ಮಂಗಳವಾರ, ಮಾರ್ಚ್ 7, 2017

B-ಪಾಸಿಟಿವ್ ಎಂಬ ಮೆಸ್ಸೇಜ್ ಕೊಡುವ B-ಕ್ಯಾಪಿಟಲ್

ಜೋಗಿಯವರ B-ಕ್ಯಾಪಿಟಲ್ ಪುಸ್ತಕವನ್ನೋದಿ ಮುಗಿಸಿದೆ. ತುಂಬಾ ಇಷ್ಟವಾಯಿತು... ಆಪ್ತವೆನಿಸಿತು. ಅವರ ಕುರಿತು ಗೌರವ ಹೆಚ್ಚಾಯಿತು ಈ ಪುಸ್ತಕವನ್ನು ಓದಿ. ಬರೆದರೆ ಇಂಥಾ ಬಯೋಗ್ರಾಫಿ (ಈ ಶೈಲಿಯಲ್ಲಿ, ತಂತ್ರದಲ್ಲಿ.. ಕಥಾವಸ್ತು ರೂಪದಲ್ಲಿ) ಬರೆಯಬೇಕು ಎಂದೆನಿಸಿತು. ಬೆಂಗಳೂರನ್ನು ನಮ್ಮ ಬಳಿ ತರುತ್ತಲೇ ಅವರನ್ನೂ ಓದುಗರಿಗೆ ಪರಿಚಯಸುತ್ತಾ ಹೋಗಿದ್ದಾರೆ. “ಸಾಕಪ್ಪಾ ಈ ಬೆಂಗಳೂರು.. ಇಷ್ಟ ಇಲ್ಲದಿದ್ದರೂ ಇರಬೇಕಾಗಿದೆ.. ಊರು ಕರೆಯುತ್ತಿದೆ..” ಎಂದು ಗೋಳಾಡಿದವರ ಪಟ್ಟಿಯಲ್ಲಿ ನಾನೂ ಇದ್ದೇನೆ. ಮದುವೆಗೂ ಮುನ್ನ ಬೆಂಗಳೂರಿಗೆ ಬಂದಿದ್ದು ಅನಿವಾರ್ಯ ಕಾರಣಕ್ಕೆ ಮಾತ್ರ ಆಗಿತ್ತು. ಒಂದು ದಿನದ ಆ ಒಂದೆರಡು ಭೇಟಿಯಲ್ಲೇ ಜಪ್ಪಯ್ಯಾ ಅಂದ್ರೂ ಈ ಊರು ಬೇಡ ಅಪ್ಪಾ ಅಂದು ಬಿಟ್ಟಿದ್ದೆ. ಆದರೆ ನಿಯತಿ ಬಿಡಲಿಲ್ಲ.. ಮದುವೆಯಾದ ಮೂರು ತಿಂಗಳಿಗೇ ಉಡುಪಿಯ ಸಂತೆಕಟ್ಟೆಯಲ್ಲಿದ್ದ ನಮ್ಮ ಬೆಚ್ಚನೆಯ ಗೂಡನ್ನು ಇಲ್ಲಿಗೆ ತಂದು ಹಾಕಿತ್ತು. ಹೊಸ ಊರು, ಹೊಸ ಜನ, ಹೊಸ ಬದುಕು ಎಂಬುದೆಲ್ಲವನ್ನೂ ಮೀರಿ, ನಾನು ಎಂದೂ ಬರಲು ಇಷ್ಟಪಡದಿದ್ದ ಊರಿಗೆ ಇಷ್ಟ ಪಟ್ಟವನ ಜೊತೆ ಬಂದಿದ್ದೆ. ಒಂದು ಗುಮಾನಿ, ಅನುಮಾನ, ಅಸಹನೆ, ನಿರಾಕರಣೆಯ ಜೊತೆಗೇ ಮೊದಲ ಕೆಲವು ವರ್ಷಗಳನ್ನು ಈ ಊರಲ್ಲಿ ಕಳೆದದ್ದಾಯಿತು. ಕ್ರಮೇಣ ಸಹಾನುಭೂತಿಯಿಂದ ಈ ಊರು ನನ್ನ ಸಂಭಾಳಿಸಿತೋ ಇಲ್ಲಾ ನಾನಿದನ್ನು ಒತ್ತಾಯದಲ್ಲಿ ಒಪ್ಪಿಕೊಂಡೆನೋ ತಿಳಿಯೆ. ಆದರೆ ಇಂದು ಇಲ್ಲೊಂದು ನಮದೇ ಮನೆ ಬೇಕೆಂದು ಬಯಸಿ, ಹಾಗೇ ಕಟ್ಟಿಕೊಂಡು.. ಬೆಂಗಳೂರು ಮತ್ತಷ್ಟು ಹಾಳಾಗದಿರಲಿ, ವೃಷಭಾವತಿ ಶುದ್ಧಳಾಗಲಿ, ಬೆಳ್ಳಂದೂರು ಕೆರೆ ಸ್ವಸ್ಥವಾಗಲಿ.. ಕುಡೀವ ನೀರಿನ ಸಮಸ್ಯೆ ನೀಗಲಿ.. ಕಾವೇರಿ ಜಗಳ ಆಗದಿರಲಿ.. ಇಂಬಿತ್ಯಾದಿ ಹಾರೈಕೆ ಮನಸು ನೀಡುತ್ತಿದೆ. ಇದು ನನ್ನ ಸ್ವಾರ್ಥವೋ ಇಲ್ಲಾ ನಿಜಕ್ಕೂ ಈ ಊರಿನ ಮೇಲೆ ಕಾಳಜಿ ಬಂದಿದೆಯೋ ಎಂದು ಸ್ಪಷ್ಟವಾಗಿ ಹೇಳಲು ಆಗದು. ಎರಡೂ ಇದ್ದಿರಬಹುದು. ಇಷ್ಟೆಲ್ಲಾ ಸ್ವ ವಿಮರ್ಶೆ, ಚಿಂತನೆಗೆ ಎಳೆಸಿದ್ದು ಇದೇ B-ಕ್ಯಾಪಿಟಲ್ ಪುಸ್ತಕ!

ಇಡೀ ಪುಸ್ತಕದಲ್ಲಿ ನನಗೆ ಬಲು ಮೆಚ್ಚುಗೆಯಾದ ಭಾಗವೆಂದರೆ “ಪರರ ಮನೆಯ ಪರಸಂಗ”. ಓದುತ್ತಿರುವಂತೇ ನಾನೇ ಅಲ್ಲಿ ಬರೆದಂತೆ ಭಾಸವಾಯ್ತು. ಬೆಂಗಳೂರಿಗೆ ಬಂದು ೧೨ ವರುಷಗಳಾದ್ವು. ಈವರೆಗೂ ಏಳು ಮನೆಗಳನ್ನು ಬದಲಾಯಿಸಿದ್ದೇವೆ. ಪ್ರತಿ ಸಲ ಬದಲಾಯಿಸುವಾಗಲೂ ಥತ್.. ಇದೆಂಥಾ ಗೋಳು.. ಕಷ್ಟದ ಬಾಳು.. ಸ್ವಂತದ್ದು ಅಂತ ಒಂದಿದ್ರೆ ಈ ಎಲ್ಲಾ ಪರದಾಟಕ್ಕೆ ತಿಲಾಂಜಲಿ ಆಗ್ತಿತ್ತು ಎಂದು ಹಳಿದಿದ್ದೇವೆ. ಆದರೆ ಇಲ್ಲಿ ಬರೆದಿರುವಂತೇ ಪ್ರತಿ ಸಲ ಮನೆ ಹುಡುಕುವಾಗಲೂ ಏನೋ ಕಾತುರ, ಖುಶಿ, ಕುತೂಹಲ ಮತ್ತು ನಿರೀಕ್ಷೆ.. ಈ ಸಲದ ಮನೆ ಹೇಗಿದ್ದಿರಬಹುದು? ಯಾವ ಆಕಾರ, ಬಣ್ಣ, ನೆರೆ-ಕೆರೆ, ಗೇಟು, ಹೂದೋಟ, ಜಾಗವನು ಹೊಂದಿರಬಹುದು? ಎಂಬೆಲ್ಲಾ ಕಾತುರತೆಯಿಂದ ಮನೆ ಹುಡುಕುತ್ತಿದ್ದ ಆ ಜೀವಂತಿಕೆಗೆ ಫುಲ್ಸ್ಟಾಪ್ ಬಿದ್ದೀಗ ವರುಷ ಕಳೆದಿದೆ! ನಮ್ಮದೇ ಮನೆಯಾಗಿ ನಾವು ಸ್ಥಳಾಂತರಗೊಂಡಿದ್ದೇವೆ. ಇಲ್ಲೀಗ ಬದುಕು ಒಂದು ಗಮ್ಯವನ್ನು ಸೇರಿದಂತೆ ಆಗಿದೆ. ಅದೇ ಬಾಡಿಗೆ ಮನೆ ಹುಡುಕುವಾಗ “ಇದು ಬೇಡ.. ಸರಿ ಇಲ್ಲ.. ಅಲ್ಲಿ ಸಮಸ್ಯೆ ಇದೆ..” ಎಂದೆಲ್ಲಾ ಕಡ್ಡಿಗೂ ಗುಡ್ಡ ಮಾಡಿಯೋ.. ಥಟ್ಟನೆ ತಿರಸ್ಕರಿಸಿ, ಮುಂದೆ ಬೇರೆ ಹುಡುಕುವ ಗತ್ತು, ಗಮ್ಮತ್ತು ಇತ್ತು. ಈಗ ಇದ್ದಿರುವ ಮನೆಯೇ ಈವರೆಗೆ ನಾವು ಉಳಿದಿದ್ದ ಮನೆಯೆಲ್ಲದುಕ್ಕಿಂತಲೂ ಅದ್ಭುತ, ಚೆಂದ, ಸರಿಯಾಗಿದೆ ಎಂದುಕೊಳ್ಳಲೇಬೇಕು ಮತ್ತು ಇದು ನಿಜವೂ ಆಗಿದ್ದಿರಬಹುದು. “ಒಳ್ಳೆಯ ಮಾಲೀಕ ಸಿಗುವುದು ಬಾಡಿಗೆದಾರದ ಪುಣ್ಯ, ಒಳ್ಳೆಯ ಬಾಡಿಗೆದಾರ ಸಿಗುವುದು ಮಾಲೀಕನ ಪುಣ್ಯ” ಎಂಬ ಸಾಲು ಬಹಳ ಇಷ್ಟವಾಯಿತು. ಇದನ್ನೋದುತ್ತಿದ್ದಂತೇ ಮನಸು ಬೇರೇನನ್ನೋ ಚಿಂತಿಸಿಬಿಟ್ಟಿತು. ಆತ್ಮ ದೇಹವನ್ನು ತ್ಯಜಿಸಿದ ಮೇಲೆಯೂ ಅದಕ್ಕೆ ಹಳೆಯ ಜನ್ಮದ ಸ್ಮರಣೆಯ, ಪುಣ್ಯ, ಪಾಪ ಫಲಗಳ ವಾಸನೆ ಮೆತ್ತಿಯೇ ಇರುತ್ತದೆ. ಅದರಿಂದ ಬಿಡುಗಡೆ ಬೇಕೆಂದರೆ ಮುಕ್ತಿ ಪ್ರಾಪ್ತಿಯಾಗಬೇಕು. ಇಲ್ಲಾ ಅದು ಮತ್ತೆ ಮತ್ತೆ ಈ ಭವಕ್ಕೇ ಮರಳಿ ಹೊಸ ದೇಹ ಧರಿಸುತ್ತಿರುತ್ತದೆ ಎಂದು ಎಲ್ಲೋ ಓದಿದ್ದೆ/ಹಿರಿಯರಿಂದಲೂ ಕೇಳಿದ್ದೆ. ಅದು ನೆನಪಾಯಿತು. ಒಂದೊಮ್ಮೆ ಇದು ನಿಜವಾಗಿದ್ದರೆ.. ಒಳ್ಳೆಯ ಸ್ಮರಣೆ, ಉತ್ತಮ ವಿಚಾರಗಳಿಂದ ಮೆತ್ತಿರುವ ಆತ್ಮಕ್ಕೆ ಸದೃಢ ದೇಹ ಸಿಗುವುದು.. ಅದೇ ಒಳ್ಳೆಯ ಕಾಯಕ್ಕೆ ಅಷ್ಟೇ ಉತ್ತಮ ಆತ್ಮ ದೊರಕುವುದು ಅದೂ ಪುಣ್ಯವೇನೋ ಎಂದೆನಿಸಿತು. 

ಕೆಲಸದ ಹುಡುಗಿಯ ಪ್ರಕರಣ, ಸೈಕಲ್ ಪ್ರಕರಣ, ಮಗಳಿಗೊಂದು ಗೊಂಬೆ, ನಾಯಿ ಮತ್ತು ಪಾಪಪ್ರಜ್ಞೆ - ಈ ಭಾಗಗಳು ಮಾತ್ರ ಬಹಳ ಕಾಡುತ್ತಿವೆ.. ಕಾಡುವಂಥವು ಕೂಡ.

ಒಂದೊಳ್ಳೆಯ ಓದನ್ನು, ಪ್ರಾಮಾಣಿಕವಾಗಿ ಓದುಗರಿಗೆ ಕೊಟ್ಟಿದ್ದಕ್ಕೆ ಜೋಗಿಯವರಿಗೆ ಧನ್ಯವಾದಗಳು. ಅವರ ಬೆಂಗಳೂರು ಮಾಲಿಕೆಯ ಮುಂದಿನ ಭಾಗಕ್ಕಾಗಿ ಕಾಯುತ್ತಾ...

~ತೇಜಸ್ವಿನಿ.

3 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಓದುವ ಕುತೂಹಲ ಹುಟ್ಟಿಸಿದ್ದೀರಿ.

ಮನಸಿನಮನೆಯವನು ಹೇಳಿದರು...

ಬರದಿದ್ದ ಊರಿಗೆ ಬಂದು
ಇರಬಾರದೆನಿಸಿದರೂ ಬಿಡಲಾಗದಾಗಿದೆ..
ಸದ್ಯ ಕ್ಯಾಂಪಸ್ ಒಳಗಿರೋದ್ರಿಂದ ಬಚಾವ್, ಟ್ರಾಫಿಕ್ಕಿನ ಗೋಳಿಂದ, ಗಲಿಬಿಲಿಗಳಿಂದ, ಕಣ್ಣಿಗೆ ಮಣ್ಣೆರಾಚೊ ಬಣ್ಣಗಳಿಂದ.

sunaath ಹೇಳಿದರು...

ತೇಜಸ್ವಿನಿ,
ನಿಮ್ಮ ಹೊಸ blog post, ಸರಳವಾಗಿ, ನಿರಾಯಾಸವಾಗಿ ತೆರೆದುಕೊಂದಿತು. ‘ಇದ್ದಲ್ಲೆ ಇಡು ದೇವ್ರೆ’ ಲೇಖನವನ್ನು ನಾನು ಖುಶಿಯಿಂದ ಓದಿದೆ. ಆಬಳಿಕ, ‘ಹಳೆಯ ಪೋಸ್ಟ’ ಮೇಲೆ ಕ್ಲಿಕ್ ಮಾಡಿದಾಗ ‘Be positive...'ಸಹ ತೆರೆದುಕೊಂಡಿತು. (ಮೊದಲು ತೆರೆದಿರಲಿಲ್ಲ.) ಜೋಗಿಯವರ ರಚನೆಯ ಸಾರವನ್ನು ಚೆನ್ನಾಗಿ ನಿರೂಪಿಸಿರುವಿರಿ. ಅಭಿನಂದನೆಗಳು.