ಸೋಮವಾರ, ಫೆಬ್ರವರಿ 11, 2008

ನಿಯತಿ


ನಿಯತಿ

---"ಸುಮತಿ ಮುಂದಿನ ಸೋಮವಾರ ಅಗಸ್ಟ್ ೧೫. ಅಂದ್ರೆ ಶನಿವಾರ, ರವಿವಾರ ಸೇರಿಸಿದ್ರೆ ಒಟ್ಟೂ ಮೂರು ದಿನ ರಜೆ ಸಿಗತ್ತೆ. ನಾವಿಬ್ರೂ ಹೊರಗೆ ಬಿದ್ದು ತುಂಬಾ ದಿವಸಗಳಾದವು. ಇಲ್ಲೇ ಮೈಸೂರಿಗೆ ಹೋಗಿಬರೋಣ್ವಾ? ಈ ಕಂಪೆನಿಯ ಕೆಲ್ಸದಿಂದ ನಮಗೂ ಸ್ವಾತಂತ್ರ್ಯ ಸಿಕ್ಕಿದ ಹಾಗೆ ಆಗೊತ್ತೆ" ಎಂದ ಲತಾಳ ಮಾತು ಕೇಳಿ ಸುಮತಿಯ ಮುಖ ಪ್ರಫುಲ್ಲವಾಯಿತು. "ಹೌದಲ್ವಾ! ನಾನೂ ಗಮನಿಸಿಯೇ ಇಲ್ಲಾ ..ಆದ್ರೆ ಸ್ಸಾರಿ ಕಣೇ ಲತಾ ನಾನು ಊರಿಗೆ ಹೋಗ್ಬೇಕು. ಅಮ್ಮ , ಅಪ್ಪ ಬೈತಾ ಇದ್ದಾರೆ. ಮೂರು ತಿಂಗಳ ಮೇಲಾಯ್ತು ಊರಿನ ಕಡೆ ತಲೆ ಹಾಕಿ. ನಿನ್ನೆ ಫೋ ಬೇರೆ ಬಂದಿತ್ತು. ಬೇಜಾರಾಗ್ಬೇಡ ಪ್ಲೀಸ್" ಎಂದಾಗ ಲತಾಳಿಗೆ ತುಸು ಬೇಸರವಾಯಿತು. "ಹೂಂ ..ಎಲ್ಲಾ ಸುಳ್ಳು ಅಪ್ಪ , ಅಮ್ಮ ನ ಮಾತಿಗೆ ನೀನು ಓಡಿ ಹೋಗೊಳಲ್ಲ. ನಂಗೊತ್ತು.. ನಿನ್ನೆ ಮುದ್ದಿನ ತಮ್ಮ ರಾಜೇಶನ ಪತ್ರ ಬಂತು ನೋಡು ಆಗ್ಲೇ ಅಂದ್ಕೊಂಡೆ ನೀನು ಬರೋದು ಅಷ್ಟರಲ್ಲೇ ಇದೆ" ಎಂದು ವ್ಯಂಗ್ಯವಾಡಿದ ಅವಳ ಮಾತಿಗೆ ಸುಮತಿ ಜೋರಾಗಿ ನಕ್ಕು ಬಿಟ್ಟಳು. ಕಾರಣ ಅವಳ ಮಾತಿನೊಳಗಿದ್ದ ಸತ್ಯತೆ.
---
ಸುಮತಿಯ ಊರು ಶಿರಸಿಯ ಸಮೀಪದಲ್ಲಿರುವ ಮತ್ತೀಗಾರು. ಕೃಷಿಕರಾಗಿರುವ ತಂದೆ ಶ್ರೀಧರ ಭಟ್ಟರು ಪ್ರಸಿದ್ಧ ವೈದಿಕರೂ ಕೂಡ. ತಾಯಿ ಸುಶೀಲಮ್ಮ . ಬಾಲ್ಯದಿಂದಲೂ ಸುಮತಿ ಓದಲು ಬಲು ಚುರುಕು. ಹಾಗಾಗಿಯೇ ಸುಲಭವಾಗಿ ಇಂಜಿನೀಯರಿಂಗ್ ಪದವಿ ಮುಗಿಸಿ, ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದಳು. ಕುಲಪುತ್ರನೊಬ್ಬನಿಲ್ಲವಲ್ಲಾ ಎಂದು ಶ್ರೀಧರ ದಂಪತಿಗಳು ಕೊರಗುತ್ತಿರುವಾಗಲೇ ಅವರ ಮನೆ-ಮನ ತುಂಬಿದವನು ರಾಜೇಶ. ಮಗಳು ಹುಟ್ಟಿ ೧೪ ವರುಷಗಳ ಮೇಲೆ ಹುಟ್ಟಿದವನು. ಹಾಗಾಗಿಯೇ ಮನೆಯವರಿಗೆಲ್ಲಾ ಪುಟ್ಟ ರಾಜೇಶನೆಂದರೆ ಬಲು ಮುದ್ದು. ಅದರಲ್ಲೂ ಸುಮತಿಗಂತೂ ತಮ್ಮನೆಂದರೆ ತುಸು ಅತಿಯಾದ ಮಮತೆ. ಚಿಕ್ಕಂದಿನಿಂದಲೂ ಒಂಟಿತನದ ನೋವನ್ನು ಅನುಭವಿಸಿದವಳಲ್ಲಿ ಈ ಪುಟ್ಟ ಪೋರನ ಆಗಮನ ನವ ಚೈತನ್ಯವನ್ನು ತುಂಬಿತ್ತು.
---
ಆತ ಮಗುವಾಗಿದ್ದಾಗ ತಾನೇ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು , ಅತ್ತರೆ ಲಾಲಿ ಹಾಡಿ ಮಲಗಿಸುತ್ತಿದ್ದಳು. ಹಸಿವಾದರೆ ತುತ್ತನಿತ್ತು ಮುದ್ದಿಸುವಳು. ಚಿಕ್ಕ ಜ್ವರ ಬಂದರೂ ಸಾಕು ರಾತ್ರಿ-ಹಗಲು ಒಂದು ಮಾಡಿ ಅವನ ಬಳಿಕುಳಿತಿರುತ್ತಿದ್ದಳು. ಯಾವುದೇ ಹಬ್ಬ ಬರಲಿ ತನಗಿಂತ ಮೊದಲು ತಮ್ಮನಿಗಾಗಿ ಹೊಸ ಬಟ್ಟೆ ತರುತ್ತಿದ್ದಳು. ಯಾವ ಸುಂದರ ವಸ್ತುಕಂಡರೂ ಆತನಿಗೆಂದು ತೆಗೆದಿಡುತ್ತಿದ್ದಳು. ಒಟ್ಟಿನಲ್ಲಿ ಆತನಿಗೆ ಇಬ್ಬರು ತಾಯಂದಿರು ಎಂದರೆ ಹೆಚ್ಚಲ್ಲ. ಅದಕ್ಕೆ ಅವರಿಬ್ಬರ ನಡುವಿನ ವಯಸ್ಸಿನ ಅಂತರವೂ ಕಾರಣವಾಗಿತ್ತು.ಅವಳ ಮಾನಸಿಕ ದೌರ್ಬಲ್ಯ ಹಾಗೂ ಶಕ್ತಿ ಎರಡೂ ಆಕೆಯ ಮುದ್ದಿನ ರಾಜೂ ಆಗಿದ್ದ ಎಂದರೆ ತಪ್ಪಾಗಲಾರದು.

ಇನ್ನು ರಾಜೇಶನಿಗೂ ಅಷ್ಟೇ, ಹೆತ್ತವರಿಗಿಂತಲೂ ಅಕ್ಕನನ್ನೇ ಹೆಚ್ಚು ಹಚ್ಚಿಕೊಂಡಿದ್ದ. ಆಕೆ ಕೊಟ್ಟ ವಸ್ತು ಚೆಂದ, ಅಕ್ಕ ತಂದ ಬಟ್ಟೆಯನ್ನೇ ಹಾಕುವ. ಆತನ ತುಂಟಾಟವನ್ನು ಸಹಿಸಲಾರದೆ ಒಮ್ಮೊಮ್ಮೆ ಬೀಳುವ ಅಮ್ಮನ ಹೊಡೆತವಾಗಲೀ, ಅಪ್ಪನ ಬೈಗುಳವಾಗಲೀ ಆತನನ್ನು ತಡೆಯದು. ಆದರೆ ಅಕ್ಕನ ಒಂದೇ ಒಂದು ಅಕ್ಕರೆಯ ಅಪ್ಪಣೆ ಆತನ ಪಾಲಿಗೆ ಸುಗ್ರೀವಾಜ್ಞೆಯೇ ಸರಿ. "ಕೂಸೆ... ನೀ ರಾಶಿನೇ ಅವ್ನ ತಲೆ ಮೇಲೇ ಕೂರಿಸಕಂಜೆ ಅದ್ಕೇಯಾ ಅಂವ ನಂಗ್ಳ ಮಾತೇ ಕೇಳ್ತನಿಲ್ಲೆ" ಎಂದು ಸುಶೀಲಮ್ಮ ಎಷ್ಟೋ ಸಲ ಮಗಳನ್ನು ಗದರಿಸಿದ್ದರೂ ಮನಸ್ಸಿನಲ್ಲೇ ಮಕ್ಕಳ ಈ ಅನೂಹ್ಯ ಬಂಧವನ್ನು ಕಂಡು ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು.
---
ರಾಜು ಈಗ ನಾಲ್ಕನೆಯ ತರಗತಿಗೆ ಕಾಲಿಟ್ಟಿದ್ದ. ಮನೆಯಲ್ಲಿ ಕಲಿಸಲು ತಂದೆ ತಾಯಿಯರಿದ್ದರೂ ಅಕ್ಕನೇ ಬಳಿ ಕೂರಬೇಕು. ಇತ್ತೀಚಿಗಷ್ಟೇ ಆತನ ಮೇಷ್ಟ್ರು ಪತ್ರ ಬರೆಯುವುದನ್ನು ಹೇಳಿಕೊಟ್ಟಿದ್ದರು. ಹಾಗಾಗಿಯೇ ರಾಜುವಿಗೆ ಒಂದು ಪತ್ರ ಬರೆಯುವ ಉಮೇದು ಬಂತು. ಸರಿ ಮೊದಲ ಪತ್ರವನ್ನು ತನ್ನ ಪ್ರೀತಿಯ ಸುಮಕ್ಕನಿಗೇ ಬರೆದ. ಅವಳಿಗಂತೂ ತಮ್ಮನ ಮೊದಲ ಪತ್ರ ನೋಡಿ ತುಂಬಾ ಸಂತೋಷವಾಗಿತ್ತು. ತಮ್ಮನ ನೆನಪಾಗಲು ಈಗಾಗಲೇ ಎರಡು ಬಾರಿ ಓದಿಟ್ಟಿದ್ದ ಆತನ ಪತ್ರವನ್ನು ಮತ್ತೊಮ್ಮೆ ಓದಲು ಕುಳಿತಳು. ಮುದ್ದು ಮುದ್ದಾದ ಬಾಲ್ಯ ಶೈಲಿಯಲ್ಲಿ ದ್ದ ಪತ್ರನೋಡಿ ಮಂದಹಾಸ ಮೂಡಿತು.
---
ಪ್ರೀತಿಯ ಸುಮಕ್ಕಂಗೆ,

---------------- ನಿನ್ನ ಮುದ್ದು ರಾಜೂನ ಮುತ್ತುಗಳು. ನೀ ಹೇಂಗಿದ್ದೆ? ಬೆಂಗಳೂರಲ್ಲಿ ರಾಶಿ ಚಳಿಯಡ?.. ನನ್ನ ಫ್ರೆಂಡ್ ಶಶಿ ಹೇಳ್ದ. ಶಶಿ ಯಾರು ಹೇಳಿ ಗೊತ್ತಾತ? ಅದೇ ಹೋದ್ವರ್ಷ ನನ್ನ ಪೆನ್ಸಿ ಬಾಕ್ಸ್ ಮುರ್‍ದು ಹಾಕಿಯಿದ್ನಲೇ ಅವ್ನೇಯಾ.. ಮೊನ್ನೆ ನನ್ಗೇ ಹೇಳಿ ಪುನ್ನೇರ್ಲ ಹಣ್ಣ ತಂದಕೊಟ್ಟಿದ್ದ. ಹಂಗಾಗಿ ಅಂವ ಈಗ ನನ್ನ ಬೆಸ್ಟ್ ಫ್ರೆಂಡ್. ಸುಮಕ್ಕ ಇವತ್ತು ಆಯಿ ನನ್ನ ಬೈಯದ್ದೇ. ನಾನೆಂತ ತಪ್ಪೂ ಮಾಡಿದ್ನಿಲ್ಯಪ್ಪ.. ಅದು ನಿನ್ನ ಹಳೇ ಚೂಡಿದಾರನ ಆ ಸಿಡಕ ಮೂತಿ ಗಂಗಮ್ಮಂಗೆ ಕೊಡಲ್ಹೋಗಿತ್ತು, ಬೇಡ ಹೇಳಿ ಕಸ್ದಿದಕ್ಕೇಯಾ.. ನೀ ಈ ಸಲ ಬಂದಾಗ ಅಮ್ಮಂಗೆ ಸ್ವಲ್ಪ ಬುದ್ಧಿ ಹೇಳವು ನೋಡು..ಅಪ್ಪಯ್ಯಂಗೂ ಎಂತದೋ ಹೇಳಿಕೊಟ್ಟಿರವು.. ಅದ್ಕೆಯಾ ಮೊನ್ನೆ ಸುಮ್ಮ್ ಸುಮ್ನೇಯಾ ಅಪ್ಪಯ್ಯನೂ ಬೈದ್ನಪ....ಹೀಂಗೇ ನೀರೆಷ್ಟಿದ್ದು ಹೇಳಿ ಬಾವಿ ಬಗ್ಗಿ ನೋಡ್ತಾ ಇದ್ನಾ..ಅಪ್ಪಯ್ಯ ಕೋಲ್ ತಗಳವಾ? ನೀ ಇಲ್ಲೆ ಹೇಳದು ಇವೆಲ್ಲಾ ಯನ್ನ ಸರಿ ನೋಡ್ಕತಾನೆ ಇಲ್ಲೆ.. ಬೆಗ್ನೆ ಬಾರೆ ಸುಮಕ್ಕ.. ಹಂ.. ಹಾಂಗೆ ಬರಬೇಕಿರೆ ಒಂದ್ ಕಂಪ್ಯೂಟರ್ ಹೊತ್ಕಬಾ .. ನಿನ್ನ ಆಫೀಸಲ್ಲಿ ಸುಮಾರು ಕಂಪ್ಯೂಟರ್ ಇದ್ದು ಹೇಳಿಯಿದ್ಯಲೇ.. ನಾವಿಬ್ರೂ ಆಟ ಆಡಲಾಗ್ತು. ಈ ತಿಂಗ್ಳು ನೀನು ಬರ್‍ಲೇ ಬೇಕು. ಮುಂದಿನ ತಿಂಗ್ಳು ಪರೀಕ್ಷೆ ಇದ್ದು.. ನೀನೇ ಹೇಳ್ಕೊಡವು. ಪರೀಕ್ಷೆ ಮುಗ್ದ ಮೇಲೆ ಬೆಂಗ್ಳೂರಿಗೆ ಹೋಪಾಂಗೆ ಬಾ ಅಕಾ? ಸರಿ ಸುಮಕ್ಕ ಇನ್ನು ಮುಗಸ್ತಿ. ಕೈ ನೋಯ್ತಾ ಇದ್ದು. ಮತ್ತೆ ಅಮ್ಮಂಗೆ ನಾ ಹೀಂಗೆಲ್ಲಾ ಬರದ್ದಿ ಹೇಳಿ ಹೇಳಿಕಡ ಮಾರಾಯ್ತಿ. ಬೈತು ನಂಗೆ.

ಇತಿ ನಿನ್ನ ಪ್ರೀತಿಯ,
ರಾಜು.
--
ಶಿರಸಿಯನ್ನು ಬೆಳಿಗ್ಗೆ ಏಳು ಗಂಟೆಗೇ ತಲುಪಿದರೂ , ಅಲ್ಲಿಂದ ಬಸ್ಸು ಹಿಡಿದು ತನ್ನ ಊರು ಸೇರುವಾಗ ಗಂಟೆ ಎಂಟಾಗಿತ್ತು. ಒಂದೆಡೆ ಧೋ ಎಂದು ಸುರಿಯುವ ಆಷಾಢ ಮಾಸದ ಮಳೆ, ಮತ್ತೊಂದೆಡೆ ಗಾಳಿಗೆ ಹಾರುತ್ತಿದ್ದ ಪುಟ್ಟ ಕೊಡೆ ಎರಡನ್ನೂ ಸಂಭಾಳಿಸುತ್ತಾ ಹೇಗೋ ಮನೆಯ ಹತ್ತಿರ ಬಂದಳು. ದೊಡ್ಡ ಕೊಡೆಯನ್ನೊಂದನ್ನು ಹಿಡಿದು ಕೊಂಡು ಮನೆಯ ದಣಪೆಯ ಬಳಿಯೇ ಠಳಾಯಿಸುತ್ತಿದ್ದ ತಮ್ಮನ್ನು ಕಂಡ ಸುಮತಿಗೆ ಬಂದ ಆಯಾಸವೆಲ್ಲಾ ಕಡಿಮೆಯಾದಂತಾಯಿತು. ಅಷ್ಟು ದೂರದಿಂದಲೇ ಅಕ್ಕನನ್ನು ಕಂಡು ಮಳೆಯನ್ನೂ ಲೆಕ್ಕಿಸದೇ ಓಡಿ ಬಂದು ಛಂಗನೇ ಹಾರಿ ಅವಳ ಮೈಗೆ ಜೋತು ಬಿದ್ದ ನು. ಜಗುಲಿಗೆ ಬಂದದ್ದೇ ತಡ ಅಕ್ಕ ತನಗೇನು ತಂದಿಹಳೆಂದು ಆಕೆಯ ಕೈಚೀಲವನ್ನೆಲ್ಲಾ ಜಾಲಾಡಿಯಾಯಿತು. ಚೋಕಲೇಟು, ಬಿಸ್ಕಿಟ್ ಪೊಟ್ಟಣಗಳನ್ನೆಲ್ಲಾ ನೋಡಿ ತೃಪ್ತಿಗೊಂಡ ರಾಜು.. ಆ ವರೆಗಿನ ತನ್ನ ಆಟ-ಪಾಠಗಳ ವರದಿಯನ್ನೆಲ್ಲಾ ಕೊರೆಯತೊಡಗಿದ. ಬಂದು ಹದಿನೈದು ನಿಮಿಷವಾದರೂ ಕೈ-ಕಾಲುಗಳನ್ನೂ ತೊಳೆಯಲೂ ಬಿಡದ ಮಗನನ್ನು ಎಬ್ಬಿಸಲು ಸುಶೀಲಮ್ಮನೇ ಬರಬೇಕಾಯಿತು -"ರಾಜು ಸಾಕೋ ಮಾರಾಯಾ ಅದು ಈಗಷ್ಟೇ ಬಂಜು, ಮಳೇಲಿ ಬಂದು ಬಟ್ಟೆ ಎಲ್ಲಾ ಒದ್ದೆ ಬೇರೆ ಆಜು. ಅದ್ರನ್ನ ಈಗ ಒಂದ್ಸಲ ಬಿಡು ಮಾರಾಯ. ಅದಿನ್ನೂ ಸ್ವಲ್ಪ ದಿನ ಇರ್‍ತು. ಆರಾಮಾಗಿ ಬಿಚ್ಚಲಕ್ಕು ನಿನ್ನ ಪುರಾಣಾನೆಲ್ಲಾ, ಏಳೇ ಸುಮಾ ನೀ ಆಸರಿಗೆ ಬಾ, ಬಿಸೀ ಚಾ ಕುಡ್ದು ತೆಳ್ಳೇವು ತಿನ್ಲಕ್ಕು. ತಮ್ಮ ನಿಂಗೆ ಪರೀಕ್ಷೆಬಂತು, ಅಕ್ಕ ಆಸರಿಗೆ ಕುಡ್ದು ಮಲಗಲಿ ಸ್ವಲ್ಪ. ಅಲ್ಲಿವರೆಗಾದ್ರೂ ನೀ ಓದ್ಕ ನಡಿ" ಎಂದು ಗದರಿದರು. "ತಡ್ಯೆ ಅಮ್ಮ ಅಕ್ಕಂಗೇನೂ ಬೇಜಾರಾಜಿಲ್ಲೆ. ಯಾವಾಗ ನೋಡಿರೂ ಓದು, ಓದು. ಸಾಕಾಗೋತು ನಂಗೆ. ಪರೀಕ್ಷೆಲಿ ಓದ್ಸಲೆ ಹೇಳೇ ಕರ್‍ಸಕಂಜೆ ಇದ್ರನ್ನ. ಕಡಿಗೆ ಓದ್ಸತು ಬಿಡು. ನಾನೂ ಇನ್ನೊಂದ್ಸಲ ಅಕ್ಕನ ಜೊತೆಗೇ ಆಸರಿಕುಡಿತಿ ಎಂದು ಅಕ್ಕನ ನ್ನು ಅಪ್ಪಿದನು"."ಅಮ್ಮ ಇಂವೆಲ್ಲೂ ಬಿಡ್ತಿನಿಲ್ಲೆ..ನಾ ಮಧ್ಯಾಹ್ನ ಮಲಗ್ತಿ..ಈ ಕೋತಿನೂ ಮಲಗಿಸಿದ್ಹಾಂಗಾಗ್ತು" ಎಂದು ತಮ್ಮನನ್ನು ಪ್ರೀತಿಯಿಂದ ಬಳಸಿಕೊಂಡೇ ತಿಂಡಿ ತಿಂದು ಮುಗಿಸಿದಳು ಸುಮತಿ. ಅಪ್ಪನ ಜೊತೆ ಹರಟೆ, ಅಮ್ಮನಿಗೆ ಸಹಾಯ , ತಮ್ಮನ ಜೊತೆ ಆಟ-ಇವುಗಳಲ್ಲಿ ಕಳೆದೇ ಹೋದಳು.
---
"ನೀ ಎಂತದೇ ಹೇಳು ಕೂಸೆ ರಾಶಿನೇ ತಲೆಮೇಲೆ ಕೂರಸ್ಕಂಜೆ ಅವ್ನ.. ಈಗಿತ್ಲಾಗಂತೂ ಹಠಮಾರಿನೇ ಆಗ್ಹೋಜಾ, ಮಾಡಡಾ ಹೇಳಿದ್ನೇಯಾ ಮಾಡ್ತೆ ಅಂಬ. ನೀ ಹೋದ್ಮೆಲೆ ಹಿಡ್ಯಲೇ ಆಗ್ತಿಲ್ಲೆ ಗೊತ್ತಿದ್ದ? ನಿನ್ನ ಮಾತೊಂದೇ ಕೇಳ್ತ, ಎಂತ ಬೇಕಿರೂ ಮಾಡ್ಲಿ.... ಆದ್ರೆ ಮೊನ್ನೆ ಅಷ್ಟೇ ತೆಗ್ಸಿದ್ದ ಬಾವಿ ಬಗ್ಗಡ ಹೇಳು. ಯಂಗವಂತೂ ಹೇಳಿ, ಹೇಳಿ ಸೋತ್ಹೋಜ, ದಿನಾ ಹೋಪದು ಎಷ್ಟು ನೀರು ಬಂಜು ನೋಡದು. ಅವಂಗೆ ಆಟ. ಕಾಲು-ಗೀಲು ಜಾರಿ ಬಿದ್ದೋದ್ರೆ ಎಂತ ಮಾಡದು? ಇವ್ರಿಗೂ ಹೇಳಿ ಸೋತ್ಹೋದಿ ಆನು, ನೀವು ಬಾವಿ ದಂಡೆನ ಉಂಚೂರಾದ್ರೂ ಎತ್ರ ಮಾಡ್ಸಿ ಹೇಳಿ. ಇವತ್ತು ಮಾಡ್ತೆ ನಾಳಿ ಮಾಡ್ತೆ ಹೇಳೆ ಮುಂದ್ಹಾಕ್ತಾ ಇದ್ದೊ... ನೀನಾರೂ ಕೂರ್‍ಸಕಂಡಿ ಹೇಳಿಕ್ಕಿಹೋಗು"-ರಾತ್ರಿ ಮಗಳ ಪಕ್ಕದಲ್ಲೇ ಹಾಸಿಕೊಂಡು ಪವಡಿಸಿದ ತಾಯಿ ಮಗಳಲ್ಲಿ ತನ್ನ ಅಳಲನ್ನು ತೋಡಿಕೊಂಡಳು. "ನೀ ಎಂತ ಚಿಂತೆ ಮಾಡಡ್ದೆ ಆಯಿ. ದಿನ ಹೋದಾಂಗೆ ಅಂವಂಗೇ ಬುದ್ಧಿ ಬತ್ತು. ಆರನೇ ಕ್ಲಾಸಿಂದ ಹೇಂಗಿದ್ರೂ ಶೀನೂ ಮಾವನ ಮನೆಯಲ್ಲಿ ಇಡದು. ಆವಾಗ ತನ್ನಿಂದ ತಾನೇ ತಂಡಾಗ್ತ. ಆಯಿ ನಾ ಸೋಮವಾರ ರಾತ್ರಿನೇ ಹೋಪಂವಾ.. ರಾಶಿನೇ ಕೆಲ್ಸ ಇದ್ದು. ರಾಜುಗಾಗಿ ಬಂದಿದ್ದು. ನಾ ಅವ್ನ ಹತ್ರ ಹೇಳಿದ್ನಿಲ್ಲೆ ಈಗಿಂದನೇಯಾ ಕೊಂಯ್ಯಿ ಗುಡ್ತ ಹೇಳಿ. ನಿಂಗಾರು ಎಂತಕ್ಕೆ ಅಂದಿ ಅಂದ್ರೆ ಕೊನೆಗಳಗೆಲಿ ಗಡಬಿಡಿ ಆಗ್ತೆ, ಅದು ಕಟ್ಕ, ಇದ್ನ ತಗೊ ಹೇಳಿ..ಈ ಸಲ ಚಟ್ನಿ ಪುಡಿ, ಸಂಡಿಗೆ ಎರಡನ್ನೂ ತಗ ಹೋಗ್ತಿ, ಲತಂಗೆ ಬೇಕಡ...ರಾಜೂನ ಚಿಂತೆ ಮಾಡಡಾ ನಾ ಹೋಪದ್ರೊಳ್ಗೆ ಹೇಳ್ತಿ ಬಿಡು. ನಾಳೆನೇ ಹೇಳಿರೆ ನಿಂಗವೇ ಹೇಳಿಕೊಟ್ರಿ ಹೇಳಿ ಬೇಜಾರು ಮಾಡ್ಕತ್ತ" ಎಂದು ಪಕ್ಕದಲ್ಲೇ ಅಪ್ಪಿ ಮಲಗಿದ್ದ ತಮ್ಮನಿಗೆ ಮುತ್ತನಿಟ್ಟಳು. ತಾಯಿ ಮಗಳ ಮಾತು ಸುಮಾರು ಹೊತ್ತು ನಡೆದಿತ್ತು. ನಿದ್ದೆ ಬಿದ್ದಾಗ ಮಧ್ಯರಾತ್ರಿಯೇ ಕಳೆದಿತ್ತೇನೋ.
---
"ತಂಗಿ ಪೊಟ್ನ ಎಲ್ಲಾ ಸರಿಯಾಗಿ ಕಟ್ಕಳೇ.. ಈಗ್ಲೇ ಬ್ಯಾಗಿಗೆ ಹಾಕ್ಯಂಬುಡು. ಕೊನೇ ಗಳಿಗೇಲಿ ಬಿಟ್ಟಿಕಿ ನಡೀತೆ.ಬಸ್ಸು ಒಂಭತ್ತಕ್ಕಲ್ದಾ .." ಎನ್ನುತ್ತಾ ತಾಯಿ ಜಗುಲಿಗೆ ಬಂದರೆ ಅಲ್ಲಿ ಬೇರೆಯೇ ಕಥೆ ನಡೆಯುತ್ತಿತ್ತು. ಮಗ ಜೋರಾಗಿ ನೆಲದಲ್ಲಿ ಹೊರಳಾಡಿ ಅಳುತ್ತಿದ್ದರೆ, ಮಗಳು ಆತನ್ನು ಸಮಾಧಾನಿಸಲು ಶತಃಪ್ರಯತ್ನ ಪಡುತ್ತಿದ್ದಳು. ಹೊರಗೆ ಮಳೆಯ ಆರ್ಭೆಟವೂ ರಾಜುವಿನ ಗೋಳಿಗೆ ತಾಳ ಹಾಕುವಂತಿತ್ತು. "ಇಶಿಶಿ.. ಎಂತದೋ ಮಾಣಿ ಇದು? ಆಳ್ಗ ಎಲ್ಲಾ ನೋಡ್ತಾ ಇದ್ದೊ ನೋಡು.. ಎಂತಕ್ಕೆ ಕೂಗ್ತಾ ಇದ್ದೆ ? ಎಂತ ಆತೆ ಸುಮ ಇವಂಗೆ?" ಒಳ ಬಂದ ಶ್ರೀಧರರು ಗದರಿದರು. "ಅಪ್ಪಯ್ಯ ಇಂವದು ಒಂದೇ ಹಠ..ನಾ ಇವತ್ತೇ ಹೋಗ್ಲಾಗ್ದಡ, ಪರೀಕ್ಷೆಮುಗ್ದ ಮೇಲೇ ಹೋಗವಡ. ಹದಿನೈದು ದಿನಗಟ್ಲೆ ರಜೆ ಕೊಡ ಕಂಪೆನಿ ಇವಂದ? ನಾಳೆ ನಾ ಅಲ್ಲಿರ್‍ಲೇ ಬೇಕು. ಒಂದು ರಿಲೀಸಿದ್ದು. ಬೇಕಾರೆ ಮುಂದಿನ ಶನಿವಾರ ಮತ್ತೆ ಬತ್ತಿ ಅಂದ್ರೂ ಕೆಳ್ತಾ ಇಲ್ಲೆ.. ಆಯಿ ನೀಯಾರೂ ಹೇಳೇ.." ಮಗಳ ಅಸಹಾಯಕತೆ ಕಂಡು ಸುಶೀಲಮ್ಮನಿಗೆ ಕನಿಕರವಾಯಿತು. "ರಾಜು ಎಂತದೋ ಇದು ನಿನ್ನ ಅವತಾರ? ಇಷ್ಟು ದೊಡ್ಡಂವ ಆಗಿ ಹೀಂಗನೋ ಮಾಡದು? ಹೀಂಗೆ ಅತ್ರೆ ಸುಮಕ್ಕಂಗೆ ಎಷ್ಟು ಬೇಜಾರಾಗಡ? ನಗ್ತಾ ಕಳ್ಸಿಕೊಡವಪ, ಎದ್ಕೊ ಮೇಲೆ. ಅಕ್ಕ ಮತ್ತೆ ಬರ್‍ತಾ ಇರ್‍ತು ಎಂದು ಮಗನನ್ನು ಸಮಾಧಾನಿಸಿದಳು". ಅಂತೂ ಇಂತೂ ಅಕ್ಕನ ಮುದ್ದು , ಅಪ್ಪನ ಏಟಿನ ಭಯ, ಅಮ್ಮನ ಬೆಲ್ಲದ ಉಂಡೆ ಏನೋ ಒಂದು ರಾಜುವನ್ನು ತಹಬಂದಿಗೆ ತಂದವು.
---
ಸಮಾಧಾನ ಗೊಂಡ ತಮ್ಮನ ಮುಖ ತೊಳಿಸಿಕೊಂಡು ಹಿತ್ತಲಿಗೆ ಕೊಂಡೊಯ್ದಳು ಸುಮತಿ. ಅಲ್ಲೇ ಇದ್ದ ಮರದ ದಿಮ್ಮಿಯ ಮೇಲೆ ತಮ್ಮನ ಕೂರಿಸಿಕೊಂಡು ಮೆಲ್ಲನೆ ತನ್ನ ಕೈ ಬಿಡಿಸಿದಳು. ಅಕ್ಕನ ಕೈಯಲ್ಲಿದ್ದ ತನ್ನಿಷ್ಟದ ಕೊಕ್ಕೋ ಚೋಕೋಲೇmನ್ನು ಕಂಡು ಮುಖದಲ್ಲಿ ತುಸು ನಗು ಆವರಿಸಿತು. ತಾನು ಹೋಗುವಾಗ ಅತ್ತರೆ ಸಮಾಧಾನಿಸಲೆಂದೇ ಅದನ್ನು ಈವರೆಗೂ ಮುಚ್ಚಿಟ್ಟಿದ್ದಳು ಸುಮತಿ. ಸುತ್ತಲಿನ ವಾತಾವರಣ ಮನಸ್ಸಿಗೆ ಮುದ ನೀಡುವಂತಿದ್ದವು. ಆಗ ಮಾತ್ರ ಮಳೆಯಾರ್ಭಟನಿಂತಿದ್ದು, ಎಲೆಗಳಿಂದ ನೀರ ಹನಿ ತೊಟ್ಟಿಕ್ಕುತ್ತಿದ್ದವು. ಮಣ್ಣಿನ ಕಂಪನ್ನುನ್ನು ಬೀರುತ್ತಾ ತಂಗಾಳಿ ಹಿತನೀಡುತ್ತಿತ್ತು. ಸಂಜೆಯ ಸೂರ್ಯ ಮೋಡದೊಳಗೆ ಮರೆಯಾಗಿ ಇಣುಕಿಯಾಡುತ್ತಿದ್ದ. ಮಳೆನೀರೆಲ್ಲಾ ಒಟ್ಟಿಗೆ ಸೇರಿ ಅಲ್ಲೇ ಒಂದು ಚಿಕ್ಕ ಕಾಲುವೆ ನಿರ್ಮಾಣವಾಗಿತ್ತು. ಅದನ್ನೇ ನೋಡುತ್ತಾ ತಿನ್ನುತ್ತಿದ್ದ ರಾಜುವಿಗೆ ಥಟ್ಟನೆ ಯೋಚನೆಯೊಂದು ಬಂತು. ಚೋಕಲೇಟಿನ ಹೊರಕಾಗದದ ಎರಡೂ ತುದಿಗಳನ್ನು ತಿರುಪಿದ. "ಸುಮಕ್ಕ ನೋಡೆ ಈ ಕಾಗ್ದ ಸೀದ ಮುಂದಕ್ಕೆ ಹೋಗಿ ಮರೆಯಾಗಿ ಹೋದ್ರೆ ನೀನಿವತ್ತು ಹೋಗ್ತೆ ಹೇಳಿ ಲೆಕ್ಕ. ಇಲ್ದೆ ಹೋದ್ರೆ ನೀ ಉಳ್ಕಳವು ಸರೀನಾ" ಎಂದ. ತಮ್ಮನ ಬಾಲಿಶ ಮಾತು ಕೇಳಿ ಅವಳಿಗೆ ನಗು ಬಂತು. ತಮಾಷೆಗಾಗಿ ಹೂಂ ಅಂದಳು. ಅದೂ ಅಲ್ಲದೆ ನೀರು ಮುಂದಕ್ಕೆ ಹರಿಯುತ್ತಿತ್ತು. ಕಾಗದ ಮುಂದೆ ಸರಿದು ಹೋಗುವುದು ಖಚಿತವಾಗಿತ್ತು. ಇದರಿಂದಾದರೂ ತಾನು ಪ್ರಯಾಣಿಸುವುದನ್ನು ಆತ ಸಮಾಧಾನದಿಂದಲೇ ಒಪ್ಪುವನೆಂದುಕೊಂಡಳು. ಅಕ್ಕನ ಒಪ್ಪಿಗೆಯಿಂದ ರಾಜು ಹುರುಪುಗೊಂಡ. ಕಾಗದವನ್ನು ನೀರಿಗೆ ಬಿಟ್ಟ. ಕುತೂಹಲದಿಂದ ಇಬ್ಬರೂ ನೋಡತೊಡಗಿದರು. ತುಸು ದೂರ ಹೋದಂತಾದ ಕಾಗದ ಥಟ್ಟನೆ ಗಾಳಿಗೆ ದಿಕ್ಕು ಬದಲಿಸಿ ಸುರುಳಿ ಸುತ್ತುತ್ತಾ ಅಲ್ಲೇ ಇದ್ದ ದೊಡ್ಡ ಕಲ್ಲಿಗೆ ಅಂಟಿಕೊಂಡಿತು. "ಹೇ! ಸುಮಕ್ಕ ನೀ ಹೋಪಲಾಗ್ತಿಲ್ಲೆ.. ನಾ ಹೇಳಿದ್ನಿಲ್ಯ? ನೀ ಇವತ್ತು ಖಂಡಿತ ಹೋಗ್ತಿಲ್ಲೆ" ಎಂದು ಕುಣಿಯುತ್ತಿದ್ದ ತಮ್ಮನ ಮುಖವನ್ನೇ ಕನಿಕರದಿಂದ ನೋಡಿದಳು ಸುಮತಿ. ಅಷ್ಟರಲ್ಲೇ ಅವನ ಗೆಳಯ ಶಶಿ ಆಡಲು ಕರೆದ. ರಾಜು ನಿಶ್ಚಿಂತನಾಗಿ ಆತನ ಜೊತೆ ತೋಟಕ್ಕೆ ಓಡಿದ, ಹಿಂದಿನಿಂದ ಹುಶಾರು ಮಾಣಿ .. ಎಂದು ಕೂಗುತ್ತಿದ್ದ ಅಮ್ಮನನ್ನೂ ನೋಡದೇ.
---
ಇತ್ತ ಬಸ್ಸಿಗೆ ಇನ್ನೂ ಸಮಯವಿರಲು ತುಸುವೇ ದೂರದಲ್ಲಿದ್ದ ಊರಿನ ಶಿವನ ದೇವಸ್ಥಾನಕ್ಕೆ ಹೋದಳು ಸುಮತಿ. ರಾಜುವಿನ ಹೆಸರಿನಲ್ಲಿ ಹಣ್ಣು-ಕಾಯಿ ಮಾಡಿಸಿಕೊಂಡು ದಾರಿಯಲ್ಲಿ ಸಿಕ್ಕ ಪರಿಚಿತರೊಡನೆ ಕುಶಲೋಪರಿ ಕೇಳಿತ್ತಾ ಮನೆಯಕಡೆ ಹೊರಟಳು. ದೂರದಲ್ಲೇಲ್ಲೋ ಗುಡುಗಿನ ಸದ್ದು, ಕೋಲ್ಮಿಂಚೊಂದು ಕಂಡು ಮತ್ತೆ ಮಳೆಯಾರ್ಭಟದ ಸೂಚನೆಯಾಗಲು ನಡಿಗೆಯನ್ನು ವೇಗಗೊಳಿಸಿದಳು. ದಣಪೆಯ ಬಳಿ ಬರುವಾಗ ಪಕ್ಕದ ಮನೆಯವರು ಮುಂದಿದ್ದ ತೋಟದಿಂದ ಮೇಲೇರಿಬರುತ್ತಿದ್ದರು. ಎಲ್ಲರ ಮುಖದಲ್ಲೂ ಪ್ರೇತಕಳೆ. ರಾಜುವಿನ ಜೊತೆ ಆಡುತ್ತದ್ದ ಶಶಿ ಜೋರಾಗಿ ಅಳುತ್ತಿದ್ದರೆ, ಅವನಮ್ಮ ಅಪ್ಪಿಕೊಂಡು ಸಂತೈಸುತ್ತಿದ್ದಳು. "ಎಂತ ಆತೋ ಶಶಿ? ಎಂತಕ್ಕೆ ಅಳ್ತೆ? ರಾಜು ಎಂತಾರು ಅಂದ್ನಾ? ಎಲ್ಲಿ ರಾಜು?" ಸುಮಳ ಪ್ರೆಶ್ನೆಗಳಿಗೆ ಉತ್ತರಿಸುವ ಬದಲು ಶಶಿ ಮತ್ತಷ್ಟೂ ಜೋರಾಗಿ ಅಳತೊಡಗಿದ. ಅವನಮ್ಮ ಕಣ್ತುಂಬಿ ಕೊಂಡು "ಸುಮ ನೀ ಈಗ ದೈರ್ಯ ತಂದಕಳವು. ಆಯಿ ಅಪ್ಪಯ್ಯನ ನೀನೇ ಸಮಾಧಾನಿಸವು. ಆಡ್ಬೇಕಿರೆ ಶಶಿ ಎಷ್ಟು ಬೇಡ ಅಂದ್ರೂ ರಾಜು ಬಾವಿನ ಬಗ್ಗಿ ನೋಡಲೆ ಹೋದ್ನಡ. ದಂಡೆ ರಾಶಿ ತಗ್ಗದಲ್ಲಿದ್ದಲಿ, ಮಳೆಬಂದು ಪಾಚಿಗಟ್ಟಿತ್ತು ಬೇರೆ.. ಅದ್ರ ಮೇಲೆ ಕಾಲು ಜಾರಿ ಬಾವಿಯೊಳಗೆ ಬಿದ್ನಡ. ನೀರು ಬೇರೆ ರಾಶಿ ಇತ್ತು. ಈಗಷ್ಟೇ ಮೇಲೆತ್ತಿ ಕಾರಲ್ಲಿ ಶಿರಸಿಗೆ ತಗ ಹೋದ. ಮೂಲೆ ಮನೆ ಶಿವ ಡಾಕ್ಟ್ರು ಆಸೆ ಇಲ್ಲೆ ಹೇಳಿದ್ರು. ಆದ್ರೂವಾ ದೇವ್ರು ದೊಡ್ಡಂವ ಕಾಯ್ತ .." ಇನ್ನೂ ಏನೋ ಹೇಳುತ್ತಲೇ ಇದ್ದಳು ಆಕೆ.. ಆದರೆ ಅದಾವುದನ್ನೂ ಕೇಳುವ ಸ್ಥಿಯಲ್ಲೇ ಇರಲಿಲ್ಲ ಸುಮತಿ. ಕಣ್ಮುಂದೆ ಸಂಜೆ ತಮ್ಮ ಬಿಟ್ಟ ಕಾಗದವು ನೀರಲ್ಲಿ ಸುರುಳಿಯಾಗಿ ಸುತ್ತಿ ನಿಂತು ,ಕಲ್ಲಿಗೆ ಬಡಿದ ದೃಶ್ಯವೇ ಕುಣಿಯತೊಡಗಿತು. "ಹೇ! ಸುಮಕ್ಕ ನೀ ಹೋಪಲಾಗ್ತಿಲ್ಲೆ.. ನಾ ಹೇಳಿದ್ನಿಲ್ಯ? ನೀ ಇವತ್ತು ಖಂಡಿತ ಹೋಗ್ತಿಲ್ಲೆ ...ಕಾಗ್ದ ಮುಂದೆ ಹೋಜಿಲ್ಲೆ.." ತಮ್ಮನ ಈ ಮಾತುಗಳೇ ಕಿವಿಯೊಳಗೇ ಮೊರೆಯತೊಡಗಿದವು.. ಸಿಡಿಲು ಬಡಿದಂತಾಗಿ ಸುಮತಿ ಅಲ್ಲೇ ಕುಸಿದಳು.
---
---***---

23 ಕಾಮೆಂಟ್‌ಗಳು:

Shashi Dodderi ಹೇಳಿದರು...

Gives good details about havyaka life. But whole things run in the expected/anticipated line more drama and deapth should be brought in,if possible read Videhi or Vasumathi Udupa......... keep writing

Unknown ಹೇಳಿದರು...

ಓದಿ ಬಹಳ ಬೇಜಾರಾಯ್ತು. ಕಥೆಯ ಭಾಷೆ, ಚಿತ್ರಣ ಮತ್ತು ನೈಜತೆ ಮನಸ್ಸನ್ನು ಕಲಕಿತು.
ಹೀಗೆ ಬರೀತಾ ಇರಿ.
~ಮಧು

ತೇಜಸ್ವಿನಿ ಹೆಗಡೆ ಹೇಳಿದರು...

Mr. Nostalgia,

Thanks a lot for your valuable suggestions. Definitely I will consider ur suggestions. I had read “Vaidehi Kathegalu”. In fact I am inspired by her very much. Soon I will read Vasumathi Udupa’s Book also. Recently I read her Kadambari “Paribhramana” in Taranga. Keep sending ur precious suggestions and thanks for your encouragement.

ತೇಜಸ್ವಿನಿ ಹೆಗಡೆ ಹೇಳಿದರು...

ತುಂಬಾ ಧನ್ಯವಾದಗಳು ಮಧು..ಪ್ರೋತ್ಸಾಹ ಹೀಗೇ ಇರಲಿ.

ರಾಜೇಶ್ ನಾಯ್ಕ ಹೇಳಿದರು...

ಅಕ್ಕ ತಮ್ಮನ ಪ್ರೀತಿಯನ್ನು ತಿಳಿದುಕೊಳ್ಳುತ್ತಲೇ ರಾಜುನ ಸಾವಿನಲ್ಲೇ ಕತೆ ಕೊನೆಗೊಳ್ಳಬಹುದು ಎಂಬ ಆತಂಕ ಇತ್ತು. ಸುಮಾನ ಪಾತ್ರ ಮೆಚ್ಚಿದೆ. ಇಂತಹ ಚೆನ್ನಾಗಿರುವ ಇನ್ನಷ್ಟು ಬರಹಗಳು ಬರಲಿ...

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜಸ್ವಿನಿ ಅವರೆ...

ಮನವನ್ನು ಹಿಂಡಿ ಕಣ್ಣೀರ ಬಳಿಸುವ ಬರಹ. ಮನ ಭಾರವಾಯ್ತು ನೀರಲ್ಲಿ ನೆನೆದು ಮುಳುಗುವ ಕಾಗದದ ಹಾಗೆ.

ತೇಜಸ್ವಿನಿ ಹೆಗಡೆ ಹೇಳಿದರು...

ರಾಜೇಶ್ ನಾಯ್ಕರೆ ಹಾಗೂ ಶಾಂತಲಾ,

ತುಂಬಾ ಧನ್ಯವಾದಗಳು. ಕಥೆಯ ಎಳೆ ನಿಜವಾದದ್ದು. ಹಾಗಾಗಿ ತೀರಾ ನಾಟಕೀಯತೆ ಕೊಡಲು ಮನಸ್ಸೊಪ್ಪಲಿಲ್ಲ. ಇನ್ನು ಕಥೆಗೆ ಆಳ ಕೊಡಲು ಪಾತ್ರಗಳು ಅವಕಾಶ ಕೊಡಲಿಲ್ಲ. ಬರುತ್ತಾ ಇರಿ.

dinesh ಹೇಳಿದರು...

kathe chennagide.....

ನಾವಡ ಹೇಳಿದರು...

ತೇಜಸ್ವಿನಿಯವರೇ,
ನಿಮ್ಮ ಈ ಕಥೆಯಲ್ಲದೇ ಉಳಿದ ಪೋಸ್ಟ್ ಗಳನ್ನೂ ಓದಿದೆ. ಚೆನ್ನಾಗಿವೆ.
ಅಂಥ ತಮ್ಮನಿಲ್ಲದೇ ಅಕ್ಕ ತಬ್ಬಲಿಯಾದದ್ದು ಬೇಸರವೆನಿಸಿತು. ಇನ್ನೂ ಡಾಕ್ಟರ್ ಫ್ಯೈನಲ್ ಹೇಳಿಲ್ಲ ಅಲ್ವಾ ? ಶಿರಸಿಗೆ ಹೋದವನು ಹಾಗೆಯೇ ಉಳಿಯಲಿ ಎಂಬುದು ಆಶಯ.

ನಾವಡ

ತೇಜಸ್ವಿನಿ ಹೆಗಡೆ ಹೇಳಿದರು...

ನಾವಡರೇ,
ಮೆಚ್ಚಿಕೊಂಡದ್ದಕ್ಕೆ ತುಂಬಾ ಧನ್ಯವಾದಗಳು. ಕಥೆಯ ಕೊನೆಯನ್ನು ಓದುಗರಿಗೇ ಬಿಟ್ಟಿದ್ದೇನೆ. ತಮಗೆ ಹಿತವೆನಿಸುವ ರೀತಿ ಅರ್ಥೈಸಿಕೊಳ್ಳಬಹುದು.

ಪಯಣಿಗ ಹೇಳಿದರು...

Good story line. A nice reflection of the sweet Havyaka language.

I know some people like stories with multiple layers/faces etc...

...aadare, bhaavanegalanna bhaasheyalli, adoo Havyaka kannadadalli, hidididuva kale mukhya...adu nimage chennagi olidide....

heege bareeta iri....

ತೇಜಸ್ವಿನಿ ಹೆಗಡೆ ಹೇಳಿದರು...

ಪಯಣಿಗರೆ,

ತುಂಬಾ ಧವ್ಯವಾದಗಳು. ನಿಮ್ಮ ಈ ಪ್ರೋತ್ಸಾಹ ಸದಾ ನನ್ನೊಡನಿರಲಿ. ಸಲಹೆಗಳೇನಾದರೂ ಇದ್ದರೆ ಸ್ವಾಗತ.

thandacool ಹೇಳಿದರು...

kathe cholo iddu.salugeyannu padeda ketta kiladiya konga huduga, avana kongatanave chenda ennuva akka.e ritiya baandhavyadalli intaha gataneyadare karulu hindi battu. ille ello nadeda ghatane anistu.balasida gramya bhasha shaili best iddu. NIYATI ivattu ondu olle kathe odida hangatu. cholo kathe kottidakke thanks.mattonto uttama katheya niriksheyalli irti.

Nagaraj Mattigar

sunaath ಹೇಳಿದರು...

ಮನ ಮಿಡಿಯುವ ಕತೆ.

ತೇಜಸ್ವಿನಿ ಹೆಗಡೆ ಹೇಳಿದರು...

@ ನಾಗರಾಜರೆ,
ತುಂಬಾ ಧನ್ಯವಾದಗಳು. ಕಥೆಯ ಎಳೆ ನಿಜವಾದದ್ದೆ. ನಮ್ಮೂರಲ್ಲೇ ನಡೆದದ್ದು. ನಮ್ಮೂರ ಹೆಸರಿನ ಬದಲು ನಿಮ್ಮೂರ ಹೆಸರು ಕೊಟ್ಟೆ. ಪ್ರೋತ್ಸಾಹ ಹೀಗೇ ಇರಲಿ.

@ ಸನತ್ ಅವರೆ,

ಮಾನಸಕ್ಕೆ ಸ್ವಾಗತ. ತಮ್ಮ Busy..Livingನಲ್ಲೂ ಬಂದು ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ;-) ಆಗಾಗ ಬರುತ್ತಿರಿ.

- ತೇಜಸ್ವಿನಿ ಹೆಗಡೆ.

ಅಂತರ್ವಾಣಿ ಹೇಳಿದರು...

ನಿಮ್ಮ ಶಿರಸಿ ಭಾಷೆ ಚೆನ್ನಾಗಿತ್ತು.ಓದಿ ಹೊಸ ಅನುಭವವಾಯಿತು. ರಾಜೇಶ ಬರೆದ ಪತ್ರವಂತೂ ನಿಜವಾಗಲು ಪುಟ್ಟ ಹುಡುಗ ಬರೆದಿರೋಹಾಗಿತ್ತು.
ಕಥೆಯ ಅಂತ್ಯ ಏನಾಗುತ್ತೋ ಅಂತಾನೆ ಓದುತ್ತಾಯಿದ್ದೆ. ಇನ್ನೂ ಗೊಂದಲಮಯವಾಗಿದೆ.

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

Beautiful story tejeshwani

ಸುಪ್ತದೀಪ್ತಿ suptadeepti ಹೇಳಿದರು...

ತೇಜು, ಕಥೆ ಚೆನ್ನಾಗಿದೆ. ನೈಜ ಘಟನೆಗೆ ಕಥನದ ನೇಯ್ಗೆ..

ತೇಜಸ್ವಿನಿ ಹೆಗಡೆ ಹೇಳಿದರು...

@ಶಂಕರ್
ಧನ್ಯವಾದಗಳು. ಕತೆಯ ಅಂತ್ಯ ಓದುಗರಿಗೇ ಬಿಟ್ಟಿದ್ದೇನೆ.... ಆಗಾಗ ಬರುತ್ತಿರಿ.

@ತಿಪ್ಪಾರರೆ ಹಾಗೂ ಜ್ಯೋತಿಯವರೆ,
ಓದಿ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು. ಪ್ರೋತ್ಸಾಹ ಹೀಗೇ ಇರಲಿ.

ಶರಶ್ಚಂದ್ರ ಕಲ್ಮನೆ ಹೇಳಿದರು...

ಅಕ ಕಥೆ ಚನಾಗಿದ್ದು. ರಾಜು ಶಿರ್ಸಿಗೆ ಹೋಯ್ದ್ನಲೆ, ಅವಂಗೆಂತು ಆಗ್ತಲ್ಲೆ. ಕಥೆ ನಿರೂಪಣಾ ಶೈಲಿ ಚನ್ನಾಗಿದ್ದು.

ತೇಜಸ್ವಿನಿ ಹೆಗಡೆ ಹೇಳಿದರು...

ಶರಶ್ಚಂದ್ರರೆ,

ಮಾನಸಕ್ಕೆ ಸ್ವಾಗತ. ಕಥೆ ಮೆಚ್ಚಿ ಪ್ರತಿಕ್ರಿಯಿಸಿದುದಕ್ಕೆ ತುಂಬಾ ಧನ್ಯವಾದಗಳು. ಬರುತ್ತಿರಿ.

MD ಹೇಳಿದರು...

ನನಗೆ ನಿಮ್ಮ ಈ ಮಲೆನಾಡು ಕನ್ನಡ ಸಂಪೂರ್ಣ ಅರ್ಥವಾಗೋಲ್ಲ. ಹಾಗೂ ಹೀಗೂ ಎರಡೆರಡು ಸಾರಿ ಶಬ್ದಗಳನ್ನುಚ್ಛರಿಸಿ ಓದುತ್ತ ಕೊನೆ ತಲುಪಿದೆ.
ಭಾವಪೂರ್ಣವಾಗಿದೆ.ರಾಜುವಿನ ಪತ್ರ ಮನಸಿಗೆ ಬಹಳ ಹಿಡಿಸಿತು.
ತಾನು ಹೋಗುವಾಗ ಅತ್ತರೆ ಸಮಾಧಾನಿಸಲೆಂದೇ ಅದನ್ನು ಈವರೆಗೂ ಮುಚ್ಚಿಟ್ಟಿದ್ದ ಚಾಕೊಲೇಟ್ ನ ಎಳೆ ವಾವ್.
ಆದ್ರೆ ಕಥೆಯ ಕೊನೆ ಮಾಡಿದ ಬಗ್ಗೆ ಮಾತ್ರ ಅಸಹನೆ ಇದೆ.
ಒಟ್ಟಾರೆ ಸುಂದರವಾದ ಕಥೆ.

ತೇಜಸ್ವಿನಿ ಹೆಗಡೆ ಹೇಳಿದರು...

ಎಂ.ಡಿ ಅವರೆ,

ಮೆಚ್ಚುಗೆಗೆ ತುಂಬಾ ಧನ್ಯವಾದಗಳು.. ನಿಯತಿ = ವಿಧಿ ಅದು ನಾವೆಂದುಕೊಂಡಷ್ಟು ಸರಳವೂ ಅಲ್ಲ.. ಸುಖಮಯವೂ ಅಲ್ಲ. ಅದೂ ಅಲ್ಲದೆ ಸತ್ಯಕ್ಕೆ ಕಲ್ಪನೆಯ ಮರುಗೇ ಮಾನಸ.. ಹಾಗಾಗಿ ಕಥೆಯ ಕೊನೆಯೂ ಹಾಗಿದೆ. ಬರುತ್ತಿರಿ.