ಮಂಗಳವಾರ, ಸೆಪ್ಟೆಂಬರ್ 23, 2008

ನಾ ಮೆಚ್ಚಿದ ಕವಿತೆ-೨


ಕವಿ : ಜಿ. ಎಸ್. ಶಿವರುದ್ರಪ್ಪ

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
**ಇಲ್ಲಿ ಕವಿ ಪ್ರಕೃತಿಯಲ್ಲೇ ಸ್ತ್ರೀತ್ವವನ್ನು ಕಾಣುತ್ತಾ, ಹೆಣ್ಣು ಹಾಗೂ ಪ್ರಕೃತಿಯೊಳಗಿನ ಅವಿನಾಭಾವ ಸಂಬಂಧವನ್ನು ಕಾಣಿಸಿದ್ದಾರೆ. ತನ್ನ ಸೃಷ್ಟಿಯನ್ನು ಮಮತೆಯಿಂದ ಪೋಷಿಸುವ, ತುತ್ತನಿತ್ತು ಬೆಳೆಸುವ, ತಂಗಾಳಿಯ ಬೀಸಿ ಆಶ್ರಯ ನೀಡುವ, ವಾತ್ಸಲ್ಯ ಮಯಿ, ಜನನಿಯಾದ ಪ್ರಕೃತಿಯೇ ಒಂದು ಸ್ತ್ರೀ. ಇಂತಹ ಸ್ತ್ರೀಗೆ ಬೇರೆ ಹೆಸರು ಬೇಕೇ? ಸ್ತ್ರೀ ಅಂದರೆ ಅಷ್ಟೇ ಸಾಕೆ?**
ಈ ಕವಿತೆಯನ್ನು ಸಿ.ಅಶ್ವಥ್ ಅವರು ತುಂಬಾ ಸುಂದರವಾಗಿ ಹಾಗೂ ಭಾವಪೂರ್ಣವಾಗಿ ಹಾಡಿದ್ದಾರೆ.
ವಿ.ಸೂ : ಈ ಕವಿತೆಯನ್ನು ಬರೆದದ್ದು ಬಿ.ಆರ್.ಲಕ್ಷ್ಮಣ ರಾವ್ ಅಂತ ತಿಳಿದಿದ್ದೆ. ಒಂದಿಬ್ಬರನ್ನು ವಿಚಾರಿಸದಾಗ ಅವರೂ ಇದನ್ನೇ ಪುಷ್ಟೀಕರಿಸಿದ್ದರು. ಆದರೆ "ಬಾಲವನ" ಬ್ಲಾಗ್ ಅವರು ಜಿ.ಎಸ್.ಶಿವರುದ್ರಪ್ಪ ಎಂದು ಹೇಳಿದಾಗ ಪುನರ್‌ ಪರಿಶೀಲಿಸಲು, ನನ್ನ ತಪ್ಪಿನ ಅರಿವಾಯಿತು. ಆದ ತಪ್ಪನ್ನು ಸರಿಪಡಿಸಿಕೊಂಡು ಹಾಕಿರುವೆ.
-ತೇಜಸ್ವಿನಿ ಹೆಗಡೆ

ಭಾನುವಾರ, ಸೆಪ್ಟೆಂಬರ್ 7, 2008

ಸ್ವಗತ

ಯಾರು ಸಾಟಿ ಎನಗೆ?!

ಹೊರಗಿನ ಬೆಳಕಿನೊಡನೆ
ಒಳಗಿನ ಬೆಳಕಿನಾಟ
ಒಳಗೆ ಹೊರಗೆಲ್ಲಾ
ಬೆಡಗು-ಬೆಳಕಿನ ಚೆಲ್ಲಾಟ
ಜೊತೆಗೆ ಸೇರಿದೆ ನನ್ನ ತುಂಟಾಟ.

ತುಂಬಿ ಹೊರ ಚೆಲ್ಲಲ್ಲು
ಅಣಿಯಾಗಿ ನಿಂತಿಹ
ನನ್ನ ನಗೆ ಬುಗ್ಗೆಗಳು,
ಒಳಗಿಂದ ಹೊರಬರಲು
ಹೊರ ಬೆಳಕೇ ಮಬ್ಬು-ಮಂಕು,
ಒಳಗೆಲ್ಲಾ ತಂಪು-ಸೊಂಪು.

ಬಿಳಿ ಮೋಡಗಳೊಳಗಿಂದ
ಕರಿ ಚಂದ್ರರು ಇಣುಕುತಿಹರೋ,
ಕಪ್ಪು ಗೋಲಿಗಳೊಳಗಿಂದ
ಚುಕ್ಕಿ ತಾರೆಗಳು ಮಿನುಗುತಿಹವೋ!!
ರವಿಯೇ ಕಣ್ಣ ಬಿಂಬವಾಗಿ
ಎಳೆಯ ಕಿರಣ ಬೀರುತಿಹನೋ!!

ನನ್ನೊಳಗೆ ಆತ್ಮತೇಜ,
ನಿನ್ನೊಳಗೆ ಕ್ಷಣದ ಬೆಳಕು
ನನ್ನ ಜೊತೆ ಪೈಪೋಟಿಯೇ?!
ನಿನ್ನ ಬದುಕು ನನ್ನ ಕೈಲಿ
ನೀನು ಎನಗೆ ಸಾಟಿಯೇ?!

ಒಂದೇ ಕ್ಷಣ ಸಾಕು ನನಗೆ,
ನಿನ್ನ ಕೆಡವಿ ಹಾಕಲು,
ನೂಕಿ ನಿನ್ನ ಒಡೆಯಲು,
ಮೆಟ್ಟಿ ಕುಣಿದಾಡಲು,
ಬಿಡೆನು ನಿನ್ನ ಬೆಳಗಲು.

- ಅದಿತಿ ತೇಜಸ್ವಿನಿ ಹೆಗಡೆ :)
(ಫೋಟೋ ಮೇಲೆ ಕ್ಲಿಕ್ಕಿಸಿದರೆ ಚಿತ್ರ ದೊಡ್ಡದಾಗಿ ಕಾಣುವುದು)

ಮಂಗಳವಾರ, ಸೆಪ್ಟೆಂಬರ್ 2, 2008

ಮರೆಯಲಾಗದ ನೆನಪು - ೧

ನಮ್ಮ ಬಾಲ್ಯದಲ್ಲಿ ಘಟಿಸುವ ಕೆಲವೊಂದು ಘಟೆನೆಗಳು ಆಗ ಅಷ್ಟೊಂದು ಪ್ರಮುಖವೆನಿಸದಿದ್ದರೂ, ನಾವು ಬೆಳೆದಂತೆ(ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕೂಡಾ) ಆ ಘಟನೆಗಳು ಹತ್ತು ಹಲವು ಆಕಾರಗಳನ್ನು, ಕಲ್ಪನೆಗಳನ್ನು, ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ನನ್ನ ಸುಪ್ತ ಮನದೊಳಗೆಲ್ಲೋ ಅಡಗಿ ಅಚ್ಚಳಿಯಿದೇ ಉಳಿದ ಇಂತಹ ಮರೆಯಲಾಗದ ನೆನಪುಗಳನ್ನು ಆಗಾಗ ಮಾನಸದಲ್ಲಿ ಕಾಣಿಸುವ ಪುಟ್ಟ ಪ್ರಯತ್ನಕ್ಕೆ ನಾಂದಿ ಹಾಡುತ್ತಿದ್ದೇನೆ. ಇಲ್ಲಿ ನೀವು ನಿಮ್ಮ ಮರೆಯಲಾಗದ ನೆನಪುಗಳನ್ನೂ ಮುಕ್ತವಾಗಿ ಹಂಚಿಕೊಳ್ಳಬಹುದು.
----------------------------------------
ಆಗ ನನಗೆ ಸುಮಾರು ೬-೭ ವರ್ಷಗಳಷ್ಟೇ! ನಾವಾಗ ಮಂಗಳೂರಿನ ಮಣ್ಣಗುಡ್ದೆಯಲ್ಲಿರುವ ಮಠದಗಣಿಯಲ್ಲಿರುವ ವಠಾರದಲ್ಲಿ ವಾಸಿಸುತ್ತಿದ್ದೆವು. ನಮ್ಮ ಮನೆಯ ಪಕ್ಕದಲ್ಲೊಂದು ಮನೆಯಿದ್ದರೆ, ಮನೆಯ ಮುಂದೆ ನಂದಿ ಬಟ್ಟಲು ಗಿಡದ ಹಿಂಡೊಂದಿತ್ತು. ಅದರ ಪಕ್ಕದಲ್ಲೇ ಕೇದಿಗೆ ಮರವೊಂದು ಹಬ್ಬಿತ್ತು. ಅದರಾಚೆ ಒಂದು ಕುಡಿಯುವ ಬಾವಿ. ಅದರ ನಂತರ ಒಂದು ಮಣ್ಣಿನ ಧರೆ ಇದ್ದರೆ, ಮೇಲೆ ಮತ್ತೆ ೩-೪ ಮನೆಗಳಿದ್ದವು.(ಈಗ ಆ ಪ್ರದೇಶದ ಸ್ವರೂಪವೇ ಬದಲಾಗಿದೆ ಬಿಡಿ).
ಮಳೆಗಾಲವಾಗಿದ್ದರಿಂದ ಆ ಸಮಯದಲ್ಲಿ ಬಾವಿಯ ತುಂಬಾ ನೀರು ತುಂಬಿತ್ತು. ಆ ದಿನ ನನ್ನ ಪ್ರೀತಿಯ ಸೋದರಮಾವ ಮನೆಗೆ ಬಂದಿದ್ದರು. ರಾತ್ರಿ ಸುಮಾರು ಒಂಭತ್ತು ಗಂಟೆಯ ಸಮಯ. ಅಪ್ಪನ ಬರುವಿಕೆಗಾಗಿ ಕಾಯುತ್ತಾ ನಾನು ಮನೆಯ ಮುಂದಿನ ಮೆಟ್ಟಿಲ ಮೇಲೆ ಕೂತಿದ್ದೆ. ಅಮ್ಮ, ಮಾವ ಒಳಗಡೆ ಏನೋ ಮಾತಾಡುತ್ತಿದ್ದರು. ಪಕ್ಕದ ಮನೆಯವರೂ ಊರಲ್ಲಿರಲಿಲ್ಲ. ಇದಕ್ಕಿದ್ದಂತೆ ಕರೆಂಟ್ ಹೋಯಿತು. ಆಕಾಶದಲ್ಲಿ ಆಗಾಗ ಮೂಡುತ್ತಿದ್ದ ಮಿಂಚಿನ ಬೆಳಕು ಮಾತ್ರವಿತ್ತು. ಒಳಗಿನಿಂದ ಅಮ್ಮ ನನ್ನ ಕರೆಯತೊಡಗಲು, ಇನ್ನೇನೂ ಹೋಗಬೇಕೆನ್ನುವಷ್ಟರಲ್ಲಿ.. ಬಿಳಿ ಬಟ್ಟೆಯನ್ನುಟ್ಟ(ಬಹುಶಃ ಬಿಳಿ ಬಣ್ಣದ ಲುಂಗಿ ಸುತ್ತಿತ್ತು) ವ್ಯಕ್ತಿಯೋರ್ವ ಬಾವಿಯಕಡೆ ಬರಲು ಕುತೂಹಲದಿಂದ ನೋಡತೊಡಗಿದೆ. ಕತ್ತಲು ತುಂಬಿದ್ದರಿಂದ ಮುಖದ ಪರಿಚಯವಾಗಲಿಲ್ಲ. ನೋಡುತ್ತಿದ್ದಂತೆ ನಿಮಿಷ ಮಾತ್ರದಲ್ಲಿ ಆತ ಬಾವಿಗೆ ಹಾರಿಬಿಟ್ಟ! ಆತ್ಮಹತ್ಯೆ ಎಂದರೇನು.. ಅದರಿಂದೇನಾಗುವುದೆಂದೂ ತಿಳಿಯದ ವಯಸ್ಸು. ಆದರೂ ಏನೋ ಆಗಬಾರದ್ದು ಆಯಿತೆಂದು ಮಾತ್ರ ತಿಳಿದೆ. ಒಳ ಓಡಿ ಅಮ್ಮನಿಗೆ ಹೇಳಿದರೆ ಆಕೆ ಮೊದಲು ನಂಬಲೇ ಇಲ್ಲ. ಯಾವಾಗ ಬಾವಿಯೊಳಗಿಂಬ ಬೊಬ್ಬೆ ಕೇಳಿತೋ ಅಮ್ಮ ಹಾಗೂ ಮಾವ ಬಾವಿಯ ಬಳಿಗೆ ಓಡಿದರು. ತಡಮಾಡದೇ ಮಾವ ಮೇಲಿನ ಮನೆಯವರನ್ನೆಲ್ಲಾ ಕೂಗಿ ಕರೆದರು. ಅಂಬ್ಯುಲೆನ್ಸ್ ಹಾಗೂ ಪೋಲಿಸರಿಗೂ ಕರೆಕೊಟ್ಟಾಯಿತು. ಕೆಲವೇ ತಾಸುಗಳಲ್ಲಿ ಕ್ರೇನ್ ತರಿಸಿ ಆ ವ್ಯಕ್ತಿಯ ಶವವನ್ನು ತೆಗೆಯಲಾಯಿತು.

ಆಗ ನಾವೆಷ್ಟು ಹೆದರಿದ್ದೆವೆಂದರೆ ರತ್ರೋ ರಾತ್ರಿ ಆಟೋ ಮಾಡಿಸಿ ಕೊಂಡು ಮಾವನ ಮನೆಯಾದ ಕೊಣಾಜೆಗೆ ಹೋಗಿಬಿಟ್ಟೆವು. ೨-೩ ದಿವನಸಗಳ ನಂತರ ಮನೆಗೆ ಬರುವಷ್ಟರಲ್ಲಿ ಸುದ್ದಿ ತಣ್ಣಗಾಗಿತ್ತು. ಪಕ್ಕದ ಮನೆಯವರಲ್ಲಿ ಆತನ ಕುರಿತು ಹಾಗೂ ಆತನ ಸಾವಿನ ಕುರಿತು ವಿಚಾರಿಸಿದಾಗ ತಿಳಿದುಬಂದದ್ದಿಷ್ಟು---

ಆ ವ್ಯಕ್ತಿ ಶಟ್ಟರ ಚಿನ್ನದ ಅಂಗಡಿಯಲ್ಲಿ ಕೆಲಸಮಾಡಿತ್ತಿದ್ದವನಂತೆ. ದೂರದ ಊರಿನವನಾಗಿದ್ದರಿಂದ ಅವರ ಮೆನೆಯಲ್ಲೇ ಉಳಿಸಿಕೊಳ್ಳಲಾಗಿತ್ತು. ಆತನ ವಯಸ್ಸು ಕೇವಲ ೧೯ ಮಾತ್ರ! ಕಲದಿನಗಳಿಂದ ಶೆಟ್ಟರಿಗೆ ಆತನ ಮೇಲೆ ಗುಮಾನಿಯಿತ್ತಂತೆ. ಚಿನ್ನವನ್ನು ಕಳುತ್ತಿದ್ದಾನೆಂದು. ಆವತ್ತು ಅವನನ್ನು ವಿಚಾರಿಸಲು, ಆತ ಅವಮಾನದಿಂದಲೋ ಇಲ್ಲಾ ಹೆದರಿಯೋ ಎಸಿಡ್ ಕುಡಿದು ಬಿಟ್ಟನಂತೆ. ಅದರ ಉರಿಯನ್ನು ತಾಳಲಾಗದೇ ಬಾವಿಗೆ ಹಾರಿಕೊಂಡುಬಿಟ್ಟ.
ಮಾವನ ಮನೆಯಿಂದ ಬಂದ ಮೇಲೂ ನಾನು ಬಹಳಷ್ಟು ದಿನ ಹೆದರಿಕೊಂಡಿದ್ದೆನಂತೆ. ಆದರೆ ಸಮಯ ಕಳೆದಂತೆ ಭಯದ ಜಾಗದಲ್ಲಿ ಹಲವಾರು ಕುತೂಹಲಗಳು, ಕಲ್ಪನೆಗಳು, ಉತ್ತರವಿಲ್ಲದ ಪ್ರಶ್ನೆಗಳು ತುಂಬಿಕೊಳ್ಳ ತೊಡಗಿದವು. ಈಗಲೂ ಇವೆಲ್ಲಾ ನನ್ನ ಮಾನಸದ ಮೂಲೆಯಲ್ಲೆಲ್ಲೋ ಬೆಚ್ಚಗೆ ಕುಳಿತಿವೆ. ಆಗಾಗ ಧುತ್ತೆಂದು ಪ್ರಶ್ನೆಗಳು ಕಾಡುತ್ತಿರುತ್ತವೆ.. ಮುಗಿಯದ ಕಲ್ಪನೆಗಳು ಹಾರುತ್ತಿರುತ್ತವೆ...


ಅಲ್ಲೇ ಸಮೀಪ ಕುಳಿತಿದ್ದ ನನ್ನನ್ನು ಆತ ಬಾವಿಗೆ ಹಾರುವ ಮೊದಲೇನಾದರೂ ನೋಡಿದ್ದನೇ? ಆಗ ಅವನ ಮನಃಸ್ಥಿತಿ ಹೇಗಿದ್ದಿರಬಹುದು? ನನ್ನ ನೋಡಿದ್ದರೆ ಆ ಕ್ಷಣ ಅವನಿಗೇನನಿಸಿರಬಹುದು? ಅಷ್ಟು ಎಳೆವೆಯಲ್ಲೇ ಈ ರೀತಿ ದುರಂತ ಮರಣ ಕಾಣುವಂತಹ ಸ್ಥಿತಿ ನಿಜಕ್ಕೂ ಏನಾಗಿರಬಹುದು?ಅವರ ಆಪಾದನೆಯಿಂದ ಮಾತ್ರ ಆತ ಸತ್ತನೇ? ಅವನ ಶವವನ್ನೊಯ್ಯಲು ಆತನ ಮನೆಯವರಾರೂ ಯಾಕೆ ಬರಲಿಲ್ಲ? ಶೆಟ್ಟರೇಕೆ ವರ್ಷ ಕಳೆಯುವುದೊರಳಗೆ ಅಂಗಡಿ, ಮನೆ ಎಲ್ಲಾ ಮಾರಿ ಅದೃಶ್ಯರಾದರು?... ಇತ್ಯಾದಿ...ಇತ್ಯಾದಿ.

ಕಲ್ಪನೆಗಳಿಗೆ ಕೊನೆಯಿಲ್ಲ.. ಆದರೆ ನಂಬಿದರೆ ನಂಬಿ ಬಿಟ್ಟರೆ ಬಿಡಿ.. ಇದು ಕಲ್ಪನೆಯಲ್ಲ.. ನನ್ನೊಡನೆ ನಡೆದ ಬಾಲ್ಯದಲ್ಲಿ ನಾ ಕಂಡ ಸತ್ಯಘಟೆನೆ!!