ನೋಟ ಚಾಚುವಷ್ಟೂ ಚಾಚಿ,
ಇದ್ದ ಬಿದ್ದ ದೃಶ್ಯಗಳನ್ನೆಲ್ಲಾ ಸೆರೆ ಹಿಡಿದರೂ,
ತನಗೆ ಬೇಕಾದ್ದನ್ನಷ್ಟೇ ಮನಸೊಳಗೆ
ಪ್ರಿಂಟ್ ಹಾಕುವ ಈ ಕಣ್ಗೋಲಿಗಳಂತೇ ಈ
ಬದುಕೂ ಜಾಣ್ಮೆಯನ್ನು ಕಲಿತಿದ್ದರೆ......
ಸುಖಿಯಾಗಿರುತ್ತಿದ್ದೆನೇನೋ!
ತನಗೆಸೆದ ಎಲ್ಲಾ ಕಸ ಗುಡ್ಡೆಗಳ
ಒಂದಿನಿತೂ ಬೇಸರಿಸದೇ ಕ್ಷಣ ಒಳಗೆಳೆದುಕೊಂಡು,
ಅಲೆಗಳ ತಲೆಯ ಮೇಲೇರಿಸಿಕೊಂಡು ಬಂದು,
ಎಲ್ಲವನೂ ಮತ್ತೆ ದಡಕೆಸೆದು, ಮರಳ ಕೊಡಗುವ ಆ
ಸಾಗರನಂತೆ ನಾನಿರುವಂತಾಗಿದ್ದರೆ....
ಸುಖಿಯಾಗಿರುತ್ತಿದ್ದೆನೇನೋ!
ಗೆಳತಿ ಮುರಿದ ಕಡ್ಡಿ, ಗೆಳೆಯ ಎಳೆದ ಜಡೆ
ಎಲ್ಲವನೂ ಮರೆತು, ಮತ್ತೆ ಬೆರೆತು
ನಗುವಿನಾಚೆಯ ನೋವ ಅನುಭವವ
ಅರಿಯಲಾಗದ ಬಾಲ್ಯದ ಎಳೆತನವ ನಾನೂ-
ಒಳಗೆಳೆದುಕೊಳ್ಳುವಂತಿದ್ದರೆ....
ಸುಖಿಯಾಗಿರುತ್ತಿದ್ದೆನೇನೋ!
-ತೇಜಸ್ವಿನಿ ಹೆಗಡೆ.
9 ಕಾಮೆಂಟ್ಗಳು:
ಖಂಡಿತ ಮೇಡಂ..
ನೀವು ಹೇಳಿದಂತೆ ಇರುತ್ತಿದ್ದರೆ ಸುಖಿಯಗಿರುತ್ತಿದ್ದೆವೇನೋ...
ನಾವು ಹಾಗಿಲ್ಲ...ಬಹುಶಃ ಹಾಗಾಗುವುದೂ ಕಷ್ಟಸಾದ್ಯ.....
ನಮ್ಮ ಅತ್ರಪ್ತಿಗೆ ಕಾರಣ ಅರಿತು ಬಾಳಿದರೆ ಸುಖಿ ಆದೆವೇನೋ ನಾವು..?!
ತೇಜಸ್ವಿನಿ,
ಸರಿಯಾದ ಮಾತನ್ನು ಹೇಳಿದ್ದೀರಿ. ಇದನ್ನು ತಿಳಿದುಕೊಳ್ಳುವದೇ ಜೀವನ!
too good .. !!
ತುಂಬಾ ಚೆನ್ನಾಗಿದೆ... ಎಲ್ಲವೂ ಅಂದುಕೊಳ್ಳುವುದು ಅಷ್ಟೇ.. ಕಳೆದುಹೋದ ಘಳಿಗೆ ಮತ್ತೆ ಬಾರದು.. ತುಂಬಾ ಇಷ್ಟ ಆಯ್ತು ಕವನ
ಸಂತೋಷವನ್ನು ಆರಿಸುವ ಮತ್ತು ಅದನ್ನು ಉಳಿಸಿ ಸುಖಿಸುವುದೂ ಒಂದು ಕಲೆ. ಈ ನಿಟ್ಟಿನಲ್ಲಿ ನಿಮ್ಮ ಈ ಕವನ ನಮಗೆ ಸ್ಫೂರ್ತಿ ಕೊಡಲಿ.
ನನ್ನ ಬ್ಲಾಗಿಗೂ ಸ್ವಾಗತ.
ಇಷ್ಟ ಆಯ್ತು ತೇಜಸ್ವಿನಿ.
ತ್ಯಾಗರಾಜರು ಹಾಡಿದಂತೆ - "ಸುಖಿ ಎವರೋ, ಭುವಿಲೋ, ಸುಖಿ ಎವರೋ?"!
ಹಾಗೆ ಮಾಡಿದ್ದಿದ್ದರೆ ಸುಖವಾಗಿರುತ್ತಿದ್ದೆನೋ ಏನೋ ಎನ್ನುವ ಭಾವವೇ ಒಂದು ಕ್ಷಣಕ್ಕಾದರೂ ಕೊಡುವ ಸುಖವೇ ಲೇಸು ಅಲ್ಲವೇ?
ಒಳ್ಳೆಯ ಭಾವ ಇರುವ ಕವನ!
ಹೌದು ಮೇಡಂ, ನನಗೂ ಅನ್ನಿಸೋದು, ನಮ್ಮ ಬಾಲ್ಯ ಮರಳಿ ಬರುವಂತಿದ್ದರೆ ಎಂದು.....ಚೆನ್ನಾಗಿದೆ ಕವನ....
ನನ್ನ ಬ್ಲಾಗ್ ಗೂ ಬನ್ನಿ ...
ನೀವು ಕವನದಲ್ಲಿ ಕೊಟ್ಟಿರುವ ಸೂತ್ರ ಸರಿಯಾಗಿದೆ !.
ಕಾಮೆಂಟ್ ಪೋಸ್ಟ್ ಮಾಡಿ