ಜೀವಿಯಲ್ಲಿ ಜೀವಂತಿಕೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಬಹು ಮುಖ್ಯವಾಗಿ ಇರಬೇಕಾದದ್ದು ‘ಸ್ಪಂದನೆ’. ನೋವಿಗೆ, ನಲಿವಿಗೆ, ಹಸಿವಿಗೆ, ನಿದಿರೆಗೆ ಹೀಗೆ ಪ್ರತಿ ಕ್ಷಣದ ಚಲನೆಗೆ ಅತ್ಯವಶ್ಯಕ ಈ ಸ್ಪಂದನೆ. ಸ್ಪಂದಿಸುವುದನ್ನು ನಿಲ್ಲಿಸಿದ ದಿವಸವೇ ಸಾವು ಎಂದೆನ್ನುತ್ತಾರೆ. ಹೃದಯ ಮಾತ್ರ ಬಡಿತವಿದ್ದು, ದೇಹದಲ್ಲಿ ಬೇರಾವುದೇ ಚಲನೆಯಿಲ್ಲದ್ದರೆ ಅವರನ್ನು ಜೀವಚ್ಛವ ಎನ್ನಲಾಗುತ್ತದೆ. ಹೀಗಾಗಿ ‘ನಿಂತ ನೀರಲ್ಲ ಈ ಬದುಕು, ಹರಿವ ನದಿಯಂತೇ’ ಎಂದು ಹೇಳುವುದು. ಸ್ಪಂದನೆ ಕಾಲಕಾಲಕ್ಕೆ ಬದಲಾಗಬಹುದು, ಸ್ಪಂದಿಸುವ ರೀತಿ ಬದಲಾಗಬಹುದು, ಆದರೆ ಸ್ಪಂದಿಸುವುದೆಂದೂ ನಿಲ್ಲದು, ನಿಲ್ಲಲೂ ಬಾರದು!
ಬದಲಾವಣೆ ಎನ್ನುವುದು ಜಗದ ನಿಯಮ. ಆದರೆ ಎಷ್ಟೋ ಸಲ ಬದಲಾವಣೆಯ ಕಾಲಗಣನೆಯಲ್ಲಿ ಬಹಳ ಅಂತರವಿರುತ್ತದೆ. ಕೆಲವೊಂದು ಬದಲಾವಣೆಗಳು ಕಡಿಮೆ ಕಾಲಾವಧಿಯಲ್ಲಾದರೆ, ಎಷ್ಟೋ ಸಲ ಒಂದು ಸಣ್ಣ ಬದಲಾವಣೆಗೂ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ. ಆದರೆ ಯಾವುದೇ ಬದಲಾವಣೆ ಪ್ರಕಟಗೊಂಡು ವಿಸ್ತರಿಸಲು ಬಹುಮುಖ್ಯವಾಗಿ ಬೇಕಾಗಿರುವುದು ಸ್ಪಂದನೆಯೇ. ಇಲ್ಲದಿದ್ದರೆ ಬದಲಾದದ್ದು ಯಾವುದು? ಎಲ್ಲಿ? ಹೇಗೆ? ಎಂಬಿತ್ಯಾದಿ ವಿವರಗಳೇ ದಾಖಲಾಗುವುದಿಲ್ಲ. ಮನುಷ್ಯ ಮಾತ್ರವಲ್ಲ ಸಕಲ ಜೀವಿಗಳೂ ಕಾಲ ಹೊತ್ತು ತರುವ ಈ ಬದಲಾವಣೆಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಲೇ ಇರುತ್ತವೆ. ಹೀಗಾಗಿ ಅದು ಬದಲಾಗುತ್ತಿರುವುದು ಅರಿವಿಗೆ ಬರುತ್ತದೆ.
ಜೀವೋತ್ಪತ್ತಿಗೆ ಬಹು ಮುಖ್ಯವಾಗಿ ಬೇಕಾದದ್ದು ಕಾಲ ಮತ್ತು ಸ್ಥಳ. ಸಮಯಕ್ಕೆ ಮುನ್ನ ಮತ್ತು ಅದನ್ನು ಮೀರಿ ಯಾವುದೂ ಎಲ್ಲಿಯೂ ಹುಟ್ಟುವುದಿಲ್ಲ, ನಶಿಸುವುದೂ ಇಲ್ಲ ಎನ್ನುತ್ತಾರೆ ಪ್ರಾಜ್ಞರು. ಇಂಥ ದಿವಸ ಹಾಗೂ ಸ್ಥಳದಲ್ಲಿ ಈ ಜೀವದ ಹುಟ್ಟು ನಿಗದಿಯಾಗಿದ್ದಿರುತ್ತದೆ ಎನ್ನಲಾಗುತ್ತದೆ; ಅದು ಸಣ್ಣ ಸಸಿಯೇ ಇರಲಿ ಅಥವಾ ಮಗುವಿನ ಜನನವೇ ಆಗಿರಲಿ. ಈ ಹುಟ್ಟು ಅವ್ಯಕ್ತವಾಗಿರುತ್ತದೆ. ಬೆಳೆದಂತೇ ಅನುಭವಕ್ಕೆ ಬರುತ್ತದೆ. ಕಾಲವೂ ಅಷ್ಟೇ ಅದು ಆದಿ, ಅಂತ್ಯವಿಲ್ಲದ್ದು; ಅನಂತವಾದದ್ದು. ಆದರೆ ಅದು ಹೊತ್ತು ತರುವ ಬದಲಾವಣೆಗಳು ಮಾತ್ರ ಗೋಚರವಾಗುತ್ತವೆ. ‘ಯುಗಾದಿ’ ಇಂತಹ ಬದಲಾವಣೆಗೆ ನಾಂದಿಯಿಡುವ ಪಕ್ವ ಕಾಲ ಎನ್ನಬಹುದು.
ದ.ರಾ.ಬೇಂದ್ರೆಯವರ ‘ಹಕ್ಕಿಹಾರುತಿದೆ ನೋಡಿದಿರಾ?’ ಕವನದ ಈ ಕೆಳಗಿನ ಸಾಲುಗಳನ್ನು ಗಮನಿಸೋಣ:
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?
ಇಲ್ಲಿ ಹಕ್ಕಿ ಕಾಲ ಸೂಚಕವಾಗಿ, ರೂಪಕವಾಗಿ ಬಂದಿದೆ ಎಂಬುದು ನನ್ನ ಅನಿಸಿಕೆ. ಕಾಲವೆಂಬೋ ಈ ಹಕ್ಕಿ ಜೀವಿಗಳ ಬದುಕಲ್ಲಿ ಬದಲಾವಣೆ ತರುತ್ತಾ ಹಾರುತ್ತಲೇ ಇರುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಲವು ಚಕ್ರದಂತೇ, ಮರುಕಳಿಸುತ್ತಲಿರುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯಗಳನ್ನು ಕಳೆದು, ಪುನರಪಿ ಜನನಿ ಜಟರೇ ಶಯನಂ ಆಗಿ ಮತ್ತೆ ಹುಟ್ಟುತ್ತಲೇ ಇರುತ್ತಾನೆ ಮನುಷ್ಯ. ಸಸ್ಯದ ಗರ್ಭ ಬೀಜದೊಳಡಗಿದ್ದರೆ ಪ್ರಾಣಿ ಹಾಗೂ ಮಾನವರು ತಾಯಿ ಗರ್ಭದ ಮೂಲಕ ಜನ್ಮ ತಾಳುತ್ತಾರೆ. ಪುನರಪಿ ಮರಣಂ ಆಗುತ್ತಲೇ ಇರುತ್ತದೆ. ಇದು ಯುಗಯುಗಗಳಿಂದಲೂ ನಡೆದುಬರುತ್ತಿದೆ. ಅದಕ್ಕೇ ಅಂಬಿಕಾತನಯದತ್ತರು ಸಾಂಕೇತಿಕವಾಗಿ ಹೇಳಿದ್ದು ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂದು.
ಕಾಲ ಮತ್ತು ಜೀವಿ ಯುಗಾದಿಯೊಂದಿಗೆ ಬೆಸೆದಿರುವ ರೀತಿ:-
ಯುಗ ಎಂದರೆ ಯುಜು, ಇದರ ಅರ್ಥ ಜೋಡಿಸುವುದು, ಹೊಂದಿಸುವುದು. ಹೀಗಾಗಿ ‘ಯುಗಾದಿ’ ಕಾಲ ಮತ್ತು ಸೃಷ್ಟಿ ಎರಡನ್ನೂ ಪ್ರತಿನಿಧಿಸುತ್ತದೆ; ಜೊತೆಗೇ ಅಂತ್ಯವನ್ನೂ ಕೂಡ! ಕಾಲ ಎನ್ನುವ ಪದಕ್ಕೆ ಎರಡರ್ಥವಿದೆ. ಕಾಲ ಎಂದರೆ ಸಮಯವೂ ಹೌದು; ಅಂತ್ಯ ಸೂಚಕ ಪದವೂ ಹೌದು. ಹೀಗಾಗಿ ಜೀವ ಸೃಷ್ಟಿಯಾದ ಕ್ಷಣದಿಂದಲೇ ಕಾಲಗಣನೆಯೂ ಆ ಜೀವಿಯ ಜೊತೆ ಬೆಸೆದುಕೊಂಡಿರುತ್ತದೆ. ನಾವೇನು ‘ಸೃಷ್ಟಿಯಾಯಿತು’ ಎನ್ನುತ್ತೇವಲ್ಲ, ಅದು ಇನ್ನೊಂದು ರೀತಿಯಲ್ಲಿ ಆ ಜೀವಿಯ ಅಂತ್ಯಕ್ಕೆ ಕ್ಷಣಗಣನೆಯೂ ಆಗಿರುತ್ತದೆ. ಆದರೆ ಸಂಭ್ರಮ, ನಿರೀಕ್ಷೆಗಳು ಸಮಯವನ್ನು ಸುಲಭದಲ್ಲಿ, ವೇಗವಾಗಿ ದಾಟಲು ಸಹಕಾರಿಯಾದರೆ, ದುಃಖ ಹಾಗೂ ನಿರಾಸೆ ಆ ಹಾದಿಯನ್ನು ಕಠಿಣಗೊಳಿಸಿಬಿಡುತ್ತವೆ. ಈ ಕಾರಣದಿಂದಲೇ ಜನ್ಮದಿವಸದ ಸಂಭ್ರಮದ ಆಚರಣೆಗೆ ಹೆಚ್ಚು ಮಹತ್ವ ಸಿಗುತ್ತಿರುವುದು. ಇದೇ ದೃಷ್ಟಿಕೋನದಲ್ಲಿ ನೋಡಿದಾಗ, ಯುಗಾದಿಯ ಆಚರಣೆಗೆ ಬಹಳ ಪ್ರಾಮುಖ್ಯತೆ ಕಾಣುತ್ತದೆ.
‘ಯುಗಾದಿ’ ಕೇವಲ ವರ್ಷದಾರಂಭ, ಸಿಹಿ-ಕಹಿಗಳನ್ನು ಸಮಧಾತುವಿನಲ್ಲಿ ಸ್ವೀಕರಿಸುವ ಹಬ್ಬ ಮಾತ್ರವಲ್ಲ. ಬದುಕನ್ನು ಅರಿಯುವ, ಜೋಡಿಸುವ, ಹೊಂದಿಸುವ ಆರಂಭವೂ ಹೌದು. ಯುಗಾದಿ ಎನ್ನುವುದೇ ಕಾಲವನ್ನು ಮತ್ತು ಸೃಷ್ಟಿಯನ್ನು ಸೂಚಿಸುವುದು. ಕಾಲಕ್ಕೆ ಆದಿಯಿಲ್ಲ ಅಂತ್ಯವಿ ಎಂಬುದೇನೋ ನಿಜ. ಆದರೆ ಮಾನವ ಸೃಷ್ಟಿಯಾದ ಮೇಲೆಯೇ ಕಾಲಗಣನೆ ಆರಂಭವಾಗಿದ್ದು! ಅದಕ್ಕಿಂತ ಮೊದಲೂ ಕಾಲ ಇತ್ತು. ಆದರೆ ಅದು ನಮ್ಮ ಅರಿವಿಗೆ ಬರದೇ ಇದ್ದುದರಿಂದ ಮಹತ್ವ ಕಳೆದುಕೊಂಡಿದ್ದು. ಈ ರೀತಿ ಸಮಯಕ್ಕೆ ನಾವು ಕೊಟ್ಟ ಸ್ಪಂದನೆಯೇ ಅದಕ್ಕೊಂದು ವಿಶೇಷ ಪ್ರಾಮುಖ್ಯತೆಯನ್ನು ನೀಡಿದ್ದೆನ್ನಬಹುದು.
ಪ್ರತಿ ಸಂತತ್ಸರದಲ್ಲೂ ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಗಳು, ಅವುಗಳಿಗೆ ಪ್ರತಿ ಜೀವಿಯೂ ಸ್ಪಂದಿಸುತ್ತಾ ತಾನೂ ಮೆಲ್ಲನೆ ಬದಲಾಗುತ್ತಾ, ಬೆಳೆಯುತ್ತಾ ಹೋಗುವುದು, ಈ ಪ್ರಕ್ರಿಯೆಗಳೇ ಅನನ್ಯ; ಅದು ತೋರುವ ಬೆರಗು ಅನೂಹ್ಯ. ಆದರೆ ಅಂತ್ಯ ಹಾಗಲ್ಲ. ಸಾವು ಸಂಭವಿಸಿದಾಕ್ಷಣ ಕಾಣಿಸಿಕೊಂಡರೆ, ಹುಟ್ಟು ಥಟ್ಟನೆ ಗೋಚರಿಸದೇ ಕ್ರಮೇಣ ಪ್ರಕಟಗೊಳ್ಳುತ್ತದೆ. ನಾವು ಹುಟ್ಟಿದ ನಂತರ ಬೆಳೆಯುತ್ತಾ ಹೋಗುತ್ತೇವೆ. ಹಾಗೆ ಭಾವಿಸಿಕೊಂಡು ಅದರಲ್ಲೇ ಕಳೆದುಹೋಗುತ್ತೇವೆ. ನಾವು ಈ ಬೆಳವಣಿಗೆಗೆ ಬೆಲೆ ಕೊಡುತ್ತೇವೆ. ಆದರೆ ಕಾಲ ಮೆಲ್ಲನೆ ಕಳೆಯುತ್ತಾ ಹೋಗುತ್ತಿರುತ್ತದೆ. ಕಳೆದುಹೋಗುವುದು ಅದರ ಗುಣ. ಸೃಷ್ಟಿ ಹಾಗಲ್ಲ; ಅದರ ಕಾರ್ಯವೇ ಬೆಳೆಸುವುದು ಮತ್ತು ಬೆಳಗುವುದು. ಉದಾಹರಣೆಗೆ:
ನಾವು ಈ ಸಸ್ಯಸಂಕುಲಗಳನ್ನೇ ತೆಗೆದುಕೊಂಡರೆ, ವರ್ಷ ಋತು ಅಂದರೆ ಮಳೆಗಾಲದ ಸಮಯದಲ್ಲಿ ಸೃಷ್ಟಿ ಭೂಮಿಯೊಳಗೆ ಅಂಕುರವಾಗುತ್ತದೆ. ಅಲ್ಲಿ ಬೀಜಾಂಕುರವಾಗಿ ಕಾಲಕ್ರಮೇಣ ಅದು ಭೂಮಿಯನ್ನು ಸೀಳಿಕೊಂಡು ಜೀವ ಹೊರಹೊಮ್ಮುತ್ತದೆ. ಹೀಗೆ ವರ್ಷ ಋತುವಿನಲ್ಲಿ ಭೂಮಿಯ ಗರ್ಭದಲ್ಲಿ ಸೃಷ್ಟಿ ಕಾರ್ಯ ನಡೆದರೆ, ವಸಂತ ಋತುವಿನಲ್ಲಿ ಭೂಮಿಯ ಮೇಲೆ ಚಿಗುರು ಹುಟ್ಟಿಕೊಳ್ಳುತ್ತದೆ. ಶಿಶಿರದಲ್ಲಿ ಎಲೆಗಳೆಲ್ಲಾ ಉದುರಿ ವಸಂತದಾಗಮನಕ್ಕೆ ಸ್ಥಳ ನಿರ್ಮಿಸಲಾಗುತ್ತದೆ. ಈ ರೀತಿ ಸೃಷ್ಟಿ ಪ್ರಕ್ರಿಯೆಗೆ ಸ್ಥಳ ಮತ್ತು ಕಾಲ ಪರಸ್ಪರ ಜೋಡಿಸಿಕೊಂಡು, ಹೊಂದಿಕೊಂಡು ಕಾರ್ಯನಿರ್ವಹಿಸುತ್ತವೆ. ಇದಕ್ಕೆ ನಾಂದಿ ಹಾಡುತ್ತದೆ ಯುಗಾದಿ; ಸಂವತ್ಸರಗಳ ಆದಿ.
ಹುಟ್ಟಿದ ಪ್ರತಿ ಜೀವಿಯೂ ಕಾಲನ ಮಿತಿಯಲ್ಲೇ ಇರುತ್ತದೆ (ಈ ಮೊದಲೇ ಹೇಳಿರುವಂತೆ ಇಲ್ಲಿ ಕಾಲ ಎಂದರೆ ಸಮಯ ಮತ್ತು ಅಂತ್ಯ ಎರಡೂ ಹೌದು). ಈ ಕಾಲಗಣನೆಯಲ್ಲಿ ಮೂರು ವಿಧವಿದೆ ಎನ್ನುತ್ತದೆ ಯುಗಧರ್ಮ.
೧. ಮಾನವ ಕಾಲ ೨. ಗ್ರಹಗಳ ಕಾಲ ೩. ದೇವ ಕಾಲ.
ಹೀಗೆ ಯುಗಧರ್ಮದ ಪ್ರಕಾರ ದೇವತೆಗಳೂ ಕಾಲಗಣನೆಯ ಮಿತಿಯಲ್ಲಿರುವವರೇ! ಇನ್ನು ಈ ಕಾಲಗಣನೆಯನ್ನು ಮಾನವ ಕಾಲದಲ್ಲಿ ಸುಲಭಗೊಳಿಸಲು ಹಗಲು ಮತ್ತು ಕತ್ತಲಿನ ಪರಿಮಾಣವನ್ನು ತೆಗೆದುಕೊಳ್ಳಲಾಗಿದೆ. ಹನ್ನೆರಡು ತಾಸು ಹಗಲು ಮತ್ತು ಹನ್ನೆರಡು ತಾಸು ಕತ್ತಲು ಎನ್ನುವುದು ಕಾಲ ಸೂಚಕಕ್ಕೆ ಇಲ್ಲಿ ಸಹಕಾರಿಯಾಗಿದೆ.
ಯುಗಾದಿಯ ಜೊತೆಗೆ ಬೆಸೆದಿರುವ ನಮ್ಮ ಭಾವ ಸ್ಪಂದನೆ:-
ಆದಿ, ಆರಂಭ, ಹುಟ್ಟು - ಈ ಪದಗಳೇ ಮನದೊಳಗೆ ಸಂತೋಷವನ್ನು ತುಂಬುವಂಥವು. ಪ್ರಕೃತಿ ವಸಂತನ ಆಗಮಕ್ಕೇ ಕಾದಿತ್ತೇನೋ ಎಂಬಂತೇ ಆ ಋತುವಿನಲ್ಲಿ ಎಳೆ ಹಸಿರು ಬಣ್ಣದ ಚಿಗುರುಗಳನ್ನು ಹೊತ್ತು, ಹೂವೊಳಗೆ ಗಂಧ, ಮಕರಂದವನ್ನು ತುಂಬಿಕೊಂಡು, ನಳನಳಿಸುತ್ತಿರುವುದನ್ನು ನೋಡುವುದೇ ನಮಗೊಂದು ಸಂಭ್ರಮ. ಅಂತೆಯೇ, ಖ್ಯಾತ ಕವಿ ಹಾಗೂ ನಾಡಿನ ಜನಪ್ರಿಯ ಸಹೃದಯ ಸಾಹಿತಿಯಾಗಿರುವ ಶ್ರೀಯುತ ಕೆ.ಎಸ್. ನಿಸಾರ್ ಅಹಮದ್ ಅವರು ತಮ್ಮ ‘ವರ್ಷಾದಿ’ ಕವಿತೆಯಲ್ಲಿ ಯುಗಾದಿಯ ಪ್ರಕೃತಿ ಚೆಲುವನ್ನು ಹೀಗೆ ಹಾಡಿ ಹೊಗಳಿದ್ದಾರೆ...
ಕಣಕಣದಲಿ ಹೊನ್ನ ತೇರು
ಕಣಜ ತುಂಬಿ ತುಳುಕಿ ಹಿಗ್ಗಿ
ನಾಡಿಗೊದಗಿ ಬಂತು ಸುಗ್ಗಿ
ಆದರೆ, ಸದಾ ಒಂದು ಪ್ರಜ್ಞೆ ನಮ್ಮೊಳಗೆ ಸುಪ್ತವಾಗಿ ಮಿಡಿಯುತ್ತಲೇ ಇರುತ್ತದೆ. ಅದೇನೆಂದರೆ ಈ ಸೃಷ್ಟಿಯ ಬೆನ್ನಿಗೇ ಅಂತ್ಯವೂ ಇದೆ, ಅದನ್ನೂ ನಾವು ಸಮವಾಗಿಯೇ ಸ್ವೀಕರಿಸಬೇಕು ಎಂಬುದು. ಉದುರುವ ಎಲೆಗಳಿಗೆ ಶೋಕಿಸದೇ ಅದನ್ನೂ ಸೃಷ್ಟಿಯ ಭಾಗವೆಂದು ಭಾವಿಸಬೇಕು ಎಂಬುದಕ್ಕೆ ಪ್ರತೀಕವಾಗಿಯೇ ಆ ದಿವಸ ಸi ಪ್ರಮಾಣದಲ್ಲಿ ಕಹಿಬೇವು-ಸಿಹಿಬೆಲ್ಲದ ಹಂಚುವಿಕೆ ತಪ್ಪದೇ ನಡೆದುಕೊಂಡು ಬಂದಿದೆ.
ಹುಟ್ಟಿನ ಸಂಭ್ರಮಕ್ಕೆ ಕೊಡಲಿಯಾಗುತ್ತಿರುವ ಮನುಜನ ವಿಕೃತಿ :-
ಈ ವರುಷದ ಯುಗಾದಿ ‘ವಿಕಾರಿ ನಾಮ ಸಂವತ್ಸರ’. ಅದಕ್ಕನುಗುಣವಾಗಿಯೇ ಸಕಲ ಜೀವಿಗಳಲೇ ಶ್ರೇಷ್ಠರೆಂದೆನಿಸಿಕೊಂಡಿರುವ ಮನುಷ್ಯನ ವಿಕಾರತೆಯೂ ಇತ್ತೀಚಿಗೆ ಹೂಂಕರಿಸಿ ಅಬ್ಬರಿಸುತ್ತಿದೆ! ಪ್ರತಿ ಜೀವಿಯೂ ಬದುಕುವುದು ಅದರ ಅಸ್ತಿತ್ವಕ್ಕೆ, ಜೀವಂತಿಕೆಗಾಗಿಯೇ. ಪ್ರಾಣಿ, ಪಕ್ಷಿಗಳು ತಮ್ಮ ಉಳಿವಿಗೋಸ್ಕರ ಆಹಾರ, ನೆಲೆ ಹುಡುಕಿಕೊಳ್ಳುತ್ತವೆ. ತಮ್ಮ ಅಳಿವಿಗೆ ಪ್ರತಿರೋಧ ತೋರಿಸಲು, ಪ್ರಾಣ ರಕ್ಷಿಸಿಕೊಳ್ಳಲು ಬೇಟೆಯಾಡುತ್ತವೆ ಅಥವಾ ಹಲ್ಲೆ ನಡೆಸುತ್ತವೆ. ಮರ-ಗಿಡ-ಸಸ್ಯಗಳಂತೂ ಅದನ್ನೂ ಮಾಡಲು ಹೋಗದೆ ಮಣ್ಣಿನ ಸಾರವನ್ನು ಹೀರಿಹೀರಿ ಫಲ ತಮ್ಮದಲ್ಲ, ಕಾರ್ಯ ಮಾತ್ರ ತಮ್ಮದು ಎಂಬಂತೇ ನಿರಂತರ ಹಣ್ಣು, ಕಾಯಿ, ಸೊಪ್ಪು, ಧವಸ-ಧಾನ್ಯಗಳನ್ನು ಸಹಜೀವಿಗಳಿಗೆಲ್ಲಾ ನಿಸ್ವಾರ್ಥವಾಗಿ ಉಣಬಡಿಸುತ್ತಿರುತ್ತವೆ. ಹೀಗಿರುವಾಗ, ಮನುಷ್ಯ ಮಾತ್ರ ಅವ್ಯಾಹತವಾಗಿ ಸಹಜೀವಿಗಳ ಮೇಲೆ ಪ್ರಹಾರವನ್ನು ಸುಖಾಸುಮ್ಮನೇ ನಡೆಸುತ್ತಿರುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಮರ-ಗಿಡಗಳನ್ನು, ಪ್ರಾಣಿಗೆ-ಪಕ್ಷಿಗಳನ್ನು ನಿರ್ಧಾಕ್ಷಿಣ್ಯವಾಗಿ ಕೊಲ್ಲುತ್ತಾ, ತನ್ನ ಆಪ್ತೇಷ್ಟರನ್ನು, ಸಹ ಮಾನವರನ್ನೂ ಬಿಡದೇ ಹಿಂಸಿಸುತ್ತಿರುತ್ತಾನೆ. ಅಂತ್ಯ ಎನ್ನುವುದು ತಮಗೂ ಖಚಿತ ಎನ್ನುವ ಪರಿವೆ ಇಂಥವರಲ್ಲಿ ಸಂಪೂರ್ಣ ಮಗುಮ್ಮಾಗಿಬಿಟ್ಟಿರುತ್ತದೆ ಎಂದೆನಿಸುತ್ತದೆ. ಇಂಥಾ ಮನುಷ್ಯರೂಪಿ ರಕ್ಕಸರ ವಿಕೃತಿ ಕಂಡಾಗ ‘ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ’ ಇಟ್ಟಿದ್ದೇ ಒಳ್ಳೆಯದಾಯಿತು ಎಂದೆನಿಸಿಬಿಡುತ್ತದೆ. ಪು.ತಿ.ನರಸಿಂಹಾಚಾರ್ ಅವರ ಕವಿತೆಯೊಂದರ ಈ ಕೆಳಗಿನ ಸಾಲುಗಳು ನೆನಪಾಗಿ ಕಾಡುತ್ತಿರುತ್ತವೆ.
ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ
ಮನುಷ್ಯನ ಹೊರತು ಮತ್ತೆಲ್ಲಾ ಜೀವ ಸಂಕುಲಗಳಲ್ಲೂ ಜೀವೊತ್ಪತ್ತಿ ತಣ್ಣಗೆ, ಪ್ರೀತಿಯಿಂದ, ಶಾಂತಿಯಿಂದ ಆಗುತ್ತಿರುತ್ತದೆ. ಆದರೆ ಮನುಜನಲ್ಲಿ ಜನನದ ಜೊತೆಗೇ ಅಹಂಕಾರದ ಹುಟ್ಟೂ ಆಗಿಬಿಡುತ್ತದೆ. ಅದು ಆತನ ಶಾರೀರಿಕ ಬೆಳವಣಿಗೆಯ ಜೊತೆಗೇ ಬೆಳೆಯುತ್ತಾ ಹೋಗುತ್ತಿರುತ್ತದೆ. ಅಹಂಕಾರ ವಿಧವಿಧ ರೂಪು ತಳೆದು ಬೃಹದಾಕಾರವಾಗಿ ಬೆಳೆದಷ್ಟೂ ವಿವೇಕ, ಸುವಿಚಾರಗಳು ಕಳೆಗುಂದುತ್ತಾ ಹೋಗಿ ಕೊನೆಗೊಮ್ಮೆ ಕಳೆದುಹೋಗಿಬಿಡುತ್ತವೆ. ತನ್ನ ಅಹಂಕಾರವನ್ನು ಹತೋಟಿಯಲ್ಲಿಟ್ಟುಕೊಳ್ಳದೇ, ನಿರ್ದಾಕ್ಷಿಣ್ಯವಾಗಿ ಅದರ ಕೈಗೇ ತನ್ನ ವಿವೇಕವನ್ನು ಕೊಟ್ಟುಬಿಡುವುದೇ ಸಕಲ ವಿಕಾರಗಳಿಗೂ ಕಾರಣವಾಗಿದೆ.
ಹಬ್ಬಗಳ ಮಹತ್ವ ಮತ್ತು ಸ್ಪಂದನೆಯ ಪ್ರಸ್ತುತತೆ:-
ಬದಲಾವಣೆ ಹೇಗೆ ಜಗದ ನಿಯಮವೋ, ಕತ್ತಲು ಹೇಗೆ ಶಾಶ್ವತವಲ್ಲೋ ಹಾಗೇ ಸಮಾಜದೊಳಗೆ ಕ್ಯಾನ್ಸರಿನಂತೇ ಹಬ್ಬುತ್ತಿರುವ ಈ ವಿಕೃತಿಗಳು, ಪ್ರಭೃತಿ ಜೀವಿಗಳು ಶಾಶ್ವತವಲ್ಲ. ಈ ವಿಕಾರ ಮನೋಭಾವದ ತಮ ಕಳೆದು, ಹೊಳೆವ ಹೊಸ ಭಾವಗಳು ಮನುಜನ ಎದೆಯೊಳಗೆ ಹುಟ್ಟಿ, ಬೆಳೆದು, ಮಾತು-ಕೃತಿಗಳಲ್ಲಿ ಚಿಗುರೊಡೆದು ಸಮಾಜಕ್ಕೆ, ವಿಶ್ವಕ್ಕೆ, ನವ ಚೈತನ್ಯವನ್ನು ತುಂಬುವ ಯುಗಾದಿ ಬಂದೇ ಬರುತ್ತದೆ ಎಂಬ ಆಶಾಭಾವನೆ ಈ ಕಾಲದ ತುರ್ತಾಗಿದೆ. ಸುತ್ತಲೂ ಕಾಣಿಸುವ ಕೊಳಕಿಗೆ ಮಾತ್ರ ಸ್ಪಂದಿಸುತ್ತಾ ಹೋದರೆ, ಅದರ ಆಸುಪಾಸಿದಲ್ಲೇ ಇರುವ ಒಳಿತಿನ ಬೆಳಕೂ ಮಸುಕಾಗಿಬಿಡುತ್ತದೆ. ಇದರಿಂದ ಹತಾಶೆ ಹೆಚ್ಚಾಗಿ ಕ್ರಮೇಣ ಸ್ಪಂದನೆಯೇ ಕುಂಠಿತವಾಬಿಡಬಹುದು. ಇದರ ಪರಿಣಾಮವಾಗಿ ಮನುಜ ಸಜೀವ ಶವವಾದರೂ ಆಶ್ಚರ್ಯವಿಲ್ಲ!
ಈಗಾಗಲೇ ನಮ್ಮಲ್ಲಿ ಹಬ್ಬಗಳು ತಮ್ಮ ಪ್ರಸ್ತುತೆಯನ್ನು ಕಳೆದುಕೊಳ್ಳುತ್ತಿವೆ. ಯುಗಾದಿಯಿಂದ ಹಿಡಿದು ದೀಪಾವಳಿಯವರೆಗೂ ಬರುವ ಹಬ್ಬಗಳನ್ನು ಬಹುತೇಕರು ಯಾಂತ್ರಿಕವಾಗಿ ಸ್ವಾಗತಿಸುವುದು, ಆಚರಿಸುವುದು ಹೆಚ್ಚಾಗುತ್ತಿದೆ. ಇದಕ್ಕೆ ಕೂಡು ಕುಟುಂಬದ ಅವಗಣನೆ, ಜಾಗತೀಕರಣ ಎಲ್ಲವುದರ ಕೊಡುಗೆಯೂ ಇದ್ದಿರಬಹುದು. ಆದರೆ ಜೀವಂತಿಕೆಯನ್ನು ಕಾಪಿಟ್ಟುಕೊಳ್ಳುವುದು ಅನಿವಾರ್ಯು ಮತ್ತು ಅಗತ್ಯ. ಎಂಥಾ ಮಹಾ ಕಷ್ಟಗಳು, ಕೌಟುಂಬಿಕ ಸಂಕಟಗಳು ಧುತ್ತನೆ ಎರಗಿದರೂ, ಜೀವನೋತ್ಸಾಹ, ಜೀವನ್ಮುಖಿತ್ವವನ್ನು ಕಳೆದುಕೊಳ್ಳದೇ ಹುರಿದುಂಬಿಸುವ ನಮ್ಮ ಹಿರಿಯರು, ನಾಡಿನ ಹಿರಿಯ ಶ್ರೇಷ್ಠ ಕವಿಗಳು ನಮಗೆ ಸದಾ ಮಾದರಿಯಾಗುತ್ತಾರೆ. ಉದಾಹರಣೆಗೆ:
ಋತುಗಳರಳುತ ಚಕ್ರಗತಿಯಲಿ
ಹೊರಳಿ ಸರಿವುವು ನಿನ್ನೆಗೆ
ನೋವು ನಲಿವಿನ ನಡುವೆ ಕಾದೆವು
ಕರೆವ ಬೆಳಕಿನ ಸನ್ನೆಗೆ...
ಎಂದು ಯುಗಾದಿಯನ್ನು ಸಮಚಿತ್ತದಿಂದ ಸ್ವಾಗತಿಸಿ ಸಂಭ್ರಮಿಸಿದ ನಮ್ಮ ನಾಡಿನ ಪ್ರಸಿದ್ಧ ಕವಿಯಾಗಿರುವ ಶ್ರೀಯುತ ಸುಬ್ರಾಯ ಚೊಕ್ಕಾಡಿಯವರ ಕವಿತೆಯೊಂದರ ಮೇಲಿನ ಸಾಲುಗಳು ಸದಾ ಸ್ಮರಣೀಯ.
-ತೇಜಸ್ವಿನಿ ಹೆಗಡೆ
**********