ಬುಧವಾರ, ಡಿಸೆಂಬರ್ 24, 2008

ನೀರಾಗಿ ಹರಿವ ನೀರೆ....ನೀನ್ಯಾರೆ?!


ಎಲ್ಲರಿಗೂ ಹೊಸವರುಷದ ಹಾರ್ದಿಕ ಶುಭಾಶಯಗಳು.

ಮಳೆಮಾಲೆ ಹುಡುಗಿ
ನಿನ್ನ ನೆನಪಲೇ
ಈ ಮನ
ತುಂತುರು ಹನಿಯಾಗಿದೆ...
.
ಪುಟ್ಟ ಹಣೆಯ ತುಂಬೆಲ್ಲಾ
ಪುಟವಿಟ್ಟಂತಿರುವ
ಸ್ವೇದಬಿಂದುಗಳ ಸಾಲು
ನಿನ್ನ ಕೊರಳಪ್ಪಿ ಬೀಗುತಿಹ
ಮುತ್ತಿನ ಹಾರವನೇ ಮಸುಕಾಗಿಸಿವೆ!
.
ಬೆನ್ನ ತುಂಬೆಲ್ಲ ಹರಡಿರುವ
ಕಡುಗಪ್ಪು ಕೂದಲಿನಿಂದಿಳಿವ
ನೀರ ಬಿಂದುಗಳೆಲ್ಲಾ ಸೇರಿ
ನಿನ್ನಿಂದಗಲಿದ ವಿರದದಲಿ
ನೀರಾಗಿ ಹರಿದು ಶೋಕಿಸುತಿವೆ!


ಆಗಸವನು ತೊರೆದು
ನಿನ್ನ ಸೇರಿದ ಕಾಮನ ಬಿಲ್ಲು
ನಿನ್ನ ಕಣ್ಗಳ ಹೊಡೆತಕ್ಕೆ ಸಿಲುಕಿ,
ಇಬ್ಭಾಗವಾಗಿ, ಬಿಲ್ಲಂತೆ ಬಾಗಿ,
ರೆಪ್ಪೆಗಳಾಟವನೇ ಇಣುಕಿ ನೋಡುತಿವೆ!


ಚುಂಬಕದಂತೇ ಕಣ್ಣಲ್ಲೇ ಸೆಳೆದು,
ಮಕರಂದದ ಸವಿಯ ಸುರಿದು,
ನನ್ನರಿವನೇ ಸೂರೆಗೈದ,
ಮಳೆಮಾಲೆ ಹುಡುಗಿ
ನಿನ್ನ ನೆನಪಲೇ
ಈ ಮನ
ತುಂತುರುಹನಿಯಾಗಿದೆ...

19 ಕಾಮೆಂಟ್‌ಗಳು:

sunaath ಹೇಳಿದರು...

ತೇಜಸ್ವಿನಿ,
ಗೀತೆಯ ಕೃಷ್ಣ ಸಂಕಲನಕ್ಕೂ ಈ ಕವನಕ್ಕೂ ಸಂಬಂಧ ಅರ್ಥವಾಗುತ್ತಿಲ್ಲ. ದಯವಿಟ್ಟು ತಿಳಿಸುವೆಯಾ?

ಕನಸು ಹೇಳಿದರು...

ಹಾಯ್
ಯಾರೇ ನೀನು ಎಷ್ಟು ಚೆಂದಾಗಿ ಬರೆಯುತ್ತಿ.!!
ನಿನ್ನ ಕವಿತೆಯ ಕಲ್ಪನೆ ,ಭಾವನೆ ಅದೆಷ್ಟು ಚೆಂದಿದೆ.
ಹಾಗೆ ಬರೆಯುತ್ತಿರಿ ಬಿಡುವಿದ್ದಾಗ ನನ್ನ ಸಾವಿರ ಕನಸಿಗೆ ಬರಲೇಬೇಕು ಅಂತ ಹಟ ಮಾಡಲೆ ಪುಟ್ಟ ಮಗುವಿನಂತೆ..!!?
ತುಂಭಾ ತುಂಭಾ ಚೆನ್ನಾಗಿದೆ ಮಾನಸ..

Ittigecement ಹೇಳಿದರು...

ತೇಜಸ್ವಿನಿಯವರೆ.....

ಆ ಚಿತ್ರ ನೀವು ಬರೆದದ್ದಾ..?

ಚಂದದ... ಚಿತ್ರ...
ಅದಕ್ಕೆ...
ಶಬ್ಧ ಪುಂಜದಿ ಬಿಡಿಸಿದ..
ನೀರ ನೀರೆಯ ಕವನ.....
ಸೂರೆಗೊಂಡಿತು ಈ ಮನ...

ಅಂದದ..ಚಿತ್ರಕ್ಕೆ
ಚಂದದ ಕವನಕ್ಕೆ

ಅಭಿನಂದನೆಗಳು...

ಅಂತರ್ವಾಣಿ ಹೇಳಿದರು...

tEju akka,

chitra kavana baredaddu nanage kushi koTTitu.. chitra modify maaDiddu super..:)

ಸ್ವೇದಬಿಂದುಗಳ ಸಾಲು -> Enidara artha?

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಕವನ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಚಿತ್ರವೂ ಕೂಡ ಚೆನ್ನಾಗಿದೆ!

thandacool ಹೇಳಿದರು...

kavnachennagi mudi bandide. bahaladinagala nantara purusottu mawikondu ondu olleya blognfnu nodida dhanyatabhavavayitu.

ತೇಜಸ್ವಿನಿ ಹೆಗಡೆ ಹೇಳಿದರು...

@ಕಾಕಾ,

ನೀವು ಗೀತೆಯ ಕೃಷ್ಣವನ್ನು ಈಗ ಗುರುತಿಸಿದರೆಂದು ಕಾಣುತ್ತದೆ. ಇದನ್ನು ಹಾಕಿ ನಾನು ಬಹಳ ದಿನಗಳಾದವು. ಈ ಕವನವನ್ನು ಹಾಕುವಾಗ ಹಾಕಿದ್ದಲ್ಲ. "Sidebar"ನಲ್ಲಿ "Quote"ತರಹ ಹಾಕಿದ್ದು ಇದನ್ನು :) "ಗೀತೆಯ ಕೃಷ್ಣ" ಪುಸ್ತಕವನ್ನು ನನ್ನ ತಂದೆಯವರಾದ ಡಾ.ಜಿ.ಎನ್.ಭಟ್ಟರು ಬರೆದದ್ದು. ಅವರ ಪುಸ್ತಕಗಳಲ್ಲೇ ಈ ಪುಸ್ತಕ ನನಗೆ ಬಲು ಇಷ್ಟ. ಈ ಪುಸ್ತಕದಲ್ಲಿದ್ದ ಭಗವದ್ಗೀತೆಯ ಒಂದು ಶ್ಲೋಕದ ಭಾವಾರ್ಥದ ವಿವರಣೆ ನನ್ನ ಬಹುವಾಗಿ ಆಕರ್ಷಿಸಿತ್ತು. ಅದನ್ನೇ ನಾನು ಈ ರೀತಿ "ಶಿದೆಬರ್"ನಲ್ಲಿ ಹಾಕಿರುವೆ.

ನನ್ನ ಕವನಕ್ಕೂ "ಗೀತೆಯ ಕೃಷ್ಣ"ಕ್ಕೂ ಅಜಗಜಾಂತರ ವ್ಯತ್ಯಾಸವಿದೆ :)

@ಕನಸು,

ಅಲ್ಲಾ ಇದು ಚೆನ್ನಾಗಿದೆ. ನನ್ನಏ ಯಾರು ಎಂದು(ಎಲ್ಲಾ ವಿವರಣೆಗಳು "ಮಾನಸದೊಡತಿ"ಯಲ್ಲಿದ್ದರೂ) ನಿಮ್ಮ ಕುರಿತು ಏನನ್ನೂ "ಸಾವಿರ ಕನಸಿ"ನಲ್ಲಿ ಹಾಕಿಲ್ಲವಲ್ಲ?!! "ಸಾವಿರ ಕನಸು" ಬಹಳ ಚೆನ್ನಾಗಿದೆ. ಹಠ ಮಾಡಬೇಕೆಂದೇನಿಲ್ಲ. ನಾನೇ ಬರುವೆ. :) ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು.

@ಪ್ರಕಾಶ್ ಅವರೆ,

ಈ ಕವನಕ್ಕೆ ತಕ್ಕುದಾದ ಚಿತ್ರವನ್ನು ತುಂಬಾ ಹುಡುಕಿದೆ. ಆಮೇಲೆ ಈ ಚಿತ್ರ ದೊರಕಿತು. ಆದರೆ ಕೆಲವೊಂದು ಮಾರ್ಪಾಡುಗಳು ಅತ್ಯಗತ್ಯವಾಗಿದ್ದವು. ಅದನ್ನು ನಾನೇ "Photoshop"ನಲ್ಲಿ ಮಾಡಿದೆ. ಎಂತಹ ಮಾರ್ಪಾಡುಗಳೆಂದು ಮಾತ್ರ ಕೇಳಬೇಡಿ. ಚಿತ್ರವನ್ನು ಸೂಕ್ಷ್ಮವಾಗಿ ನೋಡಿದರೆ ತಿಳಿಯುವುದು.;)

@ಶಂಕರ್,

ಮೆಚ್ಚುಗೆಗೆ ಧನ್ಯವಾದ. ಸ್ವೇದ=ಬೆವರು. ಸ್ವೇದಬಿಂದು=ಬೆವರಹನಿ.

@ಶಿವು ಅವರೆ,

ತುಂಬಾ ಧನ್ಯವಾದಗಳು.

@ನಾಗರಾಜ್ ಅವರೆ,

ಪುರುಸೊತ್ತು ಮಾಡ್ಕೊಂಡು ಮಾನಸವನ್ನು ನೋಡಿದ್ದಕ್ಕೆ ತುಂಬಾ ಧನ್ಯವಾದಗಳು :)

Sushrutha Dodderi ಹೇಳಿದರು...

ಆಹಾ! ಎಷ್ಟ್ ಚಂದ ಕವನ..

’ತುಂತುರು ಹನಿ’ -ಹ್ಮ್ ಹ್ಮ್.. ;)

ಚಂದ್ರಕಾಂತ ಎಸ್ ಹೇಳಿದರು...

ತೇಜಸ್ವಿನಿ
ನಿಮ್ಮ ಕವನ ಓದಿದರೆ ತಿಳಿನೀರ ತಡಿಯಲ್ಲಿ ಕುಳಿತು ನೀರಲ್ಲಿ ಮುಳುಗೆದ್ದ ಸುಂದರ ನೀರಕನ್ಯೆಯನ್ನು ಕಣ್ಣಾರೆ ನೋಡಿದ ಅನುಭವವಾಗುತ್ತಿದೆ. ಅದೆಷ್ಟು ಸುಂದರವಾಗಿ ಸಮರ್ಪಕವಾಗಿ ಉಪಮೆಗಳನ್ನು ಬಳಸುವಿರಿ!!ನನಗೆ ಎಲ್ಲವೂ ಇಷ್ಟವಾದುವು. ಆದರೆ ಮನಸೂರೆಗೊಂದ ಹೋಲಿಕೆ ಬಿಲ್ಲಿನದು. ಇಬ್ಭಾಗವಾದ ಕಲ್ಪನೆಯೇ ಅದ್ಭುತ.ಸುಂದರ ಕವನ.ಚಿತ್ರವೂ ಪೂರಕವಾಗಿದೆ.

ತೇಜಸ್ವಿನಿ ಹೆಗಡೆ ಹೇಳಿದರು...

@ಸುಶ್ರುತ,

ಧನ್ಯವಾದಗಳು.. ಹ್ಮ್ ಹ್ಮ್ ತುಂತುರುಹನಿನೇಯಾ... :)

@ಚಂದ್ರಕಾಂತ ಅವರೆ,

ನಿಮ್ಮ ಮೆಚ್ಚುಗೆಗಳಿಗೆ ನಾನು ಆಭಾರಿ. ಧನ್ಯವಾದಗಳು.

ಅನಾಮಧೇಯ ಹೇಳಿದರು...

ಚೊಲೊ ಇದ್ದು ತೇಜಕ್ಕ... :)ಸುಂದರ ಕಲ್ಪನೆ...
ತುಂಬಾ ಇಷ್ಟ ಆತು..

ತೇಜಸ್ವಿನಿ ಹೆಗಡೆ ಹೇಳಿದರು...

@ಪ್ರಿಯ ರೇಶ್ಮಾ,

ಮಾನಸಕ್ಕೆ ಸ್ವಾಗತ. ನಿನ್ನ ಕಮೆಂಟ್ ನೋಡಿ ನಂಗೂ ಖುಶಿ ಆತು. ಬರ್ತಾ ಇರು. ಅಂದ ಹಾಗೆ ನಿನ್ನ ಕಿರು ಪರಿಚಯನ ಮೈಲ್ ಮಾಡಿಯಾದ್ರೂ ತಿಳ್ಸಿಯಿದ್ರೆ ಮತ್ತೂ ಖುಶಿ ಆಗ್ತಿತ್ತು. ನಂಗೆ ನೀ ಯಾರೂ ಹೇಳಿ ಗೊತ್ತಾಜಿಲ್ಲೆ!

ಸುಪ್ತದೀಪ್ತಿ suptadeepti ಹೇಳಿದರು...

ತೇಜು, ಹೊಸ ವರ್ಷದ ಹೊಸಿಲಿನಲ್ಲಿ ಚಂದದ ಕವನ.

ನಿಮಗೆಲ್ಲರಿಗೂ ಹೊಸ ವರುಷ ಸಂತಸ, ನೆಮ್ಮದಿ, ಆರೋಗ್ಯಭರಿತ ಜೀವನದ ಹಾದಿಯನ್ನೇ ತೆರೆಯಲಿ.

ಚಿತ್ರಾ ಸಂತೋಷ್ ಹೇಳಿದರು...

ತೇಜಕ್ಕ ನಿಮ್ಮ ಕವನ ಓದಿಯೇ..ನನ್ ಮನ
ತುಂತುರು ಹನಿಯಾಗಿದೆ...ಎಷ್ಟು ಚೆಂದ ಬರೆದಿರಿ..ಖುಷಿಆತು..
-ತುಂಬುಪ್ರೀತಿ,
ಚಿತ್ರಾ
.

Yogesh Bhat ಹೇಳಿದರು...

ಆಗಸವನು ತೊರೆದು
ನಿನ್ನ ಸೇರಿದ ಕಾಮನ ಬಿಲ್ಲು
ನಿನ್ನ ಕಣ್ಗಳ ಹೊಡೆತಕ್ಕೆ ಸಿಲುಕಿ,
ಇಬ್ಭಾಗವಾಗಿ, ಬಿಲ್ಲಂತೆ ಬಾಗಿ,
ರೆಪ್ಪೆಗಳಾಟವನೇ ಇಣುಕಿ ನೋಡುತಿವೆ!

Super!:)

ತೇಜಸ್ವಿನಿ ಹೆಗಡೆ ಹೇಳಿದರು...

ಜ್ಯೋತಿ ಅಕ್ಕ, ಚಿತ್ರಾ ಹಾಗೂ ಯೋಗೇಶ್ ಅವರೆ,

ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು.

ಕೆ.ಎನ್. ಪರಾಂಜಪೆ ಹೇಳಿದರು...

ಚೆನ್ನಾಗಿದೆ. ಅಭಿನ೦ದನೆ.
ಪರಾ೦ಜಪೆ.

ಭಾರ್ಗವಿ ಹೇಳಿದರು...

ತೇಜಸ್ವಿನಿಯವರೇ,
ಮಳೆಮಾಲೆ ಹುಡುಗಿ ಚಿತ್ರ ಮತ್ತು ಕವನ ಎರಡೂ ತುಂಬಾ ತುಂಬಾ ಚಂದ ಇವೆ.ನನಗೂ ನೀವು ಹಾಕಿರುವ "ಗೀತೆಯ ಕೃಷ್ಣ" ದ ಸಾಲುಗಳು ತುಂಬಾ ಇಷ್ಟವಾದವು. ಈ ಪುಸ್ತಕ ಲೇಖನ ರೂಪದ್ದೋ ಅಥವಾ ಕವನ ರೂಪದ್ದೋ ತಿಳಿಸುವಿರಾ?

ತೇಜಸ್ವಿನಿ ಹೆಗಡೆ ಹೇಳಿದರು...

@ಪರಾಂಜಪೆ ಅವರೆ,

ತುಂಬಾ ಧನ್ಯವಾದಗಳು.

@ಭಾರ್ಗವಿ ಅವರೆ,

ತುಂಬಾ ತುಂಬಾ ಧನ್ಯವಾದ."ಗೀತೆಯ ಕೃಷ್ಣ" ಗೀತಾ ಶ್ಲೋಕಗಳ ವಿವರಣೆಯಿರುವ ಪುಸ್ತಕ. ಕವನ ರೂಪದ್ದಲ್ಲ. ನನ್ನ ತಂದೆಯವರೇ ಬರೆದದ್ದು. ಮೆಚ್ಚುಗೆಗೆ ಮತ್ತೊಮ್ಮೆ ಧನ್ಯವಾದ.