ಗುರುವಾರ, ಮಾರ್ಚ್ 31, 2011

ನೆನೆದಷ್ಟೂ ನೆನೆವ ಮನ

ಕಳೆದುಹೋಗಿದೆ ನನ್ನ
Courtesy : http://marcell86.deviantart.com/
ಬಹು ಅಮೂಲ್ಯ ಘಳಿಗೆಯೊಂದು
ಅದರ ನೆನಪಾದಾಗಲೆಲ್ಲಾ
ಎದೆಯೊಳಗೆ ಅವ್ಯಕ್ತ ಭಾವ ನೂರು

ಮಣ್ಣೊಳಗೆ ಹೊರಳಾಡಿ
ಒಳಗೆಲ್ಲಾ ಬೆಳಕಾಗಿ ಹಬ್ಬಿ ಬೆಳೆದ,
ಅವರಿವರ ಮಾತುಗಳಿಗೆ
ಕಿವಿಯಾಗದೇ ನಾನು ನಾನಾಗೇ ಉಳಿದ,
ಗೇರು ಹಣ್ಣುಗಳ ಆ
ಮತ್ತೇರಿಸುವ ಪರಿಮಳವ ಹೀರಿ...
ಬಿದ್ದು ಬಿರಿದ ಹಲಸಿನ
ತೊಳೆಗಳ ಎಳೆದೆಳೆದು ಹರಿದು ಮುಕ್ಕಿ
ನಾಳೆಯ ಪರಿವಿರದೇ
ನಿನ್ನೆಯ ನೆನೆ ನೆನೆದು ಹೊರಳದೇ,
ಇಂದು, ಆ ಕ್ಷಣದ
ಪ್ರತಿ ನಿಮಿಷವನ್ನೂ ಬಿಡದೇ
ನಿರುಮ್ಮಳಳಾಗಿ ನಕ್ಕು ನಗಿಸುತಾ
ನನ್ನ ಜೊತೆ ಕಳೆದ ಆ
ಅನುಬಂಧ ಮತ್ತೆ ಸಿಗದಾಗಿದೆ!

ನೆನೆದಂತೆಲ್ಲಾ ನೆನೆವ
ಈ ಹುಚ್ಚು ಮನವ
ಪರಿ ಪರಿಯಾಗಿ ಬೇಡಿ
ಮರೆವ ಬೇಡಿಯೊಳಗೆ ಹಾಕ ಹೊರಟರೂ
ಮರಳು ಸೋರಿದಂತೇ ನುಸುಳಿ ಜಾರಿ
ಮತ್ತೆ ಮತ್ತೆ ಕೊರೆಯುತಿದೆ ನನ್ನ...
ಗೇರು ಹಣ್ಣಿನ ಪರಿಮಳದಲ್ಲಿ,
ಹಲಸಿನ ಸಿಹಿ ತೊಳೆಗಳಲ್ಲಿ,
ಗುಡ್ಡ - ಬೆಟ್ಟಗಳ ಸಿರಿ ನೋಟದಲ್ಲಿ,
ಹುದುಗಿ ಕುಳಿತು ಅವಿರತವಾಗಿ
ಮತ್ತೆ ಮತ್ತೆ ಮರುಕಳಿಸಿ,
ಕಬಳಿಸುತಿದೆ ಉಳಿದಿರುವ ನೆಮ್ಮದಿಯನೂ....

ಕಳೆದುಹೋಗಿದೆ ನನ್ನ
ಬಹು ಅಮೂಲ್ಯ ಕಾಲವೊಂದು
ಅದರ ನೆನಪಾದಾಗಲೆಲ್ಲಾ
ಎದೆಯೊಳಗೆ ಅವ್ಯಕ್ತ ಭಾವ ನೂರು

-ತೇಜಸ್ವಿನಿ ಹೆಗಡೆ

ಭಾನುವಾರ, ಮಾರ್ಚ್ 27, 2011

ನಿವೇದನೆ

 ಕೃಪೆ : ಉದಯವಾಣಿ ಸಾಪ್ತಾಹಿಕ ಸಂಪದ
ಟಿ.ವಿ. ಪರದೆಯ ಮೇಲಿಂದ ಹೊರ ಹೊಮ್ಮುತ್ತಿದ್ದ ನೀಲಿ ಬೆಳಕಿನ ಕೋಲುಗಳು ಆ ಕೋಣೆಯ ಕತ್ತಲೆಯನ್ನು ಸೀಳಿ ಅವರಿಬ್ಬರ ಮುಖದ ಮೇಲೆ ಬಿದ್ದು ಲಾಸ್ಯವಾಡುತ್ತಿದ್ದವು. ಚಿತ್ರ ಆರಂಭವಾಗಿ ಕೇವಲ ಹದಿನೈದಿ ನಿಮಿಷಗಳಷ್ಟೇ ಆಗಿದ್ದವೇನೋ.... ಆರಂಭದಲ್ಲೇ ಬಂದ ಆ ಪಾತ್ರದ ಕರುಣಾಜನಕ ಸ್ಥಿತಿ, ನಾಯಕನ ಅವಸ್ಥೆ - ಎಲ್ಲವನ್ನೂ ಕಾಣುತ್ತಿದ್ದಂತೇ ಮೊದಲ ಬಾರಿಗೆ ಅವಳಿಗೆ ಅನಿಸಿದ್ದು...‘ತಾನು ಮೀರಾಳ ಮಾತು ಕೇಳಿ ಈ ಚಿತ್ರದ ಸಿ.ಡಿ. ತಂದು ಇವನಿಗೆ ಹಾಕಿದ್ದು ತಪ್ಪೇನೋ..’ ಎಂದು. ಅವಳೇನೋ ಗೆಳತಿಯ ಹೊಗಳಿಕೆಯನ್ನು ನಂಬಿಯೇ ಹೊಸದಾಗಿ ಬಿಡುಗಡೆ ಆಗಿದ್ದ ಈ ಚಲನಚಿತ್ರವನ್ನು ತಂದಿದ್ದಳು. ಆದರೆ ಚಿತ್ರ ಪ್ರಾರಂಭವಾಗುತ್ತಿದ್ದ ಕೆಲವೇ ನಿಮಿಷಗಳಲ್ಲೇ ಆಕಾಶ್‌ನ ಮುಖದಲ್ಲಾದ ಸಣ್ಣ ಬದಲಾವಣೆಯನ್ನ ಆ ನೀಲಿ ಬೆಳಕಿನ ಕೋಲಿನೊಳಗೇ ಕಂಡುಬಿಟ್ಟಿದ್ದಳು ನಿವೇದಿತ. ಮತ್ತೊಮ್ಮೆ ಮನದಲ್ಲೇ ಮೀರಾಳನ್ನು ಹಳಿದುಕೊಳ್ಳುತ್ತಾ ಏನನ್ನೋ ಹೇಳಲು ಹೊರಟವಳನ್ನು ತಡೆದದ್ದು ನಾಯಕನ ಆ ಮಾತು....."ಮುಝೆ ಕೋರ್ಟ್ ಮೆ ಏಕ್ ಪಿಟಿಷನ್ ಫೈಲ್ ಕರನೀ ಹೈ...ಮೆರೆ ಮರ್ನೆ ಕಿ ಪಿಟಿಷನ್...." ಅಷ್ಟೇ... ಮತ್ತೊಂದು ವಾಕ್ಯವನ್ನೂ ಕೇಳಲಾಗದಂತೇ ಸ್ವಿಚ್ ಆಫ್ ಮಾಡಿಬಿಟ್ಟಳು. ಮೊದಲಬಾರಿ ಅವಳಿಗೆ ಸ್ನೇಹಿತೆಯ ಮೇಲೆ ಅಸಾಧ್ಯ ಕೋಪ ಬಂದಿತ್ತು! ಆದರೆ ಆಕಾಶ್ ಮಾತ್ರ ಹಠ ಹೊತ್ತು ಅವಳಿಗೆ ದೂಸರಾ ಮಾತಾಡಲು ಅವಕಾಶ ಕೊಡದೇ ಮತ್ತೆ ಟಿ.ವಿ. ಹಾಕಿ, ಪೂರ್ತಿ ಚಿತ್ರ ನೋಡಿದ್ದ. ಚಿತ್ರ ಮುಗಿವಷ್ಟೂ ಹೊತ್ತು ಅವಳು ಮಾತ್ರ ಅಸಹನೆಯಿಂದ ಕುದ್ದು ಹೋಗಿದ್ದಳು. ಕೊನೆಯಲ್ಲಿ ನಾಯಕನಿಗೆ ಕಾನೂನು ದಯಾಮರಣ ನೀಡಲು ಒಪ್ಪಿಗೆ ನೀಡದಿದ್ದರೂ, ಅವನ ಪ್ರೇಯಸಿ ತಾನೇ ಅವನಿಗೆ ಯಾತನೆಯಿಂದ ವಿಮೋಚನೆ ನೀಡುವುದಾಗಿ ಮಾತುಕೊಡುವುದರೊಂದಿಗೆ ಚಿತ್ರ ಕೊನೆಗೊಂಡಿತ್ತು. ಇದರಿಂದ ನಿವೇದಿತ ಸಂಪೂರ್ಣ ಕಂಗಾಲಾಗಿಹೋದರೆ, ಆಕಾಶ್ ಮಾತ್ರ ಏನೋ ಚಿಂತಿಸುತಿರುವವನಂತೆ ಕಂಡ.

"ಯಾಕೆ ನಿವಿ ಆಫ್ ಮಾಡಿದ್ದೆ? ತುಂಬಾ ಚೆನ್ನಾಗಿತ್ತು ಪಿಕ್ಚರ್...ನಾಯಕಿ ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ಲು ನಾಯಕನ ಅಸಹಾಯಕತೆಯನ್ನು ಅಲ್ವಾ? ಅದಕ್ಕೇ ಅವನ ನೋವಿಗೆ ಮುಕ್ತಿ ಕೊಡೋಕೆ ಮುಂದಾದ್ಲು. ಹೌದು....ನಿಂಗೆ ಬೇಜಾರಾಗಿದ್ದು ಯಾವುದ್ರಿಂದ? ಆ ನಾಯಕನ ದೈಹಿಕ ವಿಕಲತೆಯ ಪರಮಾವಧಿಯಿಂದಲೋ ಇಲ್ಲಾ ಅವನು ತನ್ನ ಅವಸ್ಥೆಗೆ ಒಂದು ನ್ಯಾಯಯುತವಾದ ಮರಣವನ್ನು... ಅಂದ್ರೆ...ಯೂಥನೇಷಿಯಾ ಕೇಳಿದ್ದರಿಂದಲೋ..?" ಎಂದು ಕಿರುನಗುತ್ತಾ ಅವಳನ್ನು ಕೆಣಕಿದ್ದೇ, ಆವರೆಗೆ ಅದುಮಿಟ್ಟಿದ್ದ ಅವಳ ಅಸಹನೆ, ಸಿಟ್ಟು ಹೊರದಬ್ಬಿ ಬಂತು. 

"ಸುಮ್ನಿರು ಆಕಾಶ್....ನಂಗೆ ನೀನು ಹೀಗೆಲ್ಲಾ ಮಾತಾಡೋದೇ ಇಷ್ಟ ಆಗೊಲ್ಲ.....ನನ್ನ ಹತ್ರ ಇಂಥ ಹುಚ್ಚು ಚಿತ್ರವನ್ನ ನೋಡೋಕೆ ಆಗೊಲ್ಲ...ಅದ್ಕೆ ಕಾರಣ ನೀನು ಕೇಳಿದ ಎರಡು ಪ್ರಶ್ನೆನೂ ಅಲ್ಲ. ಮೊದ್ಲನೇದಾಗಿ.....ಹದಿನಾಲ್ಕು ವರ್ಷ ತನ್ನ ನ್ಯೂನ್ಯತೆಯ ವಿರುದ್ಧ ಹೋರಾಡಿದವನು ಇದ್ದಕ್ಕಿದ್ದಂತೇ ಹತಾಶನಾಗೋದು.....ಅದನ್ನೇ ಸರಿ ಅಂತ ನಿರ್ದೇಶಕ ಸಾಬೀತು ಪಡಿಸಲು ಹೋಗೋದು....ಈ ಕಥೆಯೇ ಇಷ್ಟವಾಗ್ಲಿಲ್ಲ. ಎರಡನೇದಾಗಿ ನಾನು ಯೂಥನೇಷಿಯಾವನ್ನು ಬೆಂಬಲಿಸೊಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ನೀನು ತಿಳ್ಕೊ.....ನಾನು ನಿವೇದಿತ....ಆ ತಲೆಕೆಟ್ಟ ನಾಯಕಿಯಲ್ಲ. ಈಗ ಈ ವಿಷ್ಯವನ್ನ ಇಲ್ಲೇ ಬಿಟ್ಬಿಡೋಣ.....ದಯವಿಟ್ಟು ಬೇರೇನಾದ್ರೂ ಮಾತಾಡೋಣ..." ಎಂದವಳನ್ನು ಒಂದು ಕ್ಷಣ ನೇರವಾಗಿ ನೋಡಿದ ಆಕಾಶ್. ಆರು ವರುಷಗಳಿಂದ ಗಾಢವಾಗಿ ಪ್ರೀತಿಸುತಿರುವ ತನ್ನವನ ಪ್ರತಿಯೊಂದು ಭಾವವನ್ನೂ ಸುಲಭವಾಗಿ ಗ್ರಹಿಸಬಲ್ಲವಳಾಗಿದ್ದಳು ನಿವೇದಿತ.

"ಸರಿಯಪ್ಪಾ...ನಿನ್ನ ಮನಸಲ್ಲಿರೋದ್ನ ಹೇಳು... ಕೇಳುವಂತವಳಾಗ್ತೀನಿ...ನಿಮ್ಮ ಮನದಲ್ಲೇನಡಗಿದೆ ಡಾ. ಆಕಾಶ್" ಎಂದು ನಾಟಕೀಯವಾಗಿ ಕೇಳಿದ ಆ ವೈಖರಿಗೆ ನಕ್ಕು ಅವಳ ಮುಂಗುರುಳನ್ನು ಸವರಿದ ಆಕಾಶ್.

"ನಿವಿ... ನನ್ನ ಮಾತನ್ನ ಪೂರ್ತಿಯಾಗಿ ಕೇಳು.....ಮಧ್ಯದಲ್ಲೇ ತಡಿಬೇಡ. ನಾನು ಇದನ್ನೆಲ್ಲಾ ಹೇಳ್ತಿರೋದು ಈ ಚಿತ್ರದೊಳಗಿನ ಕಲ್ಪನೆಯಿಂದಲ್ಲಾ.... ಹಲವು ದಿನಗಳಿಂದಲೂ ನನ್ನ ಕೊರೀತಿದೆ ಈ ವಿಷ್ಯ. ನಿನ್ನ ಹತ್ರ ಹೇಳ್ಕೋಬೇಕು ಅಂತ ಒದ್ದಾಡ್ತಾ ಇದ್ದೆ.....ಆದ್ರೆ ಈ ಚಿತ್ರದಲ್ಲಿ ಈ ವಿಷ್ಯ ಬಂದಿದ್ದು ನಂಗೆ ಹೆಲ್ಪ್ ಆಯ್ತು ಅಷ್ಟೇ. ನಿವೇದಿತ ನಾನೂ ಯೋಚಿಸ್ತಾನೇ ಇದ್ದಿನಿ.... ನಾನು....ನಾನೂ ದಯಾಮರಣಕ್ಕೆ ಯಾಕೆ ಪ್ರಯತ್ನ ಮಾಡ್ಬಾರ್ದು ಅಂತ... ಈಗ್ಲೇ ಏನೂ ಹೇಳ್ಬೇಡ...ಮೊದ್ಲು ನಾನು ಹೇಳೊದನ್ನ ಕೇಳು... ಈಗಿರೋ ಸ್ಥಿತಿಯನ್ನೇ ಸಹಿಸೋಕೆ ಆಗ್ತಾ ಇಲ್ಲಾ.... ಇನ್ನು ದಿನ ಹೋದಂತೇ ಏನಾಗೊತ್ತೆ ಅನ್ನೋದು ನಿನಗಿಂತ ನನಗೇ ಚೆನ್ನಾಗಿ ಗೊತ್ತು. ವರವೋ ಶಾಪವೋ ನಾನೂ ಓರ್ವ ಡಾಕ್ಟರ್. ಇದಕ್ಕಿಂತ ನಂಗೇನೂ ಗೊತ್ತಿಲ್ದೇ ಇರೋದೆ ಚೆನ್ನಾಗಿತ್ತೆನೋ ಅನ್ಸೊತ್ತೆ ನಿವಿ.  ನನಗೆ ಆಗಿದ್ದು, ಆಗ್ತಿರೋದು ಎಲ್ಲವೂ ಚೆನ್ನಾಗಿ ಅರ್ಥ ಆಗ್ತಿದೆ....ಈ  ಸತ್ಯ ನನ್ನ ದಿನೇ ದಿನೇ ಕೊಲ್ತಾ ಇದೆ. ದಯವಿಟ್ಟು ನನ್ನ ಅರ್ಥ ಮಾಡ್ಕೋತೀಯಾ....?" ಎಂದವನ ದನಿಯೊಳಗಿದ್ದ ಆರ್ದ್ರತೆ ಅವಳನ್ನು ಸಂಪೂರ್ಣ ತೊಯ್ದು ಹಾಕಿತು. ಅರೆಕ್ಷಣ ಅವಳಿಗೇನೋ ಅರಿವೇ ಆಗಲಿಲ್ಲ. ಅರ್ಥವಾದ ಮೇಲೆ ಅಲ್ಲಿ ನಿಲ್ಲಲಾಗದೇ ಒಂದಕ್ಷರ ನುಡಿಯದೇ ಹೊರಟು ಬಿಟ್ಟಳು. 

-೨-

ಅಪ್ಪ ಅಮ್ಮನ ಮುದ್ದಿನ ಏಕೈಕ ಮಗಳಾಗಿದ್ದ ನಿವೇದಿತಳಿಗೆ ಮೊದಲಿನಿಂದಲೂ ಸಾಹಿತ್ಯ, ಚಿತ್ರಕಲೆ, ಸಂಗೀತ ಎಂದರೆ ಎಲ್ಲಿಲ್ಲದ ಆಸಕ್ತಿ. ಹಾಗಾಗಿಯೇ ಅವಳು ಸೇರಿದ್ದು ಕಾಲಾನಿಕೇತನವನ್ನು. ವೃತ್ತಿಯಲ್ಲಿ ಮೂಳೆ ತಜ್ಞನಾಗಿದ್ದರೂ, ಸಂಗೀತದಲ್ಲಿ ಅಪಾರ ಅಸಕ್ತಿ ಹೊಂದಿದ್ದ ಆಕಾಶ್ ಬಿಡುವಾದಾಗಲೆಲ್ಲಾ ಕಲಾನಿಕೇತನಕ್ಕೆ ಭೇಟಿಕೊಡುತ್ತಿದ್ದ. ಅಲ್ಲಿಯೇ ಪರಿಚಯವಾಗಿ ಚಿಗುರಿದ ಅವರಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಮನೆಯವರ ಒಪ್ಪಿಗೆಯ ಜೊತೆಗೇ ನಿಶ್ಚಿತಾರ್ಥವೂ ಮುಗಿದಿತ್ತು. ಮದುವೆಗೆ ನಿವೇದಿತಳ ಕೋರ್ಸ್ ಮುಗಿಯುವುದನ್ನೇ ಕಾಯುತ್ತಿದ್ದ ಆಕಾಶನನ್ನು ವರಿಸಿದ್ದು "ನ್ಯೂರೋ ಮಸ್ಕ್ಯುಲಾರ್ ಡೈಸ್ಟ್ರೋಫಿ" ಎನ್ನುವ ನರ ಸಂಬಂಧಿತ ಕಾಯಿಲೆ! ವ್ಯಕ್ತಿಯನ್ನು ನಿಧಾನವಾಗಿ, ಹಂತ ಹಂತವಾಗಿ ಸಾವಿನತ್ತ ಎಳೆದೊಯ್ಯುವ ಈ ವಿರಳ ಕಾಯಿಲೆಯ ಸೂಚನೆ ಅವನಲ್ಲಿ ಮೊದಲು ಕಾಣಿಸಿಕೊಂಡಿದ್ದು ಈಗೊಂದು ವರುಷದ ಹಿಂದೆಯಷ್ಟೇ. ನಿವೇದಿತಾಳೊಂದಿಗೆ ಜಾಗಿಂಗ್‌ಗೆ ಹೋಗುತ್ತಿದ್ದ ಅವನ ನಡಿಗೆ ಹೆಜ್ಜೆ ತಪ್ಪಿದಾಗ, ಅತಿಯಾದ ಸುಸ್ತು, ಆಯಾಸ, ಮೂಳೆ ಸವೆತ ಕಾಣಿಸತೊಡಗಿದಂತೇ ಸಂಶಯಗೊಂಡ ಆಕಾಶ್, ತನ್ನ ಸಹೋದ್ಯೋಗಿ, ನರತಜ್ಞ ಡಾ.ಸುರೇಶ್‌ನನ್ನು ಸಂಪರ್ಕಿಸಿದ್ದ. ಎಲ್ಲಾ ಪರೀಕ್ಷೆಗಳ ನಂತರ ಹೊರ ಬಿದ್ದ ಫಲಿತಾಂಶ ಮಾತ್ರ ಅವನೊಳಗೆ ಪೂರ್ತಿ ಅಂಧಕಾರವನ್ನೇ ತುಂಬಿತು. ಆಗಲೇ ನಿವೇದಿತ ಅವನ ಬಾಳಿಗೆ ನಿಜವಾಗಿಯೂ ಸಂಗಾತಿಯಾದಳು. ಮದುವೆ ಎನ್ನುವ ಮೂರಕ್ಷರಕ್ಕೆ ಸಾವಿರ ಕನಸನ್ನು ಸುತ್ತಿದ್ದವಳು ಎಲ್ಲವನ್ನೂ ಬಿಚ್ಚೆಸೆದು,  ಅವನ ಬದುಕಲ್ಲಿ ಭರವಸೆಯನ್ನು ಮೂಡಿಸುವ ಏಕೈಕ ಕನಸೊಂದನ್ನೇ ಹೊದ್ದು ಹಿಂಬಾಲಿಸಿದಳು.

"ನಿವಿ.. ನನ್ನ ಮರ್ತು ಬಿಡು... ಬೇರೆ ಯಾರನ್ನಾದ್ರೂ ಮದ್ವೆ ಆಗಿ ಸುಖವಾಗಿರು... ಎಂದೆಲ್ಲಾ ಕೆಲಸಕ್ಕೆ ಬಾರದ ಮಾತನ್ನು ಆಡೋ ಯೋಚನೆಯೂ ಬೇಡ ಆಕಾಶ್... ಒಂದೇ ಮಾತಲ್ಲಿ ಹೇಳ್ತೀನಿ ಕೇಳು...ನೀನು ನಂಗೆ ಹೀಗೆಲ್ಲಾ ಹೇಳಿದ್ರೂ ನಾನು ನಿನ್ನ ಇಂಥ ಮಾತಿಗೆಲ್ಲಾ ಸೊಪ್ಪು ಹಾಕೋದೇ ಇಲ್ಲಾ....ನಿನ್ನ ಯಾವ ಆಣೆ, ಅಪ್ಪಣೆಗೂ ಬಗ್ಗೊಲ್ಲ...." ಎಂದು ನೇರವಾಗಿ ಹೇಳಿದವಳನ್ನು ತುಂಬುಗಣ್ಣಿನಿಂದ ನೋಡಿದ್ದ ಆಕಾಶ್. ಆದರೂ ಆಕೆ ಎಷ್ಟೇ ಹಠ ಮಾಡಿದರೂ ಒಪ್ಪದೇ ಮದುವೆಯನ್ನು ಮಾತ್ರ ನಿರಾಕರಿಸಿದ್ದ. ಅವಳ ಭವಿಷ್ಯದ ಬಾಳಿಗೆ ಬೆಳಕನ್ನು ತುಂಬಲು ಒಂದು ಕಡೆಯಿಂದಲಾದರೂ ಬಾಗಿಲನ್ನು ತೆರೆದಿಡುವ ಆಶಯ ಅವನದಾಗಿತ್ತು. 

ಹಿಂದೆ ಬಿಡುವಿಲ್ಲದ ಕೆಲಸಗಳಲ್ಲೇ ಮುಳುಗಿಹೋಗುತ್ತಿದ್ದ ಆಕಾಶನ ದಿನಚರಿಯೇ ಈಗ ಬದಲಾಗಿ ಹೋಗಿತ್ತು. ಮುಂಜಾನೆ ಮೂಡುವ ಬಾಲ ರವಿ ಘಳಿಗೆ ಕಳೆದಂತೇ ಹಿರಿದಾಗಿ, ಉರಿದುರಿದು, ಮತ್ತೆ ತಂಪಾಗಿ, ಕುಗ್ಗಿ ಮುಳುಗುವ ಪರಿಯನ್ನೇ ಗಂಟೆಗಟ್ಟಲೆ ನೋಡುತ್ತಿದ್ದ. ದಿನಕರನಂತೇ ತನ್ನ ಬದುಕೂ ಬಹು ಬೇಗ ಕರಗಿ ಹೋಗುತ್ತಿರುವುದರ ಅರಿವು ಅವನಿಗೂ ಪ್ರತಿಕ್ಷಣ ನೆನಪಾಗುತ್ತಿತ್ತು. ಆ ಹಿಂಸೆಯ ತಾಪದಲ್ಲಿ ದಿನವೂ ಬೇಯುತ್ತಿದ್ದ ಅವನ ಬದುಕಿಗೆ ತುಸು ನೆಮ್ಮದಿಯನ್ನು ಕೊಡುತ್ತಿದ್ದುದು ಅವಳ ಪ್ರೀತಿಯ ಹುಣ್ಣಿಮೆಯೇ. ಆಕಾಶ್ ಹೆತ್ತವರಂತೂ ಎಲ್ಲವುದಕ್ಕೂ ನಿವೇದಿತಳನ್ನೇ ಕೇಳುತ್ತಿದ್ದರು. ತಮ್ಮ ಒಬ್ಬನೇ ಮಗನ ಸಾವಿನ ದಿನಗಳು ಹತ್ತಿರ ಬರುತ್ತಿರುವುದನ್ನು ಅರಿತೂ ಅವನಿಗಾಗಿ ನಗುವಿನ ಮುಖವಾಡ ಹಾಕಿರುತ್ತಿದ್ದರು. ದಿನೇ ದಿನೇ ಹದಗೆಡುತ್ತಿದ್ದ ಆಕಾಶನ ದೇಹ ಸ್ಥಿತಿ ಒಳಗೊಳಗೇ ಅವಳನ್ನೂ ಕುಗ್ಗಿಸುತ್ತಿತ್ತು. ಆದರೂ ಧೈರ್ಯಗೆಡದ ಆಕೆ ಅವನ ಪ್ರತಿ ನಗುವಿನಲ್ಲೂ ಭರವಸೆಯನ್ನು ತುಂಬಿಕೊಳ್ಳುತ್ತಿದ್ದಳು. ಮನೆಯ ಮುಂದಿದ್ದ ಪುಟ್ಟ ಹೂದೋಟದಲ್ಲಿ ಕುಳಿತು ನಿವೇದಿತ ಅವನಿಷ್ಟದ `ನೀನಿಲ್ಲದೇ ನನಗೇನಿದೆ... ಮನಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ...ಕನಸೆಲ್ಲಾ ಕಣ್ಣಲ್ಲಿ ಸೆರೆಯಾಗಿದೆ..' - ಎಂದು ಭಾವಪೂರ್ಣವಾಗಿ ಹಾಡುತ್ತಿದ್ದರೆ ಆತ ಅಲ್ಲೇ ಅವಳ ಭುಜಕ್ಕೆ ತಲೆಯಾನಿಸಿ ಕಳೆದುಹೋಗುತ್ತಿದ್ದ.... ಕಳೆಗುಂದುತ್ತಿದ್ದ ತನ್ನ ದೇಹ ಶಕ್ತಿಯನ್ನೂ ಮರೆತು! ವಿಷಾದ ಭಾವದಿಂದ ಮೇಲೆದ್ದು ಕೊನೆಯಲ್ಲಿ ಆಶಾಭಾವದೊಂದಿಗೆ ಲೀನವಾಗುವ ಹಾಡಿನ ಪ್ರತಿಯೊಂದೂ ಸೊಲ್ಲಿನಲ್ಲೂ ಅವರಿಗೆ ತಮ್ಮ ಬದುಕಿನ ಕಥೆಯೇ ತುಂಬಿರುವಂತೆ ಭಾಸವಾಗುತ್ತಿತ್ತು. 

ಕೆಲತಿಂಗಳಿನಿಂದ ಆಕಾಶ್ ಸಂಪೂರ್ಣ ಗಾಲಿ ಕುರ್ಚಿಗೇ ಸೀಮಿತನಾಗಿಬಿಟ್ಟಿದ್ದ. ಮೂಳೆ ಸವೆತ ಹೆಚ್ಚಾಗಿ ಹೋಗಿ, ನರಗಳೂ ದೌರ್ಬಲಗೊಳ್ಳತೊಡಗಿದ್ದವು. ಈಗಾತ ಕೇವಲ ತನ್ನ ಕೈಗಳೆರಡನ್ನಷ್ಟೇ ಉಪಯೋಗಿಸಬಲ್ಲನಾಗಿದ್ದ. ಇದರಿಂದಾಗಿ ಆತನೊಳಗಿದ್ದ ಅಲ್ಪ ಆತ್ಮವಿಶ್ವಸವೂ ಅಲುಗಾಡತೊಡಗಿತ್ತು. ಇದ್ದೊಬ್ಬ ಮಗನ ಈ ಸ್ಥಿತಿಗೆ ಒಳಗೊಳಗೇ ಕೊರಗುತ್ತಿದ್ದ ಅವನ ಹೆತ್ತವರ ಗೋಳಿನ ಜೊತೆ, ಮಗಳ ಬದುಕಿನ ಅತಂತ್ರತೆಯ ಆತಂಕದಲ್ಲಿ ಕೊರಗುತ್ತಿರುವ ತನ್ನ ತಂದೆ ತಾಯಿಯರನ್ನೂ ಸಂಭಾಳಿಸಬೇಕಿತ್ತು ನಿವೇದಿತ. ಆದರೂ ಅವಳ ಮನದ ತುಂಬೆಲ್ಲಾ ಆಕಾಶನ ಬದುಕೇ ತುಂಬಿತ್ತು. ಆದರೆ ಅವಳ ಪ್ರೀತಿಯ ನಡುವೆಯೂ ಆಕಾಶನಿಗೆ ಇಂತಹ ಒಂದು ಆಲೋಚನೆ ಅದು ಹೇಗೋ ಮನೆಮಾಡಿಕೊಂಡು ಬಿಟ್ಟಿತು. ಅದು ಈಗ ಈ ಚಿತ್ರವನ್ನು ನೋಡುತ್ತಿದ್ದಂತೇ ಮತ್ತಷ್ಟು ಗಟ್ಟಿಯಾಗಿದ್ದೇ ತಡ ಸುಮ್ಮನಿರಲಾಗದೇ ಆಕೆಯಲ್ಲಿ ಹೇಳಿಯೂಬಿಟ್ಟ.

-೩-

ಮನೆಗೆ ಬಂದವಳೇ ಮನಃಪೂರ್ತಿ ಅತ್ತು ಸಮಾಧಾನಮಾಡಿಕೊಂಡ ನಿವೇದಿತ ಕೊನೆಗೆ ತನ್ನೊಳಗೇ ಒಂದು ನಿರ್ಧಾರಕ್ಕೆ ಬಂದಳು. ಬೆಳಿಗ್ಗೆ ಬೇಗ ಹೊರಟು ಆಕಾಶ್ ಮನೆಗೆ ಬಂದವಳಿಗೊಂದು ಆಶ್ವರ್ಯ ಕಾದಿತ್ತು. ಆಕಾಶ್ ತನ್ನ ವ್ಹೀಲ್ ಚೇರ್ ಮೇಲೆ ಕೂತು ಬಾಲ್ಕನಿಯಿಂದ ಕೆಳಗೆ ಇಣುಕಿ ನೋಡುತ್ತಿದ್ದ.

"ಏನು ಸಾಹೇಬ್ರು.... ನಿನ್ನೆ ಹೇಳಿದ ಮಾತನ್ನ ಈ ರೀತಿ ನೆರವೇರಿಸ್ಕೊಳ್ತಾ ಇರೋ ಹಾಂಗಿದೆ... ಆತ್ಮಹತ್ಯೆ ಮಹಾಪಾಪ ಗೊತ್ತಲ್ಲಾ..." ಎಂದು ತಲೆಯಮೇಲೊಂದು ಮೊಟಕಿದಳು.

"ಗೊತ್ತಮ್ಮಾ..ಗೊತ್ತು...ಅದ್ಕೇ ನಾನು ಯೋಚಿಸ್ತಿರೋದು ಯುಥನೇಷಿಯಾಕ್ಕೆ ಗೊತ್ತಾಯ್ತಾ?" ಎಂದು ಪ್ರತಿಯೇಟುಕೊಡಲು ಆಕೆ ವಿಷಯವನ್ನು ತಿರುಗಿಸಿಬಿಟ್ಟಳು.

"ಏನು ನೋಡ್ತಿದ್ದೀಯಾ? ಕೆಳಗೆ ಏನಿದೆ..?" ಎನ್ನುತ್ತಾ ತಾನೂ ಬಗ್ಗಿ ನೋಡಲು ಅಲ್ಲಿ ಅವಳಿಗೆ ಕಂಡಿದ್ದು ಪಾರಿವಾಳದ ಒಂದು ಗೂಡು.

"ನಿವೇದಿತ.. ಈ ಪಾರಿವಾಳದಷ್ಟು ದಡ್ಡ ಜೀವಿ ಈ ಜಗತ್ತಲ್ಲೇ ಇಲ್ಲಾ ಕಣೆ... ನಿಂಗೊತ್ತಾ....ಮೂರುತಿಂಗ್ಳಿಂದ ಇಲ್ಲೇ ಅದು ಗೂಡು ಕಟ್ತಿದೆ, ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡೋಕೆ ನೋಡ್ತಿದೆ. ಆದ್ರೆ ಪಾಪದ ಆ ಹಕ್ಕಿಯ ಮೊಟ್ಟೆಗಳನ್ನು ಹದ್ದು ಬಂದು ಎತ್ಕೊಂಡು ಹೋಗುತ್ತೆ. ಹೋದ ತಿಂಗ್ಳಂತೂ ಒಂದು ಮೊಟ್ಟೆ ಒಡೆದು ಹೊರ ಬಂದ ಮರಿ ಇನ್ನೇನು ಹಾರ್ಬೇಕು ಅಂತಿದ್ದಾಗ್ಲೇ ಅದನ್ನ ಎತ್ಕೊಂಡು ಹೋಗಿತ್ತು ಆ ಹಾಳು ಹದ್ದು! ಇದನ್ನೆಲ್ಲಾ ನೋಡಿ ಬೇಜಾರಾಗಿ ನಾನೇ ನಮ್ಮ ಕೆಲ್ಸದವ್ಳಿಗೆ ಹೇಳಿ ಗೂಡನ್ನೇ ತೆಗ್ಸಿದ್ದೆ....ಆದ್ರೂ ಈ ಹುಚ್ಚು ಪಾರಿವಾಳ ಇಲ್ಲೇ ಮತ್ತೆ ಗೂಡು ಕಟ್ಟಿ ಮೊಟ್ಟೆ ಇಟ್ಟಿದೆ. ಹೋದ ವಾರವಷ್ಟೇ ಮರಿ ಹೊರ ಬಂತು...ಈಗ ಹಾರೋಕೆ ನೋಡ್ತಿದೆ...ಸ್ವಲ್ಪ ಹೊತ್ತಿಗೇ ಆ ಹದ್ದು ಬರ್ದೇ ಹೋದ್ರೆ ಹೇಳು..ಏನು ಬಡ್ಡು ತಲೇದೋ....ಇಷ್ಟು ಮೊಟ್ಟೆ, ಮರಿ, ಗೂಡನ್ನೇ ಕಳ್ಕೊಂಡ್ರೂ ಇಲ್ಲೇ ಇರ್ತೀನಿ ಅಂತಿರೊತ್ತೆ ಈ ಹಕ್ಕಿ.." ಎಂದವನನ್ನೇ ಅರಳುಗಣ್ಣುಗಳಿಂದ ನೋಡಿದಳು ನಿವೇದಿತ. ಅವಳ ತಲೆಯೊಳಗೊಂದು ಯೋಚನೆ ಮಿಂಚಿ....ತುಟಿಯಂಚಿನಲ್ಲಿ ಕಿರುನಗೆ ಮೂಡಿತು.

"ಹ್ಮ್ಂ....ಹೌದು ಆಕಾಶ್.....ಇದೊಂದು ಪೆದ್ದು ಹಕ್ಕಿನೇ.... ಗೊತ್ತಿದ್ದೂ ಗೊತ್ತಿದ್ದೂ ಇಲ್ಲೇ ಗೂಡಿಟ್ಟು ಸಾಕ್ತಿದೆ. ಆ ಹದ್ದು, ತಾಯಿ ಹಕ್ಕಿಯನ್ನು ಕುಕ್ಕಿ ಕೊಂದ್ರೂ ಆಶ್ಚರ್ಯ ಇಲ್ಲಾ......ಇಷ್ಟೇಲ್ಲಾ ಕಳ್ಕೊಂಡ್ರೂ, ಕಳ್ಕೊತ್ತಾ ಇದ್ರೂ ಅದು ಮಾತ್ರ ದಯಾಮರಣಕ್ಕೆ ಅಪ್ಲೈ ಮಾಡೊಲ್ವಾಂತಾ? ಕೇಳ್ಬೇಕು ಒಮ್ಮೆ......" ಎಂದವಳನ್ನೇ ಅವಕ್ಕಾಗಿ ನೋಡಿದ ಆಕಾಶ್. ಕ್ರಮೇಣ ಅವನ ಮೊಗ ಕೆಂಪಡರತೊಡಗಿತು. ಅದು ಅವಮಾನದಿಂದಲೋ ಕೋಪದಿಂದಲೋ ಎಂದು ಮಾತ್ರ ಅವಳಿಗೆ ತಿಳಿಯಲಿಲ್ಲ. ಮೆಲ್ಲನ ಅವನ ಕಾಲ್ಗಳ ಬಳಿ ಬಗ್ಗಿ ಕುಳಿತ ಆಕೆ ಅವನ ಕೈಗಳನ್ನು ತನ್ನ ತುಟಿಗಳಿಗೆ ಸೋಕಿಸಿದಳು.

"ಆಕಾಶ್...ದಯವಿಟ್ಟು ನನ್ನ ತಪ್ಪು ತಿಳ್ಕೋಬೇಡ. ನಾನು ನಿನ್ನ ತಮಾಷೆ ಮಾಡ್ತಿಲ್ಲಾ....ಆಥವಾ ನಿನ್ನ ನೋವು, ಯಾತನೆಗಳನ್ನ ಕಡಿಮೆಯಾಗಿಯೂ ನೊಡ್ತಿಲ್ಲಾ. ಆದ್ರೆ ನೀನೇ ಯೋಚ್ಸು....ಈ ಹಕ್ಕಿ ಎಷ್ಟೇ ಕಷ್ಟ ಬಂದ್ರೂ, ಏನನ್ನೇ ಕಳ್ಕೊಂಡ್ರೂ ಇಲ್ಲೇ ಇದೆ....ಇದ್ದು ಬದುಕು ಕೊಡಲು ಪ್ರಯತ್ನ ಪಡ್ತಿದೆ. ಅದ್ಕೆ ನಮ್ಮಷ್ಟು ಬುದ್ಧಿ ಇಲ್ಲ.....ಆದರೆ ನೋವಿನ ಅನುಭೂತಿ ಇದ್ದೇ ಇರುತ್ತದೆ ಅಲ್ವೇ? ಅದ್ಕೂ ದುಃಖ ಆಗಿರ್ಬಹುದು, ಮರಿ ಹೋಗಿದ್ದಕ್ಕೆ, ಗೂಡು ಬಿದ್ದಿದ್ದಕ್ಕೆ... ಆದ್ರೂ ಅದು ಸೋತು ಗೂಡು ಕಟ್ಟೋದನ್ನು, ಮೊಟ್ಟೆ ಇಡೋದ್ನ ಬಿಟ್ಟಿಲ್ಲ..... ಹಾಗಿರ್ವಾಗ ನೀನು ನಾನು ಯಾಕೆ ಬದುಕುವ ಅಸೆ ಬಿಡ್ಬೇಕು? ನೀನು ಇರ್ರೋವಷ್ಟು ದಿವ್ಸ ನನ್ಜೊತೆ, ನಿನ್ನ ಬದುಕನ್ನೇ ಆಶಿಸುತ್ತಿರೋ ಅಪ್ಪ, ಅಮ್ಮನ ಜೊತೆ ಇರ್ತೀಯಾ ಅನ್ನೋ ಸಂತೋಷವನ್ನ ಈಗ್ಲೇ ಯಾಕೆ ಸಾಯಿಸೋಕೆ ಹೋರ್ಟಿದ್ದೀಯಾ? ಅಲ್ಲಾ.....ನೀನೇ ಹೇಳ್ತಿದ್ದೆ... ನಂಗೆ ದಯೆ, ಅನುಕಂಪ ಬೇಡ ಅಂತೆಲ್ಲಾ.....ಹಾಗಿರ್ಬೇಕಾದ್ರೆ ಸಾವಿಗೆ ಮಾತ್ರ ಕಾನೂನಿನದ್ದೇ ಆದ್ರೂ ದಯೆಯ ಭೀಕ್ಷೆ ಯಾಕೆ ಬೇಕು? ಈವರೆಗೂ ಸ್ವಾಭಿಮಾನಿಯಾಗಿ ಬದ್ಕಿದ್ದೀಯಾ....ಸಾವನ್ನೂ ಸ್ವಾಭಿಮಾನದಿಂದಲೇ ಸ್ವಾಗತಿಸು. ನಂಗೊತ್ತು....ನೀನು ಅನುಭವಿಸ್ತಾ ಇರೋದು ನನ್ನ ಊಹೆಗೂ ಮೀರಿದ್ದು ಅಂತ....ಆದ್ರೆ ಬದ್ಕೋದು ಎಲ್ಲದಕ್ಕೊಂತಲೂ ದೊಡ್ಡದು ಆಕಾಶ್. ನನ್ನ ಬದುಕಿಗೆ ನೀನೇ ಪ್ರೇರಣೆ. ನಾಳೆ ನೀನಿಲ್ಲದಿದ್ರೂ ನಾನು ಬದ್ಕೋಕೆ ನಿನ್ನ ಆತ್ಮವಿಶ್ವಾಸದ ಆಸರೆ ಬೇಕು... ನನ್ನ ಬದುಕಿನ ದಾರಿ ನಿನ್ನ ಬದುಕಿನ ಮಾದರಿಯನ್ನು ಅನುಸರಿಸ್ಬೇಕು. ಪ್ಲೀಸ್ ಆಕಾಶ್ ನಿನಗಾಗಿ ಬದುಕೋದಕ್ಕಿಂತ ನಿನ್ನವರಿಗಾಗಿ ಬದುಕು. ಈ ಹುಚ್ಚು ಆಲೋಚನೆಗಳಿಗೆಲ್ಲಾ ಇಂದೇ, ಇಲ್ಲೇ, ಇವತ್ತೇ ಕೊನೆ ಹಾಕ್ಬಿಡು....ನಿನ್ನ ನಿವಿಗೋಸ್ಕರ, ನಿನ್ನ ಅಪ್ಪ, ಅಮ್ಮನಿಗೋಸ್ಕರ, ನಮ್ಮಿಬ್ಬರ ಪ್ರೀತಿಗೋಸ್ಕರ...." ಎನ್ನುತ್ತಾ ಅವನ ಅಂಗೈಗಳ ಮೇಲೆ ತನ್ನ ಮುಖವನ್ನು ಹುದುಗಿಸಿದಳು. ಅವನ ಬೊಗಸೆ ತುಂಬಾ ಅವಳ ಪ್ರೀತಿಯ ಮಳೆಯ ನೀರು ತುಂಬತೊಡಗಿತು.

ಮಳೆ ನೀರಿನಲ್ಲಿ ತನ್ನ ಕೆಸರನ್ನೆಲ್ಲಾ ತೊಡೆದು ಹಗುರಾದ ಪ್ರಕೃತಿಯಂತೇ ಅವರಿಬ್ಬರು ಕುಳಿತಿದ್ದರು ತಮ್ಮದೇ ಮೌನ ಸಾಮ್ರಾಜ್ಯದಲ್ಲಿ. ಹೊತ್ತಿನ ಪರಿವೆಯೇ ಇರಲಿಲ್ಲ. ಅವಳ ಕೈಯೊಳಗೆ ತನ್ನ ಕೈಯನ್ನು ಭದ್ರವಾಗಿ ಬೆಸೆದ ಆಕಾಶ್ "ನಿವಿ...ನಂಗಾಗಿ ನನ್ನಿಷ್ಟದ ಆ ಹಾಡಿನ ಕೊನೆಯ ಪ್ಯಾರಾ ಮಾತ್ರ ಹಾಡು...." ಎಂದಾಗ ಅವಳ ಮುಖದಲ್ಲಿ ಪೌರ್ಣಿಮೆಯ ಬೆಳಕು. ತನ್ನೊಳಗಿನ ಎಲ್ಲಾ ಭಾವಗಳನ್ನೂ ತುಂಬಿ ಸುರಿವಂತೇ ಸುಶ್ರಾವ್ಯವಾಗಿ ಹಾಡತೊಡಗಿದಳು ನಿವೇದಿತ....
ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ

@ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ.

-ತೇಜಸ್ವಿನಿ ಹೆಗಡೆ.

ಬುಧವಾರ, ಮಾರ್ಚ್ 23, 2011

ಗಾಢ ನೀಲಿಯ ಮುಂದಿನ ಬಿಳಿನೊರೆಗಳಂತೆ.....

Courtesy : http://www.deceptivemedia.co.uk

"ವಿಷಾದದ ಬಗ್ಗೆ ಬರಿ ಅಕ್ಕ... ವಿಷಾದದ ಜೊತೆ ವಿಡಂಬನೆನೂ ಸೇರ್ಸಿ ಬರದ್ರೆ ಮತ್ತೂ ಚೊಲೋವಾ.... ಸ್ವಲ್ಪ ಡಿಫರೆಂಟ್ ಆಗಿರ್ಲಿ..." ಎಂದು ಮಧು ಹೇಳಿದಾಗಲೇ ನಾನು ಯೋಚಿಸಿದ್ದು.... ವಿಷಾದ ಅಂದರೆ ಏನು?! ಹಾಗೆ ನೋಡ ಹೋದರೆ ಪ್ರತಿಯೊಬ್ಬರ ಬಾಳಲ್ಲೂ ಎಲ್ಲೆಂದರೆಲ್ಲಿ.. ಸಂದಿಗೊಂದಿಯಲ್ಲಿ... ಸಮಯದ ಹೊತ್ತೂ ಗೊತ್ತೂ ಇಲ್ಲದೇ... ಒಂದಿನಿತು ಸುಳಿವನ್ನೂ ನೀಡದೇ ತಣ್ಣನೆ ಒಳ ಬಂದು, ಬಿರುಗಾಳಿ ಎಬ್ಬಿಸಿ, ಬಹು ಕಾಲ ಇದ್ದು... ಒಮ್ಮೊಮ್ಮೆ ಎಂದೂ ಮರೆಯಲಾಗದ... ಮಗದೊಮ್ಮೆ ಮಗ್ಗುಲು ಬದಲಿಸಿ ಒಮ್ಮೆ ಬೆನ್ನನ್ನೂ, ಮತ್ತೊಮ್ಮೆ ಮುಖವನ್ನೂ ಕಾಣಿಸುವ ಈ "ವಿಷಾದ"- ಒಂದು ಅರಿಯಲಾಗದ..... ವಿಚಿತ್ರ ಭಾವವೇ ಸರಿ ಎಂದೆನಿಸುತ್ತದೆ ನನಗೆ. ಆದರೆ ಸಂತಸದ ಕತೆಯೇ ಬೇರೆ. ಅದು ಬರುವಾಗ ತನ್ನ ಸುಳಿವನ್ನು ಕೊಟ್ಟು ಬರುವುದೇ ಹೆಚ್ಚು. ಹಾಗಾಗಿ ಮನ ಅದರ ಆಗಮನಕ್ಕಾಗಿ ಕಾತುರವಾಗಿದ್ದು ತುದಿಗಾಲಲ್ಲಿ ನಿಂತಿರುತ್ತದೆ. ಇನ್ನೇನು ಬಲಗಾಲಿಡಬೇಕೆನ್ನುವ ಹೊತ್ತಿನಲ್ಲೇ ಕೆಲವೊಮ್ಮೆ ಅಲ್ಲೇ ಮರೆಯಲ್ಲಡಿಗಿ ಹೊಂಚುಹಾಕುತ್ತಿರುವ ದುಃಖ ಸಂತಸವನ್ನು ನೂಕಿ ಕೆಡವಿ ನಿರಾಸೆಯೊಂದಿಗೆ ಎಡಗಾಲನ್ನಿಟ್ಟು ಪ್ರವೇಶ ಮಾಡಿಯಾಗಿರುತ್ತದೆ. ಆಗ ಮನಕೆ ಬಡಿಯುವ ವಿಷಾದದ ಹೊಡೆತ ಯಾವ ಸುನಾಮಿ ಅಲೆಗಿಂತಲೂ ಕಡಿಮೆಯದ್ದಾಗಿರದು.

ಅದೆಷ್ಟೋ ಸಲ ನಾನು ಕಡಲಂಚಿನಲ್ಲಿ ಜಾರುವ ಸೂರ್ಯನನ್ನೇ ನೋಡುತ್ತಿರುವಾಗ ಹೀಗೊಂದು ಆಲೋಚನೆ ಆಗಾಗ ಬಂದಿದ್ದಿದೆ... ‘ಪ್ರತಿದಿನ ಹೊಸ ಕಿರಣಗಳನ್ನು ಹೊತ್ತು ಮೇಲೇರುವ ಈತ, ತನ್ನೆಲ್ಲಾ ಕಿರಣಗಳ ಜಗಕೆ ತೆತ್ತು ತೆತ್ತು.. ಸುಸ್ತಾಗಿ ಸೊಪ್ಪಾಗಿ, ದಿನದ ಕೊನೆಯಲ್ಲಿ ಕಳೆದುಕೊಂಡುದರ ವಿಷಾದಕ್ಕಾಗಿ ಮುಳುಗು ಹಾಕುತ್ತಾನೇನೋ' ಎಂದು. ಹಾಗೆ ಅಂದು ಕೊಂಡಾಗಲೆಲ್ಲಾ ಬಾನಲ್ಲಿ ನಗುವ ಚಂದಿರನೂ ಹೆಚ್ಚಾಗಿ ಕಂಡಿದ್ದು ಸುಳ್ಳಲ್ಲ. ಇದೇ ಬಹುಶಃ ಆಶಾವಾದವಿರಬೇಕು. "ಒಂದ ಕೊಟ್ಟರೆ ಶಿವ ಒಂದು ಕೊಡಾ" ಎಂದು ಅಮ್ಮ ಹೇಳಿದಾಗ ನಾನು,. "ಈ ಶಿವ ಅಷ್ಟು ಚಾಲಾಕಿಲ್ಲೆ ಕಾಣ್ತು ಅಮ್ಮ.... ಒಂದು ಕೊಟ್ರೆ ಇನ್ನೊಂದು ಫ್ರೀ ಹೇಳಿ ಇಟ್ಟಿದಿದ್ರೆ ಮತ್ತೂ ಹೆಚ್ಚು ಜನ ಅವ್ನ ಹಿಂದೆ ಬೀಳ್ತಿದ್ದೋ ಅಲ್ದಾ?" ಎಂದು ನಕ್ಕು ಬಿಡುತ್ತಿದ್ದೆ. ಆದರೆ ಮನಸು ಮಾತ್ರ ಮೌನವಾಗಿ ಆ ಶಿವನಲ್ಲಿ ಬೇಡುತ್ತಿತ್ತು.. "ಕೊಟ್ಟದ್ದನ್ನಾದ್ರೂ ಕಿತ್ಕಳ್ದೇ ಇರಪ್ಪಾ ತಂದೆ..." ಎಂದು. ಹ್ಮ್ಂ... ಇದೂ ಒಂಥರ ವಿಷಾದಭರಿತ ಯಾಚನೆಯೇ ಸರಿ!

ನಮಗೋರ್ವ ಅತ್ಯುತ್ತಮ ಫಿಸಿಕ್ಸ್ ಪ್ರೊಫೆಸರ್ ಸಿಕ್ಕಿದ್ದರು (ಪಿ.ಯು.ಸಿ ಟ್ಯೂಷನ್‌ನಲ್ಲಿ). ಅಲೋಶಿಯಸ್ ಕಾಲೇಜಿನಲ್ಲಿ ಫಿಸಿಕ್ಸ್ ಕಲಿಸುತ್ತಿದ್ದ ಅವರ ಹೆಸರು ಪ್ರೊ. ಐ.ವಿ.ರಾವ್. ತುಂಬಾ ಚೆನ್ನಾ ಪಾಠ ಮಾಡುತ್ತಿದ್ದರು. ಈಗ ವಯಸ್ಸಿನ ಪ್ರಭಾವದಿಂದ ನಿವೃತ್ತಿ ಪಡೆದಿದ್ದಾರೆ. ಅವರು ಭೌತಶಾಸ್ತ್ರವನ್ನು ಆಧ್ಯಾತ್ಮದೊಂದಿಗೆ ಸಮೀಕರಿಸಿ ವಿವರಿಸುತ್ತಿದ್ದ ಪರಿ ನಮ್ಮನ್ನೆಲ್ಲಾ ಮಂತ್ರಮುಗ್ಧರನ್ನಾಗಿಸುತಿತ್ತು. ಕೇಸರಿ, ನೀಲಿ, ಗಾಢ ನೀಲಿ, ಗುಲಾಬಿ, ಹಳದಿ, ಬಿಳಿ, ಕಪ್ಪು - ಹೀಗೆ ಒಂದೊಂದು ಬಣ್ಣಕ್ಕೂ ಇರುವ ಮಹತ್ವವನ್ನು, ಅವು ನಮ್ಮ ಮನಸಿನ ಮೇಲೆ ಬೀರುವ ಪರಿಣಾಮವನ್ನು ವಿವಿರಿಸಿದ್ದರು. ಆಗ ತಕ್ಷಣ ನನ್ನ ಮನೆಯ ಗೋಡೆಗಳ ಬಣ್ಣಗಳನ್ನೆಲ್ಲಾ ಬದಲಿಸುವ ಆಲೋಚನೆ ಬಂದು...ಅದು ಕೊನೆಗೆ ನನ್ನ ಕೋಣೆಯೊಂದರ ಬಣ್ಣ ಬದಲಾಯಿಸುವುದರೊಂದಿಗೇ ಕೊನೆಗೊಂಡಿತ್ತು. ಗಾಢ ನೀಲ ಬಣ್ಣ ವಿಷಾದ ಭಾವಕ್ಕೆ ಹೊಂದುವುದು ಎಂದು ಹೇಳಿದಾಗ ಥಟ್ಟನೆ ನೆನಪಾಗಿದ್ದು ಸಾಗರವೇ! ಅದರ ಕಡುಗಪ್ಪು ಮೈ ನೋಡಿದ ತಕ್ಷಣವೇ ನನಗರಿಯದಂತೇ ಒಂದು ನಿಟ್ಟುಸಿರು ಪ್ರತಿ ಸಲ ಹೊರಬರುವುದಂತೂ ಆ ಸಾಗರದಾಣೆಗೂ ಸತ್ಯ! ಆದರೆ ಮರುಕ್ಷಣ ಬಿಳಿ ನೊರೆಚೆಲ್ಲುವ ಅದರ ಪರಿಗೆ ಮೋಡಿಯಾಗಿ.. ಆ ಬಿಳಿ ನೊರೆಗಳನ್ನೇ ನೋಡುತ್ತಾ ಕಿರುನಗು ಮೂಡುವುದೂ ಅಷ್ಟೇ ಸತ್ಯ. ಬಿಳಿ ಆಶಾವಾದದ, ಪ್ರಶಾಂತತೆಯ, ನಿರ್ಮಲತೆಯ ಸಂಕೇತ. ಪ್ರಕೃತಿಯೇ ತನ್ಮೂಲಕ ಎಲ್ಲಾ ಸಂಕೇತವನ್ನು ಅದೆಷ್ಟು ಸೂಕ್ಷ್ಮವಾಗಿ ಆದರೆ ನಿಖರವಾಗಿ ತೋರುತ್ತದೆ ಎಂದು ಬಹು ಅಚ್ಚರಿ ಪಡುತ್ತಿರುತ್ತೇನೆ. ಹಸಿರು ಕಂಡಾಗಲೆಲ್ಲಾ ಹುಚ್ಚೇಳುವ ಮನ... ಏನೋ ತುಂಬಿಕೊಂಡಂತಹ ಭಾವ.. ಉಲ್ಲಾಸ. ಹಾಗಾಗಿಯೇ ಹಿರಿಯರು ಗರ್ಭಿಣಿ ಸ್ತ್ರೀಯರ ಉಡಿ ತುಂಬುವಾಗ ಹಸಿರು ಬಳೆ, ಕಣ, ಸೀರೆ ಕೊಡುವ ಪ್ರತೀತಿ ಮಾಡಿದ್ದಾರೆ. ಪ್ರಕೃತಿಯ ಜೊತೆ ಜೊತೆಗೇ ಮಾನವನ ಮನಸೂ ಸ್ಪಂದಿಸುತ್ತದೆ ಎನ್ನುತ್ತಿದ್ದರು ನನ್ನ ಫಿಸಿಕ್ಸ್ ಗುರುಗಳು. ಹಂತ ಹಂತವಾಗಿ ಅದು ಎಷ್ಟು ಸತ್ಯ ಎಂದು ಇಂದಿಗೂ ನನಗೆ ಮನವರಿಕೆಯಾಗುತ್ತಲೇ ಇದೆ.

ಹ್ಮ್ಂ... ಎಷ್ಟು ಪ್ರಯತ್ನಿಸಿದರೂ ಪೂರ್ತಿ ವಿಷಾದವನ್ನು.. ವಿಷಾದವಾಗಿಯೇ ಕಾಣಿಸಲು ಸಾಧ್ಯವಾಗುತ್ತಿಲ್ಲ!:-/ ಬಹುಶಃ ನನ್ನೊಳಗಿನ ಆಶಾವಾದ ಅದನ್ನು ತಡೆಹಿಡಿದಿರಬಹುದು. ಅದೇನೇ ಇರಲಿ... ಡಿಫರೆಂಟ್ ಕೊಡಲು ಯತ್ನಿಸಿದ್ದೇನೆ. ವಿಷಾದದ ಮೂಲಕ ಆಶಾವದದ ಹೊಂಗಿರಣವನ್ನು ಹೊಮ್ಮಿಸುವುದೂ ಅತಿ ಪ್ರಯಾಸದ ಆದರೆ ಅಷ್ಟೇ ವಿಭಿನ್ನ ಹಾಗೂ ವಿಶಿಷ್ಟವಾದ ಕಾರ್ಯ ಎಂದು ಭಾವಿಸಿರುವೆ ನಾನು. ತಮಸ್ಸನ್ನೊಂದೇ ಕಾಣಲು ಹೋದರೆ ಏಣೋ ಕಾಣದು.. ಬರೀ ಅಂಧಕಾರವೇ ತುಂಬಿಕೊಂಡು ಎಲ್ಲವೂ ಶೂನ್ಯವೇ ಆಗುವುದು. ಒಂದು ಬೆಳಕಿನ ಕಿರಣವನ್ನಿಟ್ಟುಕೊಂಡರೆ ತಮಸ್ಸನ್ನೂ ಕಾಣಬಹುದು... ಹಾಗೇ ಅದನ್ನು ಹೊಡೆದೋಡಿಸಲು ಕೇವಲ ಒಂದು ಕಿರಣದ ಅವಶ್ಯಕತೆ ಮಾತ್ರ ಇರುವುದೆನ್ನುವದರ ಅರಿವೂ ನಮ್ಮದಾಗುವುದು...

* ಈ ಬರಹವನ್ನು ಬರೆಯಲು ಪ್ರೇರೇಪಿಸಿದ ನನ್ನ ಆತ್ಮೀಯ ಮಾನಸ ಸಹೋದರ ಮಧುಸೂದನ್‌ಗೆ ಧನ್ಯವಾದಗಳು :)

-ತೇಜಸ್ವಿನಿ ಹೆಗಡೆ.

ಗುರುವಾರ, ಮಾರ್ಚ್ 17, 2011

ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ...

ಪ್ರಿಯ ಗೆಳೆಯ,

Courtesy : http://www.flickr.com/photos/ 
ಹೇಗಿದ್ದೀಯಾ? ಈಗ ನಿನ್ನ ಅದೇ ಹಳೆಯ ಪ್ರಶಾಂತ ಶುಭ್ರ ನಗೆ ಚೆಲ್ಲುತ್ತಾ ಆರಾಮಾಗೇ ಇದ್ದೀಯೆಂದು ಗೊತ್ತು. ಹಾಗಾಗಿಯೇ ಈ ಪತ್ರ ಬರೆಯುವ ಧೈರ್ಯ ನಾನು ಮಾಡ್ತಿರೋದು. ಅಂದ ಹಾಗೆ ಅದೆಂಥಾ ಕೋಪವಯ್ಯ ನಿಂದು?!! ಅಲ್ಲ... ಇದೇ ಮೊದಲ ಸಲವೇನಲ್ಲಾ ನಾನು ನಿನ್ನ ಈ ರೂಪ ನೋಡ್ತಿರೋದು ಬಿಡು....ನಂಗೆ ನಿನ್ನ ಕೋಪದ, ಅದರ ಆರ್ಭಟದ ಅರಿವು ಈ ಹಿಂದೆಯೂ ಆಗಿತ್ತು. ಅದೇ ....ಆರು ವರುಷದ ಹಿಂದೆ ನಾನು ನನ್ನವನ ಕೈ ಹಿಡಿವ ಸಮಯದಲ್ಲೇ ನಿಂಗೆ ಉಕ್ಕಿತ್ತು ಭಯಂಕರ ಸಿಟ್ಟು. ಆದರೆ ಆವಾಗೇನೋ ನಿಂಗೆ ಕೋಪ ಬಂದಿದ್ದು ನಂಗೆ ಅಲ್ಪ ಸ್ವಲ್ಪ ಅರ್ಥವಾಗಿತ್ತು... ಈಗೇನಾಯ್ತಾಪ್ಪಾ?!! ಕಳೆದವಾರ ನನ್ನ ಮಂಗಳೂರಿನ ಗೆಳತಿ ಫೋನ್ ಮಾಡಿ "ನೋಡಿದೆಯೋ ನಿನ್ನ ಪ್ರಿಯ ಗೆಳೆಯನ ಮಂಗಾಟವ? ಎಂತಾ ಮಂಡೆ ಬೆಚ್ಚ ಆಗುವಂತಿದೆ ಮಾರಾಯ್ತಿ... ಇನ್ನೂ ಅವನ ಮೋಹ ನೀನು ಬಿಟ್ಟಿಲ್ಲವೆಂದರೆ ನಿಂಗೂ ಅದೇ ಗತಿ ಆಗುವುದುಂಟು ನೋಡು...ಮತ್ತೆ ನೀನು ಇಲ್ಲಿಗೆ ಬಂದಾಗ ಅವನನು ಕಾಣಲು ಹೋಗುತ್ತೇನೆ ಎಂದರೆ ಎಲ್ಲರೂ ನಿನ್ನ ಅಟ್ಟಿಸಿಕೊಂಡು ಬಂದು ಹೊಡೆದಾರು ಮಾರಾಯ್ತಿ...ಆಮೇಲೆ ನಾನು ಹೇಳಲಿಲ್ಲವೆಂದು ಹೇಳಬೇಡ..." ಎಂದು ಕಿಚಾಯಿಸಿದಾಗ ತುಂಬಾ ಬೇಸರವಾಗಿತ್ತು.. ಜೊತೆ ನಿನ್ನ ಮೇಲೆ ಅತಿ ಕೋಪ ಕೂಡ ಬಂದಿತ್ತು.

ಅಲ್ಲಾ.. ನಿಂಗೇನು ಬಂದಿತ್ತು ರೋಗ ಅಷ್ಟು ಪ್ರತಾಪ ತೋರ್ಸೋಕೆ? ಅದೂ ಎಲ್ಲರ ಕಣ್ಣಿಗೂ ಕಿಸುರಾಗೋ ಹಾಗೆ....! ಇಷ್ಟು ದಿನ ಎಲ್ರ ಮುಂದೆ ಹೆಮ್ಮೆಯಿಂದ ನಿನ್ನ ಗುಣಗಾನ ಮಾಡ್ತಿದ್ದೆ... ಈಗ ನಾನು ಹಾಗೆ ಮಾಡಿದ್ರೆ ಸುಮ್ನಿರ್ತಾರಾ? ಹೋಗ್ಲಿ... ನಿಂಗೇನು ಅಂಥ ಕಷ್ಟ ಬಂದಿದ್ದು? ಕೋಪ ಬಂದಿದ್ರೆ ತಡ್ಕೊಳೋಕೆ...ಇಲ್ಲಾ ಹೊರ ಹಾಕೋಗೆ ನೂರು ಮಾರ್ಗವಿದೆ ನಿನ್ನ ಹತ್ರ.. ಅದೆಲ್ಲಾ ಬಿಟ್ಟು ಸಿಕ್ಕ ಸಿಕ್ಕವ್ರ ಮೇಲೆಲ್ಲಾ ಹುಚ್ಚಾಪಟ್ಟೆಯಾಗಿ ಏರಿ ಹೋಗಿ ಹೊಡ್ದು ಹಾಕ್ದೆಯಲ್ಲಾ.... ನನ್ನ ಪ್ರತಿಷ್ಠೆ ಏನಾಗ್ಬೇಡ? ಒಪ್ಕೊಂಡೆ.. ನಾನು ನಿನ್ನ ಹುಚ್ಚಿಯಾದ್ರೆ ನೀನು ಅವಳ ಮಳ್ಳ ಅಂತ. ನಾನ್ಯಾವತ್ತೂ ಅದ್ಕೆ ವಿರೋಧ ತೋರ್ಸಿದ್ದೀನಾ? ನನ್ಜೊತೆನೂ ಅನ್ಯಾಯ ತುಂಬಾ ಸಲ ಆಗಿದೆಯಪ್ಪಾ... ಹಾಗಂತಾ ನಾನ್ಯವತ್ತೂ ಅವ್ಳ ರೀತಿ ನಿಂಗೆ ಚುಚ್ಚಿ ನಿನ್ನ ಪ್ರತಾಪ ತೋರ್ಸು ಅಂದಿಲ್ಲ... ಹಾಗಿರೋವಾಗ ಆ ಇಳಾ ಹುಚ್ಚುಚ್ಚಾಗಿ ಕುಣುದ್ಲು ಅಂತ ನೀನ್ಯಾಕೆ ಎಲ್ರ ಮೇಲೇರಿ ಹೋದ್ಯೋ?!!! ನಂಗೆಷ್ಟು ಬೇಜಾರಾಯ್ತು ಗೊತ್ತಾ? ಅತ್ಲಾಗೆ ನಿನ್ನ ಸಮರ್ಥಿಸಿಕೊಳ್ಳೋಹಾಗಿಲ್ಲ.. ಇತ್ಲಾಗೆ ನಿನ್ನ ಸಿಟ್ಟಿಗೆ ಬಲಿಯಾದ ಆ ಪಾಪದ ಜನ್ರ ಗೋಳು ನೋಡೋ ಹಾಗಿಲ್ಲ. ಅಲ್ವೋ ನಿಂಗೆ ಅನ್ಯಾಯ ಆಗಿದ್ರೆ ಸರಿ.... ಅದ್ಕಾದ್ರೂ ಸಿಟ್ಟು ತೋರ್ಸು... ಅದ್ನ ಬಿಟ್ಟು ಆ ಇಳಾ ಸಿಟ್ಟಿಗೆಲ್ಲಾ ನೀನು ಉರಿದೇಳೋದು ಬೇಡ....ತಿಳೀತಾ?

ಹ್ಮ್ಂ.... ನಿನ್ನೊಳಿದೆ ನನ್ನ ಮನಸು... ಎಂದೆಲ್ಲಾ ಹಾಡಿದ್ದೆ... ಹೊಗಳಿದ್ದೆ. ಈಗ ನೋಡಿದ್ರೆ ಎಲ್ರ ಮನಸೂ ನಿನ್ನೊಳಿದೆ. ಆದ್ರೆ ಅವ್ರು ಯಾರೂ ನಿನ್ನ ಕೊಂಡಾಡ್ತಾ ಇಲ್ಲಾ ತಿಳ್ಕೊ ಪೆದ್ದ. "ಹುಟ್ಟಿದ-ಹುಟ್ಟದ ನನ್ನೊಳಗಿನ ಕವಿತೆಯೂ ನೀ..." ಎಂದೂ ತಿಳ್ಕೊಂಡಿದ್ದೆ. ಆದ್ರೆ ಮೊನ್ನೆಯ ನಿನ್ನ ಭಯಂಕರ ರೂಪ ನೋಡಿ... ಒಂದು ಹನಿ ಕವಿತೆಯೂ ಹುಟ್ತಿಲ್ಲ ನೋಡು...! ನಿಜ ಹೇಳ್ಲಾ... ಇನ್ನು ಇದ್ಕೂ ಸಿಟ್ಟು ಮಾಡ್ಕೋಬೇಡ... ಮೊದ್ಲು ನಂಗೆ ನಿನ್ನ ಕಂಡ್ರೆ ಬರೀ ಪ್ರೀತಿ, ಸ್ನೇಹವಿತ್ತು. ಆದ್ರೆ ಈಗ ಸ್ವಲ್ಪ.... ಸ್ವಲ್ಪಕ್ಕಿಂತ ತುಸು ಹೆಚ್ಚೆ ಭಯವೂ ಕಾಡ್ತಿದೆ. ನಾಳೆ ನನ್ನ ಮೇಲಿನ ಸಿಟ್ಟಿಗೋ... ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ಆ ಇಳಾ ನಿನ್ ಕಿವಿ ಚುಚ್ಚಿಯೋ... ನೀನು ನನ್ನೂರಿನ ಜನ್ರಿಗೂ ತೊಂದ್ರೆ ಕೊಟ್ರೆ? ಆವಾಗ ಮಾತ್ರ ನಾನು ಸುಮ್ನಿರೊಲ್ಲ ನೋಡು. 

ಅದ್ಯಾರೋ ಮೊನ್ನೆ ಹಾಡ್ಕೊತ್ತಿದ್ರಪ್ಪಾ "ಕಡಲ ಮೆಲೆ ಸಾವಿರರು ಮೈಲಿ ಸಾಗಿಯೂ, ನೀರಿನಾಳ ತಿಳಿಯಿತೇನೆ ಹಾಯಿದೋಣಿಗೆ...." ಎಂದು. ಅದು ಈಗ ನಿನ್ನ ನೋಡಿದ್ರೆ ಹೌದು ಅನ್ಸೊತ್ತೆ. ನಿನ್ನ ಅರ್ಥ ಮಾಡ್ಕೊಳೋಕೆ ನಂಗಿನ್ನೂ ಆಗಿಲ್ಲ ಅಂತ ದುಃಖ ಆಗ್ತಿದೆ. ಆದ್ರೂ ಅರ್ಥ ಮಾಡ್ಕೊಳೋಕೆ ಪ್ರಯತ್ನಿಸ್ತೀನಿ... ಹೇಗಿದ್ರೂ ಮುಂದಿನ ತಿಂಗ್ಳು ಬರ್ತಿದ್ದೀನಿ ಅಲ್ಲಿಗೆ... ಅಲ್ಲೀವರೆಗೆ ಹಾಯಾಗಿರು. ಆಮೆಲೆ ನಾ ತಗೋಳೋ ಕ್ಲಾಸ್‌ಗೆ ನೀನು ತಯಾರಾಗ್ಬೇಕಾಗೊತ್ತೆ! ಆದ್ರೆ ಮಾರಾಯಾ ಮೊದ್ಲೇ ಹೇಳ್ಬಿಡು.. ನಿನ್ನ ಗೆಳತಿ ಇಳೆ ಏನಾದ್ರೂ ಕಾರಾಮತಿನೋ ಭಾನಮತಿನೋ ಮಾಡೋರೀತಿಲಿ ಇದ್ದಾಳ ಅಂತ.. ಯಾವ್ದಕ್ಕೂ ಆಕೆ ಜೊತೆಯೂ ಒಂದು ಒಪ್ಪಂದ ಮಾಡ್ಕೊಂಡೇ ಬರೋದು ಲೇಸೇನೋ... ನನ್ನವ್ರಿಗೂ ಹೇಳಿ ಹೇಳಿ ಸಾಕಾಗಿದೆ... ನಿನ್ನ ಗೆಳತಿಗೆ ತುಂಬಾ ತೊಂದ್ರೆ ಕೊಡ್ಬೇಡಿ.. ಆಕೆಗೆ ಸಿಟ್ಟು ಬಂದ್ರೆ ನಿನ್ನ ಚುಚ್ಚಿ ಎಬ್ಬಿಸ್ತಾಳೆ ಅಂತ... ಕೇಳೋದೇ ಇಲ್ಲಾ ನೋಡು... ನಂಗೋ ಗೊಂದಲ.... ಅತ್ತ ಅವ್ರನ್ನ ಬಿಡ್ಲಾರೆ.. ಇತ್ತ ನಿನ್ನ ಮೋಹನೂ ಬಿಡ್ಲಾರೆ... ಹ್ಮ್ಂ.. ಅವ್ರೆಲ್ಲಾ ನಿನ್ಮುಂದೆ ಚಿಕ್ಕೋರಪ್ಪಾ.. ನೀನೇ ಸ್ವಲ್ಪ ಸುಧಾರಿಸ್ಕೊಂಡು ಹೋಗು. ಹೇಗಿದ್ರೂ ಈಗ ಸ್ವಲ್ಪ ಬುದ್ಧಿ ಕಲ್ಸಿದೀಯಾ ಅಂದ್ಕೋತೀನಿ.... ತಿದ್ಕೊಳೋರಾದ್ರೆ ತಿದ್ಕೊತಾರೆ. ಆದ್ರೆ ಅಲ್ಲಿವರೆಗಾದ್ರೂ ಸ್ವಲ್ಪ ಸಮಯ ಕೊಟ್ಟು ನೋಡು. ನಿನ್ಮೇಲೆ ನಾನಿಟ್ಟಿರೋ ಪ್ರೀತಿ ಮೇಲಾಣೆ... ಸ್ವಲ್ಪ ತಾಳ್ಮೆ ತಂದ್ಕೊ. ಹೆಚ್ಚು ಕಾಯ್ಸೊಲ್ಲ.. ಒಂದೇ ತಿಂಗ್ಳು.... ಬೇಗ ಬರ್ತೀನಿ... ನಿನ್ನ ಅಹವಾಲನ್ನೆಲ್ಲಾ ಖುದ್ದಾಗಿ ಕೇಳಿ ತಿಳ್ಕೊತೀನಿ. ನನ್ನ ಮೇಲಿನ ಪ್ರೀತಿಗಾದ್ರೂ ನೀನು, ನೀನಿದ್ದಲ್ಲೇ ಶಾಂತವಾಗಿ ಕಾಯ್ತಿರ್ತೀಯಾ ಅಂತ ಆಶಿಸುತ್ತಾ...

ಇತಿ,
ನಿನ್ನ ಪ್ರೀತಿಯ...

------
-ತೇಜಸ್ವಿನಿ ಹೆಗಡೆ.

ಬುಧವಾರ, ಮಾರ್ಚ್ 9, 2011

ಆಯ್ಕೆ

ಮುಚ್ಚಿದ ರೆಪ್ಪೆಗಳೊಳಗೆ ಗಿರಗಿರಕಿ ಹೊಡೆಯುತ್ತಿದ್ದ
ಗೋಲಿಗಳಾಚೆ ಹೊಚ್ಚ ಹೊಸ ದಾರಿಯೊಂದು ಕಾಣಲು
ನೆಟ್ಟ ನೋಟವನೇ ಬೀರುತ್ತಾ, ದಿಟ್ಟ ಹೆಜ್ಜೆಯನಿಟ್ಟು ಮುನ್ನಡಿಯಿಟ್ಟೆ....

ಅಕ್ಕ ಪಕ್ಕ ಕಾಣಲಿಲ್ಲ, ಸುತ್ತ ಮುತ್ತ ಯಾರೂ ಇಲ್ಲ
ಕಾಲ್ಕೆಳಗಿನ ಭೂಮಿಯೂ ಬಿಳಿ ಹತ್ತಿಯ ಮೋಡದಂತಿದೆಯಲ್ಲ!
ನಿಶ್ಚಲ ತಂಗಾಳಿಯ ಕಂಪಿಗೆ ಮತ್ತೇರುತ್ತಿತ್ತು ಮೆಲ್ಲ ಮೆಲ್ಲ....

ಅತ್ತ ಪ್ರಪಾತ, ಇತ್ತ ಜಲಪಾತ, ನಡುವೆ ಮೋಡವೇರಿ ಸಾಗುತಿರೆ,
ಧುತ್ತೆಂದು ಎದುರಾದ, ಬದುಕುಗಳ ಸಗಟುಗಾರ ಯಮರಾಯ,
ಎದೆಯಲ್ಲೆನೋ ಸಣ್ಣ ಕಂಪನವಾಗಿ, ಕೈ ಮೂಗಿನೆಡೆ ಸಾಗಿತ್ತು ಅಪ್ರಯತ್ನವಾಗಿ,

ಎಮ್ಮೆಯ ಸುಳಿವಿಲ್ಲದೇ, ಗದೆಯ ಮೇಲೇರಿಸದೇ,
ಹೂಂಕಾರದ ಸೊಕ್ಕಿಲ್ಲದೇ ಬಳಿ ಸಾರಿ ಬಹು ಮೆಲ್ಲನೆಂದ
ಮಗಳೆ...‘ ಕೊಟ್ಟಿರುವೆ ನಿನಗೆ ನಾ ನಾಲ್ಕೇ ನಾಲ್ಕು ಆಯ್ಕೆಗಳ’

ಜೀವವಿತ್ತ ಹೆತ್ತವರೋ, ಜೀವ(ನ)ದ ಸಂಗಾತಿಯೋ,
ನೀ ಜನ್ಮವಿತ್ತ ಮಗುವೋ, ನಿನ್ನ ಒಡಹುಟ್ಟಿದವರೋ
ಆಯ್ದುಕೊಳ್ಳುವ ಹಕ್ಕು ನಿಂದೇ, ಬೇಕಾಗಿದೆ ಜೀವ ನನಗಿಂದೇ..

ಉರಿವ ಸೂರ್ಯ ಮಂಕಾದಂತೆ, ಹೊಳೆವ ಚಂದ್ರ ಕಪ್ಪಾದಂತೆ,
ಹಾಲಿನೊಳು ಹಾಲಾಹಲ ಬೆರೆತಂತೆ, ಅನ್ನವೆಲ್ಲಾ ಕಲ್ಲಾದಂತೆ
ಬಿದ್ದು ಬಿಟ್ಟೆ ಉರುಳಿ, ಪಾದದ ಬಳಿ ದೈನ್ಯತೆಯೇ ಮೂರ್ತವೆತ್ತಂತೆ

ನಮ್ಮಪ್ಪ, ಕೈ ಮುಗಿವೆ, ಕಾಲಿಡಿದು ಶಿರವಾಗುವೆ
ದಯಮಾಡಿ ಅನುಕರಿಸು, ನನ್ನನ್ನು ಉದ್ಧರಿಸು
ಐದನೆಯ ಆಯ್ಕೆನೂ ಸೇರಿಸಿ ಬಿಡು ಮತ್ತೆ, ಬಿಕ್ಕಿ ಬಿಕ್ಕಿ ನಾನಳುತ್ತಿದ್ದೆ

ಯಮನಂತಹ ಯಮನಿಗೂ ಕನಿಕರವುಕ್ಕಿ ಕರಗಿದ್ದ ನನಗಾಗಿ
ಐದನೆಯ ಆಯ್ಕೆಯನು ನನಗೇ ಬಿಡಲು, ನಕ್ಕಿದ್ದೆ ಮೆಲುವಾಗಿ..
ನಗುಮೊಗದ ನನ್ನನೇ ಪಿಳಿ ಪಿಳಿ ನೋಡುತ್ತಿದ್ದ ಆತ ಪೆಚ್ಚಾಗಿ

ಸೋತ ಹೆಜ್ಜೆಯನೊಡನೆ, ನನ್ನ ಗೆಲುವನೇರಿಸಿಕೊಂಡ ಯಮರಾಯ
ನಾಲ್ಕು ಆಯ್ಕೆಗಳ ಬದುಕಿಸಿ, ಐದನೆಯದರ ಜೊತೆಗೆ ಸಾಗಲು...
ಮುಚ್ಚಿದ್ದ ರೆಪ್ಪೆಗಳ ರಪ್ಪನೆ ತೆರೆದರೆ, ರವಿರಾಯ ಕಣ್ ಚುಚ್ಚುತ್ತಿದ್ದ

-ತೇಜಸ್ವಿನಿ ಹೆಗಡೆ

ಸೋಮವಾರ, ಮಾರ್ಚ್ 7, 2011

ನನ್ನ ಇನಿಯನ ನೆಲೆಯ ಬಲ್ಲೆ ಏನೆ....

ತುಂಬಾ ಸುಂದರ ಅರ್ಥವನ್ನು ಸ್ಫುರಿಸುವ ಈ ಕವಿತೆಯನ್ನು ಎಂ.ಡಿ. ಪಲ್ಲವಿಯವರು ಅಷ್ಟೇ ಸುಂದರವಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡನ್ನು ಕೆಳಗೆ ಕೊಟ್ಟಿರುವ ಲಿಂಕ್‌ನಲ್ಲಿ ಕೇಳಬಹುದು. ಈ ಹಾಡಿನ Mp3 Formate ಬೇಕಾದವರು ತಮ್ಮ  ಮಿಂಚಂಚೆ ಕೊಡಬಹುದು. ಅವರಿಗೆ ಮೈಲ್ ಮಾಡಲಾಗುವುದು.

ಕವಿ        : ಎನ್. ಎಸ್. ಲಕ್ಷ್ಮಿನಾರಾಯಣ ಭಟ್  
ಸಂಗೀತ : ಸಿ. ಅಶ್ವಥ್
ಗಾಯನ : ಎಂ.ಡಿ. ಪಲ್ಲವಿ.

ನನ್ನ ಇನಿಯನ ನೆಲೆಯ ಬಲ್ಲೆ ಏನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ


ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳ ಬಲ್ಲ ||೨||
ನನ್ನ ಮೊರೆಯನು ಏಕೆ ಕೇಳಲೊಲ್ಲ


ಗಿರಿಯ ಎತ್ತಲು ಬಲ್ಲ
ಶರಧಿ ಬಗ್ಗಿಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲಿಸಬಲ್ಲ ||೨||
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ


ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆ ಬಿತ್ತು ತೆನೆಯೆದ್ದು ತೂಗುವವನು ||೨||
ನಲ್ಲೆ ಅಳಲನು ಏಕೆ ತಿಳಿಯದವನು

ಈ ಸುಂದರ ಹಾಡನ್ನು ಈ ಲಿಂಕ್‌ನಲ್ಲಿ ಕೇಳಿ ಆನಂದಿಸಿ. 






- ತೇಜಸ್ವಿನಿ ಹೆಗಡೆ