ಸೋಮವಾರ, ಜೂನ್ 3, 2019

ಅಳಿವು ಉಳಿವಿನ ನಡುವೆ...

ನಾನು ಶಾಲೆಗೆ ಹೋಗುವ ಸಮಯದಲ್ಲಿ ಆಗಷ್ಟೇ ದಕ್ಷಿಣ ಕನ್ನಡದಲ್ಲಿ ಇಂಗ್ಲೀಶ್ ಮೀಡಿಯಮ್ ಗಾಳಿ ಬೀಸತೊಡಗಿತ್ತು.  ಹೈಸ್ಕೂಲಿಗೆ ಬರುವಷ್ಟರಲ್ಲಿ ತುಸು ಬಲಪಡೆದುಕೊಂಡೇ ಬೀಸತೊಡಗಿತ್ತು. ಆದರೂ ಬಹುತೇಕ ನನ್ನ ಓರಗೆಯವರು ಹತ್ತನೆಯ ತರಗತಿಯವರೆಗೂ ಓದಿದ್ದು ಕನ್ನಡ ಮೀಡಿಯಮ್ಮಲ್ಲೇ. ಪ್ರಥಮ ಭಾಷೆ ಕನ್ನಡ, ದ್ವಿತೀಯ ಇಂಗ್ಲೀಶ್ ಮತ್ತು ತೃತೀಯ ಹಿಂದಿ – ಇದು ನಾನು ಕಲಿತ ಶಾಲೆಯಲ್ಲಿದ್ದಿದ್ದು. ಕಾರಣ ಅದೊಂದು ಕ್ರಿಶ್ಚಿಯನ್ ಶಾಲೆಯಾಗಿತ್ತು ಮತ್ತು ಅಲ್ಲಿ ನನ್ನ ಕಲಿಕೆ ಅನಿವಾರ್ಯವಾಗಿತ್ತು. ಆದರೆ ನಮ್ಮ ಮನೆಯಲ್ಲೋ ಸಂಸ್ಕೃತದ ವಾತಾವರಣವಿತ್ತು. ನನ್ನ ತಂದೆ ಸಂಸ್ಕೃತ ಪ್ರೊಫೆಸರ್. ನನಗೋ ಮೊದಲಿನಿಂದಲೂ ಕನ್ನಡ ಪುಸ್ತಕಗಳ ಓದು ಹಾಗೂ ಹಿಂದಿ ಶಾಯರಿ/ಗಝಲ್ಗಳ ಹುಚ್ಚು ಇದ್ದುದರಿಂದ ಆಯ್ಕೆಗಳಿಲ್ಲದೇ ದೊರಕಿದ್ದೇ ನನ್ನ ಐಚ್ಛಿಕ ವಿಷಯಗಳಾಗಿದ್ದವು ಅವು! ಆದರೆ ನನಗೆ ಸಂಸ್ಕೃತದ ಮೇಲೆ ಅಪಾರ ಗೌರವ ಮತ್ತು ಆದರ. ಕಾರಣ, ಅಪ್ಪ ಎಂದೂ ಅದನ್ನು ನಮ್ಮ ಮೇಲೆ ಹೇರಲು ಹೋಗಿರಲಿಲ್ಲ. ಸಂಸ್ಕೃತ ಶ್ಲೋಕ, ಗೀತಾ ಪಠಣ, ಸೂಕ್ತಗಳು, ಸಹಸ್ರನಾಮಗಳು ಏನೇ ಇದ್ದರೂ ಅದನ್ನು ನಾವೇ ಆಸಕ್ತಿಯಿಂದ ಕೇಳಿ ಕಲಿತದ್ದು. (ಕಲಿಸಲು ಅಪ್ಪನಿಗೆ ಪುರುಸೊತ್ತೂ ಇರಲಿಲ್ಲ ಅನ್ನಿ. ಆದರೆ ಈಗ ಮೊಮ್ಮಕ್ಕಳಿಗೆ ಆಸಕ್ತಿಯಿಂದ ಬಿಡುವಾಗಿ ಎಲ್ಲಾ ಪಾಠ ಮಾಡುತ್ತಿದ್ದಾರೆ ಎಂಬುದೇ ಸಂತೋಷದ ಸಂಗತಿ.)
ನಾವು ಹತ್ತನೆಯ ತರಗತಿಯವರೆಗೂ ಮೂರೂ ಭಾಷೆಗಳನ್ನೂ ಕಲಿಯಬೇಕಿತ್ತು. ಮತ್ತು ಆ ಮೂರೂ ಭಾಷೆಯ ಅಂಕಗಳು ಕೊನೆಯ ಪರೀಕ್ಷೆಯ ಅಂಕಕ್ಕೆ ಸೇರ್ಪಡೆಯಾಗುತ್ತಿದ್ದವು (ನೆನಪಿರಲಿ.. ಈಗ ಹಾಗಿಲ್ಲ! ಲೇಖನದ ಕೊನೆಯಲ್ಲಿ ವಿವರಿಸಿದ್ದೇನೆ). ಆ ಸಮಯದಲ್ಲಿ ಹಲವು ವಿದ್ಯಾರ್ಥಿಗಳು ಸಂಸ್ಕೃತ ತೆಗೆದುಕೊಳ್ಳುತ್ತಿದ್ದು ಹೆಚ್ಚಿನ ಮಾರ್ಕ್ಸ್ ಸುಲಭದಲ್ಲಿ ಸಿಗುತ್ತದೆ ಎಂಬುದಕ್ಕೇ ಆಗಿರುತ್ತಿತ್ತು! (ಇದೇ ಈಗಲೂ ಇದೆ.) ಆಗ ಆಸಕ್ತಿಯಿಂದ ತೆಗೆದುಕೊಳ್ಳುವವರಿದ್ದಿರಲಿಲ್ಲ ಎಂದಲ್ಲ. ಆದರೆ ಹೆಚ್ಚಿನವರ ಆಲೋಚನಾ ಕ್ರಮ ಹೀಗೇ ಇದ್ದಿತ್ತು. .ಇದಕ್ಕೆ ಕಾರಣ ಕನ್ನಡದಲ್ಲಿ ಬರೆಯಲು ಬಹಳವಿರುತ್ತಿತ್ತು ಮತ್ತು ದೊಡ್ಡದೊಡ್ಡ ಉತ್ತರಗಳನ್ನು ಬರೆಯಬೇಕಾಗಿತ್ತು. ಸಂಸ್ಕೃತ ಒಂದು ಪುಟ್ಟ ಪ್ಯಾರಾ ನಮ್ಮ ಕನ್ನಡದ ಎರಡು ಪೇಜಿಗೆ ಸಮನಾಗಿರುತ್ತಿದ್ದುದೂ ಇದೆ! ಇರಲಿ… ಅದು ಗತಕಾಲ ಎಂದುಕೊಳ್ಳೋಣ. ಆದರೆ ಈಗ?
ನನ್ನ ಮಗಳು ಇಂಗ್ಲೀಶ್ ಮೀಡಿಯಮ್.. ಆದರೆ ಎರಡನೇ ಭಾಷೆಯಾಗಿ ಕನ್ನಡ ಕೊಡಿಸಿದ್ದೇನೆ. ಮೂರನೆಯ ಭಾಷೆ ಅನಿವಾರ್ಯವಾಗಿ ಹಿಂದಿಯಾಗಿದೆ. ಹಿಂದಿ ನನಗೆ ಬಹಳ ಅಚ್ಚುಮೆಚ್ಚು...ನಿರರ್ಗಳ. ಅಲ್ಲದೇ ಪಂಜಾಪು, ಬಿಹಾರಿ, ಹಿಂದಿ ಗ್ರಾಮ್ಯ ಭಾಷೆಯೂ ಗೊತ್ತು. ಆದರೆ ನನ್ನ ಮಗಳಿಗೆ ಅಷ್ಟಕಷ್ಟೇ. ಅವಳಿಗೆ ಇಂಗ್ಲೀಶ್, ಸಂಸ್ಕೃತ ಮತ್ತು ಕನ್ನಡದಲ್ಲಿ ಆಸಕ್ತಿ. ಸದ್ಯ ಕನ್ನಡ ಮತ್ತು ಇಂಗ್ಲೀಶ್ ಎರಡು ಭಾಷೆಯೂ ಲೀಲಾಜಾಲ. ಆದರೆ ಅವಳಿಗೆ ಆಸಕ್ತಿ ಇದ್ದರೂ ಸಂಸ್ಕೃತವನ್ನು ಮೂರನೇ ಭಾಷೆಯಾಗಿ ತೆಗೆದುಕೊಳ್ಳುವ ಆಯ್ಕೆ ಸಿಕ್ಕಿಲ್ಲ! “ಅನಿವಾರ್ಯ ಎಂದಾದಮೇಲೆ ಅದನ್ನೇ ಸವಾಲಾಗಿ ಸ್ವೀಕರಿಸು.. ಒಂದೊಳ್ಳೆ ಭಾಷೆ ಕಲಿತ ಸುಖ, ಹಾಗೂ ಆ ಭಾಷೆಯಿಂದ ನಿನ್ನ ಓದಿನ ವಿಸ್ತಾರ ಹೆಚ್ಚಾಗುತ್ತದೆ” ಎಂದು ತಿಳಿಸಿ ಹೇಳಿದ್ದೇನೆ. ‘ಆನೋ ಭದ್ರಾಃ ಕೃತವೋಯಂತು ವಿಶ್ವತಃ”(ಒಳ್ಳೆಯ ಜ್ಞಾನ ಜಗತ್ತಿನಿಲ್ಲೆಡೆಯಿಂದ ನಮ್ಮಲ್ಲಿಗೆ ಹರಿದು ಬರಲಿ) ಎಂಬ ಸುಭಾಷಿತದಂತೇ ಅರಿವನ್ನು ಹೆಚ್ಚಿಸಿಕೊಳ್ಳಲು ಮೂರಲ್ಲ ಮುನ್ನೂರು ಭಾಷೆ ಕಲಿತರೂ ಕಡಿಮೆಯೇ. ಹಾಗೆಂದು ಅದು ಒತ್ತಾಯದಲ್ಲಿರಬಾರದು. ಆಯ್ಕೆ ನಮ್ಮದಾಗಿರಬೇಕು. ಅವಶ್ಯಕತೆ ಮತ್ತು ಅಗತ್ಯತೆ ಆಸಕ್ತಿಗಿಂತ ಪ್ರಬಲವಾದದ್ದು. ಅವಶ್ಯಕತೆ ಮತ್ತು ಅಗತ್ಯತೆಯನ್ನು ಹುಟ್ಟುಹಾಕಬೇಕು ಮತ್ತು ಅದು ಅಭಿಮಾನದಿಂದ (ದುರಭಿಮಾನವಲ್ಲ) ಮಾತ್ರ ಸಾಧ್ಯ. ಕನ್ನಡ ಕಲಿಕೆ ಅನಿವಾರ್ಯ ಮತ್ತು ಅದು ನಮ್ಮ ಅಗತ್ಯತೆ ಹಾಗೂ ಬದ್ಧತೆ ಎಂಬ ಮನೋಭಾವ ಕನ್ನಡಿಗರಲ್ಲಿ ಬರಬೇಕು. ಹಾಗೆ ಬಂದಾಗ ಮಾತ್ರ ಪ್ರೀತಿಯಿಂದ ಮಕ್ಕಳೂ ಕಲಿಯಲು ಸಾಧ್ಯ. ಆ ವಾತಾವರಣ ಈಗ ಮನೆಯಲ್ಲಿ ಮತ್ತು ಶಾಲೆಯಲ್ಲಿ ಇದೆಯೇ?
ಕಲಿಕೆ ಹೇರುವಂತಿರಬಾರದು ನಿಜ.. ಹಾಗೆಂದು ಭಾಷಾ ಹೇರಿಕೆಯನ್ನು ಗಣಿತ, ಸಮಾಜವಿಜ್ಞಾನ ಇನ್ನಿತರ ಪಠ್ಯಕ್ಕೆ ಹೋಲಿಸಲಾಗದು. ಕಾರಣ, ಅವುಗಳನ್ನು ಅವಶ್ಯ ಬಂದಾಗ ಕಲಿಯಲು ಸಾಧ್ಯವೇ? ಒಂದು ಹಂತದವರೆಗಾದರೂ ಸರಿಯೇ.. ಶಿಕ್ಷಕರು ಮತ್ತು ಪಾಲಕರು ಸೇರೆ ‘ನೋಡಿ ಮಕ್ಕಳೆ ಹೀಗೆಲ್ಲಾ ವಿಷಯಗಳಿವೆ… ಯಾವುದರಲ್ಲಿ ನಿಮಗೆ ಆಸಕ್ತಿ ಎಂದು ಕಂಡುಕೊಳ್ಳಿ’ ಎಂದೆನ್ನಲಾದರೂ ಅವನ್ನೆಲ್ಲಾ ಹರವಿ ಅವರ ಮುಂದೆ ಹಿಡಿದು ಶಿಕ್ಷಕರು ಕಲಿಸಲೇಬೇಕಾಗುತ್ತದೆ. ಅದೇ ಪ್ರಸ್ತುತ ಹತ್ತನೆಯ ತರಗತಿಯವರೆಗೂ ಆಗುತ್ತಿರುವುದು. ಆದರೆ ಇಲ್ಲೂ ಸಮಸ್ಯೆಯಿದೆ. ಎಂಟನೆಯ ತರಗತಿಯ ಹೊತ್ತಿಗೇ ಇಂದಿನ ಎಷ್ಟೋ ಮಕ್ಕಳಿಗೆ ತಮ್ಮ ಆಸಕ್ತಿಯನ್ನು ಕಂಡುಕೊಳ್ಳಲು ಸಾಧ್ಯವಿರುತ್ತದೆ. ಎಷ್ಟೋ ಮಕ್ಕಳಿಗೆ ಗಣಿತ, ವಿಜ್ಞಾನ ಇಷ್ಟವಿರುವುದೇ ಇಲ್ಲ. ಆದರೆ ಅವರು ಭಾಷಾ ಕಲಿಕೆಯಲ್ಲು ಮುಂದಿರುತ್ತಾರೆ. ಇನ್ನು ಕೆಲವರು ಇದರ ವಿರುದ್ಧ. ಹೀಗಾಗಿ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತಿದೆ. ಇನ್ನು ನಮ್ಮ ಇಂದಿನ ಶಿಕ್ಷಣದ ಗುಣಮಟ್ಟ ಹೇಗಿದೆ? ಶೈಕ್ಷಣಿಕ ವ್ಯವಸ್ಥೆ ಹೇಗೆ ಅಸ್ತವ್ಯಸ್ತವಾಗಿದೆ? ಎಂಬುದೆಲ್ಲಾ ಬೇರೆಯ ವಿಷಯ ಬಿಡಿ. ಆದರೆ ಸಮಾಜವಿಜ್ಞಾನ, ವಿಜ್ಞಾನ, ಗಣಿತದಂಥ ಪಠ್ಯಗಳನ್ನು ಒಬ್ಬರೇ ಕಲಿಯುವುದು ಕಷ್ಟ ಆದರೆ ಭಾಷೆಯನ್ನು ನಾವು ಯಾವುದೇ ಸಮಯದಲ್ಲೂ ಒಬ್ಬಂಟಿಯಾಗಿಯೂ ಕಲಿಯಬಹುದು. ಉದಾಹಣೆಗೆ…
ನನ್ನ ಮಗಳು ತನ್ನ ಮಾವನಿಂದ ಮಾಹಿತಿ ಪಡೆದು ಟ್ಯಾಬ್ಲೆಟ್ಟಿನಲ್ಲಿ ಈಗ ಅದ್ಯಾವುದೋ ಹೊಸ ಆಪ್ ಅನ್ನು ಹಾಕಿಸಿಕೊಂಡು ಕಲಿಯುತ್ತಿದ್ದಾಳೆ. ಅದೇನೋ ಡ್ಯುವೆಲ್ ಲ್ಯಾಗ್ವೆಂಜ್ ಲಿಂಕ್ ಅಂತೆ (Duolingo)… ಅದರಲ್ಲಿ ಜಗತ್ತಿನ ಯಾವುದೇ ಭಾಷೆಯನ್ನು ಸುಲಭದಲ್ಲಿ ನಾವು ಕಲಿಯಬಹುದು. ಸದ್ಯ ಅದೇನೋ ಜರ್ಮನ್ ಪದಗಳನ್ನು ಹೇಳಿ ನನ್ನ ಬೆರಗಾಗಿಸುತ್ತಿದ್ದಾಳೆ. ಟೆಕ್ನಾಲಜಿಯನ್ನು ನಾವು ಬಳಸಿಕೊಳ್ಳಬೇಕು ಅದು ನಮ್ಮನ್ನಲ್ಲ. ಈ ಮೂಲಕ ನಾವು ಭಾಷೆಯನ್ನು ಮಕ್ಕಳಿಗೆ ಅವರಿಗೆ ಬೇಕಾದಾಗ ಬೇಕಾದ ರೀತಿಯಲ್ಲೇ ಕಲಿಸಬಹುದು. ಕಲಿಕೆ ಇಷ್ಟದ್ದಾದಾಗ ಸುಲಭ.. ಕಷ್ಟದ್ದಾದರೆ, ಹೇರಿಕೆಯಾದರೆ ಕಷ್ಟ. ಈ ನಿಟ್ಟಿನಲ್ಲಿ ನಾನು ಈ ಭಾಷೆಯನ್ನು ನೀನು ಕಲಿಯಲೇಬೇಕು ಎಂದು ಯಾರಿಗೂ ಹೇರುವುದನ್ನು ಇಷ್ಟಪಡುವುದಿಲ್ಲ. ಅವರು ಕಲಿಯಲಿ ಅಥವಾ ಬಿಡಲಿ.. ಆ ಭಾಷೆಗೆಂದೂ ನಷ್ಟವಲ್ಲ. ಅದನ್ನು ಬಳಸದೇ ಇಟ್ಟರೆ ಅದು ನಮ್ಮ ಪಾಲಿಗೆ ನಶಿಸುವುದೇ ವಿನಃ ಅದು ಇದ್ದಲ್ಲೇ ಇದ್ದಿರುತ್ತದೆ ಅಷ್ಟೇ. ಸದ್ಯ ನಮ್ಮಲ್ಲಿ ಸ್ವಲ್ಪವಾದರೂ ಕನ್ನಡ ಉಳಿದುಕೊಂಡಿದ್ದರೆ ಅದು ಹಳ್ಳಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವ ಸರಕಾರಿ ಶಾಲೆಗಳಿಂದ ಮತ್ತು ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳಿಕೊಡುತ್ತಿರುವ ನೈಜ ಕಳಕಳಿಯುಳ್ಳ ಬಾಯೋರು ಮತ್ತು ಅಕ್ಕೋರುಗಳಿಂದ.(ನಗರಗಳಲ್ಲಿ ಅಂತಹ ಶಿಕ್ಷರಿಲ್ಲವೇ ಇಲ್ಲ ಎಂದು ಖಂಡಿತ ಹೇಳುತ್ತಿಲ್ಲ. ಆದರೆ ಅವರ ಸಂಖ್ಯೆ ಬಹಳ ಕಡಿಮೆಯಿದ್ದಿರುತ್ತದೆ.)
ಶ್ರೇಷ್ಠತೆಯ ವ್ಯಸನ ಹಿಡಿದರೆ ಅದಕ್ಕೆ ಮದ್ದು ಕಷ್ಟ. ಅದೇ ಈಗ ಎಲ್ಲಾ ರೋಗಕ್ಕೂ ಕಾರಣ ಎಂದೆನಿಸಿಬಿಟ್ಟಿದೆ. ಕನ್ನಡವೊಂದೇ ಶ್ರೇಷ್ಠ.. ಸಂಸ್ಕೃತವೇ ಮುಖ್ಯ ಅಥವಾ ಹಿಂದಿಯೇ ದೇಶ ಬೆಸೆವ ಭಾಷೆ ಎಂಬಿತ್ಯಾದಿ ವಿಶೇಷಗಳಿಂದ ಹೀಗಾಗಿದೆ. (ಆದರೂ ಈಗಿನ ಶೋಚನೀಯ ಪರಿಸ್ಥಿತಿ ನೋಡಿದಾಗ ಕನ್ನಡವೇ ಶ್ರೇಷ್ಠ ಎಂಬ ಭಾವ ಬಲವಾಗಿದ್ದರೂ ಉಳಿಯುತ್ತಿತ್ತೇನೋ ಎಂದು ಎಷ್ಟೋ ಸಲ ರೋಸಿ ಅನ್ನಿಸಿದ್ದಿದೆ.) ಕನ್ನಡ ಕರ್ನಾಟಕಕ್ಕೆ ಅತ್ಯಗತ್ಯ ಅದು ನಮ್ಮ ನಾಡಿನ ದ್ಯೋತಕ.. ಅಸ್ತಿತ್ವ ಎಲ್ಲವೂ ಸರಿ ಮತ್ತು ನಿಜವೂ ಹೌದು. ಆದರೆ, ನಮ್ಮದೇ ರಾಜ್ಯದ ಭಾಷೆಯನ್ನು ಇಲ್ಲಿ ಓದುವ ಮಕ್ಕಳು ಕಲಿತರೆ ಮಾತ್ರ ಇಲ್ಲಿ ವ್ಯವಹಾರ ಸಾಧ್ಯ ಎನ್ನುವ ವಾತಾವರಣ ಇದೆಯೇ? ಊಹೂಂ.. ಹಿಂದಿ ಹೋಗಲಿ ಬಿಡಿ.. ಇಂಗ್ಲೀಶ್ ಗೊತ್ತಿದ್ದರೆ ಸಾಕಲ್ಲ ಎಂಬ ಭಾವ ಬಂದಾಗಿಬಿಟ್ಟಿದೆ. ಇದನ್ನು ನಾವಿನ್ನೂ ಸಂಪೂರ್ಣ ರಿವರ್ಸ್ ಮಾಡಿ ಸರಿಮಾಡಲು ಸಾಧ್ಯವೇ? ಇಂಗ್ಲೀಶ್ ಗೊತ್ತಿಲ್ಲದವ ಬೆಂಗಳೂರಿನಲ್ಲಿ ಸರಾಗವಾಗಿ ಜೀವನ ಮಾಡುವುದು ಸಾಧ್ಯವೇ? ಕನ್ನಡ ಗೊತ್ತಿದ್ದರೆ ಮಾತ್ರ ಸಾಕೇ? ಕನ್ನಡ ವಾಹಿನಿಗಳು, ಸುದ್ದಿವಾಹಿನಿಗಳು, ಬಿತ್ತರಿಸಲ್ಪಡುವ ಜಾಹೀರಾತುಗಳು ಎಷ್ಟು ಕನ್ನಡ ಪದಗಳನ್ನು ಬಳಸುತ್ತಿವೆ? ಪರಿಸ್ಥಿತಿಯ ಕಟು ವಾಸ್ತವಿಕತೆ ಅರಿತು ಪರಿಹಾರ ಹುಡುಕಬೇಕೇ ವಿನಃ ಹೀಗಾಗಲೇ ಬೇಕು.. ಹಾಗಾಗದಿದ್ದರೆ ಅಷ್ಟೇ ಎಂಬ ಬೆದರಿಕೆ ಬರೀ ಹುಸಿ ಬೊಬ್ಬೆಯಾಗಷ್ಟೇ ಉಳಿದುಬಿಡುತ್ತದೆ.
ಹೋಗಲಿ.. ಈಗಿನ ಬಹುತೇಕ ಸಿಬಿಎಸ್ಸಿ ಶಾಲೆಗಳಲ್ಲಿರುವ ರೂಲ್ಸ್ ಎಷ್ಟು ಜನರಿಗೆ ಅದರಲ್ಲೂ ಹೆತ್ತವರಿಗೆ ಗೊತ್ತು? ಎಂಟನೆಯ ತರಗತಿಯ ನಂತರ ಮೂರನೆಯ ಭಾಷೆಯೇ ಓದಲು ಇರುವುದಿಲ್ಲ. ಅಂದರೆ ಒಂಭತ್ತನೆಯ ಮತ್ತು ಹತ್ತನೆಯ ತರಗತಿಯವರಿಗೆ ಮೂರನೇ ಭಾಷೆಯಾಗಿ ಅವರೇನು ತೆಗೆದುಕೊಂಡಿರುತ್ತಾರೋ ಅದು ಇಲ್ಲವೇ ಇಲ್ಲ. ಹೀಗಿರುವಾಗ ಕನ್ನಡ ಮೂರನೇ ಭಾಷೆಯಾಗಿ ತೆಗೆದುಕೊಂಡವರು ಐದನೆಯ ತರಗತಿಯಿಂದ ಅ, ಆ, ಇ ಕಲಿತು ಎಂಟರವರೆಗೆ ಅಂತೂ ಹೆಕ್ಕಿ ಓದಲು ಶುರುಮಾಡುವ ಹೊತ್ತಿಗೆ ಅಲ್ಲಿಗೇ ಸ್ಟಾಪ್! ಅದಕ್ಕೆ ಕಾರಣವೂ ಇಲ್ಲದಿಲ್ಲ.. ಒಂಭತ್ತಿರಿಂದ ಪಠ್ಯಗಳ ವಿಸ್ತಾರ ಜಾಸ್ತಿಯಾಗುತ್ತಾ ಹೋಗಿ ಓದುವಿಕೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಮಕ್ಕಳ ಮೇಲೆ ಭಾರ ಬೀಳಬಾರದಂದು ಒಂದು ಭಾಷೆಯೇ ಔಟ್ ಆಗಿಸಿದ್ದಾರೆ. ಅಂದರೆ ಯಾವುದೇ ಭಾಷೆಯಿರಲಿ ಅದರ ಮಹತ್ವ ಎಲ್ಲಿಗೆ ಬಂದುಮುಟ್ಟಿದೆ ಎಂದು ನೀವೇ ಆಲೋಚಿಸಿ!
ಭಾಷೆಯಲ್ಲೂ ರಾಜಕೀಯವೇ ಎಂದು ಹುಬ್ಬೇರಿಸದಿರಿ.. ಈಗ ಎಲ್ಲೆಡೆ ಬರೀ ತುಂಬಿಕೊಳ್ಳುತ್ತಿರುವುದು ರಾಜಕೀಯವೊಂದೇ. ಭಾಷೆಯಲ್ಲೂ ಅದು ಸೇರುತ್ತಿದೆ ಎನ್ನುವುದು ವಿಷಾದಕರ. ನಮ್ಮ ರಾಜ್ಯ ಸರ್ಕಾರ (ಈ ಮೊದಲು ಇದ್ದಿದ್ದು.. ಈಗಿರುವುದು ಎಲ್ಲವೂ.. ಇದಕ್ಕೂ ಮತ್ತೆ ರಾಜಕೀಯ ಸೇರಿಸಬೇಡಿ.. ಸೇರಿಸಿದರೆ ನಿಮ್ಮ ಕರ್ಮ!) ಕನ್ನಡದ ಉಳಿವಿಗೆ ಎಷ್ಟು ಶ್ರಮಿಸುತ್ತಿದೆ? ನರ್ಸರಿಯಿಂದಲೇ ಕನ್ನಡ ಕಲಿಕೆ ಪ್ರತಿ ಶಾಲೆಯಲ್ಲೂ (ಪ್ರೈವೇಟ್ ಶಾಲೆಗಳನ್ನೂ ಸೇರಿಸಿ) ಕಡ್ಡಾಯ ಎಂಬ ನಿಯಮ ಜಾರಿಯಲ್ಲಿ ತರಲಾಯಿತೇ? ಹೋಗಲಿ ಕಾನೂನು ಮಾಡಿದರು ಎಂದೇ ಇಟ್ಟುಕೊಳ್ಳೋಣ. ಆದರೆ ಅದಕ್ಕೆ ಬೇಕಾದ ತಕ್ಕ ಸಿದ್ಧತೆಯಿದೆಯೇ? ಪಠ್ಯ ರಚನೆಯ ಸಮಿತಿ ಅಷ್ಟು ಸಶಕ್ತವಾಗಿದೆಯೇ? ಒಳ್ಳೆಯ ಶಿಕ್ಷರ ಲಭ್ಯವಿದೆಯೇ? ಕನ್ನಡ ಪಠ್ಯಗಳ ತಯಾರಿಕೆಯಲ್ಲಿ ಎಷ್ಟು ಬೇಕಾಬಿಟ್ಟಿಯಾಗಿವೆ ಎನ್ನುವುದನ್ನು ಅರಿಯಲು ಒಮ್ಮೆ ಶಾಲಾ ಮಕ್ಕಳ ಕನ್ನಡ ಪಠ್ಯವನ್ನೋದಿ ಸಾಕು! ನನ್ನ ಮಗಳ ಕನ್ನಡ ಪುಸ್ತಕವನ್ನೇ ನೋಡುತ್ತೇನಲ್ಲ. ನಾನು ಓದುತ್ತಿದ್ದ ಒಳ್ಳೊಳ್ಳೆಯ ಪಾಠಗಳು, ಕವಿತೆಗಳು, ಕಥೆಗಳು ಎಲ್ಲವೂ ಮಾಯ! ತಲೆಬುಡವಿಲ್ಲದ ಪಠ್ಯಗಳು.. ಮುದ್ರಣದೋಷಗಳು.. ತಪ್ಪುಗಳು… ಕವಿತೆಗಳೋ ದೇವರಿಗೇ ಪ್ರೀತಿ! ಸಿಕ್ಕಿದ್ದೇ ಮೃಷ್ಠಾನ್ನ ಎಂದು ಸ್ವೀಕರಿಸಬೇಕು ಅಷ್ಟೇ. ಮೊದಲು ಇಲ್ಲಿ ಬದಲಾವಣೆ ಆಗಬೇಕಾಗಿದೆ. ಒಳಗೆ ಹೂಳು ತುಂಬಿಕೊಂಡು ಹೊರಗೆ ಗಲೀಜಿದೆ ಎಂದರೆ ಏನು ಮಾಡೋಣ? ಮಕ್ಕಳು ಕನ್ನಡ ಪ್ರೀತಿಸುವುದಿರಲಿ.. ದ್ವೇಷಿಸದಿರಲಿ ಸಾಕು ಎಂದು ಪ್ರಾರ್ಥಿಸಬೇಕಾಗಿದೆ ಈಗ. ಕನಿಷ್ಟ ಅಂತಹ ವಾತಾವರಣವನ್ನಾದರೂ ನಾವು ಸೃಷ್ಟಿಸದಿರೋಣ. ಯಾರೆಷ್ಟೇ ಹೇಳಲಿ ಕನ್ನಡ ಭಾಷೆ ಮೂಲೆಗುಂಪಾಗಲು ಶುರುವಾಗಿ .... ಅದು ಹಾಗೇ ಆಗಿ ದಶಕಗಳೇ ಆಗಿವೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಪ್ರೈವೇಟ್ ಇಂಗ್ಲೀಶ್ ಮಾಧ್ಯಮಗಳು ಆವರಿಸಿಕೊಳ್ಳತೊಡಗಿದಂತೇ ಆ ಭಾಷೆಯೂ ಹಿನ್ನಲೆಗೆ ಸರಿಯತೊಡಗಿತ್ತು. ಇದು ವಾಸ್ತವ. ಇಂಗ್ಲೀಶ್ ಗೊತ್ತಿಲ್ಲದಿದ್ದರೆ ನಾಚಿಕೆ.. ಕನ್ನಡ ಗೊತ್ತಿಲ್ಲದಿದ್ದರೆ ಹೆಮ್ಮೆ ಎನ್ನುವ ಪಾಲಕರಿಂದ ಅದು ತಳ ಹತ್ತಿಯಾಗಿದೆ ಮತ್ತು ಅಂತಹ ಒಂದು ಸಮಾಜ ಸೃಷ್ಟಿಯಾದಾಗಿನಿಂದ ಆಗಿ ಹೋಗಿದೆ. ಈಗೇನಿದ್ದರೂ ಅಳಿದುಳಿದದ್ದನ್ನು ಗುಡ್ಡೆಹಾಕುವ ಕೆಲಸವಷ್ಟೇ. ಆಶ್ಚರ್ಯವೆಂದರೆ ಈ ದುರಂತ ನಮ್ಮ ದೇಶದ ಬೇರೆ ಭಾಷೆಗಳೊಂದಿಗೆ ಆಗದಿರುವುದು! ಅಲ್ಲಿಯೂ ಇಂಗ್ಲೀಶ್ ಮೀಡಿಯಮ್ ಧಾಳಿಯಿಟ್ಟಿದ್ದರೂ ಆಯಾ ಪ್ರದೇಶದ ಭಾಷೆ ಇನ್ನೂ ಬಹಳ ಸಶಕ್ತವಾಗಿದೆ.. ಜೀವಂತವಾಗಿದೆ. ಹೀಗಿದ್ದಾಗ ಸಮಸ್ಯೆಯಿರುವುದು ನಮ್ಮಲ್ಲೇ ಹೊರತು ಬೇರೆ ರಾಜ್ಯದವರಿಂದಲೋ ಭಾಷೆಯಿಂದಲೋ ಅಲ್ಲ ಎಂದೆನಿಸುತ್ತಿದೆ!
ಇನ್ನು, ಯಾವುದೇ ಭಾಷೆಯ ಕುರಿತು ಆಸಕ್ತಿ ಇಲ್ಲದಿರುವುದು ಮತ್ತು ಅದನ್ನು ದ್ವೇಷಿಸುವುದೂ ಎರಡೂ ಬೇರೆ ವಿಷಯ. ಸಂಸ್ಕೃತವನ್ನೋ, ಹಿಂದಿಯನ್ನೋ, ಕನ್ನಡವನ್ನೋ ತೀರಾ ತುಚ್ಛವಾಗಿ ನಾವು ನಮ್ಮ ತಲೆಯಲ್ಲಿ ತುಂಬಿಕೊಂಡು ವಿಷವನ್ನೇ ಕಾರುತ್ತಾ, ಅದನ್ನೇ ನಮ್ಮ ಮಕ್ಕಳಿಗೂ ತುಂಬಿಸಿದರೆ ಅವರು ಮುಂದೆ ಮನುಷ್ಯನ ನಡುವೆ ಬೆಸೆವ, ಮನುಷ್ಯತ್ವವನ್ನು ಸಾರುವ ಕೊಂಡಿಯಾದ ಯಾವುದೇ ಭಾಷೆಯನ್ನೂ ಅರ್ಥೈಸಿಕೊಳ್ಳಲಾರರು (ಕನ್ನಡವನ್ನೂ ಕೂಡ)! ದಯವಿಟ್ಟು ಆ ಕೆಲಸ ಮಾಡದಿರಿ. ಮಗಳಿಗೆ ಹಿಂದಿ ಅಷ್ಟು ಇಷ್ಟ ಇಲ್ಲ ಎಂದು ಗೊತ್ತಾದಗ.. ಅದನ್ನೇ ಹೆಚ್ಚು ಓದಲು ಒತ್ತಾಯಿಸುವುದನ್ನು ಬಿಟ್ಟೆ. ಎಷ್ಟು ಆಗತ್ತೋ ಅಷ್ಟು ಕಲಿ.. ತಲೆಬಿಸಿ ಬೇಡ ಎಂದೆ. ಅವಳೇ ಕ್ರಮೇಣ ಆಸಕ್ತಿ ವಹಿಸಿ ಅರ್ಥೈಸಿಕೊಂಡಳು. ಅದರ ಬದಲು ಅವಳಿಷ್ಟದ ಬೇರೆ ಯಾವುದೇ ಭಾಷೆ ಇಟ್ಟಿದ್ದರೆ ಚೆನ್ನಿತ್ತು ಎಂದು ನನಗೂ ಹಲವು ಸಲ ಅನಿಸಿದ್ದಿದೆ. ಅದನ್ನೇ ಅವಳ ಮುಂದೆ ಬಹಳ ಸಲ ಹೇಳಿದ್ದರೆ ಅವಳೊಳಗೆ ಅದೇ ಗಟ್ಟಿಯಾಗಿ ಆ ಭಾಷೆಯ ಕುರಿತು ಅಸಡ್ಡೆ ಬೆಳೆಯಬಹುದು ಎಂದು ಸುಮ್ಮನಾದೆ. ಮಕ್ಕಳ ಮುಂದೆ ಯಾವುದೇ ಭಾಷೆಯನ್ನಾಗಲಿ... ಅದು ತುಳು, ಕೊಂಕಣಿ, ಮರಾಠಿ, ಪಂಜಾಬಿ ಯಾವುದೇ ಇರಲಿ ಅದನ್ನು ಚೆನ್ನಾಗಿದೆ ಎಂದೇ ಹೇಳೋಣ. ಅವರಿಗೆ ಆಸಕ್ತಿಯೆನಿಸಿದರೆ ಅವರೇ ಕಲಿಯಲು ಮುಂದೆ ಬರುತ್ತಾರೆ. ಕನ್ನಡ ಕಡ್ಡಾಯವಾಗಬೇಕು ಎಂಬುದು ನನ್ನದೂ ಅಭಿಮತ. ಆದರೆ ಅದು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದೂ ಇಂಗ್ಲೀಶ್ ಈಗಾಗಲೇ ಪ್ರಬಲ ರಾಜ್ಯ ಸ್ಥಾಪನೆ ಮಾಡಿ.. ಶಿಕ್ಷಣ ವ್ಯವಸ್ಥೆಯೆಂದರೆ ಹೈಯರ್ ಎಜ್ಯಿಕೇಶನ್ನಿಗಿರುವ ಮೆಟ್ಟಿಲು ಎಂದಷ್ಟೇ ಆಗಿರುವ ಹೊತ್ತಲ್ಲಿ.. ಭಾಷೆಯ ಕಲಿಕೆ ಹತ್ತನೆಯ ತರಗತಿಯವರೆಗೆ ಅಂಕಗಳಿಗಷ್ಟೇ ಸೀಮಿತವಾಗಿದ್ದರೆ ಸಾಕು ಎಂಬ ಉದಾಸೀನ ಭಾವ ಬೇರುಬಿಟ್ಟಿರುವಾಗ ಖಂಡಿತ ಬಹಳ ಕಷ್ಟ.. ಕಾರಣ ಇದಕ್ಕೆ ಪಾಲಕರು ಮನಸ್ಸು ಮಾಡಬೇಕು… ಮತ್ತು ಇದು ಮೊತ್ತಮೊದಲು ಮಹಾನಗರವಾದ ಬೆಂಗಳೂರಿನಿಂದಲೇ ಆರಂಭವಾಗಬೇಕಾಗುತ್ತದೆ. ನಾವು ಆದಷ್ಟು ನಮ್ಮ ಮನೆಯಲ್ಲಿ ಮಕ್ಕಳಿಗೆ ನಮ್ಮ ಪ್ರಾದೇಶಿಕ ಭಾಷೆ ಕಲಿಸೋಣ.. ಅದು ತುಳುವೇ ಆಗಿರಲಿ, ಕೊಂಕಣಿಯಿದ್ದಿರಲಿ, ಹವ್ಯಕವಾಗಿರಲಿ.. ಕನ್ನಡದ ಜೊತೆ ಬೆಸೆಯೋಣ. ಉಳಿದದ್ದನ್ನು ಅವರೇ ಈ ಕೊಂಡಿಯ ಮೂಲಕ ಕಲಿಯುತ್ತಾ ಹೋಗುತ್ತಾರೆ. ಮತ್ತೊಮ್ಮೆ ಹೇಳುವೆ.. ಕಲಿಕೆ ಹೇರಿಕೆಯಾಗದಿರಲಿ… ಅದು ಯಾವುದೇ ಭಾಷೆಯಿರಲಿ. ನೆನಪಿರಲಿ.. ಕನ್ನಡವನ್ನೂ ಓದಲು ಇಷ್ಟಪಡದ ಮಕ್ಕಳಿದ್ದಾರೆ! ನಾನೇ ನೋಡಿದ್ದೇನೆ. ಪಾಲಕರು ಒತ್ತಾಯಿಸಿದರೂ ಅವರಿಗೆ ಮನಸ್ಸಿರೋದಿಲ್ಲ. ಆಗ ಅದನ್ನು ತುರುಕಿಸಲು ಸಾಧ್ಯವೇ? ಸಂಧಿ, ಸಮಾಸ, ಪ್ರಬಂಧ ಬರೆಯೋದು, ವ್ಯಾಕರಣ ಎಲ್ಲವನ್ನೂ ಕಹಿ ಮಾತ್ರೆಯಂತೇ ಓದುತ್ತಾರೆ.. ಬೈಯ್ದುಕೊಂಡು ಶಾಪಹಾಕಿ ಓದುವವರನ್ನೂ ನೋಡಿದ್ದೇನೆ. (ನನ್ನ ಕಾಲದಲ್ಲೂ ಇದ್ದರು ಆದರೆ ಆಗ ಅಂಥವರು ಕಡಿಮೆಯಿದ್ದರು.. ಈಗ ಅಂಥವರೇ ಹೆಚ್ಚಿದ್ದಾರೆ) ಇದಕ್ಕೆ ಕಾರಣ ಯಾರು? ಅದನ್ನು ಆಸಕ್ತಿಕರವಾಗಿ ಪುಸ್ತಕದಲ್ಲಿ ಅಳವಡಿಸದ ಶಿಕ್ಷಣ ವ್ಯವಸ್ಥೆಯೋ ಅಥವಾ ಅದನ್ನು ಆಸಕ್ತಿಕರವಾಗಿ ಮಕ್ಕಳಿಗೆ ಕಲಿಸಲು ಸೋಲುತ್ತಿರುವ ಶಿಕ್ಷಕರೋ ಇಲ್ಲಾ ಮಕ್ಕಳೊಂದಿಗೆ ಕುಳಿತ ಕನಿಷ್ಟ ಅರ್ಧಗಂಟೆಯಾದರೂ ಅವರೊಂದಿಗೆ ಅವರ ಸಮಸ್ಯೆ ಚರ್ಚಿಸಿ ತಿಳಿಯದ ಹೆತ್ತವರೋ!
ಕನ್ನಡದ ಅವಗಣನೆಗೆ ಕಾರಣ ಇವಿಷ್ಟಲ್ಲದೇ ಇನ್ನೂ ಹಲವಿವೆ… ಅದು ಸರಿಪಡಿಸಲಾಗದಷ್ಟು ಈಗಾಗಲೇ ತಳ ಹಿಡಿದಾಗಿದೆ. ಭಾಷಾಭಿಮಾನ ಎಂಬುದು ಒಗ್ಗಟ್ಟಿನಲ್ಲಿ ಬರಬೇಕು… ಮತ್ತು ಅದು ಎಳವೆಯಿಂದಲೇ ಆಗಬೇಕು. ಇದನ್ನು ಬಿಟ್ಟು ಇನ್ನೂ ಬೇರೆ ಯಾವುದೇ ಆಯಾಮವಿದ್ದರೂ (ಧನಾತ್ಮಕ) ಅದನ್ನೂ ಗೌರವಿಸುವೆ. ಕಾರಣ, ಪ್ರತಿಯೊಬ್ಬರೂ ತಮ್ಮದೇ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಇದು ಸರಿ ಇದು ತಪ್ಪು ಎಂದು ನೇರಾನೇರ ಹೇಳಲು ಎಲ್ಲರ ಅನುಭವವೂ ಒಂದೇ ರೀತಿಯಾಗಿರದು. ಆದರೂ ಕಟ್ಟಕಡೆಯದಾಗಿ ನನ್ನಲ್ಲಿ ಏಳುವ ಪ್ರಶ್ನೆ ಏನೆಂದರೆ ಹಿಂದಿ ಭಾಷೆಯನ್ನು ಕಡ್ಡಾಯ ಮಾಡುವುದು ಸರಿಯಲ್ಲ ಒಪ್ಪುವೆ. ಆದರೆ ಅದನ್ನು ತಪ್ಪಿಸುವುದರಿಂದ ಕನ್ನಡ ಭಾಷೆಯ ಏಳಿಗೆ, ಉಳಿವು ಎಷ್ಟು ಸಾಧ್ಯ ಎಂಬುದು! ತಳ ಹಿಡಿಯುತ್ತಿರುವ ಕನ್ನಡ ಭಾಷೆಯ ಪುನರುತ್ಥಾನಕ್ಕೆ ನಾವೆಷ್ಟು ಕೊಡುಗೆ ಕೊಡಬಲ್ಲೆವು ಮತ್ತು ಕೊಡುತ್ತಿದ್ದೇವೆ ಎಂಬುದು.
ಇಷ್ಟೆಲ್ಲಾ ಗಲಾಟೆಯ ನಡುವೆಯೂ  ಅಲ್ಪ ಸಮಾಧಾನವೆಂದರೆ…. ಈ ಹಿಂದಿ ಹೇರಿಕೆಯೆಂಬ ಸುದ್ದಿ ಹರಡಿದ್ದರಿಂದ, ತಲೆಚಿಟ್ಟು ಹಿಡಿವಷ್ಟು ಹೇರಲ್ಪಡುತ್ತಿದ್ದ ರಾಹುಲ, ಮೋದಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬೆಲ್ಲಾ ರಾಜಕೀಯ ಪೋಸ್ಟುಗಳಿಂದ ಸಾಮಾಜಿಕ ಜಾಲತಾಣಕ್ಕೆ ತಾತ್ಕಾಲಿಕವಾಗಿ ಮುಕ್ತಿ ಸಿಕ್ಕಿದ್ದು!

#ಭಾಷಾಪ್ರೇಮ
#ಕನ್ನಡ_ಹಿಂದಿ_ಸಂಸ್ಕೃತ

~ತೇಜಸ್ವಿನಿ ಹೆಗಡೆ

ಮಂಗಳವಾರ, ಮೇ 14, 2019

ರಕ್ತಸಿಕ್ತ ರತ್ನ

"ದೇಶ ಸುತ್ತು, ಕೋಶ ಓದು" - ಎಂಬ ಗಾದೆಮಾತು ಎಲ್ಲರಿಗೂ ಗೊತ್ತಿದ್ದದ್ದೇ. ನಾವೆಷ್ಟು ಊರೂರು ತಿರುಗುತ್ತೇವೋ ಅಷ್ಟೂ ಸ್ವಾನುಭವ ಹೆಚ್ಚಾಗುತ್ತದೆ. ಅಂತೆಯೇ ನಾವು ಹೆಚ್ಚೆಚ್ಚು ಓದಿದಷ್ಟೂ ಬೇರೆಬೇರೆ ಊರಿನ, ಅಲ್ಲಿಯ ಜನಜೀವನದ ಪರಿಚಯವಾಗುತ್ತಾ ಹೋಗುತ್ತದೆ. ಒಂದೊಮ್ಮೆ ದೇಶವಿದೇಶ ಸುತ್ತಲಾಗದಿದ್ದರೂ ಸರಿಯೇ… ಪುಸ್ತಕಗಳ ಮೂಲಕ ಜ್ಞಾನದ ಕೋಶವನ್ನು ಕಟ್ಟಿಕೊಳ್ಳಬಹುದು. ಈ ನಿಟ್ಟಿನಲ್ಲಿ ಹಲವು ಕಾದಂಬರಿಗಳು, ಪುಸ್ತಕಗಳು ನಮಗೆ ಬಹಳ ಸಹಕಾರಿ. ಅಂಥದ್ದೇ ಒಂದು ಅಪರೂಪದ ಕಾದಂಬರಿ ಡಾ.ಕೆ.ಎನ್.ಗಣೇಶಯ್ಯನವರ ‘ರಕ್ತಸಿಕ್ತ ರತ್ನ’. ಪ್ರಸ್ತುತ ಕಾದಂಬರಿ ಮಾತ್ರವಲ್ಲ, ಅವರ ಬಹುತೇಕ ಕಥೆಗಳು ಹಾಗೂ ಕಾದಂಬರಿಗಳೂ ಕಥೆಯ ನೇಯ್ಗೆಯೊಳಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ತೆರೆದಿಡುತ್ತವೆ. ಕರಿಸಿರಿಯಾನ, ಕನಕ ಮುಸುಕು, ಪದ್ಮಪಾಣಿ, ಶಾಲಭಂಜಿಗೆ, ಕಪಿಲಿಪಿಸಾರ – ಇವಿಷ್ಟನ್ನು ಸದ್ಯ ಓದಿದ್ದು, ಉಳಿದ ಪುಸ್ತಕಗಳನ್ನು ಒಂದೊಂದಾಗಿ ಓದಲು ತೆಗೆದಿಟ್ಟಿದ್ದೇನೆ.

‘ರಕ್ತಸಿಕ್ತ ರತ್ನ’- ಈ ಕಾದಂಬರಿಯನ್ನೋದುತ್ತಿರುವಾಗ ನನಗೆ ಥಟ್ಟನೆ ನೆನಪಿಗೆ ಬಂದಿದ್ದು ಎರಡು ವಿಷಯಗಳು! ಒಂದು `ಬ್ಲಡ್ ಡೈಮಂಡ್' ಎಂಬ ಪ್ರಸಿದ್ಧ ಇಂಗ್ಲೀಶ್ ಚಲನಚಿತ್ರ ಮತ್ತೊಂದು ನನ್ನದೇ ಒಂದು ಬಾಲ್ಯದ ಘಟನೆ.
ಬ್ಲಡ್ ಡೈಮೆಂಡ್ ಚಿತ್ರದಲ್ಲೂ ಅಷ್ಟೇ…. ವಜ್ರದ ಆಸೆಗೋಸ್ಕರ ಅದೂ ತಿಳಿ ರಕ್ತವರ್ಣದೊಂದು ಅಪರೂಪದ ಒಂದು ವಜ್ರದ ಹಿಂದೆ ಬಿದ್ದು ಮನುಷ್ಯತ್ವ ಹೇಗೆ ಪಶುಗಿಂತ ಕಡೆಯಾಗಿಬಿಡುತ್ತದೆ… ಸಣ್ಣ ಗುಲಗುಂಚಿ ಗಾತ್ರದ ವಜ್ರದ ಹಿಂದೆಯೂ ಅದೆಷ್ಟೆಲ್ಲಾ ರಕ್ತ ಹರಿಸುವಿಕೆ ಇದ್ದಿರುತ್ತದೆ ಎಂಬುದನ್ನು ಮನಮುಟ್ಟುವಂತೇ ತೋರಿಸಲಾಗಿದೆ.
ಇನ್ನು ಬಾಲ್ಯದಲ್ಲಿ ನಡೆದ ಒಂದು ಘಟನೆಯ ಕುರಿತು… - ಚಿಕ್ಕಂದಿನಿಂದಲೂ ನನಗೆ ಬಣ್ಣಬಣ್ಣದ ಹರಳುಗಳು, ವಿವಿಧ ವಿನ್ಯಾಸದ ಕಲ್ಲುಗಳನ್ನು ಒಟ್ಟು ಹಾಕುವ ಹುಚ್ಚಿತ್ತು.. (ಈಗಲೂ ಏನೂ ಕಡಿಮೆ ಆಗಿಲ್ಲ! ವಸುಧೇಂದ್ರ ಅನುವಾದಿಸಿದ ಮಿಥುನ ಕಥಾ ಸಂಕಲನದಲ್ಲಿ ಬರುವ ‘ನೀಲಿ ಸೋಡಾಗೋಲಿ’ ಕಥೆ ಓದಿ ಒಂದುಡೀ ವಾರ ಕಳೆದುಹೋಗಿದ್ದೆ. ಬಾಲ್ಯದಿಂದಲೂ ನಾನು ಹುಡುಕುತ್ತಿದ್ದುದೇ ನೀಲಿ ಸೋಡಾಗೋಲಿಯಾಗಿದ್ದು, ಅದಿನ್ನೂ ನನ್ನ ಖಜಾನೆ ಸೇರಿಲ್ಲವೆಂಬ ಬೇಜಾರು ಕಥೆ ಓದಿ ಮತ್ತೂ ಹೆಚ್ಚಾಗಿತ್ತು).
ನಾನಾಗ ಐದನೆಯ ತರಗತಿಯಲ್ಲಿದ್ದೆ. ಗೆಳತಿಯೋರ್‍ವಳು ನನಗೆ ಹೆಬ್ಬೆರಳಿನ ಗಾತ್ರದ ಕೆಂಪು ಹರಳೊಂದು ಕೊಟ್ಟಿದ್ದಳು. ಅದೆಷ್ಟು ಖುಶಿಪಟ್ಟಿದ್ದೆ ಎಂದರೆ… ಅದೆಲ್ಲಿ ಕಳೆದು ಹೋಗಿಬಿಡುವುದೋ ಎಂದು ನಾನು ಮತ್ತು ತಂಗಿ ಸೇರಿ ಮನೆಯ ಹಿತ್ತಲಿನ ಪೊಪ್ಪಾಯಿ ಗಿಡದ ಬುಡದಲ್ಲಿ ಹೂತುಬಿಟ್ಟಿದ್ದೆವು. ಅದಾದ ಒಂದು ವಾರಕ್ಕೇ ಕಾರಣಾಂತರಗಳಿಂದ ಮನೆ ಬಿಟ್ಟು ಬೇರೆ ಕಡೆ ಶಿಫ್ಟ್ ಆಗುವ ಗಡಿಬಿಡಿಯಲ್ಲಿ ಅದನ್ನಲ್ಲಿಂದ ತೆಗೆಯಲೇ ಮರೆತು ಆಮೇಲೆ ಅದೆಷ್ಟೋ ಸಮಯದವರೆಗೂ ಕೊರಗುತ್ತಲೇ ಇದ್ದೆ. ಅದೆಲ್ಲಾ ನೆನಪಾಗಿದ್ದು ಪ್ರಸ್ತುತ ಕಾದಂಬರಿಯನ್ನೋದುವಾಗ!
ಇಲ್ಲಿಯೂ ಅಷ್ಟೇ. ‘ಅಂಗಾ ಮಾಕ್’ ಎಂಬ ಅಪರೂಪದ, ಅತ್ಯಮೂಲ್ಯವಾದ ರಕ್ತವರ್ಣದ ರತ್ನದ ಹಿಂದೆ ಬಿದ್ದು ಏನೇನೆಲ್ಲಾ ಬದಲಾವಣೆ, ಕ್ರಾಂತಿಗಳು ಆಗಿಬಿಟ್ಟವು ಎಂಬುದನ್ನು ೩೭೯ ಪುಟದ ಈ ಕಾದಂಬರಿ ತೆರೆದಿಡುತ್ತಾ ಹೋಗುತ್ತದೆ. ಕಾದಂಬರಿಯಲ್ಲಿ ರೋಚಕತೆ, ಪತ್ತೇದಾರಿಕೆ ಇದ್ದರೆ ಕುತೂಹಲ ಕಟ್ಟಿಕೊಂಡು ಓದಿಸಿಕೊಳ್ಳುತ್ತದೆ ನಿಜ. ಆದರೆ ಅದರ ಜೊತೆಗೆ ಇತಿಹಾಸವನ್ನು, ಚರಿತ್ರೆಯನ್ನು, ಚಾರಿತ್ರಿಕ ಘಟನೆಗಳ ವಿವರಗಳನ್ನು ಕಣ್ಣಿಗೆ ಕಟ್ಟುವಂತೇ ಚಿತ್ರಿಸಿದರೆ ಅದು ಸಂಗ್ರಹಯೋಗ್ಯವೆನಿಸಿಕೊಳ್ಳುತ್ತದೆ. ಈ ಪಾಠವನ್ನು ಗಣೇಶಯ್ಯನವರ ಅನೇಕ ಕಾದಂಬರಿಗಳು ಕಲಿಸಿವೆ… ಅದರಲ್ಲೂ ಈ ಪ್ರಸ್ತುತ ಕಾದಂಬರಿ ಹೆಚ್ಚು ಅದನ್ನು ಸ್ಪಷ್ಟಗೊಳಿಸಿದೆ.
ಈವರೆಗೂ ನನಗೆ ಒಂದಾನೊಂದು ಕಾಲದಲ್ಲಿ ನಮ್ಮದೇ ದೇಶದ ಒಂದು ಭಾಗವಾಗಿದ್ದ ಈಗ ನಮ್ಮ ಪಕ್ಕದಲ್ಲಿರುವ ‘ಬರ್ಮ’ ದೇಶದ ಕುರಿತು ಅಂಥಾ ಆಸಕ್ತಿಯಾಗಲೀ, ಕಿಂಚಿತ್ ಮಾಹಿತಿಯಾಗಲೀ ಇರಲಿಲ್ಲ. ಅದು ನಮ್ಮ ನೆರೆಯ ದೇಶ, ಬೌದ್ಧ ಧರ್ಮದವರು ಹೆಚ್ಚಿದ್ದಾರೆ, ಈಗ ಮಯನ್ಮಾರ್ ಎಂದು ಕರೆಯಲ್ಪಡುತ್ತಿದೆ ಎಂದಷ್ಟೇ ಗೊತ್ತಿತ್ತು. ಆದರೆ ಈ ಪುಸ್ತಕವನ್ನೋದುತ್ತಾ ಬರ್ಮಾದ ಪಟ್ಟಣಗಳಾದ ಮಂಡಲೆ, ಮೋಗಾಕ್, ಭಾಗನ್ ಮುಂತಾದ ಪ್ರದೇಶಗಳನ್ನು, ಹಳ್ಳಿಗಳನ್ನು, ಗುಡ್ಡ, ಪರ್ವತವನ್ನು, ಅರಮನೆಗಳನ್ನು.. ಎಲ್ಲಕ್ಕಿಂತ ಹೆಚ್ಚಾಗಿ ಪಗಾಡಗಳನ್ನು ನೋಡುವಂತಾಯಿತು. ನಡುನಡುವೆ ನನಗೆ ಆಸಕ್ತಿ ಹೆಚ್ಚಿಸಿದ ಸ್ಥಳಗಳ ಕುರಿತು, ಪಗಾಡಗಳ ಕುರಿತು ಗೂಗಲ್ ಮಾಡಿ ಅದರ ಚಿತ್ರಗಳನ್ನು, ಇನ್ನಷ್ಟು ವಿವರಗಳನ್ನು ಓದುವಂತಾಯಿತು. ಪಗೋಡದ ಪ್ರಮುಖ ಭಾಗಗಳು ಅದರಲ್ಲೂ ತುತ್ತ ತುದಿಯ ‘ಹಿತಿ ಮತ್ತು ಅದರೊಳಗಿನ ಮಹತ್ವ, ಅಲ್ಲಿಯ ಧಾರ್ಮಿಕ ನಂಬಿಕೆಗಳು, ಬೌದ್ಧ ಗುರುಗಳಿಗಿರುವ ಪ್ರಾಮುಖ್ಯತೆ ಎಲ್ಲವೂ ತೆರೆದುಕೊಳ್ಳುತ್ತಾ ಹೋಯಿತು. ಅಲ್ಲದೇ, ಅಲ್ಲಿಯ ಕೊನೆಯ ರಾಜ ತೀಬಾ ಹಾಗೂ ಆತನ ಪತ್ನಿ ಸುಫಲಾಯತ್ ತಮ್ಮ ಕೊನೆಯ ದಿನಗಳನ್ನು ತಮ್ಮ ದೇಶ, ಜನರಿಂದ ದೂರಾಗಿ, ಭಾರತದ ರತ್ನಗಿರಿ ಅರಮನೆಯಲ್ಲಿ ಅಜ್ಞಾತರಾಗಿ ಕಳೆಯಬೇಕಾಯಿತು ಎಂಬೆಲ್ಲಾ ವಿವರಗಳು, ಹಿನ್ನಲೆಗಳು ತಿಳಿಯುತ್ತದೆ. ಅಲ್ಲದೇ, ರಾಜಮನೆತನದ ಅವಸಾನಕ್ಕೆ ಒಳಗಿನ ದೇಶದ್ರೋಹಿಗಳಲ್ಲದೇ ಸ್ವತಃ ಅರಾಜಕತೆ ಹಾಗೂ ಅದಕ್ಕೆ ಕಾರಣರಾದ ಬ್ರಿಟೀಷರ ಕೊಡುಗೆ ಎಷ್ಟಿತ್ತು ಎಂಬುದೂ ತಿಳಿಯುತ್ತದೆ. ಬ್ರಿಟೀಶರ್ ಕುತ್ಸಿತ ಬುದ್ಧಿ, ದುರುಳತೆ, ದುರಾಸೆಯ ಅನಾವರಣವೂ ಮತ್ತಷ್ಟು ಆಗುತ್ತದೆ. ನಿಧಿ ಎನ್ನುವುದು ಎಂತೆಂಥವರನ್ನು ಇಳಿಸಿ ಬಿಡೂತ್ತದೆ, ಏರಿಸಿಯೂ ಬಿಡುತ್ತದೆ ಎಂಬುದಕ್ಕೆ ಬರ್ಮಾ ದೇಶದ ಅರಸುಮನೆತನದ ಕಥೆಯೇ ಸಾಕ್ಷಿ. ನಾಟಕೀಯ ಅಂಶಗಳು ಕೆಲವೊಂದಿಷ್ಟಿದ್ದರೂ, ಕಲ್ಪನೆಗಳನ್ನು ತುಂಬಿ ಕಟ್ಟಿಕೊಟ್ಟಿದ್ದರೂ ಚಾರಿತ್ರಿಕ ಘಟನೆಗಳ ಅಪರೂಪದ ಮಾಹಿತಿಗಳು, ದಾಖಲೆಗಳು ಪ್ರಮುಖ ಪ್ರದೇಶಗಳ ಚಿತ್ರಣ, ಬಿಕ್ಕುಗಳ ಜೀವನ ಎಲ್ಲವೂ ಸುಸ್ಪಷ್ಟವಾಗಿ ಚಿತ್ರಿತವಾಗಿದೆ. ಸ್ವತಃ ಲೇಖಕರೇ ಅಲ್ಲೆಲ್ಲಾ ಓಡಾಡಿ ಮಾಹಿತಿ ಸಂಗ್ರಹಿಸಿದ್ದರಿಂದ ಕಲ್ಪನೆ ಮತ್ತು ವಾಸ್ತವಿಕತೆಯ ನಡುವಿನ ಅಂತರ ಕಡಿಮೆಯಾಗಿದೆ. ಎಲ್ಲಕ್ಕಿಂತ ಮೈನವಿರೇಳಿಸುವುದು ನಾಗಾ ಪಂಥದವರ ಚಿತ್ರಣ! ಅಂತೆಯೇ ನನಗೆ ಮೋಗಾಕ್ ರತ್ನ ಗಣಿಯ ದಾರುಣ ಚಿತ್ರಣ, ಕ್ರೌರ್ಯ, ಮಾವೋದಿಗಳ ದುಷ್ಟತನ ಇವೆಲ್ಲವೂ ಅರೆಕ್ಷಣ “Lord of the ring” ಚಲನಚಿತ್ರದ Mordor ಅನ್ನು ನಪಿಸಿಬಿಟ್ಟಿತು!
ಹೀಗೆ.. ಕುತೂಹಲದೊಂದಿಗೆ ಆಸಕ್ತಿಯನ್ನು ಹುಟ್ಟಿಸಿ ತಿಳಿವನ್ನು ಹೆಚ್ಚಿಸುವಂತಿದೆ ಕಾದಂಬರಿ. ‘ರೋಚಕ ಕಾದಂಬರಿ’ ಎಂಬ ಟ್ಯಾಗ್ಲೈನ್ ಇದ್ದರೂ ನನಗೆ ರೋಚಕತೆಯ ಬದಲು ವಿಷಯದ ಕುರಿತು ಹೆಚ್ಚೆಚ್ಚು ತಿಳಿದುಕೊಳ್ಳುವತ್ತ ಗಮನ ಜಾರುತ್ತಿತ್ತು. ಎಲ್ಲಕ್ಕಿಂತ ನನ್ನ ಸೆಳೆದದ್ದು ಅಂಗ ಮಾಕ್ ರತ್ನದ ಚಿತ್ರಣ! ಅದನ್ನೊಮ್ಮೆ ಗೂಗಲ್ ಮಾಡಿ ನೋಡುವ ಆಸೆಯಾಗಿ ಸರ್ಫ್ ಮಾಡಿದರೆ.. ಅದು ತಣ್ಣಗೆ, ಬಿಮ್ಮನೆ ಬ್ರಿಟಿಶ್ ರಾಣಿಯ ಮುಕುಟದ ಮಧ್ಯ ಕಂಡಿತಪ್ಪ! ಕೂಡಲೇ ನನಗೆ ನಮ್ಮ ಕೊಹಿನೂರ್ ವಜ್ರದ ನೆನಪಾಯಿತು.
ಈ ಪುಸ್ತಕದ ಮುಖ ಪುಟದಲ್ಲಿರುವ ಕೆಂಪು ವಜ್ರದ ಚಿತ್ರ ನೋಡಿ ಆಕರ್ಷಿತಳಾಗಿ ಇದರ ಕಥೆಗಾಗಿ ಬೆನ್ನ ಹಿಂದೆ ಬಿದ್ದಿದ್ದಾಳೆ ಮಗಳು. ಇನ್ನು ಅವಳಿಗೆ ಕಥೆ ಹೇಳಬೇಕಾಗಿದೆ.
***********************************
ಲೇ: ಡಾ.ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಅಂಕಿತ ಪುಸ್ತಕ
ಪುಟ : ೩೮೪
ಬೆಲೆ: ೩೫೦/-
~ತೇಜಸ್ವಿನಿ ಹೆಗಡೆ

ಶುಕ್ರವಾರ, ಏಪ್ರಿಲ್ 5, 2019

ಜೀವಿಸುವ ಪರಿ ಎಂತು ಸ್ಪಂದನೆಯನು ಮರೆತು!


ಜೀವಿಯಲ್ಲಿ ಜೀವಂತಿಕೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಬಹು ಮುಖ್ಯವಾಗಿ ಇರಬೇಕಾದದ್ದು ‘ಸ್ಪಂದನೆ’. ನೋವಿಗೆ, ನಲಿವಿಗೆ, ಹಸಿವಿಗೆ, ನಿದಿರೆಗೆ ಹೀಗೆ ಪ್ರತಿ ಕ್ಷಣದ ಚಲನೆಗೆ ಅತ್ಯವಶ್ಯಕ ಈ ಸ್ಪಂದನೆ. ಸ್ಪಂದಿಸುವುದನ್ನು ನಿಲ್ಲಿಸಿದ ದಿವಸವೇ ಸಾವು ಎಂದೆನ್ನುತ್ತಾರೆ. ಹೃದಯ ಮಾತ್ರ ಬಡಿತವಿದ್ದು, ದೇಹದಲ್ಲಿ ಬೇರಾವುದೇ ಚಲನೆಯಿಲ್ಲದ್ದರೆ ಅವರನ್ನು ಜೀವಚ್ಛವ ಎನ್ನಲಾಗುತ್ತದೆ. ಹೀಗಾಗಿ ‘ನಿಂತ ನೀರಲ್ಲ ಈ ಬದುಕು, ಹರಿವ ನದಿಯಂತೇ’ ಎಂದು ಹೇಳುವುದು. ಸ್ಪಂದನೆ ಕಾಲಕಾಲಕ್ಕೆ ಬದಲಾಗಬಹುದು, ಸ್ಪಂದಿಸುವ ರೀತಿ ಬದಲಾಗಬಹುದು, ಆದರೆ ಸ್ಪಂದಿಸುವುದೆಂದೂ ನಿಲ್ಲದು, ನಿಲ್ಲಲೂ ಬಾರದು! 
ಬದಲಾವಣೆ ಎನ್ನುವುದು ಜಗದ ನಿಯಮ. ಆದರೆ ಎಷ್ಟೋ ಸಲ ಬದಲಾವಣೆಯ ಕಾಲಗಣನೆಯಲ್ಲಿ ಬಹಳ ಅಂತರವಿರುತ್ತದೆ. ಕೆಲವೊಂದು ಬದಲಾವಣೆಗಳು ಕಡಿಮೆ ಕಾಲಾವಧಿಯಲ್ಲಾದರೆ, ಎಷ್ಟೋ ಸಲ ಒಂದು ಸಣ್ಣ ಬದಲಾವಣೆಗೂ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ. ಆದರೆ ಯಾವುದೇ ಬದಲಾವಣೆ ಪ್ರಕಟಗೊಂಡು ವಿಸ್ತರಿಸಲು ಬಹುಮುಖ್ಯವಾಗಿ ಬೇಕಾಗಿರುವುದು ಸ್ಪಂದನೆಯೇ. ಇಲ್ಲದಿದ್ದರೆ ಬದಲಾದದ್ದು ಯಾವುದು? ಎಲ್ಲಿ? ಹೇಗೆ? ಎಂಬಿತ್ಯಾದಿ ವಿವರಗಳೇ ದಾಖಲಾಗುವುದಿಲ್ಲ. ಮನುಷ್ಯ ಮಾತ್ರವಲ್ಲ ಸಕಲ ಜೀವಿಗಳೂ ಕಾಲ ಹೊತ್ತು ತರುವ ಈ ಬದಲಾವಣೆಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಲೇ ಇರುತ್ತವೆ. ಹೀಗಾಗಿ ಅದು ಬದಲಾಗುತ್ತಿರುವುದು ಅರಿವಿಗೆ ಬರುತ್ತದೆ. 
ಜೀವೋತ್ಪತ್ತಿಗೆ ಬಹು ಮುಖ್ಯವಾಗಿ ಬೇಕಾದದ್ದು ಕಾಲ ಮತ್ತು ಸ್ಥಳ. ಸಮಯಕ್ಕೆ ಮುನ್ನ ಮತ್ತು ಅದನ್ನು ಮೀರಿ ಯಾವುದೂ ಎಲ್ಲಿಯೂ ಹುಟ್ಟುವುದಿಲ್ಲ, ನಶಿಸುವುದೂ ಇಲ್ಲ ಎನ್ನುತ್ತಾರೆ ಪ್ರಾಜ್ಞರು. ಇಂಥ ದಿವಸ ಹಾಗೂ ಸ್ಥಳದಲ್ಲಿ ಈ ಜೀವದ ಹುಟ್ಟು ನಿಗದಿಯಾಗಿದ್ದಿರುತ್ತದೆ ಎನ್ನಲಾಗುತ್ತದೆ; ಅದು ಸಣ್ಣ ಸಸಿಯೇ ಇರಲಿ ಅಥವಾ ಮಗುವಿನ ಜನನವೇ ಆಗಿರಲಿ. ಈ ಹುಟ್ಟು ಅವ್ಯಕ್ತವಾಗಿರುತ್ತದೆ. ಬೆಳೆದಂತೇ ಅನುಭವಕ್ಕೆ ಬರುತ್ತದೆ. ಕಾಲವೂ ಅಷ್ಟೇ ಅದು ಆದಿ, ಅಂತ್ಯವಿಲ್ಲದ್ದು; ಅನಂತವಾದದ್ದು. ಆದರೆ ಅದು ಹೊತ್ತು ತರುವ ಬದಲಾವಣೆಗಳು ಮಾತ್ರ ಗೋಚರವಾಗುತ್ತವೆ. ‘ಯುಗಾದಿ’ ಇಂತಹ ಬದಲಾವಣೆಗೆ ನಾಂದಿಯಿಡುವ ಪಕ್ವ ಕಾಲ ಎನ್ನಬಹುದು. 
ದ.ರಾ.ಬೇಂದ್ರೆಯವರ ‘ಹಕ್ಕಿಹಾರುತಿದೆ ನೋಡಿದಿರಾ?’ ಕವನದ ಈ ಕೆಳಗಿನ ಸಾಲುಗಳನ್ನು ಗಮನಿಸೋಣ:
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? 
ಇಲ್ಲಿ ಹಕ್ಕಿ ಕಾಲ ಸೂಚಕವಾಗಿ, ರೂಪಕವಾಗಿ ಬಂದಿದೆ ಎಂಬುದು ನನ್ನ ಅನಿಸಿಕೆ. ಕಾಲವೆಂಬೋ ಈ ಹಕ್ಕಿ ಜೀವಿಗಳ ಬದುಕಲ್ಲಿ ಬದಲಾವಣೆ ತರುತ್ತಾ ಹಾರುತ್ತಲೇ ಇರುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಲವು ಚಕ್ರದಂತೇ, ಮರುಕಳಿಸುತ್ತಲಿರುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯಗಳನ್ನು ಕಳೆದು, ಪುನರಪಿ ಜನನಿ ಜಟರೇ ಶಯನಂ ಆಗಿ ಮತ್ತೆ ಹುಟ್ಟುತ್ತಲೇ ಇರುತ್ತಾನೆ ಮನುಷ್ಯ. ಸಸ್ಯದ ಗರ್ಭ ಬೀಜದೊಳಡಗಿದ್ದರೆ ಪ್ರಾಣಿ ಹಾಗೂ ಮಾನವರು ತಾಯಿ ಗರ್ಭದ ಮೂಲಕ ಜನ್ಮ ತಾಳುತ್ತಾರೆ. ಪುನರಪಿ ಮರಣಂ ಆಗುತ್ತಲೇ ಇರುತ್ತದೆ. ಇದು ಯುಗಯುಗಗಳಿಂದಲೂ ನಡೆದುಬರುತ್ತಿದೆ. ಅದಕ್ಕೇ ಅಂಬಿಕಾತನಯದತ್ತರು ಸಾಂಕೇತಿಕವಾಗಿ ಹೇಳಿದ್ದು ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂದು.
ಕಾಲ ಮತ್ತು ಜೀವಿ ಯುಗಾದಿಯೊಂದಿಗೆ ಬೆಸೆದಿರುವ ರೀತಿ:-
ಯುಗ ಎಂದರೆ ಯುಜು, ಇದರ ಅರ್ಥ ಜೋಡಿಸುವುದು, ಹೊಂದಿಸುವುದು. ಹೀಗಾಗಿ ‘ಯುಗಾದಿ’ ಕಾಲ ಮತ್ತು ಸೃಷ್ಟಿ ಎರಡನ್ನೂ ಪ್ರತಿನಿಧಿಸುತ್ತದೆ; ಜೊತೆಗೇ ಅಂತ್ಯವನ್ನೂ ಕೂಡ! ಕಾಲ ಎನ್ನುವ ಪದಕ್ಕೆ ಎರಡರ್ಥವಿದೆ. ಕಾಲ ಎಂದರೆ ಸಮಯವೂ ಹೌದು; ಅಂತ್ಯ ಸೂಚಕ ಪದವೂ ಹೌದು. ಹೀಗಾಗಿ ಜೀವ ಸೃಷ್ಟಿಯಾದ ಕ್ಷಣದಿಂದಲೇ ಕಾಲಗಣನೆಯೂ ಆ ಜೀವಿಯ ಜೊತೆ ಬೆಸೆದುಕೊಂಡಿರುತ್ತದೆ. ನಾವೇನು ‘ಸೃಷ್ಟಿಯಾಯಿತು’ ಎನ್ನುತ್ತೇವಲ್ಲ, ಅದು ಇನ್ನೊಂದು ರೀತಿಯಲ್ಲಿ ಆ ಜೀವಿಯ ಅಂತ್ಯಕ್ಕೆ ಕ್ಷಣಗಣನೆಯೂ ಆಗಿರುತ್ತದೆ. ಆದರೆ ಸಂಭ್ರಮ, ನಿರೀಕ್ಷೆಗಳು ಸಮಯವನ್ನು ಸುಲಭದಲ್ಲಿ, ವೇಗವಾಗಿ ದಾಟಲು ಸಹಕಾರಿಯಾದರೆ, ದುಃಖ ಹಾಗೂ ನಿರಾಸೆ ಆ ಹಾದಿಯನ್ನು ಕಠಿಣಗೊಳಿಸಿಬಿಡುತ್ತವೆ. ಈ ಕಾರಣದಿಂದಲೇ ಜನ್ಮದಿವಸದ ಸಂಭ್ರಮದ ಆಚರಣೆಗೆ ಹೆಚ್ಚು ಮಹತ್ವ ಸಿಗುತ್ತಿರುವುದು. ಇದೇ ದೃಷ್ಟಿಕೋನದಲ್ಲಿ ನೋಡಿದಾಗ, ಯುಗಾದಿಯ ಆಚರಣೆಗೆ ಬಹಳ ಪ್ರಾಮುಖ್ಯತೆ ಕಾಣುತ್ತದೆ.
‘ಯುಗಾದಿ’ ಕೇವಲ ವರ್ಷದಾರಂಭ, ಸಿಹಿ-ಕಹಿಗಳನ್ನು ಸಮಧಾತುವಿನಲ್ಲಿ ಸ್ವೀಕರಿಸುವ ಹಬ್ಬ ಮಾತ್ರವಲ್ಲ. ಬದುಕನ್ನು ಅರಿಯುವ, ಜೋಡಿಸುವ, ಹೊಂದಿಸುವ ಆರಂಭವೂ ಹೌದು. ಯುಗಾದಿ ಎನ್ನುವುದೇ ಕಾಲವನ್ನು ಮತ್ತು ಸೃಷ್ಟಿಯನ್ನು ಸೂಚಿಸುವುದು. ಕಾಲಕ್ಕೆ ಆದಿಯಿಲ್ಲ ಅಂತ್ಯವಿ ಎಂಬುದೇನೋ ನಿಜ. ಆದರೆ ಮಾನವ ಸೃಷ್ಟಿಯಾದ ಮೇಲೆಯೇ ಕಾಲಗಣನೆ ಆರಂಭವಾಗಿದ್ದು! ಅದಕ್ಕಿಂತ ಮೊದಲೂ ಕಾಲ ಇತ್ತು. ಆದರೆ ಅದು ನಮ್ಮ ಅರಿವಿಗೆ ಬರದೇ ಇದ್ದುದರಿಂದ ಮಹತ್ವ ಕಳೆದುಕೊಂಡಿದ್ದು. ಈ ರೀತಿ ಸಮಯಕ್ಕೆ ನಾವು ಕೊಟ್ಟ ಸ್ಪಂದನೆಯೇ ಅದಕ್ಕೊಂದು ವಿಶೇಷ ಪ್ರಾಮುಖ್ಯತೆಯನ್ನು ನೀಡಿದ್ದೆನ್ನಬಹುದು. 
ಪ್ರತಿ ಸಂತತ್ಸರದಲ್ಲೂ ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಗಳು, ಅವುಗಳಿಗೆ ಪ್ರತಿ ಜೀವಿಯೂ ಸ್ಪಂದಿಸುತ್ತಾ ತಾನೂ ಮೆಲ್ಲನೆ ಬದಲಾಗುತ್ತಾ, ಬೆಳೆಯುತ್ತಾ ಹೋಗುವುದು, ಈ ಪ್ರಕ್ರಿಯೆಗಳೇ ಅನನ್ಯ; ಅದು ತೋರುವ ಬೆರಗು ಅನೂಹ್ಯ. ಆದರೆ ಅಂತ್ಯ ಹಾಗಲ್ಲ. ಸಾವು ಸಂಭವಿಸಿದಾಕ್ಷಣ ಕಾಣಿಸಿಕೊಂಡರೆ, ಹುಟ್ಟು ಥಟ್ಟನೆ ಗೋಚರಿಸದೇ ಕ್ರಮೇಣ ಪ್ರಕಟಗೊಳ್ಳುತ್ತದೆ. ನಾವು ಹುಟ್ಟಿದ ನಂತರ ಬೆಳೆಯುತ್ತಾ ಹೋಗುತ್ತೇವೆ. ಹಾಗೆ ಭಾವಿಸಿಕೊಂಡು ಅದರಲ್ಲೇ ಕಳೆದುಹೋಗುತ್ತೇವೆ. ನಾವು ಈ ಬೆಳವಣಿಗೆಗೆ ಬೆಲೆ ಕೊಡುತ್ತೇವೆ. ಆದರೆ ಕಾಲ ಮೆಲ್ಲನೆ ಕಳೆಯುತ್ತಾ ಹೋಗುತ್ತಿರುತ್ತದೆ. ಕಳೆದುಹೋಗುವುದು ಅದರ ಗುಣ. ಸೃಷ್ಟಿ ಹಾಗಲ್ಲ; ಅದರ ಕಾರ್ಯವೇ ಬೆಳೆಸುವುದು ಮತ್ತು ಬೆಳಗುವುದು. ಉದಾಹರಣೆಗೆ:
ನಾವು ಈ ಸಸ್ಯಸಂಕುಲಗಳನ್ನೇ ತೆಗೆದುಕೊಂಡರೆ, ವರ್ಷ ಋತು ಅಂದರೆ ಮಳೆಗಾಲದ ಸಮಯದಲ್ಲಿ ಸೃಷ್ಟಿ ಭೂಮಿಯೊಳಗೆ ಅಂಕುರವಾಗುತ್ತದೆ. ಅಲ್ಲಿ ಬೀಜಾಂಕುರವಾಗಿ ಕಾಲಕ್ರಮೇಣ ಅದು ಭೂಮಿಯನ್ನು ಸೀಳಿಕೊಂಡು ಜೀವ ಹೊರಹೊಮ್ಮುತ್ತದೆ. ಹೀಗೆ ವರ್ಷ ಋತುವಿನಲ್ಲಿ ಭೂಮಿಯ ಗರ್ಭದಲ್ಲಿ ಸೃಷ್ಟಿ ಕಾರ್ಯ ನಡೆದರೆ, ವಸಂತ ಋತುವಿನಲ್ಲಿ ಭೂಮಿಯ ಮೇಲೆ ಚಿಗುರು ಹುಟ್ಟಿಕೊಳ್ಳುತ್ತದೆ. ಶಿಶಿರದಲ್ಲಿ ಎಲೆಗಳೆಲ್ಲಾ ಉದುರಿ ವಸಂತದಾಗಮನಕ್ಕೆ ಸ್ಥಳ ನಿರ್ಮಿಸಲಾಗುತ್ತದೆ. ಈ ರೀತಿ ಸೃಷ್ಟಿ ಪ್ರಕ್ರಿಯೆಗೆ ಸ್ಥಳ ಮತ್ತು ಕಾಲ ಪರಸ್ಪರ ಜೋಡಿಸಿಕೊಂಡು, ಹೊಂದಿಕೊಂಡು ಕಾರ್ಯನಿರ್ವಹಿಸುತ್ತವೆ. ಇದಕ್ಕೆ ನಾಂದಿ ಹಾಡುತ್ತದೆ ಯುಗಾದಿ; ಸಂವತ್ಸರಗಳ ಆದಿ.
ಹುಟ್ಟಿದ ಪ್ರತಿ ಜೀವಿಯೂ ಕಾಲನ ಮಿತಿಯಲ್ಲೇ ಇರುತ್ತದೆ (ಈ ಮೊದಲೇ ಹೇಳಿರುವಂತೆ ಇಲ್ಲಿ ಕಾಲ ಎಂದರೆ ಸಮಯ ಮತ್ತು ಅಂತ್ಯ ಎರಡೂ ಹೌದು). ಈ ಕಾಲಗಣನೆಯಲ್ಲಿ ಮೂರು ವಿಧವಿದೆ ಎನ್ನುತ್ತದೆ ಯುಗಧರ್ಮ. 
೧. ಮಾನವ ಕಾಲ ೨. ಗ್ರಹಗಳ ಕಾಲ ೩. ದೇವ ಕಾಲ. 
ಹೀಗೆ ಯುಗಧರ್ಮದ ಪ್ರಕಾರ ದೇವತೆಗಳೂ ಕಾಲಗಣನೆಯ ಮಿತಿಯಲ್ಲಿರುವವರೇ! ಇನ್ನು ಈ ಕಾಲಗಣನೆಯನ್ನು ಮಾನವ ಕಾಲದಲ್ಲಿ ಸುಲಭಗೊಳಿಸಲು ಹಗಲು ಮತ್ತು ಕತ್ತಲಿನ ಪರಿಮಾಣವನ್ನು ತೆಗೆದುಕೊಳ್ಳಲಾಗಿದೆ. ಹನ್ನೆರಡು ತಾಸು ಹಗಲು ಮತ್ತು ಹನ್ನೆರಡು ತಾಸು ಕತ್ತಲು ಎನ್ನುವುದು ಕಾಲ ಸೂಚಕಕ್ಕೆ ಇಲ್ಲಿ ಸಹಕಾರಿಯಾಗಿದೆ.
ಯುಗಾದಿಯ ಜೊತೆಗೆ ಬೆಸೆದಿರುವ ನಮ್ಮ ಭಾವ ಸ್ಪಂದನೆ:-
ಆದಿ, ಆರಂಭ, ಹುಟ್ಟು - ಈ ಪದಗಳೇ ಮನದೊಳಗೆ ಸಂತೋಷವನ್ನು ತುಂಬುವಂಥವು. ಪ್ರಕೃತಿ ವಸಂತನ ಆಗಮಕ್ಕೇ ಕಾದಿತ್ತೇನೋ ಎಂಬಂತೇ ಆ ಋತುವಿನಲ್ಲಿ ಎಳೆ ಹಸಿರು ಬಣ್ಣದ ಚಿಗುರುಗಳನ್ನು ಹೊತ್ತು, ಹೂವೊಳಗೆ ಗಂಧ, ಮಕರಂದವನ್ನು ತುಂಬಿಕೊಂಡು, ನಳನಳಿಸುತ್ತಿರುವುದನ್ನು ನೋಡುವುದೇ ನಮಗೊಂದು ಸಂಭ್ರಮ. ಅಂತೆಯೇ, ಖ್ಯಾತ ಕವಿ ಹಾಗೂ ನಾಡಿನ ಜನಪ್ರಿಯ ಸಹೃದಯ ಸಾಹಿತಿಯಾಗಿರುವ ಶ್ರೀಯುತ ಕೆ.ಎಸ್. ನಿಸಾರ್ ಅಹಮದ್ ಅವರು ತಮ್ಮ ‘ವರ್ಷಾದಿ’ ಕವಿತೆಯಲ್ಲಿ ಯುಗಾದಿಯ ಪ್ರಕೃತಿ ಚೆಲುವನ್ನು ಹೀಗೆ ಹಾಡಿ ಹೊಗಳಿದ್ದಾರೆ... 

        ಬೆವರ ಹೀರಿ ಬೆಳೆದ ಪೈರು 
ಕಣಕಣದಲಿ ಹೊನ್ನ ತೇರು
ಕಣಜ ತುಂಬಿ ತುಳುಕಿ ಹಿಗ್ಗಿ 
ನಾಡಿಗೊದಗಿ ಬಂತು ಸುಗ್ಗಿ
ಆದರೆ, ಸದಾ ಒಂದು ಪ್ರಜ್ಞೆ ನಮ್ಮೊಳಗೆ ಸುಪ್ತವಾಗಿ ಮಿಡಿಯುತ್ತಲೇ ಇರುತ್ತದೆ. ಅದೇನೆಂದರೆ ಈ ಸೃಷ್ಟಿಯ ಬೆನ್ನಿಗೇ ಅಂತ್ಯವೂ ಇದೆ, ಅದನ್ನೂ ನಾವು ಸಮವಾಗಿಯೇ ಸ್ವೀಕರಿಸಬೇಕು ಎಂಬುದು. ಉದುರುವ ಎಲೆಗಳಿಗೆ ಶೋಕಿಸದೇ ಅದನ್ನೂ ಸೃಷ್ಟಿಯ ಭಾಗವೆಂದು ಭಾವಿಸಬೇಕು ಎಂಬುದಕ್ಕೆ ಪ್ರತೀಕವಾಗಿಯೇ ಆ ದಿವಸ ಸi ಪ್ರಮಾಣದಲ್ಲಿ ಕಹಿಬೇವು-ಸಿಹಿಬೆಲ್ಲದ ಹಂಚುವಿಕೆ ತಪ್ಪದೇ ನಡೆದುಕೊಂಡು ಬಂದಿದೆ. 
ಹುಟ್ಟಿನ ಸಂಭ್ರಮಕ್ಕೆ ಕೊಡಲಿಯಾಗುತ್ತಿರುವ ಮನುಜನ ವಿಕೃತಿ :-
ಈ ವರುಷದ ಯುಗಾದಿ ‘ವಿಕಾರಿ ನಾಮ ಸಂವತ್ಸರ’. ಅದಕ್ಕನುಗುಣವಾಗಿಯೇ ಸಕಲ ಜೀವಿಗಳಲೇ ಶ್ರೇಷ್ಠರೆಂದೆನಿಸಿಕೊಂಡಿರುವ ಮನುಷ್ಯನ ವಿಕಾರತೆಯೂ ಇತ್ತೀಚಿಗೆ ಹೂಂಕರಿಸಿ ಅಬ್ಬರಿಸುತ್ತಿದೆ! ಪ್ರತಿ ಜೀವಿಯೂ ಬದುಕುವುದು ಅದರ ಅಸ್ತಿತ್ವಕ್ಕೆ, ಜೀವಂತಿಕೆಗಾಗಿಯೇ. ಪ್ರಾಣಿ, ಪಕ್ಷಿಗಳು ತಮ್ಮ ಉಳಿವಿಗೋಸ್ಕರ ಆಹಾರ, ನೆಲೆ ಹುಡುಕಿಕೊಳ್ಳುತ್ತವೆ. ತಮ್ಮ ಅಳಿವಿಗೆ ಪ್ರತಿರೋಧ ತೋರಿಸಲು, ಪ್ರಾಣ ರಕ್ಷಿಸಿಕೊಳ್ಳಲು ಬೇಟೆಯಾಡುತ್ತವೆ ಅಥವಾ ಹಲ್ಲೆ ನಡೆಸುತ್ತವೆ. ಮರ-ಗಿಡ-ಸಸ್ಯಗಳಂತೂ ಅದನ್ನೂ ಮಾಡಲು ಹೋಗದೆ ಮಣ್ಣಿನ ಸಾರವನ್ನು ಹೀರಿಹೀರಿ ಫಲ ತಮ್ಮದಲ್ಲ, ಕಾರ್ಯ ಮಾತ್ರ ತಮ್ಮದು ಎಂಬಂತೇ ನಿರಂತರ ಹಣ್ಣು, ಕಾಯಿ, ಸೊಪ್ಪು, ಧವಸ-ಧಾನ್ಯಗಳನ್ನು ಸಹಜೀವಿಗಳಿಗೆಲ್ಲಾ ನಿಸ್ವಾರ್ಥವಾಗಿ ಉಣಬಡಿಸುತ್ತಿರುತ್ತವೆ. ಹೀಗಿರುವಾಗ, ಮನುಷ್ಯ ಮಾತ್ರ ಅವ್ಯಾಹತವಾಗಿ ಸಹಜೀವಿಗಳ ಮೇಲೆ ಪ್ರಹಾರವನ್ನು ಸುಖಾಸುಮ್ಮನೇ ನಡೆಸುತ್ತಿರುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಮರ-ಗಿಡಗಳನ್ನು, ಪ್ರಾಣಿಗೆ-ಪಕ್ಷಿಗಳನ್ನು ನಿರ್ಧಾಕ್ಷಿಣ್ಯವಾಗಿ ಕೊಲ್ಲುತ್ತಾ, ತನ್ನ ಆಪ್ತೇಷ್ಟರನ್ನು, ಸಹ ಮಾನವರನ್ನೂ ಬಿಡದೇ ಹಿಂಸಿಸುತ್ತಿರುತ್ತಾನೆ. ಅಂತ್ಯ ಎನ್ನುವುದು ತಮಗೂ ಖಚಿತ ಎನ್ನುವ ಪರಿವೆ ಇಂಥವರಲ್ಲಿ ಸಂಪೂರ್ಣ ಮಗುಮ್ಮಾಗಿಬಿಟ್ಟಿರುತ್ತದೆ ಎಂದೆನಿಸುತ್ತದೆ. ಇಂಥಾ ಮನುಷ್ಯರೂಪಿ ರಕ್ಕಸರ ವಿಕೃತಿ ಕಂಡಾಗ ‘ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ’ ಇಟ್ಟಿದ್ದೇ ಒಳ್ಳೆಯದಾಯಿತು ಎಂದೆನಿಸಿಬಿಡುತ್ತದೆ. ಪು.ತಿ.ನರಸಿಂಹಾಚಾರ್ ಅವರ ಕವಿತೆಯೊಂದರ ಈ ಕೆಳಗಿನ ಸಾಲುಗಳು ನೆನಪಾಗಿ ಕಾಡುತ್ತಿರುತ್ತವೆ.
ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ
ಮನುಷ್ಯನ ಹೊರತು ಮತ್ತೆಲ್ಲಾ ಜೀವ ಸಂಕುಲಗಳಲ್ಲೂ ಜೀವೊತ್ಪತ್ತಿ ತಣ್ಣಗೆ, ಪ್ರೀತಿಯಿಂದ, ಶಾಂತಿಯಿಂದ ಆಗುತ್ತಿರುತ್ತದೆ. ಆದರೆ ಮನುಜನಲ್ಲಿ ಜನನದ ಜೊತೆಗೇ ಅಹಂಕಾರದ ಹುಟ್ಟೂ ಆಗಿಬಿಡುತ್ತದೆ. ಅದು ಆತನ ಶಾರೀರಿಕ ಬೆಳವಣಿಗೆಯ ಜೊತೆಗೇ ಬೆಳೆಯುತ್ತಾ ಹೋಗುತ್ತಿರುತ್ತದೆ. ಅಹಂಕಾರ ವಿಧವಿಧ ರೂಪು ತಳೆದು ಬೃಹದಾಕಾರವಾಗಿ ಬೆಳೆದಷ್ಟೂ ವಿವೇಕ, ಸುವಿಚಾರಗಳು ಕಳೆಗುಂದುತ್ತಾ ಹೋಗಿ ಕೊನೆಗೊಮ್ಮೆ ಕಳೆದುಹೋಗಿಬಿಡುತ್ತವೆ. ತನ್ನ ಅಹಂಕಾರವನ್ನು ಹತೋಟಿಯಲ್ಲಿಟ್ಟುಕೊಳ್ಳದೇ, ನಿರ್ದಾಕ್ಷಿಣ್ಯವಾಗಿ ಅದರ ಕೈಗೇ ತನ್ನ ವಿವೇಕವನ್ನು ಕೊಟ್ಟುಬಿಡುವುದೇ ಸಕಲ ವಿಕಾರಗಳಿಗೂ ಕಾರಣವಾಗಿದೆ.
ಹಬ್ಬಗಳ ಮಹತ್ವ ಮತ್ತು ಸ್ಪಂದನೆಯ ಪ್ರಸ್ತುತತೆ:-
ಬದಲಾವಣೆ ಹೇಗೆ ಜಗದ ನಿಯಮವೋ, ಕತ್ತಲು ಹೇಗೆ ಶಾಶ್ವತವಲ್ಲೋ ಹಾಗೇ ಸಮಾಜದೊಳಗೆ ಕ್ಯಾನ್ಸರಿನಂತೇ ಹಬ್ಬುತ್ತಿರುವ ಈ ವಿಕೃತಿಗಳು, ಪ್ರಭೃತಿ ಜೀವಿಗಳು ಶಾಶ್ವತವಲ್ಲ. ಈ ವಿಕಾರ ಮನೋಭಾವದ ತಮ ಕಳೆದು, ಹೊಳೆವ ಹೊಸ ಭಾವಗಳು ಮನುಜನ ಎದೆಯೊಳಗೆ ಹುಟ್ಟಿ, ಬೆಳೆದು, ಮಾತು-ಕೃತಿಗಳಲ್ಲಿ ಚಿಗುರೊಡೆದು ಸಮಾಜಕ್ಕೆ, ವಿಶ್ವಕ್ಕೆ, ನವ ಚೈತನ್ಯವನ್ನು ತುಂಬುವ ಯುಗಾದಿ ಬಂದೇ ಬರುತ್ತದೆ ಎಂಬ ಆಶಾಭಾವನೆ ಈ ಕಾಲದ ತುರ್ತಾಗಿದೆ. ಸುತ್ತಲೂ ಕಾಣಿಸುವ ಕೊಳಕಿಗೆ ಮಾತ್ರ ಸ್ಪಂದಿಸುತ್ತಾ ಹೋದರೆ, ಅದರ ಆಸುಪಾಸಿದಲ್ಲೇ ಇರುವ ಒಳಿತಿನ ಬೆಳಕೂ ಮಸುಕಾಗಿಬಿಡುತ್ತದೆ. ಇದರಿಂದ ಹತಾಶೆ ಹೆಚ್ಚಾಗಿ ಕ್ರಮೇಣ ಸ್ಪಂದನೆಯೇ ಕುಂಠಿತವಾಬಿಡಬಹುದು. ಇದರ ಪರಿಣಾಮವಾಗಿ ಮನುಜ ಸಜೀವ ಶವವಾದರೂ ಆಶ್ಚರ್ಯವಿಲ್ಲ! 
ಈಗಾಗಲೇ ನಮ್ಮಲ್ಲಿ ಹಬ್ಬಗಳು ತಮ್ಮ ಪ್ರಸ್ತುತೆಯನ್ನು ಕಳೆದುಕೊಳ್ಳುತ್ತಿವೆ. ಯುಗಾದಿಯಿಂದ ಹಿಡಿದು ದೀಪಾವಳಿಯವರೆಗೂ ಬರುವ ಹಬ್ಬಗಳನ್ನು ಬಹುತೇಕರು ಯಾಂತ್ರಿಕವಾಗಿ ಸ್ವಾಗತಿಸುವುದು, ಆಚರಿಸುವುದು ಹೆಚ್ಚಾಗುತ್ತಿದೆ. ಇದಕ್ಕೆ ಕೂಡು ಕುಟುಂಬದ ಅವಗಣನೆ, ಜಾಗತೀಕರಣ ಎಲ್ಲವುದರ ಕೊಡುಗೆಯೂ ಇದ್ದಿರಬಹುದು. ಆದರೆ ಜೀವಂತಿಕೆಯನ್ನು ಕಾಪಿಟ್ಟುಕೊಳ್ಳುವುದು ಅನಿವಾರ್ಯು ಮತ್ತು ಅಗತ್ಯ. ಎಂಥಾ ಮಹಾ ಕಷ್ಟಗಳು, ಕೌಟುಂಬಿಕ ಸಂಕಟಗಳು ಧುತ್ತನೆ ಎರಗಿದರೂ, ಜೀವನೋತ್ಸಾಹ, ಜೀವನ್ಮುಖಿತ್ವವನ್ನು ಕಳೆದುಕೊಳ್ಳದೇ ಹುರಿದುಂಬಿಸುವ ನಮ್ಮ ಹಿರಿಯರು, ನಾಡಿನ ಹಿರಿಯ ಶ್ರೇಷ್ಠ ಕವಿಗಳು ನಮಗೆ ಸದಾ ಮಾದರಿಯಾಗುತ್ತಾರೆ. ಉದಾಹರಣೆಗೆ:
ಋತುಗಳರಳುತ ಚಕ್ರಗತಿಯಲಿ
ಹೊರಳಿ ಸರಿವುವು ನಿನ್ನೆಗೆ
ನೋವು ನಲಿವಿನ ನಡುವೆ ಕಾದೆವು
ಕರೆವ ಬೆಳಕಿನ ಸನ್ನೆಗೆ...
ಎಂದು ಯುಗಾದಿಯನ್ನು ಸಮಚಿತ್ತದಿಂದ ಸ್ವಾಗತಿಸಿ ಸಂಭ್ರಮಿಸಿದ ನಮ್ಮ ನಾಡಿನ ಪ್ರಸಿದ್ಧ ಕವಿಯಾಗಿರುವ ಶ್ರೀಯುತ ಸುಬ್ರಾಯ ಚೊಕ್ಕಾಡಿಯವರ ಕವಿತೆಯೊಂದರ ಮೇಲಿನ ಸಾಲುಗಳು ಸದಾ ಸ್ಮರಣೀಯ.
-ತೇಜಸ್ವಿನಿ ಹೆಗಡೆ
**********