ಸೋಮವಾರ, ಆಗಸ್ಟ್ 23, 2010

(ಅ)ಪೂರ್ಣ

ಬಿದಿಗೆ ಚಂದ್ರಮನಿಂದ ಮುನಿದ ಹುಣ್ಣಿಮೆ
ಇರುಳ (ಆ)ವರಿಸುವಾಗ...
ನಿನ್ನ ನೆನಪು ಹಿಂಡುವುದು ಎದೆಯ,
ನಿನ್ನೆಡೆಗೆ ಹಾರುವುದು ಮನವು...

ನನ್ನ ನೆನಪೇ ನಿನ್ನ ಕಾಡುವಾಗ,
ಆ ನೆನಪಿನ ಕಂಪಿನ ಮತ್ತು
ನಶೆ ತರಿಸಿ ಅಮಲೇರಿಸಿ, ನಿನ್ನ
ಉಸಿರಾಟದ ಪ್ರತಿ ಉಸಿರು ನನ್ನ ನೆನೆವಾಗ,
ನೀ ಬಾ ನನಗಾಗಿ,
ಎಲ್ಲವನೂ ತೊರೆದು, ಎಲ್ಲರನೂ ಮರೆತು
ಮತ್ತೆಂದೂ ಅಗಲದಂತೇ...
ಈ ಹುಣ್ಣಿಮೆ ಕರಿಗತ್ತಲೆಯನಪ್ಪಿದಂತೇ...

ಸಾಗರ ಸದಾ ಪೌರ್ಣಿಮೆಯ ವಿರಹಿ
ಅವಳ ನೆನಪಲೇ ಕರಗಿ ಕೊರಗಿ
ಬಳಲುತಿರುವ ಅಸ್ತಮಾ ರೋಗಿ!
ಅವನುಬ್ಬಸದ ಆರ್ಭಟಕೆ ಹೆದರದೇ,
ಹೊಡೆವ ತೆರೆ ಹೆಡೆಗಳಿಗಂಜದೇ
ಕಪ್ಪಾಗಿ ಕರಟಿರುವ ಕರಿಗತ್ತಲ ಬೆಳದಿಂಗಳು
ಸೇರಲಿಲ್ಲವೇ? ನೀ ನೋಡಲಿಲ್ಲವೇ?

ಅಣಕಿಸುವ ಈ ಹುಣ್ಣಿಮೆಯ ಉರಿಸಲು
ನೀನೊಮ್ಮೆ ಬಾ ನನಗಾಗಿ,
ಎಲ್ಲವನೂ, ಎಲ್ಲರನೂ ತೊರೆದು,
ಜಗದ ಅರಿವ ಮರೆತು, ಮತ್ತೆಂದೂ ಅಗಲದಂತೇ...

19 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಚೆನ್ನಾಗಿದೆ

ನಾಗರಾಜ್ .ಕೆ (NRK) ಹೇಳಿದರು...

ಚೆನ್ನಾಗಿದೆ . . .
ಸಾಗರವನ್ನ ಅಸ್ತಮಾ ರೋಗಿ ಎಂದು ಕರೆದದ್ದು ನೀವೇ ಮೊದಲು ಅನ್ಸುತ್ತೆ.
"ಕರಿಗತ್ತಲೆ" ಶಬ್ದದ ಬಳಕೆ ಇಷ್ಟವಾಯಿತು.
ಕವನದ ಆಹ್ವಾನದಲ್ಲಿ ಸ್ವಾರ್ಥ ಮತ್ತು ಪ್ರೀತಿಯ ತೀವ್ರತೆ ಚೆಂದವಾಗಿ ಮೂಡಿದೆ .
"ಅಣಕಿಸುವ ಈ ಹುಣ್ಣಿಮೆಯ ಉರಿಸಲು
ನೀನೊಮ್ಮೆ ಬಾ ನನಗಾಗಿ,
ಎಲ್ಲವನೂ, ಎಲ್ಲರನೂ ತೊರೆದು,
ಜಗದ ಅರಿವ ಮರೆತು, ಮತ್ತೆಂದೂ ಅಗಲದಂತೇ... "

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಕವನ ಚೆನ್ನಾಗಿದೆ. ಅದರಲ್ಲಿಯೂ ಎರಡನೆಯ ಚರಣದಲ್ಲಿರುವ ಸಾಲುಗಳು ಕಲ್ಪನಾಛಾಯೆಯನು ತೋರುತ್ತವೆ ಅಂತ ಅನಿಸುತ್ತದೆ.
ಸ್ನೇಹದಿಂದ,

Dr.D.T.Krishna Murthy. ಹೇಳಿದರು...

ಸುಂದರ ಕವನ.

ಅನಂತ್ ರಾಜ್ ಹೇಳಿದರು...

ಉಬ್ಬಸದ ಅರ್ಭಟ..
ಅಸ್ತಮಾ ರೋಗ..
ಕಲ್ಪನೆಯ ಉತ್ತು೦ಗ..
ನವ್ಯ ಪ್ರಯೋಗ..

ಶುಭಾಶಯಗಳು
ಅನ೦ತ್

Ittigecement ಹೇಳಿದರು...

ತೇಜಸ್ವಿನಿ...

ತುಂಬಾ ಸೊಗಸಾದ ಕವನ...
ಇಷ್ಟವಾಯಿತು...

umesh desai ಹೇಳಿದರು...

ಮೇಡಮ್ ಕವಿತೆ ಚೆನ್ನಾಗಿದೆ ಸಾಗರದ ಉಬ್ಬರವೂ ನಿಮಗೆ "ಉಬ್ಬಸ" ವಾಗಿ ಕಾಣಿಸುತ್ತದೆ
ಅದಕ್ಕೇ ಹೇಳೊದು ರವಿಕಾಣದ್ದನ್ನು ಕವಿ......

shivu.k ಹೇಳಿದರು...

ಮೇಡಮ್,

ಕರಿಗತ್ತಲೆ, ಕವನದ ಆಹ್ವಾನದಲ್ಲಿ ಸ್ವಾರ್ಥ,
"ಅಣಕಿಸುವ ಈ ಹುಣ್ಣಿಮೆಯ ಉರಿಸಲು, ಇತ್ಯಾದಿ ಪದಪ್ರಯೋಗಗಳು ತುಂಬಾ ಚೆನ್ನಾಗಿವೆ...ಕವನವೂ ತುಂಬಾ ಚೆನ್ನಾಗಿ ಮೂಡಿಬಂದಿದೆ.

ಸುಧೇಶ್ ಶೆಟ್ಟಿ ಹೇಳಿದರು...

ಸಾಗರವನ್ನು ಅಸ್ತಮಾ ರೋಗಿಯಾಗಿ ಹೋಲಿಸಿದ್ದು ವಿಶಿಷ್ಟವಾಗಿದೆ :) ಓದಿಸಿಕೊ೦ಡು ಹೋಯಿತು ಕವನ :)

Santhosh Rao ಹೇಳಿದರು...

wow..wonderful, tumba chennagide..

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿಯವರೇ

ಸುಂದರ ಭಾವಗೀತೆ

ರಾಗ ಹಾಕಿ ಹಾಡುವಂತಿದೆ

sunaath ಹೇಳಿದರು...

ತೇಜಸ್ವಿನಿ,
ಅರ್ಥಪೂರ್ಣ ಕವನ.

AntharangadaMaathugalu ಹೇಳಿದರು...

ತೇಜಸ್ವಿನೀ...
ತುಂಬಾ ಚೆನ್ನಾಗಿದೆ. ಎಲ್ಲವನೂ ತೊರೆದು, ಎಲ್ಲರನೂ ಮರೆತು, ಹುಣ್ಣಿಮೆ ಕರಿಗತ್ತಲೆಯನು ಅಪ್ಪಿದಂತೇ..... ಸಕ್ಕತ್ ಪದಪುಂಜ.... ಹುಣ್ಣಿಮೆ ಕರಿಗತ್ತಲನು ಅಪ್ಪುವ ಒಂದು ಅನಿಸಿಕೆ ಪ್ರಕೃತಿಯ ಲೀಲೆ... ಎಷ್ಟು ಅದ್ಭುತವಾಗಿದೆ ಅಲ್ವಾ..? ಧನ್ಯವಾದಗಳು ತಂಗೀ... ಹೊಸ ಹೊಸ ಅಲೆಯನ್ನೂ, ಪದಗಳ ಹೋಲಿಕೆಯ ಪ್ರಯೋಗಗಳನ್ನೂ ಮಾಡುತ್ತಾ ನಮ್ಮನ್ನೂ ಚಿಂತನೆಗೆ ಹಚ್ಚುತ್ತಿರುವಿರಿ...

ಶ್ಯಾಮಲ

ಶಿವಪ್ರಕಾಶ್ ಹೇಳಿದರು...

Nice one :)

ಸೀತಾರಾಮ. ಕೆ. / SITARAM.K ಹೇಳಿದರು...

ವಿನೂತನ ಹೋಲಿಕೆಗಳು ಖುಷಿ ನೀಡಿದವು. ಕವನ ಹೊಸತನ ತೋರುತ್ತಿದೆ. ಪರಸ್ಪರ ವಿಭಿನ್ನತೆಯಲ್ಲೂ ಮಿಲನದ ತುಡಿತವಿರುವ ಕತ್ತಲೆ- ಬಿದಿಗೆ ಚಂದ್ರ, ಆಕಾಶದ ಚಂದ್ರ ಮತ್ತು ಇಳೆಯ ಸಾಗರಅ ನಿಟ್ಟಿನಲ್ಲಿ ವಿರಹಿ ನಲ್ಲನನ್ನು ಕರೆವ ಪರಿ ಬೆದಗಿನದು.
ಚೆಂದದ ಕವನ.

ಕಿರಣ್ ಜಯಂತ್ ಹೇಳಿದರು...

Fantabulous!!

Subrahmanya ಹೇಳಿದರು...

ಬಹಳ ಚೆನ್ನಾಗಿದೆ. ಸಾಗರಕ್ಕೆ ಉಬ್ಬಸದ ಕಲ್ಪನೆ ...ಚೆನ್ನಾಗಿದೆ.

ತೇಜಸ್ವಿನಿ ಹೆಗಡೆ ಹೇಳಿದರು...

ಕವನವನ್ನು ಓದಿ, ಮೆಚ್ಚಿ, ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ಕಡಲು ಎಂದಿದ್ದರೂ ವಿಸ್ಮಯವೇ. ಅದರೊಳಗಿನ ಕೌತುಕ ಮುಗಿಯಲಾರದಂಥದ್ದು. ಒಮ್ಮೆ ಅದು ಸಾಗರಿಯಾದರೆ, ಮಗದೊಮ್ಮೆ ಸಾಗರ...... ಒಮ್ಮೆ ಸುಂದರಿಯಾಗಿ ಕಂಡರೆ ಮಗದೊಮ್ಮೆ ವಿರಹಿ....ಅಸ್ತಮಾ ರೋಗಿ :) ಕಲ್ಪನೆಗೆ ಕೊನೆಯಿಲ್ಲ. ಆದರೆ ಕಲ್ಪನೆಯೆಲ್ಲಾ ನಿಜವಾಗಬೇಕೆಂದಿಲ್ಲ.

-ತೇಜಸ್ವಿನಿ.

ಮನಸಿನಮನೆಯವನು ಹೇಳಿದರು...

ಈ ಸಾಲುಗಳು ತುಂಬಾ ಚೆನ್ನಾಗಿವೆ..:
"ಸಾಗರ ಸದಾ ಪೌರ್ಣಿಮೆಯ ವಿರಹಿ
ಅವಳ ನೆನಪಲೇ ಕರಗಿ ಕೊರಗಿ
ಬಳಲುತಿರುವ ಅಸ್ತಮಾ ರೋಗಿ!
ಅವನುಬ್ಬಸದ ಆರ್ಭಟಕೆ ಹೆದರದೇ,
ಹೊಡೆವ ತೆರೆ ಹೆಡೆಗಳಿಗಂಜದೇ
ಕಪ್ಪಾಗಿ ಕರಟಿರುವ ಕರಿಗತ್ತಲ ಬೆಳದಿಂಗಳು
ಸೇರಲಿಲ್ಲವೇ? ನೀ ನೋಡಲಿಲ್ಲವೇ?"