ಶನಿವಾರ, ಫೆಬ್ರವರಿ 13, 2010

ಬೂ ಕಲರ್ Shoeವೂ, ‘ನ’= Foxಉಉಊಊ....

"ಹಾಯ್ ಅಮ್ಮಾ... ಅದಿತಿ ಬಂತು ಪೇ ಹೋಮಿಂದ..(ಪ್ಲೇಹೋಂ)" ಎಂದು ಮುಗುಳ್ನಗುತ್ತಾ ನನ್ನಪ್ಪಿದಾಗ ಏನೋ ಹೊಸ ಪುಳಕ.....ವರ್ಣಿಸಲಾಗದ ಆನಂದ. ಪ್ರತಿದಿನವೂ ಇದೇ ಪುನರಾವರ್ತನಗೊಂಡರೂ, ಪ್ರತಿಸಲವೂ ನೂತನ ಭಾವದ ಆಗಮನ. ಬೆಳಗ್ಗೆ ಎಬ್ಬಿಸಿ, ಗಡಿಬಿಡಿ ಮಾಡಿ ತಿಂಡಿ ತಿನ್ನಿಸಿ, ರೆಡಿ ಮಾಡಿ ಕಳುಹಿಸುವಾಗ ಮಾತ್ರ ಉಸ್ಸಪ್ಪ ಅನ್ನಿಸಿದರೂ, ಅವಳು ಹೋದ ಆ ಎರಡೂವರೆ ತಾಸು ಮಾತ್ರ ಮನೆ, ಮನವೆಲ್ಲಾ ಖಾಲಿ ಖಾಲಿ. ಒಂದಿಷ್ಟು ಮೈಲ್ ನೋಡು, ಬ್ಲಾಗ್ ಓದು, ಅಡಿಗೆ ತಯಾರಿ ಮಾಡಿ ಸ್ನಾನ, ಪೂಜೆ ಮುಗಿಸುವ ವೇಳೆಗೆ ಮತ್ತೆ ಹಾಜಾರು. ಬರುವಾಗ, ಅಷ್ಟು ದೂರದಿಂದಲೇ ಟೀಚರ್ ಕಲಿಸಿದ ಹೊಸ ರೈಮ್ಸ್‌ನ ಮೊದಲ ಸಾಲನ್ನು ಗುನುಗುತ್ತಾ, ತನ್ನ ಗೆಳೆಯ/ಗೆಳತಿಯರ ಹೆಸರು ಸರಿಯಾಗಿ ನೆನಪಿಗೆ ಬರದಿದ್ದರೂ ಅರ್ಧಂಬರ್ಧ ಉಚ್ಚರಿಸುತ್ತಾ, ಅವರ ಬಗ್ಗೆ ಏನೇನೋ ದೂರುತ್ತಾ, ಮುದ್ದುಮುದ್ದಾಗಿ ಮಾತಾಡುತ್ತಾ, ಒಳಬಂದು ‘ಹಾಯ್..ಅಮ್ಮಾ..’ ಎಂದರೆ ನನಗೂ ತುಂಬಾ ಹಾಯೆನಿಸುತ್ತದೆ. -
ಅಂದು ‘ಅಕ್ಕಾ, ಪುಟ್ಟಿಯ ಚಪ್ಪಲಿ ಬಾರ್ ಹಾಳಾಗ್ತಾ ಬಂದಿದೆ, ಹೊಸತು ತಗೋಬೇಕು ಈ ಶನಿವಾರ.." ಎಂದು ನನ್ನ ಕೆಲಸದ ಹುಡುಗಿ ಶೋಭಾ ಅಂದಾಗ, ಅಲ್ಲೇ ಇದ್ದ ಪುಟ್ಟಿ "ಅಮ್ಮಾ ಬೂ(ಬ್ಲೂ) ಕಲರ್ ಚಪ್ಪಲು ಬೇಕು ಪುಟ್ಟಂಗೆ, ಇಲ್ದೇ ಹೋದ್ರೆ ಓಯೆಂಜ್ ಆದ್ರೂ ಅಡ್ಡಿಲ್ಲೆ..." ಎಂದಾಗ ಬೆರಗಾಗಿದ್ದೆ. ಅಬ್ಬಾ! ಇನ್ನೂ ಎರಡೂವರೆವರ್ಷವಷ್ಟೇ. ಈಗಲೇ ಈ ರೀತಿ.. ಇನ್ನು ಮುಂದೆ ಹೇಗೋ... ಎಂದೆನಿಸಿತ್ತು. ಶನಿವಾರ ಅವಳ ಚಪ್ಪಲಿಗೆಂದೇ ಹೊರಟಾಯಿತು. ಕೆಳಮಾಳಿಗೆಯಲ್ಲಿದ್ದ ಚಪ್ಪಲ್ ಅಂಗಡಿಗೆ ನನ್ನವರು ಹಾಗೂ ಅದಿತಿ ಹೋದರು. ನಾನು ಹಾಗೂ ಶೋಭಾ ಕಾರಿನಲ್ಲೇ ಕುಳಿತು ಕಾಯತೊಡಗಿದವು. ಅಬ್ಬಬ್ಬಾ ಎಂದರೆ ೧೫ ನಿಮಿಷವಾಗಬಹುದು, ಆಮೇಲೆ ಅವಳನ್ನು ಪಾರ್ಕಿಗೂ ಕರೆದೊಯ್ದಾರಾಯೆಂತೆಂದು ಅಂದಾಜಿಸಿದ್ದೆ. ಆದರೆ ೩೦ ನಿಮಿಷಗಳಾದರೂ ಅಪ್ಪ ಮಗಳ ಪತ್ತೆಯಿಲ್ಲ. ಸಹನೆ ಸ್ವಲ್ಪ ಸ್ವಲ್ಪವಾಗಿ ಸೋರ ತೊಡಗಿತು. ಅಲ್ಲಾ... ಕಾಲಳತೆಗೆ ಸೂಕ್ತವಾಗಿರುವ ಒಂದು ಜೊತೆ ಪುಟ್ಟ ಚಪ್ಪಲಿಯನ್ನು ಆರಿಸಲು ಇಷ್ಟೊತ್ತು ಬೇಕೆ? ಅಥವಾ ಇವರು ಮುದ್ದು ಮಗಳಿಗಾಗಿ ತಾವೇ ಚಪ್ಪಲ್ ತಯಾರಿಸಿ ತರುತ್ತಿದ್ದಾರೋ ಎಂದೇ ತಿಳಿಯದಂತಾಯಿತು. ಫೋನಾಯಿಸೋಣವೆಂದರೆ ಮೊಬೈಲ್ ಕಾರಿನೊಳಗೇ ಬಿಟ್ಟು ಹೋಗಿದ್ದರು. ಸರಿ ಇನ್ನೇನು ಮಾಡುವುದೆಂದು ಮತ್ತೆ ೧೫ ನಿಮಿಷ ಹಾಗೇ ಕುಳಿತೆ. ಆಮೇಲೆ ತಡೆಯಲಾಗದೇ ಶೋಭಾಳನ್ನು ಕೆಳಗಿನ ಮಾಳಿಗೆಗೆ ಕಳುಹಿಸಿ ನನ್ನವರನ್ನು ಮೇಲೆ ಕಳುಹಿಸಲೆಂದೆ. ಅವಳು ಹೋದ ನಿಮಿಷದೊಳಗೇ ಇವರು ಕಾರಿನ ಬಳಿ ಬಂದರು.

"ಇದೆಂಥಾದ್ದು ಮಾರಾಯ್ರೆ? ಇನ್ನೂ ಚಪ್ಪಲ್ ಆರ್ಸಿ ಆಜಿಲ್ಯ ನಿಮ್ಗೆ? ಅದ್ರ ಕಾಲಿಗೆ ಸರಿ ಅಪ್ಪುದನ್ನ ನೋಡೀ ತಗಂಡ್ರಾತಪ್ಪ. ಅದ್ಕಾಗಿ ಇಷ್ಟೊತ್ತು ಟೈಮ್ ವೇಸ್ಟ್ ಎಂಥಕ್ಕೆ? ಅದಿತಿಗೆ ಬೋರ್‍ಆಗಿಕ್ಕು.." ಎಂದು ವರಾತ ತೆಗೆಯುತ್ತಾ ಅವರತ್ತ ನೋಡಿದರೆ ಅವರು ಬರೀ ನಗುತ್ತಿದ್ದರು."ಅಯ್ಯೋ ಮಾರಾಯ್ತಿ.. ನನ್ನಿಂದಲ್ದೇ ಲೇಟಾಗ್ತಾ ಇಪ್ಪದು. ನಿನ್ನ ಮಗ್ಳಿಂದನೇಯಾ... ಹೋಗಿದ್ದೇ ಚಪ್ಪಲ್ ರಾಶಿ ಮಧ್ಯೆ ಸ್ಟೂಲ್ ಹಾಕಿ ಕೂತ್ಕಂಡ್ತು. ಆಮೇಲೆ ಒಂದೊಂದಾಗಿ ಹಾಕಿ ನೋಡದು.. ಇದು ಬೇಡ ಅಪ್ಪ, ಇದು ಚಿಂವ್ ಚಿಂವ್ ಹೇಳ್ತಿಲ್ಲೆ.. ಇದು ಬೂ ಕಲರ್ ಅಲ್ಲಾ.. ಓಯೆಂಜ್ ಕೊಡು ನಂಗೆ, ಬಾಕು(ಬ್ಲಾಕ್) ಬೇಡ, .." ಹೀಂಗೇ ಹೇಳ್ತಾ ಇದ್ದು ಆವಾಗಿಂದ. ನಾ ಎಷ್ಟು ಹೇಳಿದ್ರೂ ಕೇಳ್ತಿಲ್ಲೆ.."ಅಪ್ಪ...ಪುಟ್ಟಂಗೆ ಚಿಂವ್ ಚಿಂವ್ ಹೇಳು ಬೂ ಕಲರ್ ಚಪ್ಪಲೇ ಬೇಕು.." ಹೇಳ್ತಾ ಇದ್ದು. ಅದೇ ಕಲರ್‌ನಲ್ಲಿಪ್ಪು ಚಪ್ಪಲ್ ಚಿಂವ್ ಚಿಂವ್ ಹೇಳ್ತಿಲ್ಲೆ.. ಶಬ್ದ ಮಾಡು ಚಪ್ಪಲ್ ಬೂ ಕಲರ್‌ನಲ್ಲಿಲ್ಲೆ... ಎಂತ ಮಾಡ್ಲಿ ಹೇಳು? ಒರೆಂಜ್ ಕಲರ್‌ನಲ್ಲಿ ಒಂದು ಚಪ್ಪಲ್ ಇದ್ದು, ಚೊಲೋ ಇದ್ದು...." ಎಂದು ಅಸಹಾಯಕತೆ ತೋಡಿಕೊಂಡಾಗ ದಂಗಾಗಿ ಹೋಗಿದ್ದೆ. ‘ಅಕ್ಕಾ ಇವ್ಳು ಭಾರಿ ಜೋರಿದ್ದಾಳ... ಅಲ್ಲಿ ಪಾಪ ಅವ್ರಿಗೆ ಸಾಕೋ ಮಾಡ್ಬಿಟ್ಟಿದ್ಲು. ಅದು ಕೊಡಿ, ಇದು ಕೊಡಿ, ಆ ಕಲರ್ ಬೇಡ ಅಂತೆಲ್ಲಾ ಹೇಳಿ ಎಲ್ಲಾ ಚಪ್ಪಲಿಗಳನ್ನು ಕೆಳ್ಗೆ ಹಾಕಿ ತಾನು ಮಧ್ಯ ಕೂತಿದ್ಲು.."ಎಂದು ಶೋಭಾಳೂ ಅಂದಾಗ ಪುಟ್ಟಿಯ ಹೊಸ ಅವತಾರ ನೋಡಿದ್ದೆ. ಆಮೇಲೆ ನಾನು ಅವಳ ಕಾಲಿಗೆ ಸರಿ ಹೊಂದುವ ಒಯೆಂಜ್ ಕಲರ್ ಚಪ್ಪಲ್‌ನ್ನೇ ಖರೀದಿಸಲು ಹೇಳಿ, ಪೆಪ್ಪರ್‌ಮೆಂಟ್ ಲಂಚವನ್ನಿತ್ತು ಅವಳನ್ನು ಸಮಾಧಾನಿಸಿದೆ. ಆದರೆ ಚೊಕೋಲೇಟ್ ಸವಿ ಮರೆಯಾದಂತೇ "ಬೂ ಕಲರ್" ನೆನಪು ಮತ್ತೆ ಮರಳುತಿತ್ತು. ಮನೆಗೆ ಬಂದ ಮೇಲೆ ಎಲ್ಲರೂ ಸೇರಿ ಒರೆಂಜ್ ಕಲರ್ ಚಪ್ಪಲಿಯೇ ತುಂಬಾ ಚೆನ್ನಾಗಿದ್ದು, ಇದನ್ನು ಅದಿತಿಗಾಗಿಯೇ ಮಾಡಿಸಿದ್ದು, ಇದ್ರಲ್ಲಿ ಪುಟ್ಟಿ ತುಂಬಾ ಚೆನ್ನಾಗಿ ಕಾಣ್ತಾಳೆ...ಎಂದೆಲ್ಲಾ ಪೂಸಿ ಹೊಡೆದು, ಅವಳ ಕಿವಿಯಲ್ಲಿ "ಲಾಲ್‌ಬಾಗ್" ಇಟ್ಟಾಗಲೇ ಅವಳೂ ಒಪ್ಪಿ ಹಾಕಿಕೊಂಡದ್ದು! [ನನ್ನವರು ಅದಿತಿಯ ಕಿವಿಯಲ್ಲಿ ಹೂ ಇಡುವುದಕ್ಕೆ ಲಾಲ್‌ಬಾಗ್ ಅನ್ನುತ್ತಾರೆ :)]

ಮತ್ತೊಂದು ದಿನ ನಾನು ಚಾರ್ಟ್ ತೋರಿಸಿ, ಕನ್ನಡ ಸ್ವರ್ಣಮಾಲೆಗಳನ್ನು ಕಲಿಸುತ್ತಿದ್ದೆ. ಅ - ಅಮ್ಮ, ಆ-ಆನೆ, ಎಂದು ಹೇಳಿ ಕೊಡುತ್ತಿದ್ದಂತೇ ಆಕೆ "ನೀ ಚುಮ್ಮಿರು ಅಮ್ಮ.. ಅ-ಅಮ್ಮ ಅಲ್ಲ, ಅ-ಅರಸ.... ಟೀಚಲು ಅದನ್ನೇ ಹೇಕೊಟ್ಟಿದ್ದು.."ಎಂದಾಗ ಸ್ವಲ್ಪ ಸಿಟ್ಟು ಬಂದಿತ್ತು ಟೀಚರ್ ಮೇಲೆ. ನನ್ನ ಜಾಗವನ್ನು ಕಸಿದು ಯಾರೋ ಹೇಳಹೆಸರಿಲ್ಲದ ಅರಸನಿಗೆ ಕೊಟ್ಟಿದ್ದಕ್ಕಾಗಿ. ಆದರೂ ಅವಳ ಹಠಕ್ಕೆ ತಲೆಬಾಗಿ ಅ-ಅರಸ ಎಂದೇ ಹೇಳಬೇಕಾಯಿತು. ಮುಂದೆ ನ-ನರಿ ಎಂದು ಹೇಳಿಕೊಡುವಾಗ ಥಟ್ಟೆಂದು ಆಕೆ ನ-ಫೋಕ್ಸ್ ಎನ್ನಬೇಕೆ? ನ-ನರಿ, F for Fox ಎಂದು ನಾನಾವಿಧದಲ್ಲಿ ತಿಳಿಹೇಳಿದರೂ ಒಪ್ಪದ ಅವಳಜೊತೆ ನಾನೂ ನ-ಫೋಕ್ಸ್ ಹೇಳಬೇಕಾಯಿತು. ಪ್ಲೇಹೋಂ‌ನ ಇಂಗ್ಲೀಷ್ ಹಾಗೂ ನನ್ನ ಕನ್ನಡ ಎರಡೂ ಜೊತೆ ಸೇರಿಯಾದ ಕಂಗ್ಲಿಷ್ ಚಿತ್ರಾನ್ನವನ್ನು ವಿಷಾದಿಂದಲೇ ಅರಗಿಸಿಕೊಂಡೆ.

ಈಗೇನೋ ಅವಳ ಕಲಿಕೆಯ ಹುಮ್ಮಸ್ಸು ಎಲ್ಲೆಯನ್ನು ಮೀಟಿದೆ. ಹೊಸತನದಲ್ಲಿ ಎಲ್ಲವೂ ಹುರುಪಿನಿಂದಲೇ ಕೂಡಿರುತ್ತದೆ ಅನ್ನಿ. ಈಗ ಪ್ಲೇಹೋಂ‌ನಿಂದ ಬಂದಕೂಡಲೇ "ಅಮ್ಮ ಪುಟ್ಟಂಗೆ ಓದ್ಸು..." ಅನ್ನೋಳು, ಮುಂದೆ ಮಲ್ಗಬೇಡ, ಓದ್ಕೋ ಇಂದ್ರೂ ಕೇಳ್ದೇ ಹಠಮಾಡೋ ದಿನವೂ ಬರುತ್ತದೆ ಎನ್ನುವುದು ಚೆನ್ನಾಗಿ ಗೊತ್ತು ಬಿಡಿ. ಅವತ್ತೂ ಹಾಗೇ...ಬಂದವಳೇ ಅವಳ ದೊಡ್ಡ ದೊಡ್ಡ ಚಿತ್ರಗಳುಳ್ಳ ಪುಸ್ತಕವನ್ನು ಹಿಡಿದು ಕುಳಿತಳು. ಚಿತ್ರಗಳನ್ನು ಗುರುತಿಸುತ್ತಾ ಅವುಗಳ ಹೆಸರುಗಳನ್ನು ಹೇಳುತ್ತಿದ್ದಳು. ನಾನೂ ಅಲ್ಲೇ ಕುಳಿತು ಪೇಪರ್‌ಮೇಲೆ ಕಣ್ಣಾಡಿಸುತ್ತಿದ್ದೆ. ಇದ್ದಕಿದ್ದಂತೇ ಅವಳು "ಅಮ್ಮಾ..ಅಜ್ಜಿ ಹತ್ರನೂ ಚೂಷ್ಮ ಇದ್ದು ಅಲ್ದಾ.."ಎಂದು ಕೇಳಲು ನನಗೆ ಅರ್ಥವೇ ಆಗಲಿಲ್ಲ. "ಎಂಥದ್ದೇ ಅದು ಚೂಷ್ಮ? ಎಲ್ಲಿದ್ದೆ ಅಜ್ಜಿ ಹತ್ರ?" ಎಂದು ಕೇಳಿದ್ದೇ ತಡ ಕೈಯಲ್ಲಿದ್ದ ಪುಸ್ತಕವನ್ನು ನನಗೆ ಕೊಟ್ಟು ಚಷ್ಮ(ಕನ್ನಡಕ)ದ ಚಿತ್ರವನ್ನು ತೋರಿದಳು. ಈಗಲೂ ಅಮ್ಮನ ಕನ್ನಡಕವನ್ನು ನೋಡಿದರೆ, ಚೂಷ್ಮದ ನೆನಪೇ ಆಗುತ್ತದೆ ನನಗೆ :)

ನನ್ನ ಬಾಲ್ಯವನ್ನು ಹೋಲಿಸಿಕೊಂಡರೆ ಅರಿಯದ ಬೆರಗು ಮೂಡತ್ತದೆ ಅದಿತಿಯನ್ನು ಕಂಡಾಗ. ನನ್ನ ಮಾನಸ ಸಹೋದರನೊಬ್ಬ ಹೇಳುತ್ತಿರುತ್ತಾನೆ. `ಈಗ ಎರಡು ವರುಷಗಳ ಮಧ್ಯೆಯೂ Generation Gap ಇದುತ್ತದೆಯಕ್ಕ' ಎಂದು. ನನ್ನ ಕಳೆದುಹೋದ ಬಾಲ್ಯ ಹಾಗೂ ಈಗ ನೋಡುತ್ತಿರುವ ಪುಟ್ಟಿಯ ಬಾಲ್ಯದ ನಡುವೆ ಬಹಳ ದೊಡ್ಡ Gap ಇದೆ...ನಿಜ. ಆದರೆ ಮತ್ತೆ ಬರದ ಬಾಲ್ಯದ ಆ ಸವಿದಿನಗಳ ಬೇಸರ ಮಗಳ ಬಾಲ್ಯದ ಅನುಭೂತಿಯಲ್ಲಿ ಮರೆಯಾಗುತ್ತಿದೆ. ಎರಡೂವರೆ ವರುಷದ ಈ ಪೋರಿಯ ತುಂಟಾಗಳ ನಡುವೆಯೆಲ್ಲೋ ನನ್ನ ಬಾಲ್ಯವೂ ಹಸಿರಾಗುತ್ತಿದೆ.

-ತೇಜಸ್ವಿನಿ

25 ಕಾಮೆಂಟ್‌ಗಳು:

umesh desai ಹೇಳಿದರು...

ಆ ಬಾಲ್ಯದ ಆಟಾನೇ ಹಾಗಲ್ಲವಾ ಏನಾಡಿದ್ರೂ ಏನ್ಮಾಡಿದ್ರೂ ಮುದ್ದಾಗಿರುತ್ತದೆ,. "ಲಾಲಬಾಗ್" ಇಡೋದು ಹೊಸ ಪದಪ್ರಯೋಗ
ಅದಿತಿ ಈಗ ಖುಷಿಯಾಗಿದ್ದಾಳೆ ಅಂದ್ಕೊತೀನಿ...

ಮನಸು ಹೇಳಿದರು...

ಮಗಳು ಮತ್ತು ಜೊತೆಗೆ ಮುದ್ದು ಮಾತು ಎಲ್ಲವು ಚೆನ್ನ, ಬಾಲ್ಯದ ಜೀವನವೆ ಚೆನ್ನಾಗಿರುತ್ತೆ.

ವಿ.ಆರ್.ಭಟ್ ಹೇಳಿದರು...

ಬಾಲ್ಯವನ್ನು ಮತ್ತೆ ಕೆದಕಿದರೆ, ಮತ್ತೊಮ್ಮೆ ಬಾಲ್ಯಕ್ಕೆ ಹೋಗಿಬಿಡುವ ಇಚ್ಛೆ ! ಚೆನ್ನಾಗಿದೆ !

ಚುಕ್ಕಿಚಿತ್ತಾರ ಹೇಳಿದರು...

ಇ೦ದಿನ ಮಕ್ಕಳು ತು೦ಬಾ ಚೂಸಿ....! ನನ್ನದು ದುಪ್ಪಟ್ಟು ಅನುಭವ ಮತ್ತು ಅವಸ್ತೆ....!!!!
ಚ೦ದದ ಲೇಖನ...

ದಿನಕರ ಮೊಗೇರ.. ಹೇಳಿದರು...

ತೇಜಸ್ವಿನಿ ಮೇಡಂ,
ಹೌದು , ನೀವು ಹೇಳಿದ್ದು ನಿಜ..... ನಾವು ಮಾತು ಕಲಿಯದೇ ಇದ್ದ ವಯಸ್ಸಲ್ಲಿ ಈಗಿನ ಮಕ್ಕಳು ರಿಮೆಸ್ ಹೇಳುತ್ತಿದ್ದಾರೆ.... ನಿಮ್ಮ ಮಗಳು ಅದಿತಿ ನನಗೆ ತುಂಬಾ ಇಷ್ಟವಾದಳು..... ಮಕ್ಕಳು ತಪ್ಪಾದರೂ ಮಾತನಾಡಲು ಇಷ್ಟಪಡುತ್ತಾರೆ, ಮಕ್ಕಳು ಮಕ್ಕಳೇ ಅಲ್ಲವೇ....... ದೇವರುಅದಿತಿಯನ್ನು ಚೆನ್ನಾಗಿ ಇಟ್ಟಿರಲಿ......

ಸುಮ ಹೇಳಿದರು...

ಸುಮಾರು ಐದು ವರ್ಷದವರೆಗೆ ಮಕ್ಕಳು ತುಂಬ ಚೂಟಿಯಾಗಿರುತ್ತವೆ. ಕಂಡದ್ದನ್ನೆಲ್ಲ ಅನುಕರಿಸುವ , ಕಲಿಯುವ ತವಕ ಅವಕ್ಕೆ. ಅವರಾಡುವ ಮುದ್ದು ಮಾತುಗಳು , ಅವರ ಹಠ , ಪ್ರಶ್ನೆಗಳು ಎಲ್ಲವೂ ಚೆಂದವೇ. ಅವುಗಳನ್ನು ನೋಡುತ್ತಾ ನಮ್ಮ ಬಾಲ್ಯದಲ್ಲಿ ಜಾರುವುದು ಸಹಜವೇ. ಅವರಿಂದ ಕಲಿಯುತ್ತಾ , ಅವರಿಗೆ ಕಲಿಸುತ್ತ ನಾವು ಮಾನಸಿಕವಾಗಿ ತುಂಬ ಬೆಳೆಯುತ್ತೇವೆಂದು ನನಗನ್ನಿಸುತ್ತದೆ.
ಹಾಂ ಎಲ್ಲಾ ಮಕ್ಕಳಿಗೂ ಅವರ ಮಿಸ್ ಹೇಳಿದ್ದೇ ವೇದವಾಕ್ಯ. ನಾವೆಷ್ಟೇ ಓದಿದ್ದರೂ ಅವರಿಗದು ಲೆಕ್ಕಕ್ಕಿಲ್ಲ. ಮಿಸ್ ಹೇಳಿಕೊಟ್ಟದ್ದನ್ನು ಬದಲಾಯಿಸಲು ಸಾಧ್ಯವೇ ಇಲ್ಲ . ನನಗೂ ಇದು ಅನುಭವಕ್ಕೆ ಬಂದಿದೆ.
ನಿಮ್ಮ ಪುಟ್ಟ ಅದಿತಿ ತುಂಬಾ ಮುದ್ದಗಿದ್ದು. ಅದರ ಬಾಲಲೀಲೆಗಳು ಹೀಗೆ ಮುಂದುವರೆಯಲಿ ... ನೀವದನ್ನು ಹೀಗೆ ನಮ್ಮೊಂದಿಗೆ ಹಂಚಿಕೊಳ್ಳಿ.

ಕನಸು ಹೇಳಿದರು...

ಹಾಯ್
ಮೇಡಂ
ನಿಮ್ಮ ಪುಟ್ಟಿಯ ಚಿತ್ರಗಳು
ಮುದ್ದು ಮುದ್ದಾಗಿವೆ
ಲೇಖನ ಚೆನ್ನಾಗಿದೆ

ಸವಿಗನಸು ಹೇಳಿದರು...

ಬಾಲ್ಯದಲ್ಲಿನ ಆಟ ಮಾತು ಬಹಳ ಚೆಂದ....
ಚೆಂದದ ಬರಹ....

Subrahmanya Bhat ಹೇಳಿದರು...

ಕೊನೆಯಲ್ಲಿ ಹೇಳಿದಿರಲ್ಲ..’ಗ್ಯಾಪ್’ ಬಗ್ಗೆ...ಅದು ನಿಜ...ಪ್ರತಿದಿನವೂ update ಆಗಬೇಕೆನೋ ಎನಿಸುತ್ತದೆ.! ಪುಟ್ಟಿಯ ಚಿತ್ರ ಚೆನ್ನಾಗಿದೆ..ವಯಸ್ಸಾಗುದೇ ಬೇಡ ಅಲ್ಲವೇ..??!! :)

ಮುತ್ತುಮಣಿ ಹೇಳಿದರು...

ನಮಸ್ತೆ ತೇಜಸ್ವಿನಿ,

ಮುದ ನೀಡಿತು ನಿಮ್ಮ ಲೇಖನ, ಪುಟ್ಟ ಭಾಳ ಮುದಾಗಿದ್ದಾಳೆ. ನಿಮ್ಮ ಲೇಖನದ ಕಡೆಯ ಸಾಲು ಓದುತ್ತಿದ್ದರೆ, ಸುಭದ್ರಾಕುಮಾರಿ ಚೌಹಾಣ್‌ರವರ ’ಮೆರಾ ನಯಾ ಬಚ್‌ಪನ್‌’ ನೆನಪಿಗೆ ಬಂತು :)

ವಿ.ರಾ.ಹೆ. ಹೇಳಿದರು...

ಹಾಗೇ ಪುಟ್ಟಿಗೆ ಬಣ್ಣಗಳನ್ನೂ ಕನ್ನಡದಲ್ಲಿ ಕಲಿಸಿಕೊಡಿ :-)

ಸುಧೇಶ್ ಶೆಟ್ಟಿ ಹೇಳಿದರು...

ಅದಿತಿ ಪುಟ್ಟಿ ಮುದ್ದಾಗಿ ಕಾಣ್ತಾಳೆ ಫೋಟೋದಲ್ಲಿ... ಶೂ ಅ೦ಗಡಿಯವರಿಗೆ ಸಕತ್ ತಲೆನೋವು ಕೊಟ್ಟಿರಬೇಕಲ್ಲ :)

ಮನಸಿಗೆ ಮುದನೀಡಿತು....

ಸಿಂಧು Sindhu ಹೇಳಿದರು...

ತೇಜಸ್ವಿನಿ,

ಸಕ್ಕತ್ ಆಗಿದ್ದು. ಅದಿತಿಯಂದೂ ಸಿಕ್ಕಾಪಟ್ಟೆ ಮುದ್ದಾಗಿದ್ದು.
ಅವ್ಳ ಮಾತು ಕತೆ ಅಂತೂ ರಾಶಿನೇ ಮಜಾ ಕೊಡ್ತು.
ಓದುತ್ತಾ ಓದುತ್ತಾ ನನ್ನ ಸರದಿಗೆ ಕಾಯ್ತಾ ಇದ್ದಿ.. :)
ಮುಂದೆ ಬರಲಿರುವ ನನ್ನ ಎಲ್ಲ ಅಡಕತ್ತರಿ ಪ್ರಸಂಗಗಳಿಗೂ ನಿನ್ನಿಂದಲೇ ಟಿಪ್ಸ್ ತಗಳವು ನಾನು. :)
ನನ್ನ ಮಗಳಿಗೆ ಕನ್ನಡಕ ಹಾಕಿಕೊಂಡವರೆಲ್ಲ ಅಜ್ಜಿ. :)

ಪ್ರೀತಿಯಿಂದ
ಸಿಂಧು

ತೇಜಸ್ವಿನಿ ಹೆಗಡೆ- ಹೇಳಿದರು...

@ ಉಮೇಶ್ ಅವರೆ,

ಮಕ್ಕಳು ನಮಗೆ ಹೊಸ ಹೊಸ ಪದಗಳ ಪ್ರಯೋಗಕ್ಕೆ ಪ್ರೇರಣೆಕೊಡುತ್ತವೆ. ಉದಾಹರಣೆಗೆ ಪುಟ್ಟಿಗೆ ಮಿಲ್ಕಿ‌ಬಾರ್ ಅಂದ್ರೆ ಇಷ್ಟ. ಆದ್ರೆ ನಾನು ಜಾಸ್ತಿ ಕೊಡೋಕೆ ಹೋಗೊಲ್ಲ. ಅದಕ್ಕೇ ಈ ಚೊಕೊಲೇಟ್ ಹೆಸ್ರು ತೆಗೀಬೇಕಾದ್ರೆ ನಾವು "ಎಂ.ಬಿ.(Milky Bar)" ಅಂತೀವಿ. :)
ಇನ್ನೂ ತುಂಬಾ ಇಂತಹ ಪ್ರಯೋಗಗಳಿವೆ..ಬಿಡಿ. ಬರೆದರೆ ಹೊಸ ವ್ಯಾಕರಣ ಪುಸ್ತಕವೇ ಆಗಬಹುದು. :)

ತುಂಬಾ ಧನ್ಯವಾದಗಳು.

@ ಮನಸು.

ಹೌದು. ಬಾಲ್ಯ ಅತಿ ಸುಂದರ ಘಟ್ಟ. ಆದರೆ ಕೆಲವರ ಪಾಲಿಗೆ ಇದೇ ಒಂದು ನರಕವಾಗಿರುತ್ತದೆ. ತುಂಬಾ ವಿಷಾದಕರವಾದ ವಿಷಯವಿದು. :(

ತುಂಬಾ ಧನ್ಯವಾದಗಳು ಮೆಚ್ಚುಗೆಗೆ.

@ ಭಟ್ ಅವರೆ,

ನಾನು ಮತ್ತೆ ಹೊಸ ಬಾಲ್ಯವನ್ನು ನೋಡುತ್ತಿದ್ದೇನೆ..:) ಧನ್ಯವಾದಗಳು.

@ ಚುಕ್ಕಿಚಿತ್ತಾರ,

ಹೌದು.. ಇಂದಿನ ಮಕ್ಕಳು ಬಹು ಬೇಗ ವಿಷಯಗಳನ್ನು ಗ್ರಹಿಸುತ್ತಾರೆ. ಅರಿತುಕೊಳ್ಳುವ ಶಕ್ತಿ ತುಂಬಾ ಹೆಚ್ಚಾಗಿದೆ ಅವರಲ್ಲಿ.

ಧನ್ಯವಾದಗಳು.

@ ಮೊಗೇರ ಅವರೆ,

ನಿಮ್ಮ ಹಾರೈಕೆಗಳಿಗೆ ತುಂಬಾ ಧನ್ಯವಾದಗಳು. ಇಂತಹ ಪುಟ್ಟಿಯನ್ನು ಕರುಣಿಸಿದ ಆ ದೇವರಿಗೆ ನನ್ನ ಅಗಣಿತ ನಮನಗಳು.

@ಸುಮ,

ಹಂಚಿಕೊಳ್ಳಲು ಹೋದರೆ ಮುಗಿಯದ ಕಥೆಯಿದು. :) ದಿನೇ ದಿನೇ ಅವಳ ತುಂಟಾತ ಜಾಸ್ತಿಯೇ ಆಗುತ್ತಿದೆ. ಇಲ್ಲಿ ಕಾಣಿಸಿದ್ದು ಕೇವಲ ಸ್ಯಾಂಪಲ್ ಮಾತ್ರ :) ಧನ್ಯವಾದಗಳು.

@ಕನಸು, ಸವಿಗನಸು,

ತುಂಬಾ ಧನ್ಯವಾದಗಳು ನಿಮ್ಮ ಮೆಚ್ಚುಗೆಭರಿತ ಪ್ರತಿಕ್ರಿಯೆಗಳಿಗೆ.

@ಸುಬ್ರಹ್ಮಣ್ಯ ಭಟ್ ಅವರೆ,

ನೂರುಶೇಕಡಾ ಸತ್ಯ. ಇಂದಿನ ಯುಗದಲ್ಲಿ ಬೆಳೆಯಲು ನಾವು ಪ್ರತಿದಿನ ಅಪ್‌ಡೇಟ್ ಆಗಬೇಕಾಗುತ್ತದೆ! ಕಾಲ ಬಹು ವೇಗವಾಗಿ ಬದಲಾಗುತ್ತಿದೆಯೇನೋ ಎಂದೆನಿಸುತ್ತಿದೆ. ಧನ್ಯವಾದಗಳು.

@ಮುತ್ತುಮಣಿ ಅವರೆ,

ಮೇರಾ ನಯಾ ಬಚ್‌ಪನ್ ಓದಿಲ್ಲ ಇನ್ನೂ! ಓದಬೇಕಾಯ್ತು. ಧನ್ಯವಾದಗಳು.

@ವಿ.ರಾ.ಹೆ. ಅವರೆ,

ಬಣ್ಣಗಳನ್ನೂ ಕನ್ನಡದಲ್ಲೇ ಕಲಿಸುತ್ತಿದ್ದೇನೆ. ಪ್ಲೇಹೋಂ‌ನಲ್ಲಿ ಕಲಿಸಿದ್ದೇ ವೇದವಾಕ್ಯ ಅವಳಿಗೆ. ಆದರೂ ನನ್ನ ಪ್ರಯತ್ನ ಜಾರಿಯಲ್ಲಿದೆ. ಸದ್ಯ Blue ‍ಗೆ ಕೆಂಪು ಎಂದೂ, white ಗೆ ನೀಲಿ ಎಂದೂ ಹೇಳುತ್ತಿದ್ದಾಳೆ :) ಇದೂ ಕ್ರಮೇಣ ಸರಿ ಹೊಂದುತ್ತದೆ ಬಿಡಿ. ಕಾಳಜಿಗೆ ಧನ್ಯವಾದಗಳು.

@ಸುಧೇಶ್,

ಆ ಶೂ ಅಂಗಡಿಯವರು ಮತ್ತೆ ಇನ್ನೇನಾದರೂ ಇವಳನ್ನು ನೋಡಿದರೆ "No Entry For Aditi" ಬೋರ್ಡ್ ಹಾಕಬಹುದು :) ಧನ್ಯವಾದಗಳು.

@ಪ್ರಿಯ ಸಿಂಧು,

ನಿಂಗೆ ನಿನ್ನ ಪುಟ್ಟಿಗೆ ಸೇರಿ ಟಿಪ್ಸ್ ಅದಿತಿನೇ ಕೊಡ್ತು ಬೇಕಿದ್ರೆ :) ಅಷ್ಟು ಜೋರಾಗ್ತಾ ಇದ್ದು ಅದೀಗ. ದಿನ ದಿನ ಹೊಸ ಅಡಕತ್ತರಿಯಡಿ ಸಿಲುಕಿ ನಾನೂ ಅಡಿಕೆಹೋಳಾಗ್ತಾನೇ ಇದ್ದೀನಿ :)
ತುಂಬಾ ಧನ್ಯವಾದ.

ಸೀತಾರಾಮ. ಕೆ. ಹೇಳಿದರು...

ನಿಮ್ಮ ಪುಟ್ಟ ಪೋರಿಯ ಸವಿನೆನಪು ಹ೦ಚಿದ್ದಕ್ಕೆ ಧನ್ಯವಾದಗಳು. ಲೇಖನ ಮನ ಪ್ರಫ಼ುಲ್ಲಗೊಳಿಸಿತು.

ಮನಮುಕ್ತಾ ಹೇಳಿದರು...

ಲೇಖನ ಓದಿ ನ೦ಗೆ ನನ್ ಮಕ್ಳು ಸಣ್ಕಿದ್ದಾಗಿನ್ ಆಟ ಎಲ್ಲಾ ನೆನ್ಪಾತು..ಮಕ್ಕಳ ಆಟದಿ೦ದ ಸಿಕ್ಕ ಖುಶಿ ಎಲ್ಲೂ ಸಿಕ್ತಿಲ್ಲೆ.
ಅದಿತಿಯ ಚಿಕ್ಕ ಪುಟ್ಟ ಆಟ ಗೋಷ್ಟಿನೆಲ್ಲಾ ವಿಡಿಯೊ ಮಾಡಿಟ್ರೆ ಅದು ದೊಡ್ದಾದ್ಮೇಲೆ ನೋಡಲೆ ಭಾರಿ ಚೊಲೊ ಆಗ್ತು..ಕೆಲವೆಲ್ಲಾ ಕಡಿಗ್ ಕಡಿಗ್ ಮರ್ತ್ ಹೋಗ್ತು..
ಲೇಖನ ಓದಿ ಖುಶಿ ಆತು.ಧನ್ಯವಾದಗಳು.

ವನಿತಾ / Vanitha ಹೇಳಿದರು...

Aditi is so cute and so is ur writing:)
ಬ್ಲಾಗ್ ಲೋಕದಲ್ಲಿ ಸುತ್ತಾಡ್ತಾ ನಿಮ್ಮ ಬ್ಲಾಗ್ ಗೆ ಬಂದೆ..ತುಂಬಾ ಚೆನ್ನಾಗಿ ಬರ್ದಿದ್ದೀರಿ:)
'ಲಾಲಭಾಗ್' ಹೊಸ ಪದ..ತುಂಬಾ ನಗು ಬಂತು..
ನನ್ನ ಮಗಳು ೫ ವರ್ಷ, So ನಾವೀಗ Short forms ಬಿಟ್ಟು Spelling ಹೇಳೋಕೆ ಶುರು ಮಾಡಿದ್ದೇವೆ, ಇನ್ನೂ ಸ್ವಲ್ಪ ದಿನದಲ್ಲೇ ಅದು ಅವಳಿಗೂ ಅರ್ಥ ಆಗಬಹುದು:)

ಕ್ಷಣ... ಚಿಂತನೆ... bhchandru ಹೇಳಿದರು...

ತೇಜಸ್ವಿನಿ ಮೇಡಂ, ಬಾಲ್ಯದ ಆಟ, ಮಕ್ಕಳ ಹಟ, ಅವುಗಳ ತೊದಲು ನುಡಿಗಳು, ನಾವೂ ಅವರಂತೆಯೇ ಮಾತಾಡುವುದು. ಇವೆಲ್ಲವೂ ನಮ್ಮ ಆಗಿನ ಬಾಲ್ಯವನ್ನು ನೆನಪಿಸುತ್ತವೆ. ಅದಕ್ಕೆ ಮಗುವಿನ ಮನಸು ಎಂಥಾ ಸೊಗಸು ಎಂದು ಡಾ. ರಾಜ್‌ ಹಾಡಿದರೇನೋ.. ಒಂದು ನಿಮಿಷ ಇದ್ದ ಮನಸ್ಸು, ಮುಗ್ಧವಾಗಿ ಮತ್ತೆಲ್ಲೋ ಹುಡುಕಾಟ ನಡೆಸುತ್ತದೆ.

ಮಕ್ಕಳನ್ನು ಸಾಂತ್ವನಗೊಳಿಸುವ ಕೆಲಸ ನಿಜಕ್ಕೂ ಕಷ್ಟವೆಂದೇ ಹೇಳಬಹುದು.

ಅದಿತಿಯ ಈ ಆಟಗಳನ್ನು ಬರೆದು ನಮಗೂ ಖುಷಿ ಕೊಟ್ಟಿದ್ದೀರಿ, ಧನ್ಯವಾದಗಳು.

sunaath ಹೇಳಿದರು...

ತೇಜಸ್ವಿನಿ,
ಮುದ್ದು ಮುಖದ ಅದಿತಿಯ ಮುದ್ದುಮುದ್ದಾದ ಮಾತು ಹಾಗು ಆಟಗಳು ನನ್ನ ಹಾಗು ನನ್ನ ಪತ್ನಿಯ ಮನಕ್ಕೂ ಮುದ ಕೊಟ್ಟವು. ಉಲ್ಲಾಸವನ್ನು ಅನುಭವಿಸಿದೆವು.

IshwarJakkali ಹೇಳಿದರು...

Goood one ...enjoyed reading it thorrowly ..

ಚಿತ್ರಾ ಹೇಳಿದರು...

ತೇಜೂ,
ಮಜಾ ಬಂತು ಅದಿತಿ ಕಥೆ ಕೇಳಿ !! ನನ್ನ ಮಗಳದ್ದೂ ಅದೇ ಹಾಡಾಗಿತ್ತು.
ಸಣ್ಣಕಿದ್ದಾಗ ಅಂಗಡಿಗೆ ಹೋದಾಗ " ಹಾಗೇ ಇರವು , ಹೀಗೇ ಬೇಕು " ಹೇಳ ನಖರಾಕ್ಕೆ ಅಮ್ಮ ಬಗ್ಗೋಳಲ್ಲ ಅಂತ ಬೇಗ ಗೊತ್ತು ಮಾಡ್ಕಂಡು ಏನೇ ತರದಿದ್ರೂ , ಅಪ್ಪನ ಬೆನ್ನು ಹಿಡಿದು ಹೋಗೋ ಉಪಾಯಕ್ಕೆ ಅಂಟಿ ಕೊಂಡಿತ್ತು.
boo ಕಲರ್ ಶೂ ಓದಕಾದ್ರೆ , ನೆನಪಾಗಿದ್ದು
" ನಂಗೆ Boo ಕಲಲ್ ಬೇಡ , ಗೀನ್ ಮತ್ತೆ ಲೆಡ್ ಕಲಲ್ ವಾತಲ್ ಬಾತಲ್ ಬೇಕು " ಅಂತ ಹಠ ಹಿಡಿದ ನನ್ನ ತಮ್ಮನ ಮಗ ಪ್ರಥಮ್ .
ಚೆನಾಗಿತ್ತು ಲೇಖನ

ತೇಜಸ್ವಿನಿ ಹೆಗಡೆ- ಹೇಳಿದರು...

ಮಗಳ ಬಾಲ್ಯದ ಸವಿ ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದರ ಮೂಲಕ ನಾನೂ ತುಂಬಾ ಸಂಭ್ರಮ ಪಟ್ಟೆ. ನನ್ನ ಸಂತೋಷದಲ್ಲಿ ಭಾಗಿಯಾಗಿ ಪುಟ್ಟಿಯ ಆಟ ಪಾಠಗಳನ್ನು ಮೆಚ್ಚಿಕೊಂಡು ಸಂಭ್ರಮಿಸಿದ ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. ಮುಂದೆ ಅವಳಿಗೆ ಈ ಬರಹವನ್ನೂ ಜೊತೆಗೆ ನಿಮ್ಮೆಲ್ಲರ ಪ್ರೀತಿ ತುಂಬಿದ ಪ್ರತಿಕ್ರಿಯೆಗಳನ್ನೂ ತಪ್ಪದೇ ತೋರಿಸುವೆ. ಆಗ ಅವಳಿಗೂ ಬಹು ಸಂತೋಷವಾಗುವುದು.. :)

ಜಲನಯನ ಹೇಳಿದರು...

ತೇಜಸ್ವಿನಿ, ಅದಿತಿ ಎಷ್ಟು ಬೆಳೆದಿದ್ದಾಳೆ..ಪೇ ಸ್ಕೂಲ್ ಗೂ ಹೋಗ್ತಾಳಾ..? ಹಹಹ...ಮೊದಲಿಗೆ ಕೇಳ್ತಿದ್ದೀನಿ...ಸ್ಕೂಲಿನವರು ನಮಗೆ ಉಲ್ಟಾ ‘ಪೇ‘ ಮಾಡೋದು ಅದಿತಿ ಜಮಾನಕ್ಕೆ ಆದ್ರೂ ಆಗಬಹುದು...ಹಹಹ...ಬಹಳ ಮುದ್ದಾಗಿ ಕಾಣ್ತಿದ್ದಾಳೆ...ನಿಮ್ಮೆಲ್ಲ ಆಯಾಸ ಅವಳ ಮುದ್ದು ಮುದ್ದು ಮಾತು ಚಟುವಟಿಕೆಗಳಿಂದ ಹಾರಿಹೋಗುತ್ತೆ.....ಲೇಖನ ಎಂದಿನಂತೆ ತೇಜ-ಛಾಪು.

ರವಿಕಾಂತ ಗೋರೆ ಹೇಳಿದರು...

ಚಿತ್ರ - ಲೇಖನ ಚೆನ್ನಾಗಿವೆ.. ಓದಿ ನನಗೂ ಮತ್ತೆ ಬಾಲ್ಯಕ್ಕೆ ಹೋಗಬೇಕು ಅನ್ನಿಸಿತು...

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿಯವರೇ,
ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ
ನಿಮ್ಮ ಪುಟ್ಟಿಯ ಚಿತ್ರ ಸೂಪರ್
ಬಾಲ್ಯದ ಆಟಗಳು ನಂಗೂ ನೆನಪಾದವು
ಆ ನಿಷ್ಕಲ್ಮಶ ಮನಸ್ಸಿನ ಭಾವನೆಗಳು ಈಗೆಲ್ಲಿ?
ಅಲ್ಲವೇ?