ಭಾನುವಾರ, ಅಕ್ಟೋಬರ್ 10, 2010

ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...

ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ

ಸಾಗರನ ಸಾಕ್ಷಿಯಿಟ್ಟು, ಬೆರಳಿಗೆ ಅಲೆಗಳುಂಗುರವಿತ್ತ,
ತಿಳಿ ಬಾನ ಕೇಳಿ ಪಡೆದ ಒಂಟಿ ತಾರೆಯ ಹಣೆಗಿತ್ತ,
ಬಿದಿಗೆ ಚಂದಿರನ ಕರಗಿಸಿ ಮೂಗಿನ ಬೊಟ್ಟಿಗಿಟ್ಟ,
ನನ್ಹೆಸರ ದಾರದಲಿ ನಿನ್ಹೆಸರ ಮಣಿಪೋಣಿಸಿ ಕೊರಳಿಗಿತ್ತ,
ಕೊಟ್ಟು ಬಿಡು ಮತ್ತೊಮ್ಮೆ ನಿನ್ನೊಲವಿನ ಉಡುಗೊರೆಗಳ..

ಕೈಯೊಳಗೆ ಕೈ ಬೆಸೆದು ಮೂಡಿದ್ದ ಕೆಂಪು ಗೆರೆಗಳಾ ಬಳೆಗಳು,
ತೊಳೆದರೂ ತೊಡೆಯದಿದ್ದ ನಿನ್ನ ಹೆಸರಿನಾ ಮದರಂಗಿ,
ನೀನಿತ್ತ ಮುಗುಳ್ನಗೆಯ ಚಿಲುಮೆ ನೂಪುರವಾಗಿತ್ತು ಕಾಲ್ಗಳಿಗೆ,
ನೀನಿತ್ತ ಮಲ್ಲಿಗೆಯ ಕಂಪು ಬಾಡಿದ್ದರೂ ಒಳಗಿತ್ತು ಉಸಿರಾಗಿ,
ತುಂಬಿ ಬಿಡು ಮತ್ತೊಮ್ಮೆ ನನ್ನೊಳಗದೇ ಬಣ್ಣವ...

ಕಣ್ಣಂಚುಗಳಿಂದುದುರುತಿದ್ದ ಹನಿಗಳನ್ನೆಲ್ಲಾ ಪೋಣಿಸಿ,
ಮುತ್ತಿನ ಹಾರವ ಮಾಡಿ ಕೊಟ್ಟಿದ್ದೆ ನೀನೆನಗಂದು,
ಕರಗಿ ಹನಿಯುತಿವೆ, ಒಂದೊಂದಾಗುದುರುತಿವೆಯೀಗ,
ಹನಿ ಹನಿಯೂ ನದಿಯಾಗಿ ಮುಳುಗಿಸುತಿದೆ ಮನವ
ಕೊಡಲಾರೆಯಾ ಮತ್ತೊಮ್ಮೆ ನನಗಾಗಿ ಮಣಿಮಾಲೆಯ ?!


ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ

-ತೇಜಸ್ವಿನಿ ಹೆಗಡೆ

26 ಕಾಮೆಂಟ್‌ಗಳು:

sunaath ಹೇಳಿದರು...

ತೇಜಸ್ವಿನಿ,
ಮಧುರ ಕನಸುಗಳಿಂದ ಪ್ರೇರಿತವಾದ ಮಧುರ ಯಾಚನೆಯ ಕವನ ಮಧುರವಾಗಿಯೇ ಇದೆ!

ಜಲನಯನ ಹೇಳಿದರು...

ತೇಜಸ್ವಿನಿ
ಮಳೆಯ ಮೊದಲ ಸ್ಪರ್ಶದ ಇಳೆಯ ಕಂಪಿಗೆ...ಒಂದೊಂದು ನೆಲಕೂ ಒಂದೊಂದು ಕಂಪಿರುತ್ತದಂತೆ...ಇದು ಮಣ್ಣಿನ ಗುಣಗಳನ್ನೂ ಅವಲಂಬಿಸಿರುತ್ತೆ ಎನ್ನುವುದು ಬೇರೆ ವಿಷಯ...
ಮೊದಲ ಮಳೆಯ ಕಂಪು ಮೀನಿನಲ್ಲೂ ಅನುರಾಗದ ಹೊನಲು ಹರಿಸುತ್ತೆ ಎನ್ನುವುದು ಬಹುಮಂದಿಗೆ ತಿಳಿದಿರಲಿಕ್ಕಿಲ್ಲ,,,ಬಹಳ ಭಾವದಾಳಕ್ಕೆಳೆಯುವ ಪ್ರಯತ್ನ,,,
ಅದರಲ್ಲೂ ಈ ಸಾಲುಗಳು
ಹನಿ ಹನಿಯೂ ನದಿಯಾಗಿ ಮುಳುಗಿಸುತಿದೆ ಮನವ
ಕೊಡಲಾರೆಯಾ ಮತ್ತೊಮ್ಮೆ ನನಗಾಗಿ ಮಣಿಮಾಲೆಯ
ಇಷ್ಟವಾಯ್ತು....
ಒಂದು ಸಂದೇಹ ಅಥವಾ ಅರಿಯುವ ಉತ್ಸುಕತೆ ಎನ್ನಲೇ..?
ಮೊದಲ ನಾಲ್ಕು ಮತ್ತೆ ಕಡೆಯ ನಾಲ್ಕು ಸಾಲುಗಳು ಮಧ್ಯದ ಸಾಲುಗಳಿಗಿಂತ ಅರ್ಧದಷ್ಟೇ ಇಟ್ಟಿದ್ದೀರಲ್ಲಾ..? ಏನಾದರೂ ವಿಶೇಷತೆ,,,??

Dr.D.T.Krishna Murthy. ಹೇಳಿದರು...

ಚಂದದ ಕವನ.

kanasu ಹೇಳಿದರು...

wow! tumba chenagide kavana..

Soumya. Bhagwat ಹೇಳಿದರು...

superb ತೇಜಕ್ಕ .... ಅದೆಂಥ ಸಾಲುಗಳು ...!...... ಕವನದ ಇಂಚಿಂಚು ಚೆನ್ನಾಗಿದ್ದು ...... !

ಬಿಸಿಲ ಹನಿ ಹೇಳಿದರು...

ಮನಸ್ಸಿಗೆ ಮುದನೀಡುವ ಚೆಂದದ ಕವಿತೆ.
ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ
ಈ ಸಾಲುಗಳು ಇಷ್ಟವಾದವು.

Ashok.V.Shetty, Kodlady ಹೇಳಿದರು...

ತೇಜಕ್ಕ

ತುಂಬಾ ಸುಂದರ ಕವನ , ಎಲ್ಲಾ ಸಾಲುಗಳು ಇಷ್ಟ ಆದವು. , ಅರ್ಥಪೂರ್ಣ ಕವನ..

Subrahmanya ಹೇಳಿದರು...

ಚೆನ್ನಾಗಿದೆ. ಎರಡನೆಯ ಚರಣವನ್ನು ಅರ್ಥೈಸಿಕೊಂಡಮೇಲಂತೂ ಕವಿಯ(ಕವಯತ್ರಿ) ಕಲ್ಪನೆಗೆ ಎಣೆಯೇ ಇಲ್ಲವೆನಿಸಿತು. :). ಕೊನೆಯ ಚರಣ ಮೃದುಮಧುರ.

ಚಿತ್ರಾ ಹೇಳಿದರು...

ತೇಜೂ,
ರಾಶಿ ಚಂದ ಇದ್ದು .. ಆರಂಭವೇ ಅತ್ಯಂತ ಇಷ್ಟವಾಗಿ ಹೋಯ್ತು !
"ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ "

ಸಾಗರದಾಚೆಯ ಇಂಚರ ಹೇಳಿದರು...

ಎರಡನೆಯ ಚರಣ ತುಂಬಾ ಹಿಡಿಸಿತು

ಆಶಯ ಸೊಗಸಾಗಿದೆ

ಪ್ರಗತಿ ಹೆಗಡೆ ಹೇಳಿದರು...

ತುಂಬಾ ಚೆನ್ನಾಗಿದೆ... ಮೊದಲ ೪ ಸಾಲುಗಳಂತೂ ಸೂಪರ್.. :-)

ಮನಸಿನಮನೆಯವನು ಹೇಳಿದರು...

ಅತಿ ಸುಂದರ ಪದಗಳನ್ನು ಉಪಯೋಗಿಸಿ ಬರೆದ ಮಿಡಿತ..

..ನನ್ನ ಮನಸಿನಮನೆ'ಗೆ ಬನ್ನಿ..

ಚುಕ್ಕಿಚಿತ್ತಾರ ಹೇಳಿದರು...

ಸಾಲುಗಳು ಮನಮುಟ್ಟುವ೦ತಿವೆ...ತೇಜಸ್ವಿನಿ.
ತು೦ಬಾ ಸು೦ದರವಾದ ಹೋಲಿಕೆಗಳು..

ಸುಧೇಶ್ ಶೆಟ್ಟಿ ಹೇಳಿದರು...

thumba chennagidhe kavana... ondhu reethi madhuravaagidhe :)

mundhe yaavaagalaadharU agathya bidhdhaaga ee kavanavannu upayogisalu anumathi needutteeri thaane :P

AntharangadaMaathugalu ಹೇಳಿದರು...

ತೇಜಸ್ವಿನಿ....
ಕೊನೆಯ ಪ್ಯಾರಾ ತುಂಬಾ ಇಷ್ಟವಾಯಿತು. ಇಡೀ ಕವನದ ಕೆಲವು ಸಾಲುಗಳು ಮತ್ತೆ ಮತ್ತೆ ನೆನಪಾಗಿ ಕಾಡುವಂತಿವೆ.... ಧನ್ಯವಾದಗಳು ತಂಗೀ......್

ಶ್ಯಾಮಲ

AntharangadaMaathugalu ಹೇಳಿದರು...

ಸಾಗರನ ಸಾಕ್ಷಿ, ಅಲೆಗಳ ಉಂಗುರ, ಬಿದೆಗೆ ಚಂದ್ರನ ಮೂಗುಬೊಟ್ಟು.. ನನ್ಹೆಸರ ದಾರದಲಿ ನಿನ್ಹೆಸರ ಮಣಿ... ಅಬ್ಬಾ ಅದ್ಭುತವಾಗಿದೆ ತಂಗೀ.. ನಿಮ್ಮ ಕಲ್ಪನೆಯ ಅಲೆ ಭಾವುಕ ಮನಗಳಿಗೆ ಹಬ್ಬದ ಸಂಭ್ರಮ ತರುತ್ತೆ.... ಮತ್ತೆ ಮತ್ತೆ ಓದಿದೆನಮ್ಮಾ..! ಧನ್ಯವಾದಗಳು

ಶ್ಯಾಮಲ

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ ಹೇಳಿದರು...

hmmm uttama salugalu :)

Jayalaxmi ಹೇಳಿದರು...

ಮನುಷ್ಯನಲ್ಲಿ ಇಂಗದ ಹಸಿವು ಅಂತೇನಾದರೂ ಇದ್ದರೆ ಅದು ಪ್ರೀತಿಯೊಂದೇ!! ಮೊಗೆ ಮೊಗೆದಷ್ಟೂ ಸಾಕೆಸಿಸದ ಹಪಹಪಿತನ! ಭೇದ ಬಗೆದರಂತೂ ನೋವು ಚಿರಂತನ... ಇದಕ್ಕೆ ಬಡವ-ಬಲ್ಲಿದ, ಜಾಣ-ಕೋಣ,ವಿಜ್ಞಾನಿ-ಅಜ್ಞಾನಿ ಯಾರೂ ಹೊರತಲ್ಲ. ಇದು ಎಲ್ಲರ ಮಿಡಿತ, ತುಡಿತ.. ತೇಜು, ಮಧುರ ಮಧುರ ಪದಗಳನ್ನು ಪೋಣಿಸಿಟ್ಟಿದ್ದೀರಿ!! :) :)

Ranjita ಹೇಳಿದರು...

super kavana ...tumba ista aatu kavana tejakka :)

ಕ್ಷಣ... ಚಿಂತನೆ... ಹೇಳಿದರು...

ಕವನ ತುಂಬಾ ಚೆನ್ನಾಗಿದೆ. ಇಷ್ಟವಾಯಿತು.

venkat.bhats ಹೇಳಿದರು...

ನನ್ಹೆಸರ ದಾರದಲಿ ನಿನ್ಹೆಸರ ಮಣಿಪೋಣಿಸಿ ಕೊರಳಿಗಿತ್ತ,
ಕೊಟ್ಟು ಬಿಡು ಮತ್ತೊಮ್ಮೆ ನಿನ್ನೊಲವಿನ ಉಡುಗೊರೆಗಳ..


chennagide kavite, matte matte oduva haage,odo odi neneva haage..

Manasa ಹೇಳಿದರು...

Tumbaa chendada saalugaLu....Very nice!!

ತೇಜಸ್ವಿನಿ ಹೆಗಡೆ ಹೇಳಿದರು...

ಕವನವನ್ನು ಮೆಚ್ಚಿ ಪ್ರೀತಿಯಿಂದ ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ವಿಶ್ವಾಸ, ಪ್ರೋತ್ಸಾಹ ಹೀಗೇ ಇರಲೆಂದು ಆಶಿಸುವೆ.

-ತೇಜಸ್ವಿನಿ.

ಆಝಾದ್ ಅವರೆ,

ಕವಿತೆ ಅಂದರೆ ಹೀಗೇ ಅಂತ ಹೇಳೋಕೆ ಆಗೊಲ್ಲ.. ಅದು ಹೇಗೂ ಇರಬಹುದು. ಹಾಗಾಗಿ ಹೀಗಿದೆ ಅಷ್ಟೇ :)
ಧನ್ಯವಾದ.

ಸಾಗರಿ.. ಹೇಳಿದರು...

ಮಕ್ಕಳಿರಲೇ ಬೆಕು ಮನೆ ತುಂಬಾ :-)ಲೇಖನದ ಜೊತೆ ಕವನವೂ ಬಹಳ ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K ಹೇಳಿದರು...

ತುಂಬಾ ಚೆಂದದ ಕವನ. ಮಧುರಯಾಚನೆಯ ಆರ್ದ್ರವ ಅದ್ಭುತವಾಗಿದೆ.

ಮಂಜುಳಾ ಹೇಳಿದರು...

ಆಹಾ! ಭಾವಗಳು ಈಗಷ್ಟೇ ಎದ್ದು ಬಂದಷ್ಟು ಹಿತವಾಗಿದೆ ಕವನ...