ಹಿಮಾಲಯ ಸದಾ ನನ್ನನ್ನು ಗುಂಗಾಗಿ ಕಾಡುವ ತಾಣ. ಅನೇಕ ಸಾವಿರ ವರ್ಷಗಳವರೆಗೂ ಇದ್ದಲ್ಲಿಂದ ಕದಲದೇ ಬಿಳಿ ಗಡ್ಡದ ಮುನಿಯೋರ್ವ ಅಖಂಡ ತಪಸ್ಸಿನಲ್ಲಿ ಕಳೆದುಹೋಗಿರುವ ಕಲ್ಪನೆಯೇ ನನಗೆ ಸದಾ ಮೂಡುತ್ತಿರುತ್ತದೆ ಅದನ್ನು ನೆನೆದಾಗೆಲ್ಲಾ. ಅಲ್ಲಿಗೆ ಹೋಗಿ ಹಿಮದೊಳು ಹುದುಗಿ... ಹೇಳ ಹೆಸರಿಲ್ಲದ ತೊರೆಗಳಲ್ಲಿ ಮುಳುಗುವ ಕನಸು ಕಾಣುತ್ತಲೇ ಇರುತ್ತೇನೆ. ಆದರೆ ಈ ಪುಸ್ತಕವನ್ನೋದಿದ ಮೇಲೆ, ಇನ್ನು ಮುಂದೆ ನಾನು ಕಾಣುವ ಇಂಥಾ ಕನಸುಗಳಲ್ಲಿ.. ಒಂದು ಎಚ್ಚರಿಕೆ, ಕಟು ವಾಸ್ತವಿಕತೆ, ಬದುಕಿಗಂಟಿಗೊಂಡೇ ಇರುವ.. ಬದುಕಿನಿನ್ನೊಂದು ಮುಖವೇ ಆಗಿರುವ ಸಾವಿನ ಇರುವಿಕೆಯನ್ನೂ ಕಾಣುವಂತಾಗಿಬಿಟ್ಟಿದೆ!
ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿದ ‘ಪರ್ವತದಲ್ಲಿ ಪವಾಡ’ (Miracle
in the Andes) ಪುಸ್ತಕದ ಕುರಿತು ಬಹಳಷ್ಟು ಮೆಚ್ಚುಗೆಗಳನ್ನು ಕೇಳಿದ್ದೆ. ಈ ಪುಸ್ತಕವನ್ನು ವಿಶ್ಲೇಷಿಸಿ ಬರೆದ ಒಂದೆರಡು ಲೇಖನಗಳನ್ನೂ ಪತ್ರಿಕೆಯಲ್ಲಿ ಓದಿದ್ದೆ. ಉರುಗ್ವೇಯ ನ್ಯಾಂಡೋ ಪರಾಡೋ, ಆಂಡಿಸ್ ಹಿಮಪರ್ವತಶ್ರೇಣಿಯಲ್ಲಿ ವಿಮಾನ ಅಪಘಾತವಾಗಿ ಬಿದ್ದು ನರಕ ಅನುಭವಿಸಿ ಹೋರಾಡಿದ ಕಥೆಯಿದು ಎಂದು ಅರ್ಥವಾಗಿತ್ತು. ಬಹಳ ಚೆನ್ನಾಗಿದೆ ಓದಿ ಎಂದು ಅನೇಕರು ಹೇಳಿದ್ದರು. ಆದರೆ ನನಗೇನೋ ಒಳಗೊಳಗೇ ಹಿಂಜರಿಕೆ! ಅದೇನೋ ಎಂತೋ ಚಲನಚಿತ್ರ, ನಾಟಕ, ಕಥೆ, ಕಾದಂಬರಿ ಇವೆಲ್ಲವುಗಳಲ್ಲೂ ನಾನು ಆದಷ್ಟು ದುರಂತಮಯ ಅಂತ್ಯವಿರುವ.. ಹೆಚ್ಚು ದುಃಖವಿರುವ ಚಿತ್ರವನ್ನು, ಬರಹವನ್ನು ಇಷ್ಟಪಡುವುದಿಲ್ಲ. ನಮ್ಮೊಳಗೇ ಅನೇಕ ದುಃಖ, ನೋವುಗಳು ತುಂಬಿರುವಾಗ ಮತ್ತೊಂದಿಷ್ಟನ್ನು ನೋಡಿ ಹೆಚ್ಚಿಸಿಕೊಳ್ಳುವುದು ನನಗಿಷ್ಟವಾಗದ ಕೆಲಸ. ಬದುಕೆಂದರೆ ಅದೂ ಕೂಡ.. ಅನಿವಾರ್ಯ ಕರ್ಮ.. ಎನ್ನುವ ಸತ್ಯಗಳೆಲ್ಲಾ ಗೊತ್ತಿದ್ದೂ, ನೋಡಿ, ಓದಿ ಎಳೆದುಕೊಳ್ಳುವ ಅನವಶ್ಯಕ ದರ್ದು ಬೇಡವೆಂಬುದು ನನ್ನ ನಿಲುವು. ಹೀಗಿರುವಾದ ಈ ಪುಸ್ತಕದ ಕಥೆಯ ಎಳೆ ಗೊತ್ತಾಗಲು, ಇದರ ತುಂಬೆಲ್ಲಾ ಖಂಡಿತ ಯಾತನಾಮಯ ಚಿತ್ರಣ, ನೋವು, ಸಾವು, ನರಳಾಟವೇ ತುಂಬಿರುವುದು ಸಹಜ ಎಂದೆನಿಸಿತ್ತು. ಅಲ್ಲದೇ, ದುರಂತಕ್ಕೊಳಗಾದವರು, ಕೊನೆಗೆ ಮನುಷ್ಯರ ಮಾಂಸವನ್ನೇ ತಿಂದು ಬದುಕಿದ ಕಥೆಯೂ ಚಿತ್ರಿತವಾಗಿರುವ ಸುಳಿವೂ ಕೆಲವು ಲೇಖನಗಳನ್ನೋದಿ ತಿಳಿದಿತ್ತು. ಹೀಗಾಗಿ ಓದುವುದೋ ಬೇಡವೋ ಎಂಬ ಅಸಮಂಜಸತೆಯಲ್ಲೇ ಕುಳಿತುಬಿಟ್ಟಿದ್ದೆ. ಆದರೆ ಒಳ್ಳೆಯ ಪುಸ್ತಕ.. ಓದಲೇಬೇಕೆಂಬ ತುಡಿತವೂ ಇತ್ತು. ಜೊತೆಗೇ ಸಂಯುಕ್ತಾರವರ ಅನೇಕ ಬರಹಗಳನ್ನು ಈ ಮೊದಲೇ ಅವಧಿಯಲ್ಲಿ ಓದಿ ಮೆಚ್ಚಿದ್ದೆ. ಅವರ ಶೈಲಿ ಇಷ್ಟವಾಗಿತ್ತು. ಬದುಕನ್ನು ವಿಶ್ಲೇಷಿಸುವ, ನೋಡುವ ಅವರ ದೃಷ್ಟಿಕೋನ ಮೆಚ್ಚುಗೆಯಾಗಿತ್ತು. ಹೀಗಾಗಿ ಧೈರ್ಯಮಾಡಿ ಅವರನ್ನೇ ಕೇಳಿ ಪುಸ್ತಕ ತರಿಸಿಕೊಂಡು ಓದಿದೆ.
ಓದಿದಮೇಲೆ ಎನಿಸುತ್ತಿದೆ.. ಇಷ್ಟು ದಿನ ಓದಲೇಕೆ ನಾನು ಹಿಂಜರಿದೆನೆಂದು! ಬದುಕೊಡ್ಡಿದ, ಒಡ್ಡುತ್ತಲೇ ಇರುವ ಅನೇಕ ಸಮಸ್ಯೆಗಳು, ತೊಂದರೆಗಳಿಂದ ನನ್ನೊಳಗಿನ ಆಂಡಿಸ್ ಪರ್ವತವನ್ನು ಇಳಿಯಲು ಹೋರಾಡಿ ಹೈರಣಾಗುತ್ತಿದ್ದ ಈ ಸಮಯದಲ್ಲಿ.. ಇದನ್ನು ಮೊದಲೇ ಓದಿದ್ದರೆ, ನ್ಯಾಂಡೋನ ಜೀವನೋತ್ಸಾಹ, ಛಲ, ಅಗಾಧ ತಿಳಿವು ನನ್ನ ಹೋರಾಟವನ್ನು ಬಹಳ ಕಡಿಮೆ ಮಾಡುತ್ತಿತ್ತಲ್ಲ ಎಂದೆನಿಸಿತು. ಆದರೆ ಎಲ್ಲವುದಕ್ಕೂ ಮುಹೂರ್ತವೆನ್ನುವುದಿದೆಯಂತೆ. ಅದನ್ನು ನಾನು ನಂಬುತ್ತೇನೆ. ಅದರಂತೇ ಈ ಅತ್ಯುತ್ತಮ ಪುಸ್ತಕವನ್ನೋದಲೂ ಆ ಘಳಿಗೆ ಈಗ ಕೂಡಿ ಬಂತೆಂದು ಸಮಾಧಾನ ಪಟ್ಟುಕೊಂಡೆ. ಇದೇ ಪುಸ್ತಕದಲ್ಲೇ ಒಂದೆಡೆ ಉಲ್ಲೇಖಿಸಿರುವಂತೆ.. “ನಮ್ಮೆಲ್ಲರಲ್ಲೂ ವೈಯಕ್ತಿಕವಾದ ಒಂದೊಂದು ಆಂಡೀಸ್ ಇದ್ದೇ ಇದೆ” ಎಂಬುದನ್ನು ಮನಸಾರೆ ಒಪ್ಪಿಕೊಳ್ಳುತ್ತಾ.. ಪ್ರತಿಯೊಬ್ಬರೂ ತಮ್ಮೊಳಗಿನ ಈ ಹಿಮಪರ್ವತದಶ್ರೇಣಿಯನ್ನು ಇಳಿಯಲು ನಾವು ಮಾಡಬೇಕಾಗಿರುವ ತಯಾರಿ, ತುಂಬಿಕೊಳ್ಳಬೇಕಾದ ಭಾವ, ಜೀವನ ಪ್ರೀತಿ ಎಲ್ಲವನ್ನೂ ಎಳೆಯೆಳೆಯಾಗಿ ವಿವರಿಸುವ ಅನುವಾದವಿದು. ಸದಾ ನಾನು ನಂಬಿರುವ ತತ್ವಕ್ಕೇ ಇಂಬನ್ನು ಕೊಡುವಂಥ ಹೊತ್ತಗೆಯಿದು.. ಅದೇನೆಂದರೆ “ನೋವನ್ನು ಅನುಭವಿಸುತ್ತಲೇ ಬದುಕಲು ಸಾಧ್ಯ"! ನಾವೇನನ್ನಾದರೂ ಕಳೆದುಕೊಂಡರೆ, ಆ ಜಾಗದಲ್ಲಿಯೇ, ಕಳೆದುಕೊಂಡುದರ ಬದಲು, ಅದೇ ರೂಪಾಂತರವಾಗಿ ಹೊಸತನ್ನು ಪಡೆಯಬಹುದೆಂಬ ಸಾಧ್ಯತೆಯನ್ನು ಕಾಣಿಸುವ ಅನುಭವ ಕಥನವಿದು.
ನ್ಯಾಂಡೊನ ಜೊತೆಗೇ ನಾವು ಅವನ ಸ್ನೇಹಿತರು, ತಾಯಿ, ತಂಗಿಯರೊಡಗೂಡಿ ವಿಮಾನದಲ್ಲಿ ಪ್ರಯಾಣಿಸಿ.. ಅದು ಪತನಗೊಂಡ ಕ್ಷಣದಿಂದ ಅವನ ದುಃಖ, ಉದ್ವೇಗ, ಹತಾಶೆ, ನೋವು, ಹೋರಾಟ, ಛಲ, ಸೋಲು ಎಲ್ಲವನ್ನೂ ಅನುಭವಿಸುತ್ತಲೇ, ನಾವು ಕಂಡು ಕೇಳರಿಯದ ದುರ್ಗಮ ಜಾಗಗಳಲ್ಲಿ ಅವನಂತೇ ವಿಮಾನದ ಸೀಟಿನ ದಿಂಬಿನ ಬೂಟು ಧರಿಸಿ, ಹಿಮದ ಮೇಲೆ ಕಷ್ಟಪಟ್ಟು ಸಾಗಿ, ಅವನು ವಿಶ್ರಮಿಸಿದಾಗ ತುಸು ಸುಧಾರಿಸಿಕೊಂಡು, ಅವನು ಏದುಸಿರುಬಿಡುವಾಗ ನಾವೂ ಬಿಟ್ಟು.. ಕೊನೆಯಲ್ಲಿ ಅವನು ಬದುಕೆಂಬೋ ಬಯಲು ಸೇರುವಾಗ ಸುರಿವ ಆನಂದಬಾಷ್ಪದಲ್ಲಿ ನಮ್ಮ ಪಾಲನ್ನೂ ಪಡೆಯುತ್ತೇವೆ. ಆದರೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವೆ.. ಹಸಿಮಾಂಸ ಅದೂ ತಮ್ಮದೇ ಸ್ನೇಹಿತರ ಮೃತ ದೇಹದ ಮಾಂಸ ಭಕ್ಷ್ಯವನ್ನು ಮೊದಲ ಬಾರಿ ಅವರು ಸೇವಿಸುವ ಒಂದೆರಡು ಪುಟಗಳನ್ನು ಹಾರಿಸಿಯೇ ಓದಿಬಿಟ್ಟೆ. ಖಂಡಿತ ಆಗ ಅಸಹ್ಯ ನನ್ನಲ್ಲಿ ತುಂಬಿರಲಿಲ್ಲ. ಅಪಾರ ನೋವು.. ಯಾತನೆ.. ಸಂಕಟ ನನ್ನಿಂದ ಈ ಕೆಲಸ ಮಾಡಿಸಿತ್ತು. ಓದುವ ನನಗೇ ಇಷ್ಟು ಕಾಡುವಾಗ.. ಅನಿವಾರ್ಯತೆಯಲ್ಲಿ.. ಬೇರಾವ ಮಾರ್ಗವೂ ಇಲ್ಲವಾಗಿ.. ಬದುಕುವುದು.. ಉಸಿರಾಡುವುದು.. ಬೆಳಕ ಕಾಣುವುದಷ್ಟೇ ಮುಖ್ಯವೆನಿಸಿದಾಗ ಅವರು ತೆಗೆದುಕೊಂಡ ಆ ನಿರ್ಧಾರ ಎಂಥ ಯಾತನಾಮಯವಾಗಿದ್ದಿರಬಹುದೆಂಬುದನ್ನು ಊಹಿಸುವುದೂ ಕಷ್ಟವೆನಿಸಿಬಿಡುತ್ತದೆ! ಬದುಕು ಬಹಳ ಕಷ್ಟ.. ಸಾವು ಬಹಳ ಸುಲಭವೆಂದೆನಿಸುವ ಆ ಸ್ಥಿತಿಯಲ್ಲಿ ಅವರು ಬದುಕನ್ನು ಆರಿಸಿಕೊಂಡಿದ್ದರು ಎಂಬ ನಿಲುವೇ ನಮ್ಮೊಳಗೆ ಹೊಸ ಚೈತನ್ಯವನ್ನು ತುಂಬುತ್ತದೆ.
“ನಮ್ಮ ಆಸೆ, ನಿರೀಕ್ಷೆಗಳು ಸುಳ್ಳಾಗುತ್ತಿವೆ ಎಂದು ಯಾವಾಗ ಅರಿವಾಗುತ್ತದೆಯೋ ಅಂದು ಮನಸ್ಸು ನಿರಾಕರಣೆಯ ಭಾವದೊಂದಿಗೆ ನಮ್ಮನ್ನು ಕಾಡುತ್ತದೆ ಮತ್ತು ಮುಂದೊಂದು ದಿನ ಒಪ್ಪಿಕೊಳ್ಲಬೇಕಾದ ಸತ್ಯವನ್ನು ಅರಗಿಸಿಕೊಳ್ಳಲು ನಮ್ಮನ್ನು ನಿಧಾನವಾಗಿ ಸಿದ್ಧಗೊಳಿಸುತ್ತದೆ” - ನ್ಯಾಂಡೊನ ಈ ಮಾತುಗಳನ್ನು ಓದಿ ಅಕ್ಷರಶಃ ಹನಿಗಣ್ಣಾಗಿದ್ದೇನೆ. “ಸತ್ಯವನ್ನು ಒಪ್ಪಿಕೊಳ್ಳುವ ಮುನ್ನ ಅದನ್ನು ಅಲ್ಲಗಳೆಯುವುದು ಸಹಜ.. ಹಾಗೆ ಅಲ್ಲಗಳೆಯುತ್ತಲೇ ಅದರ ಇರುವಿಕೆ ನಿನಗೇ ದಟ್ಟವಾಗುತ್ತಾ ಹೋಗುತ್ತದೆ... ಸತ್ಯ ಒಪ್ಪಿತವಾದಾಗಲೇ ಹೊಸ ಸಾಧ್ಯತೆಗೆ ತೆರೆದುಕೊಳ್ಳಬಹುದು..” ಎಂದು ಬಾಲ್ಯದಲ್ಲಿ ಅಪ್ಪ ನನಗೆ ಹೇಳಿದ್ದ ಮಾತುಗಳೇ ಮತ್ತೆ ಮತ್ತೆ ನೆನಪಾದವು ನನಗೆ.
ನ್ಯಾಂಡೊ ಅಂತಹ ದುಃಸ್ಥಿತಿಯಲ್ಲೂ ಉಸಿರಾಡಲು, ಮತ್ತೆ ಸ್ವಸ್ಥ ಸ್ಥಾನ ಸೇರಲು ಏನು ಅಗತ್ಯ.. ಯಾವ ಕಾಲಕ್ಕೆ ಯಾವ ಕ್ರಿಯೆ ಮುಖ್ಯ ಎನ್ನುವುದನ್ನು ಸ್ವಯಂ ಹೇಳಿಕೊಂಡು ಗಟ್ಟಿಮಾಡಿಕೊಳ್ಳುತ್ತಾ.. ಸ್ನೇಹಿತರನ್ನೂ ಅದಕ್ಕೆ ತಯಾರುಗೊಳಿಸುತ್ತಾ ತನ್ನೊಳಗಿನ ನಿರಾಸೆ, ದುಗುಡಗಳನ್ನು ತಾನೇ ನುಂಗಿಕೊಂಡು ಹದಗೊಳ್ಳುವ ಆ ಪ್ರಕ್ರಿಯೆ ನಮ್ಮನ್ನೂ ಆವರಿಸಿ ನಾವು ನಮ್ಮೊಳಗಿನ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳಲು ಪ್ರೇರೇಪಿಸಿಬಿಡುತ್ತದೆ. “ಪ್ರತಿ ಕೆಲಸಕ್ಕೂ ಸರಿಯಾದ ನೆಟ್ಟು, ಬೋಲ್ಟುಗಳಿರುತ್ತವೆ. ನಾವು ಅದನ್ನು ಗುರುತಿಸಿಕೊಳ್ಳಬೇಕಷ್ಟೇ” ಎನ್ನುವ ನ್ಯಾಂಡೊನ ತಂದೆಯ ಮಾತು ಸಾರ್ವಕಾಲಿಕ ಸತ್ಯ.
ಆ ದುರಂತದ ಮೊದಲು ಯಾವುದೇ ಆತಂಕ, ಕಷ್ಟಗಳ ಅನುಭವವಿಲ್ಲದೇ ಮೋಜಿನಲ್ಲಿರುತ್ತಿದ್ದ ನ್ಯಾಂಡೊ, ಧುತ್ತನೆ ಎದುರಾದ ಅಪಘಾತದ ಸಮಯದಲ್ಲಿ ಮತ್ತು ಅದರಿಂದ ಪಾರಾಗಿ ಬಂದ ನಂತರ.. ಓರ್ವ ಮಾಗಿದ, ಪಕ್ವಗೊಂಡ ಅಧ್ಯಾತ್ಮ ಚಿಂತಕನಾಗಿ, ದೇವರು-ಧರ್ಮ ಮುಂತಾದ ವಿಷಯಯಗಳ ಕುರಿತು ತನ್ನದೇ ಸ್ಪಷ್ಟ ನಿಲುವುಳ್ಳವನಾಗಿ, ಬದುಕೆಂದರೆ ಜೀವನ ಪ್ರೀತಿ ಹಂಚುವ ಕಾರ್ಯವೆಂಬುದನ್ನು ಮನಗಾಣುವ ವಿಶಿಷ್ಟ ವ್ಯಕ್ತಿಯಾಗಿ ರೂಪುಗೊಳ್ಳುವ ಆ ಪರಿ, ವಿವಿಧ ಹಂತಗಳು ಅಪೂರ್ವ ಬೆರಗನ್ನು ನಮ್ಮೊಳಗೆ ತುಂಬಿಬಿಡುತ್ತವೆ.
ಈ ಎಲ್ಲಾ ಅನುಭವಗಳನ್ನು ಸಮರ್ಥವಾಗಿ, ಸಶಕ್ತವಾಗಿ ಓದುಗರ ಮನಸಿನೊಳಗೆ, ಭಾವನೆಯೊಳಗೆ ಕಟ್ಟಿಕೊಡುತ್ತಾರೆ ಲೇಖಕಿ ಸಂಯುಕ್ತಾ ಪುಲಿಗಲ್. ನಿಜಕ್ಕೂ ಭಾಷೆಯ ಮೇಲೆ ಇವರಿಗಿರುವ ಹಿಡಿತ ಮನಸೂರೆಗೊಂಡುಬಿಡುತ್ತದೆ. ಇದು ಅನುವಾದಿತ ಕೃತಿಯೇ ಅಲ್ಲವೇನೋ ಎಂಬಷ್ಟು ಸರಳವಾಗಿ, ಸ್ಪಷ್ಟವಾಗಿ ಈ ಕೃತಿಯನ್ನು ರಚಿಸಿದ್ದಾರೆ. ಇಂತಹ ಅಪೂರ್ವ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಸಂಯುಕ್ತಾರವರಿಗೆ, ಪ್ರಕಟಿಸಿದ ಛಂದ ಪ್ರಕಾಶನಕ್ಕೆ.. ಎಲ್ಲವುದಕ್ಕಿಂತ ಮುಖ್ಯವಾಗಿ ತಮ್ಮ ಬದುಕನ್ನು ಬದಲಿಸಿದ ಈ ದುರ್ಘಟನೆಯನ್ನು ಸ್ವಯಂ ಪಾಠವಾಗಿಸಿಕೊಂಡು, ನಮಗೂ ಪಾಠಕಲಿತುಕೊಳ್ಳಲು ಅವಕಾಶವನ್ನಿತ್ತ, ಹಂಚಿಕೊಂಡ ನ್ಯಾಂಡೊ ಪರಾಡೊ ಅವರಿಗೆ ತುಂಬು ಮನದ ಕೃತಜ್ಞತೆಗಳು.
~ತೇಜಸ್ವಿನಿ ಹೆಗಡೆ.
8 ಕಾಮೆಂಟ್‌ಗಳು:
ತೇಜು ಅಕ್ಕಾ, ನಂಗೆ ತುಂಬಾ ಖುಷಿ ಆಯ್ತು. ಧನ್ಯವಾದಗಳು. ಅನುವಾದವೊಂದು ಈ ಮಟ್ಟದ ಅನುಭೂತಿಯನ್ನು ಹಂಚಿಕೊಳ್ಳುತ್ತದೆ ಎಂದರೆ ಅದು ಸಂಪೂರ್ಣ ಸಾರ್ಥಕ್ಯವನ್ನು ಕಂಡಂತೆ. ನ್ಯಾಂಡೋ ತನ್ನ ತಂಗಿಯನ್ನು ಕಳೆದುಕೊಳ್ಳುವ ಆ ಪುಟಗಳ ನಡುವೆ ಹೇಗೆ ಕಳೆದುಹೋಗಿದ್ದೆ ಎಂದರೆ, ಆ ಕ್ಷಣವೇ ನಿರ್ಧರಿಸಿದ್ದೆ. ಇದು ನನ್ನ ಭಾಷೆಯಲ್ಲಿ ಬರಬೇಕು ಎಂದು!
ಥ್ಯಾಂಕ್ಯೂ ನಿಮ್ಮ ಅನಿಸಿಕೆ ಹಂಚಿಕೊಂಡದ್ದಕ್ಕೆ. :)
@Samyuktha ಯಾವುದೇ ಒಂದು ಕೃತಿಯನ್ನು ನಮ್ಮೊಳಗೆ ಸಮೀಕರಿಸಿಕೊಳ್ಳಲು ಅದನ್ನು ನಾವು ಸರಾಗವಾಗಿ ಓದಲಾಗುವಂತಿರಬೇಕು ಮತ್ತು ಆ ಕಥೆ ಕಟ್ಟಿಕೊಡುವ, ಅದು ಬೆಳೆವ ಪರಿಸರ ನಮಗೆ ಆಪ್ತವಾಗಬೇಕು.. ಅದರಲ್ಲಿ ನಾವು ಮಿಳಿತವಾಗುವಂತಿರಬೇಕು. ಇದು ನಿಮ್ಮ ಅನುವಾದದಲ್ಲಿ ಸಾಧ್ಯವಾಗಿದೆ. ಹೀಗಾಗಿಯೇ ನನಗೆ ಬಹಳ ಮೆಚ್ಚುಗೆಯಾಗಿದ್ದು.. ಆಪ್ತವೆನಿಸಿದ್ದು. ನಿಮಗೂ ಧನ್ಯವಾದಗಳು :)
nice interesting read..found similar blog here
Divyashree..
Thank you.ನೀವು ಕೊಟ್ಟ ಲಿಂಕ್ ಕನ್ನಡ ಪ್ರಭ ಪೋರ್ಟಲ್ ವೆಬ್ಸೈಟಿದು!
ಬಿಳಿ ಗಡ್ಡದ ಮುನಿಯೋರ್ವ ಅಖಂಡ ತಪಸ್ಸಿನಲ್ಲಿ ಕಳೆದುಹೋಗಿರುವ ಎಂದು ಹಿಮಾಲಯ ಪರ್ವತವನ್ನು ರೂಪಕಾಲಂಕಾರದಲ್ಲಿ ವರ್ಣಿಸಿದ್ದು, ನನಗೆ ಇಷ್ಟವಾಯ್ತು. ನಾನು ಕೂಡ ಚಲನಚಿತ್ರ, ನಾಟಕ, ಕಥೆ, ಕಾದಂಬರಿ ಇವೆಲ್ಲವುಗಳಲ್ಲೂ ನಾನು ದುರಂತಮಯ ಅಂತ್ಯವಿರುವ.. ಹೆಚ್ಚು ದುಃಖವಿರುವ ಚಿತ್ರವನ್ನು, ಬರಹವನ್ನು ಇಷ್ಟಪಡುವುದಿಲ್ಲ. ಆದರೂ ಬದುಕಿನಲ್ಲಿ ದುಃಖ, ನೋವುಗಳು ಇದ್ದದ್ದೇ. ನಿಮ್ಮ ಲೇಖನ ಓದಿದ ಮೇಲೆ ‘ಪರ್ವತದಲ್ಲಿ ಪವಾಡ’ ಪುಸ್ತಕವನ್ನು ನಾನೂ ಓದಬೇಕು... ನನ್ನ ಬ್ಲಾಗ್ sarovaradallisuryabimba.blogspot.in ಗೆ ಭೇಟಿ ಕೊಡಿ.
ಒಂದು ಉತ್ತಮ ಪುಸ್ತಕದ ಪರಿಚಯಕ್ಕಾಗಿ ಧನ್ಯವಾದಗಳು, ತೇಜಸ್ವಿನಿ.
ಧನ್ಯವಾದಗಳು ಚಂದ್ರಶೇಖರ್ ಅವರೆ..
ಧನ್ಯವಾದಗಳು ಸುನಾಥ ಕಾಕಾ.. :)
ಅಕ್ಕ, ನಿಮ್ಮ ಬ್ಲಾಗ್ ಚೆನ್ನಾಗಿದೆ. ನಿಮ್ಮ ಬರಹ ಶೈಲಿ, ನಿರೂಪಣೆ ಸುಂದರವಾಗಿದೆ. ಚಿತ್ರ ಕಲಾವಿದ ಮಂಜುನಾಥ್ ಕಾಮತರ ಬಗ್ಗೆ ನಾನು ಬರೆದಿರುವ ಲೇಖನ ನೀವೂ ಓದಿ. ನನ್ನ ಬ್ಲಾಗ್ sarovaradallisuryabimba.blogspot.in
ಕಾಮೆಂಟ್ ಪೋಸ್ಟ್ ಮಾಡಿ