ಶುಕ್ರವಾರ, ಡಿಸೆಂಬರ್ 5, 2008

ಬದುಕಿನ ಪಯಣ ಹೋರಾಟದ ಜೊತೆಗೆ..

ನನ್ನ ಈ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ದಟ್ಸ್‌ಕನ್ನಡಕ್ಕೂ ಹಾಗೂ ಪ್ರತಿಕ್ರಿಯೆಗಳ ಮೂಲಕ ಪ್ರೇರೇಪಿಸಿದ ಎಲ್ಲಾ ದಟ್ಸ್‌ಕನ್ನಡ ಓದುಗರಿಗೂ ತುಂಬಾ ಧನ್ಯವಾದಗಳು.
-----------------------
ಭಾರತದಲ್ಲಿ ಅದೆಷ್ಟೋ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗಳಾಗಿವೆ, ಆಗುತ್ತಿವೆ. ಸಮಸ್ಯೆಗಳಿಗಳ ಪರಿಹಾರಕ್ಕಾಗಿ, ಹೋರಾಟಕ್ಕಾಗಿ ಅಸಂಖ್ಯಾತ ಸಂಘಟೆನೆಗಳು ಹುಟ್ಟಿಕೊಳ್ಳುತ್ತವೆ. ತಕ್ಕಮಟ್ಟಿಗೆ ಪರಿಹಾರವನ್ನೂ ಕಂಡುಕೊಂಡಿವೆ. ಮಂತಾತರದ ಬಗ್ಗೆ, ಭಯೋತ್ಪಾದನೆಯ ಬಗ್ಗೆ, ರಾಜಕಾರಣ/ರಾಜಕಾರಣಿಗಳ ಬಗ್ಗೆ, ಸನ್‌ಸೆಕ್ಸ್ ಇತ್ಯಾದಿಗಳ ಬಗ್ಗೆ ಬುದ್ಧಿಜೀವಿಗಳು, ವಿದ್ಯಾವಂತರು, ಬುದ್ಧಿವಂತರು ಎಲ್ಲರೂ ಗಂಟೆಗಟ್ಟೆಲೆ ಮಾತಾಡುತ್ತಾರೆ.. ಪುಟಗಟ್ಟಲೆ ಬರೆಯುತ್ತಾರೆ. (ಹಾಗೆ ಮಾಡುವುದು ತಪ್ಪೆಂದು ಖಂಡಿತ ನಾನು ಹೇಳುತ್ತಿಲ್ಲ) ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರುಷಗಳಾದರು ಯಾರೂ ದೈಹಿಕ/ಮಾನಸಿಕ ಅಂಗವೈಕಲ್ಯ ಹೊಂದಿದವರ ಕುರಿತು, ಅವರು ಹಾಗೂ ಅವರ ಮನೆಯವರು ಅನುಭವಿಸುವ ಕಷ್ಟ, ನೋವು, ಅವಮಾನ, ಹಿಂಸೆ, ಅನ್ಯಾಯಗಳ ಕುರಿತು ಸುದೀರ್ಘವಾಗಿ ಯೋಚಿಸಿ ಆ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ/ನೀಡುವ ರೀತಿಯಲ್ಲಿ ಈವರೆಗೂ ಯೋಚಿಸಲೇ ಇಲ್ಲ. ಇದೊಂದು ದೊಡ್ಡ ದುರಂತ.

ಇದು ಅವರ ಪ್ರಾರಾಬ್ಧ ಎಂದೋ, ಅಯ್ಯೋ ಪಾಪ ಎಂಬ ಅನುಕಂಪ ನೀಡಿಯೋ, ದೇವರಿದ್ದಾನೆ ಎಂಬ ಆಶಾಢಭೂತಿತನವನ್ನು ತೋರುವುದರಿಂದಲೋ ದೂರವೇ ಉಳಿಯುತ್ತಾರೆ. ವರುಷಕ್ಕೊಮ್ಮೆ ಅವರ ದಿನವನ್ನಾಚರಿಸಿ.. ವ್ಹೀಲ್‌ಚೇರ್ ನೀಡಿ ನೀವು ಇದರಲ್ಲಿ ಕುಳಿತಿರುವುದೇ ಲೇಸೆಂದು ಹಾರೈಸುತ್ತದೆ ಸರಕಾರ.

ಒಂದು ಅಂಕಿಯ ಪ್ರಕಾರ ಭಾರತದಲ್ಲಿ ಈಗ ೭೦ ಮಿಲಿಯನ್ ಅಂಗವಿರಲರಿದ್ದಾರೆ. ಅವರಲ್ಲಿ ಕೇವಲ ೨% ಅಂಗವಿಕಲರು ಮಾತ್ರ ವಿದ್ಯೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ೧% ಜನರು ಮಾತ್ರ ಉದ್ಯೋಗಿಗಳಾಗಿದ್ದಾರೆ!! ಭಾರತದ ಪ್ರಜೆ ೭೨,೦೦೦ ಕೋಟಿ ರೂಗಳನ್ನು ಅಂಗವಿಕಲರಿಗಾಗಿ ವಿನಿಯೋಗಿಸುತ್ತಿದ್ದಾನೆ. ಆದರೆ ಅದರಲ್ಲಿ ಅಂಗವಿಕಲರಿಗಾಗಿ ಸರಕಾರ ಕೊಡುತ್ತಿರುವುದು ಮಾತ್ರ ಅತ್ಯಲ್ಪ!!!

ದೈಹಿಕವಾಗಿ ಅಂಗನ್ಯೂನತೆ ಹೊಂದಿದವರು ನೈತಿಕ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯಿದ್ದರೂ ಯಾವರೀತಿಯ ಹೋರಾಟಗಳನ್ನೆಲ್ಲಾ ಮಾಡಬೇಕಾಗುತ್ತದೆ, ಎಷ್ಟೆಲ್ಲಾ ಮಾನಸಿಕ ಹಿಂಸೆ, ಅನ್ಯಾಯ, ಅಪಮಾನಗಳನ್ನು ಎದಿರುಸಿ, ಸಹಿಸಿ ಮುನ್ನೆಡಯಬೇಕಾಗುತ್ತದೆ ಅನ್ನುವುದಕ್ಕೆ ಸ್ವತಃ ನಾನೇ ಉದಾಹರಣೆ.

ಹುಟ್ಟಿನಿಂದಲೂ ನನ್ನೆರಡೂ ಕಾಲ್ಗಳಿಗೂ ಶಕ್ತಿಯಿಲ್ಲ. ಆದರೆ ವಿಕಲಚೇತನವಾಗಿರುವುದು ನನ್ನ ಅಂಗಗಳಿಗೆ ಆದರೆ ನನ್ನ ಬುದ್ಧಿಗಲ್ಲವೆಂದೇ ತಿಳಿದು ಮನಃಶಕ್ತಿಯಿಂದಲೇ ೨೯ ವರುಷಗಳನ್ನು ಸಾಮಾನ್ಯರಂತೆಯೇ ಕಳೆದವಳು. ಯಾವುದೇ ಅಂಗವಿಕಲ ಸೌಕರ್ಯವನ್ನೂ ಪಡೆಯದೇ ಮೇಲೆ ಬಂದವಳು. ಆದರೂ ಆಗಾಗ ಭಾರತದಲ್ಲಿ ವಿಕಲಚೇತನರ ಪ್ರತಿ ಇರುವ ಶುದ್ಧ ನಿರ್ಲಕ್ಯತನ, ಬೇಜಾವಾಬ್ದಾರಿತನ, ಅವರ ಪ್ರತಿ ತೊರುವ ತೋರಿಕೆಯ ಕಾಳಜಿ ಕಂಡು ತುಂಬಾ ನೋವು, ಸಿಟ್ಟು ಬರುತ್ತಲಿತ್ತು. ಬುದ್ಧಿ ಮತ್ತೆಯಿದ್ದರೂ ಆಸಕ್ತಿಯಿದ್ದರೂ, ಬೇಕಾದಷ್ಟು ಮಾರ್ಕ್ಸ್ ಗಳಿದ್ದರೂ ನನಗೆ ಪಿ.ಯು.ಸಿ ನಂತರ ಮೆಡಿಕಲ್ ಆಗಲೀ, ಬಿ.ಎಸ್ಸಿ. ನಂತರ ಮೈಕ್ರೋಬಯೋಲಾಜಿಯಾಗಲೀ ಮಾಡಲಾಗಲಿಲ್ಲ (ಸೀಟ್ ಸಿಕ್ಕಿದ್ದರೂ). ಕನ್ನಡ ಸಾಹಿತ್ಯದಲ್ಲಿ ಎಂ.ಎ.ಯನ್ನು ಕೂಡ ನಾನು "ಮೈಸೂರು ಮುಕ್ತ ವಿಶ್ವವಿದ್ಯಾಲಯದ" ಮೂಲಕ ಮಾಡಬೇಕಾಗಿ ಬಂತು. ಕಾರಣ ಇಲ್ಲಿ ೯೯% ಕಟ್ಟಡಗಳಿರುವುದೂ ಫ್ಲೋರ್‍ಗಳಲ್ಲಿ ಅದೂ ವಿದೌಟ್ ಲಿಫ್ಟ್!!! ನೈತಿಕ, ಆರ್ಥಿಕ ಬೆಂಬಲಗಳಿದ್ದರೂ ನನಗೆ ಅದೆಷ್ಟೋ ಕನಸುಗಳನ್ನು ಸಾಕಾರಿಸಿಕೊಳ್ಳಲಾಗಲಿಲ್ಲ. ಕಾರಣ ನನ್ನ ದೈಹಿಕ ವಿಕಲಚೈತನ್ಯ. ಇನ್ನು ಏನೂ ಇಲ್ಲದ, ಯಾರ ಬೆಂಬಲವೂ ಸಿಗದ ಆದರೆ ಅಪಾರ ಬುದ್ಧಿಮತ್ತೆ ಇರುವ ಇತರ ವಿಕಲಚೇತನರ ಗತಿ ಎಣಿಸಿದರೆ ತುಂಬಾ ನೋವಾಗುವುದು.

ಇಲ್ಲಿಯ ದುರವಸ್ಥೆಕಂಡು ನಾನು ಅದೆಷ್ಟೋ ಸಲ ಯೋಚಿಸಿದ್ದಿದೆ. ಬೇರೆ ದೇಶಗಳಲ್ಲಿಯೂ ಇವರ ಸ್ಥಿತಿ ಹೀಗೇಯೇ ಎಂದು. ಆಗ ಹೊರದೇಶಗಳಲ್ಲಿರುವ ನನ್ನ ಆತ್ಮೀಯರನ್ನು ವಿಚಾರಿಸಿದೆ. ಅಲ್ಲಿ ಅವರನ್ನು ಯಾವ ರೀತಿ ಗೌರ್ವಯುತವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದೇ ಇದೆ. ಅಮೇರಿಕಾ, ಇಂಗ್ಲೇಡ್, ನ್ಯೂಜಿಲೇಂಡ್ ಮುಂತಾದ ಪಾಶ್ಚಿಮಾತ್ಯ ದೇಶಗಳಲ್ಲಿ ಅಂಗವಿಕಲರನ್ನು ತುಂಬಾ ಗೌರವಯುತವಾಗಿ ನಡೆಸಿಕೊಳ್ಳುವರೆ. ಕೇವಲ ಅನುಕಂಪ ತೋರದೇ ಅವರಿಗೆ ಸಲ್ಲಬೇಕಾದ ಹಕ್ಕು ಸೌಲಭ್ಯ, ಸಹಕಾರ ಮೊದಲು ಸಿಗುವುದು. ಯಾವುದೇ ಅಂಗಡಿ ಮುಂಗಟ್ಟುಗಳಿರಲಿ ಅಲ್ಲಿಗೆ ಅಂಗವಿಕಲರೂ ಸುಲಭವಾಗಿ ಹೋಗುವ ಎಲ್ಲಾ ಸೌಕರ್ಯಗಳಿವೆ. ಆಸ್ಪತ್ರೆಗಳಲ್ಲಿ ಡಾಕ್ಟರ್‌ಗಳು ಮೊದಲು ಅವರ ತಪಾಸಣೆ ಮಾಡಬೇಕು. ಅವರನ್ನು ನೋಡೆನೆಂದ ಡಾಕ್ಟರ್ ತಕ್ಷಣ ಕೆಲಸ ಕಳೆದುಕೊಳ್ಳುವನು.

ಆದರೆ ಇಲ್ಲಿ ಮಾತ್ರ ಓರ್ವ ಡಾಕ್ಟರ್ ಕ್ಲಿನಿಕ್ ಕೂಡಾ ಕನಿಷ್ಠ ಪಕ್ಷ ೪-೫ ಮೆಟ್ಟಿಲುಗಳನ್ನೊಳಗೊಂಡಿರುತ್ತದೆ!!!! ಕೆಲವು ಡಾಕ್ಟರ್‌ಗಳಂತೂ ತಮ್ಮ ವೃಧ್ಧಿ ಧರ್ಮವನ್ನೇ ಮರೆತು ಅಮಾನವೀಯತೆಯ ಪರಾಕಷ್ಠೆಯನ್ನು ಮುಟ್ಟುತ್ತಾರೆ. ಮೊನ್ನೆ ಸ್ವತಃ ನನ್ನೊಂದಿಗೆ ನಡೆದ ಅಮಾನವೀಯ ಘಟನೆಯನ್ನೇ ಹೇಳುವೆ. ಇದನ್ನು ಹೇಳುವ ಮೊದಲೇ ನಾನು ಸ್ಪಷ್ಟ ಪಡಿಸುವೆ. ನನಗೆ ಆ ಡಾಕ್ಟರ್ ಮೇಲೆ ಯಾವ ಪೂರ್ವಾಗ್ರಹವಾಗಲೀ, ದ್ವೇಷವಾಗಲೀ ಖಂಡಿತ ಇಲ್ಲ. ಅವನ ವರ್ತನೆಗೆ, ಯೋಚನೆಗೆ ಮಾತ್ರ ತೀವ್ರ ಖಂಡನೆ ಹಾಗೂ ನೋವಿದೆ ಅಷ್ಟೇ.

ಹಲವು ದಿನಗಳಿಂದ ಜ್ವರದಲ್ಲಿ ಬಳುತ್ತಿದ್ದ ನಾನು ನಿನ್ನೆ ರಾಜರಾಜೇಶ್ವರಿ ನಗರದಲ್ಲಿರುವ ಓರ್ವ ಡಕ್ಟರ್ ಕ್ಲಿನಿಕ್‌ಗೆ ಹೋದೆ. ನಮಗೆ ಪರಿಚಯ ಇದ್ದ ಡಾಕ್ಟರ್ ಊರಲ್ಲಿರದಿದ್ದ ಕಾರಣ ನನ್ನ ಯಜಮಾನರ ಫ್ರೆಂಡ್ ಓರ್ವ ಹೇಳಿದ ಈ ಕ್ಲಿನಿಕ್‌ಗೇ ಹೋಗಬೇಕಾಯಿತು. ನನ್ನ ಹೆಲ್ಪರ್‌ಗೂ ಸೌಖ್ಯವಿರದಿದ್ದ ಕಾರಣ ಅವಳನ್ನು ಕರೆದುಕೊಂಡು ಹೋಗಿದ್ದೆ.ಕ್ಲಿನಿಕ್ಕಿಗೆ ಹೋಗಲೂ ೬-೭ ಮೆಟ್ಟಿಲುಗಳನ್ನು ಇಳಿಯಬೇಕಿತ್ತು (ಭಾರತದ ಎಲ್ಲಾ ಕ್ಲಿನಿಕ್‌ಗಳ ದುರವಸ್ಥೆ ಇದು.. ಆಸ್ಪತ್ರೆಗಳನ್ನು ಬಿಟ್ಟು). ಹಾಗಾಗಿ ಹೆಲ್ಪರ್ ಹಾಗೂ ನನ್ನವರು ಒಳಗೆ ಹೋದರು. ನಾನು ಕಾರಿನಲ್ಲೇ ಕುಳಿತಿದ್ದೆ. ಕ್ಲಿನಿಕ್ ಕೇವಲ ೫-೧೦ ಹೆಜ್ಜೆ ದೂರವಷ್ಟೇ ಇತ್ತು. ಇವರು ಡಾಕ್ಟರ್ ಬಳಿ "ನಾನು "Physically Challenged ಎಂದು ಹೇಳಿ ಕೇವಲ ಜ್ವರವಿದೆ ಕಾರ್ ಬಳಿ ಬಂದು ನೋಡುವಿರಾ "ಎನ್ನಲು ಮೊದಲು ಆಯಿತೆಂದರು. ನನ್ನ ಹೆಲ್ಪರ್ ಚೆಕ್‌ಅಪ್ ಮಾಡಿ ಬಿಲ್ ಪಡೆದ ನಂತರ ನಾನು ಕಾರ್ ಬಳಿ ಬರುವುದಿಲ್ಲ.. "I feel very Odd to test" ಏನೇ ಆದರೂ ಅವರೇ ಇಲ್ಲಿಗೆ ಬರಬೇಕು. ಇಲ್ಲಾ ಬೇರೆ ಕಡೆ ಹೋಗಿ" ಅಂದು ಬಿಟ್ಟ. ನಂತರ ನಾವು ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಕ್ಲಿನಿಕ್‌ಗೆ ಹೋದೆವು. ಆ ಡಾಕ್ಟರ್ ಕಾರ್ ಬಳಿಯೇ ಬಂದು ನೋಡಿ ಮೆಡಿಸಿನ್ ಕೊಟ್ಟರು.
ಇಂತಹ ಅಮಾನವೀಯತೆ ಕಂಡು ತುಂಬಾ ನೋವಾಯಿತು. ಇಲ್ಲಿ ನನ್ನ ಭಾವನೆ ಅಪ್ರಸ್ತುತ. ನನ್ನ ಬಳಿ ಕಾರಿತ್ತು.. ಎಲ್ಲಾ ಸೌಕರ್ಯವಿತ್ತು.. ಹಾಗಾಗಿ ತುರ್ತಾಗಿ ಬೇರೆಡೆ ಹೋದೆ. ಆದರೆ ಏನೂ ಇಲ್ಲದ.. ದುಡ್ಡು ಚೆಲ್ಲಿ ಆಟೊದಲ್ಲೋ ಇಲ್ಲಾ ಬಸ್ಸಿನಲ್ಲೋ ಬಂದ ಬಡ ಅಂಗವಿಕಲರು ಏನು ಮಾಡಬೇಕು? ಮೆಟ್ಟಿಲುಗಳನ್ನು ಇಳಿಯಲಾಗದೇ ಇದ್ದರೆ ಎಲ್ಲಿ ಹೋಗಬೇಕು? ಅವರನ್ನು ನೋಡೆನು ಎನ್ನುವ ಇಂತಹ ಡಾಕ್ಟರ್ ಗಳನ್ನು ಸುಮ್ಮನೇ ಸಹಿಸಬೇಕೆ?
ಅದಕ್ಕಾಗಿಯೇ ನಂತರ ಚೆನ್ನಾಗಿ ಯೋಚಿಸಿ ಪೇಪರ್‌ಗಳಲ್ಲಿ ಇಂತಹವರ ಕುರಿತು ಹಾಕಬೇಕೆಂದಿರುವೆ. ಇಷ್ಟು ವರುಷ ನನ್ನೊಂದಿಗಾದ, ನನ್ನಂತಹವರೊಂದಿಗಾದ ಅದೆಷ್ಟೋ ಅನ್ಯಾಯಗಳನ್ನು ನಾನು ಸಹಿಸಿ ನಾನೇ ತಪ್ಪು ಮಾಡಿರುವೆ. ಅದರೆ ಈಗ ಈ ಘಟನೆಯನ್ನು ಹೊರತಂದರೆ ನಾಳೆ ಆತ ಬೇರೆ ಯಾರಿಗೂ ಹೀಗೆ ಮಾಡದಿರಲಿ..ಆತನ ಹೆಸರು ಬಯಲಾಗದಿದ್ದರೂ, ಪೇಪರಿನಲಿ ಬಂದರೆ, ಆತನಿಗೂ ಆ ಪೇಪರ್ ಒಂದನ್ನು ಪೋಸ್ಟ್ ಮಾಡುವ ಮೂಲಕ ಎಚ್ಚರಿಕೆ ಕೊಡುವೆ. ಅದೂ ಅಲ್ಲದೇ ಈ ಘಟನೆಯನ್ನೋದುವ ಮೂಲಕ ಇನ್ನೋರ್ವ ಡಾಕ್ಟರ್ ಇಂತಹ ಯೋಚನೆಯಿದ್ದರೆ ಕೈಬಿಟ್ಟು, ಆತ್ಮಸಾಕ್ಷಿಗೆ ಓಗುಟ್ಟರೆ, ನನ್ನಂತಹ ಅದೆಷ್ಟೋ ನೊಂದವರಿಗೆ ಮುಂದೆ ಸಹಾಯವಾಗುವುದು.
ಹಾಗಾಗಿಯೇ ವಿಜಯಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಪತ್ರಿಕೆಗಳಿಗೆಲ್ಲಾ ಈ ಘಟನೆಯನ್ನು ಕಳುಹಿಸಿರುವೆ. ಹಾಕುವುದು ಬಿಡುವುದು ಅವರಿಚ್ಚೆ. ಒಂದು ವೇಳೆ ಯಾವುದಾದರೂ ಒಂದು ಪೇಪರಿನಲ್ಲಾದರೂ ಬಂದರೆ ಆ ಪೇಪರ್ ಪ್ರತಿಯೊಂದನ್ನು ಆ ಡಕ್ಟರ್‌ಗೂ ಪೋಸ್ಟ ಮಾಡಬೇಕೆಂದಿರುವೆ.

ಭಾರತದಲ್ಲಿ ಎಲ್ಲೇ ಆಗಲೀ, ಯಾವುದೇ ಮಾಲ್‍ಗಳಾಗಿರಲಿ(ಬಿಗ್‍ಬಜಾರ್ ಬಿಟ್ಟು), ಅಂಗಡಿಗಳಾಗಿರಲಿ, ಸಿನಿಮಾ ಥಿಯೇಟರ್‌ಗಳಾಗಿರಲೀ, ಬಿಡಿ.. ಸಣ್ಣ ಕ್ಲಿನಿಕ್‌ಗಳು ಕೂಡಾ ಮೆಟ್ಟುಲುಗಳಿಲ್ಲದೇ ಇಲ್ಲ!! ಕಲಿಯುವ ವಿದ್ಯಾಕೇಂದ್ರಗಳಲ್ಲೂ ಅಂಗವಿಕಲರಿಗಾಗಿ ಬೇರೆ ಸುಲಭ ಮಾರ್ಗವಿಲ್ಲ. ಇನ್ನು ವ್ಹೀಲ್‌ಚೇರ್ ಮೇಲೆ ಹೋಗುವ ಮಾತು ಬಲು ದೂರ. ಬೇಕಿದ್ದರೆ ಅವರು ಅವರಿಗಾಗಿಯೇ ಇರುವ ಸ್ಮೆಷಲ್ ಸ್ಕೂಲ್‌ಗಳಿಗೆ ಹೋಗಲಿ ಎಂಬ ಭಂಡತನದ ಮತುಗಳನ್ನು ನಾನೇ ಕೇಳಿ ಅನುಭವಿಸಿದ್ದೇನೆ.... ಎದುರಿಸಿದ್ದೇನೆ. "ನಿನಗೇಕೆ ಬೇಕು ಸೈನ್ಸ್ ಓದು? ನಿನ್ನಿಂದಾಗದು ಈ ಪ್ರಾಕ್ಟಿಕಲ್ ಎಲ್ಲಾ... ಸುಮ್ಮನೆ ಬಿ.ಎ. ಮಾಡು" ಎಂದು ನನಗೆ ದೊಡ್ಡ ಉಪದೇಶ ಕೊಟ್ಟವರೇ ಬಹಳಷ್ಟು ಜನ. ಆದರೆ ದೇವರ ದಯೆ ಹಾಗೂ ನನ್ನ ಹೆತ್ತವರ ಸಂಪೂರ್ಣ ಸಹಕಾರ, ಮನೋಧೈರ್ಯದಿಂದ ಎಲ್ಲ ವಿದ್ಯಾರ್ಥಿಗಳಂತೆಯೇ ಕಾಲೇಜಿಗೆ ಹೋಗಿ ಪ್ರಾಕ್ಟಿಕಲ್ ಕೂಡಾ ಮಾಡಿ ಉತ್ತಮ ಅಂಕಗಳನ್ನು ಪಡೆದು ಪಾಸಾದೆ. ಆದರೆ ಮನೆಯವರ ಅಸಹಕಾರವಿರುವ, ಆರ್ಥಿಕ ಬೆಂಬಲ ಇರದ ಬುದ್ಧಿವಂತ ಅಂಗವಿಕಲರು ಏನು ಮಾಡಬೇಕು? ಎಲ್ಲಿಗೆ ಹೋಗ ಬೇಕು. ಸಾಮಾನ್ಯರಂತೇ ಕಾಲೇಜಿನಲ್ಲಿ ಓದುವ ಹಕ್ಕು ಅವರಿಗೇಕಿಲ್ಲ?

ಹಾಗಿದ್ದರೆ ಅಂಗವಿಕಲರಾದವರು ಸ್ವಂತ ವ್ಹೀಲ್‌ಚೇರ್ ಮೇಲಾದರೂ ತಮಗಿಷ್ಟ ಬಂದ ಕಡೆ ಸುಲಭವಾಗಿ ಹೋಗಿ ತಮ್ಮ ಕೆಲಸ ಕರ್ಯಗಳನ್ನು ತಾವೇ ಸ್ವತಃ ಮಡಿಕೊಳ್ಳುವ ಕಾಲ ಭಾರತದಲ್ಲಿ ಬರದೇ? ಅವರಲ್ಲಿ ಸ್ವಾಭಿಮಾನ, ಆತ್ಮಶಕ್ತಿಯನ್ನು ವೃದ್ಧಿಸುವ ಕಾರ್ಯಗಳನ್ನು ಸರಕಾರ ಮಾಡದಿದ್ದರೆ ಸರಿ.. ಜನ ಸಾಮಾನ್ಯರಾದರೂ ಎಚ್ಚೆತ್ತು ಕೊಳ್ಳಬಾರದೇ? ಸುತ್ತಮುತ್ತಲಿರುವ ಅಂಗವಿಕಲರು ಪಡುತ್ತಿರುವ ಪಾಡು, ಕಷ್ಟಗಳನ್ನು ನೋಡಿಯಾದರೂ ಸಮಾಜ ತನ್ನೊಳಗಿನ ವ್ಯವಸ್ಥೆಗಳಲ್ಲಿ ಬದಲಾವಣೆ ತರಬಾರದೇಕೆ? ಅವರಿಗೂ ಎಲ್ಲರಂತೇ ಜೀವಿಸುವ, ಓದುವ, ದುಡಿಯುವ, ಎಲ್ಲಾ ಕಡೆಯೂ ಹೋಗುವ ಹಕ್ಕಿದ, ಸ್ವಾತಂತ್ರ್ಯವಿದೆ. ಇವರಿಗಾಗಿ ಜನಜಾಗೃತಿಯಾಗುವುದು ಯಾವತ್ತು?!! ಅಂಗವಿಕಲರ ಸಮಸ್ಯೆಗಳು ಅಷ್ಟೊಂದು ದೊಡ್ಡ ಸಮಸ್ಯೆಯೇ? ಪರಿಹರಿಸಲಾರದಷ್ಟು?

ಎಲ್ಲಾ ಸಮಸ್ಯೆಗಳಿಗೂ ಖಂಡಿತ ಪರಿಹಾವಿದೆ ಎಂದು ನಂಬಿರುವವಳು ನಾನು. ಹಾಗಾಗಿ ಕೇವಲ ಸಮಸ್ಯೆಗಳನ್ನಲ್ಲದೇ. ಅದಕ್ಕೆ ತಕ್ಕುದಾದ ನನ್ನದೇ ರೀತಿಯ ಪರಿಹಾರಗಳನ್ನೂ ಮುಂದಿಟ್ಟಿರುವ. ಈ ಪರಿಹಾರಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಹೇಳುತ್ತಿಲ್ಲ. ಆದರೆ ಈ ನಿಟ್ಟಿನಲ್ಲಿ ಇನ್ನಾದರೂ ಜನಜಾಗೃತಿಯಾಗಬೇಕಿದೆ. ಈ ಪರಿಹಾರಗಳು ಓದುಗರಾದ ತಮಗೆ ಸರಿಯೆನಿಸಿದರೆ ದಯವಿಟ್ಟು ಜಾರಿಗೆ ತರುವನಿಟ್ಟಿನಲ್ಲಿ ನಿಮ್ಮದೇ ಕೊಡುಗೆ ನೀಡಿ ಎಂದು ವಿನಂತಿಸುವೆ.
ಪರಿಹಾರಕ್ರಮಗಳು:
೧.ಮೊದಲಿಗೆ ಅವರ ದಿನಾಚರಣೆಯ ಕ್ರಮವೇ ಸರಿಯಲ್ಲ. ಅಂಗವಿಕಲರು ವಿಶೇಷರಲ್ಲ. ಅವರೂ ಸಾಮಾನ್ಯರಂತೆ, ಆದರೆ ಅಂಗದಲ್ಲಿ ವಿಶೇಷ ಊನವಾಗಿರುವವರು ಅಷ್ಟೇ ಎಂದು ತಿಳಿಯಬೇಕು. ಅವರ ಪ್ರತಿ ಸ್ನೇಹವಿರಲಿ. ಅತಿಯಾದ ಅನುಕಂಪ ಆತ್ಮಸ್ಥೈರ್ಯ ಕೊಡದು. ತಿರಸ್ಕಾರ ಬೇಡ. ಸಮಾನತೆಯೊಂದೇ ದಾರಿ.
೨. ಮಾನೋವಿಕಲರನ್ನು ಬಿಟ್ಟು ಕೇವಲ ದೈಹಿಕ ನ್ಯೂನತೆಯಾದವರಿಗೆ ಎಲ್ಲರಂತೆ ಓದಲು, ಉದ್ಯೋಗ ಮಾಡಲು ಅವಕಾಶಗಳನ್ನು ನೀಡಬೇಕು. ಇದು ಕೇವಲ ಇಂತಿಷ್ಟು %ಗಳಲ್ಲಿಡುವುದರಿಂದ ಪರಿಹಾರವಾಗದು. ಎಲ್ಲಾ ವಿದ್ಯಾಕೇಂದ್ರಗಳನ್ನು, ಕಚೇರಿಗಳನ್ನು, ಅಂಗಡಿಗಳನ್ನು, ಮಾಲ್‌ಗಳನ್ನು ವ್ಹೀಲ್‌ಚೇರ್ ಹೋಗುವಂತೆ ವಿನ್ಯಾಸಗೊಳಿಸಬೇಕು.
೩. ಬಹುಮಡಿ ಕಟ್ಟಡಗಳಲ್ಲಿ, ಬಹು ಅಂಕಣಗಳಿರುವ ಮನೆಗಳನ್ನು ಕಟ್ಟುವಾಗ ಲಿಫ್ಟ್ ಸೌಲಭ್ಯವಿರುವಂತೆ ನೊಡಬೇಕು.
೪.ಕ್ಲಿನಿಕ್‌ಗಳು ಎಷ್ಟೇ ಸಣ್ಣವಾಗಿರಲಿ ಕಡ್ಡಾಯವಾಗಿ ರೋಗಿಗಳು ಸುಲಭವಾಗಿ ಒಳಹೋಗುವಂತೆ ಮಾಡಬೇಕು. ಮೆಟ್ಟುಲುಗಳನ್ನಿಡಲೇ ಬಾರದು. ಇಟ್ಟರೆ ಲಿಫ್ಟ್ ಸೌಲಭ್ಯವಿರಲೇಬೇಕು.
೫. ಅವರಿಂದ ಈ ಕಲಿಕೆ/ಕೆಲಸವಾಗದು ಎಂದು ಇತರರು ನಿರ್ಧರಿಸಬಾರದು. ಅಂತಿಮ ನಿರ್ಧಾರ ಆತನದಾಗಿರಬೇಕು.
೬. ಅಂಗವೈಕಲ್ಯ ಪ್ರಾರಾಬ್ಧ ಕರ್ಮ, ಒಂದು ಶಾಪ ಅನುಭವಿಸಲೇ ಬೇಕಾದ್ದು ಎಂಬ ಮುಢತೆಯನ್ನು ತೊರೆಯಬೇಕು. ಕೇವಲ ಅನುಕಂಪ, ಕರುಣೆ ತೋರದೇ. ಅವರಿಂದಲೂ ಸಾಧಿಸಲು ಸಾಧ್ಯ ಎನ್ನುವ ಮಾನಸಿಕ ಬೆಂಬಲ ನೀಡಬೇಕು. ಸಹಕಾರವಿರಲಿ.
೭. ಎಲ್ಲಕ್ಕಿಂತ ಮುಖ್ಯವಾಗಿ ವಿಕಲಚೇತನರು ತಮ್ಮನ್ನು ತಾವು ಹಳಿದುಕೊಳ್ಳುವುದು, ಕುಗ್ಗಿಸಿಕೊಳ್ಳುವುದು, ತಾವು ಅಸಮರ್ಥರೆಂಡು ಕೊರಗುವುದನ್ನು ಬಿಡಬೇಕು. "ನಮ್ಮನ್ನು ನಾವೇ ಉದ್ಧಾರಮಾಡಿಕೊಳ್ಳಬೇಕು. ಯಾರೋ ಬಂದು ನಮ್ಮನ್ನು ಮೇಲೆತ್ತರು. ನಾವು ಮನೋಬಲ ಹೊಂದಿದಾಗ ಸಮಾಜವೂ ನಮ್ಮೊಂದಿಗೆ ಒಂದಲ್ಲಾ ಒಂದು ದಿನ ಬರುವುದು ಎನ್ನುವದನ್ನು ಮನಗೊಳ್ಳಬೇಕು."

ಕೊನೆಯದಾಗಿ : ಸಾವಿರಾರು ಮಾತುಗಳನ್ನು ಒಂದು ಕವನವು ಹೇಳುವುದು.

ಆಶಾಜ್ಯೋತಿ

ನೂರು ಕನಸ ಕಣ್ಣೊಳಿಟ್ಟು,
ಜಗವ ಪಡೆವ ಕೆಚ್ಚುಹೊತ್ತು
ಸದಾ ನಗುವ ತುಟಿಯೊಳಿಟ್ಟು
ಹತಾಶೆಯ ಕೊರಗು ಬಿಟ್ಟು,
ಹೋರಾಟವು ನಮ್ಮ ಬದುಕು,
ಮುಂದಿದೆ ಬಾಳ ಬೆಳಕು;

ಸಮಾನತೆಯು ಇರೆ ಜೊತೆಗೆ
ಏರುವೆವು ಪರ್ವತವನೇ
ಕರುಣೆ ಇರದೆ ಸ್ನೇಹ ನೀಡೆ
ದಾಟುವೆವು ಸಾಗರವನೇ

ತಳ್ಳಲಾರರು ಯಾರೂ
ಬಗ್ಗದ ಮರ ನಾವು,
ಒಡೆಯಲಾರರು ಮನವ
ಇದು ಬಂಡೆ ಕಲ್ಲು.

ಹೂವಂಥ ಮನದೊಳು
ವಜ್ರದ ಬಲವಿರಲು
ಹೊಸಕಲಾರರು ಯಾರೂ
ಇದು ಬಾಡದ ಹೂವು.

ನೀಡುತಿರೆ ನೀವು ಸದಾ
ವಿಶ್ವಾಸ ಪ್ರೀತಿ,
ಬೆಳಗಬಲ್ಲೆವು ನಾವು
ಹೊಸ ಆಶಾಜ್ಯೋತಿ.

"ಬದಲಾವಣೆ ಒಂದು ದಿನದಲ್ಲಾಗದು..ಒಂದು ಬರಹದಲ್ಲಾಗದು.. ಆದರೆ ಬದಲಾವಣೆಯ ಪ್ರಾರಂಭ ಒಂದು ಬರಹದಿಂದಲಾದರೂ ಆದರೆ ಅಷ್ಟೇ ಸಾಕು"

-ತೇಜಸ್ವಿನಿ ಹೆಗಡೆ.

18 ಕಾಮೆಂಟ್‌ಗಳು:

ಆಲಾಪಿನಿ ಹೇಳಿದರು...

ತೇಜಸ್ವಿನಿ, ಬದಲಾವಣೆ ಬಗ್ಗೆ ಮಾತನಾಡೋದಂದ್ರೆ ..... ಆದರೂ ನಿಮ್ಮ ಆಶಯ ಈಡೇರಲಿ ಎಂದಷ್ಟೇ ಈ ಸಂದರ್ಭದಲ್ಲಿ ಹಾರೈಸಲು ಸಾಧ್ಯ. ಕ್ಷಮಿಸಿ

ಅಂತರ್ವಾಣಿ ಹೇಳಿದರು...

ತೇಜು ಅಕ್ಕ,
ನನಗೇನೂ ಹೇಳಲು ತೋಚುತ್ತಿಲ್ಲ. ಆದರೆ ಅಂತ ವೈದ್ಯರೂ ಇದ್ದಾರಲ್ಲ ಅಂತ ಬೇಜಾರಾಗಿದೆ.

ಅಂಗವಿಕಲರೂ ಅನೇಕ ಸಾಧನೆ ಮಾಡಿದ್ದಾರೆ, ಮಾಡುತ್ತಾಯಿದ್ದಾರೆ, ಮಾಡುತ್ತಾರೆ. ಅವರು ಸಾಮಾನ್ಯರಿಗಿಂತ ಹೆಚ್ಚೇ ಇರುತ್ತಾರೆ.

Harisha - ಹರೀಶ ಹೇಳಿದರು...

ತೇಜಕ್ಕ, ನೀ ಹೇಳಿದ್ದು ಸರಿ ಇದ್ದು. ನನ್ನ ಮಾವ ಕೂಡ ಕಾಲಿಲ್ದೇ ಇದ್ರೂ ಡಾಕ್ಟರ್ ಆಗಿ ಇಡೀ ಸಿರ್ಸಿಯಲ್ಲಿ ಪ್ರಸಿದ್ಧ ಆಗಿದ್ದ. ಅಂತಶ್ಚೇತನ ಸಮರ್ಥವಾಗಿರುವವರೆಗೂ ಅಂಗವೈಕಲ್ಯ ಬಾಧಿಸಲಾರದು. ಆ ಚೇತನ ತುಂಬ ಕೆಲಸ ನಡ್ಯಕ್ಕಾಯ್ದು

ಚಿತ್ರಾ ಹೇಳಿದರು...

ಪ್ರಿಯ ತೇಜೂ ,

’ ವೈದ್ಯೋ ನಾರಾಯಣೋ ಹರಿ:’ ಎಂದು ನಂಬಿರುವ ನಮ್ಮಲ್ಲಿ , ಈ ವೈದ್ಯರ ನಡವಳಿಕೆ ನಿಜಕ್ಕೂ ಅಕ್ಷಮ್ಯ !ಇಂಥವರು ವೈದ್ಯರ ಹೆಸರಿಗೊಂದು ಕಪ್ಪುಮಸಿಯಂತೆ.

ಬೇರೆ ದೇಶಗಳಲ್ಲಿ , ಇಂಥದ್ದೇನಾದರೂ ಆದರೆ ಅವರ ಮೇಲೆ ಕೇಸ್ ಹಾಕಿ ಲೈಸೆನ್ಸ್ ಸಹ ಕ್ಯಾನ್ಸಲ್ ಮಾಡಬಹುದು.
ನೀ ಹೇಳಿದ ಹಾಂಗೆ , ಕೇವಲ ’ ದಿನಾಚರಣೆಗಳನ್ನು ವರ್ಷಕ್ಕೊಮ್ಮೆ ಆಚರಿಸುವುದರಿಂದ ಏನೂ ಆಗದು . ಬದಲಿಗೆ ಅಂಗವಿಕಲರಿಗೆ ಸೌಕರ್ಯ -ಸೌಲಭ್ಯ ಮಾಡಿಕೊಡುವ ಬಗ್ಗೆ ನಮ್ಮಲ್ಲಿನ್ನೂ ರಾಶಿ ರಾಶಿ ಸುಧಾರಣೆ ಆಗ ಬೇಕು.ಮೊದಲನೆಯದಾಗಿ ಅವರ ಬಗ್ಗೆ ಯಾವುದೇ ಅಸಡ್ಡೆ ಮತ್ತು ಅತಿಯಾದ ಅನುಕಂಪ ಇವೆರಡೂ ಹೋಗಬೇಕು.

ಅಂಗವಿಕಲರೂ ಯಾರದೇ ಸಹಾಯವಿಲ್ಲದೇ,ಸ್ವತಂತ್ರವಾಗಿ ಓಡಾಡಲು ಅನುಕೂಲವಾಗುವಂತೆ ಸರಕಾರಿ ಕಚೇರಿಗಳು, ಆಸ್ಪತ್ರೆಗಳು ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲು ಪುಣೆ ಮಹಾನಗರ ಪಾಲಿಕೆ ಪಣ ತೊಟ್ಟಿದೆ ಎಂಬ ಸ್ವಾಗತಾರ್ಹ ಸುದ್ದಿಯನ್ನು ಇತ್ತೀಚೆ ಇಲ್ಲಿನ ಪೇಪರ್ ನಲ್ಲಿ ಓದಿ ನಿಜಕ್ಕೂ ಖುಷಿಯಾಯಿತು . ಹೀಗೇ ಎಲ್ಲ ಕಡೆಯಲ್ಲೂ ಆದರೆಷ್ಟು ಚೆನ್ನ ಅಲ್ಲವೆ ?

ಚಿತ್ರಾ ಹೇಳಿದರು...

ತೇಜೂ
" ತಳ್ಳಲಾರರು ಯಾರೂ
ಬಗ್ಗದ ಮರ ನಾವು,
ಒಡೆಯಲಾರರು ಮನವ
ಇದು ಬಂಡೆ ಕಲ್ಲು.

ಹೂವಂಥ ಮನದೊಳು
ವಜ್ರದ ಬಲವಿರಲು
ಹೊಸಕಲಾರರು ಯಾರೂ
ಇದು ಬಾಡದ ಹೂವು. "

ಸತ್ಯವಾದ ನುಡಿ ! ಆತ್ಮ ವಿಶ್ವಾಸತುಂಬಿದ ಸಾಲುಗಳು .

ಮನಸ್ವಿ ಹೇಳಿದರು...

ತೇಜಸ್ವಿನಿ ಹೆಗಡೆಯವರೆ,
ಇಂತಹ ಡಾಕ್ಟರ್ ಗಳು ಇರುತ್ತಾರಾ.. ಬೇರೆ ಕಡೆ ಹೋಗಬಹುದು ಎಂದರು ಎಂದಾದರೆ ಆತನಲ್ಲಿ ಮಾನವೀಯತೆ ಸತ್ತು ಹೋಗಿದೆಯೆಂದೆ ಅರ್ಥ.
ಅಂಗ ವಿಕಲತೆಯಿರುವ ಒಬ್ಬ ವ್ಯಕ್ತಿ ವೀಲ್ ಛೇರನಲ್ಲಿಯೆ ಕುಳಿತು ಪಾರ್ಕಿಂಗ್ ಲಾಟ್ನಲ್ಲಿ ಕೆಲಸ ಮಾಡುವುದನ್ನು ನೋಡಿದ್ದೇನೆ ಆತನ ಕೈಗೆ ಎಷ್ಟು ಬಲವಿತ್ತೆಂದರೆ ಬರಿಯ ಒಂದು ಕೈನಿಂದಲೆ ದ್ವಿಚಕ್ರ ವಾಹನವನ್ನು ಪಕ್ಕಕ್ಕೆ ಸರಿಸಿಡುವಷ್ಟು... ಅಂದರೆ ಆತನಿಗೆ ಕಾಲಿನಲ್ಲಿ ಬಲ ಕಡಿಮೆಯಿದೆ ಅದೇ ಬಲ ಕೈನಲ್ಲಿ ಇದೆಯಲ್ಲ..ಅತೀ ವಿಶೇಷವೇನಲ್ಲ,
ಇನ್ನು ಅನೇಕರು ಏನೆಲ್ಲಾ ಸಾಧನೆಗಳನ್ನ ಮಾಡಿದ್ದಾರೆ, ಈಜು.. ಮತ್ತೆ ಅನೇಕ ಕ್ಷೇತ್ರಗಳಲ್ಲಿದ್ದಾರೆ, ಸಮಾಜದಲ್ಲಿ ಅಂಗವಿಕಲರನ್ನು ಸಾಮಾನ್ಯರಂತೆ ಜನ ನೋಡುವಂತಾಗಬೇಕು.. ನಿಮ್ಮ ಈ ಲೇಖನ ಬದಲಾವಣೆಯ ಆರಂಭಕ್ಕೆ ಮುನ್ನುಡಿಯಾಗಲಿ

ವಿ.ರಾ.ಹೆ. ಹೇಳಿದರು...

ಹೌದು, ಅಂಗವಿಕಲರೂ ಸಹ ಸ್ವತಂತ್ರ್ಯವಾಗಿ ಗೌರವಯುತವಾದ ಜೀವನ ಮಾಡಿಕೊಡಲು ಅನುವು ಮಾಡಿಕೊಡಬೇಕಾದ್ದು ಸಮಾಜದ, ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ನೀವು ಬರೆದದ್ದು ೧೦೦% ಸರಿಯೆನಿಸಿತು.
ಆ ಡಾಕ್ಟರರ ನಡವಳಿಕೆ ಬಹಳ ಬೇಸರ ತರಿಸುವಂತದ್ದು. ಡಾಕ್ಟರಲ್ಲೇ ಆಗಲಿ ಉಳಿದ ಜನರಲ್ಲೇ ಆಗಲಿ ಅವರವರ ಮನಸ್ಸಿನಲ್ಲಿ ಬದಲಾವಣೆಯಾದರೆ ಮಾತ್ರ ಸಾಧ್ಯವಿದೆ ಇದು.
ಅದಕ್ಕಾಗಿ ಆಶಿಸೋಣ. ನಿಮ್ಮ ಬರಹಕ್ಕೆ ಧನ್ಯವಾದಗಳು.

Ittigecement ಹೇಳಿದರು...

ತೇಜಸ್ವಿನಿ...
ಮನಮಿಡಿಯುವಂತೆ ಬರೆದಿದ್ದೀರಿ...
ನನ್ನಿಂದ ಅಂಗವಿಕಲರ ಬಗೆಗೆ ಎಂಥ ತಪ್ಪೂ ಆಗದಂತೆ ಎಚ್ಚರ ವಹಿಸುವೆ...
ಅವರಿಗೆ ನೋವಗದಂತೆ ನೋಡಿಕೊಳ್ಳುವೆ..
ಕಣ್ಣು ತೆರೆಸುವ ಲೆಖನ...

kanasu ಹೇಳಿದರು...

ಪೊಲೀಸರು ಹಾಗು ವೈದ್ಯರಿಗಿಂತ ಭಯೋತ್ಪಾದಕರು ಇಲ್ಲ ಎನ್ನುವ ಮಾತಿಗೆ ಮತ್ತೊಂದು ಸಾಕ್ಷಿ ನೀವು ಹೇಳುತ್ತಿರುವ ಈ ಘಟನೆ!
ವೈಕಲ್ಯೆತರ ಸಾಮಾನ್ಯ ಜನರಿಗೂ ಇಂಥಹ ನೋವು ತಿಳಿಯುವುದೇ ಇಲ್ಲ. ಹೆಚ್ಚೆಂದರೆ ಅಯ್ಯೋ ಎನ್ನುತ್ತೇವೆ ಅಷ್ಟೆ. ಈ ವಿಷಯದ ಬಗ್ಗೆ ಇತರರಿಗೂ ತಮ್ಮದೇ ಆದ ಜವಾಬ್ದಾರಿ ಇದೆ ಎಂದು ನಿಮ್ಮ ಲೇಖನದಿಂದ ಅನುಭವಕ್ಕೆ ಬಂತು!
revolutions start from individual enlightenment, which you are doing right now...thanks
All the best :)

ಚಂದ್ರಕಾಂತ ಎಸ್ ಹೇಳಿದರು...

ಅಂಗವಿಕಲರ ಬಗ್ಗೆ ನಾವುಗಳು ಮಾತಾಡುವಾಗ ಇತರರು ಅವರೊಡನೆ ಹೇಗೆ ವರ್ತಿಸಬೇಕೆಂಬುದಕ್ಕೆ ನಾವೆಲ್ಲಾ ಹೆಚ್ಚು ಒತ್ತು ಕೊಡುತ್ತೇವೆ. ನನ್ನ ಅಭಿಪ್ರಾಯ ಅಂತಹವರ ಬಾಲ್ಯದಲ್ಲಿ ತಾಯಿತಂದೆಯರು ಅವರಲ್ಲಿ ಅಪಾರ ಆತ್ಮವಿಶ್ವಾಸ ತುಂಬಬೇಕು. ಹಾಗು ಇತರರ ಅನುಕಂಪಕ್ಕೆ ತಿರಸ್ಕಾರಕ್ಕೆ ತುಂಬಾ ನೊಂದುಕೊಳ್ಳದಂತೆ ಅವರಿಗೆ ಕಲಿಸಬೇಕು. ನನ್ನ ಮಿತಿಯಲ್ಲಿ ನಾನು ನಮ್ಮ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೆ ( ನಿಮಗೆ ಅಚ್ಚರಿಯಾಗಬಹುದು ಸರಾಸರಿ ವರ್ಷಕ್ಕೆ ೬-೭ ಜನರಾದರೂ ಇಂತಹವರಿರುತ್ತಾರೆ) ಅವರಲ್ಲಿ ತುಂಬಾ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡುತ್ತೇನೆ. ಅವರು ಕಾಲೇಜು ಬಿಡುವಷ್ಟರಲ್ಲಿ ಬಹುಮಟ್ಟಿಗೆ ಧೈರ್ಯ ತಂದುಕೊಂಡಿರುತ್ತಾರೆ. ಈ ಮಾತಿಗೆ ನಾನು ಏಕೆ ಒತ್ತುಕೊಡುತ್ತಿದ್ದೇನೆಂದರೆ ಆತ್ಮವಿಶ್ವಾಸ ಹೆಚ್ಚಿದ್ದಾಗ ಇತರರ ಪ್ರತಿಕ್ರಿಯೆಯೂ ಸ್ವಲ್ಪ ಭಿನ್ನವಾಗಿರುತ್ತದೆ. ಅನವಶ್ಯಕ ಅನುಕಂಪ , ತಿರಸ್ಕಾರ ಕಡಿಮೆ ಇರುತ್ತದೆ.

ಇನ್ನು ನಿಮ್ಮನ್ನು ಟ್ರೀಟ್ ಮಾಡಲು ಒಪ್ಪದಿದ್ದ ಡಾಕ್ಟರ್ ಬಗ್ಗೆಹೇಳಬೇಕೆಂದರೆ ಅವರಿ(ನಿ)ಗೆ ಚೆನ್ನಾಗಿ ಉಗಿಯಬೇಕಿತ್ತು. ಅವರ ಹೆಸರು ಹಾಕಿದ್ದರೂ ತಪ್ಪಿರಲಿಲ್ಲ

ಎಚ್. ಆನಂದರಾಮ ಶಾಸ್ತ್ರೀ ಹೇಳಿದರು...

ಸೋದರಿ,
ಯಾವ ಪತ್ರಿಕೆಯೂ ನಿಮ್ಮ ನಿವೇದನೆಯನ್ನು ಪ್ರಕಟಿಸಲಿಲ್ಲ ನೋಡಿ! ಪತ್ರಿಕೆಗಳ ಆಯ್ಕೆ, ಆದ್ಯತೆಗಳೇ ಬೇರೆ. ನಾವೆಲ್ಲ ಒಟ್ಟಾಗಿ ನಮ್ಮ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ.
- ಎಚ್‌. ಆನಂದರಾಮ ಶಾಸ್ತ್ರೀ

ತೇಜಸ್ವಿನಿ ಹೆಗಡೆ ಹೇಳಿದರು...

@ಶ್ರೀದೇವಿ,

ನಿಜ.. ಬದಲಾವಣೆಯನ್ನು ನಮ್ಮಲ್ಲಿ ಬೇಗನೆ ಅಪೇಕ್ಷಿಸುವುದೇ ತಪ್ಪು..ಆದರೂ ಎಲ್ಲೋ ಒಂದು ಮೂಲೆಯಲ್ಲಿ ಆಶಯವಿದೆ. ಕೆಲವೊಮ್ಮೆ ಕಾಲದ ಹಂಗಿಲ್ಲದ ನಿರೀಕ್ಷೆಯೇ ನಮ್ಮನ್ನು ಮುನ್ನಡೆಸುತ್ತದೆ ಅಲ್ಲವೇ? ಧನ್ಯವಾದಗಳು.

@ಶಂಕರ್,

ಒಳಿತು ಕೆಡುಕು ಎಲ್ಲಾ ಕ್ಷೇತ್ರಾದಲ್ಲಿಯೂ ಇದ್ದೇ ಇದೆ. ಆದರೆ ಅದರ ತೀವ್ರತೆಯ ಹೆಚ್ಚು/ಕಡಿಮೆಗೊಳಿಸುವುದು ನಮ್ಮ ಕೈಲಿದೆ ಅಲ್ಲವೇ? ಸಾಧನೆ ಎನ್ನುವುದು ಇಂತಹವರಿಗೆ ಮಾತ್ರ ಒಲಿಯುವುಂಥದ್ದಲ್ಲ. ಸಾಧಕನಲ್ಲಿ ಛಲ, ಮನೋಧೈರ್ಯವಿದ್ದರೆ ಎಲ್ಲವೂ ಸಾಧ್ಯ. ಆದರೆ ಜೊತೆಗೆ ಸಹಚರರ ಸಹಕಾರವಿದ್ದರೆ ಬಲು ಸುಲಭವಾಗುವುದಷ್ಟೇ. ಪ್ರೋತ್ಸಾಹಕ್ಕೆ ಧನ್ಯವಾದಗಳು.

@ಹರೀಶ್,

ಅಂಗವಿಕಲರಲ್ಲಿ ಅಂತಃಶ್ಚೇತನ ಸದಾ ಜಾಗೃತವಾಗಿರ್ತು. ಆದರೆ ಅದನ್ನು ಪುನಃಶ್ಚೇತನಗೊಳಿಸೋ ಕೆಲ್ಸಾ ಮಾಡ್ತಾ ಇರಕಾಗ್ತು ಅಷ್ಟೇ. ಆದರೆ ಕೆಲವು ಸಶಕ್ತ ಜನರಲ್ಲಿ ಅವರೊಳಗಿರುವ ಅಂತಃಶ್ಚೇತನವೂ ಸತ್ತಿರ್ತು..!! ಧನ್ಯವಾದಗಳು.

@ಚಿತ್ರಾ,

ನಾನು ದೇವರಲ್ಲಿ ಪ್ರಾರ್ಥಿಸುವೆ ಪುಣೆ ಸರಕಾರ ಕೈಗೊಂಡಿರುವ ಮಹತ್ಕಾರ್ಯ ಕೇವಲ ಬಾಯಿಮಾತಿಗಷ್ಟೇ ಸೀಮಿತವಾಗದೇ ಕಾರ್ಯರೂಪದಲ್ಲೂ ಬರಲೆಂದು. ಅವರಿಂದ ಆರಂಭಗೊಂಡ ಈ ಉತ್ತಮ ಕೆಲಸ ಭಾರತದ ಇತರ ರಾಜ್ಯಗಳಕಡೆಗೂ ವಿಸ್ತರಿಸಲಿ ಎಂದು. ಆದರೆ ನನಗೆ ಇನ್ನೂ ನಂಬಿಕೆ ಬಾರದು ಅದು ಬೇಗ ಕಾರ್ಯಗತವಾಗುವುದು ಎಂದು. ಆದರೂ ನಿರೀಕ್ಷಿಸುವೆ. ಧನ್ಯವಾದಗಳು.

@ಮನಸ್ವಿ ಅವರೆ,

ಅಲ್ಲಿ ಆತ ಹಾಗೆ ಮಾತನಾಡಲು ಕಾರಣ ಆತನೊಳಗಿರುವ ದೈಹಿಕ ಸಾಮರ್ಥ್ಯತೆ ಹಾಗೂ ನಿಷ್ಠುರತೆ. ದುಡ್ಡುಗಳನ್ನು ಸುರಿದು ಕೇವಲ ಡಿಗ್ರಿಪಡೆದ ಮಾತ್ರಕ್ಕೆ ಯಾರೂ ವೈದ್ಯರೆನಿಸರು. ಹಾಗೆ ಮಾಡಿದವರಿಂದ ಮಾತ್ರ ಇಂತಹ ದುರ್ವರ್ತನೆಯನ್ನು ನಿರೀಕ್ಷಿಸಬಹುದು. ಧನ್ಯವಾದಗಳು.

@ವಿಕಾಸ್,

ಹೌದು. ಸರಕಾರವನ್ನು ಬೈದು ಏನು ಪ್ರಯೋಜನ. ಒಂದೊಮ್ಮೆ ಏನೋ ತಲೆತಿರುಗಿ ಅದು ನಮ್ಮಂತವರಿಗಾಗಿ ವಿಶೇಷ ಸೌಲಭ್ಯ ಹಾಗೂ ಕಾನೂನುಗಳನ್ನು ಮಾಡಿದರೂ ಅದರ ದುರ್ಬಳಕೆ ಆಗದಂತೆ ಹಾಗೂ ಸರಿಯಾಗಿ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಲು ನಮ್ಮ ಜನರೇ ಬಿಡರು. ಬದಲಾವಣೆ ನಮ್ಮೊಳಗೆ ಮೊದಲು ಆಗಬೇಕು. ಬುಡವೇ ಗೆದ್ದಲು ಹಿಡಿದಿರುವಾಗ ತುದಿ ತಾನೇ ಹೇಗೆ ಚಿಗುರುವುದು ? ಧನ್ಯವಾದ.

@ಪ್ರಾಕಾಶ್ ಅವರೆ,

ನಾನು ಈ ಲೇಖನ ಬರೆದ ಉದ್ದೇಶ ಸಾಧ್ಯವಾದಷ್ಟು ಜನರಲ್ಲಿ ಈ ಬಗ್ಗೆ ಚಿಂತನೆಯನ್ನು ಹುಟ್ಟುಹಾಕುವುದಕ್ಕಾಗಿ. ನೀವು ಅಂಗವಿಕಲರನ್ನು ಸಾಮಾನ್ಯರಂತೆ ನಿಮ್ಮಲ್ಲಿ ಓರ್ವರಂತೇ ಕಾಣಿ .. ಆಗ ಖಂಡಿತ ನಿಮ್ಮಿಂದ ಅವರಿಗೆ ನೋವೇ ಆಗದು.. ಯಾವ ತಪ್ಪೂ ಸಂಭವಿಸದು. ಅದಕ್ಕಾಗಿ ವಿಶೇಷ ಪ್ರಯತ್ನಪಡಬೇಕೆಂದೇ ಇಲ್ಲ :) ಧನ್ಯವಾದಗಳು.

@ಕನಸು,

ಇವರಿಬ್ಬರು ಭಯೋತ್ಪಾದಕರೋ ಅಲ್ಲವೋ ಎಂದು ಗೊತ್ತಿಲ್ಲ. ಆದರೆ ಇವರಿಬ್ಬರಿಗಿಂತಲೂ ಮಹಾದೊಡ್ಡ ಭಯೋತ್ಪಾದಕನಿದ್ದಾನೆ. ಯಾರು ಗೊತ್ತೇ? ನಮ್ಮೊಳಗಿನ "ಮನಸ್ಸು". ಎಲ್ಲಾ ಭಾವನೆಗಳಿಗೂ ನಮ್ಮ ಮನಸ್ಸೇ ಕಾರಣ. ಇದೇ ಸಾಧಕನ ಸಾಧನೆಗೆ ಪ್ರೇರಣೆ ಹಾಗೂ ತಡೆಗೋಡೆ :) ನಿಮ್ಮ ಪ್ರೀತಿಗೆ ಧನ್ಯವಾದಗಳು.

@ಚಂದ್ರಕಾಂತ ಅವರೆ,

ನಿಜ.. ಹೆತ್ತವರು ಇಂತಹ ಮಕ್ಕಳ ಮನಸ್ಸನ್ನು ತುಂಬಾ ಗಟ್ಟಿಮಾಡಿ ಬೆಳೆಸಬೇಕು. ಎಂತಹ ನೋವಾದರೂ ಕುಗ್ಗದಂತೆ, ಮುನ್ನುಗುವಂತೆ ಅವರನ್ನು ಪ್ರೇರೇಪಿಸಬೇಕು. ಹಾಗೆ ನನ್ನ ಹೆತ್ತವರು ನನ್ನ ಬೆಳೆಸಿದ್ದರಿಂದಲೇ ಇಂದು ಇಷ್ಟು ನಿರ್ಭೀಡೆಯಿಂದ ಈ ಲೇಖನವನ್ನು ಬರೆಯುವಂತಾಯಿತು. ನಾನು ಇದನ್ನು ಬರೆದದ್ದು ನಾನು ಅವಮಾನ ಅನುಭವಿಸೆದೆ ಅಂತಲೋ ಇಲ್ಲಾ ನನಗೆ ನೋವಾಗಿದೆ ಎಂತಲೋ ಹೇಳಿಕೊಳ್ಳಲಾಗಿ ಅಲ್ಲ. ಯಾರ ಬೆಂಬಲವಿಲ್ಲದೇ. ಮನಸಿಕವಾಗಿ ಕುಗ್ಗಿರುವ ಇತರ ಅಂಗವಿಕಲರ ದನಿಗೆ ದನಿಗೂಡಿಸುವ ಸಲುವಾಗಿ ಬರೆದದ್ದು.

ಆತ್ಮಸ್ಥೈರ್ಯ ಎಲ್ಲರಿಗೂ ಒಂದೇ ರೀತಿಯಾಗಿ ಸಿಗುವುದಿಲ್ಲ. ಎಲ್ಲರೂ ನನ್ನಂತೆ ಭಾಗ್ಯಶಾಲಿಗಳೂ ಆಗಿರುವುದಿಲ್ಲ ಅಲ್ಲವೇ?

ನಿಮ್ಮ ಉತ್ತಮ ಕಾರ್ಯದ ಕುರಿತಾಗಿ ಓದಿ ತುಂಬಾ ಸಂತೋಷವಾಯಿತು. ಸಮಾಜ ನಿಮ್ಮಂತಹವರ ನಿರೀಕ್ಷೆಯಲ್ಲಿದೆ. ಇದನ್ನು ಹೀಗೇ ಮುಂದುವರಿಸಿ. ನಾನಂತೂ ಜೊತೆಗಿದ್ದೇನೆ.

ತುಂಬಾ ಧನ್ಯವಾದಗಳು.

@ಆನಂದರಾಮ ಅವರೆ,

ಮಾನಸಕ್ಕೆ ಸ್ವಾಗತ.
ನಿಜ. ಇದು ನಮ್ಮ ಪತ್ರಿಕೆಗಳ ಹಣೆಬರಹ. ಏನು ಮಾಡಲೂ ಸಾಧ್ಯವಿಲ್ಲ. ನಾನಾವ ಅಪೇಕ್ಷೆ, ನಿರೀಕ್ಷೆಗಳನ್ನಿಟ್ಟುಕೊಳ್ಳದೇ ಕಳುಹಿಸಿದ್ದೆ. ಅವರೂ ನಮ್ಮಲ್ಲಿ ಒಬ್ಬರು ತಾನೆ? ಈ ವ್ಯವಸ್ಥೆಯೊಳಗಿನ ಅವ್ಯವಸ್ಥೆಯಲ್ಲಿ ಪತ್ರಿಕೆಗಳ ಕೊಡೂಗೆಯೂ ಅಪಾರ ಅಲ್ಲವೇ? ಯಾರಿಗಂದೂ ಪ್ರಯೋಜನವಿಲ್ಲ. ಜನಜಾಗೃತಿ ಸುಲಭಕಾರ್ಯವಲ್ಲ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಆಭಾರಿ. ಧನ್ಯವಾದಗಳು.

ಚಂದ್ರಕಾಂತ ಎಸ್ ಹೇಳಿದರು...

ನೀವು ಹೇಳುವುದು ನೂರಕ್ಕೆ ನೂರು ನಿಜ.ನಾವು ಎಷ್ಟೇ ಧೈರ್ಯ ತುಂಬಿದರೂ ಆಯಾ ವ್ಯಕ್ತಿಗಳೇ ಅದನ್ನು ಬೆಳೆಸಿಕೊಳ್ಳಬೇಕು.ಇನ್ನೊಂದು ಅಂಶವೆಂದರೆ ಇಂತಹ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಇರುವವರನ್ನು ಅಹಂಕಾರಿಗಳೆಂದು ಭಾವಿಸುವವರಿಗೂ ಕೊರತೆ ಇಲ್ಲ. ಅದನ್ನು ನೋವಿಲ್ಲದೆ ಸ್ವೀಕರಿಸುವುದನ್ನು ಕಲಿಯ ಬೇಕಷ್ಟೆ.

mala rao ಹೇಳಿದರು...

ಇಲ್ಲಿ ನಾನೊಮ್ಮೆ ಬಸ್ಸು ಕಾಯುತ್ತಿದ್ದೆ ವಯಸ್ಸಾದ ವೀಲ್ ಚೇರ್ ನಲ್ಲಿದ್ದ ಅಂಗವಿಕಲ ಮಹಿಳೆಯೊಬ್ಬರು ಆಕ್ಸಿಜನ್ ಸಿಲಿಂಡರಿನ ಸಮೇತ ಅಂಗಡಿಯೊಂದರಿಂದ ಸ್ಟಪಿಗೆ ಬಂದರು
ಇಷೇಲ್ಲಾ ಕಷ್ಟ ಪಟ್ಟುಕೊಂಡು ಮನೆಯಾಚೆ ಬಂದಿದಾರಲ್ಲಾ ಅದೂ ಒಬ್ಬರೇ ಅಂಡುಕೊಂಡೆ ನಂತರ ಅವರೊಂದಿಗೆ ಮಾತಾಡಿದಾಗ ಅವರು ಆಧುನಿಕ ಉಪಕರಣಗಳ ಸಹಾಯದಿಂದ
ಎಶ್ಟು ಆರಾಮವಾಗಿ ಒಬ್ಬರೇ ಜೀವನ ನಡೆಸುತ್ತಿದ್ದಾರೆ ಅ ಂತ ತಿಳಿದು ಸಂತೋಶವಾಯಿತು
ಯಾರನ್ನಾದರೂನ್ನ್ನನ್ನು ಸ್ವಲ್ಪ ಆಚೆ ಕರೆದುಕೊಂಡು ಹೋಗುತ್ತೀಯಾ ಅಂತ ನಮ ದೇಶದಲ್ಲಿ ಬೇಡಬೇಕಾದವರ
ಪರಿಸ್ಠಿತಿ ನೆನೆದು ಸಂಕಟವಾಯಿತು
ಬಸ್ಸು ಬಂದಾಗ ಡ್ರೈವರ್ ಸ್ವಯಂಚಾಲಿತ ದ್ವಾರವನ್ನು ಕೆಳಗಿಳಿಸಿ
ನಂತರ ತಾನು ಕೆಳಗಿಳಿದು ಬಂದು ವೀಲ್ ಚೇರನ್ನು ಒಳಗೆ ತಂದ
ಅದು ಅವನ ಡ್ಯೂಟಿಯ ಅಂಗ...

ಇಲ್ಲಿನ ಸಾರ್ವಜನಿಕ ಶೌಚಾಲಯಗಳಲ್ಲೂ ವೀಲ್ ಚೇರ್ ಒಳಗೆ ಹೋಗುವಂತಿ ವ್ಯವಸ್ಥೆ ಇರುತ್ತದೆ ಮತ್ತು ಅಂಗಡಿಯ ಬಾಗಿಲಿಗೆ ಸಮೀಪವಾದ ಪಾರ್ಕಿಂಗ್ ಜಾಗಗಳು ಮೀಸಲಾಗಿರುತ್ತವೆ
ಇವೆಲ್ಲಾ ಇಲ್ಲಿ ಎಲ್ಲೋ ಒಂದೆರಡು ಕಡೆ ಇರುವುದಲ್ಲ ಕಡ್ಡಾಯವಾಗಿ ಎ ಲ್ಲಾ ಕಡೆಯೂ ಇಅರಲೇ ಬೇಕೆಂಬುದು ಸರ್ಕಾರಿ ನಿಯಮ ಇವುಗಳನ್ನು ನೋಡಿದಾಗಲೆಲ್ಲಾ ಯಾರನ್ನೂ ಬೇಡದೆ
ಜೀವನ ನಡೆಸಲು ಇಲ್ಲಿ ಇಷ್ಟು ಚೆನ್ನಾದ ವ್ಯವಸ್ಥೆ ಇದೆ ಅನ್ನಿಸುತ್ತೆ
ಇಲ್ಲಿ ಬಸುರಿಯರನ್ನೂ ತಾತ್ಕಾಲಿಕ ಅಂಗವಿಕಲರೆಂದು (ಕೆಲಮಟ್ಟಿಗೆ)ಪರಿಗಣಿಸುವುದರಿಂದ ನಾನು ಬಸುರಿ ಇದ್ದಾಗ ಆಎಲ್ಲಾ ಸೌಲಭ್ಯಗಳೂ ನನಗೆ ಬಹಳ ಅನುಕೂಲವಾಗಿದ್ದವು
ಎಲ್ಲಾ ಕಡೆ ಮೆಟ್ಟಿಲುಗಳನ್ನು ಅವಾಯ್ಡ್ ಮಾಡಲು ಅನುಕೂವಿದ್ದಾದ್ದಮ್ತೂ ಎಷ್ಟು ಉಪಯೋಗವಾತೋ...

ಅಮೆರಿಕನ್ನರ ಬೇದವಾದುದನ್ನೆಲ್ಲಾ ಅನುಕರಿಸುವ ನಾವು
ಇಂಥಾ ಪ್ರಾಕ್ಟಿಕಲ್ ಮೆಂಟಾಲಿಟಿಯನ್ನು ಯಾಕೆ ಅನುಕರಿಸುವುದಿಲ್ಲವೋ...

ಅವರಲ್ಲಿ ಕೌಟುಂಬಿಕ ಪ್ರೀತಿಇ ರುವುದಿಲ್ಲ ಯಾರೂ ಮನೆಯವರು ಮಾಡುವುದಿಲ್ಲ ಅದಕ್ಕೆ ಈ ಎಲ್ಲಾ ಸೌಲಭ್ಯ
ಮಾಡಿಕೊಂಡಿದ್ದಾರೆ ಅಂತ ಒಂದ್ದೇ ಮಾತಿನಲ್ಲಿ ಜರೆದು
ನಮ್ಮಲ್ಲಿ ಹಾಗಿಲ್ಲಪ್ಪ ನಾವು ತುಂಬಾ ಹೃದಯವಂತರು ಅಂತ ಬೀಗುವ ನಾವು...
ಇಲ್ಲಿ ತಮ್ಮಷ್ಟಕ್ಕೆ ತಾವು ಸ್ವತಂತ್ರವಾಗಿ ಬದುಕಲು ಅವರುಗಳಿಗೆ
ಅನುಕೂಲ ಮಾಡಿಕೊಡುವುದು ಅನುಕಂಪಕ್ಕಿಂಥಾ ದೊಡ್ಡದು ಅಂತ ಭಾವಿಸುತ್ತಾರೆ...

ಭಾರ್ಗವಿ ಹೇಳಿದರು...

ತೇಜಸ್ವಿನಿಯವರೇ,
ಈ ದಿನ ಬೆಳಿಗ್ಗೆ ಟಿವಿಯಲ್ಲಿ ಬಂದ ಬಾಲಕಿಯೊಬ್ಬಳು ೪ -೫ ವರ್ಷದವಳು. ಕಾಲುಗಳಲ್ಲಿ ಶಕ್ತಿ ಇಲ್ಲ . ಆದರೆ ಅವಳ ಅವಳಿ ಸೋದರಿ ಬ್ಯಾಲೆಗೆ ಸೇರಿದ್ದು ನೋಡಿ ಆಸೆ ಪಟ್ಟು, ಅವರಮ್ಮ ಕೂಡಾ ಅವಳಿಗೂ ಅವಕಾಶ ಕಲ್ಪಿಸಬೇಕೆಂದು ಸ್ವಿಂಗ್ ಸೆಟ್ ಲ್ಲಿ ಕೂರಿಸಿ ಬ್ಯಾಲೆ ಕಲಿಸುವುದು. ಆ ಮಗುವಿಗೆ ಸುತ್ತಮುತ್ತಲಿರುವವರು ಹುರಿದುಂಬಿಸುವುದನ್ನು ನೋಡಿದರೆ ಹೃದಯತುಂಬಿಬರುವಂತಿತ್ತು,ಅಲ್ಲಿ ಅಯ್ಯೋ ಪಾಪ!! ಇರಲೇ ಇಲ್ಲ. ಅಂಥ ವಾತಾವರಣ ನಮ್ಮಲ್ಲಿ ಬೇಕು.ನಿಮ್ಮ ಹೋರಾಟ ಮುಂದುವರಿಯಲಿ ,ನಾನೂ ನಿಮ್ಮ ಜೊತೆಗಿದ್ದೇನೆ.

ತೇಜಸ್ವಿನಿ ಹೆಗಡೆ ಹೇಳಿದರು...

@ಚಂದ್ರಕಾಂತ ಅವರೆ,

ನೀವು ಹೇಳಿದ್ದು ನಿಜ. ಸ್ವತಃ ನಾನೇ ಶಾಲಾ, ಕಾಲೇಜುಗಳ ದಿನಗಳಲ್ಲಿ ಯಾರಾದರೂ ಅನುಕಂಪ ತೋರಿಸಿ ವಿನಾಯತಿ ನೀಡಲೋ ಇಲ್ಲಾ ಬೇಡದ ಸೌಲಭ್ಯ ನೀಡಲೋ ಬಂದಾಗ ನಯವಾಗಿ ತಿರಸ್ಕರಿಸಿದರೂ ನನ್ನೊಳಗಿನ ಅಹಂಕಾರ, ಅಹಂ ಎಂದು ತಿಳಿದು ಕೊಂಕು ಆಡಿದ್ದಿದೆ. "ನಡೆಯಲಾಗದಿದ್ದರೂ ಇದಕ್ಕೇನೂ ಕಡಿಮೆಯಿಲ್ಲ" "ಇಷ್ಟೊಂದು ಸೊಕ್ಕು ಇವಳಿಗ್ಯಾಕೆ?" ಎಂಬೆಲ್ಲಾ ಮಾತುಗಳನ್ನು ಕೇಳಿದ್ದಿದೆ. ಆದರೆ ಅದಾವುದೂ ನನ್ನನ್ನು ಕುಗ್ಗಿಸಲು ಸಲಫವಾಗಲಿಲ್ಲ. ಬದಲು ನನ್ನೊಳಗಿನ ನಾನು ಮತ್ತಷ್ಟೂ ಗಟ್ಟಿಯಾಗುತ್ತಾ ಹೋದೆ.

@ಮಾಲಾ ಅವರೆ,

ನೀವು ಹೇಳಿದ್ದನ್ನು ಓದುವಾಗ ಒಂದು ಕನಸಿನಂತೆ ಭಾಸವಾಗುತ್ತಿದೆ. ಇಂತಹ ಗೌರವ, ಸೌಕರ್ಯಗಳೆಲ್ಲಾ ನಮ್ಮಲ್ಲಿ ಆಶಿಸುವುದೂ ನಾವು ತಪ್ಪು. ಕಷ್ಟಪಟ್ಟು ವ್ಹೀಲ್‌ಚೇರ್ ಮೇಲೆ ಮಾಲ್ ಗಳಿಗೆ ಬಂದು ಖರೀದಿಸಿದರೂ ಅಲ್ಲಿದ್ದವರು ಹೇಳುವುದು "ಇಷ್ಟು ಕಷ್ಟ ಪಟ್ಟು ಬರುವುದೇತಕ್ಕೋ.. ಬೇರೆಯವರು ಬೇಕಾದ್ದು ತರಲಾರರೇ? ವ್ಹೀಲ್‌ಚೇರ್‌ನಿಂದಾಗಿ ನಾವು ಸರಾಗವಾಗಿ ಓಡಾಡಲೂ ಆಗದಂತಾಯಿತು..."ಇತ್ಯಾದಿ ಮಾತುಗಳನ್ನು!!
ಎಲ್ಲಿಯವರೆಗೆ ಸಾಮಾನ್ಯ ಜಾಗೃತನಾಗನೋ, ನಮ್ಮನ್ನೂ ಅವನಂತೇ ಎಂದು ಎಣಿಸನೋ ಅಲ್ಲಿಯವರೆಗೆ ಸರಕಾರವಾಗಲೀ, ಯವುದೇ ಕಾನೂನಾಗಲೀ ನಮಗೆ ನಮ್ಮ ಹಕ್ಕನ್ನು ನೀಡದು.
ಧನ್ಯವಾದಗಳು.

@ಭಾರ್ಗವಿ,

ಹೌದು ನಮ್ಮಲ್ಲೂ ಇಂತಹ ವಾತಾವರಣ ಬೇಕೇ ಬೇಕು. ಆಗ ಮಾತ್ರ ಎಲೆಮರೆಯ ಕಾಯಂತಿರುವೆ, ಅಗಾಧ ಪ್ರತಿಭೆಯಿದ್ದೂ ಸಹಕಾರ, ಅಭಯಗಳಿಲ್ಲದೇ ಕೊರಗುತ್ತಿರುವ ಅದೇಷ್ಟೋ ಅಶಕ್ತರೂ ಬೆಳಕು ಕಾಣುವಂತಾಗುವುದು. ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು.

Ramesh BV (ಉನ್ಮುಖಿ) ಹೇಳಿದರು...

ನಮಸ್ತೇ,
ಆ ವೈದ್ಯನ ಬಗೆಗೆ ನನಗೆ ಸಿಟ್ಟು ಬರುತ್ತಿದೆ.. ಇನ್ನೇನು ಹೇಳಲು ಆಗುತ್ತಿಲ್ಲ..

ತೇಜಸ್ವಿನಿ ಹೆಗಡೆ ಹೇಳಿದರು...

@Ramesh,

ಸಿಟ್ಟಿನಲ್ಲಿ ವ್ಯವಸ್ಥೆಯನ್ನು ಬದಲಿಸಲಾಗದು. ಅದಕ್ಕೇನಿದ್ದರೂ ಶಾಂತ ಚಿತ್ತವೇ ಬೇಕು. ಸ್ಪಂದನೆಗೆ ಧನ್ಯವಾದಗಳು.