ಭಾನುವಾರ, ಜೂನ್ 17, 2012

ಒಂದು ದಿವಸಕ್ಕಲ್ಲಾ.. ಪ್ರತಿ ನಿಮಿಷ...


ಅಪ್ಪಾ...... 
-ಈ ಸುಂದರ, ಅನನ್ಯ, ಅನೂಹ್ಯ  ಬಂಧವನ್ನು ಒಂದು ದಿನದ ಬಂಧಿಯಾಗಿಸಲೇ ಮನಸೊಪ್ಪದು. ಪ್ರತಿ ದಿನ, ಕ್ಷಣ ನನ್ನ ಜೀವನದ ಭಾಗವಾಗಿರುವ ಅಪ್ಪನನ್ನು ನೆನಪುಗಳ ಹಂಗೂ ಬಾಧಿಸದು....ನೆನಪಾಗಲು ಅರೆಕ್ಷಣದ ಮರೆವಾದರೂ ಬೇಕಲ್ಲ!!!  ನಾನು ಇಂದು ನಾನಾಗಿರಲು.. ನನ್ನೊಳಗಿನ ನನ್ನ ಸದಾ ನನ್ನೊಂದಿಗೆ ಜೊತೆಗೂಡಿ ನಡೆಯುವಂತಾಗಿರಲು ನನ್ನ ಅಪ್ಪನೇ ಕಾರಣ. ಕೆಲವೊಂದು ಭಾವಗಳ ಅಕ್ಷರಗಳಲ್ಲಿ ಹಿಡಿಯಲಾಗದು.. ತೆರೆಯಲಾಗದು.  

ಅಪ್ಪಾ ಚಿಕ್ಕವಳಿದ್ದಾಗ ನಮಗೆಲ್ಲಾ ಒಂದು ಶ್ಲೋಕವನ್ನು ಕಲಿಸಿಕೊಟ್ಟಿದ್ದ...

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಮ್
(ಭಗವದ್ಗೀತೆ, ಧ್ಯಾನಶ್ಲೋಕ)
[ಅರ್ಥ:-ಮೂಗನನ್ನು ಮಾತಾಡಿಸುತ್ತಾನೆ, ಕಾಲಿಲ್ಲದವನನ್ನು ಪರ್ವತವನ್ನು ಹತ್ತುವಂತೇ ಮಾಡುತ್ತಾನೆ, ಅಂತಹ ಕೃಪಾಳುವಾಗಿರುವ, ಪರಮಾನಂದವನ್ನು ನೀಡುವ, ಮಾಧವನನ್ನು ನಾನು ವಂದಿಸುವೆ.]

ಇಲ್ಲಿಂದಲೇ ಕೃಷ್ಣ ನನಗೆ ಆಪ್ತನಾಗುತ್ತಾ ಹೋದ. ಇದಕ್ಕೆ ತುಸು ಮಟ್ಟಿಗೆ ಕಾರಣ ನನ್ನಪ್ಪನ ಹೆಸರಾದ "ಗೋಪಾಲಕೃಷ್ಣ". ಈ ಹೆಸರೊಳಗೂ ಅವನೇ ಇದ್ದನಲ್ಲಾ... ಮುಂದೆ ಆಕಸ್ಮಿಕವೋ ಇಲ್ಲಾ ವಿಧಿ ಲಿಖಿತವೋ...ನನ್ನ ಸಂಗಾತಿಯ ಹೆಸರೊಳಗೂ ಕೃಷ್ಣನೇ ದೊರಕಿದ್ದು!!:)

ಆ ನನ್ನ ಬಾಲ್ಯದ ದಿನಗಳಲ್ಲಿ ನನ್ನ ವಯಸ್ಸಿನ ಇತರ ಮಕ್ಕಳು ಓಡಾಡುತ್ತಾ... ಬೇಕಾದಲ್ಲಿ ಹೋಗುತ್ತಾ... ಜಿಗಿಯುತ್ತಾ ಇರುವಾಗ, ಅವರೊಂದಿಗೆ ಹಾರಲಾಗದೇ, ಆಡಲಾಗದೇ, ಓಡಲಾಗದೇ ಕುಳಿತಲ್ಲೇ ಅವನ್ನೆಲ್ಲಾ ಕಣ್ತುಂಬಿಕೊಳ್ಳುತ್ತಾ... ನನ್ನೊಳಗೇಳುತ್ತಿದ್ದ ನೂರಾರು ಸಂದೇಹಗಳಿಗೆ ವಿಪ್ಲವಗಳಿಗೆ, ನೋವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾನಸಿಕವಾಗಿ ನನ್ನ ಬಹು ಎತ್ತರಕ್ಕೇರಿಸಿದವ ನನ್ನಪ್ಪ.

ಆಗ ನನಗೆ ಕೇವಲ ಆರೇಳು ವರುಷಗಳಷ್ಟೇ ಆಗಿರಬಹುದು. ಪ್ರತಿ ದಿವಸ ಹೇಳುತ್ತಿದ್ದ ಹಲವು ಶ್ಲೋಕಗಳಲ್ಲಿ ಒಂದಾಗಿದ್ದ "ಮೂಕಂ ಕರೋತಿ.." ಶ್ಲೋಕದ ಅರ್ಥವನ್ನಂತೂ ಮೊದಲೇ ತಿಳಿದಿದ್ದೆ. ಅಂತೆಯೇ ಒಂದಿ ದಿವಸ ಅಪ್ಪನನ್ನೇ ಕೇಳಿ ಬಿಟ್ಟೆ "ಕಾಲಿಲ್ಲದವಗೆ ಪರ್ವತವನ್ನೇ ಏರುವ ಶಕ್ತಿ ಕೊಡುವ ಈ ಕೃಷ್ಣನನ್ನು ಪ್ರತಿ ದಿವಸ ಪ್ರಾರ್ಥಿಸುವ .. ಪೂಜಿಸುವ ನನಗೇಕೆ ಹೀಗೆ??" ಎಂದು. ಆಗ ಅಪ್ಪನ ಮೊಗದೊಳಗೆ ಮೂಡಿದ್ದ ಪ್ರಶಾಂತ ನಗು ಈಗಲೂ ಚೆನ್ನಾಗಿ ನೆನಪಿದೆ. ಅಷ್ಟೇ ಸುಂದರ ಸರಳ ಅವಿಸ್ಮರಣೀಯ ಉತ್ತರವನ್ನಿತ್ತಿದ್ದ ನನ್ನಪ್ಪ. ಅದೇ ಉತ್ತರ ನನ್ನ ಬದುಕಿನ ಪ್ರತಿ ಹಂತದಲ್ಲೂ ನನ್ನನ್ನು ಹಂತ ಹಂತವಾಗಿ ಮೇಲೇರಿಸಲು ಕಾರಣವಾಯಿತು. 

"ದೈಹಿಕವಾಗಿ ಹಾರಿ ಜಿಗಿಯುವ ಶಕ್ತಿಗಿಂತ ಸಾವಿರಾರು ಪಟ್ಟು ಶಕ್ತಿಶಾಲಿ ನಮ್ಮ ಮಾನಸಿಕ ಶಕ್ತಿ.. ಧೀಃಶಕ್ತಿ! ಅದರ ಪ್ರಾಪ್ತಿಗಾಗಿ ಮನೋಸಂಕಲ್ಪ, ದೃಢತೆ, ಆತ್ಮವಿಶ್ವಾಸ, ಛಲ - ಇವು ಅತ್ಯವಶ್ಯಕ. ಇವುಗಳನ್ನು ಗಳಿಸಲು, ಹೊಂದಲು... ಹೊಂದಿ ನೀನೂ ಮಾನಸಿಕವಾಗಿ ಇತರರಂತೇ.. ಸಾಧ್ಯವಾದರೆ ಇತರರಿಗಿಂತ ಮೇಲೇರಲು ಖಂಡಿತ ಸಾಧ್ಯವಾಗುತ್ತದೆ. ಅದಕ್ಕೊಂದು ಮಾರ್ಗ, ಸಾಧನ ಈ ನಿನ್ನ ಕೃಷ್ಣ". ಅಪ್ಪನ ಈ ಮಾತಿನ ಒಳಗಿದ್ದ ಸಾವಿರ ಅರ್ಥ ಬುದ್ಧಿ ಬೆಳೆದಂತೇ ಒಂದೊಂದಾಗಿ ಅರಿವಾಯಿತು...ಅರಿವಾಗುತ್ತಿದೆ.. ಇನ್ನೂ ತಿಳಿಯಬೇಕಿರುವುದು ನೂರಿವೆ!

ನನ್ನ ನೋವಿಗೆ ಅಪ್ಪ ಸ್ಪಂದಿಸಿದ... ನನ್ನೊಳಗಿನಾ ಆತ್ಮವಿಶ್ವಾಸಕ್ಕೆ ಆತ ನೀರೆರೆದು ಪೋಷಿಸಿದ, ಬದುಕಿನ ಹಲವು ಘಟ್ಟಗಳಲ್ಲಿ, ತಿರುವಿನಲ್ಲಿ.. ಮಹತ್ ಪರೀಕ್ಷೆಗಳಲ್ಲಿ ಹಿಂದೆಯೇ ಇದ್ದು, ನಾನೇ ಸ್ವಯಂ ಮುನ್ನೆಡೆವಂತೇ ಮಾಡಿದ ನನ್ನಪ್ಪನ ಮೇರು ವ್ಯಕ್ತಿತ್ವವನ್ನು ಕೆಲವು ಸಾಲುಗಳಲ್ಲಿ.. ಹಲವು ಪುಟಗಳಲ್ಲಿ.... ಸಾವಿರಾರು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲಾ. "ಅಸಾಧ್ಯ" ಎನ್ನುವುದೊರಳೇ "ಸಾಧ್ಯ"ವಿದೆ ಎನ್ನುವುದು ಮೊಟ್ಟಮೊದಲು ತೋರಿಕೊಟ್ಟದ್ದೇ ಅಪ್ಪ! ಅನುಕಂಪದ ಪ್ರತಿ ಅಸಹಿಷ್ಣುತೆಯನ್ನೂ.. ಸಹಕಾರದ ಮಿತಿಯನ್ನು ಅದೆಷ್ಟು ಚೆನ್ನಾಗಿ ತಿಳಿಹೇಳಿದನೆಂದರೆ ಇಂದು ನಾನು ಯಾರ ಸಹಕಾರವಿಲ್ಲದೆಯೂ ಬದುಕಬಲ್ಲೆ... ಸಹಜ ಜೀವನ ನನಗೊಲಿದಿದೆ. "ಗೀತೆಯ ಕೃಷ್ಣ"- ನನ್ನಪ್ಪನೇ ಬರೆದ ಪುಸ್ತಕ. ನನ್ನ ಅಚ್ಚುಮೆಚ್ಚಿನದ್ದು. ಅದೇ ರೀತಿ ನನ್ನಮ್ಮ ಸದಾ ಹೇಳುವ ಈ ಶ್ಲೋಕದ ಸಾಲು ನನ್ನ ಆತ್ಮಬಲ. "ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" (=ನಿನ್ನನ್ನು ಕುಗ್ಗಿಸುವ ಮನೋ ದೌರ್ಬಲ್ಯಗಳನ್ನು ಹತ್ತಿಕ್ಕಿ.. ಸಬಲನಾಗು.. ಮನೋಬಲವನ್ನು ವೃದ್ಧಿಸಿಕೋ.)

-ತೇಜಸ್ವಿನಿ.

9 ಕಾಮೆಂಟ್‌ಗಳು:

Subrahmanya ಹೇಳಿದರು...

ಈ ಹಿಂದಿನ ಮತ್ತು ಈ ಲೇಖನಗಳೆರಡನ್ನೂ ಓದಿದೆ. ಮನಸು ತುಂಬಿ ಬಂದಿತು. ಹೇಡಿತನವೇ ಮನುಜನನ್ನು ದುರ್ಬಲನನ್ನಾಗಿ ಮಾಡುತ್ತಯೇ ಹೊರತು ಮತ್ಯಾವುದೂ ಅಲ್ಲ.

ವಾಣಿಶ್ರೀ ಭಟ್ ಹೇಳಿದರು...

ishta ate. sumar nenapu bantu nanaguva

rukminimala ಹೇಳಿದರು...

ಎಲ್ಲರಿಗೂ ಇಂಥ ಅಪ್ಪನೇ ಸಿಗಬೇಕು. ಆಗ ಬದುಕು ಸುಂದರ. ನನಗೂ ಒಳ್ಳೆಯ ಮನಸ್ಸಿನ ಅಪ್ಪನೇ ಇದ್ದಾರೆ. ಅವರ ಹೆಸರೂ ಕೃಷ್ಣ
ಮಾಲಾ

Shashi Dodderi ಹೇಳಿದರು...

Excellent writeup-

Style On Streets ಹೇಳಿದರು...

Nice..loved it..:-)

minchulli ಹೇಳಿದರು...

ನಿಮ್ಮ ಧೀಶಕ್ತಿಗೆ ಅದನ್ನು ತುಂಬಿಸಿದ ಅಪ್ಪನಿಗೆ ನಮೋ...

Lakshmish Hegde ಹೇಳಿದರು...

Highly Inspiring. Thank You.

ಸಿಂಧು sindhu ಹೇಳಿದರು...

ಈ ಲೇಖನದ ಚಂದ ಮನಸ್ಸನ್ನ ಆರಾಮಗೊಳಿಸುವ ಸಂಜೆಗತ್ತಲಿನ ದೇವರದೀಪದ ಹಾಗಿದೆ.
ಸಂಜೆ ಹೊತ್ತಿಗೆ ಆಗಷ್ಟೆ ಹಚ್ಚಿಟ್ಟ ದೀಪ, ಅದೆಷ್ಟೋ ವರ್ಷಗಳಿಂದ ಹಚ್ಚುತ್ತಲೆ ಇರುವ ದೀಪ, ಇನ್ನೂ ಚಿರಕಾಲ ಬೆಳಗುವ ದೀಪ.
ಮನಸ್ಸು ನಿರಾಳ.
ನಿನ್ನ ಅಪ್ಪನಿಗೆ ನನ್ನ ಶರಣು. ನಿನ್ನ ಕೆನ್ನೆಗೊಂದು ಮುದ್ದು.
ಪ್ರೀತಿಯಿಂದ,
ಸಿಂಧು

ತಿರು ಶ್ರೀಧರ ಹೇಳಿದರು...

ನಿಮ್ಮೀ ಬರಹ ನೋಡಿ ಹೃದಯತುಂಬಿ ಬಂತು ತಂಗಿ. ನಾನೂ ನನ್ನ ಮಗಳಿಗೆ ಇಂತಹ ತಂದೆಯಾಗುವ ಶಕ್ತಿ ಪಡೆದರೆ ಎಷ್ಟು ಚೆನ್ನ ಅನಿಸಿತು. ತಮಗೂ ತಮ್ಮ ತೀರ್ಥರೂಪು ತಂದೆಯವರಿಗೂ ನನ್ನ ಹೃದಯಪೂರ್ವಕ ನಮನಗಳು.