ಶುಕ್ರವಾರ, ಏಪ್ರಿಲ್ 15, 2016

ಶಬರಿ


“ಕಾದಿರುವಳು ಶಬರಿ, ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು..” - ವಿ.ಸೀತಾರಮಯ್ಯನವರ ಈ ಸುಪ್ರಸಿದ್ಧ ಹಾಡನ್ನು ಕೇಳದವರೇ ಇಲ್ಲ ಎನ್ನಬಹುದು. ಅಷ್ಟು ಜನಪ್ರಿಯ ಹಾಡಿದು. ಈ ಹಾಡಿನಷ್ಟೇ ಜನಪ್ರಿಯ ರಾಮಾಯಣದಲ್ಲಿ ಬರುವ ಶಬರಿಯ ಪಾತ್ರವೂ ಕೂಡ.
pic courtesy : http://devdutt.com/

ಮೊತ್ತ ಮೊದಲ ಬಾರಿ ರಾಮಾಯಣ ಕಥೆಯನ್ನೋದುವಾಗ ನನ್ನನ್ನು ಬಹುವಾಗಿ ಸೆಳೆದದ್ದು ಶಬರಿಯ ಕಥೆಯೆ. ಶರಣಾಗತಿಯಿಂದ ಕೂಡಿದ ಭಕ್ತಿ ಅದೆಷ್ಟು ಶ್ರೇಷ್ಠವೆಂದು ತೋರಿದ ಕಥಾನಕವಿದು. ‘ಪುರಾಣ ಭಾರತಕೋಶ’ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ಶಬರಿ ಆನೆಗೊಂದಿಯಲ್ಲಿದ್ದ ಓರ್ವ ಬೇಡತಿ. ಬೇಡರ ರಾಜನ ಮಗಳಾಗಿದ್ದ ಶಬರಿ ವೈರಾಗ್ಯದಿಂದ ಮನೆಯನ್ನು ತೊರೆದು, ಮಾತಂಗ ಮುನಿಯ ಶಿಷ್ಯೆಯಾಗುತ್ತಾಳೆ. ಮುಂದೆ ಮುಕ್ತಿಗಾಗಿ ಆಕೆ ಪರಿತಪಿಸುತ್ತಿದ್ದಾಗ, ಋಷಿವರ್ಯರು ‘ನೀನು ಶ್ರೀರಾಮನ ಜಪ ಮಾಡಿದರೆ, ಆತ ನಿನ್ನ ಬಳಿ ಬರುತ್ತಾನೆ. ಹಾಗೆ ಬಂದಾಗ, ಅವನನ್ನು ಪ್ರೀತ್ಯಾದರಗಳಿಂದ ಸತ್ಕರಿಸಿದರೆ ಖಂಡಿತ ಮುಕ್ತಿ ಪ್ರಾಪ್ತಿಯಾಗುವುದು’ ಎನ್ನಲು ಅಂತೆಯೇ ಶಬರಿ ರಾಮನಿಗಾಗಿ ಉತ್ಕಠ ಭಕ್ತಿಯಿಂದ ಕಾಯುತೊಡಗುತ್ತಾಳೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಬರುವ ಶಬರಿಯ ಕಥೆಗೂ, ಪುರಾಣಗಳಲ್ಲಿ ಬರುವ ಅವಳ ಕಥನಕ್ಕೂ ಕೆಲವು ವ್ಯತ್ಯಾಸಗಳಿವೆ.   

ವಾಲ್ಮೀಕಿ ರಾಮಾಯಣದಲ್ಲಿ ಚಿತ್ರಿಸಲ್ಪಟ್ಟಿರುವಂತೇ, ರಾಮನ ಆಗಮನಕ್ಕಾಗಿ ಕಾತುರಳಾಗಿದ್ದ ಶಬರಿ, ಶ್ರೀರಾಮ ಬರಲು, ಆತನಿಗೆ ಅರ್ಘ್ಯಪಾದ್ಯಗಳನ್ನಿತ್ತು ಉಪಚರಿಸಿ, ಬಗೆ ಬಗೆಯ ಪದಾರ್ಥಗಳನ್ನು ತಿನ್ನಲು ನೀಡಿ ಸತ್ಕರಿಸುತ್ತಾಳೆ. ಇದರಿಂದ ಸಂಪ್ರೀತನಾದ ರಾಮ ಅವಳಿಗೆ ಮುಕ್ತಿ ಕರುಣಿಸುತ್ತಾನೆ. 

ಆದರೆ ಪದ್ಮಪುರಾಣದಲ್ಲಿರುವಂತೇ, ಶಬರಿ ರಾಮನನ್ನು ಸಂಪ್ರೀತಿಗೊಳಿಸಲು, ಪ್ರತಿ ದಿವಸ ಕಾಡಿಗೆ ಹೋಗಿ, ಬೋರೆ ಹಣ್ಣುಗಳನ್ನು ಕೊಯ್ದು, ಹಣ್ಣು ಸಿಹಿಯೇ? ಹುಳಿಯೇ? ಎಂದರಿಯಲು ಚೂರು ಕಚ್ಚಿ ತಿಂದು ನೋಡಿ, ಸಿಹಿಯಿರುವ ಹಣ್ಣುಗಳನ್ನೆಲ್ಲಾ ಆಯ್ದು, ಬೇರ್ಪಡಿಸಿ, ರಾಮನಿಗಾಗಿ ತೆಗೆದಿಡುತ್ತಾಳೆ. ರಾಮ ಇಂದು ಬರುವ, ನಾಳೆ ಬರುವ ಎಂದುಕೊಳ್ಳುತ್ತಲೇ, ಇನಿತೂ ಬೇಸರಿಸದೇ ಪ್ರತಿ ದಿವಸ ಅವನಿಗಾಗಿ ಈ ಹಣ್ಣುಗಳನ್ನಾಯ್ದು ಇಡುವ ಕಾರ್ಯವನ್ನು ಮಾಡುತ್ತಿರುತ್ತಾಳೆ. ಅಂತೂ ಕೊನೆಗೆ ಆಕೆಯ ಈ ನಿಃಸ್ವಾರ್ಥ ತಪಸ್ಸಿಗೆ ಮೆಚ್ಚಿ ಬರುವ ರಾಮ, ಅವಳು ಎಂಜಲು ಮಾಡಿಟ್ಟ ಆ ಹಣ್ಣುಗಳನ್ನೇ ಸಂತೋಷದಿಂದ ಸ್ವೀಕರಿಸಿ ಅವಳಿಗೆ ಮುಕ್ತಿ ಕರುಣಿಸುತ್ತಾನೆ.

ಇಲ್ಲಿ ನಮ್ಮನ್ನು ಹಿಡಿದಿಡುವುದು ಪದ್ಮಪುರಾಣದಲ್ಲಿ ಬರುವ ಶಬರಿಯ ಕಥಾನಕವೇ! ಶಬರಿಯದು ಇಲ್ಲಿ “ಮುಗ್ಧ ಭಕ್ತಿ” ಮತ್ತು “ಅಖಂಡ ತಾಳ್ಮೆ”!. ತನ್ನ ದೇವರಿಗೆ ಒಳ್ಳೆಯ ಸಿಹಿಯ ಹಣ್ಣನ್ನಷ್ಟೇ ಕೊಡಬೇಕು, ಆ ಮೂಲಕ ಸತ್ಕರಿಸಬೇಕೆಂಬ ಮುಗ್ಧತೆಯಷ್ಟೇ ಅವಳಲ್ಲಿದ್ದಿದ್ದು. ಅದಕ್ಕಾಗಿ ಅವಳು ವರುಷಗಳವರೆಗೂ ಕಾಯುತ್ತಾ ಕುಂತಳು. ತನ್ನ ಎಂಜಲನ್ನು ಕೊಡಬಹುದೇ? ಯಾರಿಗಾದರೂ ಎಂಜಲನ್ನು ಬಡಿಸುತ್ತಾರೆಯೇ? ಅದು ಸೂಕ್ತವೇ? ಎಂಬಿತ್ಯಾದಿ ಜಿಜ್ಞಾಸೆಗೆ ಹೋಗದೇ, ರಾಮನಿಗೆ ಭಕ್ತಿಯಿಂದ ಹಣ್ಣುಗಳನ್ನು ಅರ್ಪಿಸಿದ್ದು. ಶ್ರೀರಾಮನೂ ಅಷ್ಟೇ... ಇನಿತೂ ಬೇಸರಿಸದೇ, ಆ ಮುಗ್ಧ ಭಕ್ತೆಯ ಭಕ್ತಿಗೆ ಒಲಿದು ಸಂತಸದಿಂದಲೇ ಸ್ವೀಕರಿಸಿದ್ದು. ಇಂಥ ಭಕ್ತಿಗೆ ಕಪಟ, ಗೊಂದಲ, ಸರಿ ತಪ್ಪುಗಳ ಪರಿವೆಯೇ ಇರದು. ಅಲ್ಲಿರುವುದು ನಿರ್ಮಲ ಪ್ರೀತಿ, ಶರಣಾಗತಿ ಅಷ್ಟೇ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದೂ ಇದೇ...- “ಯಾವ ಭಕ್ತನು ನನಗೆ ಎಲೆ, ಹೂವು, ಹಣ್ಣು, ನೀರು ಇತ್ಯಾದಿಗಳನ್ನು ಭಕ್ತಿಯಿಂದ, ಪರಿಶುದ್ಧ ಮನಸ್ಸಿನಿಂದ ಅರ್ಪಿಸುತ್ತಾನೋ, ನಾನದನ್ನು ಪ್ರೀತಿಯಿಂದ ಸೇವಿಸುತ್ತೇನೆ...” ಎಂದು.

ಒಂದು ಪುಟ್ಟ ಉದಾಹರಣೆಯನ್ನು ತೆಗೆದುಕೊಂಡು ಹೇಳಬೇಕೆಂದರೆ... ಹೇಗೆ ಪುಟ್ಟ ಮಕ್ಕಳು ತಾವು ಕಚ್ಚಿ ತಿಂದ ತಿನಸನ್ನೇ ಅರ್ಧ ತಿಂದು, ತಮ್ಮ ಪ್ರೀತಿಯ ಅಪ್ಪ, ಅಮ್ಮನೂ ತಿನ್ನಬೇಕೆಂಬ ಆಶಯದಿಂದ, ಅವರ ಬಾಯೊಳಗೆ ತುರುಕಿಸಿ ನಗುತ್ತಾರೋ, ಸಂತಸ ಪಡುತ್ತಾರೋ ಅಂಥ ಭಾವ, ಭಕ್ತಿಯೇ ನನಗೆ ಶಬರಿಯಲ್ಲೂ ಕಾಣಿಸಿದ್ದು. ಹೆತ್ತ ಅಮ್ಮ ಅಪ್ಪನೂ ತಮ್ಮ ಮಗುವು ಪ್ರೀತಿಯಿಂದ ಬಾಯಿಗೆ ಹಾಕಲು ಬಂದಾಗ, ಎಂಜಲೆಂದು ಪರಿಗಣಿಸದೇ, ಥೂ ಛೀ ಎನ್ನದೇ, ತಿಂದುಬುಡುತ್ತಾರೆ... ಮುದ್ದಾಡುತ್ತಾರೆ... ಆ ಮಗುವಿಗೆ ಸಂತೃಪ್ತಿ ಕೊಡುತ್ತಾರೆ. ಅದೇ ಚಿತ್ರಣ ನನಗೆ ಶಬರಿಯಲ್ಲೂ ಕಂಡಿದ್ದು. ಅಂತಹ ಭಕ್ತಿಯ ಪರಾಕಷ್ಠೆಗೆ ಭಗವಂತ ಒಲಿಯದೇ ಇರುವನೇ?

ಇನ್ನು ಈ ಪುರಾಣ ಕಥೆಗಳೆಲ್ಲಾ ಕೇವಲ ಕಾಲ್ಪನಿಕ, ರಾಮಾಯಣ ಒಂದು ಸುಂದರ ಖಂಡ ಕಾವ್ಯ ಅಷ್ಟೇ.. ನಿಜದಲ್ಲಿ ಆಗದ್ದು - ಇತ್ಯಾದಿ ಏನೇ ಪ್ರವರಗಳಿದ್ದರೂ, ಹಾಗೆಲ್ಲಾ ವಾದಿಸುವವರನ್ನೂ ಅಪ್ಪಿಕೊಳ್ಳುತ್ತಾ, ರಾಮಾಯಣದಲ್ಲಿ ಬರುವ ಇಂತಹ ಅನೇಕ ಪಾತ್ರಗಳೊಳಗಿನ ಧನಾತ್ಮಕತೆಯನ್ನು ಸ್ವೀಕರಿಸುವುದರಿಂದ ಕೆಡುಕಂತೂ ಆಗದು ಎಂಬುದನ್ನೂ ಸಾರೋಣ! ಬೇಡತಿಯಾಗಿದ್ದ ಶಬರಿಯ ಎಂಜಲನ್ನು ಸ್ವೀಕರಿಸಿದ ರಾಮನ ಈ ಕಥೆಯಿಂದ ನಾವು - ಈ ಮೇಲು, ಕೀಳು, ಎಂಬ ತಾರತಮ್ಯ ಮಾಡದೇ, ನಿಷ್ಕಲ್ಮಶ ಮನಸಿನ ವ್ಯಕ್ತಿಗಳನ್ನು, ಅವರ ಪರಿಶುದ್ಧ ಪ್ರೀತಿಯನ್ನು ಅಷ್ಟೇ ತೆರೆದ ಮನಸ್ಸಿನಿಂದ, ಸಂತೋಷದಿಂದ ಒಪ್ಪಿ, ಅಪ್ಪಿಕೊಳ್ಳಬೇಕು ಎಂಬ ಅತ್ಯುತ್ತಮ ನೀತಿಯನ್ನು ಶಬರಿಯ ಕಥೆಯಿಂದ ಕಲಿಯುತ್ತೇವೆ. 

~ತೇಜಸ್ವಿನಿ ಹೆಗಡೆ.

ಶುಕ್ರವಾರ, ಏಪ್ರಿಲ್ 1, 2016

ಶೂದ್ರ ತಪಸ್ವಿ

“ಸಮಾಹಿತ’ ಎನ್ನುವ ದ್ವಿಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಮಾಲಿನಿ ಗುರುಪ್ರಸನ್ನ ಅವರ ಈ ವಿಮರ್ಶಾತ್ಮಕ, ಚಿಂತನಶೀಲ ಉತ್ತಮ ಲೇಖನವನ್ನು ಎಲ್ಲರ ಓದಿಗಾಗಿ ನನ್ನ ಮಾನಸದಲ್ಲಿ ಪ್ರಕಟಿಸುತ್ತಿದ್ದೇನೆ.

~ತೇಜಸ್ವಿನಿ.
~~~~~~~~~~~~~~~~~~~~~~

ಶೂದ್ರ ತಪಸ್ವಿ - ನನ್ನ ಓದು


ಶೂದ್ರ ತಪಸ್ವಿ - ಇದು ನಿಸ್ಸಂದೇಹವಾಗಿ ನನ್ನ ಪ್ರಮುಖ ಓದುಗಳಲ್ಲೊಂದು. ಹಾಗೆ ನೋಡಿದರೆ ಈ ಕೃತಿಯ ಬಗ್ಗೆ ಮೊದಮೊದಲು ನೂರು ಅಸಮಾಧಾನಗಳಿದ್ದವು. ಓದಿದ್ದನ್ನು ಮನಸ್ಸು ಒಪ್ಪಿಕೊಳ್ಳಲು ನಿರಾಕರಿಸುತ್ತಿತ್ತು. ಓದು ಕಲಿಸಿದ ತಂದೆಯ ಬಳಿ ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಮರು ಓದಿನ ಬಗ್ಗೆ ಸಲಹೆ ಸಿಗುತ್ತಿತ್ತೇ ವಿನಹ ಮತ್ತಾವ ಉತ್ತರವೂ ಸಿಗುತ್ತಿರಲಿಲ್ಲ. ನನ್ನ ನಿಲುವುಗಳ ಬಗ್ಗೆ ಅವರು ಅಸಮಾಧಾನ ಹೊಂದಿದ್ದಾರೆನೋ ಎಂಬ ಅನುಮಾನ ಪದೇ ಪದೇ ನನ್ನನ್ನು ಕಾಡುತ್ತಿತ್ತು. ಆ ಉತ್ತರಗಳನ್ನು ನಾನೇ ಹುಡುಕಿಕೊಳ್ಳಬೇಕೆಂಬುದು ಅವರ ಅಪೇಕ್ಷೆಯಾಗಿತ್ತು ಎಂದು ಈಗ ಅನ್ನಿಸುತ್ತಿದೆ.
ಮೂಲದ ಈ ಪ್ರಸಂಗದ ಬಗ್ಗೆ ಎರಡು ರೀತಿಯ ವಾದಗಳಿವೆ. ಮೊದಲನೆಯದು ಮತ್ತು ಬಹಳ ಪ್ರಮುಖವಾದುದು ಇದನ್ನೊಂದು ಪ್ರಕ್ಷಿಪ್ತ ಭಾಗವೆಂದು ಅನೇಕರು ಪರಿಗಣಿಸಿರುವುದು. ( ಉತ್ತರ ರಾಮಾಯಣವೇ ವಾಲ್ಮೀಕಿ ವಿರಚಿತವಲ್ಲ , ಅಗಸನ ಸೀತೆಯ ಕುರಿತ ನಿಂದನೆ, ಶಂಭೂಕ ವಧೆ ಮುಂತಾದ ಪ್ರಕರಣಗಳು ಇದಕ್ಕೆ ಇಂಬು ಕೊಡುತ್ತವೆ ಎಂಬ ಪ್ರಬಲ ವಾದವೂ ಉಂಟು) ಇದು ಹಲ ಮಟ್ಟಿಗೆ ಒಪ್ಪತಕ್ಕದ್ದು ಕೂಡಾ. ರೂಢಿಯಲ್ಲಿರುವ ಲಭ್ಯ ಜಾನಪದ ಕಥೆಗಳ ಪ್ರಕಾರ ಸ್ವಯಂ ವಾಲ್ಮೀಕಿಗಳೇ ಶೂದ್ರಾತಿಶೂದ್ರರು. ರಾಮ ಎಂಬ ಶಬ್ಧವನ್ನೂ ಉಚ್ಚರಿಸಲು ಬಾರದೇ ಮರಾ,ಮರಾ ಎಂದು ಹೇಳುತ್ತಾ ರಾಮ ಪದದ ಜಪಿಸುವಿಕೆಯಿಂದಲೇ ರಾಮಾಯಣದಂತಹ ಬೃಹತ್ ಗ್ರಂಥ ಬರೆದಂತಹ ವಾಲ್ಮೀಕಿ ಶೂದ್ರಾತಿಶೂದ್ರನಿಂದ ಋಷಿಯಾಗಿ ಪರಿವರ್ತಿತರಾದವರು, ತಮ್ಮ ಋಷ್ಯಾಶ್ರಮದಲ್ಲಿ ಸೀತೆಯನ್ನು ಸಲಹಿದವರು, ಸಮಕಾಲೀನ ಋಷಿಮುನಿಗಳಿಂದ ಗೌರವಿಸಲ್ಪಟ್ಟವರು. ಇಂತಹ ಹಿನ್ನೆಲೆಯುಳ್ಳ ವಾಲ್ಮೀಕಿಯವರು ತಪಸ್ಸು ಮಾಡುತ್ತಿದ್ದವನನ್ನು ಶೂದ್ರನೆಂಬ ಏಕೈಕ ಕಾರಣಕ್ಕೆ ರಾಮನ ಕೈಯಿಂದ ಹತ್ಯೆ ಮಾಡಿಸುತ್ತಾರೆ ಎಂಬ ಕಲ್ಪನೆಯೇ ಹಾಸ್ಯಾಸ್ಪದವಾದುದು. ಉತ್ತರ ರಾಮಾಯಣದ ಪ್ರಕಾರ ವಾಲ್ಮೀಕಿಗಳು ರಾಮನ ಸಮಕಾಲೀನರು. ತ್ರೇತಾಯುಗದಲ್ಲೇ ಜೀವಿಸಿದ್ದವರು. ನಾರದರ ಮಾತುಗಳಲ್ಲಿ ಹೇಳುವುದಾದರೆ

"ತ್ರೇತಾಯುಗೇ ಚ ವರ್ತಂತೇ ಬ್ರಾಹ್ಮಣಾಃ ಕ್ಷತ್ರಿಯಾಶ್ಚ ಯೇ/
ತಪೋ ತಪ್ಯಂತ ತೇ ಸರ್ವೇ ಶಶ್ರೂಷಾಮಪರೇ ಜನಾಃ /
ಸ ಧರ್ಮಃ ಪರಮಸ್ತೇಷಾಂ ವೈಶ್ಯಶೂದ್ರಂ ಸಮಾಗಮತ್/
ಪೂಜಾಂ ಚ ಸರ್ವವರ್ಣಾನಾಂ ಶೂದ್ರಾಶ್ಚಕ್ರುರ್ವಿಶೇಷತಃ/ "

"ತ್ರೇತಾಯುಗದಲ್ಲಿ ಬ್ರಾಹ್ಮಣರೂ, ಕ್ಷತ್ರಿಯರೂ ತಪಸ್ಸನ್ನಾಚರಿಸುತ್ತಿದ್ದರು. ವೈಶ್ಯಶೂದ್ರರು ಶುಶ್ರೂಷಾದಿ ವೃತ್ತಿಯಲ್ಲಿ ನಿರತರಾದರು. ಅದು ಅವರಿಗೆ ಪರಮ ಧರ್ಮವಾಯಿತು. ಶೂದ್ರರು ವಿಶೇಷವಾಗಿ ಇತರ ವರ್ಣದವರನ್ನು ಗೌರವಿಸುತ್ತಿದ್ದರು." ಈ ಮಾತುಗಳನ್ನೇ ಅಂದಿನ ಕಾಲದ ಧರ್ಮವೆಂದು ಒಪ್ಪುವುದಾದರೆ ವಾಲ್ಮೀಕಿಗಳೂ ಅಧರ್ಮಿಗಳೇ. ಅವರ ಆಶ್ರಮವೂ ರಾಮನ ಆಡಳಿತದ ಪರಿಧಿಯಲ್ಲೇ ಇತ್ತಾದ್ದರಿಂದ ಶೂದ್ರಕನಿಗೆ ಸಿಕ್ಕ ಶಿಕ್ಷೆಯೇ ವಾಲ್ಮೀಕಿಗಳಿಗೂ ಸಿಗಬೇಕಿತ್ತು. ಹಾಗಾಗಿ ಶಂಭೂಕ ವಧೆಯನ್ನು ಪ್ರಕ್ಷಿಪ್ತ ಎಂದು ಪರಿಗಣಿಸಬೇಕಾಗುತ್ತದೆ.

ಇತ್ತೀಚೆಗೆ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಕುರಿತು ಓದುತ್ತಿದ್ದಾಗ ಶಾಂಕರ ದರ್ಶನದಲ್ಲಿ ಮಿಥ್ಯೆಯ ಕುರಿತು ಒಂದು ಪ್ರಸ್ತಾಪ, ಅದನ್ನು ಓದುತ್ತಿದ್ದಂತೇ ಮೈ ರೋಮಾಂಚನವಾಯಿತು. ಅದಕ್ಕೂ ಈ ವಾಲ್ಮೀಕಿ ವಿರಚಿತ ಶಂಭೂಕ ವಧೆಗೂ ಯಾವುದೇ ನೇರ ಸಂಬಂಧವಿಲ್ಲದಿದ್ದಾಗ್ಯೂ ಈ ಶಂಭೂಕ ಎಂಬ ಪದಕ್ಕಿರುವ ಅರ್ಥಸಂಬಂಧದಿಂದ ಇಲ್ಲಿ ಅದನ್ನು ಅನ್ವಯಿಸಿಕೊಳ್ಳಬಹುದೇನೋ ಅನ್ನಿಸಿತು.ಕಪ್ಪೆಚಿಪ್ಪಿಗೆ ಸಂಸ್ಕೃತದಲ್ಲಿ ಶಂಭೂಕ ಎನ್ನುತ್ತಾರೆ. ಒಂದು ಬೆಳದಿಂಗಳ ರಾತ್ರಿಯಲ್ಲಿ ನದಿಯ ತೀರದಲ್ಲಿ ಏಕಾಂತವಾಗಿ ಸಂಚರಿಸುತ್ತಿರುವಾಗ ಕೆಳಗೆ ಬಿದ್ದ ಕಪ್ಪೆಚಿಪ್ಪು (ಶಂಭೂಕ) ಬೆಳ್ಳಿಯಂತೆ ಹೊಳೆಯುತ್ತಿರುತ್ತಾ ಆಕರ್ಶಿಸುವಂತಿರುತ್ತದೆ. ಕೈಗೆತ್ತಿಕೊಳ್ಳುವ ಬಯಕೆ ಮೂಡಿಸುತ್ತದೆ. ಅಥವಾ ಒಂದು ವೇಳೆ ನಿಜವಾದ ಬೆಳ್ಳಿ ಬಿದ್ದಿದ್ದರೂ ಅದನ್ನು ನಾವು ಕಪ್ಪೆಚಿಪ್ಪು ಎಂದು ನಿರ್ಲಕ್ಷಿತವಾಗುವ ಸಾಧ್ಯತೆಯೂ ಉಂಟು. ಇದು ಮಿಥ್ಯೆ. ಮಿಥ್ಯೆಯೆಂದರೆ ಅಸತ್ಯವಲ್ಲ. ಮಿಥ್ಯೆ ಬೇರೆ, ಅಸತ್ ಬೇರೆ. ಅಸತ್ ಎಂದರೆ ಅಸ್ತಿತ್ವದಲ್ಲಿ ಇಲ್ಲದ್ದು. ಮಿಥ್ಯೆಯೆಂದರೆ ಒಂದನ್ನು ಇನ್ನೊಂದಾಗಿ ಭ್ರಮಿಸುವುದು. ಹೀಗೆ ತುಂಬಾ ಶಂಭೂಕಗಳ ಮಧ್ಯದಲ್ಲಿ ಬೆಲೆಬಾಳುವ ರಜತ ಬಿದ್ದಿದ್ದರೂ ಸುತ್ತಲೂ ಶಂಭೂಕಗಳಿರುವುದರಿಂದ ಆ ರಜತಕ್ಕೆ ದೊರಕಬೇಕಾದ ಬೆಲೆ ದಕ್ಕದೇ ಹೋಗಬಹುದು. ಅದನ್ನು ಯಾರೂ ಗಮನಿಸದಿರಬಹುದು. ಅಥವಾ ಹೊಳೆಯುತ್ತಿರುವ ಶಂಭೂಕಗಳ ಆಕರ್ಷಣೆಯಲ್ಲಿ ಅವುಗಳನ್ನೇ ರಜತವೆಂದು ಒಪ್ಪಿಕೊಂಡು ಮೋಸ ಹೋಗಬಹುದು. ಒಬ್ಬರು ಇನ್ನೊಬ್ಬರ ಕಾರ್ಯಕ್ಷೇತ್ರದಲ್ಲಿದ್ದಾಗ ಈ ರೀತಿಯ ಅವಘಡಗಳು ಸಂಭವಿಸುತ್ತವೆ. ಯಾರು ಯಾವ ಕೆಲಸವನ್ನು ಮಾಡತಕ್ಕದ್ದೋ ಅದನ್ನೇ ಮಾಡುವುದು ಒಳಿತು ಎಂದು ಈ ಶಂಭೂಕ ರಜತ ಸಿದ್ಧಾಂತ ಹೇಳುತ್ತದೆ. ಈ ತತ್ವವನ್ನೇ ಅನ್ವಯಿಸಿ ನೋಡುವುದಾದರೆ ಅಲ್ಲಿ ತಪಸ್ಸು ಮಾದುತ್ತಿದ್ದ ಶಂಭೂಕನಿಗೆ (ಜಾತಿಯಾಧಾರಿತವಾಗಲ್ಲದೆ) ಆ ಯೋಗ್ಯತೆ ಇದ್ದಿರಲಾರದು. ತಾನು ಅರ್ಹನಲ್ಲದ ಸ್ಥಾನಕ್ಕೆ ಏರಲು ಆತ ಪ್ರಯತ್ನಿಸುತ್ತಿದ್ದಿರಬಹುದು ಮತ್ತು ಆ ಕಾಲದ ನಿಜವಾದ ಅರ್ಹತೆಯುಳ್ಳ ತಪಸ್ವಿಗಳಿಗೆ ( ಅವರ ಹುಟ್ಟು ಯಾವುದೇ ಜಾತಿಯಲ್ಲಿ ಸಂಭವಿಸಿರಲಿ) ಇಂತಹವರ ಮಧ್ಯೆಬೆಲೆ ಸಿಗಲಾರದೆಂಬ ಕಾರಣಕ್ಕೆ ರಾಮನ ಕೈಯಿಂದ ವಾಲ್ಮೀಕಿಗಳು ಆತನ ಹತ್ಯೆ ಮಾಡಿಸಿರಬಹುದು.

ಆದರೆ ವಾಲ್ಮೀಕಿಗಳೂ ತಪ್ಪು ಮಾಡಬಾರದೆಂದಿಲ್ಲ.. ಆ ಕಾವ್ಯದ ಒಪ್ಪುಗಳೊಟ್ಟಿಗೇ ತಪ್ಪುಗಳನ್ನೂ ಒಪ್ಪಿಕೊಳ್ಳುತ್ತಾ ಆ ತಪ್ಪುಗಳಿಗೆ ಸಮಜಾಯಿಷಿ ನೀಡದೇ ಅವುಗಳನ್ನು ಸ್ವೀಕರಿಸದಿರುವುದು ಸರಿಯಾದ ಕ್ರಮವೆಂಬುದು ಇನ್ನೊಂದು ವಾದ.

ಆದರೆ ಕುವೆಂಪು ಈ ಪ್ರಸಂಗವನ್ನು ಶಂಭೂಕ ವಧೆಯಿಂದ ಶೂದ್ರ ತಪಸ್ವಿಯಾಗಿ ಬದಲಾಯಿಸಿ ಕೊಂಡಿದ್ದಾರೆ... ಹೀಗೆ ಅವರು ಬದಲಾಯಿಸಿಕೊಂಡಿರುವುದು ಬರೀ ಹೆಸರನ್ನಷ್ಟೇ ಅಲ್ಲ, ಇಡೀ ಕಥೆಯನ್ನೇ. ಆಶಯಗಳೇನೇ ಇದ್ದರೂ ಒಂದು ಕೃತಿಯನ್ನು ಅದೂ ಪುರಾಣವನ್ನು ಮೂಲದಿಂದ ಎರವಲು ಪಡೆದಾಗ ಎಷ್ಟರ ಮಟ್ಟಿಗೆ ಅದನ್ನು ಬದಲಾಯಿಸಿಕೊಳ್ಳಬಹುದು? ಏಕೆಂದರೆ ತಪೋನಂದನ ಕೃತಿಯಲ್ಲಿ ಕುವೆಂಪುರವರೇ ಒಂದು ಕಡೆ ಬರೆಯುತ್ತಾರೆ. ' ಪುರಾಣ ಕಥೆಗಳು ಭೂಲೋಕ್ಕೂ ಸ್ವರ್ಗಕ್ಕೂ ನಡುವೆ ನಿರ್ಮಿಸಿದ ಸುವರ್ಣ ಸೇತುವೆಗಳು. ಇವುಗಳನ್ನು ಹೇಗಿದೆಯೋ ಹಾಗೆಯೇ ಆ ಕಾಲದೇಶಕ್ಕನುಗುಣವಾಗಿಯೇ ಇದ್ದಂತೆಯೇ ಓದಬೇಕಲ್ಲದೆ ಘನೀಕೃತ ವಾಸ್ತವಕ್ಕಿಳಿಸಿ ನೋಡಲಾಗದು ' ಮತ್ತೊಂದು ಕಡೆ ಮಾಸ್ತಿಯವರಿಗೆ ಕೊಟ್ಟ ಉತ್ತರದಲ್ಲಿ ಅವರು 'ಹಳೆಯ ಕಥೆಯನ್ನು ಹೊಸ ಸಾಹಿತಿ ತನ್ನ ಕೃತಿಗೆ ತನ್ನಿಷ್ಟದಂತೆ ಉಪಯೋಗಿಸಿಕೊಳ್ಳುವ ಪದ್ಧತಿಯೂ ಮಹಾಕವಿ ಸಂಪ್ರದಾಯ ಸಿದ್ಧವಾದುದು. ಪುರಾಣದಲ್ಲಿ ಬದಲಾವಣೆಯನ್ನು ಮಹಾಕವಿಗಳೆಲ್ಲರೂ ಮಾಡಿಕೊಂಡಿದ್ದಾರೆ. " ಸತ್ಸಂಗಜಾನಿ ನಿಧನಾನ್ಯಪಿ ತಾರಯಂತಿ". ಮಹಾಕವಿಗಳೊಟ್ಟಿಗಿನ ತಪ್ಪು ಒಪ್ಪು ನನಗೆ ಎಂದು'. ಒಂದು ಮಟ್ಟಿಗೆ ಈ ವಾದವನ್ನು ಒಪ್ಪಿಕೊಳ್ಳಬಹುದು. ಈ ಎರಡೂ ಹೇಳಿಕೆಗಳಲ್ಲಿ ಮೇಲ್ನೋಟಕ್ಕೇ ವಿರೋಧಾಭಾಸ ಎದ್ದು ತೋರುತ್ತದೆ.

ಕೃತಿಯನ್ನು ನೇಯುವಾಗ ಪಂಪ, ರನ್ನ ಕೂಡಾ ಬದಲಾಯಿಸಿಕೊಂಡವರೇ. ಪಂಪನ ಭಾರತದಲ್ಲಿ ಧರ್ಮರಾಯನ ಬದಲಾಗಿ ಅರ್ಜುನನಿಗೆ ಪಟ್ಟವಾಗುತ್ತದೆ, ಅವನೊಡನೆ ಪಟ್ಟವೇರುವವಳು ದ್ರೌಪದಿಯಲ್ಲ, ಸುಭದ್ರೆ.,ಅಲ್ಲಿ ನಾಯಕ ಅರ್ಜುನ. ರನ್ನನ ಗದಾ ಯುದ್ಧದಲ್ಲಿ ನಾಯಕ ಭೀಮ. ಸಮರ ನಡೆದ ನಂತರ ಪಟ್ಟವಾಗುವುದು ಭೀಮನಿಗೆ. ಇಂತಹಾ ಬದಲಾವಣೆಗಳು ಪ್ರಮುಖವೆನಿಸುವುದಿಲ್ಲ. ಇವುಗಳಿಂದ ಕಥೆಯ ಆಶಯಕ್ಕೆ ಯಾವ ಧಕ್ಕೆಯೂ ಇಲ್ಲ. ನಿಜವಾಗಿಯೂ ಕಥೆಯನ್ನು ಬದಲಾಯಿಸಿ ಕೊಳ್ಳುವುದು ಎಂದ ಕೂಡಲೇ ನೆನಪಾಗುವವನು, ಬದಲಾಯಿಸಿಕೊಂಡವನು ಭಾಸ. ಭಾಸ ತನ್ನ ಹದಿಮೂರೂ ನಾಟಕಗಳನ್ನೂ ಪುರಾಣದಿಂದಲೇ ಎತ್ತಿಕೊಳ್ಳುತ್ತಾನೆ, ಅವೆಲ್ಲವನ್ನೂ ತನಗೆ ಬೇಕಾದಂತೆಯೇ ತಿರುಚಿದ್ದಾನೆ. ಇದು ಎಷ್ಟರಮಟ್ಟಿಗೆಂದರೆ ಅವನ "ಪಂಚ ರಾತ್ರಂ" ನಾಟಕ ಮಹಾಭಾರತದ ಕಥೆಯನ್ನಾಧರಿಸಿದ್ದರೂ ಅಲ್ಲಿ ಯುದ್ಧವೇ ನಡೆಯುವುದಿಲ್ಲ. ಆ ಐದು ರಾತ್ರಿಗಳಲ್ಲಿ ನಡೆವ ಕಥೆಯಲ್ಲಿ ದುರ್ಯೋಧನ ಪಾಂಡವರಿಗೆ ಅರ್ಧ ರಾಜ್ಯವನ್ನು ಯುದ್ಧವಿಲ್ಲದೇ ಕೊಟ್ಟುಬಿಡುತ್ತಾನೆ. ಕೌರವರು ಮತ್ತು ಪಾಂಡವರೀರ್ವರೂ ತಮ್ಮ ತಮ್ಮ ರಾಜ್ಯಗಳನ್ನು ಧರ್ಮದಿಂದ ಆಳುತ್ತಾ ಸುಖವಾಗಿದ್ದರು ಎಂಬಲ್ಲಿಗೆ ಭಾಸೋ ಹಾಸಃ ಎಂಬ ಮಾತನ್ನು ಸಾರ್ಥಕ ಮಾಡಿಕೊಂಡಿದ್ದಾನೆ. ಭಾಸನ ನಾಟಕಗಳ ಹಿನ್ನೆಲೆಯಲ್ಲಿ ನೋಡಿದರೆ ಮಹಾಭಾರತದಲ್ಲಿ ಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧಿಸಲು ಅವಕಾಶವೇ ಲಭಿಸುವುದಿಲ್ಲ, ಅರ್ಜುನ ಯುದ್ಧವನ್ನೂ ಮಾಡುವುದಿಲ್ಲ, ದ್ರೋಣನನ್ನು ಕೊಲ್ಲುವ ಸಲುವಾಗಿಯೇ ಹುಟ್ಟಿ ಬಂದ ದೃಷ್ಟದ್ಯುಮ್ನ, ಡಂಭಾಸುರನೆಂಬ ಕರ್ಣನ ಹೆಸರಿನಲ್ಲಿ ಹುಟ್ಟಿಬಂದ ರಾಕ್ಷಸನನ್ನು ಕೊಲ್ಲುವ ಸಲುವಾಗಿ ಸಹಸ್ರ ವರ್ಷ ತಪಸ್ಸು ಮಾಡಿ ಅವತಾರವೆತ್ತಿದ ನರ (ಅರ್ಜುನ), ಭೀಷ್ಮನನ್ನು ಹಣಿಯಲೆಂದೇ ದೇಹತ್ಯಾಗ ಮಾಡಿ ಶಿಖಂಡಿಯಾಗಿ ಹುಟ್ಟಿದ ಅಂಬೆ......... ಇವರುಗಳಿಗೆ ಕೆಲಸವೇ ಇಲ್ಲ. ಭೀಷ್ಮ ಶರಶಯ್ಯೆಯಲ್ಲಿ ಮಲಗುವುದಿಲ್ಲ, ಧರ್ಮರಾಯ ಸುಳ್ಳು ಹೇಳುವುದಿಲ್ಲ...

ಭಾಸನ ಪ್ರತಿಮಾ ನಾಟಕದಲ್ಲೂ ಕೈಕೇಯಿಯನ್ನು ಅದೆಷ್ಟು ಉದಾತ್ತವಾಗಿ ಚಿತ್ರಿಸುತ್ತಾನೆಂದರೆ ಹೀಗೇ ಮೂಲ ಪಾತ್ರಗಳೂ ಇರಬಾರದಿತ್ತೇ ಎಂದು ಹಂಬಲಿಸುವಷ್ಟು ತೀವ್ರವಾಗಿ. ಭಾಸನಿಗೂ ಬದಲಿಸಲಾಗದ ಪಾತ್ರಗಳೆಂದರೆ ಶಕುನಿ, ಮಂಥರೆ ಮಾತ್ರ. ಈ ಬದಲಾವಣೆಗಳು ಬಹಳ ದೊಡ್ಡ ಮಟ್ಟದ ಬದಲಾವಣೆಗಳೇ ಆಗಿದ್ದರೂ ಒಂದು ವಿಷಯ ಅತ್ಯಂತ ಅವಶ್ಯವಾಗಿ ನೆನಪಿನಲ್ಲಿಡಲೇ ಬೇಕು, ಇವೆಲ್ಲವನ್ನೂ ಆತ ನಾಟಕದ ಉದಾತ್ತೀಕರಣಕ್ಕಾಗಿ ಮಾಡಿಕೊಂಡಿದ್ದಾನೆ. ಭಾಸ ಯಾರನ್ನೂ ತಪ್ಪಿತಸ್ಥರನ್ನಾಗಿ ಮಾಡಲಾರ, ಯಾರನ್ನೂ ನೋಯಿಸಲಾರ.. ಪ್ರತೀ ಪಾತ್ರವೂ ಭಾಸನ ಕೈಯಲ್ಲಿ ತನ್ನ ಔನ್ನತ್ಯವನ್ನು ತಲುಪುತ್ತದೆ, ಓದುಗರಲ್ಲಿ ನವಿರು ಭಾವನೆಗಳನ್ನೂ, ಸಜ್ಜನಿಕೆಯನ್ನೂ ಉದ್ದೀಪಿಸುತ್ತದೆ. ಓದುತ್ತಿದ್ದಾಗ ಪ್ರಪಂಚ ಸುಂದರವಾಗಿ, ಸುಭಿಕ್ಷವಾಗಿ, ಎಲ್ಲರೂ ಕುಟಿಲರಹಿತರಾಗಿ ಗೋಚರಿಸುವುದರೊಂದಿಗೆ ಭಾಸೋ ಹಾಸಃ ..... ಬದಲಾವಣೆಯ ಹಿಂದಿನ ಅವನ ಉದ್ದೇಶ ಸ್ಪಷ್ಟವಾಗುತ್ತದೆ.

ಕುವೆಂಪುರವರೂ ಭಾಸನಂತೆಯೇ ತಮ್ಮೆಲ್ಲ ನಾಟಕಗಳ ವಸ್ತುಗಳನ್ನೂ ಪುರಾಣದಿಂದಲೇ ಎತ್ತಿಕೊಳ್ಳುತ್ತಾರೆ. ಬೆರಳ್ ಗೆ ಕೊರಳ್, ಯಮನ ಸೋಲು, ಸ್ಮಶಾನ ಕುರುಕ್ಷೇತ್ರಂ, ವಾಲ್ಮೀಕಿಯ ಭಾಗ್ಯ... ಇವೆಲ್ಲವುಗಳನ್ನೂ ಅನೇಕ ಬದಲಾವಣೆಗಳ ಸಹಿತವಾಗಿ. ಶೂದ್ರ ತಪಸ್ವಿಯನ್ನು ಅವರು ಉತ್ತರ ರಾಮಾಯಣದಿಂದ ಆರಿಸಿಕೊಳ್ಳುತ್ತಾರೆ. ವಿಭಿನ್ನ ದೃಷ್ಟಿಕೋನದಿಂದ ಈ ಕಥೆಯನ್ನು ಹೇಳಹೊರಡುವ ಅವರು ಬಹಳ ಪ್ರಮುಖ ಬದಲಾವಣೆಗಳನ್ನೇ ಮಾಡಿಕೊಂಡಿದ್ದಾರೆ.

ಮೊದಲನೆಯದಾಗಿ ಮೂಲ ಉತ್ತರ ರಾಮಾಯಣದಲ್ಲಿ ಬ್ರಾಹ್ಮಣನಿಗೆ ಎಲ್ಲೋ ಇದ್ದ ಶಂಭೂಕನ ತಪಸ್ಸಿನ ಕುರಿತು ಅರಿವಿರುವುದಿಲ್ಲ. ತನ್ನ ಮಗ ಸತ್ತಿದ್ದಾನೆ, ಅದಕ್ಕೆ ಕಾರಣ ಅವನಿಗೆ ಬೇಕಿಲ್ಲ, ಪರಿಹಾರ ಬೇಕಿದೆ. ತನ್ನ ಮಗ ಮರಳಿ ಬರಬೇಕಿದೆ, ತಾನು ಧರ್ಮವನ್ನೇ ಪಾಲಿಸುತ್ತಿರುವುದರಿಂದ ಈ ಅಕಾಲ ಮರಣ ತನ್ನದೋ, ತನ್ನ ಮಗನ ತಪ್ಪಿನಿಂದ ಸಂಭವಿಸಿದ್ದೋ ಅಲ್ಲ. ಇದಾದದ್ದು ರಾಜ್ಯದಲ್ಲಿ ಸಂಭವಿಸಿರಬಹುದಾದ ಯಾವುದೋ ಒಂದು ಅಧರ್ಮ ಕಾರ್ಯದಿಂದ ಹಾಗೂ ಆ ಅಧರ್ಮ ಕಾರ್ಯವನ್ನು ತಡೆಗಟ್ಟಲಾರದ ರಾಜನ ತಪ್ಪಿನಿಂದ. ಹೀಗಾಗಿ ಅವನು ಆರ್ತನಾಗಿ ರಾಜನಲ್ಲಿಗೆ ಬಂದಿದ್ದಾನೆ, ಪರಿಹಾರ ಕೇಳುತ್ತಿದ್ದಾನೆ. ಶೂದ್ರತಪಸ್ವಿಯಲ್ಲಿ ಹಾಗಿಲ್ಲ, ಇಲ್ಲಿ ಬ್ರಾಹ್ಮಣನಿಗೆ ತನ್ನ ಮಗನ ಸಾವಿನ ಕಾರಣ ಸ್ಪಷ್ಟವಾಗಿ ತಿಳಿದಿದೆ. ಶೂದ್ರನೊಬ್ಬ ತಪಸ್ಸನ್ನು ಆಚರಿಸುತ್ತಿರುವುದೇ ಅಧರ್ಮವೆಂಬಂತೆ. ಅವನ ಆಶ್ರಮದೊಳಗೆ ಕಾಲಿಟ್ಟಿದ್ದೇ ಪರಮ ಪಾಪವೆಂಬಂತೆ.ಬ್ರಾಹ್ಮಣನನ್ನು ಅವರು ಚಿತ್ರಿಸಿರುವ ರೀತಿ ನೋಡಿ,

ಅಲ್ಲಿ ರಾಮನು ಬ್ರಾಹ್ಮಣನನ್ನು ಕೇಳುತ್ತಾನೆ
"ನಮಸ್ಕಾರಂಗೆಯ್ದಿರೇನ್?"
ಬ್ರಾಹ್ಮಣನ ಉತ್ತರ ನೋಡಿ.
" ಶಿವ ಶಿವ ಶಿವ !
ಅಂತಪ್ಪ ಘೋರಮಂ ನಾವೆಸಗಿದೆವಲ್ತು.
ಅರಿಯದಾ ಕುವರಂ ಕೈಮುಗಿಯಲಿರ್ದನ್;
'ಮಾಣ್, ಶೂದ್ರಂಗೆ ತುಳಿಲ್ ಗೆಯ್ಯಲಾಗ !'
ಎಂದಾಂ ಬುದ್ಧಿಯಂ ತಿದ್ದಿ ತಡೆದನ್."
ಆಗ " ಎಂತಾದೊಡೆಂ ತಾವು ವೇದಮೂರ್ತಿಗಳಲ್ತೆ" ಎಂಬ ಶ್ರೀರಾಮನ ವ್ಯಂಗ್ಯ ಕೂಡಾ ಬ್ರಾಹ್ಮಣನಿಗೆ ಅರಿವಾಗುವುದಿಲ್ಲ. ಹೀಗೆ ಪರಿಚಯಿಸುತ್ತಾರೆ ಓದುಗರಿಗೆ ಬ್ರಾಹ್ಮಣನ ಮನಸ್ಥಿತಿಯನ್ನು
ಎರಡನೆಯದು ಮೂಲದಲ್ಲಿ ರಾಮ ತನ್ನ ಆಳ್ವಿಕೆಯಲ್ಲಿ ಸಂಭವಿಸಿದ ಅಧರ್ಮದ ಬಗ್ಗೆ ತಿಳಿಯುವುದು ಋಷಿ ಮುನಿಗಳಿಂದ. ಅವನು ಕರೆಸುವ ಮುನಿಗಳ ಪಟ್ಟಿ ನೋಡಿ ವಶಿಷ್ಟ, ಮಾರ್ಕಂಡೇಯ, ಮೌದ್ಗಲ್ಯ, ವಾಮದೇವ, ಕಶ್ಯಪ, ಕಾತ್ಯಾಯನ, ಜಾಬಾಲಿ, ಗೌತಮ ಮತ್ತು ನಾರದರು. ಇವರಲ್ಲಿ ತನ್ನ ಆಳ್ವಿಕೆಯಲ್ಲಿ ನಡೆದಿರಬಹುದಾದ ಅಧರ್ಮದ ಬಗ್ಗೆ ಪ್ರಶ್ನಿಸಿದಾಗ ಶಂಭೂಕನ ಕುರಿತು, ಅವನು ಆಚರಿಸುತ್ತಿರುವ ಅಧಾರ್ಮಿಕ ತಪಸ್ಸಿನ ಕುರಿತು ವಿವರಿಸುವವರು ನಾರದರು. ಶೂದ್ರನೊಬ್ಬ ತಪಸ್ಸು ಮಾಡಲು ತ್ರೇತಾಯುಗದಲ್ಲಿ ಅನರ್ಹ, ಈ ದುಷ್ಕೃತ್ಯವನ್ನು ನಿವಾರಿಸುವುದು ಅನಿವಾರ್ಯ ಮತ್ತು ಅದು ರಾಜನಾದವನ ಕರ್ತವ್ಯ ಕೂಡ. ಹೀಗೆ ಹೇಳುತ್ತಾ ರಾಮನನ್ನು ಶಂಭೂಕ ವಧೆಗೆ ಪ್ರಚೋದಿಸುವ ಕೆಲಸವನ್ನು ನಾರದರು ಮಾಡುತ್ತಾರೆ.


"ಅಧೀತಸ್ಯ ಚ ತಪ್ತಸ್ಯ ಕರ್ಮಣಃ ಸುಕೃತಸ್ಯ ಚ /
ಷಷ್ಠಂ ಭಜತಿ ಭಾಗಂ ತು ಪ್ರಜಾ ಧರ್ಮೇಣ ಪಾಲಯನ್//
ಷಡ್ಭಾಗಸ್ಯ ನ ಭೋಕ್ತಾಸೌ ರಕ್ಷತೇ ನ ಪ್ರಜಾಃ ಕಥಮ್/
ಸ ತ್ವಂ ಪುರುಷಶಾರ್ದೂಲ ಮಾರ್ಗಸ್ವ ವಿಷಯಂ ಸ್ವಕಮ್//

ಹೇಗೆ ಪ್ರಚೋದಿಸುತ್ತಾರೆ ನೋಡಿ. ರಾಜನು ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಿದ್ದರೆ ದೇಶದಲ್ಲಿ ನಡೆಯುವ ವೇದಾಧ್ಯಯನ, ತಪಸ್ಸು, ಪುಣ್ಯ ಕಾರ್ಯ ಇವುಗಳ ಆರನೆಯ ಒಂದಂಶವು ರಾಜನಿಗೆ ಸೇರುತ್ತದೆ ಎಂಬ ಮಾತಿನ ಜೊತೆಗೇ ಹೀಗೆ ಆರನೆಯ ಒಂದು ಭಾಗವನ್ನು ಹಕ್ಕಿನಂತೆ ಪಡೆಯುವ ರಾಜ ತನ್ನ ಪ್ರಜೆಗಳನ್ನು ರಕ್ಷಿಸುವುದಿಲ್ಲವೆಂದರೇನು ಎಂಬ ಧರ್ಮಸೂಕ್ಷ್ಮವನ್ನು ಮುಂದಿಡುತ್ತಾರೆ.

ಕುವೆಂಪು ತಮ್ಮ ನಾಟಕದಲ್ಲಿ ಈ ಪ್ರಸಂಗದ ಪ್ರಧಾನ ಪಾತ್ರಧಾರಿ ನಾರದರನ್ನೇ ಕೈ ಬಿಡುತ್ತಾರೆ. ಅಲ್ಲಿ ಈ ಯಾವ ಮುನಿಗಳ ಪ್ರಸ್ತಾಪವೂ ಬರುವುದಿಲ್ಲ. ತನ್ನ ಮಗನನ್ನು ಕಳೆದುಕೊಂಡ ಬ್ರಾಹ್ಮಣನೇ ಸ್ವತಃ ವಕೀಲನಾಗಿ ಬಿಡುತ್ತಾನೆ. ಅಧರ್ಮವೆಲ್ಲಿದೆ ಎಂದು ತಿಳಿಸುತ್ತಾನೆ, ತನ್ನ ಕರ್ತವ್ಯವನ್ನು ನಿರ್ವಹಿಸುವಂತೆ ರಾಜನಿಗೆ ಬೋಧಿಸುತ್ತಾನೆ. ರಾಮನಿಗೆ ಅಧರ್ಮವೆಲ್ಲಿದೆ ತಿಳಿಸಿಹೇಳುತ್ತಾನೆ. ಮಗನ ಸಾವಿಗೆ ಕಾರಣ ಶೂದ್ರನಿಗೆ ನಮಸ್ಕರಿಸಿದ್ದೇ ಎಂಬ ರಾಮನ ವ್ಯಂಗ್ಯಕ್ಕೆ ಬ್ರಾಹ್ಮಣ ಕೊಡುವ ಉತ್ತರ,

" ಅಲ್ತಲ್ತು, ರಾಮಚಂದ್ರ,
ಶೂದ್ರನ್ ತಪಂಗೆಯ್ವೊಂದು ಅಧರ್ಮಕ್ಕೆ,
ವರ್ಣಾಶ್ರಮ ಧರ್ಮದುಲ್ಲಂಘನೆಯ ಪಾಪಕ್ಕೆ
ನಿನ್ನ ಬಾಲಪ್ರಜೆಯೋರ್ವನ್ ಬಲಿಯಾದನ್-
ಮುಂದಾವ ಮಹತ್ಕಾರ್ಯಮಂ ಗೆಯ್ಯಲಿರ್ದನೋ?
ಆವ ಶಾಸ್ತ್ರವನೊರೆಯಲಿರ್ದನೋ?
ಆವ ಕಬ್ಬಮಂ ಕಟ್ಟಲಿರ್ದನೋ?
ಆವ ತಪದಿಂದಾವ ಸಿದ್ಧಿಯ ಪಡೆಯಲಿರ್ದನೋ?
ಆ ಪ್ರಜೆ ಶೂದ್ರನ ತಪೋದುಷ್ಕೃತಿಗೆ ಬೇಳ್ವೆಯಾದನ್!
ಪಾವಗಿದು ತೀರ್ದನ್ ! "

ಹೀಗೆ ರಾಮನಿಗೆ ಶೂದ್ರನ ತಪ್ಪನ್ನು ಮನವರಿಕೆ ಮಾಡಿಕೊಡಲೆತ್ನಿಸುತ್ತಾನೆ. ಶಾಸ್ತ್ರವನ್ನು ಪೊರೆಯುವುದೇ ಜೀವನದ ಪರಮೋದ್ದೇಶವೆಂಬಂತೆ.

ಮೂರನೆಯದು ವಾಲ್ಮೀಕಿ ರಾಮಾಯಣದಲ್ಲಿ ಶೈವಲವೆಂಬ ಪರ್ವತದ ಉತ್ತರ ಪಾರ್ಶ್ವದಲ್ಲಿ ಒಂದು ದೊಡ್ಡ ಸರಸ್ಸಿನ ತೀರದಲ್ಲಿ ಶಂಭೂಕ ತಲೆಕೆಳಗಾಗಿ ತಪಸ್ಸು ಮಾಡುತ್ತಿರುತ್ತಾನೆ. ರಾಮನು ಅವನನ್ನು ಅವನ ಜಾತಿಯ ಕುರಿತು ಪ್ರಶ್ನಿಸಿದಾಗ ತಾನು ಶೂದ್ರಯೋನಿಯಲ್ಲಿ ಜನಿಸಿರುವುದಾಗಿಯೂ, ಸಶರೀರ ಸಹಿತನಾಗಿ ದೇವತ್ವವನ್ನು ಬಯಸುತ್ತಿದ್ದೇನೆ ಎನ್ನುತ್ತಿದ್ದಂತೆಯೇ ಮುಂದೇನೂ ಕೇಳಿಸಿಕೊಳ್ಳಲು ಬಯಸದ ರಾಮ ಖಡ್ಗದಿಂದ ಅವನ ಶಿರಚ್ಛ್ಹೇಧ ಮಾಡುತ್ತಾನೆ. ದೇವತೆಗಳು ಸಾಧು ಸಾಧು ಎಂದು ಕೊಂಡಾಡುತ್ತಾರೆ.

ಶೂದ್ರತಪಸ್ವಿಯಲ್ಲಿ ರಾಮನಿಗೆ ತಪಸ್ವಿಯ ಹುಟ್ಟಿನ ಕುರಿತು ಖಚಿತ ತಿಳಿವಿದೆ, ಆತನ ಬಗ್ಗೆ ಅಸೀಮ ಗೌರವವೂ ಇದೆ. ಶಂಭೂಕ ತಪೋನಿರತನೇ ಆಗಿ ವಲ್ಮಿಕದೊಳಗೇ ಇರುತ್ತಾನೆ. ರಾಮ ಅವನನ್ನು ಖಡ್ಗದಿಂದ ಸಂಹರಿಸ ಹೊರಡುವುದಿಲ್ಲ, ಬದಲಾಗಿ ಬ್ರಾಹ್ಮಣನ ಅಣತಿಯಂತೇ ಬ್ರಹ್ಮ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಅದು ಶಂಭೂಕನನ್ನು ಮುಟ್ಟದೇ ಹಿಂತಿರುಗಿ ಬ್ರಾಹ್ಮಣನನ್ನೇ ಬೆನ್ನತ್ತುತ್ತದೆ. ಬ್ರಾಹ್ಮಣನು ರಾಮನ ಅಪ್ಪಣೆಯ ಮೇರೆಗೆ ಶಂಭೂಕನಿಗೆ ಶರಣಾಗುತ್ತಾನೆ. ಪ್ರಕೃತಿ ಸಂಭ್ರಮಿಸುತ್ತದೆ.

ಉತ್ತರ ರಾಮಾಯಣದಲ್ಲಿ ಬರುವ ಈ ಪ್ರಸಂಗ ಕುವೆಂಪು ಶೂದ್ರ ತಪಸ್ವಿಯಲ್ಲಿ ಸಂಪೂರ್ಣ ಬದಲಾಗಿಬಿಡುತ್ತದೆ. ಹೀಗೆ ಆರಂಭದಿಂದ ಮುಕ್ತಾಯದವರೆಗೂ ಬದಲಾವಣೆಗಳ ಸರಮಾಲೆಯನ್ನೇ ಹೊತ್ತು, ಆ ಕಥೆಯ ಆಶಯವನ್ನೂ ಬದಲಾಯಿಸಿಕೊಂಡ ಹಾಗೂ ಪ್ರಮುಖವಾಗಿ ನಾರದರ ಪಾತ್ರದ ಕಣ್ಮರೆಯ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ. ಮೂಲ ರಾಮಾಯಣದಲ್ಲಿ ಮಗನನ್ನು ಕಳೆದುಕೊಂಡು ಆರ್ತನಾಗಿ ರೋಧಿಸುವ ಬ್ರಾಹ್ಮಣನ ಮೇಲೆ ಮೂಡುವ ಕರುಣೆ ಶೂದ್ರತಪಸ್ವಿಯ ಬ್ರಾಹ್ಮಣನ ಮೇಲೆ ಮೂಡುವುದಿಲ್ಲ. ನಾರದರ ಪಾತ್ರದ ಕೆಲಸವನ್ನೂ ಬ್ರಾಹ್ಮಣನ ಪಾತ್ರವೇ ನಿರ್ವಹಿಸುವುದರಿಂದ ಇಲ್ಲಿ ಬ್ರಾಹ್ಮಣನ ಬಗ್ಗೆ ತಿರಸ್ಕಾರವೇ ಮೂಡುತ್ತದೆ ಅಥವಾ ತಿರಸ್ಕಾರ ಮೂಡಿಸಲೆಂದೇ ಈ ಬದಲಾವಣೆ ಮಾಡಲಾಗಿದೆ. ಇದು ಮೇಲ್ನೋಟಕ್ಕೇ ಬಹುವಾಗಿ ಕಾಡಿಬಿಡುತ್ತದೆ. ಏಕೆಂದರೆ ಇಲ್ಲಿ ಅವರು ರಾಮನ ಪಾತ್ರವನ್ನು ಉದಾತ್ತೀಕರಿಸಿದ್ದಾರೆ, ಪ್ರಾಜ್ಞನಂತೆ, ಉದಾರಿಯಂತೆ, ಸ್ವಯಂ ನಿರ್ಣಯ ತೆಗೆದುಕೊಳ್ಳಬಲ್ಲ ಶಕ್ತ ರಾಜನಂತೆ. ಆದರೆ ಮೂಲ ಕಥೆಯ ರಾಮ ಈ ಸನ್ನಿವೇಶದಲ್ಲಿ ಗುರುಹಿರಿಯರ ಮಾತಿನಂತೆ ನಡೆಯುತ್ತಾನೆ, ತನಗೊಂದು ಸ್ವಂತ ಅಭಿಪ್ರಾಯವೇ ಇಲ್ಲವೆಂಬಂತೆ, ಕೀಲು ಕೊಟ್ಟ ಗೊಂಬೆಯಂತೆ.

ಹೀಗೆ ಶಕ್ತಿಯಿಲ್ಲದ ಬ್ರಾಹ್ಮಣನನ್ನು ಶಾಸ್ತ್ರ ಸಂಭ್ರಾಂತ ಕುಟಿಲನಂತೆಯೂ, ಕೀಲುಗೊಂಬೆ ರಾಮನನ್ನು ಸಶಕ್ತ ರಾಜನಂತೆಯೂ, ದುರುದ್ದೇಶದಿಂದ ತಪಸ್ಸನ್ನಾಚರಿಸುತ್ತಿದ್ದ ತಪಸ್ವಿಯನ್ನು ಸಾತ್ವಿಕ ತಪಸ್ವಿಯಂತೆಯೂ ಬದಲಾಯಿಸಿಕೊಂಡು ನಾಟಕ ಕಟ್ಟಿದ ಕುವೆಂಪುರವರ ಉದ್ದೇಶದ ಬಗ್ಗೆ ಮೊದಲ ಓದಿಗೇ ನೂರು ಪ್ರಶ್ನೆಗಳು ಮೂಡುತ್ತವೆ, ಈ ಮೂರೂ ಪಾತ್ರಗಳ ಬದಲಾವಣೆ ಯೋಚಿಸ ಹಚ್ಚುತ್ತದೆ.

ಮತ್ತು ಶಂಭೂಕ ಪಾತ್ರದ ಬದಲಾವಣೆ. ಶಂಭೂಕ ಮೂಲದಲ್ಲಿ ಲೋಕ ಕಲ್ಯಾಣಕ್ಕೋ, ಪಾರಮಾರ್ಥ ಸಿದ್ಧಿಗೋ ತಪಸ್ಸನ್ನಾಚರಿಸುತ್ತಿಲ್ಲ. ಸಶರೀರನಾಗಿ ಸ್ವರ್ಗ ಪ್ರವೇಶಿಸಬೇಕೆಂಬ ಹಠದಲ್ಲಿ ಘೋರ ತಪಸ್ಸನ್ನು ಆಚರಿಸುತ್ತಿದ್ದಾನೆ. ಅದು ಲಂಬಮಾನಮಧೋಮುಖನಾಗಿ ಎಂಬ ವಾಕ್ಯದಲ್ಲೇ ಇದು ಧರ್ಮಸಮ್ಮತವಾದುದಲ್ಲ ಎಂಬ ಧ್ವನಿ ಹೊಮ್ಮುತ್ತಿದೆ. ಕುವೆಂಪು ಈ ತಪಸ್ಸಿನ ರೀತಿಯನ್ನೂ ಬದಲಾಯಿಸಿದ್ದಾರೆ, ಇಲ್ಲಿನ ಶಂಭೂಕ ಲೋಕಕಲ್ಯಾಣಾರ್ಥವಾಗಿ ತಪಸ್ಸು ಮಾಡುತ್ತಿರುವವನು, ಸಕಲರಿಗೂ ಸನ್ಮಂಗಳವನ್ನುಂಟು ಮಾಡುವವನು. ಇವನ ತಪಸ್ಸಿನ ಪ್ರಭಾವದಿಂದ ಪ್ರಕೃತಿ (ವಟತರು) ಮೃತ್ಯುವನ್ನೇ ಹಿಮ್ಮೆಟ್ಟಿಸುವಷ್ಟು ಧರ್ಮಬಲ ಹೊಂದಿಬಿಡುತ್ತದೆ. ಧರ್ಮದೇವತೆ ಕೂಡಾ ಬ್ರಾಹ್ಮಣನಿಗೆ ಬುದ್ಧಿ ಕಲಿಸಲು ಮೃತ್ಯುವನ್ನೇ ಕಳಿಸುತ್ತದೆ. ವಟತರು, ಮೃತ್ಯುದೇವತೆ, ಧರ್ಮದೇವತೆ, ರಾಮ ಎಲ್ಲರೂ ಬ್ರಾಹ್ಮಣನ ವಿರೋಧಿಗಳಂತೆ ವರ್ತಿಸುತ್ತಾರೆ. ವಿಪರ್ಯಾಸವೆಂದರೆ ಮಗನನ್ನು ಕಳೆದು ಕೊಂಡಿರುವ ಸಂತ್ರಸ್ತ ಬ್ರಾಹ್ಮಣ, ಶೋಕಿಸುತ್ತಿರುವವನು ಬ್ರಾಹ್ಮಣ.

ಕುವೆಂಪು ಮಾಸ್ತಿಯವರಿಗೆ ಉತ್ತರ ಕೊಟ್ಟ ಮಾರ್ನುಡಿಯಲ್ಲಿ ಈ ಬದಲಾವಣೆಗಳು ಜಾತಿಮಾತ್ಸರ್ಯದಿಂದ ಪ್ರೆರಿತವಾದ ಮೂದಲಿಕೆಯಲ್ಲ ಎಂಬ ಸ್ಪಷ್ಟೀಕರಣವನ್ನೂ , ಈ ಭಾವನೆ ಹೊಗಳಿಕೆ ಮತ್ತು ತೆಗಳಿಕೆ ಎರಡಕ್ಕೂ ಕಾರಣವಾಗಿದೆ ಎಂದೂ ವಿಷಾದ ವ್ಯಕ್ತ ಪಡಿಸುತ್ತಾರೆ. ಇಂತಹ ಪೂರ್ವಗ್ರಹ ಮತ್ತು ಪಕ್ಷಪಾತಗಳ ದೆಸೆಯಿಂದ ಕೃತಿಕಾರನ ಮುಖ್ಯಾಶಯ, ರಸಪ್ರಯೋಜನ ಶೀಲವಾದ ಸತ್ಯಬೋಧನ, ತತ್ಕಾಲಕ್ಕಾದರೂ ವ್ಯರ್ಥವಾಯಿತೆಂದು ತೋರುತ್ತದೆ ಎಂಬ ನೋವನ್ನು ತೋಡಿಕೊಳ್ಳುತ್ತಾರೆ. ವರ್ಣಾಶ್ರಮದ ಪರಿಣಾಮವಾಗಿ ಹೊರಹೊಮ್ಮಿದ ಬ್ರಾಹ್ಮಣ ಪಾರಮ್ಯದ ಬಗ್ಗೆ ಕುವೆಂಪು ಅವರಿಗೆ ಅಸಹನೆಯಿತ್ತಾ? ಅದಕ್ಕಾಗಿಯೇ ಬ್ರಾಹ್ಮಣನನ್ನು ಈ ರೀತಿ ಚಿತ್ರಿಸಿದರಾ? ಈ ಕೆಳಗಿನ ಸಾಲುಗಳನ್ನು ಓದಿದರೆ ಹಾಗೇನೂ ಅನ್ನಿಸುವುದಿಲ್ಲ." ಬ್ರಾಹ್ಮಣೇತರರಲ್ಲಿ ಕೆಲವರು ಕೃತಿಯ ಕಾವ್ಯತ್ವಕ್ಕಿಂತಲೂ ಹೆಚ್ಚಾಗಿ ಈ ಕೃತಿ ಬ್ರಾಹ್ಮಣರಿಗೆ ಚೆನ್ನಾಗಿ ಏಟು ಕೊಡುತ್ತದೆ ಎಂಬ ಅಸತ್ಯವೂ, ಅಪ್ರಕೃತವೂ, ಅವಿವೇಕವೂ ಆದ ಕಾವ್ಯವಿಮರ್ಶೇತರ ಕಾರಣವನ್ನು ಆರೋಪಿಸಿಕೊಂಡು ಅದನ್ನು ಸ್ತುತಿಸಿದರೆಂದು ಕೇಳಿದ್ದೇನೆ " ಇಂತಹ ಸಾಲುಗಳು ನಿಜಕ್ಕೂ ಪ್ರಾಮಾಣಿಕವೆನ್ನಿಸಿ ಈ ಬದಲಾವಣೆಗಳ ಕಾರಣಗಳ ಬಗ್ಗೆ ಯೋಚಿಸಹಚ್ಚುತ್ತವೆ. ಕೃತಿಯನ್ನೂ, ಕೃತಿಕಾರನನ್ನೂ ಬೇರ್ಪಡಿಸಿ ಕೇವಲ ರಸಗ್ರಹಣಕ್ಕಾಗಿ ಈ ಕೃತಿಯನ್ನು ಓದಲು ಸಾಧ್ಯವೇ ? ಅವರ ನೆನಪಿನ ದೋಣಿಯಲ್ಲೇ ಪಯಣಿಸಬೇಕು ಈ ಎಲ್ಲ ಪ್ರಶ್ನೆಗಳ ಉತ್ತರಕ್ಕೆ.

ಅವರ ಆತ್ಮ ಕಥನದನ್ವಯ ಅವರು ಬ್ರಾಹ್ಮಣ ವಿರೋಧಿಯಾಗಿರಲಿಲ್ಲ. ಬ್ರಾಹ್ಮಣರಾಗಿದ್ದ ಟಿ. ಎಸ್. ವೆಂಕಣ್ಣಯ್ಯನವರನ್ನು ಪಿತೃಸಮಾನರೆಂದು ಗೌರವಿಸುತ್ತಿದ್ದವರು ಕುವೆಂಪು. ತಮ್ಮ ಉನ್ನತಿಗೆ ಕಾರಣರಾದ ಅನೇಕ ಬ್ರಾಹ್ಮಣರನ್ನು ಬಹಳ ಪ್ರೀತಿಗೌರವಗಳಿಂದಲೇ ತಮ್ಮ ಆತ್ಮ ಕಥನದಲ್ಲಿ ಸ್ಮರಿಸುತ್ತಾರೆ. ಕುಮಾರವ್ಯಾಸ ಭಾರತಕ್ಕೆ ಅವರು ಬರೆದ ತೋರಣ ನಾಂದಿ, ರಾಮಕೃಷ್ಣಪರಮಹಂಸ, ಶ್ರೀ ರಾಮಾಯಣ ದರ್ಶನಂ ಮುಂತಾದುವುಗಳು ಅವರ ಅಪ್ರತಿಮ ಪ್ರತಿಭೆಗೆ, ಅಧ್ಯಯನ ಶೀಲತೆಗೆ ಸ್ಪಷ್ಟ ಸಾಕ್ಷಿಗಳಾಗಿವೆ. ಇಂತಹಾ ಕವಿ ಕೇವಲ ಜಾತಿ ಮಾತ್ಸರ್ಯದಿಂದ ಬ್ರಾಹ್ಮಣರ ವಿರುದ್ಧವಾಗಿ ಬರೆದರೆಂಬುದನ್ನು ಒಪ್ಪುವುದೂ ಕಷ್ಟ. ಬ್ರಾಹ್ಮಣ ಪದದ ನಿಜಾರ್ಥ ಅಧ್ಯಯನ ಶೀಲ ಎಂಬುದೇ ಆಗಿದ್ದಲ್ಲಿ ಅಂತಹ ಯಾವುದೇ ಅರ್ಹತೆಯಿಲ್ಲದ ಕೇವಲ ಹುಟ್ಟಿನಿಂದ ಮಾತ್ರ ಬ್ರಾಹ್ಮಣರೆಂದು ಬೀಗುತ್ತಾ ಉಳಿದವರನ್ನು ಕೀಳಾಗಿ ಕಾಣುತ್ತಿದ್ದವರ ಬಗ್ಗೆ ಅವರಿಗೆ ಅಸಹನೆಯಿತ್ತು. ಜನ್ಮದತ್ತ ಹಕ್ಕೆಂಬಂತೆ ತೋರಿಸಿಕೊಳ್ಳುತ್ತಿದ್ದ ಹುಸಿ ಪಾರಮ್ಯದ ಬಗ್ಗೆ ಆಕ್ರೋಶವಿತ್ತು.

ಆ ಕಾಲದಲ್ಲಿ ಶೂದ್ರನೆಂಬ ಪದ ಅದೆಷ್ಟು ಕೆಳಮಟ್ಟದಲ್ಲಿ ಬಳಕೆಯಾಗುತ್ತಿತ್ತೆಂದರೆ ಬ್ರಾಹ್ಮಣನೊಬ್ಬ ಯಾವುದೋ ತಪ್ಪು ಮಾಡಿದಲ್ಲಿ ಆತನನ್ನು ಶೂದ್ರನೆಂದು ಸಂಬೋಧಿಸಲಾಗುತ್ತಿತ್ತು. ಶೂದ್ರ ಎಂಬ ಪದ ಕಾಯಕ ಸೂಚಕವಾಗುಳಿಯದೇ ಕೆಳಮಟ್ಟದ ವರ್ತನೆಗೆ, ಕೀಳು ಮನಸ್ಥಿತಿಗೆ, ಬೌದ್ಧಿಕ ದಾರಿದ್ರ್ಯಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿತ್ತು, ಇದೆಷ್ಟರಮಟ್ಟಿಗೆಂದರೆ ಶೂದ್ರನೊಬ್ಬ ಸಜ್ಜನನೆಂಬ ಪದಕ್ಕೆ ಅರ್ಹನೇ ಅಲ್ಲವೆಂಬ ರೀತಿಯಲ್ಲಿ, ಹಾಗೊಮ್ಮೆ ಅವನು ಸಜ್ಜನನಾಗಿದ್ದೇ ಆದರೆ ಅವನನ್ನು ಬ್ರಾಹ್ಮಣ ಸಮಾನನೆಂದು ಕರೆದು ಶೂದ್ರ ಎಂಬ ಪದಕ್ಕೇ ಅವಮಾನವಾಗುವ ರೀತಿಯಲ್ಲಿ.

ಶೂದ್ರರ ಅಥವಾ ಶೂದ್ರ ಪದದ ಸ್ಥಿತಿಯೇ ಹೀಗಿದ್ದಲ್ಲಿ ಅತಿಶೂದ್ರರ ಕತೆಯಂತೂ ಶೋಚನೀಯವಾಗಿತ್ತು. ಇದು ಶೂದ್ರರ ಗಮನಕ್ಕೆ ಬಂದಿದ್ದು ಮತ್ತು ಈ ಶೂದ್ರಪ್ರಜ್ಞೆ ಪ್ರಜ್ಞಾಪೂರ್ವಕವಾಗಿ ಎಚ್ಚೆತ್ತುಕೊಂಡಿದ್ದು ಕಾಡಲಾರಂಭಿಸಿದ್ದು ಬ್ರಿಟೀಷರ ಆಗಮನದಿಂದ, ಅವರ ಆಡಳಿತದಿಂದ. ಅತಿಶೂದ್ರಪ್ರಜ್ಞೆ ಭಾರತಕ್ಕೆ ಗಾಂಧೀಜಿಯವರ ಆಗಮನದಿಂದ. ಬ್ರಿಟೀಷರ ಆಗಮನದಿಂದ ಭಾರತಕ್ಕಾದ ಬಹುದೊಡ್ಡ ಲಾಭವೆಂದರೆ ಪಾಶ್ಚಾತ್ಯ ಸಾಹಿತ್ಯದ ಪರಿಚಯ. ಸಾಂಸ್ಕೃತಿಕ ಲೋಕದಲ್ಲಿ ಆ ಕಾಲಕ್ಕನುಗುಣವಾಗಿ ಸಹಜವಾಗೇ ಬ್ರಾಹ್ಮಣರಿಗಿದ್ದ ಹಿಡಿತ, ಬ್ರಾಹ್ಮಣ ಪಾರಮ್ಯ , ಮತ್ತು ಕೇವಲ ಹುಟ್ಟಿನಿಂದ ಮಾತ್ರ ಬ್ರಾಹ್ಮಣರಾಗಿರಲು ಯೋಗ್ಯರಾದವರೂ ಆ ಪಾರಮ್ಯತೆಯ ನೆರಳಲ್ಲಿ ಮೆರೆಯುತ್ತಿದ್ದ ರೀತಿ ಇವೆಲ್ಲವೂ ಶೂದ್ರರ ಗಮನಕ್ಕೆ ಬಂದುದು ಬ್ರಿಟೀಶರ ಆಳ್ವಿಕೆಯಲ್ಲೇ. ಬ್ರಾಹ್ಮಣ ಶೂದ್ರರ ನಡುವೆಯಿದ್ದ ಸಾಂಸ್ಕೃತಿಕ ವ್ಯತ್ಯಾಸಗಳನ್ನು ಬ್ರಿಟೀಶರು ಎತ್ತಿ ತೋರಿಸುತ್ತಾ ಬಂದರು. ಅಲ್ಲಿಯವರೆಗೂ ಶೂದ್ರ ಪ್ರಜ್ಞೆ ಇರಲಿಲ್ಲವೆಂದಲ್ಲ, ಆ ಮನಸ್ಥಿತಿ ಅವರಿಗೆ ಅಭ್ಯಾಸವಾಗಿತ್ತು, ರೂಢಿಗತವಾಗಿತ್ತು. ನಮ್ಮ ಸಾಮಾಜಿಕ ಜನಜೀವನದ ಹುಳುಕುಗಳು, ಯೋಗ್ಯರಲ್ಲದವರೂ ಹಾಕುವ ಯೋಗ್ಯರ ವೇಷ ಇವುಗಳ ತೀವ್ರತೆ ಶೂದ್ರರಿಗೆ ಮನದಟ್ಟಾಗಲಾರಂಭಿಸಿತು. ಇವುಗಳನ್ನು ಶೂದ್ರರಿಗೆ ತೋರಿಸುವ ಹಪಾಹಪಿ ಬ್ರಿಟೀಷರಿಗಿತ್ತೇ ವಿನಹ ಅತಿಶೂದ್ರರ ಬಗ್ಗೆ ಅವರ ಗಮನವಿರಲಿಲ್ಲ. ಅದನ್ನು ನಿರ್ವಹಿಸಿದವರು ಗಾಂಧೀಜಿ.

ಇವೆಲ್ಲವೂ ಕುವೆಂಪುರವರನ್ನು ಗಾಢವಾಗಿ ಕಾಡಿತ್ತು. ಮೊಟ್ಟಮೊದಲು ಅವರಿಗೆ ಸಂಸ್ಕೃತ ತರಗತಿಯಲ್ಲಾದ ಅವಮಾನ ಬೇರೆ ಯಾರಿಗೇ ಆಗಿದ್ದರೂ ಸಂಸ್ಕೃತದಿಂದ ಶಾಶ್ವತವಾಗಿ ದೂರ ಸರಿದು ಬಿಡುತ್ತಿದ್ದರೇನೋ, ಕುವೆಂಪು ಅದನ್ನೊಂದು ಸವಾಲಾಗಿ ಸ್ವೀಕರಿಸಿದರು. ಸಂಸ್ಕೃತವನ್ನು ಕಲಿತು ಪ್ರಾಚೀನ ಸಂಸ್ಕೃತ ಕಾವ್ಯಗಳನ್ನು ತಮ್ಮದಾಗಿಸಿಕೊಂಡರು. ಅವರ ವಿಶೇಷತೆಯೆಂದರೆ ಶೂದ್ರರಾಗಿದ್ದುಕೊಂಡೂ ಬ್ರಾಹ್ಮಣರ ನಡುವೆ ಯಾವುದೇ ಕೀಳರಿಮೆಯಿಲ್ಲದೆ ಸಹಜವಾಗಿ ಸರಿಸಮಾನರಾಗಿ ಬದುಕಿದ್ದುದು, ಸಂಸ್ಕೃತದ ಮೂಲಕ ಸಂಸ್ಕೃತೀಕರಣಕ್ಕೆ ಸಂಬಂಧ ಪಟ್ಟಿದ್ದನ್ನು, ಭಾರತೀಯ ಪುರಾಣಗಳನ್ನು ವಿಭಿನ್ನವಾಗಿ ಅರಗಿಸಿಕೊಂಡಿದ್ದು, ಕನ್ನಡದ ಹಳೆಗನ್ನಡ, ನಡುಗನ್ನಡದ ಕಾವ್ಯಗಳನ್ನು ಅಭ್ಯಾಸ ಮಾಡಿದ್ದುದು, ಪಾಶ್ಚಾತ್ಯ ಸಾಹಿತ್ಯವನ್ನು ಅಭ್ಯಸಿಸುವ ಮೂಲಕ ಅಂದಿನ ಬಹುತೇಕ ಬ್ರಾಹ್ಮಣರನ್ನು ಮೀರಿಸುವ ಆಧುನಿಕತೆ ಮತ್ತು ವೈಚಾರಿಕತೆಯ ಕಡೆ ನುಗ್ಗಿದ್ದು ( ಸುಮಾರು ೪೦ನೇ ಇಸವಿಯ ಹೊತ್ತಿಗೇ ಕುವೆಂಪು ಜಾಗತಿಕವಾಗಿ ಸುಪ್ರಸಿದ್ಧವಾದ ಬಹುತೇಕ ಎಲ್ಲ ಕೃತಿಗಳನ್ನು ಓದಿ ಮುಗಿಸಿದ್ದರು). ಇವೆಲ್ಲವೂ ಕುವೆಂಪುರವರ ವ್ಯಕ್ತಿತ್ವವನ್ನು ಬಹಳ ಸಶಕ್ತವಾಗಿ ರೂಪಿಸಿದವೆನ್ನಬಹುದು.
ಜೊತೆಗೆ ವಿವೇಕಾನಂದ, ರಾಮಕೃಷ್ಣರ ಪ್ರಭಾವ ತಂದು ಕೊಟ್ಟ ಹೊಳಹುಗಳ ಹಿನ್ನೆಲೆಯಲ್ಲಿ ಅವರು ಸಾಹಿತ್ಯವನ್ನು ಬೇರೆಯದೇ ಆದ ರೀತಿಯಲ್ಲಿ ನೋಡಲಾರಂಭಿಸಿದರು, ತರತಮಗಳನ್ನು ಪತ್ತೆ ಹಚ್ಚಿದರು, ಎಲ್ಲೆಲ್ಲಿ ಅವಮಾನಗಳಾಗಿವೆಯೋ ಅವುಗಳನ್ನು ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದರು... ಬಹಳ ಮುಖ್ಯವಾಗಿ ಶೂದ್ರ ತಪಸ್ವಿಯಂತಹ ನಾಟಕಗಳ ರೂಪದಲ್ಲಿ.

ಮನರಂಜನೆಯೊಂದೇ ನಾಟಕಗಳ ಉದ್ದೇಶವಾಗಿದ್ದ, ಗುರಿಯಾಗಿದ್ದ ಕಾಲದಲ್ಲಿ ಕಥೆಗಳೂ ಅದಕ್ಕೆ ತಕ್ಕಂತೆಯೇ ಇರುತ್ತಿದ್ದವು. ಕಾಲಕ್ರಮೇಣ ನಮ್ಮ ನಡುವೆ ಜ್ವಲಂತವಾಗಿರುವ ಸಮಸ್ಯೆಗಳು ಮತ್ತು ಅವುಗಳನ್ನು ಎತ್ತಿ ತೋರುವ ಮೂಲಕ ಸಾಮಾಜಿಕ ಪರಿವರ್ತನೆಯ ಪ್ರಯತ್ನ ನಾಟಕಗಳ ಪ್ರಮುಖ ಗುರಿಯಾಗತೊಡಗಿತು. ಕುವೆಂಪುರವರ ನಾಟಕಗಳು ಈ ದಿಕ್ಕಿನಲ್ಲಿ ಮೊದಲ ಅಂತಹಾ ಪ್ರಯತ್ನಗಳು. ಅವುಗಳು ರಂಗದ ಮೇಲೆ ಪ್ರಯೋಗಿಸಲ್ಪಡುವುದೆಂಬ ನಂಬಿಕೆ ಸ್ವಯಂ ಕುವೆಂಪು ಅವರಿಗೇ ಇರಲಿಲ್ಲ. "ಶೂದ್ರ ತಪಸ್ವಿಯಲ್ಲಿ ಶಂಭೂಕನ ಕಥೆಯ ಸಾಮಗ್ರಿ ಹೊಸ ರೀತಿಯಿಂದ ದೃಶ್ಯವಸ್ತುವಾಗಿದೆ. ಈ ನಾಟಕ ಆಡುವ ದೃಷ್ಟಿಯಿಂದ ನಿಷ್ಪ್ರಯೋಜಕ. ಅದರ ಚಿತ್ರಗಳ ಬೃಹತ್ತನ್ನೂ ಮಹತ್ತನ್ನೂ ಹೊರಗಡೆಯ ಅಲ್ಪ ವೇದಿಕೆಯ ಮೇಲೆ ಕೃತಕಾಭಿನಯದಿಂದ ಪ್ರದರ್ಶಿಸುವುದೂ ಅಸಾಧ್ಯ. ಆದ್ದರಿಂದ ಕಲ್ಪನಾ ತಪಸ್ಸಾಧ್ಯವಾದ ಮನೋ ರಂಗಭೂಮಿಯಲ್ಲಿಯೇ ಅದನ್ನು ಸೃಷ್ಟಿಸಿ ದೃಷ್ಟಿಸಬೇಕು." ಎಂಬ ಮಾತನ್ನು ಕುವೆಂಪುರವರೇ ಹೇಳುತ್ತಾರೆ.

ಶೂದ್ರನ ತಪಸ್ಸು ಪ್ರಕೃತಿಯ ಮಡಿಲಲ್ಲಿ, ಪ್ರಕೃತಿಗೆ ಪೂರಕವಾಗಿ ನಡೆಯುತ್ತಿರುತ್ತದೆ. ಪ್ರಕೃತಿಯೂ ಶೂದ್ರನನ್ನು ಆರಾಧಿಸುತ್ತಿರುತ್ತದೆ, ಮೃತ್ಯುವನ್ನೂ ಎದುರು ಹಾಕಿಕೊಳ್ಳುವಷ್ಟು, ಮೃತ್ಯುವಿಗೇ ಸವಾಲು ಹಾಕುವಷ್ಟು. ಶಂಭೂಕನ ಪಾತ್ರವನ್ನು ಅವರು ಚಿತ್ರಿಸಿರುವ ರೀತಿಯೂ ಇಂದಿಗೆ ಬಹಳ ಪ್ರಸ್ತುತವೆನಿಸುತ್ತದೆ. ಬ್ರಾಹ್ಮಣನು ರಾಮನನ್ನು ಶೂದ್ರ ತಪಸ್ವಿಯ ಬಳಿ ಕರೆತರುವಾಗ, ಅವನ ಮೇಲೆ ಆರೋಪವನ್ನು ಮಾಡುವಾಗ ಶಂಭೂಕ ನಡೆದು ಕೊಳ್ಳುವ ರೀತಿ ಅತ್ಯಂತ ಸ್ತುತ್ಯರ್ಹವಾದುದು ಮತ್ತು ಒಬ್ಬ ಪ್ರಾಜ್ಞ ನಿಜವಾಗಿಯೂ ನಡೆದುಕೊಳ್ಳಬೇಕಾಗಿರುವಂಥದ್ದು. ಮೌನವಾಗಿ ತಪಗೈಯುತ್ತಿದ್ದ ಮುನಿಯ ಮೇಲೆ ವಿನಾಕಾರಣ ಆರೋಪ ಮಾಡಿದರೂ ಮುನಿ ತನ್ನನ್ನು ಸಮರ್ಥಿಸಿಕೊಳ್ಳುವುದಿಲ್ಲ, ವಾದಿಸುವುದಿಲ್ಲ. ವಲ್ಮಿಕದೊಳಗೆ ತಪಸ್ಸು ಮಾಡುತ್ತಿದ್ದ ಮುನಿಗೆ ಎಲ್ಲವೂ ತಿಳಿಯುತ್ತಿರುತ್ತದೆ ಎಂಬುದಕ್ಕೆ ಕಡೆಯ ದೃಶ್ಯದಲ್ಲಿ ಬ್ರಾಹ್ಮಣ ನಮಸ್ಕರಿಸಿದಾಗ ಶಂಭೂಕ ಮುನಿಯ ಕೈಗಳು ಹೊರಬಂದು ಹರಸುವುದೇ ಸಾಕ್ಷಿ.. ರಾಮನು ಈ ಮುನಿಯನ್ನು ಸಂಹರಿಸಲು ಸಾಮಾನ್ಯ ಆಯುಧ ಸಮರ್ಥವಾಗದೆಂದು ಬ್ರಾಹ್ಮಣನಿಗೆ ಮನದಟ್ಟು ಮಾಡಲೆತ್ನಿಸಿದಾಗ ಬ್ರಾಹ್ಮಣ " ಆವ ದಿವ್ಯಾಸ್ತ್ರದಿಂ ದೈತ್ಯೇಂದ್ರಂ ರಾವಣನ ದಶಶಿರಗಳುರುಳಿದವೋ ಅದನೆ ತುಡು, " ಎಂದಾಗಲೂ ತಡೆಯಲು ಎದ್ದುಬರುವುದಿಲ್ಲ. ಕೊನೆಗೆ ಬ್ರಾಹ್ಮಣನ ಅಣತಿಯ ಮೇರೆಗೆ ರಾಮ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದರೂ ವಿಚಲಿತನಾಗುವುದಿಲ್ಲ. ರಾಮ ಬ್ರಹ್ಮಾಸ್ತ್ರವನ್ನು ತೊಟ್ಟಾಗ ಭೂಮಿ ನಡುಗುತ್ತದೆ, ಗಗನ ಗುಡುಗುತ್ತದೆ. ತನ್ನನ್ನೇನೂ ಮಾಡದು, ಅದು ಶೂದ್ರನ ಸಂಹಾರಕ್ಕೆ ತೊಟ್ಟದ್ದೆಂದು ತಿಳಿದಿದ್ದ ಬ್ರಾಹ್ಮಣ ಹೆದರಿ, ಸೆಡೆತು, ರಾಮನ ಮೊರೆಗೆ ಹೋಗುತ್ತಾನೆ. ಆದರೂ ಶೂದ್ರ ಬೆಚ್ಚುವುದಿಲ್ಲ, ವಲ್ಮಿಕದಿಂದ ಹೊರಬರುವುದಿಲ್ಲ. ಬ್ರಹ್ಮಾಸ್ತ್ರ ತಪಸ್ವಿಯನ್ನು ಗೌರವಿಸಿ ಬ್ರಾಹ್ಮಣನನ್ನೇ ಆಹುತಿ ತೆಗೆದುಕೊಳ್ಳಲು ಹಿಂತಿರುಗುತ್ತದೆ. ಬ್ರಾಹ್ಮಣನು ನಿಜವಾದ ಅಧ್ಯಯನಕ್ಕೆ, ಜ್ಞಾನಕ್ಕೆ ಶರಣಾಗುವುದರೊಂದಿಗೆ ಎಲ್ಲವೂ ಮಂಗಳವಾಗುತ್ತದೆ, ನಿಜವಾಗಿ ಗೌರವಿಸಬೇಕಾದ್ದು ಹುಟ್ಟಿನ ಮೂಲವನ್ನಲ್ಲ, ಶಾಸ್ತ್ರಸಂಭ್ರಾಂತರನ್ನಲ್ಲ, ಮಾನವೀಯತೆಯ ಲವಲೇಶವೂ ಇಲ್ಲದ ಅಸಮಾನತೆಯನ್ನಲ್ಲ, ಬೆಲೆ ಕೊಡಬೇಕಾದ್ದು ನಿಜವಾದ ಮಾನವೀಯತೆಗೆ, ಅಧ್ಯಯನ ತಂದುಕೊಡಬಲ್ಲ ಜ್ಞಾನಕ್ಕೆ, ಸಜ್ಜನಿಕೆಗೆ, ತಾನು ಉತ್ತರಿಸಬೇಕಿಲ್ಲದ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಮೌನವಾಗಿ ತನ್ನ ಕಾರ್ಯವನ್ನು ತಾನು ನಿರ್ವಹಿಸುತ್ತಿರುವ ಸ್ಥಿತಪ್ರಜ್ಞತೆಗೆ.  ಇಲ್ಲಿ ಶರಣಾಗುವುದು ಬ್ರಾಹ್ಮಣನಲ್ಲ, ಶಾಸ್ತ್ರಸಂಭ್ರಾಂತ ಮನಸ್ಥಿತಿ. ಗೆಲ್ಲುವುದು ಶೂದ್ರನಲ್ಲ , ನಿಜವಾದ ಅಧ್ಯಯನ, ನಿಜ ಪಾಂಡಿತ್ಯ. ಇಂದು ಅಸಹಿಷ್ಣುತೆಯ ಹೆಸರಿನಲ್ಲಿ ಕೂಗಾಡುತ್ತಿರುವವರೆಲ್ಲಾ ಈ ವಿಷಯವನ್ನು ಅತ್ಯಂತ ಅವಶ್ಯಕವಾಗಿ ಅನುಸರಿಸಲೇ ಬೇಕಾದ ಅಗತ್ಯವಿದೆ. 

ಶೂದ್ರತಪಸ್ವಿಯೊಡನೆ ತಮ್ಮನ್ನು ಕವಿ ಗುರುತಿಸಿಕೊಂಡಿದ್ದಾರಾ? ನಿಜವಾದ ಅಧ್ಯಯನ ಶೀಲ ತಾನು, ರಜತ ಮನುಷ್ಯ ತಾನು.., ಅಧ್ಯಯನದಿಂದ ಜ್ಞಾನವನ್ನು ಪಡೆಯದೇ ಕಂದಾಚಾರದಲ್ಲಿ ತೊಡಗಿರುವ ನೀವು ನಿಜವಾದ ಶಂಭೂಕಗಳು(ಕಪ್ಪೆ ಚಿಪ್ಪು) ಎಂದು ಹೇಳುತ್ತಿದ್ದಾರಾ? ಮರುಓದು ಹೌದೆನ್ನುತ್ತದೆ.

ಇಲ್ಲಿ ಅವರು ನಾರದರ ಪಾತ್ರವನ್ನು ಅದಕ್ಕಾಗಿಯೇ ಬ್ರಾಹ್ಮಣನೇ ನಿರ್ವಹಿಸುವಂತೆ ಮಾಡಿದ್ದಾರೆ. ಬ್ರಾಹ್ಮಣರ ಬಗ್ಗೆ ಬರೆದುದಲ್ಲವೆಂದು ಅವರೆಷ್ಟೇ ಸ್ಪಷ್ಟೀಕರಣ ಕೊಟ್ಟರೂ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅದು ನಿಸ್ಸಂದೇಹವಾಗಿ ಬ್ರಾಹ್ಮಣರ ಬಗ್ಗೆಯೇ ಬರೆದುದಾಗಿದ್ದರೂ ಎಲ್ಲ ಬ್ರಾಹ್ಮಣರ ವಿರುದ್ಧವೂ ಅಲ್ಲ. ಅಂದು ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಪುರೋಹಿತಶಾಹಿ ಪರಂಪರೆಯನ್ನು, ವೈದಿಕ ಬ್ರಾಹ್ಮಣರ ಕರ್ಮಠ ಶಾಸ್ತ್ರಗಳನ್ನು, ಹುಸಿ ಬ್ರಾಹ್ಮಣ ಪಾರಮ್ಯವನ್ನು ಈ ರೀತಿಯಾಗಿ ಪ್ರಶ್ನಿಸುತ್ತಾರೆ, ಧಿಕ್ಕರಿಸುತ್ತಾರೆ. ಅವರ ಅಸಮಾಧಾನ ಪ್ರಾಜ್ಞ ಬ್ರಾಹ್ಮಣರ ಕುರಿತಲ್ಲ ಎಂಬುದು ಈ ಎಲ್ಲ ಹಿನ್ನೆಲೆಯಲ್ಲಿ ಸ್ಪಷ್ಟವಾಗುತ್ತಾ ಹೋಗುತ್ತದೆ.


ಇಲ್ಲಾಗಿರುವುದು ಬದಲಾವಣೆಯ ಜೊತೆಜೊತೆಗೇ ಉದಾತ್ತೀಕರಣ. ಭಾಸನ ಉದಾತ್ತೀಕರಣದಂತೆಯೇ ಕುವೆಂಪು ಶೂದ್ರ ತಪಸ್ವಿಯ ಉದಾತ್ತೀಕರಣವೂ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಯಾವುದೇ ನಾಟಕವನ್ನು ನೋಡುವಾಗ , ಓದುವಾಗ ಪ್ರತಿಯೊಬ್ಬ ಓದುಗನೂ ಯಾವುದಾದರೊಂದು ಪಾತ್ರದಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತಾನೆ. ಹುಟ್ಟಿನ ಮೂಲದ ಪ್ರಭ್ಹಾವದಲ್ಲಿ ನೋಡಿದರೆ ಬ್ರಾಹ್ಮಣನಿಗೆ ಕುವೆಂಪು ಖಳನಾಯಕರಂತೆಯೂ, ಶೂದ್ರರ ದೃಷ್ಟಿಯಲ್ಲಿ ನೋಡಿದರೆ ಬ್ರಾಹ್ಮಣರ ಮರ್ಮಸ್ಥಾನಕ್ಕೇ ಪ್ರಬಲವಾದ ಹೊಡೆತ ಕೊಟ್ಟ ಧೀಮಂತ ನಾಯಕನಂತೆಯೂ ಕಾಣಿಸಬಹುದು. ಇವೆರಡೂ ಕುವೆಂಪುರವರ ಆಶಯವಾಗಿರಲಿಲ್ಲವೆಂಬುದು ಅವರೇ ಹೇಳಿದ ಮಾತಿನಿಂದ ಸ್ಪಷ್ಟವಾಗುತ್ತದೆ. ಅದನ್ನವರು ಕಲೆಯ ಉದ್ದೇಶವೇ ಕೊಲೆಯಾದಂತೆ ಎಂದಿದ್ದಾರೆ.ಇಷ್ಟಾಗಿಯೂ ಕೆಲವೊಮ್ಮೆ ಬ್ರಾಹ್ಮಣರ ವಿರುದ್ಧದ ಮನಸ್ಥಿತಿಯೇ ಶೂದ್ರತಪಸ್ವಿಯ ರಚನೆಗೆ ಕಾರಣ ಎಂದನ್ನಿಸಿದರೆ ಒಂದು ಮಾತು. ಒಂದು ಶೂದ್ರ ತಪಸ್ವಿಯ ಓದು ಬ್ರಾಹ್ಮಣರಲ್ಲಿ ಇಷ್ಟು ಸಂಚಲನ ಉಂಟು ಮಾಡಿದರೆ , ಅದು ಅವಹೇಳನಕಾರಿ ಎಂದು ಬೊಬ್ಬೆ ಹೊಡೆದರೆ ಅನಾದಿ ಕಾಲದಿಂದ ಶಂಭೂಕ ವಧೆಯನ್ನು ಓದುತ್ತಾ, ಅದನ್ನೊಂದು ಹರಿಕಥೆಯಂತೆ ಭಕ್ತಿಯಿಂದ ಕೇಳುತ್ತಾ ಬಂದ ಶೂದ್ರರ ಮನಸ್ಥಿತಿಯ ಬಗ್ಗೆಯೂ ಒಮ್ಮೆ ಯೋಚಿಸುವುದು ಒಳಿತು. ಅವರಿಗೆ ಹೀಗನ್ನಿಸಬಾರದು ಎಂದು ಹೇಗೆ ನಿರೀಕ್ಷಿಸಲಾದೀತು? ಮಾನವೀಯತೆಯ, ಮನುಷ್ಯತ್ವದ ಹಿನ್ನೆಲೆಯಲ್ಲಿ ಯಾವುದೇ ಪಕ್ಷೋದ್ರೇಕ ಹೊಂದದೇ ಸಮಾಧಾನವಾಗಿ ಓದಿದರೆ ಕುವೆಂಪು ಪ್ರಜ್ವಲಿಸುತ್ತಾರೆ, ಶೂದ್ರ ತಪಸ್ವಿ ನಿಗಿನಿಗಿ ಹೊಳೆಯುತ್ತದೆ

~ಮಾಲಿನಿ ಗುರುಪ್ರಸನ್ನ

(ಸಮಹಿತ ಪತ್ರಿಕೆಯಲ್ಲಿ ಪ್ರಕಟಿತ)