ಸೋಮವಾರ, ಅಕ್ಟೋಬರ್ 8, 2012

ಅನುರೂಪ

ಕೊಡಲೇನು ನಿನಗೆ ಉಡುಗೊರೆಯ?
ಎಣಿಸ ಹೊರಟರೆ ಎಲ್ಲವೂ ಪೂರ್ಣ!

ಕಣ್ಗಳ ಹನಿ ಮುತ್ತುಗಳನೇ ಪೋಣಿಸಿ ಕೊಡ ಹೊರಟರೆ,
ನಿನ್ನ ತೋರ್ಬೆರಳುಗಳು ಅಣೆಕಟ್ಟು ಕಟ್ಟಿ,
ಚಿಮ್ಮಿಬಿಟ್ಟವು ಬಾನಂಗಳಕೆ.

ಹೂನಗುವನರಳಿಸಿ ನಿನ್ನಡಿಗಳಿಗಿಡ ಹೊರಟರೆ,
ನಗೆ ಮೊಗ್ಗೊಂದು ನಿನ್ನ ತುಟಿಯಂಚಲರಳಿ,
ನನ್ನೆದೆಯೊಳಿಹ ನಿನ್ನದೇ ಚಿತ್ರವನ್ನೇರಿತು!.

ನಿನ್ನ ನನಸಾಗದ ಕನಸುಗಳ ಕನವರಿಕೆಯಾಲಿಸಲು,
ತಲೆದಿಂಬಿಗೆ ನಾ ಕಿವಿಯಾಗಿ ಕುಳಿತರೆ,
ನಿನ್ನೊಂದೊಂದು ಕನಸೊಳಗೂ 
ನನ್ನಾಶಯಗಳನೇ ಕಂಡೆ.

ನಿನ್ನ ತಡವಿದಲೆಲ್ಲಾ ನನ್ನ ಮೈಯ ರೋಮಗಳು, ರಂಧ್ರಗಳು.
ನನ್ನ ಉಚ್ಛ್ವಾಸದೊಳಗಿನ ಬಿಸಿಯುಸಿರ ತಂಪಾಗಿಸೂ ನಿನ್ನ ನಿಶ್ವಾಸ.
ಒಳಗಿನ ಜೀವ ಸಂಚಲನದೊಳಗೆಲ್ಲಾ ನಿನ್ನದೇ ಪ್ರತಿಫಲನ.
ನಾ-ನೀ 
ಅರ್ಧನಾರೀಶ್ವರ!

~ತೇಜಸ್ವಿನಿ ಹೆಗಡೆ

7 ಕಾಮೆಂಟ್‌ಗಳು:

sunaath ಹೇಳಿದರು...

ಇದೀಗ ಸಫಲ ದಾಂಪತ್ಯ!

shivu.k ಹೇಳಿದರು...

ಮಾನಸ ಮೇಡಮ್,

ನಿನ್ನ ನನಸಾಗದ ಕನಸುಗಳ ಕನವರಿಕೆಯಾಲಿಸಲು,
ತಲೆದಿಂಬಿಗೆ ನಾ ಕಿವಿಯಾಗಿ ಕುಳಿತು, ಕಾದ ಶಬರಿಯಾದರೆ,
ನಿನ್ನೊಂದೊಂದು ಕನಸೊಳಗೂ ನನ್ನಾಶಯಗಳನೇ ಕಂಡು ಬುಗುರಿ ಹಣ್ಣಾದೆ

ತುಂಬಾ ಇಷ್ಟವಾಯ್ತು. ಇದರಲ್ಲಿ ಬುಗರಿ ಹಣ್ಣಾದೆ ಎನ್ನುವ ಪದದ ಅರ್ಥವೇನು?

ತೇಜಸ್ವಿನಿ ಹೆಗಡೆ ಹೇಳಿದರು...

@ಸುನಾಧ ಕಾಕ,

:):):)

@ಶಿವು.ಕೆ,

ಮೆಚ್ಚಿದ್ದಕ್ಕೆ ಧನ್ಯವಾದಗಳು. ಬುಗುರಿಹಣ್ಣಾದೆ - ಇಂದು ಒಂದು ಸಾಂಕೇತಿಕವಾಗಿ ಸೂಚಿಸಲಾದ ಪದ. ಶಬರಿ ರಾಮನಿಗೆ ರುಚಿ ನೋಡಿ ಕೊಟ್ಟ ಹಣ್ಣಿದು. ಈ ಹಣ್ಣಿನ ಸವಿ ಅವಳೊಳಗೆ ತುಂಬಿತು ತನ್ನಾಶಯವನ್ನೇ ಅವನ ಕನಸುಗಳೊಳಗೆ ಕಂಡು ಎಂಬರ್ಥದಲ್ಲಿ ಹೇಳಿದ್ದು. :)

ಮನಸು ಹೇಳಿದರು...

ಬುಗುರಿ ಹಣ್ಣಾದೆ ಎಂತಹಾ ಸಾಲು.. ಸೂಪರ್ ತೇಜು :)

ಮನಸು ಹೇಳಿದರು...

ಕಾಕ ಬೇಂದ್ರೆ ಯವರ”ಕುರುಡು ಕಾಂಚಾಣ’ ಈ ಹಾಡಿನ ವಿವರವನ್ನು ಕೊಡಬಲ್ಲಿರಾ.. ನಿಮ್ಮ ಬ್ಲಾಗ್ ನಲ್ಲಿ ಹುಡುಕಿದೆ ಸಿಗಲಿಲ್ಲ... ಬಹಳ ದಿನಗಳಿಂದ ನಿಮ್ಮನ್ನು ಕೇಳಬೇಕು ಎಂದುಕೊಂಡಿದ್ದೆ ಈ ಹಾಡು ಏಕೋ ಬಹಳಷ್ಟು ಕಾಡುತ್ತಿದೆ.

ಸಿಂಧು sindhu ಹೇಳಿದರು...

ಒಂದು ತುಂಟತನದ ಪ್ರಶ್ನೆ.
ಈಶ್ವರ ಓದಿದ್ನಾ ಇದನ್ನ?

ನಿನ್ನ ತೋರ್ಬೆರಳುಗಳು ಅಣೆಕಟ್ಟು ಕಟ್ಟಿ, ಎಂತ ಚೆಂದದ ಸಾಲು.

ಸುನಾಥ ಕಾಕ ಚಂದದ ಮಾತು ಹೇಳಿದ್ದ.
you are blessed!
ಪ್ರೀತಿಯಿಂದ,
ಸಿಂಧು

Subrahmanya ಹೇಳಿದರು...

ಹ್ಮ :) ಸರಿ, ಸರಿ. ಚೆನ್ನಾಗಿದೆ.