( ನನ್ನೀ ಪುಟ್ಟ ಕತೆಯನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ’ತರಂಗ’ ವಾರಪತ್ರಿಕೆಗೆ ಧನ್ಯವಾದಗಳು.)
ಇಂಬಕ್ಕ
"ತೇಜು ಇನ್ನ ಬೇಕಾದ್ರೆ ಎದ್ಕಳ್ಲಕ್ಕೇ ಮನೆ ಹತ್ರ ಬಂತು, ಇನ್ನು ಮನಿಗ್ಹೋಗೆ ಮಲ್ಗಲಕ್ಕೂ" ಎಂಬ ಅಪ್ಪನ ಎಚ್ಚರಿಸುವಿಕೆಯಿಂದಲೇ ನನಗರಿವಾದದ್ದು ನಾನಿರುವುದು ಕಾರಿನಲ್ಲಿ ಎಂದು. ಪ್ರಯಾಸದಿಂದ ಕಣ್ಣು ಬಿಟ್ಟು ವಾಚ್ ನೋಡಿದರೆ ಗಂಟೆ ಆರು ಆಗಿತ್ತು. ಮಧ್ಯಾಹ್ನ ಒಂದು ಗಂಟೆಗೇ ಮಂಗಳೂರಿನಿಂದ ಹೊರಟಿದ್ದರೂ ಶಿರಸಿ ಮುಟ್ಟುವಾಗ ಐದು ತಾಸು ಬೇಕಾಯಿತೇ ಎಂದು ಆಶ್ಚರ್ಯವಾಯಿತು. ಅಷ್ಟೂ ಹೊತ್ತು ಒಂದೇ ಭಂಗಿಯಲ್ಲಿ ಕುಳಿತಿದ್ದರಿಂದ ಮೈಯನ್ನೆಲ್ಲಾ ಒಂದು ತರಹ ಜಡತ್ವ ತುಂಬಿದಂತಾಗಿತ್ತು. ಅದನ್ನು ನೀಗಿಸಲು ಕಾರಿನ ಕಿಟಿಗಿ ಗಾಜನ್ನು ತೆಗೆದೆ,ಕೂಡಲೇ ಘಟ್ಟದ ತಂಪಾದ ಮುಸ್ಸಂಜೆ ಗಾಳಿ ರೊಯ್ಯನೆ ತೂರಿ ಬಂದು ಮೈ ಮನವನ್ನೆಲ್ಲಾ ಉಲ್ಲಾಸಗೊಳಿಸಿತು. ಆಗಲೇ ಕಾರು ಮನೆಯ ದಣಪೆಯ ಮುಂದೆ ನಿಂತಾಗಿತ್ತು.
ಬಪ್ಪ ಅಂದಿ, ದೊಡ್ಡಾಯಿ ಅಂದಿ, ತೇಜಕ್ಕ ಅಂದಿ, ಪಯಕ್ಕ ಅಂದಿ ಎಂಬ ಮಕ್ಕಳ ಮಾತಾಡಿಸುವಿಕೆ, ದೊಡ್ಡವರ ಕುಶಲೋಪಚಾರಗಳ ಗಲಾಟೆಯೊಂದಿಗೆ ಮನೆಹೊಕ್ಕಾಯಿತು. ಸುಮಾರು ಅರ್ಧ ಗಂಟೆ ಇಡೀ ಮನೆತುಂಬಾ ನಗುವಿನ ಅಲೆಯೇ ತುಂಬಿತು. "ನಿಂಗಕಗೆಲ್ಲಾ ಆಸ್ರಿಗೆ ಎಂತ ಅಕ್ಕು?" ಎಂಬ ಚಿಕ್ಕಮ್ಮನ ಪ್ರೆಶ್ನೆಯಿಂದಲೇ ಎಲ್ಲರ ಯೋಚನೆಯೂ ಅತ್ತ ಹರಿದಿದ್ದು. ಊರಿಗೆ ಬಂದರೆ ಸಾಕು ಚಿಕ್ಕಪ್ಪನ ಮಕ್ಕಳು, ಅತ್ತೆಯ ಮಕ್ಕಳು, ಎಲ್ಲರೂ ಸುಮಾರು ಒಂದೇ ವಯಸ್ಸಿನವರಾದ್ದರಿಂದ ಮಾತು ಕತೆ ನಗು, ಹರಟೆಗೆ ಕೊನೆಯೇ ಇರುವುದಿಲ್ಲ. ಊಟ, ತಿಂಡಿ, ನಿದ್ದೆ ಎಲ್ಲವನ್ನೂ ದೊಡ್ಡವರು ಒವ್ಮೊಮ್ಮೆ ನೆನಪಿಸಬೇಕಾಗುತ್ತಿತ್ತು. ಈಗಲೂ ಅಷ್ಟೇ.. ನಾವೆಲ್ಲಾ ಊರ ಸುದ್ದಿಗಳಿಗಾಗಿ ಒಂದೆಡೆ ಸೇರಿಯಾಯಿತು. ನಾನು ನನ್ನ ತಂಗಿಯಂದಿರು ವರ್ಷಕ್ಕೆ ಒಂದೆರೆಡು ಸಲ ಮಾತ್ರ ಬರುವವರಾಗಿದ್ದರಿಂದ ಬಹಳಷ್ಟುಪಾಲು ಸುದ್ದಿಗಳನ್ನು ಮನೆಯವರು ಹೇಳುವುದೇ ಆಗಿತ್ತು. ನಾವು ಬರೇ ಕೇಳುಗರು. ಅಲ್ಲಿ ಈಗಾಗಲೇ ಹಳತಾಗಿದ್ದ ಸುದ್ದಿಗಳೆಲ್ಲ ನಮ್ಮ ಪಾಲಿಗೆ ಹೊಸ ಸುದ್ದಿಗಳಾಗಿರುತ್ತಿದ್ದವು.
ಮಾತುಮಾತಿನಮೇಲೆ ನನ್ನ ಅತ್ತೆಯ ಮಗಳು ಮೆಲ್ಲನೆ ಇಳಿದನಿಯಲ್ಲಿ ತೇಜು ನಿಂಗಕಗೆ ಗೊತ್ತಿದ್ದೋ ಇಲ್ಯೋ, ಪಕ್ಕದ ಮನೆ ಇಂಬಕ್ಕ ಒಂದು ತಿಂಗಳ ಹಿಂದೆ ತೀರ್‍ಹೋತು ಎಂದಳು. ಮೊದಲು ನಾನು ಆಕೆ ಯಾರ ಕುರಿತು ಹೇಳುತ್ತಿದ್ದಾಳೆಂದೇ ತಿಳಿಯಲಾಗಲಿಲ್ಲ. "ಯಾರು ಗಪ್ಪ ತ್ತೆ ಮಗ್ಳು ಇಂಬಕ್ಕನೇಯಾ?" ಎಂದು ಒತ್ತಿಕೇಳಿದೆ. "ಹೌದೇ ಅದೇಯಾ ಮತ್ಯಾರು ಮಾಡ್ಕಂಡೆ ಈ ಊರಲ್ಲಿದ್ದುದು ಒಂದೇ ಇಂಬಕ್ಕಲ್ದ ಮಳ್ಳು?" ಎಂದು ಹಾಸ್ಯ ಮಿಶ್ರಿತವಾಗಿ ನುಡಿದಳು. ನನಗೆ ನಂಬಲೇ ತುಸು ಕಷ್ಟವಾಯಿತು. ಮಹಾ ಅಂದರೆ ಇಪ್ಪತ್ತೆಂಟು ವರ್ಷವಾಗಿದ್ದಿರಬೇಕು. ಮೇಲಾಗಿ ಆರು ವರ್ಷದ ಚಿಕ್ಕ ಹೆಣ್ಣು ಮಗು ಬೇರೆ. ಇದನ್ನೆಲ್ಲಾ ನೆನೆದು ಹೊಟ್ಟೆಯಲ್ಲಿ ಏನೋ ತಳಮಳ ಆರಂಭವಾಯಿತು.ನಾನು ಆಕೆಯನ್ನು ನೋಡದೇ, ವಿಚಾರಿಸದೇ ಹಲವು ವರ್ಷಗಳೇ ಸಂದಿದ್ದರೂ ಆ ಕ್ಷಣ ನನ್ನ ಅತೀ ಹತ್ತಿರದ, ಆಪ್ತ ವ್ಯಕ್ತಿಯೊಬ್ಬರ ಅಗಲುವಿಕೆಯಿಂದ ಉಟಾಗುವ ನೋವು ಸಂಕಟ ನನ್ನಲ್ಲಿ ಉಂಟಾಯಿತು. ನಾನು ಬಾಲ್ಯದಲ್ಲಿ ಆಕೆಯೊಂದಿಗೆ ಕಳೆದ ಹಲವು ಸಿಹಿ ನೆನಪುಗಳು ಸಾಗರದಲೆಯಂತೆ ಬಂದಪ್ಪಳಿಸತೊಡಗಿದವು. ಅಂದಿನ ದಿನಗಳಲ್ಲಿ ಇಂಬಕ್ಕ ನನ್ನೊಡನೆ ಮಗುವಾಗಿ ಆಡುತ್ತಿದ್ದುದು, ನನಗಾಗಿ ಹಲವು ಬಗೆಯ ತಿಂಡಿಗಳನ್ನು ತರುತ್ತಿದ್ದುದು ನೆನಪಿಗೆ ಬಂದು ಮನ ವ್ಯಾಕುಲಗೊಂಡಿತು.
ಈವರೆಗೆ ನಗು, ಹರಟೆಯಲ್ಲಿ ಎಲ್ಲೋ ಅಡಗಿದ್ದ ಪ್ರಯಾಣದ ಆಯಾಸ ಒಮ್ಮೆಲೇ ಮೈ ಮನವನ್ನೆಲ್ಲಾ ಆವರಿಸತೊಡಗಿತು. ಊಟಕ್ಕೆಂದು ಬಾಳೆ ಎಲೆ ಸಿದ್ಧವಾಗಿತ್ತು. ಆದರೆ ಇಂಬಕ್ಕನ ಸಾವಿನ ವಾರ್ತೆ ಯಿಂದ ಏನೊಂದೂ ಬೇಡವೆಂದಿನಿಸಿತು. ಸೀದಾ ಅಮ್ಮನ ಕರೆದೆ ಅಮ್ಮ ನಂಗೆ ತುಂಬಾ ಸುಸ್ತು ಅನಸ್ತು, ಆನು ಮನಕ್ಯತ್ತಿ, ಉಟಕ್ಕೆಬ್ಸಡ, ಆಸ್ರಿನೇ ಸಾಕಷ್ಟಾತು ಎಂದು ಆಕೆಯ ಪ್ರತ್ಯುತ್ತರಕ್ಕೂ ಕಾಯದೇ ಉಳಿದವರಿಗೆ ಆಯಾಸದ ಸಬೂಬು ಹೇಳಿ ಜಗುಲಿಗೆ ಬಂದು ಬಿಟ್ಟೆ. ನಾನು ಮಲಗಲು ತಯಾರಿ ನಡೆಸುತ್ತಿರುವುದನ್ನು ಅಲ್ಲೇ ಮಂಚದ ಮೇಲಿದ್ದ ಅಜ್ಜಿ ಗಮನಿಸುತ್ತಿದ್ದಳು. "ಈಗ ಊಟಕ್ಕಾಗಿತ್ತು, ಉಂಡ್ಕಂಡು ಮಲ್ಗಲಾಗ್ದಾ?" ಎಂಬ ಆಕೆಯ ಕಳಕಳಿಯೂ ಊಟದ ಕಡೆ ಗಮನ ಸೆಳೆಯಲಿಲ್ಲ. ಹಸ್ವಿಲ್ಲೆ ಆಯಮ್ಮ ಆಸ್ರಿಗೆ ತಗಂಜಿ ಎಂದು ಚುಟುಕಾಗಿ ಉತ್ತರಿಸಿ ಹಾಸಿಗೆಗೊರಗಿದೆ. ದೇಹ, ಮನಸ್ಸು ಎರಡೂ ಬಳಲಿದ್ದರೂ ನಿದ್ದೆಯ ಸುಳಿವೇ ಇರಲಿಲ್ಲ. ಮನಸನ್ನೆಲ್ಲಾ ಇಂಬಕ್ಕನ ಅಸ್ಪಷ್ಟ ಮುಖವೇ ತುಂಬಿತ್ತು. ಆಕೆಯನ್ನು ನೋಡದೇ ಭೇಟಿ ಮಾಡದೇ ಸುಮಾರು ಎಂಟು ವರ್ಷಗಳೇ ಸಂದಿದ್ದವು. ಈ ನಡುವೆಯೇ ಆಕೆಯ ಮದುವೆಯಾಗಿ ಒಂದು ಮಗುವೂ ಆಗಿತ್ತು. ಬಂದಾಗಲೆಲ್ಲಾ ಕೇವಲ ಆಕೆಯ ಕುರಿತು ವಿಷಯಗಳು ಮಾತ್ರ ಸಿಕ್ಕಿದ್ದವೇ ಹೊರತು, ಆಕೆಯನ್ನು ಕಾಣಲಾಗಿರಲಿಲ್ಲ. ಆಕೆಯನ್ನು ಕೊನೆಗೂ ನೋಡಲಾಗಲಿಲ್ಲವಲ್ಲ ಎಂಬ ಕೊರಗೂ ಮೂಡತೊಡಗಿತು. ನಿದ್ದೆಯ ಬದಲು, ಗತಕಾಲದ ನೆನಪುಗಳೇ ಸಿನಿಮಾದ ರೀಲಿನಂತೇ ಬರತೊಡಗಿದವು.
ನಮ್ಮ ಮೂಲ ಮನೆಯ ಪಕ್ಕದಲ್ಲಿಯೇ ಇಂಬಕ್ಕನ ಮನೆ. ನಿಜ ನಾಮ ವಿಮಲ. ನಮ್ಮೆಲ್ಲರ ಪಾಲಿಗೆ ಇಂಬಕ್ಕ ಎಂದಿನಿಸಿದ್ದಳು. ತಂದೆ, ತಾಯಿಯರಿಗೆ ಒಬ್ಬಳೇ ಮಗಳು. ತಾಯಿ ಪ್ರಾಪಂಚಿಕ eನವಿಲ್ಲದ ಮುಗ್ಧೆ. ತಂದೆ ಏನೊಂದೂ ಅಧಿಕಾದವಿಲ್ಲದವ. ಒಬ್ಬ ಅಪ್ರಯೋಜಕ ಅಣ್ಣ. ಸದಾ ಜೂಜು, ಹೊಡೆತ, ಬೈಗುಳದಲ್ಲೇ ಆತನ ದಿನದ ಆರಂಭ. ತಂದೆ -ತಾಯರೆಂಬ ಭಯವಾಗಲೀ, ತಂಗಿಯೆಂಬ ಪ್ರೇಮವಾಗಲೀ ಇನಿತೂ ಇಲ್ಲದವ. ಒಬ್ಬ ತಮ್ಮ. ಆತನೂ ಅಷ್ಟಕಷ್ಟೇ. ಅಣ್ಣನಂತೆ ದುಷ್ಟನಲ್ಲದಿದ್ದರೂ ಏನೊಂದೂ ಕೆಲಸವನ್ನೂ ಮಾಡದೆ ಸುಮ್ಮನೆ ಕುಳಿತಿರುವವ. ಮನೆಯಲ್ಲೋ ಕಡು ಬಡತನ. ಇಂತಹ ಪರಿಸರದಲ್ಲಿ ಇಂಬಕ್ಕ ಕೆಸರು ಗೊಳದಲ್ಲಿರುವ ತಾವರೆಯಂತಿದ್ದಳು. ಆಗತಾನೇ ಕನಸುಗಳು ಮೂಡುವ, ಅರಳುವ ವಯಸ್ಸು. ಆದರೆ ಆಕೆಯ ಪರಿಸರ, ಮನೆಯವರ ವರ್ತನೆ ಅರಳುವ ಆಕೆಯ ಮನಸ್ಸನ್ನು ಅಲ್ಲೇ ಮುದುಡಿಸತೊಡಗಿದ್ದವು. ಆಗ ನನಗೆ ಕೇವಲ ಎಂಟು ವರ್ಷ ಆಕೆಗೆ ಹದಿನೆಂಟು. ಆದರೆ ವಯಸ್ಸಿಗೂ ಮೀರಿ ನಮ್ಮಿಬ್ಬರ ನಡುವೆ ಒಂದು ಆತ್ಮೀಯ ಸಂಬಂಧ ಮೂಡಿತ್ತು. ಯಾವೊಂದು ಹೆಸರಿಗೂ ನಿವುಕದ ಭಾವ ಸಂಬಂಧವಾಗಿತ್ತು.
ಊರಿಗೆ ಬಂದಾಗ ಅಪ್ಪ ನನ್ನನ್ನು ತೋಟಕ್ಕೆ ಒಯ್ದು ಅಲ್ಲೇ ಕೂರಿಸಿಕೊಂಡು ಅಡಿಕೆ ಆರಿಸುವಾಗಲೋ, ಏಲಕ್ಕಿ ಕೊಯ್ಯುವಾಗಲೋ, ಅದೆಲ್ಲಿಂದಲೋ ಇಂಬಕ್ಕನ ಪ್ರತ್ಯಕ್ಷವಾಗುತ್ತಿತ್ತು. ಆಕೆಗೆ ನನ್ನಲ್ಲಿ ಅದೇನು ಆಕರ್ಷಣೆಯೋ, ಮನೆಯಲ್ಲಿ ನನ್ನ ಓರಿಗೆಯವರೇ ಆದ ಹಲವು ಮಕ್ಕಳಿದ್ದರೂ ಅಪರೂಪಕ್ಕೆಲ್ಲೋ ಬರುತ್ತಿದ್ದ ನಾನೆಂದರೆ ತುಂಬಾ ಇಷ್ಟ. ನನಗೂ ಅಷ್ಟೆ ಆಕೆಯ ಜೊತೆ ಆಡುವುದೆಂದರೆ ಬಲು ಪ್ರೀತಿ. "ಗೋಪಾಲಣ್ಣ ಆನು ತೇಜುನ ಕರ್‍ಕ ಹೋಗ್ತಿ. ದೂರೇನೂ ಅಲ್ಲ ಇಲ್ಲೇ ಹಿತ್ತಲಿಗೆ. ಅದ ಇಲ್ಲಿದ್ದು ಏ ಮಾಡ್ತು.. ಎನ್ ಮಾಡ್ತು? ಬೇಜಾರ್ ಬತ್ತು". ಎಂದು ಹೇಳಿ ಅಪ್ಪನ ಉತ್ತರಕ್ಕೂ ಕಾಯದೆ ನನ್ನ ಎತ್ತಿಕೊಂಡು ಬಂದಷ್ಟೇ ವೇಗದಲ್ಲಿ ಮಾಯವಾಗುತ್ತಿದ್ದಳು. ನಾನು ಇಂಬಕ್ಕ ಇಬ್ಬರೇ ತಾಸುಗಟ್ಟಲೇ ಆಡುತ್ತಿದ್ದೆವು. ಆಟದ ಜೊತೆ ಆಕೆ ಕೊಡುತ್ತಿದ್ದ ಉಪ್ಪು, ಹಸಿ ಮೆಣಸು ಒರಿಸಿದ್ದ ಸವತೆ ಮಿಡಿ, ಮೆಣಸು ಹಾಕಿ ಕಡ್ಡಿ ಸಿಕ್ಕಿಸಿ ಕೊಡುತ್ತಿದ್ದ ಹುಣಸೆ ಹಣ್ಣಿನ ಲೊಲಿ ಪಾ, ಇವಿಷ್ಟೇ ನನ್ನ ಪ್ರಪಂಚವಾಗಿ ಬಿಡುತ್ತಿದ್ದವು. ಸಹಜವಾಗಿ ಸುಂದರಿಯಾಗಿದ್ದ ಇಂಬಕ್ಕ ಆಗ ಮತ್ತೂ ಚೆನ್ನಾಗಿ ಕಾಣುತ್ತಿದ್ದಳು. ಆ ಸಮಯದಲ್ಲಿ ಅಪ್ಪನಾಗಲೀ, ಏಲಕ್ಕೀ ತೋಟವಾಗಲೀ, ಕೊನೆಯಲ್ಲಿ ಅಪ್ಪ ನನಗಾಗಿ ಕೊಡುತ್ತಿದ್ದ ಹಸಿ ಏಲಕ್ಕಿಯಾಗಲೀ ನೆನಪಿಗೇ ಬರಲೊಲ್ಲದು. ಮನೆಗೆ ಬಂದರೂ ಅಷ್ಟೇ ಯಾರೇನೂ ಹೇಳಿದರೂ ಕೇಳದೆ, ನಿಮಿಷವೂ ಕುಳಿತುಕೊಳ್ಳದೇ ನನ್ನ ಹಿಡಿದು ತೋಟದ ಕಡೆಗೋ ಹಿತ್ತಲ ಕಡೆಗೋ ಓಡುವಳು. ಜನರ ಕಂಡರೆ ಆಕೆಗೆ ಇರುವ ಅಸಮಾಧಾನ, ಅವರು ಹಾಕುವ ಅರ್ಥವಿಲ್ಲದ ಶ್ನೆಗಳು ಬಹುಶಃ ಆಕೆಯನ್ನು ಬೇರೆ ಯಾರೊಡನೆಯೂ ಬೆರೆಯದಂತೆ ಮಾಡಿದ್ದವು. ಮುಗ್ಧಳಾಗಿದ್ದ ನಾನು, ನನ್ನ ಮಾತುಗಳು ಅವಳಿಗೆ ಬಹಳ ಪ್ರಿಯವೆನ್ನಿಸಿದ್ದರೆ ಆಶ್ಚರ್ಯವೇನಲ್ಲ. ನಾನೂ ಅಷ್ಟೇ ಊರಿಗೆ ಬರುವಾಗಲೆಲ್ಲಾ ಇಂಬಕ್ಕನೊಂದಿಗೆ ಆಡುವುದನ್ನು ಎಣಿಸಿ ಸಂತಸಗೊಳ್ಳುತ್ತಿದ್ದೆ. ಆದರೆ ಕ್ರಮೇಣ ಸಮಯಕಳೆದಂತೆ ಕಾರಣಾಂತರಗಳಿಂದ ನಮ್ಮಿಬ್ಬರ ಭೇಟಿ ಕಡಿಮೆಯಾಗತೊಡಗಿತು. ನಾನು ಬೆಳೆದಂತೆಲ್ಲಾ ನನ್ನ ಓರಗೆಯವರ ಸಹವಾಸವೇ ಪ್ರಿಯವೆನಿಸತೊಡಗಿ ನಾನೂ ಆಕೆಯನ್ನು ಆಡಲು ಕರೆಯುವುದು ನಿಲ್ಲತೊಡಗಿತು.
ಆ ವರ್ಷ ನಾನು ಬಹಳ ಸಮಯದ ನಂತರ ಊರಿಗೆ ಬಂದಿದ್ದೆ. ಸದಾ ನಾನು ಬಂದಿರುವ ಸುದ್ದಿ ಕೇಳಿದ ಕೂಡಲೇ ಓಡಿ ಬರುತ್ತಿದ್ದ ಇಂಬಕ್ಕ ಒಂದು ದಿನ ಕಳೆದರೂ ಬರದಿದ್ದಾಗ ಆಶ್ಚರ್ಯಗೊಂಡೆ. ನಾನು ಊರಿಗೆ ಬರದೇ ವರ್ಷವಾಯಿತು. ಬಹುಶಃ ನನ್ನ ಮರೆತಿರಬಹುದು, ಇಲ್ಲಾ ನಾನು ಬಂದದ್ದೂ ಇನ್ನೂ ತಿಳಿದಿರಲಿಕ್ಕಿಲ್ಲ ಎಂದೆಲ್ಲಾ ಸಮಾಧಾನ ಪಟ್ಟುಕೊಂಡೆ. ಆದರೆ ಆಮೇಲೆ ತಿಳಿಯಿತು, ಇಂಬಕ್ಕನಿಗೆ ಮಾನಸಿಕ ಅಸ್ವಸ್ಥತೆ ಉಂಟಾಗಿ, ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಒಯ್ದಿದ್ದಾರೆ ಎಂದು. ಅಷ್ಟೇ ಆನಂತರ ಆಕೆಯನ್ನು ನೋಡಲೇ ಆಗಲಿಲ್ಲ. ಆದರೆ ಊರಿಗೆ ಬಂದಾಗಲೆಲ್ಲಾ ಆಕೆಯ ಕುರಿತು ವಿಚಾರಿಸುತ್ತಿದ್ದೆ. ಆಕೆ ಗುಣಮುಖಳಾಗಿ ಬಂದದ್ದು, ನಂತರ ಓದು ಮುಂದುವರಿಸಿದ್ದು, ನಂತರ ಒಬ್ಬ ಒಳ್ಳೆಯ ಹುಡುಗ ಆಕೆಯ ಕತೆಯನ್ನೆಲ್ಲಾ ತಿಳಿದೂ ಮೆಚ್ಚಿ ಮದುವೆಯಾಗಿ ಬೆಳಗಾಂವಿಯಲ್ಲಿರುವುದು, ಎಲ್ಲಾ ತಿಳಿದು ಸಮಾಧಾನಗೊಂಡು ಆಕೆಯನ್ನು ಭೇಟಿಯಾಗಲು ಆಗಲಿಲ್ಲವಲ್ಲ ಎಂಬ ಕೊರಗೂ ಮರೆಯಾಯಿತು. ಮದುವೆಯಾದ ಮೇಲೂ ಆಕೆ ಪುನಃ ಮನೋವ್ಯಾಧಿಗೆ ಸಿಲುಕಿದಾಗ, ಇನಿತೂ ಬೇಸರಿಸದೆ ಆಕೆಯ ಗಂಡ ಚಿಕಿತ್ಸೆ ನೀಡುತ್ತಿದ್ದಾನೆಂದು ತಿಳಿದು ನೆಮ್ಮದಿಯಾಗಿತ್ತು. ಆತನ ಪ್ರತಿ ಅರಿಯದಂತೆಯೇ ಅಪಾರ ಗೌರವ ಮೂಡಿತ್ತು. ಹೀಗೇ ಹಲವು ವರ್ಷಗಳೇ ಕಳೆದವು. ಆಕೆಯೂ ಕ್ರಮೇಣ ನನ್ನ ಮನಃ ಪಟಲದಿಂದ ಮರೆಯಾಗುತ್ತಿರುವಾಗ, ಈಗ ಧಿಡೀರನೆ ಇಂಬಕ್ಕನ ಸಾವಿನ ಸುದ್ದಿ ಸಿಡಿಲಿನಂತೆ ಬಂದಿತ್ತು.
ಏನಾಗಿತ್ತು? ಹೇಗೆ ತೀರಿಹೋದಳು, ಎಂಬುದನ್ನೂ ತಿಳಿಯದೆ ಬಂದೆನಲ್ಲಾ ಎಂದು ಹಳಿಯತೊಡಗಿದೆ. ಆದರೆ ಈಗ ಪುನಃ ಒಳಗೆ ಹೋಗುವಂತಿಲ್ಲ. ಎಲ್ಲರೂ ಊಟದ ಗಡಿಬಿಡಿಯಲ್ಲಿರುತ್ತಾರೆ. ನನ್ನ ಕಂಡರೆ ಎಲೆಯ ಮುಂದೆ ಕೂರಿಸುವುದು ಗ್ಯಾರಂಟಿ. ಅದೂ ಅಲ್ಲದೇ ಉಳಿದವರಿಗೆ ಈ ವಿಷಯದ ಚರ್ಚೆ ಅಷ್ಟೊಂದು ಉತ್ಸುಕವೆಸದಿರಬಹುದು, ಎಂದು ಎಣಿಸಿ ಸುಮ್ಮನುಳಿದೆ. ಆದರೂ ಮನಸ್ಸು ಆಕೆಯ ಸಾವಿನ ಹಿನ್ನಲೆ ತಿಳಿಯಲು ಹಪಹಪಿಸುತ್ತಿತ್ತು. ಕೂಡಲೇ ಆಯಮ್ಮನ ನೆನಪಾಯಿತು. ಸ್ವಲ್ಪ ಚೇತರಿಕೆ ಬಂದಂತಾಗಿ ಎದ್ದು ಕುಳಿತೆ. ಅಲ್ಲೇ ಪಕ್ಕದಲ್ಲಿದ್ದ ಆಯಮ್ಮನ ಬಳಿ ಬಂದು ಮಾತಿಗೆ ತೊಡಗಿದೆ. "ಆಯಮ್ಮ ಅನು ಈಗಷ್ಟೇ ಅಂತು ಗಪ್ಪತ್ತೆ ಮಗ್ಳು ಇಂಬಕ್ಕ ತೀರ್‍ಹೋತಡಲಿ, ಎಂತಾಗಿತ್ತು? ಹುಷಾರಿತ್ತಿಲ್ಯ? ಅದರ ಗಂಡಂಗೆ ತುಂಬಾ ಬೇಜಾರಾಗಿರವು ಅಲ್ದ?" ಎಂದು ಮಾತಿಗೆ ಎಳೆದೆ.
"ಹೂಂ... ಈಗ ಒಂದು ತಿಂಗ್ಳ ಹಿಂದೆ ಮಧ್ಯಾಹ್ನದ್ಹೊ ತ್ತಿಗೆ ಅದ್ರ ಗಂಡ ಕಾರ್‍ನಲ್ಲಿ ಶವ ಹಾಯ್ಕತಂದ್ನಪ್ಪ.. ಯಂಗೆ ನೋಡಲ್ಹೋಪ್ಲಾಯಿಲ್ಲೆ. ನಿನ್ನಜ್ಜಂಗೆ ಹುಷಾರಿತ್ತಿಲ್ಲೆ, ಉಳ್ದವೆಲ್ಲ ಹೋಗಿದ್ದ. ಎದ್ನೋವು ಬಂದು ಸತ್ತೋತಡ. ಗಂಡ್ನೇ ಅಂದ. ಅಂವ ಹೇಳದ್ದೇ ಬದ್ಧ. ಎಷ್ಟ ಕರೆಯೋ ಎಷ್ಟು ಸುಳ್ಳೋ ಅವಂಗೇ ಗೊತ್ತು, ಬಂಗಾರದಂಥ ಕೂಸಾಗಿತ್ತು.. ಪಾಪ ಅದರ ಮಗ್ಳ ನೋಡಿರೆ ಸಂಕ್ಟ ಆಗ್ತು.." ಎಂದು ಇಂಬಕ್ಕನ ಗಂಡನ ಮೇಲೆ ಸಂಶಯದ ಎಳೆ ಎಳೆದಾಗ ನಾನು ದಿಗ್ಭಾಂತಳಾದೆ. ಆಕೆಯ ಗಂಡನ ಆದರ್ಶ, ತ್ಯಾಗದ ಕುರಿತು ಮೆಚ್ಚಿ ಎಂದೂ ಕಂಡಿರದ ಆತನಪ್ರತಿ ಗೌರವಮೂಡಿಸಿಕೊಂಡಿದ್ದ ನನಗೆ ಇದನ್ನು ನಂಬಲೇ ಸಂಶಯಾವಾಯಿತು. ಇಲ್ಲಸಲ್ಲದ ಸುದ್ದಿ ಹರಡಿರಬೇಕೆಂದು ಕಸಿವಿಸಿಗೊಂಡೆ."ಹೌದೆ ಆಯಮ್ಮ, ಎದೆ ನೋವೇ ಬಂದು ಸತ್ತಿಕ್ಕು. ಅಂವ ಎಂತಕ್ಕೆ ಸುಳ್ಳು ಹೇಳ್ತ? ಅದ್ರ ವಿಷಯ ಎಲ್ಲಾ ಗೊತ್ತಿದ್ದೂ, ಮದ್ವೆಯಾದ. ಅದ್ಕೆ ಜೋರಾದಾಗ ಡಾಕ್ಟರ್‍ಹತ್ರ ಕರ್‍ಕಂಡ್ಹೋಗಿ ಗುಣಮಾಡ್ಸಿದಿದ್ನಡ. ಅಂತವ್ನ ಬಗ್ಗೆ ಸಂಶಯ ಪಡುದು ಸರಿಯಾಗ್ತಿಲ್ಯನ" ಎಂದು ಸಣ್ಣದಾಗಿ ಅಸಮಾಧಾನ ಪ್ರಕಟಿಸಿದೆ. ಆಗಲೇ ಊಟ ಮುಗಿಸಿ ಜಗುಲಿ ಪ್ರವೇಶಿಸಿದ ಅತ್ತಿಗೆಗೆ ನಾನು ಆಯಮ್ಮನ ಜೊತೆ ಮಾತಿಗೆ ತೊಡಗಿರುವುದು ಕಂಡು ಆಶ್ಚರ್ಯವಾಯಿತು.
"ತೇಜು ಇನ್ನೂ ಮಲ್ಗಿದ್ದಿಲ್ಯನೇ? ನಂಗ್ಳನ್ನೆಲ್ಲಾ ಬಿಟ್ಟಿಕ್ಕಿ ಆಯಮ್ಮನ್ಹತ್ರ ಯಂತ ಕತಿಗೆ ಹಣಕಿದ್ದೆ?" ಎಂದು ಅಣಕಿಸಿದಳು. ಆಕೆಯ ಮಾತಿನಿಂತ ಸಿಕ್ಕಿಬಿದ್ದ ಅನುಭವವವಾಗಿ ನನ್ನಲ್ಲೂ ಚಿಕ್ಕ ಅಪರಾಧೀ ಭಾವ ಮೂಡಿತು. "ಹಾಂಗೆನಿಲ್ಯೇ, ಇಂಬಕ್ಕನ ಸುದ್ದಿ ಕೇಳಿ ರಾಶಿ ಬೇಜಾರಾತು. ಆ ಕ್ಷಣ ಎಂತದೂ ಬೇಡ ಅನಿಸ್ತು. ಜಗ್ಲಿಗೆ ಬಂದಮೇಲೆ ಎಂತ ಆಗಿತ್ತು ಹೇಳಿ ತಿಳ್ಕಂಬ್ಲೆ ಆಯಮ್ಮನ ಹತ್ರ ಕುಂತಿ" ಎಂದು ಸಮಜಾಯಿಸಿ ನುಡಿದೆ. ಪ್ರತಿಯಾಗಿ ಆಕೆ ಏನೂ ನುಡಿಯದೇ ಮೌನವಹಿಸಿದಾಗ.. ಈ ವಿಷಯದಲ್ಲಿ ಆಕೆಗೆ ತುಂಬಾ ತಿಳಿದಿರಬೇಕೆಂದೆನಿಸಿತು. ಒಳಗಿನಿಂದ ಆಯಮ್ಮ ಆಸ್ರಿಗಾತೇ.. ಬರ್‍ಲಕ್ಕು ಎಂಬ ಕರೆಯೊಡನೆ ಅಜ್ಜಿ ಫಲಾರಕ್ಕೆಂದು ಒಳಹೋಗಲು ಮೇಧಾಳ ಬಳಿ ಸರಿದೆ. "ಅಲ್ದೇ ಮೇಧಾ ಆಯಮ್ಮಂಗೆಂತಕ್ಕೆ ಅದರ ಗಂಡ್ನಮೇಲೆ ಸಂಶಯ? ಅಷ್ಟೊಳ್ಯಂವ ಹೇಳಿ ಅದ್ರ ಮದ್ವೆಯಾದಾಗ ಗಪ್ಪತ್ತೆನೇ ಹೊಗಳಿತ್ತು?" ಎಂದು ಮೆಲ್ಲನೆ ಮಾತಿಗೆ ತೊಡಗಿದೆ. "ತೇಜು ಮದ್ವೆಯಾಗಿ ಎರ್‍ಡು ವರ್ಷ ಎಲ್ರೂ ಹಾಂಗೇ ಹೇಳ್ತಿದ್ದ. ಅದ್ರ ವಿಷ್ಯ ಎಲ್ಲಾ ತಿಳ್ದೂ, ಅಂಥ ದೊಡ್ಡ ಹುದ್ದೆಯಲ್ಲಿದ್ದಂವ ಅದ್ರನ್ನ ಮದ್ವೆಯಾದ ಹೇಳಿ ಕೊಂಡಾಡ್ತಿದ್ದ. ಆಮೇಲೆ ಕಂಡ್ಜು ಅವ್ನ ನಿಜ ಬಣ್ಣ. ಆಯಮ್ಮನ ಬಿಡು, ಸ್ವತಃ ಗಪ್ಪಕ್ಕನೇ ಹೇಳ್ತು ಬೇಕಾg ಕೇಳು ತನ್ನ ಮಗ್ಳ ಸಾವಿಗೆ ಅಳಿಯನೇ ಕಾರಣ ಹೇಳಿ..ಅಪರೂಪಕ್ಕೆಲ್ಲಾದ್ರೂ ಊರಿಗೆ ಬಂದಾಗ ಇಂಬಕ್ಕ ಕಣ್ಣೀರಿಡ್ತಿತ್ತಡ. ಯನ್ನ ಅಲ್ಲಿ ಹೊಡಿತ, ಹಿಂಸೆ ಕೊಡ್ತ ಹೇಳಿ.. ಆತು ಅಂವ ಹೇಳ್ದಾಂಗೆಯಾ ಎದೆ ನೋವೇ ಬಂದು ಹೋದಿಕ್ಕು ಹೇಳಿ ತಿಳ್ಕಂಬ.. ಆದ್ರೆ ಎದೆ ನೋವ ತರ್‍ಸಲೂ ಬತ್ತು !!" ಎಂದಾಗ ಆ ಮಾತಲ್ಲಿದ್ದ ಕಟು ಸತ್ಯ, ಕ್ರೂರತೆಗೆ ನಡುಗಿದೆ. ಅವಳು ಅಷ್ಟಕ್ಕೂ ಬಿಡದೆ - "ಹೋಗ್ಲಿ, ಅಂವ ಅಷ್ಟೊಂದು ಅದ್ರನ್ನ ಹಚ್ಕಂಡಿದಿದ್ರೆ ಹೆಣ ತರ್‍ಬೇಕಿರೆ ಒಳ್ಳೇ ಸೂಟ ಹಾಯ್ಕ ಬತ್ತಿದ್ನ? ಹೋಗ್ಲಿ, ಗಡಿಬಿಡಿಲಿ ಯಂತದೂ ಸಿಕ್ದೇ ಹಾಯ್ಕ ಬಂದ ಹೇಳಿ ತಿಳ್ಕಂಬ, ಆದ್ರೆ ಹೆಣ ಸುಟ್ಟ ಮರ್‍ದಿನನೆಯಾ ಉಳ್ದಕಾರ್ಯನೆಲ್ಲಾ ತಾನು ಗೋಕರ್ಣದಲ್ಲೇ ಮಾಡ್ತಿ ಅಲ್ಲಿಂದಲೇಯಾ ಬೆಳಗಾಂವಿಗೆ ಹೋಗ್ತಿ ಹೇಳಿ, ಮಗ್ಳನ್ನೂ ಬಿಟ್ಟಿಕ್ಕಿ ಹೋದಂವ, ಇಲ್ಲೀವರೆಗೂ ತಲೆಹಾಕಿದ್ನಿಲ್ಲೆ ಎಂತಕ್ಕೆ ಹೇಳು? ಅದೂ ಸಾಯ್ಲಿ, ಸತ್ತ ತಿಂಗ್ಳಾತೋ ಇಲ್ಯೋ ಇನ್ನೊಂದು ಮದ್ವೆಗೆ ಅವಸರದಲ್ಲಿ ತಯಾರಿ ನಡ್ಸತಿದ್ನ? ಎಂದು ಒಂದೊಂದೇ ಕಹಿ ಸತ್ಯಗಳನ್ನು ಪ್ರೆಶ್ನಾರೂಪದಲ್ಲೆಸೆದಳು". ಆಕೆಯ ಪ್ರತಿಯೊಂದು ಮಾತುಗಳೂ ನಾನು ಅವನ ಮೇಲೆ ಇರಿಸಿದ್ದ ಗೌರವ, ಮೆಚ್ಚುಯನ್ನು, ನನ್ನನ್ನೂ ಅಣಕಿಸಿ ಇರಿಯತೊಡಗಿದವು. ಆತನ ಪ್ರತಿ ಅಪಾರ ಕ್ರೋಧ, ತಿರಸ್ಕಾ ಮೂಡಿತು. ಆತನೇ ನಿಜವಾದ ಮನೋರೋಗಿ ಎಂದೆನಿಸಿತು. ಇದ್ದೊಬ್ಬ ಮಗಳ ಅಕಾಲ ಮರಣದಿಂದ ಸೋತಿರುವ ಅಸಹಾಯಕ ಗಪ್ಪ ತ್ತೆಯ ಮನಃಸ್ಥಿತಿಯನ್ನು ನೆನೆದು ಬಹಳ ಸಂಕಟವೆನಿಸಿತು.
ಮತ್ತೇನೂ ಕೇಳುವುದು ಬೇಡವೆನಿಸಿತು. ಪುನಃ ಹಾಸಿಗೆಗೆ ತೆರಳಿ ಕಣ್ಣುಮುಚ್ಚಿ ಮಲಗಲು ವ್ಯಥ ಪ್ರಯತ್ನ ಪಟ್ಟೆ. ಆ ರಾತ್ರಿಯ ನೀರವತೆ ನನ್ನೆದೆಯನ್ನೂ ಆವರಿಸಿ, ಕಣ್ಣಂಚನ್ನು ಒದ್ದೆಯಾಗಿಸಿತು. ಯಾವುದೋ ಒಂದು ಅಪರಾಧಿ ಪ್ರಜ್ಞೆ ಕಾಡತೊಡಗಿತು. ಬೆಳಿಗ್ಗೆ ಎದ್ದು ಆಕೆಯ ಮಗಳನ್ನು ಕರೆದು ಮಾತಾಡಿಸಬೇಕೆಂದು ನಿರ್ಧರಿಸಿದೆ. ಇರುವಷ್ಟು ದಿನವಾದರೂ ಏನೊಂದೂ ಅರಿವಿರದ ಆ ಮಗುವನ್ನು ನನ್ನೊಂದಿಗೇ ಇರಿಸಿಕೊಂಡು ಕೆಲವು ದಿನವಾದರೂ ಆಕೆಯನ್ನು ಸಂತೈಸಿ ಮನಸ್ಸಿಗೆ ಸಮಾಧಾನ ತಂದುಕೊಳ್ಳಬೇಕೆಂದೆನಿಸಿತು. ಇಂಬಕ್ಕನ ನಿಸ್ವಾರ್ಥ ಪ್ರೀತಿಯ ಋಣವನ್ನಂತೂ ತೀರಿಸಲು ಸಾಧ್ಯವಿಲ್ಲ. ಈ ರೀತಿಯಲ್ಲಾದರೂ ಆಕೆಗೆ ನನ್ನ ಕಿರು ಶ್ರದ್ದಾಂಜಲಿ ಸಲ್ಲಿಸಬೇಕೆಂದೆನಿಸಿತು. ಆಗ ನನ್ನ ಮನಸ್ಸಿಗೆ ತುಸು ಸಮಾಧಾನವಾದಂತೆನಿಸಿತು. ಮನದಲ್ಲೇ ಇಂಬಕ್ಕನ ಮುಖದ ಬದಲು ಇನ್ನೂ ನೋಡಿರದ ಇಂಬಕ್ಕನ ಮಗುವಿನ ಮುಖವನ್ನರಸುತ್ತಾ ನಿದ್ರೆಗೆ ವಶವಾದೆ.
10 ಕಾಮೆಂಟ್‌ಗಳು:
ತೇಜಸ್ವಿನಿ ಅವರೆ...
ಚೆನ್ನಾಗಿ ಬರೆದಿದ್ದೀರ...
ಧನ್ಯವಾದಗಳು.. ಶಾಂತಲ
ಕತೆ ಚೆನ್ನಾಗಿದೆ..;-)
ನೀವ್ ನನ್ನ ಕವನ ಓದಿ "ಚೆನ್ನಾಗಿದೆ" ಅಂತ ಕಾಮೆಂಟಿಸಿದ ಮೇಲೆ ಅದೆಲ್ಲಿಂದಲೋ ಭೂತ ಮೈ ಮೇಲೆ ಬಂದು ಬ್ಲಾಗು ಸ್ವಲ್ಪ ದುರಸ್ತಿ ಮಾಡಿ ಒಂದೆರಡು ಬರಹ ಬರೆಯುವ ಮನಸ್ಸಾಗಿ ನನ್ನ ಮನದಲ್ಲಿದ್ದುದ್ದನ್ನು ಬರೆದ್ದಿದ್ದೇನೆ ದಯವಿಟ್ಟು ಓದಿ ಹರಸಿ ...
ತುಂಬಾ ಧನ್ಯವಾದಗಳು ಅರುಣ್.. ಆದಾಗಲೆಲ್ಲಾ ಭೇಟಿಕೊಡುತ್ತಿರಿ. ತಮ್ಮ ಬರವಣಿಗೆ ಸದಾ ಮುಂದುವರಿಯಲಿ.
ಚೆ೦ದದ ಕಥೆ....
summne hige bloglokanalli inakattide.. aag nan frnd blognalli nim pratikriyettu.. Nodi nim blog open mdade... Nijakku Manas sarovar tumba chennagide.. Tili nirin jariyante kavanaglu manasige aahlad nidutteve.. Kathe noo adbhtvagide.. Tumba chennagi nim blog
ಧನ್ಯವಾದಗಳು ತಿಪ್ಪಾರ್ ಅವರೆ.. ತಮ್ಮ ಭೇಟಿ ಆಗಾಗ ಹೀಗೇ ಆಗುತ್ತಿರಲಿ.
ಇಷ್ಟು ದಿನಕ್ಕೆ ಇವತ್ತು ಓದಿದೆ ನಿಮ್ ಕಥೆನ.
ಇಂಬಕ್ಕಳಿಗೆ ಅರ್ಪಿಸಿದ ಶ್ರದ್ಧಾಂಜಲಿ,ಕಂಬನಿ ತರಿಸುವಂತಿದೆ. ಆಕೆಯ ಗಂಡನ ಮೇಲೆ ಕೋಪ ಇದೆ.
Namste....
nimma kathe odi sirsi kade hogi ondu dina iddu banda haangaathu...
is it a real story ?
@ ಶಂಕರ್,
ಧನ್ಯವಾದಗಳು.
@ ಅಕ್ಷಯ,
ಹೂಂ.. ಇದು ನಿಜ ಕಥೆನೇ.. ಮೆಚ್ಚುಗೆಗೆ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ