ಶುಕ್ರವಾರ, ಏಪ್ರಿಲ್ 23, 2010

ಜಾಣೆಯಾಗಿರು ನನ್ನ ಮಲ್ಲಿಗೆ...


ಹಲವು ವರುಷಗಳ ಹಿಂದಿನ ಮಾತು. ಆಗೆಲ್ಲಾ ಎಫ್.ಎಂ.ಗಳ ಹಾವಳಿ ಇರಲಿಲ್ಲ. ಆಕಾಶವಾಣಿಯಲ್ಲಿ ಬರುವ "ಕೋರಿಕೆ" ನಮ್ಮೆಲ್ಲಾ ಸಂಗೀತ ದಾಹಕ್ಕೆ ಓಯಸಿಸ್‌ನಂತಾಗಿತ್ತು. ಅಲ್ಲಿ ಬಿತ್ತರಿಸುವ ಸುಶ್ರಾವ್ಯ ಗೀತೆಗಳು ನಮ್ಮನ್ನು ಬೆರೇಯೇ ಲೋಕಕ್ಕೆ ಎಳೆದೊಯ್ಯುತ್ತಿದ್ದವು. ಬೆಳಗ್ಗೆ ಬರುವ ಮಾಧುರ್ಯ ತುಂಬಿದ ಭಾವಗೀತೆಗಳಂತೂ ದಿನವನ್ನೇ ಸುಂದರವಾಗಿಸುತ್ತಿದ್ದವು. ಒಂದು ಬೆಳಗ್ಗೆ ನಾನು ಭಾವಗೀತೆಗಳ ಮಾಧುರ್ಯವನ್ನು ಸವಿಯುತ್ತಿದ್ದಾಗಲೇ- "ಜಾಣೆಯಾಗಿರು ನನ್ನ ಮಲ್ಲಿಗೆ...ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ.." ಎಂಬ ಇಂಪಾದ ಹಾಡು ಪಿ.ಸುಶೀಲ ಅವರ ಸುಮಧುರ ಕಂಠದಲ್ಲಿ ಹೊರಹೊಮ್ಮತೊಡಗಿತು. ಕೇಳಲು ಬಲು ಇಂಪಾಗಿ, ಮುದಗೊಳಿಸುವಂತಿದ್ದರೂ ಅದೇಕೋ ಎಂತೋ ಹಾಡಿನ ಒಳಾರ್ಥ ಮಾತ್ರ ಸಿಟ್ಟು ತರಿಸಿತ್ತು. ಜಗತ್ತೇ ನನ್ನ ಅಂಗೈಯಲ್ಲಿ, ನಾ ಯಾರಿಗೇನು ಕಡಿಮೆ ಎನ್ನುವ ಹುಮ್ಮಸ್ಸು ಆ ಒಂದು ಹದಿ ವಯಸ್ಸಿನಲ್ಲಿ ಸಹಜ ಕೂಡ. ನಾವು ಯಾರಿಗೇನು ಕಡಿಮೆ? "ಜಾಣೆಯಾಗಿರಬೇಕೆಂಬ ಉಪದೇಶ ನಮಗೇಕೆ? ಎಂದು ನನ್ನೊಳಗೇ ಸಿಡಿಮಿಡಿಗೊಂಡೆ. ಅದನ್ನು ಅಲ್ಲೇ ಕುಳಿತು ನನ್ನೊಂದಿಗೆ ಹಾಡು ಕೇಳುತ್ತಿದ್ದ ನನ್ನಜ್ಜಿಯ ಬಳಿ ತೋರ್ಪಡಿಸಿದ್ದೆ ಕೂಡ.

"ಅಲ್ಲಾ... ಹೆಣ್ಣಾಗಿ ಹುಟ್ಟಿದ್ದಕ್ಕೆ ಜಾಣಳಾಗ್ಬೇಕಾ ಅಜ್ಜಿ? ಗಂಡಾದ್ರೆ ಹುಟ್ತಾನೇ ಜಾಣನಾಗಿರ್ತಾನಾ? ಇದೆಂಥಾ ಅನ್ಯಾಯ ಅಜ್ಜಿ?!" ಎಂದು ಅಸಮಾಧಾನಗೊಂಡಿದ್ದೆ. ನನ್ನ ಮಾತಿಗೆ ಅಜ್ಜಿ ತನ್ನ ಬೊಚ್ಚು ಬಾಯಿ ತೆಗೆದು ಇಷ್ಟಗಲ ನಕ್ಕಿದ್ದು ಇನ್ನೂ ನೆನಪಿದೆ. "ಅಲ್ವೇ ಕೂಸೆ... ಇದು ಹಾಂಗಲ್ಲ. ಹೆಣ್ಣಾಗಿ ಹುಟ್ಟಿದ ಮೇಲೆ ಎಷ್ಟು ಜಾಣೆಯಾರದ್ರೂ ಸಾಕಾಗೊಲ್ಲ ಅಂತ.. ನಾವೆಷ್ಟು ಹುಶಾರಾಗಿದ್ರೂ ಮುಂದೆ ಏನೇ ಎಡವಟ್ಟಾದ್ರೂ, ಎಲ್ಲಾ ಅಪವಾದಗಳೂ ನಮ್ಮ ಮೇಲೆ ಬರುತ್ತವೆ. ಈ ಸಮಾಜದ ರೂಢಿ ಹೀಂಗೇ ಅಂತಿದೆ... ಅದನ್ನ ಬದಲಾಯಿಸೋದು ಒಬ್ಬಿಬ್ಬರಿಂದ ಅಸಾಧ್ಯ.." ಎನ್ನಲು ನಾನು ಇನ್ನೂ ಉರಿದುಹೋಗಿದ್ದೆ. "ಹೋಗಜ್ಜಿ.. ಸಮಾಜ ಅಂತೆ ಅದ್ರ ರೂಢಿ ಅಂತೆ... ನಾವೇ ಇದ್ನ ಮಾಡಿದ್ದು. ನಾವೇ ಸರಿ ಮಾಡ್ಬೇಕು. ನೋಡ್ತಿರು ಮುಂದೆ ಈ ಜಾಣ್ಮೆ ಎಲ್ಲಾ ಗಂಡಸ್ರ ಪಾಲಿಗೇ ಬರುತ್ತೆ. ನಮ್ಮನ್ನ ನಾವು ಕಾಪಾಡಿಕೊಳ್ಳೋವಷ್ಟು ಜಾಣ್ಮೆ ನಮ್ಮೊಂದಿಗೆ ಇರೊತ್ತೆ.. ನಿಮ್ಮ ಕಾಲದಂಥಲ್ಲ." ಎಂದು ಬೀಗಿದಾಗ ಮತ್ತಷ್ಟು ದೊಡ್ಡದಾಗಿ ನಕ್ಕಿದ್ದರು. "ಏನು ಬೇಕಿದ್ರೂ ಹೇಳು.. ಈ ಒಂದು ವಿಷ್ಯದಲ್ಲಿ ಕಾಲ ಬೇಗ ಬದಲಾಗದಮ್ಮ. ಮುಳ್ಳಿನ ಮೇಲೆ ಬಟ್ಟೆ ಬಿದ್ರೂ, ಬಟ್ಟೆ ಮೇಲೆ ಮುಳ್ಳು ಬಿದ್ರೂ ಹರಿಯೋದು ಬಟ್ಟೇನೆ.... ಇದು ವಾಸ್ತವ.." ಎಂದು ಹೇಳಿ ಎದ್ದು ಹೋಗಿದ್ದರು. ನನಗೆ ಮಾತ್ರ ಅವರ ಉಪದೇಶ ಸ್ವಲ್ಪವೂ ಪಥ್ಯವಾಗಿರಲಿಲ್ಲ. ಬದಲಾವಣೆಯ ಹೊಸ ಗಾಳಿ ಬೀಸುತ್ತಿದೆ... ಅದು ಮತ್ತೂ ರಭಸವಾಗಿ ಬೀಸುತ್ತದೆ ಎಂದೇ ಭ್ರಮಿಸಿದ್ದೆ. ಆದರೆ ಇಂದೂ ಕೂಡ ಆ ಗಾಳಿ ತೀರಾ ಮಂದವಾಗಿ ಬೀಸುತ್ತಿದೆ ಎಂದೇ ಅನಿಸತೊಡಗಿದೆ ನನಗೆ.

ಇವತ್ತೂ ನಮ್ಮ ಸಮಾಜ ನಿಂತ ನೀರಂತೇ ಇದೆ. ಇಂದೂ ಹೆಣ್ಣು ಕೇವಲ ಅಪರಿಚಿತ ವ್ಯಕ್ತಿಯಿಂದ ಮಾತ್ರವಲ್ಲದೇ ತನ್ನ ಪ್ರಿಯಕರನಿಂದ, ಸ್ನೇಹಿತನಿಂದ, ಅಣ್ಣನಿಂದ, ತಂದೆಯಿಂದ, ಒಮ್ಮೊಮ್ಮೆ ಕಣ್ಮುಚ್ಚಿ ನಂಬಿದ ಸ್ನೇಹಿತೆಯಿಂದಲೂ ಮೋಸಕ್ಕೊಳಗಾಗುತ್ತಲೇ ಇದ್ದಾಳೆ ಎಂದರೆ ಅದು ಅವಳ ಜಾಣ್ಮೆಯಲ್ಲಿನ ಕೊರತೆಯೋ ಇಲ್ಲಾ ಅವಳ ಮುಗ್ಧತೆಯ ಪರಮಾವಧಿಯೋ ಎಂದೇ ತಿಳಿಯುತ್ತಿಲ್ಲ. ಮದುವೆಯಾಗುತ್ತೇನೆಂದು ನಂಬಿಸಿ, ತದನಂತರ ಮನೆಯವರು ಅಡ್ಡಿಯಾಗಿದ್ದಾರೆಂದೋ ಇಲ್ಲಾ ಇನ್ಯಾವುದೋ ಕಾರಣಗಳನ್ನಿತ್ತು ಕೈಕೊಡುವುದು, ಇಲ್ಲಾ ನಾವಿಬ್ಬರು ಒಂದಾಗಿ ನೀನು ನನ್ನ ಮಗುವಿನ ತಾಯಾದರೆ ಎಲ್ಲಾ ಸಲೀಸು, ಮನೆಯವರೂ ಅನಿವಾರ್ಯವಾಗಿ ಒಪ್ಪುವರು ಎಂದು ಒಪ್ಪಿಸಿ ಹೆಣ್ಣನ್ನು ಒಂದು ಅಸಹಾಯಕ ಪರಿಸ್ಥಿತಿಗೆ ತಳ್ಳಿ ಆತ ಬೇರೆ ಮದುವೆಯಾಗುವ ಪ್ರಸಂಗಗಳು ಇಂದೂ ಬೇಕಾದಷ್ಟು ಕಂಡು ಬರುತ್ತಿವೆ. ಆರ್ಥಿಕ, ಸಾಮಾಜಿಕ, ನೈತಿಕ, ಭಾವನಾತ್ಮಕ ಭದ್ರತೆ ಇಲ್ಲದೇ, ಕೇವಲ ಆತನ ಬಣ್ಣದ ಮಾತುಗಳಿಗೆ, ಅಡಿಯಿಲ್ಲದ ಆಶ್ವಾಸನೆಗಳಿಗೆ ತಲೆಯಾಡಿಸಿ ಮೈಮರೆತು ತನ್ನ ಮೈ ಮನಗಳನ್ನು ಒಪ್ಪಿಸಿ ದಡ್ಡಳಾಗುತ್ತಾಳೆ. ಆದರೆ ಹಾಗೆ ಮಾಡುವಂತೆ ಮಾಡಲು ಆತ ತನ್ನ ಅಲ್ಪ ಜಾಣ್ಮೆಯನ್ನು ಮಾತ್ರ ಖರ್ಚು ಮಾಡಿರುತ್ತಾನೆ! ಏನೇ ಆದರೂ ಒಂದಂತೂ ಸತ್ಯ. ಅಂತಿಮದಲ್ಲಿ ಶೋಷಿತಳಾಗುವುದು, ಜರ್ಝರಿತಳಾಗುವುದು ಆಕೆ ಮಾತ್ರ. ಸಮಾಜ ಕೂಡ ಕೆಳಗೆ ಬಿದ್ದು ನೋವನ್ನು ಅನೂಭವಿಸುತ್ತಿರುವ ಅವಳ ಮೇಲೇ ಕಲ್ಲುಗಳನ್ನೆಸೆಯುತ್ತದೆಯೇ ವಿನಃ ಅವನಲ್ಲಿ ತಪ್ಪು ಕಾಣುವುದೇ ಕಡಿಮೆ! ಇದು ವಾಸ್ತವ ಕೂಡ.

ಇಂದು ಕಸದ ತೊಟ್ಟಿಯಲ್ಲಿ ಸಿಗುವ ಹಸು ಕಂದಮ್ಮಗಳನ್ನು ನೋಡುವಾಗ, ಪರಿಸ್ಥಿತಿಯ ಸೆಳವಿಗೆ ಸಿಕ್ಕಿ ಕೆಂಪುದೀಪ ಸೇರುವ ಅಬಲೆಯರ ಕಂಡಾಗ, ಯಾರದೋ ಸಂಚಿಗೆ ಬಲಿಯಾಗಿ ತಮ್ಮ ಇಡೀ ಬದುಕನ್ನೇ ನಶಿಸಿಕೊಳ್ಳುವ ಅಭಾಗಿನಿಯರನ್ನು ನೋಡಿದಾಗ ನನ್ನಜ್ಜಿಯ ಮಾತುಗಳು, ಹಿತೋಪದೇಶಗಳು ಎಷ್ಟು ಸತ್ಯ ಎಂದೆನಿಸುತ್ತದೆ. ಕಾಲದ ಪ್ರವಾಹದೊಳಗೆ ಹರಿವ ಮನುಷ್ಯರ ಮನವು ಬದಲಾಗದ ಹೊರತು ಕಾಲ ಬದಲಾಗದು. ಏನೇ ಬದಲಾದರೂ ಸಮಾಜದೊಳಗಿನ ಹೆಣ್ಣು ಗಂಡಿನ ನಡುವೆ ಇರುವ ಈ ಅಸಮತೋಲನ ದೃಷ್ಟಿಕೋನ ಬದಲಾಗದು. ದೈಹಿಕವಾಗಿ ಹೆಣ್ಣು ದುರ್ಬಲ. ಅದು ಪ್ರಕೃತಿ ನಿಯಮ. ಆದರೆ ಮಾನಸಿಕವಾಗಿ ಗಂಡಿಗಿಂತ ಆಕೆ ಸಾಕಷ್ಟು ಸದೃಢಳು, ಸಬಲಳು. ತನ್ನ ಮಾನಸಿಕ ಶಕ್ತಿ, ಸಂಯಮ, ಸರಿ ತಪ್ಪುಗಳ ನಡುವಿನ ಅಂತರ, ಒಳಿತು ಕೆಡುಕುಗಳ ಪರಿಮಿತಿ, ಸಾಧಕ ಬಾಧಕಗಳ ಅರಿವು- ಇವನ್ನೆಲ್ಲಾ ಸರಿಯಾಗಿ ತಿಳಿದುಕೊಂಡು ನಡೆದರೆ ಯಾವ ಗಂಡಿನ ಜಾಣ್ಮೆಯೂ ಆಕೆಯ ಅಂತರಾತ್ಮವನ್ನು, ಸೂಕ್ಷ್ಮ ಮನಸ್ಸನ್ನು ನೋಯಿಸದು.

ಆದರೆ ಇಂದು ತುಳಿತಕ್ಕೊಳಗಾದ, ಮೋಸಕ್ಕೆ ಸಿಲುಕಿದ ಹೆಣ್ಣಿನ ಬೆಂಬಲಕ್ಕೆ ಹಲವಾರು ಮಹಿಳಾ ಸಂಘಟನೆಗಳು ನಿಂತಿರುವುದು ಪ್ರಂಶಸನೀಯ. ಸಮಾಜವೂ ಅಲ್ಪಸ್ವಲ್ಪ ತನ್ನ ನಿಲುವನ್ನೂ ಸಡಿಲಿಸಿದಂತಿದೆ. ಮೊದಲಿನಷ್ಟು ಎದುರೆದುರೇ ತೀಕ್ಷ್ಣವಾಗಿ, ತಿರಸ್ಕಾರದಿಂದ ಇರಿಯುವ ಕೊಂಕು ನುಡಿಗಳು ಸ್ವಲ್ಪ ಕಡಿಮೆಯಾಗಿದೆ. ಆದರೂ ನಾವು ಸಾಕಷ್ಟು ಬದಲಾಗಬೇಕಿದೆ. ಸಂಘಟನೆಗಳ ಹೋರಾಟ ನಿಕ್ಷಪಕ್ಷವಾಗಿದ್ದು, ತಲುಪಬೇಕಾಗಿರುವ ಗುರಿಯೆಡೆಗೆ ಸ್ಪಷ್ಟ ಹಾಗೂ ಸರಿಯಾದ ದೃಷ್ಟಿ ಇಟ್ಟರೆ ನೊಂದ ಮನಸಿಗೆ ನ್ಯಾಯ ಖಂಡಿತ ಸಿಗುವುದು. ಆದರೆ ಇಂತಹ ಹೋರಾಟಗಳಲ್ಲೂ ಅನೇಕ ಸಲ ಶೋಷಿತೆಗೆ ವಂಚನೆ, ತಿರಸ್ಕಾರಗಳು ಅನುಭವಕ್ಕೆ ಬರುವುದೇ ಹೆಚ್ಚು. ಹಾಗಾಗಿ ಇದೆಲ್ಲವನ್ನೂ ನೋಡಿದಾಗ ಪರಿಹಾರಕ್ಕಿಂತ ಪ್ರತಿರೋಧವೇ ಬಹು ಉತ್ತಮ ಎಂದೆನಿಸುತ್ತದೆ. ಹೆಣ್ಣು ತನಗೆದುರಾಗುವ ಎಡರು ತೊಡರುಗಳನ್ನು ಸರಿಸಿಕೊಂಡು, ಸಮಯ ಬಂದಾಗ ತೀಕ್ಷ್ಣವಾಗಿ ಪ್ರತಿಭಟಿಸಿ, ಇಲ್ಲಾ ನಾಜೂಕಾಗಿ ಬದಿಗೊತ್ತಿ ಜಾಣ್ಮೆ ಮೆರೆಯಬೇಕಿದೆ. ಮುಳ್ಳಿದೆಯೆಂದು ಹಾದುಹೋಗಲೇ ಹೆದರಬಾರದು. ಬದಲು ದಾರಿ ಎಂತಹದೇ ಇರಲಿ, ನಮ್ಮ ಆತ್ಮಸ್ಠೈರ್ಯದಿಂದ ಸಿಗುವ ಮುಳ್ಳಿಗೆ ಬಲಿಯಾಗದೇ ದೂರ ಸರಿಸಿ ನಡೆಯಬೇಕಿದೆ. ಒಂದೊಮ್ಮೆ ಮುಳ್ಳು ತಾಗಿದರೂ ಅದನು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದು ಸಂಪೂರ್ಣ ಸುಟ್ಟುಹಾಕಬೇಕಿದೆ. ನಮ್ಮ ಜಾಣ್ಮೆ ಬರುವ ಪರಿಸ್ಥಿಯನ್ನು ಎದುರಿಸುವುದರಲ್ಲಿ ಹಾಗೂ ಬಿಗಡಾಯಿಸಿದ ಪರಿಸ್ಥಿಯನ್ನು ನಿಭಾಯಿಸುವುದರಲ್ಲಿದೆ. ಕೇವಲ ಹೆಣ್ಣಾಗಿ ಹುಟ್ಟಿದ್ದಕ್ಕೆ ಮಾತ್ರ ಜಾಣೆಯಾಗಿರಬೇಕೆಂದಿಲ್ಲ. ಬದಲು ಹೆಣ್ತನದ ಹಿರಿಮೆಯ ಬೆಳಗಿಸಲು, ಸ್ತ್ರೀಶಕ್ತಿಯ ಸಾಕಾರವ ತೋರಲು ಜಾಣ್ಮೆ ತೋರಬೇಕಿದೆ.


@ ಹೊಸದಿಗಂತದ "ಧರಿತ್ರಿಯಲ್ಲಿ" ಪ್ರಕಟಿತ

(ಚಿತ್ರಕೃಪೆ : http://www.flickr.com)

-ತೇಜಸ್ವಿನಿ ಹೆಗಡೆ

20 ಕಾಮೆಂಟ್‌ಗಳು:

Dr.D.T.Krishna Murthy. ಹೇಳಿದರು...

ತೇಜಸ್ವಿನಿ ಮೇಡಂ ಅವರಿಗೆ ನಮಸ್ಕಾರಗಳು.ಮೊದಲಿಗೆ ,ನನಗೆ ಅತ್ಯಂತ ಇಷ್ಟವಾಗಿದ್ದ ,ಮಾಧುರ್ಯ ಪೂರ್ಣ ಹಾಡೊಂದನ್ನು ಬೆಳಿಗ್ಗೆ ಬೆಳಿಗ್ಗೆ ನೆನಪುಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.ಇನ್ನು ಇಡೀ ದಿನ ಅದೇ ಹಾಡಿನ ಗುಂಗು ಉಳಿದು ಬಿಡುತ್ತೆ.ತುಂಬಾ ವೈಚಾರಿಕತೆಯಿಂದ ತುಂಬಿದ ವಿದ್ವತ್ ಪೂರ್ಣ ಬರಹ.ಜೀವನದಲ್ಲಿ ಗಂಡಾಗಲೀ ಹೆಣ್ಣಾಗಲೀ ಇಬ್ಬರೂ ಜಾಣರಾಗಬೇಕು.ಆದರೆ ಹೆಣ್ಣು ಹೆಚ್ಚು ಜಾಣೆಯಾಗಬೇಕು.ನಾನು ನೋಡಿದ ಬಹಳಷ್ಟು ಚೆನ್ನಾಗಿರುವ ಸಂಸಾರಗಳಲ್ಲಿ ಜಾಣೆಯಾದ ಹೆಣ್ಣಿನ ಪಾತ್ರ ಇದ್ದೇ ಇರುತ್ತದೆ .ಇಡೀ ಸಂಸಾರವನ್ನು ತೂಗಿಸಿಕೊಂಡು ಹೋಗುವ ಜವಾಬ್ದಾರಿಯುತ ಜಾಣ್ಮೆ ಅವಳಲ್ಲಿರುತ್ತದೆ.ಇನ್ನು ಮನೆಗೆ ಹೆಣ್ಣು ತರುವಾಗ ಹೆಣ್ಣಿನ ತಾಯಿ 'ಜಾಣೆಯೇ'ಎಂದು ಈಗಲೂ ನೋಡುತ್ತಾರೆ .ಆದರೆ ಇಂತಹ ಅಮೂಲ್ಯ ಸಲಹೆಗಳನ್ನು ನೀಡಲು ಅಜ್ಜಿಯರೇ ಇರುವುದಿಲ್ಲವಲ್ಲಾ !

ಚುಕ್ಕಿಚಿತ್ತಾರ ಹೇಳಿದರು...

ತೇಜಸ್ವಿನಿ..

” ಒಂದೊಮ್ಮೆ ಮುಳ್ಳು ತಾಗಿದರೂ ಅದನು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದು ಸಂಪೂರ್ಣ ಸುಟ್ಟುಹಾಕಬೇಕಿದೆ”.

ಸ್ತ್ರೀ ಈ ನಿರ್ಧಾರದೊ೦ದಿಗೆ ಮುನ್ನೆಡೆಯಬೇಕಾಗಿರುವುದು ಸಧ್ಯದ ಪರಿಸ್ಥಿತಿಯ ಅನಿವಾರ್ಯತೆ..

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ಅಭಿನಂದನೆಗಳು.
ಹೊಸದಿಗಂತದಲ್ಲಿ ಪ್ರಕಟವಾದ 'ಜಾಣೆಯಾಗಿರು, ನೀ ಮಲ್ಲಿಗೆ' ಇಂದಿನ ಪ್ರಸ್ತುತ ಪರಿಸ್ಥಿತಿಗೆ ಕನ್ನಡಿಯಂತಿದೆ. ಆ ಹಾಡನ್ನು ದಶಕಗಳ ಹಿಂದೆಯೇ ಬರೆದಿದ್ದರೂ ಇಂದಿಗೂ ಎಂದಿಗೂ ಅನ್ವಯ. ಇಂದಿನ ಸಮಾಜದಲ್ಲಿಯ ಆಕೆಯ ಸ್ಥಾನಮಾನದೊಂದಿಗೆ ಜಾಗರೂಕತೆ (ಇಲ್ಲಿ ಜಾಣ್ಮೆಗೆ ಸಮಾನಾರ್ಥ ಎನ್ನಬಹುದು) ಮುಖ್ಯ ಎಂಬುದನ್ನು ಸರಳವಾಗಿ ತಿಳಿಸಿದ್ದೀರಿ. :)

Bhat Chandru ಹೇಳಿದರು...

ಬರಹದಲ್ಲಿ ನಿಮ್ಮ 'ಜಾಣ್ಮೆ' ಅದ್ಭುತ!!

sunaath ಹೇಳಿದರು...

ತೇಜಸ್ವಿನಿ,
ನನಗೆ ಈಗಲೂ ಸಹ ಹೆಣ್ಣುಮಕ್ಕಳೇ ಜಾಣತನದಿಂದ ವರ್ತಿಸಬೇಕೆನ್ನುವ ಉಪದೇಶಕ್ಕೆ ಬೇಸರವಾಗುತ್ತದೆ. ಆದರೆ ಈ ಪುರುಷಜಗತ್ತು ಇನ್ನೂ ಸಂಕುಚಿತವಾಗಿಯೇ ವರ್ತಿಸುತ್ತಿರುವದು ಒಂದು ದುರ್ಭಾಗ್ಯ. Anyway, ನೀನು ಬರೆದಂತೆ ಜಾಣತನದ ಅರ್ಥವನ್ನು ತಿಳಿದುಕೊಂಡು ನಡೆಯುವದೇ ಒಳ್ಳೆಯದು. ಉತ್ತಮ ಲೇಖನಕ್ಕೆ ಅಭಿನಂದನೆಗಳು.

ಸಾಗರದಾಚೆಯ ಇಂಚರ ಹೇಳಿದರು...

ತೇಜಸ್ವಿನಿಯವರೇ,
ಹೆಣ್ಣಿಗೆ ಪ್ರತಿ ಹಂತದಲ್ಲೂ ಸವಾಲು ಇದೆ
ಅದನ್ನು ಮೆಟ್ಟಿ ನಿಲ್ಲಲೇಬೇಕು
ನಿಮ್ಮ ಲೇಖನ ಬಹಳ ಸೊಗಸಾಗಿದೆ

Subrahmanya ಹೇಳಿದರು...

ಉತ್ತಮ ಲೇಖನ. ಚಿಂತನೆಗೆ ಹಚ್ಚುತ್ತದೆ.

ಸೀತಾರಾಮ. ಕೆ. / SITARAM.K ಹೇಳಿದರು...

ಚೆ೦ದದ ಲೇಖನ.

ಸುಮ ಹೇಳಿದರು...

ತೇಜಸ್ವಿನಿ ನಿಮ್ಮ ಮಾತುಗಳು ನಿಜ .ಹೆಣ್ಣು ಎಲ್ಲಿಯವರೆಗೆ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಕಸದ ತೊಟ್ಟಿಯಲ್ಲಿ ಮಗು ಸಿಗುವುದು ತಪ್ಪುವುದಿಲ್ಲ. ಬೇಸರದ ಸಂಗತಿಯೆಂದರೆ ವಿದ್ಯಾವಂತೆಯರೂ ಕೂಡ ಜಾಣೆಯರಾಗದಿರುವುದು.

ವಿ.ರಾ.ಹೆ. ಹೇಳಿದರು...

nice article.

ಜಾಣೆಯರಾಗ್ಬೇಕು..

AntharangadaMaathugalu ಹೇಳಿದರು...

ನಿಮ್ಮ ಬರಹ ಚೆನ್ನಾಗಿದೆ ತೇಜಸ್ವಿನಿ..... ಹೆಣ್ಣು ಬರೀ ಜಾಣೆಯಾದರೆ ಸಾಲದು, ಮೊದಲು ಧೈರ್ಯವಂತೆಯಾಗಬೇಕು. ಎಷ್ಟು ದಿನ ನಾವು ಬಾಗುತ್ತೇವೆಯೋ ಅಷ್ಟುದಿನ ನಮ್ಮನ್ನು ತುಳಿಯುತ್ತಲೇ ಇರುತ್ತಾರೆ..... ಹೆಣ್ಣು ಮಕ್ಕಳು ವಿವೇಚನೆ ಕಳೆದುಕೊಂಡು ಅದೇಕೆ ತಮ್ಮ ಸುಂದರ ಬದುಕನ್ನು ನಾಶ ಮಾಡಿಕೊಳ್ಳುತ್ತಾರೋ.... ಎಲ್ಲಾ ಪರಿಸ್ಥಿತಿಯೂ ವಿಪರೀತವಾಗೇನೂ ಇರಲ್ಲ... ಅತಿ ಜಾಣೆಯರು ಕೂಡ, ಭಾವುಕತೆಯಿಂದ ಮುಗ್ಧರಂತೆ ಮೋಸಹೋಗುವುದು ನೋಡಿದಾಗ, ನಿಜವಾಗಿ ನೋವಾಗುತ್ತದೆ....

ತೇಜಸ್ವಿನಿ ಹೆಗಡೆ ಹೇಳಿದರು...

@ ಕೃಷ್ಣಮೂರ್ತಿ ಅವರೆ,

ನಿಜ, ಅಮೂಲ್ಯ ಸಲಹೆಗಳನ್ನು ನೀಡುವ ಅಜ್ಜಿಯರೂ ಕಡಿಮೆಯಾಗಿದ್ದಾರೆ. ಹಾಗೇ ಅಂತಹ ಅಜ್ಜಿಯಂದಿರನ್ನು ಗೌರವಿಸುವ, ಪ್ರೀತಿಸುವ ಮನೆಯವರೂ ಕಡಿಮೆಯಾಗುತ್ತಿದ್ದಾರೆ. ಜಾಣ್ಮೆ ಎಂದರೆ ಕೇವಲ ಒಂದು ವರ್ತನೆಗೆ, ಯೋಚನೆಗೆ ಸೀಮಿತವಾದುದ್ದಲ್ಲ. ಚತುರತೆ, ಸೂಕ್ಷ್ಮತೆ, ಚಾಕಚಕ್ಯತೆ ಎಲ್ಲವೂ ಬರುತ್ತದೆ. ಹೆಣ್ಣು ಲತೆಯಂತೆ, ಅವಳನ್ನಾಧರಿಸುವ ಗಂಡು ಮರದಂತೆ ಎನ್ನುವ ಮಾತುಗಳೆಲ್ಲಾ ಹಿಂದಾಯಿತು. ಇಂದು ಆಕೆಗೆ ಅವಳೇ ಮರವಾಗಬೇಕಾಗಿದೆ. ಸದೃಷ ಮನಸ್ಸು, ಆತ್ಮವಿಶ್ವಾಸ, ಛಲ - ಇವುಗಳನ್ನೊಳಗೊಂಡ ಜಾಣ್ಮೆಯೇ ಅವರಳಿಗೆ ಶ್ರೀರಕ್ಷೆ.

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡೂ ಹೌದು. :)

@ ವಿಜಯಶ್ರೀ,

ಹೌದು. ಇದು ಇಂದಿನ ಅನಿವಾರ್ಯತೆಯೇ ಸರಿ. ಮುಳ್ಳು ಚುಚ್ಚಿತೆಂದು ಅದರ ನೋವಿನಲ್ಲೇ ಕೊರಗುವುದು ದಡ್ಡತನ. ಬದಲು ಚುಚ್ಚಿದ ಜಾಗವನ್ನು ಶುಚಿಗೊಳಿಸಿ, ಮಾಗಿಸಿಕೊಂಡು, ಜೊತೆಗೆ ಆ ಮುಳ್ಳನ್ನೂ ಇತರರಿಗೆ ಚುಚ್ಚದಂತೇ ಗತಿಗಾಣಿಸಿ ಮುನ್ನೆಡೆಯುವುದೇ ಜಾಣತನ :) ತುಂಬಾ ಧನ್ಯವಾದಗಳು.

@ ಚಂದ್ರು ಅವರೆ,

ಮೆಚ್ಚುಗೆಗೆ ಧನ್ಯವಾದಗಳು. ಎಲ್ಲಿಯವರೆಗೆ ಹೆಣ್ಣನ್ನು ಶೋಷಿಸುವ ಸಮಾಜ, ಮನಃಸ್ಥಿತಿ ಜಾರಿಯಲ್ಲಿರುವುದೋ ಅಲ್ಲಿಯವರೆಗೆ ಆಕೆ ಅತ್ಯಂತ ಜಾಗೂರಕಳಾಗಿರಬೇಕು. ತನಗಾಗಿ, ತನ್ನ ತನಕ್ಕಾಗಿ ಹೋರ್‍ಆಡುತ್ತಿರಲೇಬೇಕಾಗುತ್ತದೆ.

ಭಟ್ ಅವರೆ,

ತುಂಬಾ ಧನ್ಯವಾದಗಳು :)

@ ಕಾಕಾ,

ಹೌದು ನನಗೂ ಈ ವಿಷಯದಲ್ಲಿ ಬೇಸರವಿದೆ. ಆದರೆ ನೀವಂದಂತೆ ಪುರುಷ ಸಮಾಜದ ಸಂಕುಚಿತತೆಯ ಮುಂದೆ ನಾವೇ ಜಾಣ್ಮೆ ತೋರು ವಿಶಾಲ ಬುದ್ಧಿಯವರಾಗಬೇಕು ಅಲ್ಲವೇ? :) ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು.

@ ಮೂರ್ತಿ, ಸುಬ್ರಹ್ಮಣ್ಯ ಹಾಗೂ ಸೀತಾರಾಮ್ ಅವರೆ,

ಉತ್ತಮ ಸ್ಪಂದನೆಗೆ ತುಂಬಾ ಧನ್ಯವಾದಗಳು.

@ ಸುಮ,

ವಿದ್ಯೆಗೂ ಜಾಣತನಕ್ಕೂ ಸಂಬಂಧ ಅಷ್ಟೊಂದಿಲ್ಲ ಎನ್ನುವುದು ನನ್ನ ಅಭಿಮತ. ಇಂದಿನ ವಿದ್ಯೆ ಕೇವಲ ಆರ್ಥಿಕ ಸವಲತ್ತಿನ ಕಡೆ ಗುರಿ ತೋರುತ್ತದೆಯೇ ಹೊರತು ವೈಯಕ್ತಿಕ ಏಳಿಗೆಗೆ ಏನೊಂದೂ ಸಹಕಾರಿಯಾಗದು. ಬೌಧಿಕಮಟ್ಟದ ಬೆಳವಣಿಗೆಗೆ, ಮೌಲ್ಯಯುತ ಬದುಕಿಗೆ ಇಂದಿನ ವಿದ್ಯೆ ಏನೊಂದೂ ಸಾಲದು. ಏನೂ ಕಲಿಯದ ಹೆಣ್ಮಕ್ಕಳೂ ಇಂತಹ ವಿಷಯಗಳಲ್ಲಿ ಅತ್ಯಂತ ಜಾಗೂರಕರಾಗಿ, ಜಾಣ್ಮೆ ತೋರುವುದನ್ನು, ತೋರಿದ್ದನ್ನು ನೋಡಿದ್ದೇನೆ, ಕೇಳಿದ್ದೇನೆ. ಹಾಗೆಯೇ ಉನ್ನತ ಹುದ್ದೆಯಲ್ಲಿರುವ ಮಹಿಳೆಯರೂ ತೀರಾ ಕೆಳಮಟ್ಟದಲ್ಲಿ ಮೋಸಹೋಗುವುದನ್ನೂ ಕೇಳಿದ್ದೇನೆ, ಓದಿದ್ದೇನೆ. ಹಾಗಾಗಿ ವಿದ್ಯಾವಂತೆಯಾದರೆ ಯೋಚನೆಯ ಪರಿಧಿ ಬೆಳೆಯಬಹುದೇ ವಿನಃ, ಜಾಣ್ಮೆಯೂ ಜಾಸ್ತಿಯಾಗುವುದೆಂದು ನಂಬಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಬೆಳೆದು ಬರುವ ಸಂಸ್ಕಾರವೂ ಅಷ್ಟೇ ಮುಖ್ಯವಾಗುತ್ತದೆ ಅಲ್ಲವೇ?

ತುಂಬಾ ಧನ್ಯವಾದಗಳು.

@ವಿಕಾಸ್,

Thank You. ಹೌದು ಜಾಣೆಯರಾಗ್ಬೇಕು :)

@ಶ್ಯಾಮಲ,

ಹೌದು... ಕೃಷ್ಣಮೂರ್ತಿಯವರಿಗೆ ಹಾಗೂ ಸುಮ ಅವರಿಗೆ ಉತ್ತರಿಸಿದಂತೇ, ಜಾಣ್ಮೆ ಎನ್ನುವುದು ಕೇವಲ ಒಂದು ವಿಷಯಕ್ಕೆ ಸಂಬಂಧಿಸಿದ್ದಲ್ಲ. ಚುರುಕುತನ, ಮುಂದಾಲೋಚನೆ, ಹಿತ/ಅಹಿತಗಳನ್ನು ಅರಿಯುವ ಪ್ರಬುದ್ಧತೆ ಜೊತೆಗಿದ್ದರೆ ಯಾವ ಮುಳ್ಳೂ ಸುಲಭದಲ್ಲಿ ನಮ್ಮನ್ನು ತಾಗದು ಅಲ್ಲವೇ? :) ತುಂಬಾ ಧನ್ಯವಾದಗಳು.

Manasa ಹೇಳಿದರು...

Jaaneya ee janatanada baraha odi tumbaa khushi aayatu... chenadad baraha.... modal bheti nimma blog ge, chenda baradiree :)

ಮನಸು ಹೇಳಿದರು...

nimma ee lekhana digantadalli odidde... tumba istavaytu haLeyadannu nenapisidiri..

dhanyavadagaLu

ದೀಪಸ್ಮಿತಾ ಹೇಳಿದರು...

ಅರ್ಥಪೂರ್ಣ ಲೇಖನ. ಹೆಣ್ಣಾಗಲಿ, ಗಂಡಾಗಲಿ ಇಬ್ಬರೂ ಜಾಣರಾಗಬೇಕು. ಒಬ್ಬರಿಲ್ಲದೆ ಇನ್ನೊಬ್ಬರಿಲ್ಲ

ಜಲನಯನ ಹೇಳಿದರು...

ಜಾಣೆಯಾಗಿರು ನೀನು ಮಲ್ಲಿಗೆ...ಎಂಥಾ ಹಿತವಚನ...ಸರ್ವಕಾಲಕ್ಕೂ ಅನ್ವಯ....ತೇಜಸ್ವಿನಿ...ಇದು ಈಗಂತೂ ಬಹಳ ಅನಿವಾರ್ಯ..ಇಲ್ಲ ಅಂದರೆ ಹರಿದು ತಿನ್ನೋಕೆ ಹೊಂಚುಹಾಕೋ ಕಿರುಬಗಳು ...ಹೆಚ್ಚು...ಹಿಂದೆ ..ಗಂಡನ ಮನೆಗೆ ಹೋಗುವ ಹೆಣ್ಣಿಗೆ ಎಲ್ಲ ಸಲಹೆ ಕಿವಿಮಾತು ಕೊಡಲು ಅಜ್ಜಿಯಂದಿರನ್ನ ಕಳುಹಿಸಿ ಕೆಲದಿನ ಮದುಮಗಳಿಗೆ ಹೊಂದಿಕೆಯಾಗುವವರೆಗೆ ಇರುವಂತೆ ಮಾಡುತ್ತಿದ್ದರಂತೆ...ಇದೂ ಒಂದು ಕಾರಣ ಇರಬಹುದು ..ಹೊಂದಾಣಿಕೆಗೆ...ಒಳ್ಲೆಯ ಲೇಖನ....

ಸಾಗರಿ.. ಹೇಳಿದರು...

ಸತ್ಯದ ಮಾತು, ಈಗಿನ ಕಾಲದಲ್ಲಿ ಎಷ್ಟು ಜಾಣತನದಿಂದ ವರ್ತಿಸಿದರು ಅದು ಕಡಿಮೆಯೇ. ಜಾಣೆಯಾಗಿರು ಮಲ್ಲಿಗೆ ತುಂಬಾ ಸೊಗಸಾಗಿ ಮೂಡಿದೆ.

shivu.k ಹೇಳಿದರು...

ತೇಜಸ್ವಿನಿ ಮೇಡಮ್

ನಿಮ್ಮ ಬರಹ ನಿಜಕ್ಕೂ ಸೊಗಸಾಗಿದೆ. ಚಿಂತನೆಗೆ ಹಚ್ಚುತ್ತದೆ. ಬದುಕಿನಲ್ಲಿ ಗಂಡು ಹೆಣ್ಣು ಇಬ್ಬರೂ ಜಾಣರಾದರೇ...ತುಂಬಾ ಚೆನ್ನಾಗಿರುತ್ತದೆ...

ತೇಜಸ್ವಿನಿ ಹೆಗಡೆ ಹೇಳಿದರು...

@ಮಾನಸ, ಮನಸು, ದೀಪಸ್ಮಿತ, ಜಲನಯನ, ಸಾಗರಿ, ಶಿವು,

ಮೆಚ್ಚುಗೆಗಳಿಗೆ, ಪ್ರೀತಿಯ ಸ್ಪಂದನೆಗೆ ತುಂಬಾ ಧನ್ಯವಾದಗಳು.

Ishwar Jakkali ಹೇಳಿದರು...

ಅರ್ಥಪೂರ್ಣ ಬರಹ ...
ಜನ್ಮೆತನ ಹೆಣ್ಣು ಮತ್ತೆ ಗಂಡು ಇಬ್ಬರಗುನು ಇರ್ಬೇಕು. ಸಮಾಜದಲ್ಲಿ ಹೆಣ್ಣು/ಗಂಡು ಇಬ್ಬರು ಶೋಶಿತರಗ್ತಾರೆ..
ಶೋಷಣೆ ಅದಿಕಾಲದಿಂದಲೂ ಇದೆ, ಉಳ್ಳವರು ಇಲ್ಲದವರ ಮೇಲೆ, ಮೇಲ್ಜಾತಿಯವರು ಕೆಳಜಾತಿ ಮೇಲೆ, ಹಣವ0ತರು ಬಡವರ ಮೇಲೆ, ರಾಜಕಾರಿಣಿಗಳು ಪ್ರಜಗಳಮೇಲೆ..
ನನಗನಿಸುತ್ತೆ ಶೋಶಹೆ ನೀರಂತರ ಆದರೆ ಅದರ ರೂಪ ರೇಶ, ಹವಾ ಭಾವ ಬೆರೆಯಾಗುತ್ತೆ ಅಸ್ಟೆ ...