ಮಂಗಳವಾರ, ಸೆಪ್ಟೆಂಬರ್ 2, 2008

ಮರೆಯಲಾಗದ ನೆನಪು - ೧

ನಮ್ಮ ಬಾಲ್ಯದಲ್ಲಿ ಘಟಿಸುವ ಕೆಲವೊಂದು ಘಟೆನೆಗಳು ಆಗ ಅಷ್ಟೊಂದು ಪ್ರಮುಖವೆನಿಸದಿದ್ದರೂ, ನಾವು ಬೆಳೆದಂತೆ(ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕೂಡಾ) ಆ ಘಟನೆಗಳು ಹತ್ತು ಹಲವು ಆಕಾರಗಳನ್ನು, ಕಲ್ಪನೆಗಳನ್ನು, ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ನನ್ನ ಸುಪ್ತ ಮನದೊಳಗೆಲ್ಲೋ ಅಡಗಿ ಅಚ್ಚಳಿಯಿದೇ ಉಳಿದ ಇಂತಹ ಮರೆಯಲಾಗದ ನೆನಪುಗಳನ್ನು ಆಗಾಗ ಮಾನಸದಲ್ಲಿ ಕಾಣಿಸುವ ಪುಟ್ಟ ಪ್ರಯತ್ನಕ್ಕೆ ನಾಂದಿ ಹಾಡುತ್ತಿದ್ದೇನೆ. ಇಲ್ಲಿ ನೀವು ನಿಮ್ಮ ಮರೆಯಲಾಗದ ನೆನಪುಗಳನ್ನೂ ಮುಕ್ತವಾಗಿ ಹಂಚಿಕೊಳ್ಳಬಹುದು.
----------------------------------------
ಆಗ ನನಗೆ ಸುಮಾರು ೬-೭ ವರ್ಷಗಳಷ್ಟೇ! ನಾವಾಗ ಮಂಗಳೂರಿನ ಮಣ್ಣಗುಡ್ದೆಯಲ್ಲಿರುವ ಮಠದಗಣಿಯಲ್ಲಿರುವ ವಠಾರದಲ್ಲಿ ವಾಸಿಸುತ್ತಿದ್ದೆವು. ನಮ್ಮ ಮನೆಯ ಪಕ್ಕದಲ್ಲೊಂದು ಮನೆಯಿದ್ದರೆ, ಮನೆಯ ಮುಂದೆ ನಂದಿ ಬಟ್ಟಲು ಗಿಡದ ಹಿಂಡೊಂದಿತ್ತು. ಅದರ ಪಕ್ಕದಲ್ಲೇ ಕೇದಿಗೆ ಮರವೊಂದು ಹಬ್ಬಿತ್ತು. ಅದರಾಚೆ ಒಂದು ಕುಡಿಯುವ ಬಾವಿ. ಅದರ ನಂತರ ಒಂದು ಮಣ್ಣಿನ ಧರೆ ಇದ್ದರೆ, ಮೇಲೆ ಮತ್ತೆ ೩-೪ ಮನೆಗಳಿದ್ದವು.(ಈಗ ಆ ಪ್ರದೇಶದ ಸ್ವರೂಪವೇ ಬದಲಾಗಿದೆ ಬಿಡಿ).
ಮಳೆಗಾಲವಾಗಿದ್ದರಿಂದ ಆ ಸಮಯದಲ್ಲಿ ಬಾವಿಯ ತುಂಬಾ ನೀರು ತುಂಬಿತ್ತು. ಆ ದಿನ ನನ್ನ ಪ್ರೀತಿಯ ಸೋದರಮಾವ ಮನೆಗೆ ಬಂದಿದ್ದರು. ರಾತ್ರಿ ಸುಮಾರು ಒಂಭತ್ತು ಗಂಟೆಯ ಸಮಯ. ಅಪ್ಪನ ಬರುವಿಕೆಗಾಗಿ ಕಾಯುತ್ತಾ ನಾನು ಮನೆಯ ಮುಂದಿನ ಮೆಟ್ಟಿಲ ಮೇಲೆ ಕೂತಿದ್ದೆ. ಅಮ್ಮ, ಮಾವ ಒಳಗಡೆ ಏನೋ ಮಾತಾಡುತ್ತಿದ್ದರು. ಪಕ್ಕದ ಮನೆಯವರೂ ಊರಲ್ಲಿರಲಿಲ್ಲ. ಇದಕ್ಕಿದ್ದಂತೆ ಕರೆಂಟ್ ಹೋಯಿತು. ಆಕಾಶದಲ್ಲಿ ಆಗಾಗ ಮೂಡುತ್ತಿದ್ದ ಮಿಂಚಿನ ಬೆಳಕು ಮಾತ್ರವಿತ್ತು. ಒಳಗಿನಿಂದ ಅಮ್ಮ ನನ್ನ ಕರೆಯತೊಡಗಲು, ಇನ್ನೇನೂ ಹೋಗಬೇಕೆನ್ನುವಷ್ಟರಲ್ಲಿ.. ಬಿಳಿ ಬಟ್ಟೆಯನ್ನುಟ್ಟ(ಬಹುಶಃ ಬಿಳಿ ಬಣ್ಣದ ಲುಂಗಿ ಸುತ್ತಿತ್ತು) ವ್ಯಕ್ತಿಯೋರ್ವ ಬಾವಿಯಕಡೆ ಬರಲು ಕುತೂಹಲದಿಂದ ನೋಡತೊಡಗಿದೆ. ಕತ್ತಲು ತುಂಬಿದ್ದರಿಂದ ಮುಖದ ಪರಿಚಯವಾಗಲಿಲ್ಲ. ನೋಡುತ್ತಿದ್ದಂತೆ ನಿಮಿಷ ಮಾತ್ರದಲ್ಲಿ ಆತ ಬಾವಿಗೆ ಹಾರಿಬಿಟ್ಟ! ಆತ್ಮಹತ್ಯೆ ಎಂದರೇನು.. ಅದರಿಂದೇನಾಗುವುದೆಂದೂ ತಿಳಿಯದ ವಯಸ್ಸು. ಆದರೂ ಏನೋ ಆಗಬಾರದ್ದು ಆಯಿತೆಂದು ಮಾತ್ರ ತಿಳಿದೆ. ಒಳ ಓಡಿ ಅಮ್ಮನಿಗೆ ಹೇಳಿದರೆ ಆಕೆ ಮೊದಲು ನಂಬಲೇ ಇಲ್ಲ. ಯಾವಾಗ ಬಾವಿಯೊಳಗಿಂಬ ಬೊಬ್ಬೆ ಕೇಳಿತೋ ಅಮ್ಮ ಹಾಗೂ ಮಾವ ಬಾವಿಯ ಬಳಿಗೆ ಓಡಿದರು. ತಡಮಾಡದೇ ಮಾವ ಮೇಲಿನ ಮನೆಯವರನ್ನೆಲ್ಲಾ ಕೂಗಿ ಕರೆದರು. ಅಂಬ್ಯುಲೆನ್ಸ್ ಹಾಗೂ ಪೋಲಿಸರಿಗೂ ಕರೆಕೊಟ್ಟಾಯಿತು. ಕೆಲವೇ ತಾಸುಗಳಲ್ಲಿ ಕ್ರೇನ್ ತರಿಸಿ ಆ ವ್ಯಕ್ತಿಯ ಶವವನ್ನು ತೆಗೆಯಲಾಯಿತು.

ಆಗ ನಾವೆಷ್ಟು ಹೆದರಿದ್ದೆವೆಂದರೆ ರತ್ರೋ ರಾತ್ರಿ ಆಟೋ ಮಾಡಿಸಿ ಕೊಂಡು ಮಾವನ ಮನೆಯಾದ ಕೊಣಾಜೆಗೆ ಹೋಗಿಬಿಟ್ಟೆವು. ೨-೩ ದಿವನಸಗಳ ನಂತರ ಮನೆಗೆ ಬರುವಷ್ಟರಲ್ಲಿ ಸುದ್ದಿ ತಣ್ಣಗಾಗಿತ್ತು. ಪಕ್ಕದ ಮನೆಯವರಲ್ಲಿ ಆತನ ಕುರಿತು ಹಾಗೂ ಆತನ ಸಾವಿನ ಕುರಿತು ವಿಚಾರಿಸಿದಾಗ ತಿಳಿದುಬಂದದ್ದಿಷ್ಟು---

ಆ ವ್ಯಕ್ತಿ ಶಟ್ಟರ ಚಿನ್ನದ ಅಂಗಡಿಯಲ್ಲಿ ಕೆಲಸಮಾಡಿತ್ತಿದ್ದವನಂತೆ. ದೂರದ ಊರಿನವನಾಗಿದ್ದರಿಂದ ಅವರ ಮೆನೆಯಲ್ಲೇ ಉಳಿಸಿಕೊಳ್ಳಲಾಗಿತ್ತು. ಆತನ ವಯಸ್ಸು ಕೇವಲ ೧೯ ಮಾತ್ರ! ಕಲದಿನಗಳಿಂದ ಶೆಟ್ಟರಿಗೆ ಆತನ ಮೇಲೆ ಗುಮಾನಿಯಿತ್ತಂತೆ. ಚಿನ್ನವನ್ನು ಕಳುತ್ತಿದ್ದಾನೆಂದು. ಆವತ್ತು ಅವನನ್ನು ವಿಚಾರಿಸಲು, ಆತ ಅವಮಾನದಿಂದಲೋ ಇಲ್ಲಾ ಹೆದರಿಯೋ ಎಸಿಡ್ ಕುಡಿದು ಬಿಟ್ಟನಂತೆ. ಅದರ ಉರಿಯನ್ನು ತಾಳಲಾಗದೇ ಬಾವಿಗೆ ಹಾರಿಕೊಂಡುಬಿಟ್ಟ.
ಮಾವನ ಮನೆಯಿಂದ ಬಂದ ಮೇಲೂ ನಾನು ಬಹಳಷ್ಟು ದಿನ ಹೆದರಿಕೊಂಡಿದ್ದೆನಂತೆ. ಆದರೆ ಸಮಯ ಕಳೆದಂತೆ ಭಯದ ಜಾಗದಲ್ಲಿ ಹಲವಾರು ಕುತೂಹಲಗಳು, ಕಲ್ಪನೆಗಳು, ಉತ್ತರವಿಲ್ಲದ ಪ್ರಶ್ನೆಗಳು ತುಂಬಿಕೊಳ್ಳ ತೊಡಗಿದವು. ಈಗಲೂ ಇವೆಲ್ಲಾ ನನ್ನ ಮಾನಸದ ಮೂಲೆಯಲ್ಲೆಲ್ಲೋ ಬೆಚ್ಚಗೆ ಕುಳಿತಿವೆ. ಆಗಾಗ ಧುತ್ತೆಂದು ಪ್ರಶ್ನೆಗಳು ಕಾಡುತ್ತಿರುತ್ತವೆ.. ಮುಗಿಯದ ಕಲ್ಪನೆಗಳು ಹಾರುತ್ತಿರುತ್ತವೆ...


ಅಲ್ಲೇ ಸಮೀಪ ಕುಳಿತಿದ್ದ ನನ್ನನ್ನು ಆತ ಬಾವಿಗೆ ಹಾರುವ ಮೊದಲೇನಾದರೂ ನೋಡಿದ್ದನೇ? ಆಗ ಅವನ ಮನಃಸ್ಥಿತಿ ಹೇಗಿದ್ದಿರಬಹುದು? ನನ್ನ ನೋಡಿದ್ದರೆ ಆ ಕ್ಷಣ ಅವನಿಗೇನನಿಸಿರಬಹುದು? ಅಷ್ಟು ಎಳೆವೆಯಲ್ಲೇ ಈ ರೀತಿ ದುರಂತ ಮರಣ ಕಾಣುವಂತಹ ಸ್ಥಿತಿ ನಿಜಕ್ಕೂ ಏನಾಗಿರಬಹುದು?ಅವರ ಆಪಾದನೆಯಿಂದ ಮಾತ್ರ ಆತ ಸತ್ತನೇ? ಅವನ ಶವವನ್ನೊಯ್ಯಲು ಆತನ ಮನೆಯವರಾರೂ ಯಾಕೆ ಬರಲಿಲ್ಲ? ಶೆಟ್ಟರೇಕೆ ವರ್ಷ ಕಳೆಯುವುದೊರಳಗೆ ಅಂಗಡಿ, ಮನೆ ಎಲ್ಲಾ ಮಾರಿ ಅದೃಶ್ಯರಾದರು?... ಇತ್ಯಾದಿ...ಇತ್ಯಾದಿ.

ಕಲ್ಪನೆಗಳಿಗೆ ಕೊನೆಯಿಲ್ಲ.. ಆದರೆ ನಂಬಿದರೆ ನಂಬಿ ಬಿಟ್ಟರೆ ಬಿಡಿ.. ಇದು ಕಲ್ಪನೆಯಲ್ಲ.. ನನ್ನೊಡನೆ ನಡೆದ ಬಾಲ್ಯದಲ್ಲಿ ನಾ ಕಂಡ ಸತ್ಯಘಟೆನೆ!!

13 ಕಾಮೆಂಟ್‌ಗಳು:

sunaath ಹೇಳಿದರು...

ನಮ್ಮ ಬಾಲ್ಯದಲ್ಲಿ ನಡೆದ ಘಟನೆಗಳು ನಮ್ಮ ಮನಸ್ಸನ್ನು ಯಾವ ರೀತಿಯಲ್ಲಿ ಆವರಿಸುತ್ತವೆ, ಅಲ್ಲವೆ? ನಾನು ಸ್ವತಃ ಯಾವುದೇ ದುರಂತವನ್ನು ಕಂಡಿಲ್ಲ. ಆದರೆ ದುರಂತದ ದುಃಖವನ್ನು ಅನುಭವಿಸಿದ್ದೇನೆ.
ನನ್ನ ಸಹಪಾಠಿ ರಾಮಚಂದ್ರ ಭಟ್ಟ ಇವನು ಸಂಡೂರಿನ ಸ್ಟೀಲ್ ಫ್ಯಾಕ್ಟರಿಯಲ್ಲಿ ಎಂಜಿನೀಯರ್ ಆಗಿದ್ದವನು,ಅಲ್ಲಿ ಯಾರದೋ ಮನೆಯಲ್ಲಿ ಜರುಗಿದ gas accidentನಲ್ಲಿ ಸಹಾಯ ಮಾಡಲು ಹೋಗಿ, ತಾನೇ burns injuryಯಿಂದ ಅಸು ನೀಗಿದ.(ಸುಮಾರು ೨೦ ವರ್ಷಗಳ ಹಿಂದೆ.)
ಇದು ನನ್ನ ಮನಸ್ಸನ್ನು ಯಾವಾಗಲೂ ಹಿಂಡುವ ದುರಂತ.
ನಿಮ್ಮ ಲೇಖನ ಚೆನ್ನಾಗಿದೆ. ಇನ್ನೂ ಹೆಚ್ಚು ಲೇಖನಗಳು ಈ ಅಂಕಣದಲ್ಲಿ ಬರಲಿ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜಸ್ವಿನಿ...
ಸಾವು ನೈಜವಾಗಿದ್ದರೂ ಸದಾ ನಿಗೂಢವೇ ಅಲ್ಲವೇ? ಸಾವೇ ನಿಗೂಢವಾಗಿರುವಾಗ ಇಂತಹ ನಿಗೂಢ ಸಾವು ಮತ್ತಷ್ಟು ಭಯ ತರಿಸುತ್ತವೆ.
ನಿಗೂಢ ಸಾವಿಗೆ ನಿರಪರಾಧಿ ಸಾಕ್ಷಿಗಳಾಗಿದ್ದ ಪಕ್ಷ ನಿಗೂಢವಾಗಿದ್ದಷ್ಟೂ ಒಳಿತು ಅನ್ನಿಸಿಬಿಡಬಹುದು.
ಇಂತಹ ವಾಸ್ತವಗಳನ್ನು ಕಲ್ಪನೆಯನ್ನಿಷ್ಟು ಸೇರಿಸಿ ಹೆಣೆದರೆ ವಾಸ್ತವಕ್ಕೆ ಅತಿ ಹತ್ತಿರದ ಚಂದದ ಕಥೆಯಾಗಬಲ್ಲುದು.

ಪ್ರೀತಿಯಿಂದ,
-ಶಾಂತಲಾ ಭಂಡಿ.

Sushrutha Dodderi ಹೇಳಿದರು...

I second Shanthalakka.. ಇಂತಹ ಘಟನೆ ಇಟ್ಕೊಂಡು ಚಂದ ಕಥೆ ಬರೀಬಹುದು.. ತೇಜಕ್ಕ ಬರೀಲಿ ಅನ್ನೋದು ನನ್ನ ಆಸೆ..

ತೇಜಸ್ವಿನಿ ಹೆಗಡೆ ಹೇಳಿದರು...

@ಸುನಾಥ ಕಾಕಾ,

ನಿಮ್ಮ ಹಾರೈಕೆಗೆ ಹಾಗೂ ಪ್ರೋತ್ಸಾಹದ ನುಡಿಗಳಿಗೆ ತುಂಬಾ ಧನ್ಯವಾದಗಳು.

@ಶಾಂತಲಾ ಹಾಗೂ ಸುಶ್ರುತು,

ನನಗೂ ಅನ್ನಿಸಿದ್ದಿದೆ.. ಕಥೆ ಬರೆದರೆ ಚೆನ್ನ ಎಂದು. ಆದರೆ ತೀರಾ ವಾಸ್ತವವಾಗಿರುವುದರಿಂದ ಅದೂ ಅಲ್ಲದೇ ನಾನೇ ಸ್ವತಃ ನೋಡಿದ್ದರಿಂದ ಅದೇಕೋ ಎಂತೋ ಕಲ್ಪನೆಗಳನ್ನು ಸೇರಿಸಲೇನೋ ಹಿಂಜರಿಕೆ.. ಆದರೂ ನೋಡೋಣ. ಪ್ರಯತ್ನಿಸುವೆ.. ನಿಮ್ಮಗಳ ಪ್ರೋತ್ಸಾಹ ಹೇಗಿದ್ದರೂ ನನ್ನ ಜೊತೆ ಇದೆಯಲ್ಲಾ :) ತುಂಬಾ ಧನ್ಯವಾದಗಳು.

ವಿ.ರಾ.ಹೆ. ಹೇಳಿದರು...

ಈ ಬದುಕು ಅನ್ನೋದು ಎಷ್ಟು ವಿಚಿತ್ರವೋ ಸಾವು ಅನ್ನೋದು ಅದಕ್ಕಿಂತಲೂ ಇನ್ನೂ ವಿಚಿತ್ರ ಅಲ್ಲವೇ! ಯಾವ ಕ್ಷಣದಲ್ಲಿ ಬರತ್ತೋ, ಹೇಗೆ ಬರತ್ತೋ!

ಭಾರ್ಗವಿ ಹೇಳಿದರು...

ತೇಜಸ್ವಿನಿ ಯವರೇ
ನಿಜ ಘಟನೆಹೇಗೆಲ್ಲಾ ಇರುತವೆ ಅಲ್ಲವಾ. ಇದನ್ನು ಓದಿದ ಮೇಲೆ ನಾನು ಕಣ್ಣಾರೆ ನೋಡಿದ ಘಟನೆ ಬರೆಯಲೇ ಬೇಕು ಅನ್ನಿಸಿತು. ನೆನಪಿರುವಂತೆ ನಾನು ೪ ಅಥವಾ ೫ ನೆ ಕ್ಲಾಸ್ ಲ್ಲಿ ಇದ್ದೆ . ನಮ್ಮ ಮನೆ ಇದ್ದ ರೋಡ್ ಕೊನೆ ಮನೆಯಲ್ಲಿ ಇದ್ದ ಆಂಟಿ ಸತ್ತು ಹೋದರಂತೆ ಅಂತ ಸುದ್ದಿ ಬಂತು. ಅಲ್ಲಿಂದ ಶುರುವಾಯ್ತು ನೋಡಿ ಹಾಗಂತೆ ಹೀಗಂತೆ ಅಂತೆ ಕಂತೆ. ನನ್ನನ್ನು ಶವ ನೋಡಲು ಹೋಗಬಾರದು ಅಂತ ಹೇಳಿದ್ದು ನೆನಪಿದೆ ಆದ್ರೆ ಕುತೂಹಲ ಕದ್ದು ಮುಚ್ಚಿ ನೋಡೇ ಬಿಟ್ಟೆ.ಆಗ ಅಲ್ಲಿದ್ದ ಜನ ಮಾತಾಡ್ತಾ ಇದ್ದದ್ದು ಆ ಆಂಟಿಯ ಜೀವಂತ ಹಾಗು ಶವವಾಗಿ ಅಲಂಕರಿಸಿದ ಆ ಮುಖ ಇನ್ನೂ ಚನ್ನಾಗಿ ನೆನಪಿದೆ. ಆತ್ಮಹತ್ಯೆ ಮಾಡಿಕೊಂಡಿದ್ದರು, ಆಕೆಯ ಗಂಡ ಯಾವಾಗಲೂ ಕುಡೀತ ಇದ್ದ. ಕೆಟ್ಟದಾಗಿ ಬೈದು ಹೊಡೀತ ಇದ್ದನಂತೆ .ಮತ್ತೆ ಏನೇನೋ (ಆಕೆ ಮಾತ್ರ ತುಂಬಾ ಸಾಫ್ಟ್ . ಮಾತು ಮತ್ತೊಬರಿಗೆ ಕೇಳಾ ಇರ್ಲಿಲ್ಲ . ನೋಡಲು ಅಷ್ಟೆ ಚೆಂದ ನಾನು ಆ ಆಂಟಿ ಎಷ್ಟು ಒಳ್ಳೆಯವರು ಅಂತಾ ಇದ್ದೆ. ಈಗ್ಲೂ ಬೇಜಾರಾಗುತ್ತೆ. ) ಇದ್ದು ಜಯಿಸ ಬಹುದಿತ್ತು. ಹಾಗೆ ಹೀಗೆ, ಮಕ್ಳನ್ನು ಬಿಟ್ಟು ಹೋಗಬಾರದಾಗಿತ್ತು (೨) ಮುತ್ತೈದೆ ಯಾಗಿ ಹೋದಳು. ಮಕ್ಕಳ ಕತೆ ನೋಡಿ ಈಗ. ಅಂತೆಲ್ಲ ಹೇಳ್ತಾ ಇದ್ರೂ. ಅದಾಗಿ ವರ್ಷ ತುಂಬುವ ಮೊದಲೇ ಆಕೆ ತಂಗಿಯನ್ನೇ ಅವನಿಗೆ ಮದುವೆ ಮಾಡಿಸಿ ಬಿಟ್ರು. ಸ್ಕೂಲ್ ಗೆ ಅವರ ಮನೆ ಮುಂದೇನೆ ಹೋಗುತ್ತಿದ್ದುದರಿಂದ ಆಕಡೆನೆ ನೋಡ್ತಾ ಹೋಗ್ತಿದ್ದೆವು. ಈಗ್ಲೂ ನನಗೆ ಅನ್ನಿಸೋದು ಮಕ್ಕಳ ಕಾರಣ ದಿಂದ ತಂಗಿನೂ ಅನುಭವಿಸೋ ಹಾಗೆ ಮಾಡಿದ್ದು. ಆ ಮನುಷ್ಯ ಅಮೇಲು ಹಾಗೆ ಇದ್ದರಿ. ತಂಗಿ ನೋಡಿ ಎಲ್ಲರು ಪಾಪ ಹುಡುಗಿ ಚಂದಗೆ ಮಾಡ್ಕ್ಯಂಡು ಹೋಗ್ಥತಿ ಅಂತಿದ್ರು, ನಮ್ಮಮ್ಮನಿಗೆ ಒಂದು ಸಾರಿ ಕೇಳೋಣ ಅನ್ನಿಸ್ತು. ಹಾಗೆ ಮಾಡಿದ್ರೆ ಖಂಡಿತ ನನಗೆ ತಲೆ ಕೆಟ್ಟಿದೆ ಅಂದುಕೊಂಡು ಬಿಡ್ತಾರೆ. ಅದಕ್ಕೆ ಕೇಳಲಿಲ್ಲ. ಛೆ ಬೇಜಾರು.

ಭಾರ್ಗವಿ ಹೇಳಿದರು...

ತೇಜಸ್ವಿನಿಯವರೇ
ಮರೆತಿದ್ದೆ ,ಅಷ್ಟು ಸೂಕ್ಷ್ಮ ಮನಸಿನ ಹೆಣ್ಣು ಹೀಗೆ ಮಕ್ಕಳನ್ನು ತೊರೆದು ಹೋಗುವ ನಿರ್ಧಾರ ಮಾಡಬೇಕೆಂದರೆ ಆಕೆ ಎಷ್ಟು ನೊಂದಿರಬೇಕು.ಮರೆಯಲು ಆಗದಿದ್ದರೂ ಮರೆತಂತೆ ನಟಿಸುತ್ತೇವೆ ಅನಿಸುಸುತ್ತೆ. ನನ್ನೊಳಗೆ ಇದ್ದ ಸತ್ಯ ಘಟನೆ ಯನ್ನು ಹೇಳುವ ಅವಕಾಶ ಕೊಟ್ಟ ತಮಗೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

@ ವಿಕಾಸ್,

ಸಾವು ಬದುಕು ಎರಡೂ ಒಂದು ನಾಣ್ಯದ ಎರಡು ಮುಖ ಇದ್ದಂತೆ .. ಒಮ್ಮೆಗೆ ಒಂದು ಮುಖ ಮಾತ್ರ ಕಾಣಿಸುತ್ತದೆ. ಆದರೆ ಇನ್ನೊಂದು ಮುಖವೂ ಬೆನ್ನಿಗೇ ಅಂಟಿಕೊಂಡಿರುತ್ತದೆ!!

@ ಸಾಟಿ ಯಾರು,

ಇದೇ ಬದುಕು.. ಇಲ್ಲಿ ಯಾವುದೂ ಸುಲಭ, ಸರಳವಲ್ಲ. ಸಂಕೀರ್ಣತೆಯ ಗೂಡು ಇದು. ನಮ್ಮ ಸಮಾಜವೇ ಹಾಗಿದೆ. ಗಂಡು ಎನೂ ಮಾಡಬಹುದು. ಅವನಿಗಿರುವಷ್ಟು ಸ್ವಾತಂತ್ರ್ಯ ಹೆಣ್ಣಿಗಿಲ್ಲ!! ಕೆಲವು ಸಮಾಜ ಸುಧಾರಕರೇ ಗೋಮುಖ ವ್ಯಾಘ್ರರಾಗಿರುವಾಗ ಜನಸಾಮಾನ್ಯರಿಂದ ನೀವು ನ್ಯಾಯವನ್ನು ಬಯಸಲಾಗದು. ಮಕ್ಕಳಿಗೋಸ್ಕರವಾದರೂ ಆಕೆ ಬದುಕ ಬೇಕಿತ್ತು. ಛಲದಿಂದ ಗಂಡನ ತೊರೆದೋ ಇಲ್ಲಾ ಆತನಿಗೆ ಸರಿಸಮಾನವಾಗಿ ನಿಂತೋ ಬದುಕುವ ಮನಃಶಕ್ತಿಯನ್ನು ಯಾರಾದರೂ ತುಂಬಿದಿದ್ದರೆ ಈ ದುರಂತ ನಡೆಯುತ್ತಿರಲಿಲ್ಲವೇನೋ!! ಆಕೆಯ ತಂಗಿಯ ಬದುಕೂ ಉಳಿಯುತಿತ್ತೇನೋ!!!?

ಯರೋ ಹೇಳಿದ.. ಎಲ್ಲೋ ಓದಿದ ನನಪು..

"ಬಿಟ್ಟೆನೆಂದರೂ ಬಿಡದೀ ಮಾಯೆ.. ಮರೆತೆನೆಂದರೂ ಮರೆಯಲಿ ಹ್ಯಾಂಗ.."

ತುಂಬಾ ಧನ್ಯವಾದಗಳು ನಿಮ್ಮ ಮಾನಸದೊಳಗಿದ್ದ ಈ ಮರೆಯಲಾಗದ ಘಟನೆಯನ್ನು ನನ್ನ ಮಾನಸದಲ್ಲಿ ಹಂಚಿಕೊಂಡಿದ್ದಕ್ಕೆ. ಬರುತ್ತಿರಿ.

ನವಿಲುಗರಿ ಹುಡುಗ ಹೇಳಿದರು...

ಯಾಕೊ ಇದನ್ನ ಇನ್ನು ಸ್ವಲ್ಪ ವಿಸ್ತರಿಸಿ ಬರೆಯಬಹುದಿತ್ತು ಅಂತ ಅನ್ನಿಸಿದ್ದು ಸುಳ್ಳಲ್ಲ..ಒಂದು ಪುಟ್ಟ ಕತೆ ಮಾಡಬಹುದಾಗಿತು ತೇಜು ಅಕ್ಕ..:)

ತೇಜಸ್ವಿನಿ ಹೆಗಡೆ ಹೇಳಿದರು...

ನವಿಲುಗರಿ,

ಹಂ.. ನನಗೂ ಹಾಗೇ ಅನ್ನಿಸಿದ್ದು ಹೌದು. ಆದರೆ ಇದ್ದದ್ದನ್ನು ಇದ್ದಹಾಗೇ ಹೇಳಿರುವೆ. ಅದ್ಯಾಕೋ ಏನೋ ನನ್ನ ಕಣ್ಣ ಮುಂದೆ ಅದೂ ಬಾಲ್ಯದಲ್ಲಿ ನಡೆದ ಈ ದುರ್ಘಟನೆಗೆ ಕಲ್ಪನೆಯ ಮೆರುಗು ಕೊಟ್ಟು ಕಥೆ ಬರೆಯಲು ಕೊನೆಗೂ ಮನಸ್ಸೊಪ್ಪಲೇ ಇಲ್ಲ! ಬರಹ ಎನ್ನುವುದು ಪ್ರಯತ್ನ ಪಟ್ಟು ಬರೆದರೆ ಬರಿಯ ವಾಚ್ಯವಾಗುವುದು.. ಅದು ತನ್ನಿಂದ ತಾನೇ ಹೊರಬಂದರೆ ಕಥೆಯೋ/ಕವನವೋ ಆಗುವುದೆಂಬುದು ನನ್ನ ಅಭಿಪ್ರಾಯ. ತುಂಬಾ ಧನ್ಯವಾದಗಳು ಮಾನಸಕ್ಕೆ ಬಂದು ತಮ್ಮ ನವಿಲುಗರಿಯನ್ನು ಮೂಡಿಸಿದ್ದಕ್ಕೆ :)

ಸುಧೇಶ್ ಶೆಟ್ಟಿ ಹೇಳಿದರು...

tejaswini avare,

suspense baraha idena:)

manasina mele thumba pariNaama beeruva ghatanegalu ivu. aa kshanadalli, nimma badalu naane alli iddiddare antha youchisidaga.....

Unknown ಹೇಳಿದರು...

Hi, nimma blog chennaagide. aadare saakashtu thappugalive. Dayamaadi kaagunithaaksharagala kade gamana kodi. Hava a nice time.

- Godlabeelu Parameshwara

godlabeelu@gmail.com

ತೇಜಸ್ವಿನಿ ಹೆಗಡೆ ಹೇಳಿದರು...

ನಮಸ್ಕಾರ.

ಮಾನಸಕ್ಕೆ ಸ್ವಾಗತ. ಮೆಚ್ಚುಗೆಗೆ ಧನ್ಯವಾದ.

ನೀವು ಹೇಳಿದ ಮೇಲೆ ಈ ಬರಹವನ್ನು ನಾನು ಮತ್ತೆ ಓದಿದೆ. ಮೊದಲ ಪ್ಯಾರಾದಲ್ಲೇ ಒಂದೆರಡು ತಪ್ಪುಗಳು ಸಿಕ್ಕಿದವು. ಸರಿ ಪಡಿಸಿರುವೆ. ಖಂಡಿತ ಇನ್ನು ಮುಂದೆ ಇಷ್ಟು ತಪ್ಪಾಗದಿರುವಂತೆ ಪ್ರಯತ್ನಿಸುವೆ. ಸಣ್ಣ ಸಣ್ಣ ಲೇಖನ/ಬರಹಗಳನ್ನು ಹೆಚ್ಚಾಗಿ ನಾನು ಸ್ಕ್ರೀನ್ ಮೇಲೇ ಓದಿ ತಿದ್ದುವುದರಿಂದ, ಕಣ್ಣ್‌ತಪ್ಪಿನಿಂದಾಗಿ ಇಂತಹ ತಪ್ಪುಗಳಾಗಿರಬಹುದು. ಆದರೆ ಇದಾವುದೂ ಆಗಿರುವ ತಪ್ಪುಗಳಿಗೆ ಸಮಜಾಯಿಷಿಯಂತೂ ಅಲ್ಲ. ತಿದ್ದಿರುವುದಕ್ಕೆ ತುಂಬಾ ಧನ್ಯವಾದಗಳು. ಆಗಾಗ ಭೇಟಿ ಕೊಡುತ್ತಿರಿ.. ಆದ ತಪ್ಪುಗಳನ್ನು ತಿದ್ದುವುದಕ್ಕೆ :)