ಸೋಮವಾರ, ಫೆಬ್ರವರಿ 24, 2014

ಬದುಕ ಬದಲಿಸಬಲ್ಲ ಪುಸ್ತಕ.....

"ಸುಖವು ದುಃಖದ ಕಿರೀಟವನ್ನು ಧರಿಸಿ ಮಾನವನೆದುರು ಬಂದು ನಿಲ್ಲುವುದು. ಯಾರಿಗೆ ಸುಖ ಬೇಕೋ ಅವರು ದುಃಖವನ್ನು ಸ್ವೀಕರಿಸಬೇಕು" - ಇದು ವಿವೇಕಾನಂದರ ಅಮೂಲ್ಯ ನುಡಿಮುತ್ತು. ನನಗೂ ಬಹು ಮೆಚ್ಚುಗೆಯಾದದ್ದು. ಶ್ರುತಿ ಬಿ.ಎಸ್. ಬರೆದಿರುವ "ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ..." ಅನ್ನೋ ಆತ್ಮಚರಿತ್ರೆಯಲ್ಲಿಯೂ ಇದೇ ನುಡಿಯನ್ನು ಉದ್ಧರಿಸಲಾಗಿದೆ. ಅದೇ ರೀತಿ ಶಾನ್ ಸ್ವಾರ್ನರ್‌ನ ಬಡಿದೆಬ್ಬಿಸುವ ಅದ್ಭುತ ನುಡಿಗಳ ಮೋಡಿಗೆ ಒಳಗಾಗದೇ ಇರುವುದು ಅಸಾಧ್ಯ! ಅದರಲ್ಲೂ "ಭರವಸೆಯೇ ಬದುಕು... ಬದುಕು ನಿಂತಿರುವುದೇ ಆಶಾವಾದಿತನದ ಮೇಲೆ..." ಅನ್ನೋ ಅವನ ಅದಮ್ಯ ಉತ್ಸಾಹ, "ಎಲ್ಲವೂ ಸಾಧ್ಯ, ಮನಸ್ಸು ಮಾಡಬೇಕಷ್ಟೇ.." ಅನ್ನೋ ಅನುಭವದ ನುಡಿ, ಎಲ್ಲವೂ ಶ್ರುತಿಯ ಸಾಹಸಗಾಥೆಯಲ್ಲಿ ಹಾಸುಹೊಕ್ಕಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

೨೨ರ ಹರೆಯದ ಈ ಹುಡುಗಿಯನ್ನು ನಾನೀವರೆಗೂ ನೋಡಿಲ್ಲ. ಪರಿಚಯವಾಗಿದ್ದೂ ಅವಳ ಬ್ಲಾಗ್ ಮೂಲಕವೇ! ತದನಂತರ ಮುಖಗೋಡೆಯ ಸಹಾಯದಿಂದ ಪರಿಚಯ ಸ್ನೇಹಕ್ಕೆ ತಿರುಗಿ, ಆಪ್ತತೆ ಬೆಳೆಯಿತು. ಪುಸ್ತಕದಲ್ಲೊಂದು ಕಡೆ ಶ್ರುತಿ ಹೇಳಿಕೊಂಡಿದ್ದಾರೆ. ಆಪ್ತತೆಗೆ ಮಾತುಗಳೇ ಬೇಕೆಂದಿಲ್ಲ. ಸಂವೇದನಾ ಭರಿತ ಕಣ್ಣ ನೋಟ, ಮುಗುಳ್ನಗೆ, ಸಾಂತ್ವನದ ಒಂದೇ ಒಂದು ಮಾತು ಎಲ್ಲವೂ ಆಜನ್ಮ ಮೈತ್ರಿಯನ್ನೇ ಬೆಸೆದು ಬಿಡುತ್ತವೆ ಎಂಬರ್ಥದ ಅನುಭವದ ಮಾತುಗಳನ್ನು ತುಂಬಾ ಸುಂದರವಾಗಿ ಹಂಚಿಕೊಂಡಿದ್ದಾಳೆ. ಅದು ನೂರಕ್ಕೆ ನೂರು ಸತ್ಯ. ನಮ್ಮಿಬ್ಬರ ನಡುವೆ ಮಾತುಗಳು, ಚಾಟಿಂಗ್‌ಗಳು ಆಗಿದ್ದೇ ಅತ್ಯಲ್ಪ. ಎರಡೇ ಸಲ ಫೋನಾಯಿಸಿದ್ದು. ಹೀಗಿದ್ದರೂ ಅದೇನೋ ಎಂತೂ ಅವಳ ಪುಟ್ಟ ಶರೀರದ ತುಂಬೆಲ್ಲಾ ಹೊರ ಹೊಮ್ಮುತ್ತಿದ್ದ ಬೆಟ್ಟದಂತಹ ಧನಾತ್ಮಕ ಪ್ರಭಾವಳಿಗಳು ನೂರಾರು ಮೈಲಿ ದೂರದಲ್ಲಿದ್ದರೂ ನನ್ನನ್ನು  ಸ್ಪರ್ಶಿಸಿ ನಮ್ಮಿಬ್ಬರನ್ನೂ ಬಂಧಿಸಿದ್ದು ಮಾತ್ರ ನೂರಕ್ಕೆ ನೂರು ಸತ್ಯ. ಇದಕ್ಕೆ ಬಹುಶಃ ನನ್ನ ಹೋರಾಟದ ಬದುಕಿನ ಕೊಂಡಿಯೊಂದು ಅವಳೊಂದಿಗೆ ಅವ್ಯಕ್ತವಾಗಿ ಬೆಸೆದುಕೊಂಡಿರುವುದೂ ಆಗಿದ್ದಿರಬಹುದು! ಆಕೆ ಚಿಕಿತ್ಸೆ ಪಡೆದ ಮಣಿಪಾಲ ಆಸ್ಪತ್ರೆಗೂ ನನಗೂ ಹತ್ತಿರದ ನಂಟು, ಒಂದು ತರಹ ಅವಿನಾಭಾವ ಸಂಬಂಧ. ಇನ್ನು ಆಕೆ ಮೆಚ್ಚುವ, ಆರಾಧಿಸುವ ಅವಳ ವೈದ್ಯರಾದ ಡಾ. ಭಾಸ್ಕರಾನಂದರು ನನಗೂ ಆತ್ಮೀಯರು! ವೈದ್ಯರ ಮಾತುಗಳೊಳಗಿನ ಮಾಂತ್ರಿಕತೆಯಲ್ಲೇ ನಿಜವಾದ ಚಿಕಿತ್ಸೆ ಇರುತ್ತದೆ ಎನ್ನುವುದಕ್ಕೆ ಇಂತಹ ಅನೇಕ ವೈದ್ಯರುಗಳೇ ಸಾಕ್ಷಿ!

ಬದುಕನ್ನು ಸವಾಲಾಗಿ ಸ್ವೀಕರಿ, ಎಂತಹ ದುಃಸ್ಥರ ಸ್ಥಿತಿ ಎದುರಾದರೂ, ಪುಟಿದೆದ್ದು ಎದುರಿಸಿ ಉತ್ಕಟವಾಗಿ ಬದುಕ ಪ್ರೀತಿಸುವವರು ಯಾರೇ ಆಗಿದ್ದಿರಲಿ, ಎಲ್ಲೇ ಇದ್ದಿರಲಿ ಅವರೆಲ್ಲಾ ನನ್ನ ಅದೆಷ್ಟೋ ಜನ್ಮಗಳ ಆಪ್ತರೇನೋ ಎಂದೆನಿಸಿಬಿಡುತ್ತಾರೆ ನನಗೆ. ಮಾತು, ಕಥೆ, ಭೇಟಿ, ಒಡನಾಟ - ಇವುಗಳಿಲ್ಲದೆಯೋ ಅವರೆಲ್ಲಾ ನನ್ನ ಬಂಧುಗಳೇನೋ ಎಂದೆನಿಸಿಬಿಡುತ್ತಾರೆ! ನಿಜ.. ನೋವಿಗೆ ಸಶಕ್ತ ಬಂಧ ಕಲ್ಪಿಸುವ ಶಕ್ತಿಯಿದೆ.. ಅದು ಸಂತಸಕ್ಕೆ ಅತಿ ಕಡಿಮೆಯೇಂದೇ ಹೆಳಬಹುದು!

೧೮ರ ಹರೆಯದಲ್ಲೇ ಮೂಳೆ ಕ್ಯಾನ್ಸರ್‌ಗೆ ಒಳಗಾಗಿ ೬ ಕೀಮೋಥೆರಪಿಯ ಹಿಂಸೆಯನ್ನು ಅನುಭವಿಸಿ, ನಡು ನಡುವೆ ಹತ್ತು ಹಲವಾರು ದೈಹಿಕ, ಮಾನಸಿಕ ಯಾತನೆಗಳನ್ನು ತಡೆದುಕೊಂಡೂ, ಸಾವೇ ನಿನ್ನ ಪಾಲಿಗೆ ಸದ್ಯ ಸಾವೇ ಗತಿ ಎಂದು ಬದುಕ ಕೈ ಹಿಡಿದು ಮುನ್ನೆಡೆದ ಈ ದಿಟ್ಟ ಹುಡುಗಿ ನನ್ನ ದೈನಂದಿನ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾಳೆ. ಇವಳ ಬರಹದೊಳಗಿನ ಅಪ್ಪಟ ಜೀವನ ಪ್ರೀತಿ, ಪ್ರಾಮಾಣಿಕತೆ, ಜಗತ್ತನ್ನು ಅತಿ ಸಣ್ಣ ವಯಸ್ಸಿನಲ್ಲೇ ಸೂಕ್ಷ್ಮವಾಗಿ ಗ್ರಹಿಸಿ, ಬಂಧಿಸಿಕೊಡುವ ರೀತಿ, ನಿರೂಪಣಾ ಶೈಲಿ ಎಲ್ಲವೂ ಮನಸೂರೆಗೊಂಡವು..... ಮಾರುಹೋದೆ!

ನೆನಪಿಡಿ, ಈಕೆ ನಮ್ಮಂತಹ ದೊಡ್ಡ ಶಹರದಲ್ಲಿ ಹುಟ್ಟಿ, ಬೆಳೆದವಳಲ್ಲ!! ಶಿವಮೊಗ್ಗ ಜಿಲ್ಲೆಯಲ್ಲಿರುವ ಹೊಸನಗರ ತಾಲ್ಲೂಕಿನ, ಪುಟ್ಟ ಬಾಣಿ ಗ್ರಾಮ ವಾಸಿ ಈಕೆ! ಹಾಗಿದ್ದೂ ಇಂತಹ ಒಂದು ಭಯಂಕರ ವ್ಯಾಧಿ ೧೮ರ ಕನಸುಕಂಗಳಿಗೆ ಬಡಿದಾಗ ಅದೆಷ್ಟು ಆಕೆಯ ಜೀವ, ಹೆತ್ತವರು ಒದ್ದಾಡಿರಬಹುದೆಂಬುದು ಊಹೆಗೂ ನಿಲುಕದ್ದು. ಹಳ್ಳಿಯ ಜನರ ಮುಗ್ಧತೆಯಲ್ಲೇ ಒಂದು ತರಹದ ಮೊಡ್ಡುತನವೂ ಬೆರೆತಿರುವುದೂ ಹೆಚ್ಚು ಕಂಡು ಬರುತ್ತದೆ. ನಮ್ಮೂರ ಕಡೆ ಅಂದರೆ ಆ ಕಡೆ ಇಂತಹ ಖಾಯಿಲೆ ಬಂದರೆ ಬದುಕುವುದೇ ವ್ಯರ್ಥ, ಸಾವು ಅನಿವಾರ್ಯ ಅನ್ನೋ ಮನೋಭಾವ ತುಸು ಹೆಚ್ಚೇ ಕಂಡು ಬರುತ್ತದೆ. (ಪಟ್ಟಣ ವಾಸಿಗಳಲ್ಲಿ ಇಲ್ಲ ಎಂದೂ ನಾನು ಹೇಳುತ್ತಿಲ್ಲ...). ಅವರ ಇಲ್ಲ ಸಲ್ಲದ ಅವ್ಯಾಹತ ಪ್ರಶ್ನೆಗಳು, ರೋಧನಗಳು, ಕಪೋ ಕಲ್ಪಿತ ಕಥೆಗಳು, ಗಾಳಿ ಸುದ್ದಿಗಳು, ಅನಗತ್ಯದ ಅನುಕಂಪಗಳು ಎಲ್ಲವನ್ನೂ ಆಕೆ, ಅವಳ ಮನೆಯವರು ಸಹಿಸಿ, ಧಿಕ್ಕರಿಸಿ ಮುನ್ನೆಡೆಯಬೇಕಾಗಿತ್ತು. ದೂರದೂರಿಂದ ೫ ತಾಸುಗಳ ಪ್ರಯಾಣ ಮಾಡಿ ಪ್ರತಿ ಸಲ ಕೀಮೋಥೆರಪಿಗಾಗಿ ಮಣಿಪಾಲಕ್ಕೆ ಬಂದು ಚಿಕಿತ್ಸೆ ಪಡೆದು, ಹಿಂತಿರುಗಿ, ಯಾತನೆ ಅನುಭವಿಸಿ, ಪ್ರತಿ ದಿನ ಆತಂಕದ ಜೊತೆ ಜೀವಿಸುತ್ತಾ, ಹೆಚ್ಚು ಕಡಿಮೆ ಆದರೆ ಮತ್ತೆ ತಾಸುಗಟ್ಟಲೆ ಪ್ರಯಾಣಿಸಿ ಹೈರಾಣಾಗುತ್ತಾ, ಆತಂಕಗಳನ್ನು ಎದುರಿಸುತ್ತಾ, ಅತಿಯಾದ ವೆಚ್ಚಗಳನ್ನು ಹೇಗೋ ಭರಿಸುತ್ತಾ, ಎಲ್ಲವನ್ನೂ ಧೈರ್ಯದಿಂದ, ಆತ್ಮಬಲದಿಂದ ದಾಟಿ ಇಂದು ಈ ಕ್ಯಾನ್ಸರ್‌ಗೆ ವಿದಾಯ ಹೇಳಿ ನಳನಳಿಸುತ್ತಿರುವ ಶ್ರುತಿಯ ಬದುಕಿನ ಈ ಹೋರಾಟದ ಗಾಥೆಯನ್ನು ಓದಿದರೆ ನಮ್ಮ ಬದುಕಿನ ದಿಕ್ಕನ್ನೂ ಬದಲಿಸಿಕೊಳ್ಳಬಹುದು.

‘ಮನುಷ್ಯನ ಮನಸ್ಸಿಗೆ ಬಹಳ ಶಕ್ತಿಯಿದೆ. ಮನೋಬಲವೊಂದಿದ್ದರೆ ಏನನ್ನೂ ಸಾಧಿಸಬಹುದು. ಯಾವ ಸಮಸ್ಯೆಯನ್ನಾದರೂ ಎದುರಿಸಬಹುದು. ಒಂದು ವೇಳೆ ಮನಸು ದುರ್ಬಲವೆನಿಸಿದರೆ ಹೃದಯದ ಮೇಳೆ ಕೈ ಇಟ್ಟು- "ನೀನು ದುರ್ಬಲವಾಗಿಲ್ಲ. ನೀನಿದನ್ನು ಮಾಡಬಲ್ಲೆ" ಎಂದು ಹೇಳಿ , ಅದು ನಿಮ್ಮ ಮಾತನ್ನು ಕೇಳಿಯೇ ಕೇಳುತ್ತದೆ’. ಎನ್ನುತ್ತಾಳೆ ಶ್ರುತಿ. ಇದು ಮಾತ್ರ ಅಪ್ಪಟ ಚಿನ್ನದಂತಹ ಮಾತುಗಳು. ಇದು ನನ್ನ ಬದುಕಿನ ಪ್ರೇರಣೆಯ ಸಾಲೂ ಹೌದು! ಬಾಲ್ಯದಲ್ಲಿ ಎಲ್ಲರೂ ಹೊರ ಬಿದ್ದು ಆಡುವಾಗ, ಒಂಟಿಯಾಗಿ ಕುಳಿತು ಒಳಗೊಳಗೇ ದುಃಖಿಸುತ್ತಿದ್ದ ನನಗೆ ಅಪ್ಪ-ಅಮ್ಮ ಹೇಳಿದ್ದು -
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ, 
ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ಯೋತ್ತಿಷ್ಠ ಪರಂತಪ ”(ಸಾಂಖ್ಯಯೋಗ) (..ಹೇಡಿಯಾಗಬೇಡ, ಇದು ನಿನಗೆ ಯೋಗ್ಯವಲ್ಲ, ಅತಿ ಕ್ಷುಲ್ಲಕವಾದ ಹೃದಯ ದೌರ್ಬಲ್ಯವನ್ನು ಬಿಟ್ಟು, ಮೇಲೇಳು !) ಅದೇ ರೀತಿ "ಸುಖ ದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ (ಸುಖ-ದುಃಖ, ಲಾಭ-ನಷ್ಟ, ಜಯಾಪಜಯಗಳನ್ನು ಸಮವಾಗಿ ಸ್ವೀಕರಿಸಿ ಯುದ್ಧಕ್ಕೆ ತೊಡಗು...) ಎಂದು ಸದಾ ಹೆಳುತ್ತಲೇ ನನ್ನ ಮೇಲೆಬ್ಬಿಸಿದ್ದಾರೆ. ಬದುಕು ಒಂದು ಯುದ್ಧರಂಗವೇ ಸಮಚಿತ್ತತೆ ಇದ್ದಲ್ಲಿ ಮಾತ್ರ ಅಂತಿಮ ವಿಜಯ ನಮ್ಮದೇ... ನಿನಗೇ ನೀನೇ ಮಿತ್ರ, ಶತ್ರು, ಗೆಲುವು, ಸೋಲು ಎನ್ನುವುದನ್ನು ಮನದಟ್ಟು ಮಾಡಿಕೊಂಡರೆ ಯಾವುದೂ ಅಸಾಧ್ಯವಲ್ಲ!

ಹೋರಾಟದ ಬದುಕು ಬಹು ಬೇಗ ಹಲವನ್ನು ಕಲಿಸಿಬಿಡುತ್ತದೆ. ಕೆಲವರಿಗೆ ಬೇಗ ಕಣ್ತೆರೆದರೆ, ಇನ್ನು ಕೆಲವರಿಗೆ ತುಸು ತಡವಾಗಬಹುದೇನೋ! ಶ್ರುತಿ ಹಾಗೂ ನನ್ನಂತಹವರ ಪಾಲಿಗೆ ಬದುಕು ತುಂಬಾ ಕರುಣಾಮಯಿಯಾಗಿದೆ. ಬಹು ಬೇಗ ಅದರ ಪ್ರಾಮುಖ್ಯತೆ, ಅದರ ಕಹಿಯೊಳಡಗಿರುವ ಸವಿ, ಅದೊಡ್ಡುವ ಸವಾಲೊಳಗಿನ ರುಚಿ ಎಲ್ಲವನ್ನೂ ಕಲಿಸಿಕೊಟ್ಟಿದೆ, ಪ್ರತಿ ದಿನ ಕಲಿಸಿಕೊಡುತ್ತಲೇ ಇದೆ. 

ಚಿಕಿತ್ಸೆಯಾನಂತರ ಶ್ರುತಿ ಆ ಪುಟ್ಟ ಗ್ರಾಮದಲ್ಲೇ ಕುಳಿತು, ಅಂತರ್ಜಾಲದ ಮೂಲಕ  ದೇಶ, ವಿದೇಶಗಳಲ್ಲಿರುವ ತನ್ನತಂಹ ಪೀಡಿತರನ್ನು, ಗುಣಮುಖಿಗಳಾಗಿ ಜೀವನ್ಮುಖಿಯರಾದ ಹಲವು ಕ್ಯಾನ್ಸರ್ ಪೀಡಿತರನ್ನು ಸಂಪರ್ಕಿಸಿದ್ದಲ್ಲದೇ ಅವರಿಂದ ಹಲವು ಸ್ಪೂರ್ತಿಯನ್ನು ಪಡೆದು, ತನ್ನಂತೇ ನೊಂದವರಿಗೆ ಮಾರ್ಗದರ್ಶನ ನೀಡಿ, ತನ್ನ ಅನುಭವಗಳನ್ನು ಹಂಚಿಕೊಂಡವಳು. ಇವಳ ಪರಿಮಿತಿಯಲ್ಲಿ ಇಂತಹ ಸಾಧನೆ ಅಪರಿಮಿತ! ಅತ್ಯಲ್ಪದರಲ್ಲೇ ಮಹತ್ತನ್ನು ಸಾಧಿಸಿದ ಇವಳ ಬದುಕೊಂದು ಮಾದರಿ ಹಾಗೂ ಅನುಕರಣೀಯ ಎಂದು ಹೇಳುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಖಂಡಿತವೂ ಇಲ್ಲ. ಒಮ್ಮೆ ಪುಸ್ತಕವನ್ನೋದಿ... ನಿಮಗೂ ನನ್ನ ಮಾತುಗಳೆಷ್ಟು ಸತ್ಯ ಎಂದೆನಿಸುವುದರಲ್ಲಿ ನನಗೆ ಇನಿತೂ ಸಂಶಯವಿಲ್ಲ :)


ಪುಸ್ತಕದ ಹೆಸರು : ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ....
ಲೇಖಕಿ : ಶ್ರುತಿ ಬಿ.ಎಸ್.
ಪ್ರಕಾಶಕರು : ಗೋಮಿನಿ ಪ್ರಕಾಶನ
ಪುಟಗಳು : ೧೨೦
ಬೆಲೆ : ೮೦ ರೂಪಾಯಿಗಳು
( sapnaonline ನಲ್ಲೂ  ಲಭ್ಯ)

-ತೇಜಸ್ವಿನಿ.

ಬುಧವಾರ, ಫೆಬ್ರವರಿ 5, 2014

ನಿರುತ್ತರ

ವಾರದ ಹಿಂದಷ್ಟೇ ತನ್ನ ಕಿರು ಬೆರಳನ್ನೇರಿ ಕುಳಿತಿದ್ದ ಚಿನ್ನದುಂಗುರದೊಳಗಿನ ಪಚ್ಚೆ ಹರಳನ್ನೇ ತದೇಕವಾಗಿ ದಿಟ್ಟಿಸುತ್ತಿದ್ದಳು ಭುವನ. "ಅಕ್ಕಾ... ಶಾಸ್ತ್ರಿಗಳು ಹೇಳಿದ್ದಾರೆ, ಪಚ್ಚೆ ಹರಳನ್ನು ಹಾಕ್ಕೊಂಡ್ರೆ ಎಲ್ಲಾ ಸರಿ ಆಗೊತ್ತಂತೆ... ನಿನ್ನ ಆರೋಗ್ಯ ಬೇಗ ಸುಧಾರಿಸಿ, ನೀನು ಆರಾಮಾಗಿ ಮನೆಗೆ ಬರ್ತೀಯಂತೇ.... ಅವ್ರು ತುಂಬಾ ದೊಡ್ಡ ಜ್ಞಾನಿಗಳು... ಖಂಡಿತ ಹೇಳಿದಾಂಗೇ ಆಗೊತ್ತೆ.. ಪ್ಲೀಸ್ ನಿಂಗೆ ನಂಬ್ಕೆ ಇಲ್ದೆ ಹೋದ್ರೆ ಹೋಗ್ಲಿ... ನಂಗೋಸ್ಕರ ಹಾಕ್ಕೊಳ್ಲೇ ಬೇಕು..." ಎಂದು ಒತ್ತಾಯದಿಂದ ತನ್ನ ಖರ್ಚಲ್ಲೇ ಉಂಗುರ ಮಾಡಿಸಿಕೊಂಡು ಬಂದು ತನ್ನ ಬೆರಳಿಗೆ ತೊಡಿಸಿದ್ದ ತಮ್ಮನ ನೆನೆದು ಅವಳ ಮನಸು ಆರ್ದ್ರವಾಯಿತು. ಅಸಾಧ್ಯ ತಲೆ ನೋವಿಂದ ಹಾಗೇ ಕಣ್ಮುಚ್ಚಿದಳು. "ಹುಚ್ಚು ಹುಡುಗ.... ನಿಯತಿಯ ಮುಂದೆ ಯಕಃಶ್ಚಿತ್ ಈ ಹರಳಿನದೇನು ನಡದೀತು? ಹ್ಮ್ಂ.. ಎಲ್ಲವೂ ಗೊತ್ತಿದ್ದದ್ದೇ... ಹೇಳಾಯ್ತಲ್ಲಾ ಡಾಕ್ಟರ್.... ಹೆಚ್ಚು ಅಂದ್ರೆ ಇನ್ನು ಆರೇ ತಿಂಗ್ಳು ಅಂತ...... ಸುಮ್ನೇ ಉಂಗುರಕ್ಕೊಂದಿಷ್ಟು ದುಡ್ಡು ದಂಡ ಮಾಡಿದ್ದಾಯ್ತು..." ಎಂದುಕೊಳ್ಳುತ್ತಿದ್ದಂತೇ ಆಕೆಗೆ ತುಂಬಾ ಅಚ್ಚರಿಯಾಯಿತು. ಅರೆ.. ತಾನೆಂದು ಇಷ್ಟು ನಿರ್ಲಿಪ್ತಳಾಗಿ ಹೋದೆ? ಅದೂ ತನ್ನ ಸ್ವಂತ ಸಾವಿನ ಸುದ್ದಿಯ ತಿಳಿದ ಮೇಲೂ?! ಬಹುಶಃ ಸಾವು ತನ್ನ ಜೊತೆ ಒಂದಿಷ್ಟು ಭಂಡ ಧೈರ್ಯವನ್ನೂ ಹೊತ್ತೇ ತರುತ್ತದೇನೋ...! ಮೊನ್ನೆಯವರೆಗೂ ಕ್ಯಾನ್ಸರ್ ಆಗಿರ್ಲಿಕ್ಕೇ ಇಲ್ಲಾ.. ಎಲ್ಲೋ ಏನೋ ತಪ್ಪಾಗಿದೆ... ರಿಪೋರ್ಟೇ ಸುಳ್ಳಿರಬೇಕು ಎಂದೆಲ್ಲಾ ಸುಳ್ಳ್‌ಸುಳ್ಳೇ ನನ್ನ ಸಮಾಧಾನಿಸಲು ಎಲ್ಲರೂ ಹೇಳಿದ್ದನ್ನೇ ತಾನೂ ಸುಳ್ಳ್‌ಸುಳ್ಳೇ ನಂಬಿದ್ದೂ ಆಗಿತ್ತು. ಹಿಂದೋಡೋದು ಸುಲಭ... ನಿಂತು ಎದುರಾಗೋದು, ಜೊತೆ ಸಾಗೋದು.. ಸಾಗುತ್ತಾ ದಾಟಿ ಮುನ್ನೆಡೆಯೋದು ಎಷ್ಟು ಕಷ್ಟ ಎಂದು ತನಗೆ ಗೊತ್ತಾಗಿದ್ದೇ ಈ ಅರ್ಬುದೆಯ ಕಪಿಮುಷ್ಟಿಗೆ ಸಿಲುಕಿದ ಮೇಲೇ!" 

ಬದುಕಲ್ಲಿ ತಾನಿನ್ನು ಐದಾರು ತಿಂಗಳ ಅತಿಥಿಯಷ್ಟೇ ಅನ್ನೋದು ಸುಸ್ಪಷ್ಟವಾದ ಮೇಲೆ ಭುವನವಳಲ್ಲಿ ಮಹತ್ತರ ಬದಲಾವಣೆಗಳಾಗಿದ್ದವು.  ಇಷ್ಟೇ.. ಹೀಗೇ... ಇದೇ ಪರಮ ಸತ್ಯ ಅನ್ನೋದನ್ನ ತಾನು ಸ್ವೀಕರಿಸಿದ ತಕ್ಷಣ ಗಂಡ, ಮಗ, ಅತ್ತೆ, ಮಾವ, ಒಡಹುಟ್ಟಿದವರನ್ನೆಲ್ಲಾ ಕರೆದು ಹೇಳಿ ಬಿಟ್ಟಿದ್ದಳು... "ನಗ್ತಾನೇ ಇರೋದು ಸಾಧ್ಯವಿಲ್ದೇ ಹೋಗ್ಬಹುದು.. ಅಳೋದಂತೂ ಬೇಡ..... ಹಾಗೆ ಬೇಕು ಅಂದ್ರೆ ಒಂದು ಟೈಮ್ ಫಿಕ್ಸ್ ಮಾಡ್ಕೊಂಡು ಎಲ್ರೂ ಒಟ್ಟಿಗೆ ಅತ್ತು, ಕೋಟಾ ಮುಗ್ಸಿ, ಎದ್ದು ಹೊರಡೋಣ..." ಅಂದವಳ ಮಾತಿಗೆ ಅಕ್ಷರಶಃ ಎಲ್ಲರೂ ಮನಸಾರೆ ಅತ್ತು ನಕ್ಕಿದ್ದರು. ತನ್ನ ನೋಡಲು ಬರುವವರ ಕಣ್ಣಲ್ಲಿ, ಮಾತಲ್ಲಿ  ಮತ್ತೆ ಮತ್ತೆ ಅನುಕಂಪ, ಅದೇ ಗೋಳು, ಕೆಟ್ಟ ಕುತೂಹಲಕ್ಕೆ ಸಿಲುಕಿ, ಪ್ರತಿ ಕ್ಷಣ ಸಾಯಬಾರದೆಂದೇ "ಟ್ರೀಟ್ಮೆಂಟ್ ಮಾಡಿಸಿಕೊಳ್ಳಲೇ ಬೇಕಂದ್ರೆ ಈ ಊರನ್ನು ಬಿಟ್ಟು ಬೇರೆ ಕಡೆ ಕರ್ಕೊಂಡು ಹೋಗಿ...." ಎಂದು ಹಠ ಮಾಡಿ ದೂರದ ಪುಣೆಯಲ್ಲಿರುವ ಗೋಘಲೆ ಆಸ್ಪತ್ರೆಯನ್ನು ಸೇರಿದ್ದಳು. ಎರಡು ದಿನದ ಹಿಂದಷ್ಟೇ ಮೂರನೆಯ ಕೀಮೋ ಥೆರಪಿಯಾಗಿತ್ತು. ವಿಪರೀತ ಸುಸ್ತು, ಆಯಾಸ, ವಾಂತಿ, ಯಾತನೆಯಿಂದ ಸೋತು ಹೋಗಿದ್ದರೂ, ಪದೇ ಪದೇ ಮಾಯಾಳ ನೆನಪು ಕಾಡುತ್ತಿತ್ತು. ಜೊತೆಗೇ ಮಾಯಾಳಲ್ಲಿ ತಾನು ಮುಂದೆಂದಾದರೂ ಕೇಳಲೇಬೇಕೆಂದು ಕಾದಿರಿಸಿಕೊಂಡಿದ್ದ ಪ್ರಶ್ನೆಯೊಂದು ಮನದೊಳಗೆ ಅತ್ತಿಂದಿತ್ತ ಅಡ್ಡಾಡುತಲಿತ್ತು. ಸಮಯ ಕೈಮೀರುತ್ತಿದೆ...... ಕಾಲ ಸ್ತಬ್ಧವಾಗುವ ಮುನ್ನ ಆ ಪ್ರಶ್ನೆ ಕೇಳಿ, ಅವಳಲ್ಲಿ ಉತ್ತರ ಪಡೆಯಲೇಬೇಕೆಂಬ ತುಡಿತ ದಿನೇ ದಿನೇ ಅವಳಲ್ಲಿ ಹೆಚ್ಚಿ, ಬದುಕನ್ನು ಕಚ್ಚಿ ಹಿಡಿವ ವಿಚಿತ್ರ ಶಕ್ತಿಯನ್ನೂ ಅದೆಲ್ಲಿಂದಲೋ ತುಂಬತೊಡಗಿತ್ತು.

ಮಾಯಾ... ಒಂದು ಕಾಲದ ತನ್ನ ಅತ್ಯಾಪ್ತ ಗೆಳತಿ! ಈಗ ಹೇಗಿದ್ದಾಳೋ.. ಎಲ್ಲಿದ್ದಾಳೋ? ಮುಂಬಯಿಯಲ್ಲೆಲ್ಲೋ ಇದ್ದಾಳೆ ಅಂತಿದ್ದಳಪ್ಪಾ ಸೀಮಾ.... ಅವಳನ್ನು ಸಂಪರ್ಕಿಸಿ ತಾನು ಮಾಯಾಳ ವಿಳಾಸ ತೆಗೆದುಕೊಳ್ಳಲೇ ಬೇಕು... ಹೇಗೂ ಪುಣೆಗೆ ಬಂದಾಗಿದೆ.. ಅವಿನಾಶನ ಕೇಳಿದರೆ ಇಲ್ಲವೆನ್ನಲ್ಲಾರ.. ಊರಿಗೆ ತೆರಳುವ ಮುನ್ನ ಒಮ್ಮೆ ಮುಂಬಯಿಗೆ ಹೋಗಲೇಬೇಕು.... ಅವಳ ಭೇಟಿ ಮಾಡಿ ಆ ಪ್ರಶ್ನೆಯನ್ನು ಕೇಳಿ ಬಿಡಲೇಬೇಕು.. ಬಡಪಟ್ಟಿಗೆ ಉತ್ತರಿಸಲಾರಳು. ಗೊತ್ತು.. ಕೆಟ್ಟ ಹಠಮಾರಿ.. ತಾನೂ ಬಿಡಬಾರದು... "ನೋಡು ಮಾಯಾ, ಸಾವಿನ ಹೊಸ್ತಿಲಲ್ಲಿ ನಿಂತಿದ್ದೀನಿ... ಸುಳ್ಳು ಹೇಳಿದ್ರೆ ನಿನ್ನೊಳ್ಗೆ ಪಿಶಾಚಿಯಾಗಿ ಕಾಡೋದು ಗ್ಯಾರಂಟಿ! ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರ ಕೊಟ್ಬಿಡು... ನೀನು ಕೊಟ್ಟ ನೋವು, ವಂಚನೆ, ಏಟು ಎಲ್ಲವನೂ ಮಾಫ್ ಮಾಡಿ ಹೋಗಿಬಿಡುತ್ತೇನೆ... ನೀನೂ ನಿರಾಳವಾಗಿ ಬದುಕಬಹುದು.. ನಾನೂ ಹಾಯಾಗಿ ಸಾಯಬಹುದು... ಒಂದು ಕಾಲದಲ್ಲಿ ಆಪ್ತ ಗೆಳತಿಯಾಗಿದ್ದೆ....  ಆ ಒಂದು ಋಣ ಇಟ್ಕೊಳ್ದೇ ಈ ರೀತಿ ತೀರಿಸ್ತೀಯಾ ಅಂದ್ಕೊತೀನಿ...  ಪ್ಲೀಸ್.... ಉತ್ತರ ಕೊಟ್ಬಿಡು.. ಆಮೇಲೆ ನಿನ್ನ ಏನೂ ಕೇಳೊಲ್ಲೆ.. ಒಂದೇ ಒಂದು ಪ್ರಶ್ನೆ.... "ನಮ್ಮಿಬ್ಬರ ನಡುವೆ ಬೆಳಗ್ತಾ ಇದ್ದ ಸ್ನೇಹದ ಚಂದ್ರನ ಹಿಡಿದು ಚೂರುಗಳನ್ನು ಮಾಡಿ ಉರಿದು ಬೀಳುವ ಉಲ್ಕೆಗಳನ್ನಾಗಿಸಿದೆ ಯಾಕೆ?!" ಇಷ್ಟೇ... ಮುಗೀತು... ಎಷ್ಟು ಸರಳ ಅಲ್ವಾ? ಉತ್ತರ ಕೊಟ್ಬಿಡು ಬೇಗ.. ಹೆಚ್ಚು ಸಮಯವಿಲ್ಲ ನನ್ನ ಕೈಲಿ.." ಎಂದು ಎಮೋಷನಲ್ ಬ್ಲಾಕ್‌ಮೈಲ್ ಮಾಡಿಯಾದ್ರೂ ಸತಾಯಿಸ್ಬೇಕು ಅವ್ಳನ್ನ. ಭುವನಳ ಮನಸು ಹಲವು ರೀತಿಯಲ್ಲಿ ಮಂಡಿಗೆ ತಿನ್ನುದ್ದರೆ, ಬಾಯಿ ನುಂಗುತ್ತಿದ್ದ ಮಾತ್ರೆಗಳ ಕಹಿಯೂ ಅವಳರಿವಿಗೆ ಬರದಂತಾದಗಿತ್ತು. ಈ ಹುಚ್ಚುಚ್ಚು ಆಲೋಚನೆಗಳು ಅವಳನ್ನು ಅವಳೊಳಗಿನ ಯಾತನೆಯಿಂದ ತುಸುವಾದರೂ ದೂರವಿಡಲು ಸಮರ್ಥವಾಗಿದ್ದವು. ದಿನೇ ದಿನೇ ಮಾಯಾಳನ್ನು ನೋಡುವ ಕಾತುರ ಹೆಚ್ಚುತ್ತಲೇ ಹೋಯಿತು. ಸೀಮಾಳಿಂದ ಅವಳ ವಿಳಾಸವನ್ನು ಪಡೆದಾಗಿತ್ತು. ಭುವನಳ ಹಠಕ್ಕೆ ಸೋತು, ಪತಿ ಅವಿನಾಶ ಮುಂಬಯಿಗೆ ಟಿಕೇಟನ್ನು ಬುಕ್ ಮಾಡಿಸಿದ್ದ. ಇನ್ನೆರಡು ದಿನಗಳೆದರೆ ತನ್ನೆದುರು ಮಾಯೆ! ತನ್ನ ಕಂಡು, ಈ ಸ್ಥಿತಿಕಂಡು, ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಪ್ರಶ್ನೆಯ ನಿಘಾತಕ್ಕೆ ರಾವು ಬಡಿದಂತೇ ಕುಳಿತ ಅವಳ ಮೊಗದ ಕಲ್ಪನೆಯಿಂದ ಒಳಗೊಳಗೇ ಉತ್ತೇಜಿತಳಾಗುತ್ತಿದ್ದಳು ಭುವನ. ತನಗೆ ಸಾವು ಒದಗಿದ್ದೇ ಈ ಮಹತ್ಕಾರ್ಯ ಸಾಧಿಸಲೋಸುಗವೇನೋ ಎಂಬ ಒಂದು ವಿಚಿತ್ರ ಉದ್ವೇಗ, ಉತ್ಕಟತೆ ಅವಳನ್ನಾವರಿಸಿತ್ತು.

"ಭುವಿ ಬಾ ಹಾಗೇ ವರಾಂಡಕ್ಕೆ ಹೋಗಿ ಬರೋಣ.. ನಿಂಗೆ ಸ್ವಲ್ಪ ಹಾಯೆನಿಸೊತ್ತೆ.." ಎಂದು ಎಬ್ಬಿಸಿದ ಪತಿಯನ್ನು ತುಸು ಗೆಲುವಿನಿಂದಲೇ ಹಿಂಬಾಸಿಲಿಸಿದಳು. ಜೋಲಿ ತಪ್ಪದಂತೇ ಬಳಸಿದ್ದ ಅವನ ಕೈಯನ್ನು ಭದ್ರವಾಗಿ ಹಿಡಿದು ಮುನ್ನಡೆಯುತ್ತಿದ್ದವಳಿಗೆ ತಾವು ೨೦ ವರ್ಷಗಳ ಹಿಂದೆ ಹೀಗೇ ಕೈ ಹಿಡಿದು, ಸಪ್ತಪದಿ ತುಳಿದ ನೆನಪಾಗಿ ಕಣ್ಣು ಮಂಜಾಯಿತು. ತಾನು ಮಾಡಿದ್ದ ಕರಾರಿನ ನೆನಪಾಗಿ ಉಗುಳುನುಂಗಿ ತಡೆದುಕೊಂಡಳು. ವರಾಂಡದಲ್ಲಿದ್ದ ಬೆಂಚಿನ ಮೂಲೆಯಲ್ಲಿ ಕುಳಿತು ಹಾಗೇ ನಾಳೆಯ ತನ್ನ ಪ್ರಯಾಣದ ಸಿದ್ಧತೆಗೆ ಬೇಕಾದ ವಸ್ತುಗಳನ್ನು ನೆನೆಸಿಕೊಳ್ಳುತ್ತಾ ಅತ್ತ ತಿರುಗಲು, ಹತ್ತಿಪ್ಪತ್ತು ಮಾರು ದೂರದಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತು ಎಲ್ಲೋ ದಿಟ್ಟಿ ನೆಟ್ಟಿದ್ದ ವ್ಯಕ್ತಿಯನ್ನು ಕಂಡು ನಿಶ್ಚೇಚಿತಳಾದಳು. ಅವಳ ಕೈ ಕಾಲೆಲ್ಲಾ ಮರಗಟ್ಟಿದಂತಾಗಿ ಬೆವರು ಕಿತ್ತು ಬರಲಾರಂಭಿಸಿತು. ಆ ವ್ಯಕ್ತಿಯ ಬೆನ್ನಿಗೆ ಆಧಾರವಾಗಿ ದಿಂಬನ್ನಿಟ್ಟು ಇವರಿಬ್ಬರನ್ನು ಹಾದು ಹೋಗುತ್ತಿದ್ದ ಸಿಸ್ಟರ್‌ಅನ್ನು ತಡೆದು, ಉಸಿರು ಬಿಗಿ ಹಿಡಿದು ಪ್ರಶ್ನಿಸಿದಳು ಭುವನ. "ಸಿಸ್ಟರ್ ಯಾರಾಕೆ? ಅವ್ಳಿಗೇನಾಗಿದೆ? ಪ್ಲೀಸ್ ಹೇಳಿ.." ಎಂದು ಪ್ರಯಾಸದಿಂದ ಉದ್ವೇಗವನ್ನು ನಿಯಂತ್ರಿಸಿಕೊಳ್ಳುತ್ತಾ ಪ್ರಶ್ನಿಸಿದಳು.  "ಯಾರು? ಓ ಅಲ್ಲಿ  ವ್ಹೀಲ್‌ಚೇರ್ ಮೇಲೆ ಕೂತಿರೋರಾ? ಮುಂಬಯಿಯಿಂದ ಬಂದು ಎರಡು ದಿನಗಳಾದವು ಅಷ್ಟೇ..... ಬಟ್ ಲೇಟಾಗಿ ಹೋಗಿದೆ... ಲಿವರ್ ಕ್ಯಾನ್ಸರ್ ಲಾಸ್ಟ್ ಸ್ಟೇಜ್‌ನಲ್ಲಿದೆ.... ಹೆಚ್ಚು ಅಂದ್ರೆ ಇನ್ನೊಂದು ತಿಂಗ್ಳು ಅಷ್ಟೇ..... ಯಾಕೆ? ಅವ್ರು ನಿಮಗೆ ಪರಿಚಯದವ್ರಾ? .." ಎಂದು ಮತ್ತೇನೇನೋ ಹೇಳ್ತಾ, ಕೇಳ್ತಾ ಇದ್ದವ್ಳನ್ನು ಸರಿಸಿಕೊಂಡು, ಇದ್ದ ಬಿದ್ದ ಕಸುವನ್ನೆಲ್ಲಾ ಒಗ್ಗೂಡಿಸಿ ತನ್ನ ಕೋಣೆಯೆಡೆ ತುಸು ಓಡುತ್ತಲೇ ಸಾಗಿದಳು. ಗಡಬಡಿಸಿ ಹಾಸಿಗೆಯನ್ನೇರಿದವಳೇ ಮುಖದವರೆಗೂ ಮುಸುಕು ಬೀರಿ ಮಲಗಿ ಬಿಟ್ಟಳು. ಅವಳ ಹಿಂದೆಯೇ ಬಂದ ಅವಿನಾಶ, ಭುವನಳನ್ನು ಮಾತನಾಡಿಸಲು ಯತ್ನಿಸಿ ಸೋತು, ಏನೊಂದೂ ಆರ್ಥವಾಗದೇ ಬೆಪ್ಪಾಗಿ ಕುಳಿತ. ಹೊದಿಕೆಯೊಳಗೆ ಗಟ್ಟಿಯಾಗಿ ಕಣ್ಮುಚ್ಚಿ ಮಲಗಿದ್ದವಳ ತಲೆಯ ತುಂಬೆಲ್ಲಾ ಹೊಸ ಪ್ರಶ್ನೆಯೊಂದು ಧಾಂಗುಡಿಯಿಡತೊಡಗಿತ್ತು.... ಮಾಯಾ ಇಂದೋ, ನಾಳೆಯೋ ತನ್ನ ಹುಡುಕಿಕೊಂಡು ಬಂದು ತಾನು ಕೇಳಬೇಕೆಂದಿದ್ದ ಅದೇ ಪ್ರಶ್ನೆಯನ್ನೇ ತನಗೆ ಕೇಳಿದರೆ ತಾನೇನು ಉತ್ತರಿಸಲಿ?! ಎಂದು.

[ಜನವರಿ ೧-೧೫ರ ಸಖಿ’ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಕಥೆ.]

-ತೇಜಸ್ವಿನಿ.






ಮಂಗಳವಾರ, ಫೆಬ್ರವರಿ 4, 2014

ತರಂಗಾಂತರಂಗ

ಹರಿವ ನೀರಿನಂತಿದ್ದ ನೋವೀಗ
ನಿಂತ ನೀರಾಗಿದೆ ನೋಡು....
ಹಸಿರುಗಟ್ಟಿಲ್ಲ, ಹೂಳು ತುಂಬಿಲ್ಲ
ನಟ್ಟ ನಡುವಿನಿಂದೇಳುವ ತರಂಗಗಳ ನಡುವಿನ-
ಅಂತರದೊಳಗಿಂದಿಂದಲೂ ಕಾಣುತ್ತಿವೆ
ಕನಸನೇರಿಹ ಜಲಚರಗಳ ಜೊತೆಗೆ
ತಳದಡಿಯಲಿ ಮಲಗಿಹ ನೆನಪುಗಳ ಮಣ್ಣು
ಮೆತ್ತಿಕೊಂಡ ಕಲ್ಲುಗಳೂ!

ಹಿಂದೊಮ್ಮೆ, ಎಂದೋ ಜಲಪಾತವಾಗಿತ್ತದು
ಅದಕ್ಕೀಗ ಕಟ್ಟಲಾಗಿದೆ ಅಣೆಕಟ್ಟು
ಆದರೂ ಆಗೀಗ ಒಂದೆರಡು-
ಬಾಗಿಲುಗಳ ಅರೆ ತೆರೆದು ಧುಮ್ಮುಕ್ಕುತ್ತವೆ..
ಹರಿದು ಹರಿಯುತ್ತವೆ ಮೊಳಕೆಯೊಡೆದಿದ್ದ
ಹಸಿರು ಪೈರು, ಸಸಿ, ಚಿಗುರುಗಳನೆಲ್ಲಾ!

ನಿಂತದ್ದೆಲ್ಲಾ ಕೊಳೆಯುವುದೆನ್ನುವ ನಿಯಮಕ್ಕೆ ಕೊನೆಯಾಗಿ,
ಹರಿವ ನೀರಿನಂತಿದ್ದ ನೋವೀಗ
ನಿಂತ ನೀರಾಗಿದೆ ನೋಡು...!
ಹಸಿರುಗಟ್ಟಿಲ್ಲ, ಹೂಳು ತುಂಬಿಲ್ಲ
ನಡುವಿನಿಂದೇಳುವ ತರಂಗಗಳ ನಡುವಿನ-
ಅಂತರದೊಳಗಿಂದಿಂದಲೂ ಕಾಣುತ್ತಿವೆ
ಕನಸನೇರಿಹ ಜಲಚರಗಳ ಜೊತೆಗೆ
ತಳದಡಿಯಲಿ ಮಲಗಿಹ ನೆನಪುಗಳ ಮಣ್ಣು
ಮೆತ್ತಿಕೊಂಡ ಕಲ್ಲುಗಳೂ!

-ತೇಜಸ್ವಿನಿ.

ಭಾನುವಾರ, ಫೆಬ್ರವರಿ 2, 2014

ತೀರದ ತೀರ

ಅಲೆಯೇನೋ ಕರೆಯ ಬಂದಿತ್ತು
ನಿನ್ನರಮನೇಗೇ ನನ್ನ
ತಿಳಿಯದೇ ಹೋಯಿತು ನೋಡ
ಒಳಗಣ ಮೊರೆತದಬ್ಬರದೊಳಗೆ.....

ಮರಗಟ್ಟಿದ ಪಾದಗಳನೆಬ್ಬಿಸಲು
ಬೆಳ್ನೊರೆಗಳೇನೋ ತಂದಿದ್ದವು ತೆರೆ ಹೆಡೆಗಳನ್ನೇ....
ಮರಳುಗಳಿಗೇ ಮರುಳಾದ ಪಾದಗಳು
ಹೂತು ಹೋದವು ಮರಮರಳಿ ಅದರೊಳಗೇ!

ಕರೆಯೊಳಗಿನ ಚುಂಬಕ ಶಕ್ತಿಯ ನಿನಾದ,
ಮೊಳಗುತಿದೆ ಅಣು ಅಣುವಿನೊಳಗೂ...
ದಡಕಂಟಿದ ಈ ದೇಹವ ನಾನದೆಂತು ಒಪ್ಪಿಸಲಿ?
ಶರಣಾಗತಿಗಿನ್ನೂ ಗಡುವು ಮೀರದಿರಲು!


-ತೇಜಸ್ವಿನಿ