ರೆ ನಾವೆಲ್ಲಾ ಮುಳ್ಗೋದೇ... ತೋಟ ಗದ್ದೆ ಎಲ್ಲಾ ಹೋದ್ಮೆಲೆ ಬರೀ ನೀರು ಕುಡ್ದು ಬದ್ಕಕಾಗ್ತು ತಿಳ್ಕ... ಹೊಟ್ಟೆಗೆ ಸರಿ ಬೀಳ್ದೆ ಹೋದಾಗ ನಿನ್ನ ನೀರಿನ ಭೂತನೂ ಬಿಡ್ತೇನೋ...” ಹೇಳುತ್ತಲೇ ಅಳಲು ಶುರು ಮಾಡಿದ ಅಮ್ಮನ ಹೊಸ ಅವತಾರ ನೋಡಿ ಅನಘೆಗೆ ಭಯ, ಆಶ್ಚರ್ಯ ಎರಡೂ ಉಂಟಾಯಿತು. ಗೆಳತಿಯ ಎದುರಿಗೇ ಅಮ್ಮ ಹೀಗೆಲ್ಲಾ ಬೈದು ಹೊಡೆದಿದ್ದಕ್ಕೆ ಕೊಂಚ ಅವಮಾನವಾಗಿ ಅಳು ಉಕ್ಕಿದಂತಾದರೂ, ನದಿಯೇ ಮನೆಯ ಹತ್ತಿರ ಬರುತ್ತಿರುವ ಸಿಹಿ ಸುದ್ದಿ ಎಲ್ಲವನ್ನೂ ಮರೆಸಿತು. ತನ್ನ ಉಳಿದ ಗೆಳತಿಯರಿಗೆಲ್ಲಾ ಒಡ್ಡಿನ ಸುದ್ದಿಯನ್ನು ಆರುಹಲು ಉತ್ಸಾಹದಿಂದ ಕಲ್ಲೆಯ ಕೈ ಹಿಡಿದು ದಣಪೆ ದಾಟಿದಳು.

ಮಗಳ ಮುಗ್ಧತೆ, ತುಂಟಾಟ ಗೊತ್ತಿದ್ದರೂ ಆ ಕ್ಷಣಕ್ಕೆ ಭವಿಷ್ಯತ್ತಿನ ಚಿಂತೆ ಹೆಚ್ಚಾಗಿತ್ತು ಶಾರದೆಗೆ. ಅದರಲ್ಲೂ ಗಂಡನ ಮೆದುತನ ಗೊತ್ತಿದ್ದರಿಂದ ಮತ್ತೂ ಆತಂಕವಾಗತೊಡಗಿತ್ತು. “ಎಲ್ಲಾ ನಮ್ ಕರ್ಮ... ಸುಖ ಅನುಭವ್ಸಲೂ ಪಡ್ಕ ಬರವು... ಹೋಯ್... ನೀವೊಂಚೂರು ಪ್ಯಾಟಿಗ್‌ಹೋಗಿ ತಹಶೀಲ್ದಾರ್ರನ್ನ ಮತ್ತೆ ವಿಚಾರ್ಸಿಯಲ್ಲಾ... ಹೀಂಗೇ ಕುಂತ್ರೆ ಎಂತೂ ಅಪ್ಪದಲ್ಲಾ ಹೋಪದಲ್ಲಾ... ಶಂಕ್ರಣ್ಣ, ಶಾನುಭೋಗ್ರು ಎಲ್ಲಾ ಇದ್ವಲಿ... ನೀವೂ ಏನಾದ್ರೂ ಮಾಡುಲಾಗ್ತಾ ನೋಡಿ...” ಎಂದದ್ದೇ ಅಲ್ಲಿಂದೆದ್ದು ಕೊಟ್ಟಿಗೆಯ ಕಡೆ ಹೋದಳು. ಮೊದಲಿನಿಂದಲೂ ಅಷ್ಟೇ.... ದುಃಖ ಜಾಸ್ತಿ ಆದಾಗೆಲ್ಲಾ ಆಕೆ ಹೋಗುವುದು ತನ್ನ ಪ್ರೀತಿಯ ಆಕಳು ಗೌರಿ ಇರುವಲ್ಲಿಗೇ. ಸೀತಮ್ಮನಿಗೆ ವಿಪರೀತ ಸುಸ್ತಾದಂತೆ ಅನಿಸಿ, ಹಾಗೇ ಹಾಸಿಗೆಯ ಕಡೆ ನಡೆದರು. “ನನ್ನವರು ಕಷ್ಟದಲ್ಲಿ ಬೆವರು ಹರಿಸಿ, ದುಡಿದು, ಗುಡ್ಡವನ್ನು ಕಡಿದು ಮಾಡಿರುವ ತೋಟ, ಗದ್ದೆ... ಅದೆಷ್ಟು ಕಷ್ಟ, ನಷ್ಟ ಕಂಡಿಲ್ಲಾ ಇಷ್ಟು ಮೇಲೇರಿ ಬರುವಂತಾಗಲು!! ಅವರೇನೋ ತನಗಿಂತ ಮೊದಲೇ ಪರಲೋಕ ಸೇರಿ ನೆಮ್ಮದಿಯಾಗಿದ್ದಾರೆ. ನಾನಿನ್ನೂ ಯಾಕೆ ಇಲ್ಲೇ ಇದ್ದೇನೋ... ಆ ದೇವರು ಇದನ್ನೆಲ್ಲಾ ನೋಡಲೆಂದೇ ಇನ್ನೂ ಬದುಕಿಸಿಟ್ಟಿದ್ದಾನೆಯೋ! ಭಗವಂತ, ಮುಳುಗಡೆ ಆಗೋ ಮೊದಲೇ ನನ್ನೂ ಕರೆಸಿಕೊಳ್ಳಪ್ಪಾ...” ಎಂದು ಮನದೊಳಗೇ ಹಲುಬುತ್ತಾ, ಕಣ್ಣೀರಿಡುತ್ತಾ ಪ್ರಾರ್ಥಿಸತೊಡಗಿದಳು ಸೀತಮ್ಮ.
-----
ಎಲ್ಲಿ ನೋಡಿದರಲ್ಲಿ ಫಳಫಳ ಹೊಳೆಯುತ್ತಿರುವ ಜಲರಾಶಿ. ಈಕಡೆಯ ದಡದವರಿಗೆ ಆ ಕಡೆಯವರ ಕುರುಹೂ ಕಾಣದಿರುವಷ್ಟು ಅಗಾಧ ವಿಶಾಲ! ತನ್ನ ಮುಂದಿದ್ದ ನೀರನ್ನೇ ಕಣ್ತುಂಬಿಕೊಳ್ಳುತ್ತಾ ಅನಘೆ ಕಲ್ಲೆಯ ಕಡೆ ತಿರುಗಿದಳು. “ಹೇ ಕಲ್ಲೆ... ನಿನ್ಗೆ ಗೊತ್ತಿದ್ದಾ... ಅಜ್ಜ-ಆಯಮ್ಮ ನನ್ನ ಇದೇ ಹೊಳೀಗೆ ಸಣ್ಣಿದ್ದಾಗ ಕರ್ಕೊಂಡ್ಬಂದು ನೀರಾಡಿಸ್ತಿದ್ದೋ... ಎಷ್ಟು ಖುಶಿ ಆಗ್ತಿತ್ತು ಅಂಬೆ... ಹೋದ್ವರ್ಷ ನಮ್ಮ್ ಸ್ಕೂಲ್ನವು ಗೋಕರ್ಣಕ್ಕೆ ಪ್ರವಾಸ ಹಾಕಿಯಿದ್ವಲೇ... ಅಲ್ಲಿಪ್ಪು ಸಮುದ್ರನೂ ಇಷ್ಟೇ ದೊಡ್ಡಕಿತ್ತು ಗೊತ್ತಿದ್ದಾ? ಅಘನಾಶಿನಿಯಲ್ಲಿ ತೆರೆ ಒಂದ್ ಕಮ್ಮಿ ನೋಡು... ನಮ್ ಹೊಳೆ ಸಮುದ್ರಕ್ಕೆ ಸಮ ಅಲ್ದಾ?!” ಸ್ನೇಹಿತೆಯ ಮಾತುಗಳನ್ನು ಕೇಳಿದ ಕಲ್ಲೆಯ ಮೊಗ ಅರಳಿತು. “ಹೌದನೇ... ಸಮುದ್ರನೂ ಹೀಂಗೇ ಇರ್ತಾ? ದೊಡ್ಡ್ ದೊಡ್ಡ್ ತೆರೆ ಬತ್ತಡ ಅಲ್ದಾ? ಅಪ್ಪಯ್ಯಂಗೆ ಹೇಳಿ ಸಾಕಾತು... ಒಂದ್ಸಲ ನಂಗೂ ಸಮುದ್ರ ತೋರ್ಸು ಅಂತ ಹೇಳಿ. ಕರ್ಕಂಡೇ ಹೋಗದಿಲ್ಲೆ. ಆಯಿಗಂತೂ ಪುರ್ಸೊತ್ತೆ ಇರ್ತಿಲ್ಲೆ. ನಾ ಯಾವಾಗೇನ ಸಮುದ್ರ ನೋಡದು” ಬೇಸರದಿಂದ ನುಡಿದ ಕಲ್ಲೆಯ ಸಣ್ಣಮುಖ ನೋಡಿ ಪಿಚ್ಚೆನಿಸಿತು ಅನಘೆಗೆ. “ಹೋಗ್ಲಿ ಬಿಡೆ... ಅದ್ಯಾವ ಮಹಾಕಾರ್ಯ... ನಾನೇ ನಿನ್ನ ಕರ್ಕ ಹೋಗ್ತಿ... ಹಾಂಗೆ ನೋಡಿರೆ ಈ ನೀರು ಸಿಹೀ ಇದ್ದು... ಅದು ಬರೀ, ಉಪ್ಪುಪ್ಪು ಗೊತ್ತಿದ್ದಾ? ಯಾರಿಗೊತ್ತು... ನಾಳೆ ದಿನ ಅಘನಾಶಿನೀ ನೋಡಲೆ ಸಮುದ್ರನೇ ಇಲ್ಲಿಗ್ಬಂದ್ರೂ ಬಂತು...” ಎಂದಿದ್ದೇ ತಡ ತೆರೆತೆರೆಯಾಗಿ ನಗುವುಕ್ಕಿ ಬಂತು ಕಲಾವತಿಗೆ. ಗೆಳತಿಯರಿಬ್ಬರೂ ಮನಸೋ ಇಚ್ಛೆ ನೀರಾಡಿ, ಕುಣಿದು ಕುಪ್ಪಳಿಸಿ ಸುಸ್ತಾಗಲು, ಅಲ್ಲೇ ತುಸು ದೂರದಲ್ಲಿದ್ದ ಅಮ್ಮನವರ ಗುಡಿಯತ್ತ ಸಾಗಲು, ಅಲ್ಲೇ ಗುಡಿಕಟ್ಟೆಯ ಮೇಲೆ ಕೂತು ಬಿಸಿಲು ಕಾಯಿಸಿಕೊಳ್ಳುತ್ತಿದ್ದ ವೆಂಕಜ್ಜನಿಗೆ ಒಂದೊಳ್ಳೆ ಕಂಪೆನಿ ಸಿಕ್ಕಿದಂತಾಯಿತು.

“ಎಂತದೇ ಕೂಸ್ಗಳ್ರಾ... ಎಲ್ಲಿಗೆ ಹೊಂಟಿದ್ದು ಸವಾರಿ. ನೀರಾಡಿ ಸಾಕಾತಾ? ಇಲ್ಲೆಂತಕ್ಬಂದ್ರಿ... ಮನಿಕಡೆ ಹೋಗದಲ್ದಾ? ಉಣ್ಣೋ ಯೋಚ್ನೆ ಇಲ್ಯನ್ರೇ...?” ಕೇಳುತ್ತಾ ಮಕ್ಕಳನ್ನು ಸಮೀಪ ಕರೆದ ವೆಂಕಜ್ಜ. ಊಟದ ಹೆಸರು ಕೇಳಿದಮೇಲೆಯೇ ಪೋರಿಗಳಿಗೆ ಗೊತ್ತಾಗಿದ್ದು ನಡುಮಧ್ಯಾಹ್ನ ಮೀರಿಹೋಗಿದೆ ಎಂದು. ಇದ್ದಕ್ಕಿದ್ದಂತೆ ಹೊಟ್ಟೆ ಚುರುಚುರು ಎಂದು ಹೇಳತೊಡಗಲು, ಗುಡಿಯೊಳಗೆ ಶಂಭಟ್ರು ಏನಾದ್ರೂ ಪ್ರಸಾದ ಕೊಡವರೇನೋ ಎಂಬ ಆಸೆಯಿಂದ ಅಜ್ಜಯ್ಯನ ಬಳಿ ಕೂರದೆ ಗುಡಿಯೊಳಗೇ ಹೊಕ್ಕಿಬಿಟ್ಟರು. ದೇವಿಗೆ ಅಡ್ಡಬಿದ್ದ ಶಾಸ್ತ್ರಮಾಡಿದ್ದಕ್ಕೋ, ಇಲ್ಲ ಪುಟ್ಟಮಕ್ಕಳ ಮೇಲಿನ ಪ್ರೀತಿಯಿಂದಲೋ, ಎರಡೆರಡು ಬಾಳೆಹಣ್ಣುಗಳನ್ನು ಅವರಿಬ್ಬರ ಕೈಯೊಳಗಿಟ್ಟರು ಭಟ್ಟರು. ಒಂದು ಹಣ್ಣನ್ನು ಗಬಗಬನೆ ಹೊಟ್ಟೆಗಿಳಿಸಿ, ಇನ್ನೊಂದರ ಸಿಪ್ಪೆ ಸುಲಿಯುತ್ತಾ ಹೊರಬಂದ ಮಕ್ಕಳನ್ನು ಎಳೆದುಕೊಂಡ ವೆಂಕಜ್ಜ ಪ್ರೀತಿಯಿಂದ ಬಳಿ ಕೂರಿಸಿಕೊಂಡ. ಮೊದಲಿನಿಂದಲೂ ಪುಟ್ಟಮಕ್ಕಳೆಂದರೆ ವಿಪರೀತ ಪ್ರೀತಿ ಅವನಿಗೆ. ಮಕ್ಕಳಿಗೂ ಅಷ್ಟೇ... ಅದರಲ್ಲೂ ಅನಘೆ, ಕಲ್ಲೆಯರಿಗೆ ಅವನು ಕೊಡುವ ಪೆಪ್ಪರ್‌ಮಿಂಟ್, ದೆವ್ವ, ಭೂತ, ಪಿಶಾಚಿಗಳ ಕಥೆಗಳೆಂದರೆ ಬಲು ಇಷ್ಟ.

“ಎಂತ ಕೇಳ್ಕಂಡ್ರೆ ದೇವಮ್ಮನಲ್ಲಿ...?” ಅಜ್ಜಯ್ಯ ಕೇಳಿದ್ದೇ ತಡ, ಶುರುವಿಟ್ಟೇ ಬಿಟ್ಟಳು ಅನಘೆ. “ಅಜ್ಜಾ... ದೊಡ್ಡ್‌ಹೊಳೆಗೆ ಒಡ್ಡು ಹಾಕ್ತ್ವಡಲೋ... ಆವಾಗ ನೀರು ನಮ್ಮನೆ ಮುಂದೇ ಬತ್ತಡ ಮಾರಾಯಾ... ಆದ್ರೆ ಯಮ್ಮನೆಯವ್ಕೆ ಸುತಾರಾಂ ಇಷ್ಟ ಇಲ್ಲೆ... ಹೇಂಗಾರೂ ಮಾಡಿ ತಡೆ ಒಡ್ಡವು ಹೇಳಿ ಯೋಚ್ನೆ ಮಾಡ್ತಾ ಇದ್ದೋ... ಇಷ್ಟ್ ದೂರ ನೀರಾಡಲೆ ಬಪ್ಪ ಬದ್ಲು... ಮನೆ ಕೆಳ್ಗೇ ನೀರ್ ಬತ್ತಪಾ... ಹಾಂಗಾಗಿ ಅವು ಎಂತ ಬೇಕಿದ್ರೂ ಮಾಡ್ಕಳ್ಲಿ... ದೇವಮ್ಮಾ, ನೀ ಮಾತ್ರ ನೀರನ್ನ ನಮ್ಮನೇ ಮುಂದೇ ತಗಂಬಾ ಹೇಳಿ ಕೇಳ್ಕಂಡಿ...” ಎಂದು ಅವಳು ಮಾತು ಮುಗಿಸಿದಳೋ ಇಲ್ಲವೋ ತಡೆಯಲಾಗದೇ ಕಲ್ಲೆಯೂ ಆರಂಭಿಸಿದಳು. “ವೆಂಕಜ್ಜ ನನ್ನ ಅಪ್ಪಯ್ಯನಿಗಂತೂ ಇಷ್ಟ ಇದ್ದು ನೋಡು ಒಡ್ಡು ಹಾಕದು. ನಮ್ಮ ಜಾಗ ಮುಳ್ಗೀರೆ ನಮ್ಗೆ ಪರಿಹಾರ, ದುಡ್ಡು ಕೊಡ್ತ್ವಡ... ಆವತ್ತು ಯಾರ್‌ಹತ್ರಾನೋ ಹೇಳ್ತಾ ಇದ್ದಿದ್ದ ಅಪ್ಪಯ್ಯ. ನಮಗೆಲ್ಲಾ ಬೇಷ್ ಆಗ್ತು ಆವಾಗ... ಅಮ್ಮ ಮಾತ್ರ ಬೇಜಾರು ಮಾಡ್ಕತ್ತನ ನೋಡು...” ಹೇಳ್ತಾ ಮತ್ತೊಂದು ಬಾಳೆಹಣ್ಣನ್ನು ಗುಳುಂ ಮಾಡೇಬಿಟ್ಟಳು. ಮಕ್ಕಳ ಮುಗ್ಧತೆ ಕಂಡು ಅಜ್ಜಯ್ಯನಿಗೆ ನಗು ಬಂದರೂ ಒಳಗೆಲ್ಲೋ ಸಂಕಟವೂ ಆಯಿತು. 

“ಎಲ್ಲಾ ಸರಿ ಮಕ್ಕಳ್ರಾ... ನಿಂಗಕಿಗೆ ನೀರೊಂದೇ ಮುಖ್ಯಾನೋ ಇಲ್ಲ ಶಾಲೆ, ಓದು, ಆಟದ ಬಯ್ಲು; ಇವೆಲ್ಲಾ ಮುಖ್ಯಾನೋ?” ಅವನ ಪ್ರಶ್ನೆ ಕೇಳಿದ ಅವರಿಬ್ಬರಿಗೂ ತುಸು ಗೊಂದಲವಾಯಿತು. ಆದರೆ ಅನಘೆ ಮಾತ್ರ ಸೋಲೊಪ್ಪದೆ “ನಂಗೆ ಎಲ್ಲಾದೂ ಬೇಕು... ಹಾಂಗೇ ನೀರೂ ಆಡಲೆ ಹತ್ರ ಬೇಕು...” ಎಂದಿದ್ದಕ್ಕೆ ಮತ್ತೆ ವೆಂಕಜ್ಜ... “ಆತು ತಗ. ನೀರು ಸಿಗ್ತು ಇಟ್ಗ. ಆದ್ರೆ ದೇವಿಮನೆ ಮಾವಿನ್‌ತೋಪು, ಕಲ್ಲೆಮನೆ ಹೂವಿನ್ಗಿಡ, ನಿನ್ನ ಆಯಿ ಕಷ್ಟಪಟ್ಟು ಬೆಳ್ಸಿದ್ ಹಿತ್ಲು, ಕಾಯಿಪಲ್ಲೆ... ನೀ ಲಗೋರಿ ಆಡೋ ಜಡ್ಡಿಗೆದ್ದೆ ಎಲ್ಲಾದೂ ಮುಳ್ಗೋಗ್ತು... ನೀ ಬರೀ ಮನೆ ಮುಂದೆ ನೀರಾಡ್ಕತ್ತ ಬರೀ ಸಾರನ್ನ ಉಂಡ್ಕತ್ತ ಇರವು... ತರಕಾರಿ ಬೆಳ್ಯಲೆ ಜಾಗ ಇರ್ತಿಲ್ಲೆ... ಪ್ಯಾಟೆಗೆ ಹೋಪಲೆ ಮೋಟಾರ್ ಬತ್ತಿಲ್ಲೆ... ಅಡ್ಡಿಲ್ಯ ಹಾಂಗಾದ್ರೆ?!” ಎಂದಿದ್ದೇ ತಡ ಇಬ್ಬರೂ ಗಾಭರಿಗೊಂಡರು. ‘ಪಾಪ... ಅಮ್ಮ ಅದೆಷ್ಟು ಖುಶಿಯಿಂದ ಹೂವಿನ ತೋಟ ಮಾಡಿದ್ದಾಳೆ! ಅದರಲ್ಲಾಗುವ ಹೂವಿನ ಮಾಲೆ ಮಾರಿಯೇ ಅಲ್ವೇ... ಹೋದ ವರುಷದ ತೇರಿನಲ್ಲಿ ನಮಗೆಲ್ಲಾ ಬಳೆ, ರಿಬ್ಬನ್ನು, ಸರ ಎಲ್ಲಾ ತೆಗೆಸಿಕೊಟ್ಟಿದ್ದು... ಇದೆಲ್ಲಾ ಮುಳುಗಿಹೋದರೆ ಅವಳಿಗೆಷ್ಟು ಬೇಸರವಾಗಬಹುದು! ಬೇಡ್ವೇಬೇಡ ಈ ನೀರಿನುಸಾಬ್ರಿ... ಹೊಳೆ ಇಲ್ಲೇ ಇದ್ಕೊಳ್ಲಿ...” ಎಂದು ಮನಸಲ್ಲೇ ಕಲಾವತಿ ಅಂದುಕೊಂಡ್ರೆ... ಅನಘೆಯ ಯೋಚನೆ ಹೀಗೆ ಸಾಗಿತ್ತು... ‘ಇಶ್ಯೀ... ಬರೀ ಸಾರನ್ನ ತಿನ್ನೋದು ಜ್ವರ ಬಂದವ್ರು. ನನಗಂತೂ ಹಶೀ, ಹುಳಿ, ಪಲ್ಯ ಬೇಕಪ್ಪಾ! ಅಮ್ಮ, ಆಯಮ್ಮ ಕೂಡಿ ಹಿತ್ಲಲ್ಲಿ ಎಷ್ಟೆಲ್ಲಾ ತರಕಾರಿ ಹಾಕಿದ್ದಾರೆ... ಲಗೋರಿ ಆಡ್ದೇ ನಿದ್ದೆ ಬರೋದಾದ್ರೂ ಹೇಗೆ? ಸ್ಕೂಲಿಗೆ ಹೋಗದಿದ್ದರೆ ದನ ಕಾಯೋದೇ ಗತಿ ಅಂತಿರ್ತಾನೆ ಅಪ್ಪಯ್ಯ. ಇಶ್ಯೀ... ಅವೆಲ್ಲಾ ಬೇಡ್ದಪ್ಪಾ ಬೇಡ... ಅಘನಾಶಿನಿ ಇಲ್ಲೇ ಹರೀತಾ ಇರ್ಲಿ... ಕಷ್ಟಾ ಅದ್ರೂ ಇಲ್ಲಿಗೇ ಬಂದುಹೋದ್ರಾತು...” ಎಂದುಕೊಳ್ಳುತ್ತಾ ಕಲ್ಲೆಯ ಮುಖ ನೋಡಿದರೆ ಅಲ್ಲೂ ಅದೇ ಭಾವ ಕಂಡಂತಾಯಿತು ಅವಳಿಗೆ. ಇಬ್ಬರೂ ತಮ್ಮೊಳಗೇ ಗುಸುಗುಸು ಪಿಸಪಿಸ ಎಂದು ಮಾತಾಡಿಕೊಂಡು, ತಕ್ಷಣ ಮತ್ತೆ ಗುಡಿಯೊಳಗೆ ಓಡಿದರು... ದೇವಮ್ಮನಲ್ಲಿ ಹೊಸ ಬೇಡಿಕೆಯನ್ನು ಮಂಡಿಸಲು. ವೆಂಕಜ್ಜನಿಗೆ ಮಕ್ಕಳಿಗೆ ಅರಿವಾಗಿದ್ದು ಅರ್ಥವಾಗಿ ಸಮಾಧಾನವಾಯಿತು. ‘ಪುಟ್ಟ ಮಕ್ಕಳ ಈ ಪ್ರಾರ್ಥನೆಯೇ ನೆರವೇರಲಿ ತಾಯಿ...’ ಎಂದು ಅವನೂ ಕುಳಿತಲ್ಲಿಂದಲೇ ಅಮ್ಮನೋರಿಗೆ ದೊಡ್ಡ ನಮಸ್ಕಾರ ಹಾಕಿದ.

~ತೇಜಸ್ವಿನಿ ಹೆಗಡೆ
(ಸಂಹಿತಾ ಕಥಾಸಂಕಲನದಿಂದ)
(2012ರ ಹವಿಗನ್ನಡ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ)

----****----

ಮಂಗಳವಾರ, ಮಾರ್ಚ್ 7, 2017

B-ಪಾಸಿಟಿವ್ ಎಂಬ ಮೆಸ್ಸೇಜ್ ಕೊಡುವ B-ಕ್ಯಾಪಿಟಲ್

ಜೋಗಿಯವರ B-ಕ್ಯಾಪಿಟಲ್ ಪುಸ್ತಕವನ್ನೋದಿ ಮುಗಿಸಿದೆ. ತುಂಬಾ ಇಷ್ಟವಾಯಿತು... ಆಪ್ತವೆನಿಸಿತು. ಅವರ ಕುರಿತು ಗೌರವ ಹೆಚ್ಚಾಯಿತು ಈ ಪುಸ್ತಕವನ್ನು ಓದಿ. ಬರೆದರೆ ಇಂಥಾ ಬಯೋಗ್ರಾಫಿ (ಈ ಶೈಲಿಯಲ್ಲಿ, ತಂತ್ರದಲ್ಲಿ.. ಕಥಾವಸ್ತು ರೂಪದಲ್ಲಿ) ಬರೆಯಬೇಕು ಎಂದೆನಿಸಿತು. ಬೆಂಗಳೂರನ್ನು ನಮ್ಮ ಬಳಿ ತರುತ್ತಲೇ ಅವರನ್ನೂ ಓದುಗರಿಗೆ ಪರಿಚಯಸುತ್ತಾ ಹೋಗಿದ್ದಾರೆ. “ಸಾಕಪ್ಪಾ ಈ ಬೆಂಗಳೂರು.. ಇಷ್ಟ ಇಲ್ಲದಿದ್ದರೂ ಇರಬೇಕಾಗಿದೆ.. ಊರು ಕರೆಯುತ್ತಿದೆ..” ಎಂದು ಗೋಳಾಡಿದವರ ಪಟ್ಟಿಯಲ್ಲಿ ನಾನೂ ಇದ್ದೇನೆ. ಮದುವೆಗೂ ಮುನ್ನ ಬೆಂಗಳೂರಿಗೆ ಬಂದಿದ್ದು ಅನಿವಾರ್ಯ ಕಾರಣಕ್ಕೆ ಮಾತ್ರ ಆಗಿತ್ತು. ಒಂದು ದಿನದ ಆ ಒಂದೆರಡು ಭೇಟಿಯಲ್ಲೇ ಜಪ್ಪಯ್ಯಾ ಅಂದ್ರೂ ಈ ಊರು ಬೇಡ ಅಪ್ಪಾ ಅಂದು ಬಿಟ್ಟಿದ್ದೆ. ಆದರೆ ನಿಯತಿ ಬಿಡಲಿಲ್ಲ.. ಮದುವೆಯಾದ ಮೂರು ತಿಂಗಳಿಗೇ ಉಡುಪಿಯ ಸಂತೆಕಟ್ಟೆಯಲ್ಲಿದ್ದ ನಮ್ಮ ಬೆಚ್ಚನೆಯ ಗೂಡನ್ನು ಇಲ್ಲಿಗೆ ತಂದು ಹಾಕಿತ್ತು. ಹೊಸ ಊರು, ಹೊಸ ಜನ, ಹೊಸ ಬದುಕು ಎಂಬುದೆಲ್ಲವನ್ನೂ ಮೀರಿ, ನಾನು ಎಂದೂ ಬರಲು ಇಷ್ಟಪಡದಿದ್ದ ಊರಿಗೆ ಇಷ್ಟ ಪಟ್ಟವನ ಜೊತೆ ಬಂದಿದ್ದೆ. ಒಂದು ಗುಮಾನಿ, ಅನುಮಾನ, ಅಸಹನೆ, ನಿರಾಕರಣೆಯ ಜೊತೆಗೇ ಮೊದಲ ಕೆಲವು ವರ್ಷಗಳನ್ನು ಈ ಊರಲ್ಲಿ ಕಳೆದದ್ದಾಯಿತು. ಕ್ರಮೇಣ ಸಹಾನುಭೂತಿಯಿಂದ ಈ ಊರು ನನ್ನ ಸಂಭಾಳಿಸಿತೋ ಇಲ್ಲಾ ನಾನಿದನ್ನು ಒತ್ತಾಯದಲ್ಲಿ ಒಪ್ಪಿಕೊಂಡೆನೋ ತಿಳಿಯೆ. ಆದರೆ ಇಂದು ಇಲ್ಲೊಂದು ನಮದೇ ಮನೆ ಬೇಕೆಂದು ಬಯಸಿ, ಹಾಗೇ ಕಟ್ಟಿಕೊಂಡು.. ಬೆಂಗಳೂರು ಮತ್ತಷ್ಟು ಹಾಳಾಗದಿರಲಿ, ವೃಷಭಾವತಿ ಶುದ್ಧಳಾಗಲಿ, ಬೆಳ್ಳಂದೂರು ಕೆರೆ ಸ್ವಸ್ಥವಾಗಲಿ.. ಕುಡೀವ ನೀರಿನ ಸಮಸ್ಯೆ ನೀಗಲಿ.. ಕಾವೇರಿ ಜಗಳ ಆಗದಿರಲಿ.. ಇಂಬಿತ್ಯಾದಿ ಹಾರೈಕೆ ಮನಸು ನೀಡುತ್ತಿದೆ. ಇದು ನನ್ನ ಸ್ವಾರ್ಥವೋ ಇಲ್ಲಾ ನಿಜಕ್ಕೂ ಈ ಊರಿನ ಮೇಲೆ ಕಾಳಜಿ ಬಂದಿದೆಯೋ ಎಂದು ಸ್ಪಷ್ಟವಾಗಿ ಹೇಳಲು ಆಗದು. ಎರಡೂ ಇದ್ದಿರಬಹುದು. ಇಷ್ಟೆಲ್ಲಾ ಸ್ವ ವಿಮರ್ಶೆ, ಚಿಂತನೆಗೆ ಎಳೆಸಿದ್ದು ಇದೇ B-ಕ್ಯಾಪಿಟಲ್ ಪುಸ್ತಕ!

ಇಡೀ ಪುಸ್ತಕದಲ್ಲಿ ನನಗೆ ಬಲು ಮೆಚ್ಚುಗೆಯಾದ ಭಾಗವೆಂದರೆ “ಪರರ ಮನೆಯ ಪರಸಂಗ”. ಓದುತ್ತಿರುವಂತೇ ನಾನೇ ಅಲ್ಲಿ ಬರೆದಂತೆ ಭಾಸವಾಯ್ತು. ಬೆಂಗಳೂರಿಗೆ ಬಂದು ೧೨ ವರುಷಗಳಾದ್ವು. ಈವರೆಗೂ ಏಳು ಮನೆಗಳನ್ನು ಬದಲಾಯಿಸಿದ್ದೇವೆ. ಪ್ರತಿ ಸಲ ಬದಲಾಯಿಸುವಾಗಲೂ ಥತ್.. ಇದೆಂಥಾ ಗೋಳು.. ಕಷ್ಟದ ಬಾಳು.. ಸ್ವಂತದ್ದು ಅಂತ ಒಂದಿದ್ರೆ ಈ ಎಲ್ಲಾ ಪರದಾಟಕ್ಕೆ ತಿಲಾಂಜಲಿ ಆಗ್ತಿತ್ತು ಎಂದು ಹಳಿದಿದ್ದೇವೆ. ಆದರೆ ಇಲ್ಲಿ ಬರೆದಿರುವಂತೇ ಪ್ರತಿ ಸಲ ಮನೆ ಹುಡುಕುವಾಗಲೂ ಏನೋ ಕಾತುರ, ಖುಶಿ, ಕುತೂಹಲ ಮತ್ತು ನಿರೀಕ್ಷೆ.. ಈ ಸಲದ ಮನೆ ಹೇಗಿದ್ದಿರಬಹುದು? ಯಾವ ಆಕಾರ, ಬಣ್ಣ, ನೆರೆ-ಕೆರೆ, ಗೇಟು, ಹೂದೋಟ, ಜಾಗವನು ಹೊಂದಿರಬಹುದು? ಎಂಬೆಲ್ಲಾ ಕಾತುರತೆಯಿಂದ ಮನೆ ಹುಡುಕುತ್ತಿದ್ದ ಆ ಜೀವಂತಿಕೆಗೆ ಫುಲ್ಸ್ಟಾಪ್ ಬಿದ್ದೀಗ ವರುಷ ಕಳೆದಿದೆ! ನಮ್ಮದೇ ಮನೆಯಾಗಿ ನಾವು ಸ್ಥಳಾಂತರಗೊಂಡಿದ್ದೇವೆ. ಇಲ್ಲೀಗ ಬದುಕು ಒಂದು ಗಮ್ಯವನ್ನು ಸೇರಿದಂತೆ ಆಗಿದೆ. ಅದೇ ಬಾಡಿಗೆ ಮನೆ ಹುಡುಕುವಾಗ “ಇದು ಬೇಡ.. ಸರಿ ಇಲ್ಲ.. ಅಲ್ಲಿ ಸಮಸ್ಯೆ ಇದೆ..” ಎಂದೆಲ್ಲಾ ಕಡ್ಡಿಗೂ ಗುಡ್ಡ ಮಾಡಿಯೋ.. ಥಟ್ಟನೆ ತಿರಸ್ಕರಿಸಿ, ಮುಂದೆ ಬೇರೆ ಹುಡುಕುವ ಗತ್ತು, ಗಮ್ಮತ್ತು ಇತ್ತು. ಈಗ ಇದ್ದಿರುವ ಮನೆಯೇ ಈವರೆಗೆ ನಾವು ಉಳಿದಿದ್ದ ಮನೆಯೆಲ್ಲದುಕ್ಕಿಂತಲೂ ಅದ್ಭುತ, ಚೆಂದ, ಸರಿಯಾಗಿದೆ ಎಂದುಕೊಳ್ಳಲೇಬೇಕು ಮತ್ತು ಇದು ನಿಜವೂ ಆಗಿದ್ದಿರಬಹುದು. “ಒಳ್ಳೆಯ ಮಾಲೀಕ ಸಿಗುವುದು ಬಾಡಿಗೆದಾರದ ಪುಣ್ಯ, ಒಳ್ಳೆಯ ಬಾಡಿಗೆದಾರ ಸಿಗುವುದು ಮಾಲೀಕನ ಪುಣ್ಯ” ಎಂಬ ಸಾಲು ಬಹಳ ಇಷ್ಟವಾಯಿತು. ಇದನ್ನೋದುತ್ತಿದ್ದಂತೇ ಮನಸು ಬೇರೇನನ್ನೋ ಚಿಂತಿಸಿಬಿಟ್ಟಿತು. ಆತ್ಮ ದೇಹವನ್ನು ತ್ಯಜಿಸಿದ ಮೇಲೆಯೂ ಅದಕ್ಕೆ ಹಳೆಯ ಜನ್ಮದ ಸ್ಮರಣೆಯ, ಪುಣ್ಯ, ಪಾಪ ಫಲಗಳ ವಾಸನೆ ಮೆತ್ತಿಯೇ ಇರುತ್ತದೆ. ಅದರಿಂದ ಬಿಡುಗಡೆ ಬೇಕೆಂದರೆ ಮುಕ್ತಿ ಪ್ರಾಪ್ತಿಯಾಗಬೇಕು. ಇಲ್ಲಾ ಅದು ಮತ್ತೆ ಮತ್ತೆ ಈ ಭವಕ್ಕೇ ಮರಳಿ ಹೊಸ ದೇಹ ಧರಿಸುತ್ತಿರುತ್ತದೆ ಎಂದು ಎಲ್ಲೋ ಓದಿದ್ದೆ/ಹಿರಿಯರಿಂದಲೂ ಕೇಳಿದ್ದೆ. ಅದು ನೆನಪಾಯಿತು. ಒಂದೊಮ್ಮೆ ಇದು ನಿಜವಾಗಿದ್ದರೆ.. ಒಳ್ಳೆಯ ಸ್ಮರಣೆ, ಉತ್ತಮ ವಿಚಾರಗಳಿಂದ ಮೆತ್ತಿರುವ ಆತ್ಮಕ್ಕೆ ಸದೃಢ ದೇಹ ಸಿಗುವುದು.. ಅದೇ ಒಳ್ಳೆಯ ಕಾಯಕ್ಕೆ ಅಷ್ಟೇ ಉತ್ತಮ ಆತ್ಮ ದೊರಕುವುದು ಅದೂ ಪುಣ್ಯವೇನೋ ಎಂದೆನಿಸಿತು. 

ಕೆಲಸದ ಹುಡುಗಿಯ ಪ್ರಕರಣ, ಸೈಕಲ್ ಪ್ರಕರಣ, ಮಗಳಿಗೊಂದು ಗೊಂಬೆ, ನಾಯಿ ಮತ್ತು ಪಾಪಪ್ರಜ್ಞೆ - ಈ ಭಾಗಗಳು ಮಾತ್ರ ಬಹಳ ಕಾಡುತ್ತಿವೆ.. ಕಾಡುವಂಥವು ಕೂಡ.

ಒಂದೊಳ್ಳೆಯ ಓದನ್ನು, ಪ್ರಾಮಾಣಿಕವಾಗಿ ಓದುಗರಿಗೆ ಕೊಟ್ಟಿದ್ದಕ್ಕೆ ಜೋಗಿಯವರಿಗೆ ಧನ್ಯವಾದಗಳು. ಅವರ ಬೆಂಗಳೂರು ಮಾಲಿಕೆಯ ಮುಂದಿನ ಭಾಗಕ್ಕಾಗಿ ಕಾಯುತ್ತಾ...

~ತೇಜಸ್ವಿನಿ.