ಗುರುವಾರ, ನವೆಂಬರ್ 18, 2010

ಮಿಷ್ಟಿ

ಸುಜಯಳ ಹೊಸ ಮನೆಯನ್ನು ಹುಡುಕುವುದೇನೋ ಅಷ್ಟು ಕಷ್ಟವಾಗಲಿಲ್ಲ. ತೀರಾ ಒಳದಾರಿಗಳಿಲ್ಲದ್ದರಿಂದ ರಿಕ್ಷಾದವನೂ ಕಷ್ಟಪಡದೇ ನೇರ ಮನೆಯ ಮುಂದೇ ತಂದು ನಿಲ್ಲಿಸಿದ್ದ. ಸುಜಯ ಶ್ರೀಕಾಂತ್ ದಂಪತಿಗಳಿಗೆ ವಿಷ್ ಮಾಡಿ, ತಂದಿದ್ದ ಪುಟ್ಟ ಉಡುಗೊರೆಯನ್ನು ಕೊಟ್ಟು, ಗೃಹ ಪ್ರವೇಶಕ್ಕೆಂದು ಬಂದಿದ್ದ  ಜನರ ಗುಂಪಿನಿಂದ ದೂರಾಗಿ ಮನೆಯ ಹಿತ್ತಲಿನ ಮೂಲೆಯಲ್ಲಿದ್ದ ಮಾವಿನಮರದ ಕೆಳಗೆ ಹಾಸಿದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಇನ್ನೇನು ಉಸ್ಸೆನ್ನಬೇಕು...ದೊಡ್ಡ ನಗು ಅಲೆ‌ಅಲೆಯಾಗಿ ನನ್ನ ಕಿವಿಯನ್ನಪ್ಪಳಿಸಿ ದೃಷ್ಟಿಯನ್ನು ಒಡತಿಯೆಡೆಗೆ ಸೆಳೆಯಿತು. ಹಳದಿ ಬಣ್ಣದ ಖಾದಿ ಸೆಲ್ವಾರ್ ತೊಟ್ಟು ಕೈಯಲ್ಲಿ ಒಂದು ಬೌಲ್ ಹಿಡಿದು ಅದರೊಳಗಿದ್ದ ಬಿಳಿ ಬಣ್ಣದ ಸಿಹಿ ತಿಂಡಿಯನ್ನು ಒಂದೊಂದಾಗಿ...ಇಡಿಯಾಗಿ ಬಾಯೊಳಗಿಟ್ಟು ನುಂಗಿ ಕಣ್ಮುಚ್ಚಿ ಆಸ್ವಾದಿಸುತ್ತಾ... ಪಕ್ಕದಲ್ಲಿದ್ದವರ ಮಾತಿಗೆ ದೊಡ್ಡದಾಗಿ ನಗುತ್ತಾ ನಿಂತಿದ್ದ ಆ ಹಾಲು ಬಿಳುಪಿನ ಹುಡುಗಿಯಲ್ಲಿ ಮೊದಲ ನೋಟದಲ್ಲೇ ಅದೇನೋ ಆಕರ್ಷಣೆ ಮೂಡಿತು. ಹರಡಿದ್ದ ಸೊಂಪಾದ ಕರಿ ಕೂದಲಿಗಿಂತಲೂ ನಗುವಾಗ ಎರಡೂ ಕೆನ್ನೆಗಳಲ್ಲಿ ಮುಡುತ್ತಿದ್ದ ಗುಳಿಗಳು ಆಕೆಯನ್ನು ಮತ್ತೂ ಚೆಲುವೆಯನ್ನಾಗಿಸಿದ್ದವು. ಒಂದು ಕೋನದಲ್ಲಿ ಹಿಂದಿಯ ನಟಿ ಶರ್ಮಿಳಾ ಟಾಗೋರಳನ್ನು ಹೋಲುತ್ತಿದ್ದ ಆಕೆಯ ಮಾತು ಆ ಗುಂಪಿನಲ್ಲೇ ದೊಡ್ಡದಾಗಿತ್ತು. ಸುಮಾರು ಇಪ್ಪತ್ತರ ಆಸುಪಾಸಿನಲ್ಲಿರಬೇಕು ಹುಡುಗಿ ಎಂದೆನಿಸುತ್ತಿರುವಾಗಲೇ ಸುಜಯ ಲಘುವಾಗಿ ಬೆನ್ನಿಗೆ ಗುದ್ದಿದಳು. "ಏನೇ.. ನಾನೂ ಆಗ್ನಿಂದ ಗಮನಿಸ್ತಾನೇ ಇದ್ದೀನಿ.. ನೀನು ಅವ್ಳನ್ನೇ ನೋಡ್ತಾ ಇದ್ದೀಯಾ..? ಹೂಂ...ನಿನ್ನ ತಪ್ಪಲ್ಲಮ್ಮಾ....ನಮ್ಮ್ ಹುಡ್ಗಿ ಹಾಗೇ ಇದ್ದಾಳೆ ಬಿಡು... ಯಾರೇ ಆಗ್ಲಿ ಒಮ್ಮೆ ನೋಡಿದ್ಮೇಲೆ ನೋಡ್ತಾನೇ ಇರ್ತಾರೆ....ಅವ್ಳು ಶ್ರೀಕಾಂತ್ ಚಿಕ್ಕಮ್ಮನ ಮೊಮ್ಮಗ್ಳು. ಇವ್ರ ತಂಗೀದು ಲವ್ ಮ್ಯಾರೇಜ್....ಕಲ್ಕತ್ತಾದ ಹುಡ್ಗ ಶಾಂತನು ಬ್ಯಾನರ್ಜಿ....ಅವ್ರ ಮಗ್ಳೇ ಈ ಸುಂದರಿ...ತುಂಬಾ ಒಳ್ಳೇ ಹುಡ್ಗಿ...ಸದ್ಯ ಬೆಂಗಳೂರಲ್ಲೇ ನರ್ಸಿಂಗ್ ಕೋರ್ಸ್ ಮಾಡ್ತಿದ್ದಾಳೆ...ಆಗಾಗ ಬಂದು ಹೋಗಿ ಮಾಡ್ತಿರ್ತಾಳೆ...ಅಲ್ಲಿಯವಳಾದ್ರೂ ಕನ್ನಡ ಅಂದ್ರೆ ತುಂಬಾ ಇಷ್ಟ...ಒಂದು ವರ್ಷದಲ್ಲೇ ಕನ್ನಡವನ್ನ ತುಂಬಾ ಚೆನ್ನಾಗಿ ಮಾತಾಡೋಕಲ್ದೇ ಬರೆಯೋಕೂ ಕಲ್ತಿದ್ದಾಳೆ ಗೊತ್ತಾ!...ಬಾ ಪರಿಚಯ ಮಾಡಿಸ್ತೀನಿ ನಿಂಗೆ.." ಎಂದು ಸ್ವಲ್ಪ ನನ್ನೆಳೆದುಕೊಂಡೇ ಕರೆದೊಯ್ದಳು. "ಮಿಷ್ಟಿ.... ಈಕೆನೇ ನಾನು ನಿಂಗೆ ಹೇಳಿದ್ದ ನನ್ನ್ ಬೆಸ್ಟ್ ಫ್ರೆಂಡ್...ಇಲ್ಲಿಯ ವಿಮೆನ್ಸ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದ ಪ್ರೊಫೆಸರ್...ಹೇಳಿದ್ನಲ್ಲಾ ಮೊದ್ಲೇ....ಹಾಂ.... ಕನ್ನಡ ಭಾಷೆಯ ಇತಿಹಾಸ ತಿಳ್ಕೋಬೇಕು ಅಂತಿದ್ಯಲ್ಲಾ... ಪರಿಚಯ ಮಾಡ್ಕೋ.. ತುಂಬಾ ಚೆನ್ನಾಗಿ ಹೇಳ್ಕೊಡ್ತಾಳೆ...."ಎಂದು ಪರಿಚಯಿಸಿದಾಗ ಮೊದಲೇ ಅರೆಬಿರಿದಿದ್ದ ತುಸು ಉದ್ದದ ಬಾಯನ್ನು ಸಂಪೂರ್ಣ ತೆರೆದು ನಗುತ್ತಾ ಕೈ ಕುಲುಕಲು ಆ ಗುಳಿಗಳಿಗಿಂತ ನನ್ನ ಸೆಳೆದದ್ದು ಅವಳ ಹೆಸರು... ಈ ಹೆಸ್ರನ್ನು ಎಲ್ಲೂ ಕೇಳಿದ ನೆನಪಾಗಲಿಲ್ಲ. ನನ್ನ ಮನದ ಡಿಕ್ಷನರಿಯನ್ನೆಲ್ಲಾ ಕೆದಕಿದರೂ ಸರಿಯಾದ ಅರ್ಥ ಹೊಳೆಯದೇ ಚಡಪಡಿಸಿದೆ...ಕೇಳೋಣವೆಂದು ತಿರುಗಿದರೆ ಸುಜಯ ಅದೆಲ್ಲೋ ಮಾಯ!.... ಹುಡುಗಿ ನನ್ನೆಡೆಯೇ ನೊಡುತ್ತಿದ್ದಳು.. ಬಹುಶಃ ನನ್ನ ಮಾತಿಗಾಗಿಯೇ ಕಾಯುತ್ತಿದ್ದಳು. ಮೊದಲ ಬಾರಿಯೇ ಹೆಸರಿನರ್ಥ ಕೇಳೋದು ಸರಿಯೆನಿಸಲಿಲ್ಲ. "ಮಿಸ್ಟಿ... ನೀನು ತುಂಬಾ ಮುದ್ದಾಗಿದ್ದೀಯಮ್ಮಾ... ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋ ನಿನ್ನ ಆಸೆ ಕೇಳಿ ತುಂಬಾ ಸಂತೋಷವಾಯ್ತು... ಏನು ಓದ್ತಾ ಇದ್ದೀಯಾ?" ಎಂದು ಕೇಳಿದೆ. "ದೀದಿ..ನಾನು ನಿಮ್ಮನ್ನ ದೀದಿ ಅಂತೀನಿ ಪರ್ವಾಗಿಲ್ಲತಾನೆ? ನಮ್ಮಲ್ಲಿ ನಮ್ಗಿಂತ ದೊಡ್ಡೋರನ್ನ ಹೀಗೇ ಕರ್ಯೋದು...ನೀವ್ಯಾಕೆ ಬೇಡಾ ಅಂತೀರ ಅಲ್ವಾ? ಹಾಂ.. ದೀದಿ ನನ್ನ ಹೆಸ್ರು ಮಿಸ್ಟಿ ಅಲ್ಲಾ.. ಮಿಷ್ಟಿ ಅಂತಾ... ಗೊತ್ತು ಬಿಡಿ.. ಮೊದ್ಲು ಎಲ್ರಿಗೂ ಕಷ್ಟ ಆಗೊತ್ತೆ ಹೇಳೋಕೆ. ನಮ್ಮ ಬಂಗಾಲಿ ಭಾಷೇನೇ ಹಾಗೆ ಉಚ್ಛರಿಸೋಕೆ ಸ್ವಲ್ಪ ಕಷ್ಟ..."ಎಂದವಳೇ ನನ್ನ ಉತ್ತರಕ್ಕೂ ಕಾಯದೇ ಬೌಲಿನಲ್ಲಿ ಉಳಿದಿದ್ದ ಒಂದೇ‌ಒಂದು ಸ್ವೀಟನ್ನು ಹಾಗೇ ತೆಗೆದು ಬಾಯಿಗೆ ಹಾಕಿಕೊಂಡು ಮತ್ತೆ ಕಣ್ಮುಚ್ಚಿದಳು. ಅದೇನೆನ್ನಿಸಿತೋ ತಟ್ಟೆಂದು ಕಣ್ತೆರೆದವಳೇ "ಸ್ಸಾರಿ ದೀದಿ.. ನಿಮ್ಮನ್ನ ಕೇಳೋಕೇ ಮರ್ತೆ.. ನಾನೊಂದು ಈ ರೊಸೊಗೊಲ್ಲದ ಹುಚ್ಚಿ.. ತಿಂತಾ ಇದ್ರೆ ಎಲ್ಲಾ ಮರ್ತು ಹೋಗೋತ್ತೆ...ನಾನೇ ಕಳ್ದು ಹೋಗ್ತಿನಿ ಅಂದ್ರೆ ನಂಬ್ತೀರಾ... ನಿಮ್ಗೆ ಬೇಕಾ ರೊಸೊಗೊಲ್ಲ? ತರ್ಲಾ ನಿಮ್ಗೂ?... ಈ ಸ್ವೀಟು ನನ್ನ ಫೇವರೇಟ್... ಹಾಗೆ ನೋಡಿದ್ರೆ ನನಗೆ ಈ ಹೆಸ್ರಿಟ್ಟಿದ್ದು ಸರಿಯಾಗೇ ಇದೆ ಬಿಡಿ..."ಎಂದು ಮತ್ತೆ ದೊಡ್ಡದಾಗಿ ನಕ್ಕಾಗ ನನಗೂ ನಗು ಮೂಡಿತು, ಅವಳು ರಸಗುಲ್ಲಾವನ್ನು ಉಚ್ಚರಿಸಿದ ರೀತಿಗೆ.....ಅವಳ ಮಾತೊಳಗಿನ ಮುಕ್ತತೆಗೆ. ಇದೇ ತಕ್ಕ ಸಮಯ ನನ್ನ ಕೊರೆಯುತ್ತಿರುವ ಪ್ರಶ್ನೆಗೆ ಉತ್ತರ ಪಡೆಯಲು ಎಂದೆಣಿಸಿ "ಓಹೋ... ಹಾಗಿದ್ರೆ ನಿನ್ನ ಹೆಸ್ರಿನ ಅರ್ಥ "ರಸಗುಲ್ಲಾ" ಅಂತಾನಾ?"ಎಂದಿದ್ದೇ ತಡ ಪಕಪಕನೆ ನಕ್ಕಿದ್ದು ನೋಡಿ ನನಗೆ ತುಸು ಆಭಾಸವೆನಿಸಿತು. "ದೀದಿ ತಪ್ಪು ತಿಳಿಯಬೇಡಿ... ನೀವು ನನ್ನ ಹೆಸರೇ ರೊಸೊಗೊಲ್ಲ ಅಂದ್ರಲ್ಲಾ ಅದ್ನ ಕೇಳಿ ಖುಶಿನೂ ಆಯ್ತು.. ತಮಾಷೇನೂ ಅನ್ನಿಸ್ತು. ನನ್ನ ಬಾಬಾ...ಪ್ಚ್...ಅಂದ್ರೆ ನನ್ನ ಪಪ್ಪನೂ ಹೀಗೇ ಕರೀತಾರೆ ನನ್ನ ರೊಸೊಗೊಲ್ಲ ಅಂತಾ...ಆದ್ರೆ ನನ್ನ ಹೆಸರಿನರ್ಥ ಅದಲ್ಲಾ....ಬಂಗಾಲಿಯಲ್ಲಿ "ಮಿಷ್ಟಿ" ಅಂದ್ರೆ ಸ್ವೀಟ್ ಅಂತ...ಸ್ವೀಟಿ ಅಂತಾನೂ ತಿಳ್ಕೋಬಹುದು.. ಹಾಗೆ ನೋಡೋಕೆ ಹೋದ್ರೆ ನಾನು ಹಾಗೇ ಇದ್ದೀನಲ್ವಾ? ಹಾಂ..ತರ್ಲಾ ನಿಮ್ಗೆ ಸ್ವೀಟ್?" ಎಂದು ಕೇಳಿದವಳೇ ಹೊರಟದ್ದು ನೋಡಿ ಭಯವಾಯಿತು. ಒಂದು ರಾಶಿ ತಂದು ನನ್ನ ಬಾಯಿಗೂ ತುರುಕಿಬಿಟ್ಟರೇನು ಗತಿಯಪ್ಪಾ ಎಂದೆಣಿಸಿ ಆಕೆಯ ಕೈ ಹಿಡಿದು ಕುರ್ಚಿಯಲ್ಲಿ ಕೂರಿಸಿದೆ. "ಬೇಡಮ್ಮಾ... ನಂಗೆ ಸಿಹಿ ಅಂದ್ರೆ ಅಷ್ಟಿಷ್ಟ ಅಲ್ಲಾ... ಅದೂ ಅಲ್ದೇ ಈಗಿನ್ನೂ ನಂದು ಊಟಾನೂ ಆಗಿಲ್ಲ. ನಿನ್ನ ಹೆಸರಿನ ಅರ್ಥ ತುಂಬಾ ಚೆನ್ನಾಗಿದೆ. ಹೌದು.. ನೀನು ಏನು ಓದಿದ್ದೀಯಾ? ಕೊಲ್ಕೊತ್ತಾದಲ್ಲೇ ಇರೋದಾ ನಿಮ್ಮ ಮನೆಯವ್ರೆಲ್ಲಾ?"ಎಂದು ಕೇಳಿದ್ದೇ ತಡ ಅವಳಲ್ಲಿ ಉತ್ಸಾಹ ಹೆಚ್ಚಿತು.

"ದೀದಿ ನಾವು ಅಂದ್ರೆ ಬಾಬಾ, ಮಾ, ಥಾಕುಮಾ....ಅಂದ್ರೆ ನಮ್ಮಜ್ಜಿ, ಆಶೀಶ್ ನನ್ನ್ ತಮ್ಮ...ಎಲ್ಲಾ ಅಲ್ಲೇ ಇರೋದು. ನಾನು ಪಿ.ಯು.ಸಿ ನಂತ್ರ ನರ್ಸಿಂಗ್ ಕೋರ್ಸ್ ಮಾಡೋಕೆ ಇಷ್ಟಪಟ್ಟೆ. ಮೊದ್ಲು ಅಪ್ಪ ಬೇಡ ಅಂದ್ರು.....ಆಮೇಲೆ ಒಪ್ಕೊಂಡ್ರು...ಬೆಂಗ್ಳೂರಿಗೆ ಬರ್ಬೇಕು ಅಂತಿದ್ದೆ.....ಹೇಗಿದ್ರೂ ಸುಜಯ ಆಂಟಿ ಇಲ್ಲೇ ಇದ್ರಲ್ಲಾ...ಅದ್ಕೇ ಇಲ್ಲಿಗೇ ಬಂದ್ಬಿಟ್ಟೆ. ಸೋ ಈಗೊಂದೆರಡು ವರ್ಷದಿಂದ ಇಲ್ಲೇ ಇದ್ದೀನಿ. ರಜೆಯಲ್ಲಿ ಮಾತ್ರ ಕೊಲ್ಕತ್ತದಲ್ಲಿ. ದೀದಿ ನಂಗೆ ನಿಮ್ಮ್ ಕನ್ನಡ ಭಾಷೆ ತುಂಬಾ ಇಷ್ಟವಾಯ್ತು. ಆದ್ರೆ ನಂಗಿನ್ನೂ ಹೆಚ್ಚು ಕಲೀಬೇಕು ಇದ್ನ ಅಂತ ಆಸೆ. ಅದ್ಕೆ ನಿಮ್ಮ ಹಲ್ಪ್ ಬೇಕು. ಹೇಗಿದ್ರೂ ನೀವು ಇದ್ರಲ್ಲಿ ಎಕ್ಸ್‌ಪರ್ಟ್ ಅಲ್ವಾ? ಹಾಂ... ಡೋಂಟ್ ವರಿ... ಇದ್ರ ಬದ್ಲು ನಾನು ನಿಮ್ಗೆ ನಮ್ಮ ಬಂಗಾಳಿ ಭಾಷೆ ಕಲ್ಸ್ ಕೊಡ್ತೀನಿ.. ರೈಟ್?" ಎಂದು ಕೇಳಿದಾಗ ಸುಮ್ಮನೆ ನಕ್ಕರೂ ಒಳಗೊಳಗೇ ತುಸು ಭಯವಾಗತೊಡಗಿತು. ಹಠ ಹಿಡಿದು ಬಂಗಾಳಿ ಕಲಿಸತೊಡಗಿದರೆ.... ಒಳ್ಳೇ ಫಚೀತಿ ಬಂತಲ್ಲಪ್ಪಾ ಎಂದೆಣಿಸಿ ತಪ್ಪಿಸಿಕೊಳ್ಳಲು ಯೋಚಿಸಿದೆ. ಆದರೆ ಆಕೆ ನಿಶ್ಚಯಿಸಿಯಾಗಿತ್ತು ನನ್ನ ಬೆಂಬಿಡದಿರಲು. ಅಂತೂ ಅಲ್ಲಿಂದ ಹೊರಡುವ ಮೊದಲು ಸುಜಯಳ ಶಿಫಾರಿಸಿನ ಮೇಲೆ ನಾನು ಅರೆಮನಸಿನಿಂದಲೇ ಅವಳಿಗೆ ಬೇಕಾದ ಮಾಹಿತಿ ನೀಡಲು ಒಪ್ಪಬೇಕಾಯಿತು. ಮರುದಿನವೇ ಗೊತ್ತಾಯಿತು....ಅವಳ ಪಿ.ಜಿ. ನನ್ನ ಮನೆಯ ಹತ್ತಿರದಲ್ಲೇ ಇರುವುದೆಂದು. ಸುಜಯಳಿಂದ ಅಡ್ರೆಸ್ ಪಡೆದವಳೇ ಮನೆಗೆ ಹಾರಿ ಬಂದಿದ್ದಳು. ಮೊದಲಿನಿಂದಲೂ ಏಕಾಂಗಿಯಾಗಿದ್ದು, ಏಕಾಂಗಿತನವನ್ನೇ ಅಪ್ಪಿದ್ದ ನನಗೆ ಸ್ವಲ್ಪ ಸಮಯ ಕಿರಿಕಿರಿ ಎನಿಸತೊಡಗಿದ್ದು ಹೌದು. ಆದರೆ ಅದು ಹೇಗೋ ಏನೊ... ಅಷ್ಟು ದೊಡ್ಡ ವಯಸ್ಸಿನ ಅಂತರವಿದ್ದರೂ, ಎರಡು ತಿಂಗಳಾಗುವಷ್ಟರಲ್ಲಿ ಹುಡುಗಿ ತುಂಬಾ ಆಪ್ತವಾಗಿ, ನನ್ನಾವರಿಸಿಕೊಂಡು ಬಿಟ್ಟಳು. ಮುಗ್ಧತೆ ತುಂಬಿದ ಮುಕ್ತವಾದ ಮಾತು, ನಗೆ, ನಡತೆ, ತುಂಟತನ ಎಲ್ಲವೂ ಇಷ್ಟವಾದವು. ಅದೊಂದು ದಿನ ಇದ್ದಕ್ಕಿದ್ದಂತೆ ಆಕೆ "ದೀದಿಮೋನಿ...ಎಲ್ಲಿದ್ದೀರಾ?"ಎನ್ನುತ್ತಾ ಒಳಹೊಕ್ಕಲು ಆಶ್ಚರ್ಯವಾಯಿತು. ಹೊಸ ಹೆಸರನ್ನಿಡುವ ಹುನ್ನಾರವೇನೋ ಎಂದೆನಿಸಿ ಹುಶಾರಾದೆ. "ಏನಮ್ಮಾ ಮಿಸ್ಟಿ ಇದು... ದೀದಿ ಅಂತಿದ್ದೋಳು ದೀದಿಮೋನಿ.. ಅಂತಿದ್ದೀಯಲ್ಲಾ.. ಏನೋ ಹೊಸ ಕಿಲಾಡಿತನಕ್ಕೆ ಹೊರ್ಟಂತಿದೆ.." ಎಂದು ನಗಲು ಹುಸಿಮುನಿಸು ತೋರಿದಳು. "ಓ ಬಾಬಾ...ತುಮಿ ಕೊಬೆ ಬಾಂಗ್ಲಾ ಶೀಕ್ಬೆ?"ಎಂದವಳೇ ಲಘುವಾಗಿ ತನ್ನ ಹಣೆ ಚಚ್ಚಿಕೊಳ್ಳಲು ನಾನು ಕಕ್ಕಾಬಿಕ್ಕಿಯಾದೆ. ನನ್ನ ಸ್ಥಿತಿಯ ಅರಿವಾಗಿರಬೇಕು.."ದೀದಿಮೋನಿ... ನಾನು ಹೇಳಿದ್ದು ಬಾಂಗ್ಲಾದಲ್ಲಿ.. ಅದ್ರ ಅರ್ಥ "ಅಯ್ಯೋ ದೇವ್ರೇ ನೀವ್ಯಾವಾಗ ಬಾಂಗ್ಲಾ ಭಾಷೆ ಕಲೀತೀರಾ ಅಂತಾ.. ಅಷ್ಟೇ.. ಹ್ಮ್ಂ... ಎಷ್ಟು ಸಲ ಹೇಳಿದ್ದೀನಿ ನನ್ನ ಹೆಸ್ರು ಮಿಸ್ಟಿ ಅಲ್ಲಾ ಮಿಷ್ಟಿ.... ಇರ್ಲಿ ಬಿಡಿ.. ನಿಮ್ಗೆ ಕಲಿಸ್ತಾ ನಾನೇ ಮರ್ತು ಬಿಡ್ತೀನೇನೋ ನನ್ನ ಭಾಷೇನಾ.."ಎಂದು ಗಲ್ಲ ಉಬ್ಬಿಸಿದಾಗ ಮತ್ತೂ ಚಿಕ್ಕವಳಾಗಿ ಕಂಡಳು. "ನಂಗೆ ವಯಸ್ಸಾಯ್ತಮ್ಮ.. ಈಗೀರೋ ನಾಲೆಜ್ ನೆನ್ಪಿಟ್ಕೊಂಡ್ರೆ ಸಾಕಾಗೊತ್ತೆ.. ಹೊಸತನ್ನ ಕಲೀಯೋಕೆ ಮನ್ಸಿಲ್ಲಾ ಅಂತಲ್ಲಾ.. ಯಾಕೋ ಉತ್ಸಾಹ ಹೆಚ್ಚು ಬರೊಲ್ಲಾ ನೋಡು... ಆದ್ರೂ ಖಂಡಿತ ಪ್ರಯತ್ನಿಸ್ತೀನಿ.. ನಂಗೂ ಹೊಸ ಭಾಷೆ ಕಲ್ತಾಂಗೆ ಆಗೊತ್ತೆ.."ಎಂದಾಗ ಮತ್ತೆ ಪುಟಿಯುವ ಉತ್ಸಾಹ ಅವಳಲ್ಲಿ. "ಹಾಂ.. ಈಗ ಹೇಳ್ತೀನಿ ಕೇಳಿ.. ನಮ್ಮಲ್ಲಿ ತುಂಬಾ ಆತ್ಮೀಯರನ್ನು... ಪ್ರೀತಿ ಪಾತ್ರರನ್ನು.. ದೊಡ್ಡವರಾಗಿದ್ದರೆ ದೀದಿಮೋನಿ ಅಂತಾರೆ... ಹೀಗಂದ್ರೆ ನಿಮ್ಮಲ್ಲಿ ದೊಡ್ಡಕ್ಕ ಅಂತಾಗುತ್ತೇನೋ.. ಹೌದು.. ಹಾಗೇ ಆಗೊತ್ತೆ.. ಹೆಚ್ಚು ಗೌರವ ಕೊಟ್ಟು ಕರೆಯೋದು... ನಂಗೆ ನೀವು ನನ್ನ ದೊಡ್ಡಕ್ಕನ ಹಾಗೇ ಕಾಣಿಸ್ತೀರಾ ಅದಕ್ಕೇ ಹಾಗೆ ಕರ್ದೆ.. ಇನ್ನು ಹೀಗೇ ಕರೀತಿ ಸರೀನಾ? ನೀವ್ಯಾಕೆ ಬೇಡ ಅಂತೀರಾ ಬಿಡಿ.."ಎಂದು ಎಂದಿನಂತೇ ನನ್ನ ಉತ್ತರಕ್ಕೂ ಕಾಯದೇ ತೀರ್ಮಾನ ಕೊಟ್ಟುಬಿಟ್ಟಳು. ಅಂದಿನಿಂದ ನನಗೂ ಅವಳ ಭಾಷೆಯ ಬಗ್ಗೆ ಕುತೂಹಲ ಮೂಡತೊಡಗಿತು. ನಾನೂ ಡಿಕ್ಷನರಿ ಹಿಡಿದುಕೊಂಡು ಕೆಲವೊಂದು ಸರಳ ಪದಗಳನ್ನು ತಿಳಿದುಕೊಳ್ಳತೊಡಗಿದೆ. ಒಂಟಿತನ ಕಳೆಯಲು ಎಂದಾದರೂ ಟಿ.ವಿ. ಚಾನಲ್‌ಗಳನ್ನು ತಿರುವಿ ಹಾಕುವ ಅಭ್ಯಾಸ ನನಗೆ. ಅಂದೂ ಹಾಗೆ ಮಾಡುತ್ತಿರುವಾಗ ಹಠಾತ್ತನೆ ನನ್ನ ರಿಮೋಟ್ ಬಾಂಗ್ಲಾ ಚಾನಲ್‌ಗೆ ಬಂದು ನಿಂತಿತ್ತು. ಯಾವುದೋ ಧಾರಾವಾಹಿ ನಡೆಯುತ್ತಿತ್ತು. ಭಾಷೆ ಅರ್ಥವಾಗದಿದ್ದರೂ ವೇಷ ಭೂಷಣ ನೋಡ ತೊಡಗಿದೆ. ಅಲ್ಲಿಯ ರೀತಿಯಲ್ಲೇ ಉಡಿಗೆ ಹಾಕಿದ್ದ ಆ ಮಹಿಳೆಯಲ್ಲಿ ನನ್ನನ್ನು ಸೆಳೆದದ್ದು ಅವಳ ಎಡಗೈಯೊಳಗಿದ್ದ ಮೂರು ಬಳೆಗಳು. ಒಂದು ಕಬ್ಬಿಣದಂತಹ ಬಳೆ, ಅದರ ನಂತರ ಬಿಳಿ ಶಂಖದಂಥದ್ದು, ತದನಂತರ ಕೆಂಪು ಬಣ್ಣದ ಬಳೆ. ತುಂಬಾ ಸುಂದರವೆನಿಸಿತು.

"ಮಿಷ್ಟಿ....ನಿಮ್ಮಲ್ಲಿ ವಿಶೇಷರೀತಿಯ ಮೂರು ಬಳೆಗಳನ್ನು ಹಾಕ್ತಾರಲ್ಲಾ.. ಮೊನ್ನೆ ಟಿವಿ.ಯಲ್ಲಿ ನೋಡ್ದೆ... ನೀನ್ಯಾಕೆ ಹಾಕಲ್ಲಾ? ತುಂಬಾ ಚೆನ್ನಾಗಿತ್ತು.. ನಿಂಗೆ ಮತ್ತೂ ಚೆನ್ನಾಗಿ ಕಾಣ್ಸೊತ್ತೆ....ಹಾಕಿ ಬಾ ಒಮ್ಮೆ.." ಎಂದಾಕ್ಷಣ ಆಕೆ ಬಿದ್ದೂ ಬಿದ್ದೂ ನಗ ತೊಡಗಿದಳು. ನನಗೆ ಅವಮಾನವಾದಂತೆನಿಸಿ ನಾನೆಲ್ಲಿ ತಪ್ಪಿದೆನೆಂದು ಯೋಚಿಸತೊಡಗಿದೆ. ಅದೂ ಅಲ್ಲದೇ ಈ ಸಲ ನಾನು ಅವಳ ಹೆಸರನ್ನೂ ಸರಿಯಾಗಿಯೇ ಉಚ್ಚರಿಸಿದ್ದೆ! "ದೀದಿಮೋನಿ....ನೀವೊಂದು ಪೆದ್ದುವೇ ಸರಿ... ನಮ್ಮಲ್ಲಿ ಆ ಬಳೆಗಳನ್ನು ಮದುವೆಯದಿನ ವಧುವಿಗೆ ಹಾಕ್ತಾರೆ. ಆ ಮೂರು ಬಳೆಗಳು ಎಡಗೈನಲ್ಲಿದ್ದರೆ ಅವಳಿಗೆ ಮದುವೆಯಾಗಿದೆ ಅಂತ ಅರ್ಥ....ಒಳ್ಳೇ ದೀದಿಮೋನಿ...ನಾನೇನಾದ್ರೂ ಅದ್ನ ಹಾಕ್ಕೋಬೇಕು...ಅದ್ನ ನೀವು ನೋಡ್ಬೇಕು ಅಂದ್ರೆ ನಂಗೆ ಮದ್ವೆ ಆಗ್ಬೇಕು..ಅದೂ ಬೇಗ.."ಎಂದು ಕಣ್ಣು ಹೊಡೆಯಲು ನನಗೂ ಜೋರು ನಗು ಬಂತು...ಜೊತೆಗೆ ಒಂದು ತುಂಟ ಆಲೋಚನೆಯೂ ಮೂಡಿತು. "ಹೌದು ಮಿಸ್ಟಿ.... ನೀನೂ ಬೇಗ ಮದ್ವೆಯಾಗ್ಬಿಡು....ಆಗ ಆ ಬಳೆಗಳಲ್ಲಿ ನಿನ್ನ ನೋಡ್ಬೇಕೂ ಅನ್ನೋ ನನ್ನಾಸೆನೂ ಈಡೇರೊತ್ತೆ..."ಎಂದೆ. ಆಕೆಯೂ ಪಟ್ಟು ಬಿಡದೇ..."ಆಯ್ತು ದೀದಿಮೋನಿ.... ಹುಡ್ಗನ್ನ ನೀವೇ ಬೇಗ ಹುಡ್ಕಿ....ನಂಗೆ ಟೈಮಿಲ್ಲ... ಅದೂ ಅಲ್ದೇ ನೀವು ದೊಡ್ಡೋರು... ಚೆನ್ನಾಗಿ ಹುಡ್ಕ್ತೀರಾ...ನನ್ನ ಮನೆಯವರಿಗೂ ಕಷ್ಟ ತಪ್ಪೊತ್ತೆ..."ಎಂದಾಗ ಚುರುಕಾದೆ. "ಸರಿಯಮ್ಮಾ.... ಹಾಗೇ ಮಾಡೋಣವಂತೆ....ಸದ್ಯಕ್ಕೆ ಹುಡ್ಗನ ಹೆಸ್ರನ್ನ ಆರ್ಸಿಟ್ಟಿದ್ದೀನಿ....ಆದಷ್ಟು ಬೇಗ ಅದೇ ಹೆಸ್ರಿನ ಹುಡ್ಗನ್ನೂ ಹುಡ್ಕಿ ತರ್ತಿನಿ ಬಿಡು..."ಎನ್ನಲು ಅವಳ ಮೊಗದಲ್ಲಿ ಅತಿ ಕುತೂಹಲಮಿಳಿತ ಅಪೂರ್ವ ಕಾಂತಿ ಕಂಡೆ. ಒಳಗೊಳಗೇ ಖುಶಿಯೂ ಆಗುತಿತ್ತು... ಗುಂಡಿಗೆ ಬೀಳುತ್ತಿದ್ದಾಳೆಂದು. "ದೀದಿಮೋನಿ...ಏನು ಹೆಸ್ರು ಹೇಳಿ ಪ್ಲೀಸ್? ಅದೂ ಅಲ್ದೇ ಮೊದ್ಲು ಹೆಸ್ರನ್ನ ಆರ್ಸೋದು ಅಂದ್ರೆ ಏನರ್ಥ? ಅದೇನು ಹೇಳಿ.."ಎಂದು ಗೋಗರೆಯಲು ಗೆದ್ದ ನಗು ನನ್ನಲ್ಲಿ. "ನೋಡಮ್ಮಾ.. ನೀನು ಮಿಷ್ಟಿ... ಸೋ... ನಿನ್ನ ಹುಡ್ಗನ ಹೆಸ್ರು ‘ತೆತೋ’ಬ್ಯಾನರ್ಜಿನೋ ಇಲ್ಲಾ ಮುಖರ್ಜಿನೋ ಎಂದಾದ್ರೆ ಚೆನ್ನಾ ಅಲ್ವಾ? ಎಷ್ಟೆಂದ್ರೂ ಪೊಸಿಟಿವ್ ಅಟ್ರಾಕ್ಟ್ಸ್ ನೆಗಿಟಿವ್ ಏನಂತೀಯಾ?" ಎಂದು ನಗು ತಡೆಹಿಡಿಯಲು ಅವಳಿಗೆ ಮೊದಲು ಹೊಳೆಯಲಿಲ್ಲ. ಹೊಳೆದನಂತರ ಹೊಟ್ಟೆ ಹಿಡಿದುಕೊಂಡು ನಗತೊಡಗಿದಳು. ‘ಕಹಿ’ಗೆ ಬಂಗಾಲಿಯಲ್ಲಿ ‘ತೆತೋ’ ಎನ್ನುತ್ತಾರೆಂದು ಮೊದಲೇ ತಿಳಿದುಕೊಂಡಿದ್ದು ಸಾರ್ಥಕವಾಯಿತೆಂದು ಬೀಗಿದೆ. ಕೆಲವು ದಿನಗಳಲ್ಲೇ ನನ್ನ ವಯಸ್ಸು ತುಂಬಾ ಕಡಿಮೆಯಾದಂತೆ ಭಾಸವಾಯಿತು.

ಕನ್ನಡ ಭಾಷೆಯನ್ನು ಮಿಷ್ಟಿ ಹಿಡಿದುಕೊಂಡಷ್ಟು ಆಪ್ತವಾಗಿ ಬಂಗಾಳಿ ಭಾಷೆ ನನ್ನ ಹಿಡಿದುಕೊಳ್ಳದಿದ್ದರೂ, ಆಕೆ ಮಾತ್ರ ನನ್ನೊಳಗೇ ಇಳಿದು ಬಿಟ್ಟಿದ್ದಳು. ಆ ಗುಳಿ ಗಲ್ಲಗಳ ಒನಪು, ಮಳೆಯಂತೇ ಸುರಿಯುವ ಮಾತು, ಅವಳ ಮಾತಿಗೂ, ಮನಃಸ್ಥಿತಿಗೂ ಕನ್ನಡಿ ಹಿಡಿವಂತಿದ್ದ ಅವಳ ಹರಡಿದ ಕೂದಲು, ಅಂಟಿಕೊಂಡಷ್ಟೂ ಹತ್ತಿರವಾಗುವ ಆಕೆಯ ಆಪ್ತತೆ - ಎಲ್ಲವೂ ಅರಿಯದ ಮಮತೆಯನ್ನು ಆಕೆಯೆಡೆ ಮೂಡಿಸಿತ್ತು. ಈಕೆಯನ್ನು ಮೊದಲಬಾರಿ ನೋಡಿದಾಗಲೇ ಹದಿನೈದು ವರುಷದ ಕೆಳಗೆ ಆಕ್ಸಿಡೆಂಟ್ ಒಂದರಲ್ಲಿ ದೂರಾದ ತನ್ನವರಲ್ಲಿ ಓರ್ವಳಾಗಿದ್ದ ಪುಟ್ಟ ತಂಗಿಯ ನೆನಪಾಗಿತ್ತು. ಅದಕ್ಕೆ ಕಾರಣವೂ ಅದೇ ಗುಳಿ ಬೀಳುವ ಗಲ್ಲ...ಆಕೆಗೂ ಗುಳಿಗೆನ್ನೆಗಳಿದ್ದವು...ನಗುವಾಗ ಆಳವಾಗಿ ಕಣ್ಸೆಳುವ ಗುಲಾಬಿ ಗಲ್ಲಗಳು.....ಅಪ್ಪ, ಅಮ್ಮ, ಅಕ್ಕ ಎಲ್ಲರನ್ನೂ ಬಲಿತೆಗೆದುಕೊಂಡ ವಿಧಿ ನನ್ನ ಪ್ರೀತಿಯ ತಂಗಿಯನ್ನೂ ದೂರವಾಗಿಸಿತ್ತು. ಅದೇ ಕೊರಗು ಇಷ್ಟು ವರುಷವೂ ನನ್ನ ಜೊತೆಗಾರನಾಗಿದ್ದು.....ಬೇರೆ ಯಾರ ಸಂಗವೂ ಬೇಡವೆನಿಸಿತ್ತು ನನಗೆ. ಆದರೆ ಇಂದು ತಂಗಿ ಬದುಕಿದ್ದರೆ ಇವಳಷ್ಟೇ ವಯಸ್ಸಾಗಿರುತ್ತಿತ್ತಲ್ಲಾ ಎಂದೆಣಿಸಿಯೋ ಏನೋ....ಮಿಷ್ಟಿ ಬಹು ಬೇಗ ಆತ್ಮೀಯಳಾದಳೆನ್ನಬಹುದು. ನನ್ನ ಹುದುಗಿದ್ದ ಭಾವಗಳಿಗೆ ನೀರೆರೆದವಳೂ ಇವಳೇ ಅಲ್ಲವೇ? ದೀದಿಮೋನಿ..ಎಂದು ಬಾಯ್ತುಂಬ ಕರೆದು ಹೊಸ ಬಂಧವನ್ನೇ ಬೆಸೆದುಬಿಟ್ಟಳು ಪೋರಿ.

ಆದರೆ ಅದೇಕೋ ಎಂತೋ ಇತ್ತೀಚಿಗೆ ಆಕೆ ತೀರಾ ಇಳಿದು ಹೋದಂತೆ ಕಾಣಿಸುತ್ತಿದ್ದಳು. "ನೀನು ಈಗ ಮಿಷ್ಟಿ ತಿನ್ನೋದನ್ನೇ ಬಿಟ್ಟಿದ್ಯಾ ಹೇಗೆ? ಅಥವಾ ಬೆಂಗ್ಳೂರಲ್ಲಿ ನಿನ್ನ ಇಷ್ಟದ ರೊಸೊಗೊಲ್ಲ ಸಿಕ್ತಾ ಇಲ್ವಾ? ತುಂಬಾ ಸಣ್ಣಗಾಗ್ತಿದ್ದೀಯಾ... ಕಣ್ಣೂ ಆಳಕ್ಕೆ ಬಿದ್ದಂತಿದೆ.."ಎಂದ ನನ್ನ ಕಳಕಳಿಗೂ ಅದೇ ದೊಡ್ಡ ನಗು. "ದೀದಿಮೋನಿ.. ನೀವೂ ನನ್ನಮ್ಮನಂತೇ... ಅತೀ ಕಾಳಜಿ ಮಾಡ್ತೀರ... ಹೌದು.. ನಿಮ್ಮ ಕಣ್ಣು ಬಿತ್ತು ನೋಡಿ... ಅದ್ಕೇ ಸಿಹಿ ತಿಂತಾ ಇಲ್ಲಾ ಈಗ... ನೀವೊಂದು.." ಎಂದು ಹಾರಿಸಿ ತನ್ನ ರೂಮಿಗೆ ಹಾರಿದವಳು ವಾರವಾದರೂ ಪತ್ತೆಯಾಗದಿರಲು ದಿಗಿಲಾಯಿತು. ಇನ್ನು ಕಾಯಲು ಅರ್ಥವಿಲ್ಲವೆಂದೆಣಿಸಿದವಳೇ ಈ ಮೊದಲು ಕೆಲವು ಬಾರಿ ಭೇಟಿ ಕೊಟ್ಟಿದ್ದ ಅವಳ ರೂಮಿಗೇ ಹೊರಟೆ. ಕೇವಲ ಹದಿನೈದು ನಿಮಿಷದ ಹಾದಿ.....ತುಸು ದೂರ ಕ್ರಮಿಸಿದ ಕೂಡಲೇ ದೂರದಲ್ಲೆಲ್ಲೋ ಗುಡುಗಿದ ಸದ್ದಾಗಲು, ಮೇಲೆ ನೋಡಿದರೆ ಆಗಸದ ತುಂಬಾ ಕರಿಮೋಡಗಳ ಮೆರವಣಿಗೆ. ಕೊಡೆ ತರದ ನನ್ನ ಮರೆವಿಗೆ ಮನದಲ್ಲೇ ಬೈದುಕೊಳ್ಳುತ್ತಾ ಆಕೆಯ ರೂಮೊಳಗೆ ಹೊಕ್ಕೆ. ನೋಡಿದರೆ ಈಕೆ ಮಿಷ್ಟಿಯೇ ಹೌದೇ ಎನ್ನುವಷ್ಟು ಸಣ್ಣಗಾಗಿದ್ದಳು! ಮೊದಲಬಾರಿ ಆಕೆಯನ್ನು ನೋಡಿದಾಗ ತೊಟ್ಟಿದ್ದ ಅದೇ ಹಳದಿ ಖಾದಿ ಸೆಲ್ವಾರ್ ಹಾಕಿದ್ದಳು. ಕೈಯಲ್ಲೊಂದು ಪುಸ್ತಕವಿತ್ತು. ದೃಷ್ಟಿ ಮಾತ್ರ ಎಲ್ಲೋ ನೆಟ್ಟಿತ್ತು. ಕೆನ್ನೆಯೊಳಗಿನ ಗುಳಿ ದೊಡ್ಡದಾಗಿತ್ತೋ ಇಲ್ಲಾ ತುಂಬಿದ ಗಲ್ಲಗಳೇ ಗುಳಿ ಬಿದ್ದಿದ್ದವೋ ತಿಳಿಯದಂತಾಯಿತು. ಸದಾ ಹರಡಿರುತ್ತಿದ್ದ ಕೂದಲೂ ಇಂದು ಕಟ್ಟಿತ್ತು. ಸಣ್ಣಗೆ ನಡುಕವೊಂದು ಬೆನ್ನ ಹುರಿಯಲ್ಲಿ ಹುಟ್ಟಿ ಒಡಲಾಳದೊಳಗೆ ಹಬ್ಬಿದಂತಹ ಅನುಭವ. ಸದ್ದಿಲ್ಲದೇ ಒಳಹೋದವಳೇ ಅವಳ ಪಕ್ಕದಲ್ಲಿದ್ದ ಸ್ಟೂಲಿನ ಮೇಲೆ ಕುಳಿತು ಆಕೆಯ ತೊಡೆಯ ಮೇಲಿದ್ದ ಅವಳ ಎಡೆಗೈಯನ್ನು ಮೃದುವಾಗಿ ಮುಟ್ಟಿದೆ. ಬೆಚ್ಚಿದ ಆಕೆ ನನ್ನ ನೋಡಿದವಳೇ ಅದೇ ಮಾಸದ ದೊಡ್ಡ ನಗುವನ್ನು ಕಾಣಿಸಲು ತುಸು ತಂಪಾಯಿತು. "ಏನ್ ಹುಡ್ಗೀನೇ... ಇಷ್ಟು ದಿನಾ ಆದ್ರೂ ಬಂದಿಲ್ಲ.. ಹೆಸ್ರಿಗೆ ಮಾತ್ರ ದೀದಿಮೋನಿ... ನೋಡೋಕೆ ಬರೋಕೆ ಆಗೊಲ್ಲ ಅಲ್ವಾ? ಕಾದು ಕಾದು ಸಾಕಾಗಿ ನಾನೇ ಬಂದೆ ನೋಡು... ಈ ವಯಸ್ಸಲ್ಲಿ ನನ್ನೇ ಓಡಾಡಿಸ್ತೀಯಾ ನೀನು.. ಹೌದು ಏನಾಯ್ತು ಅಂತಾ ಹಿಗಿದ್ದೀಯಾ? ಹುಶಾರಿಲ್ವಾ?" ಎಂದು ಅವಳಂತೇ ಪಟಪಟನೆ ಮಾತಾಡಲು ಅವಳು ಕೊಟಿದ್ದು ಅದೇ ನಗು... ಗುಳಿಗಳು ಮಾತ್ರ ಮೊದಲಿಗಿಂತಲೂ ಆಳವಾದಂತೆನಿಸಿದವು.

"ದೀದಿಮೋನಿ... ನೀವು ಎಷ್ಟು ಟೆನ್ಷನ್ ಮಾಡ್ಕೋತೀರಪ್ಪಾ.. ಒಳ್ಳೇದಲ್ಲಾ ನೋಡಿ... ಹ್ಮ್ಂ.... ನಿಮ್ಗೊಂದು ಶಾಕಿಂಗ್ ನ್ಯೂಸ್... ನನ್ನ ಮದ್ವೆ ಆಯ್ತು..."ಎಂದು ನಗಲು ಬೆಸ್ತು ಬಿದ್ದೆ. ಆದರೆ ನೇರವಾಗಿ ನೋಡಲು, ಅವಳ ನಗುವಿನೊಳಗೆ ತುಂಟತನಕ್ಕಿಂತಲೂ ಬೇರೇನೋ ಭಾವ ಗೋಚರಿಸಿದಂತಾಯಿತು. "ನೋಡು.. ತಮಾಷೆ ಸಾಕು.. ನನ್ನ ಪ್ರಶ್ನೆಗಳಿಗೆ ಉತ್ತರ ಬೇಕು... ಮದ್ವೆ ಅಂತೆ... ಆಗೋಯ್ತಂತೆ.. ಯಾವಾಗ? ಯಾರು ಹುಡ್ಗ ಅದ್ನೂ ಹೇಳು.."ಎಂದು ಗದರಿದೆ. "ದೀದಿಮೋನಿ... ಹುಡ್ಗ ನಿಮ್ಗೆ ಚೆನ್ನಾಗಿ ಗೊತ್ತು... ಇನ್‌ಫಾಕ್ಟ್ ಅವ್ನ ಹೆಸ್ರನ್ನ ನೀವೇ ಮೊದ್ಲು ಹೇಳಿದ್ದು.."ಎನ್ನಲು ತುಂಬಾ ಗೊಂದಲ ನನ್ನಲ್ಲಿ. "ಯಾರೇ ಅದು? ಸುಮ್ನೆ ತಮಾಷೆ ಬೇಡ..."ಎಂದಿದ್ದೇ ತಡ ಎದ್ದು ನಾಲ್ಕು ಹೆಜ್ಜೆ ಹೋಗಿ ನನಗೆ ಬೆನ್ನಾಗಿಸಿದವಳೇ "ದೀದಿಮೋನಿ ಆ ಹುಡ್ಗನ ಹೆಸ್ರೂ ‘ತೆತೋ’... ಹೌದು...ಈ ಹೆಸ್ರಿನ ಜೊತೆನೇ ಇನ್ನು ನನ್ನ ವಾಸ.... ಇದ್ರೊಳ್ಗೆ ಮಿಷ್ಟಿ ಕಳ್ದೇ ಹೋದ್ಲು... ಇನ್ನು ಮಿಷ್ಟಿಗೆ ಅಸ್ತಿತ್ವನೇ ಇಲ್ಲಾ ಗೊತ್ತಾ... ಈ ಹುಡ್ಗನ ಜೊತೆಗೇ ನನ್ನ ಮದ್ವೆ ಮೊದ್ಲೇ ಆಗೋಗಿತ್ತು. ಎಷ್ಟು ದಿನದ ಹಿಂದೆ ಅಂತಾನೇ ಗೊತ್ತಿಲ್ಲಾ...ನಂಗೆ ಗೊತ್ತಾಗಿದ್ದು ವಾರದ ಹಿಂದೆ.... ತುಂಬಾ ಸುಸ್ತು ಅಂತಾ ಟೆಸ್ಟಿಗೆ ಹೋಗಿದ್ದೆ ನನ್ನ ಪರಿಚಯ ಡಾಕ್ಟರ್ ಹತ್ರ... ಕೆಲವೊಂದು ಟೆಸ್ಟ್ ನಂತ್ರ ಗೊತ್ತಾಯ್ತು ನೊಡಿ.... ನಂಗೆ ಸಿವಿಯರ್ ಡಯಾಬಿಟಿಸ್ ಇದೆ ಅಂತ... ಸೋ.. ಇನ್ಮುಂದೆ ಕಂಪ್ಲೀಟ್ಲೀ ನೋ ಟು ಮಿಷ್ಟಿ... ಯೆಸ್ ಟು ಓನ್ಲೀ ತೆತೋ.....ಅಂದ್ರೆ ಏನು ಹೇಳಿ ನೋಡೋಣ......" ಎಂದು ತಿರುಗಿದವಳೇ ಪಕಪಕನೆ ನಗಲು, ಹೊರಗೆ ಸೋನೆ ಮಳೆ ಶುರುವಾಯಿತು.....ಒಳಗೆಲ್ಲಾ ಮುಸಲಧಾರೆ!


***ನವೆಂಬರ್ ೨೧ರ ಕರ್ಮವೀರದಲ್ಲಿ ಪ್ರಕಟಿತ***


-ತೇಜಸ್ವಿನಿ ಹೆಗಡೆ.


ಬುಧವಾರ, ನವೆಂಬರ್ 17, 2010

ಸಾವಿನಾಚೆಯ ಬದುಕು...

ಗೋಲಿಯಾಡುತಿದ್ದ ಪುಟ್ಟನ ಕೈಯಿಂದ
ಗೋಲಿಯೊಂದುರುಳಿ ಮಾಯವಾಗಲು,
ಅಳುತ್ತಳುತ್ತಾ ಅಮ್ಮನ ಬಳಿ ಓಡಿದ.
‘ಅಳದಿರು ಕಂದಾ, ಕೊಡುವೆ ಹೊಸ ಗೋಲಿಯನ್ನೊಂದ’
ಎಂದು ತಬ್ಬಿ ಮುತ್ತನಿತ್ತ ಅಮ್ಮನ ಕಣ್ಗಳೊಳಗೆ
ಪುಟ್ಟನಿಗೇನೂ ಕಾಣಿಸಲೇ ಇಲ್ಲ!

ನಗುನಗುತ್ತಾ ಆಡ ಹೊರಟ ಪುಟ್ಟನ
ತಲೆಯೊಳಗೆಲ್ಲಾ ಹೊಸ ಗೋಲಿಯದೇ ಯೋಚನೆ....
ಆಕೆಯ ಮುಚ್ಚಿದ ಕಣ್‌ರೆಪ್ಪೆಗಳಂಚಿಂದ
ಅವ್ಯಾಹತ ನೀರ ಧಾರೆಯ ಕೋಡಿ....
ಆಕೆಯೂ ಬೇಡುತಿಹಳು ಎರಡೇ ಎರಡು ಗೋಲಿಗಳ
ಎರಡಿಲ್ಲದಿರೆ ಬೇಡ, ಒಂದಾದರೂ ಬೇಕಾಗಿದೆ,
ಗೋಲಿಯಾಡುವ ಪುಟ್ಟನ ಮುದ್ದು ಮೊಗವ ಸೆರೆ ಹಿಡಿಯಲು

ಪುಟ್ಟನ ಆಟದ ಗೋಲಿಗಳೋ
ತಟ್ಟೆಂದು ತರಬಲ್ಲಂಥವುಗಳೇ.
ಆದರೆ ಅವಳ ನಿರ್ಜೀವ ಖಾಲಿ ಕಣ್ಗಳಿಗೆ,
ಉಸಿರಿಲ್ಲದ ದೇಹದ ಗೋಲಿಗಳೇ ಜೀವ ತುಂಬ ಬಲ್ಲವು!
ತಡವರಿಸುವ ಕೈಗಳಿಗೆ, ಎಡವುವ ಕಾಲ್ಗಳಿಗೆ
ದಾರಿದೀವಿಗೆಯಾಗಬಲ್ಲ ಗೋಲಿಗಳ ದಾನವನ್ನಿತ್ತರೆ,
‘ಆತನ’ ಸನ್ನಿಧಿಯಲ್ಲೊಂದು ಸ್ಥಾನ ಖಾಯಂ ಆಗುವುದಂತೆ.

- ತೇಜಸ್ವಿನಿ ಹೆಗಡೆ

ಬುಧವಾರ, ನವೆಂಬರ್ 10, 2010

ಆಲಾಪಿನಿ


Courtesy - http://media.photobucket.com/
ನಿನ್ನ ಖಾಲಿ ಬದುಕೊಳಗೆ ರಂಗುಗಳನ್ನು
ನಾ ತುಂಬುತ್ತಾ ತುಳುಕುತ್ತಾ
ನನ್ನೊಳಗಿನ ನಾನು ಬಣ್ಣಗೆಟ್ಟು
ಖಾಲಿಯಾಗತೊಡಗಿದೆನಲ್ಲಾ...
ನೀ ಮಿಡಿದ ಶ್ರುತಿ ಲಯಕ್ಕೆ
ನಾ ತಾಳ ಹಾಕುತ್ತಾ ಕುಣಿಯುತ್ತಾ
ಅಪಸ್ವರವೊಂದು ನಡುವೆಲ್ಲೋ ಹುಟ್ಟಿ
ಮೆಲ್ಲನೆ ಕುಂಟತೊಡಗಿದೆನಲ್ಲಾ...

ಸಾಗರಿಯ ಬಿಳಿಯಂಚಿನ ಕಪ್ಪು ಸೀರೆ ಬೇಡ
ಸುಗಂಧಿಯ ಸುವಾಸನೆಯ ಮತ್ತೂ ಬೇಡ
ಮುಡಿಗೆ ಮಿನುಗುವ ತಾರೆಗಳು ಬೇಡ
ಕಿವಿಗಳಿಗೆ ವಜ್ರದೋಲೆಯೂ ಬೇಡ

ನನ್ನೊಳಗಿನ ಮಾಸಲು ಭಾವಗಳಿಗೆ
ನಿನ್ನ ಪ್ರೀತಿಯ ರಂಗುಗಳ ತುಂಬು
ನನ್ನೆದೆಯ ವೀಣಾವಾದನಕ್ಕೆ
ನೀ ರಾಗಮಾಂತ್ರಿಕನಾಗಿ ಸಾಥ್ ನೀಡು
ಇನ್ನೇನೂ ಕೇಳೆನು, ನಾನು ನಿನ್ನೇನೂ ಬೇಡೆನು
ಸಪ್ತವರ್ಣಗಳೊಳಗಿನ ಸುಪ್ತ ಸ್ವರಗಳ
ನುಡಿಸಿ ಬಿಡು ಒಮ್ಮೆ!

-ತೇಜಸ್ವಿನಿ

ಶುಕ್ರವಾರ, ನವೆಂಬರ್ 5, 2010

ಹಚ್ಚಿಡುವೆ ಸವಿ ನೆನಪುಗಳ ದೀಪ

ಹತ್ತು ವರುಷದ ಹಿಂದೆಯೂ ಹೀಗೇ ಬೆಳದಿಂಗಳಿತ್ತು. ದೀಪದ ಸಾಲುಗಳು ನಗುತ್ತಿದ್ದವು. ಗಂಟೆ ಹತ್ತಾದರೂ ನಿದ್ದೆ ಬಾರದ ಕಣ್ಗಳಿಗೆ ಸೋಲು ತರಲು ಕಿಟಿಕಿಯಿಂದ ಇಣುಕಾಡುವ ತಾರೆಗಳನ್ನು ಏಣಿಸುತ್ತಿದ್ದೆ. ಅಂತೂ ಹೊತ್ತಲ್ಲದ ಹೊತ್ತಿನಲ್ಲಿ ಸೋತು ಸೊಪ್ಪಾದ ರೆಪ್ಪೆಗಳು ಇನ್ನೇನು ಬಾಗ ಬೇಕು.... ಆಗ ಕೇಳಿತ್ತು ನಿಮ್ಮಿಬ್ಬರ ಕಿಲ ಕಿಲ ನಗು...ಪಿಸು ಪಿಸು ಮಾತು. ಇನ್ನೇನು ಸೋಲೊಪ್ಪಿಕೊಳ್ಳಲು ಬಾಗಿದ್ದ ರೆಪ್ಪೆಗಳು ಫಟ್ ಎಂದು ತೆರೆದಿದ್ದವು. ಗೆಲುವು ಅವುಗಳದ್ದಾಗಿತ್ತು. ಬಾನ ತಾರೆಗಳೆಲ್ಲಾ ಒಂದು ಕ್ಷಣ ದೀರ್ಘವಾಗಿ ಮಿಂಚಿ ನಗೆಯಾಡಿದ್ದವು.....ನಿದ್ದೆ ಬಂದಂತೆ ನಟಿಸಲು ಎಂದೋ ಕಲಿತಿದ್ದ ಕಣ್ಗಳಿಗೆ ಹೊಸತೇನೂ ಹೇಳಿಕೊಡಬೇಕಾಗಲಿಲ್ಲ. ನನ್ನ ನಿದ್ದೆಯ ನಂಬಿಯೋ ಇಲ್ಲಾ ನಂಬಿದಂತೇ ನಟಿಸಿಯೋ ನೀವಿಬ್ಬರೂ ಪಕ್ಕದಲ್ಲಿದ್ದ ಸ್ಟೂಲಿನ ಮೇಲೆ ಆ ಪೆಟ್ಟಿಗೆಯನ್ನಿಟ್ಟಿರಿ. ಆಗ ಕೇಳಿತು ಹಾಲ್‌ನಲ್ಲಿದ್ದ ಗಡಿಯಾರದ ಸದ್ದು. ಗಂಟೆ ಹನ್ನೆರಡಾದದ್ದೇ ತಡ, ಕೋಣೆಯ ಲೈಟ್ ಬೆಳಗಿ, ಎಚ್ಚರದಿಂದಲೇ ಇದ್ದ ನನ್ನ ಎಬ್ಬಿಸಿದಿರಿ. ಮುಂದಿನದೆಲ್ಲಾ ದೊಡ್ಡ ದೀಪಾವಳಿ! ನಗು, ಪಿಸು ಮಾತು, "ಶ್‌ಶ್‌ಶ್.. ಸಣ್ಣಕೆ ಮಾತಾಡು.. ಪಕ್ಕದ ಕೋಣೇಲಿಪ್ಪ ಅಪ್ಪ ಅಮ್ಮಂಗೆ ಎಚ್ಚರಾ ಆದ್ರೆ ಬೈತ್.." ಅನ್ನೋ ಸಣ್ಣ ಗದರಿಕೆಯ ನಡುವೆಯೇ ತೂರಿಕೊಳ್ಳುವ ಮುಸಿ ಮುಸಿ ನಗು. ರಟ್ಟಿನ ಪೆಟ್ಟಿಗೆಯೊಳಗಿನ ಕೇಕ್ ನಮ್ಮ ಹೊಟ್ಟೆಯ ಸೇರಿ ತುಂಬಿದ ಮೇಲೆ, ನನ್ನಪ್ಪಿ ಶುಭ ಕೋರಿದ ನೀವಿಬ್ಬರೂ ಹಾಯಾಗಿ ನಿದ್ದೆಗಿಳಿದಿರಿ. ಅಂದು ಇಪ್ಪತ್ತಕ್ಕೆ ಮತ್ತೊಂದು ವರುಷ ಸೇರಿಸಿಕೊಂಡು ನಿಮಗೆ ದೊಡ್ಡಕ್ಕನಾದ ನಾನು ಮತ್ತಷ್ಟು ಹಿರಿದಾಗಿಹೋಗಿದ್ದೆ. ಮರುದಿನ ಬೆಳಗ್ಗೆ ಸೂರ್ಯ ಕಣ್ ಚುಚ್ಚಿ ಎಬ್ಬಿಸುವಾಗಲೇ ಕೇಳಿತ್ತು ಅಮ್ಮನ ಸಿಹಿ ಧ್ವನಿ.. "ಹೇ ಎದ್ಕಳ್ರೇ.. ಅಕ್ಕಂಗೆ ವಿಶ್ ಮಾಡ್ತ್ರಿಲ್ಯ?.. ಮರ್ತೇ ಹೋಜ? ಅದು ಎದ್ಕಂಬದ್ರೊಳ್ಗೆ ನಿಂಗ ಎದ್ಕಂಡು ವಿಶ್ ಮಾಡಿ..". ಅಮ್ಮನ ಮಾತುಗಳನ್ನು ಕೇಳುತ್ತಾ ನಾನು ಮತ್ತೂ ನಿದ್ದೆಗೆ ಜಾರತೊಡಗಿದರೆ ನಿಮ್ಮಿಬ್ಬರ ದೊಡ್ಡ ನಗು ಅಲೆ ಅಲೆಯಾಗಿ ನನ್ನ ಅಪ್ಪಿ ಎಬ್ಬಿಸುತ್ತಿತ್ತು.

ಇಂದು....ಸರಿಯಾಗಿ ಹತ್ತುವರುಷಗಳಾನಂತರವೂ.....ಬಾನಲ್ಲಿ ಅದೇ  ಬಣ್ಣದ ಬೆಳಕಿನ ಚಿತ್ತಾರವಿದೆ....ದೀಪಗಳು ಸಾಲುಗಟ್ಟಲು ಸಜ್ಜಾಗಿವೆ....ಗಂಟೆ ಹನ್ನೆರಡು ಕಳೆದೇ ಹಲವು ತಾಸು ಕಳೆದಿವೆ. ಆದರೆ ನೀವಿಬ್ಬರು ಮಾತ್ರ ನನ್ನೊಂದಿಗಿಲ್ಲ. ಅಪ್ಪ ಅಮ್ಮನ ಮಮತೆಯ ಅಪ್ಪುಗೆಯೂ ಇಲ್ಲ. ನನ್ನ ಸಾಗರನೂರಿನಲ್ಲಿರುವ ನೀವೆಲ್ಲರು ಜಂಗಮ ವಾಣಿಯಿಂದ ಹೇಳಿದ ಶುಭ ಕೋರಿಕೆಗಳು ಮನಸನ್ನಾಗಲೀ ಹೊಟ್ಟೆಯನ್ನಾಗಲೀ ತುಂಬಲಿಲ್ಲ. ಆದರೆ ಕಳೆದ ಸವಿ ನೆನಪುಗಳ ಮೆರವಣಿಗೆ ಮಾತ್ರ ಮನಸೊಳಗೆ ಸಾಲು ದೀಪಗಳನ್ನು ಹಚ್ಚಿ ಸದಾ ಬೆಳಗುತ್ತಲೇ ಇದೆ. ‘ಸವಿ ನೆನಪುಗಳು ಬೇಕು ಸವಿಯಲೀ ಬದುಕು’



ಮನದ ಮೂಲೆಯ
ಕಡೆಯ ಕೊಳೆಯನೂ
ಕಳೆದು ಹಾಕುವ ಬನ್ನಿರಿ...
ಕನಸುಗಳ ರಂಗೋಲಿಯೆಳೆದು
ನಡುವೆ ದೀಪವ ಹಚ್ಚಿರಿ... 





ಸಹಮಾನಸಿಗರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು :)



-ತೇಜಸ್ವಿನಿ ಹೆಗಡೆ.