ಮಂಗಳತ್ತೆಯ ಪಾತ್ರದಲ್ಲಿ ಗಮನಸೆಳೆದು ಯಶಸ್ವಿಯಾಗಿರುವ ‘ಜಯಲಕ್ಷ್ಮಿ ಪಾಟೀಲ್’ ಅವರು ಓರ್ವ ಉತ್ತಮ ಕವಯಿತ್ರಿಯೂ ಆಗಿರುವರೆಂದು ನನಗೆ ಅರಿವಾದದ್ದೇ ಅಂದು ಇದ್ದಕಿದ್ದಂತೇ ಅವರು ಕಳುಹಿಸಿದ, ಅವರದೇ ಕವನಸಂಕಲನವನ್ನೊಳಗೊಂಡ ಮಿಂಚoಚೆಯಿಂದ!
"ನೀಲ ಕಡಲ ಬಾನು"- ಆಹ್.. ನನ್ನ ಅಚ್ಚುಮೆಚ್ಚಿನ ಕಡಲಿನ ಜೊತೆ ಅತಿ ಮೆಚ್ಚಿನ ನೀಲಬಣ್ಣದ ಮಿಶ್ರಣ! ಸಂಕಲನದ ಶೀರ್ಷಿಕೆಯೇ ಒಮ್ಮೆ ನನ್ನ ಸೆಳೆಯಿತು. ಮಿಂಚಿಂಚೆಯಿಂದ ಕವನ ಸಂಗ್ರಹವನ್ನು ಭಟ್ಟಿಯಿಳಿಸಿ ನಿಧಾನವಾಗಿ ತಲೆಯೊಳಗೆ ಹೀರಿಕೊಳ್ಳುತ್ತಿರುವಾಗಲೇ ಅನಿಸಿದ್ದು... ಕೆಲವೊಂದು ಕವಿತೆಯ ಸಾಲುಗಳು ಅದೆಷ್ಟು ಚೆನ್ನಾಗಿ ನನ್ನ ಭಾವಗಳನ್ನೇ ಸ್ಪುರಿಸುತ್ತಿವೆಯಲ್ಲಾ...! ಇಲ್ಲಾ ಹೆಚ್ಚಿನ ಹೆಣ್ಮಕ್ಕಳ ಭಾವನೆಗಳೆಲ್ಲಾ ಹೀಗೇ ಇರುತ್ತವೋ ಎಂತೋ... ಎನ್ನುವಷ್ಟು ಆಪ್ತವಾದವು... ಹೃದ್ಯವಾದವು.
ಈ ಕವನ ಸಂಕಲನವು ೨೦೦೮ರಲ್ಲಿ "ಸಿವಿಜಿ" ಪಬ್ಲಿಕೇಷನ್ ಅವರಿಂದ ಪ್ರಕಟಣೆಗೊಂಡಿದೆ. ಈ ಕವನಸಂಕಲನದಲ್ಲಿ ಒಟ್ಟೂ ೮೪ ಪುಟಗಳಿದ್ದು ಒಟ್ಟೂ ೫೧ ಕವನಗಳನ್ನೊಳಗೊಂಡಿದೆ. ಡಾ.ಎಚ್.ಎಲ್ ಪುಷ್ಪ ಅವರು ಮುನ್ನುಡಿ ಬರೆದಿದ್ದಾರೆ.
ಆದರೆ ಈ ಪುಸ್ತಕದ ಪ್ರತಿಗಳು ಈಗ ಅವರಲ್ಲಿಲ್ಲವಂತೆ. ಬಹು ಹಿಂದೆ ಪ್ರಕಟವಾಗಿ.. ತದನಂತರ ಪ್ರಕಟನೆಗೆ ಪ್ರಕಾಶಕರು ಸಿಗದೇ ಹಾಗೇ ಉಳಿದಿದೆ.
ಈ ಕವನಸಂಗ್ರಹದಲ್ಲಿ ನನಗಿಷ್ಟವಾದ ಕವನಗಳಿಷ್ಟು -
ಅರಿಕೆ, ತಾಯಿಮತ್ತು ಮಗಳಿಗೆ, ರೂಪಕ, ಬತ್ತಲಾಗುವುದೆಂದರೆ..., ಸೆಲೆ, ನಾನು Vs ನೀನು, ವಿಲಾಸಿ, ಅಂತರಂಗ, ಬಿಂಬ, ಗಾಯ, ಸಮುದ್ರ, ವಾಚಾಳಿ, ಅನುಭವ್ಸು, ವಿರಹ, ಹೂ ಹಾಸು ನಾ ಹಾಗೂ ದಿನ(ಕರ)ಚರಿ.
ನಾನು Vs ನೀನು ಕವನದ ಕೊನೆಯಲ್ಲಿ ಬರುವ ಈ ಸಾಲುಗಳು ನನಗೆ ಬಹು ಇಷ್ಟವಾದವು.
"ಒಂಟಿ, ವಿರಹಿ ನದಿ ನಾನು
ನೀನೋ ಸಮುದ್ರ!" - ಈ ಎರಡು ಸಾಲುಗಳಲ್ಲಿ ಅಡಕವಾಗಿರುವ ವ್ಯಂಗ್ಯ, ನೊವು, ಹತಾಶೆ ಮನತಟ್ಟಿದವು. ಎರಡೇಸಾಲುಗಳು ಸಂಪೂರ್ಣಕವಿತೆಯ ಅಂದವನ್ನು ಎತ್ತಿಹಿಡಿವಂತೆ, ನೂರು ಭಾವಗಳನ್ನು ಸ್ಫುರಿವಂತೆ ಭಾಸವಾದವು.
‘ನೀಲ ಕಡಲ ಬಾನು’ವಿನಿಂದ ಇಳಿದು ಬಂದ ಕೆಲವು ಹನಿಗಳಿವು... - (Click on the Photo to read)
ತಮ್ಮ ಈ ಸುಂದರ ಕವನಸಂಗ್ರಹವನ್ನು ನನಗೆ ಕಳುಹಿಸಿ ಓದಲು ಅವಕಾಶವನ್ನಿತ್ತ ಜಯಲಕ್ಷ್ಮೀ ಅವರಿಗೆ ತುಂಬಾ ಧನ್ಯವಾದಗಳು. ಈ ಪುಸ್ತಕ ಮತ್ತೆ ಪ್ರಕಟಣೆಗೊಳ್ಳುವಂತಾಗಲಿ ಎಂದು ಹಾರೈಸುವೆ.
-ತೇಜಸ್ವಿನಿ ಹೆಗಡೆ.
9 ಕಾಮೆಂಟ್ಗಳು:
ತೇಜಸ್ವಿನಿ,
ಜಯಲಕ್ಷ್ಮಿಯವರ ಕವನಗಳು ತುಂಬ ಇಷ್ಟವಾದವು. ಅವರನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು.
ತೇಜಸ್ವಿನಿ...ಜಯಕ್ಕನವರ ಕವನ ಸಂಕಲನ ..ಹೊರ ಬಂದಿರುವುದೇ ನನಗೆ ಗೊತ್ತಿಲ್ಲ..ಇದನ್ನು ತಿಳಿಸಿ ಮತ್ತೆ ಅದರಲ್ಲಿನ ಹೂರಣದ ಸ್ವಾದದ ಪರಿಚಯ ಮಾಡಿಸಿದ್ದು...ಮತ್ತೆ ನಾಡಿಗೆ ಬಂದಾಗ ಖಂಡಿತಾ ಓದಬೇಕು...ಧನ್ಯವಾದ
ಓಹೋ.. ಜಯಲಕ್ಷ್ಮಿ ಪಾಟೀಲ್ ಅವರ ಕವನ ಸಂಕಲನದ ಬಗ್ಗೆ ಗೊತ್ತೇ ಇರಲಿಲ್ಲ... ಧನ್ಯವಾದಗಳು ... ನಿಮ್ಮ ಇಸ್ಟದ ಕವನಗಳನ್ನ ನಮಗೆ ನೀಡಿದ್ದೀರಿ ಖಂಡಿತಾವಾಗಿಯೂ ಚೆನ್ನಾಗಿದೆ ನನಗೂVSನೀನು ನಾನು ಕವನದ ಕೊನೆಯ ಸಾಲು ತುಂಬಾ ಇಷ್ಟವಾಯಿತು...
ಜಯಲಕ್ಷ್ಮಿಯವರ ಕವನಗಳು ಕವನಗಳು ಮನಸೆಳೆಯುವ೦ತಿವೆ. ನಮ್ಮೊಡನೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು.
ಮಿಂಚಿಂಚೆ ಅಂದ್ರೇನು? e-mail?
@Sukhes,
Yes... you are right.
ಮೇಡಮ್,
ನನಗೂ ಅವರ ಮಿಂಚಂಚೆ ಕಳಿಸಿಬಿಡಿ ನಾವು ಒಮ್ಮೆ ಓದಿ ಪುನೀತರಾಗಿಬಿಡೋಣ..ಹಾಗೆ ನೋಡಿದರೆ ನಾನು ಅವರ ಧಾರವಾಹಿಗಳನ್ನು ನೋಡುತ್ತೇನೆ. ಅವರ ಅಭಿಮಾನಿ ನಾನು...
ನೀಲ ಕಡಲ ಬಾನು ..ತುಂಬಾ ಸುಂದರವಾದ ಕವನ ಸಂಕಲನ ." ಮುಗುಳ್ನಗೆಯಲ್ಲಿ " ಸಂಗೀತ ಸಂಜೆಯಲ್ಲಿ ಭೇಟಿಯಾದಾಗ ಕವನಸಂಕಲನದ ಪ್ರತಿಗಳಿಲ್ಲ ಎಂದು ತಿಳಿಸಿದ್ದರು .ಆದಷ್ಟು ಬೇಗ ಮರುಮುದ್ರಣ ಕಾಣಲಿ ಎಂದು ಹಾರೈಸುತ್ತೇನೆ .
even i have read this.. its very nice.
ಕಾಮೆಂಟ್ ಪೋಸ್ಟ್ ಮಾಡಿ