ಗುರುವಾರ, ಅಕ್ಟೋಬರ್ 16, 2008

ಅರ್ಪಣೆ


ಭಾವಪೂರ್ಣ (ಕವ)ನಮನ


ಬಲು ಸುಂದರ, ಸುಭದ್ರ ಈ ಜಗತ್ತು
ತಾಯ ಅಪ್ಪುಗೆಯಲ್ಲಿರುವಷ್ಟು ಹೊತ್ತು
ನಾಳೆಯ ಹಂಗಿಲ್ಲ, ಇಂದಿನ ಪರಿವಿಲ್ಲ,
ಇರುವುದೊಂದೇ ಅರಿವು ಆ ಹೊತ್ತು
ಅಮ್ಮನ ಮಡಿಲೊಳಗಡಗಿಹುದು ಜಗತ್ತು.

ತನ್ನೊಳಗಿನ ಕಸುವನ್ನೆಲ್ಲಾ ಹಿಂಡಿ
ಪ್ರೇಮ ಸುಧೆಯ ಎದೆಯೊಳನಿಟ್ಟು
ಹನಿ ಹನಿಯಾಗಿ ಹಣಿಸಿ, ತಣಿಸಿ
ತಬ್ಬಿ ಸಿಹಿ ಮುತ್ತುಗಳನಿಟ್ಟು
ನೀನಿರುವೆ ಎನ್ನುಸಿರೊಳಗೆ ಕಂದಾ....
ನಿನ್ನಿಂದ ಈ ಬಾಳು ಪೂರ್ಣವೆಂದ,
ತಾಯ ಒಲುಮೆ ಪಡೆವಷ್ಟು ಹೊತ್ತು
ಬಲು ಸುಂದರ, ಸುಭದ್ರ ಈ ಜಗತ್ತು.

ಚಳಿಗೆ, ಮಳೆಗೆ ತನ್ನ ಮೈಯನೂಡ್ಡಿ,
ತಾ ಹಸಿದು, ಕುಡಿಗೆ ತುತ್ತನಿತ್ತು
ಅತ್ತಾಗ ಲಾಲಿಹಾಡು ಹಾಡಿ,
ಚಂದಿರನ ಕಥೆಯ ಹೇಳಿ ರಮಿಸಿ,
ಸವಿಗನಸ ಚಿತ್ತಾರವ ಬರೆದು,
ಅಂತಃಶಕ್ತಿಯನು ತುಂಬಿ ಕಾಯ್ವ,
ಜನನಿ ಬಳಿಯಲಿರುವಷ್ಟು ಹೊತ್ತು
ಅದೆಷ್ಟು ಸುಂದರ, ಸುಭದ್ರ ಈ ಜಗತ್ತು !!!

**nostalgia ಬ್ಲಾಗ್‌ನಲ್ಲಿದ್ದ Mother ಎನ್ನುವ ಫೋಟೋವನ್ನು ನೋಡಿದಾಗ ಮೂಡಿದ ಕವನ.**




13 ಕಾಮೆಂಟ್‌ಗಳು:

ಆಲಾಪಿನಿ ಹೇಳಿದರು...

ಚೆನ್ನಾಗಿದೆ ಕವನ.

jomon varghese ಹೇಳಿದರು...

ಚೆಂದದ ಕವನ

ಪಲ್ಲವಿ ಎಸ್‌. ಹೇಳಿದರು...

ಪ್ರೀತಿಯ ತೇಜಸ್ವಿನಿ,

ಪ್ರೀತಿಯ ಎನ್ನಲು ಅಡ್ಡಿಯಿಲ್ಲ ಅಂದುಕೊಂಡಿದ್ದೇನೆ. ಏಕೆಂದರೆ, ಅವ್ವನ ಬಗ್ಗೆ ನೀವು ಬರೆದಿದ್ದು ಅಷ್ಟು ಚೆನ್ನಾಗಿ. ಅದು ನನ್ನಲ್ಲಿ ಹುಟ್ಟಿಸಿದ ಆತ್ಮೀಯತೆ ಇದು.

ಎಷ್ಟು ಸೊಗಸಾಗಿ ಬರೆದಿದ್ದೀರಿ. ಬರೆಯುತ್ತಾ ಬರೆಯುತ್ತಾ ಭಾವುಕರಾದಿರಿ ಅನಿಸುತ್ತದೆ. ಓದಿದ ನಾವೇ ಅಷ್ಟೊಂದು ಭಾವುಕರಾಗಿರುವಾಗ, ನಿಮಗೂ ಹಾಗೆ ಅನಿಸಿದ್ದರಲ್ಲಿ ಅಚ್ಚರಿಯಿಲ್ಲ ಬಿಡಿ.

”ತನ್ನೊಳಗಿನ ಕಸುವನ್ನೆಲ್ಲಾ ಹಿಂಡಿ
ಪ್ರೇಮ ಸುಧೆಯ ಎದೆಯೊಳನಿಟ್ಟು
ಹನಿ ಹನಿಯಾಗಿ ಹಣಿಸಿ, ತಣಿಸಿ
ತಬ್ಬಿ ಸಿಹಿ ಮುತ್ತುಗಳನಿಟ್ಟು
ನೀನಿರುವೆ ಎನ್ನುಸಿರೊಳಗೆ ಕಂದಾ....
ನಿನ್ನಿಂದ ಈ ಬಾಳು ಪೂರ್ಣವೆಂದ,”

ಈ ಸಾಲುಗಳು ಹಿಡಿದಿಟ್ಟವು.

ಇಡೀ ಕವಿತೆ ನನಗೆ ಅವ್ವನ ಪ್ರೀತಿಯನ್ನು ಹೊಸ ಬೆಳಕಿನಲ್ಲಿ ತೋರಿಸಿತು. ಅದಕ್ಕಾಗಿ ನಿಮಗೆ ತುಂಬ ತುಂಬ ಥ್ಯಾಂಕ್ಸ್‌.

- ಪಲ್ಲವಿ ಎಸ್‌.

ಅಂತರ್ವಾಣಿ ಹೇಳಿದರು...

"ಬಲು ಸುಂದರ, ಸುಭದ್ರ ಈ ಜಗತ್ತು
ತಾಯ ಅಪ್ಪುಗೆಯಲ್ಲಿರುವಷ್ಟು ಹೊತ್ತು"

ವಾವ್! ವಾವ್!!
ತುಂಬಾ ಸೊಗಸಾಗಿದೆ ಕವನ :)

ಚಿತ್ರಾ ಹೇಳಿದರು...

ತೇಜಸ್ವಿನಿ,

ಸುಂದರ ಕವನ , ಅಂದದ ಚಿತ್ರ !
ನಿಜಕ್ಕೂ
"ಜನನಿ ಬಳಿಯಲಿರುವಷ್ಟು ಹೊತ್ತು
ಅದೆಷ್ಟು ಸುಂದರ, ಸುಭದ್ರ ಈ ಜಗತ್ತು !!! "

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀದೇವಿ ಹಾಗೂ ಜೋಮನ್ ಅವರೆ,

ತುಂಬಾ ಧನ್ಯವಾದಗಳು :)

ಪ್ರೀತಿಯ ಪಲ್ಲವಿ,

ಖಂಡಿತ ಅಭ್ಯಂತರವಿಲ್ಲ. ತುಂಬಾ ಸಂತೋಷವೇ. ಕಾರಣ ಆತ್ಮೀಯತೆ, ವಿಶ್ವಾಸ ಸಿಗುವುದೇ ಕಷ್ಟದಲ್ಲಿ. ಹಾಗೆ ಬಂದಾಗ ಅದನ್ನು ಹಾರ್ದಿಕವಾಗಿ ಸ್ವೀಕರಿಸಬೇಕು. ಆದರೆ ಇದನ್ನು ಪಡೆದುಕೊಳ್ಳುವುದೆಷ್ಟು ಕಷ್ಟವೋ ಕಳೆದುಕೊಳ್ಳುವುದು ಅಷ್ಟೇ ಸುಲಭ ನೋಡಿ :)

ಇಂತಹಾ ಕವನಗಳನ್ನು ಬರೆಯುವಾಗ ಯಾರೂ ಭಾವುಕರುತ್ತಾರೆ ಅಲ್ಲವೇ? ನಿಜ ಹೇಳ್ಬೇಕು ಅಂದ್ರೆ ನನಗೇಕೋ ಈ ಕವನ ಅಷ್ಟೊಂದು ಚೆನ್ನಾಗಿ ಮೂಡಿಲ್ಲವೇನೋ ಎಂದೆನಿಸುತ್ತಿತ್ತು.(ಆ ಸಂಶಯ ಈಗ ಇಲ್ಲ ಎಂದಲ್ಲ :) )ಹಾಗಾಗಿ ಹಾಕಲು ಹಿಂಜರಿಗೆಯೂ ಇತ್ತು. ಆದ್ರೆ ತಾಯಿಯ ಕುರಿತಾದ್ದರಿಂದ ಹೆಚ್ಚು ಯೋಚಿಸದೆ ಹಾಕಿ ಬಿಟ್ಟೆ. ಅಲ್ಲಲ್ಲಿ ಕೆಲವೊಂದು ಸಾಲುಗಳನ್ನು ಮತ್ತಷ್ಟು ಸುಧಾರಿಸಬಹುದಿತ್ತು.. ಇನ್ನಷ್ಟು ಭಾವತೀವ್ರತೆಗೆ ಒತ್ತು ಕೊಡಬಹುದಿತ್ತು ಎಂದೆನ್ನಿಸಿದರೂ ಅದೇಕೋ ಏನೋ ಸರಿಪಡಿಸ ಹೋಗಲಿಲ್ಲ. ತತ್‌ಕ್ಷಣ ಈ ಒಂದು ಭಾವಸ್ಫುರಿಸಲು ಒಂದೇ ಬಾರಿಗೆ ಎಲ್ಲವನ್ನೂ ಅಕ್ಷರರೂಪಗಿಳಿಸಿ ಬಿಟ್ಟೆ. ತಿರುಗೆ ಒಮ್ಮೆಯೂ ಓದದೆ, ಅದನ್ನು ಸರಿಪಡಿಸದೇ ಮಾನಸದೊಳಗಿಟ್ಟು ಬಿಟ್ಟೆ.
ಆದರೂ ನೀವಿದನ್ನು ಇಷ್ಟು ಮೆಚ್ಚಿ ಪ್ರತಿಕ್ರಿಯಿಸಿದ್ದನ್ನು ನೋಡಿ ತುಂಬಾ ಸಂತೋಷವಾಯಿತು. ತುಂಬಾ ಧನ್ಯವಾದಗಳು. ಎಲ್ಲರ ತಾಯಂದಿರೂ ಅವರ ಮಕ್ಕಳ ಬಳಿ ಸದಾ ಜೊತೆಗಿರುವಂತಾಗಲಿ ಎಂದು ಮನಃಪೂರ್ವಕವಾಗಿ ಪ್ರಾರ್ಥಿಸುವೆ. ಆಗ ಮಾತ್ರ ಈ ಜಗತ್ತು ನಿಜಕ್ಕೂ ಬಲು ಸುಂದರ ಹಾಗೂ ಸುಭದ್ರ :)

ಶಂಕರ್,

ಧನ್ಯವಾದಗಳು. ಓದುಗರ ಪ್ರೋತ್ಸಾಹಭರಿತ ಪ್ರತಿಕ್ರಿಯೆಯೇ ಬರಹಗಾರನಿಗೆ ಸ್ಫೂರ್ತಿ.

ಚಿತ್ರಾ,

ತಾಯಿಯ ಮಹತ್ವ ಏನು ಹೇಳಿ ತಾಯಾದ ಮೇಲೆ ಮತ್ತೂ ಚೆನ್ನಾಗಿ ಅರ್ಥ ಆಜು. ಪುಟ್ಟಿಯಾದ್ಮೇಲೆನೇ ಅಮ್ಮನ ಸೆಳೆತ ಮತ್ತೂ ಹೆಚ್ಚಾಜು ನೋಡು. ಅದಕ್ಕೇ ಶಂಕರಾಚಾರ್ಯರು ಹೇಳಿದ್ದು.

"ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ" ಹೇಳಿ.

ಧನ್ಯವಾದಗಳು.

Shashi Dodderi ಹೇಳಿದರು...

An expression of a mother, so there is nothing like good and bad.Being a daughter and being a mother you have put all the emotions into the poem especially feeling of security, unique to mother.One more thing you have put across is the feeling of completeness of a mother when she gives birth to a child. These emotions are beyond my comments.

Unknown ಹೇಳಿದರು...

ಅಮ್ಮನ ಅನ್ನೊ ಪದಾನೇ ಎಷ್ಟು ಮಧುರ ಅಲ್ವಾ?
"ಚಳಿಗೆ,ಮಳೆಗೆ ತನ್ನ ಮೈಯನ್ನೊಡ್ದಿ ತಾ ಹಸಿದು, ಕುಡಿಗೆ ತುತ್ತನ್ನಿತ್ತು..." ನನ್ನ ಬಾಲ್ಯಕ್ಕೆ ಕರೆದೋಯ್ತು

~ ಹರ್ಷ

sunaath ಹೇಳಿದರು...

ತೇಜಸ್ವಿನಿ,
ಭಾವಪುರ್ಣ ಕವನಕ್ಕಾಗಿ ಅಭಿನಂದನೆಗಳು.
-ಕಾಕಾ

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ನಿಮ್ಮ ಕವನ ತುಂಬಾ ಚೆನ್ನಾಗಿದೆ. ನನಗೆ ತಾಯಿ-ಮಗು ಫೋಟೊ ತೆಗೆಯಲು ತುಂಬಾ ಇಷ್ಟ. ಮತ್ತು ಸುಮಾರು ತೆಗೆದಿದ್ದೇನೆ. ಈ ಕವನದಿಂದಾಗಿ ನಾನು ತೆಗೆದ ಪೊಟೊಗಳೆಲ್ಲಾ ನೆನಪಾಯಿತು. Thanks.

ಮತ್ತೊಂದು ವಿಷಯ ನನ್ನ ಛಾಯಕನ್ನಡಿ ಬ್ಲಾಗಿನಲ್ಲಿ ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ಬಂದಿದೆ. ನೋಡಿ ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.

ಶಿವು.ಕೆ

ತೇಜಸ್ವಿನಿ ಹೆಗಡೆ ಹೇಳಿದರು...

ಶಶಿಯವರೆ,

ತುಂಬಾ ಧನ್ಯವಾದಗಳು. ಅಂತಹ ಒಂಡು ಅನುಭೂತಿ ಯಾರ ಪ್ರತಿಕ್ರಿಯೆಗೂ ನಿಲಿಕದ್ದೇ! ಆದರೂ ಅದನ್ನು ಕವನವನ್ನಾಗಿಸುವ ಒಂದು ಸಣ್ಣ ಪ್ರಯತ್ನವನ್ನಷ್ಟೇ ಮಾಡಿರುವೆ.

ಶ್ರೀಹರ್ಷ ಅವರೆ,

"ಅಮ್ಮಾ" ಎನ್ನುವ ಪದವೊಂದೇ ಸಾಕು ನಮ್ಮ ವಯಸ್ಸನ್ನೇ ಮರೆಯಿಸುತ್ತದೆ. ಧನ್ಯವಾದಗಳು.

ಕಾಕಾ,

ಕವನವನ್ನೋದಿ ಪ್ರತಿಕ್ರಿಯಿಸಿದ್ದಕ್ಕೆ ತಮಗೂ ಧನ್ಯವಾದಗಳು.

ಶಿವು ಅವರೆ,

ಕವಿತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ತಮ್ಮ ಛಾಯಾಕನ್ನಡಿ ತುಂಬಾ ಚೆನ್ನಾಗಿದೆ.

ಭಾರ್ಗವಿ ಹೇಳಿದರು...

ತೇಜಸ್ವಿನಿಯವರೇ.
ಒಳ್ಳೆಯ ಕವನಕ್ಕಾಗಿ ತುಂಬಾ ಧನ್ಯವಾದಗಳು. ವ್ಹಾವ್ , ಒಂದು ಫೋಟೋ ನೋಡಿಯೇ ಇಂತಹ ಕವಿತೆ ಬರೆಯುವ ನಿಮ್ಮ ಜಾಣ್ಮೆ ಮೆಚ್ಚುವಂತಹುದು. ಹೀಗೆ ಬರಿತಾ ಇರಿ.

Ramesh BV (ಉನ್ಮುಖಿ) ಹೇಳಿದರು...

ಹೌದು..
ಪ್ರಕೃತಿಯ ನಿರ್ಮಾಣವೇ ಇಂತು..
ಅಮ್ಮ.. ಎಂದರೆ ಸುಭದ್ರ ಜಗತ್ತು.