ಗುರುವಾರ, ಅಕ್ಟೋಬರ್ 28, 2010

ಮಗುವ ನಗುವಿರಲವ್ವ ಮನದ ತುಂಬಾ.....


Courtesy - http://umic.miami.edu/

ಕೆಲವು ವರ್ಷಗಳ ಹಿಂದಿನ ಮಾತು. ಪೂಜೆಗೆಂದು ಕರೆದಿದ್ದ ಆತ್ಮೀಯರ ಮನೆಗೆ ಹೋಗಿದ್ದೆ. ಸಮಾರಂಭ ಎಂದ ಮೇಲೆ ನೂರು ಮಾತು, ಹರಟೆ, ಕುಶಲೋಪರಿ, ಕೊಂಚ ಗಾಸಿಪ್ ಇದ್ದಿದ್ದೇ. ನಾನೋ ಅಲ್ಲೇ ಆಡುತ್ತಿದ್ದ ಪುಟ್ಟ ಮಕ್ಕಳ ಹಿಂಡಿನ ಹಿಂದೆ ಬಿದ್ದು ಅವರ ನೈಜ ಸಂತೋಷವನ್ನೇ ಕಣ್ತುಂಬಿಕೊಳ್ಳತೊಡಗಿದ್ದೆ. ೫-೬ ಮಕ್ಕಳ ಆ ಗುಂಪಿನಲ್ಲಿ ಓರ್ವ ಹುಡುಗ ಮಾತ್ರ ತುಸು ಹೆಚ್ಚು ತುಂಟನಾಗಿದ್ದ. ಜೊತೆಯಲ್ಲಿ ಆಡುತ್ತಿರುವವರನ್ನು ವಿನಾಕಾರಣ ಸ್ವಲ್ಪ ದೂಕುವುದು, ಕಾಣದಂತೇ ಚಿವುಟುವುದು, ಜಡೆ ಎಳೆದು ಓಡುವುದು ಮಾಡುತ್ತಿದ್ದ. ಅವನ ತುಂಟಾಟದಿಂದ ಬೇಸತ್ತ ಇತರ ಮಕ್ಕಳು ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತು ಮಾತೊಳಗೆ ಮುಳುಗಿದ್ದ ಅವನ ತಾಯಿಗೆ ದೂರೊಯ್ದರು. ಅಮ್ಮನ ಹುಸಿಮುನಿಸಿಗೂ ಜಗ್ಗದ ಆ ನಾಲ್ಕು ವರುಷದ ಪೋರ ಉಳಿದ ಮಕ್ಕಳಿಗೆಲ್ಲಾ ನಾಲಿಗೆ ತೋರಿಸಿ ಚಾಳಿಸಿ ಓಡಿ ಮರೆಯಾದ. ಆಗ ಆ ಗುಂಪಿನಲ್ಲೇ ಇದ್ದ ಸುಮಾರು ೩೫ ವರುಷದ ಗೃಹಿಣಿಯೋರ್ವರು "ನಿಮ್ಮ ಮಗ ತುಂಬಾ ತುಂಟ ಇದ್ದಾನಲ್ಲ....ಅಬ್ಬಾ ಹೇಗೆ ಸಂಭಾಳಿಸುತ್ತೀರೋ ಏನೋ... ಈಗಿನ ಮಕ್ಕಳೆಲ್ಲಾ ಹೀಗೇ ಎಂದೆನಿಸುತ್ತದೆ. ಆದರೆ ಇವನು ಬಹಳ ಜೋರಿದ್ದಾನೆ ಎಂದೆನಿಸುತ್ತದೆ. ಕಷ್ಟವಾಗುತ್ತಿರಬೇಕು ನಿಮಗೆ ಅಲ್ಲವೇ?" ಎಂದು ಸಹಜವಾಗಿ ಕೇಳಿದರು. ಅದೇನನಿಸಿತೋ ಆ ತಾಯಿಗೆ ಮುಖ ಊದಿಸಿಕೊಂಡು "ಅಯ್ಯೋ ಇವತ್ತೇ ಇಲ್ಲೇ ಹೀಗೆಲ್ಲಾ ಆಡ್ತಿರೋದು. ಇಲ್ದೇ ಹೋದ್ರೆ ಅವ್ನು ತುಂಬಾ ಜಾಣ ಹುಡ್ಗ. ನನ್ನ ಮಾತನ್ನು ಸ್ವಲ್ಪವೂ ಮೀರೊಲ್ಲ...ಹಾಗೆ ನೋಡಿದ್ರೆ ಇಷ್ಟೂ ತುಂಟಾಟ ಮಾಡದಿದ್ದರೆ ಮಕ್ಕಳು ಅನ್ನೋದು ಯಾಕೆ?" ಎಂದು ತುಸು ಬಿಗಿಯಾಗಿ ಉತ್ತರಿಸಲು, ಆ ಗೃಹಿಣಿಗೂ ತುಸು ಪಿಚ್ಚೆನಿಸಿರಬೇಕು. ಅಲ್ಲಿಂದ ಮೆಲ್ಲನೆ ಜಾರಿಕೊಂಡು ಬೇರೆಲ್ಲೋ ನಡೆದರು. ಆದರೆ ಆಕೆ ಅತ್ತ ಹೋಗಿದ್ದೇ ತಡ ಆ ಹುಡುಗನ ತಾಯಿ ಜೊತೆಯಲ್ಲಿದ್ದ ಇತರ ಗೆಳತಿಯರನುದ್ದೇಶಿಸಿ "ಇವರಿಗೇನು ಗೊತ್ತು ಮಕ್ಕಳ ಕಷ್ಟ? ಅವರ ತುಂಟಾಟ? ಹೆತ್ತವರಿಗೆ ತಾನೇ ಗೊತ್ತಾಗುವುದು ಮಕ್ಕಳನ್ನು ಸಾಕುವುದರ ಸಂಕಟ? ಹೊರಲಿಲ್ಲ ಹೆರಲಿಲ್ಲ.. ದೊಡ್ಡದಾಗಿ ಹೇಳೋಕೆ ಬಂದ್ಬಿಟ್ರು ಮಕ್ಕಳ ಸ್ವಭಾವದ ಬಗ್ಗೆ..."ಎಂದು ಇನ್ನೂ ಏನೇನೋ ವಟಗುಡುತ್ತಲೇ ಇದ್ದರು. ಜೊತೆಗಿದ್ದವರು ಇಷ್ಟ ಇದ್ದೋ ಇಲ್ಲದೆಯೋ ಹೌದು ಬಸವಣ್ಣ ಹೌದು ಅಲ್ಲ ಬಸವಣ್ಣ ಅಲ್ಲಾ... ಎನ್ನುವಂತೆ ಗೋಣಾಡಿಸುತ್ತಾ ಬಿಮ್ಮನೆ ಕುಳಿತಿದ್ದರು. ನನಗೆ ಮಾತ್ರ ಅಸಾಧ್ಯ ಸಿಟ್ಟು, ಬೇಸರವಾಯಿತು ಅವರ ಹೀಯಾಳಿಕೆಯನ್ನು ಹಾಗೂ ಹಿಂದಿನಿಂದ ಆಡಿಕೊಂಡ ಮಾತುಗಳನ್ನು ಕೇಳಿ.

ಹೆತ್ತವರಿಗೆ ಮಾತ್ರ ಮಕ್ಕಳನ್ನು ಸಾಕುವ ಕಷ್ಟ ಗೊತ್ತಾಗುವುದು.. ಮಕ್ಕಳಿಲ್ಲದವರಿಗೆ ಅವರನ್ನು ಸಾಕುವ ಪ್ರಯಾಸ, ನೋವು ಅರ್ಥವಾಗೊಲ್ಲ... ಎನ್ನುವುದು ಕೇವಲ ಏಕಮುಖ ಅಭಿಪ್ರಾಯ. ಹಾಗೆ ನೋಡಿದರೆ ಮಕ್ಕಳಿದ್ದವರಿಗೆಂದೂ ತಾಯ್ತನದ ಭಾಗ್ಯವನ್ನು ಕಾಣದವರ ವೇದನೆ, ಅಸಹನೆ ಅರ್ಥವೇ ಆಗದು. ಈ ಒಂದು ಸೂಕ್ಷ್ಮತೆ ಅರ್ಥವಾಗದಿರುವವರು ತಮ್ಮಂತೇ ಹೆಣ್ಣಾಗಿರುವ, ತಾಯ್ತನದಿಂದ ವಂಚಿತರಾದವರನ್ನು ಬಂಜೆ, ಬರಡು, ಕೊರಡು, ಪೂರ್ವಜನ್ಮದ ಪಾಪದಿಂದಾಗಿಯೇ ಈಗ ಅನುಭವಿಸುತ್ತಿರುವವಳು- ಎಂದೆಲ್ಲಾ ಹೀಯಾಳಿಸಿ ಮತ್ತಷ್ಟು ಹಿಂಸೆ ನೀಡುತ್ತಾರೆ. ಸಂತಾನವಿಹೀನರಾಗಲು ಹೆಣ್ಣೊಂದೇ ಕಾರಣಳಾಗಿರಬೇಕೆಂದಿಲ್ಲ, ಗಂಡೂ ಕಾರಣನಾಗಿರಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ, ಕೇವಲ ಆಕೆಯನ್ನು ಮಾತ್ರ ದೂಷಿಸುತ್ತಾರೆ. ಕಾಲ ಎಷ್ಟೇ ಬದಲಾಗಿರಲಿ, ವಿಜ್ಞಾನ ಎಷ್ಟೇ ಮುಂದುವರಿದಿರಲಿ, ನಮ್ಮಲ್ಲಿ ಮಾತ್ರ ಇಂದಿಗೂ ಈ ಒಂದು ಪಿಡುಗು ಸ್ತ್ರೀಯನ್ನು ಬಿಟ್ಟಿಲ್ಲ. ಮಕ್ಕಳಾಗದಿರಲು ಆಕೆಯೊಳಗಿನ ಕೊರತೆಯೇ ಕಾರಣ ಎಂಬ ತೀರ್ಮಾನಕ್ಕೆ ಬಹುಬೇಗ ಬಂದುಬಿಡುತ್ತದೆ ನಮ್ಮ ಸಮಾಜ!

ಮೊದಲು ನಾನೊಂದು Infertility Centreನಲ್ಲಿ ಕೆಲಸಮಾಡುತ್ತಿದ್ದೆ.(ಹೆಸರು, ಊರು, ಇತ್ಯಾದಿ ವಿವರಗಳನ್ನು ಅಲ್ಲಿಯ ಗೌಪ್ಯತೆಯ ದೃಷ್ಟಿಯಿಂದ ಉಲ್ಲೇಖಿಸಲಾರೆ.) ಅಲ್ಲಿಗೆ ಬರುತ್ತಿದ್ದ ದಂಪತಿಯ ಮ್ಲಾನವದನ, ನೋವು, ಅದರಲ್ಲೂ ವಿಶೇಷವಾಗಿ ಚಿಂತಾಕ್ರಾಂತ ಮುಖ ಹೊತ್ತ ಸ್ತ್ರೀಯರು, ಇವರನ್ನೆಲ್ಲಾ ನೋಡಿದಾಗ ಅನಿಸಿದ್ದು ಒಂದೇ. ಮಕ್ಕಳಾಗಲಿಲ್ಲ ಎಂದು ಕೊರಗುತ್ತಾ ಅದರಲ್ಲೇ ದಿನೇ ದಿನೇ ಕುಗ್ಗುತ್ತಿರುವ ಇವರ ದುಃಖದಲ್ಲಿ ನಾವೆಷ್ಟು ಭಾಗಿಗಳಾಗಲು ಸಾಧ್ಯ ಎಂದು! ಭಾಗಿಯಾಗುವುದು ಬೇಡ.... ಅವರ ನೋವನ್ನು, ದುಃಖವನ್ನು ಮತ್ತಷ್ಟು ಹೆಚ್ಚಿಸದಿರುವಂತೆ ವರ್ತಿಸಿದರೆ ಸಾಕಲ್ಲಾ. ಆದರೆ ಆ ಫರ್ಮ್‌ನಲ್ಲೇ ಕೆಲಸ ಮಾಡುತ್ತಿದ್ದ ಕೆಲವು ನರ್ಸ್‌ಗಳು, ಆಯಾಗಳು ಹಿಂದಿನಿಂದ ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದ ರೀತಿ, ವರ್ತನೆಗಳು ತುಂಬಾ ಸಂಕಟಕ್ಕೀಡುಮಾಡುತ್ತಿತ್ತು. ಒಂದು ತರಹದ ಉಸಿರುಗಟ್ಟಿದಂತಹ ವಾತಾವರಣ ನಿರ್ಮಾಣವಾಗುತ್ತಿತ್ತು. ಎಷ್ಟೋ ಸಲ ಆಯಾಗಳಿಗೆ ಮೆಲುವಾಗಿ ತಿಳಿ ಹೇಳಲು ಹೋಗಿ ನಾನೇ ಹೇಳಿಸಿಕೊಂಡದ್ದಿದೆ. ಆದರೆ ತಿರುಗಿ ನನಗೆ ಅವೆಲ್ಲಾ ಬೌನ್ಸ್ ಆಗ ತೊಡಗಿದ ಮೇಲೆ ಇಲ್ಲದ ಸಹನೆ ಹೊಂದಲೇ ಬೇಕಾಯಿತು. ನನ್ನ ಬಹು ಪರಿಚಿತರ ಆಗ್ರಹದ ಮೇಲೆ ಅಲ್ಲಿ ಸೇರಿದ್ದ ನಾನು ಅವರ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಹೇಗೋ ೬ ತಿಂಗಳುಗಳನ್ನು ಸವೆಸಿ ಆನಂತರ ಇರಲಾಗದೇ, ಮುಲಾಜಿಲ್ಲದೇ ಹೊರ ಬಂದುಬಿಟ್ಟೆ.

ಅಸಲಿಗೆ ನನಗೆ ಸಂತಾನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಅಲ್ಲಿಗೆ ಬರುತ್ತಿದ್ದ ದಂಪತಿಯನ್ನು "ಪೇಷೆಂಟ್" ಎಂದು ಸಂಬೋಂಧಿಸುವುದೇ ಅಸಂಬದ್ಧ ಎಂದೆನಿಸುತ್ತಿತ್ತು. ಅವರ ಕೇಸ್ ಹಿಸ್ಟರಿಗಳನ್ನು, ಮೆಡಿಸಿನ್ಸ್ ಹಿಸ್ಟರಿಗಳನ್ನು, ಸಮಸ್ಯೆಗಳ ರೆಕಾರ್ಡ್ಗಳನ್ನು, ಕೊಡುತ್ತಿರುವ ಚಿಕಿತ್ಸೆಗಳ ವಿವರಗಳನ್ನು ಎಲ್ಲವನ್ನೂ ಪ್ರೋಗ್ರಾಮಿಂಗ್ ಮೂಲಕ ಜೋಡಿಸಿಡುವ ಕಾರ್ಯ, ಸಕಾಲದಲ್ಲಿ ಅದನ್ನು ಬೇಕಾದವರಿಗೆ ಒದಗಿಸಿ, ಮಾಹಿತಿಗಳನ್ನು ಒದಗಿಸುವ ಕಾರ್ಯ, ಹಾಗೆಯೇ ಒಮ್ಮೊಮ್ಮೆ(ನಾನೂ ಈ ವಿಷಯವನ್ನು ತುಸು ಅಭ್ಯಸಿಸಿದ್ದರಿಂದ) ಅವರನ್ನು ಹಿತವಾಗಿ ಮಾತನಾಡಿಸಿ, ಮನಸೊಳಗಿನ ಟೆನ್ಷನ್ ಹಾಗೂ ಕಳವಳಗಳನ್ನು ದೂರಮಾಡುವ ಕೆಲಸಗಳನ್ನೂ ಮಾಡುತ್ತಿದ್ದೆ. (ಅಲ್ಲೇ ಕೆಲಸ ಮಾಡುತ್ತಿದ್ದ ಪ್ರಧಾನ ಕೌನ್ಸಲರ್ ನನ್ನ ಆತ್ಮೀಯ ಫ್ರೆಂಡ್ ಆಗಿದ್ದರು. ಅವರು ನನಗೆ ಸ್ವಲ್ಪ ದಿನ ಟ್ರೈನಿಂಗ್ ಕೊಟ್ಟು ಆಮೇಲೆ ಅವರು ತುಂಬಾ ಬ್ಯುಸಿ ಇದ್ದಾಗ ಕೆಲವೊಂದು ಸಲ ನನಗೂ ಕೆಲಸ ಕೊಡುತ್ತಿದ್ದರಷ್ಟೇ). ಆದರೆ ಸರಿ ಸುಮಾರು ಅರ್ಧವರ್ಷಗಳವರೆಗೆ ಅಲ್ಲೇ ಕೆಲಸಮಾಡಿದ್ದರಿಂದ, ಹಲವಾರು ತರಹದ ಸಮಸ್ಯೆಗಳನ್ನು, ಸಂತಾನವಿಹೀನತೆಗೆ ಇರಬಹುದಾದ ಕಾರಣಗಳು ಹಾಗೂ ಮೆಡಿಕಲ್ ಪರಿಹಾರಗಳನ್ನು ಅಭ್ಯಸಿಸುವ ಸದವಕಾಶ ನನ್ನದಾಯಿತು. ಆ ಮಟ್ಟಿಗೆ ನಾನು ಆ ಸಂಸ್ಥೆಗೆ ಹಾಗೂ ನನ್ನ ಅಲ್ಲಿಗೆ ಬರಲು ಪ್ರೇರೇಪಿಸಿದ ಆ ಹಿತೈಷಿಗಳಿಗೆ ಸದಾ ಋಣಿ. ಅಂತಹ ಒಂದು ಫರ್ಮ್ನಲ್ಲಿ ಕೆಲಸಮಾಡುವಾಗ ನಮ್ಮೊಳಗೇ ನಾವು ತೆಗೆದುಕೊಳ್ಳ ಬೇಕಾಗಿರುವ ಮೊದಲ ಪ್ರತಿಜ್ಞೆ ಎಂದರೆ ಎಂದೂ ಎಲ್ಲೂ ಅದರೊಳಗಿನ, ಹಾಗೂ ಅಲ್ಲಿಗೆ ಬರುವ ಯಾರ ಕುರಿತೂ ಸಾರ್ವಜನಿಕವಾಗಿ ಮಾತಾಡಬಾರದು. ಗೌಪ್ಯತೆಯನ್ನು ಕಾಪಾಡುವಲ್ಲಿ ಬದ್ಧರಾಗಿರಬೇಕು. ಅದಕ್ಕಾಗಿ ನಾನು ಅಲ್ಲಿಯ ಕೆಲಸ ಕಾರ್ಯಗಳ ಕುರಿತಾಗಲೀ, ಕುಂದು ಕೊರತೆಗಳ ಬಗ್ಗೆಯಾಗಲೀ ಏನನ್ನೂ ಹೇಳಲಾರೆ. ಹೇಳುವುದೂ ಸಲ್ಲ. ಆದರೆ ಸಂತಾನವಿಹೀನತೆಯಿಂದುಂಟಾಗುವ ಸಾಮಾಜಿಕ, ಮಾನಸಿಕ ಸಮಸ್ಯೆಗಳು ಹಾಗೂ ಅದಕ್ಕೆ ಈಗಿರುವ ಪ್ರಮುಖ ವೈಜ್ಞಾನಿಕ ಪರಿಹಾರಗಳನ್ನಷ್ಟೇ ಹೇಳುತ್ತಿದ್ದೇನೆ.  ಅಂತೆಯೇ ಇಲ್ಲಿ ನಾನು ಹೇಳುತ್ತಿರುವುದು ಸರಳ ಭಾಷೆಯಲ್ಲಿ. ಕಾರಣ ತೀರ ಮೆಡಿಕಲ್ ಭಾಷೆಯಲ್ಲಿ ಹೇಳಲು ನನಗೆ ಬರದು. ನಾನು ಅದನ್ನು ಕಲಿತೂ ಇಲ್ಲ. ಅಲ್ಲಿ ನಾನು ಕಲಿತುಕೊಂಡ ಹಾಗೂ ಸ್ವಯಂ ಆಸಕ್ತಿಯಿಂದ ಪುಸ್ತಕಗಳನ್ನು ಅಭ್ಯಸಿಸಿ ತಿಳಿದುಕೊಂಡ ಕೆಲವು ವಿಷಯಗಳನ್ನಷ್ಟೇ ಹೇಳುತ್ತಿದ್ದೇನೆ. ನಾನಿಲ್ಲಿ ಹೇಳಿರುವ ವಿಷಯಗಳಲ್ಲಿ ಏನಾದರೂ ತಪ್ಪಿದ್ದಲ್ಲಿ ನಿಸ್ಸಂಕೋಚವಾಗಿ ತಿಳಿದವರು ತಿಳಿಸಬೇಕಾಗಿ ವಿನಂತಿ. ಇದರಿಂದ ಕಲಿಕೆಗೆ ಹಾಗೂ ಜ್ಞಾನರ್ಜನೆಗೆ ಎಲ್ಲರಿಗೂ ಸುಲಭವಾಗುವುದು.

ಅಸಲಿಗೆ ಈ ಒಂದು ಸಮಸ್ಯೆಯಿಂದ ಕೊರಗುತ್ತಿರುವವರು ಇಂತಹ ಫರ್ಮ್‌ಗೆ ಬಂದು ಚಿಕಿತ್ಸೆ ಪಡೆಯುವುದೂ ಒಂದು ಅವಮಾನಕರ, ನಾಚಿಕೆಗೇಡಿನ ವಿಷಯವೆಂದು ತುಂಬಾ ತಪ್ಪಾಗಿ ಭಾವಿಸಿರುತ್ತಾರೆ. ಇದರಿಂದಾಗಿಯೇ ಬಹಳಷ್ಟು ಸಮಯವನ್ನು ಹಾಳುಮಾಡಿಕೊಂಡು, ವಯಸ್ಸು ಹೆಚ್ಚಾದಂತೇ ಪರಿಹಾರವೂ ಕ್ಲಿಷ್ಟವಾಗುವುದೆಂದು ತಿಳಿಯದೇ ಮನದಲ್ಲೇ ನರಳುತ್ತಾ, ಅಂತಿಮವಾಗಿ ಬಂದಿರುತ್ತಾರೆ (ಹೆಚ್ಚಿನವರು). ಅಂತಹವರಿಗೆ ಚಿಕಿತ್ಸೆ ಕೊಡುವ ಮೊದಲು ಅವರನ್ನು ಮಾನಸಿಕವಾಗಿ ಸದೃಢರನ್ನಾಗಿಸಿ ಚಿಕಿತ್ಸೆಗೆ ತಯಾರುಮಾಡುವುದೇ ಒಂದು ಸವಾಲು. ಆದರೂ ಅದೆಷ್ಟೋ ದಂಪತಿಗಳು ಅರ್ಧದಲ್ಲೇ ಹಿಂತಿರುಗುವುದೂ ಇದೆ. ಜನ ಏನೆನ್ನುತ್ತಾರೋ? ಸಮಾಜ ಏನೆನ್ನುತ್ತದೆಯೋ? ನಾವಿಲ್ಲಿ ಬಂದಿದ್ದು ಗೊತ್ತಾದರೆ ನಮ್ಮ ಗುಟ್ಟು ಎಲ್ಲಿ ಎಲ್ಲರಿಗೂ ಗೊತ್ತಾಗುವುದೋ? ಎಂಬೆಲ್ಲಾ ಆತಂಕಗಳಿಂದ, ಗೊಂದಲಗಳಿಂದ ಮೂಲ ಸಮಸ್ಯೆಯನ್ನೇ ಮರೆಯುತ್ತಾರೆ. ಇಂತಹವರಿಗೆ ಮೊದಲು ಬೇಕಾಗಿರುವುದು ಗೌಪ್ಯತೆಯ ಆಶ್ವಾಸನೆ ಹಾಗೂ ಮನದೊಳಗೆ ಆತ್ಮವಿಶ್ವಾದ ಮೊಳಕೆ. ಆಗ ಅರ್ಧ ಸಮಸ್ಯೆ ಅಲ್ಲೇ ಪರಿಹಾರವಾದಂತೇ. ಅವರ ಸೂಕ್ಷ್ಮ ಮನಸ್ಸನ್ನರಿತು, ನೋವಿಗೆ ಸ್ಪಂದಿಸಿ, ನಾಲ್ಕು ಹಿತ ಮಾತಾಡಿದರೂ ಸಾಕು ಹೊಸ ಆಶಾಭಾವ ಮೂಡಬಲ್ಲದು. ಆಶಾವಾದಿ ಮನಸ್ಸಿನಿಂದ ಏನನ್ನೂ ಸಾಧಿಸಬಲ್ಲೆವು. ಪರಿಹಾರವೂ ಸಿಗುವುದು ಕಷ್ಟವಾಗದು. ಆ ನಿಟ್ಟಿನಲ್ಲಿ ನಮ್ಮ ದೇಶ ಹಾಗೂ ಸಮಾಜ ತೀರಾ ಕೆಳಮಟ್ಟದಲ್ಲಿದೆ ಎಂದು ವಿಷಾದದಿಂದ ಹೇಳಬೇಕಾಗುತ್ತದೆ. ನನ್ನ ಆತ್ಮೀಯ ಗೆಳತಿಯೋರ್ವಳು ಡಾಕ್ಟರ್. ಅವಳು ಹೇಳಿದ ಒಂದು ಘಟನೆ ನನ್ನನ್ನು ತುಂಬಾ ಆಶ್ಚರ್ಯಚಕಿತಳನ್ನಾಗಿಸಿತು. ಹೀಗೂ ಉಂಟೆ? ಎಂದು ಒಂದು ಕ್ಷಣ ಅನಿಸಿದ್ದಂತೂ ಸುಳ್ಳಲ್ಲ.

ಘಟನೆ ಇಂತಿದೆ : ಅವಳ ಬಳಿ ದಂಪತಿ ಬಂದಿದ್ದಾರೆ. ಗಂಡ ಕೊಲ್ಲಿಯಲ್ಲಿ ಕೆಲಸಮಾಡುತ್ತಿದ್ದಾನೆ. ಹೆಂಡತಿ ಭಾರತದಲ್ಲಿರುವವಳು. ಮದುವೆಯಾಗಿ ಎರಡು ವರುಷವಾಗಿದೆ. ಮಕ್ಕಳಾಗಿಲ್ಲ. ಸಮಸ್ಯೆಗೆ ಪರಿಹಾರ ಬೇಕೆಂದು ಬಂದ್ದರು. ಆದರೆ ಅವರಿಂದ ವಿವರ ಪಡೆದ ಆಕೆಗೂ ಆಗಿದ್ದು ದೊಡ್ಡ ಆಶ್ಚರ್ಯವೇ! ಕಾರಣ ಮದುವೆಯಾದ ಆತ ಒಂದು ವಾರಕ್ಕೇ ಕೊಲ್ಲಿಗೆ ಹೋದವ ಎರಡು ವರುಷದ ನಂತರ ಈಗ ತಿಂಗಳೊಪ್ಪತ್ತಿನ ರಜೆಗೆ ಭಾರತಕ್ಕೆ ಬಂದಿದ್ದಾನೆ. ಈ ಒಂದು ತಿಂಗಳೊಳಗೇ ತನ್ನ ಪತ್ನಿ ಗರ್ಭ ಧರಿಸಲೇಬೇಕು...ಇಲ್ಲದಿದ್ದರೆ ಮತ್ತೆರಡು ವರುಷಗಳು ನಾನು ಬರುವಂತಿಲ್ಲ. ಇದಕ್ಕೇನಾದರೂ ಪರಿಹಾರವಿದೆಯೇ ಎಂದು ಕೇಳುತ್ತಿದ್ದಾನೆ ಆ ಮನುಷ್ಯ! ಆತನ ಹೆಂಡತಿ ಮಾತ್ರ ಕಣ್ತುಂಬಿಕೊಂಡು ತಲೆತಗ್ಗಿಸಿ ಕುಳಿತಿದ್ದಳಂತೆ. ನನ್ನ ಗೆಳತಿ ಹೇಳಿದ ಪರಿಹಾರ, ಆತನಿಗೆ ನೀಡಿದ ಉಪದೇಶ ಇಲ್ಲಿ ಅಷ್ಟು ಅಗತ್ಯವಿಲ್ಲ. ಆದರೆ ಕೊಲ್ಲಿಯಿಂದ ಆತ ಬರುವವರೆಗೂ ಇತರರ ಮಾತುಗಳನ್ನು, ಮನೆಯವರ ಸಂಶಯ ದೃಷ್ಟಿಯನ್ನು ಎದುರಿಸುವ ಆ ಹೆಣ್ಣಿನ ಮನಃಸ್ಥಿತಿಯನ್ನು ಮಾತ್ರ ನಾವು(ಸಮಾಜ) ನೋಡಹೋಗುವುದೇ ಇಲ್ಲ! ಇದು ನಮ್ಮಲ್ಲಿನ ಸಂತಾನವಿಹೀನತೆಗೆ ನಾನು ಕೊಡುತ್ತಿರುವ ಅತೀ ಸಣ್ಣ ಕಾರಣ ಅಷ್ಟೇ!!

ನಾನು ನನ್ನ ಕೆಲಸದ ಸಮಯದಲ್ಲಿ ತಿಳಿದುಕೊಂಡ ಹಾಗೂ ಓದಿಕೊಂಡ ಕೆಲವು ಪ್ರಮುಖ ಪರಿಹಾರ ಕ್ರಮಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡುತ್ತಿದ್ದೇನೆ.

೧. AI (Artificial insemination )

೨. IUI (Intravaginal insemination)

೩, IVF (Invitro Fertilization)

4. ICSI (Intracytoplasmic sperm Injection)
ಈ ಮೇಲಿನ ಚಿಕಿತ್ಸಾವಿಧಾನಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಈ ಕೆಳಗಿನ ವೈದ್ಯಕೀಯ ಲಿಂಕ್‍ಗಳಿಗೆ ಭೇಟಿ ನೀಡಬಹುದು.


1. http://en.wikipedia.org/wiki/Artificial_insemination
2. http://www.ehow.com/about_5057777_types-artificial-insemination-humans.html
3. http://www.ivf-infertility.com/ivf/standard/procedure/index.php
4. http://www.babycenter.in/preconception/fertilitytreatments/icsi/#2

ತಮ್ಮ ಪತ್ನಿಯನ್ನು ಆಕೆಯ ತೀವ್ರ ಪ್ರತಿರೋಧವಿದ್ದರೂ, ಬೆದರಿ, ಕಾಡಿಸಿ, ಅಂಗಲಾಚಿ, ಬೇರೆ ಗಂಡಿನ ವೀರ್ಯಾಣುವನ್ನು ಇಂಜೆಕ್ಟ್ ಮಾಡಿಸಿಯಾದರೂ ಗರ್ಭಧರಿಸುವಂತೆ ಒತ್ತಾಯಿಸಿ, ಆ ಮೂಲಕ ತಾನೂ ಸಮರ್ಥ ಗಂಡು(?) ಎಂದು ಸಮಾಜಕ್ಕೆ, ಮನೆಯವರಿಗೆ ತೋರಿಸಿಕೊಡುವ ದುರಾಲೋಚನೆಯ ಗಂಡಂದಿರೂ ಸಾಕಷ್ಟು ಇದ್ದಾರೆ. ತಾಯ್ತನದ ನಿರ್ಧಾರ ಹೆಣ್ಣಿನದು. ಈ ರೀತಿ ಬಲಾತ್ಕಾರ, ಬೆದರಿಕೆಗಳಿಂದ ಅಮಾನುಷವಾಗಿ ಹಿಂಸಿಸಿ ತನ್ನ ಪುರುಷಾರ್ಥವನ್ನು ಮೆರೆಸಲು ಯತ್ನಿಸುವುದೂ ದೊಡ್ಡ ಅತ್ಯಾಚಾರವೇ ಸರಿ. ವಿಜ್ಞಾನ ಮುಂದುವರಿದಷ್ಟೂ ನಮ್ಮೊಳಗಿನ ಕ್ರೌರ್ಯತೆಯೂ ಬೆಳೆಯುತ್ತಾ ಹೋಗುವುದೇ? ಎನ್ನುವ ಪ್ರಶ್ನೆಯೊಂದು ನನ್ನನ್ನು ಸದಾ ಕಾಡುತ್ತಿರುತ್ತದೆ. ಒಳಗೆಲ್ಲೋ ಮನಸ್ಸು "ಹೌದು" ಎನ್ನುವ ಉತ್ತರವನ್ನೂ ಕೊಟ್ಟುಬಿಡುತ್ತದೆ!

ಇನ್ನು ಈ ಮೇಲಿನ ಚಿಕಿತ್ಸೆಗಳೆಲ್ಲ ಬಹು ದೊಡ್ಡ ಮಟ್ಟದ ಹಾಗೂ ಅತಿ ದುಬಾರಿಯಾದವುಗಳು ( AI ಹಾಗೂ IUI ಚಿಕಿತ್ಸೆಗಳನ್ನು ಬಿಟ್ಟು). ಫಲಕಾರಿಯಾಗುವ ಗ್ಯಾರಂಟಿ ಕೂಡ ೧೦೦% ಕೊಡಲಾಗದಂಥವುಗಳು. ಇವುಗಳಲ್ಲದೇ ಇನ್ನೂ ಅನೇಕ ಚಿಕ್ಕ ಪುಟ್ಟ ಚಿಕಿತ್ಸೆಗಳು ಲಭ್ಯವಿವೆ. ಅಲೋಪತಿ ಚಿಕಿತ್ಸೆಗಳಲ್ಲದೇ ಅನೇಕ ಹೋಮಿಯೋಪತಿ, ಆಯುರ್ವೇದಿಕ್, ಯುನಾನಿ ಇತ್ಯಾದಿ ಚಿಕಿತ್ಸೆಗಳೂ ಕೈಗೆಟಕುವ ದರದಲ್ಲೇ ಲಭ್ಯವಿವೆ. ಯಾವುದಕ್ಕೂ ಮಾನಸಿಕ ಶಕ್ತಿ ಹಾಗೂ ಸಂಕಲ್ಪ ಇರಬೇಕಷ್ಟೇ. ಅತಿ ನಿರಾಸೆ, ಒತ್ತಡ, ಭಾವೋದ್ವೇಗಗಳೇ ತುಂಬಿದ್ದರೆ ಯಾವ ಚಿಕಿತ್ಸೆಯೂ ಫಲಿಸದು. ನಂಬಿಕೆ ಎಲ್ಲಕ್ಕಿಂತ ಮುಖ್ಯ. ಅದೊಂದಿದ್ದರೆ ಯಾವುದೂ ಸರಳ ಸುಲಭ.


- ತೇಜಸ್ವಿನಿ ಹೆಗಡೆ.

22 ಕಾಮೆಂಟ್‌ಗಳು:

ಚುಕ್ಕಿಚಿತ್ತಾರ ಹೇಳಿದರು...

ಉಪಯುಕ್ತ ಲೇಖನ.
ಮಕ್ಕಳಿಲ್ಲದೇ ಇರುವವರು ಮಗು ಬೇಕೇ ಬೇಕು ಅನ್ನುವವರು ಯಾವುದಾದರೂ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಬಹುದು. ಹೊರುವ ಹೆರುವ ಸುಖ ಬೇಕೆನ್ನುವವರಿಗೆ ಇದು ಅಸಾಧ್ಯ... ತಾಯಿಯಾಗಬೇಕೆನ್ನುವವರಿಗೆ ತಾಯ್ತನದ ಸುಖ ಬೇಕೆನ್ನುವವರಿಗೆ ಇದು ಆದೀತು.. ನಮ್ಮ ಊರಿನಲ್ಲಿ ಎರಡು ಮೂರು ದ೦ಪತಿಗಳು ಹಾಗೆಯೇ ದತ್ತು ತೆಗೆದುಕೊ೦ಡಿದ್ದಾರೆ. ಆ ಮಕ್ಕಳು ಓಡಾಡಿ ಕೊ೦ಡು ನೋಡುವವರ ಮನತು೦ಬುವ೦ತಿದ್ದಾರೆ.. ನಿಜ ಯಾವುದಕ್ಕೂ ಮಾನಸಿಕ ಶಕ್ತಿ ಹಾಗೂ ಸಂಕಲ್ಪ ಇರಬೇಕು..

ಮಹೇಶ ಭಟ್ಟ ಹೇಳಿದರು...

ತುಂಬಾ ಮಾಹಿತಿಯನ್ನು ಕೊಡುವ ಬರಹ, ಪ್ರತಿಯೊಬ್ಬರೂ ಒಮ್ಮೆಯಾದರೂ ಓದಲೇಬೇಕೆಂದರೂ ತಪ್ಪಿಲ್ಲ

Dr.D.T.Krishna Murthy. ಹೇಳಿದರು...

ಉಪಯುಕ್ತ ಮಾಹಿತಿಗೆ ಧನ್ಯವಾದಗಳು.ಏನೇ ವೈಜ್ಞಾನಿಕ ಕಾರಣಗಳಿದ್ದರೂ ನೀವು ಹೇಳಿರುವಂತೆ'ಇನ್ನೂ ಮಕ್ಕಳಾಗಲಿಲ್ಲವಲ್ಲಾ'ಎಂಬ ಮಾನಸಿಕ ಒತ್ತಡವೇ ಬಹು ದೊಡ್ಡ ಕಾರಣ ಎನಿಸುತ್ತದೆ.

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ ಹೇಳಿದರು...

utthama lekhana....really good one

ಮನದಾಳದಿಂದ............ ಹೇಳಿದರು...

ತೇಜಕ್ಕಾ,
ಬಹಳ ಉಪಯುಕ್ತ ಮಾಹಿತಿ. ವಿಜ್ನಾನ ಎಷ್ಟೇ ಮುಂದುವರೆದಿದ್ದರೂ ಮೂಢತೆ ನಮ್ಮಲ್ಲಿ ಇನ್ನೂ ಮನೆಮಾಡಿಕೊಂಡಿದೆ.
ವಿಜ್ಞಾನ ಮುಂದುವರಿದಷ್ಟೂ ನಮ್ಮೊಳಗಿನ ಕ್ರೌರ್ಯತೆಯೂ ಬೆಳೆಯುತ್ತಾ ಹೋಗುವುದೇ? ಎಂಬ ಪ್ರಶ್ನೆ ನನಗೂ ಅಗಾಗ ಕಾಡುವುದು.
ಮಾಹಿತಿಗೆ ಧನ್ಯವಾದಗಳು.

umesh desai ಹೇಳಿದರು...

ತೇಜಸ್ವಿನಿ ಅವರೇ ಲೇಖನ ಚೆನ್ನಾಗಿದೆ. ವಿಜಯಶ್ರೀ ಹೇಳಿದಹಗೆ ದತ್ತು ತಗೊಳ್ಳೂದು ಪರಿಹಾರ. ಆದರೆಇದಕ್ಕೆ ಧೃಡನಿರ್ಧಾರ ಅವಶ್ಯ. ನೀವು ಹೇಳಿದ ಹಾಗೆ ಈ ಇನ್ ಫರ್ಟಿಲಿಟಿ ಕೇಂದ್ರಗಳು ನಿಜವಾಗಿಯೂ ಬಿಸಿನೆಸ್ ಮಾಡುತ್ತವೆ
ಅದಕ್ಕೆ ಪೂರಕವಾಗಿ ದಂಪತಿಗಳ ವ್ಯಾಮೋಹವೂ ಸಾಥ್ ಕೊಡುತ್ತದೆ.

PARAANJAPE K.N. ಹೇಳಿದರು...

ಮಾಹಿತಿಪೂರ್ಣ ಬರಹ

ಮನಸಿನಮನೆಯವನು ಹೇಳಿದರು...

ಉಪಯುಕ್ತ ಮಾಹಿತಿ..

ಸುಮ ಹೇಳಿದರು...

ತೇಜಸ್ವಿನಿ ಒಳ್ಳೆಯ ಲೇಖನ. ಇಂತಹ ವಿಚಾರದಲ್ಲಿ ಇನ್ನೂ ಕೂಡ ಸಮಾಜ ಹೆಣ್ಣನ್ನೇ ದೂಷಿಸುತ್ತದೆ. ಹೇಗಾದರೂ ಸರಿ ತನ್ನದೇ ಮಗು ಬೇಕೆನ್ನುವವರ ಕಣ್ಣಿಗೆ ತಂದೆ ತಾಯಿಗಳಿಲ್ಲದ ಅನಾಥ ಕಂದಮ್ಮಗಳ ಮುಗ್ಧ ಮುಖ ಕಾಣುವುದೇ ಇಲ್ಲ. ಅಕಸ್ಮಾತ್ ಅಂತಹ ದಂಪತಿಗಳು ದತ್ತು ತೆಗೆದುಕೊಳ್ಳಲು ತಯಾರಿದ್ದರೂ ಇಲ್ಲ ಸಲ್ಲದ ಭಯ ಹುಟ್ಟಿಸಿ ಹಿಂಜರಿಯುವಂತೆ ಮಾಡುವುದು ಮತ್ತದೇ ಸಮಾಜ. ಅದನ್ನೆಲ್ಲ ಎದುರಿಸಿ ದೃಢನಿರ್ಧಾರ ಮಡುವವರು ನಿಜಕ್ಕೂ ಗ್ರೇಟ್. ಇಲ್ಲವಾದಾಗ ಸೈನ್ಸ್ ಮೊರೆಹೋಗುವುದು ಅನಿವಾರ್ಯ. ಕೆಲವೊಮ್ಮೆ ಸೈನ್ಸ್ ಮತ್ತು ಕ್ರೌರ್ಯ ಒಂದೇ ನಾಣ್ಯದ ಎರಡು ಮುಖವೆನ್ನಿಸಿಬಿಡುತ್ತದೆ.

Soumya. Bhagwat ಹೇಳಿದರು...

ವಿಜ್ಞಾನ ಮುಂದುವರಿದಷ್ಟೂ ನಮ್ಮೊಳಗಿನ ಕ್ರೌರ್ಯತೆಯೂ ಬೆಳೆಯುತ್ತಾ ಹೋಗುವುದೇ?
ಅದ್ಭುತವಾದ ಸಾಲು ತೇಜಕ್ಕ.. :) ಲೇಖನ ತುಂಬಾ ಇಷ್ಟವಾಯಿತು.

sunaath ಹೇಳಿದರು...

ತೇಜಸ್ವಿನಿ,
ಭಾರತೀಯ ಮನೋಭಾವವು ಈವತ್ತಿಗೂ ಸಹ ಅವೈಜ್ಞಾನಿಕ ಹಾಗು ಸಂಕುಚಿತ ಮನೋಭಾವವೇನೊ ಎಂದು ಅನಿಸುತ್ತದೆ. ಸಂತಾನ ಬೇಕು, ಆದರೆ ಅದೇ ಕೊನೆಯ ಪುರುಷಾರ್ಥವಲ್ಲ. ಸಂತಾನಹೀನತೆಗೆ ಬಹುಮಟ್ಟಿಗೆ ಗಂಡೇ ಕಾರಣವಾಗಿರಬಹುದು. ನಾನು ನೋಡಿದ ಕೆಲವರು ಅನಾಥ ಹುಡುಗಿಯರನ್ನು ದತ್ತು ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಿದ್ದಾರೆ. ನಿಮ್ಮ ಲೇಖನ ವಿಚಾರಪೂರ್ಣವಾಗಿದೆ.

ಬಿಸಿಲ ಹನಿ ಹೇಳಿದರು...

ತೇಜಸ್ವಿನಿಯವರೆ,
ನಿಮ್ಮ ಲೇಖನ ಮತ್ತು ಅದರ ಧಾಟಿ ತುಂಬಾ ಇಷ್ಟವಾಯಿತು. “ತಮ್ಮ ಪತ್ನಿಯನ್ನು ಆಕೆಯ ತೀವ್ರ ಪ್ರತಿರೋಧವಿದ್ದರೂ, ಬೆದರಿ, ಕಾಡಿಸಿ, ಅಂಗಲಾಚಿ, ಬೇರೆ ಗಂಡಿನ ವೀರ್ಯಾಣುವನ್ನು ಇಂಜೆಕ್ಟ್ ಮಾಡಿಸಿಯಾದರೂ ಗರ್ಭಧರಿಸುವಂತೆ ಒತ್ತಾಯಿಸಿ, ಆ ಮೂಲಕ ತಾನೂ ಸಮರ್ಥ ಗಂಡು(?) ಎಂದು ಸಮಾಜಕ್ಕೆ, ಮನೆಯವರಿಗೆ ತೋರಿಸಿಕೊಡುವ ದುರಾಲೋಚನೆಯ ಗಂಡಂದಿರೂ ಸಾಕಷ್ಟು ಇದ್ದಾರೆ. ತಾಯ್ತನದ ನಿರ್ಧಾರ ಹೆಣ್ಣಿನದು.” ಎನ್ನುವ ನಿಮ್ಮ ಮಾತನ್ನು ಒಪ್ಪುತ್ತೇನೆ. ಆದರೆ ‘ಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವಂತೆ ನಮ್ಮ ಸಮಾಜದಲ್ಲಿ ಎಷ್ಟೋ ವಿದ್ಯಾವಂತ, ಉನ್ನತ ಹುದ್ದೆಯಲ್ಲಿರುವ ಹೆಣ್ಣುಮಕ್ಕಳು ಕೂಡ ತಾವು ತಾಯಿಯಾಗುವದನ್ನು ಒಂದು ಪ್ರತಿಷ್ಟೆಯ, ಅಹಂಕಾರದ ವಿಷಯವೆಂಬತೆ ಭಾವಿಸುತ್ತಾರೆ ಹಾಗೂ ಆ ಮೂಲಕ ತಾಯಿಯಾಗದವರನ್ನು ಅವಮಾನಿಸುವದು, ನೋಯಿಸುವದನ್ನು ನಾನು ನೋಡಿದ್ದೇನೆ. ಇದು ಎಷ್ಟರ ಮಟ್ಟಿಗೆ ಸರಿ? ಇಂಥ ಅವಮಾನ ಹಾಗೂ ನೋವುಗಳೇ ಅವರನ್ನು ಕೃತಕ ರೀತಿಯಲ್ಲಿ ತಾಯಿಯಾಗುವಂತೆ ಪ್ರೇರಿಪಿಸಲೂಬಹುದು. ಅದೇ ಪ್ರಕಾರ ತಾಯಿಯಾಗಲಾರದ ದೋಷ ತಮ್ಮ ಹೆಂಡತಿಯಲ್ಲಿದೆ ಎಂದು ಗೊತ್ತಾದ ಮೇಲೂ ಅವರನ್ನು ಒಪ್ಪಿ ಪ್ರೀತಿಯಿಂದ ನೋಡಿಕೊಳ್ಳುವ ಗಂಡಂದಿರನನ್ನೂ ನಾನು ನೊಡಿದ್ದೇನೆ. ಹಾಗೆಯೇ ದೋಷ ಯಾರಲ್ಲಿದೆ ಎಂಬುದನ್ನು ಬಹಿರಂಗಪಡಿಸದೆ ಮಕ್ಕಳನ್ನು ದತ್ತು ತೆಗೆದುಕೊಂಡು ನೆಮ್ಮದಿಯ ಸಂಸಾರವನ್ನು ನದೆಸುತ್ತಿರುವ ದಂಪತಿಗಳು ಇದ್ದಾರೆ. ಅದಕ್ಕೆ ಸಾಕ್ಷಿ ನನ್ನ ಇಬ್ಬರು ಸಹೋದ್ಯೋಗಿಗಳು. ಹೆತ್ತ ಮಾತ್ರಕ್ಕೆ ಹೆಣ್ಣು ತಾಯಿಯಾಗಲು ಸಾಧ್ಯವಿಲ್ಲ ಹಾಗೂ ತಾಯ್ತನ ಹೊರುವ ಹೆರುವ ಕ್ರಿಯೆಯಲ್ಲಿ ಮಾತ್ರ ಅಡಗಿಲ್ಲ ಎನ್ನುವ ಸತ್ಯವನ್ನು ಇವತ್ತಿನ ನಮ್ಮ ಹೆಣ್ಣುಮಕ್ಕಳು ಅರ್ಥ ಮಾಡಿಕೊಳ್ಳಬೇಕಿದೆ. ಮೇಲಾಗಿ ನಮ್ಮ ಬದುಕಿನ ಸಾರ್ಥಕತೆಯನ್ನು ಮಕ್ಕಳಲ್ಲೇ ಕಂಡುಕೊಳ್ಳಬೇಕೆಂಬ ಮನೋಭಾವನೆ ಮೊದಲು ಬದಲಾದರೆ ಎಲ್ಲವೂ ಬದಲಾಗುತ್ತದೆ. ಅಲ್ಲವೆ? ಇದಕ್ಕೆ ನೀವೇನಂತೀರಿ?

ತೇಜಸ್ವಿನಿ ಹೆಗಡೆ ಹೇಳಿದರು...

@ಚುಕ್ಕಿಚಿತ್ತಾರ,

ನಿಜ... ತಾಯಿಯ ಮಮತೆ ತೋರಲು ಅನೇಕ ದಾರಿಗಳಿವೆ. ಆದರೆ ನಮ್ಮ ಮನೋಸಂಕಲ್ಪ ಎಷ್ಟಮಟ್ಟಿನದು ಎನ್ನುವುದರ ಮೇಲೆ ಎಲ್ಲಾ ಇದೆ. ನೀವು ಹೇಳಿದಂತಹ ಅದೆಷ್ಟೋ ದಂಪತಿಯನ್ನು ನಾನು ನೋಡಿದ್ದೇನೆ. ಅಂತಹ ಸಹೃದಯತೆ ಇರುವವರು ಮಾತ್ರ ದತ್ತು ತೆಗೆದುಕೊಳ್ಳಬೇಕು. ಅನಾಥ ಮಗುವನ್ನು ದತ್ತು ತೆಗೆದುಕೊಂಡು ತಮ್ಮ ದೊಡ್ಡಸ್ತಿಕೆ ಮೆರೆಸುತ್ತಾ ಅದನ್ನು ನಿರ್ಲಕ್ಷಿಸುವುದು ಸಲ್ಲ. ಇದಕ್ಕಿಂತ ದೊಡ್ಡ ಪಾಪವೂ ಬೇರೊಂದಿಲ್ಲ. ಹಾಗಾಗಿ ದತ್ತು ತೆಗೆದುಕೊಳ್ಳುವ ಮುಂಚೆ ಸಾಕಷ್ಟು ಚಿಂತನೆ ಅತ್ಯಗತ್ಯ.

ತುಂಬಾ ಧನ್ಯವಾದಗಳು.

@ಮಹೇಶ್ ಅವರೆ,

ತುಂಬಾ ಧನ್ಯವಾದಗಳು. ಇಲ್ಲಿ ನಾನು ಕೊಟ್ಟಿರುವುದು ಸಮಸ್ಯೆಯ ಬಗೆಗಿನ ಕಿರು ಮಾಹಿತಿಯನ್ನಷ್ಟೇ! ಇದನ್ನು ಕೇವಲ ಒಂದು ಪೀಠಿಕೆ ಅನ್ನಬಹುದು.

@ಡಾ.ಮೂರ್ತಿಯವರೇ,

ನಿಜ... ಎಲ್ಲವುದಕ್ಕೂ ಮನಸ್ಸೇ ಕಾರಣ. ಮನಸ್ಸೇ ಎಲ್ಲಾ ಸಂತೋಷಗಳಿಗೆ, ದುಃಖಗಳಿಗೆ ಮೂಲ. ಆದರೆ ಇದನ್ನು ತಿಳಿದೂ ಎಲ್ಲರೂ ಮಾಡುವುದು ಅದೇ ತಪ್ಪನ್ನೇ ಅಲ್ಲವೇ? :) ತುಂಬಾ ಧನ್ಯವಾದಗಳು.

@ಪ್ರವೀಣ್ ಹಾಗೂ ಶ್ರೀಕಾಂತ್ ಅವರೆ,

ಮೆಚ್ಚುಗೆ ಭರಿತ ಸ್ಪಂದನೆಗೆ ತುಂಬಾ ಧನ್ಯವಾದಗಳು.

@ಉಮೇಶ್ ಅವರೆ,

ಈಗ ಎಲ್ಲವೂ ಬಿಸಿನೆಸ್ ಮೈಂಡ್ ಆಗೋಗಿದೆ. ಅದರಲ್ಲಿ ಇದೇನು ಮಹಾ! ದುಡ್ಡು ಇರುವವರು ದುಡ್ಡು ಚೆಲ್ಲುವವರೆಗೆ ಎಲ್ಲವೂ ಸಾಧ್ಯವೇ! ಆದರೆ ದುಡ್ಡು ಕೊಟ್ಟಮೇಲೂ ಅಪ್ರಾಮಣಿಕತೆ ತೋರುವ ಸಂಸ್ಥೆಗಳನ್ನು ಕಂಡಾಗ ಬಹು ಸಿಟ್ಟು, ನೋವು ಉಂಟಾಗುತ್ತದೆ ಅಷ್ಟೇ.
ಧನ್ಯವಾದಗಳು.

@ಕತ್ತಲ ಮನೆ, ಪರಾಂಜಪೆ ಅವರೆ,

ತುಂಬಾ ಧನ್ಯವಾದಗಳು ಪ್ರತಿಕ್ರಿಯೆಗೆ.

@ಸುಮ,

ಹೌದು ಇಲ್ಲದಾಗ ಸೈನ್ ಮೊರೆ ಹೋಗಬೇಕು. ಆದರೆ ಸರಿಯಾಗಿ ಅರಿತಿಕೊಂಡು ಮುನ್ನೆಡೆಯಬೇಕು. ಮುಗ್ಧರ, ಅಶಿಕ್ಷಿತರ, ಅರಿಯದವರ ಹಣವನ್ನು ನಾನಾಕಾರಣಗಳಿಂದ (ಅಗತ್ಯಗಳಿಲ್ಲದ), ವಿವಿಧ ಟೆಸ್ಟ್ ಹೆಸರಿನಲ್ಲಿ ದೋಚುವ ಕೆಲವು ಸೆಂಟರ್‌ಗಳಿವೆ. ಅವುಗಳಿಂದ ಎಚ್ಚರದಿಂದರಬೇಕು.

ದತ್ತು ತೆಗೆದುಕೊಳ್ಳಲು ನಮ್ಮಲ್ಲಿ ತುಂಬಾ ಕಷ್ಟವಿದೆ. ಸಮಾಜ ಇನ್ನೂ ಈ ವಿಷಯದಲ್ಲಿ ಸಾಕಷ್ಟು ಮುಂದುವರಿದಿಲ್ಲ. ಅದೇಕೋ ಏನೋ ಸ್ವಂತದ್ದು ಎನ್ನುವುದರ ಮುಂದೆ ಎಲ್ಲವನ್ನೂ ನಗಣ್ಯವೆಂದು ನೋಡುತ್ತಾರೆ. "ದತ್ತು ಮಗುವಾ?...ನಮ್ಮ ಮಕ್ಕಳೇ ಸರಿ ಇರೊಲ್ಲಾ.. ಅಂತಹದರಲ್ಲಿ ಬೇರೆ ರಕ್ತ ಎಂದರೆ....ಯಾರದ್ದೋ ಏನೊ..." ಎಂದೆಲ್ಲಾ ರಾಗ ಎಳೆದು ತಾತ್ಸಾರ ತೋರುತ್ತಾರೆ. ಜನರ ಮನೋಭಾವ ಬದಲಾಗದ ಹೊರತು ಏನೂ ಬದಲಾಗದು.

ತುಂಬಾ ಧನ್ಯವಾದಗಳು.

@ಸೌಮ್ಯ ಹಾಗೂ ಕಾಕಾ,

ತುಂಬಾ ಧನ್ಯವಾದಗಳು.


@ಉದಯ್ ಅವರೆ,

ನನ್ನ ಆತ್ಮೀಯರೂ ದತ್ತು ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಸಂಪೂರ್ನ ಸಮರ್ಪಣಾ ಭಾವ ಇದ್ದವರು ಮಾತ್ರ ದತ್ತು ತೆಗೆದುಕೊಳ್ಳಬೇಕು. ತೋರಿಕೆಗೋ ಇಲ್ಲಾ ಇತರರ ಒತ್ತಡಕ್ಕೋ ಮಣಿದು ದತ್ತು ತೆಗೆದುಕೊಂಡರೆ ಮತ್ತೂ ಸಮಸ್ಯೆ ಜಾಸ್ತಿ ಆಗುವುದು. ನಾನು ಯಾರೊಬ್ಬರನ್ನೂ ದೋಷಿ ಎಂದು ಹೇಳುತ್ತಿಲ್ಲ. ಸಮಾಜದಲ್ಲಿ ಎಲ್ಲಾ ವರ್ಗದವರೂ ಇರುತ್ತಾರೆ. ಇಲ್ಲಿ ನಾನು ಹೇಳುತ್ತಿರುವುದು ಸಮಾಜದ ಸಾಮಾನ್ಯ ದೃಷ್ಟಿಕೋನವನ್ನಷ್ಟೇ. ಭಾರತದಲ್ಲಿ ಇದರ ಬಗ್ಗೆ ಜಗೃತಿ, ಸುಧಾರಣೆ ಬಹಳಷ್ಟು ಇನ್ನೂ ಆಗಬೇಕಿದೆ.

ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k ಹೇಳಿದರು...

ತೇಜಸ್ವಿನಿ ಮೇಡಮ್,
ಮಾಹಿತಿಯುಕ್ತ ಲೇಖನಕ್ಕಾಗಿ ತುಂಬಾ ಧನ್ಯವಾದಗಳು.

V.R.BHAT ಹೇಳಿದರು...

ಬರಹ ಚೆನ್ನಾಗಿದೆ, ಒಳ್ಳೆಯ ಮಾಹಿತಿಗೆ ಧನ್ಯವಾದಗಳು

ಸೀತಾರಾಮ. ಕೆ. / SITARAM.K ಹೇಳಿದರು...

ಒಳ್ಳೆ ಲೇಖನ.

ಮನಸು ಹೇಳಿದರು...

oLLeya maahiti...

Unknown ಹೇಳಿದರು...

tejjakka..
namma samaajada ondu mukha teresuva baraha..chennaagide...

Badarinath Palavalli ಹೇಳಿದರು...

ನಮಗೆ ಮಕ್ಕಳೇ ಬೇಡವೆಂದು ಮದುವೆ ಮುಂಚಿತವಾಗಲೇ ನಿರ್ಧರಿಸಿದ್ದೆವು. ಉತ್ತಮ ಲೇಖನ ಕೊಟ್ಟಿರಿ ಥ್ಯಾಂಕ್ಸ್.

ನಿಮಗೆ ರಾಜ್ಯೋತ್ಸವ ಶುಭಾಶಯಗಳು...

ಸಾಗರದಾಚೆಯ ಇಂಚರ ಹೇಳಿದರು...

Informative, ರಾಜ್ಯೋತ್ಸವದ ಶುಭಾಶಯಗಳು.

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಉತ್ತಮವಾದ ಮಾಹಿತಿಯುಕ್ತ ಲೇಖನ.

ಸುಧೇಶ್ ಶೆಟ್ಟಿ ಹೇಳಿದರು...

svalpa svalpavE odhutta ivattu odhi mugiside e barahavannu... thumba chennagidhe mattu upayuktha maahithiyindha koodidhe... nimma barahadhallina vaividhyathe thumba kushi koduththadhe thejakka :)