ಮಂಗಳವಾರ, ಅಕ್ಟೋಬರ್ 15, 2013

ಕಲ್ಲೆಂದು ಒಗೆಯದೇ..... ಕಾಪಿಟ್ಟೆ ಕನಸೊಂದ

ಸರಿಸುಮಾರು ಅರ್ಧ ರಾತ್ರಿ ಕಳೆದ ಮೇಲೇ ಇರಬೇಕು.. ಇಂಥದ್ದೊಂದು ಲಹರಿಯೋ, ಕಥೆಯೋ, ಚಿಂತನೆಯೋ, ಆಲೋಚನೆಯೋ, ಹುಚ್ಚು ಕಲ್ಪನೆಯೋ.. ಏನೋ ಒಂದು ತಲೆಯೊಳಗೆ ಮಿಣ ಮಿಣಗೆ ಹೊಳೆದು ಅರೆ ಎಚ್ಚರವಾಗಿದ್ದು. ತಲೆಯ ಮೂಲೆ ಮೂಲೆಯನ್ನೂ ಕೊರೆದು.. ಕೆರೆದು ಬೆಳೆಯ ತೊಡಗಿದಂತೇ... ಇನ್ನು ಅಸಾಧ್ಯ ಎಂದೆನಿಸಿ, ಆ ಅದನ್ನು ಬರೆದೇ ಬಿಡುವುದೆಂದು ನಿರ್ಧರಿಸಿದ್ದು.

ಅದು ಹೀಗಿತ್ತು....

ಇಬ್ಬರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆ ಇಬ್ಬರು ಗಂಡಸರೋ, ಹೆಂಗಸರೋ, ಒಂದು ಗಂಡು, ಒಂದು ಹೆಣ್ಣೋ.. ಸಂಬಂಧಿಗಳೋ, ಸ್ನೇಹಿತರೂ... ಎನ್ನುವುದೂ ಮೊದಲು ತೀರಾ ಅಸ್ಪಷ್ಟವಾಗಿತ್ತು... ಅರೆ ಎಚ್ಚರಗೊಂಡು ಹೊಳೆದದ್ದನ್ನು ಮತ್ತೆ ಮೆಲುಕುಹಾಕತೊಡಗಿದಂತೇ ಆ ಅವರಿಬ್ಬರು ಪರಸ್ಪರ ಪರಿಚಿತ ಗಂಡೇ ಇರಬೇಕೆಂದು ಕಲ್ಪಿಸಿಕೊಂಡೆ. ಹಾಗೇ ಆ ಗಂಡಸರಿಬ್ಬರು ದಾರಿಯಲ್ಲಿ ಸಾಗುತ್ತಿರುವಾಗಲೇ ಅವರಿಗೆ ಕಂಡಿದ್ದು ದೂರ‍ದಲ್ಲೆರಡು ಹೊಳೆವ ಕಲ್ಲುಗಳು(?). ಮುಖ್ಯವಾಗಿ ಅವೆರಡೂ ಕಲ್ಲುಗಳೋ, ಇಲ್ಲಾ ವಜ್ರದ ಹರಳುಗಳೋ, ಇಲ್ಲಾ ಒಂದು ಕಲ್ಲು, ಇನ್ನೊಂದು ವಜ್ರವೋ ಎಂದು ತಿಳಿಯದ ಸಂದಿಗ್ಧತೆ ಅವರಿಬ್ಬರೊಳಗೂ. ಆದರೆ ಸಾಣೆ ಹಿಡಿದು ನೋಡಲು ಅವರು ಜೊಹರಿಗಳಂತೂ ಆಗಿರಲಿಲ್ಲ ಅನ್ನುವುದು ಮಾತ್ರ ನನ್ನೊಳಗೆ ಸುಸ್ಪಷ್ಟ. ಸರಿ... ಹೊಳೆದದ್ದೆಲ್ಲಾ ಚಿನ್ನವಲ್ಲಾ ಎನ್ನುವುದು ಇಲ್ಲಿ ತಾಗಿಸಲಾಗದು. ಕಾರಣ ಅದು ಚಿನ್ನವಂತೂ ಅಲ್ಲವೇ ಅಲ್ಲಾ ಎನ್ನುವುದು ಅವರಿಬ್ಬರಿಗೂ ಗೊತ್ತು. ಕಣ್ಣು ಕೋರೈಸುತ್ತಾ ಹೊಳೆಯುತ್ತಿದ್ದ ಆ ಹರಳುಗಳಲ್ಲಿ ವಜ್ರ ಯಾವುದು? ಬಿಳಿ ಹರಳು ಯಾವುದು? ಇಲ್ಲಾ ಎರಡೂ ವಜ್ರಗಳೋ, ಹರಳುಗಳೋ ಇರಬೇಕೆಂದು ಬಗೆದು.. ಇರಲಿ.. ವಜ್ರಗಳೇ ಆಗಿರಬಾರದೇಕೆ ಎಂದು ಆಶಿಸುತ್ತಾ ಒಂದು ತನಗೆ, ಇನ್ನೊಂದು ನಿನಗೆ ಎಂದು ಎತ್ತಿಕೊಂಡು ಹೊರಟವರು ಮನೆಯ ಪಿಠಾರಿಯೊಳಗಿರುವ ವೆಲ್ವೆಟ್ ಬಟ್ಟೆಯೊಳಗಿಟ್ಟು ಭದ್ರವಾಗಿ ಬೀಗ ಜಡಿದಿದ್ದಾರೆ. 

ಹೊತ್ತು ತಂದಿದ್ದು ಏನೆಂದು ಮೊದಲು ಅರಿಯುವ ತವಕ ಇಬ್ಬರಿಗೂ. ಹಾಗೆ ಅರಿಯಲು ಅವರಿಗಿರುವುದೂ ಎರಡೇ ಎರಡು ದಾರಿ. ಒಂದೋ ವಜ್ರದ ವ್ಯಾಪಾರಿಗೆ ಕೊಡುವುದು... ಆದರೆ ಹಾಗೆ ಕೊಡುವಾತ ತುಂಬಾ ನಂಬಿಗಸ್ಥನಾಗಿದ್ದಿರಬೇಕು. ಇಲ್ಲಾ ಅಂದರೆ ಇವೆರಡನ್ನೂ ಅವನು ಸುಳ್ಳೇ ಪುಳ್ಳೇ ಬಿಳಿಯ ಹರಳೆಂದು ಶರಾ ಬರೆದು, ತಾವು ಬೇಸೆತ್ತು ಹೊರ ಬಿಸುಟಮೇಲೆ, ಕಾದು ಹೊತ್ತೊಯ್ಯಬಾರದೆಂದಿಲ್ಲ! ಎರಡರಲ್ಲಿ ಒಂದು ವಜ್ರವಾದರೂ ಮಾಲು ಅವನ ಜೇಬಿಗೇ ತಾನೆ? ಒಂದೊಮ್ಮೆ ಆತ ಸಾಚಾ ಆಗಿ ಒಂದು ವಜ್ರವೆಂದು ಹೇಳಿದರೂ ಕಷ್ಟವೇ! ಇಬ್ಬರಲ್ಲಿ ಒಬ್ಬರ ಹೆಣ ಯಾರಿಂದಲೂ ಬೀಳಬಹುದು.. ಇಲ್ಲಾ ಬದುಕು ಹೆಣಕ್ಕಿಂತ ಕಡೆಯಾಗಲೂ ಬಹುದು. ಹೀಗಾಗಿ ಮೊದಲ ಸಾಧ್ಯತೆಯೆಡೆ ಸಾಗುವುದು ಅವರಿಬ್ಬರಿಗೂ ಸರಿ ಬರಲಿಲ್ಲ.

ಇನ್ನು ಎರಡನೆಯ ಸಾಧ್ಯತೆ, ಎರಡೂ ಕಲ್ಲುಗಳನ್ನು ಪ್ರಾಣಿಗೋ, ಆಗದ ಹೋಗದ ಯಾರ ಕೈ, ಮೈ, ಕಾಲಿಗಾದರೂ, ಯಾವುದೀ ಮಾಯದಲ್ಲಿ ಗೀರಿಯೋ.. ಇಲ್ಲಾ ಅರೆದು ಕುಡಿಸಿಯೋ ನೋಡುವುದು. ಅದೂ ಕಷ್ಟವೇ.... ತುಸು ಪುಡಿಮಾಡಿದರೂ, ಅದು ವಜ್ರವೇ ಆಗಿಬಿಟ್ಟಲ್ಲಿ ಅಷ್ಟೇ ಚೂರು ಲುಕ್ಸಾನು ಆಗಿಬಿಡುವ ಭಯ! 

ಊಹೂಂ.. ಇವ್ಯಾವುದರ ಉಸಾಬರಿಯೂ ಬೇಡ... ಮಾರದಿದ್ದರೂ ವಜ್ರಕ್ಕೆ ಅದರದ್ದೇ ಬೆಲೆ ಇದ್ದೇ ಇರುವುದು.. ಸಧ್ಯ ತಮ ತಮಗೆ ಸಿಕ್ಕಿದ್ದು ವಜ್ರವೆಂದೇ ಬಗೆದು ಜೀವನ ಪೂರ್ತಿ ವಜ್ರದ ಮಾಲೀಕನಾಗಿ ಬದುಕಿ, ಕೊನೆಗೆ ವಜ್ರವಿರುವ ಸುಳಿಹೂ ಕೊಡದೇ ಸತ್ತುಹೋಗುವುದೆಂದು ನಿರ್ಧರಿಸಿದ ಅವರಿಬ್ಬರೂ ತಮ್ಮ ತಮ್ಮ ಪಿಠಾರಿಯನ್ನು ಮನೆಯ ಹಿತ್ತಲಲ್ಲಿ ಆಳಕ್ಕೆ ಅಗೆದು ಹೂತು ಹಾಕಿ ಬಿಟ್ಟರು.

----

ಹಾಗೆ ಹೂತು ಹಾಕುವಾಗಲೇ ಪೂರ್ತಿ ಎಚ್ಚರವಾದ ನನ್ನ ಕಣ್ಗಳು ಬಿಳಿ ಹರಳಿನ ಹುಡುಕಾಟದಲ್ಲಿ ತೊಡಗಿವೆ. ವಜ್ರಗಳಿಗಿಂತ ಬಿಳಿ ಕಲ್ಲುಗಳೇ ತುಂಬಾ ಲೇಸು.... ಯಾವ ಎಡರು ತೊಡರು, ಸಾಣೆ, ಸಾಕಣೆಯ ಕಷ್ಟಗಳಲಿಲ್ಲದೇ ಹಾಗೇ ಟೇಬಲಿನ ಮೇಲಿಟ್ಟುಕೊಂಡು ಸಪ್ತವರ್ಣಗಳ ಹಾಯಿಸಿಕೊಂಡು ಹಾಯಾಗಿರಬಹುದೆಂದು.

-ತೇಜಸ್ವಿನಿ