ಮಂಗಳವಾರ, ಆಗಸ್ಟ್ 16, 2011

ಪ್ರಶ್ನೆಯಾಗಿ ಕಾಡಿದ ಮೌನ

ಅವನು ಕೇಳುತ್ತಲೇ ಇರುತ್ತಾನೆ
ಬರೆದಿಟ್ಟದ್ದೆಲ್ಲಾ ಮನದೊಳಗಿನದ್ದೇ?
ಇಲ್ಲಾ, ಇಲ್ಲದ್ದನ್ನು ಕಾಣುವ ಮನಃಸ್ಥಿತಿಯೇ?
ನಾನು ಒಳಗೊಳಗೇ ಕುದಿಯುತ್ತೇನೆ...
ಬೇಯುತ್ತೇನೆ ಕರಗಿ ಕರಟಿ ಹೊಗೆಯಾಗಿ,
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಹರಿವ ನೀರು ಮೇಲೇರಿ ಘನ ಮೋಡವಾಗಿ,
ಹನಿದು ತಂಪಾಗಿಸೋ ಮುನ್ನ,
ಧಗೆಯುರಿಯಿಂದ ಮೈ ಮನ ಸುಡುವಂತೆ...
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಬಿರಿದ ಹೂವೊಂದು, ಬಾಡಿ, ಉದುರಿ ಕೊಳೆತು,
ಮತ್ತೆ ಮೊಗ್ಗಾಗಿ, ಅರಳಿ ನಳನಳಿಸುವ ಮುನ್ನ-
ಮಣ್ಣೊಳಗೆ ಹೊಕ್ಕು ಕರಿ ಗೊಬ್ಬರವಾಗುವಂತೆ,
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಒಳಗಿನ ಭಾರದಿಂದ ಬಾಗಿದ ಎವೆಗಳನ್ನು ದಾಟಿ,
ಒಂದೊಂದಾಗಿ ಹಪಹಪಿಗಳು ಉದುರಿ,
ಕೆನ್ನೆಯ ಮೇಲೆ ನವ್ಯ ಚಿತ್ರಕಲೆ ಬರೆಯಲೆಂದೇ
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...

ಬರೆದಿಟ್ಟದ್ದು, ಬರೆದಿರುವುದು, ಬರೆಯುವಂಥದ್ದು
ಬಹು ಅಲ್ಪ, ಅಮೂಲ್ಯ, ಸಹ್ಯ.
ನಿನ್ನೊಳಗಿನ ಪ್ರಶ್ನೆ ಮಾತ್ರ ನನ್ನೊಳಗಿನ
ನನ್ನನ್ನೇ ಹಿಂಡುವಂತಿದೆ, ಇದು ಅಸಹನೀಯ.
ತನ್ನೆರಡು ಪ್ರಶ್ನೆಗಳಿಗೆ ಸಾವಿರ ಉತ್ತರ ಪಡೆದ
ಅವನೀಗ ಸಂಪೂರ್ಣ ಮೌನಿ!!

-ತೇಜಸ್ವಿನಿ ಹೆಗಡೆ.

12 ಕಾಮೆಂಟ್‌ಗಳು:

ಮನಸಿನಮನೆಯವನು ಹೇಳಿದರು...

ಉದುರಿದ ಹೂವು ಮತ್ತೆ ಅರಳುವುದೆಂತೊ.

_ನನ್ನ ಬ್ಲಾಗಿಗೂ ಬನ್ನಿ.:ಚಿಂತನಾ ಕೂಟ

sunaath ಹೇಳಿದರು...

ಈ ಕವನವೇ ಅವನ ಪ್ರಶ್ನೆಗೆ ಒಂದು ಸ್ಫೋಟಕ ಉತ್ತರ!

ದಿನಕರ ಮೊಗೇರ ಹೇಳಿದರು...

sundara mounada maatugaLu maDam....

tumbaa chennaagide...

Subrahmanya ಹೇಳಿದರು...

ನಿಜ, ಕವನದಲ್ಲೇ message ಇರುವಾಗ ಸುಮ್ಮನಿರಲೇಬೇಕು. ಕವನ ಹೆಣೆದಿರುವ ರೀತಿ ಇಷ್ಟವಾಯ್ತು.

ಸೀತಾರಾಮ. ಕೆ. / SITARAM.K ಹೇಳಿದರು...

ಮನದ ಕಹಿ ಹೊರಹಾಕಿ, ಮನದ ಸಾರಣೆಯಲ್ಲಿ ಹೊಸ ಚಿಗುರು ಕಾನುವಲ್ಲಿನ ಸ್ಥಿತಿಯನ್ನ ಎಳೆ-ಎಳೆಯಾಗಿ ವಿವರಿಸಿದ್ದಿರಾ...

ಚುಕ್ಕಿಚಿತ್ತಾರ ಹೇಳಿದರು...

nice ..tejasvini
liked ..

ಸುಷ್ಮಾ ಮೂಡುಬಿದಿರೆ ಹೇಳಿದರು...

superragide....

ವಾಣಿಶ್ರೀ ಭಟ್ ಹೇಳಿದರು...

cholo iddu tejakka :)

ಸಾಗರದಾಚೆಯ ಇಂಚರ ಹೇಳಿದರು...

''ಒಳಗಿನ ಭಾರದಿಂದ ಬಾಗಿದ ಎವೆಗಳನ್ನು ದಾಟಿ,
ಒಂದೊಂದಾಗಿ ಹಪಹಪಿಗಳು ಉದುರಿ,
ಕೆನ್ನೆಯ ಮೇಲೆ ನವ್ಯ ಚಿತ್ರಕಲೆ ಬರೆಯಲೆಂದೇ
ಹೊರ ಉಗುಳುತ್ತೇನೆ ನನ್ನೊಳಗಿನ
ನಿನ್ನಿನದೆಲ್ಲಾ ಕಹಿ ನೆನಪುಗಳನ್ನ...''

ಎಷ್ಟು ಸತ್ಯ ಅಲ್ದಾ?
ತುಂಬಾ ಇಷ್ಟ ಆತು ಪದ್ಯ

nsru ಹೇಳಿದರು...

ಭಿನ್ನ ಮನಸ್ಥಿತಿಯ ಬರಹ.. ಮೊನಚಾಗಿದೆ.. ನಿಷ್ಠುರತೆ ಇದೆ..
ಬೇಸರ ಇದೆ.. ಸಮಾಧಾನ.. ಕಡೆಗೆ ನೀರವತೆ..
ಕವನ ಸೊಗಸಾಗಿದೆ ಅಕ್ಕ :)

ತೇಜಸ್ವಿನಿ ಹೆಗಡೆ ಹೇಳಿದರು...

ಕವವನ್ನು ಮೆಚ್ಚಿ, ಸ್ಪಂದಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು :)

@nsru
ನಿಮ್ಮ ಪೂರ್ಣ ಹೆಸರು, ಪರಿಚಯ ತಿಳಿಸಿದರೆ "ತೇಜಕ್ಕ"ನಿಗೆ ತುಂಬಾ ಸಂತೋಷವಾಗುವುದು :) ಧನ್ಯವಾದ.

-ತೇಜಸ್ವಿನಿ ಹೆಗಡೆ.

nsru ಹೇಳಿದರು...

nsru ಎಂಬುದು Google ನನಗೆ ದಯಪಾಲಿಸಿದ ಹೆಸರು..Google account ನಿಂದ comment ಮಾಡ್ತೇನೆ..
ಒಳ್ಳೆ ಬರಹಗಳನ್ನು ಪ್ರೋತ್ಸಾಹಿಸುವುದು ಅಷ್ಟೇ ಉದ್ದೇಶ..
ಲೇಖನದಿಂದ ನನಗೆ ಸಿಗುವ ಖುಷಿ, ಉಪಯೋಗ - ಲೇಖನ ಬರೆದವರಿಗೆ ಸ್ವಲ್ಪವಾದ್ರು return ಕೊಡ್ಬೇಕು..
ಪ್ರತಿಕ್ರಿಯೆ ಮುಖ್ಯ, ಹೆಸರು ಗೌಣ..ಅಲ್ಲವೇ..
ಆದರೂ ನಿಮಗೆ ಸಂತೋಷವಾಗುವುದಾದರೆ ಖಂಡಿತ ಹೇಳುತ್ತೇನೆ..

ಅಭಿಮಾನ ಮತ್ತು ಗೌರವಗಳೊಂದಿಗೆ,
nsru