ಮಂಗಳವಾರ, ಡಿಸೆಂಬರ್ 6, 2011

ಹಂಗು


ಬೇಕಿಲ್ಲ ನಿನ್ನೆಯ ನೆನಪುಗಳ ಹಂಗು
ಇಂದಿನ ವಾಸ್ತವಿಕತೆಯ ಬದುಕಲು,
ಅಂದುಕೊಂಡಾಗೆಲ್ಲಾ ಇರಿದು ಕೊಲ್ಲುವವು,
ವರ್ತಮಾನದ ಪ್ರತಿ ದಿವಸಗಳು...

ಲೇಪನವ ಹಚ್ಚಿ, ತೇಪೆಯನು ನೇಯ್ದು,
ಕೀವನ್ನು ಹೀರಿ, ಗಾಯವ ಮಾಗಿಸಲು
ಹಳೆಯ ನೆನಪುಗಳ ಸಾಥ್ ಪಡೆಯಹೋದರೆ,
‘ಹಂಗಿನರಮನೆಗಿಂತ ಹುಲ್ಲಿನ ಮನೆಲೇಸೆಂಬಂತೆ’
ಗಹಗಹಿಸಿ ನಕ್ಕು ನೂಕುವವು ಕನವರಿಕೆಗಳು!

ನಿಶೆಯ ನಶೆಯೇರಿಸುತ್ತಿದ್ದ ಶೀತಲ ಚಂದಿರ,
ಮನವ ಹಗಲಾಗಿಸುತ್ತಿದ್ದ ದಿವ್ಯ ದಿನಕರ,
ಹಕ್ಕಿಗಳ ಇಂಚರದೊಳಗಿದ್ದ ಸಂಗೀತ,
ಹರಿವ ತೊರೆಯೊಳಗಿದ್ದ ಕಿಲ ಕಿಲ
ಎಲ್ಲವೂ ಭೂತದೊಳಗೇ ಸೇರಿ, ಸೋರಿ,
ಇಂದು ಬರಿಯ ಕಣ್ಣುರಿ, ಕಣ್ಣೀರಾಗಿದ್ದೇಕೋ...?!

‘ನೀನ್ಯಾಕೋ ನಿನ್ನ ಹಂಗ್ಯಾಕೋ’ ಎಂದ ದಾಸರನ್ನೇ ನೆನೆದು
ಹಳೆಯ ನೆನಪಿನ ಹಂಗನ್ನೇ ತೊರೆಯ ಹೊರಟಂತೇ...
ಚುಚ್ಚಿ ಘಾಸಿಗೊಳಿಸುವ ವರ್ತಮಾನದ ಪ್ರತಿ ದಿವಸಗಳು
ಮುಕ್ತಿಪಡೆಯದ ಕಟು ವಾಸ್ತವಿಕತೆಗಳು....

-ತೇಜಸ್ವಿನಿ ಹೆಗಡೆ

8 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಕವಿತೆ.

Dr.D.T.Krishna Murthy. ಹೇಳಿದರು...

ಚೆಂದದ ಕವನ.

ಸಾಗರದಾಚೆಯ ಇಂಚರ ಹೇಳಿದರು...

tumbaa chendada kavana, katuvaastavateya bimbisuva kavana

sunaath ಹೇಳಿದರು...

ತೇಜಸ್ವಿನಿ,
ಭೂತದ ಹಂಗಿಗೆ ಹೊರತಾಗಿ ವರ್ತಮಾನವನ್ನು ಬಾಳಬಹುದೆ? ಚೆಲುವಾದ, ಕಟುವಾದ ಕವನವನ್ನು ನೆಯ್ದಿದ್ದೀರಿ. ಅಡಿಗರ ಕವನದ ಸಾಲೊಂದು ನೆನಪಾಗುತ್ತದೆ:
‘ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು’!

ಸಿಂಧು sindhu ಹೇಳಿದರು...

ತೇಜಸ್ವಿನೀ,

ನಿರಾಶೆಯೇ ಪಡಿಮೂಡಿದ ಕವಿತೆ!
yes reality hurts :(

ಪ್ರೀತಿಯಿಂದ,
ಸಿಂಧು

prashasti ಹೇಳಿದರು...

ಕವಿತೆ ಚೆನ್ನಾಗಿದೆ. :-)
ಆದರೆ
ಗಹಿ ಗಹಿಸಿ=ಗಹಗಹಿಸಿ
ಭೂತದೊಳೋಗೇ=ಭೂತದೊಳಗೆ
ಆಗಬೇಕಿತ್ತೇ ಅನಿಸಿತು..

ತೇಜಸ್ವಿನಿ ಹೆಗಡೆ ಹೇಳಿದರು...

@Prashasti,

ತಪ್ಪನ್ನು ತಿದ್ದಿದ್ದಕ್ಕೆ ತುಂಬಾ ಧನ್ಯವಾದಗಳು... Proof corrections ಹಾಕೋದ್ರಲ್ಲಿ ನಾನು ತುಂಬಾ ತುಂಬಾ ವೀಕು :)

ಆದರೆ ಭೂತದೊಳಗೇ ಸರಿ... ಭೂತದೊಳೋಗೇ ತಪ್ಪು. "ಳಗೇ.." ಅನ್ನೋ ಭಾವವನ್ನೇ ಸ್ಫುರಿಸುವಂತೆ ಬರೆದಿರುವೆ ಕವಿತೆಯ. :)

ಧನ್ಯವಾದಗಳು ಮಗದೊಮ್ಮೆ.

Shruthi B S ಹೇಳಿದರು...

ತೇಜಸ್ವಿನಿ ಅಕ್ಕ ನಮ್ಮ ಭೂತಕಾಲದ ಕಹಿ ನೆನಪುಗಳು ಯವಾಗಲೂ ನಮ್ಮೊ೦ದಿಗೆ ಸಾಗುತ್ತಲೇ ಇರುತ್ತದೆ, ಅದನ್ನ ಮರೆಯುವುದು ಅಷ್ಟು ಸುಲಭವಲ್ಲ, ಆದರೆ ಅವು ಯವಾಗಲೂ ನಮ್ಮ ಹಿ೦ದೆ ಇರುತ್ತದೆ. ವರ್ತಮಾನಕ್ಕೆ ಅಥವಾ ಭವಿಷ್ಯಕ್ಕೆ ನಮ್ಮ ಅನುಮತಿ ಇಲ್ಲದೆ ಬರುವುದಿಲ್ಲ....ಕವನ ಇಷ್ಟವಾಯಿತು....:)