ಬುಧವಾರ, ಜುಲೈ 21, 2010

ಅವಲಕ್ಕಿ ಶಿರಾ


ಕೆಲವೊಮ್ಮೆ ಮನೆಗೆ ಅತಿಥಿಗಳು ದಿಢೀರನೆ ಬಂದಾಗ ಯಾವ ತಿಂಡಿ ತಯಾರಿಸಬೇಕು? ಇದು ಯಾವತ್ತಿಗೂ ಬಗೆಹಹರಿಯದ ಜಿಜ್ಞಾಸೆಗಳಲ್ಲಿ ಒಂದು. ಇಂಥ ಜಟಿಲ ಪರಿಸ್ಥಿತಿಯಲ್ಲಿ ಅಡುಗೆ ಮನೆ ಕೆಲಸ ನಿರ್ವಹಿಸುವ ಮಹಿಳೆಯರಿಗೆ ದಿಕ್ಕೇ ತೋಚದಂತಾಗುವುದು. ಅದೂ ಅಲ್ಲದೇ ಸಮಯದ ಅಭಾವವೂ ಜೊತೆಗೆ ಕಾಡುವುದರಿಂದ ಮನದೊಳಗೆ ಗಲಿಬಿಲಿ, ಅಡುಗೆಮನೆಯೊಳು ಗಡಿಬಿಡಿ.

ಆ ಸಮಯದಲ್ಲಿ ಸುಲಭದಲ್ಲಿ ತಯಾರಿಸಬಹುದಾದಂತಹ ಪದಾರ್ಥಗಳ ಬಗೆಗೆ ಕಣ್ಣು ಹಾಯುವುದು ಸಹಜ. ಬೇಗಬೇಗ ರುಚಿಯಾದದ್ದನ್ನೇನಾದರೂ ತಯಾರಿಸುವ ಹವಣಿಕೆ ಆರಂಭ. ಚಕ್ ಅಂತ ಒಂದು ಸ್ವಾದಭರಿತ ಸಿಹಿ ತಿಂಡಿ ತಯಾರಿಕೆ ಕುರಿತು ಯೋಚಿಸಲು ತೊಡಗುತ್ತೇವೆ. ಡಬ್ಬದಲ್ಲಿ ಅವಲಕ್ಕಿ ಇದ್ದರೆ ಆ ಕ್ಷಣದ ಸಮಸ್ಯೆ ಬಗೆಹರಿದಂತೆಯೇ. ಅವಲಕ್ಕಿ ಶಿರಾ ಮಾಡಿಬಿಡಿ. ಅದು ಸುಲಭ, ಸರಳ ಹಾಗೂ ಮಿತ ಸಮಯದಲ್ಲಿ ತಯಾರಿಸಲು ಸಾಧ್ಯವಾಗುವಂತಹ ಸಿಹಿ ತಿಂಡಿಗಳಲ್ಲೊಂದು.

ಅದೂ ಅಲ್ಲದೇ ಉತ್ತರಕನ್ನಡದ ಕಡೆ ಅವಲಕ್ಕಿ ಶಿರಾವನ್ನು ವಿಶೇಷವಾಗಿ ಬಾಣಂತಿಯರಿಗೆ ಮಾಡಿಕೊಡುತ್ತಾರೆ. ಇದನ್ನು ತಯಾರಿಸುವಾಗ ಬಳಸುವ ತುಪ್ಪ, ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿ ಪುಡಿಗಳು ಬಾಣಂತಿಯರಿಗೆ ವಿಶಿಷ್ಟವಾದ ಪೌಷ್ಟಿಕತೆಯನ್ನು ಕೊಡುತ್ತದೆ. ಜೀರ್ಣಿಸಿಕೊಳ್ಳಲೂ ತುಂಬಾ ಸುಲಭ ಈ ಸಿಹಿ ತಿಂಡಿ.

ಅವಲಕ್ಕಿಯನ್ನು ಸ್ವಲ್ಪ ಪರಿಮಳ ಬರುವ ತನಕ ಹುರಿದಿಟ್ಟುಕೊಂಡು(ತುಪ್ಪ ಹಾಕದೇ ಹಾಗೆಯೇ ಹುರಿಯಬೇಕು) ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟುಕೊಂಡರೆ ಮೂರುತಿಂಗಳವರೆಗೂ ಕೆಡದು. ಹಾಗೆ ಮಾಡಿಟ್ಟುಕೊಂಡಲ್ಲಿ ಈ ಸಿಹಿ ತಿಂಡಿಯನ್ನು ತಯಾರಿಸುವುದು ಮತ್ತೂ ಸುಲಭ. ದಿಢೀರನೆ ಶಿರಾ ತಯಾರಿಸುವಾಗ ಹುರಿದಿಟ್ಟಿರುವ ಅವಲಕ್ಕಿಯನ್ನು ನೇರವಾಗಿ ಬಳಸಬಹುದು. ಕೇವಲ 15 ನಿಮಿಷದೊಳಗೆ ಸ್ಪೆಷಲ್ ತಿಂಡಿಯನ್ನು ಮಾಡಿ ಅತಿಥಿಗಳಿಗಳನ್ನು ಸತ್ಕರಿಸಬಹುದು.

ಬೇಕಾಗುವ ಸಾಮಗ್ರಿಗಳು:

* ಅವಲಕ್ಕಿ - 8 ದೊಡ್ಡ ಚಮಚ

* ಸಕ್ಕರೆ - 8 ಚಮಚ (ಅವಲಕ್ಕಿಯ ಅಳತೆಯಲ್ಲೇ ಸಕ್ಕರೆ ಹಾಕಬೇಕು. ೧-೨ ಚಮಚ ಹೆಚ್ಚಾದರೂ ನಡೆಯುವುದು.)

* ನೀರು - 1 ಲೋಟ (ಹದಮಾಡುವಾಗ ನೋಡಿಕೊಂಡು ಬೇಕಷ್ಟೇ ನೀರನ್ನು ಹಾಕಿಕೊಳ್ಳಬೇಕು. ಇಲ್ಲಿ ಕೊಟ್ಟಿದ್ದು  ಅಂದಾಜಿನಲ್ಲಷ್ಟೇ. ಜಾಸ್ತಿ ನೀರಾದರೆ ತುಂಬಾ ಮೆದುವಾಗುವುದು. ತಣಿದನಂತರ ಸ್ವಲ್ಪ ಹದಕ್ಕೆ ಬರುವುದು)
* ತುಪ್ಪ - 6 ಚಮಚ

* ಏಲಕ್ಕಿ ಪುಡಿ - 1/2 ಚಮಚ

* ದ್ರಾಕ್ಷಿ, ಗೋಡಂಬಿ ಚೂರುಗಳು - ನಮಗೆ ಬೇಕಾದಷ್ಟು.

ಮಾಡುವ ವಿಧಾನ

* ಮೊದಲಿಗೆ ಅವಲಕ್ಕಿಯನ್ನು ಹಾಗೇಯೇ ಸ್ವಲ್ಪ ಹುರಿದು ಮಿಕ್ಸಿಯಲ್ಲಿ ಹುಡಿಮಾಡಿಟ್ಟುಕೊಳ್ಳಬೇಕು. (ಮೇಲೆ ಹೇಳಿರುವಂತೆ ಮೊದಲೇ ಹುರಿದಿಟ್ಟುಕೊಂಡು ಡಬ್ಬದಲ್ಲಿ ಹಾಕಿಟ್ಟಿರುವ ಅವಲಕ್ಕಿಯಾದರೆ ಮತ್ತೆ ಹುರಿಯಬೇಕೆಂದಿಲ್ಲ)

* 1 ಲೋಟ ನೀರನ್ನು ಚೆನ್ನಾಗಿ ಕುದಿಸಿಟ್ಟುಕೊಳ್ಳಬೇಕು.

* ಒಂದು ತೋಪಿನಲ್ಲಿ ಹುಡಿಮಾಡಿಟ್ಟಿರುವ ಅವಲಕ್ಕಿ, ಕುದಿಸಿದ ನೀರು(ಬಿಸಿ ಬಿಸಿ ಇರುವಾಗಲೇ), ಸಕ್ಕರೆ ಹಾಗೂ ತುಪ್ಪವನ್ನು ಹಾಕಿ ಚೆನ್ನಾಗಿ ಕಲಕಬೇಕು. ಹಾಗೆ ಕದಡುತ್ತಲೇ ಇರುವಾಗ ಹತ್ತು ನಿಮಿಷದೊಳಗೆ ಮಿಶ್ರಣ ಶಿರಾದ ಹದಕ್ಕೆ ಬರುತ್ತದೆ.

* ಹಾಗೆ ಹದ ಬಂದ ಮಿಶ್ರಣಕ್ಕೆ ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಮತ್ತೊಮ್ಮೆ ಕಲಕಿ ಬಿಸಿ ಇರುವಾಗಲೇ ತಿನ್ನಲು ಕೊಡಬೇಕು. ಹೀಗೆ, ಸ್ವಾದಿಷ್ಟ ಆರೋಗ್ಯಕರ ಅವಲಕ್ಕಿ ಶಿರವನ್ನೊಮ್ಮೆ ತಿಂದರೆ ಮತ್ತೂ ಇನ್ನಷ್ಟು ಬೇಕೆನಿಸಿದರೆ ಅದು ನಮ್ಮ ತಪ್ಪಲ್ಲ!

ಸೂಚನೆ :ವಿಶೇಷ ಸಂದಂರ್ಭಗಳಲ್ಲಿ ಬೇಕಿದ್ದರೆ ಕೇಸರಿ ಎಳೆಗಳನ್ನು ಸ್ವಲ್ಪ ಹಾಲಲ್ಲಿ ಕದಡಿ ಗೋಡಂಬಿ ಹಾಗೂ ದ್ರಾಕ್ಷಿಗಳ ಜೊತೆಗೆ ಹಾಕಬಹುದು.
 
[ವರುಷದ ಹಿಂದೆ ದಟ್ಸ್‌ಕನ್ನಡದಲ್ಲಿ ಬರುತ್ತಿದ್ದ ನನ್ನ ಅಂಕಣವಾದ ಶಿರಸಿ ಭವನದಲ್ಲಿ ಪ್ರಕಟಿತ]
 

ಇದರ ರುಚಿಯನ್ನೂ ನೋಡಿ : ಆರೋಗ್ಯಕರ ಅತ್ತಿಕುಡಿ ತಂಬುಳಿ
 
*ತೇಜಸ್ವಿನಿ ಹೆಗಡೆ

31 ಕಾಮೆಂಟ್‌ಗಳು:

Unknown ಹೇಳಿದರು...

chennagide akka baraha , odtane bayalli niru barta ide :)

ಜಲನಯನ ಹೇಳಿದರು...

ಟೈಮ್ಲಿ ಹಾಕಿದ್ದೀರ ತೇಜಸ್ವಿನಿ...ಅದರಲ್ಲೂ ನನಗೆ..ನಳಪಾಕದ ಪ್ರಾಕ್ಟೀಸ್ ಮಾಡುವಾಗ ಇದನ್ನೂ ಪ್ರಯತ್ನಿಸ್ತೇನೆ...ನಾನು ಮಂಗಳೂರಲ್ಲಿ ಓದುವಾಗ ಸಜ್ಜಿಗೆ-ಶೀರಾ ತಗೋತಿದ್ವಿ...ಆದ್ರೆ ಅವಲಕ್ಕಿ ಶೀರಾ...ಇಂಟರೆಸ್ಟಿಂಗ್.....ಟ್ರೈ ಮಾಡ್ತೀನಿ.

ಗಿರೀಶ ರಾಜನಾಳ ಹೇಳಿದರು...

naanu madide mam paste thara bantu..

Prashanth ಹೇಳಿದರು...

ನಿಮ್ಮ ಕನ್ನಡ ಭಾಷಾ ಶೈಲಿ 'ಅವಲಕ್ಕಿ ಶಿರಾ' ದಷ್ಟೇ ಆಕರ್ಷಕವಾಗಿದೆ.

ವಿ.ರಾ.ಹೆ. ಹೇಳಿದರು...

ಚೆನ್ನಾಗಿದೆ. ಅಡುಗೆಗಳು ವೆರ್ರಿ ವೆರ್ರಿ ಇಂಟರೆಸ್ಟಿಂಗ್.

so...ಇವತ್ತು ಬಂದ್ರೆ ಅವಲಕ್ಕಿ ಶಿರಾ ಗ್ಯಾರಂಟಿ, ಇನ್ನು ಮೂರುತಿಂಗಳು ಬಿಟ್ಟು ಬಂದ್ರೂ ಅವಲಕ್ಕಿ ಶಿರಾವೇ ಗ್ಯಾರಂಟಿ :-) :)

ಚುಕ್ಕಿಚಿತ್ತಾರ ಹೇಳಿದರು...

tasteeeee.....:)

ಮನದಾಳದಿಂದ............ ಹೇಳಿದರು...

Tejakka......
olleya maahiti.
naanoo try madtene. aamele nimmannoo kareyuttene*

*(chennaagilla andare maatra!)

ವನಿತಾ / Vanitha ಹೇಳಿದರು...

wow..nice recipe..ನಾನು ಮೊದ್ಲೇ ಹೇಳಿಬಿಟ್ಟು ಬರ್ತೀನಿ..ಆವಾಗ ಇನ್ನು ಬೇರೆ ಸ್ವೀಟ್ ಸಿಗ್ಬಹುದಲ್ಲ ಅದಿಕ್ಕೆ..:))

Dileep Hegde ಹೇಳಿದರು...

ಇದೆ ರೀತಿ ಶಾವಿಗೆಯಲ್ಲೂ ಮಾಡ್ತಾರೆ ಅಲ್ವಾ..
ಚೆನ್ನಾಗಿದೆ..

ತೇಜಸ್ವಿನಿ ಹೆಗಡೆ ಹೇಳಿದರು...

ಗಿ@ರೀಶ್ ಅವರೆ,

ಮಾನಸಕ್ಕೆ ಸ್ವಾಗತ. ನಿಮ್ಮ ಪ್ರಯತ್ನ ನೋಡಿ ಮೆಚ್ಚುಗೆಯಾಯಿತು. ನೀರನ್ನು ಹಾಕುವಾಗ ಹದ ತಪ್ಪಿದರೆ ಪೇಸ್ಟ್ ಅಂತೆಯೇ ಆಗುವುದು. ನಾನು ಕೊಟ್ಟಿದ್ದು ಒಂದು ಅಂದಾಜಷ್ಟೇ. ನೀವು ನೀರು ಬಳಸುವಾಗ ಸ್ವಲ್ಪ ಸ್ವಲ್ಪವೇ ಹಾಕಿ ತಿರುವಿ. ನಿಮಗೇ ಗೊತ್ತಾಗುವುದು ಎಷ್ಟು ನೀರು ಬೇಕಾಗುವುದೆಂದು.. ಒಮ್ಮೊಮ್ಮೆ ಅವಲಕ್ಕಿ ತೀರಾ ಗಟ್ಟಿಯಿದ್ದರೆ ಹೆಚ್ಚು ಬೇಕಾಗುತ್ತದೆ. ಮಗದೊಮ್ಮೆ ಪ್ರಯತ್ನಿಸಿ. ಮೊದಲ ಸಲ ಇದೆಲ್ಲಾ ಮಾಮೂಲು :) ಈಗ ನೀವು ತಯಾರಿಸಿದ್ದು ಪೇಸ್ಟ್ ಆಗಿದ್ದರೂ ಅದು ಆರಿದ ನಂತರ ತುಸು ಹುಡಿಯಾಗುವುದು. ಹೇಗನಿಸಿತು ತಿಂದ ಮೇಲೆ ಎಂದೂ ತಿಳಿಸಿ.

ಧನ್ಯವಾದಗಳು.

@ಆರ್ಯ,

ತುಂಬಾ ಧನ್ಯವಾದಗಳು. ತಿಂದ ಮೇಲೂ ಬಾಯಿ ಚಪ್ಪರಿಸಿದರೆ ಅಷ್ಟೇ ಸಾಕು :)

@ಜಲನಯನ,

ಪ್ರಯತ್ನಿಸಿ. ಆದರೆ ತೀರಾ ಪ್ರಯೋಗಕ್ಕೂ ಹೋಗಬೇಡಿ ಮತ್ತೆ... ಆಮೇಲೆ ಶಿರಾ ಆಗುವ ಬದಲು ಪಾಯಸವಾದರೆ ಕಷ್ಟ :) ಏನೇ ಆದರೂ ಚೆನ್ನಾಗಿದ್ದರೆ ಆಯಿತಲ್ಲವೇ? :) ಧನ್ಯವಾದಗಳು.

@ಪ್ರಶಾಂತ್ ಅವರೆ,

ತುಂಬಾ ಧನ್ಯವಾದಗಳು ನನ್ನ ಕನ್ನಡ ಶೈಲಿ ಮೆಚ್ಚಿಕೊಂಡದ್ದಕ್ಕೆ. ಇನ್ನು ಪಾಕವನ್ನೂ ಮಾಡಿ ನೋಡಿ ಹೇಗೆನಿಸಿತೆಂದು ಹೇಳಿ :)

@ವಿ.ರಾ.ಹೆ.

ಖಂಡಿತ ಇಲ್ಲಪ್ಪಾ... ಮೂರು ತಿಂಗಳು ಬಿಟ್ಟು ಬಂದರೂ, ಈಗಲೇ ಬಂದರೂ ನಿನಗೆ ಮಾತ್ರ ಆ ಸ್ಪೆಷಲ್ ಪಾಯಸವೇ ಗ್ಯಾರಂಟಿ :-p
@ವಿಜಯಶ್ರೀ,

ಹೂಂ.. ಹೌದು.. ಮಾಡಿ ನೋಡಿದ್ರಾ? :) ಧನ್ಯವಾದ.

@ಪ್ರವೀಣ್,

ತಪ್ಪದೇ ಮಾಡಿ ನೋಡಿ. ಚೆನ್ನಾಗಾದರೆ ತಿಳಿಸಿ. ಆಗದಿದ್ದರೆ ಸುಮ್ಮನಿದ್ದು ಬಿಡಿ.... :)ಧನ್ಯವಾದ.

@ವನಿತಾ,

ಖಂಡಿತ ಬನ್ನಿ.... ನಾನೇನೂ ಪಾಕ ಪ್ರವೀಣೆಯಲ್ಲ.. ಹೊಸತನ್ನ ಪ್ರಯೋಗಿಸಲು ನನಗೂ ಅವಕಾಶ ಬೇಕಲ್ಲಾ... :-p ಅತ್ತಿಕುಡಿ ತಂಬುಳಿಯನ್ನೂ ಮಾಡಿ ನೋಡಿ. ತುಂಬಾ ಚೆನ್ನಾಗಿರುವುದು....

ಧನ್ಯವಾದಗಳು.

@ದಿಲೀಪ್ ಅವರೆ,

ತುಂಬಾ ಧನ್ಯವಾದಗಳು.

ಅನಾಮಧೇಯ ಹೇಳಿದರು...

ತುಂಬಾ ಇಷ್ಟವಾಯ್ತು ಈ ಪೋಸ್ಟು. ಅಕ್ಷರಗಳು ನೀರೂರಿಸಿಕೊಳ್ಳುತ್ತಾ ಓದಿಸಿಕೊಂಡವು.

ಮನೆಯ ನೆನಪೂ ತುಂಬಾ ಆಯಿತೆನ್ನಿ.

ದಿನಕರ ಮೊಗೇರ ಹೇಳಿದರು...

nange avalakki endare tumbaa ishta..... ee avalakki, shira khandita try maadtene... dhanyavaada...

sunaath ಹೇಳಿದರು...

ತೇಜಸ್ವಿನಿ,
ನಿಮ್ಮ ರೆಸಿಪಿಯನ್ನು ನನ್ನ ಶ್ರೀಮತಿಯವರಿಗೆ ರವಾನಿಸಿದ್ದೇನೆ. ಉಪವಾಸ ಮಾಡಬೇಕಾದ ಸಂದರ್ಭದಲ್ಲಿ ಇದು ತುಂಬ ಉಪಯುಕ್ತ ತಿನಿಸು ಆಗಬಹುದು. ಧನ್ಯವಾದಗಳು.

ಮನಸಿನ ಮಾತುಗಳು ಹೇಳಿದರು...

waaw ! ತೇಜಕ್ಕ, ಸೂಪರ್.. :) ನಂಗೆ ಪುಡಿ ಅವಲಕ್ಕಿಲಿ ಪುಳಿಯೋಗರೆತರ ಮಾಡದು ಗೊತ್ತಿತ್ತು. ಆದರೆ ಸ್ವೀಟ್ ಮಾಡಲೆ ಬತ್ತು ಹೇಳಿ ಗೊತ್ತಿರ್ಲೆ. ಈ ಸರಿ ಮನಿಗೆ ಹೋದಾಗ try ಮಾಡಕಾತು. recipe ಬುಕ್ಕಲ್ಲಿ ಬರ್ಕತ್ತಿ. ಇಂಥ ಇನ್ನು ಇನ್ನೂ ತಿಂಡಿಗಳ ಬಗ್ಗೆ ಬರಿತಾ ಇರೇ ಅಕ್ಕಾ,
ಆದರೆ ಒಂದು question . ಸಕ್ಕರೆ ಬದಲಿ ಡಬ್ಬಿ ಬೆಲ್ಲ(ಮೆನೆಲಿ ಇದ್ದವರು) ಹಾಕಲೆ ಬತ್ತ? ಎಂತಕೆ ಅಂದ್ರೆ ಅವಲಕ್ಕಿ ಬೆಲ್ಲ ಒಳ್ಳೆ combo ಅಲ್ದಾ ಅದ್ಕೆ ಕೇಳ್ದಿ... :-)

shivu.k ಹೇಳಿದರು...

ತೇಜಸ್ವಿನಿ ಮೇಡಮ್,

ಕಳೆದ ವಾರವೇ ಈ ರೆಸಿಪಿ ಹಾಕಿದ್ದರೆ ನಮ್ಮ ಮನೆಗೆ ಉತ್ತರ ಕರ್ನಾಟಕದ ಫೋಟೊಗ್ರಫಿ ಗೆಳೆಯರಿಗಾಗಿ ಮಾಡಬಹುದಿತ್ತು. ಇರಲಿ ಈಗಲೂ ಒಮ್ಮೆ ನಮಗಾಗಿ ಪ್ರಯತ್ನಿಸುತ್ತೇವೆ. ಥ್ಯಾಂಕ್ಸ್.

ಸವಿಗನಸು ಹೇಳಿದರು...

ಅವಲಕ್ಕಿ ಶಿರಾ ಚೆನ್ನಾಗಿದೆ ಟ್ರೈ ಮಾಡಬೇಕು.....
ಚಿತ್ರ ಸಹ ಚೆನ್ನಾಗಿದೆ

PaLa ಹೇಳಿದರು...

ಅನ್ನದ ಕೇಸರೀಬಾತ್ (ಶಿರಾ) ತಿಂದಿದ್ದೆ.. ಅವಲಕ್ಕಿದು ಕೇಳೂ ಇರ್ಲಿಲ್ಲ.. ಹೊಸ ಮಮ್ಮಮ್ ಪರಿಚಯಕ್ಕೆ ಧನ್ಯವಾದ :)

ಅನಂತ್ ರಾಜ್ ಹೇಳಿದರು...

ಅವಲಕ್ಕಿ ಶಿರಾ ನಮ್ಮ ಉತ್ತರ ಕರ್ನಾಟಕದ ಖಾಯ೦ ರೆಡಿಮೇಡ್ ತಿ೦ಡಿ..ಆದ್ರ ಕಾ೦ಬಿನೇಷನ್ ಉ೦ಡಿ-ಅವಲಕ್ಕಿ ಅನ್ನೋದ ಛಲೋ..! ಶಿರಾದ್ದು ನ೦ತರದ ಸ್ಥಾನ.
ನೀವು ಬಹುಷಹ ಉತ್ತರ ಕನ್ನಡದ ತಿ೦ಡಿಯ ಬಗ್ಗೆ ತಿಳಿಸಿದ್ದೀರಿ ಅನ್ಸತ್ತೆ..ಇಲ್ಲಿ ಶಿವು ಅವರು ಉತ್ತರ ಕರ್ನಾಟಕದ ಮಿತ್ರರಿಗೆ ಮಾಡಿಕೊಡಬಹುದಿತ್ತು ಎ೦ದು ಕಾಮೆ೦ಟ್ ಹಾಕಿದ್ದರು..ಅದಕ್ಕೆ ಇಷ್ಟು ಜಿಜ್ಞಾಸೆ..! ಒಟ್ಟಾರೆ ಉತ್ತಮ ಮಾಹಿತಿ.
ಶುಭಾಶಯಗಳು
ಅನ೦ತ್

Raghu ಹೇಳಿದರು...

ಅವಲಕ್ಕಿ ಶಿರಾ super..
ನಿಮ್ಮವ,
ರಾಘು.

ಸೀತಾರಾಮ. ಕೆ. / SITARAM.K ಹೇಳಿದರು...

ನಾನೊಬ್ಬ ಅವಲಕ್ಕಿ ಪ್ರಿಯ!!! ವರ್ಷವೀಡಿ ಅವಲಕ್ಕಿ ತಿನ್ನೆಂದರೆ ನಾನು ಸರಿ ಅನ್ನೋನು! ಅದನ್ನು ಸುಮಾರು ೫೦-೬೦ ವಿಧಾನದಲ್ಲಿ ಮಾಡಿ ತಿನ್ನುತಾ ಇದ್ದೆ ಬ್ರಹ್ಮಚಾರಿ ವಿಧಾನದಲ್ಲಿ!! ಅದರ ಪಾಯಸ ಮಾಡುತ್ತಾ ಇದ್ದೆ ಆದರೆ ಶಿರಾ ಏಕೆ ಹೊಳೆಯಲಿಲ್ಲಾ ಅಂಥಾ ಬೇಜಾರಾಯಿತು! ಆದರೇನಂತೆ.. ಈಗ ಗೊತ್ತಾಯ್ತಲ್ಲ!! ಸಕ್ಕರೆ ಏರಿದರು ಪರವಾ ಇಲ್ಲ ಈ ರವಿವಾರ ಮನೆಲ್ಲಿ ಮಾಡೋದೇ!!
ಧನ್ಯವಾದಗಳು!

Subrahmanya ಹೇಳಿದರು...

ಇದೊಂದತರಹ ಚೆನ್ನಾಗಿದೆ. ನನ್ನವಳಿಗೆ ತೋರಿಸಿದ್ದೇನೆ. ಮುಂದೆಯೂ ಶಿರಸ ಭವನದ ಪಾಕಗಳು ಬರುತ್ತಿರಲಿ.

ಸಾಗರಿ.. ಹೇಳಿದರು...

ತೇಜಸ್ವಿನಿ ಅವರೆ,
ಬಹಳ ರುಚಿಈಈಯಾಗಿ ಬರೆದಿದ್ದೀರಿ ರುಚಿ ರುಚಿ ಅವಲಕ್ಕಿ ಶಿರಾ ಮಾಡುವ ವಿಧಾನವನ್ನ.

ಮನಸು ಹೇಳಿದರು...

nimma lekhana nodi ee sihi prayatnisi aanantra nimage comment haakuttaliddene.... neevu kotta aLateyante prayatniside tumba chennagittu... so nice

dhanyavadagaLu.... heege mattastu adige kalisi kodi.

V.R.BHAT ಹೇಳಿದರು...

nice

ತೇಜಸ್ವಿನಿ ಹೆಗಡೆ ಹೇಳಿದರು...

ಅವಲಕ್ಕಿ ಶಿರಾವನ್ನು ಮೆಚ್ಚಿಕೊಂಡು ಪ್ರಯತ್ನಿಸಬೇಕೆಂದಿರುವವರಿಗೆ All The Bestuu... ಈಗಾಗಲೇ ಪ್ರಯತ್ನಿಸಿ ತಿಂದು ಸಂತೋಷ ಪಟ್ಟಿರುವ ಎಲ್ಲರಿಗೂ ಧನ್ಯವಾದಗಳು...:)

ಕೆಲವರು ಯಾವ ಅವಲಕ್ಕಿಯನ್ನು ಬಳಸಬೇಕೆಂದು ಕೇಳಿದ್ದಾರೆ. ಅವಲಕ್ಕಿ ದಪ್ಪದ್ದಾಗಿರಲೀ ಇಲ್ಲಾ ತೆಳುವಾಗಿರಲಿ... ಅದನ್ನು ಚೆನ್ನಾಗಿ ಹುರಿದು ಹುಡಿಮಾಡಿಕೊಂಡು ಬಳಸುವುದರಿಂದ ಯಾವ ರೀತಿಯ ಅವಲಕ್ಕಿಯಾದರೂ ನಡೆಯುತ್ತದೆ.

@ದಿವ್ಯಾ,

ಬೆಲ್ಲ ಹಾಕಿ ಮಾಡಿದರೆ ಅಷ್ಟೊಂದು ರುಚಿಯೆನಿಸಿದೇನೋ... ಅಂಟು ಅಂಟಾಗಿ ಸ್ವಾದ ಕೆಡಬಹುದು. ನಾನಿನ್ನೂ ಮಾಡಿ ನೋಡಿಲ್ಲ. ಮೊದಲ ಪ್ರಯತ್ನ ನಿನ್ನಿಂದಲೇ ಆಗಲಿ... Good Luck :-p :)

ಕ್ಷಣ... ಚಿಂತನೆ... ಹೇಳಿದರು...

ಅವಲಕ್ಕಿ- ಶಿರಾ ಚೆನ್ನಾಗಿದೆ. ಶಿರಾ ಎಂಬುದನ್ನು ನಾನು ಕೇಳಿದ್ದು ಬದಾಮಿ ಪಟ್ಟದಕಲ್ಲು ಈ ಕಡೆ ಪ್ರವಾಸ ಹೋಗಿದ್ದಾಗ.. ಅಲ್ಲಿನ ಒಂದು ಹೋಟೆಲಿನಲ್ಲಿ ಉಪ್ಪಿಟ್ಟು ಶಿರಾ ಎಂದು ಬರೆದಿದ್ದು ಓದಿದಾಗ ಅರ್ಥವಾಗಿರಲಿಲ್ಲ ನಮಗೆ... ಆಗ ಹೊಸ ರುಚಿ ಇರಬೇಕು ಎನಿಸಿ ಆರ್ಡರ್‌ ಕೊಟ್ಟಾಗ 'ಶಿರಾ' ಎಂದು ತಂದಿಟ್ಟದ್ದು ನಮ್ಮ ಮಂಡೆಗೆ 'ಕೇಸರೀಭಾತ್‌' ಎಂಬುದನ್ನು ತಿಳಿಸಿತು.

ಸ್ನೇಹದಿಂದ...

ಮನಸಿನಮನೆಯವನು ಹೇಳಿದರು...

ತೇಜಸ್ವಿನಿ ಹೆಗಡೆ- ,

ಏನ್ರೀ.. ವನಿತಾ ಅವರ ಅಡುಗೆಮನೆಯಿಂದ ಪಲಾವ್ ಮಾಡ್ತೀನಿ ಅಂತ ಬಂದು ಇಲ್ಲೇನೋ ಬೇರೆನೆ ಹೊಸಾದ್ ಮಾಡಿದ್ದೀರಾ..
ಆದ್ರು ಚೆನ್ನಾಗಿದೆ..

ಮನಸ್ವಿ ಹೇಳಿದರು...

ತೇಜಕ್ಕಾ.. ಶಿರಸಿ ಕಡೆವು ಯಾರೇ ಬಂದ್ರೂ ದಿಡೀರ್ ಅಂತ ಮಾಡದೇ ಶಿರಾ.. ಅಲ್ಲಿ ಅಷ್ಟು ಚನಾಗಿ ಶಿರಾ ಮಡಲೆ ಸಾಗರದವಕ್ಕೆ ಬತ್ತಿಲ್ಲೆ! ಅಂದಂಗೆ ಇದು ಮಾಡ್ಕ್ಯಂಡು ತಿಂಬದಲ್ದೇ ಉಪವಾಸ ಆದ್ರೂ ಮಾಡ್ಬಿಡ್ತಿ ಮಾಡ್ಕ್ಯಂಡು ತಿನ್ನಕ್ಕೆ ಆಗ್ತಲ್ಲೇ ;)....... ಮಾಡಿಕೊಟ್ಟರೆ ತಿನ್ನ ಶಿರಾ.. ನಾನು ಮಾಡಕ್ಕೆ ಹೋದ್ರೆ ಬೇರೆ ಎಂತಾರು ಆಗ್ತು, ಅದ್ಕೆ ಹೆಂಡ್ತಿಗೆ ಹೇಳ್ತಿ ಅವಲಕ್ಕಿ ಶಿರಾ ಮಾಡ್ಕೊಡು ಹೇಳಿ.. ಬಾಯಲ್ಲಿ ನೀರು ಬತಾ ಇದ್ದು.. ಚನಾಗಿ ಬರದ್ದೆ..

shridhar ಹೇಳಿದರು...

ತೇಜಸ್ವಿನಿ ಮೇಡಮ್,
ಪಾಕಶಾಲೆಯ ಪಾಕ ಚೆನ್ನಾಗಿದೆ ..

ಅಕ್ಕ ಸಮ್ಮೇಳನದಲ್ಲಿ ತಾವು ಬರೆದ ಕಥೆ ಮೊದಲ ೨೦ರ ಪಟ್ಟಿಯಲ್ಲಿ ಆದ್ಯತೆ ಪಡೆದಿದ್ದಕ್ಕೆ ಅಭಿನಂದನೆಗಳು

ಸಾಗರದಾಚೆಯ ಇಂಚರ ಹೇಳಿದರು...

ಅವಲಕ್ಕಿ ಶಿರಾ ಚೆನ್ನಾಗಿದ್ದು

ತಡವಾಗಿ ಬಂಜಿ

ಅವಲಕ್ಕಿ ಖಾಲಿ ಮಾಡದ

Anuradha ಹೇಳಿದರು...

ಅವಲಕ್ಕಿ ಶಿರಾ ಮಾಡೇ ಗೊತ್ತಿಲ್ಲ .. ಮಾಡಿನೋಡುತ್ತೇನೆ . ತಿಳಿಸಿಕೊಟ್ಟದ್ದಕ್ಕೆ ವಂದನೆಗಳು .